ಮಂಗಳವಾರ, ನವೆಂಬರ್ 3, 2015

ತಲಾಟಿ ಜನ ಗಿಲಾಟಿ ದುಡ್ಡು ಈಗಿನ ಜಾಮಾನಾ

-ಅರುಣ್ ಜೋಳದಕೂಡ್ಲಿಗಿ

ಈಚೆಗೆ ರೈತ ಆತ್ಮಹತ್ಯೆಗಳು ದಿನದಿನದ ಸಂಕಟಗಳಾಗಿ ಸುದ್ದಿಯಾಗುತ್ತಿವೆ. ಈ ಸಾವುಗಳ ಕಾರಣಗಳು ಚರ್ಚೆಯಾಗುತ್ತಿವೆ. ಹೊರಗಿನ ವಿದ್ವಾಂಸರಾಗಿಯೋ, ಚಳವಳಿಯ ಕಾರ್ಯಕರ್ತರಾಗಿಯೋ, ಸರಕಾರಿ ಅಧಿಕಾರಿಗಳಾಗಿಯೋ ಕೆಲವು ಕಾರಣಗಳನ್ನು ಹುಡುಕಿದಾಗಲೂ, ಕೆಲವು ಸ್ಥಳೀಯ ಕಾರಣಗಳು ನಮಗೆ ತಿಳಿಯುವುದೆ ಇಲ್ಲ. ಅವು ಕಪ್ಪೆಚಿಪ್ಪಿನಲ್ಲಿ ಅವಿತಿಟ್ಟಂತೆ ಕೂತಿರುತ್ತವೆ. ಇಂತಹ ಕೆಲವು ಸಮಸ್ಯೆಗಳು ಆಯಾ ಭಾಗದ ಮೌಖಿಕ ರಚನೆಗಳಲ್ಲಿ, ಮಾತುಕತೆಗಳಲ್ಲಿ ವ್ಯಕ್ತವಾಗುವ ಸಾಧ್ಯತೆ ಇರುತ್ತವೆ. ಇವುಗಳನ್ನು ಸಂಗ್ರಹಿಸಿಯೋ ಅಥವಾ ಆಯಾ ಹಾಡುಗಾರಿಕೆ ಮಾತುಕತೆಯ ಸಂದರ್ಭದಲ್ಲಿ ಹಾಜರಿದ್ದು ಕೇಳಿಸಿಕೊಂಡಾಗ ಇಂತವುಗಳು ಅರಿವಿಗೆ ಬರುತ್ತವೆ. ಮೊಹರಂ ಅಧ್ಯಯನದ ಸಂದರ್ಭದಲ್ಲಿ ಹೈದರಾಬಾದ ಕರ್ನಾಟಕ ಭಾಗದಲ್ಲಿ ಸಿಕ್ಕ ರಿವಾಯತ ಹಾಡೊಂದು ಹೀಗೆ ಭಿನ್ನವಾದ ಚಿಂತನೆಯೊಂದನ್ನು ನನ್ನಲ್ಲಿ ಹುಟ್ಟಿಸಿತು. ಈ ಹಾಡು ಹೈದರಾಬಾದ ಕರ್ನಾಟಕ ಹಿಂದುಳಿಯಲು ಕಾರಣವೊಂದನ್ನು ಶೋಧಿಸಿದಂತಿತ್ತು.
ಈ ಹಾಡಿನ ಹಿನ್ನೆಲೆಯನ್ನು ನೋಡೋಣ. ಆಂದ್ರದಿಂದ ಬಹುಪಾಲು ರೆಡ್ಡಿ ಸಮುದಾಯದ ರೈತರು ಹೈಕ ಭಾಗಕ್ಕೆ ಕೃಷಿ ಮಾಡಲು ವಲಸೆ ಬರುತ್ತಾರೆ. ಇಲ್ಲಿ ಹತ್ತರಿಂದ ಮೂವತ್ತು ಎಕರೆಯಷ್ಟು ಒಂದೊಂದು ಕುಟುಂಬ ದುಬಾರಿ ಬೆಲೆ ಕೊಟ್ಟು ಹತ್ತು ವರ್ಷಕ್ಕೋ ಹದಿನೈದು ವರ್ಷಕ್ಕೋ ಭೂಮಿಯನ್ನು ಲೀಜಿಗೆ (ಗುತ್ತಿಗೆ) ಹಿಡಿಯುತ್ತಾರೆ. ಹೀಗೆ ಲೀಜಿಗೆ ಹಿಡಿದ ಭೂಮಿಯಲ್ಲಿ ಬೋರ್ ಕೊರೆಸಿ ನೀರಾವರಿ ಮಾಡುತ್ತಾರೆ. (ತುಂಗಭದ್ರ ಕೃಷ್ಣ ಅಲಮಟ್ಟಿ ಡ್ಯಾಂ ನೀರು ಇರುವ ಕಡೆ ಇದು ಅನ್ವಯವಾಗುವುದಿಲ್ಲ) ಈ ಭೂಮಿಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಆರಂಭಿಸುತ್ತಾರೆ.
ವಿಪರೀತ ಗೊಬ್ಬರ ಕ್ರಿಮಿನಾಶಕ ಬಳಸಿ ಯಥೇಚ್ಚ ನೀರುಣಿಸಿ ಭೂಮಿಯ ಶಕ್ತಿಯನ್ನೆಲ್ಲಾ ಹೀರುತ್ತಾರೆ. ಈ ಭೂಮಿಯ ಹೆಸರಿಗೆ ಬ್ಯಾಂಕು ಲೇವಾದೇವಿಯವರ ಹತ್ತಿರ ಸಾದ್ಯವಾದಷ್ಟು ಸಾಲ ಮಾಡುತ್ತಾರೆ. ಹೀಗೆ ಲೀಜು ಮುಗಿಯುವ ಮೊದಲೆ ಇದ್ದಕ್ಕಿದ್ದಂತೆ ಹೊಲಗಳಿಂದ ಆಂದ್ರದ ಈ ಕುಟುಂಬ ಕಾಣೆಯಾಗುತ್ತದೆ. ಆಗ ಆ ಹೊಲದ ರೈತ ದಿಗ್ಭ್ರಮೆಗೊಳ್ಳುತ್ತಾನೆ. ಕಾರಣ ಹೊಲದ ಹೆಸರಲ್ಲಿ ಸಾಕಷ್ಟು ಸಾಲವಿರುತ್ತದೆ, ಅಂತೆಯೆ ಸದ್ಯಕ್ಕೆ ಬೆಳೆ ಬೆಳೆಯಲು ಸಾದ್ಯವೆ ಇಲ್ಲದಷ್ಟು ಹೊಲ ಬಂಜರಾಗಿರುತ್ತದೆ. ಹೀಗೆ ರೆಡ್ಡಿಗಳು ಬಂಜರು ಮಾಡಿ ಬಿಟ್ಟುಹೋದ ಹೊಲದ ರೈತರು ಸಾಮಾನ್ಯವಾಗಿ ಕಡುಬಡವರಾಗುವ ಸಾದ್ಯತೆಗಳಿರುತ್ತವೆ. ಇಂತಹ ಹಿನ್ನೆಲೆಯನ್ನು ಆಧರಿಸಿದ ರಿವಾಯ್ತ ಪದವು ಹೀಗಿದೆ:
ತಲಾಟಿ ಜನ ಗಿಲಾಟಿ ದುಡ್ಡು…
ತಲಾಟಿ ಜನ ಗಿಲಾಟಿ ದುಡ್ಡು ಈಗಿನ ಜಾಮಾನಾ| ಗಲಾಟಿಮಾಡಿ ಗದ್ದಲೆಬಿಸಿತು ನೀರಾವರಿ ಪೂರಣಾ
ಆಂದರದಿಂದ ಬಂದಿತ್ತು ಬಾಳ ಜನಾ| ಅಳಿಯದು ಬಂತು ಇದ್ದಂತ ಒಕ್ಕಲತನಾ||

ಲೀಜಿಗಂತ ಹಿಡಿದರು ದೊಡ್ಡ ದೊಡ್ಡ ಜಮಿನಾ| ಕೆಡಿಸಿ ಗದ್ದೆ ಮಾಡಿಬಿಟ್ಟರು ಅವರು ಸಂಪುರಣಾ
ಊರು ಬಿಟ್ಟು ದೂರ್ ದೂರ ಹಾಕ್ಯರ ತಮ್ಮಟಿ ಕಣಾ| ಕೌಳಿ ಮಾಡಿ ಕೈತುಂಬಣ ಪಡೆದುಕೊಳ್ಳೋಣಾ||

ದುಡ್ಡಿನ ಆಸೆ ಹಚ್ಚಿಬಿಟ್ಟರು ರೈತರಿಗಿನ್ನಾ| ಅವರದೆಷ್ಟು ಹೇಳಲಿ ವೈಭವತನಾ
ನೋಡಲಿಕ್ಕೆ ಕಾಣವರು ಒಳ್ಳೇ ಜನಾ| ತಿಳಿಯಲಿಲ್ಲೋ ರೈತರಿಗೆ ಅವರ ವರ್ತಮಾನ||

ಇದ್ದ ಜಮೀನು ಎಲ್ಲ ಅವರಿಗೆ ಒತ್ತಿ ಹಾಕೋಣಾ| ದುಡಿಮಿ ಇಲ್ಲದ ಈಗ ನಾವೂ ದುಡ್ಡು ಗಳಿಸೋಣ
ದೊಡ್ಡ ದೊಡ್ಡ ರೈತ ತೆಗೆದ ಒಕ್ಕಲತನಾ| ಕಂತ್ರಿಕವಳಿ ಬಂದು ಮಾಡಿತು ಕಾರಸ್ತಾನ||

ಬಸವನ ಬಾಯಿಗೆ ತುಸುಸೊಪ್ಪು ಇಲ್ಲದಂಗ ಖೂನಾ| ತಿಳಿಯದಿಲ್ಲ ಮುಂದೇನಾ ವರ್ತಮಾನ
ಬೆಳೆಯದುಕಾ ಬೆಲೆಯಿಲ್ಲದಂಗ ಆಗ್ಯದ ಸಂಪುರಣಾ|ಇದರಂತೆ ನಡದಿತ್ತು ಐದಾರು ವರುಷಾದ ತನಾ||

ಕೆಡುಗಾಲಕ ಒದಗಿ ಬಂತು ಕವಳಿ ವರ್ತಮಾನ| ಪೃಥ್ವಿ ಮೇಲೆ ಹುಟ್ಟಿತ್ತು ಬಿಳಿ ದ್ವಾಮಿನ್ನಾ
ಆಂದ್ರ ಜನ ನೋಡಿ ಅಂತಿತ್ತು ಒಂದೇ ಸವನಾ| ತಿಳಿವಲ್ದು ಈ ರೋಗದ ಒಂದು ವರ್ತಮಾನ||

ಬೆಳೆದಮಾಲು ನಾಶ ಮಾಡಿ ಹೋದಿತು ಸಂಪುರಣಾ|ಕೊಟ್ಟ ಸವಕಾರ ಬರುತಾನ ಅವರ ಮನೆ ಯಾ ತನಾ
ಆಂದರ ಜನಕ ಆಗಿಬಿಟ್ಟಿತು ದ್ವಾಮಿ ಹೈರಾಣಾ| ಮಂದಿ ಜಮೀನು ಮೇಲೆ ಅವರು ಸಾಲ ಮಾಡಾಣಾ||

ಸುಳ್ಳು ಮಾತು ಹೇಳಿ ಈಗ ಸಂಸರ ನಡಿಸೋಣಾ| ಮುಂದಿನ ಮಾಲಿಗೆ ತಂದು ಕೊಡ್ತೀವಿ ನಿಮ್ಮ ದುಡ್ಡನ್ನು
ಅಷ್ಟರೊಳಗ ನೀರಿಗೆ ಬಂತು ಬಾಳ ಕಠಿಣಾ| ಗೇಟು ಹಾಕಿ ನೀರಿನ ಕವಲುಗಾರ ಕುಂತಾ ಸುಮ್ಮನಾ||

ಬಂದ ಮಾಲು ಬತ್ತಿ ಹೋಯ್ತು ನೀರಿಲ್ಲದಿನ್ನಾ| ಆಂದರ ಜನರಿಗಾದೀತು ಬಾಳ ಕಠೀಣಾ
ಗೋರಮೆಂಟಕೆ ಬರಲಿಲ್ರೀ ಅಂತಕರುಣಾ| ಆಂದರ ಜನ ಹೌಹಾರಿ ನಿಂತು ಸಂಪುರಣಾ||

ಆಂದರ ಜನ ಕೂಡಿ ಅವರು ಮೀಟಿಂಗು ಮಾಡಾಣಾ| ಸ್ಟ್ರೈಕು ಮಾಡಿ ಗೇಟು ಎತ್ತಿಸಿ ನೀರು ತರುವೋಣಾ
ಹಳ್ಳಿ ಹಳ್ಳಿ ವಾಹನ ಬಿಟ್ಟಾರ ಆಫೀಸತನಾ|ನಡು ದಾರಿಯಲ್ಲಿ ಒಂದು ವಾಹನ ಪಳ್ಟಿ ಆಗೋಣಾ||

ಅದರಲ್ಲಿದ್ದ ನಾಲ್ಕು ಜನ ಮೃತ ಹೊಂದಾಣಾ| ಉಳಿದು ಜನಾ ಗಾಯಗೊಂಡು ನರಳುತ್ತಾವಿನ್ನಾ
ಇಷ್ಟೆಲ್ಲ ಆಂದರ ಜನ ನೋಡ್ಯದ ಸಂಪುರಣಾ| ಸಾಲ ಮಾಡಿ ಹೋಗ್ಯಾರೋ ಸಾವಿರಾರು ಜನಾ||

ದೊಡ್ಡ ಸವುಕಾರ ಬರುತಾನ ಅವರ ಮನಿಯಾತನಾ|ದಿಕ್ಕುತಪ್ಪಿದಂಗ ಬಡಿದು ನಿಂತ ಸುಮ್ಮನಾ
ನಡುಮನಿಯಲ್ಲಿ ತುಪ್ಪದ ದೀಪ ಇಟ್ಟು ಹೋಗೋಣಾ| ಆಂದರ ಜನ ಆದ ಇಂತ ಮೋಸತನಾ||

ಕಂತ್ರಿ ಕೌಳೀದು ಸ್ವಲ್ಪ ತಿಳಿಸಿದೆ ಅದರ ವರ್ತಮಾನಾ|ಆಂದರ ಜನಕ ಆಸ್ಪದ ಗೋರ್ಮೆಂಟ್ ಕೊಡಲಿಲ್ಲಕೂನಾ
ಹೆಸರಾಯ್ತು ಹೆಗ್ಗಣದೊಡ್ಡಿ ಗ್ರಾಮ ವಾಹೀನಾ| ರಾಜಭಕ್ಷರು ನೆಲಸಿದಾ ಸತ್ಯಳ್ಳ ಶರುಣಾ ||
ಅವನ ಕರುಣಾ ನಮ್ಮ ಮ್ಯಾಲ ಅದ ಸಂಪುರುಣಾ| ಹನುಂತರಾಯ ಬರೆದ ಕವನ ಮುತ್ತು ನವರತುನಾ||

ಈ ರಿವಾಯ್ತು ಹೈದರಾಬಾದ ಕರ್ನಾಟಕ ಭಾಗದ ಕೃಷಿ ಬಿಕ್ಕಟ್ಟುಗಳನ್ನು ಹೇಳುತ್ತಿದೆ. ‘ಅಳಿಯದು ಬಂತು ಇದ್ದಂತ ಒಕ್ಕಲತನಾ..’ ಎನ್ನುವ ಆತಂಕ ಈ ರಿವಾಯ್ತುಕಾರನದು. ಇಲ್ಲಿ ದುಡಿಯದೆ ಹಣ ಗಳಿಸುವ ಜನರ ಮನಸ್ಥಿತಿಯೇ ಇದಕ್ಕೆ ಕಾರಣ ಎನ್ನುವುದನ್ನೂ ಈ ಹಾಡು ಹೇಳುತ್ತಿದೆ. ಲೀಜಿಗೆ ಭೂಮಿ ಕೊಟ್ಟಾದ ಮನೆಯಲ್ಲಿನ ಜಾನುವಾರಿಗೆ ಮೇವು ಇಲ್ಲದ ವಾತಾವರಣ ಸೃಷ್ಟಿಯಾಗಿದ್ದನ್ನು ಗಮನಿಸಲಾಗಿದೆ. ಅಂದರೆ ಹೊಲ ಕೇವಲ ಮನುಷ್ಯರ ಅಗತ್ಯವನ್ನು ಮಾತ್ರ ತೀರಿಸಲ್ಲ ಬದಲಾಗಿ ಜಾನುವಾರುಗಳ ಅಗತ್ಯವನ್ನೂ ಪೂರೈಸುತ್ತಿತ್ತು ಎನ್ನುವುದು ಇದರಿಂದ ತಿಳಿಯುತ್ತದೆ. ಅಂತೆಯೇ ಭೂಮಿಯಲ್ಲಿ ಹಣದಾಸೆಗೆ ಕೇವಲ ವಾಣಿಜ್ಯ ಬೆಳೆ ಬೆಳೆಯುವ ಬದಲಾದ ಮನಸ್ಥಿತಿಯನ್ನು ಕಾಲದ ಬದಲಾವಣೆ ಎಂಬಂತೆ ಚಿತ್ರಿಸಲಾಗಿದೆ.
ಇಲ್ಲಿ ಬಿಳಿದ್ವಾಮಿ ಎನ್ನುವ ಕೀಟ ಬಾಧೆಯಿಂದಲೂ ನೀರಿನ ಕೊರತೆಯಿಂದಲೂ ಬೆಳೆ ನಾಶವಾಯಿತು ಎನ್ನುವ ವಿವರ ಇದೆ. ಈ ಎಲ್ಲಾ ವಿವರಗಳು ಹೈಕ ಭಾಗದ ಕೃಷಿ ಸ್ಥಿತ್ಯಂತರವನ್ನು ಹೇಳುತ್ತಿದೆ. ಮುಂದುವರೆದು ಹೇಳುವುದಾದರೆ ಹೀಗೆ ಭೂಮಿಯನ್ನು ಲೀಜು ಕೊಟ್ಟ ರೈತರು ನಿರಾಳವಾಗುವ ಕಾರಣಕ್ಕೆ ಈ ಭಾಗದಲ್ಲಿ ವಲಸೆ ಹೋಗುವವರ ಸಂಖ್ಯೆಯೂ ಹೆಚ್ಚಿರಬಹುದು. ಇದನ್ನು ಇನ್ನಷ್ಟು ಪರಿಶೀಲಿಸಬೇಕಿದೆ.

ಕಾಮೆಂಟ್‌ಗಳಿಲ್ಲ: