ಗುರುವಾರ, ಸೆಪ್ಟೆಂಬರ್ 29, 2011

ಜ್ಞಾನಪೀಠ ಸಂಭ್ರಮ ಮತ್ತು ಜಾನಪದ ಓದಿದವರ ಸಂಕಟ

ಈ ಬರಹ ಇಂದಿನ (29 ಸೆಪ್ಟಂಬರ್ 2011) ಪ್ರಜಾವಾಣಿ ಸಂಗತದಲ್ಲಿ ಪ್ರಕಟವಾಗಿದೆ. ಮೊದಲನೆಯದಾಗಿ ಈ ಬರಹವನ್ನು ಪ್ರಕಟಿಸಿದ್ದಕ್ಕಾಗಿ ಸಂಪಾದಕರಿಗೆ ಕೃತಜ್ಞತೆಗಳು. ಈ ಬರಹ ಪ್ರಭಾವ ಬೀರಿ ಜಾನಪದ ಎಂ,ಎ ಓದಿದ ವಿದ್ಯಾರ್ಥಿಗಳಿಗೆ ಒಂದು ರೀತಿಯ ಸಹಾಯವಾಗಬಹುದೆನ್ನುವುದು ಕನ್ನಡ ಜಾನಪದ ಬ್ಲಾಗ್ ನ ಆಶಯ. ಬ್ಲಾಗ್ ಓದಿಗಾಗಿ ಈ ಬರಹವನ್ನು ಇಲ್ಲಿ ಪ್ರಕಟಿಸಲಾಗಿದೆ
.

ಕನ್ನಡಕ್ಕೆ ಪ್ರತಿಷ್ಠಿತ ಎಂಟನೇ ಜ್ಞಾನಪೀಠ ಪ್ರಶಸ್ತಿ ಚಂದ್ರಶೇಖರ ಕಂಬಾರರಿಗೆ ಬಂದಿದೆ. ಇದು ಜಾನಪದ ಪ್ರತಿಭೆಗೆ ಸಂದ ಗೌರವವೆಂದು, ಅಲಕ್ಷಿತ ಸಮುದಾಯದ ತಿಳಿವಿಗೆ ಸಿಕ್ಕ ಮರ್ಯಾದೆಯೆಂದು ಚರ್ಚೆಯಾಗುತ್ತಿದೆ. ಇದು ನಿಜ ಕೂಡ. ಕರ್ನಾಟಕದಲ್ಲಿ ಮೊದಲಿನಿಂದಲೂ ಮತ್ತು ಜಾನಪದ ವಿಶ್ವವಿದ್ಯಾಲಯ ಆದಂದಿನಿಂದಲೂ ಜಾನಪದದ ಬಗೆಗಿನ ಸಂಭ್ರಮಾಚರಣೆಯೂ ಸಹಜವಾಗಿದೆ. ಇಂದು ಕರ್ನಾಟಕದ ಯಾವುದೇ ಕ್ಷೇತ್ರದ ಆಲೋಚನೆಗೆ ಜಾನಪದದ ಪ್ರತಿಕ್ರಿಯೆ ಏನಿದೆ ಎಂದು ನೋಡುವ ಹಾಗೆ ಜಾನಪದ ಕ್ಷೇತ್ರ ಪ್ರಭಾವ ಬೀರಿದೆ. ಈ ಎಲ್ಲವುಗಳನ್ನು ನೋಡಿದರೆ ಜಾನಪದದ ಬಗೆಗೆ ಸಂಭ್ರಮ ಪಡಲಿಕ್ಕೆ ಹಲವು ಕಾರಣಗಳಿವೆ.

ಆದರೆ ಜಾನಪದವನ್ನು ಒಂದು ಶಿಸ್ತನ್ನಾಗಿ ಸ್ನಾತಕೋತ್ತರ ಪದವಿ ಪಡೆದ ವಿಧ್ಯಾರ್ಥಿಗಳ ಪಾಲಿಗೆ ಜಾನಪದ ಎನ್ನುವುದು ಸಂಕಟವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕರ್ನಾಟಕದಲ್ಲಿ ಮೈಸೂರು ವಿವಿ, ಕರ್ನಾಟಕ ವಿವಿ, ಗುಲ್ಬರ್ಗಾ ವಿವಿಗಳಲ್ಲಿ ಜಾನಪದ ಎಂ.ಎ ತರಗತಿಗಳು ನಡೆಯುತ್ತಿವೆ. ಇಲ್ಲಿ ಜಾನಪದ ಎಂ.ಎ ಮಾಡಿಕೊಂಡು ವಿಧ್ಯಾರ್ಥಿಗಳು ಹೊರಬರುತ್ತಾರೆ. ಅಂತವರು ಹೊರ ಬಂದ ನಂತರ ಹುದ್ದೆ ಹಿಡಿಯುವ ದಾರಿಯೇ ಮಂಕಾದಂತಾಗಿದೆ. ಪಿ.ಯು ಕಾಲೇಜಿಗೆ ಕನ್ನಡಕ್ಕೆ ಜಾನಪದ ಎಂ.ಎ ಮಾಡಿದವರನ್ನು ಅರ್ಹರನ್ನಾಗಿಸುವುದು ಬಿಟ್ಟರೆ, ಪದವಿ ತರಗತಿಗಳಿಗೆ, ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಾಪಕ ಹುದ್ದೆಗಳಿಗೆ ಜಾನಪದ ಎಂ.ಎ ಮಾಡಿದವರನ್ನು ಅನರ್ಹರನ್ನಾಗಿ ಪರಿಗಣಿಸಲಾಗುತ್ತದೆ.

ಕಾರಣ ಕರ್ನಾಟಕದಲ್ಲಿ ಕನ್ನಡದ ಜತೆ ಜಾನಪದವನ್ನು ಆಂಶಿಕವಾಗಿ ಸೇರಿಸಿ, ಅವೆರಡನ್ನೂ ಸಂಯೋಜಿಸಲಾಗಿದೆ. ಹಾಗಾಗಿ ಕನ್ನಡ ಮತ್ತು ಜಾನಪದ ಇಲ್ಲಿ ಬೇರೆ ಬೇರೆಯಲ್ಲ. ಆದರೆ ಪದವಿ ಕನ್ನಡ ಉಪನ್ಯಾಸಕ ಹುದ್ದೆಗಳಿಗೆ ಕನ್ನಡ ಎಂ.ಎ ಮಾಡಿದವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಾಗುತ್ತಿದೆ. ಕಾರಣ ಯು.ಜಿ.ಸಿ ನಿಯಮದ ಪ್ರಕಾರ ಜಾನಪದ ಮತ್ತು ಕನ್ನಡ ಬೇರೆ ಬೇರೆ ವಿಷಯಗಳು. ಇವುಗಳಿಗೆ ಪ್ರತ್ಯೇಕ ಎನ್.ಇ.ಟಿ ಪರೀಕ್ಷೆಗಳೂ ಇವೆ. ಯುಜಿಸಿ ಪ್ರಕಾರ ಜಾನಪದ ಓದಿದವರು ಕನ್ನಡ ವಿಷಯಕ್ಕೆ ಅಧ್ಯಾಪಕರಾಗಲು ಅನರ್ಹರು. ಆದರೆ ಕರ್ನಾಟಕದಲ್ಲಿ ಜಾನಪದವನ್ನು ಕನ್ನಡದ ಪಠ್ಯಕ್ರಮದಲ್ಲಿ ತೂರಿಸಿ ಅದೊಂದು ಸ್ವತಂತ್ರ ವಿಷಯವಾಗದಂತೆ ಮಾಡಲಾಗಿದೆ. ಹಾಗಾಗಿ ಇಲ್ಲಿನ ಪದವಿ ತರಗತಿಯ ಕನ್ನಡ ಅಧ್ಯಾಪಕರ ಹುದ್ದೆಗೆ ಜಾನಪದ ಎಂ.ಎ ಆದವರನ್ನೂ ಅರ್ಹರನ್ನಾಗಿ ಮಾಡಬೇಕಾಗಿದೆ. ಇಲ್ಲವೆ ಜಾನಪದವನ್ನು ಪ್ರತ್ಯೇಕ ವಿಷಯವಾಗಿ ಪಿ.ಯು ಮತ್ತು ಪದವಿ ತರಗತಿಗಳಿಗೆ ಹೊಸದಾಗಿ ಸೇರಿಸಬೇಕಿದೆ.

ಕನ್ನಡ ಮಾಧ್ಯಮದಲ್ಲಿ ಕರ್ನಾಟಕದ ಜಾನಪದವನ್ನು ಓದಿದವರಿಗೆ, ಇಂಗ್ಲೀಷಿನಲ್ಲಿ ನೆಟ್ ಪರೀಕ್ಷೆ ಬರೆದು ಉತ್ತೀರ್ಣವಾಗುವುದೂ ಕೂಡ ಕಷ್ಟವೆ. ಕಾರಣ ಕರ್ನಾಟಕದ ಜಾನಪದ ಸಂಗತಿಗಳನ್ನು ಓದಿದವರಿಗೆ, ನೆಟ್ ಪರೀಕ್ಷೆಯಲ್ಲಿ ಜಾಗತಿಕ ಜಾನಪದ, ಭಾರತದ ಜಾನಪದದ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಇವುಗಳಿಗೆ ಇಂಗ್ಲೀಷಿನಲ್ಲಿಯೇ ಉತ್ತರಿಸಬೇಕಾಗುತ್ತದೆ. ಈ ಪ್ರಶ್ನೆ ಪತ್ರಿಕೆಯ ಎದುರು ಕನ್ನಡ ಜಾನಪದ ಓದಿದ ವಿಧ್ಯಾರ್ಥಿಗಳು ಕಕ್ಕಾಬಿಕ್ಕಿಯಾಗುತ್ತಾರೆ. ಹೀಗಿರುವಾಗ ನೆಟ್ ಪಾಸ್ ಮಾಡುವುದು ಕೂಡ ದೂರದ ಕನಸು. ಬೇರೆ ವಿಷಯಗಳಿಗಿರುವ ಈ ಸಮಸ್ಯೆಯನ್ನು ಆಧರಿಸಿಯೇ ಮೈಸೂರು ವಿಶ್ವವಿದ್ಯಾಲಯ ಸ್ಲೆಟ್ ಪರೀಕ್ಷೆಯನ್ನು ಕೆಲ ತಿಂಗಳುಗಳ ಹಿಂದೆ ಕಾಲ್ ಮಾಡಿತ್ತು. ಜಾನಪದ ಎಂ.ಎ ಮೊದಲು ಆರಂಭಗೊಂಡ ಮೈಸೂರು ವಿವಿಯೇ ಸ್ಲೆಟ್ ಪರೀಕ್ಷೆಯಲ್ಲಿ ಜಾನಪದ ವಿಷಯವನ್ನು ಕೈಬಿಡಲಾಗಿದೆ. ಇದೊಂದು ವಿಪರ್ಯಾಸ.

ಕನ್ನಡ ಎಂ.ಎ ಮಾಡಿದವರು ಅರೆಕಾಲಿಕ ಉಪನ್ಯಾಸಕರಾಗಿಯೂ ತಮ್ಮ ನಿರುದ್ಯೋಗ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಮುಂದೂಡುತ್ತಿದ್ದಾರೆ. ಆದರೆ ಜಾನಪದ ಎಂ.ಎ ಮಾಡಿದವರಿಗೆ ಹೀಗೆ ಅರೆಕಾಲಿಕ ಉಪನ್ಯಾಸಕರಾಗಿ ದುಡಿಯುವ ಅವಕಾಶಗಳೂ ಇಲ್ಲ. ಈಚೆಗೆ ವಿಜಯನಗರ ಕೃಷ್ಟದೇವರಾಯ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಕನ್ನಡ ಉಪನ್ಯಾಸಕ ಹುದ್ದೆಗೆ ಅರ್ಜಿ ಹಾಕಿದ ಮಿತ್ರರೊಬ್ಬರನ್ನು ಸಂದರ್ಶನಕ್ಕೂ ಅನರ್ಹಗೊಳಿಸಿತು. ವಿಶ್ವವಿದ್ಯಾಲಯಗಳೂ ಕೂಡ ಜಾನಪದ ಓದಿದವರನ್ನು ಕನ್ನಡ ಅಧ್ಯಾಪಕ ಉದ್ದೆಗೆ ಪರಿಗಣಿಸುತ್ತಿಲ್ಲ. ಈ ಸಮಸ್ಯೆಯನ್ನು ಅರಿತು, ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಎಂ.ಎ ಆರಂಭಿಸಿ, ಎರಡು ವರ್ಷದ ನಂತರ ನಿಲ್ಲಿಸಲಾಯಿತು.

ಈ ಸಮಸ್ಯೆ ಇಂದು ನಿನ್ನೆಯದಲ್ಲ. ೧೯೬೬ ರಲ್ಲಿ ಜಾನಪದವನ್ನು ಮೈಸೂರು ವಿವಿಯಲ್ಲಿ ಕನ್ನಡ ಎಂ.ಎ ನಲ್ಲಿ ಒಂದು ವಿಷಯವನ್ನಾಗಿ ಸೇರಿಸಿದರು. ಅದು ಈಗಲೂ ಇದೆ. ಹೀಗೆ ಕನ್ನಡದಲ್ಲಿ ಒಂದು ವಿಷಯವಾಗಿ ಓದುವವರಿಗೆ ಸಮಸ್ಯೆಯಲ್ಲದ್ದು, ಪ್ರತ್ಯೇಕ ಜಾನಪದ ಎಂ.ಎ ಮಾಡಿದವರನ್ನು ಸಮಸ್ಯೆಯಾಗಿ ಕಾಡತೊಡಗಿದೆ. ಇಂತಹ ಸಮಸ್ಯೆಯನ್ನು ಜಾನಪದ ಎಂ.ಎ ಮಾಡಿದ ವಿಧ್ಯಾರ್ಥಿಗಳು ಮೂರು ದಶಕಗಳಿಂದ ಅನುಭವಿಸುತ್ತಲೇ ಬಂದಿದ್ದಾರೆ. ಈ ಸಮಸ್ಯೆ ಕುರಿತು ಕರ್ನಾಟಕದ ಯಾವುದೇ ಜಾನಪದ ವಿದ್ವಾಂಸರು ಮಾತನಾಡದಿರುವುದೊಂದು ವಿಪರ್ಯಾಸ. ಜಾನಪದದ ಕುರಿತು ಸಂಭ್ರಮಿಸುವವರಿಗೆ, ಅದೇ ಜಾನಪದವನ್ನು ಒಂದು ಶಿಸ್ತನ್ನಾಗಿ ಓದಿದವರ ಸಂಕಟ ಅರ್ಥವಾಗದಿರುವುದು ಒಂದು ವ್ಯಂಗ್ಯ. ಜಾನಪದದಲ್ಲಿ ಪಿಹೆಚ್‌ಡಿ ಮಾಡಿದವರಿಗೆ ಜಾನಪದ ಅಕಾಡೆಮಿಯು ಪ್ರತಿ ವರ್ಷ ನೀಡುವ ಸಂಶೋಧನ ಫೆಲೋಶಿಪ್‌ನ್ನೂ ಈ ವರ್ಷ ನಿರಾಕರಿಸಿದೆ. ವಯಕ್ತಿಕವಾಗಿ ನಾನು ಜಾನಪದ ಎಂ.ಎ ಮತ್ತು ಪಿಹೆಚ್.ಡಿ ಮಾಡಿ, ಈ ಸಮಸ್ಯೆಗಳಿಗೆ ಎದುರಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ.

ಜಾನಪದವನ್ನು ಒಂದು ಸಂವೇದನೆಯನ್ನಾಗಿ ಸೃಜನಶೀಲ ಸಾಹಿತ್ಯದಲ್ಲಿ ಶಕ್ತಿಯುತವಾಗಿ ಬಳಸಿಕೊಂಡು ಜ್ಞಾನಪೀಠ ಪ್ರಶಸ್ತಿ ಪಡೆದ ಕಂಬಾರರು ಮತ್ತು ಜಾನಪದ ವಿದ್ವಾಂಸರು, ಸಂಸ್ಕೃತಿ ಚಿಂತಕರು ಈ ಕುರಿತು ಆಲೋಚಿಸಬೇಕಿದೆ. ಜಾನಪದ ವಿಶ್ವವಿದ್ಯಾಲಯ ಇವರುಗಳಿಗೆ, ಹುದ್ದೆಗಳ ಆಯ್ಕೆಯಲ್ಲಿ ಮೊದಲ ಆಧ್ಯತೆಯನ್ನು ಕಡ್ಡಾಯಗೊಳಿಸಬೇಕಿದೆ. ಅಂತೆಯೇ ಇವರ ಪರವಾದ ಹಕ್ಕೊತ್ತಾಯಗಳಿಗೂ ವಿವಿ ದ್ವನಿಯಾಗುವ ಅಗತ್ಯವಿದೆ.

ಬೆಳಗಲ್ಲು ವೀರಣ್ಣನವರ ತೊಗಲು ಗೊಂಬೆ ಮೇಳ ಜರ್ಮನಿಗೆ




ಜನಪದ ಕಲೆಯೊಂದು ಬೇರೆ ದೇಶಕ್ಕೆ ಹೋಗಿ ತಮ್ಮ ಕಲಾ ಪ್ರದರ್ಶನ ಮಾಡುವುದು ಸಾಹಸವೆ ಸರಿ. ಇದು ಭಾರತದ ಜಾನಪದದ ಜನಸಾಮಾನ್ಯರ ಮುಖವೊಂದನ್ನು ಜಾಗತಿಕವಾಗಿ ಅನಾವರಣಗೊಳಿಸಿದಂತಾಗುತ್ತದೆ. ಹಿರಿಯ ರಂಗಭೂಮಿ ಹಾಗು ಜಾನಪದ ಕಲಾವಿದ ಜಾನಪದಶ್ರೀ ಬೆಳಗಲ್ಲು ವೀರಣ್ಣ ಅವರ ನೇತೃತ್ವದ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳದ ೮ ಜನರ ತಂಡವು ಅಕ್ಟೋಬರ್ ೬ರಂದು ರಾಮಾಯಣದ ಪಂಚವಟಿ ಪ್ರಸಂಗದ ಸೀತಾಪಹರಣದ ರೂಪಕದ ತೊಗಲುಗೊಂಬೆ ಪ್ರದರ್ಶನ ನೀಡಲು ಜರ್ಮನಿ ದೇಶಕ್ಕೆ ತೆರಳಲಿದೆ.

ಜರ್ಮನಿಯ ಸ್ಟುಟ್‌ಗಾರ್ಟ್ ನಲ್ಲಿರುವ ಲಿಂಡೆನ್ ಮ್ಯೂಸಿಯಂನ ಅಸಿಸ್ಟೆಂಟ್ ಕ್ಯುರೇಟರ್ ಕು. ಸುಸಾನ್ ಫಾಲರ್ ಅವರ ಅಹ್ವಾನದ ಮೇರೆಗೆ ತಮ್ಮ ನೇತೃತ್ವದ ತಂಡವು ಅಕ್ಟೋಬರ್ ೬ಕ್ಕೆ ಬಳ್ಳಾರಿಯಿಂದ ಪ್ರಯಾಣ ಬೆಳಸಲಿದೆ. ಅಕ್ಟೋಬರ್ ೭ರಂದು ಬೆಳಿಗ್ಗೆ ೬.೧೫ಕ್ಕೆ ಬೆಂಗಳೂರಿನ ದೇವನಹಳ್ಳಿ ಅಂತರಾಷ್ಟೀಯ ವಿಮಾನ ನಿಲ್ದಾಣದಿಂದ ದೆಹಲಿಯ ಮಾರ್ಗವಾಗಿ ಜರ್ಮನಿಯ ಫ್ರಾಂಕ್ ಫರ್ಟ್ ತಲುಪಲಿದೆ .


ಅಕ್ಟೋಬರ್ ೯ರಂದು ಲಿಂಡೆನ್ ಮ್ಯೂಸಿಯಂನ ಸಭಾಂಗಣ ಸ್ಟುಟ್‌ಗಾರ್ಟ್‌ನಲ್ಲಿ ಪ್ರದರ್ಶನ ಹಾಗು ಅಕ್ಟೋಬರ್ ೧೦ರಂದು ಇಂಡೊಜರ್ಮನ್ ಸೊಸೈಟಿ ಆಯೋಜಿಸಿರುವ ನ್ಯುರುಂಬರ್ಗ್ ನಲ್ಲಿ ಪ್ರದರ್ಶನಗಳನ್ನು ನೀಡಲಿದ್ದು ಅಕ್ಟೋಬರ್ ೧೧ರಿಂದ ೧೪ರವರೆಗೆ ತಂಡವು ನ್ಯುರುಂಬರ್ಗ್‌ನಲ್ಲಿ ವಾಸ್ತವ್ಯಮಾಡಲಿದ್ದು ಸೂಚಿಸಿದ ದಿನಾಂಕಗಳಂದು ಪ್ರದರ್ಶನಗಳು ಏರ್ಪಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಅಕ್ಟೋಬರ್ ೧೫ರಂದು ’ಕೊಲ್ನ್’ ಎಂಬ ನಗರದಲ್ಲಿ ಹಾಗು ಅಕ್ಟೋಬರ್ ೧೬ರಂದು ಮೇಂಜ್ ಎಂಬ ನಗರದಲ್ಲಿ ಇಂಡೋಜರ್ಮನ್ ಸೊಸೈಟಿ ಇವರ ಆಯೋಜನೆಯಿಂದ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳವು ಪ್ರದರ್ಶನಗಳನ್ನು ಪ್ರದರ್ಶಿಸಲಿದೆ.

ಈ ಸಂಧರ್ಭದಲ್ಲಿ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳದ ಸದಸ್ಯರಾದ ಶ್ರೀಮತಿ ಮಹಾಲಿಂಗಮ್ಮ ಬೆಳಗಲ್ಲು ವೀರಣ್ಣ, ಬಿ.ಕೆ.ಮಹೇಶ್, ಬಿ.ವಿ.ಮಲ್ಲಿಕಾರ್ಜುನ, ಬಿ.ವಿ.ಪ್ರಕಾಶ್, ಬಿ.ವಿ. ಹನುಮಂತ, ಎರ್ರಿಸ್ವಾಮಿ, ಕೆ.ಹೊನ್ನುರುಸ್ವಾಮಿ ಅವೆರೆಲ್ಲಾ ಸಂಭ್ರಮ ಪಡುತ್ತಿದ್ದಾರೆ.

ಕನ್ನಡ ಜಾನಪದ ಬ್ಲಾಗ್ ವೀರಣ್ಣ ಅವರ ತಂಡದ ವಿದೇಶಿ ಪ್ರವಾಸಕ್ಕೆ ಶುಭ ಹಾರೈಸುತ್ತದೆ. ಅಂತೆಯೇ ಇಂತದ್ದೊಂದು ಅವಕಾಶ ಸಿಕ್ಕದ್ದಕ್ಕಾಗಿ ಅಭಿನಂದಿಸುತ್ತದೆ.

ಮಂಗಳವಾರ, ಸೆಪ್ಟೆಂಬರ್ 20, 2011

ಜಾನಪದ ಕಂಬಾರರಿಗೆ ಅಭಿನಂದನೆಗಳು



-ಅರುಣ್


ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಲಬಿಸಿರುವುದು ಕನ್ನಡಿಗರಿಗೆಲ್ಲಾ ಸಂತಸದ ಸಂಗತಿ. ಅವರು ಜಾನಪದ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗಮನಾರ್ಹವಾದುದು. ಜಾನಪದ ಸಂವೇದನೆ, ಲಯವನ್ನು ತಮ್ಮ ಸೃಜನಶೀಲ ಭಿತ್ತಿಯನ್ನಾಗಿಸಿಕೊಂಡದ್ದು ಒಂದು ಬಗೆಯಾದರೆ, ಜಾನಪದ ಅಧ್ಯಯನಕ್ಕೂ ಒಂದು ಭಿನ್ನ ನೆಲೆಯನ್ನು ಒದಗಿಸುವುದರಲ್ಲಿ ಅವರ ಶ್ರಮ ಗೌರವಿಸುವಂಥದ್ದು. ಜಾನಪದ ವಿಶ್ವಕೋಶವನ್ನು ಸಂಪಾದನೆ ಮಾಡಿ ಜಾನಪದ ಚಿಂತನೆಯ ಜಾಗತಿಕ ಹರವನ್ನು ಪರಿಚಯಿಸುವ ಪ್ರಯತ್ನ ಮಾಡಿದರು. ನಂತರ ಬಣ್ಣೀಸಿ ಹಾಡವ್ವ ನನ ಬಳಗ, ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಬಯಲಾಟಗಳು, ಸಂಗ್ಯಾಬಾಳ್ಯಾ, ಲಕ್ಷಪತಿ ರಾಜನ ಕಥೆ, ಮಾತಾಡೋ ಲಿಂಗವೇ, ಬೇಡರ ಹುಡುಗ ಮತ್ತು ಗಿಳಿ, ಕಾಸಿಗೊಂದು ಸೇರು, ನಮ್ಮ ಜಾನಪದ, ದೇಸಿಚಿಂತನೆ ಮುಂತಾದ ಜಾನಪದ ಸಂಗ್ರಹ, ಸಂಪಾದನೆ, ಸಂಶೋಧನಾತ್ಮಕ ಕೃತಿಗಳನ್ನು ಜಾನಪದ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.


ಚಂದ್ರಶೇಖರ ಕಂಬಾರರು, ’ಜನಪದ ಸಾಹಿತ್ಯ ಓದಿ ಕಲಿಯುವಂತಥದ್ದಲ್ಲ. ಕೇಳಿಯೇ ಕಲಿಯುವಂಥದ್ದು, ತೊಂಡಿತನ ಇದರ ಜೀವ, ಬರವಣಿಗೆಯ ಸ್ಪರ್ಶವಾದರೆ ಸಾಕು ಇದರ ಪರಂಪರೆ ಸತ್ತೇ ಹೋಗುವಂತದ್ದು’ ಎನ್ನುವ ನಿಲುವು ತಾಳುತ್ತಾರೆ. ಈ ನಿಲುವಿನ ಮೂಲಕ ಜಾನಪದಕ್ಕೆ ಶಿಕ್ಷಣ ವಿರೋಧ ಎನ್ನುವ ದ್ವನಿ ಇದೆ. ಅಂದರೆ ಜಾನಪದ ಅನ್ನುವಂಥದ್ದು ಬದಲಾಗಬಾರದು ಎನ್ನುವ ನಿಲುವು ಕಂಬಾರರದು. ಈ ನಿಲುವು ಪ್ರಶ್ನಾರ್ಹ. ಕಾರಣ ಹಳ್ಳಿ ಜನ ಶಿಕ್ಷಣಕ್ಕೆ ತೆರೆದುಕೊಂಡು ಆಧುನಿಕ ಜಗತ್ತಿಗೆ ತೆರೆದುಕೊಳ್ಳಬಾರದು ಎನ್ನುವ ಕಡೆ ಈ ಮಾತು ಚಲಿಸುತ್ತದೆ. ಹೊಸ ಕಾಲ ಹೊಸ ಸಂಗತಿಗಳ ಹೊಟ್ಟೆಯೊಳಗಿಂದಲೂ ಜಾನಪದ ಹುಟ್ಟುತ್ತಿದೆ ಎನ್ನುವ ಕಡೆಯೂ ಕಂಬಾರರು ಚಲಿಸಬೇಕಿದೆ.


ಕಂಬಾರರ ಒಟ್ಟಾರೆ ಚಿಂತನೆಯಲ್ಲಿ ಪ್ರಗತಿವಿರೋಧಿ ಸನಾತನ ಧೋರಣೆಯೊಂದಿದೆ ಎನ್ನುವ ವಿಮರ್ಶೆಯೂ ಇದೆ. ಉದಾ ಚಕೋರಿ ಕಾವ್ಯದಲ್ಲಿ ಚಲನಶೀಲ ಪಾತ್ರವೊಂದು ಶಿಲೆಯಾಗುವುದೂ ಇದನ್ನೇ ದ್ವನಿಸುತ್ತದೆ. ಸಂಗ್ಯಾಬಾಳ್ಯ ಮುಂತಾದ ಜಾನಪದ ಪಠ್ಯಗಳನ್ನು ಕಂಬಾರರು ತಮ್ಮ ಸ್ವಂತ ರಚನೆಯೆಂಬತೆ ಬಿಂಬಿಸಿಕೊಂಡರು, ಜಾನಪದವನ್ನು ಬಳಸಿಕೊಂಡು ಪ್ರತಿಯಾಗಿ ಜಾನಪದಕ್ಕೆ ಏನನ್ನು ನೀಡಿದರು ? ಎನ್ನುವ ಚರ್ಚೆಗಳೂ ಇವೆ. ಇರಲಿ ಇಂತಹ ಮಿತಿಗಳ ಬಗ್ಗೆ ಚರ್ಚೆ ಮಾಡುತ್ತಲೇ ನಾವು ಕಂಬಾರರನ್ನು ಸ್ವೀಕರಿಸಬೇಕಿದೆ. ಈ ಮಿತಿಗಳ ಮಧ್ಯೆಯೂ ಕಂಬಾರರ ಜಾನಪದ ಸಂವೇದನೆಯ ಅಭಿವ್ಯಕ್ತಿ ನೆಲೆ ಜಾನಪದಕ್ಕೆ ಹೊಸ ಆಯಾಮ ನೀಡಿದ್ದನ್ನಂತು ಮರೆಯುವಂತಿಲ್ಲ. ಕನ್ನಡ ವಿಶ್ವವಿದ್ಯಾಲಯವನ್ನು ದೇಸಿ ಚಿಂತನೆಯ ನಲೆಯಲ್ಲಿ ರೂಪಿಸಲು ಪ್ರಯತ್ನಿಸಿದ್ದೂ ಕೂಡ ಚಾರಿತ್ರಿಕವಾಗಿ ಮಹತ್ವದ ಸಂಗತಿ.


ಪ್ರೊ.ಚಂದ್ರಶೇಖರ ಕಂಬಾರರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಬಿಸಿದ ಈ ಸಂದರ್ಭದಲ್ಲಿ ಕನ್ನಡ ಜಾನಪದ ಬ್ಲಾಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ನಿರುಮ್ಮಳ ಶೈಲಿಯ ಕವಿ ಕಂಬಾರ: ರಾಜೇಂದ್ರ ಚೆನ್ನಿ

ಡಾ.ರಾಜೇಂದ್ರ ಚೆನ್ನಿ




ಕಂಬಾರರ ಸಮಗ್ರ ಕಾವ್ಯವನ್ನು ಕಾಲಾನುಕ್ರಮವಾಗಿ ಓದುತ್ತಾ ಹೋದರೆ ಅದು ಮೊದಲಿನಿಂದ ತನ್ನದೆ ಆದ ಏಕರೂಪವನ್ನು ಹೊಂದಿ ಅದರೊಳಗೆಯೆ ಶ್ರೀಮಂತವಾಗುತ್ತ, ಸಂಕೀರ್ಣವಾಗುತ್ತ ಬಂದ ಕಾವ್ಯವಲ್ಲವೆಂದು ಅನ್ನಿಸುತ್ತದೆ. ಅಂದರೆ ಈಗ ನಾವು ಕಂಬಾರರ ಕಾವ್ಯ ಎಂದು ಖಚಿತವಾಗಿ ಗುರುತಿಸುವ ಕಾವ್ಯವನ್ನು ಅವರು ಅನೂಚಾನವಾಗಿ ಬರೆದವರಲ್ಲ. ಜಾನಪದ ಕಾವ್ಯದ ಆವರಣವನ್ನು ಅದಕ್ಕೆ ವಿಶಿಷ್ಟವಾಗಿರುವ ಪುರಾಣ-ಕಾವ್ಯದ ಗ್ರಹಿಕೆಗಳನ್ನು ಒಂದೇ ಬಗೆಯಲ್ಲಿ ಬಳಸುತ್ತ ಬಂದ ಕಾವ್ಯವೂ ಅವರದಲ್ಲ. ಉದಾಹರಣೆಗೆ ’ಹೋರಿ’ ಮತ್ತು ’ಹೇಳತೇನ ಕೇಳ’ ಹಾಗೂ ತದನಂತರದ ’ತಕಾರಾರಿನವರು’ ಸಂಗ್ರಹದಲ್ಲಿ ನವ್ಯಶೈಲಿಯ ಪದ್ಯಗಳ ಸಂಖ್ಯೆಯೇ ಹೆಚ್ಚು. ಅಷ್ಟು ಮಾತ್ರವಲ್ಲ ನವ್ಯ ಪರಂಪರೆಗೆ ಹೊಂದಿಕೊಳ್ಳುವ ವಸ್ತು, ಶೈಲಿ ಹಾಗೂ ಧೋರಣೆಗಳು ಈ ಕಾವ್ಯದಲ್ಲಿ ಪ್ರಧಾನವಾಗಿವೆ. ನವ್ಯಕಾವ್ಯಕ್ಕೆ ಹೊರಗಾಗಿರುವ ಕಾವ್ಯದೇವತೆಯನ್ನು ಕಂಬಾರ ಆವಾಹಿಸುತ್ತಾರೆಯಾದರೂ ನವ್ಯದ ಜೊತೆಗಿನ ಅವರ ಒಡನಾಟ ಆತ್ಮೀಯವೂ ಹಾಗೂ ಸಂಕೀರ್ಣವೂ ಆಗಿದೆ. ಇದು ಅವರ ಕಾವ್ಯದಲ್ಲಿ ನಿಷ್ಠೆಯ ಗೊಂದಲವನ್ನು ತೋರಿಸುವುದಿಲ್ಲ. ಬದಲಾಗಿ ಅವರ ಸಂವೇದನೆಯ ಮೂಲ ಸ್ವರೂಪದ ದ್ಯೋತಕವಾಗಿದೆ. ಕಂಬಾರರ ಕಾವ್ಯ ಆಧುನಿಕ ಸಂವೇದನೆಯ ನವ್ಯದ ಹೆಸರನ್ನು ಹೊತ್ತಿರುವ ಅನುಭವ ಶೋಧನೆಯನ್ನೇ ಕೇಂದ್ರವಾಗಿಸಿಕೊಂಡಿರುವ ಕಾವ್ಯ. ಇದು ಅವರ ನಾಟಕಗಳ ಬಗೆಗೂ ನಿಜವಾಗಿದೆ. ಗ್ರೀಕ್ ಪುರಾಣ ಕಥೆಯೊಂದರ ನಾಯಕ ನಾರ್ಸಿಸಸ್‌ನ ಹೆಸರುಳ್ಳ ಅವರ ನಾಟಕ ಭಾಷೆ, ಪ್ರತಿಮೆ ಹಾಗೂ ಲಯಗಳಲ್ಲಿ ಎಷ್ಟು ಜಾನಪದೀಯವಾಗಿದೆಯೋ ಅದರ ಕೇಂದ್ರದಲ್ಲಿರುವ ಆತ್ಮಲೋಲುಪತೆಯ ಶೋಧನೆ, ಆತ್ಮರತಿಯ ಕೌರ್ಯೆ ಹಾಗೂ ದಿಗಿಲುಗಳ ವಿಶ್ಲೇಷಣೆ ಅಪ್ಪಟ ಯುರೋಪಿನ ನವ್ಯಕ್ಕೆ ಅಪರಿಚಿತವೆನ್ನಿಸುವಂಥದ್ದಲ್ಲ.


ಕಂಬಾರರ ಕಾವ್ಯದ ಶಕ್ತಿ ಇರುವುದು ಆಧುನಿಕ ಸಂವೇದನೆಯ ಬಿರುಕುಗಳನ್ನು, ದ್ವಂದ್ವಗಳನ್ನು ಕನ್ನಡ ಜಾನಪದದ ಅಭಿವ್ಯಕ್ತಿ ಕ್ರಮಗಳಿಗೆ ಒಗ್ಗಿಸಿಕೊಂಡಿದ್ದರಲ್ಲಿ. ಅಸ್ತಿತ್ವದ ಸ್ವರೂಪದ ಬಗ್ಗೆ ಆಧುನಿಕ ಸಂವೇದನೆ ರೂಪಿಸಿಕೊಂಡ ಗ್ರಹಿಕೆಗಳು ಅವರ ಕಾವ್ಯದ ಹಾಸುಗಳಾಗಿವೆ. ಅವರ ಮೊದಲ ಸಂಗ್ರಹದಿಂದ ಇತ್ತೀಚಿನ ಕಾದಂಬರಿ ’ಶಿಖರಸೂರ್ಯ’ದವರೆಗೆ ಅಸ್ತಿತ್ವದ ಒಡಕಲುಗಳ ಬಗ್ಗೆ ಅವರ ಚಿಂತನೆ ಸತತವಾಗಿ ಸಾಗಿ ಬಂದಿದೆ. ’ಹೇಳತೇನ ಕೇಳ’ದ ಕಥನವು ಒಂದು ದೃಷ್ಟಿಯಿಂದ ನೋಡಿದರೆ ಸಾವಯವ ಸಂಬಂಧಗಳುಳ್ಳ ಸಮುದಾಯವೊಂದರ ವಿಘಟನೆಯನ್ನು ಕುರಿತಾಗಿದೆ. ’ಯಾರೇನ ಆಡಿದರು ಗಾದೆ ನಾಣ್ಣುಡಿಯಾಗಿ ವಾಡಿಕೆಯಾದ’ ಶಿವಾಪುರದ ನಾಡಿನೊಳಗೆ ಮಾತು, ನಡವಳಿಕೆ, ನೈತಿಕತೆ ಇವೆಲ್ಲವು ಒಂದಕ್ಕೊಂದು ಹೊಂದಿಕೊಂಡು ಒಟ್ಟಾರೆ ಸಮುದಾಯದ ನೆನಪುಗಳು ಸೇರಿ ಸೃಷ್ಟಿಯಾಗಿರುವ ಸಂಪ್ರದಾಯದೊಳಗೆ ಸುರಕ್ಷಿತವಾಗಿವೆ. ಕರಿಯಜ್ಜ, ಪಾರಂಬಿ ಕರಿಯವ್ವ ಇವರು ಈ ಸಂಪ್ರದಾಯದ ಲೌಕಿಕ-ಅಲೌಕಿಕ ಸಂಕೇತಗಳಾಗಿದ್ದಾರೆ. ಸ್ಕೂಲು ಕಟ್ಟುವದಕ್ಕಾಗಿ ಆಲದ ಮರವನ್ನು ಕಡಿದು ಕರಿಯಜ್ಜ ಸಾಯುವುದರೊಂದಿಗೆ ಈ ಸಮುದಾಯದ ವಿಘಟನೆ ಶುರುವಾಗುತ್ತದೆ. ಈ ವಿಘಟನೆಯ ವ್ಯಥೆಯನ್ನೇ ಗೌಡ-ಗೌಡತಿ, ರಾಕ್ಷಸ ಮತ್ತು ರಾಮಗೊಂಡರ ಕಥೆ ಜಾನಪದ ಕಥನಗಳಿಗಿರುವ ಸ್ವಚ್ಫಂದವನ್ನು ಬಳಸಿಕೊಂಡು ಹೇಳುತ್ತದೆ. ಜಕ್ಕಣಿಯರು, ರಾಕ್ಷಸಿ ಇವರೆಲ್ಲ ಅನಾಯಾಸವಾಗಿ ಈ ಕಥೆಯ ವಾಸ್ತವಿಕ ಸ್ತರದಲ್ಲಿ ಪ್ರವೇಶ ಮಾಡುತ್ತಾರೆ. ಸೂಕ್ಷ್ಮವಾಗಿ ನೋಡಿದರೆ ಈ ಅತಿಮಾನುಷ ಪ್ರತಿಮೆಗಳು ಅಸ್ತಿತ್ವದ ಮೂಲತಃ ವಿಘಟಿತವೇ ಆದ ಸ್ವರೂಪದ ಪ್ರತಿಮೆಗಳಾಗಿವೆ. ರಾಕ್ಷಸ ಗೌಡ-ಗೌಡತಿಯರ ಕಾಮ, ಗೌಡತಿಯ ವಿಕೃತ ಬಯಕೆಗಳು, ರಾಮಗೊಂಡನ ತಬ್ಬಲಿತನ ಇವೆಲ್ಲ ಅಸ್ತಿತ್ವದೊಳಗಿನ ಬಿರುಕುಗಳ ದ್ಯೋತಕವಾಗಿವೆ. ಹೀಗೆ ಕಂಬಾರರ ಕಾವ್ಯದ ಶುರುವಾತಿರುವುದೇ ವಿಘಟನೆಯ ಅರಿವಿನಲ್ಲಿ. ಅವರ ಕಾವ್ಯದ ಸಾಮಗ್ರಿ ಅವಿಭಜಿತ ಜನಪದ ಲೋಕದಿಂದ ಅಂದರೆ ಅವರ ಕಲ್ಪಿತ ಶಿವಾಪುರದಿಂದ. ಆದರೆ ಈ ಕಾವ್ಯದ ವಸ್ತು ಹಾಗೂ ಅನುಭವ ಲೋಕಗಳು ವಿಘಟಿತ ಆಧುನಿಕ ಜಗತ್ತಿನಿಂದ. ಹೀಗಾಗಿಯೇ ಗತಕಾಲವನ್ನು ಆದರ್ಶೀಕರಿಸಿ ಮರುಹಂಬಲದಿಂದ ನೋಡುತ್ತಾರೆಯೇ ಎಂದು ಪ್ರಶ್ನಿಸುವಂತೆ ಮಾಡುವ ಕಂಬಾರರು ಸಂಪ್ರದಾಯದ ಅತ್ಯಂತ ಕಟುವಾದ ವಿಮರ್ಶಕರೂ ಆಗಿದ್ದಾರೆ.

``ಹಸಿರು ಕೈಕೊಟ್ಟ ವಟವೃಕ್ಷ ನಮ್ಮಜ್ಜ
ಮುಂದೆ ಅಂಗಳ ತುಂಬ, ಹಿಂದೆ ಹಿತ್ತಲ ತುಂಬ
ಮೈಕೈ ನೆರಳ ಚೆಲ್ಲಿ ಕೂರುತ್ತಾನೆ.
ಅರ್ಥವಾಗದ ವಿಧಿಯ ಹಾಗೆ ಇವ ನಕ್ಕಾಗ
ಉತ್ತರವ ಗೊತ್ತಿರದ ಬೆರಳ ಮೂಗಿನ ಧಡ್ಡ
ಮಗು ತೊದಲುತ್ತದೆ.''
(ನಮ್ಮಜ್ಜ)

ಈ ಪದ್ಯದ ಆಧುನಿಕ ಸಂವೇದನೆಯ ಕವಿ ’ಇವನ ತಿಥಿ ಎಂದೋ ಮಾಡಿದ್ದೇನೆ’ಎಂದು ವಿಶ್ವಾಸದಿಂದ ಹೇಳಿಕೊಂಡರೂ ’ಹಿತ್ತಲದ ಹಳೆ ಬಾವಿಯೊಳಗೆಲ್ಲ ಬೇರುಗಳು’ ಎನ್ನುವ ಸಂದಿಗ್ಧದ ಅರಿವೂ ಅವನಿಗಿದೆ. ಗತಕಾಲ ಮತ್ತು ಸಂಪ್ರದಾಯಗಳು ರಾಕ್ಷಸಗೌಡನ ಹಾಗೆ ಮನೆಯಲ್ಲಿ ಅನೈತಿಕ ಅತಿಕ್ರಮಣ ಮಾಡಿವೆ ಎನ್ನುವ ಅರಿವಿನಿಂದಲೇ ಕಂಬಾರರು ’ಗಂಗಾಮಾಯಿ’ ಎನ್ನುವ ಅದ್ಭುತವಾದ ಪ್ರತಿಮೆಯನ್ನು ಸ್ಥಾಪಿಸುತ್ತಾರೆ. ಗೋಪಾಲಕೃಷ್ಣ ಅಡಿಗರ ’ಭೂತ’ದಲ್ಲಿನ ಪ್ರತಿಮೆಗಳು ಪೇಲವ ಎನ್ನಿಸುವಷ್ಟು ದಟ್ಟವೂ ಸಂಕೀರ್ಣವೂ ಆದ ಸಂಪ್ರದಾಯದ ಪ್ರತಿಮೆ ಗಂಗಾಮಾಯಿ ಎನ್ನುವ ಹೆಸರುಳ್ಳ ಊರ ಕೆರೆಯಾಗಿದೆ. ಸಕಲ ಜೀವಿಗಳಿಗೆ ಆಶ್ರಯ ಕೊಡುವ ಗಂಗಾಮಾಯಿ ಇಂದಿನ ಊರಿನ ಎಲ್ಲಾ ಕೊಳಕುಗಳಿಗೂ ಪಾತ್ರೆಯಾಗಿದ್ದಾಳೆ. ಇದು ವಾಸ್ತವವಾಗಿರುವಂತೆ ಅವಳ ಬಗ್ಗೆ ಹುಟ್ಟಿರುವ ಪುರಾಣಗಳು ಐತಿಹ್ಯಗಳು ಅವಳಿಗೆ ಒಂದು ಅದಿsಕಾರದ ಸ್ಥಾನವನ್ನು ಕೊಟ್ಟಿವೆ.

”ಹಳೆದೇವರ ಜಡೆಯ ಜಿಡ್ಡು, ಮುನಿತೊಡೆಯ
ಕಿಲುಬು ಕಿವಿಯ ಪಿಸುರು ತೊಳೆದು ಮಡು
ಗೊಂಡವಳೆ ಗಂಗಾಮಾಯಿ. ಅಂತೆಯೆ ಬರು
ವಾಗ ಉಡಿತುಂಬ ತಂದಳು ತಾಯಿ; ಆ ಸೀಮೆಯ
ಪವಿತ್ರ ಕೆಸರುಸುಕು ರೋಗಾಣು.
ಹಗ್ಗಕ್ಕೆ ಹಾವೆಂಬ ಭಯ,
ಕಾಂಬ ಕಣ್ಣಿಗೆ ಮಾಯದ ಕನ್ನಡಿಯ”
(ಗಂಗಾಮಾಯಿ)
ಸಮುದಾಯದ ತಾಯಿಯಾದ ಗಂಗಾಮಾಯಿಯ ವರ್ಣನೆ ಪ್ರಧಾನವಾಗಿ ಅನಿಷ್ಟದ ಪ್ರತಿಮೆಗಳನ್ನು ಒಳಗೊಂಡು ಸ್ಥಗಿತವಾದ ಸಂಪ್ರದಾಯವನ್ನು ಸಂಕೇತಿಸುತ್ತದೆ. ಹಾಗೂ ಅದರ ನೆರಳಿನಲ್ಲಿ ಕ್ರಿಯಾಶಕ್ತಿ ಕಳೆದುಕೊಂಡಿರುವ ಇಂದಿನ ಕ್ಷುಲ್ಲಕ ಬದುಕನ್ನೂ ಕೂಡ. ಗಂಗಾಮಾಯಿ ಹೀಗಿದ್ದರೆ ಸದಾ ರಾಮಾಯಣ ಗ್ರಂಥವನ್ನು (ಓದು ಬರಹ ಬರದೇ ಇದ್ದರೂ) ಇಟ್ಟುಕೊಂಡಿರುವ ಗೋದೂತಾಯಿಯ ಕಥೆ ಕೂಡ ವ್ಯಂಗ್ಯ ಹಾಗೂ ಕಟಕಿಯ ಮೂಲಕ ಸಂಪ್ರದಾಯದ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತದೆ. ’ಸ್ವಲ್ಪ ವಿಸ್ತಾರ ಬಾಯಿ’ಯ ಗೋದೂತಾಯಿ ಕಂಬಾರರ ನಾಟಕಗಳಲ್ಲಿ ಬರುವ ಅನೇಕ ತಾಯಿಯರ ಹಾಗೆ ಮಗನ ಸ್ವಂತ ಅಸ್ತಿತ್ವವನ್ನೇ ನುಂಗಿಹಾಕಿದ್ದಾಳೆ. ಅವಳದು ಕೇವಲ ಹುಸಿ ಡಾಂಭಿಕತೆ ಅಥವಾ ಧಾರ್ಮಿಕತೆ ಮಾತ್ರವಲ್ಲ ಅಸಂತೃಪ್ತ ಕಾಮವು ವಿಕಾರಗೊಂಡ ವ್ಯಕ್ತಿ ಅವಳಾಗಿದ್ದಾಳೆ. ಬೆಳೆದು ಮದುವೆಯಾದ ಮಗ ಈಗಲೂ ಅವಳ ಪಕ್ಕದಲ್ಲಿಯೇ ಮಲಗಬೇಕು. ಸೊಸೆ ಅಡುಗೆಮನೆಯಲ್ಲಿ. ಮಗನೇನಾದರೂ ಹೆಂಡತಿಯನ್ನು ಬಯಸಿದ್ದು ಗೊತ್ತಾದರೆ ಗೋದೂತಾಯಿ ಅವಳನ್ನು ಅಮಾನುಷವಾಗಿ ಬಡಿಯುತ್ತಾಳೆ. ಮಗ ಪಕ್ಕದಲ್ಲಿ ಮಲಗಿದಾಗ ಮಾತ್ರ.

”...ಮೈಯೆಲ್ಲ ಕಣ್ಣಾಗಿ
ಕಣ್ಣೆಲ್ಲ ಕೈಯಾಗಿ, ರಾಮಾಯಣದ ರಹಸ್ಯ
ಪುಟದಲ್ಲಾಡಿಸುತ್ತ ಆಡುತ್ತ, ಆಡಿಸುತ್ತ ಬೆರಳ
ಕಂಪಿಸುವ ಮೂಗಿನ ಕೆಂಪು ಮುಖದಲ್ಲಿ
ತಿಳಿ ಬೆವರೊಡೆದು ಮಲಗುತ್ತಾಳೆ.''
(ರಾಮಾಯಣವೂ ಗೋದೂತಾಯಿಯೂ)

ಒಂದು ದಿನ ಅವಳು ಮಡಿನೀರಿಗೆ ಹೋದಾಗ ಮಗ ರಾಮಾಯಣದಲ್ಲಿ ಕೈಯಿಟ್ಟಾಗ ಸಿಗುವುದು ’ಬಿಳಿ ಬಿಳಿ ಗರಿಗರಿಯ ನಿರೋಧ’. ಕುತೂಹಲದ ಸಂಗತಿಯೆಂದರೆ ತಮ್ಮ ಸರೀಕರಾದ ಲಂಕೇಶ್ ಹಾಗೂ ತೇಜಸ್ವಿ ಅವರಿಗಿಂತ ಹೆಚ್ಚು ವ್ಯಗ್ರವಾಗಿ (ಕೆಲವೊಮ್ಮೆ ಕ್ರೂರವಾಗಿ) ಸಂಪ್ರದಾಯವನ್ನು ಟೀಕಿಸುವ ಕಂಬಾರರು ಅವರೆಲ್ಲರಿಗಿಂತ ಆಪ್ತವಾದ ಹಾಗೂ ಆಳವಾದ ಸಂಬಂಧಗಳನ್ನು ದೇಸೀ ಕಾವ್ಯ, ನಂಬುಗೆ ಹಾಗೂ ವಿಧಿಗಳ ಲೋಕಗಳೊಂದಿಗೆ ಇಟ್ಟುಕೊಂಡಿದ್ದಾರೆ. ಆದ್ದರಿಂದಲೇ ವಿಲಕ್ಷಣವಾದ ರೀತಿಯಲ್ಲಿ ಮಾವೋ ಅವರ ಜಾನಪದ ಕಾವ್ಯಲೋಕದಲ್ಲಿ ಪ್ರವೇಶ ಮಾಡುತ್ತಾನೆ. ’ಮರೆತೇನೆಂದರ ಮರೆಯಲಿ ಹೆಂಗ. ಮಾವೋತ್ಸೆ ತುಂಗ’ ಪದ್ಯ ಸ್ತುತಿಗೀತೆಯ ಸ್ವರೂಪದ್ದಾದರೂ ಮಾವೋನ ಬಗ್ಗೆ ಸ್ವಲ್ಪ ಮೆಚ್ಚುಗೆ ಮತ್ತು ಹೆಚ್ಚು ವ್ಯಂಗ್ಯದಿಂದ ಕೂಡಿದ ಧೋರಣೆ ಹೊಂದಿದೆ.
”ಹತ್ತ ಕುದುರಿಯ ಹಳದಿ ದೇವರೋ
ಸ್ವಯಂ ಸೂರ್ಯ ನಾ ಬಂದೇನಂದಿ”

(ಮರೆತೇನೆಂದರ ಮರೆಯಲಿ ಹೆಂಗ)
ಹೀಗೆ ಜಗತ್ತಿಗೆ ಹೊಸ ಸೂರ್ಯನನ್ನು ತರುತ್ತೇನೆಂದು ಹೇಳಿದ ಮಾವೋ ತಾನೇ ಹಳದಿ ಸೂರ್ಯನೆಂದು ಅತಿಮಾನುಷ ವ್ಯಕ್ತಿತ್ವವನ್ನು ತನಗೆ ಆರೋಪಿಸಿಕೊಂಡಿರುವ ಹಿಂದಿನ ಆತ್ಮರತಿ ಮತ್ತು ಅವರಿಂದ ಹುಟ್ಟುವ ಕ್ರೌರ್ಯದ ಅರಿವು ಈ ಪದ್ಯದಲ್ಲಿದೆ.
”ಮನಶೇರ ಮುರದಿ ತೇರ ಕಟ್ಟಿದಿ.”
ಆದ್ದರಿಂದಲೇ ಸಂಪ್ರದಾಯಸ್ಥ ಸಮಾಜವನ್ನು ಬುಡಮೇಲು ಮಾಡಲು ಹಾಗೂ ಶತಮಾನಗಳ ಅಸಮಾನತೆಯನ್ನು ಕಿತ್ತುಹಾಕುವ ಕ್ರಿಯಾಶೀಲತೆಯುಳ್ಳ ಮಾವೋ ”ಗ್ಲೋಬಿನರ್ಧಕ ಸಾಯೋದ ಕಲಿಸಿದ”ರೂ ’ಸ್ವತಾ ಸಾಯಲಿಕೆ ಬಾರದೇ ಹೋದ’ ವ್ಯಂಗ್ಯವನ್ನು ಅದು ಗುರುತಿಸುತ್ತದೆ. ’ಮಾವೋತ್ಸೆ ತುಂಗನಿಗೆ’ ಪದ್ಯ ಇನ್ನೂ ಸಂಕೀರ್ಣವಾದ ರೀತಿಯಲ್ಲಿ ದೇಶಿ ಕಲ್ಪನೆಯ ಮೂಲಕ ಅವನನ್ನು ಗ್ರಹಿಸಲು ಪ್ರಯತ್ನಿಸುತ್ತದೆ. ಕಂಬಾರರಿಗೆ ಮಾತ್ರ ಸಾಧ್ಯವಾಗುವ ಇಬ್ಬಗೆಯ ವ್ಯಂಗ್ಯದ ಮೂಲಕ ಮಾವೋನನ್ನು ಮಾತ್ರವಲ್ಲ ಅವನನ್ನು ದಿsಕ್ಕರಿಸಬಯಸುವ ”ಭಾರತೀಯ” ಮನಸ್ಸನ್ನೂ ಏಕಕಾಲಕ್ಕೆ ವಿಡಂಬಿಸುತ್ತದೆ. ಭಾರತಾಂಬೆಯ ಪರವಾಗಿ ವಕೀಲಿ ಮಾಡುತ್ತಾ ಮಾವೋನನ್ನು ಉಚ್ಫಾಟನೆ ಮಾಡಲು ಹೊರಟಿರುವ ಪದ್ಯದ ನಿರೂಪಕ ಅರಿವಿಲ್ಲದಂತೆ ಭಾರತಾಂಬೆಯನ್ನೇ ಅದ್ಭುತವಾಗಿ ವಿಡಂಬಿಸುತ್ತಾನೆ.
”ದುಷ್ಟಾ!
ನಿನಗೆ ಕೆತ್ತಿಸಿ ಬಡದೇನು ಗೂಟಾ”
(ಮಾವೋತ್ಸೆ ತುಂಗನಿಗೆ)
ಎಂದು ಆರಂಭಿಸುವ ಈ ನಿರೂಪಕ ಮಾವೋನನ್ನು ’ಅಕ್ಕಲ್ ಕಾ ಕಚ್ಚಾ, ಬಚ್ಚಾ’ ಎಂದು ಕರೆಯುತ್ತಾನೆ. ಏಕೆಂದರೆ ಬುದ್ಧಿಗೇಡಿ ಕ್ರಾಂತಿಕಾರಿಯಾದ ಮಾವೋನಿಗೆ ವಿರೋಧವಾಗಿ ಭಾರತಾಂಬೆ ಇದ್ದಾಳೆ. ಅವಳು ಕ್ರಾಂತಿಯಿಲ್ಲದೆ ಎಲ್ಲವನ್ನೂ ಸಾಧಿಸಿಬಿಡುವವಳು.
”ನಮ್ಮ ಭಾರತಾಂಬಿ, ರೂಪಾಯಿಯಗಲ ಕುಂಕುಮದಾಕಿ,
ಕೈತುಂಬ ಹಸಿರು ಬಳೆ ಕುಪ್ಪಸದಾಕಿ
ಮುಖದಗಲ ಪುರಾಣಗರತಿಯ ಸೆರಗು ತೂಗಿ ಕಣ್ಣು ಕಾಣಿಸದಾಕಿ”
ಅವಳನ್ನು ನೆಚ್ಚಿಕೊಂಡಿರುವುದರಿಂದ ಮಾವೋನಂಥ ದಡ್ಡನ ಅವಶ್ಯಕತೆ ಭಾರತಕ್ಕಿಲ್ಲ.
ನೀ ಬರುವ ಮೊದಲೆ ಠರಾವು ಪಾಸುಮಾಡಿ
ತೆಗೆದುಹಾಕಿದ್ದೇವೆ ಊರು ಹೊಲಗೇರಿಗಳ ನಡುವಿನಂತರ
ಪತ್ರಿಕೆಯಲ್ಲಿ ಸುಪ್ರಸಿದ್ಧವಾಗಿದೆ. ಹೊಲಗೇರಿ ಗುಡಿಸುವ ನನ್ನ ಚಿತ್ರ
ಈ ವಿಡಂಬನೆಯ ಜೊತೆಗೆ ಬದಲಾವಣೆ ತರಲು ಅವಶ್ಯಕವಾದ ವೀರ್ಯವನ್ನೇ ಕಳೆದುಕೊಂಡ ಭಾರತದ ಬಗ್ಗೆ ಗಾಢವಾದ ವಿಷಾದವೂ ಪದ್ಯದ ಕೊನೆಯ ಭಾಗದಲ್ಲಿದೆ. ಕಂಬಾರರ ಕಾವ್ಯ ಬಹುಮುಖಿಯಾದದ್ದು, ಬಹುಸ್ತರಗಳಲ್ಲಿ ಇಂಬು ಹುಡುಕುವಂಥದ್ದು. ಟೀಕೆ ವಿಡಂಬನೆಗಿಂತ ತೀರಾ ಭಿನ್ನವಾದ ಅತ್ಯಂತ ಸಾಂದ್ರವಾದ ಪ್ರತಿಮಾಲೋಕದ ಮೂಲಕ ಅನುಭವವನ್ನು ಬಗೆಯುವ ಉತ್ತಮ ಕಾವ್ಯವನ್ನೂ ಅವರು ಬರೆದಿದ್ದಾರೆ. ಈ ಬಗೆಯ ಕಾವ್ಯದಲ್ಲಿ ಬೌದ್ಧಿಕತೆಯ ಮೂಲಕ ಸಮಗ್ರವಾದ ಸಂವೇದನೆಯೊಂದರ ಮೂಲಕ ಅಚ್ಚರಿ ಹುಟ್ಟಿಸುವಷ್ಟು ವೈವಿಧ್ಯಮಯವಾದ ಅನುಭವ ಲೋಕಗಳನ್ನು ಅವರು ಅನುಸಂಧಾನಿಸುತ್ತಾರೆ. ಇಲ್ಲಿ ಕಾವ್ಯವೆನ್ನುವುದು ಲೋಕಗ್ರಹಿಕೆಯ ಸೂಕ್ಷ್ಮಸಾಧನವಾಗುತ್ತದೆ. ಹಿರಿದಾದ ಅರ್ಥದಲ್ಲಿ ಜ್ಞಾನಮಾರ್ಗವೂ ತಾತ್ವಿಕಚಿಂತನೆಯ ಮಾಧ್ಯಮವೂ ಆಗುತ್ತದೆ. ವಿಶೇಷವೆಂದರೆ ಕಂಬಾರರ ಈ ಬಗೆಯ ಕಾವ್ಯ ದೇಸೀ ಕಾವ್ಯಲೋಕದ ಪರಿಕರಗಳನ್ನು ಅಪೂರ್ವವಾದ ರೀತಿಯಲ್ಲಿ ಪರಿಷ್ಕರಿಸಿ ಬಳಸಿಕೊಳ್ಳುತ್ತದೆ. ಹೀಗಾಗಿಯೇ ಅದಕ್ಕೆ ತನ್ನ ಸ್ವಂತದ್ದೇ ಆಕರ್ಷಣೆಯಿದೆ. ಕೆಲವೊಮ್ಮೆ ವಸ್ತುವಿನ ಹಾಗೂ ಅನುಭವ ಶೋಧನೆಯ ಸಂಕೀರ್ಣತೆಯನ್ನು ನಾವು ಗಮನಿಸದೇ ’ರಸಾಸ್ವಾದನೆ’ಯಲ್ಲಿ ತೊಡಗಿಬಿಡುವಂಥ ಆಕರ್ಷಣೆ ಕಂಬಾರರು ಬಳಸುವ ಕಥನಶೈಲಿ, ಗೇಯತೆ, ಪ್ರತಿಮೆಗಳ ಅದ್ಭುತ ಫಲವಂತಿಕೆ ಹಾಗೂ ಭಾಷೆಯ ಕಸುವಿಗೆ ಇದೆ. ಆದರೆ ಅವರ ಪ್ರಧಾನ ಕಾವ್ಯದ ಜೊತೆಗೆ ಅರ್ಥಪೂರ್ಣವಾದ ಅನುಸಂಧಾನಕ್ಕಾಗಿ ಆ ಕಾವ್ಯದ ತಾತ್ವಿಕ ನೆಲೆಗಳನ್ನು ಮೀರಿದ ಸೂಕ್ಷ್ಮತೆಯನ್ನು ಪಡೆದುಕೊಳ್ಳುವ ಕಾವ್ಯಕ್ಕೆ ಸಹಜವಾದ ಕ್ರಮಗಳನ್ನು ಗುರುತಿಸಬೇಕಾಗುತ್ತದೆ. ”ಕುದುರೀಸಿದ್ಧ” ಲಾವಣಿಯ ಶೈಲಿಯಲ್ಲಿ ಕತೆಯೊಂದನ್ನು ಲವಲವಿಕೆಯಿಂದ ಹೇಳುತ್ತದೆ. ಕತೆಗೆ ಕೂಡ ಘಟನೆಗಳ ರೋಚಕತೆಯ ಆಕರ್ಷಣೆಯಿದೆ. ಎಲ್ಲಿಂದಲೋ ಬಂದ ಬಾಬಾ ಒಬ್ಬನು ಕುದುರಿಯೊಂದನ್ನು ಸಿದ್ಧನಿಗೆ ಮೂರು ತಿಂಗಳ ಕಾಲಕ್ಕೆ ನೋಡಿಕೊಳ್ಳಲು ಕೊಟ್ಟುಹೋಗುತ್ತಾನೆ. ಆ ಮಾಯದ ಕುದುರೆ ಸಿದ್ಧನಿಗೆ ಅತಿಮಾನುಷವೆನ್ನಬಹುದಾದ ಸಾಮರ್ಥ್ಯವನ್ನು ತರುತ್ತದೆ. ಅಷ್ಟು ಮಾತ್ರವಲ್ಲ ಸಿದ್ಧ ಮತ್ತು ಕುದುರೆಯ ನಡುವೆ ಗಂಡ ಹೆಂಡಿರಂಥ ಸಂಬಂಧ ಹುಟ್ಟಿಕೊಳ್ಳುತ್ತದೆ. ಕೀರ್ತಿನಾಥ ಕುರ್ತುಕೋಟಿಯವರು ಸರಿಯಾಗಿ ಗುರುತಿಸಿದಂತೆ ಸಿದ್ಧಕುದುರೆಯ ಸವಾರಿ ಮಾಡುವದನ್ನು ಕಂಬಾರರು ಸಂಭೋಗದ ಸಂಕೇತವಾಗಿಯೇ ವರ್ಣಿಸಿದ್ದಾರೆ. ಅಂದರೆ ಕುದುರೆ ತರುವ ಕ್ರಿಯಾಶೀಲತೆ ಲೈಂಗಿಕತೆಯ ಸ್ವರೂಪದ್ದು. ’ಹೋರಿ’ ಪದ್ಯದಲ್ಲಿ ಕಂಬಾರರು ಕಾಮದ ಎಲ್ಲೆಯಿಲ್ಲದ, ಅದುಮಿಡಲಾಗದ ಕ್ರಿಯಾಶಕ್ತಿಯನ್ನು ವಿಶ್ಲೇಷಿಸಿದ್ದಾರೆ. ಅಂಥದೇ ರೀತಿಯಲ್ಲಿ ಕಾಮವೂ, ಕ್ರಿಯಾಶೀಲತೆಯೂ ಆಗಿರುವ ಶಕ್ತಿ ಸಿದ್ಧನಿಗೆ ಕುದುರೆಯಾಗಿ ಒಲಿದುಬರುತ್ತದೆ. ಆದರೆ ಮರಳಿ ಬಂದ ಬಾಬಾನಿಗೆ ಸಿದ್ಧನು ಸುಳ್ಳುಹೇಳಿದ ಮೇಲೆ ಕಳೆದುಹೋಗಿ ಮತ್ತೆ ಸಿಕ್ಕುವ ಕುದುರೆಗೆ ಯಾವ ಶಕ್ತಿಯೂ ಇಲ್ಲ. ಪದ್ಯದ ಕೊನೆಗೆ ಇಬ್ಬರು ಹಗೆಗಳಂತೆ, ಪರಸ್ಪರರನ್ನು ಮುಗಿಸಲು ಪಣ ತೊಟ್ಟವರಂತೆ ಅವರಿಬ್ಬರೂ ಕಣ್ಮರೆಯಾಗುತ್ತಾರೆ. ಕುದುರೆ ಕಾಮದ ಸಂಕೇತವೋ, ಅನಿರೀಕ್ಷಿತವಾಗಿ ಬಂದು ಹೋಗುವ ಕಾವ್ಯಶಕ್ತಿಯೋ ಅಥವಾ ಅಲೌಕಿಕ ಅನುಭವವೋ ಅಥವಾ ಇವೆಲ್ಲವೂ ಆಗಿರಬಹುದಾಗಿದೆ. ಜೊತೆಗೆ ಬೆಸುಗೆಗೊಂಡ ಸಂಬಂಧಗಳು ಅಪರಿಹಾರ್ಯವೆನ್ನುವಂತೆ ಮುರಿದುಬೀಳುವ ದುರಂತವೂ ಈ ಕತೆಯಲ್ಲಿದೆ. ”ನವಿಲೇ ನವಿಲೇ” ಪದ್ಯದಲ್ಲಿ ಕೂಡ ಮಾದೇವಿ ಮತ್ತು ನವಿಲಿನ ಅನುಸಂಧಾನ ಎಲ್ಲಾ ಅರ್ಥಸಾಧ್ಯತೆಗಳನ್ನು ಹೊಂದಿದೆ. ಹೆಂಗಸೊಬ್ಬಳಿಗೆ ಅನಪೇಕ್ಷಿತವಾಗಿ ಬರುವ ಅಲೌಕಿಕದ ಸಂಪರ್ಕದ ಹಾಗೆ ಕಂಡರೂ, ಈ ಅನುಸಂಧಾನವನ್ನು ಪದ್ಯದ ಪ್ರತಿಮೆಗಳು ಸಂಭೋಗದ ನೆಲೆಯಲ್ಲಿಯೂ ಕಾಣುತ್ತವೆ. ಗಂಡ ಶಿವಪಾದನಾಯಕನ ಕೋರಿಕೆಯಂತೆ ಮಾದೇವಿ ಏನಾದರೂ ಮಾಡಿ ಮಳೆ ತಾರೋ ನವಿಲೇ ಎಂದು ಕೇಳುತ್ತಾಳೆ. ಆಗ ತನ್ನ ಅದ್ಭುತ ಕುಣಿತದಿಂದ ಮಳೆಗೆರೆಯ ಹತ್ತಿದ ಚಿತ್ರದ ಆ ನವಿಲು
``ಹೆಂಗ ಕುಣಿದರ ನವಿಲು ಹಾಂಗ ಮಳೆ ಸುರಿದಾವು
ಚಿಕ್ಕೀಯ ಬಲೆಯ ಹೆಣೆಧಾಂಗ
ಸೂರ್ಯನಾರಾಯಣ ವೀರ್ಯ ಸುರಿದಾವೇನ
ಶ್ರಾವಣದ ಸರುವು ಜಡಿಧಾಂಗ
ಅಂತರಾಳದ ಒಳಕ ಅಲಕಾವತಿಯ ತೆರೆದು
ಜೀವರಸ ಭರ್ತಿ ಸುರಿಧಾಂಗ''
(ನವಿಲೇ ನವಿಲೇ)
ನವಿಲಿನ ಕುಣಿತ, ಮಳೆ ಇವೆಲ್ಲ ಮಾದೇವಿಗೆ ಅಪೂರ್ವವಾದ ತೃಪ್ತಿಯನ್ನು ತರುತ್ತವೆ. ಆದರೆ ಅವಳ ಮತ್ತು ನವಿಲಿನ ಸಂಬಂಧದ ಸ್ವರೂಪವನ್ನು ಅರ್ಥಮಾಡಿಕೊಂಡ ಅವಳ ಗಂಡ ನವಿಲನ್ನು ಕೊಂದು ಅದನ್ನೇ ಬಳಸಿಕೊಂಡು ಸೀರೆಯೊಂದನ್ನು ಮಾಡಿಸಿ ಅವಳಿಗೆ ಕೊಡುತ್ತಾನೆ. ಮಾದೇವಿ ಕಾಡಿನ ಕಡೆಗೆ ಕತ್ತಲಲ್ಲಿ ಕರಗಿಹೋಗುತ್ತಾಳೆ. ಆದರೆ ನವಿಲು ಅಲೌಕಿಕದ ಸಂಕೇತವೂ ಹೌದು ಎನ್ನುವಂತೆ ಪದ್ಯದ ಕೊನೆಯ ಸಾಲಿನಲ್ಲಿ ಕವಿ ಆಚೆಯ ಸೀಮೆಯ ಲೋಕವೇ ಎಂದು ನವಿಲನ್ನು ಪ್ರಾರ್ಥಿಸುತ್ತಾನೆ. ’ಒಂದು ಕನಸು’, ’ನಾಡು ಕಾಡು’ ಮುಂತಾದ ಅನೇಕ ಪದ್ಯಗಳಲ್ಲಿ ಕಂಬಾರರು ಎರಡು ಜಗತ್ತುಗಳು ಸಂಧಿಸುವ ಗಳಿಗೆಗಳನ್ನು ಶೋಧಿಸಿದ್ದಾರೆ. ”ಕಾಡುಕುದುರೆ” ಪದ್ಯ ಕೂಡ ಊರಿನಾಚೆ ದಾರಿಯಲ್ಲಿ ಉಲ್ಕೆಯಂತೆ ಎರಗಿಬರುವ ಕಾಮದ ಶಕ್ತಿಯನ್ನು ವರ್ಣಿಸಿದೆ. ಕಾಮಜನ್ಯವಾದ ಕ್ರಿಯಾಶಕ್ತಿ ವ್ಯಕ್ತಿಗಳನ್ನು ’ಕಳ್ಳ ಮಳ್ಳೆ’ ಆಡಿಸಿ ಬೀಳಿಸಬಹುದು. ಆದರೆ ಆ ಕ್ರಿಯಾಶಕ್ತಿ ಕಲೆ, ಜ್ಞಾನ ಹಾಗೂ ಸಮಾಜಗಳನ್ನು ಹೇಗೆ ಸೃಷ್ಟಿಸುತ್ತದೆ ಎನ್ನುವುದು ಕಂಬಾರರ ತಾತ್ತಿಕ ಕಾಳಜಿಯಾಗಿದೆ. ನಮ್ಮ ದೃಷ್ಟಿಯಲ್ಲಿ ಈ ಕಾಳಜಿಗೆ ಅತ್ಯಂತ ಸಮರ್ಥವಾದ ಅಭಿವ್ಯಕ್ತಿ ದೊರೆತಿರುವುದು ’ಚಕೋರಿ’ ಹಾಗೂ ’ಶಿಖರಸೂರ್ಯ’ ಕೃತಿಗಳಲ್ಲಿ. ಇವುಗಳಲ್ಲಿ ’ಚಕೋರಿ’ ಕಾವ್ಯವೇ ’ಶಿಖರಸೂರ್ಯ’ ಕಾದಂಬರಿಯೆ ಎನ್ನುವುದು ಅಷ್ಟೇನೂ ಮುಖ್ಯವಲ್ಲ. ಕಂಬಾರರ ಸಂವೇದನೆ ಮೂಲತಃ ಪ್ರಕಾರಗಳ ಕೃತ್ರಿಮ ವಿಭಜನೆಯನ್ನು ಒಪ್ಪಿಯೇ ಇಲ್ಲ. ’ಚಕೋರಿ’ ಕೃತಿಯಲ್ಲಿ ಮನುಷ್ಯನ ಅಸ್ತಿತ್ವದ ಇಬ್ಬಗೆಗಳನ್ನು ವೈರುಧ್ಯಗಳನ್ನು ಕಂಬಾರರು ವಿಶಾಲವಾದ ತಾತ್ವಿಕ ಚೌಕಟ್ಟುಗಳ ಮೂಲಕ ಗ್ರಹಿಸತೊಡಗುತ್ತಾರೆ. ಕಲೆ/ವಿಜ್ಞಾನ, ಪ್ರತಿಭೆ, ಬುದ್ಧಿ, ಸಂಸ್ಕೃತಿ ನಾಗರಿಕತೆ ಮುಂತಾದ ವೈರುಧ್ಯಗಳನ್ನು ಚಂದ್ರನ ಒಕ್ಕಲು-ಸೂರ್ಯನ ಒಕ್ಕಲು ಎಂದು ಗುರುತಿಸುತ್ತಾರೆ. ಕವಿ ಏಟ್ಸ್ನ ( Solar-Lunar) ಚೌಕಟ್ಟುಗಳನ್ನು ಹೋಲುವ ಕಂಬಾರರ ಬೌದ್ಧಿಕ ಚೌಕಟ್ಟುಗಳು ಮನುಷ್ಯ ಜಗತ್ತಿನ ಏರಿಳಿತಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿವೆ. ಕಂಬಾರರ ಹಿಂದಿನ ಕಾವ್ಯದ ಪ್ರತಿಮಾಸಾಂದ್ರತೆ ಸಂಕೀರ್ಣ ಕಾವ್ಯಭಾಷೆಯ ಬದಲಾಗಿ ನಿರುಮ್ಮಳವಾದ ಶೈಲಿಯೊಂದರ ಮೂಲಕ ತಾತ್ವಿಕ ಶೋಧನೆಯಲ್ಲಿ ಅವರು ತೊಡಗಿದಂತೆ ತೋರುತ್ತದೆ. ಇದು ಕತ್ತಿಯಂಚಿನ ಮೇಲೆ ನಡೆಯುವಂಥ ಕೆಲಸ. ತಾತ್ತಿಕ ಚೌಕಟ್ಟುಗಳ ಅನುಕೂಲಕ್ಕೆ ಶರಣಾಗಿ ಅನುಭವಲೋಕಗಳ ಸಂಕೀರ್ಣತೆಯಿಂದ ದೃಷ್ಟಿ ಆಚೆಗೆ ಸರಿಸಿದರೆ ಕಾವ್ಯವೂ ದುರ್ಬಲವಾಗುತ್ತದೆ. ತಾತ್ತಿಕತೆಯೂ ಅಪ್ರಸ್ತುತವಾಗುತ್ತದೆ. ”ಶಿಖರಸೂರ್ಯ” ಕೃತಿ ಓದಿದವರಿಗೆ ಕಂಬಾರರು ಈ ಸವಾಲನ್ನು ಗೆದ್ದಿದ್ದಾರೆ ಎನಿಸುತ್ತದೆ.

ಸೋಮವಾರ, ಸೆಪ್ಟೆಂಬರ್ 12, 2011

ಮನೆಗಳಿಗೆ ಬಂದ ಜೋಕುಮಾರ....

(ಜೋಕುಮಾರಸ್ವಾಮಿಯ ಹಾಡು ಹೇಳುತ್ತಿರುವ ಗುಂಪು)



-ಸಿದ್ಧರಾಮ ಹಿರೇಮಠ,ಕೂಡ್ಲಿಗಿ.



‘ಅಡ್ಡಡ್ಡ ಮಳಿ ಬಂದ, ದೊಡ್ಡದೊಡ್ಡ ಕೆರಿ ತುಂಬಿ, ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ, ಮಡಿವಾಳರ ಕೇರಿ ಹೊಕ್ಕಾನೆ ಜೋಕುಮಾರ, ಮುಡಿ ತುಂಬಾ ಹೂ ಮುಡಿದಂತ ಚಲುವಿ ತನ್ನ ಮಡದಿಯಾಗೆಂದ ಸುಕುಮಾರ........’ ಎಂದು ಗುಂಪಾಗಿ ಹಾಡುತ್ತ ಪುಟ್ಟಿಯೊಂದರಲ್ಲಿ ಜೋಕುಮಾರನನ್ನು ಮನೆಗಳಿಗೆ ಹೊತ್ತೊಯ್ಯುವ ಹಬ್ಬದ ಆಚರಣೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಇದೀಗ ಆರಂಭಗೊಂಡಿದೆ.

ಜೋಕುಮಾರಸ್ವಾಮಿ ಗಂಗಾಮತಸ್ಥರ ಆರಾಧ್ಯ ದೈವ. ಜೋಕುಮಾರನನ್ನು ಪೂಜಿಸುವುದರಿಂದ ಮಳೆ ಬರುವುದೆಂಬ ನಂಬಿಕೆ ರೈತರಲ್ಲಿ ಹಾಸುಹೊಕ್ಕಾಗಿದೆ. ಗಂಗಾಮತಸ್ಥ ಜನಾಂಗದವರ ಮನೆಯಿಂದಲೇ ಜೋಕುಮಾರನ ಹುಟ್ಟು. ಪಟ್ಟಣದಲ್ಲಿ ಬಾರಿಕರ ಗೌರಮ್ಮನವರ ಮನೆಯಲ್ಲಿ ಜೋಕುಮಾರಸ್ವಾಮಿ ಹುಟ್ಟುತ್ತಾನೆ. ಹಲಕಜ್ಜಿ ನರಸಮ್ಮ, ಹಲಕಜ್ಜಿ ಓಬಮ್ಮ, ದಾಣಿ ಸಣ್ಣಚೌಡಮ್ಮ, ದಾಣೇರ ಹನುಮಂತಮ್ಮ, ಬಾರಿಕರ ವೇಣುಗೋಪಾಲ, ಪವನಕುಮಾರ ಇವರೆಲ್ಲ ಹಬ್ಬದ ಸಂದರ್ಭದಲ್ಲಿ ಜೋಕುಮಾರನನ್ನು ಹೊತ್ತು ಹಾಡು ಹೇಳುತ್ತಾ ಪಟ್ಟಣದಲ್ಲಿ ಸಂಚರಿಸುತ್ತಿದ್ದಾರೆ.

(ಕೂಡ್ಲಿಗಿ ಪಟ್ಟಣದ್ಲಲಿ ಜೋಕುಮಾರಸ್ವಾಮಿಯ ಹಬ್ಬದ ಅಂಗವಾಗಿ ಪುಟ್ಟಿಯಲ್ಲಿ ಸಿಂಗಾರಗೊಂಡಿರುವ ಜೋಕುಮಾರ)


ಬೆನಕನ ಅಮವಾಸ್ಯೆಯಾದ ೭ನೇ ದಿನದಿಂದ ಜೋಕುಮಾರನ ಹಬ್ಬ ಆರಂಭಗೊಳ್ಳುತ್ತದೆ. ಎಣ್ಣೆ ಮತ್ತು ಮಣ್ಣಿನಿಂದ ಜೋಕುಮಾರನನ್ನು ತಯಾರಿಸಲಾಗುತ್ತದೆ. ಈ ರೀತಿಯಲ್ಲಿ ಸಿದ್ಧಗೊಂಡ ಜೋಕುಮಾರನ ಮೂರ್ತಿಗೆ ಬೇವಿನ ಎಲೆ, ಸಜ್ಜೆ, ಜೋಳ, ದಾಸವಾಳ ಹೂವಿನಿಂದ ಪೂಜೆ ಮಾಡಿ ಅಲಂಕರಿಸಲಾಗುವುದು. ಜೋಕುಮಾರಸ್ವಾಮಿ ಆಚರಣೆಯ ಹಿಂದೆಯೂ ಒಂದು ಕಥೆಯಿದೆ. ಜೋಕ ಮತ್ತು ಎಳೆಗೌರಿ ಎಂಬ ದಂಪತಿಗಳಿಗೆ ಬಹು ಕಾಲ ಮಕ್ಕಳಾಗದ ಕಾರಣ ಶಿವನನ್ನು ಪ್ರಾರ್ಥಿಸುತ್ತಾರೆ. ಆಗ ಶಿವನು ಒಬ್ಬ ಮಗನನ್ನು ಅನುಗ್ರಹಿಸುತ್ತಾನೆ. ಆದರೆ ಆ ಮಗುವಿಗೆ ಶೀಘ್ರ ಬೆಳವಣಿಗೆ ಹಾಗೂ ಏಳೇ ದಿನಗಳ ಆಯಸ್ಸು ಇರುತ್ತದೆ. ಹೀಗಿರಬೇಕಾದರೆ ಒಮ್ಮೆ ಮಳೆ ಹೋಗಿ ಬೆಳೆಗಳೆಲ್ಲ ಒಣಗಿ, ಜನರ ಸಂಕಟ ಮುಗಿಲು ಮುಟ್ಟುತ್ತದೆ. ಆಗ ಜೋಕುಮಾರ ತನ್ನ ಕುದುರೆಯನ್ನೇರಿ ಹೊಲಗದ್ದೆಗಳಲ್ಲಿ ಸಂಚರಿಸತೊಡಗುತ್ತಾನೆ. ಅವನು ತನ್ನ ಮೇಲು ಹೊದಿಕೆಯನ್ನು ಒಮ್ಮೆ ಜೋರಾಗಿ ಬೀಸಿದಾಗ ಅದರ ಸೆಳಕಿಗೆ ಚದುರಿದ ಮೋಡಗಳು ಮಳೆ ಸುರಿಸುತ್ತವೆ.

ಯಥೇಚ್ಚವಾಗಿ ಬಿದ್ದ ಮಳೆಯಿಂದಾಗಿ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ. ಬತ್ತಿ ಬರಿದಾಗಿದ್ದ ಕೆರೆಗಳು ತುಂಬಿ ಹರಿಯುತ್ತವೆ. ಇದರಿಂದ ಸಂತಸಗೊಂಡು ಜೋಕುಮಾರನು ಹಾಗೇ ಹೊಲಗದ್ದೆಗಳಲ್ಲಿ ಸಂಚರಿಸುತ್ತಿದ್ದಾಗ ಸುಂದರಿಯಾದ ಒಬ್ಬ ಯುವತಿಯನ್ನು ನೋಡುತ್ತಾನೆ. ಆಕೆ ಅಗಸರ ಯುವತಿ. ಅವಳನ್ನು ಇಷ್ಟಪಟ್ಟ ಜೋಕುಮಾರನನ್ನು ಸಹಿಸದ ಆ ಯುವತಿಯ ತಂದೆ, ಜೋಕುಮಾರನ ತಲೆಯನ್ನು ಕತ್ತರಿಸಿ ನದಿಗೆ ಎಸೆದುಬಿಡುತ್ತಾನೆ. ಆ ತಲೆಯು ಒಬ್ಬ ಬೆಸ್ತರವನಿಗೆ ದೊರಕುತ್ತದೆ. ಆತನು ಜೋಕುಮಾರನನ್ನು ಗುರುತಿಸಿ, ತಮ್ಮ ಬೆಳೆಗಳನ್ನು ರಕ್ಷಿಸಿ ತಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತರುತ್ತಾನೆ. ಊರವರೆಲ್ಲ ಸೇರಿ ಜೋಕುಮಾರನಿಗೆ ಪೂಜೆ ಸಲ್ಲಿಸುತ್ತಾರೆ. ಅಂದಿನಿಂದ ಈ ಜೋಕುಮಾರನ ಪೂಜೆ ಆಚರಣೆಗೆ ಬಂತೆಂದು ಪ್ರತೀತಿ ಇದೆ.

( ಜೋಕುಮಾರಸ್ವಾಮಿಯ ಹಬ್ಬದ ಅಂಗವಾಗಿ ಪುಟ್ಟಿಯಲ್ಲಿ ಹೊತ್ತು ಹಾಡು ಹೇಳುತ್ತ ಮನೆಗಳಿಗೆ ಸಂಚಾರ ಹೊರಟಿರುವುದು)


ಸಾಮಾನ್ಯವಾಗಿ ಜೋಕುಮಾರಸ್ವಾಮಿಯನ್ನು ಪುಟ್ಟಿಯಲ್ಲಿ ಹೊತ್ತ ಮಹಿಳೆಯರು ಹಾಗೂ ಪುರುಷರ ಗುಂಪು ಜೋಕುಮಾರನ ಕುರಿತಾದ ಕತೆ, ಹಾಡುಗಳನ್ನು ಹೇಳುತ್ತಾ ಸಂಚರಿಸುತ್ತಾರೆ. ನಿಗದಿಪಡಿಸಿದ ಹಾಗೂ ಸಂಚರಿಸಿದ ಮನೆಗಳಲ್ಲಿ ಅಡಿಕೆ, ಎಲೆ, ಅಕ್ಕಿ, ರಾಗಿ, ಎಣ್ಣೆ, ಉಪ್ಪು, ಹುಣಸೆ, ಒಣಮೆಣಸಿನಕಾಯಿ, ಬೆಲ್ಲ ಮುಂತಾದ ಪದಾರ್ಥಗಳನ್ನು ಕೊಡುವರು. ಜೋಕುಮಾರನನ್ನು ಹೊತ್ತು ಸಂಚರಿಸುವುದರಲ್ಲಿನ ನಿಯಮವೆಂದರೆ ೭ ದಿನ ೭ ಊರು ತಿರುಗಬೇಕು ಎಂಬುದು. ೭ ದಿನಗಳ ಪ್ರಕ್ರಿಯೆ ಕೊನೆಗೊಂಡ ನಂತರ ಕೊನೆಯ ದಿನ ಗುರುತಿಸಿದ ಮನೆಯಲ್ಲಿ ಜೋಕುಮಾರನ ಮೂರ್ತಿಗೆ ಚೂರಿ ಹಾಕುವರು. ನಂತರ ಜೋಕುಮಾರ ಸತ್ತನೆಂದು ಅಗಸರ ಬಂಡೆ ಅಡಿ ಮಣ್ಣಿನಲ್ಲಿ ಹೂತು ಹಾಕಿ ಬರುವರು. ಹೀಗೆ ಹೂತಿಡುವ ಸಂದರ್ಭದಲ್ಲಿ ವಿಧಿ ವಿಧಾನಗಳಿವೆ. ನಂತರ ಸಂಚರಿಸಿದ ಸಂದರ್ಭದಲ್ಲಿ ದೊರೆತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುವರು. ಜೋಕುಮಾರಸ್ವಾಮಿ ಈಗ ತಾಲೂಕಿನ ಮನೆ ಮನೆಗಳಿಗೆ ಸಂಚಾರ ಹೊರಟಿದ್ದಾನೆ.

ಮಂಗಳವಾರ, ಸೆಪ್ಟೆಂಬರ್ 6, 2011

ಜನಪದ ಲೋಕದ ಭ್ರಷ್ಟಾಚಾರ ವಿರೋಧಿ ನಾಯಕರುಗಳು

ಡಾ. ಅರುಣ್ ಜೋಳದಕೂಡ್ಲಿಗಿ



ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿದ್ದು, ಹಜಾರೆಯವರ ಹೋರಾಟದ ಹಿಂದಣ ಅಪಾಯಗಳನ್ನು ವಿದ್ವತ್ ಲೋಕ ವಿಮರ್ಶೆಗೆ ಒಡ್ಡಿದ್ದು, ಸರಕಾರ ಅವರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿ ಈಗ ಕಾರ್ಯಪ್ರವೃತ್ತವಾಗಿರುವುದೂ, ಎಲ್ಲವೂ ನಿಧಾನಕ್ಕೆ ನೆನಪಿನ ಪುಟ ಸೇರುತ್ತಿವೆ.

ನನಗೀಗ ಜನಪದ ಲೋಕದ ಅಣ್ಣಾ ಹಜಾರೆಗಳು ನೆನಪಾಗತೊಡಗಿದ್ದಾರೆ.ಅಂದರೆ ನಮ್ಮ ನಮ್ಮ ಹಳ್ಳಿಗಳಲ್ಲಿ, ನಮ್ಮ ನಡುವೆಯೇ ಇರುವ ಗ್ರಾಮೀಣ ಪ್ರದೇಶದ ಸಮಾನ್ಯ ಜನರು ಕೂಡ ಭ್ರಷ್ಟಾಚಾರವನ್ನು ವಿರೋಧಿಸಿ ತುಂಬಾ ಹಿಂದಿನಿಂದಲೂ ಹೋರಾಡುತ್ತಾ ಬಂದಿದ್ದಾರೆ. ಅವರುಗಳು ಭ್ರಷ್ಟಾಚಾರ ಎನ್ನುವ ದೊಡ್ಡ ಬ್ಯಾನರಿನಡಿ ಹೋರಾಡದಿದ್ದರೂ, ಲಂಚ ವಿರೋಧಿ ವ್ಯಕ್ತಿತ್ವವನ್ನಂತೂ ರೂಪಿಸಿಕೊಂಡವರು. ಆದರೆ ಅಂತವರನ್ನು ಬೆಂಬಲಿಸಿ ಎಷ್ಟು ಜನ ಹಿಂದೆ ನಿಂತರು ಎಂದು ಕೇಳಿಕೊಂಡರೆ ಅದು ಮಾತ್ರ ಶೂನ್ಯ.

ಹಳ್ಳಿ ಜನ ಅದೇನು ಭ್ರಷ್ಟಾಚಾರವನ್ನು ವಿರೋಧಿಸಿಯಾರು? ಎಂದು ಕೆಲವರು ಮೂಗಿಮುರಿಯುವ ಸಾಧ್ಯತೆಯಿದೆ. ಅಥವಾ ಜಾನಪದ ಮತ್ತು ಭ್ರಷ್ಟಾಚಾರ ಎಂಬ ವಿಷಯವೊಂದನ್ನು ಕುರಿತು ಮಾತನಾಡಲು ಹೊರಟರೆ ಸಾಂಪ್ರದಾಯಿಕ ಜಾನಪದ ವಿದ್ವಾಂಸರು ಇದೇನು ತಲೆ ಕೆಟ್ಟ ಯೋಚನೆ ಎಂದು ತಳ್ಳಿ ಹಾಕುವ ಸಾಧ್ಯತೆಯೂ ಇದೆ. ಇವೆರಡನ್ನೂ ಗಮನದಲ್ಲಿಟ್ಟುಕೊಂಡು ನನ್ನ ಕೆಲವು ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಹಳ್ಳಿ ಜನರ ಸಂಪರ್ಕಕ್ಕೆ ಬರುವ ಅಧಿಕಾರಿಗಳ ಸಮೂಹ ತೀರಾ ಚಿಕ್ಕದೇನಲ್ಲ. ವೃದ್ಧಾಪ್ಯ, ವಿಧವಾ ವೇತನ ಕೊಡುವ ಪೋಷ್ಟಮ್ಯಾನ್ ನಿಂದ ಇದು ಆರಂಭವಾಗುತ್ತದೆ. ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ ಕಛೇರಿ, ನೋಂದಣಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಬ್ಯಾಂಕ್‌ಗಳು, ನೀರಾವರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಮಾರುಕಟ್ಟೆ, ಪೋಲಿಸ್ ಇಲಾಖೆ ಇನ್ನು ಮುಂತಾದ ಇಲಾಖೆಯ ಅಧಿಕಾರಿಗಳ ಜತೆ ಜನರು ಒಡನಾಡುವ ಪ್ರಸಂಗ ಬರುತ್ತದೆ. ನಾನಾ ಕಾರಣಗಳಿಗಾಗಿ ಈ ಇಲಾಖೆಯ ಅಧಿಕಾರಿಗಳು ರೈತರಲ್ಲಿ ಲಂಚ ಪಡೆದು ಅವರ ಕೆಲಸಗಳನ್ನು ಮಾಡಿಕೊಡುತ್ತಾರೆ. ಇದು ಈಚೆಗೆ ತೀರಾ ಸಾಮಾನ್ಯ ಸಂಗತಿ. ಕೆಲವರು ಈ ಅಧಿಕಾರಿಗಳನ್ನು ಎದುರು ಹಾಕಿಕೊಂಡರೆ ನಮ್ಮ ಕೆಲಸಗಳು ಆಗುವುದಿಲ್ಲ ಎಂದು ಹೆದರಿ ಸಾಲ ಮಾಡಿಯಾದರೂ ಲಂಚ ಕೊಟ್ಟು ಕೆಲಸಗಳನ್ನು ಮಾಡಿಸಿಕೊಳ್ಳುವ ಒಂದು ವರ್ಗವಿದೆ. ಇಂತಹ ವರ್ಗದಿಂದಾಗಿಯೇ ಭ್ರಷ್ಟಾಚಾರ ತನ್ನ ಬಾಹುಗಳನ್ನು ಚಾಚಿಕೊಳ್ಳಲು ಅನುವಾಗುತ್ತದೆ.

ಇದಕ್ಕಿಂತ ಭಿನ್ನವಾದ ಇನ್ನೊಂದು ವರ್ಗವಿದೆ. ಅದು ಇಂತಹ ಅಧಿಕಾರಿಗಳ ಜತೆ ಲಂಚಕೊಡದಿರುವ ಬಗ್ಗೆ ಸೆಣಸಾಡುವ ವರ್ಗ. ಅವರ ಸಾಮಾನ್ಯ ತಿಳುವಳಿಕೆಯೆಂದರೆ ಸರಕಾರ ಸಂಬಳ ಕೊಡುವಾಗ ನಾವೇಕೆ ಅವರಿಗೆ ಹಣಕೊಡಬೇಕು ಎನ್ನುವುದು ಅವರ ವಾದ. ಅದೇನೆ ಆಗಲಿ ಒಂದು ಪೈಸೆಯನ್ನೂ ಲಂಚ ಕೊಡದೆ ಕೆಲಸ ಮಾಡಿಕೊಳ್ಳುವೆ ಎಂದು ಅಲೆದಲೆದು ಕೆಲಸ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕೂ ಜಗ್ಗದಿದ್ದಾಗ ಭಿನ್ನರೀತಿಯಲ್ಲಿ ಪ್ರತಿರೋಧ ಒಡ್ಡಿ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿ ಕೆಲಸ ಮಾಡಿಸಿಕೊಳ್ಳುವುದೂ ಉಂಟು. ಇನ್ನೂ ಮುಂದುವರೆದು ಅವರದೇ ರೀತಿಯ ಹೋರಾಟವನ್ನೂ ಸಹ ಮಾಡುತ್ತಾರೆ. ಇಂತಹ ಹೋರಾಟಗಳು ಎಲ್ಲೂ ದಾಖಲಾಗುವುದಿಲ್ಲವಷ್ಟೆ. ಇವರುಗಳೆಲ್ಲಾ ನಮ್ಮ ನಮ್ಮ ಹಳ್ಳಿಗಳಲ್ಲೇ ನೆಲೆಸಿರುವ ಅಣ್ಣಾ ಹಜಾರೆಗಳು ಎಂದು ನನಗೀಗ ಅನ್ನಿಸತೊಡಗಿದೆ. ಹೀಗೆ ಸೆಣಸಾಡಿದ ಕೆಲವು ಕಥನಗಳು ಹೀಗಿವೆ.

ಕಥನ: ಒಂದು


ನಮ್ಮ ಊರಿನಲ್ಲಿ ಬರಮಜ್ಜಿ ಎನ್ನುವ ಅಜ್ಜಿ ಇದ್ದಾಳೆ. ಅವಳು ವೃದ್ಧಾಪ್ಯ ವೇತನ ಪಡೆಯುವಾಗ ಪೋಷ್ಟಮ್ಯಾನ್‌ಗೆ ಕಮಿಷನ್ ಕೊಡುತ್ತಿರಲಿಲ್ಲ. ಅಜ್ಜಿ ಕೇಳುವ ಪ್ರಶ್ನೆ ನಿನಗೆ ಸರಕಾರ ಸಂಬಳ ಕೊಡಲ್ಲೇನು, ಮತ್ಯಾಕ ನಾ ಕೊಡ್ಲಿ ಎನ್ನುವುದು. ಈ ಜಿದ್ದಿಗಾಗಿ ಪೋಷ್ಟಮ್ಯಾನ್ ನಾಲ್ಕು ತಿಂಗಳಾದರೂ ಸಂಬಳ ಕೊಡದಿದ್ದಾಗ ಅಜ್ಜಿ ಅಂಚೆ ಕಚೇರಿಗೆ ಹೋಗಿ ಕೇಳಿದಳು. ಆಗ ಪೋಷ್ಟಮಾಷ್ಟರ್ ನೀನು ಹಣ ಕೊಡಲು ಬಂದಾಗ ಇರಲಿಲ್ಲ ಎಂದು ಹಣ ವಾಪಸ್ ಕಳಿಸಲಾಗಿದೆ, ನೀನು ತಾಲೂಕು ಕಚೇರಿಗೆ ಹೋಗಿ ಮತ್ತೆ ಬಿಲ್ ಹಾಕಿಸಿಕೊಂಡು ಬಾ ಎಂದು ಹೇಳಿದ.
ಆಗ ಅಜ್ಜಿಗೆ ದಿಕ್ಕುತೋಚದೆ, ತಾಲೂಕು ಕಛೇರಿಗೆ ಅಲೆದಾಗ ಅಲ್ಲಿನ ಅಧಿಕಾರಿಗಳು ಅಜ್ಜಿಯನ್ನು ಲಂಚ ಕೇಳಿದರು. ಅಜ್ಜಿ ಅಲ್ಲಿಯೂ ಪೆಡಸಾಗಿಯೇ ಉತ್ತರಿಸಿತು. ಹೀಗಾಗಿ ಒಂದು ವಾರ ಅಜ್ಜಿಯನ್ನು ಅಲೆದಾಡಿಸಿದರು. ಅಜ್ಜಿಕೊನೆಗೆ ನಾನು ಸಾಯೋತನಕ ಈ ಕಚೇರಿ ಬಿಟ್ಟು ಹೋಗಲ್ಲ ಎಂದು ತಾಲೂಕು ಕಛೇರಿಯ ಮುಂದೆ ಕೂತಿತು. ಈ ಸುದ್ದಿ ಹೇಗೋ ತಹಶೀಲ್ದಾರರ ಕಿವಿಗೆ ಬಿದ್ದು, ಅವರೇ ಅಜ್ಜಿಯನ್ನು ಖುದ್ದಾಗಿ ವಿಚಾರಿಸಿ ಲಂಚ ಕೇಳಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಅಜ್ಜಿಯ ವೇತನವನ್ನು ಬಿಡುಗಡೆಗೊಳಿಸಿದರು. ಆಗ ಪೋಷ್ಟಮ್ಯಾನ್ ಉದ್ದೇಶಪೂರ್ವಕವಾಗಿ ಅಜ್ಜಿಯ ವೇತನವನ್ನು ವಾಪಸ್ ಮರಳಿಸಿದ್ದಾರೆ ಎಂದು ತಿಳಿದು ತಹಶೀಲ್ದಾರ್ ಸಂಬಂದಿಸಿದ ಅಧಿಕಾರಿಗಳಿಂದ ಪೋಷ್ಟಮ್ಯಾನ್‌ನನ್ನು ತರಾಟೆಗೆ ತೆಗೆದುಕೊಳ್ಳುವಂತೆ ನೋಡಿಕೊಂಡರು. ಇದು ಮತ್ತೆ ಪುನರಾವರ್ತನೆ ಆಗಲಿಲ್ಲ.

ಕಥನ: ಎರಡು

ನಮ್ಮ ಭಾಗದಲ್ಲಿ ಬಿ.ಡ. ಗೌಡ ಎಂಬ ಗ್ರಾಮ ಲೆಕ್ಕಾಧಿಕಾರಿ ಇದ್ದ. ಈತನು ಹಣದಾಹಿ. ಜಾತಿ ಪ್ರಮಾಣ ಪತ್ರಕ್ಕೆ ಸಹಿ ಹಾಕಲು ಸಹಾ ಹಣ ಕೀಳುತ್ತಿದ್ದ. ಇದರಿಂದ ಜನ ಬೇಸತ್ತಿದ್ದರು. ಹಣಕ್ಕಾಗಿ ಅವರ ಹೊಲ ಇವರಿಗೆ, ಇವರ ಹೊಲ ಅವರಿಗೆ ಬದಲಾಯಿಸಿಬಿಡುವ ಮಟ್ಟಕ್ಕೂ ಇಳಿದಿದ್ದ. ಕರೆಮೂಗಜ್ಜ ಎಂಬ ಅಜ್ಜನಿದ್ದ. ಆತ ಕಡುಕೋಪಿಷ್ಟ. ತನ್ನ ಹೊಲದ ಪಹಣಿ ಕೊಡುವುದಾಗಿ ಬಿ.ಡ. ಗೌಡ ಅವರಲ್ಲಿ ಕೇಳಿದ. ಆತ ಎರಡು ಸಾವಿರ ಕೊಡುವುದಾಗಿ ಕೇಳಿದ್ದ. ಇದರಿಂದ ಕೆಂಡಾಮಂಡಲವಾದ ಮೂಗಜ್ಜ ನಾಳೆ ನಮ್ಮೂರಿಗೆ ಬನ್ನಿ ಕೊಡುತ್ತೇನೆಂದು ಹೇಳಿದನು.ಮರುದಿನ ಗೌಡರು ಹಳ್ಳಿಗೆ ಬಂದರು. ಊರ ಮುಂದೆ ನೆರೆದ ಜನರ ಎದುರು ಮೂಗಜ್ಜ ಗೌಡರ ಬಳಿ ಬಂದು, ಗೌಡ್ರೆ ನನ್ನತ್ರ ಅಷ್ಟು ಹಣ ಇಲ್ಲ, ಮುಂದಿನ ತಿಂಗಳು ಕೊಡ್ತಿನಿ ಈಗ ಪಹಣಿ ಕೊಡ್ರಿ ಎಂದ. ಅದಕ್ಕೆ ಗೌಡ ಮುಂದಿನ ತಿಂಗಳೇ ಪಹಣಿ ಕೊಡುವೆ ಬಿಡು ಎಂದನು. ಇದರಿಂದ ಕೋಪಗೊಂಡ ಮೂಗಜ್ಜ ಕಾಲಲ್ಲಿ ಇರುವ ಚಪ್ಪಲಿಯನ್ನು ಕಿತ್ತು ಮುಖ ಮೋರೆ ನೋಡದಂತೆ ಹೊಡೆದೇ ಬಿಟ್ಟ. ಜನ ಮೂಗಜ್ಜನನ್ನು ಬಿಡಿಸುವ ಹೊತ್ತಿಗೆ ಗೌಡರು ಹಣ್ಣುಗಾಯಿ ನೀರುಗಾಯಿ ಆಗಿ ಮೂಗು ಬಾಯಿಯಲ್ಲಿ ರಕ್ತ ಸೋರುತ್ತಿತ್ತು. ಆತ ಪಟ್ಟಣಕ್ಕೆ ಹೋಗಿ ಮೂಗಜ್ಜನ ಮೇಲೆ ಪೋಲಿಸ್ ಕಂಪ್ಲೇಟ್ ಕೊಟ್ಟನು. ಇದನ್ನು ಇಡೀ ಊರಿಗೆ ಊರೇ ಪೋಲಿಸ್ ಠಾಣೆ ಎದುರು ಧರಣಿ ಕೂತು, ಗೌಡರ ಬ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿದರು. ಇದರ ಪರಿಣಾಮ ಗೌಡರನ್ನು ಅಮಾನತ್ತಿನಲ್ಲಿಡಲಾಯಿತು. ಈ ಘಟನೆಯಿಂದಾಗಿ ಆ ಭಾಗದ ಗ್ರಾಮಲೆಕ್ಕಾಧಿಕಾರಿಗಳಿಗೆ ಒಂದು ಬಗೆಯ ಬಿಸಿ ತಟ್ಟಿದಂತಾಯಿತು.

ಕಥನ: ಮೂರು


ಕೂಡ್ಲಿಗಿ ತಾಲ್ಲೂಕು ಹಾರಕನಾಳಿನಲ್ಲಿ 1998ರಲ್ಲಿ ನಡೆದ ಒಂದು ಘಟನೆ. ಅಂದು ಊರಿಗೆ ಲೈನ್‌ಮ್ಯಾನ್ಗಳ ಗುಂಪೊಂದು ಬಂದಿತ್ತು (ಕೆ.ಇ.ಬಿ. ನೌಕರರು) ಬಾಕಿ ಉಳಿದ ಕರೆಂಟ್ (ಎಲೆಕ್ಟ್ರಿಕಲ್) ಬಿಲ್ಲುಗಳನ್ನು ವಸೂಲಿ ಮಾಡುವುದು ಆ ದಿನದ ಉದ್ದೇಶವಾಗಿತ್ತು. ಹಣಪಾವತಿ ಮಾಡದೆ ಬಾಕಿ ಇರುವ ಮನೆಗಳ ಕರೆಂಟ್ ಕನೆಕ್ಷನ್ ಕಟ್ ಮಾಡುತ್ತಿದ್ದರು. ಹಾರಕನಾಳಿನ ಭರಮನಗೌಡರದು ಐದು ತಿಂಗಳ ಬಿಲ್ ಬಾಕಿ ಇತ್ತು. ಅವರು ‘ಈಗ ದುಡ್ಡು ಇಲ್ಲ ಬೆಳೆ ಬಂದಿಂದೆ ಕಟ್ತೀವಿ’ ಎಂದರು. ಕೆ.ಇ.ಬಿ. ನೌಕರನೊಬ್ಬ ‘ಆಯ್ತು ನಾವು ಆವಾಗ್ಲೆ ಕನೆಕ್ಷನ್ ಕೊಡ್ತೀವಿ’ ಎಂದು, ಲೈನ್ ಕಟ್ ಮಾಡಲು ಕರೆಂಟ್ ಕಂಬವನ್ನು ಹತ್ತಿದ. ಭರಮನ ಗೌಡರಿಗೆ ಸಿಟ್ಟು ಅವಮಾನ ಎರಡೂ ಆಗಿ ಕಲ್ಲು ಹಿಡಿದು ‘ಲೇ ಲೈನ್ ಬಂದ್ ಕಟ್ ಮಾಡು ಕಲ್ಲಿಲೇ ಹೊಡಿತೀನಿ… ಸೊಂಡೂರು ರಾಜರದು ಕೋಟಿಗಟ್ಟಲೆ ಕರೆಂಟ್ ಬಿಲ್ಲು ಬಾಕಿ ಐತಿ ಅದನ್ನು ವಸೂಲಿ ಮಾಡು ನೋಡ್ತೀನಿ… ಬಂದ್ ಬಿಟ್ಟ ನಮ್ಮಂತ ಬಡವರತ್ರ,’ ಎಂದು ಹೊಡೆಯಲು ಸಜ್ಜಾಗಿ ನಿಂತನು. ಕಂಬದ ಮೇಲಿನ ಲೈನ್ ಮ್ಯಾನ್ ಹೆದರಿ ಲೈನ್ ಕಟ್ ಮಾಡದೆ ಇಳಿದ. ಆತನ ಮುಖದಲ್ಲಿ ಅವಮಾನದ ಛಾಯೆಯಿತ್ತು. ಈ ಭಾಗದಲ್ಲಿ ಕೆಇಬಿ ಯವರು ಸಾಮಾನ್ಯವಾಗಿ ಕೇಳುವ ಮಾತು ಇದಾಗಿತ್ತು. ಈ ಪ್ರಶ್ನೆಗೆ ಇಲಾಖೆಯವರು ಉತ್ತರ ನೀಡಲು ಅಸಹಾಯಕರಾಗಿರುತ್ತಿದ್ದರು. ಆ ನಂತರ ಸಂಡೂರು ಘೋರ್ಪಡೆ ಅವರ ಕಾರ್ಖಾನೆಯ ಸುಮಾರು ಮೂರ್ನಾಲಲ್ಕು ಕೋಟಿಯಷ್ಟು ಬಾಕಿ ಹಣವನ್ನು ಸಿಕ್ ಇಂಡಸ್ಟ್ರಿ ಎಂದು ಸರಕಾರ ಮನ್ನ ಮಾಡಿತು.
ಅಂದು ಭರಮನಗೌಡರು ಘೋರ್ಪಡೆ ಕಂಪನಿ ವಿರುದ್ಧ ಎತ್ತಿದ ಪ್ರಶ್ನೆಯನ್ನು ಜನರು ದೊಡ್ಡದಾಗಿ ಕೂಗು ಹಾಕಿದ್ದರೆ, ಅದೊಂದು ದೊಡ್ಡ ಸಂಗತಿಯೇ ಆಗುತ್ತಿತ್ತು. ಆದರೆ ಪ್ರತಿರೋಧದ ಬಿಡಿ ಬಿಡಿ ದ್ವನಿಗಳು ಒಟ್ಟುಗೂಡಲಿಲ್ಲ.

ಕಥನ: ನಾಲ್ಕು

ಕೂಡ್ಲಿಗಿ ತಾಲೂಕಿನ ಒಂದು ಹಳ್ಳಿಯಲ್ಲಿ ಶಾರದಮ್ಮ ಎನ್ನುವ ನಡು ವಯಸ್ಸಿನ ಹೆಣ್ಣುಮಗಳಿದ್ದಾಳೆ. ಆಯಮ್ಮ ಯಾವುದೇ ಪ್ರಜಾಪ್ರತಿನಿಧಿಗಳು ಬಂದರೆ ಯಾವ ಮುಲಾಜನ್ನೂ ನೋಡದೆ, ನಮ್ಮೂರಿಗೆ ಏನು ಕೆಲಸ ಮಾಡ್ಸೀರಿ ತೋರಿಸ್ರಿ? ಜನರ ಹೊಟ್ಟಿ ಮೇಲೆ ಹೊಡ್ದು ತಮ್ಮ ಹೊಟ್ಟಿ ತುಂಬ್ಸಿಕೊಳ್ಳೋ ಜನ ನೀವು ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. ಇದು ಆಯಮ್ಮ ತನ್ನ ಶಾಲಾ ದಿನಗಳಲ್ಲಿ ಪ್ರಜಾಪ್ರಭುತ್ವ ಮಾದರಿಯ ಬಗ್ಗೆ ಕಲಿತ ಪಾಠದಿಂದಾಗಿ ಬಂದ ತಿಳುವಳಿಕೆಯಾಗಿತ್ತು.
ಹಾಗಾಗಿ ಶಾರದಮ್ಮನ ಓಣಿಯಲ್ಲಿ ಗ್ರಾಮಪಂಚಾಯ್ತಿ ಸದಸ್ಯರು ಅಪ್ಪಿ ತಪ್ಪಿಯೂ ಸುಳಿಯುತ್ತಿರಲಿಲ್ಲ. ಇನ್ನು ಚುನಾವಣೆಯ ಸಮಯದಲ್ಲಿ ಶಾರದಮ್ಮ ಕೂಲಿಗೆ ಹೋಗದೆ, ಪ್ರಚಾರಕ್ಕೆ ಬರುವ ಸದ್ಯದ ಎಮ್ಮೆಲ್ಲೆಯನ್ನು ತರಾಟೆಗೆ ತೆಗೆದುಕೊಳ್ಳಲಿಕ್ಕಾಗಿಯೇ ಕಾದಿರುತ್ತಿದ್ದಳು. ಇನ್ನು ಯಾರೇ ಲಂಚ ಪಡೆಯುವ ಸುದ್ದಿ ತಿಳಿಯುತ್ತಲೂ ಅವರೊಂದಿಗೆ ತನ್ನದೇ ದಾಟಿಯಲ್ಲಿ ಜಗಳತೆಗೆದು ರಂಪಾಟ ಮಾಡುತ್ತಿದ್ದಳು. ಇದು ಸಿನಿಕತೆಯಂತೆ ಕಂಡರೂ ಶಾರದಮ್ಮನ ಒಳಗೆ ಒಂದು ನೈತಿಕವಾದ ಶಕ್ತಿ ಜಾಗೃತವಾಗುತ್ತಿದ್ದಂತೆ ಕಾಣುತ್ತದೆ. ಬರು ಬರುತ್ತಾ ಜನರು ಶಾರದಮ್ಮನ ಮಾತನ್ನು ಗೇಲಿ ಮಾಡಲು ಶುರು ಮಾಡಿದರು. ಇದರಿಂದ ಮನನೊಂದ ಶಾರದಮ್ಮ ಕಾಲನಂತರ ಮೌನಿಯೇ ಆದಳು. ಅಂದು ಶಾರದಮ್ಮನ ಜತೆ ಆ ಊರಿನವರು ದ್ವನಿ ಸೇರಿಸಿದ್ದರೆ ಆ ಹಳ್ಳಿಯೇ ಭ್ರಷ್ಟಾಚಾರ ವಿರೋಧಿ ಹಳ್ಳಿಯಾಗುವ ಸಾದ್ಯತೆಗಳೂ ಇದ್ದವು.

ಈ ಮೇಲಿನ ನಾಲ್ಕು ಕಥನಗಳು ಒಂದು ಮಾದರಿಯಷ್ಟೆ. ಇಂತಹ ನೂರಾರು ಕಥನಗಳನ್ನು ಆಯಾ ಭಾಗದಿಂದ ಸೇರಿಸುತ್ತಾ ಹೋಗಬಹುದು. ಆದರೆ ಅಂತಹ ಧೋರಣೆ ಇರುವವರನ್ನು ಹಾಸ್ಯಕ್ಕೆ ವಸ್ತುವಾಗಿಸಿಕೊಳ್ಳುವ ಘಟನೆಗಳೇ ಹೆಚ್ಚು. ಅಂದರೆ ತಲೆಕೆಟ್ಟವರೆಂದೂ, ಈ ಕಾಲದ ಜಾಯಮಾನ ತಿಳಿಯದ ಹಳೆ ಗಾಂಧಿ ಕಾಲದವರೆಂದು ಟೀಕಿಸಿ ಸುಮ್ಮನಾಗುತ್ತಾರೆ. ಇವರ ಅರ್ಥದಲ್ಲಿ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವವ ಆಧುನಿಕ ಕಾಲಕ್ಕೆ ತೆರೆದುಕೊಂಡವನೆಂತಲೂ, ಅಂತವರು ಯಂಗ್ ಅಂತಲೂ ಆಗುತ್ತದೆ.

ಇಂದು ಅಣ್ಣಾ ಹಜಾರೆಗೆ ಬೆಂಬಲ ಸೂಚಿಸಿ ಘೆರಾವು ಮಾಡಿ ಕೂಗು ಹಾಕುವ ಅದೇ ಯುವಕರು ತಮ್ಮದೇ ಊರಿನ ಭ್ರಷ್ಟಾಚಾರಿ ವಿರೋಧಿಯೊಬ್ಬರನ್ನು ಬೆಂಬಲಿಸಿ, ತಮ್ಮ ತಮ್ಮ ವ್ಯಾಪ್ತಿಯಲ್ಲಿಯೇ ಭ್ರಷ್ಟಾಚಾರ ತೊಡೆದು ಹಾಕಲು, ಲಂಚ ವಿರೋಧಿ ಮನೋಭಾವ ಬೆಳೆಸಲು ಮುಂದಾಗುವುದಿಲ್ಲ. ಇದೊಂದು ಈ ಕಾಲದ ವಿಪರ್ಯಾಸ. ಹೀಗಾದಲ್ಲಿ ಇಡೀ ಭ್ರಷ್ಟಾಚಾರ ನಿರ್ಮೂಲನವಾಗುತ್ತದೆ ಎನ್ನುವುದು ನನ್ನ ನಿಲುವಲ್ಲ, ಆದರೆ ಬುಡಮಟ್ಟದಲ್ಲಿ ಒಂದು ಸಮಸ್ಯೆಯನ್ನು ಗುರುತಿಸುವಾಗ ಈ ಎಲ್ಲಾ ಅಂಶಗಳು ಮುಖ್ಯವಾಗುತ್ತದೆ ಎನ್ನುವುದಷ್ಟೆ ನನ್ನ ಆಶಯ.

ಈಗ ನಾವುಗಳು ದೂರ ಗುಡ್ಡದ ಹಜಾರೆಯವರನ್ನು ನುಣ್ಣಗೆಂಬತೆ ನೋಡುವ ಬದಲು, ಕಣ್ಣು ತೆರೆದು ನಮ್ಮ ನಮ್ಮ ಸುತ್ತಮುತ್ತಲ ಲಂಚ ವಿರೋಧಿ ಪ್ರಾಮಾಣಿಕ ವ್ಯಕ್ತಿತ್ವಗಳನ್ನು ಗುರುತಿಸಿ ಅಂತವರಿಗೆ ಬೆಂಬಲವಾಗಿ ನಿಲ್ಲುವ, ಅವರುಗಳ ಜತೆ ಸಹವರ್ತಿಗಳಾಗುವ ಅಗತ್ಯವಿದೆ. ಜಾನಪದ ಅಧ್ಯಯನಕಾರರೂ ಸಹ ಲಂಚ ವಿರೋಧಿ ಜನಪದ ನಾಯಕರುಗಳ ಬಗ್ಗೆ ಮಾಹಿತಿ ಕಲೆಹಾಕಿ ಅಧ್ಯಯನ ಮಾಡಿದರೆ ಹೊಸ ನೆಲೆಯೊಂದು ತೆರೆದುಕೊಳ್ಳುವ ಸಾದ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಭಾನುವಾರ, ಸೆಪ್ಟೆಂಬರ್ 4, 2011

ಧಾನ್ಯಗಳನ್ನು ಸಂಗ್ರಹಿಸುವ ಜನಪದರ ಓಡೆ(ವಡೇವು)

(ಧಾನ್ಯಗಳನ್ನು ಸಂಗ್ರಹಿಸುವ ಹಿಂದಿನ ಕಾಲದ ಓಡೆ(ವಡೇವು) ಕೂಡ್ಲಿಗಿ ತಾಲೂಕಿನ ಕುದುರೆಡವು ಗ್ರಾಮದಲ್ಲಿದೆ)

-ಸಿದ್ಧರಾಮ ಹಿರೇಮಠ.


ಹಿಂದಿನ ಕಾಲದ್ಲಲಿ ಗ್ರಾಮಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸುವ ಗೋದಾಮುಗಳಿರಲಿಲ್ಲ. ಗ್ರಾಮಸ್ಥರು ತಾವೇ ತಮ್ಮ ಅನುಕೂಲಕ್ಕೆ ಹಲವಾರು ವಿಧಾನಗಳನ್ನು ಕಂಡುಕೊಂಡಿದ್ದರು. ಅವುಗಳಲ್ಲಿ ಧಾನ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಸಂಗ್ರಹಿಸಲು ನೆಲದಡಿಯ ಹಗೇವು ಹಾಗೂ ಮನೆಗಳಲ್ಲಿ ಸಂಗ್ರಹಿಸಲು ವಡೇವುಗಳನ್ನು ರೂಪಿಸಿದ್ದರು. ಮೂಲರೂಪದಲ್ಲಿ ಓಡೆ ಗ್ರಾಮಸ್ಥರ ಬಾಯಲ್ಲಿ ವಡೇವು ಎಂದು ರೂಪಾಂತರಗೊಂಡಿದೆ. ಇಂತಹ ವಡೇವುಗಳು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುದುರೆಡವು ಗ್ರಾಮದ ಹಳೆಯ ಮಣ್ಣಿನ ಮನೆಗಳಲ್ಲಿ ಈಗಲೂ ಇವೆ.

ಓಡೆ ಅಥವಾ ವಡೇವು ಎಂದರೆ ಧಾನ್ಯಗಳನ್ನು ಸಂಗ್ರಹಿಸುವ ದೊಡ್ಡ ಮಣ್ಣಿನ ಸಾಧನ ಅಥವಾ ಮಡಕೆ ಎನ್ನಬಹುದು. ಇವುಗಳಿಗೆ ಶತಮಾನದ ಇತಿಹಾಸವಿದೆ. ಆಗಿನ ಸಂದರ್ಭದಲ್ಲಿ ಧಾನ್ಯವನ್ನು ಸಂಗ್ರಹಿಸಲು ಮನೆಗಳಲ್ಲಿ ಚೀಲಗಳಾಗಲಿ, ಈಗಿನ ರೀತಿಯಲ್ಲಿ ದೊಡ್ಡ ಪಾತ್ರೆಗಳಾಗಲಿ ಇರಲಿಲ್ಲ. ಎಲ್ಲವೂ ಮಣ್ಣಿನ ಸಾಧನಗಳೇ ಆಗಿದ್ದವು. ಹೀಗಾಗಿ ಗ್ರಾಮೀಣ ಜನತೆ ಮನೆಯಲ್ಲಿ ತಮಗೆ ಬೇಕಾದ ಧಾನ್ಯವನ್ನು ಸಂಗ್ರಹಿಸಲು ಓಡೆಗಳನ್ನಿರಿಸಿಕೊಂಡಿದ್ದರು. ವಿಶೇಷವೆಂದರೆ ಓಡೆಗಳನ್ನು ಹೊರಗಿರಿಸುವುದಿಲ್ಲ. ಅವುಗಳನ್ನು ಮನೆ ಕಟ್ಟುವಾಗ ಗೋಡೆಗಳಲ್ಲಿಯೇ ಸೇರಿಸಿ ಕಟ್ಟಿರುತ್ತಾರೆ.

(ಗೋಡೆಯಲ್ಲಿಯೇ ಓಡೆಗಳನ್ನು ಸೇರಿಸಿ ಈ ರೀತಿಯಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತದೆ)

ಸುಮಾರು ೫ ಅಡಿಗಳಷ್ಟು ಎತ್ತರವಿರುವ ಓಡೆಗಳನ್ನು ಮಣ್ಣಿನ ಮನೆಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಅವುಗಳಲ್ಲಿಯೇ ಹುಗಿದು ಸೇರಿಸಿಯೇ ಮನೆ ಕಟ್ಟುತ್ತಿದ್ದರು. ಧಾನ್ಯವನ್ನು ಬೇಕಾದಾಗ ಅದರಿಂದ ತೆಗೆದುಕೊಳ್ಳುತ್ತಿದ್ದರು. ಇದು ಒಂದು ರೀತಿಯಲ್ಲಿ ಸುರಕ್ಷಿತ ವಿಧಾನ. ಮತ್ತೊಂದು ವಿಶೇಷವೆಂದರೆ ಹಿಂದಿನ ಕಾಲದಲ್ಲಿ ಶತ್ರುಗಳಿಂದ, ಕಳ್ಳರಿಂದ ಹಣ ಅಥವಾ ಚಿನ್ನದ ಆಭರಣಗಳನ್ನು ರಕ್ಷಿಸಲೂ ಸಹ ಓಡೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಸಾಕಷ್ಟು ಹಣ, ಆಭರಣಗಳನ್ನು ಓಡೆಗಳಲ್ಲಿನ ಧಾನ್ಯಗಳಲ್ಲಿ ತುಂಬಿ ಮನೆಗಳನ್ನು ನಿರ್ಮಿಸಿಬಿಟ್ಟಲ್ಲಿ ಎಂತಹ ಕಳ್ಳನಿಗೂ ಒಡವೆಗಳು ಸಿಗುತ್ತಿರಲಿಲ್ಲ. ಆದರೆ ಅದು ದೊಡ್ಡ ಮನೆಗಳಲ್ಲಿ ಅನುಸರಿಸುತ್ತಿದ್ದ ವಿಧಾನವಾದರೆ, ಗ್ರಾಮಗಳಲ್ಲಿ ಕಡುಬಡತನಗಳ ಮನೆಯಲ್ಲಿ ಕೇವಲ ಧಾನ್ಯವನ್ನು ಸಂಗ್ರಹಿಸಲು ಮಾತ್ರ ಇಂತಹ ಸಾಧನಗಳನ್ನು ಬಳಸುತ್ತಿದ್ದರು.

(ಮಣ್ಣಿನ ಹಳೆಯ ಮನೆಯ ಗೋಡೆಗಳು ಕುಸಿದಿರುವುದರಿಂದ ಈಗ ಓಡೆಗಳನ್ನು ಬದಿಗೆ ಸರಿಸಿ ಖಾಲಿಯಾಗಿರಿಸಲಾಗಿದೆ)

ತಾಲೂಕಿನ ಕುದುರೆಡವು ಗ್ರಾಮದ ಮನೆಗಳಲ್ಲಿ ಧಾನ್ಯವನ್ನು ಸಂಗ್ರಹಿಸುವ ಓಡೆಗಳು ಇಂದಿಗೂ ಇವೆ. ಇವು ಅತ್ಯಂತ ಹಳೆಯ ಮಣ್ಣಿನ ಮನೆಗಳಾದ್ದರಿಂದ ಓಡೆಗಳು ಹಾಗೆಯೇ ಸುರಕ್ಷಿತವಾಗಿವೆ. ಆದರೆ ಗ್ರಾಮದ ಜನತೆ ಕೇವಲ ಕೂಲಿ ಕೆಲಸ ಮಾಡುವವರಾದ್ದರಿಂದ ಈಗ ಅಂತಹ ಓಡೆಗಳಲ್ಲಿ ತುಂಬಲು ಧಾನ್ಯವೂ ಸಿಗದ ಕಡುಬಡತನವಿದೆ. ಕೆಲವರ ಮನೆಗಳು ಶಿಥಿಲಗೊಂಡು ಬಿದ್ದಿದ್ದು, ಗೋಡೆಯಲ್ಲಿನ ಓಡೆಗಳನ್ನು ಪ್ರತ್ಯೇಕವಾಗಿಟ್ಟು ಖಾಲಿ ಇಟ್ಟಿದ್ದಾರೆ. ‘ಮನ್ಯಾಗ ಉಣ್ಣಾಕ ಏನು ಇಲ್ಲರಿ, ಅದರಾಗ ಏನಂತ ಕಾಳುಕಡಿ ಇಡಕಾಗ್ತದ’ ಎಂದು ಪ್ರಶ್ನಿಸುತ್ತಾರೆ ಗ್ರಾಮದ ಹಂಪಮ್ಮ, ಸಕ್ರಮ್ಮ. ಇಂದಿಗೂ ಹೊಳಪು ಕಳೆದುಕೊಳ್ಳದ ಸುಂದರವಾಗಿ ರೂಪಿಸಿರುವ ಮಣ್ಣಿನ ಓಡೆಗಳು ನಮ್ಮ ಗ್ರಾಮೀಣ ಬದುಕಿನ ಕೈಗನ್ನಡಿಗಳಾಗಿ ಮಿಂಚುತ್ತಿವೆ. ಜಾನಪದ ಸಂಗ್ರಹಾಲಯಗಳಲ್ಲಿ ಸಂಗ್ರಹಿಸಬಹುದಾದ ಮಾದರಿಗಳಾಗಿವೆ.