ಭಾನುವಾರ, ಮೇ 1, 2011

ಹೊನವಾಡದ ಜೋಗರಾಣಿಗೆ ಸುಡುಗಾಡಿನಲ್ಲಿ ಪೂಜೆ

ಡಾ. ಪ್ರಕಾಶ ಗ. ಖಾಡೆ



ಹೊನವಾಡ ಎಂಬುದು ವಿಜಾಪುರ ತಾಲೂಕಿನ ಒಂದು ಗ್ರಾಮ. ಇಲ್ಲಿ ಪ್ರತಿ ವರ್ಷ ಬಾದ್ಮಿ ಅಮವಾಸ್ಯೆಯ ನಡುರಾತ್ರಿಯಲ್ಲಿ ’ಜೋಗರಾಣಿ’ ಎಂಬ ದೇವಿಗೆ ಸುಡುಗಾಡಿನಲ್ಲಿ ಪೂಜೆ ನಡೆಸುವ ಸಂಪ್ರದಾಯ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಬಾದ್ಮಿ ಅಮವಾಸ್ಯೆಯಂದು ಇಲ್ಲಿಯ ಬನಶಂಕರಿಯ ಜಾತ್ರೆ ವೈಭವದಿಂದ ನಡೆಯುತ್ತದೆ. ಅದರ ಹಿಂದಿನ ರಾತ್ರಿ ಹನ್ನೆರಡು ಗಂಟೆಗೆ ಬನಶಂಕರಿ ಗುಡಿಯಿಂದ ಹೊರಟ ’ಜೋಗರಾಣಿ’ ನಡುರಾತ್ರಿಯಲ್ಲಿ ಊರು ಸುತ್ತಿ ಸುಡುಗಾಡು ಸೇರುತ್ತಾಳೆ.ಅಲ್ಲಿಯ ’ಜೋಗರಾಣಿ’ ಪಾದಗಟ್ಟೆಯ ಮೇಲೆ ಆಕೆಯ ಪೂಜೆ ನಡೆಯುತ್ತದೆ.

ಈ ಪೂಜೆಗಾಗಿ ಸ್ಥಳೀಯ ಕುಂಬಾರ ಮನೆತನದ ಯುವಕನಿಗೆ ’ಜೋಗರಾಣಿ’ಯ ವೇಷ ಹಾಕಲಾಗುತ್ತದೆ. ವಿವಿಧ ಬಣ್ಣಗಳ ಉಡುಗೆಯೊಂದಿಗೆ ತಲೆಗೆ ಕೆಂಪು ಬಟ್ಟೆ ಕಟ್ಟಿ ಹೂವನ್ನು ಮುಡಿಸಿ, ಮುಖಕ್ಕೆ ಅರಿಷಿಣ,ಕುಂಕುಮ ಹಚ್ಚಲಾಗುತ್ತದೆ. ಈ ದೇವಿ ವೇಷಧಾರಿಯ ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಬಟ್ಟಲು ಕೊಡುತ್ತಾರೆ.ಗಂಟೆ, ಜಾಗಟೆ, ವಾದ್ಯ ಸಮೇತ ಗುಡಿಯಿಂದ ನಡುರಾತ್ರಿ ದೇವಿ ಹೊರಡುವಾಗ ಊರಿನ ಸಕಲ ಆಯಗಾರರು ಕೈಯಲ್ಲೊಂದು ಉದ್ದನೆಯ ಕೋಲು ಹಿಡಿದು ದೇವಿಯ ಮುಂದೆ ಸಾಗುತ್ತಾರೆ.

ಜೋಗರಾಣಿಯು ಮೈ ತುಂಬಬಹುದೆಂದು ನಂಬುಗೆಯಿಂದ ಏಡ-ಬಲಕ್ಕೆ ಒಬ್ಬೊಬ್ಬರು ದೇವಿಯನ್ನು ಹಿಡಿದಿರುತ್ತಾರೆ. ಇಷ್ಟು ಹಿಡಿದರೂ ರಾಕ್ಷಸ ರೂಪದ ದೇವಿ ಒಮ್ಮೊಮ್ಮೆ ಕೊಸರಿಕೊಳ್ಳುತ್ತಾ ಕುಣಿಯುವುದು ಇದೆ. ಜೋಗರಾಣಿ ಕೈಯಲ್ಲಿನ ಬಿಚ್ಚುಗತ್ತಿಯನ್ನು ಬ್ರಾಹ್ಮಣ ಮನೆತನದ ಪೂಜಾರಿಗಳು ಹಿಡಿದಿದ್ದರೆ, ದೇವಿಯ ಕೈಯಲ್ಲಿ ಖಡ್ಗದ ಹಿಡಿಕೆ ಮಾತ್ರ ಕೊಟ್ಟಿರುತ್ತಾರೆ.

ಗೋರಿಯಾಳದ ಕಡೆಗೆ ಮುಖಮಾಡಿ ಹೊರಡುವ ಜೋಗರಾಣಿಗೆ ದಾರಿಯಲ್ಲಿ ದೆವ್ವಗಳು ಗಂಟುಬಿದ್ದು ದೇವಿಯನ್ನು ನಿಲ್ಲಿಸುತ್ತವೆ ಎಂಬ ನಂಬಿಕೆಯಿದೆ. ಹೀಗೆ ದೇವಿ ನಿಂತ ಸ್ಥಳದಲ್ಲಿಯೇ ತೆಂಗಿನಕಾಯಿಯನ್ನು ನೆಲಕ್ಕಪ್ಪಳಿಸಿ ಒಡೆದು ಮುಂದೆ ಹೋಗುವುದು ವಾಡಿಕೆ. ಸುಡುಗಾಡು ಮುಟ್ಟುವ ಹೊತ್ತಿಗೆ ನೂರಾರು ತೆಂಗಿನ ಕಾಯಿಗಳು ಒಡೆಯಲ್ಪಟ್ಟಿರುತ್ತವೆ. ಗ್ರಾಮದ ಸುಡುಗಾಡಿನಲ್ಲಿ ಕಟ್ಟಿರುವ ಜೋಗರಾಣಿಯ ಪಾದಗಟ್ಟೆಯ ಮೇಲೆ ಜೋಗರಾಣಿಯನ್ನು ನಿಲ್ಲಿಸಿ ಪೂಜೆ ಮಾಡುತ್ತಾರೆ. ನಂತರ ಮತ್ತದೇ ಗಂಟೆ, ಜಾಗಟೆ, ವಾದ್ಯದೊಂದಿಗೆ ಆಕೆಯನ್ನು ಮರಳಿ ಗುಡಿಗೆ ಕರೆತರುತ್ತಾರೆ.

ದೇವಿಯಲ್ಲ..ದೆವ್ವ : ಜೋಗರಾಣಿಯನ್ನು ದೇವಿ ಎನ್ನುವುದಕ್ಕಿಂತ ’ರಾಕ್ಷಸಿ’, ’ದೆವ್ವ’ ಎಂದೇ ಗ್ರಾಮಸ್ಥರು ಕರೆಯುತ್ತಾರೆ. ರಾಕ್ಷಸನ ಕೆಲಸ ಏನಿದ್ದರೂ ರಾತ್ರಿಯೇ. ಆ ಕಾರಣವಾಗಿ ಜೋಗರಾಣಿಗೆ ನಡುರಾತ್ರಿಯಲ್ಲಿ ಪೂಜೆ ನಡೆಯುವದು ಇದಕ್ಕೆ ಪುಷ್ಟಿ ಕೊಡುತ್ತದೆ.

ಯಮನ ರಾಣಿಯೇ ? ಜೋಗರಾಣಿ ಎಂಬ ಪದ ’ಜವರಾಣಿ’ ಎಂಬ ಪದದಿಂದ ಬಂದಿರಬಹುದೇ ? ಜವರಾಣಿ ಯಮನ ರಾಣಿ ಏಕಾಗಿರಬಾರದು? ಜವರಾಣಿ ಪದ ಮುಂದೆ ಜವರಾಣಿ>ಜೋರಾಣಿ>ಜೋಗರಾಣಿ ಎಂದು ಬದಲಾಗಿರಬಹುದೆ? ಇದು ನಿಜವಾದರೆ ಯಮನಿಗೂ ಒಬ್ಬ ರಾಣಿ ಇದ್ದು, ಆಕೆ ಕೈಯಲ್ಲಿ ಖಡ್ಗ,ಬಟ್ಟಲು ಹಿಡಿದು ಅಮವಾಸ್ಯೆಯ ನಡುರಾತ್ರಿಯಲ್ಲಿ ಪೊಜೆಗೊಳ್ಳುವುದು ವಿಸ್ಮಯದ ಸಂಗತಿ. ನಿಜವಾಗಿಯೂ ಈ ಆಚರಣೆ ಅಧ್ಯಯನಾಸಕ್ತರಿಗೆ ಕೂತೂಹಲದ ಸರಕಾಗುತ್ತದೆ. ಮೌಖಿಕ ಪರಂಪರೆ ಒಂದನ್ನೇ ನೆಚ್ಚಿಕೊಂಡರಾಗದು. ಇದಕ್ಕಾಗಿ ಪೌರಾಣಿಕ ದಾಖಲೆಗಳಿಗಾಗಿ ಸಂಶೋಧನೆ ನಡೆಯಬೇಕು.

ಏನೇ ಇರಲಿ ಅಮವಾಸ್ಯೆಯ ನಡುರಾತ್ರಿ ಸ್ಮಶಾನದಲ್ಲಿ ಪೂಜೆ ಮಾಡಿಸಿಕೊಳ್ಳುವ ಹೊನವಾಡದ ಜೋಗರಾಣಿ ಆಚರಣೆ ಕನ್ನಡದ ಗ್ರಾಮದೇವತೆಗಳ ಅಧ್ಯಯನ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ.


-ಡಾ. ಪ್ರಕಾಶ ಗ. ಖಾಡೆ
ಮನೆ ನಂ.೧೯,ಬಡಾವಣೆ ಸಂಖ್ಯೆ ೩ ,
ನವನಗರ,ಬಾಗಲಕೋಟ
ಮೊ. ೯೮೪೫೫೦೦೮೯೦

3 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

priya arun
adu joga yoagakke enadaru sambandha irabahudu. jOginiyara araadhane iruva saadhyateyide.
tarikere

ಅನಾಮಧೇಯ ಹೇಳಿದರು...

ಅರುಣ್, ಲೇಖನ ಓದಿದಾಗ ನನಗನ್ನಿಸಿದ್ದು, ಇದು ತಂತ್ರವಿದ್ಯೆಯ ಆಚರಣೆ ಎಂದು. ಕೈಯಲ್ಲಿ ಖಡ್ಗ, ಬಟ್ಟಲು ಹಿಡಿಯುವುದು ಕಾಳಿದೇವತೆ. ಈಕೆ ಭೂತಗಣಗಳ ಒಡತಿಯೂ ಹೌದು.ದೇವಿಯ ವೇಷಧಾರಿಗೆ ಅರಿಷಿಣ ಕುಂಕುಮ ಹಚ್ಚುವುದೂ ಇದಏ ಕಾರಣವಿರಬಹುದು. ತಾಂತ್ರಿಕರು ಕಾಳಿಯ ಆರಾಧಕರು. ಅವರು ಸಿದ್ಧಿ ಪಡೆಯಲು ಸ್ಮಶಾನದಲ್ಲಿ ಅಮವಾಸ್ಯೆಯ ಮಧ್ಯರಾತ್ರಿ ಕಾಳಿಯನ್ನು ಪೂಜಿಸುತ್ತಾರೆ. ಮಾರ್ಗದಲ್ಲಿ ದೆವ್ವಗಳು ಗಂಟುಬೀಳುವುದು ಇದಕ್ಕಾಗಿಯೇ ಇರಬಹುದು. ತಂತ್ರಪೂಜೆಯ ಪಳೆಯುಳಿಕೆಯಾಗಿರಬಹುದು ಎಂದು ನನ್ನ ಅನಿಸಿಕೆ.ಜೋಗರಾಣಿ ಹೆಸರು ಜವರಾಣಿಯಿಂದ ಬಂದಿರುವ ಸಾಧ್ಯತೆ ಕಡಿಮೆ.ಬಹುಶ: ತಂತ್ರಸಿದ್ಧಿಗೆ ಸಾಧಕರು ಹೆಣ್ಣುಮಕ್ಕಳನ್ನು ಬಳಸಿಕೊಳ್ಳುವುದೂ ಇದೆ. ಈ ರೀತಿಯಲ್ಲಿ ತಾಂತ್ರಿಕರಿಗೆ ಹೆಣ್ಣುಮಗಳೊಬ್ಬಳನ್ನು ಕರೆದೊಯ್ಯುವ ಸಂಪ್ರದಾಯವೂ ಇರಬಹುದು. ಸಂಶೋಧನೆಯ ನಂತರ ಇದು ಸ್ಪಷ್ಟವಾಗಬಹುದು. ವಿದ್ವಾಂಸರ ಅಭಿಪ್ರಾಯವನ್ನೂ ಬ್ಲಾಗ್ ನಲ್ಲಿ ಪ್ರಕಟಿಸಿ.

ಅನಾಮಧೇಯ ಹೇಳಿದರು...

ಜೋಗರಾಣಿ ಎಂಬುದು ಜವರಾಣಿಯಿಂದ ಬಂದಿದ್ದು ಎಂಬ ಊಹೆ ಕುತೂಹಲಕಾರಿಯಗಿದೆ. ಆದರೆ ಜೋಗುರಾಣಿ ಅಂದರೆ ಠಾಕುರಾಣಿ ಎಂಬ ಹಾಗೆ ಜೋಗೇರ ರಾಣಿಯಾಗಿರುವ ಸಾಧ್ಯತೆಯನ್ನು ನೋಡಬೇಕೇನೋ? ಅದು ಜೋಗರಾಣಿ ಆಗಿರುವ ಸಾಧ್ಯತೆ ಹೆಚ್ಚು. ಜೋಗಿಗಳು ಸ್ಮಶಾನಪೂಜೆಯಲ್ಲಿ ನಿರತರಾಗುವ ಅಭ್ಯಾಸ ಇರುವುದರಿಂದ ಆಕೆಗೆ ರಾತ್ರಿ ಪೂಜೆ ಇರಬಹುದೇನೋ
-banjagere jayaprakasha