ಪರಂಪರಾಗತ ಜನಪದ ಕಲೆಗಳಲ್ಲಿ ತೊಗಲು ಗೊಂಬೆಯಾಟವೂ ಒಂದು. ಶೀಘ್ರವಾಗಿ ನಶಿಸುತ್ತಿರುವ ಜನಪದ ಕಲೆಗಳಲ್ಲಿಯೂ ಈ ಕಲೆ ಮುಂಚೂಣಿಯಲ್ಲಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಕಲೆಗಳ ತವರೂರು . ಅದಕ್ಕೆ ಅನ್ವರ್ಥವಾಗಿ ತಾಲೂಕಿನಲ್ಲಿ ಅನೇಕ ಕಲಾವಿದರೂ ಸಿಗುತ್ತಾರೆ. ಅವರಲ್ಲಿ ಬಡೇಲಡುಕಿನ ತೊಗಲು ಗೊಂಬೆಯಾಟದ ಕೆ.ತಿಪ್ಪೇಸ್ವಾಮಿ ಒಬ್ಬರು. ಬಳ್ಳಾರಿ ಜಿಲ್ಲೆಯಲ್ಲಿ ತೊಗಲು ಗೊಂಬೆಯಾಟದ ಕಲೆಗೆ ಒಂದು ಪರಂಪರೆಯೇ ಇದೆ. ಹಗರಿಬೊಮ್ಮನಹಲ್ಲಿಯ ಸಮೀಪದ ಯಡ್ರಾಮನಹಲ್ಲಿ ಬರಮಪ್ಪನು ತೊಗಲು ಗೊಂಬೆ ಕಲೆಯನ್ನು ಜರ್ಮನಿಯವರೆಗೂ ಹಬ್ಬಿಸಿದ್ದಾರೆ. ಆ ನಿಟ್ಟಿನಲ್ಲಿ ಬೆಳಗಲ್ಲು ವೀರಣ್ಣನವರು ಹೆಜ್ಜೆಯನ್ನಿಡುತ್ತಿದ್ದಾರೆ. ಹಾಗೆ ನೋಡಿದರೆ ಕೂಡ್ಲಿಗಿ ತಾಲೂಕಿನ ಬಡೇಲಡುಕಿನ ತಿಪ್ಪೇಸ್ವಾಮಿ ತೊಗಲು ಗೊಂಬೆಯಾಟದಲ್ಲಿ ಹೆಚ್ಚು ಬೆಳಕಿಗೆ ಬರಲಿಲ್ಲ. ಆದರೆ ನಿಜವಾಗಿಯೂ ಬಡೇಲಡುಕಿನ ತಿಪ್ಪೇಸ್ವಾಮಿ ಗೊಂಬೆಯಾಟದಲ್ಲಿ ನಿಪುಣರು. ಅದನ್ನವರು ಕೇವಲ ಕಲೆಯನ್ನಾಗಿ ಮಾತ್ರ ಭಾವಿಸದೆ, ಬದುಕನ್ನಾಗಿ ಭಾವಿಸಿದ್ದಾರೆ. ಈಚೆಗೆ ಬಳ್ಳಾರಿಯಲ್ಲಿ ರಾಷ್ತ್ರೀಯ ತೊಗಲುಗೊಂಬೆ ಉತ್ಸವವನ್ನು ಆಚರಿಸಲಾಗುತ್ತಿದೆ. ಆದರೆ ಇದರಲ್ಲಿಯೂ ಬಡೆಲಡುಕಿನ ಕೆ.ತಿಪ್ಪೇಸ್ವಾಮಿಯವರಿಗೆ ಅವಕಾಶ ಸಿಕ್ಕಿಲ್ಲ. ಇದು ಹಿತ್ತಲ ಗಿಡ ಮದ್ದಲ್ಲ ಎಂಬುದನ್ನು ನೆನಪಿಸುವಂತಿದೆ. ವಿಶೇಷವೆಂದರೆ ಕೂಡ್ಲಿಗಿ ತಾಲೂಕಿನಲ್ಲಿ ತೊಗಲು ಗೊಂಬೆಯಾಡಿಸುವ ಕಲೆ, ವೃತ್ತಿಯ್ಲಲಿ ತೊಡಗಿರುವವರು ಇವರೊಬ್ಬರೇ. ಕಳೆದ 25 ವರ್ಷಗಳಿಂದ ನಿರಂತರವಾಗಿ ತೊಗಲು ಗೊಂಬೆಯಾಟ ಪ್ರದರ್ಶನ ನೀಡುತ್ತಿರುವ ತಿಪ್ಪೇಸ್ವಾಮಿಯವರಿಗೆ ಇದೇ ಜೀವನ. ತಮ್ಮ 18ನೇ ವಯಸ್ಸಿನಿಂದಲೇ ತಂದೆಯಿಂದ ಬಳುವಳಿಯಾಗಿ ಬಂದ ತೊಗಲು ಗೊಂಬೆಯಾಟ ಪ್ರದರ್ಶನವನ್ನು ಸ್ವತಂತ್ರವಾಗಿ ಪ್ರದರ್ಶಿಸಲು ಆರಂಭಿಸಿದ ತಿಪ್ಪೇಸ್ವಾಮಿ ಮೊಟ್ಟ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯ ಕಿನ್ನಾಳದಲ್ಲಿ ತಮ್ಮ ಪ್ರದರ್ಶನ ತೋರಿಸಿದರು. ಅಲ್ಲಿಂದ ಇಲ್ಲಿಯವರೆಗೆ ಇವರು ಅಲೆದಾಡಿದ ಗ್ರಾಮ, ಪಟ್ಟಣಗಳನ್ನು ಲೆಕ್ಕವಿಡಲು ಸಾಧ್ಯವಿಲ್ಲ. ಗ್ರಾಮೀಣ ಮಟ್ಟದಿಂದ, ಖ್ಯಾತ ತೊಗಲು ಗೊಂಬೆಯಾಟದ ಕಲಾವಿದ ಬೆಳಗಲ್ ವೀರಣ್ಣನವರೊಂದಿಗೆ ದೆಹಲಿಯವರೆಗೆ ಹೋಗಿಬಂದ ಕಲಾವಿದ ತಿಪ್ಪೇಸ್ವಾಮಿ. ಗದಗ, ಹುಬ್ಬಳ್ಳಿ, ದಾವಣಗೆರೆ, ರಾಯಚೂರು, ಶಿವಮೊಗ್ಗ ಹೀಗೆ ಹತ್ತು ಹಲವು ಜಿಲ್ಲೆಗಳಲ್ಲಿ ಸಂಚರಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಹಿಂದೆಲ್ಲ ರಾತ್ರಿ 8ಕ್ಕೆ ಆಟ ಶುರುವಾದರೆ, ಬೆಳಗಿನ 5 ರವರೆಗೂ ಪ್ರದರ್ಶನ ನಡೆಯುತ್ತಿತ್ತು, ಈಗ ರಾತ್ರಿ 12ಕ್ಕೇ ಮುಗಿಯುತ್ತದೆಯಂತೆ. ಇವರು ಪ್ರದರ್ಶಿಸುವ ಆಟವೆಂದರೆ ರಾಮಾಯಣದ ಕಥಾ ಭಾಗಗಳು. ಬಿಳಿಯ ಪರದೆಯ ಹಿಂದೆ ವಿದುತ್ ದೀಪಗಳನ್ನು ಬೆಳಗಿಸಿ, ಪರದೆಗೆ ಅಂಟಿಕೊಂಡಂತೆ ಗೊಂಬೆಗಳನ್ನು ಆಡಿಸುತ್ತ ಆಟವನ್ನು ಪ್ರದರ್ಶಿಸುತ್ತಾರೆ. ಗೊಂಬೆಗಳ ಚಲನವಲನಕ್ಕೆ ಬಿದಿರನ್ನು ಕಟ್ಟಿರುತ್ತಾರೆ. ಆಯಾ ಪಾತ್ರಕ್ಕೆ ತಕ್ಕಂತೆ ಸಂಭಾಷಣೆ, ಹಾಡುಗಳನ್ನು ತಾವೇ ಹೇಳುತ್ತಾರೆ. ತಿಪ್ಪೇಸ್ವಾಮಿಯವರ ಇಡೀ ಕುಟುಂಬ ಈ ಆಟದ ಪ್ರದರ್ಶನದ್ಲಲಿ ಪಾಲ್ಗೊಂಡಿರುತ್ತದೆ. ಆಯಾ ಕಥೆಗಳಿಗೆ ತಕ್ಕಂತೆ ಗೊಂಬೆಗಳನ್ನು ಇವರೇ ಸಿದ್ಧಪಡಿಸಿಕೊಳ್ಳುತ್ತಾರೆ. ಆಡಿನ ಚರ್ಮವನ್ನು ಹದ ಮಾಡಿ, ಅದನ್ನು ತಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡು, ಅದಕ್ಕೆ ತಾವೇ ಸಿದ್ಧಪಡಿಸಿದ ಬಣ್ಣದ ಮೂಲಕ ಚಿತ್ರವನ್ನು ರಚಿಸುತ್ತಾರೆ. ಇಷ್ಟೆಲ್ಲ ಸಿದ್ಧಪಡಿಸಲು ಕನಿಷ್ಠ 15 ದಿನಗಳಾದರೂ ಬೇಕು. ಇವರ ಬಳಿ ತಲೆತಲಾಂತರದಿಂದ ಪ್ರದರ್ಶಿಸುತ್ತ ಬಂದಿರುವ ಪುರಾತನವಾದ ತೊಗಲು ಗೊಂಬೆಗಳಿವೆ. 150 ವರ್ಷಗಳಷ್ಟು ಹಳೆಯದಾದ ಗೊಂಬೆಗಳಿಂದ ಆಧುನಿಕ ಗೊಂಬೆಗಳವರೆಗೆ ಸುಮಾರು 60-70 ತೊಗಲು ಗೊಂಬೆಗಳಿವೆ. ಆಟ ಪ್ರದರ್ಶನದ ಸಂದರ್ಭದಲ್ಲಿ ಗಂಡು ಪಾತ್ರವಿದ್ದರೆ ಬಯಲಾಟದ ಮಟ್ಟಿನಲ್ಲಿ ಹಾಡುಗಳನ್ನು ಹೇಳಲಾಗುತ್ತದೆ, ಹೆಣ್ಣಿನ ಪಾತ್ರವಿದ್ದಲ್ಲಿ ದಕ್ಷಿಣಾದಿ ಮಟ್ಟಿನ ಹಾಡುಗಳನ್ನು ಹೇಳಲಾಗುತ್ತದೆ. ಒಂದು ಆಟದ ಪ್ರದರ್ಶನದಲ್ಲಿ 25 ಹಾಡುಗಳನ್ನಾದರೂ ಹಾಡಬೇಕಾಗುತ್ತದೆ. ಪತ್ನಿ ಸುಭದ್ರಮ್ಮ, ಮಕ್ಕಳಾದ ಸರೋಜ, ಅಂಜಿನಮ್ಮ, ತಂಗಿ ಗೌರಮ್ಮ, ಮೈದುನ ಮಹಾಂತೇಶ್ ಹೀಗೆ ಇಡೀ ಕುಟುಂಬವೇ ಪ್ರದರ್ಶನದಲ್ಲಿ ತೊಡಗಿಸಿಕೊಳ್ಳುತ್ತದೆ. ಪ್ರದರ್ಶನಕ್ಕೆ ಬಿಳಿ ಪರದೆ, ಹಾರ್ಮೋನಿಯಂ, ಮೃದಂಗ, ತಾಳ, ಗೆಜ್ಜೆಗಳು ಅವಶ್ಯಕ. ಹಂಪಿ ಉತ್ಸವ, ಬೆಂಗಳೂರಿನಲ್ಲಿ ನಡೆದ ಜನಪದ ಜಾತ್ರೆಯಂತಹ ಕಾರ್ಯಕ್ರಮಗಳಲ್ಲಿ ತಿಪ್ಪೇಸ್ವಾಮಿ ಪ್ರದರ್ಶನ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಮೊದಲೆಲ್ಲ ತೊಗಲು ಗೊಂಬೆಯಾಟದಲ್ಲಿ ಆಸಕ್ತಿಯಿತ್ತು. ಆದರೆ ಇತ್ತೀಚೆಗೆ ಗ್ರಾಮಸ್ಥರೂ ಸಹ ಜನಪದ ಕಲೆಗಳಲ್ಲಿ ಆಸಕ್ತಿ ಕಳೆದುಕೊಂಡು ಸಿನಿಮಾ, ಟಿವಿ ಮಾಧ್ಯಮಗಳಿಗೆ ಮಾರುಹೋಗಿರುವುದರಿಂದ, ಈ ಕಲೆ ನಶಿಸುವಂತಾಗಿದೆ ಎಂದು ತಿಪ್ಪೇಸ್ವಾಮಿ ವಿಶಾದ ವ್ಯಕ್ತಪಡಿಸುತ್ತಾರೆ. ಆಟದ ಪ್ರದರ್ಶನದ್ಲಲಿಯೂ ಸಹ ಹಲವಾರು ಬದಲಾವಣೆಗಳಾಗಿದ್ದು, ಮೊದಲಿನ ರೀತಿಯಲ್ಲಿ ಹಾಡು, ಕತೆಗಳನ್ನು ಜನರು ಕೇಳುವುದಿಲ್ಲ. ಅವರ ಆಸಕ್ತಿಗೆ ತಕ್ಕಂತೆ ಹಾಡು, ಸಂಭಾಷಣೆಯನ್ನು ಬದಲಾಯಿಸಿಕೊಳ್ಳಲಾಗಿದೆ ಎಂದು ಅವರು ಹೇಳುತ್ತಾರೆ. ತೊಗಲು ಗೊಂಬೆಯಾಟದ ಪ್ರದರ್ಶನದಿಂದಲೇ ತಮ್ಮ ಉಪಜೀವನವಾಗಿರುವುದರಿಂದ ಸರ್ಕಾರ ಈ ಆಟ ಪ್ರದರ್ಶಿಸುವ ಕಲಾವಿದರಿಗೆ ಹೆಚ್ಚು ಅವಕಾಶಗಳನ್ನು ಒದಗಿಸಬೇಕು, ಕಲೆಗೆ ಪ್ರೋತ್ಸಾಹ ನೀಡುವ ರೀತಿಯಲ್ಲಿ ಆರ್ಥಿಕ ಸೌಲಭ್ಯಗಳನ್ನು ಒದಗಿಸಬೇಕೆಂಬುದು ಇವರ ಬೇಡಿಕೆಯಾಗಿದೆ. ಹೊಸಬರಿಗೆ ಆಟವನ್ನು ಕಲಿಸುವ ರೀತಿಯಲ್ಲಿ ತರಬೇತಿ ಕೇಂದ್ರಗಳನ್ನೂ ಸರ್ಕಾರ ಆರಂಭಿಸಿದರೆ ಮಾತ್ರ ಕಲೆ ಉಳಿಯಬಹುದಾಗಿದೆ ಎಂಬುದು ಇವರ ವಾದ. ನಶಿಸುತ್ತಿರುವ ಅಪರೂಪದ ತೊಗಲು ಗೊಂಬೆಯಾಟ ಕಲೆಯನ್ನು ಉಳಿಸಬೇಕಾಗಿದೆ. ಇದಕ್ಕೆ ಜನಪ್ರತಿನಿಧಿಗಳು, ಸಾರ್ವಜನಿಕರ ಸಹಾಯ, ಸಹಕಾರವೂ ಅತ್ಯವಶ್ಯಕವಾಗಿದೆ. ಅಂದಾಗ ಮಾತ್ರ ವಿಶಿಷ್ಟವಾದ ಕಲೆಯನ್ನು ಬೆಳೆಸಬಹುದಾಗಿದೆ. ಇಲ್ಲದಿದ್ದಲ್ಲಿ ಆಧುನಿಕತೆಯ ಪ್ರವಾಹದಲ್ಲಿ ಅಪರೂಪದ ಕಲೆಯೊಂದು ಹೇಳಹೆಸರಿಲ್ಲದಂತೆ ಮರೆಯಾಗಬಹುದಾಗಿದೆ.
ಚಿತ್ರ ವಿವರ 01 ಚಿತ್ರ: ಅಪರೂಪದ ಕಲೆ ತೊಗಲು ಗೊಂಬೆಯಾಟದ ಕಲಾವಿದ ಬಡೆಲಡುಕು ಕೆ.ತಿಪ್ಪೇಸ್ವಾಮಿ. 02 ಚಿತ್ರ: ಅಪರೂಪದ ಕಲೆ ತೊಗಲು ಗೊಂಬೆಯಾಟದ ಕಲಾವಿದ ಬಡೆಲಡುಕು ಕೆ.ತಿಪ್ಪೇಸ್ವಾಮಿ ತನ್ನ ಕುಟುಂಬದ ಸದಸ್ಯರೊಂದಿಗೆ. 03 ಚಿತ್ರ: 150 ವರ್ಷಗಳಷ್ಟು ಹಳೆಯದಾದ ರಾವಣನ ತೊಗಲು ಗೊಂಬೆ. 04 ಚಿತ್ರ: ಪುರಾತನವಾದ ತೊಗಲು ಗೊಂಬೆ. 05 ಚಿತ್ರ: ಪುರಾತನವಾದ 7 ಹೆಡೆ ಸರ್ಪದ ತೊಗಲು ಗೊಂಬೆ.
2 ಕಾಮೆಂಟ್ಗಳು:
ಸಾರ್ ನೀವು ಪರಿಚಯಿಸಿದ ತಿಪ್ಪೇಸ್ವಾಮಿಯವರ ಪರಿಚಯ ಅಪರೂಪದ್ದಾಗಿದೆ, ನಾನು ಕೂಡ್ಲಿಗಿ ತಾಲೂಕಿನವರೆ ಆದರೂ ಈ ಕಲಾವಿದರ ಬಗ್ಗೆ ತಿಳಿದಿರಲಿಲ್ಲ. ಸಾರ್ ನೀವು ಪ್ರಜಾವಾಣಿಯಲ್ಲಿ ಬರೆಯುವ ಎಲೆಮರೆ ಕಾಯಿಯಂತಹ ಕಲಾವಿದರ ಬಗ್ಗೆ ಬರೆಯುವುದೂ ನನಗೆ ಇಷ್ಟವಾಗುತ್ತದೆ. ಕೂಡ್ಲಿಗಿ ತಾಲೂಕಿನವರೆ ಕನ್ನಡ ಜಾನಪದ ಬ್ಲಾಗ್ ಆರಂಭಿಸಿ ಕರ್ನಾಟಕದ ಜನಪದ ಕಲೆಗಳನ್ನು ಪರಿಚಯಿಸುತ್ತಿರುವುದು ಮೆಚ್ಚುವಂಥದ್ದು. ನಿಮಗೂ ಅರುಣ್ ಅವರಿಗೂ ವಂದನೆಗಳು.
-ಗಚ್ಚಿನಮಠದ ಕೊಟ್ರೇಶ್ ಕೊಟ್ಟೂರು.
ಕೊಟ್ರೇಶ್, ತಮ್ಮ ಅಭಿಮಾನಕ್ಕೆ ಕೃತಜ್ಞತೆಗಳು. ತೆರೆಯ ಮರೆಯಲ್ಲಿರುವ ಕಲಾವಿದರು ಕೂಡ್ಲಿಗಿ ತಾಲೂಕಿನಲ್ಲಿ ಸಾಕಷ್ಟು ಜನರಿದ್ದಾರೆ. ಅವರನ್ನು ಬೆಳಕಿಗೆ ತರುವ ಸಣ್ಣ ಪ್ರಯತ್ನ ನನ್ನದು. ಕೆಲವರು ಈಗಾಗಲೇ ಬೆಳಕಿಗೆ ಬಾರದೇ ಮರೆಯಾಗಿದ್ದಾರೆ. ಉಳಿದವರನ್ನಾದರೂ ಗುರುತಿಸುವ ಕಾರ್ಯ ನನ್ನದು. ನನ್ನ ಲೇಖನಕ್ಕೆ ಅವಕಾಶ ಕೊಟ್ಟಿರುವ ನನ್ನ ತಾಲೂಕಿನವರೇ ಆದ ಅರುಣ್ ಅವರಿಗೂ, ತಮಗೂ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ