ಗುರುವಾರ, ಆಗಸ್ಟ್ 11, 2011

ಫೋಕ್ ಯುನಿವರ್ಸಿಟಿ, ಲರ್ಗೊ, ಪ್ಲೊರಿಡಾ.




ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಆದ ನಂತರ ಇದು ಜಗತ್ತಿನಲ್ಲಿಯೇ ಮೊದಲ ಪ್ರಯತ್ನ ಎನ್ನುವ ಹೆಗ್ಗಳಿಕೆಯ ಮಾತುಗಳು ಕೇಳಿಬರುತ್ತಿವೆ. ಆದರೆ ಇದು ಜಗತ್ತಿನಲ್ಲಿ ಮೊದಲನೆಯದಲ್ಲ. ವಯಕ್ತಿಕ ನೆಲೆಯಲ್ಲಿ ಫೋಕ್ ಯುನಿವರ್ಸಿಟಿಯ ಪ್ರಯತ್ನ ೧೯೯೮ ರಲ್ಲಿ ಪ್ಲೊರಿಡಾದಲ್ಲಿ ನಡೆದಿದೆ. ಅದು ನಮ್ಮ ಕಲ್ಪನೆಯ ದೊಡ್ಡ ಗಾತ್ರದ ವಿಶ್ವವಿದ್ಯಾಲಯವಲ್ಲ. ಒಂದು ಕಾಲದ ದೇಸಿ ಸಂಗೀತವನ್ನು ಚಳವಳಿಯ ಹಾಗೆ ನಾಲ್ಕಾರು ಜನ ಅಭಿವೃದ್ಧಿ ಪಡಿಸಿ ಆ ದೇಶದ ಶಾಸ್ತ್ರೀಯ ಸಂಗೀತ ಪ್ರಕಾರಕ್ಕೆ ದೊಡ್ಡ ಸವಾಲಾಗುವಂತೆ ಬೆಳೆಸಲು ಫೋಕ್ ಯುನಿವರ್ಸಿಟಿಯನ್ನು ಬಳಸಿಕೊಂಡಿದ್ದಾರೆ. ಈ ಒಂದು ಯಶೋಗಾಥೆ ಇಲ್ಲಿದೆ.

    ಫ್ಲೊರಿಡಾ ಸೌಥ್ ಈಸ್ಟರ್ನ ಯುನಿಟೆಡ್ ಸ್ಟೇಟ್ಸನ ಒಂದು ಸ್ಟೇಟ್. ಇದು ಅಟ್ಲಾಂಟಿಕ್ ಮತ್ತು ಗಲ್ಫ ವಲಯದಲ್ಲಿ ಬರುತ್ತದೆ. ಇದರ ಒಂದು ಬದಿಗೆ ಅಟ್ಲಾಂಟಿಕ್ ಮಹಾಸಾಗರವಿದೆ. ಹದಿನೆಂಟು ಕೋಟಿ ಜನಸಂಖ್ಯೆ ಇರುವ ಇಲ್ಲಿ ವಿಶಿಷ್ಟ ಜನಪದವಿದೆ. ಇದರ ಪ್ರಭಾವದಿಂದ ಲರ್ಗೊ ನಗರದಲ್ಲಿ ಫೋಕ್ ಯುನಿವರ್ಸಿಟಿ ಹುಟ್ಟಲು ಕಾರಣವಾಗಿದೆ. ಈ ಯುನಿವರ್ಸಿಟಿ ಕೆಲವೇ ಕೆಲವು ಕನಸುಗಾರರ ಫಲ. ಮೈಕ್ ಟ್ವಿಟಿ, ಡೆವಿಡ್ ನಜ, ಜ್ಹಾನ್ ತ್ರಷರ್, ಮತ್ತು ಷೆರಿ ಈ ನಾಲ್ಕು ಜನರ ಪರಿಶ್ರಮದಿಂದ ಒಂದು ಫೋಕ್ ಯುನಿವರ್ಸಿಟಿ ರೂಪುಗೊಂಡಿದೆ. ಈ ತಂಡ ೧೯೯೦ ರಲ್ಲಿಯೇ ತಮ್ಮ ಕಾರ್ಯವನ್ನು ಹಮ್ಮಿಕೊಂಡಿದ್ದರೂ, ಆ ಸ್ವರೂಪ ೧೯೯೮ ರ ಹೊತ್ತಿಗೆ ಫೋಕ್ ಯುನಿವರ್ಸಿಟಿಯಾಗಿ ಹೊರಹೊಮ್ಮಿತು.


       ಅರವತ್ತು ಎಪ್ಪತ್ತರ ದಶಕದಲ್ಲಿ ಜುಮ್ಮಿ ಬಫೆಟ್ ಎಂಬುವವ ಜನಪದ ಸಂಗೀತದ ಲಯಗಳನ್ನು ರಾಕ್ ಸಂಗೀತದ ಲಯಗಳೊಂದಿಗೆ ಬೆರೆಸಿ ರವೀಂದ್ರ ಸಂಗೀತದ ತರಹ ತನ್ನದೇ ಆದ ಜುಮ್ಮಿ ಬಫೆಟ್ ಮ್ಯೂಜಿಕ್ ನ್ನು ಸೃಷ್ಟಿಸಿದ. ಇದನ್ನು ಜನಪ್ರಿಯಗೊಳಿಸಿ ಅದಕ್ಕೊಂದು ರಾಷ್ಟ್ರೀಯ ಸಂಗೀತದ ಆಯಾಮವನ್ನು ನೀಡಿದ್ದು ಫೋಕ್ ಯುನಿವರ್ಸಿಟಿ. ಇದರ ಪ್ರಭಾವದಿಂದಾಗಿ ಮೈಕ್ ಮುಂತಾದವರು ಜನಪದದ ಪ್ರಭಾವವನ್ನು ಬಳಸಿ ಲಿರಿಕ್ಸ ಬರೆದು ಅದನ್ನು ಗಿಟಾರ್ ಸಂಗೀತದೊಂದಿಗೆ ಅನ್ವಯಿಸಿ ಒಂದು ಬಗೆಯ ಫೋಕ್ ಮ್ಯೂಜಿಕ್ನ್ನು ಸೃಷ್ಟಿಸಿಕೊಂಡಿದ್ದಾರೆ. ಒಬ್ಬರಿಂದ ಆರಂಭವಾದ ಈ ಸಂಗೀತ ಈಗ ಒಂದು ವಿಶ್ವವಿದ್ಯಾಲಯದ ಸ್ವರೂಪದಲ್ಲಿ ಪ್ರದರ್ಶನ ಮಾಡಬಲ್ಲಷ್ಟು ಬೆಳೆದಿದೆ. ಮೈಕ್ ೫೦ ರ ದಶಕದ ಕೋಸ್ಟ ಲೈನರ್ಸ ಎಂಬ ಮ್ಯೂಜಿಕ್ ಮಾದರಿಯನ್ನು ತನ್ನ ಶಾಲಾ ದಿನಗಳಲ್ಲಿ ಕಲಿತು ಪ್ರದರ್ಶನ ಕೊಡುತ್ತಿದ್ದನು. ಆ ಸಂಗೀತದಲ್ಲಿಯೂ ಫೋಕ್ ಮ್ಯೂಜಿಕ್ನ ಎಳೆಗಳಿದ್ದವು. ಇದನ್ನೆ ಜ್ಹಾನ್ ಮತ್ತು ಅವನ ಹೆಂಡತಿ ಷೆರಿ ಎಕ್ಸಲ್ ಮ್ಯೂಜಿಕ್ ಶಾಲೆಯನ್ನು ತೆರೆದು ಎಲ್ಲಾ ವಯೋಮಾನದವರಿಗೂ ಕಲಿಸುವ, ಆ ಮೂಲಕ ಜನಪದ ಸಂಗೀತವೊಂದನ್ನು ಜನಪ್ರಿಯಗೊಳಿಸಲು ಹಗಲಿರುಳು ಶ್ರಮಿಸಿದರು.


       ಈ ಸಂಗೀತವನ್ನು ಇಂದು ಕಾಲೇಜ್ ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳಲ್ಲಿಯೂ, ಹೋಟೆಲ್ ಕಾರ್ಯಕ್ರಮಗಳಲ್ಲಿ, ಮದುವೆಗಳಲ್ಲಿ, ಓಪನಿಂಗ್ ಸೆರಮನಿಗಳಲ್ಲಿ, ಬಾರ್ಗಳಲ್ಲಿ, ಯುನಿವರ್ಸಿಟಿಗಳಲ್ಲಿ, ಖಾಸಗಿ ಸಂಗೀತ ಕಛೇರಿಗಳಲ್ಲಿ, ರೋಗಿಗಳ ರೋಗ ಉಪಶಮನಕ್ಕಾಗಿ ಆಸ್ಪತ್ರೆಗಳಲ್ಲಿ ಹೀಗೆ ಚಿಕ್ಕದು ದೊಡ್ಡದು ಎನ್ನದೆ ಇಡೀ ಫ್ಲೊರಿಡಾ ದೇಶದಾದ್ಯಂತ ಈ ಸಂಗೀತವನ್ನು ಜನಪ್ರಿಯಗೊಳಿಸಿದ್ದಾರೆ. ಇಂದು ಈ ಸಂಗೀತವನ್ನು ನಂಬಿದ ನೂರಾರು ಸಂಗೀತದ ತಂಡಗಳು ಹುಟ್ಟಿಕೊಂಡಿವೆ. ಈ ಸಂಗೀತಕ್ಕೆ ಈಗ ಅಂತರಾಷ್ಟ್ರೀಯ ಮನ್ನಣೆಗಳೂ ಸಿಗುತ್ತಿವೆ.



    ಫೋಕ್ ಯುನಿವರ್ಸಿಟಿಯ ವೆಬ್ ಸೈಟ್ನ ಫೋಟೋ ಮತ್ತು ವೀಡಿಯೋ ಗ್ಯಾಲರಿಯನ್ನು ನೋಡುತ್ತಿದ್ದರೆ, ಈಗ ಫೋಕ್ ಯುನಿವರ್ಸಿಟಿ ಆ ದೇಶದ ಜನಪದ ಕಲೆಗಳನ್ನು, ಆಚರಣೆಗಳನ್ನು, ಜನ ಸಾಮಾನ್ಯರ ತಿಳುವಳಿಕೆಯ ಲೋಕವನ್ನೂ ಒಳಗೊಳ್ಳಲು ಸಾದ್ಯವಾಗಿದೆ ಅನ್ನಿಸುತ್ತದೆ. ಇದರ ಸ್ವರೂಪವನ್ನು ನೋಡಿದರೆ, ಇಲ್ಲಿ ಫೋಕ್ನ್ನು ಒಂದು ಸೈದ್ಧಾಂತಿಕ ತಿಳುವಳಿಕೆ ಎಂದು ಮಾತ್ರ ಭಾವಿಸದೆ, ಅದೊಂದು ಪ್ರಾಯೋಗಿಕ ಚಳವಳಿ ಎನ್ನುವ ಅರ್ಥದಲ್ಲಿ ಬೆಳೆಸಲು ಪ್ರಯತ್ನಿಸಿದಂತೆ ಕಾಣುತ್ತದೆ. ಹಾಗಾಗಿ ಫೋಕ್ ಯುನಿವರ್ಸಿಟಿಯ ವೆಬ್ಸೈಟ್ ನಲ್ಲಿ ಸೆಮಿನಾರುಗಳು ನಡೆದ ಬಗ್ಗೆ ಮಾಹಿತಿಯಾಗಲಿ, ಪುಸ್ತಕ ಪ್ರಕಟಣೆಯ ಸಂಗತಿಯಾಗಲಿ ಸಿಗುವುದಿಲ್ಲ. ಬದಲಾಗಿ ಎಲ್ಲೆಲ್ಲಿ ಫೋಕ್ ಮ್ಯೂಜಿಕ್ ಕಾರ್ಯಕ್ರಮಗಳಿವೆ, ಇದುವರೆಗೂ ಫೋಕ್ ಯುನಿವರ್ಸಿಟಿ ಎಲ್ಲೆಲ್ಲಿ ಕಾರ್ಯಕ್ರಮಗಳನ್ನು ಕೊಟ್ಟಿದೆ ಮುಂತಾದವುಗಳ ಬಗ್ಗೆ ಫೋಟೋ ವಿಡಿಯೋಗಳು ದೊರೆಯುತ್ತವೆ. ಹಾಗಾಗಿ ಈ ಯುನಿವರ್ಸಿಟಿ ಸಿದ್ದಾಂತಕ್ಕಿಂತ ಪ್ರಾಯೋಗಿಕ ನೆಲೆಗಟ್ಟಿನಲ್ಲಿ ರೂಪುಗೊಂಡದ್ದು.



     ಇಂದು ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಆಗಿದೆ, ಈ ವಿಶ್ವವಿದ್ಯಾಲಯವನ್ನು ರೂಪಿಸಲು ನಾವು ಫ್ಲೋರಿಡಾದ ಫೋಕ್ ಯುನಿವರ್ಸಿಟಿಯಿಂದಲೂ ಕಲಿಯುವುದಿದೆ. ಮುಖ್ಯವಾಗಿ ಸಿದ್ಧಾಂತಗಳನ್ನು ಮಾತ್ರ ರೂಪಿಸುವ ವಿವಿಯಾಗದೆ, ಪ್ರಾಯೋಗಿಕ ನೆಲೆಯಲ್ಲಿ ಯುನಿವರ್ಸಿಟಿಯನ್ನು ರೂಪಿಸುವ ಅಗತ್ಯವಿದೆ. ಹಾಗೆಯೆ ಜಾನಪದ ವಿಶ್ವವಿದ್ಯಾಲಯದ ಭವಿಷ್ಯದ ಅಧ್ಯಾಪಕರುಗಳು ಜಾನಪದ ಸಂಗತಿಗಳ ಪರವಾದ ರಾಜಕೀಯ ಮಾಡಲು ಹಗಲಿರುಳು ಶ್ರಮಿಸಬೇಕಿದೆ. ಮೈಕ್ ಒಳಗೊಂಡಂತೆ ನಾಲ್ಕಾರು ಜನ ಜನಪದ ಸಂಗೀತವನ್ನು ಇಂದು ಫ್ಲೊರಿಡಾ ದೇಶವೇ ಪರಿಭಾವಿಸುವಂತೆ ಮಾಡಿದ ಹಿನ್ನೆಲೆಯನ್ನು ಈ ನೆಲೆಯಲ್ಲಿ ನೋಡಬಹುದು. ಅಂದರೆ ಜಾಗತೀಕರಣದ ನೆಲೆಯಲ್ಲಿ ಹಿನ್ನೆಲೆಗೆ ಸರಿದ ಜನಪದ ಸಂಗೀತವನ್ನು, ಜನಪದ ವೈದ್ಯವನ್ನು, ಜನಪದ ಆಹಾರ ಪದ್ದತಿಯನ್ನು, ಜನಪದ ಬದುಕಿನ ಕ್ರಮವನ್ನು, ಜನಪದ ತಂತ್ರಜ್ಞಾನವನ್ನು, ಜನಪದ ಉತ್ಪಾದನಾ ವಿಧಾನವನ್ನು ಇಂದು ಹೊಸ ನೆಲೆಗಟ್ಟಿನಲ್ಲಿ ಪುನರುಜ್ಜೀವನಗೊಳಿಸಬೇಕಿದೆ. ಅಂತಹ ಕೆಲಸಕ್ಕೆ ಪ್ಲೊರಿಡಾ ಫೋಕ್ ಯುನಿವರ್ಸಿಟಿ ಒಂದು ತೋರು ಬೆರಳಾಗಲಿ ಎಂದು ಆಶಿಸಬಹುದು.
(ಇಲ್ಲಿ ಬಳಸಿರುವ ಫೋಟೋಗಳು ಫೋಕ್ ಯುನಿವರ್ಸಿಟಿಯ ವೆಬ್ ಸೈಟಿನಲ್ಲಿ ಇದ್ದವು)
ಸಂಪರ್ಕ: ವೆಬ್ ಸೈಟ್: http://www.folku.net
Email: FolkU@GigIt.com