ಶುಕ್ರವಾರ, ಫೆಬ್ರವರಿ 18, 2011

ದನಿ ಕಳೆದುಕೊಳ್ಳುತ್ತಿರುವ ಉರುಮೆ ವಾದ್ಯ ಬಾರಿಸುವವರು

-ಸಿದ್ದರಾಮ ಹಿರೇಮಠ, ಕೂಡ್ಲಿಗಿ. (ಉರುಮೆ ವಾದ್ಯ ದೇಸಿ ವಾದ್ಯಗಳಲ್ಲಿ ಪ್ರಮುಖವಾದುದು. ಇದು ಗ್ರಾಮದೇವತೆಯ ಜಾತ್ರೆಗೆ ಕಳೆ ಗಟ್ಟಿಸುವ ವಾದ್ಯ. ಇದರ ದ್ವನಿಯೇ ತೀರಾ ಗಡುಸಾದುದು. ಮನಕ್ಕೆ ಇಂಪು ನೀಡುವ ಜಾಯಮಾನ ಈ ವಾದ್ಯದ್ದಲ್ಲ. ಇದು ಶೋಷಿತರ ನೋವನ್ನು ದೊಡ್ಡದಾಗಿ ಎತ್ತರದ ದ್ವನಿಯಲ್ಲಿ ಪ್ರತಿರೋಧಿಸುವುದರ ರೂಪಕದಂತಿದೆ. ಈ ವಾದ್ಯವನ್ನು ನುಡಿಸುವ ಕಲಾವಿದರು ಇಂದು ಅನಾಥ ಪ್ರಜ್ಞೆಯಲ್ಲಿ ಬದುಕು ದೂಡುತ್ತಿದ್ದಾರೆ. ಹೊಸ ತಲೆಮಾರು ಈ ವಾದ್ಯದ ಸಂಗ ತ್ಯಜಿಸಿ ಹೊಸ ಬದುಕಿನತ್ತ ಆಸೆಗಣ್ಣುಗಳಿಂದ ನೋಡುತ್ತಿದ್ದಾರೆ. ಅವರ ಹೊಸ ಬದುಕು ಹಸನಾಗಲಿ ಎಂದು ನಮ್ಮ ಹರಕೆ. ಆದರೆ ಉರುಮೆಯನ್ನೇ ನಂಬಿ ಬದುಕುತ್ತಿರುವ ಹಿರಿ ಜೀವಗಳನ್ನು ಜನಪದ ಕಲಾವಿದರೆಂದು ಗುರುತಿಸಿ ಅವರ , ಮಾಶಾಸನ ಮುಂತಾದ ಮೂಲಭೂತ ಸೌಲಭ್ಯಗಳನ್ನು ಕೊಡುವಲ್ಲಿ ಸರಕಾರ ಗಮನಹರಿಸಬೇಕಾಗಿದೆ. ಅಂತಹ ಉರುಮೆ ವಾದಕರ ಅಳಲನ್ನು ಕವಿ, ಸೃಜನಶೀಲ ಲೇಖಕರಾದ ಸಿದ್ಧರಾಮ ಹಿರೇಮಠ ಅವರು ಬರಹದಲ್ಲಿ ಹಿಡಿದಿಟ್ಟಿದ್ದಾರೆ. -ಅರುಣ್ ) ನಾಡಿನ ಕಲೆ, ಸಂಸ್ಕೃತಿ, ಪರಂಪರೆ, ಜಾನಪದೀಯ ಅಂಶಗಳನ್ನು ಮೈಗೂಡಿಸಿಕೊಂಡಿರುವ ಉರುಮೆ ವಾದ್ಯಗಾರರು, ಸರ್ಕಾರದ ಯಾವುದೇ ಪ್ರೋತ್ಸಾಹ, ಸೌಲಭ್ಯಗಳಿಲ್ಲದೆ ದನಿ ಕಳೆದುಕೊಳ್ಳುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮರಬನಹಳ್ಳಿಯ ಉರುಮೆ ವಾದ್ಯಗಾರರ ತಂಡ ಹಲವಾರು ಜಿಲ್ಲೆಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದರೂ ಇಲ್ಲಿಯ ಯಾರಿಗೂ ಇದುವರೆಗೆ ಯಾವುದೇ ರೀತಿಯ ಮಾಸಾಶನ ದೊರೆತಿಲ್ಲ. ಜಿರ್..ಜೀಂಯ್....... ಎಂದು ಕೇಳುಗರ ಎದೆಬಡಿತವನ್ನೇ ಏರುಪೇರು ಮಾಡುವಂತಿರುವ ಉರುಮೆ ವಾದ್ಯ, ಪರಂಪರಾಗತವಾಗಿ ಬಂದದ್ದು. ಮರಬನಹಳ್ಳಿಯ ಉರುಮೆ ವಾದ್ಯಗಾರರು ತಮ್ಮ ತಲೆತಲಾಂತರಗಳಿಂದಲೂ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೆಲ ವಾದ್ಯಗಾರರು ವಯಸ್ಸಾಗಿ ಯಾವುದೇ ಸೌಲಭ್ಯವಿಲ್ಲದೆ ಮರಣಹೊಂದಿದ್ದರೆ, ಇರುವ ಹಿರಿಯರು ಮಾಸಾಶನದ ನಿರೀಕ್ಷೆಯಲ್ಲೇ ಮುಪ್ಪಾಗಿದ್ದಾರೆ. ಯಾವುದೇ ಜಾತ್ರೆ, ಉತ್ಸವ, ಗ್ರಾಮದೇವತೆಗಳ ಮೆರವಣಿಗೆಗಳಿಗೆ ಉರುಮೆ ವಾದ್ಯ ಬೇಕೇ ಬೇಕು. ಅದು ಸತ್ಸಂಪ್ರದಾಯವೂ ಹೌದು, ಕುಲಕಸಬೂ ಹೌದು. ಇವರ‍್ಲಿಲದೆ ಯಾವುದೇ ಮೆರವಣಿಗೆ, ಸಂಪ್ರದಾಯಿಕ ಉತ್ಸವಗಳಿಗೆ ಮೆರಗು ಬರುವುದೇ ಇಲ್ಲ. ಉರುಮೆಯವರ ತಂಡ ಮೆರವಣಿಗೆಯ್ಲಲಿದೆಯೆಂದರೆ ಕುಣಿಯಲಾರದವರೂ ಇದರ ನಾದಕ್ಕೆ, ಆವೇಶಕ್ಕೆ ಮಾರುಹೋಗಿ ಕುಣಿಯತೊಡಗುತ್ತಾರೆ. ವಿಶೇಷವಾಗಿ ಗ್ರಾಮದೇವತೆಗಳಿಗೆ ಉರುಮೆ ವಾದ್ಯ ಬೇಕು. ಅಷ್ಟೇ ಅಲ್ಲದೆ ಜನಪ್ರತಿನಿಧಿಗಳು ಗೆದ್ದರೆ, ಮಂತ್ರಿ ಮಹೋದಯರು ಬಂದರೆ ಅವರ ಮೆರಣಿಗೆಗೆ ಕಳೆ ಕಟ್ಟುವುದೇ ಉರುಮೆ ವಾದ್ಯದ ಸದ್ದು. ಎಲ್ಲರ ಮೆರವಣಿಗೆಗೆ ಕಳೆಕಟ್ಟುವ, ದೇವತೆಗಳನ್ನು ಸಂಪ್ರೀತಿಪಡಿಸುವ ಉರುಮೆ ವಾದಕರು ಮಾತ್ರ ಕುಣಿಯಲಾರದಂತೆ ಕುಸಿದುಹೋಗಿದ್ದಾರೆ. ‘ಎಂ.ಪಿ.ಪ್ರಕಾಶ ಸಾಹೇಬ್ರು ಇದ್ದಾಗ ನಮಗೆಲ್ಲ ಅನುಕೂಲ ಮಾಡಿಕೊಟ್ಟಿದ್ರು, ಇರಾಕ ಮನೀನೂ ಕೊಟ್ಟಿದ್ರು, ಉರುಮೆ ಕೊಡಿಸಿದ್ರು, ಕಾರ್ಯಕ್ರಮದಾಗ ಅವಕಾಶಾನೂ ಕೊಡಿಸಿದ್ರು, ಈಗ ಏನೂ ಇಲ್ರಿ’ ಎಂದು ಉರುಮೆ ವಾದ್ಯದ ೭೫ ವರ್ಷಗಳ ಹಿರಿಯ ಪಟಗಾಣಿ ಬಸಪ್ಪ ನೊಂದು ನುಡಿಯುತ್ತಾನೆ. ಇದರಿಂದ ಏನೂ ಲಾಭವಿಲ್ಲವೆ ಎಂದು ಪ್ರಶ್ನಿಸಿದರೆ, ‘ ಇದು ನಮ್ಮ ಕುಲಕಸಬು, ಯಾರು ಕೊಟ್ರೇನು, ಬಿಟ್ರೇನು ನಮ್ ಕೆಲ್ಸ ನಾವು ಮಾಡ್ತೀವಿ, ಕೆಲವರು ಕೊಡ್ತಾರೆ, ಕೆಲವರು ಅದರಾಗೆ ಉಳಿಸ್ಕೊಂಡು ನಮಗೆ ಕಡಿಮಿ ಕೊಡ್ತಾರ ಅದಕ್ಕೇನೂ ನಾವು ಬೇಜಾರು ಮಾಡ್ಕಣಂಗಿಲ್ಲ ಎಂದು ವಾದಕರು ನಿರಾಶೆಯಿಂದ ಹೇಳುತ್ತಾರೆ. ಗ್ರಾಮದಲ್ಲಿ ನೋಂದಣಿಯಾಗಿರುವ ಉರುಮೆ ವಾದಕರ ಸಂಘವೂ ಇದೆ. ಛಲವಾದಿ ಮಾರಪ್ಪ ಸಂಘದ ಅಧ್ಯಕ್ಷ. ‘ಮಾಸಾಶನ ಕೊಡಿಸ್ತೀವಿ ಅಂತ ಕಾಗ್ದಪತ್ರ ಎಲ್ಲಾನೂ ತೊಗೊಂಡು ಹೋದ್ರು, ಚಿತ್ರದುರ್ಗಕ್ಕ ಇಂಟ್ರ್ಯೂಗೆ ಬರ್ರಿ ಅಂತ ಕಾಗ್ದ ಬಂತು, ಉರುಮಿ ಬಾರ್ಸಿ ತೋರ್ಸಪಾ ಅಂದ್ರು, ಬಾರ್ಸಿ ಬಂದ್ವಿ, ಇದಾಗಿ ೩-೪ ವರ್ಷಾತು ಇನ್ನವರೆಗೂ ಅದೇನಾತಂತನ ಗೊತ್ತಿಲ್ಲ’ ಎಂದು ಮಾರಪ್ಪ ಹೇಳಿದರು. ಈ ಗ್ರಾಮದ ತಂಡದ ಸದಸ್ಯರು ಪ್ರತಿವರ್ಷವೂ ಹಂಪಿ ಉತ್ಸವದಲ್ಲಿ ತಮ್ಮ ಕಲೆಯ ಗತ್ತನ್ನು ಪ್ರದರ್ಶಿಸಿದ್ದಾರೆ, ಬಳ್ಳಾರಿ ಜಿಲ್ಲೆಯೂ ಸೇರಿದಂತೆ ಚಿಕ್ಕಮಗಳೂರು, ಧಾರವಾಡ, ದಾವಣಗೆರೆ ಹೀಗೆ ಹಲವಾರು ಜಿಲ್ಲೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ, ಉರುಮೆ ಬಾರಿಸಿ ಈಗಾಗಲೇ ಇವರ ಕೈಗಳು ಸುಸ್ತಾಗಿವೆ, ದಣಿವಾಗಿದೆ, ಇದೀಗ ಇವರಿಗೆ ಸರ್ಕಾರದ ಆಸರೆ ಬೇಕಾಗಿದೆ, ಕಲೆಗೆ ಪ್ರೋತ್ಸಾಹ, ಪ್ರಶಸ್ತಿಗಳೂ ಬೇಕಾಗಿವೆ. ಸರ್ಕಾರಿ ಕಾರ್ಯಕ್ರಮಗಳಿಗೆ ಇವರನ್ನು ಕರೆಯಲಾಗುತ್ತದಾದರೂ ಕೆಲವೊಮ್ಮೆ ಅಂಚೆಯ ವಿಳಂಬದಿಂದಾಗಿ, ಕಾರ್ಯಕ್ರಮ ಮುಗಿದ ನಂತರ ಆಹ್ವಾನ ಪತ್ರಗಳು ತಲುಪಿದ ಉದಾಹರಣೆಗಳೂ ಇವೆ. ಮೈಸೂರು ದಸರಾ ಉತ್ಸವಕ್ಕೆ ಆಹ್ವಾನ ಬಂದಾಗ, ಅದಾಗಲೇ ಮುಗಿದುಹೋಗಿತ್ತು ಎಂದು ಸಂಘದ ಅಧ್ಯಕ್ಷ ಮಾರಪ್ಪ ಬೇಸರದಿಂದ ಹೇಳುತ್ತಾರೆ. ಇವರ ಮಕ್ಕಳು ಶಿಕ್ಷಣ ಪಡೆದಿದ್ದಾರೆ, ಕೆಲವರು ಒಳ್ಳೆಯ ಉದ್ಯೋಗದಲ್ಲೂ ಇದ್ದಾರೆ, ಅವರೂ ಸಹ ಕೆಲವೊಮ್ಮೆ ಉತ್ಸವಗಳಲ್ಲಿ ಉರುಮೆ ಬಾರಿಸಿ ತಮ್ಮ ಕಲಾ ಪ್ರೌಢಿಮೆ ಮೆರೆದಿದ್ದಾರೆ. ಹೀಗೆ ದೇಸಿ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತಿರುವ ಉರುಮೆ ವಾದಕರಿಗೆ ಮಾಸಾಶನ, ಮೆಚ್ಚುಗೆಯ ಮಾತುಗಳ ಅವಶ್ಯಕತೆಯಿದೆ. ಕಲೆಗೆ ಸಂಬಂಧಿಸಿದ ಇಲಾಖೆಗಳು ತಮ್ಮನ್ನು ನಿರ್ಲಕ್ಷಿಸುತ್ತಿವೆ ಎಂಬ ನೋವೂ ಉರುಮೆ ವಾದಕರಿಗಿದೆ. ತಾಲೂಕಿನ ಸೂಲದಾರಹಳ್ಳಿ, ಇಮಡಾಪುರ, ಗುಂಡುಮುಣುಗು, ಮಾಡ್ಲಾಕನಹಳ್ಳಿ, ಕುರಿಹಟ್ಟಿ, ಕಡೇಕೊಳ್ಳ ಗ್ರಾಮಗಳೂ ಸೇರಿದಂತೆ ತಾಲೂಕಿನಲ್ಲಿ ಸುಮಾರು ೩೦೦-೪೦೦ ಜನ ಉರುಮೆ ವಾದಕರಿದ್ದಾರೆ. ಉರುಮೆ ವಾದ್ಯದ ಹಿರಿಯರಿಗೆ ನೆರವು, ಹೊಸಬರಿಗೆ ಪ್ರೋತ್ಸಾಹ, ಕಲಿಕೆಯ ಅವಶ್ಯಕತೆಯಿದೆ, ಸಂಬಂಧಿಸಿದ ಇಲಾಖೆಗಳು ಇತ್ತ ಗಮನಿಸಬೇಕಾಗಿದೆ.

4 ಕಾಮೆಂಟ್‌ಗಳು:

ಚರಿತಾ ಹೇಳಿದರು...

ನಿಜ, ಮೈ ಝುಮ್ಮೆನಿಸುವ ವಾದ್ಯ ಇದು. ಜನಪದ ವಾದ್ಯಗಳ ಠೇಂಕಾರದ ಸದ್ದು ಎದೆಯಲ್ಲಿ ನಡುಕ ಹುಟ್ಟಿಸುವ ಬಲವುಳ್ಳದ್ದು. ಹಾಗೆಯೇ ಭಾವಪರವಶಗೊಳಿಸಬಲ್ಲದ್ದೂ ಕೂಡ. ಈಗಿನ ಬದಲಾದ ಪರಿಸ್ಥಿತಿಯಲ್ಲಿ ಇಂತಹ ಘನತೆಯ ಕಲೆ ಮತ್ತು ಕಲಾವಿದರ ಪಾಡು ದಿಗಿಲನ್ನೂ ಮರುಕವನ್ನೂ ಹುಟ್ಟಿಸುವಂತಿದೆ. ಈ ಲೇಖನಕ್ಕಾಗಿ ಸಿದ್ಧರಾಮರಿಗೆ ಧನ್ಯವಾದ.ಈ ಲೇಖನ, ತಲುಪಬೇಕಾದವರನ್ನು ತಲುಪಲಿ ಎಂದು ಆಶಿಸುತ್ತೇನೆ.

ಅರುಣ್,
ಜನಪದ ಲೋಕದ ವಿವರಗಳಿಗಾಗಿಯೇ ಮೀಸಲಾದ ಈ ಪುಟಗಳಿಗಾಗಿ ನಿನಗೆ ಅಭಿನಂದನೆಗಳು ಮತ್ತು ಶುಭಾಶಯಗಳು.

Unknown ಹೇಳಿದರು...

anna e tara chikkavankalakunta gramadalli dinank 24-02-2011 randu jatreyalli dollin vishesha kanabahudu sadyavadre hogu tukaram naik

ಸಿದ್ಧರಾಮ ಹಿರೇಮಠ ಹೇಳಿದರು...

ಪ್ರತಿಕ್ರಿಯೆಗಾಗಿ ಚರಿತಾ ಹಾಗೂ ತುಕಾರಾಂ ಅವರಿಗೆ ಧನ್ಯವಾದಗಳು.

ಡಾ.ಅರುಣ್ ಜೋಳದ ಕೂಡ್ಲಿಗಿ ಹೇಳಿದರು...

ಚೆರಿತಾ ನಿನ್ನ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಕರ್ನಾಟಕ ಪರಂಪರೆಯಲ್ಲಿ ಜನಪದ ಪರಂಪರೆ ಬಹಳ ದೊಡ್ಡದು, ಮತ್ತು ಜನಸಾಮಾನ್ಯರ ತಿಳಿವಿನ ಲೋಕ ನಮ್ಮ ತಿಳಿವನ್ನು ಎಚ್ಚರಗೊಳಿಸುವ ಅಗತ್ಯವಿದೆ. ಹಾಗಾಗಿ ಇದೊಂದು ನನ್ನ ಸಣ್ಣ ಪ್ರಯತ್ನವಷ್ಟೆ. ಕಾರಣ ಇಂದು ಯಕ್ಷಗಾನದಂತಹ ಕಲೆಗೆ ಈ ರೀತಿ ಅಂತರ್ಜಾಲದಲ್ಲಿ ಅಪಾರ ಪ್ರಚಾರ ಸಿಕ್ಕುತ್ತೆ, ಮತ್ತು ಅಂತದನ್ನು ಅವರು ಉದ್ದೇಶಪೂರ್ವಕವಾಗಿ ಮಾಡುತ್ತಾರೆ ಕೂಡ. ಆದರೆ ಗೂಗಲ್ ಗೆ ಹೋಗಿ ತಳಸಮುದಾಯಗಳ ಜನಪದ ಕಲೆಯ ಬಗ್ಗೆ ಮಾಹಿತಿ ಹುಡುಕಿದರೆ ಬರುವ ಪಲಿತಾಂಶಗಳು ನಿರಾಸೆ ಹುಟ್ಟಿಸುತ್ತದೆ. ಹಾಗಾಗಿ ಇಂತಹ ಪ್ರಯತ್ನಗಳು ಹೆಚ್ಚು ನಡೆಯಬೇಕಾಗಿದೆ. ಕರ್ನಾಟಕ ಜಾನಪದಕ್ಕೆ ಈ ಒಂದು ಬ್ಲಾಗ್ ಏನೇನೂ ಸಾಲದು. ಅಂತರ್ಜಾಲ ಗೊತ್ತಿರುವ ಗೆಳೆಯ ಗೆಳತಿಯರು ಇಂತಹ ಕೆಲಸಗಳನ್ನು ಹೆಚ್ಚೆಚ್ಚು ಮಾಡಬೇಕಷ್ಟೆ