ಭಾನುವಾರ, ಜನವರಿ 22, 2012

ಹಳ್ಳಿಗಳ `ಗ್ರಾಮ ಚರಿತ್ರೆ ಕೋಶ' ಸಂಗ್ರಹ

ಎಂ. ಮಹೇಶ

ದಾವಣಗೆರೆ: ದೇಶದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜನಪದ ವಿಶ್ವವಿದ್ಯಾಲಯವು `ಗ್ರಾಮ ಚರಿತ್ರೆ ಕೋಶ` ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ರಾಜ್ಯದ 36 ಸಾವಿರ ಹಳ್ಳಿಗಳ ಚರಿತ್ರೆ ಹಾಗೂ ಮಾಹಿತಿಯನ್ನು ದಾಖಲು ಮಾಡಲು ಕಾರ್ಯಕ್ರಮ ರೂಪಿಸಿದೆ.

ವಿವಿ ವತಿಯಿಂದ ಈಗಾಗಲೇ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ 98 ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಆರಂಭಿಸಲಾಗಿದೆ. ವಿವಿಯಿಂದ ನೇಮಿಸಲ್ಪಟ್ಟ ಆರು ಮಂದಿ ಸಂಶೋಧನಾ ಸಹಾಯಕರು ಆಯಾ ಗ್ರಾಮಗಳಿಗೆ ಸಂಬಂಧಿಸಿದ ಇತಿಹಾಸ, ಅಂಕಿ, ಅಂಶ, ಸಾಂಸ್ಕೃತಿಕ ಹಿನ್ನೆಲೆಯನ್ನು ಅಧ್ಯಯನ ಮಾಡಿ ವರದಿ ಸಿದ್ಧಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಮಹತ್ವದ ಯೋಜನೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಹ ರೂ 10 ಲಕ್ಷ ಸಹಾಯಧನ ನೀಡಿದೆ.

ಜನಪದ ನಿಂತಿರುವುದೇ ಹಳ್ಳಿಗಳ ಮೇಲೆ. ಹಳ್ಳಿಗಳಲ್ಲಿನ ಭಾಷೆ, ಸಂಸ್ಕೃತಿ, ಸೊಗಡು, ನಡವಳಿಕೆಗಳು, ಆಚರಣೆಗಳು, ಸಂಪ್ರದಾಯಗಳು ಮೊದಲಾದವುಗಳನ್ನು ಜನಪದ ತನ್ನ ಒಡಲಲ್ಲಿ ಇಟ್ಟುಕೊಂಡಿದೆ.

ಆದರೆ, ಬಹುತೇಕ ಹಳ್ಳಿಗಳಲ್ಲಿನ ಇತಿಹಾಸ ಸಮರ್ಪಕವಾಗಿ ದಾಖಲಾಗಿಲ್ಲ. ಇಂತಹ ಜನಪದ ಸಂಪತ್ತನ್ನು ದಾಖಲೀಕರಣಗೊಳಿಸುವ ಉದ್ದೇಶದಿಂದ `ಗ್ರಾಮ ಚರಿತ್ರೆ ಕೋಶ` ಯೋಜನೆ ರೂಪಿಸಲಾಗಿದೆ. ಈ ನೆಲದ ಬದುಕು, ಚರಿತ್ರೆಯನ್ನು ಅಲ್ಲಿನ ಹಿರಿಯರಿಂದ ಹಾಗೂ ಲಭ್ಯ ದಾಖಲೆಗಳಿಂದ ತಿಳಿದು ದಾಖಲಿಸಲಾಗುವುದು. ಗ್ರಾಮಗಳ ಚರಿತ್ರೆಯನ್ನು ಈ ಮೂಲಕ ಪುನರ್ ನಿರ್ಮಾಣ ಮಾಡುವ ಆಶಯ ವಿವಿಯದ್ದು. ಇದರಿಂದ, ಮುಂದಿನ ಪೀಳಿಗೆಗೆ ಮಾಹಿತಿಯು ಸಹ ದೊರೆಯಲಿದೆ.

ಹೀಗಾಗಿ, ಇದೊಂದು ಅತ್ಯಂತ ಜವಾಬ್ದಾರಿಯ ಕಾರ್ಯಕ್ರಮವಾಗಿದೆ. ಇದೇ ಮೊದಲ ದೊಡ್ಡ ಪ್ರಮಾಣದಲ್ಲಿ ಇತಿಹಾಸ ದಾಖಲು ಮಾಡುವ ಕೆಲಸ ನಡೆಯುತ್ತಿದೆ ಎಂದು ಜನಪದ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ `ಪ್ರಜಾವಾಣಿ`ಗೆ ತಿಳಿಸಿದರು.

36 ಸಾವಿರ ಹಳ್ಳಿಗಳಲ್ಲಿ ಚರಿತ್ರೆ ಜತಗೆ, ಗ್ರಾಮೀಣ ಬದುಕು, ಸಾಧಕರ ಪರಿಚಯ, ಪಾರಂಪರಿಕ ಕಲೆ ಮತ್ತು ಜ್ಞಾನ ಪರಂಪರೆಯು ಲಭ್ಯವಾಗಲಿದೆ. ಅಲ್ಲಿನ ಕುಂದು ಕೊರತೆಗಳಿಗೆ ಕನ್ನಡಿ ಹಿಡಿದಂತೆ ಆಗುತ್ತದೆ. ಅಲ್ಲದೇ ಅವುಗಳನ್ನು ದೂರವಾಗಿಸಬಲ್ಲ ಪರಿಹಾರಗಳು, ಎಲ್ಲ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು ಮತ್ತು ಗಣಕೀಕರಣ ಮಾಡಲಾಗುವುದು. ಇದರಿಂದ ಎರಡು ಮಾರ್ಗದಲ್ಲಿ ಆಸಕ್ತರಿಗೆ ಮಾಹಿತಿ ದೊರೆಯುತ್ತದೆ. ಅಲ್ಲದೇ, ಸರ್ಕಾರಕ್ಕೂ ಸಲ್ಲಿಸಲಾಗುವುದು.

ವಿವಿಯು ಆರಂಭಿಸಲಿರುವ ವಿವಿಧ ಕೋರ್ಸ್‌ಗಳಿಗೆ ಪರಾಮರ್ಶನ ಪುಸ್ತಕಗಳೂ ಆಗಲಿವೆ. ಈ ಸಂಬಂಧ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಒಟ್ಟು 3 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಸುಮಾರು ರೂ 8.47 ಕೋಟಿ ಅನುದಾನ ಕೋರಿದ್ದೇವೆ. ಹಂತ ಹಂತವಾಗಿ ಅನುದಾನ ದೊರೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ದೇಸಿ ಜ್ಞಾನ ಪರಂಪರೆ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ರಾಜ್ಯದಲ್ಲಿ ಒಟ್ಟು 6 ಪ್ರಾದೇಶಿಕ ಕೇಂದ್ರಗಳನ್ನು ತೆರೆಯಲಾಗುವುದು. ಈ `ಗ್ರಾಮ ಚರಿತ್ರೆ ಕೋಶ` ಯೋಜನೆಯಿಂದ ಉದ್ಯೋಗದ ಅವಕಾಶಗಳು ಸಹ ದೊರೆಯಲಿವೆ. ಕೇವಲ ಇತಿಹಾಸದ ಆಸಕ್ತರಿಗೆ ಮಾತ್ರವಲ್ಲದೇ ಇತರರಿಗೂ ಅವಕಾಶ ದೊರೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಕಾ.ತ. ಚಿಕ್ಕಣ್ಣ ಹಾಗೂ ಡಾ.ಗೋವಿಂದರಾಜು ಅವರ ನೇತೃತ್ವದಲ್ಲಿ ಮಾಹಿತಿ ದಾಖಲೀಕರಣ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.

ಪ್ರಜಾವಾಣಿ ವಾರ್ತೆ

ಕಾಮೆಂಟ್‌ಗಳಿಲ್ಲ: