ಅನು: ಶಿವಸುಂದರ್
ಬಾಬ್ರಿಮಸೀದಿ-ರಾಮಜನ್ಮಭೂಮಿ ವಿವಾದವನ್ನು ಬಗೆಹರಿಸಲು ಸುಪ್ರಿಂಕೋರ್ಟು ನ್ಯಾಯನಿರ್ಧಾರಣೆಯ ಪ್ರಕ್ರಿಯೆಗಿಂತ ಉಭಯಪಕ್ಷಗಳ ನಡುವೆ ಮಾತುಕತೆ ವಿಧಾನವನ್ನು ಮುಂದಿರಿಸಿರುವುದು ಅನ್ಯಾಯಯುತ ಪರಿಣಾಮಗಳನ್ನು ಉಂಟುಮಾಡಲಿದೆ.
ಅಲಹಾಬಾದ್ ಹೈಕೋರ್ಟಿನ ಲಖನೌ ಪೀಠವು ಬಾಬ್ರಿಮಸೀದಿ-ರಾಮ ಜನ್ಮಭೂಮಿ ವಿವಾದದಲ್ಲಿ ೨೦೧೦ರ ಸೆಪ್ಟೆಂಬರ್ ೩೦ರಂದು ಕೊಟ್ಟ ತೀರ್ಪು ಸಾರಾಂಶದಲ್ಲಿ ಹಿಂದೂ ಮೂಲಭೂತವಾದಿಗಳ ನಂಬುಗೆಗಳನ್ನೇ ವಾಸ್ತವ ಸತ್ಯವೆಂದು ಒಪ್ಪಿಕೊಂಡುಬಿಟ್ಟಿತ್ತು. ಲಿಬರ್ಹನ್ ಅಯೋಗದ ಅಧಿಕೃತ ವಿಚಾರಣೆಯ ಪ್ರಕಾರ, ಈ ನಂಬುಗೆಯನ್ನು ಒಂದು ಧಾರ್ಮಿಕ ವಿಶ್ವಾಸವಾಗಿ ಕಾಪಿಟ್ಟುಕೊಂಡವರೇ ೧೯೯೨ರ ಡಿಸೆಂಬರ್ ೬ ರಂದು, ಅತ್ಯಂತ ಜತನದಿಂದ ಮತ್ತು ಪೂರ್ವ ಯೋಜಿತ ಸಿದ್ಧತೆಯಿಂದ ಮಸೀದಿಯನ್ನು ಕೆಡವಿಹಾಕಿದ್ದವರಾಗಿದ್ದರು. ಆ ದಿನದಂದು ಬಾಬ್ರಿ ಮಸೀದಿಯನ್ನು ಕೆಡವಿಹಾಕಿರೆಂದು ಪ್ರಚೋದನಾತ್ಮಕ ಭಾಷಣ ಮಾಡಿದ ಭಾರತೀಯ ಜನತಾ ಪಕ್ಷ ಮತ್ತು ಆರೆಸ್ಸೆಸ್ಗೆ ಸಂಬಂಧಪಟ್ಟ ಇತರ ಸಂಘಟನೆಗಳ ಅತ್ಯುನ್ನತ ನಾಯಕರ ನಂಬುಗೆಯೂ ಇದೇ ಆಗಿತ್ತು. ಆದರೆ ಯಾವುದೇ ಧರ್ಮದವರಾಗಿದ್ದರೂ, ಅಥವಾ ನಾಸ್ತಿಕರೇ ಆಗಿದ್ದರೂ, ಈ ದೇಶದ ನಾಗರಿPರೇ ಆಗಿರುವ ನಾವು, ಆ ನಾಗರಿಕತ್ವವು ಕೊಡಮಾಡುವ ಹಕ್ಕುಗಳನ್ನು ಪ್ರಭುತ್ವವು ಖಾತರಿಗೊಳಿಸಬೇಕೆಂದು ಬಯಸುತ್ತಾ, ಈ ದೇಶದ ಸುಪ್ರೀಂ ಕೋರ್ಟು ಈ ಪ್ರಕರಣದಲ್ಲಿ ಸಂವಿಧಾನವನ್ನು ಮತ್ತು ಕಾನೂನನ್ನು ಚಾಚೂತಪ್ಪದಂತೆ ಎತ್ತಿಹಿಡಿಯುತ್ತದೆಂದು ನಿರೀಕ್ಷಿಸಿದ್ದೆವು.
ಆದರೆ ನ್ಯಾಯ ಪ್ರಕ್ರಿಯೆಯನ್ನು ಖಾತರಿಗೊಳಿಸುವ ತನ್ನ ಪ್ರಾಥಮಿಕ ಜವಾಬ್ದಾರಿಯನ್ನು ಪೂರೈಸುವ ಬದಲಿಗೆ, ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಜೆ.ಎಸ್. ಖೇಹರ್ ಅವರು ಪ್ರಕರಣದಲ್ಲಿರುವ ಉಭಯಪಕ್ಷಗಳಿಗೂ ನ್ಯಾಯಾಲಯದ ಹೊರಗಡೆಯೇ ವಿವಾದವನ್ನು ಬಗೆಹರಿಸಿಕೊಳ್ಳಲು ಸಲಹೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲ. ಅಗತ್ಯಬಿದ್ದರೆ, ಅಂಥ ಒಂದು ಸಂಧಾನ ಮಾತುಕತೆಯಲ್ಲಿ ತಾನು ಮಧ್ಯಸ್ಥಿಕೆಯನ್ನು ವಹಿಸುವುದಾಗಿಯೂ ಹೇಳಿದ್ದಾರೆ. ಉಭಯ ಪಕ್ಷಗಳೂ ಒಂದಷ್ಟನ್ನು ಬಿಟ್ಟುಕೊಡುತ್ತಾ, ಒಂದಷ್ಟನ್ನು ಪಡೆದುಕೊಳ್ಳುತ್ತಾ ವಿವಾದವನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಎರಡೂ ಪಕ್ಷಗಳು ನಿಯೋಜಿಸುವ ಮಧ್ಯಸ್ತಿಕೆದಾರರ ಜೊತೆ ನಾನೂ ಇರಬೇಕೆಂದು ಎರಡೂ ಪಕ್ಷಗಳು ಬಯಸುವುದಾದಲ್ಲಿ, ನಾನು ಆ ಜವಾಬ್ದಾರಿಯನ್ನು ಹೊರಲು ಸಿದ್ಧವಾಗಿದ್ದೇನೆ ಎಂದು ನ್ಯಾಯಮೂರ್ತಿ ಖೇಹರ್ ಹೇಳಿದರೆಂದು ವರದಿಯಾಗಿದೆ. ಅವರ ದೃಷ್ಟಿಯಲ್ಲಿ ಈ ವಿವಾದವು ಧರ್ಮ ಮತ್ತು ಭಾವನೆಗಳಿಗೆ ಸಂಬಂಧಪಟ್ಟ ವಿಷಯವಾಗಿದೆ. ಆದ್ದರಿಂದ ನಿಮ್ಮಗಳ ನಡುವೆ ನೀವು ವಿವಾದವನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಮಾತ್ರ ನ್ಯಾಯಾಲಯದ ಮಧ್ಯಪ್ರವೇಶವಾಗಬೇಕೆಂಬುದು ಅವರ ನಿಲುವಾಗಿದೆ.
ಈ ವಿವಾದದಲ್ಲಿ ಒಂದು ಪಕ್ಷದವರಿಗೆ, ಕೇಂದ್ರದಲ್ಲಿ ಮತ್ತು ನಾಶಗೊಂಡ ಬಾಬ್ರಿ ಮಸೀದಿ ಜಾಗವಿರುವ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಹಿಂದೂತ್ವವಾದಿಗಳು ಬೆಂಬಲಕ್ಕಿದ್ದಾರೆ. ಹೀಗಿರುವಾಗ ಅಸಮಾನ ಬಲರ ನಡುವೆ ನಡೆಯುವ ಸಂಧಾನ ಮಾತುಕತೆಯು ನ್ಯಾಯೋಚಿತವಾಗಿ ವಿವಾದವನ್ನು ಬಗೆಹರಿಸುತ್ತದೆಂದು ಯೋಚಿಸುವುದಾದರೂ ಹೇಗೆ ಸಾಧ್ಯ? ನಿರ್ದಿಷ್ಟವಾಗಿ ಇಂಥ ಪ್ರಕರಣಗಳಲ್ಲೇ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಂಥವರು ಉಭಯಪಕ್ಷಗಳ ಹಿಂದಿರುವ ಸಾಪೇಕ್ಷ ರಾಜಕೀಯ ಬಲಾಬಲಗಳನ್ನು ಕಿಂಚಿತ್ತೂ ಗಣನೆಗೆ ತೆಗೆದುಕೊಳ್ಳದೆ, ನ್ಯಾಯದಾನಕ್ಕೆ ಕೇವಲ ಸಾಕ್ಷಿಗಳನ್ನೂ. ಪ್ರಕರಣಕ್ಕೆ ಸಂಬಂಧಪಟ್ಟ ಸತ್ಯಸಂಗತಿಗಳನ್ನೂ ಮತ್ತು ಅದಕ್ಕೆ ಸಂಬಂಧಪಟ್ಟ ಕಾನೂನುಗಳ ಸರಿಯಾದ ವ್ಯಾಖ್ಯಾನವನ್ನು ಮಾತ್ರ ಪರಿಗಣಿಸುತ್ತಾರೆಂದು ಎಲ್ಲರೂ ನಿರೀಕ್ಷಿಸುತ್ತಾರೆ.
ಅಲಹಾಬಾದ್ ಉಚ್ಚ ನ್ಯಾಯಾಲಯ ವಾದಿಸಿದಂತೆ ದೇವನಾದ ರಾಮ ಮಸೀದಿಯ ಮಧ್ಯ ಗುಮ್ಮಟದ ಕೆಳಗೆ ಹುಟ್ಟಿದ್ದಾನೆಂಬ ನಂಬಿಕೆ ಈ ಪ್ರಕರಣದಲ್ಲಿ ನಿಜಕ್ಕೂ ಸುಸಂಗತವೇ?ಒಂದು ವೇಳೆ ಅದನ್ನು ನಿಜವೆಂದೇ ಭಾವಿಸಿದರೂ ಅದು ಆತನಿಗೆ ೧೫೨೮ರಷ್ಟು ಹಿಂದೆ ಕಟ್ಟಲ್ಪಟ್ಟ ಮಸೀದಿ ಜಾಗದ ಮೇಲೆ ಆಸ್ತಿ ಹಕ್ಕನ್ನು ಒದಗಿಸುವುದೇ? ದೇವಸ್ಥಾನವನ್ನು ಕೆಡವಿಹಾಕಿ ಮಸೀದಿಯನ್ನು ಕಟ್ಟಲಾಯಿತೇ? ಈ ಎಲ್ಲಾ ಸಂಗತಿಗಳನ್ನು ನಿರ್ವಿವಾದವಾಗಿ ಬಗೆಹರಿಸಬಲ್ಲ ಯಾವುದೇ ಸಾಕ್ಷಿಯಿಲ್ಲವೆಂಬ ಸಂಗತಿಯನ್ನು ಬದಿಗಿಟ್ಟು ನೋಡಿದರೂ, ಭೂಮಿಯ ಒಡೆತನವನ್ನು ಅಧಿಕಾರವನ್ನು ನಿರಾಕರಿಸಲು ಕಾಲಮಿತಿ (ಲಿಮಿಟೇಷನ್ ಆಕ್ಟ್) ಕಾಯಿದೆಯಯನ್ನು ಏಕೆ ಅನ್ವಯಿಸುತ್ತಿಲ್ಲ?
ಬಿಜೆಪಿಯ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರಾಮ ಮಂದಿರ ನಿರ್ಮಾಣ ಮಾಡುವ ಸಲುವಾಗಿ ಒಂದು ಕೇಂದ್ರೀಯ ಕಾಯಿದೆಯನ್ನೇ ಜಾರಿ ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶವಾಗಿದೆ. ಮತ್ತು ಅದಕ್ಕೆ ಅವರು ರಾಜ್ಯಸಭೆಯಲ್ಲೂ ಬಹುಮತ ಪಡೆಯಲು ಕಾಯುತ್ತಿರುವುದು ನಿಚ್ಚಳವಾಗಿದೆ. ಆದರೆ ಅದಕ್ಕೆ ಮೊದಲು ಅವರು ಈ ವಿವಾದದಿಂದ ನ್ಯಾಯಾಂಗವನ್ನು ಹೊರಗಟ್ಟಬೇಕಿದೆ. ಪ್ರಾಯಶಃ ಇದೇ ಕಾರಣಕ್ಕೆ, ಈವರೆಗೆ ಈ ವಿವಾದದಲ್ಲಿ ಯಾವತ್ತಿಗೂ ತಲೆಹಾಕದ (ಆರೆಸ್ಸೆಸ್ ಮತ್ತು ಬಿಜೆಪಿಯ) ಸುಬ್ರಹ್ಮಣ್ಯ ಸ್ವಾಮಿಯವರಿಗೆ ದಿಢೀರನೆ ಈ ವಿವಾದದಲ್ಲಿ ಪ್ರವೇಶಿಸಿ ಬಾಬ್ರಿ ಮಸೀದಿ ಉರುಳಿದ ಸ್ಥಳದಲ್ಲಿ ರಾಮಮಂದಿರ ಕಟ್ಟಲು ಅನುಮತಿ ನೀಡಬೇಕೆಂದು ಸುಪ್ರೀಂ ಕೋರ್ಟಿನ ಪೀಠದ ಮುಂದೆ ಅರ್ಜಿ ಹಾಕಲು ಅವಕಾಶ ಕೊಟ್ಟಿರಬಹುದೇ? ಇಲ್ಲದಿದ್ದರೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ಸುಬ್ರಹ್ಮಣ್ಯಸ್ವಾಮಿಯವರಿಗೆ ಅನಗತ್ಯವಾಗಿ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟಿದ್ದನ್ನು ಬೇರೆ ಹೇಗೆ ಅರ್ಥೈಸಲು ಸಾಧ್ಯ?
೧೯೪೯ರ ಡಿಸೆಂಬರ್ ೨೨-೨೩ರ ಮಧ್ಯರಾತ್ರಿ ಮೂವರು ವ್ಯಕ್ತಿಗಳ ನೇತ್ರೂತ್ವದಲ್ಲಿ ಅಂದಾಜು ೫೦ ಜನರು ಮಸಿಯೊಳಗೆ ನುಗ್ಗಿ ಅದರ ಮಧ್ಯ ಗುಮ್ಮಟದ ಕೆಳಗೆ ಮೂರು ವಿಗ್ರಹಗಳನ್ನು ಪ್ರತಿಷ್ಟಾಪಿಸಿದ್ದರಿಂದ ಹಿಡಿದು, ೨೦೧೦ರ ಸೆಪ್ಟೆಂಬರ್ ೩೦ ರಂದು ಅಲಹಾಬಾದ್ ಹೈಕೋರ್ಟಿನ ಲಖನೌ ಪೀಠ ಬಾಬ್ರಿ ಮಸೀಯನ್ನು ಕೆಡವಿದ ಜಾಗವನ್ನು ರಾಮಲಲ್ಲ (ಬಾಲರಾಮ)ನ ವಶಕ್ಕೆ ಕೊಡುವವರೆಗೆ ಒಂದಲ್ಲ ಒಂದು ರೀತಿಯಲ್ಲಿ, ಭಾರತ ಪ್ರಭುತ್ವದ ಕಾರ್ಯಾಂಗ ಮತ್ತು ಶಾಸಕಾಂಗಗಳೆರಡೂ, ಬಾಲರಾಮನು ಮಸೀದಿಯನ್ನು ವಶಪಡಿಸಿಕೊಳ್ಳುವುದಕ್ಕೆ ಪೂರಕವಾಗಿಯೇ ವರ್ತಿಸಿವೆ. ಶಾಸಕಾಂಗವಂತೂ ೧೯೯೩ರಲ್ಲಿ ಅಯೋಧ್ಯೆಯ ಒಂದಷ್ಟು ಜಾಗವನ್ನು ವಶಪಡಿಸಿಕೊಳ್ಳುವ ಕಾಯಿದೆಯನ್ನೂ ಮಾಡಿತ್ತು. ಅಲಹಾಬಾದ್ ಹೈಕೋರ್ಟಿನ ಲಖನೌ ಪೀಠದ ರೂಪದಲ್ಲಿ ನ್ಯಾಯಾಂಗವು ಸಹ ಬಾಲರಾಮನು ಮಸೀದಿಯನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಕಾನೂನು ಸಮ್ಮತಿಯ ಮುದ್ರೆಯನ್ನ್ನೊತ್ತಿದೆ. ಮತ್ತು ಈಗ ದೇಶದ ಸರ್ವೋಚ್ಚ ನ್ಯಾಯಾಲಯವು ಸಹ ಪ್ರಕರಣದ ಸತ್ಯಾಸತ್ಯತೆಗಳನ್ನು, ಸಂಗತಿಗಳನ್ನು, ಪುರಾವೆಗಳನ್ನು ಪರಿಶೀಲಿಸುವ ಬದಲು, ಸಂಬಂಧಪಟ್ಟ ಕಾನೂನುಗಳನ್ನು ಸರಿಯಾಗಿ ವ್ಯಾಖ್ಯಾನಿಸಿ ಅವುಗಳನ್ನು ಎತ್ತಿಹಿಡಿಯುವ ಬದಲು, ಅಸಮಾನ ಬಲಾಬಲಗಳನ್ನು ಹೊಂದಿರುವ ಪಕ್ಷಗಳಿಗೆ ನ್ಯಾಯಾಲಯದ ಹೊರಗೆ ಸಂಧಾನದ ಮಾತುಕತೆಯ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸಲಹೆ ಮಾಡಿದೆ.
ಬಾಬ್ರಿ ಮಸೀದಿಯ ಅವಶೇಷಗಳ ಮೇಲೆ ಬಾಲರಾಮನ ದೇವಸ್ಥಾನ ಮುಂದೋಂದು ದಿನ ಕಟ್ಟಿಯೂಬಿಡಬಹುದು. ಹಾಗಾದಾಗ ಅದು ಭಾರತದ ಧರ್ಮನಿರಪೇಕ್ಷತೆಯ ತತ್ವವನ್ನು ಬಲಿ ತೆಗೆದುಕೊಂಡಿರುತ್ತದೆ. ಏಕೆಂದರೆ ಆಗ ಭಾರತದ ಪ್ರಭುತ್ವವು ತನ್ನ ಅಸ್ಥಿತ್ವಕ್ಕೆ ಧಾರ್ಮಿಕ ನಂಬುಗೆ ಮತ್ತು ನಿರ್ದಿಷ್ಟವಾಗಿ ಬಾಲರಾಮನೆಂಬ ದೈವದಿಂದ ಮಾನ್ಯತೆಯನ್ನು ಪಡೆದುಕೊಂಡಿರುತ್ತದೆ. ಮತ್ತು ಆಗ ಪ್ರಜಾತಂತ್ರದ ಅವಶೇಷದ ಮೇಲೆ ರಾಮ ಮಂದಿರವನ್ನು ಕಟ್ಟಿದಂತಾಗುತ್ತದೆ. ಆಗ ಅಲ್ಲಿ ಪ್ರಜಾತಂತ್ರದ ಬಲಿಯಾಗಿರುತ್ತದೆ. ಏಕೆಂದರೆ ಪ್ರಜಾತಂತ್ರದ ಉಳಿವಿಗೆ ಧರ್ಮ ನಿರಪೇಕ್ಷತೆಯು ಯಾವಾಗಲೂ ಒಂದು ಪೂರ್ವಶರತ್ತಾಗಿರುತ್ತದೆ.
ಕೃಪೆ: Economic and Political Weekly
April 1, 2017. Vol. 52. No.13
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ