ಬರಗೂರು ರಾಮಚಂದ್ರಪ್ಪ ಸಂದರ್ಶನ
ಜಾಗತೀಕರಣದಿಂದ ಕನ್ನಡಕ್ಕೆ ಕುತ್ತು ಬರುತ್ತಿದೆ ಎನ್ನುವ ಆರೋಪದ ಮಧ್ಯೆಯೇ ಅದನ್ನೇ ಏಣಿಯಾಗಿ ಬಳಸಿಕೊಂಡು, ಅದರ ಕಂಪನ್ನು ಜಗತ್ತಿನಾದ್ಯಂತ ವಿಸ್ತರಿಸಲು ಅವಕಾಶವಿರುವ ದಿನಗಳಿವು. ಕನ್ನಡದ ಪರಿಸ್ಥಿತಿ ನಿರಾಶಾದಾಯಕವಾಗಿದೆ ಎಂಬ ನಲ್ಲೇ ಆಶಾದಾಯಕವಾದ ಕಿರಣಗಳು ಗೋಚರಿಸುತ್ತಿರುವ ಸಂದರ್ಭವಿದು. ಆದರೆ, ಅವಕಾಶಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಕನ್ನಡದ ಭವಿತವ್ಯ ನಿರ್ಧಾರವಾಗಬಹುದು. ಈಗಿನಂತೆಯೇ, ಕನ್ನಡಕ್ಕೆ ಅನಾದಿಕಾಲದಿಂದಲೂ ಅನ್ಯಭಾಷೆಗಳ ಸವಾಲು ಮತ್ತು ಆತಂಕ ಇದ್ದೇ ಇತ್ತು. ಆದರೆ, ಕನ್ನಡಕ್ಕೆ ಸಾವಿಲ್ಲ ಎಂಬ ಅಭಿಪ್ರಾಯವನ್ನು ನಾಡಿನ ಹಿರಿಯ ಚಿಂತಕ ಬರಗೂರು ರಾಮಚಂದ್ರಪ್ಪ ಅವರು ವ್ಯಕ್ತಪಡಿಸಿದ್ದಾರೆ.
-----
-----
ಸಂದರ್ಶನ: ಬಿ ಎಸ್ ಜಯಪ್ರಕಾಶ ನಾರಾಯಣ
* ಸರ್, ಒಂದೆಡೆ ಕನ್ನಡದ ಪರಿಸ್ಥಿತಿ ಆಶಾದಾಯಕವಾಗಿದೆ ಅನ್ನೋ ಮಾತುಗಳು ಕೇಳಿಬರ್ತಿವೆ. ಇನ್ನೊಂದು ಕಡೆಯಿಂದ ಕನ್ನಡ ದಯನೀಯ ಸ್ಥಿತಿಯಲ್ಲಿದೆ ಅನ್ನೋ ವಾದ ಕೇಳಿಸುತ್ತೆ. ನಿಜಕ್ಕೂ ಪರಿಸ್ಥಿತಿ ಹೇಗಿದೆ?
-ನಿಜ, ಇವೆರಡೂ ಪ್ರತಿಪಾದನೆಗಳ ನಡುವೆ ಇರುವ ಸತ್ಯವನ್ನು ನಾವು ಅರಿತುಕೊಳ್ಳಬೇಕು. ನಮ್ಮದು ಬಹುಭಾಷಿಕ ಮತ್ತು ಬಹುಸಂಸ್ಕೃತಿಯ ದೇಶ. ಇದರ ಜತೆಗೆ ವಸಾಹತುಶಾಹಿ ಆಳ್ವಿಕೆ ಬೇರೆ ನಮ್ಮಲ್ಲಿತ್ತು. ಇಂಥ ಹಿನ್ನೆಲೆ ಇದ್ದಾಗ ಸ್ಥಳೀಯ ಭಾಷೆಗಳಿಗೆ ಆತಂಕ ಇದ್ದೇಇರುತ್ತದೆ. ಇದು ಕೇವಲ ನಮ್ಮ ಕನ್ನಡವೊಂದಕ್ಕೇ ಎದುರಾಗಿರುವ ಪರಿಸ್ಥಿತಿಯಲ್ಲ. ಕನ್ನಡ ಎದುರಿಸುತ್ತಿರುವ ಆತಂಕಗಳನ್ನೇ ನಮ್ಮ ದೇಶದ ಎಲ್ಲ ಭಾಷೆಗಳೂ ಎದುರಿಸುತ್ತಿವೆ. ಆದರೆ ಇದರ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಇರಬಹುದಷ್ಟೆ. ಇದೇನೇ ಇದ್ದರೂ ಇವಕ್ಕೆಲ್ಲ ನಮ್ಮ ಭಾಷೆಗಳನ್ನು ನಾಶ ಮಾಡುವ ಶಕ್ತಿ ಇಲ್ಲ. ಏಕೆಂದರೆ, ನಮ್ಮಲ್ಲಿ ಲಿಪಿ ಇಲ್ಲದ ಎಷ್ಟೋ ಭಾಷೆಗಳು ನಾಮಾವಶೇಷವಾಗಿವೆ. ಆದರೆ ಕನ್ನಡ ಸೇರಿದಂತೆ ಲಿಪಿ ಇರುವ ಭಾಷೆಗಳೆಲ್ಲ ಕಾಲಕಾಲಕ್ಕೆ ಎದುರಾದ ಆತಂಕಗಳನ್ನೆಲ್ಲ ಜೀರ್ಣಿಸಿಕೊಂಡು, ಅಪ್‌ಡೇಟ್ ಆಗಿವೆ ಅನ್ನೋದನ್ನು ನಾವು ಮರೆಯಬಾರದು.
* ಕನ್ನಡ ಭಾಷೆ ತನಗೆದುರಾದ ಆತಂಕಗಳನ್ನೆಲ್ಲ ಗೆದ್ದಿದೆ ಅಂದರೆ ಅದು ಬರೀ ಸಮಾಧಾನದ ಮಾತಾಗಬಹುದೇನೋ?
-ಇಲ್ಲ. ನಮ್ಮ ದೇಸಿತನವನ್ನು ಕಂಡುಕೊಳ್ಳುವ ಹುಡುಕಾಟ ಪಂಪನಿಂದಲೇ ಶುರುವಾಗಿದ್ದು. ಅಂದರೆ, ಕಳೆದ ಸಾವಿರ ವರ್ಷಗಳಿಂದಲೂ ಇದು ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆ ನಾನು ನಮ್ಮ ಪರಂಪರೆಯಲ್ಲಿ ಮೂವರನ್ನು ಮುಖ್ಯ ಉದಾಹರಣೆಯನ್ನಾಗಿ ಕೊಡ್ತೀನಿ. ಅವರೆಂದರೆ ಧರ್ಮಸೇನ, ಆಂಡಯ್ಯ ಮತ್ತು ಮುದ್ದಣ. ಈ ಪೈಕಿ ಮುದ್ದಣ ಸಂಸ್ಕೃತದಿಂದ ಸ್ವೀಕರಿಸುವುದು ಬೇಡವೇ ಬೇಡ ಎನ್ನಲಿಲ್ಲ. ಬದಲಿಗೆ, ಅದು ಕನ್ನಡ ಜಾಯಮಾನಕ್ಕೆ ತಕ್ಕಂತಿರಲಿ ಎಂದ. ಇದೇ ಕನ್ನಡದ ಸರಿಯಾದ ವಿವೇಕ ಎನ್ನುವುದು ನನ್ನ ಅಭಿಪ್ರಾಯ. ಹಿಂದೆ ಒಂದು ಕಾಲದಲ್ಲಿ ನಮಗೆ ಸಂಸ್ಕೃತದಿಂದ ಆತಂಕವಿತ್ತು; ಆಮೇಲೆ ಹಿಂದಿ ಅಲೆ ಎದುರಾಯಿತು; ಈಗ ಹಿಂದಿ ಮತ್ತು ಇಂಗ್ಲಿಷ್ ಎರಡರ ಆರ್ಭಟವೂ ಇದೆ. ಕನ್ನಡಕ್ಕೆ ಆಗಿನಂತೆ ಈಗಲೂ ಸಮಸ್ಯೆ ಮತ್ತು ಸವಾಲುಗಳಿವೆ. ಆದರೆ ಕನ್ನಡಕ್ಕೆ ಸಾವಿಲ್ಲ.
* ಸಾಮಾನ್ಯವಾಗಿ ಕನ್ನಡದ ಬಗ್ಗೆ ಮಾತನಾಡುವಾಗ ನಿರಾಶಾವಾದವೇ ಜಾಸ್ತಿಯಾಗಿದೆ ಅನಿಸುತ್ತೆ. ಇದರಿಂದ ಹೊರಬರಬೇಕು ಅನಿಸುವುದಿಲ್ಲವೇ?
-ಹೌದು, ಕನ್ನಡದ ಬಗ್ಗೆ ಮಾತನಾಡುವವರಲ್ಲಿ ಇದೊಂದು ಸಮಸ್ಯೆ ಇದೆ. ಇದರಿಂದ ನಾವು ಹೊರಬಂದು ವಸ್ತುಸ್ಥಿತಿಯನ್ನು ಜನರಿಗೆ ತಿಳಿಸಬೇಕು. ಏಕೆಂದರೆ, ಎಷ್ಟೋ ಕ್ಷೇತ್ರಗಳಲ್ಲಿ ಉಳಿದ ಭಾಷೆಗಳಿಗಿಂತ ಕನ್ನಡದ ಪರಿಸ್ಥಿತಿ ಉತ್ತಮವಾಗಿದೆ. ಉದಾಹರಣೆಗೆ ಸಚಿವಾಲಯ ಮಟ್ಟದಲ್ಲಿ ಕನ್ನಡದ ಅನುಷ್ಠಾನವನ್ನೇ ತೆಗೆದುಕೊಳ್ಳಿ, ಇದರಲ್ಲಿ ತಮಿಳುನಾಡಿಗಿಂತ ನಮ್ಮಲ್ಲೇ ಹೆಚ್ಚು ಕೆಲಸವಾಗಿದೆ. ಅಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರದಂತೆ 'ತಮಿಳು ಅಭಿವೃದ್ಧಿ ವಿಭಾಗ'ವನ್ನು ತೆಗೆದಿದ್ದಾರೆ. ಎಲ್ಲಕ್ಕೂ ತಮಿಳನ್ನು ಆದರ್ಶವಾಗಿ ತೋರಿಸುವ ಉತ್ಸಾಹಿಗಳು ಇಂಥದನ್ನೆಲ್ಲ ಗಮನಿಸಬೇಕು.
ಇಷ್ಟೇ ಅಲ್ಲ, ತಮ್ಮ ಬೋರ್ಡ್ ಸ್ಕೂಲ್‌ಗಳಲ್ಲಿ ಮೊದಲು ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಲು ಶುರು ಮಾಡಿದ್ದೇ ತಮಿಳುನಾಡು. ಆಮೇಲೆ ಮಹಾರಾಷ್ಟ್ರ ಇದನ್ನೇ ಅನುಸರಿಸಿತು. ಕರ್ನಾಟಕದಲ್ಲಿ ಇದು ಆರಂಭವಾಗಿದ್ದು ಆಮೇಲೆ. ಇಡೀ ಭಾರತದ ಎಲ್ಲ ರಾಜ್ಯಗಳಲ್ಲೂ ಶಿಕ್ಷಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಒಂದೇ ತರಹ ಇವೆ ಎನ್ನುವುದನ್ನು ನಾವು ಮೊದಲು ಗಮನಿಸಬೇಕು.
*ನಿಮ್ಮ ಮಾತು ನಿಜ, ಹೌದು. ಆದರೂ ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿರುವಂತೆ ಭಾಷೆಯ ಅಸ್ತಿತ್ವ ನಮ್ಮಲ್ಲಿ ತೀವ್ರವಾಗಿಲ್ಲವಲ್ಲ?
-ಇದಕ್ಕೊಂದು ಕಾರಣವಿದೆ. ಅದೇನೆಂದರೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ತೆಲಂಗಾಣ ಮುಂತಾದ ಕಡೆ ನಡೆದ ಕಾರ್ಮಿಕ, ಸಾಮಾಜಿಕ, ರೈತ, ರಾಜಕೀಯ ಇತ್ಯಾದಿ ಚಳವಳಿಗಳಲ್ಲೇ ಭಾಷೆಯನ್ನೂ ಸೇರಿಸಲಾಗಿತ್ತು. ಅಲ್ಲೆಲ್ಲ ಈ ಉದ್ದೇಶಗಳೇ ಬೇರೆ, ಭಾಷೆಯೇ ಬೇರೆ ಎನ್ನುವ ವರ್ಗೀಕರಣಕ್ಕೆ ಆಸ್ಪದವೇ ಇರಲಿಲ್ಲ. ಅಂದರೆ ಅಲ್ಲೆಲ್ಲ ಭಾಷೆಯನ್ನೂ ಒಳಗು ಮಾಡಿಕೊಳ್ಳುವ(ಇನ್‌ಕ್ಲೂಸೀವ್) ದೃಷ್ಟಿಕೋನವಿತ್ತು. ಆದರೆ ನಮ್ಮಲ್ಲಿ ಇವೆಲ್ಲ ಚಳವಳಿಗಳೂ ಬೇರೆಬೇರೆಯಾಗಿ ನಡೆದು ಇವಕ್ಕೂ ಭಾಷೆಗೂ ಯಾವ ನಂಟೂ ಇಲ್ಲ ಎನ್ನುವ ಗ್ರಹಿಕೆ ಮೊದಲಿನಿಂದಲೂ ಇದೆ. ಇದರ ಜತೆಗೆ ನಮ್ಮಲ್ಲಿ ಚಳವಳಿಗಳು ಹುಟ್ಟಿಕೊಂಡಿದ್ದೇ ತೀರ ತಡವಾಗಿ. ನಾವು ಸಾಮಾನ್ಯರಿಗಾಗಿ ಮಿಡಿಯುತ್ತೇವೆ ಎಂದ ಮೇಲೆ ಆ ಸಾಮಾನ್ಯರು ಬಳಸುವ ಭಾಷೆಯನ್ನು ಮರೆಯಬಾರದು. ಆದರೆ ಹೀಗೆ ಮರೆತಿದ್ದೇ ನಮ್ಮ ಒಂದು ಸಮಸ್ಯೆಯಾಗಿದೆ. ಅಂದರೆ ನಾವು ಕನ್ನಡವನ್ನೂ ಕನ್ನಡಿಗರ ವಿಚಾರಗಳನ್ನೂ ಪ್ರತ್ಯೇಕಗೊಳಿಸಲೇಬಾರದು.
* ಸರ್, ನೀವು ನಿಮ್ಮ ಮಾತಿನ ನಡುವೆ ಕನ್ನಡ ಆಧುನಿಕ(ಅಪ್‌ಡೇಟ್) ಆಗಬೇಕು ಅಂದಿರಿ. ಆ ನಿಟ್ಟಿನಲ್ಲಿ ನಿಮ್ಮ ಹೊಳಹುಗಳೇನು ಹೇಳಿ...
-ಈಗ ನೋಡಿ, ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಇಂಗ್ಲಿಷನ್ನು ನಾನಾ ಆಯಾಮಗಳಲ್ಲಿ ಬಳಸಲಾಗುತ್ತಿದೆ. ಇದು ಕನ್ನಡದಲ್ಲೂ ಸಾಧ್ಯವಾಗಬೇಕು. ಇದರ ಜತೆಗೆ ಆಡಳಿತವೂ ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಕನ್ನಡವೇ ಇರಬೇಕು. ನಮ್ಮ ಲಿಪಿ ತಂತ್ರಾಂಶಗಳು ಕೂಡ ಹೊಸಹೊಸ ಆವೃತ್ತಿಗಳಲ್ಲಿ ಬರಬೇಕು. ಅಂದರೆ, ನಾವು ತಂತ್ರಜ್ಞಾನವನ್ನು ಜನೋಪಯೋಗಿಯಾಗಿ ಬಳಸಿಕೊಳ್ಳಬೇಕು. ಈ ಮೂಲಕ ಕನ್ನಡವನ್ನು ವಿಕಸನಶೀಲಗೊಳಿಸಬೇಕು. ಹಿಂದೆ ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ 'ನುಡಿ' ಲಿಪಿ ತಂತ್ರಾಂಶ ಬಂತು. ಆಗ ಆಡಳಿತದಲ್ಲೂ ಕನ್ನಡ ಬಳಸುವಂಥ ಒಂದು ಸಾಫ್ಟ್‌ವೇರ್ ಸಿದ್ಧಪಡಿಸಲು ಮುಂದಾಗಿ, ಅದನ್ನು ಶೇ.೭೦ರಷ್ಟು ಮುಗಿಸಲಾಗಿತ್ತು. ಆದರೆ ಅಷ್ಟರಲ್ಲಿ ನನ್ನ ಅವಧಿ ಮುಗಿಯಿತು. ಅದು ಅಲ್ಲಿಗೇ ನಿಂತಿತು. ನಾವು ತಂತ್ರಜ್ಞಾನವನ್ನು ಸಂಪೂರ್ಣ ಹೊರಗಿಟ್ಟು, ಭಾಷೆಯನ್ನು ಬೆಳೆಸುತ್ತೇವೆ ಎನ್ನುವುದು ಸರಿಯಲ್ಲ. ಕಾಲಕಾಲಕ್ಕೆ ಆಧುನಿಕ(ಅಪ್‌ಡೇಟ್) ಆಗುವುದು ಅಂದರೆ ಇದೇ. ಸ್ಪೆಲ್ ಚೆಕ್, ವಾಯ್ಸ್ ಸಿಂಥಸೈಸರ್, ಯೂನಿಕೋಡ್ ಫಾಂಟ್‌ಗಳು (ಈಗ ಒಂದೇ ಒಂದಿದೆ), ವಿನ್ಯಾಸದ ಸಲಕರಣೆಗಳು, ಕನ್ನಡ ಪುಸ್ತಕಗಳ ಡಿಜಿಟಲೀಕರಣ ಇವೆಲ್ಲವೂ ಕನ್ನಡದಲ್ಲಿ ಸಿಗಬೇಕು.
* ಕನ್ನಡದ ಕೆಲಸವೆಂದರೆ ನಮ್ಮ ವ್ಯವಸ್ಥೆ ಒಂದು ಸಮಿತಿ ರಚಿಸಿಯೋ, ವರದಿ ಕೊಡಲು ಹೇಳಿಯೋ ನುಣುಚಿಕೊಳ್ಳುವಂತೆ ಕಾಣಿಸುತ್ತಿದೆ. ನೀವೇನು ಹೇಳ್ತೀರಿ?
-ಇದು ಅರ್ಧಸತ್ಯ. ಸರಕಾರಗಳು ತಮ್ಮ ಕೆಲಸವನ್ನು ಮುಂದೂಡುವ ಸಲುವಾಗಿ ಸಮಿತಿ/ವರದಿಗಳ ಮೊರೆ ಹೋಗುವುದು ಸ್ವಲ್ಪ ಮಟ್ಟಿಗೆ ನಿಜ. ಆದರೆ ಎಲ್ಲ ವರದಿಗಳೂ ಧೂಳು ಕುಡಿಯುತ್ತಿವೆ ಎನ್ನುವುದು ಒಂದು ತಪ್ಪು ಕಲ್ಪನೆ. ಉದಾಹರಣೆಗೆ, ತುಂಬ ಆದರ್ಶಪ್ರಾಯವಾದ ವರದಿಯೆಂದೇ ನಾನು ಭಾವಿಸಿರುವ ಸರೋಜಿನಿ ಮಹಿಷಿ ವರದಿಯನ್ನೇ ನೋಡೋಣ. ಅದರಲ್ಲಿದ್ದ ಬಹುತೇಕ ಶಿಫಾರಸುಗಳನ್ನು ಹೆಚ್ಚೂಕಮ್ಮಿ ಅನುಷ್ಠಾನ ಮಾಡಲಾಗಿದೆ. ಆದರೆ ಈ ಬಗ್ಗೆ ನಿರಂತರ ನಿಗಾ ಇರಬೇಕು. ಆದರೆ ಮಹಿಷಿ ವರದಿಯಲ್ಲಿ ೮-೧೦ ಶಿಫಾರಸುಗಳ ಬಗ್ಗೆ ರಾಜ್ಯ ಸರಕಾರ ಏನನ್ನೂ ಮಾಡಲು ಸಾಧ್ಯವಿಲ್ಲ. ಅವು ಕೇಂದ್ರಕ್ಕೆ ಸಂಬಂಧಿಸಿದಂತಹವು. ಆದರೆ ಇವತ್ತು ವರದಿಗಳೇ ಅಪ್ರಸ್ತುತವಾಗುತ್ತಿವೆ. ಏಕೆಂದರೆ ಇದು ಹೊಸ ಆರ್ಥಿಕ ನೀತಿಯ ಕಾಲ. ಆದರೆ ನಮ್ಮ ಭಾಷೆಗಳ ವಿಷಯದಲ್ಲಿ ಎಲ್ಲ ಸರಕಾರಗಳೂ ನಿಧಾನದ್ರೋಹ ಮಾಡುತ್ತಿವೆ ಅನ್ನೋದು ಸರಿ.
* ಈಗ ಕನ್ನಡದಂಥ ಭಾಷೆಗಳು ಶಿಕ್ಷಣ ಮಾಧ್ಯಮದ ಭಾಷೆ ಆಗಬೇಕಾದರೆ ರಾಷ್ಟ್ರೀಕರಣವೇ ಸರಿ ಅನ್ನುವ ಒತ್ತಾಯ ಕೇಳಿಬರ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಒಂದರಿಂದ ಐದನೇ ತರಗತಿಯವರೆಗಿನ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡುವುದು ಅತ್ಯುತ್ತಮ ಪರಿಹಾರ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಇದರ ಜತೆಗೆ ನಮ್ಮಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಇಡೀ ದೇಶದಲ್ಲಿ ಏಕರೂಪತೆ ತಂದು, ಉನ್ನತ ಶಿಕ್ಷಣದಲ್ಲಿ ಬಹುರೂಪತೆಯನ್ನು ರೂಢಿಸಬೇಕು. ಏಕೆಂದರೆ, ಈಗ ತರಹೇವಾರಿ ಇರುವ ಪ್ರಾಥಮಿಕ ಶಿಕ್ಷಣವು ಸಮಾಜವನ್ನು ಒಡೆಯುತ್ತಿದೆ. ಆದರೆ ರಾಷ್ಟ್ರೀಕರಣ ಸದ್ಯಕ್ಕೆ ಸಾಧ್ಯವಿಲ್ಲ ಎನಿಸುತ್ತದೆ. ಏಕೆಂದರೆ, ಇಡೀ ದೇಶ ಖಾಸಗೀಕರಣದ ಉತ್ಸಾಹದಲ್ಲಿ ಮುಳುಗಿರುವ ಕಾಲವಿದು. ಇಲ್ಲಿ ಸರಕಾರಗಳು ಇಂಥ ವಿಷಯಗಳನ್ನೇ ಆಲೋಚಿಸುವುದಿಲ್ಲ.
* ಇದು ಸಾಧ್ಯವಿಲ್ಲವೆಂದಾದರೆ ಸಂವಿಧಾನಕ್ಕಾದರೂ ತಿದ್ದುಪಡಿ ತರಬಹುದಲ್ಲ?
-ಹೌದು, ಇದೊಂದೇ ಈಗ ನಮ್ಮ ಮುಂದಿರುವ ಆಯ್ಕೆ. ಒಂದರಿಂದ ಐದನೇ ತರಗತಿಯವರೆಗೂ ಆಯಾ ರಾಜ್ಯಗಳ ಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು ಎಂದು ಕೇಂದ್ರ ಸರಕಾರದ ಮೇಲೆ ರಚನಾತ್ಮಕ ಒತ್ತಡ ಹೇರಬೇಕು. ಇದಕ್ಕೆ ಮುಖ್ಯವಾಗಿ ರಾಜಕಾರಣಿಗಳನ್ನು (ಸಂಸದರನ್ನು) ಸಂಘಟಿಸಬೇಕು. ಅವರಿಗೆ ಈ ಅಗತ್ಯವನ್ನು ಮೊದಲು ಮನಗಾಣಿಸಿಕೊಡಬೇಕು. ಇಂಥ ಕೆಲಸವನ್ನು ಯಾರೋ ಒಬ್ಬರು ವೈಯಕ್ತಿಕವಾಗಿ ಮಾಡಿದರೆ ಅದರ ಪರಿಣಾಮ ಜೋರಾಗಿರುವುದಿಲ್ಲ. ಹೀಗಾಗಿ ಇಂಥದನ್ನೆಲ್ಲ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕು. ಬಳಿಕ ಇವನ್ನು ಸೂಕ್ತರಾದವರಿಗೆ ವಹಿಸಿ, ತೀವ್ರ ನಿಗಾ ಇಡಬೇಕು; ಉಳಿದ ರಾಜ್ಯಗಳೊಡನೆ ಈ ಸಂಬಂಧ ವ್ಯವಹರಿಸಿ, ಒಂದು ಅಭಿಪ್ರಾಯ ರೂಪಿಸಬೇಕು. ಹೀಗೆ ಮಾಡಿದರೆ ಮುಂದಿನ ಒಂದು ವರ್ಷದಲ್ಲಿ ದೇಶಭಾಷೆಗಳ ಪರವಾಗಿ ಸಂವಿಧಾನ ತಿದ್ದುಪಡಿ ಸಾಧ್ಯ ಎನ್ನುವುದರಲ್ಲಿ ಅನುಮಾನವಿಲ್ಲ.
-----
* 'ನಾವು ಕೇವಲ ಕನ್ನಡವೆಂದರೆ ಸಾಲದು. ಅದನ್ನು ಬದುಕಿನ ಅತ್ಯುತ್ತಮ ಅವಕಾಶಗಳನ್ನು ಸೃಷ್ಟಿಸುವ ಶಕ್ತಿಯಾಗಿ ಬೆಳೆಸಬೇಕು. ಕನ್ನಡದಲ್ಲಿ ಕಲಿತರೆ ಸುಖವಾಗಿರಬಲ್ಲೆ ಎನ್ನುವಂತಹ ರಚನಾತ್ಮಕ ವಾತಾವರಣವನ್ನು ತರಬೇಕು'.
* 'ಹೊರಗಿನಿಂದ ವೃತ್ತಿಶಿಕ್ಷಣಕ್ಕೆ ಬರುವವರು ಕನ್ನಡವನ್ನು ಕಲಿಯುವಂಥ ಒಂದು ಪಠ್ಯ ಇರಬೇಕು. ಇದನ್ನು ನೂರು ಅಂಕಗಳ ಆಂತರಿಕ ಮೌಲ್ಯಮಾಪನದ ಒಂದು ಭಾಗವನ್ನಾಗಿ ಮಾಡಬೇಕು'
* ಕನ್ನಡ ಶಿಕ್ಷಣ ಮಾಧ್ಯಮದ ಪರವಾಗಿ ಸುಪ್ರೀಂ ಕೋರ್ಟೇ ಎರಡು ಸಲ ತೀರ್ಪು ನೀಡಿತ್ತು. ಆದರೆ ೨೦೧೪ರಲ್ಲಿ ಅದೇ ನ್ಯಾಯಾಲಯ ಇದಕ್ಕೆ ವಿರುದ್ಧವಾಗಿ ತೀರ್ಪಿತ್ತಿತು. ಇದು ಹೇಗೆ ಸಾಧ್ಯ?
- ಬರಗೂರು ರಾಮಚಂದ್ರಪ್ಪ
ಸೌಜನ್ಯ : ವಿಕ ೧.೧೧.೨೦೧೫
ಸೌಜನ್ಯ : ವಿಕ ೧.೧೧.೨೦೧೫
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ