ಭಾನುವಾರ, ಡಿಸೆಂಬರ್ 25, 2011

೨೦೧೧ ನೇ ಸಾಲಿನ ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪುರಸ್ಕೃತ ಬೆಳಗಲ್ ವೀರಣ್ಣ


ಸಿ. ಮಂಜುನಾಥ್, ಬಳ್ಳಾರಿ


ಸಾಂಸ್ಕೃತಿಕ ಪರಂಪರೆಯ ಸಂಪದ್ಭರಿತ ಜಿಲ್ಲೆ ಬಳ್ಳಾರಿ! ಕನ್ನಡದ ಕಲೆಯ ಬೀಡಾದ ಬಳ್ಳಾರಿ ಹಿಂದಿನಿಂದಲೂ ಸಂಗೀತ, ನಾಟಕ, ಜಾನಪದ ಕಲೆ ಮತ್ತು ಸಂಸ್ಕೃತಿಗಳ ತವರೂರಾಗಿದೆ. ಇಂತಹ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಗಮನ ಸೆಳೆಯುವ ಹೆಸರು ’ಜಾನಪದ ಶ್ರೀ’ ಬೆಳಗಲ್ ವೀರಣ್ಣ ಅವರದು. ರಂಗಭೂಮಿ ಮತ್ತು ಜಾನಪದ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ಬೆಳಗಲ್ ವೀರಣ್ಣ ಅವರು ನಶಿಸಿಹೋಗುತ್ತಿರುವ ಜನಪದ ಕಲೆಗಳಲ್ಲಿ ಒಂದಾಗಿರುವ ತೊಗಲುಗೊಂಬೆಯಾಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ಮೂಲಕ ಕನ್ನಡ ನಾಡಿಗೆ, ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅನಕ್ಷರಸ್ತ ಸಿಳ್ಳೇಕ್ಯಾತ ಜನಾಂಗದಲ್ಲಿ ಹುಟ್ಟಿದ ವೀರಣ್ಣ ಅವರ ಪೂರ್ವಜರು ಮಹಾನ್ ಕಲಾವಿದರೇ ಆಗಿದ್ದರು. ತಂದೆ ದಿ. ಹನುಮಂತಪ್ಪ ಪ್ರಸಿದ್ಧ ಪಿಟೀಲು ವಾದಕರಾಗಿದ್ದರು ಅಲ್ಲದೆ ಬಯಲಾಟದ ಸ್ತ್ರೀ ಪಾತ್ರ ವೇಷಧಾರಿಯಾಗಿ ಹೆಸರು ಮಾಡಿದ್ದರು. ಇವರ ಅಜ್ಜ ಗಂಜಿ ಹನುಮಂತಪ್ಪ ಜ್ಯೋತಿಷ್ಯ ಹಾಗು ರಮಲ ಪಂಡಿತರು.

ಬಾಲಕ ವೀರಣ್ಣ ತಂದೆಯ ಬಯಲಾಟದ ವಿದ್ಯೆಯನ್ನು ರೂಢಿಸಿ ಕೊಂಡು ಹಳ್ಳಿಯ ಸುತ್ತಮುತ್ತಲಿನ ಭಜನೆ ಹಾಡುಗಾರಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಇವರ ಧ್ವನಿ ಹಾಗು ಗಾಯನ ಸಿರಿಯನ್ನು ಮೆಚ್ಚಿಕೊಂಡಿದ್ದ ಗಮಕ ಕಲಾನಿಧಿ ದಿ. ಜೋಳದರಾಶಿ ದೊಡ್ಡನಗೌಡರು, ರಂಗ ಕರ್ಮಿ ಸಿಡಗಿನಮೊಳ ದಿ. ಚಂದ್ರಯ್ಯ ಸ್ವಾಮಿ ತಮ್ಮ ಕಂಪನಿಯ ನಾಟಕಗಳಿಗೆ ಹುಟ್ಟು ಕಲಾವಿದ ವೀರಣ್ಣನವರನ್ನು ಸೇರಿಸಿ ಕೊಂಡು ಪ್ರೋತ್ಸಾಹಿಸಿದರು.ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದು ಕೊಂಡ ವೀರಣ್ಣನವರು ಯಾವುದೇ ಶಾಲೆಗೆ ಹೋಗಿ ಅಕ್ಷರ ಕಲಿತವರಲ್ಲ. ಅವರು ಕಲಿತದ್ದೆಲ್ಲಾ ರಂಗಭೂಮಿ ಮತ್ತು ಬದುಕಿನ ಅನುಭವದ ಪಾಠದಿಂದ! ಗುರುವರ್ಯ ವೈ. ಎಂ. ಚಂದ್ರಯ್ಯಸ್ವಾಮಿ ಅವರು ಕಲಿಸಿದ ವಿದ್ಯೆಯೇ ವೀರಣ್ಣನವರ ಶಿಕ್ಷಣ! ಈ ಜ್ಞಾನವೇ ವೀರಣ್ಣ ಅವರನ್ನು ಪುರಾಣ ಮತ್ತು ಆಧುನಿಕ ಸಾಹಿತ್ಯವನ್ನು ಅರಿಯುವ ಶಕ್ತಿಯನ್ನು ನೀಡಿದೆ ಎಂದರೆ ಅತಿಶಯೋಕ್ತಿ ಅಲ್ಲ.


ರಂಗಭೂಮಿ ಸೇವೆ: ರಂಗಭೂಮಿಯ ನಂಟು ವೀರಣ್ಣ ಅವರನ್ನು ಸುಮ್ಮನೆ ಬಿಡಲಿಲ್ಲ. ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ನಟರಾಗಿ, ಗಾಯಕರಾಗಿ ದುಡಿಯುವಂತೆ ಮಾಡಿತು. ಶ್ರೀ ಹೊನ್ನಪ್ಪ ಭಾಗವತರ ಶ್ರೀ ಉಮಾ ಮಹೇಶ್ವರ ನಾಟ್ಯ ಸಂಘ, ಬಳ್ಳಾರಿಯ ಲಲಿತಮ್ಮ ಅವರ ಶ್ರೀ ಲಲಿತಕಲಾ ನಾಟ್ಯ ಸಂಘ, ಚಂದ್ರಯ್ಯ ಸ್ವಾಮಿಯವರ ಶ್ರೀ ನಟರಾಜ ನಾಟಕ ಮಂಡಳಿ ಸೇರಿದಂತೆ ಹಲವು ಕಂಪನಿಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸುವ ಮೂಲಕ ನಟನೆಯಲ್ಲಿ ಪಳಗಿದರು. ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಬಾಲ ನಟರಾಗಿ, ಸ್ತ್ರೀ ಪಾತ್ರಧಾರಿಯಾಗಿ, ಖಳನಾಯಕರಾಗಿ, ಹಾಸ್ಯನಟರಾಗಿ ಗಮನ ಸೆಳೆದರು.

ಹೆಸರು ತಂದು ಕೊಟ್ಟ ಶಕುನಿ: ದಿ. ಕಂದಗಲ್ಲು ಹನುಮಂತರಾಯರ ’ರಕ್ತರಾತ್ರಿ’ ನಾಟಕದ ಶಕುನಿ ಪಾತ್ರ ವೀರಣ್ಣ ಅವರಿಗೆ ಅಪಾರ ಯಶಸ್ಸನ್ನು ಜನಪ್ರಿಯತೆಯನ್ನು ತಂದುಕೊಟ್ಟ ಪಾತ್ರ. ’ಅಣ್ಣತಂಗಿ’ಯಲ್ಲಿ ಖಾಸಿಂನ ಪಾತ್ರ, ’ಟಿಪ್ಪು ಸುಲ್ತಾನ್’ ನಾಟಕದಲ್ಲಿ ಮೀರ್ ಸಾದಿಕ್‌ನ ಪಾತ್ರ ಭಾರಿ ಜನ ಪ್ರಿಯತೆಯನ್ನು ತಂದುಕೊಟ್ಟವು. ಹಲವು ನಾಟಕ ಕಂಪನಿಗಳಲ್ಲಿ ದುಡಿದ ಅನುಭವಿದ್ದ ವೀರಣ್ಣ ತಮ್ಮದೇ ಆದ ’ನಾಟಕ ಕಲಾ ಮಿತ್ರ ಮಂಡಳಿ’ ಕಂಪನಿಯನ್ನು ಆರಂಭಿಸಿ ಎರಡು ದಶಕಕ್ಕೂ ಹೆಚ್ಚಿನ ಕಾಲ ನಡೆಸಿದ್ದು ಉಲ್ಲೇಖಾರ್ಹ. ರಂಗಭೂಮಿಯಲ್ಲಿ ಸಿಹಿಗಿಂತ ಕಹಿಯನ್ನು ಹೆಚ್ಚು ಉಂಡಿದ್ದ ವೀರಣ್ಣ ಅವರು ೧೯೮೦ ರಲ್ಲಿ ಸರಕಾರದಿಂದ ಏನಾದರೂ ನೆರವು ದೊರೆಯ ಬಹುದೆಂಬ ಆಸೆ ಹೊತ್ತು ಬೆಂಗಳೂರಿನತ್ತ ಹೆಜ್ಜೆ ಹಾಕಿದರು. ಬದಲಾದ ಪರಿಸ್ಥಿತಿಯಲ್ಲಿ ರಂಗಭೂಮಿಯಿಂದ ಜಾನಪದ ರಂಗಕ್ಕೆ ದಿಕ್ಕು ಬದಲಾಯಿಸಿದ್ದು ರೋಚಕ. ತಮ್ಮ ಪೂರ್ವಜರ ಕಲೆ ತೊಗಲುಬೊಂಬೆಯಾಟದತ್ತ ಮುಖ ಮಾಡಿದ್ದು ವೈಶಿಷ್ಟವೇ ಸರಿ! ಅಂದಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ವಿಜಯ ಸಾಸ್‌ನೂರ ಅವರು ಕರ್ನಾಟಕದ ಅಪರೂಪದ ಕಲೆಯಾದ ತೊಗಲು ಗೊಂಬೆಯಾಟವನ್ನು ಪುನರ್‌ಜೀವನ ಗೊಳಿಸಲು ಸಲಹೆ ನೀಡಿದರು. ಸಾಸ್‌ನೂರ್ ಅವರ ಮಾತುಗಳಿಂದ ಪ್ರೇರಿತರಾದ ವೀರಣ್ಣ ಅವರು ತಡಮಾಡಲಿಲ್ಲ. ತಕ್ಷಣ ಬಳ್ಳಾರಿ ಬಸ್ ಹತ್ತಿದರು. ತಮ್ಮ ಹತ್ತಿರದ ಸಂಬಂಧಿ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೊಗಲು ಬೊಂಬೆ ಕಲಾವಿದ ದಿ. ಹೂಲೆಪ್ಪನವರ ಸಹಕಾರದಿಂದ ಕೆಲವೇ ದಿನಗಳಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಮಾಯಣ ಕಥಾಪ್ರಸಂಗ ’ಪಂಚವಟಿ’ ತೊಗಲುಗೊಂಬೆಯಾಟ ಪ್ರದರ್ಶಿಸುವ ಮೂಲಕ ದಾಖಲೆಯನ್ನೆ ನಿರ್ಮಿಸಿದರು ವೀರಣ್ಣ!

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಕಮಲಾದೇವಿ ಚಟೋಪಾಧ್ಯಾಯ ಅವರು ನೀಡಿದ ಪ್ರೋತ್ಸಾಹ, ಆರ್ಥಿಕ ಸಹಾಯ ಮತ್ತು ಅಂದಿನ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ಎಚ್. ಎಲ್. ನಾಗೇಗೌಡರ ಅತ್ಯುತ್ತಮ ಸಲಹೆ ಮತ್ತು ಪ್ರೋತ್ಸಾಹಗಳಿಂದ ವೀರಣ್ಣ ಅವರ ತೊಗಲುಗೊಂಬೆಯಾಟ ಸಮರ್ಥ ರೀತಿಯಲ್ಲಿ ನೆಲೆ ನಿಲ್ಲಲು ಕಾರಣವಾಯಿತು. ಇದೇ ಸಂದರ್ಭದಲ್ಲಿ ಶ್ರೀರಾಮಾಂಜನೇಯ ತೊಗಲು ಗೊಂಬೆ ಮೇಳವನ್ನು ಆರಂಭಿಸಿದ ಬಳಿಕ ವೀರಣ್ಣ ಹಿಂತಿರುಗಿ ನೋಡಲೇ ಇಲ್ಲ. ಸಾಹಿತಿ ವೈ. ರಾಘವೇಂದ್ರ ರಾವ್ ಮತ್ತು ಸಂಡೂರಿನ ನಾಡೋಜ ವಿ.ಟಿ. ಕಾಳೆ ಅವರ ಸಹಾಯ ದೊರಕಿತು. ಬಳಿಕ ವೀರಣ್ಣನವರ ಪೂರ್ಣ ಕುಟುಂಬ ಗೊಂಬೆ ಕಲಾವಿದರಾಗಿ ರೂಪಗೊಂಡಿತು. ವೀರಣ್ಣ ಅವರ ಪತ್ನಿ ಶ್ರೀಮತಿ ಮಹಾಲಿಂಗಮ್ಮ, ಸಾಹಿತ್ಯ ಹಾಗು ಸಂಗೀತದಲ್ಲಿ ಎಂ. ಎ. ಪದವಿಗಳಿಸಿ ಕನ್ನಡ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರ ಪುತ್ರ ಬಿ. ವಿ. ಪ್ರಕಾಶ್, ಮಕ್ಕಳಾದ ಬಿ.ವಿ. ಮಹೇಶ್, ಬಿ.ವಿ. ಮಲ್ಲಿಕಾರ್ಜುನ, ಬಿ.ವಿ. ಹನುಮಂತ ಹಾಗು ಮಗಳು ಲಕ್ಷ್ಮಿದೇವಿ ಗೊಂಬೆ ತಯಾರಿಕೆ, ಗೊಂಬೆಯಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ತಮ್ಮ ತಂದೆಗೆ ಶಕ್ತಿ ತುಂಬಿದವರು.ನಾಡಿನ ಹಿರಿಯ ವಿದ್ವ್ವಾಂಸರಾದ ಡಾ. ಎಂ.ಎಂ. ಕಲ್ಬುರ್ಗಿ ಮತ್ತು ಡಾ. ಎಚ್. ಜೆ ಲಕ್ಕಪ್ಪ ಗೌಡರು ವೀರಣ್ಣನವರಿಗೆ ಸಾಹಿತ್ಯವನ್ನೊದಗಿಸಿ ಹತ್ತು ಹಲವು ಪ್ರಯೋಗಗಳ ಯಶಸ್ವಿಗೆ ಕಾರಣರಾಗಿದ್ದಾರೆ.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡ ಅವರು ಭಾರತ ಸ್ವತಂತ್ರ ಸಂಗ್ರಾಮ ತೊಗಲು ಗೊಂಬೆಯಾಟಕ್ಕೆ ಪ್ರೋತ್ಸಾಹಿಸಿದ ಪರಿಣಾಮ ವೀರಣ್ಣನವರ ಗೊಂಬೆಯಾಟ ಕೇವಲ ಪೌರಾಣಿಕ ಪ್ರಸಂಗಗಳಿಗೆ ಮೀಸಲಾಗದೆ ಐತಿಹಾಸಿಕ, ಮತ್ತು ಸಾಮಾಜಿಕ ಕಥಾ ಪ್ರಸಂಗಗಳನ್ನೊಳಗೊಂಡು ವ್ಯಾಪಕವಾಗಿ ಬೆಳೆಯಲು ಸಹಕಾರಿಯಾಯಿತು.

ಮುಖ್ಯವಾದ ಕಥಾ ಪ್ರಸಂಗಗಳು: ಭಾರತ ಸ್ವತಂತ್ರ ಸಂಗ್ರಾಮ, ಬಾಪು ಪ್ರವಾದಿ ಬಸವೇಶ್ವರ , ಕಿತ್ತೂರು ಚೆನ್ನಮ್ಮ ಪ್ರಸಂಗಗಳಲ್ಲದೆ ಜನತೆಯಲ್ಲಿ ಕೃಷಿ ಮತ್ತು ಆರೋಗ್ಯ ಜಾಗೃತಿ ಮೂಡಿಸುವ ಸಾಕ್ಷರತಾ ಆಂದೋಲನ, ಕಬ್ಬಿನ ಬೆಳೆ, ಕುಟುಂಬ ನಿಯಂತ್ರಣ ಯೋಜನೆ, ತಾಯಿ ಮತ್ತು ಮಗುವಿನ ಆರೋಗ್ಯ(ಆರ್.ಸಿ.ಎಚ್.), ಏಡ್ಸ್ ಜನಜಾಗೃತಿ, ಪಲ್ಸ್ ಪೋಲಿಯೋ.(ಪೋಲಿಯೋ ನಿಯಂತ್ರಣ), ಮಲೇರಿಯ, ಡೇಂಗ್ಯು ಜ್ವರ. ಮದ್ಯ ವ್ಯಸನ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತು ತಮ್ಮ ತೊಗಲು ಗೊಬೆಯಾಟದ ಮೂಲಕ ಜನರಿಗೆ ಅರಿವು ಮೂಡಿಸುವಲ್ಲೂ ವೀರಣ್ಣ ಸಫಲರಾಗಿದ್ದಾರೆ. ಅದರಲ್ಲೂ ಸ್ವಾತಂತ್ರ ಸಂಗ್ರಾಮ, ಮಹಾತ್ಮಾ ಗಾಂಧೀಜಿ, ಪ್ರವಾದಿ ಬಸವೇಶ್ವರ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಪ್ರಯೋಗಗಳು ತೊಗಲು ಗೊಂಬೆಯಾಟದ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳೆನಿಸಿವೆ. ಹಳೆಯ ಸಂಪ್ರದಾಯಿಕ ಕಲೆಯನ್ನು ಹೇಗೆ ಹೊಸ ಪ್ರಯೋಗಗಳಿಗೆ ಬಳಸಿಕೊಳ್ಳಬಹುದೆಂಬುದಕ್ಕೆ ಮೇಲಿನ ಈ ಪ್ರಯೋಗಗಳೇ ಸಾಕ್ಷಿಯಾಗಿವೆ.

ಸದಾ ಹೊಸತನ, ಪ್ರಯೋಗಗಳತ್ತ ಮುಖ ಮಾಡುವ ವೀರಣ್ಣ, ಗೌತಮ ಬುಧ್ದ, ವಿವೇಕಾನಂದ, ಅಂಬೇಡ್ಕರ್ ರೂಪಕಗಳನ್ನು ಸಿದ್ಧ ಪಡಿಸುವಲ್ಲಿ ನಿರತರಾಗಿದ್ದಾರೆ. ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ’ಕಾನೀನ’, ಶ್ರೀ ರಾಮಾಯಣ ದರ್ಶನಂ ಕೃತಿಯ ’ಲಂಕಾದಹನಂ’ ರೂಪಕವನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.

ವಿದೇಶಗಳಲ್ಲೂ ಪ್ರದರ್ಶನ: ೨೦೦೮ರಲ್ಲಿ ಸ್ವಿಟ್ಝರ್‌ಲೆಂಡ್ ಪ್ರವಾಸ ಕೈಗೊಂಡು, ಜೂರಿಕ್ ನಗರದ ರೈಟ್ ಬರ್ಗ್ ಮ್ಯುಸಿಯಂನಲ್ಲಿ ೨೦೦೮ರ ಜೂ. ೨೪ ರಿಂದ ಜು. ೭ ರವರೆಗೆ ರಾಮಾಯಣದ ಪಂಚವಟಿ ಪ್ರಸಂಗದ ’ಸೀತಾಪಹರಣ’ದ ಪ್ರಸಂಗ ಮತ್ತು ’ಮಹಾತ್ಮಾ ಗಾಂಧೀಜಿ’ಯವರ ಕಥೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಇದೀಗ ಜರ್ಮನಿ ಪ್ರವಾಸ ಕೈಗೊಂಡಿರುವ ಬೆಳಗಲ್ ವೀರಣ್ಣ ಅವರು ಭಾರತದ ಗರಿಮೆ ಹಿರಿಮೆಯನ್ನು ಸಾರುತ್ತಿದ್ದಾರೆ.
ನವದೆಹಲಿಯ ರಾಷ್ಟ್ರಪತಿ ಭವನ, ಅಪ್ನಾ ಉತ್ಸವ್ , ಚಂಡೀಗಢದ ಪಂಜಾಬ್ ವಿಶ್ವ ವಿದ್ಯಾಲಯ, ಗಾಂಧೀ ಸ್ಮೃತಿ ಮತ್ತು ದರ್ಶನ ಸಮಿತಿ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಸೇರಿದಂತೆ ಆಂಧ್ರ ಪ್ರದೇಶ, ತಮಿಳನಾಡು, ಕೇರಳ, ಬಿಹಾರ್, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ.

ಪ್ರಶಸ್ತಿ- ಪುರಸ್ಕಾರಗಳು: ವೀರಣ್ಣ ಅವರ ಪ್ರತಿಭೆ, ಸಾಧನೆಗೆ ಅರಸಿ ಬಂದ ಪ್ರಶಸ್ತಿ- ಪುರಸ್ಕಾರ ಸಮ್ಮಾನಗಳಿಗೆ ಲೆಕ್ಕವಿಲ್ಲ. ೧೯೯೨ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ. , ೧೯೯೧ ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ., ೨೦೦೦ ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ., ೨೦೦೭ನೇ ಸಾಲಿನಲ್ಲಿ ’ಜಾನಪದ ಶ್ರೀ’ ಪ್ರಶಸ್ತಿ ಲಭಿಸಿವೆ. ಜತೆಗೆ ವೀರಣ್ಣ ಅವರು ಎರಡು ಅವಧಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಜಾನಪದ ಕ್ಷೇತ್ರಕ್ಕೆ ಮತ್ತಷ್ಟು ಸೇವೆ ಸಲ್ಲಿಸಿರುವುದು ಗಮನಾರ್ಹ.

ಕೇಂದ್ರ ಸಂಗೀತ, ನಾಟಕ ಅಕಾಡೆಮಿಯ ೨೦೧೧ ನೇ ಸಾಲಿನ ಪುರಸ್ಕಾರಕ್ಕೆ, ಇತರೆ ಸಾಂಪ್ರದಾಯಿಕ/ಜಾನಪದ/ಬುಡಕಟ್ಟು ನೃತ್ಯ/ ತೊಗಲುಬೊಂಬೆಯಾಟ ಕ್ಷೇತ್ರದಲ್ಲಿ ದೇಶದ ೮ ಜನ ಪ್ರತಿಭಾವಂತ ಕಲಾವಿದರು ಆಯ್ಕೆಯಾಗಿದ್ದಾರೆ. ಈ ಎಂಟು ಜನರಲ್ಲಿ ಬಳ್ಳಾರಿಯ ಹಿರಿಯ ಪ್ರತಿಭಾವಂತ, ಸಾಧಕ ಬೆಳಗಲ್ಲು ವೀರಣ್ಣ ಅವರು ಸೇರ್ಪಡೆ ಕರ್ನಾಟಕ ಜಾನಪದಕ್ಕೆ, ಕನ್ನಡಿಗರಿಗೆ, ವಿಶೇಷವಾಗಿ ಬಳ್ಳಾರಿಗರಿಗೆ ಕೋಡು ಮೂಡಿಸಿದೆ.

1 ಕಾಮೆಂಟ್‌:

ಸುಧಾ ಚಿದಾನಂದಗೌಡ ಹೇಳಿದರು...

ಹೆಮ್ಮೆಯ ವಿಷಯವನ್ನು ಮುತುವರ್ಜಿಯಿಂದ ಬರೆದಿರುವ ಮಂಜುನಾಥ್ ರವರಿಗೆ ಧನ್ಯವಾದಗಳು.ಫೊಟೋಗಳು ಸಮಯೋಚಿತವಾಗಿವೆ.-ಸುಧಾ ಚಿದಾನಂದಗೌಡ.