ಸೋಮವಾರ, ಅಕ್ಟೋಬರ್ 24, 2011

ಜಾರ್ಖಂಡ್ನ ಜಾನಪದ ಚೇತನ ಡಾ.ರಾಮ್ದಯಾಳ್



ಜಾರ್ಖಂಡ್ನ ಬುಡಕಟ್ಟು ಜನತೆಯ ಹಕ್ಕುಗಳಿಗಾಗಿ ಸುದೀರ್ಘ ಹೋರಾಟ ನಡೆಸಿದ ಮಹಾನ್ ಚೇತನ ಡಾ.ರಾಮ್ದಯಾಳ್ ಮುಂಡಾ ಸೆಪ್ಟೆಂಬರ್ 30ರಂದು ನಿಧನರಾದಾಗ, ಆ ರಾಜ್ಯದ ಬುಡಕಟ್ಟು ಸಮುದಾಯ ಶೋಕಸಾಗರದಲ್ಲಿ ಮುಳುಗಿತು.ರಾಂಚಿ ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿಯಾಗಿರುವ ದಯಾಳ್, ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿಯೂ ಗಣನೀಯ ಸೇವೆ ಸಲ್ಲಿಸಿದ್ದರು. ಜಾರ್ಖಂಡ್ನ ಬುಡಕಟ್ಟು ಜನರು ಕಡುಬಡವರಾದರೂ, ಅವರ ಸಂಸ್ಕೃತಿ ಮಾತ್ರ ಶ್ರೀಮಂತವಾದುದು.ಸ್ವತಃ ಆದಿವಾಸಿ ಪಂಗಡಕ್ಕೆ ಸೇರಿದ ರಾಮ್ದಯಾಳ್ಗೆ ತನ್ನ ಜನರ ಬದುಕು, ಬವಣೆಗಳ ಸ್ಪಷ್ಟ ಅರಿವಿತ್ತು. ಜೊತೆಗೆ ಅವರ ಸಾಂಸ್ಕೃತಿಕ ಸಂಪತ್ತಿನ ಬಗೆಗೂ ಅಪಾರವಾದ ಜ್ಞಾನವಿತ್ತು. ಜಾರ್ಖಂಡ್ನ ಬುಡಕಟ್ಟು ಜನರ ಜಾನಪದ ಹಾಡು, ಸಂಗೀತವನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ತಂದ ಶ್ರೇಯಸ್ಸು ರಾಮ್ದಯಾಳ್ಗೆ ಸಲ್ಲಬೇಕು.

ರಾಂಚಿಯ ತಮಾಡ್ ಸಮೀಪದ ದಿಯೋರಿ ಎಂಬ ಗ್ರಾಮದಲ್ಲಿ 1939ರಲ್ಲಿ ಜನಿಸಿದ ದಯಾಳ್, ತನ್ನ ಪ್ರಾಥಮಿಕ ಶಿಕ್ಷಣವನ್ನು ಅಮ್ಲೆಸಾ ಪಟ್ಟಣದ ಲೂಥರ್ ಮಿಶನ್ ಶಾಲೆಯಲ್ಲಿ ಪಡೆದರು. ಬಾಲ್ಯದಿಂದಲೇ ಅವರು ತನ್ನ ತಾತ ಚಾಮು ಸಿಂಗ್ ಮುಂಡಾ ಅವರಿಂದ ಜಾನಪದ ಸಂಗೀತವನ್ನು ಕಲಿತುಕೊಂಡರು.ಮಾತ್ರವಲ್ಲದೆ, ಜಾರ್ಖಂಡ್ನ ಆದಿವಾಸಿಗಳ ವಿಶಿಷ್ಟ ಕೊಳಲು ಹಾಗೂ ಡೋಲುಗಳ ವಾದನದಲ್ಲೂ ಅವರು ಪಳಗಿದರು.ರಾಂಚಿ ವಿಶ್ವವಿದ್ಯಾನಿಲಯದಲ್ಲಿ ಮಾನವಶಾಸ್ತ್ರ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರನ್ನು ಉನ್ನತ ಅಧ್ಯಯನಕ್ಕಾಗಿ ಅಮೆರಿಕದ ಶಿಕಾಗೋ ವಿವಿಯು ಕೈಬೀಸಿ ಕರೆಯಿತು. ಅಲ್ಲಿ ಭಾಷಾ ಶಾಸ್ತ್ರದಲ್ಲಿ ಪಿಎಚ್ಡಿ ಪದವಿಯನ್ನು ಅವರು ಪಡೆದರು.

ರಾಮ್ದಯಾಳ್ ಅವರ ನರನಾಡಿಗಳಲ್ಲೂ ಜಾರ್ಖಂಡ್ನ ಜಾನಪದ ಸಂಸ್ಕೃತಿಯು ಮಿಳಿತಗೊಂಡಿತ್ತು. ಅವರ ಜಾನಪದ ಪ್ರೀತಿ ಎಷ್ಟಿತ್ತೆಂದರೆ, ಅವರು ರಾಂಚಿಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಬುಡಕಟ್ಟು ನರ್ತಕರು ಹಾಗೂ ಸಂಗೀತಗಾರರ ತಂಡವೊಂದನ್ನು ಕಟ್ಟಿ ಪ್ರದರ್ಶನಗಳನ್ನು ನೀಡಿದ್ದರು. ಮತ್ತೆ ಶಿಕಾಗೋ ವಿವಿಯಲ್ಲಿದ್ದಾಗಲೂ ದಕ್ಷಿಣ ಏಶ್ಯ ಜಾನಪದ ಕಲಾವಿದರ ತಂಡವೊಂದನ್ನು ರಚಿಸಿ, ಅಮೆರಿಕದ ವಿವಿಧೆಡೆ ಪ್ರದರ್ಶನಗಳನ್ನು ನೀಡಿದ್ದರು.ಆದರೆ ರಾಮ್ದಯಾಳ್ ಬುಡಕಟ್ಟು ಜನರ ಅಸ್ತಿತ್ವವನ್ನು ಜಾನಪದ ಕಲೆ ಮತ್ತು ಹಾಡಿಗಷ್ಟೇ ಸೀಮಿತಗೊಳಿಸಲಿಲ್ಲ. ಆಧುನಿಕ ಜೀವನದ ಜೊತೆ ಬುಡಕಟ್ಟು ಜನರ ಶ್ರೀಮಂತ ಸಂಸ್ಕೃತಿಯನ್ನು ಮಿಳಿತಗೊಳಿಸುವ ಪ್ರಯತ್ನವನ್ನೂ ಅವರು ಮಾಡಿದರು. 1987ರಲ್ಲಿ ರಶ್ಯದಲ್ಲಿ ನಡೆದ ಭಾರತೀಯ ಉತ್ಸವದಲ್ಲಿ ರಾಮ್ದಯಾಳ್ ತಂಡವು ಅದ್ಭುತವಾದ ಜಾನಪದ ನೃತ್ಯಪ್ರದರ್ಶನ ನೀಡಿ ಜಾಗತಿಕ ಮನ್ನಣೆಯನ್ನು ಗಳಿಸಿತು.

ಬುಡಕಟ್ಟು ಜನಾಂಗಗಳಿಗೆ ಅವುಗಳದ್ದೇ ಆದ ವಿಶಿಷ್ಟವಾದ ಹಾಗೂ ಅನನ್ಯವಾದ ಸಂಸ್ಕೃತಿಯಿದೆ. ಮಾತ್ರವಲ್ಲ, ಅದು ಭಾರತದ ವೈದಿಕ ಸಂಸ್ಕೃತಿಯಿಂದ ಸಂಪೂರ್ಣ ಭಿನ್ನವಾಗಿದೆ ಯೆಂದು ರಾಮ್ದಯಾಳ್ ಪ್ರತಿಪಾದಿಸಿದ್ದರು. ಕೇಸರಿ ಸಂಘಟನೆಗಳು ಬ್ರಾಹ್ಮಣ್ಯವಾದಿ ಆಚಾರವಿಚಾರಗಳನ್ನು, ಸಂಸ್ಕೃತಿಯನ್ನು ಬುಡಕಟ್ಟು ಜನರ ಮೇಲೆ ಹೇರುವುದನ್ನು ಅವರು ಪ್ರಬಲವಾಗಿ ವಿರೋಧಿಸಿದ್ದರು.
ಯಶಸ್ವಿ ಶಿಕ್ಷಕನಾಗಿ ಹಾಗೂ ಸಾಂಸ್ಕೃತಿಕ ಸಂಸ್ಥೆಗಳ ಸ್ಥಾಪಕನಾಗಿ ರಾಮ್ದಯಾಳ್ ತನ್ನ ಜೀವನದುದ್ದಕ್ಕೂ ಬುಡಕಟ್ಟು ಜನರ ಏಳಿಗೆಗಾಗಿ ಗಣನೀಯ ಕೊಡುಗೆ ಸಲ್ಲಿಸಿದರು. ಭಾರತೀಯ ಬುಡಕಟ್ಟು ಭಾಷೆಗಳು ಹಾಗೂ ಸಾಹಿತ್ಯದ ಬಗ್ಗೆ ಅವರು ನಡೆಸಿದ ವಿಸ್ತೃತ ಅಧ್ಯಯನವು ಅವರಿಗೆ ಅಂತಾರಾಷ್ಟ್ರೀಯ ಗೌರವವನ್ನು ಗಳಿಸಿಕೊಟ್ಟಿತು.ಬುಡಕಟ್ಟು ಜನರ ಅಭ್ಯುದಯವು ಕೇವಲ ಅವರ ಸಾಂಸ್ಕೃತಿಕ ಪುನರುತ್ಥಾನದಿಂದ ಮಾತ್ರ ಸಾಧ್ಯವಿಲ್ಲ. ಅವರಿಗೆ ರಾಜಕೀಯ ಅವಕಾಶವೂ ದೊರೆಯಬೇಕು ಎಂಬ ದೂರದೃಷ್ಟಿಯನ್ನು ದಯಾಳ್ ಹೊಂದಿದ್ದರು. ಪ್ರತ್ಯೇಕ ಜಾರ್ಖಂಡ್ ರಾಜ್ಯದ ಸ್ಥಾಪನೆಗಾಗಿ ನಡೆದ ಚಳವಳಿಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ರಾಜ್ಯಸಭಾ ಸದಸ್ಯರಾಗಿ ಸಂಸತ್ ಭವನದ ಮೆಟ್ಟಲೇರಿದ ದಯಾಳ್, ಅಲ್ಲಿಯೂ ಬುಡಕಟ್ಟು ಜನರ ಹಕ್ಕುಗಳ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ್ದರು. ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯರಾಗಿಯೂ ಅವರು ಒಳ್ಳೆಯ ಹೆಸರು ಗಳಿಸಿದ್ದರು. ಅವರು ಬುಡಕಟ್ಟು ಜನರ ಸಂಸ್ಕೃತಿ, ಕಲೆ,ಸಾಹಿತ್ಯದ ಕುರಿತಾಗಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲೂ ಮುಂಡಾರಿ ಬುಡಕಟ್ಟು ಪಂಗಡದ ಜಾನಪದ ಹಾಡುಗಳ ಕುರಿತು ಅವರು ಬರೆದ ಕೃತಿಯು ಭಾರೀ ಮೆಚ್ಚುಗೆಯನ್ನು ಪಡೆದಿದೆ.

ಜಾರ್ಖಂಡ್ನ ಬುಡಕಟ್ಟು ಸಂಗೀತ ಹಾಗೂ ನೃತ್ಯಕ್ಕೆ ರಾಮ್ದಯಾಳ್ ನೀಡಿದ ಕೊಡುಗೆಯನ್ನು ಪರಿಗಣಿಸಿ, ಅವರಿಗೆ 2007ರಲ್ಲಿ ಸಂಗೀತ ನಾಟಕ್ ಅಕಾಡಮಿ ಪ್ರಶಸ್ತಿಯು ಒಲಿದು ಬಂದಿತ್ತು. ಘೋರವಾದ ಕ್ಯಾನ್ಸರ್ ಕಾಯಿಲೆ ಕಾಡುತ್ತಿದ್ದರೂ, ಅವರಲ್ಲಿ ಚೇತನ ಮಾತ್ರ ಬತ್ತಿರಲಿಲ್ಲ. ತೀರಾ ಇತ್ತೀಚೆಗಷ್ಟೇ ಅವರು ತನ್ನ 150 ಸದಸ್ಯ ಬಲದ ಜಾನಪದ ತಂಡದಿಂದ ಮುಂಬೈ ಹಾಗೂ ದಿಲ್ಲಿಯಲ್ಲಿನ ವಿಶ್ವ ಸಾಮಾಜಿಕ ವೇದಿಕೆಯಲ್ಲಿ ಜಾನಪದ ಕಲಾವೈಭವವನ್ನು ಪ್ರದರ್ಶಿಸಿದ್ದರು. ರಾಮ್ದಯಾಳ್ ಭೌತಿಕವಾಗಿ ಮರೆಯಾಗಿರಬಹುದು. ಆದರೆ ಜಾರ್ಖಂಡ್ನ ಜಾನಪದ ಶ್ರೀಮಂತಿಕೆಯನ್ನು ವಿಶ್ವಕ್ಕೆ ಪರಿಚಯಿಸಿದ ಅವರು ಆ ರಾಜ್ಯದ ಬುಡಕಟ್ಟು ಜನತೆಯ ಹೃದಯದಲ್ಲಿ ಶಾಶ್ವತವಾದ ಸ್ಥಾನ ಅಲಂಕರಿಸಿದ್ದಾರೆ.
-ರಾನಾ

ಕಾಮೆಂಟ್‌ಗಳಿಲ್ಲ: