ಮಂಗಳವಾರ, ಜುಲೈ 14, 2020

ರಕ್ತಕಚ್ಚಿದ ತುಟಿಗಳ ಕಥೆ...

ರಕ್ತಕಚ್ಚಿದ ತುಟಿಗಳ ಕಥೆ...



Fashion sara pope lips Oil Painting Wall Art Picture Paiting ...


ರಕ್ತ ಕಚ್ಚಿದ ತುಟಿಗಳ ನೋಡಿ
ನೀವು ರೂಢಿಯಂತೆ
ತುಸು ರೊಮ್ಯಾನ್ಸ್ ಹೆಚ್ಚಾಯ್ತೇನೋ
ಅಂದುಕೊಂಡು ಮುಸಿಮುಸಿ
ನಗುತ್ತಿರಬಹುದು..
ನಿಮ್ಮದೇನೂ ತಪ್ಪಿಲ್ಲ ಬಿಡಿ
ನೀವಿನ್ನೂ ತುಟಿಗಳೆಂದರೆ
ಪ್ರೇಮದ ಉತ್ಕಟತೆಯ
ದೀರ್ಘಚುಂಬನದ
ರಾಯಬಾರಿಗಳೆಂದೇ
ಭಾವಿಸಿದ್ದೀರಿ..
*
ಆಳುವ ದೊರೆ ಎಷ್ಟು ಕ್ರೂರಿಯೆಂದರೆ,
ಬಂದುಕುದಾರಿ ಸೈನಿಕರ
ತುಟಿಗಳ ಮೇಲೆ ಕಾವಲಿಟ್ಟಿದ್ದಾನೆ.
ಈ ಬೂಟುದಾರಿಗಳು 
ನಡೆದಾಡಿಯೇ ತುಟಿಗಳು
ರಕ್ತಕಚ್ಚಿವೆ ಎಂದರೆ ನೀವು ನಂಬುವುದಿಲ್ಲ..

*
ದೊರೆಗೆ ದಿಕ್ಕಾರ ಕೂಗುವ ಮಾತುಗಳು
ನಾಲಿಗೆಯ ಮೇಲೆ ತಾಲೀಮು ನಡೆಸಿವೆ..
ಅನ್ನನಾಳದಿಂದ 
ಓಡಿ ಬಂದು ಲೋಕಕೆ ಜಿಗಿದರೆ
ತುಫಾಕಿಯ ಸಿಡಿತರ ವೇಗವನ್ನೂ ಮೀರಿ
ರೆಕ್ಕೆ ಮೂಡಿ ಹಾರಬೇಕು..
ಜನರ ನಾಲಿಗೆಗಳ ಮೇಲೆ
ದಿಕ್ಕಾರದ ಮೊಟ್ಟೆಗಳನ್ನಿಟ್ಟು
ಕಾವು ಕೊಟ್ಟು ಮರಿ ಮಾಡಬೇಕು..
9 Power Quotes for Times of Struggle
*
ತುಟಿಗಳ ಅಂಚಿನಲ್ಲಿ ನಡೆದಾಡುವ
ಕಾವಲುಗಾರರ ಕಣ್ಣು ತಪ್ಪಿಸಿಯೇ
ಈ ಮರಿಗಳಿಗೆ ಹಾರುವುದ ಕಲಿಸಬೇಕು...
ಎಲ್ಲವೂ ಬಾಯಿಯ ಗೂಡಿನಿಂದ
ರಬಸವಾಗಿ ಹಾರತೊಡಗಿದರೆ
ತುಟಿ ಮೇಲಿನ ಕಾವಲುಗಾರರು
ತಪತಪನೆ ಪಾದದ ಕೆಳಗೆ ಬೀಳಬೇಕು...
*
ಇದೀಗ ಅವರು ತುಟಿಗಳ ಗಡಿದಾಟಿ
ನಾಲಿಗೆಯ ಮೇಲೆಯೇ
ನಡೆದಾಡತೊಡಗಿದ್ದಾರೆ..
ಅಡಗಿ ಕೂತ ಮಾತುಗಳನ್ನೆಲ್ಲಾ 
ಕೊರಳ ಪಟ್ಟಿಹಿಡಿದು
ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ..
ಇದು ತಾಳ್ಮೆಯ ಕಟ್ಟಕಡೆಯ ಹಂತ
ಇದೀಗ, ಹಲ್ಲುಗಳ ಕಚ್ಚಿ
ಒಳಬಂದವರನ್ನು ನುಂಗಿ
ಜೀರ್ಣಿಸಿಕೊಳ್ಳದೆ ಬೇರೆ ದಾರಿಯಿಲ್ಲ..

-ಅರುಣ್ ಜೋಳದಕೂಡ್ಲಿಗಿ

ಗುರುತು ಬೇಕೆ ಗುರುತು


ಗುರುತು ಬೇಕೆ ಗುರುತು
Protests have achieved the purpose of educating masses about CAA ...

ದಿನ ಬೆಳಗಾದರೆ ಎಳೆಬಿಸಿಲಿನಲಿ ಮುತ್ತಿಟ್ಟು
ಬಿರುಬಿಸಿಲಿನಲಿ ಚುರುಕು ಮುಟ್ಟಿಸುವ ಸೂರ್ಯನಿಗೆ
ಹಾಲು‌ಬೆಳದಿಂಗಳಲಿ ಒಲವ ಹಂಚುವ ಚಂದ್ರನಿಗೆ
ನನ್ನವರ ಪರಿಚಯವಿದೆ..
ಬೇಕಾದರೆ ಅವರಿಂದ ಗುರುತು ಪಡೆಯಿರಿ..


ನಾವು ಉಸಿರಾಡೋ ಗಾಳಿಯಲಿ
ಜಾತಿ ಧರ್ಮ ಲಿಂಗದೆಲ್ಲೆಯ ಮೀರಿ
ಎಲ್ಲರ ಉಸಿರೂ ಬೆರೆತಿದೆ
ಗಾಳಿಯ‌ ಕೊರಳಪಟ್ಟಿ ಹಿಡಿದು
ನನ್ನವರ ಗುರುತುಗಳ ಪತ್ತೆಹಚ್ಚಿರಿ..


ನಿಮ್ಮದೇ ಸಿಮೆಂಟ್ ಕಾಂಕ್ರೇಟಿನ ಹೈವೇ ಕೆಳಗೆ
ಅಜ್ಜಿ ಮುತ್ತಜ್ಜಿಯರು ನಡೆದಾಡಿದ
ಹೆಜ್ಜೆಗಳು ಅಪ್ಪಚ್ಚಿಯಾಗಿವೆ..
ನಮ್ಮ ಪೂರ್ವಜರ ಗುರುತುಗಳಿಗಾಗಿ
ಹೈವೆಗಳನ್ನೆಲ್ಲ ಅಗೆಯುವ ಗುತ್ತಿಗೆ
ಯಾರಿಗೆ ಕೊಡುತ್ತೀರಿ?

ಮನೆಯ ಗೋಡೆಗೆ 
ಕಾಲಕಾಲಕ್ಕೆ ಬಳಿದ ಸುಣ್ಣದ ಪದರುಗಳಲ್ಲಿ
ಅಚ್ಚಾದ ಚರಿತ್ರೆಯ ‌ಪುಟಗಳ ನೀವು  ಓದಬೇಕು..
ಮೊದಲು ಅವರದ್ದೇ ಭಾಷೆಯ
ಸಂಕೇತಗಳು ನಿಮಗೆ ತಿಳಿದಿರಬೇಕು.

ಭಾರತವೆಂಬ ಬ್ಲಡ್ ಬ್ಯಾಂಕಿನ ರಕ್ತದ ಕಣಕಣಗಳಲಿ
ಧರ್ಮದ ಗುರುತು ಪತ್ತೆಹಚ್ಚಲು ಸೋತ ನೀವು
ದೇಶದ ಗಡಿರೇಖೆಯಲ್ಲಿ ನಿಂತು
ಲೋಕದ ಜನರಿಗೆ ಪ್ರೀತಿ ಹಂಚುವ
ನಮ್ಮನ್ನು ದೇಶಬ್ರಷ್ಟರೆಂದಿರಿ..

ಕಡೆಯದಾಗಿ..
ನನ್ನವರ ಬೆವರಹನಿಗಳು ಹಾವಿಯಾಗಿ
ಮೋಡಕಟ್ಟಿ ಮಳೆಯಾಗಿ ಸುರಿದಿವೆ...
ಬಿದ್ದ ಮಳೆ ನೀರಲ್ಲಿ ಕಲಸಿಹೋದ
ಗುರುತುಗಳು ಬೇಕಿದ್ದರೆ ಹುಡುಕಿಕೊಳ್ಳಿ...
ಗುರುತು ಬೇಕೆ ಗುರುತು

-ಅರುಣ್ ಜೋಳದಕೂಡ್ಲಿಗಿ


ವಿಚಾರ ಸಾಹಿತ್ಯದಿಂದ ಯುದ್ಧಗಳನ್ನೇ ತಪ್ಪಿಸಬಹುದು


ಸಂದರ್ಶನ: ಅರುಣ್ ಜೋಳದಕೂಡ್ಲಿಗಿ.


 ತೆಲುಗು ಸಾಹಿತ್ಯದ ಪ್ರಖರ ವೈಚಾರಿಕತೆಯನ್ನು ಅನುವಾದಗಳ ಮೂಲಕ ಕನ್ನಡಕ್ಕೆ ಕಸಿಮಾಡಿದವರು ಬಸಪ್ಪಾಚಾರಿ ಸುಜ್ಞಾನಮೂರ್ತಿ. 2003 ರಲ್ಲಿ ಅನುವಾದಿಸಿದ ಮಹಾಶ್ವೇತಾದೇವಿ ಅವರ `ಯಾರದೀ ಕಾಡು’ ಮೊದಲುಗೊಂಡು ಈತನಕ ಹದಿನೇಳು ವರ್ಷದಲ್ಲಿ 55 ಪುಸ್ತಕಗಳನ್ನು ತೆಲುಗಿನಿಂದ ಕನ್ನಡಕ್ಕೆ ತಂದಿದ್ದಾರೆ. ಈ ಮೂಲಕ ತೆಲುಗು ಸಾಹಿತ್ಯವನ್ನು ನೋಡುವ ಕನ್ನಡಿಗರ ಕಣ್ಣೋಟವನ್ನೇ ಬದಲಿಸಿದ್ದಾರೆ. `ಯಾರದೀ ಕಾಡು’ ಕೃತಿಗೆ 2003 ರಲ್ಲಿಯೂ, ಆಂದ್ರದ ಚಾರಿತ್ರಿಕ ರೈತ ಹೋರಾಟದ ಕಥನ `ತೆಲಂಗಾಣ ಹೋರಾಟ’ ಕೃತಿಗೆ 2013 ರಲ್ಲಿಯೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಗಳು ಸಂದಿವೆ. ಅನುವಾದಗಳ ಮೂಲಕ ಆಯಾ ಹೊತ್ತಿನ ಗಾಯಗಳಿಗೆ ಔಷಧಿ ಹುಡುಕಿದ ಬಿ.ಸುಜ್ಞಾನಮೂರ್ತಿ ಅವರನ್ನು ಗುರುತಿಸಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು 2016ನೇ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿತು. ಪುಸ್ತಕವನ್ನು ಅಂದಗೊಳಿಸುವ ವಿನ್ಯಾಸಕಾರರಾಗಿಯೂ, ತಂತ್ರಜ್ಞರಾಗಿಯೂ ಇವರು ಪರಿಚಿತರು. ಬಿ. ಸುಜ್ಞಾನಮೂರ್ತಿ ಅವರಿಗೆ ಇದೇ ಜುಲೈ 6 ಕ್ಕೆ 60 ವರ್ಷ ತುಂಬುತ್ತದೆ. ಜುಲೈ 30 ಕ್ಕೆ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಸಹಾಯಕ ನಿರ್ದೇಶಕ ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಅನುವಾದದ ಪಯಣದ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದಾರೆ.

ಸರ್, ನಮಸ್ತೆ, ನಿಮ್ಮ ಬಾಲ್ಯದ ನೆನಪುಗಳಿಗೆ ಮರಳಬಹುದೇ?

 ನಮ್ಮೂರಿಗೆ ತಮಿಳುನಾಡಿನ ಗಡಿ ಕೇವಲ 8 ಕಿ.ಮೀ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಮುತ್ತಾನಲ್ಲೂರು ನಮ್ಮೂರು. ಮುತ್ತಿನಂಥ ನೆಲ್ಲು ಬೆಳೆಯುತ್ತಾರೆಂದು ಮುತ್ತಾನಲ್ಲೂರು ಎಂಬ ಹೆಸರು ಬಂದಿದೆಯಂತೆ. ನಮ್ಮದು ತ್ರಿಭಾಷಿಕ ಪರಿಸರವಾದರೂ ತೆಲುಗು ಮನೆಮಾತಿನ ಜನರೇ ಹೆಚ್ಚು. ಕೆಲವರು ನನ್ನ ಅನುವಾದ ಕಂಡು ‘ನಿಮ್ಮ ಮದರ್ ಟಂಗ್ ತೆಲುಗೇ’ ಎನ್ನುತ್ತಾರೆ, ಆಗ ನಾನು ಇಲ್ಲ ನನ್ನ ‘ಅದರ್ ಟಂಗ್ ತೆಲುಗು’ ಎನ್ನುವೆ. ನನ್ನ ಹೆತ್ತಭಾಷೆ ಕನ್ನಡ ಹೊತ್ತಭಾಷೆ ತೆಲುಗು. ತಮಿಳು ಚೆನ್ನಾಗಿ ಅರ್ಥ ಅಗುತ್ತೆ.

ಸರ್, ನೀವು ಅನುವಾದಕ್ಕೆ ಪ್ರವೇಶ ಪಡೆದದ್ದು..

 ಬಾಲ್ಯದಲ್ಲಿ ನಾನು ದ್ವಿಭಾಷಿಕ ಪರಿಸರದಲ್ಲಿದ್ದಿದ್ರಿಂದ ಅನಾಯಾಸವಾಗಿ ತೆಲುಗು ಮಾತಾಡಲು ಕಲಿತೆ. ತೆಲುಗು ಸಿನೆಮಾಗಳನ್ನು ನೋಡುತ್ತಾ ತೆಲುಗು ಭಾಷಿಕ ಪರಿಸರದಲ್ಲಿ ಬೆಳೆದೆ. ಕನ್ನಡ ಎಂ.ಎ ನಂತರ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ದ್ವಿಭಾಷಿಕ ನಿಘಂಟು ರೂಪಿಸುವ ಯೋಜನೆಯಲ್ಲಿ ಕೆಲಸ ಸಿಕ್ತು. ಆ ಸಂದರ್ಭದಲ್ಲಿ ತೆಲುಗು ಓದಲು ಕಲಿತು ತೆಲುಗು ಸಾಹಿತ್ಯದ ಮುಖ್ಯ ಕೃತಿಗಳನ್ನು ಓದಿಕೊಂಡೆ. ಆಗ ಅಲ್ಲಿ ಪ್ರಾಧ್ಯಾಪಕರಾಗಿದ್ದ ಆರ್ವಿಯಸ್ ಸುಂದರಂ ಅವರು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಲು ಪ್ರೇರೇಪಿಸಿದರು.

ವೈಚಾರಿಕ ಸಾಹಿತ್ಯವನ್ನೇ ಹೆಚ್ಚಾಗಿ ಅನುವಾದಕ್ಕೆ ಆಯ್ಕೆ ಮಾಡಿಕೊಂಡದ್ದೇಕೆ ?

 ವಿಚಾರ ಸಾಹಿತ್ಯ ನಮ್ಮ ಬದುಕನ್ನು ಸುಲಭವಾಗಿಸುತ್ತೆ, ಸುಖವಾಗಿಸುತ್ತೆ, ಮತ್ತು ಹಸನಾಗಿಸುತ್ತೆ ಎಂದು ಇಂದಿಗೂ ನಂಬಿದ್ದೇನೆ. ಸರಿಯಾದ ವಿಚಾರಗಳಿಂದ ಯುದ್ಧಗಳನ್ನೇ ತಪ್ಪಿಸಬಹುದೆಂದು ತೆಲುಗಿನ ಪ್ರಖ್ಯಾತ ಚಿಂತಕ ವಿ.ಆರ್.ನಾರ್ಲ ಹೇಳಿರುವುದು ಸತ್ಯವೆನಿಸುತ್ತಿದೆ. ದೇವರು ಧರ್ಮ ಜಾತಿ ಕಂದಾಚಾರ ಸಂಪ್ರದಾಯ ಮೂಢನಂಬಿಕೆ ಇವು ನನ್ನೊಳಗೆ ಇದುವರೆಗೂ ಬರದಂತೆ ವಿಚಾರ ಸಾಹಿತ್ಯ ನನ್ನನ್ನು ರೂಪಿಸಿದೆ. ಯಾವಾಗಲೂ ಸೃಜನಶೀಲಕ್ಕೆ ಅನುವಾದಕರು ಹೆಚ್ಚು, ಸೃಜನಶೀಲವಲ್ಲದವುಗಳನ್ನೂ, ಅದರಲ್ಲೂ ವಿಚಾರ ಸಾಹಿತ್ಯವನ್ನು ಅನುವಾದಿಸುವವರು ಕಡಿಮೆ. ಆದ್ದರಿಂದ ನಾನು ಹೆಚ್ಚಾಗಿ ವೈಚಾರಿಕ ಬರಹಗಳನ್ನು ಅನುವಾದಿಸಿದೆ. ನನಗೆ ತಿಳಿದಂತೆ ತೆಲುಗಿನಲ್ಲಿರುವಷ್ಟು ವೈಚಾರಿಕ ಪ್ರಖರ ಚಿಂತಕರು ಕನ್ನಡದಲ್ಲಿಲ್ಲ. ವಿ.ಆರ್.ನಾರ್ಲ, ಗೋರಾ, ಕೆ.ಬಾಲಗೋಪಾಲ, ಕಂಚ ಐಲಯ್ಯ, ಕತ್ತಿ ಪದ್ಮಾರಾವ್ ತರಹದವರು ನಮ್ಮಲ್ಲಿಲ್ಲ. ಹಾಗೆನೆ ಡಿ.ಆರ್.ನಾಗರಾಜ್, ಕೆ.ವಿ. ನಾರಾಯಣ ತರಹದ ವಿಮರ್ಶಕರು ತೆಲುಗಿನಲ್ಲಿಲ್ಲ.

ಕನ್ನಡ-ತೆಲುಗು ಭಾಷಾಂತರದಲ್ಲಾದ ಮುಖ್ಯ ಪಲ್ಲಟಗಳೇನು?

ತೆಲುಗಿನ ಜನಪ್ರಿಯ ಸಾಹಿತ್ಯ ಕನ್ನಡಕ್ಕೆ ಹೆಚ್ಚು ಅನುವಾದಗೊಂಡಿದೆ. ಉಳಿದಂತೆ ಕತೆ, ಕಾವ್ಯ ಬಂದಿವೆ. ತೆಲುಗಿನ ವೈಚಾರಿಕ ಕೃತಿಗಳು ಕನ್ನಡಕ್ಕೆ ಬಂದದ್ದು ವಿರಳ. ತೆಲುಗು ಸಾಹಿತ್ಯದಲ್ಲಿ ವಿಮರ್ಶೆ ಕಡಿಮೆ, ಸೃಜನಶೀಲ ಸಾಹಿತ್ಯವೆ ಹೆಚ್ಚು. ಜಗತ್ತಿನ ಅತ್ಯುತ್ತಮ ಕೃತಿಗಳನ್ನು ಬಹುಬೇಗ ಅನುವಾದಿಸಿಕೊಳ್ಳುತ್ತಾರೆ. ಹಾಗಾಗಿ ಅಲ್ಲಿ ವೈವಿಧ್ಯಮಯ ಸಾಹಿತ್ಯ ರೂಪುಗೊಂಡಿದೆ. ಈ ಕಾರಣಕ್ಕೇ ಇರಬೇಕು ಕನ್ನಡದ ಕೆಲವು ಅತ್ಯುತ್ತಮ ಕೃತಿಗಳು ತೆಲುಗಿಗೆ ಹೋಗಿದ್ದರೂ, ಅಲ್ಲಿ ಚರ್ಚೆ ಆಗಲಿಲ್ಲ. ತೆಲುಗಿನ ಕ್ಲಾಸಿಕ್ ಕೃತಿಗಳು, ಶ್ರೇಷ್ಠ ಕಾದಂಬರಿಕಾರರ ಕಾದಂಬರಿಗಳು ಕನ್ನಡಕ್ಕೆ ಇನ್ನೂ ಬಂದಿಲ್ಲ.

ನಿಮ್ಮ ಮಹಾತ್ವಾಕಾಂಕ್ಷೆಯ `ತೆಲಂಗಾಣ ಹೋರಾಟ’ ಕೃತಿ ಅನುವಾದದ ಒತ್ತಾಸೆಗಳೇನು?

 ತೆಲಂಗಾಣ ರೈತ ಹೋರಾಟ 1946 ರಿಂದ 1951ರವರೆಗೆ ಆಂಧ್ರಪ್ರದೇಶದಲ್ಲಿ ಘಟಿಸಿದ ಚಾರಿತ್ರಿಕ ಆಂದೋಲನ. ಬ್ರಿಟಿಷ್ ಸಾಮ್ರಾಜ್ಯಶಾಹಿ, ನಿಜಾಮನ ಫ್ಯೂಡಲ್ ಆಳ್ವಿಕೆ ಮತ್ತು ಜೀವವಿರೋಧಿ ಭೂಮಾಲೀಕರ ವಿರುದ್ಧ ರೈತರು ನಡೆಸಿದ ಮಹಾವಿಪ್ಲವ. ಸರ್ವಾಧಿಕಾರ ಎನ್ನುವ ಪರ್ವತವನ್ನು ಛಿದ್ರಗೊಳಿಸಿದ ಸಾಮಾನ್ಯ ಜನರ ಆತ್ಮಬಲ ಇದು. ತೆಲಂಗಾಣ ಹೋರಾಟ ಜಗತ್ತಿನ ಎರಡನೆ ಅತಿದೊಡ್ಡ ರೈತ ಹೋರಾಟ. ಗೆಳೆಯ ಡಾ. ಬಿ.ಎಂ.ಪುಟ್ಟಯ್ಯ ನನಗೆ ಈ ಕೃತಿಯನ್ನು ಅನುವಾದಿಸಲು ಪ್ರೇರೇಪಿಸಿದರು. ಕನ್ನಡಿಗರಿಗೆ ಈ ಕೃತಿಯ ಅಗತ್ಯವಿದೆ ಎಂದು ಅನುವಾದಿಸಿದೆ.

ಸರ್, ನಿವೃತ್ತಿ ನಂತರದ ಯೋಜನೆಗಳು..

 ಪುಸ್ತಕ ಪ್ರಕಟವಾಗುವ ಹೊತ್ತಿಗೆ, ಹಲವು ಹೊಸ ಪುಟ ವಿನ್ಯಾಸಗಳು ಬಂದಿರುತ್ತವೆ ಎನ್ನುವ ಭಯದಲ್ಲಿ `ಪುಟವಿನ್ಯಾಸ’ ಕುರಿತ ಪುಸ್ತಕವನ್ನು ಈ ತನಕ ಬರೆಯಲಾಗಿಲ್ಲ. ಹಾಗಾಗಿ ಸರಳ ಸುಂದರ ಪುಟ ವಿನ್ಯಾಸದ ಬಗ್ಗೆ ಪುಸ್ತಕ ಬರೆಯುವೆ. ತೆಲುಗಿನ ಶ್ರೇಷ್ಠ ಕಾದಂಬರಿಗಳಾದ ಬುಚ್ಚಿಬಾಬು ಅವರ ‘ಚಿವರಕು ಮಿಗಿಲೇದಿ’(ಕೊನೆಗೆ ಉಳಿಯೋದು) ನವೀನ್ ಅವರ `ಅಂಪಶಯ್ಯ’ (ಶರಶಯ್ಯೆ) ಕಾದಂಬರಿಗಳನ್ನು ಅನುವಾದಿಸುವ ಯೋಜನೆ ಇದೆ. 

ಫೋಟೋ: ಶಿವಶಂಕರ್ ಬಣಗಾರ.



ಎಲೆಮರೆ-38: ಜನಪದ ಹಾಡಿಕೆಗೆ `ಯೂಟೂಬ್’ ಜನಪ್ರಿಯತೆ ದೊರಕಿಸಿಕೊಟ್ಟ ರೇವಣಸಿದ್ಧ ದ್ಯಾಮಗೋಳ


-ಅರುಣ್ ಜೋಳದಕೂಡ್ಲಿಗಿ.


 ಆ ಹುಡುಗ ಚಡಚಣದಲ್ಲಿ ಡಿಗ್ರಿ ಮುಗಿಸಿದ ನಂತರ ಬಿಜಾಪುರದ ಜಿಎಸ್‍ಎಸ್ ಕಾಲೇಜಿನಲ್ಲಿ ಬಿಎಡ್ ಪೂರೈಸಿ, ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ತನ್ನ ಊರಾದ ಮೈಲಾರ ಎಂಬ ಚಿಕ್ಕ ಹಳ್ಳಿಯಲ್ಲಿದ್ದ. ಮನೆಯಲ್ಲಿ ಅಪ್ಪ ಕಕ್ಕಂದಿರು ಹಾಡಿಕಿ ಸಂಘದಲ್ಲಿದ್ದರು. ಡೊಳ್ಳಿನ ಪದ ಹಾಡತಿದ್ದರು. ಯಾರೋ ಮೊಬೈಲದಾಗ ಡೊಳ್ಳಿನ ಹಾಡ ಹಚ್ಚಿಕೊಟ್ಟರು. ಅಪ್ಪ ಮಗನಿಗೆ `ರೇವಣಸಿದ್ಧ ಈ ಮೊಬೈಲದಾಗ ಹಾಡ ಹೆಂಗ್ ಬಿಡತಾರು ನೋಡಿಕೋ’ ಎಂದರು. ಮಗನ ಗ್ಯಾನ ಮೊಬೈಲಿನ ಮ್ಯಾಲೆ ಬಿತ್ತು. ಹೀಗೆ ನೋಡ್ತಾ ನೋಡ್ತಾ ಪದಾನ ಮೊಬೈಲದಾಗ ಹೆಂಗ್ ಬಿಡ್ತಾರ ಅಂತ ತಿಳಕಂಡು ಆಗಷ್ಟ್ 6, 2017 ರಲ್ಲಿ ಯೂಟೂಬ್ ಅಕೌಂಟ್ ಕ್ರಿಯೇಟ್ ಮಾಡಿ, ತಾನೂ ತನ್ನ ಅಪ್ಪ ಕಕ್ಕರು ಹಾಡೋ ಹಾಡ ಮೊಬೈಲಿನ್ಯಾಗ ಬಿಡಾಕತ್ತಿದ. 

 ಇದೀಗ ಈ ಹುಡುಗ ಹೀಗೆ ಯೂಟೂಬಿಗೆ 1244 ವೀಡಿಯೋಗಳನ್ನು ಅಪ್ಲೋಡ್ ಮಾಡಿದ್ದಾನೆ, 86 ಸಾವಿರದಷ್ಟು ಚಂದಾದಾರರಿದ್ದಾರೆ, ಮೂರು ಕೋಟಿ ಮುವತ್ನಾಲ್ಕು ಲಕ್ಷದಷ್ಟು ವೀಕ್ಷಣೆ ಇದೆ. ಇದೀಗ ಜನಪದ ಹಾಡಿಕೆ ಮದ್ಯೆ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಯೂಟೂಬಿನಿಂದ ಪ್ರತಿ ತಿಂಗಳು ಕನಿಷ್ಠ ಹತ್ತು ಸಾವಿರ ಈ ಹುಡುಗನ ಅಕೌಂಟಿಗೆ ಜಮೆ ಆಗುತ್ತದೆ. ಇಂದು ಉತ್ತರ ಕರ್ನಾಟಕ ಹೈದರಬಾದ ಕರ್ನಾಟಕದ ಮುನ್ನೂರಕ್ಕಿಂತ ಹೆಚ್ಚು ಜನಪದ ಕವಿಗಳ ಹಾಡಿಕೆಯ, ಡೊಳ್ಳಿನ ಹಾಡು, ಭಜನೆ, ಮೊಹರಂ ಪದ, ಗೀಗೀ, ಸೋಬಾನೆ, ಚೌಡಕಿ ಪದ ಹೀಗೆ ಜನಪದ ಪ್ರಕಾರದ ಹಾಡುಗಳನ್ನು `ರೇವಣಸಿದ್ಧ ದ್ಯಾಮಗೋಳ್’ ಎನ್ನುವ ಯೂಟೂಬ್ ಚಾನಲ್ಲಿನಲ್ಲಿ ನೀವು ಕೇಳಬಹುದು.

 ರೇವಣಸಿದ್ಧ ದ್ಯಾಮಗೋಳಗೆ ಈಗ 28 ವರ್ಷದ ಹರೆಯ. ಪುಟಿಯುವ ಉತ್ಸಾಹ. ಇಂಥ ಕಡೆ ಜನಪದ ಹಾಡಿಕೆ ಇದೆ ಎಂದು ಗೊತ್ತಾದರೆ, ಬೈಕಿಗೆ ಪೆಟ್ರೋಲ್ ತುಂಬಿಸಿ, ಟ್ರೈಪ್ಯಾಡ್ ತಗೊಂಡು ಹೊರಡುತ್ತಾನೆ. ಹಾಡಿಕೆ ಇರೋ ಕಡೆ ಹೋಗಿ, ಹಾಡಿಕೆ ಮಾಡುವ ಕಲಾವಿದರಿಗೆ ಕಾಣಿಕೆ ಸಲ್ಲಿಸಿ ಆಶೀರ್ವಾದ ತಗೊಳ್ತಾನೆ. ನನ್ನ ಬಗ್ಗೆ ಏನೂ ಹೇಳಬ್ಯಾಡ್ರಿ ಅಂದ್ರೂನು, ಹಾಡಿಕೆ ಆರಂಭಿಸುವ ಮುನ್ನ ಕಲಾವಿದರು `ರೇವಣಸಿದ್ಧ ದ್ಯಾಮಗೋಳ ಅವರು ತಮ್ಮ ಚಾನಲದಿಂದ ನಮ್ಮನ್ನ ಬೆಳಸ್ಯಾರ, ಬಾಳ ಪ್ರಚಾರ ಮಾಡ್ಯಾರ, ನಮಿಗೆ ಅವರ ಕಡೆಲಿಂದ ಬಾಳ ದುಡಿಮಿ ಆಗ್ಯಾತಿ, ಹಂಗಾಗಿ ಅವ್ರು ಬ್ಯಾಡ ಅಂದ್ರೂ ನಾವು ಅವರನ್ನ ನೆನಿಯೋದು ನಮ್ಮ ಧರ್ಮ ಐತಿ. ರೇವಣಸಿದ್ಧಪ್ಪರೋನ್ನ ದೇವರು ಆಯುಶ್ಯಾರೋಗ್ಯ ಕೊಟ್ ಚೆನ್ನಾಗಿ ಇಟ್ಟಿರಲಿ’ ಅಂತ ಹಾರೈಸುತ್ತಾರೆ. ಈ ಹುಡುಗ ನಾಚಿಕೆಯ ಮುದ್ದೆಯಾಗಿ ತಾನು ರೆಕಾರ್ಡ್ ಮಾಡುವುದರಲ್ಲಿ ತಲ್ಲೀನನಾಗುತ್ತಾನೆ.



 ನಾನು ಗಮನಿಸಿದಂತೆ ಆಡಿಯೋ-ವೀಡಿಯೋ ಸಂಸ್ಥೆಗಳನ್ನು ಹೊರತುಪಡಿಸಿ ಹೀಗೆ ವಯಕ್ತಿಕ ನೆಲೆಯಲ್ಲಿ ಚಾನಲ್ ರೂಪಿಸಿ ಜನಪದ ಹಾಡಿಕೆ ವೀಡಿಯೋಗಳನ್ನು ಕೆಲವರು ಅಪ್ಲೋಡ್ ಮಾಡಿದ್ದಾರೆ. ಆದರೆ ಆ ಎಲ್ಲಾ ಚಾನಲ್ಲುಗಳಲ್ಲಿಯೇ ಅತಿಹೆಚ್ಚು ಚಂದಾದಾರಿಕೆ ಮತ್ತು ವೀಕ್ಷೆಣೆಯನ್ನು ದ್ಯಾಮಗೋಳ್ ಚಾನಲ್ ಹೊಂದಿದೆ. ಹಿಂದೆ ಆಡಿಯೋ ರೆಕಾರ್ಡ್ ಆಗಿದ್ದ ಕ್ಯಾಸೆಟ್‍ಗಳನ್ನು ತೆಗೆದುಕೊಂಡು, ಆ ಕ್ಯಾಸೆಟ್‍ನಲ್ಲಿ ಹಾಡಿದ ಕವಿಗಳ ಒಪ್ಪಿಗೆ ಪಡೆದು, ಕ್ಯಾಸೆಟ್ ಹಾಡಿಕೆಯನ್ನು ಎಂಪಿ-3 ಆಡಿಯೋ ಫೈಲನ್ನಾಗಿ ವರ್ಗಾಯಿಸಿಕೊಂಡು ಆ ನಂತರ, ಎಂ.ಪಿ-3 ಪೈಲನ್ನು ವೀಡಿಯೋವಾಗಿ ರೂಪಾಂತರಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಸೆಟ್ಟಿನ ಪೋಸ್ಟರ್‍ನ್ನೆ ವೀಡಿಯೋದ ಕವರ್ ಫೋಟೋವಾಗಿ ಬಳಸಲಾಗುತ್ತದೆ. ಆಗ ಕ್ಯಾಸೆಟ್ ಮೇಲಿನ ಮುಖ ಹೊದಿಕೆ, ಅದೇ ಹಾಡುಗಳ ವೀಡಿಯೋ ಮುಖಹೊದಿಕೆಯಾಗಿ ಬದಲಾಗುತ್ತದೆ. 

 ಹೀಗೆ ರೂಪಾಂತರಿಸುವಾಗ ಹಾಡಿಕೆ ಮಾಡಿದ ಕವಿಯ ಫೋಟೋ ಮತ್ತು ವೀಡಿಯೋದಲ್ಲಿಯೇ ಕವಿಯ ಮೊಬೈಲ್ ನಂಬರನ್ನು ಕೊಡಲಾಗುತ್ತದೆ. ಯೂಟೂಬಲ್ಲಿ ಈ ಹಾಡು ಕೇಳಿದವರು ಇಷ್ಟವಾದರೆ ಹಾಡಿಕೆ ತಂಡಕ್ಕೆ ಪೋನಚ್ಚಿ ಮಾತಾಡಿಸಿ ತಮ್ಮ ಊರಿನ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. `ಮೊದಲಾದರೆ ಹೀಗೆ ರೆಕಾರ್ಡ್ ಮಾಡಬೇಕಾದರೆ ಜನಪದ ಕಲಾವಿದರನ್ನೇ ರೆಕಾರ್ಡಿಂಗ್ ಸ್ಟುಡಿಯೋಕ್ಕೆ ಕರೆಯಿಸಬೇಕಿತ್ತು. ಹೀಗೆ ರೆಕಾರ್ಡ್ ಮಾಡಲು ಸ್ವತಃ ಜನಪದ ಕಲಾವಿದರೆ ರೆಕಾರ್ಡಿಂಗ್ ಕಂಪನಿಗಳಿಗೆ ಹಣ ಕೊಟ್ಟದ್ದೂ ಇದೆ. ಈಗ ಹಾಗಿಲ್ಲ. ನಾವೇ ಹಾಡುವಲ್ಲಿಗೆ ಹೋಗಿ ರೆಕಾರ್ಡ್ ಮಾಡಿಕೊಂಡು ಬಂದು ಯೂಟೂಬಿಗೆ ಹಾಕುತ್ತೇವೆ. ನಾನು ಅಪ್ಲೋಡ್ ಮಾಡಿದ್ದಕ್ಕಿಂತ ಒಳ್ಳೆಯ ಹಾಡುಗಳು ಇದಾವ್ ಸರ್, ಅಂತವುಗಳನ್ನೆಲ್ಲಾ ಸಂಗ್ರಹಿಸಬೇಕು ಅಂತ ಆಸೆ ಇದೆ’ ಎಂದು ರೇವಣಸಿದ್ಧ ಹೇಳುತ್ತಾರೆ.

 ಮುಂದುವರಿದು `ನಮ್ಮ ಚಾನಲ್ ಫೇಮಸ್ ಆಗಿರೋದ್ರಿಂದ, ನಮ್ಮ ಚಾನಲದಾಗ ಹಾಡು ಹಾಕಿದ್ರೆ ಹೆಚ್ಚು ಪ್ರಚಾರ ಆಗಿ ಹಾಡಿಕಿ ಆರ್ಡರ್ ಸಿಗುತ್ತೆ ಅಂತೇಳಿ ಕೆಲವೊಮ್ಮೆ ಜನಪದ ಕಲಾವಿದರೆ ನಮ್ಮ ಹಾಡ ಯೂಟೂಬದಾಗ ಬಿಡರಿ ಅಂತೇಳಿ ಹಣ ಕೊಡೋಕೆ ಬರ್ತಾರೆ. ಆದರೆ ನಾನು ಯಾವ ಕಲಾವಿದರಿಂದಲೂ ಹಣ ಪಡೆಯೋಲ್ಲ. ಯೂಟೂಬಿಂದ ನನ್ನ ಕೆಲಸಕ್ಕೆ ಒಂದಷ್ಟು ಹಣ ಕೊಡ್ತಾರೆ. ಹಾಗಾಗಿ ನಿಮ್ಮಿಂದ ಹಣ ನಾನು ತಗೊಳ್ಳಲ್ಲ ಎಂದು ಹೇಳುತ್ತೇನೆ’ ಎಂದು ತನ್ನ ವೃತ್ತಿನಿಷ್ಠೆಯನ್ನು ವಿವರಿಸುತ್ತಾರೆ.

 ಕಲ್ಬುರ್ಗಿ, ಅಫಜಲಫುರ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಮಹರಾಷ್ಟ್ರದ ಸಾಂಗಲಿ, ಜತ್ತ ಮೊದಲಾದ ಕಡೆಗಳ ಸುಮಾರು ಇನ್ನೂರಕ್ಕಿಂತ ಹೆಚ್ಚು ಜನಪದ ಹಾಡಿಕೆ ತಂಡಗಳು ರೇವಣಸಿದ್ಧ ಅವರಿಗೆ ಸಂಪರ್ಕವಿದೆ. ಶಿವರಾಯ ಮಾಸ್ತರ್, ಕಲ್ಮೇಶ, ಕೇದಾರ ಮಾಸ್ತರ್, ಗುರುಲಿಂಗ ಮಾಸ್ತರ ಸಂಕನಾಳ, ನಾಗೂರು ಲಕ್ಷ್ಮಣ, ಸುಮಿತ್ರಾ ಮುಗಳಿಹಾಳ, ಸಾವಿತ್ರಿ ಕಿರಣಗಿ, ಆಕಾಶ ಮನಗುಳಿ ಮುಂತಾದ ಜನಪ್ರಿಯ ಜನಪದ ಕವಿಗಳು ಪದಕಟ್ಟುವ ಬಗ್ಗೆ, ಹಾಡಿಕೆ ಬಗ್ಗೆ ರೇವಣಸಿದ್ಧ ಅಭಿಮಾನ ಇಟ್ಟುಕೊಂಡಿದ್ದಾರೆ. 

 ರೇವಣಸಿದ್ಧ ದ್ಯಾಮಗೋಳ ಒಂದು ಸಂಸ್ಥೆ, ವಿಶ್ವವಿದ್ಯಾಲಯ ಮಾಡಲಾರದಷ್ಟು ಕೆಲಸವನ್ನು ತಾವೊಬ್ಬರೆ ಮಾಡಿದ್ದಾರೆ. ಆಫ್‍ಲೈನಲ್ಲಿದ್ದ ನೂರಾರು ಅಜ್ಞಾತ ಜನಪದ ಕಲಾವಿದರನ್ನು ಆನ್‍ಲೈನ್ ಲೋಕಕ್ಕೆ ಪರಿಚಯಿಸಿದ್ದಾರೆ. ಎಷ್ಟೋ ಜನಪದ ಕಲಾ ತಂಡಗಳಿಗೆ ತಮ್ಮ ಚಾನಲ್ ಮೂಲಕ ಹಾಡಿಕೆಯ ಅವಕಾಶಗಳನ್ನು ಕಲ್ಪಿಸಿಕೊಟ್ಟು ನೆರವಾಗಿದ್ದಾರೆ. ಜಾನಪದ ಸಂಶೋಧಕರಿಗೆ/ಅಧ್ಯಯನಕಾರರಿಗೆ ಆಕರ ಒದಗಿಸಿದ್ದಾರೆ. ನನ್ನ ಪೋಸ್ಟ್ ಡಾಕ್ಟರಲ್ ಸಂಶೋಧನೆಯ ಭಾಗವಾಗಿ ಜನಪದ ಹಾಡಿಕೆ ಕೇಳುವಾಗಲೆ ನನಗೂ ರೇವಣಸಿದ್ಧ ಅವರು ಪರಿಚಯವಾದದ್ದು. ರೇವಣಸಿದ್ಧ ಅವರ ನಿರಂತರ ಶ್ರಮದ ಫಲವಾಗಿ ಯೂಟೂಬಿನಿಂದ ಒಂದಷ್ಟು ಹಣ ಸಂದಾಯವಾದರೂ, ಅದು ಅವರ ಶ್ರಮಕ್ಕೆ ಕಡಿಮೆಯೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವಾಗಲಿ, ಕರ್ನಾಟಕದ ಜಾನಪದ ಪರಿಷತ್ತಾಗಲಿ, ಜಾನಪದ ಅಕಾಡೆಮಿಯಾಗಲಿ ಇಂಥವರನ್ನು ಗುರುತಿಸಬೇಕಿದೆ.
 ರೇವಣಸಿದ್ಧ ದ್ಯಾಮಗೊಳ ಅವರ ಯೂಟೂಬ್ ಚಾನಲ್ ಲಿಂಕ್: https://www.youtube.com/channel/UCCTGAmLzxdii90ObnCJH3SQ



ಲಾಕ್ಡೌನ್ ನಂತರದ ರೈತರ ಬಿತ್ತನೆ ಬಿಕ್ಕಟ್ಟು



-ಅರುಣ್ ಜೋಳದಕೂಡ್ಲಿಗಿ.

ಹಾಸನ ರೈತರ ಸಾಲ ₹6 ಸಾವಿರ ಕೋಟಿ | Prajavani

 ದೇಶದಲ್ಲಿ ಕೊರೊನ ಸೋಂಕಿತರ ಸಂಖ್ಯೆ ಜುಲೈ 6 ಕ್ಕೆ ಏಳು ಲಕ್ಷ ಸೋಂಕಿತರು, 19 ಸವಿರ ಸಾವುಗಳು, ಸಂಭವಿಸಿ ಜಗತ್ತಿನಲ್ಲಿ ಮೂರನೆ ಸ್ಥಾನ ಕಾಯ್ದುಕೊಂಡಿದೆ. ಕರ್ನಾಟಕದಲ್ಲಿ 23 ಸಾವಿರ ಸೋಂಕಿತರನ್ನು ದಾಟುತ್ತಿದೆ. ಮತ್ತೊಂದು ಲಾಕ್‍ಡೌನ್ ಭಯದಲ್ಲಿ ಜನರು ಆತಂಕಿತರಾಗಿದ್ದಾರೆ. ಬಿತ್ತನೆ ಕಾಲದ ಈ ಹೊತ್ತಲ್ಲಿ ರೈತರು ಹೊಸ ಬಗೆಯ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ.

 ಕೊರೊನಾ ಕಾರಣಕ್ಕೆ ಜಾರಿಗೆ ತಂದ ಮೊದಲ ಲಾಕ್ಡೌನ್ ಗ್ರಾಮೀಣ ಪ್ರದೇಶದಲ್ಲಿ ದಿಡೀರ್ ಪರಿಣಾಮ ಬೀರಲಿಲ್ಲ. ಲಾಕ್ಡೌನಲ್ಲಿಯೂ ಕೃಷಿ ಚಟುವಟಿಕೆಗಳು ನಡೆದಿದ್ದವು. ನೀರಾವರಿ ಜಮೀನುಗಳನ್ನು ಹೊರತುಪಡಿಸಿದರೆ, ಬಹುಪಾಲು ಮಳೆಯಾಶ್ರಿತ ರೈತರು ಹೊಲವನ್ನು ಬಿತ್ತನೆಗೆ ಸಜ್ಜುಗೊಳಿಸುತ್ತಿದ್ದರು. ಸಣ್ಣಪುಟ್ಟ ಬೋರ್‍ವಲ್ ನೀರಾವರಿಗೆ ತರಕಾರಿ ಬೆಳೆದವರು ತಮ್ಮೂರಲ್ಲೆ ಮಾರಿದರು. ತೋಟದ ಫಲಗಳನ್ನು ಟೆಂಪೋಗಳಲ್ಲಿ ಮನೆಮನೆಗೆ ಕೊಂಡೊಯ್ದರು. ಆದರೂ ಹೆಚ್ಚುವರಿ ಹಣ್ಣು ತರಕಾರಿ ಕೊಳೆತ ನಷ್ಟಕ್ಕೆ ಬೆಲೆತೆತ್ತು ಕೆಲವು ರೈತರು ಆತ್ಮಹತ್ಯೆಗೂ ಶರಣಾದರು. ಹೀಗಿರುವಾಗ ಲಾಕ್ಡೌನ್ ನಂತರದಲ್ಲಿ ರೈತರ ಕಷ್ಟಗಳು ಮತ್ತಷ್ಟು ಬಿಗಡಾಯಿಸಲಿವೆ.

 ಮುಖ್ಯವಾಗಿ ಬಿತ್ತನೆ ಪೂರ್ವದ ವಲಸೆ ಬಹುಪಾಲು ಬಿತ್ತನೆಗೆ ದುಡ್ಡು ಜೋಡಿಸುವ ದರ್ದಿನಿಂದ ಕೂಡಿರುತ್ತದೆ. ಅಂದರೆ ಸಾಲ ಮಾಡಿ ಬಿತ್ತುವುದಕ್ಕಿಂದ ನಗದು ಹಣ ಖರ್ಚು ಮಾಡಿ ಬಿತ್ತಾಟ ಮಾಡುವುದು ರೈತರಿಗೆ ಲಾಭದಾಯಕ. ಹೀಗೆ ಮಾಡಿದರೆ ದಲ್ಲಾಳಿ ಅಂಗಡಿಯವರ ಮರ್ಜಿ ತಪ್ಪುತ್ತದೆ, ಅವರ ಬಡ್ಡಿ ಚಕ್ರಬಡ್ಡಿಯ ಅಪಾಯದಿಂದ ಮುಕ್ತಿ ದೊರೆಯುತ್ತದೆ. ಬೆಳೆದ ಬೆಳೆಯನ್ನು ಒಳ್ಳೆಯ ಬೆಲೆಗೆ ಮಾರಲು ಕಾಯ್ದಿರಿಸುವ ಸ್ವಾತಂತ್ರ್ಯ ಲಭಿಸುತ್ತದೆ. ಈ ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಕಾರಣಕ್ಕೆ ಉತ್ತರ ಕರ್ನಾಟಕದ-ಹೈದರಾಬಾದ್ ಕರ್ನಾಟಕವನ್ನೂ ಒಳಗೊಂಡಂತೆ ನಾಡಿನ ಬಹುಸಂಖ್ಯಾತ ರೈತರು ಬಿತ್ತನೆ ಪೂರ್ವ ವಲಸೆಯನ್ನು ಕೈಗೊಳ್ಳುತ್ತಾರೆ. 
ದೇಶದೆಲ್ಲೆಡೆ ಉತ್ತಮ ಮಳೆ: ಕೋವಿಡ್‌ಗೆ ...

 ಬಿತ್ತನೆಗಾಗಿ ಮಾಡುವ ವಲಸೆ ಈ ಬಾರಿ ಪೂರ್ಣ ಆರಂಭವಾಗಿರಲಿಲ್ಲ, ವಲಸೆ ಹೋದವರು ಲಾಕ್‍ಡೌನಿನಿಂದ ಬರಿಗೈಲಿ ಮನೆಗೆ ಮರಳಿದರು. ಈ ವಿದ್ಯಮಾನ ರೈತರ ಬಿತ್ತನೆ ಮೇಲೆ ಪರಿಣಾಮ ಬೀರಲಿದೆ. ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ ಬಹುಸಂಖ್ಯಾತÀ ರೈತರು ಈ ಬಗೆಯ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ.

 ಲಾಕ್ಡೌನ್ ಪರಿಣಾಮದಿಂದಾಗಿ ಇದೀಗ ಸಣ್ಣಪುಟ್ಟ ರೈತರಿಗೆ ಬ್ಯಾಂಕುಗಳು, ದಲ್ಲಾಳಿ ಅಂಗಡಿಯವರು ಸಾಲ ಕೊಡುವುದಿಲ್ಲ. ಹೀಗಾಗಿ ಹಳ್ಳಿಗಳನ್ನು ಮುತ್ತಿಗೆ ಹಾಕಿದ ಹತ್ತಾರು ಫೈನಾನ್ಸುಗಳು/ಸ್ವಸಹಾಯ ಗುಂಪುಗಳು ಸಾಲ ಕೊಡಲು ಮುಂದೆ ಬರುತ್ತವೆ. ಹೀಗೆ ರೈತರು ಸಾಲ ಪಡೆಯದಿದ್ದರೆ ಹೊಲವನ್ನು ಬೀಳು ಬಿಡಬೇಕು. ಭಾವನಾತ್ಮಕವಾಗಿ ಹೊಲ ಬಿತ್ತಿದರೆ ರೈತರಿಗೆ ಒಂದು ಬಗೆಯ ಸಮಾಧಾನ. ಹಾಗಾಗಿ ಬಹುಪಾಲು ರೈತರು ಹೊಲದಿಂದ ಎಷ್ಟೇ ನಷ್ಟವಾದರೂ ಬೀಳು ಬಿಡಲಾರರು. ಇದರಲ್ಲಿ ಸರೀಕರ ಎದುರು ತಲೆಯೆತ್ತಿ ನಿಲ್ಲುವ ಸ್ವಾಭಿಮಾನವೂ ಬೆರೆತಿದೆ. ಹೀಗಿರುವಾಗ ಊರಿನ ಸಿರಿವಂತರು/ ಫೈನಾನ್ಸು/ ಸ್ವಸಹಾಯ ಗುಂಪು ಯಾವ ಮೂಲದಿಂದಾದರೂ ಸಾಲ ಪಡೆದು ಬಿತ್ತನೆ ಮಾಡುವ ಸಾಧ್ಯತೆ ಇದೆ. 

 ಇಂದು ರೈತರಿಗೆ ದೊಡ್ಡಮಟ್ಟದಲ್ಲಿ ಸಾಲ ಕೊಡಲು ಸಜ್ಜಾದ ಫೈನಾನ್ಸುಗಳು/ಸ್ವಸಹಾಯ ಗುಂಪುಗಳ ಸಾಲವನ್ನೇನೊ ಕೊಡುತ್ತವೆ. ಬಡ್ಡಿಯ ಧರವೂ ಕಡಿಮೆ. ಸಾಲದ ಮರುಪಾವತಿಯನ್ನು ಕಂತುಗಳಲ್ಲಿ ಪ್ರತಿ ವಾರ ಪಾವತಿಸುವ ಷರತ್ತಿಗೆ ಒಳಗಾಗಬೇಕು. ಈ ಪೈನಾನ್ಸು ಮತ್ತು ಸ್ವಸಹಾಯ ಗುಂಪುಗಳನ್ನು ಹತ್ತರಿಂದ ಇಪ್ಪತ್ತರಷ್ಟು ಸದಸ್ಯರ ಸಣ್ಣ ಸಣ್ಣ ಗುಂಪುಗಳಾಗಿ ರಚಿಸಲಾಗಿರುತ್ತದೆ. ಒಬ್ಬರಿಗೆ ಕೊಟ್ಟ ಸಾಲಕ್ಕೆ ಆ ಗುಂಪಿನ ಎಲ್ಲಾ ಸದಸ್ಯರು ಹೊಣೆಗಾರರು. ಯಾರಾದರೂ ಒಂದೆರಡು ವಾರ ಕಂತು ಕಟ್ಟಲು ಸಾಧ್ಯವಾಗದಿದ್ದರೆ, ಗುಂಪಿನ ಅಷ್ಟೂ ಸದಸ್ಯರು ಸಾಲಗಾರನ ಮನೆ ಮುಂದೆ ಕೂರುತ್ತಾರೆ. ಅಕಸ್ಮಾತ್ ಸಾಲಗಾರ ಊರು ಬಿಟ್ಟು ಹೋದರೆ, ಗುಂಪಿನ ಸದಸ್ಯರೆ ಸಾಲದ ಕಂತನ್ನು ಕಟ್ಟಬೇಕಾಗುತ್ತದೆ. 

 ಹೀಗೆ ಪೈನಾನ್ಸ್/ಸ್ವಸಹಾಯ ಗುಂಪುಗಳ ಸಾಲ ಪಡೆದು ವಾರದ ಕಂತು ಕಟ್ಟಲು ರೈತರು ಕೃಷಿಯೇತರ ಕೂಲಿಯನ್ನು ಮಾಡಬೇಕು. ಇಲ್ಲವೆ ಅನಿವಾರ್ಯ ಸಮೀಪದ ನಗರಗಳಲ್ಲಿ ಕೂಲಿ ಅರಸಬೇಕು. ಲಾಕ್ಡೌನ್ ಪರಿಣಾಮ ಇನ್ನೂ ಕೆಲಸಗಳು ದೊಡ್ಡ ಪ್ರಮಾಣದಲ್ಲಿ ಆರಂಭವಾಗಿಲ್ಲ. ಇದೀಗ ದಿನದಿಂದ ದಿನಕ್ಕೆ ಕೊರೊನಾ ಮತ್ತಷ್ಟು ಹರಡುತ್ತಿದೆ. ಹೀಗಿರುವಾಗ ಕೂಲಿ ಮಾಡಿ ವಾರದ ಕಂತುಗಳನ್ನು ಕಟ್ಟಲು ಸಾಧ್ಯವೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಒಂದು ವೇಳೆ ಹೀಗೆ ಕಂತು ಕಟ್ಟಲಾರದೆ ಪೈನಾನ್ಸ್/ಸ್ವಸಹಾಯ ಗುಂಪುಗಳ ಒತ್ತಡಗಳು ಹೆಚ್ಚಾದರೆ, ಖಂಡಿತಾ ಇದು ರೈತರನ್ನು ಆತ್ಮಹತ್ಯೆಯೆಡೆಗೆ ದೂಡುವ ಸಂಭವವಿದೆ.

 ವಾಸ್ತವ ಹೀಗಿರುವಾಗ ಚಿಕ್ಕ ಹಿಡುವಳಿಗಳ ರೈತರ ಬಿತ್ತನೆಗಾಗಿ `ಬಡ್ಡಿ ರಹಿತ ಬಿತ್ತನೆ ಸಾಲ’ ವನ್ನು ಗ್ರಾಮ ಪಂಚಾಯ್ತಿ, ಕೃಷಿಪತ್ತಿನ ಸಹಕಾರಿ ಬ್ಯಾಂಕ್, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಸರಕಾರ ನೀಡಬೇಕಾಗಿದೆ. ಹೀಗೆ ಮಾಡುವ ಮೂಲಕ ಮುಂದೆ ಸಂಭವಿಸಬಹುದಾದ ಆಹಾರದ ಬಿಕ್ಕಟ್ಟನ್ನೂ, ರೈತರ ಆತ್ಮಹತ್ಯೆಗಳನ್ನು ತಪ್ಪಿಸಬಹುದಾಗಿದೆ. 

http://m.varthabharati.in/article/2020_07_09/250216