ಶನಿವಾರ, ಮೇ 26, 2012

ಬೇಡರ ಸಂಸ್ಕೃತಿಯಲ್ಲಿ ಪಶುಪಾಲನಾ ಕುರುಹುಗಳುಡಾ. ಸಣ್ಣ ಪಾಪಯ್ಯ


ಹೆಸರುಗಳು ಸಂಸ್ಕೃತಿ ಅಧ್ಯಯನದ ಪ್ರಮುಖ ಆಕರಗಳು.  ಹೆಸರುಗಳು ಅಂದ ತಕ್ಷಣ ನಮಗೆ ನೆನಪಾಗುವುದು ವ್ಯಕ್ತಿನಾಮಗಳು ಮತ್ತು ಸ್ಥಳನಾಮಗಳು.  ಕುಲಗಳ ಹೆಸರು(ಕುಲನಾಮ) ಗೋತ್ರ, ಪಂಗಡದ ಹೆಸರುಗಳೂ ಸಹ ಆಯಾ ಸಮುದಾಯದ ಸಾಂಸ್ಕೃತಿಕ, ಚಾರಿತ್ರಿಕ ಮತ್ತು ಭಾಷಿಕ ಅಧ್ಯಯನಕ್ಕೆ ಸಹಕಾರಿಯಾಗಬಲ್ಲವು.  ಹೆಸರು ಅನೇಕ ಸಾಂಸ್ಕೃತಿಕ ಅಂಶಗಳ ಸಂಗಮವಾಗಿರುತ್ತದೆ.  “ಒಂದು ಹೆಸರಿನಲ್ಲಿ ಒಂದು ಜೀವನ ಕ್ರಮದ ಚರಿತ್ರೆಯಿರುತ್ತದೆ ಎಂಬುದನ್ನು ಗಮನಿಸಬೇಕು.  ಅಂದರೆ ನೇರವಾಗಿ ಜೀವನಕ್ರಮದ ಸಂಗತಿಗಳನ್ನು ಹೇಳುವುದಿಲ್ಲವಾದರೂ ಅದರ ಒಟ್ಟಂದವನ್ನು ಪರೋಕ್ಷ ನೆಲೆಯಲ್ಲಿ ತೆರೆದು ತೋರಿಸುವ ಮೂಲಾಧಾರಗಳಾಗಿ ನಾಮಗಳು ಮಹತ್ವದ ಪಾತ್ರವಹಿಸುತ್ತವೆ” (ಡಾ.ಜಾಜಿ ದೇವೇಂದ್ರಪ್ಪ ಆಂಧ್ರ-ಕರ್ನಾಟಕ ಗಡಿಪ್ರದೇಶದ ಸ್ಥಳನಾಮಗಳು. ಪುಟ-೩) ಎಂಬುದನ್ನು ಗಮನಿಸಿದರೆ ನಾಮಗಳು ಸಾಂಸ್ಕೃತಿಕ ಅಧ್ಯನದಲ್ಲಿ ಎಷ್ಟೊಂದು ಮಹತ್ತರವಾದವುಗಳೆಂದು ತಿಳಿಯುತ್ತದೆ.

ಬೇಡರಲ್ಲಿ ಪ್ರಧಾನವಾಗಿ ಎರಡು ಪಂಗಡಗಳಿವೆ.  ಒಂದು ಮ್ಯಾಸಬೇಡರು ಇನ್ನೊಂದು ಊರುಬೇಡರು.  ಈ ನಿಬಂಧದಲ್ಲಿ ಮ್ಯಾಸಬೇಡರ ಕುಲಗಳ ಹೆಸರು, (ಕುಲನಾಮ) ಗೋತ್ರ, ಪಂಗಡದ ಹೆಸರು ಮತ್ತು ವ್ಯಕ್ತಿನಾಮಗಳಲ್ಲಿ ಕಾಣಸಿಗುವ ಪಶುಪಾಲನೆಗೆ ಸಂಬಂಧಿಸಿದ ಸಂಗತಿಗಳನ್ನು ಮಾತ್ರ ವಿಶ್ಲೇಷಿಸುವ ಪ್ರಯತ್ನಮಾಡಲಾಗಿದೆ. 

ಬೇಡರು ಅಥವಾ ಮ್ಯಾಸಬೇಡರು ಎಂದ ತಕ್ಷಣ ನಮ್ಮ ಕಲ್ಪನೆಗೆ ಬರುವುದು ಬೇಟೆ, ಬೇಟೆಯಾಡುವುದು.  ಮ್ಯಾಸಬೇಡರು ಎಂದರೆ ಬೇಟೆಯಾಡುವವರು, ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವವರು ಎಂದು ಸಹಜವಾಗಿಯೇ ವ್ಯಾಖ್ಯಾನಿಸುವರು.  ಮ್ಯಾಸ ಪದ ಮೇಯಿಸು ಎಂಬ ಪದದಿಂದ ನಿಷ್ಪನ್ನವಾಗಿರಬಹುದು.  (ಎಸ್.ಎಸ್.ಅಂಗಡಿ ಕರ್ನಾಟಕ ಬುಡಕಟ್ಟು ಭಾಷೆ, ಪುಟ -೨೪೪) ಎಂಬ ಈ ವಾಕ್ಯದಲ್ಲಿಯೇ ಪಶುಪಾಲನೆಯ ಸೂಚನೆಯಿರುವುದನ್ನು ಗಮನಿಸಬಹುದು.

ಆದಿಮಾನವ ಆಹಾರಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿದ್ದು, ಕಾಲಾಂತರದಲ್ಲಿ ತನ್ನ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡ.  ಈ ವರ್ಗದ ಜನ ಅಂದರೆ ಮ್ಯಾಸಬೇಡರು ಬೇಟೆ ಸಂಸ್ಕೃತಿಯನ್ನು ಇತರೆ ವರ್ಗದ ಜನರಿಗಿಂತ ಸ್ವಲ್ಪ ಹೆಚ್ಚು ಕಾಲ ಮುಂದುವರೆಸಿಕೊಂಡು ಬಂದಿರಬಹುದು. ಅಂದ ಮಾತ್ರಕ್ಕೆ ಬೇಟೆಯಾಡುವುದೇ ಪ್ರಧಾನ ವೃತ್ತಿಯಾಗಿತ್ತು ಎಂದು ಭಾವಿಸಿದರೆ ಸರಿಯಾಗಿ ಅರ್ಥೈಸಿದಂತಾಗಲಾರದು. 

ಬೇಡನಾಯಕರು ಹಿಂದಿನ ಶತಮಾನಗಳಲ್ಲಿ ಕುರಿ ಸಾಕಿದುದಕ್ಕಿಂತ, ವ್ಯವಸಾಯ ಮಾಡಿದ್ದಕ್ಕಿಂತ ಕೇವಲ ಪಶುಪಾಲನೆ ಮಾಡಿದ್ದೇ ಹೆಚ್ಚು ಎಂಬುದು ಈಗಲೂ ಸ್ಪಷ್ಟವಾಗುವ ಸಂಗತಿ.  (ಕೃಷ್ಣಮೂರ್ತಿ ಹನೂರು, ಮ್ಯಾಸಬೇಡರು ಪುಟ-೪೫) ಬೇಡರ ಬೇಟೆ ಸಂಸ್ಕೃತಿ ಬಗೆಗೆ ಶಾಸನ, ಪುರಾಣ ಕಾವ್ಯ ನಾಟಕಗಳಲ್ಲಿ ಅನೇಕ ಆಧಾರಗಳು ಸಿಗುತ್ತವೆಯಾದರೂ ಆ ಸಂಬಂಧದ ಆಚರಣೆಗಳು ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿ ಉಳಿದು ಬಂದಿಲ್ಲ.ಅವು ಕೇವಲ ಆಚರಣಾತ್ಮಕ ನೆಲೆಗಳಲ್ಲಿ ಮಾತ್ರ ಅಭಿವ್ಯಕ್ತಿಗೊಳ್ಳುತ್ತವೆ ಎಂಬುದು ಗಮನಾರ್ಹ ಸಂಗತಿ.  ಈ ದಿಶೆಯಲ್ಲಿ ಬೇಡನಾಯಕರ ಚರಿತ್ರೆಯನ್ನು ಇನ್ನೊಂದು ಮಗ್ಗುಲಿನಿಂದ ನೋಡುವ ಅವಶ್ಯಕತೆಯಿದೆ.  


ಮ್ಯಾಸಬೇಡರ ಮನೆ ಮಾತು ತೆಲುಗು.  ಕರ್ನಾಟಕದ ಕನ್ನಡ ಪರಿಸರದಲ್ಲಿದ್ದರೂ ಮನೆಮಾತಾಗಿ ಈಗಲೂ ತೆಲುಗನ್ನೇ ಬಳಸುತ್ತಿದ್ದಾರೆ.  ಅಲ್ಲದೆ ಇವರ ಕುಲಗಳ ಹೆಸರು/ ಗೋತ್ರ/ ಪಂಗಡದ ಹೆಸರುಗಳೆಲ್ಲವೂ ತೆಲುಗಿನಲ್ಲಿಯೇ ಇವೆ.  ಈ ಅಂಶಗಳು ಈ ಸಮುದಾಯದ ಚಾರಿತ್ರಿಕ ಅಧ್ಯಯನಕ್ಕೆ ಸಹಕಾರಿಯಾಗಬಹುದು.

ಸಾಮಾನ್ಯವಾಗಿ ಯಾವುದೇ ಸಮುದಾಯವು ತನ್ನ ಜೀವನ ಕ್ರಮದ ಅಭಿವ್ಯಕ್ತಿಯ ದ್ಯೋತಕವಾಗಿ ಹೆಸರು, ಕುಲನಾಮ, ಗೋತ್ರದ ಹೆಸರುಗಳನ್ನು ನಿರ್ದೇಶನ ಮಾಡಿಕೊಳ್ಳುವುದುಂಟು.  ಮ್ಯಾಸಬೇಡರ ಮುಖ್ಯ ಕಸುಬು ಪಶುಪಾಲನೆಯಾಗಿದ್ದು, ಈ ಸಂಬಂಧಿಯಾದ ಅನೇಕ ಸಂಗತಿಗಳು ಅವರ ಕುಲಗಳ ಹೆಸರು, ಗೋತ್ರ, ಪಂಗಡ ಮತ್ತು ವ್ಯಕ್ತಿನಾಮಗಳಲ್ಲಿ ಅಡಕವಾಗಿರುದನ್ನು ಕಾಣಬಹುದಾಗಿದೆ.  “ದನಕರುಗಳ ಹೆಸರಲ್ಲಿ ಬೆಡಗು ಹುಟ್ಟಿದಂತೆ ಆಡುಕುರಿಗಳ ಮೇಲೂ ಬೆಡಗುಗಳಿವೆ” (ಕೃಷ್ಣಮೂರ್ತಿ ಹನೂರು, ಮ್ಯಾಸಬೇಡರು ಪುಟ-೬೧) ಎಂಬ ಈ ಮಾತಿನಿಂದ ಪಶುಪಾಲನೆ ಅವರ ಜೀವನದಲ್ಲಿ ಎಷ್ಟೊಂದು ಪ್ರಮುಖವಾಗಿತ್ತು ಹಾಗೂ ಅದು ಹೇಗೆ ಅದರ ಬದುಕಿನ ಮೇಲೆ ನೇರವಾಗಿ ಪರಿಣಾಮಬೀರಿದೆ ಎಂಬುದನ್ನು ತಿಳಿಯಬಹುದಾಗಿದೆ. 

ಕೃಷಿ ಹೇಗೆ ಬಹುಜನರು ಸೇರಿ ಮಾಡುವ ವೃತ್ತಿಯಾಗಿದೆಯೋ ಅದೇ ರೀತಿ ಪಶುಪಾಲನೆಯೂ ಕೂಡ.  ಪಶುಪಾಲನೆ ಎಂದರೆ ಕೇವಲ ದನಗಳ ಪಾಲನೆ ಎಂದು ಭಾವಿಸಬೇಕಾಗಿಲ್ಲ.  ದನಗಳ ಜೊತೆಗೆ, ಕುರಿ, ಮೇಕೆ, ಎಮ್ಮೆಗಳನ್ನು ಸಹ ಸಾಕುತ್ತಿದ್ದರು.  ಹಸುಗಳ ಪಾಲನೆ ಒಬ್ಬರದಾದರೆ, ಎತ್ತುಗಳ ಪಾಲನೆ ಇನ್ನೊಬ್ಬರದು,  ಕರುಗಳ ಪಾಲನೆ ಮತ್ತೊಬ್ಬರದು ಕುರಿಮೇಕೆಗಳ ಪಾಲನೆ ಒಬ್ಬೊಬ್ಬರದಾದರೆ ಅವುಗಳ ಮರಿಗಳ ಪಾಲನೆ ಮತ್ತೊಬ್ಬರದು.  ಹೀಗೆ ಪಶುಪಾಲನೆಗೆ ಸಂಬಂಧಿಸಿದ ಒಂದೊಂದು ಕೆಲಸವನ್ನು ನಿರ್ವಹಿಸಲು ಒಬ್ಬೊಬ್ಬ ವ್ಯಕ್ತಿ ಮೀಸಲಾಗಿರುತ್ತಿದ್ದ,  ಹೀಗೆ ಪ್ರತಿಯೊಬ್ಬ ವ್ಯಕ್ತಿಯೂ ನಿರ್ವಹಿಸುತ್ತಿದ್ದ ವೃತ್ತಿಯೇ ಮುಂದೆ ಆ ಸಂತತಿಯ ಕುಲಗಳ ಹೆಸರಾಗಿ (ಕುಲನಾಮ) ರೂಢಿಗೆ ಬಂದಿರುವುದನ್ನು ಮನಗಾಣಬಹುದು. 

ಉದಾಹರಣೆಗೆ : 
ಎನುಮಲೋರು - (ಎಮ್ಮೆ ಕಾಯುವವರು, ತೆಲುಗಿನಲ್ಲಿ ಎನುಮು ಎಂದರೆ ಎಮ್ಮೆ ಎಂದರ್ಥ)
ಗೊಡ್ಲಾರು ( ಕುರಿಕಾಯುವವರು, ಗೊಡ್ಲು ಎಂದರೆ ಕುರಿಗಳು ಎಂದರ್ಥ)
ಎದ್ಲಾರು ( ಎತ್ತುಕಾಯುವವರು, ಎದ್ದು ಎಂದರೆ ಎತ್ತು ಎಂದರ್ಥ)
ಪಡ್ಲಾರು ( ಆಕಳ ಮಣಕ ಕಾಯುವವರು, ಪಡ್ಡ ಎಂದರೆ ಮಣಕ ಎಂದರ್ಥ)
ಪೈಲಾರು ( ಕರುಪಾಲನೆ ಮಾಡುವವರು,  ಪೈಯ್ಯಿ ಎಂದರೆ ಕರು ಎಂದರ್ಥ)
ಪೋತ್ಲಾರು ( ಹೋತುಗಳ ಪಾಲನೆ ಮಾಡುವವರು, ಪೋತು ಎಂದರೆ ಹೋತು ಎಂದರ್ಥ)
ಮಂದ್ಲಾರು ( ಕುರಿ, ಮೇಕೆ ದನಗಳ ಹಿಂಡನ್ನು ಹೊಲಗದ್ದೆಗಳಲ್ಲಿ ಮಲಗಿಸುವವರು)


ಹೀಗೆ ನೇರವಾಗಿ ವೃತ್ತಿಗಳೇ ಕುಲನಾಮಗಳಾಗಿ ಬಳಕೆಯಾಗಿವೆ.  ಈ ಮೇಲೆ ಸೂಚಿಸಿದ ಕುಲಗಳ ಹೆಸರುಗಳಲ್ಲೂ ಅನೇಕ ಒಳಪಂಗಡಗಳಿವೆ.  ಉದಾಹರಣೆಗೆ ಎದ್ಲಾರು ಎಂದರೆ ಎತ್ತುಗಳನ್ನು ಕಾಯುವವ ಎಂಬುದನ್ನು ಮೇಲೆ ಹೇಳಲಾಗಿದೆ.  ಇಲ್ಲಿ ಎತ್ತುಗಳು ಎಂದರೆ ಸಾಧಾರಣ ಎತ್ತುಗಳಿಗಿಂತ ಧಾರ್ಮಿಕ ಸಂಬಂಧಿಯಾದ ಎತ್ತುಗಳ ಪರಿಪಾಲಕ ಎನ್ನುವ ಅರ್ಥದಲ್ಲಿ ಬಳಕೆಯಾಗುತ್ತಿದೆ.  ಮ್ಯಾಸಬೇಡರಿಗೆ ನಿಜವಾದ ದೈವ ಎಂದರೆ ಎತ್ತುಗಳೇ.  ಇಡೀ ಮ್ಯಾಸಮಂಡಲಕ್ಕೆ ಮೂಲ ದೈವವೆಂದರೆ ಶ್ರೀಶೈಲ ಮುತ್ತೆಗಾರ ಎತ್ತುಗಳು.  ಮ್ಯಾಸಬೇಡರ ಪರಿಭಾಷೆಯಲ್ಲಿಯೇ ಹೇಳುವುದಾದರೆ ? ಮಲ್ಲಯ್ಯದ್ಲು, ಮಲ್ಲಯ ಎತ್ತುಗಳು, ಮುತ್ತೆಗಾರು. 

ಇವರು ಬೇರೆ ಬೇರೆ ಪ್ರದೇಶಗಳಲ್ಲಿ ತಮ್ಮ ಸಾಂಸ್ಕೃತಿಕ ನಾಯಕರ ಹೆಸರುಗಳಲ್ಲಿ ಅಥವಾ ಕುಲದೈವದ ಹೆಸರುಗಳಲ್ಲಿ ರಾಸುಗಳನ್ನು ಬಿಟ್ಟು ಆರಾಧನಾ ಮನೋಭಾವದಿಂದ ಪರಿಪಾಲನೆ ಮಾಡುವ ಪದ್ಧತಿಯಿದೆ.  ಹೀಗೆ ಬೇರೆ ಬೇರೆ ಹೆಸರಿನ ರಾಸುಗಳನ್ನು ಪರಿಪಾಲನೆ ಮಾಡುವ ಒಬ್ಬೊಬ್ಬ ವ್ಯಕ್ತಿ ಅಥವಾ ಒಂದೊಂದು ಗುಂಪಿಗೂ ಅದೇ ಸಾಂಸ್ಕೃತಿಕ ನಾಯಕರ ಅಥವಾ ದೈವದ ಹೆಸರಿನ ರಾಸುಗಳ ಹೆಸರೇ ಅವರ ಕುಲನಾಮಗಳಾಗಿ ಸೇರಿಕೊಂಡಿರುವುದನ್ನು ಗಮನಿಸಬಹುದು.

ಉದಾಹರಣೆ
ದಡ್ಡೆ ಎದ್ಲಾರು ? ದಡ್ಡಿಸೂರ ನಾಯಕನ ಹೆಸರಿನಲ್ಲಿರುವ ರಾಸುಗಳ ಪರಿಪಾಲನೆ ಮಾಡುವವರು
ಗುಡ್ಡಮೆದ್ಲಾರು ? ಗುಡ್ಡದದೈವದ ಹೆಸರಿನಲ್ಲಿರುವ ರಾಸುಗಳ ಪರಿಪಾಲನೆ ಮಾಡುವವರು
ದ್ಯಾವರೆದ್ಲಾರು - ದೇವರ  ಹೆಸರಿನಲ್ಲಿರುವ ರಾಸುಗಳ ಪರಿಪಾಲನೆ ಮಾಡುವವರು
ಮಲ್ಲಯೆದ್ಲಾರು ? ಮಲ್ಲಯ್ಯನ ಹೆಸರಿನಲ್ಲಿರುವ ರಾಸುಗಳ ಪರಿಪಾಲನೆ ಮಾಡುವವರು
ಪಾಪಯೆದ್ಲಾರು- ಪಾಪನಾಯಕ ಹೆಸರಿನಲ್ಲಿರುವ ರಾಸುಗಳ ಪರಿಪಾಲನೆ ಮಾಡುವವರು


ಈ ಮೇಲಿನ ಕುಲನಾಮಗಳಲ್ಲಿ ಉಲ್ಲೇಖವಾಗಿರುವ ಎದ್ಲಾರು ಎಂಬ ಪದದ ಇನ್ನೊಂದು  ವಿಶೇಷವನ್ನೂ ಗಮನಿಸಬೇಕು.  ತೆಲುಗಿನಲ್ಲಿ ಎದ್ದು ಎಂದರೆ ಎತ್ತು ಎಂದರ್ಥ.  ಅಂದರೆ ದೇವರ ಹೆಸರಿನಲ್ಲಿ ಬಿಟ್ಟ ರಾಸುಗಳಲ್ಲಿ ಕೇವಲ ಎತ್ತುಗಳು ಮಾತ್ರ ಇರದೆ, ಹಸುಗಳೂ, ಕರುಗಳೂ ಇರುತ್ತವೆ.  ಹೀಗಿದ್ದಾಗ್ಯೂ ಕೂಡ ಎತ್ತುಗಳು ಎಂದು ಕರೆಯುವುದೇ ಪರಿಪಾಟು.  ಇದಕ್ಕೆ ಇನ್ನೂ ಒಂದು ಕಾರಣವೂ ಇರಬಹುದು.  ಅದೇನೆಂದರೆ ದೈವದ ಹೆಸರಿನಲ್ಲಿ ಬಿಟ್ಟ ರಾಸುಗಳನ್ನು ಆಯಾ ದೈವದ ಪರಿಸೆ, ಜಾತ್ರೆಗಳಲ್ಲಿ ಸಾಮಾನ್ಯವಾಗಿ ಎತ್ತುಗಳನ್ನು ಮಾತ್ರ ಬಳಸುವುದುಂಟು.  ಹಾಗಾಗಿ ಧಾರ್ಮಿಕ ಕಾರ್ಯಗಳಿಗೆ ಎತ್ತುಗಳೇ ಮುಖ್ಯವಾಗಿರುವುದರಿಂದ ಹಾಗೆ ಕರೆಯುವ ರೂಢಿ ಇದ್ದರೂ ಇರಬಹುದು.  ಈ ಎತ್ತುಗಳ ನಾಯಕ ಅಥವಾ ಮುಖಂಡನಿಗೆ ಕಿಲಾರಿ ಎಂದು ಕರೆಯುತ್ತಾರೆ.  ಇದು ವ್ಯಕ್ತಿನಾಮಗಳಲ್ಲಿ ವಿಶೇಷಣವಾಗಿ ಬಳಕೆಯಾಗುತ್ತದೆ.    

ದೇವರ ಹೆಸರಿನಲ್ಲಿ ರಾಸುಗಳನ್ನು ಬಿಡುವಂತೆ ಕುರಿಗಳನ್ನು ಸಹ ಬಿಡುವ ಪದ್ಧತಿ ಇವರಲ್ಲಿದೆ.  ಹೀಗೆ ದೈವದ ಹೆಸರಿನಲ್ಲಿ ಬಿಟ್ಟ ಕುರಿಗಳನ್ನು ಪರಿಪಾಲನೆ ಮಾಡುವವರಿಗೆ ದೇವರ ಗೊಡ್ಲಾರು - ದೇವರ ಕುರಿಯೋರು (ಗೊರೆ ಎಂದರೆ ಕುರಿ, ಗೊಡ್ಲು ಎಂದರೆ ಕುರಿಗಳು) ಎಂಬ ಕುಲನಾಮದಿಂದ ಕರೆಯುವ ರೂಢಿ ಇದೆ.  ದೇವರ ಹೆಸರಿನ ರಾಸುಗಳನ್ನು ಪರಿಪಾಲನೆ ಮಾಡುವ ಸಂಪ್ರದಾಯ ಈಗಲೂ ಇದ್ದು,  ಕುರಿಗಳನ್ನು ಪರಿಪಾಲನೆ ಮಾಡುವ ಪದ್ಧತಿ ಕೈಬಿಟ್ಟು ಹೋದಂತೆ ತೋರುತ್ತದೆ.  ಆದರೆ ಹಿಂದೆ ಈ ಪದ್ಧತಿ ಇತ್ತು ಎಂಬುದಕ್ಕೆ ಈ ಕುಲನಾಮವೇ ಆಧಾರವಾಗಿದೆ. 


ತೆಲುಗಿನಲ್ಲಿ “ಮ್ಯಾಕ” ಎಂದರೆ ಮೇಕೆ ಎಂದರ್ಥ. ಮೇಕೆ ಕಾಯುವವರಿಗೆ “ಮ್ಯಾಕಲಾರು” ಎಂದು ಕರೆಯುವರು, ಮೇಕೆಗಳನ್ನು ಮಾತ್ರ ಪೋಷಣೆ ಮಾಡುವಂತೆ, ಹೋತುಗಳನ್ನಷ್ಟೆ ಸಾಕುವ ಅಥವಾ ಪರಿಪಾಲನೆ ಮಾಡುವ ಪದ್ಧತಿಯಿದ್ದು, ಅವರಿಗೆ ಪೋತ್ಲಾರು ಎಂದೇ ಕರೆಯುವರು.  ಇದೇ ಅವರ ಕುಲನಾಮವೂ ಆಗಿದೆ.  ಸಾಮಾನ್ಯವಾಗಿ ಈ ಮೇಕೆ ಅಥವಾ ಹೋತುಗಳು ಬಿಳಿ, ಕೆಂಪು ಮತ್ತು ಕಪ್ಪು ಬಣ್ಣದ್ದಾಗಿರುತ್ತವೆ.  ಹೋತುಗಳನ್ನು ಮಾತ್ರ ಸಾಕುವವರು ಹವ್ಯಾಸಕ್ಕಾಗಿಯೋ, ಇತರರ ಹೋತುಗಳಿಂದ ಪ್ರತ್ಯೇಕತೆಯನ್ನು ಗುರುತಿಸಿಕೊಳ್ಳುವುದಕ್ಕಾಗಿಯೋ ಒಂದೇ ಬಣ್ಣದ ಹೋತುಗಳನ್ನು ಸಾಕುವರು.  ಹೀಗೆ ಒಂದೊಂದು ಪ್ರತ್ಯೇಕ ಬಣ್ಣದ ಹೋತುಗಳನ್ನು ಪರಿಪಾಲನೆ ಮಾಡುವವರಿಗೆ ಅದೇ ಹೋತುಗಳ ಬಣ್ಣದ ಕುಲನಾಮದಿಂದ ಕರೆಯುವುದು ತುಂಬಾ ಕುತೂಹಲಕರವಾಗಿದೆ.

ಉದಾಹರಣೆಗೆ:

ನಲ್ಲಬೋತ್ಲಾರು (ನಲ್ಲ ಎಂದರೆ - ಕಪ್ಪು, ಪೋತು ಎಂದರೆ, ಹೋತು- ಕಪ್ಪು ಹೋತುಗಳನ್ನು ಪರಿಪಾಲನೆ ಮಾಡುವವರು).
ಯರ ಬೋತ್ಲಾರು (ಯರ್ರ- ಎಂದರೆ ಕೆಂಪು, ಕೆಂಪು ಹೋತುಗಳನ್ನು ಪರಿಪಾಲನೆ ಮಾಡುವವರು).

ಹೀಗೆ ಒಂದೇ ಬಣ್ಣದ ಹೋತುಗಳನ್ನು ಸಾಕುವಂತೆ ಒಂದೇ ಬಣ್ಣದ ಕುರಿಗಳನ್ನೂ ಸಹ ಸಾಕುವರು.  ಕೆಂಪು ಬಣ್ಣದ ಕುರಿಗಳನ್ನು ಸಾಕಿರುವವರಿಗೆ ಯರಗೊಡ್ಲಾರು(ಕೆಂಪು ಕುರೋರು) ಎಂಬ ಕುಲನಾಮದಿಂದ ಕರೆಯುವರು.  ಯರಗೊಡ್ಲಾರು ಎಂಬ ಕುಲನಾಮವಿದ್ದಂತೆ ನಲ್ಲಗೊಡ್ಲಾರು ಎಂಬ ಹೆಸರಿನ ಕುಲನಾಮ ಇದ್ದಂತಿಲ್ಲ.  ಪ್ರಾಯಶಃ ಕುರಿಗಳ ಸಹಜ ಬಣ್ಣ ಕಪ್ಪು ಆಗಿರುವುದರಿಂದ ಮತ್ತು ಅದೇ ಬಣ್ಣದ ಕುರಿಗಳನ್ನು ಅನೇಕರು ಪಾಲನೆ ಮಾಡುತ್ತಿದ್ದುದರಿಂದ ಅದೊಂದು ವಿಶೇಷವಾಗಿ ಕಂಡಿರದೇ ಇರಬಹುದು.

ಮಾಂಸಹಾರಿಗಳಾದ ಮ್ಯಾಸಬೇಡರಲ್ಲಿ ದೇವರಿಗೆ ಪ್ರಾಣಿ ಬಲಿ ಕೊಡುವುದು ಮೊದಲಿನಿಂದಲೂ ರೂಢಿಯಲ್ಲಿರುವ ಪದ್ಧತಿ, ಹರಕೆಯ ಪ್ರಾಣಿಯನ್ನು ಬಲಿಕೊಡುವಾಗ ನಿಲ್ಲಿಸಿ ಕಡಿಯುವುದು ಇಲ್ಲವೆ ಮಲಗಿಸಿ ಕೊಯ್ಯುವುದುಂಟು.  ಆದರೆ ಇವರಲ್ಲಿ ಇನ್ನೊಂದು ವಿಶೇಷ ಬಲಿ ಪದ್ಧತಿಯಿದೆ.  ದೇವರಿಗೆ ಹರಕೆಯ ಬಲಿಯಾಗಿ ಕಪ್ಪುಹೋತನ್ನು ಬಿಡುವರು.  ಇದನ್ನು ಗಾವುಹೋತು ಅಥವಾ ಗಾಂಬೋತು ಎಂದು ಕರೆಯುತ್ತಾರೆ. ಈ ಗಾವುಹೋತನ್ನು ಇತರೆ ಹರಕೆಯ ಬಲಿಗಳ ಮಾದರಿಯಲ್ಲಿ ಕಡಿಯುವುದಾಗಲೀ, ಕೊಯ್ಯುವುದಾಗಲೀ ಮಾಡದೆ, ಇಬ್ಬರು ಪುರುಷರು ಆ ಹೋತಿನ ಬಾಯಿಯನ್ನು ಅರಚದಂತೆ ಗಟ್ಟಿಯಾಗಿ ಹಿಡಿದುಕೊಂಡು, ಬಾಯಿಯಿಂದಲೇ ಆ ಹೋತಿನ, ತುಟಿ, ನಾಲಿಗೆ ಎಲ್ಲವನ್ನು ಸೀಳಿಬಿಡುತ್ತಾರೆ.  ಹಬ್ಬ, ಉತ್ಸವಗಳಲ್ಲಿ ಈ ಕಾಯಕ ಮಾಡುವವರಿಗೆ ಗಾಂಬೋತ್ಲು- ಗಾಂಪೋತ್ಲು ಎಂಬ ಕುಲನಾಮದಿಂದಲೇ ಕರೆಯುವುದು ವಾಡಿಕೆಯಾಗಿದೆ.


ಮಂದ್ಲಾರು ಎಂಬುದು ಮ್ಯಾಸಬೇಡರಲ್ಲಿ ಮುಖ್ಯವಾದ ಪಂಗಡ.  ಕೃಷ್ಣಮೂರ್ತಿ ಹನೂರವರು ಈ ಪಂಗಡದ ಬಗ್ಗೆ ಉಲ್ಲೇಖ ಮಾಡುತ್ತಾ ಪ್ರಮುಖ ಬೆಡಗಾದ ಮಂದಲೋರು ಎಂಬ ಹೆಸರು ಎತ್ತುಗಳ ಗುಂಪಿಗೆ ಸಂಬಂಧಪಟ್ಟ ಹೆಸರು.  ದನಕರುಗಳನ್ನು ಕಾಯುವವರೆಲ್ಲ ಮಂದಲೋರು ಆಗಿ, ಇದರಲ್ಲಿ ಬೇರೆ ಬೇರೆ ಗುಂಪುಗಳು ಬೆಳೆಯುತ್ತಾ ಹೋದಂತೆಲ್ಲ ಗುಂಪಿಗೆ ಪ್ರಮುಖವಾದ ವ್ಯಕ್ತಿಯ ಮೇಲೋ ಅವರವರು ರೂಢಿಸಿಕೊಂಡು ಸಂಪ್ರದಾಯದ ಮೇಲೋ ಬೆಡಗುಗಳು ಹುಟ್ಟಿಕೊಂಡವು (ಕೃಣ್ಷಮೂರ್ತಿ ಹನೂರು ಮ್ಯಾಸಬೇಡರು ಪುಟ ೬೧) ಎಂದು ವ್ಯಾಖ್ಯಾನಿಸುತ್ತಾರೆ.  ಇವರು ಹೇಳುವ ಹಾಗೆ ಮಂದಲೋರು ಎಂಬುದು ಎತ್ತುಗಳ ಗುಂಪಿಗೆ ಮಾತ್ರ ಸಂಬಂಧಪಟ್ಟದಲ್ಲ. ಮತ್ತು ದನಕರುಗಳನ್ನು ಕಾಯುವವರೆಲ್ಲರೂ ಮಂದಲೋರು ಅಲ್ಲ. ಎನುಮಲೋರು ಪಂಗಡವೂ ಒಳಗೊಂಡಂತೆ ಬೇರೆ ಬೇರೆ ಪಂಗಡಗಳಲ್ಲೂ ದನಕರುಗಳನ್ನು ಕಾಯುವವರುಂಟು ಮತ್ತು ಮಂದ್ಲಾರು ಎಂಬುದು ಎತ್ತುಗಳಿಗೆ ಮಾತ್ರ ಸೀಮಿತವಾಗಿರದೆ, ಕುರಿ, ಮೇಕೆ ಯಾವುದೇ ಬಗೆಯ ಮಂದೆ ಕಾಯಕ ಮಾಡುವವರು ಆಗಿರಬಹುದು. 

ಬಿತ್ತುವ ಭೂಮಿಯನ್ನು ಫಲವತ್ತಾಗಿಸಲು ಗೊಬ್ಬರದ ಸಲುವಾಗಿ ಕುರಿ, ಮೇಕೆ, ದನಗಳ ಹಿಂಡನ್ನು ಹೊಲಗಳಲ್ಲಿಯೇ ಮಲಗಿಸುತ್ತಿದ್ದರು.  ಅಂದರೆ ಜಾನುವಾರುಗಳು ತಮ್ಮ ಹಟ್ಟಿ ಬಿಟ್ಟು ಹೊಲಗಳಲ್ಲಿ ತಂಗುವ ಕ್ರಮವನ್ನೇ ‘ಮಂದೆ’ ಎಂದು ಕರೆಯುವರು.  ಈ ಮಂದೆ ಕಾಯಕವನ್ನು ಮಾಡುವವರಿಗೆ ಮಂದ್ಲೋರು ಎಂಬ ಗೋತ್ರದಿಂದ ಕರೆಯುವರು.

‘ಬಂತ್ಲಾರು’ ಎಂಬುದು ಮ್ಯಾಸಬೇಡರಲ್ಲಿರುವ ಒಂದು ಪಂಗಡದ ಹೆಸರು.  ತೆಲುಗಿನಲ್ಲಿ ‘ಬಂತ’ ಎಂದರೆ ಕಂಬಳಿ ಎಂದರ್ಥ.  ಜಾನುವಾರುಗಳು ಮಂದೆಗೆ ಹೋದಾಗ, ಅವುಗಳ ಪೋಷಕರು ಸಾಮಾನ್ಯವಾಗಿ ಮನೆಗೆ ಬರುವುದಿಲ್ಲ.  ಅವರಿಗೆ ಬೇಕಾದ ಅಗತ್ಯಗಳನ್ನು ಮನೆಯಿಂದಲೇ ಸರಬರಾಜು ಮಾಡುತ್ತಾರೆ.  ಮಂದೆಗೆ ಹೋದಾಗ ಬಯಲಲ್ಲೇ ಮಲಗಬೇಕಾಗಿದ್ದರಿಂದ ಬೆಚ್ಚನೆಯ ಹೊದಿಕೆಯನ್ನು ಬಳಸುತ್ತಿದ್ದರು.  ಅವರ ಬೆಚ್ಚನೆಯ ಹೊದಿಕೆಯೆಂದರೆ ಕಂಬಳಿ.  ಈ ಕಂಬಳಿಯನ್ನು ಸಾಯಂಕಾಲ ತೆಗೆದುಕೊಂಡು ಹೋಗಿ, ಬೆಳಿಗ್ಗೆ ವಾಪಾಸ್ಸು ಮನೆಗೆ ತರುವರು.  ಈ ವೃತ್ತಿ ಮಾಡುವವರಿಗೆ ಬಂತ್ಲಾರು ಎಂಬ ಕುಲನಾಮ ಸೇರಿ ಹಾಗೆಯೇ ಅದು ಮುಂದುವರೆದುಕೊಂಡು ಬಂದಿರಬಹುದು. 

ರಾಸುಗಳು ಹಟ್ಟಿಯಲ್ಲಿ ಅಥವಾ ಹಟ್ಟಿಯಿಂದ ಹೊರಗೆ ಮೇಯಲು ಹೋಗುವಾಗ ದಾರಿಯಲ್ಲಿ ಸಗಣಿ ಹಾಕುತ್ತವೆ.  ಸಗಣಿ ಪಶುಪಾಲಕರಿಗೆ ಶ್ರೇಷ್ಠವೂ ಆದಾಯದ ಮೂಲವೂ ಆಗಿದೆ.  ಆದ್ದರಿಂದ ಸಗಣಿಯನ್ನು ವ್ಯರ್ಥ ಮಾಡದೆ ಕಲೆಹಾಕುತ್ತಾರೆ.  ಈ ರಾಸುಗಳ ಸಗಣಿಯನ್ನು ಕಲೆಹಾಕಲಿಕ್ಕೆಂದೇ ಕೆಲವರು ಮೀಸಲಾಗಿರುತ್ತಿದ್ದರು.  ಅವರು ಸಗಣಿಯನ್ನು ಬುಟ್ಟಿಯಲ್ಲಿ ಹಾಕಿಕೊಂಡು ತಿಪ್ಪೆಗೆ ಕೊಂಡ್ಹೋಗುತ್ತಾರೆ  ತೆಲುಗಿನಲ್ಲಿ ‘ಗಂಪ’ ಎಂದರೆ ಬುಟ್ಟಿ ಎಂದರ್ಥ.  ಈ ಕಾಯಕ ಮಾಡುವವರಿಗೆ ‘ಗಂಪಲಾರು’ ಅಥವಾ ‘ಬುಟ್ಟಗಲಾರು’ ಎಂಬ ಗೋತ್ರದಿಂದ ಕರೆಯುವರು.  ಕಾಲಾಂತರದಲ್ಲಿ ಇದು ಧಾರ್ಮಿಕ ವ್ಯಾಪ್ತಿಯನ್ನು ಸಹ ಪಡೆದುಕೊಂಡಂತಿದೆ. 

ಮ್ಯಾಸಬೇಡರ ಕುಲ, ಗೋತ್ರ, ಪಂಗಡಗಳ ಹೆಸರುಗಳಲ್ಲಿ ಪಶುಪಾಲನಾ ಸಂಬಂಧಿ ಪಳಿಯುಳಿಕೆಗಳು ಕಾಣಸಿಗುವಂತೆ ಅವರ ವ್ಯಕ್ತಿ ನಾಮಗಳಲ್ಲಿಯೂ ಗುರುತಿಸಬಹುದು.

ಉದಾಹರಣೆಗೆ: 
ಆವುಲಯ್ಯ (ಆವು ಎಂದರೆ ಹಸು, ಹಸು ಕಾಯುವವ)
ಮ್ಯಾಕಲಯ್ಯ  ( ಮ್ಯಾಕ ಎಂದರೆ ಮೇಕೆ, ಮೇಕೆ ಕಾಯುವವ)
ಗೊಡ್ಲಯ್ಯ ( ಗೊಡ್ಲು ಎಂದರೆ ಕುರಿಗಳು, ಕುರಿ ಕಾಯುವವ)
ಎದ್ಲಯ್ಯ ( ಎದ್ಲು ಎಂದರೆ ಎತ್ತುಗಳು, ಎತ್ತು ಕಾಯುವವ)
ಪಾಲಯ್ಯ ( ಪಾಲು ಎಂದರೆ ಹಾಲು, ಹಾಲು ಕರೆಯುವವ)

ಮೇಲಿನ ಹೆಸರುಗಳಲ್ಲಿ ಪಶುಪಾಲನೆಗೆ ಸಂಬಂಧಿಸಿದ ಅಂಶಗಳು ನೇರವಾಗಿ ವ್ಯಕ್ತಿನಾಮದ ಜೊತೆ ಅಂಟಿಕೊಂಡಿವೆ.  ಕೆಲವೊಮ್ಮೆ ಇವು ಹೆಸರಿನ ವಿಶೇಷಣಗಳಾಗಿಯೂ ಬಳಕೆಯಾಗುವುದುಂಟು.

ಉದಾಹರಣೆಗೆ: 

ಮ್ಯಾಕಲ ಪಾಪಯ್ಯ
ಗೊಡ್ಲ ಬೋರಯ್ಯ
ಎದ್ಲಾರು ಬೈಯ್ಯಣ್ಣ
ಆವುಲು ಓಬಯ್ಯ
ಪೈಲಾರು ಸೂರಯ್ಯ
ಪಡ್ಲಾರು ಪಾಪಯ್ಯ
ಗಂಪಲಾರು ಸಿದ್ಧಯ್ಯ

ಮ್ಯಾಸಬೇಡರಲ್ಲಿ ಬಳಕೆಯಲ್ಲಿರುವ ಕೆಲವು ಗಾದೆಗಳು ಸಹ ಈ ಸಂಬಂಧಿಯ ಸೂಚನೆಗಳನ್ನು ನೀಡುತ್ತವೆ.

ಉದಾಹರಣೆಗೆ: 
ಎತ್ತಿನ ಕಳ್ಳ ಹಗ್ಗ ಮಾರತಾನೆ
ರಾಸಿಗೆ ಮೇವಿಲ್ಲ ಬೇಡನಿಗೆ ಮದ್ದಿಲ್ಲ
ಕುಲಕ್ಕೆ ಕುಲವೇ ಮೂಲ, ಕುಂಟೆತ್ತು ಹೊಲಕ್ಕೆ ಮೂಲ 

ಮೊದಲಾದ ಗಾದೆಗಳಲ್ಲಿಯೂ ಸಹ ಪಶುಪಾಲನೆಗೆ ಸಂಬಂಧಿಸಿದ ಅಂಶಗಳನ್ನು ಕಾಣಬಹುದಾಗಿದೆ. ಇದೇ ರೀತಿ ಮ್ಯಾಸಬೇಡರ ಕುಲನಾಮ, ಗೋತ್ರ, ಪಂಗಡದ ಹೆಸರು ಮತ್ತು ವ್ಯಕ್ತಿನಾಮಗಳನ್ನ ಹೊಸ ಅಧ್ಯಯನ ಶಿಸ್ತಿಗೆ ಅಳವಡಿಸಿದರೆ ಇನ್ನೂ ಅನೇಕ ಹೊಸ ಒಳಹುಗಳು ಗೋಚರಿಸಬಹುದು. ಬೇಡರೆಂದರೆ ಬೇಟೆಯಷ್ಟೇ ಅಲ್ಲ.  ಅದಕ್ಕಿಂತಲೂ ಮುಖ್ಯವಾಗಿ ಪಶುಪಾಲನೆ ಅವರ ಜೀವನದ ಮುಖ್ಯ ವೃತ್ತಿಯಾಗಿದ್ದು, ಅದು ಅವರ ಸಾಂಸ್ಕೃತಿಕ ಬದುಕಿನ ಮೇಲೆ ಮುದ್ರೆಯೊತ್ತಿದೆ ಎಂದೇ ಹೇಳಬಹುದು. 

ಡಾ.ಸಣ್ಣಪಾಪಯ್ಯ
ಅತಿಥಿ ಉಪನ್ಯಾಸಕರು
ದಕ್ಷಿಣ ಪ್ರಾದೇಶಿಕ ಭಾಷಾ ಕೇಂದ್ರ,
ಭಾರತೀಯ ಭಾಷಾ ಸಂಸ್ಥಾನ, 
ಮಾನಸಗಂಗೋತ್ರಿ, ಮೈಸೂರು.****
1 ಕಾಮೆಂಟ್‌:

Prabhudeva ಹೇಳಿದರು...

Dr Sanna Papaiah Sir, you are not having comprehensive knowledge about cultural history of Myasanayaka and Urunayaka. They are not all divisions of a tribe. Your article is compiled on basis of hearsay and distorted version of cultural history of Naikda tribe and Uru Nayaka caste. Your thoughts are hovering over Karnataka and Andhra border and failed to penetrate into original abode of Naikda tribe. Your article base on superficial knowledge is detrimental to future of my fellow tribals.