ಬುಧವಾರ, ಸೆಪ್ಟೆಂಬರ್ 9, 2015

ಎಂ.ಎಂ.ಕಲ್ಬುರ್ಗಿ ಅವರ ಹತ್ಯೆ ಮತ್ತು ಪ್ರಶಸ್ತಿ ಹಿಂತಿರುಗಿಸುವಿಕೆಯ ಪ್ರಶ್ನೆ

    
-ಕೆ. ಪುಟ್ಟಸ್ವಾಮಿ.  ಸರ್ಕಾರ ಕೊಟ್ಟ ಪ್ರಸಸ್ತಿ, ಬಿರುದು, ಗೌರವ ಇತ್ಯಾದಿಗಳನ್ನು ಪ್ರತಿಭಟನೆಯಾಗಿ ಹಿಂದಿರುಗಿಸುವ ಪರಂಪೆರೆಯೊಂದಿದೆ. ಅದೂ ಕೂಡ ಎರವಲು ಅನುಕರಣೆ. (ಕೊಡುವುದಕ್ಕೆ ಮುನ್ನ ತಿರಸ್ಕರಿಸುವುದು ಬೇರೆ. ಪ್ರಶಸ್ತಿಗಾಗಿಯೇ ಲಾಬಿ ಮಾಡುವ ಜನರೇ ಹೆಚ್ಚಿರುವಾಗ ತಿರಸ್ಕರಿಸುವುದು ಇನ್ನೆಲ್ಲಿ? ಸಾಹಿತ್ಯಕ್ಕಾಗಿ 1964ರಲ್ಲಿ ನೀಡಿದ ನೊಬೆಲ್ ಪ್ರಶಸ್ತಿಯನ್ನು ಚಿಂತಕ ಜಾನ್ ಪಾಲ್ ಸಾರ್ತ್ರೆ ಅವರು 'ಒಂದು ಗೌರವ ರೂಪವಾದರೂ ಸಹ ಲೇಖಕ ಒಂದು ಸಂಸ್ಥೆಯಾಗಿ ಮಾರ್ಪಾಡಾಗಲು ಅವಕಾಶಕೊಡಬಾರದು' ಎಂದು ತಿರಸ್ಕರಿಸಿದರು. 1973ರಲ್ಲಿ ಶಾಂತಿಗಾಗಿ ನೀಡುವ ನೊಬೆಲ್ ಪಾರಿತೋಷಕವನ್ನು ವಿಯಟ್ನಾಮಿನಲ್ಲಿ ಶಾಂತಿ ನೆಲೆಸಲು ಹೆಣಗಿದ ವಿಯೆಟ್ನಾಮಿನ ಕ್ರಾಂತಿಕಾರಿ ಜನರಲ್ ಲಿ ಡಕ್ ಥೊ ಮತ್ತು ಅಮೆರಿಕದ ಸೆಕ್ರೆಟರಿ ಜನರಲ್ ಹೆನ್ರಿ ಕಿಸಿಂಜರ್ ರವರಿಗೆ ಹಂಚಲಾಯಿತು. ಆದರೆ ಶಾಂತಿ ಒಪ್ಪಂದದ ನಂತರವೂ ವಿಯೆಟ್ನಾಮಿನಲ್ಲಿ ಶಾಂತಿ ನೆಲಸಲಿಲ್ಲ ೆಂಬ ಕಾರಣಕ್ಕೆ ಲೇ ಡಕ್ ಥೋ ಪ್ರಶಸ್ತಿ ನಿರಾಕರಿಸಿದರು). 

   ಪ್ರಶಸ್ತಿ ಕೊಟ್ಟ ಒಂದು ಸರ್ಕಾರವು ಜನವಿರೋಧಿ ನೀತಿಗಳನ್ನು ಜಾರಿಮಾಡಿದಾಗ, ಅಸಮಾನತೆಯನ್ನು ವೃದ್ಧಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಿದಾಗ, ಅಮಾನವೀಯ ಕಾರ್ಯದ ಮೂಲಕ ಜನತೆಯನ್ನು ಮಾರಣಹೋಮಮಾಡಿದಾಗ, ಪ್ರಜಾತಂತ್ರದ ಧವನಿಯನ್ನು ಅಡಗಿಸಿದಾಗ ಹಿಂದೆ ಸರ್ಕಾರ ಕೊಟ್ಟ ಪ್ರಶಸ್ತಿಯನ್ನು ಅದರ ನೀತಿಯ ವಿರುದ್ಧ ಪ್ರತಿಭಟನೆಯಾಗಿ ಹಿಂದಿರುಗಿಸಿದರೆ ಅದಕ್ಕೊಂದು ಅರ್ಥ ಮತ್ತು ಸಮರ್ಥನೆ ಇದೆ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಡಾ. ಕೆ. ಶಿವರಾಮ ಕಾರಂತ ಮತ್ತು ಆಪರೇಷನ್ ಬ್ಲೂಸ್ಟಾರ್ ವಿರೋಧಿಸಿ ಖುಶ್ವಂತ್‍ ಸಿಂಗ್ ತಮ್ಮ ಪದ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದು ಇಂತಹ ಕಾರಣಗಳಿಂದ. 

    ಪ್ರೊ. ಕಲ್ಬುರ್ಗಿ ಹತ್ಯೆಯ ಹಿಂದೆ ಮತ್ತು ಮುಂದಿನ ದಿನಗಳಲ್ಲಿ ಸರ್ಕಾರ ಬಹಳ ಜವಾಬ್ಧಾರಿಯಿಂದಲೇ ವರ್ತಿಸಿದೆ. ಸರ್ಕಾರ ಕೊಟ್ಟ ಪೊಲೀಸ್ ರಕ್ಷಣೆಯನ್ನುಪ್ರೊಫೆಸರ್ರವರ ಸೂಚನೆಯಂತೆ ಹಿಂಪಡೆಯಲಾಗಿತ್ತು. ಹತ್ಯೆಯ ನಂತರ ಪ್ರಕರಣವನ್ನು ಸರ್ಕಾರ ಗಂಭೀರವಾಗಿಯೇ ಪರಿಗಣಿಸಿದೆ. ಸರ್ಕಾರದ ಪ್ರಚೋದನೆ ಅಥವಾ ನೀತಿಗಳಿಂದೆನೂ ಹತ್ಯೆ ಸಂಭವಿಸಿಲ್ಲ. ಆದರೂ ಪ್ರೊ. ಚಂಪಾ ಅವರು ಪಂಪ ಪ್ರಶಸ್ತಿಯನ್ನು ಹಿಂದಿರುಗಿಸಿದ ಕಾರಣ ಮೇಲಿನ ಎರಡೂ ಪರಂಪರೆಗಳಿಗೆ ಸೇರುವುದಿಲ್ಲ. ಸರ್ಕಾರ ತನಿಖೆ ಚುರುಕು ಮಾಡಿ ಆಪಾದಿತರನ್ನು ಹಿಡಿಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವ ಹೊತ್ತಿನಲ್ಲಿ ಈ ಹಿಂದಿರುಗಿಸುವ ಕ್ರಿಯೆಯಿಂದ ಯಾವ ಪ್ರಯೋಜನವೂ ಇಲ್ಲ. ಇವರನ್ನು ಅನುಕರಿಸಿ ಅನೇಕ ಯುವ ಸಾಹಿತಿಗಳು ಕ.ಸಾ.ಪ ನೀಡಿದ 'ಅರಳು' ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದಾರೆ. (ಪಟ್ಟಿಯಲ್ಲಿ ಗೆಳೆಯ ಸತೀಶ ಜವರೇಗೌಡ ಕೂಡ ಇದ್ದಾರೆ).ಚಂಪಾರವರಿಗಾದರೋ ಅರವತ್ತು ದಾಟಿದೆ,ಈ ಯುವಕರಿಗೆ ಇಷ್ಟು ಬೇಗ ಅರಳು ಮರಳು ಬಂತೇ?

ಕಾಮೆಂಟ್‌ಗಳಿಲ್ಲ: