ಭಾನುವಾರ, ನವೆಂಬರ್ 4, 2018

ಶಬರಿಮಲ ಆದೇಶವೂ ಮತ್ತು ಅದರ ವಿರೋಧಿಗಳೂ..


ಅನುಶಿವಸುಂದರ್ 
Image result for sabarimala

ಯಾವ ಸಮಾಜವು ಲಿಂಗನ್ಯಾಯದ ಮೌಲ್ಯಗಳನ್ನು ಅಂತರ್ಗತಗೊಳಿಸಿಕೊಂಡಿಲ್ಲವೋ ಸಮಾಜಕ್ಕೆ ಆತ್ಮಗೌರವದ ಕೊರತೆಯಿದೆಯೆಂದರ್ಥ.

ಶಬರಿಮಲ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಕುರಿತು ಇತ್ತೀಚೆಗೆ ಸುಪ್ರೀಂಕೋರ್ಟು ನೀಡಿದ ಆದೇಶವನ್ನು ಬೆಂಬಲಿಸುವವರೂ ಇದ್ದಾರೆ, ವಿರೋಧಿಸುವವರೂ ಇದ್ದಾರೆ. ಆದರೆ ವಿರೋಧಿಸುವವರಲ್ಲಿ ಎರಡು ಸ್ಪಷ್ಟವಾದ ಧಾರೆಗಳಿವೆ. ಒಂದೆಡೆ ವಿಷಯದ ಬಗ್ಗೆ ಕಾಂಗ್ರೆಸ್ ಪಕ್ಷವು ಎಡಬಿಡಂಗಿ ನಿಲುವು ತೆಗೆದುಕೊಂಡಿದೆ. ಕಾಂಗ್ರೆಸ್ ಕೇಂದ್ರ ಘಟಕವು ತೆಗೆದುಕೊಂಡಿರುವ ನಿಲುವಿಗೆ ಭಿನ್ನವಾದ ನಿಲುವನ್ನು ಅದರ ಕೇರಳ ರಾಜ್ಯ ಘಟಕ ತೆಗೆದುಕೊಂಡಿದೆ. ಮತೊಂದೆಡೆ ಭಾರತೀಯ ಜನತಾ ಪಕ್ಷದಂಥ (ಬಿಜೆಪಿ) ಹಿಂದೂತ್ವವಾದಿ ಪಕ್ಷಗಳು ಧಾರ್ಮಿಕ ಸ್ಥಾವರಗಳಲ್ಲಿರುವ ಅಧಿಕಾರ ರಚನೆಯನ್ನು ಬೆಂಬಲಿಸುವ ತನ್ನ ಧೋರಣೆಗೆ ತಕ್ಕದಾದ ನಿಲುವನ್ನೇ ತೆಗೆದುಕೊಂಡಿದೆ.

ಅದೇನೇ ಇದ್ದರೂ ಲಿಂಗನ್ಯಾಯದ ವಿರೋಧಿಗಳು ಸುಪ್ರೀಂ ಕೋರ್ಟಿನ ಆದೇಶವನ್ನು ವಿರೋಧಿಸುತ್ತಿರುವ ನೆಲೆಗಳು ಮಾತ್ರ ಅನೈತಿಕವಾಗಿರುವುದು ಮಾತ್ರವಲ್ಲದೆ ಸಾಂವಿಧಾನಿಕವಾಗಿ ಅಪಾಯಕಾರಿಯೂ ಆಗಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಸುಪ್ರೀಂ ಕೋರ್ಟು ಜಾರಿಮಾಡಲಾಗದ ಆದೇಶವನ್ನು ನೀಡಬಾರದು ಎಂದು  ಇತ್ತೀಚೆಗೆ ನೀಡಿರುವ ಹೇಳಿಕೆಯಲ್ಲಿ ಇದು ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಹೇಳಿಕೆಯು ಮೂರು ಮುಖ್ಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮೊದಲನೆಯದಾಗಿ ಬಿಜೆಪಿ ಮುಖ್ಯಸ್ಥರು ಕೋರ್ಟಿನ ಬಗ್ಗೆ ಅವಿಶ್ವಾಸವನ್ನೇಕೆ ಹುಟ್ಟುಹಾಕುತ್ತಿದ್ದಾರೆ? ಎರಡನೆಯದಾಗಿ ಲಿಂಗನ್ಯಾಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೇರಳದ ಕಾಂಗ್ರೆಸ್ಸಿನಂತ ರಾಜಕೀಯ ಪಕ್ಷಗಳ ಬದ್ಧತೆಯೇನು? ಮತ್ತು ಮೂರನೆಯದಾಗಿ ಯಾವ ಸಾಮಾಜಿಕ ರಾಜಕೀಯ ಶಕ್ತಿಗಳು ಸುಪ್ರೀಂಕೋರ್ಟಿನ ಶಬರಿಮಲ ಆದೇಶದ ಜೊತೆಜೊತೆಗೆ ನಿಂತುಕೊಂಡು ಪ್ರಜಾತಂತ್ರವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಸಾಮರ್ಥ್ಯವನ್ನು ಪಡೆದಿವೆ?

ಸುಪ್ರೀಂ ಕೋರ್ಟಿನ ಆದೇಶದ ಬಗ್ಗೆ ಬಿಜೆಪಿಯ ಅಧ್ಯಕ್ಷರ ಪ್ರತಿಕ್ರಿಯೆಯ ಹಿಂದೆ ಒಂದು ರಹಸ್ಯವಾದ ಅವಿಶ್ವಾಸವಿದೆ. ಕೋರ್ಟಿನ ಆದೇಶವು ಹೊರಬಿದ್ದ ನಂತರ ಬಿಜೆಪಿ ಅಧ್ಯಕ್ಷರು ಸಾರ್ವಜನಿಕರ ಪ್ರತಿರೋಧದ ಭೀತಿಯ ಗುಮ್ಮವನ್ನು ಎರಡು ಸ್ಪಷ್ಟವಾದ ಉದ್ದೇಶಗಳಿಗಾಗಿ ಬಳಕೆ ಮಾಡುತ್ತಿದ್ದಾರೆ. ಮೊದಲನೆಯದಾಗಿ ಅವರು ಆದೇಶವನ್ನು ವಿರೋಧಿಸುತ್ತಿರುವ ಕೇರಳದ ಒಂದು ವರ್ಗದ ಜನರನ್ನು ಸಂಘಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇರಳದಲ್ಲಿ ಅಧಿಕಾರವನ್ನು ಹಿಡಿಯುವ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಅವರು ಆದೇಶದಲ್ಲಿರುವ ಪರಿವರ್ತಕ ಮಹತ್ವವನ್ನು ಮತ್ತು ಸಹಜ ಪ್ರಾಮುಖ್ಯತೆಯನ್ನು ಅಲ್ಲಗೆಳೆಯುತ್ತಿದ್ದಾರೆ. ಎರಡನೆಯದಾಗಿ, ಒಂದು ಆದರ್ಶಪ್ರಾಯ ಸಮಾಜವನ್ನು ಸಾಕಾರಗೊಳಿಸಲು ಜನರು ಯಾವ ಪರಿವರ್ತನೆಯನ್ನು ತಂದುಕೊಳ್ಳಬೇಕೆಂಬ ಪ್ರಶ್ನೆಯನ್ನೇ ತಪ್ಪಿಸಲೆಂದೇ ಬಿಜೆಪಿ ಅಧ್ಯಕ್ಷರು ಹೇಳಿಕೆಯನ್ನು ನೀಡಿದ್ದಾರೆ. ವಾಸ್ತವವಾಗಿ ಬಿಜೆಪಿಯ ಅಥವಾ ಸಂಘಪರಿವಾರದ ಇತರ ಯಾವುದೇ ಸದಸ್ಯರು ಇಂಥಾ ಆದರ್ಶಮಯ ಪರಿವರ್ತನೆಗೆ ಸಂಬಂಧಪಟ್ಟ ಯಾವುದೇ ಪ್ರಶ್ನೆಗಳಿಗೆ ಮುಖಾಮುಖಿಯಾಗುವ ಆಸಕ್ತಿ ತೋರುವುದೇ ಇಲ್ಲ.  ಬಿಜೆಪಿ ಮತ್ತು ಅದರ ಮಾತೃ ಸಂಘಟನೆಯು ಭವಿಷ್ಯಕ್ಕಿಂತ ಗತದ ಬಗ್ಗೆಯೇ ಹೆಚ್ಚಿನ ಆಸಕ್ತಿ ಹೊಂದಿರುವುದರಿಂದಲೇ ಕೊರತೆಯು ಹುಟ್ಟಿಕೊಂಡಿರಬಹುದು. ಮನುಷ್ಯರು ಹೇಗಿರಬೇಕೆಂಬ ಪ್ರಶ್ನೆಯಲ್ಲಿ ಅಂತರ್ಗತವಾಗಿರುವ ನೈತಿಕತೆಯು ಬಿಜೆಪಿಯನ್ನು ಎಲ್ಲಾ ಮನುಷ್ಯರನ್ನು ಸಮಾನವಾಗಿ ನೋಡಬೇಕೆಂದು ಒತ್ತಾಯಿಸುವುದು ಮಾತ್ರವಲ್ಲದೆ ಸಮಾನತೆಯು ಅಭಿವ್ಯಕ್ತಿಗೊಳಲು ಬೇಕಾದ ಭೂಮಿಕೆಯನ್ನು ಒದಗಿಸುವಂತೆ ಆಗ್ರಹಿಸುತ್ತದೆ. ಇತರ ಧರ್ಮಗಳ ಶ್ರದ್ಧಾ ಕೇಂದ್ರಗಳಂತೆ ಶಬರಿಮಲವು ಸಹ ಸಮಾನತೆಯು ಅಭಿವ್ಯಕ್ತಗೊಳ್ಳಬೇಕಾದ ಸ್ಥಳವಾಗಿದೆ. ಹಿನ್ನೆಲೆಯಲ್ಲಿ ಆಧುನಿಕ ಭಾರತದ ಮಹಾನ್ ಚಿಂತಕರಾದ ಜ್ಯೋತಿರಾವ್ ಫುಲೆಯವರಿಂದ ನಾವು ಕೆಲವು ಅಂಶಗಳನ್ನು ಕಲಿಯಬಹುದಾಗಿದೆ. ಅವರ ಪ್ರಕಾರ ನಿರ್ಮಿಕನು (ದೇವರಿಗಿಂತ ಭಿನ್ನವಾದ ಪರಿಕಲ್ಪನೆ) ಸದಾ ಸಮಾನತೆಯ ಪರವಾಗಿದ್ದು ಮೌಲ್ಯವನ್ನು ಅಂತರ್ಗತಗೊಳಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕಿದೆ. ಫುಲೆಯವರ ಮಟ್ಟಿಗೆ ನಿರ್ಮಿಕನ ಆದರ್ಶವನ್ನು ಪೂರೈಸುವ ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿ ಹೊತ್ತಿರುವ ಗಂಡು ಮತ್ತು ಹೆಣ್ಣು ಇಬ್ಬರಿಗೂ ಸಮಾನತೆಯು ಅತ್ಯಂತ ಮಹತ್ವದ್ದಾಗಿದೆ.

ಸಾಮಾನ್ಯವಾಗಿ ಹೇಳುವುದಾದರೆ, ಯಾವುದೇ ಕಾನಾನಾತ್ಮಕ ಮಧ್ಯಪ್ರವೇಶಕ್ಕೆ ಮುನ್ನ ಮತ್ತು ಅದರಿಂದ ಸ್ವತಂತ್ರವಾಗಿಯೇ ನ್ಯಾಯ ಮತ್ತು ಸಮಾನತೆಯ ಪ್ರಶ್ನೆಯನ್ನು ಸಮಾಜವು ಗಮನಿಸಬೇಕು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ನಾಗರಿಕ ಸಮಾಜದ ಸದಸ್ಯರು ಅದರಲ್ಲೂ ಮುಖ್ಯವಾಗಿ ಔಪಚಾರಿಕವಾಗಿಯೇ ರಾಜಕೀಯ ಕ್ಷೇತ್ರದಲ್ಲಿ ವ್ಯವಹರಿಸುವ ರಾಜಕೀಯ ಪಕ್ಷಗಳು ಲಿಂಗ ಸಮಾನತೆಗೆ ಪೂರಕವಾಗಿ ಸಾರ್ವಜನಿಕರ ಧೋರಣೆಯನ್ನು ರೂಪಿಸುವಲ್ಲಿ ನಾಯಕತ್ವವನ್ನು ವಹಿಸಬೇಕಿರುತ್ತದೆ. ಸಭ್ಯವಾಗಿರಬೇಕೆಂದು ಬಯಸುವ ಯಾವುದೇ ಸಮಾಜವು ನ್ಯಾಯ ಮತ್ತು ಸಮಾನತೆಯನ್ನು ಸಾಕಾರಗೊಳಿಸಲು ಬೇಕಾದ ಪೂರಕ ಪರಿಸ್ಥಿತಿಯನ್ನು ಸೃಷ್ಟಿಸಲು ಪ್ರಾಮಾಣಿಕವಾದ ಮತ್ತು ಸಂವೇದನಾಶೀಲವಾದ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಲಿಂಗ ಸಮಾನತೆ ಮತ್ತು ನ್ಯಾಂiಗಳು ಲಿಂಗ, ವರ್ಣ ಮತ್ತು ಜಾತಿಬೇಧವಿಲ್ಲದಂತೆ ಪ್ರತಿಯೊಬ್ಬರು ಅನುಭವಿಸಬೇಕಾದ ಸಾರ್ವತ್ರಿಕ ಒಳಿತಿನ ವಿಷಯವೆಂದು ರಾಜಕೀಯ ಪಕ್ಷಗಳು ಭಾವಿಸಬೇಕು. ತಾವು ಮಾತ್ರ ದೇವಾಲಯಗಳಿಗೆ ಪ್ರವೇಶ ಮಾಡುವ ಅವಕಾಶವನ್ನು ಅನುಭವಿಸುತ್ತಾ ಮಹಿಳೆಯರಿಗೆ ಅದೇ ಅವಕಾಶವನ್ನು ನಿರಾಕರಿಸುತ್ತಿರುವುದರ ಹಿಂದಿನ ಪುರುಷಾಧಿಪತ್ಯ ಮೌಲ್ಯಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಸೃಷ್ಟಿಸಬೇಕಾದ ಅಗತ್ಯವನ್ನು ಸಂಬಂಧಪಟ್ಟ ರಾಜಕೀಯ ಪಕ್ಷಗಳು ತಾರ್ಕಿಕವಾಗಿಯಾದರೂ ಒಪ್ಪಿಕೊಳ್ಳಬೇಕು. ಹೀಗಾಗಿ ದೇವಾಲಯಗಳಿಗೆ ಮಹಿಳೆಯರ ಪ್ರವೆಶವೆಂಬ ವಿಷಯವನ್ನು ಕಾನೂನು ವ್ಯವಸ್ಥೆಯು ಪರಾಂಬರಿಸಲು ಒಪ್ಪಿಸುವ ಮುನ್ನ ಒಂದು ನೈತಿಕ ಹಾಗೂ ತಾತ್ವಿಕ ದೃಷ್ಟಿಯಲ್ಲಿ ದೇವಾಲಯವು ಮಹಿಳೆಯರು ಪ್ರವೇಶಿಸುವಂತೆ ಮಾಡುವುದು ಸಮಾಜದ ಪ್ರಾಥಮಿಕ ಕಾಳಜಿಯಾಗಬೇಕು. ಲಿಂಗನ್ಯಾಯದ ವಿರುದ್ಧವಾಗಿ ಸಾರ್ವಜನಿಕರ ಪ್ರತಿರೋಧವನ್ನು ಕಟ್ಟಲು ಪ್ರಯತ್ನಿಸುತ್ತಿರುವ ಬಿಜೆಪಿಯ ಅಧ್ಯಕ್ಷರು ದೇವಸ್ಥಾನದಲ್ಲಿ ಈಗಾಗಲೇ ಹಾಸುಹೊಕ್ಕಾಗಿರುವ ಪುರುಷಾಧಿಪತ್ಯವು ಮತ್ತಷ್ಟು ಗಟ್ಟಿಯಾಗುವಂತೆ ಮಾಡುತ್ತಿದ್ದಾರೆ. ಒಂದು ಪ್ರತಿಗಾಮಿ ಸಾರ್ವಜನಿಕರನ್ನು ಸೃಷ್ಟಿಸುವ ಮೂಲಕ ಈಗಾಗಲೇ ದೇವಾಲಯದ ಆಡಳಿತದಲ್ಲಿ ಹೊಕ್ಕಿನಿಂತಿರುವ ಪುರುಷಾಧಿಪತ್ಯದ ಶಕ್ತಿಗಳಿಗೆ ದೇವಾಲಯದ ಆಡಳಿತದ ಮೇಲೆ ಮತ್ತಷ್ಟು ನಿಯಂತ್ರಣವನ್ನು ಒದಗಿಸಿಕೊಟ್ಟಂತಾಗುತ್ತದೆ. ಹಾಗು ಅದು ಖಂಡಿತವಾಗಿ ಲಿಂಗನ್ಯಾಯದ ಪರವಾಗಿರುವುದಿಲ್ಲ. ಅದು ಮಹಿಳೆಯರ ಮತ್ತು ಕೆಳಜಾತಿಗಳ ಸಮಾನತಾ ಆದರ್ಶಗಳ ಆಶೊತ್ತರಗಳ ಮೇಲೆ ಮಿತಿಯನ್ನು ಹೇರುತ್ತದೆ.

ರಾಜಕೀಯ ಪಕ್ಷಗಳು ಮತ್ತು ಜನತೆ ಇಬ್ಬರೂ ಸಹ ಸಂವಿಧಾನವನ್ನು ಗೌರವಿಸಲು ವಿಫಲರಾದಾಗ ಲಿಂಗನ್ಯಾಯದಂಥ ಸಾರ್ವತ್ರಿಕ ಮೌಲ್ಯಗಳ ರಕ್ಷಣೆಗೆ ಸುಪ್ರೀಂ ಕೋರ್ಟು ಮುಂದಾಗಬೇಕಾಗುತ್ತದೆ. ಮಹಿಳೆಯರ ಪರವಾದ ಮುಂದೊಡಗನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನ್ಯಾಯಾಲಯದ ಮೇಲೆ ಹೊರಿಸುವುದು ಸಾರಾಂಶದಲ್ಲಿ ರಾಜಕಿಯ ಪಕ್ಷಗಳ ವೈಫಲ್ಯವೇ ಆಗಿದೆ. ಹೀಗಾಗಿ ಶಬರಿಮಲ ಆದೆಶವು ಲಿಂಗನ್ಯಾಯದ ಬಗ್ಗೆ ಸಾಮಾಜಿಕ ಸಮ್ಮತಿಯನ್ನು ರೂಢಿಸಲಾಗದ ರಾಜಕೀಯ ಪಕ್ಷಗಳ ವೈಫಲ್ಯದ ಪ್ರತಿಫಲನವಾಗಿದೆ. ಅದೇನೇ ಇದ್ದರೂ, ನ್ಯಾಯಾಲಯದ ಆದೇಶವನ್ನು ಜಾರಿ ಮಾಡುವಲ್ಲಿ ಕೇರಳದ ಎಡ ಪ್ರಜಾತಾಂತ್ರಿಕ ರಂಗದ (ಎಲ್ಡಿಎಫ್) ಸರ್ಕಾರವು ತೋರುತ್ತಿರುವ ಬದ್ಧತೆಯನ್ನು ಇಲ್ಲಿ ಗುರುತಿಸಲೇ ಬೇಕು. ಅದೇ ರೀತಿ ಎಲ್ಡಿಎಫ್  ಮತ್ತು ಇತರ ಕೆಳಜಾತಿ ಸಂಘಟನೆಗಳು ಇದರ ಸುತ್ತಾ ಜನರನ್ನು ಅಣಿನೆರೆಸುವ ಮೂಲಕ ಸುಪ್ರೀಂ ಕೋರ್ಟಿನ ಆದೇಶದಲ್ಲಿ ಅಡಕವಾಗಿರುವ ಪ್ರಜಾತಾಂತ್ರಿಕ ಅಂಶಗಳನ್ನು ಮತ್ತಷ್ಟು ಶ್ರೀಮಂತಗೊಳಿಸಲು ಪ್ರಯತ್ನಿಸುತ್ತಿವೆ. ಕೋರ್ಟಿನ ಆದೇಶವನ್ನು ಪರಿವರ್ತನಾವಾದಿ ನ್ಯಾಯಾಂಗ ಕ್ರಿಯಾಶೀಲತೆಯ ಮಹತ್ವದ ಹೆಜ್ಜೆಯೆಂದೇ ಪರಿಗಣಿಸಬೇಕು. ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಸಂವಿಧಾನದ ಮಾರ್ಗದರ್ಶನದ ತತ್ವಗಳಿಗನುಸಾರವಾಗಿ ಮತ್ತು ಂಬಂಧಪಟ್ಟ ಸಾಂವಿಧಾನಿಕ ಪರಿಚ್ಚೇಧಗಳಿಗನುಸಾರವಾಗಿಯೇ ತಮ್ಮ ಆದೇಶವನ್ನು ನೀಡಿದ್ದಾರೆಂದು ಮತ್ತೊಮ್ಮೆ ಹೇಳುವ ಅಗತ್ಯವಿಲ್ಲ. ಪ್ರಜಾತಂತ್ರದ ಆಶಯಗಳಿಗೆ ಮತ್ತು ಸಾಂವಿಧಾನಿಕ ನೈತಿಕತೆಗೆ ಕೇರಳ ಕಾಂಗ್ರೆಸ್ಸಿನ ಬದ್ಧತೆಯೆಷ್ಟೆಂದು ಅರ್ಥಮಾಡಿಕೊಳ್ಳಲು ವಿಶೇಷ ಸಾಧನಗಳ ಅಗತ್ಯವಿಲ್ಲ. ಸುಪ್ರೀಂಕೋರ್ಟು ಎತ್ತಿಹಿಡಿದಿರುವಂತೆ ಅವರು ವ್ಯಕ್ತಿಗಳ ಹಕ್ಕನ್ನು ಗೌರವಿಸಬೇಕು ಮಾತ್ರವಲ್ಲದೆ ಸಮಾನತೆಯ ಹಕ್ಕನ್ನು ಸಹಜ ಗುಣಲಕ್ಷಣವಾಗಿ ಪರಿಗಣಿಸಬೇಕು.
                                                                               
ಕೃಪೆ: Economic and Political Weekly Nov 3,  2018. Vol. 53. No.44
                                                                             
 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )


                                                                                               







1 ಕಾಮೆಂಟ್‌:

GST News Updates ಹೇಳಿದರು...

This was really an great deal for me.Actually I do enjoy reading the posts over here than any other things.being a writer makes me more interested to be a part of this blog.As a writer i did found some of the posts useful to use as reference also.