ಬುಧವಾರ, ಫೆಬ್ರವರಿ 11, 2015

ಅಂಗನವಾಡಿ ಸ್ಟ್ರೈಕುಗಳ ಪ್ರವಾಸ ಕಥನ

-ಅರುಣ್ ಜೋಳದಕೂಡ್ಲಿಗಿ

  ಸಹಜವಾಗಿ ಅಂಗನವಾಡಿ ಕಾರ್ಯಕರ್ತೆಯರು ವರ್ಷಕ್ಕೆ ನಾಲ್ಕೈದು ಬಾರಿ ಸ್ಟ್ರೈಕ್ ಮಾಡುತ್ತಾರೆ. ಇದು ತಮ್ಮ ಬೇಡಿಕೆಗಳನ್ನು ಈಡೇರಿಸುವ ಹಕ್ಕೊತ್ತಾಯದ ಚಳವಳಿ. ಹೀಗೆ ನಿರಂತರ ಹೋರಾಟ ಮಾಡಿದ ಫಲ ಈಗ ಹುಸಿರಾಡುವಷ್ಟು ಸಂಬಳ ಸಿಗುತ್ತಿದೆ. ಇಂತಹ ಚಳವಳಿಗೆ ಬಾಲ್ಯದಲ್ಲಿ ಅವ್ವನ ಜತೆ ಹತ್ತಾರು ಬಾರಿ ಹೋಗಿದ್ದೇನೆ. ಇವುಗಳನ್ನು ನೆನಪಿಸಿಕೊಂಡರೆ ಅವು  ಹೋರಾಟದ ಕಥನದಂತಿರದೆ, ಪ್ರವಾಸ ಕಥನದಂತಿರುವುದು ಸೋಜಿಗ.

   ಸಾಮಾನ್ಯವಾಗಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ರಾಜ್ಯಮಟ್ಟದ  ಸಂಘಟನೆಗಳಿವೆ. ಅವುಗಳು ಕಾಲ ಕಾಲಕ್ಕೆ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಸ್ಟ್ರೈಕ್‌ಗಳನ್ನು ನಡೆಸುತ್ತಾ ಬಂದಿವೆ. ಅದಕ್ಕೆ ಸಹಾಯಕವಾಗಿ ಯೂನಿಯನ್‌ಗಳು, ಸಿಪಿಐ ತರಹದ ಸಂಘಟನೆಗಳು ಅಂಗನವಾಡಿ ಕಾರ್ಯಕರ್ತೆಯರ ಪರವಾದ ದ್ವನಿ ಎತ್ತುತ್ತಾ ಬಂದಿವೆ. ಈ ಬಗೆಯ ಚಳವಳಿಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಜವಾಗಿ ತಿಳುವಳಿಕೆ ಕಡಿಮೆ. ಅವರು ನಮ್ಮ ಬಗ್ಗೆ ಏನೋ ಒಳ್ಳೆ ಕೆಲಸ ಮಾಡುತ್ತಾರೆ ಎಂದಷ್ಟೆ ಭಾವಿಸಿರುತ್ತಾರೆ. ಕಾರಣ ಅಂಗನವಾಡಿ ನೌಕರರು ಸಾಮಾನ್ಯವಾಗಿ ಎಸ್. ಎಸ್. ಎಲ್.ಸಿ ಓದಿದವರು. ಬಹುಪಾಲು ಹೆಚ್ಚು ಓದದವರು. 

  ಕೆಲವರಿಗೆ ನಾವು ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದೇವೆ ಎನ್ನುವುದೂ ತಿಳಿದಿರುವುದಿಲ್ಲ. ನಾವು ಮಾಡುವ ಕೆಲಸಕ್ಕೆ ಇಷ್ಟು ಸಂಬಳ ಕೊಡುವುದೇ ಸರಿ ಇರಬಹುದು ಎಂದು ಭಾವಿಸಿರುತ್ತಾರೆ. ಕಾರಣ ಇವರಿಗೆ ತಾವು ಮಾಡುವ ಕೆಲಸದ ಮಹತ್ವ, ಅದಕ್ಕೆ ಸಿಗಬಹುದಾದ ನ್ಯಾಯಯುತ ಸಂಬಳ ಮುಂತಾದ ಬಗ್ಗೆ ಜಾಗೃತಿ ಇರುವುದಿಲ್ಲ. ಚಳವಳಿಗಾರರು ಅವರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು  ಕಡಿಮೆ. ಹೋರಾಟದ ಖರ್ಚಿಗೆಂದು ಸಂಬಳದಲ್ಲಿ ಇಂತಿಷ್ಟು ಹಣವನ್ನು ಕೇಳುವಲ್ಲಿ, ವಸೂಲಿ ಮಾಡುವಲ್ಲಿ ಇದ್ದ ಜಾಗರೂಕತೆ ಅವರೊಳಗೆ ಒಂದು ಜಾಗೃತಿಯನ್ನು ಉಂಟು ಮಾಡುವುದರ ಕಡೆ ಸಂಘಟನೆಗಳು ಗಮನ ಕೊಟ್ಟಂತೆ ಕಾಣುವುದಿಲ್ಲ.
 ಕಡಿಮೆ ಸಂಬಳ, ಕಾಯಂ ಅಲ್ಲದ ವೃತ್ತಿ ಕೆಲವೊಮ್ಮೆ ಅಂಗನವಾಡಿ ನೌಕರರ ಬಾಯಿ ಮುಚ್ಚಿಸುತ್ತದೆ. ಅದರಲ್ಲೂ ಜಾಗೃತಿ ಇರುವ ಕೆಲವಾದರೂ ಅಂಗನವಾಡಿ ನೌಕರರು ತಮ್ಮ ಮೇಲಿನ ಸೂಪರ್ ವೈಜರ್ ಮೇಲಾಗಲಿ, ಸಿಡಿಪಿಓ ಮೇಲಾಗಲಿ ದೌರ್ಜನ್ಯದ ವಿರುದ್ಧ ದ್ವನಿ ಎತ್ತದಷ್ಟು ಭಯಗ್ರಸ್ತರೂ ಇದ್ದಾರೆ. ಹಾಗಾಗಿ ಎಷ್ಟೋ ಬಾರಿ ಸೂಪರ್ ವೈಜರ್‌ಗಳೇ ಅಂಗನವಾಡಿ ಕಾರ್ಯಕರ್ತೆಯರ ಶೋಷಕರಾಗಿರುತ್ತಾರೆ. ಇನ್ನು ಕೆಲವು ಕಡೆ ಸಿಡಿಪಿಓ ಶೋಷಕರಾಗಿರುತ್ತಾರೆ. ಇಂತಹ ಅಸಹಾಯಕತೆಯ ಕಾರಣಕ್ಕೆ ಕೆಲವು ಅಂಗನವಾಡಿ ಕಾರ್ಯಕರ್ತೆಯರೂ ಸಹ ತಮ್ಮ ಸಹಾಯಕಿಯ ಪಾಲಿಗೆ ಶೋಷಕಿಯಾಗುವ ಸಾದ್ಯತೆಯೂ ಇರುತ್ತದೆ. ಕೆಲವು ಹಳ್ಳಿಗಳಲ್ಲಿ ಸಹಾಯಕಿ ಸ್ವಂತ ಹಳ್ಳಿಯವಳಾಗಿದ್ದು, ಕಾರ್ಯಕರ್ತೆ ಬೇರೆ ಊರಿನವಳಾಗಿದ್ದರೆ, ಅಲ್ಲಿ ಸಹಾಯಕಿಯೇ ಊರವರ ಜತೆ ಸೇರಿಕೊಂಡು ಕಾರ್ಯಕರ್ತೆಯನ್ನು ಶೋಷಿಸುವ ಘಟನೆಗಳೂ ಇಲ್ಲದಿಲ್ಲ. 


  ಸಂಬಳ ಆರು ತಿಂಗಳಿಗೊಮ್ಮೆಯಾದರೂ ಅವರು ಚಕಾರ ಎತ್ತದೆ ಮೌನವಾಗಿರುವುದನ್ನು ನೋಡಿದ್ದೇನೆ. ಅವು ಸ್ಥಳೀಯ ಕಾರಣಗಳೇ ಆಗಿರುತ್ತವೆ. ಹೀಗೆ ಅಂಗನವಾಡಿ ನೌಕರರ ಶೋಷಣೆಯ ನೆಲೆಗಳು ಹಲವಿವೆ. ಆದರೆ ಅವರು ಸರಕಾರದ ವಿರುದ್ಧ ಮಾತ್ರ ದ್ವನಿ ಎತ್ತಿ, ಆಂತರಿಕವಾಗಿ ತಮ್ಮದೇ ಮೇಲಾಧಿಕಾರಿಗಳ ಅನ್ಯಾಯದ ವಿರುದ್ಧ ದ್ವನಿ ಎತ್ತದಷ್ಟು ಈಗಲೂ ಅಸಬಲರು. ಹೀಗೆ ಕಡಿಮೆ ಸಂಬಳಕ್ಕೆ ದುಡಿವ ದಿನಗೂಲಿಯ ಎಲ್ಲಾ ನೌಕರರ ಪಾಡು ಇದೇ ಆಗಿದೆ. ಕಾರಣ ಪ್ರತಿಭಟಿಸಿದರೆ, ಎಲ್ಲಿ ನಮ್ಮನ್ನು ಕೆಲಸದಿಂದ ಕಿತ್ತು ಹಾಕುತ್ತಾರೋ ಎನ್ನುವ ಭೂತ ಯಾವಾಗಲೂ ಬೆನ್ನ ಹಿಂದೆಯೇ ಹೊಂಚು ಹಾಕಿರುತ್ತದೆ.

 ಅಂಗನವಾಡಿ ನೌಕರರ ಪರವಾದ ತಾಲೂಕು, ಜಿಲ್ಲಾ, ರಾಜ್ಯ, ದೇಶ ಮಟ್ಟದ ಚಳವಳಿಯನ್ನು ಹಮ್ಮಿಕೊಳ್ಳುತ್ತಾರೆ. ಇದರಲ್ಲಿ ತಾಲೂಕು, ಜಿಲ್ಲಾ ಮಟ್ಟದ ಚಳವಳಿಗೆ ಅಷ್ಟು ಉತ್ಸಾಹದಿಂದ ಪಾಲ್ಗೊಳ್ಳದ ನೌಕರರು ರಾಜ್ಯ, ದೇಶ ಮಟ್ಟದ ಸ್ಟ್ರೈಕುಗಳಿಗೆ ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಕಾರಣ ಬೆಂಗಳೂರು ದೆಹಲಿಗೆ ಹೋಗಲು ಉಚಿತ ರೈಲು ಟಿಕೇಟನ್ನು ನೀಡುತ್ತಾರೆ. ಹಾಗಾಗಿ ಇದನ್ನವರು ಪ್ರವಾಸ ಎಂದೇ ತಿಳಿಯುತ್ತಾರೆ. ಇಂತಹ ಮುಷ್ಕರಗಳಿಗೆ ತಮ್ಮ ಮಕ್ಕಳನ್ನು ತಾಯಿ ಅಕ್ಕ ತಂಗಿಯರನ್ನು, ಕೆಲವರು ಗಂಡನನ್ನೂ ಕರೆದೊಯ್ಯುತ್ತಾರೆ. ಕಾರಣ ಬೆಂಗಳೂರು ನೋಡುವುದೇ ಆಗಿರುತ್ತದೆ. ಹಾಗೆ ಹೋದಾಗ ಮುಷ್ಕರದಲ್ಲಿ ಸ್ವಲ್ಪಹೊತ್ತು ಕೂಗಿದಂತೆ ಮಾಡಿ ತಪ್ಪಿಸಿಕೊಂಡು ಪ್ರವಾಸ ಶುರು ಮಾಡುತ್ತಾರೆ. ಅನೇಕ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರು ಮೈಸೂರು ನೋಡಲು ಸಹಾಯಕವಾದದ್ದೇ ಇಂಥಹ ಸ್ಟ್ರೈಕುಗಳು. ಮುಖ್ಯವಾಗಿ ಅಂಗನವಾಡಿ ನೌಕರರಿಗೆ ಕಡಿಮೆ ಸಂಬಳವಾದ ಕಾರಣ ಅವರಿಗೆ ಬೆಂಗಳೂರಿನಂತಹ ನಗರಗಳನ್ನು ನೋಡುವುದು ಕೂಡ ದೂರದ ಕನಸು. ಇನ್ನು ಹಾಗೆ ದೊಡ್ಡ ನಗರಗಳಿಗೆ ಹೋಗುವ ಕಾರಣಗಳೂ ಇರುವುದಿಲ್ಲ.

  ಹಾಗಾಗಿ ಮುಷ್ಕರ ಇದೆ ಎನ್ನುವ ವಾರದ ಮುಂಚೆ ರೊಟ್ಟಿ, ತರತರದ ಚಟ್ನಿಗಳು, ಶೇಂಗ ಪುಡಿ, ತರತರದ ಸಿಹಿ ತಿನಿಸುಗಳನ್ನು ಮಾಡುತ್ತಾರೆ. ಹೊರಡುವ ದಿನ ಮೊಸರನ್ನದ ಬುತ್ತಿ ಅನ್ನವನ್ನು ಸಿದ್ದಪಡಿಸಿಕೊಳ್ಳುತ್ತಾರೆ. ಹಾಗಾಗಿ ಪ್ರತಿ ಅಂಗನವಾಡಿ ಕಾರ್ಯಕರ್ತೆಯರ ತರಾವರಿ ಅಡುಗೆಗಳು ಬಾಯಲ್ಲಿ ನೀರೂರಿಸುವಂತಿರುತ್ತವೆ. ಎಲ್ಲರೂ ತಮ್ಮದನ್ನು ಮತ್ತೊಬ್ಬರಿಗೆ ಹಂಚುತ್ತಾರೆ ಆಗ ತರಾವರಿ ತಿಂಡಿಗಳು ಹಂಚಲ್ಪಡುತ್ತವೆ. ಇದು ಅಕ್ಷರಶಃ ಪ್ರವಾಸದ ಸಿದ್ದತೆಯಂತೆಯೇ ಇರುತ್ತದೆ. 
 ಈ ಪ್ರವಾಸ ಶುರುವಾಗುವುದು ತಾಲೂಕು ಕೇಂದ್ರದಿಂದ. ಇಡೀ ತಾಲೂಕಿನ ಅಂಗನವಾಡಿ ನೌಕರರು ಒಂದೆಡೆ ಸೇರುತ್ತಾರೆ. ಅಲ್ಲಿನ ತಾಲೂಕು ಅಧ್ಯಕ್ಷೆ ತಾವು ಏನಕ್ಕಾಗಿ ಹೋಗುತ್ತಿದ್ದೇವೆ ಎಂದು ಭಾಷಣ ಮಾಡಿ ರೈಲು ಟಿಕೇಟನ್ನು ಹಂಚುತ್ತಾರೆ. ಹೀಗೆ ಹಂಚುವ ರೈಲು ಟಿಕೇಟಿಗೆ ತಾ ಮುಂದು ನಾ ಮುಂದು ಎಂದು ನೂಕು ನುಗ್ಗಲು ಮಾಡುತ್ತಾರೆ. ಕಾರಣ ಟೋಕನ್ ಕಾಲಿಯಾಗಿಬಿಟ್ಟರೆ ? ಎನ್ನುವ ಭಯ ಇವರನ್ನು ಕಾಡುತ್ತಿರುತ್ತದೆ. ನಂತರ ಹತ್ತಿರದ ರೈಲು ಸ್ಟೇಷನ್ನಿನಿಂದ ತಮ್ಮ ಪ್ರಯಾಣ ಶುರುಮಾಡುತ್ತಾರೆ. ಸಾವಿರಾರು ಜನರು ಇರುವ ಕಾರಣಕ್ಕೆ ರೈಲಿನಲ್ಲಿ ಕುರಿಗಳನ್ನು ತುಂಬಿದ ಅನುಭವವಾಗುತ್ತದೆ. ಎಲ್ಲೆಂದರಲ್ಲಿ ಇಡೀ ರೈಲಿನ ತುಂಬಾ ಅಂಗನವಾಡಿ ನೌಕರರ ಸದ್ದೇ ತುಂಬಿರುತ್ತದೆ.

  ಮರುದಿನ ನಿರ್ದಿಷ್ಠಪಡಿಸಿದ ಸ್ಥಳದಿಂದ ಸ್ಟ್ರೈಕ್ ಆರಂಭವಾಗುತ್ತದೆ. ಕೂಗು ಘೋಷಣೆಗಳೊಂದಿಗೆ ಸಾಲು ಸಿದ್ದವಾಗುತ್ತದೆ. ಆಗ ನೌಕರರು ಒಬ್ಬರ ಸೀರೆಯನ್ನು ಒಬ್ಬರು ಹಿಡಿದುಕೊಂಡಿರುತ್ತಾರೆ. ಕಾರಣ ತಾವು ಎಲ್ಲಾದರೂ ತಪ್ಪಿಸಿಕೊಂಡು ಬಿಟ್ಟೇವು ಎಂಬ ಭಯವಿರುತ್ತದೆ. ಆಗ ಆಯಾ ತಾಲೂಕಿನ ನೌಕರರು ಒಂದೇ ಕಡೆ ಇರುತ್ತಾರೆ. ಇವರುಗಳೆಲ್ಲಾ ತಮ್ಮದೇ ಗುಂಪನ್ನು ಕಟ್ಟಿಕೊಂಡು ಒಂದೆಡೆ ಸೇರಿರುತ್ತಾರೆ. ಇದು ಅವರ ನಗರದ ಬಗೆಗಿನ ಭಯವನ್ನೂ, ನಗರವನ್ನು ಸಂಭಾಳಿಸುವ ಜ್ಞಾನದ ಕೊರತೆಯನ್ನೂ ತೋರಿಸುತ್ತದೆ.

 ಕೂಡ್ಲಿಗಿ ತಾಲೂಕಿನ ಬಹುಪಾಲು ಅಂಗನವಾಡಿ ಕಾರ್ಯಕರ್ತೆಯರಿಗೆ ರೈಲು ಪ್ರಯಾಣ ಕೂಡ ಹೊಸದೆ. ಸ್ಟ್ರೈಕ್ ಮುಗಿಸಿಕೊಂಡು ಬಂದಾಗ ಊರಲ್ಲಿ ರೈಲು ಪ್ರಯಾಣ ಮಾಡಿದ್ದನ್ನು ವಿಮಾನ ಪ್ರಯಾಣ ಮಾಡಿದ್ದಕ್ಕಿಂದ ಮಜವಾಗಿ ವರ್ಣಿಸುವುದನ್ನು ನೋಡಬಹುದು. ಕೆಲವೊಮ್ಮೆ ಅಂಗನವಾಡಿ ಕಾರ್ಯಕರ್ತೆಯರ ಗಂಡಂದಿರೂ ಅಪರೂಪಕ್ಕೆ ಬೆಂಗಳೂರು ನೋಡಲು ಬರುತ್ತಾರೆ. ಅವರದಂತೂ ನಾಯಿ ಪಾಡು. ಕಾರಣ ಹೆಣ್ಣಮಕ್ಕಳ ಹಿಂಡಿನಲ್ಲಿ ಬೆರಳೆಣಿಕೆಯ ಗಂಡಂದಿರ ಪಾಡು ಹೇಳತೀರದು.

 ನಾನು ಮೊದಲ ಬಾರಿಗೆ ಬೆಂಗಳೂರು ನೋಡಿದ್ದು ಸಹ ಅವ್ವನ ಜತೆ ಸ್ಟ್ರೈಕ್‌ಗೆ ಹೋದಾಗಲೆ. ಆಗ ಬೆಂಗಳೂರಿನ ಬಗ್ಗೆ ನಮ್ಮೂರಿನಲ್ಲಿ ಹುಟ್ಟಿಸಿದ್ದ ಭಯದ ಕಥೆಗಳೂ ಕೂಡ ನನ್ನನ್ನು ದಿಗಿಲುಗೊಳಿಸುವಂತೆ ಮಾಡಿದ್ದವು. ಬೆಂಗಳೂರಿನ ಮೋಸದ ಕಥೆಗಳು ನನಗೆ ನೆನಪಾದವು. ಹಳ್ಳಿಗರು ಎಂದು ಗೊತ್ತಾದರೆ, ಯಾರಾದರೂ ಯಾಮಾರಿಸುವವರು ಇದ್ದೇ ಇರುತ್ತಾರೆ ಎನ್ನುವುದು ನನ್ನೊಳಗೆ ಭಯ ಹುಟ್ಟಿಸಿತ್ತು. ಹಾಗಾಗಿ ಕಾಣುವ ಬೆಂಗಳೂರಿಗರಲ್ಲಿ ಆ ಮೋಸಗಾರ ಯಾರಿರಬಹುದು ಎಂದು ಎಲ್ಲರ ಮುಖಗಳನ್ನು ನೋಡುತ್ತಿದ್ದೆ. ಹಾಗಾಗಿ ಅವ್ವ ಮತ್ತೊಬ್ಬ ಅಂಗನವಾಡಿ ಟೀಚರ್ ಸೀರೆ ಸೆರಗಿಡಿದು ನಡೆಯುತ್ತಿದ್ದರೆ, ನಾನು ಅವ್ವನ ಸೀರೆ ಸೆರಗನ್ನು ಗಟ್ಟಿಯಾಗಿ ಹಿಡಿದು ನಡೆಯುತ್ತಿದ್ದೆ. ಹೀಗೆ ನಮ್ಮ ಸಾಲು ರೈಲು ನಡೆಯುತ್ತಿದ್ದರೆ, ಬೆಂಗಳೂರಿಗರಿಗೆ ಟ್ರಾಫಿಕ್ ಜಾಮ್ ಮಾಡಿದ ಕಾರಣಕ್ಕೆ ಸಂಕಟ. ಹಾಗಾಗಿ ಸಾಲಲ್ಲಿರುವ ನೌಕರರನ್ನು ಸಿಟ್ಟಿನಿಂದಲೂ, ತಿರಸ್ಕಾರದಿಂದಲೂ ನೋಡುತ್ತಿದ್ದುದು ನನ್ನ ಗಮನಕ್ಕೆ ಬರುತ್ತಿತ್ತು.

 ಒಮ್ಮೆ ಮೈಸೂರಿನಲ್ಲಿ ಅಂಗನವಾಡಿ ಕಾರ್ಯಕರ್ತರ ದುಂಡುಮೇಜಿನ ಸಭೆಯನ್ನು ಏರ್ಪಡಿಸಿದ್ದರು. ಆಗ ಬಹುತೇಕ ಅಂಗನವಾಡಿ ನೌಕರರು ಮೈಸೂರನ್ನು ನೋಡುವ ಆಸೆಯಿಂದಲೇ ಈ ಸಭೆಗೆ ಬಂದಿದ್ದರು. ಆಗಲೂ ನಾನು ಅವ್ವನ ಜತೆ ಮೈಸೂರಿಗೆ ಹೋಗಿದ್ದೆ. ಅದೇ ಸಮಯಕ್ಕೆ ಮುಖ್ಯಮಂತ್ರಿ ಗುಂಡುರಾವ್ ತೀರಿಕೊಂಡರು. ಆಗ ವ್ಯವಸ್ಥೆ ಅಸ್ತವ್ಯಸ್ಥವಾಗಿ ಎರಡು ದಿನ ರೈಲು ಸಂಚಾರ ಸ್ಥಗಿತವಾಗಿತ್ತು. ಆಗ ಅಂಗನವಾಡಿ ನೌಕರರಿಗೆ ಖುಷಿಯೋ ಖುಷಿ. ಕಾರಣ ದಿನಕ್ಕೊಂದರಂತೆ ಅರಮನೆ, ಜೂ, ಕೆ.ಆರ್.ಎಸ್, ಚಾಮುಂಡಿಬೆಟ್ಟ, ರಂಗನತಿಟ್ಟು, ಮುಂತಾದ ಭಾಗಗಳಿಗೆ ಹೋಗಿ ತಮ್ಮ ಮೈಸೂರು ನೋಡುವ ಆಸೆಯನ್ನು ತೀರಿಸಿಕೊಂಡರು. ಆಗ ಅವರುಗಳೆಲ್ಲಾ ತೀರಿಹೋದ ಗುಂಡುರಾವ್ ಅವರಿಗೆ ಮನಸ್ಸಿನಲ್ಲಿಯೇ ಥ್ಯಾಂಕ್ಸ ಹೇಳಿದ್ದಿರಬೇಕು. ಗುಂಡುರಾವ್ ಅವರ ಸಾವು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಪಾಲಿಗೆ ಸಾರ್ಥಕವಾಗಿತ್ತು.


  ಒಮ್ಮೆ ಅಂಗನವಾಡಿ ನೌಕರರ ಪರವಾಗಿ ಹೋರಾಟ ಮಾಡುತ್ತಿದ್ದ ಕಾಮ್ರೇಡ್ ಸುಂದರೇಶ್ ರೈಲು ಅಪಘಾತದಲ್ಲಿ ತೀರಿಹೋದರು. ಆಗ ಅವ್ವ ಎರಡು ಮೂರು ದಿನ ದುಖಃಪಟ್ಟಿದ್ದಳು. ಕಾರಣ ಸುಂದರೇಶ್ ಅಂಗನವಾಡಿ ನೌಕರಿಯನ್ನು ಖಾಯಂ ಮಾಡುತ್ತಾರೆ, ಅವರು ಮಾತ್ರ ಅಂಗನವಾಡಿ ತಾಯಂದಿರ ಕಣ್ಣೀರನ್ನು ಒರೆಸಬಲ್ಲರು ಎಂದು ಯಾರೋ ಅವ್ವನ ಬಳಿ ಹೇಳಿದ್ದರಂತೆ. ಹಾಗಾಗಿ ಸುಂದರೇಶ್ ಅಂದರೆ ಅವರು ನಮ್ಮ ಪಾಲಿನ ದೇವರು ಎಂದೆಲ್ಲಾ ತಿಳಿದಿದ್ದರು. ಹೋರಾಟಕ್ಕಾಗಿ ನಮ್ಮನ್ನೆಲ್ಲಾ ಕರೆದೊಯ್ಯುವ ಈ ರೈಲು, ನಮ್ಮ ಪರವಾಗಿ ದುಡಿವ ಜೀವ ಸುಂದರೇಶ್ ಅವರನ್ನೇ ಬಲಿತೆಗೆದುಕೊಂಡಿತು ಎನ್ನುವ ಸಿಟ್ಟು ಅವ್ವನಿಗಿತ್ತು. ಇದನ್ನು ರೈಲು ಕಂಡಾಗಲೆಲ್ಲಾ ಹೇಳುತ್ತಿದ್ದಳು.
  ಹೀಗೆ ತಮ್ಮ ಹಕ್ಕೊತ್ತಾಯದ ಕಾರಣಕ್ಕೆ ಮಾಡುವ ಸ್ಟ್ರೈಕುಗಳನ್ನು ಸಹ ಪ್ರವಾಸದಂತೆ ಬಳಸಿಕೊಳ್ಳುತ್ತಿದ್ದುದು, ಅಂಗನವಾಡಿ ನೌಕರರ ಕಡಿಮೆ ವೇತನದಿಂದಾಗಿ ಅದುಮಿಟ್ಟ ಆಸೆಗೆ ಜೀವ ಬಂದಂತಾಗುತ್ತಿತ್ತು. ಹಾಗಾಗಿ ನಮಗೆ ಸಂಬಳ ಹೆಚ್ಚಾಗುತ್ತೋ, ಇಲ್ಲವೋ ಆದರೆ ನಾವು ಜೀವನದಲ್ಲಿ ಒಮ್ಮೆಯಾದರೂ ಬೆಂಗಳೂರು, ಮೈಸೂರನ್ನು ನೋಡಿಂದಂತಾಯಿತು ಎಂದು ಅವರು ಮುದಗೊಳ್ಳುತ್ತಾರೆ. ಹೀಗೆ ಮುಷ್ಕರ ಮುಗಿಸಿ ಮನೆಗೆ ಮರಳುವಾಗ ಮಕ್ಕಳಿಗೆ ಚಿಕ್ಕಪುಟ್ಟ ಸಾಮಾನುಗಳು,  ಆಟಿಗೆಗಳು, ವ್ಯಾನಿಟಿ ಬ್ಯಾಗು ಒಂದಷ್ಟು ಕುರುಕಲು ತಿಂಡಿಯನ್ನು ತರುತ್ತಾರೆ. ಅದರ ಜತೆ ಕಾಲಿಯಾದ ನೀರಿನ ಬಾಟಲಿಗಳ ಸಂಖ್ಯೆ ದೊಡ್ಡದಿರುತ್ತದೆ. 

    ಒಮ್ಮೆ ದೆಹಲಿಯಲ್ಲಿ ಸ್ಟ್ರೈಕ್ ಇದ್ದಾಗ ಅವ್ವ ದೆಹಲಿಗೆ ಹೋಗಲು ಹೆದರಿದಳು. ಕಾರಣ ಅಲ್ಲಿ ವಿಪರೀತ ಚಳಿಯಂತೆ, ಆ ಚಳಿಯಲ್ಲಿ ಮನುಷ್ಯರು ಮಂಜುಗಡ್ಡೆಯಂತೆ ಗಟ್ಟಿಯಾಗುತ್ತಾರಂತೆ, ಅಲ್ಲಿ ಕಳೆದು ಹೋದರೆ ವಾಪಸ್ಸು ಬರಲು ಆಗುವುದಿಲ್ಲವಂತೆ, ಅಲ್ಲಿ ನಮ್ಮ ಭಾಷೆ ಇಲ್ಲವಂತೆ ಇಂತದ್ದೇ ತರಾವರಿ ಭಯಗಳು ಅವ್ವನಂಥವರನ್ನು ದೆಹಲಿಗೆ ಹೋಗುವ ಆಸೆಯನ್ನು ಕಮರಿಸಿದವು. ಈಗ ಅವ್ವನಿಗೆ ಅಂತಹ ಭಯ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ, ದೆಹಲಿ ನೋಡುವ ಆಸೆ ಇನ್ನೂ ಜೀವಂತವಾಗಿದೆ.



ಸೋಮವಾರ, ಫೆಬ್ರವರಿ 9, 2015

ಗರಗದ ಮಡಿವಾಳಪ್ಪನ ಜಾತ್ರೆಯಲ್ಲಿ ಕಂಡ ಚಿತ್ರಗಳು

ನಿನ್ನೆ 8.2.15 ರ ಸಂಜೆ ರಹಮತ್ ತರೀಕೆರೆ, ಎಂ.ಡಿ.ಒಕ್ಕುಂದ, ವಿನಯಾ, ಅಕ್ಷತಾ, ರೇಣುಕಾ ನಿಡಗುಂದಿ, ಭೀಮೇಶ ಯರಡೋಣಿ ನಾನು ಧಾರವಾಡ ಸಮೀಪದ ಗರಗದ ಕಡಕೋಳ ಮಡಿವಾಳಪ್ಪನ ಜಾತ್ರೆಗೆ ಹೋಗಿದ್ದೆವು. ಜಾತ್ರೆಯ ಗಜಿಬಿಜಿ ಕಡಿಮೆ ಇತ್ತಾದರೂ, ಜಾತ್ರೆಯ ವಾತಾವರಣವಿತ್ತು. ಮಡಿವಾಳಪ್ಪನ ಕ್ಷೇತ್ರ ಹೊಸ ಅನುಭವ ನೀಡಿತು.


















ಶುಕ್ರವಾರ, ಫೆಬ್ರವರಿ 6, 2015

ಸಂಗೊಳ್ಳಿ ರಾಯಪ್ಪನ ಲಾವಣಿ ಪದ






ಎ ಸಿಂಹದಂಥಾ ಸಂಗೊಳ್ಳಿ ರಾಯಾ
ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ
ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ
ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ
ಸೃಷ್ಟಿಯೊಳಗ ಹುಟ್ಟಿಬಂದ ಶ್ರೇಷ್ಠನಾಗಿ ಹೋಗಿದಾನ
ದುಷ್ಟ ರಾವಣಾಸುರನ ಲಂಕಾ ಸುಟ್ಟಾಂಗ
ಹಿಂಗ ಸಂಪಗಾಂವಿ ಬೀಡಿ ಕಚೇರಿ ಸುಟ್ಟಾನ ಕಲಿಕಿದೊಳಗ|| ೧ ||
ಜಾತಿಲಿಂದ ಕುರಬರ ಬೀರಾ, ರೂಪದಲ್ಲಿ ಸೂರ್ಯ ಚಂದ್ರಾ
ಪಂಚ ಪಾಂಡವರೊಳಗ ಭೀಮ ಹುಟ್ಟಿ ಬಂದಾಂಗ
ಗುಡಗ-ಸಿಡ್ಲ-ಮಿಂಚ-ಗದ್ನಿ ಹೊಡದಾಂಗ
ವಯಾ-ವರುಷೆ ಇಪ್ಪತ್ನಾಲ್ಕ ಹನಮಂತ ದೇವರ ಇದ್ದೋ ಬಲಕ
ಗುಣದಲ್ಲಿ ಬಾಳ ನಂಬಿಗಿವಂತ ರಾಮದೇವರಂಗ
ಕತ್ತಿ ಹಿಡಿಯತಿದ್ದೊ ರಣದಲ್ಲಿ ವೀರಭದ್ರದೇವರಂಗ
ರಾಯಣ್ಣನ ದನಿ ಗವಿಯೊಳಗ ಹುಲಿ ಗದ್ನಿ ಹೊಡದಂಗ|| ೨ ||
ಏ ಸಣ್ಣಂದಿರತ ಅವನ ಬಣ್ಣ ಚೊಕ್ಕ ಲಿಂಬಿಬಣ್ಣಾ
ಹೋಕ ಹೊಳಕ ಹೋಳಿ ಕಾಮ ದೇವರಂಗ
ಕಕ್ಕೇರಿ ಬಿಷ್ಟೆವ್ವನ ಹಸ್ತ ಅವನ ತೆಲಿಯಮ್ಯಾಗ
ಕಿತ್ತೂರ ಅರಸರ ಪ್ರೀತಿ ಬಾಳ ಹಳಬಕಿ ನೇಮಿಸ್ಯಾರ ರಾಯಪ್ಪಗ
ಹಡಿಯಬೇಕ ಇಂಥ ಮಕ್ಕಳನ ಭೂಮಿಯ ಮ್ಯಾಗ
ಕೆಚ್ಚೆದೆಯ ಕರ್ಣನಂತವನ ರಣದಾಗ
ಇಂಥವರ ಪೂಜ್ಯವಂತರಾಗತಾರ ಲೋಕದೊಳಗ|| ೩ ||
ಕುಲಕರ್ಣಿ ಬಾಳಪ್ಪನಕೂಡ ಪಹಿಲೆ ಕದನಹುಟ್ಟಿತಪ್ಪ
ಜಳಕ ಮಾಡುವಾಗ ಮಲಪುರಿ ಹೊಳೆಯಾಗ
ಉಟ್ಟಿರುವ ಧೋತರ ಒಗಿಯಂದೋ ರಾಯಪ್ಪಗ
ರಟ್ಟಿ ಹಿಡಿದ ಮುನಗಸತಾನ ರಾಯಪ್ಪಗ
ಜುಟ್ಟ ಹಿಡಿದ ಎಬ್ಬಸತಾನ ರಾಯಣ್ಣನಾಗ
ಕೂಟ್ಟಿ ಮಾತಾ ಹೇಳಬಾರದೋ ರಾಯಪ್ಪ ನನಗ
ರಾಯಣ್ಣ ಜನಿವಾರ ಹರದ ಒಗದಾನ ಹೊಳಿಯೊಳಗ|| ೪ ||
ಏ ಇಷ್ಟೆ ಘಾಸಿಯಾಗಿ ಹಾರುವಾ ನಡಿಗ್ಯಾನಾಗ
ಸಿಟ್ಟಿಗೇರಿ ಮನಿಗಿ ಹೋಗಿ ನಡಿಸ್ಯಾನ ಮೋಸ
ಕುನಸ ಇಟ್ಟೋ ಕುಲಕರ್ಣಿ ಕುರಬನ ಮ್ಯಾಗ
ರಿಪೋರ್ಟ ಬರಿಯತಾನ ಕುಂತ ಚಾವಡ್ಯಾಗ
ಸರಕಾರ ಚಾಕರಿ ಸರಿಯಂಗ ಮಾಡ ಒಲ್ಲ ಊರಾಗ
ದಂಗೆ ದರೋಡಿ ಮಾಡತಾನ ಬಲ್ಲಂಗ
ಬಡಿಲಾಕ ಬರತಾನ ನಮ್ಮ ಮೈ ಮ್ಯಾಗ|| ೫ ||
ರಾಯಣ್ಣಜ್ಜ ರೋಗಣ್ಣಗ ಮೂರನೂರ ಕೂರಿಗಿ ಜಮೀನಾ
ಕಿತ್ತೂರ ದೇಸಾಯರ ಕಡೆಯಿಂದ ಗಳಸಿದ ವತನಾ
ಇದಕ ಸರಿಯಾಗಿ ಪಾಳೆಕುಂಡ್ರುಸುದು ಮಾಡರಿ ಹುಕುಮಾ
ಸಿಟ್ಟಿನಿಂದ ರಿಪೋರ್ಟ ಬರದಾನೋ ದುಷ್ಟತಾನಾ
ತಿಳಿಯಗೊಡದ ಬಂದಮಾಡ್ಯಾನ ಕಾಗದವನಾ
ಕಾಗದಾ ಬರದಾನ ಕುಲಕರ್ಣಿ ತನ್ನ ಕೆಡಗಾಲಕತಾನಾ
ರಾಯಪ್ಪನ ಕರದ ಕೊಡತಾನ ಹುಕುಮವನಾ|| ೬ ||
ಏ ರಾಯಪ್ಪ ಬಾರಪ್ಪ ನನ್ನ ಕಡೆ ಏನ ತಪ್ಪ
ತಾಯಿ-ಮಕ್ಕಳಂಗ ಇರೂನ ನಾವ ಕಡೆತನಕ
ಏನ ತಪ್ಪ ಮಾಡಿದರ ಒಪ್ಪಿಗೋಬೇಕ ನಮ್ಮ ಮನಕ
ಸಣ್ಣಂಗ ಮಾತಾಡಿ ಕಾಗದಾ ಕೈಯಾಗ ಕೊಡತಾನ
ಸಂಪಗಾಂವಿ ಕಚೇರಿಗೆ ಇದನ ಒಯ್ಯಬೇಕ
ಎಲ್ಲೆಲ್ಲಿ ನಿಂದರದ ಹೋಗಬೇಕ ತುರತದಿಂದ
ಸುಭೇದಾರ ಸಾಹೇಬರ ಕೈಯಾಗ ಕೊಡಬೇಕ|| ೭ ||
ಕುಲಕುಲ ನಕ್ಕೊಂತ ರಾಯಪ್ಪ ಕುಲಕರ್ಣಿಗೆ ಹೇಳ್ಯಾನ
ಹಿಂತಾ ಮತ ಹತ್ತ ಹೇಳರಿ ದಿನ ದಿನಕ
ರೀತಿ ಹಿಡದ ನಡೆಯಬೇಕ ಕಡಿಯತನಕ
ತಪ್ಪ ತಡಿ ಮಾಡಿದರ ಗಪ್ಪನ ಇರಾಂವ ನಾನಲ್ಲ
ಜಪ್ಪಿಸಿ ಜಿಗಿಯತೀನ ಮ್ಯಾಗ ಆಕಾಶಕ
ವೈರಿಯ ಕಂಡರ ಜಿಗ್ಯಾಂವ ಹನುಮನಂಗ
ವೈರಿಗಳನ ಕಳಸತೀನ ಯಮಲೋಕಕ|| ೮ ||
ಏ ರಿಪೋರ್ಟ ಹಾಕಿದ ಕಿಸಿಯಕ
ರಪಾಟ ಬಂದೋ ಮನೆತನಕ
ಬಾಗಿ ನಮಸ್ಕಾರ ಮಾಡ್ಯಾನ ತಾಯಿಪಾದಕ
ಟಪಾಲ ಒಯ್ಯತೀನಿ ತಾಯಿ ಸಂಪಗಾಂವಿತನಕ
ಹಸವ ಆಗೇತೆವ್ವಾ ದವಡಮಾಡಿ ಎಮ್ಮಿ ಹಿಂಡ
ಸಕ್ಕರಿ ಹಾಕಿ ಹಾಲ ಕೊಡವ್ವ ಕುಡಿಲಾಕ
ಹೊಡಮಳ್ಳಿ ಬರತೀನ ಸಂಜಿ ಆರಕ|| ೯ ||
ಬಿಗವಾರಿ ಚೊಣ್ಣಾ ಹಾಕಿದಾನ ರಾಯಾ
ಬಗ್ವಿ ಅಂಗಿ ತೊಟ್ಟಿದಾನ ಮಲಮಲ ಪಟಕಾ
ಕ್ಯಾಮಿ ಎದ್ದಿ ಬಹಳ ಜುಳಕ ಕಾಣತಾನ
ಹನುಮಂತ ಹಾರಿದಂಗ ಲಂಕಾಕ ರಾಯಣ್ಣಾಗ
ತಾಸಿನೊಳಗ ಪಂಚಗಾಂವಿ ಹೊಕ್ಕ ಸುಭೇದಾರರಂತೇಕ
ರಿಪೋರ್ಟ ಒಗದ ನಿಂತಾನ ಸುಮ್ಮಕ
ಹೆಬ್ಬುಲಿ ನಿಂತಂಗ ನಿಂತ ಸಾಹೇಬರ ಹಂತೇಕ|| ೧೦ ||
ಏ ಲಕೋಟಿ ಒಡದಾರ ಸಾಹೇಬರಾ
ರಿಪೋರ್ಟದೊಳಗಿನ ಮಜಕೂರಾ
ಓದಿ ನೋಡಿ ಹಲ್ಲ ತಿಂದಾನ ಕರಕರಾ
ಹಿಂಗ ಚಾಕರಿ ಮಾಡು ಧರ್ಮ ಏನ ಹಳಬರಾ
ಮೂರ ನೂರ ಕೂರಿಗಿ ಜಮೀನಕ
ಹುಕುಂ ಆಗೇದ ಸರಕಾರ‍್ದು ಜೋರ‍್ದಾರಾ
ಕೊಡದಿದ್ರ ಬಿಡುವದಿಲ್ಲೊ ಕಾಯ್ದೇಶೀರಾ|| ೧೧ ||
ಟೊನ್ನಿ ಸುಭೇದಾರ ನಿನ್ನ ಬಂಡತಾನಾ
ನಡಿಯುವದಿಲ್ಲೋ ನನ್ನ ಮುಂದ ಸುಮ್ಮಸುಮ್ಮಕ
ನಾಳೆ ಬಂದ ಕೇಳ ಊರಾಗ ಸೂರ್ಯ ಉದಯಕ
ತಪ್ಪ ಇದ್ದರ ಗಪ್ಪನ ಹಾಕೋ ಲಕಾ ಪಕಾ
ಮೂರ ನೂರ ಕೂರಿಗಿ ಜಮೀನ ನಮ್ಮಜ್ಜ ರೋಗನ್ನಾ
ಲಢಾಯಿ ಮಾಡಿ ಗಳಿಸಿದ್ದಿದೆಯೋ ಜಾತಿ ವತನಾ
ಇಂಗ್ರೇಜಿ ಸರಕಾರ ಕೊಟ್ಟದ್ದು ತೋರಿಸಬೇಕ ಏನಾ|| ೧೨ ||
ಏ ಇಷ್ಟೆ ಮಾತ ಕೇಳಿ ಸುಭೇದಾರ ಎದ್ದ
ಪೋಲಿಸರಿಗೆ ಕೊಟ್ಟಿದಾನ ಹುಕುಮವನಾ
ಓದ ಲಕಾಪಕ ಹಾಕರಿ ಈ ಕುರುಬನಾ
ಹ್ಯಾಂಗ ಮಾತಾಡತಾನ ಈ ಕೆಟ್ಟ ಭೇಮಾನಾ
ಅನ್ನ-ನೀರ ಕೊಡಬ್ಯಾಡ್ರಿ ಇಡ್ರಿ ಮೂರದಿನಾ
ಕೈ ಕಾಲಿಗೆ ಹಾಕರಿ ಮೊದಲ ಬೇಡಿಗಳನಾ
ಬರದ ಕೊಟ್ಟ ಕಾಗದಾ ಲೇಕ ಹುಕುಮವನಾ|| ೧೩ ||
ಒತ್ತರಮಾಡಿ ಪೋಲಿಸರು ಸುತ್ತಗಟ್ಟಿ ನಿಂತಾರಾಗ
ಕತ್ತಿ ಮಗನ ಸತ್ತ ಹೋದಿ ನಮ್ಮ ಹೊಡತಕ
ಬೇಡಿ ಹಾಕಲಾಕ ಬಂದಾರೋ ಕೈಗೆ ಎಕದಮಕ
ರಾಮಪ್ಪ ಆಗ ಕಣ್ಣ ಕಿಸದ ಆ ಜನರೀಗಾಗ
ಚಣ್ಣ ಹರಿಯುವಂಗ ಒದ್ದೀನಿ ಅಂತಾನವರಿಗಿ
ದೂರ ಸರದ ನಿಂದರ್ರಿ ಬಂದೀರಿ ಸನಿಯಾಕ
ಮುಂದಾಗಿ ನಡೀರಿ ಬರತೀನಿ ನಾನ ಪೋಲೀಸ ಸ್ಥಳಕ|| ೧೪ ||
ಏ ಜೇಲಿನೊಳಗ ಹಾಕಿದಾರ ರಾಯಣ್ಣನ
ಕೀಲಿ ಬಂದ ಮಾಡಿದಾರ ಬಂದೂಬಸ್ತಾನ
ಕಾವಲ ಮಾಡತಾರ ಪಾರಾ ಬೆಳತನಕಾ
ರಾಯಪ್ಪನ ಸುದ್ದಿ ತಗದ ಮಾತಾಡತಾರ ನಕ್ಕ
ಸಂಗೊಳ್ಳಿ ಹಳಬ ಬಹಳ ಬಿರಸರಿ ಬಾಳ ಭಾರೀ
ಸರಿ ಒಲ್ಲೋ ಯಾರ‍್ಯಾರಿಗಿ ಹಿಂದಕ ಮುಂದಕ
ಸಾಹೇಬಗ ಆಗೇತಿ ಇವನ ನೋಡ ಬಹಳ ಠಕ್ಕ|| ೧೫ ||
ಸಂಜಿ ತನಕ ದಾರಿ ನೋಡ್ಯಾನ ಕುಲಕರ್ಣಿ
ರಾಯಾ ಬರಲಿಲ್ಲಂತ ತಿಳಿದ ಮನದಾಗ
ಹೌಸ ಆದೋ ಕುಲಕರ್ಣಿ ತನ್ನ ಮನಕ
ಕೆಂಚವ್ವನ ಕರಸತಾನೋ ಚಾವಡಿತನಕ
ಹುಚ್ಚಮುಂಡೇ ಪಾಳೇ ಕೊಡಬೇಕ ಇಗಿಂದೀಗ
ಡುಬ್ಬದ ಮ್ಯಾಗ ಕಲ್ಲ ಹೇರಿಸ್ಯಾನ ಹೆಂತಾ ಸೊಕ್ಕ
ಸುದ್ದಿ ಹತ್ತಿ ಚನಬಸಪ್ಪ ಬಂದಾನ ಚಾವಡಿಗಾಗ|| ೧೬ ||
ಏ ಕತ್ತಿಮನಗ ಕುಲಕರ್ಣಿ ಎಂತಾ ಸೊಕ್ಕ
ಬಂತ ನಿನಗ ಅಳಗಾಲ ಆಗುವ ಕಾಲ
ಒದ್ದ ಮುರದೇನ ಸೂಳೆಯ ಮಗನ ಹಲ್ಲಾ
ಮುದಕಿ ಡುಬ್ಬದಮ್ಯಾಗ ಹೇರುದೇನ ಕಲ್ಲಾ
ಅನ್ಯಾಯ ಮಾಡಿದವರನ್ನ ನಮ್ಮ ಕಣ್ಣ ನೋಡ್ಯಾವ
ಮಣ್ಣಗೂಡಿ ಹೋಗಿದಾರ ಭೂಮಿಮ್ಯಾಲಾ
ಹಿಂಗ ಅದ್ದೂರಿ ಮಾಡಿದವು ಆಗತಾರ ಅಳಗಾಲಾ|| ೧೭ ||
ಹಿಂಗ ಜೇಲಿನೊಳಗ ರಾಯಪ್ಪ ಕೇಳಿ
ಕೂಗಾನ ಏಳತಾರ ಕಾವಲದವರೆಲ್ಲಾ
ಕೂಗಿ ಒಳಗ ನಿಂತ ಹೇಳತಾನ ಪೋಲೀಸರಿಗೆಲ್ಲಾ
ಜೇಲ ಮುರದ ಹೋಗತೀನ ಮಾಡಿರಿ ಕಾವಲಾ
ಬಂದೂಕ ನೆವರಿ ಹಿಡಕೊಂಡ ನಿಂದರ್ರಿ ಮ್ಯಾಲಾ
ಬಲಭೀಮನ ಹೆಸರ ತಕ್ಕೊಂಡ ಮ್ಯಾಲಕ ಹಾರ‍್ಯಾನ
ಕಕ್ಕೇರಿ ಬಿಷ್ಟವ್ವ ಬಂದ ನಿಂತಾಳ ಬೆನ್ನ ಮ್ಯಾಲಾ|| ೧೮ ||
ಏ ಎಡಗೈಯಿಂದ ಚಿಲಕ ಹಿಡದ ಬಲಗೈಯಿಂದಾ
ಹಂಚ ಗುದ್ದಿ ಮ್ಯಾಲಬಂದ ನಿಂತದಾನ ಹುಲಿಹಂಗಾ
ನೋಡಿ ಪೋಲಿಸರು ಓಡ್ಯಾಡ್ಯಾರ ಬಲ್ಲಂಗಾ
ಗೋಳಿ ಫಾಯರ ಮಾಡತಾರ ಸಿಕ್ಕಾಂಗಾ
ರಾಯಣ್ಣ ಮ್ಯಾಗ ನಿಂತಕೊಂಡ ಗಾಳಿಹಂಗ ಹಾರ‍್ಯಾನ
ಗಟ್ಟಿ ಉಳ್ಳವರಿದ್ದರ ಬಂದ ಹಿಡಿರ‍್ಯೋ ನನಗ
ಹಿಂಗ ಹೇಳಿ ಕೇಳಿ ಜಿಗದಹೋದಾನ ಆಗಿಂದಾಗ|| ೧೯ ||
ತಾಸ ಹೊತ್ತೇರುದರೊಳಗ ರಾಯಣ್ಣ
ಮಲ್ಪೂರಿ ಹೊಳಿಗಿ ಬಂದ ನೋಡ್ಯಾನ ತಿಳಿನೀರ
ಈಶ್ಯಾಡತಾನ ರಾಯಣ್ಣ ತನ್ನ ಮನಸಿಗಿ ಬಂದಾಂಗ
ತಾಸ ವ್ಯಾಳೆ ಈಶ್ಯಾಡಿ ಬಂದ ದಂಡಿಮ್ಯಾಗ
ಕುಂತಕೊಂಡ ಕ್ಯಾವಿ ಹಚ್ಯಾನ ಬಲ್ಲಾಂಗ
ಮೈಮ್ಯಾಗ ಅರವಿ ಹಾಕೊಂಡ ದಂಡಿಮ್ಯಾಗ
ತಳವಾರ ಫಕೀರ ಓಡಿಬಂದೋ ಅವಾಗ|| ೨೦ ||
ಏ ಸಲಾಮರೆಪ್ಪಾ ರಾಯಪ್ಪ ಇದ ಬಂದೀರೇನಪ್ಪಾ
ಊರಾಗ ಆದ ಸುದ್ದಿ ಗೊತ್ತಿಲ್ಲರೇನಪ್ಪಾ ನಿಮಗ
ಕುಲಕರ್ಣಿ ಕತಿ ಮಾಡ್ಯಾನ ನಿನ್ನೆ ರಾತ್ರ್ಯಾಗ
ಅವ್ವನ ಚಾವಡಿಗಿ ಕರಿಸಿ ಡುಬ್ಬದಮ್ಯಾಗ ಕಲ್ಲಹೇರಿಸಿ
ಪಾಳೆ ಕೊಡ ಅಂತ ಬೈದೋ ಬಲ್ಹಾಂಗ
ಬಾಹಳ ಬೇದ ಅಬರು ಕಳದೋ ಹಾರವಾ ಮಂದ್ಯಾಗ
ಹ್ಯಾಂಗ ಮಾಡಿದರ ಅಂವಗ ಬಂದಿತೋ ಬುದ್ಧೀಗ|| ೨೧ ||
ಅಷ್ಟರೊಳಗ ನಿನ್ನ ಗೆಳೆಯಾ ಸುದ್ದಿ ಕೇಳಿ ಓಡಿ ಬಂದ
ಕಲ್ಲ ತಗಸೀದ ಡುಬ್ಬದ ಮ್ಯಾಲಿಂದ ಆಗಿಂದಾಗ
ಸಿಕ್ಕಂಗ ಬೇದೋ ಹಾರುವಾನ ಆಗ ಚಾವಡ್ಯಾಗ
ಸುದ್ದಿ ಕೇಳಿ ರಾಯಾ ನಿನ್ನ ಮುರದ ಮುದ್ದಿ ಮಾಡತಾನ
ಹತ್ಯಾರ ತಗೊಂಡ ಹರಿಯಾನ ಹರಿ ಮರಿ ಹರದಂಗ
ದುರಗಿ ಮುಂದ ಬ್ಯಾಟಿ ಕಡದ ಒಗದಂಗ ಒಗಿಯತಾನ
ಹಿಂಗ ಹೇಳಿದಪ್ಪ ಚನಬಸಣ್ಣ ನಿನ್ನೆ ಸಂಜಿದಾಗ|| ೨೨ ||
ಏ ಇಷ್ಟ ಮಾತಕೇಳಿ ರಾಯಾಗ ಆ ಕ್ಷಣದಾಗ
ಬಾಣಾ ಹೊಡದಂಗಾತ ಅವನ ಎದಿಯಾಗ
ಚಕ್ರಕ್ವಾಟಿ ಲಡಾಯಿಯೊಳಗ ರಾಯಣ್ಣ
ಅಭಿಮನ್ಯು ಆಗಿ ಜಿಗಿದಾನ ಸಂಗೊಳ್ಳಿಗೆ
ಗುಂಡ ಬಡದ ಹುಲಿ ಸಿಟ್ಟಿಗೇರಿ ಹರಿದಂಗ
ಕಾಲಮೆಟ್ಟಿ ಸೀಳತೀನ ಹಾರುವಾನೀಗ
ಗದ್ನಿ ಹೊಡಿಯತಾನೋ ಹೆಬ್ಬುಲಿಯಂಗ|| ೨೩ ||
ಕುಲಕರ್ಣಿ ಬಾಳಪ್ಪ ಕುಂತಿದ್ದಪ್ಪ ಚಾವಡ್ಯಾಗ
ಸುದ್ದಿಕೇಳಿ ಓಡಿಹೋದ ಮನಿ ಒಳಗ
ನಡಗ ಹತ್ತಿ ನಿಂದರ ಒಲ್ಲ ನಡಮನಿಯಾಗ
ಉಚ್ಚಿ ರಾಡಿ ಮಾಡಿಕೊಂಡ ಕಚ್ಚಿ ಒಳಗ
ಹದಿನಾರೆತ್ತಿನ ಇದರ ಗ್ವಾದ್ನಿ ಒಳಗ ಡಬ್ಬಬಿದ್ದಾ
ಮ್ಯಾಗ ದಂಟ ಒಟ್ಟಿಸಿ ಕೊಂಡ ಯಾರಿಗಿ ಕಾಣದಂಗ
ಅವನ ಹೆಣತಿ ಬಂದ ಕುಂತಾಳ ಬಾಗಿಲದಾಗ|| ೨೪ ||
ಏ ಬರಾಟ ಬಂದೋ ಊರಾರ
ನೋಡತಾನ ಚಾವಡ್ಯಾಗ
ಕುಲಕರ್ಣಿ ಮನಿಗಿ ಹೋಗಿದಾನ ಆಗಿಂದಾಗ
ಹಾರುವಾನ ಹೆಣತಿ ಕುಂತಿದ್ದಳೋ ಆಗ
ಮನದಾಗ ಮಿಡುಕೂತ ಆಗ ಬಾಗಿಲದಾಗ
ನೀ ನಮ್ಮ ತಾಯಿ ಸರಿ ಹಾರುವಾ ಎಲ್ಲಿ ಹೋಗ್ಯಾನ್ರಿ
ಅಂಜಬ್ಯಾಡ ತಾಯಿ ಹೇಳಬೇಕ ನನಗ|| ೨೫ ||
ಹಡದಪ್ಪ ರಾಯಪ್ಪ ಹಕೀಕತ ಹೇಳಪ್ಪ
ಶಾಂತನಾಗಿ ಕುಂಡರಪ್ಪ ಮಂಚದ ಮ್ಯಾಲ
ಕುಡಿಲಾಕ ಕೊಡತೀನ ಸಕ್ಕರಿ ಹಾಲ
ಬೀಳತೀನಿಯಪ್ಪ ನಿನ್ನ ಪಾದದಮ್ಯಾಲ
ಗ್ವಾದನಿಮ್ಯಾಗ ನಿಂತನೋಡ್ಯಾನಂಟದಮ್ಯಾಲ
ಹೊಂಟ ಹೋಗಿದಾನ ಬಾಳ್ಯಾ ಮನಿಯಾಗಿಲ್ಲ
ಏನ ಕೈಗೆ ಸಿಗವಲ್ಲ ಬಾಳ್ಯಾ ನನಗೀಗ|| ೨೬ ||
ಏ ಸಿಕಾರಿ ಸಿಗದ ಸಿಂಹನ್ಹಂಗ
ಹೌಸ ಇಲ್ಲೋ ಮನದಾಗ
ಮನಿಗೆ ಬಂದ ಬಿದ್ದಾನ ತಾಯಿ ಪಾದಮ್ಯಾಲ
ಹಡದವ್ವ ಹಾರುವ ಕತಿ ಹೇಳ ನನಗೀಗ
ಸಮಾಧಾನ ಆಗವಲ್ಲದವ್ವ ತಾಯಿ ನನಗ
ನನ್ನ ಕೀರ್ತಿ ಜಗದಾಗ ಹಬ್ಬೇತೀಗ
ಇಂಗ್ರೇಜರನ ಓಡಸ್ತೀನಿ ಮತ್ತ ಬರದಂಗ|| ೨೭ ||
ಜಗಳ ಹುಟ್ಟುದು ಬ್ಯಾಡಂತ
ಮುಚ್ಚಿ ಇಟಗೊಂಡಳ ಕೆಂಚವ್ವ
ಬಚ್ಚಿ ಹೇಳವಳ್ಳ ಆಗ ರಾಯಪ್ಪಗ
ಬೆಂಕಿ ಹಚ್ಚಿ ಮಂದಿ ನಿನಗ ಸುಳ್ಳ
ಮೋಜನೋಡಿ ನಗಬೇಕಂತಾರ
ಜಾಜಿ ಮಲ್ಲಿಗಿ ವನಾ ಹಾಳ ಮಾಡಿದಂಗ
ಮಾಡತಾರ ಮಂದಿ ಮಾನು ಲೋಕದೊಳಗ|| ೨೮ ||
ಏ ಸಿಟ್ಟಿಗೇರಿದ ರಾಯಪ್ಪಗ
ಎಷ್ಟೇ ಹೇಳಿದರ ಕೇಳವಲ್ಲ
ನಾಟ ಒಲ್ಲದ ತಾಯಿ ಅವಂಗ
ಹಾಲ ಉಕ್ಕಿದಂಗ ಉಕ್ಕತೈತಿ ಮ್ಯಾಗಮ್ಯಾಗ
ಹತ್ಯಾರ ತಕ್ಕೊಂಡ ಕೈಯಾಗ ತಾಯಿಗೆಂತಾನ
ಹೇಳತಾನ ತಾಯಿಗೆ ನಾಡಿನ ಗೋಳವನಾ
ಹಾವಳಿ ಮಾಡಿ ಬರತೀನಿ ಸರಕಾರ ಅಂಜುವಂಗ|| ೨೯ ||
ಹದನಾರ ಎತಗೋಳ ಇದರಗ್ವಾದಿನಿ
ಕಟ್ಟಿದ್ದು ಅಪ್ಪ ಹಗ್ಗ ಹಚ್ಚಿ ಬಿಟ್ಟಾನಾಗ
ರಾವ ತುಂಬಿದ ಇದರ ಯಾರು ಇಲ್ಲದಂಗ
ರಾಮದುರ್ಗ ಪ್ಯಾಟ್ಯಾಗ ಕೈಗೆ ಬಂದ್ಹಾಂಗ
ಎಲ್ಲ ಎತಗೋಳ ಮಾರತಾನ ಬಲ್ಹಾಂಗ
ದೇಶದ ಚಿಂತಿಯೊಳಗ ಮರತಾನ ಮನಿಮಾರಾಗ
ರೂಪಾಯಿ ಎಣಸಿಕೊಂಡ ಹಾಕೊಂಡ ಹಮ್ಮಿನದಾಗ|| ೩೦ ||
ಏ ಒತ್ತರಮಾಡಿ ಬಂದಾನಪ್ಪಾ
ಹೊತ್ತ ಮುನುಗುದರೊಳಗ
ಹುಲಿ ಬಂದ ಹೊಕ್ಕಂಗಾತ ಸಂಗೊಳ್ಯಾಗ
ಏನ ಬಂಟ ಹುಟ್ಟಿದಪ್ಪಾ ನಮ್ಮೂರಾಗ
ಸಣ್ಣ ದೊಡ್ಡವರು ಗಂಡಸರು ಹೆಂಗಸರಾಗ
ಮಾತಾಡತಾರ ಕುಂತಗೊಂಡ ಕಟ್ಟಿಮ್ಯಾಗ
ರಾಯಣ್ಣ ಅದಾನ ಗಟ್ಟಿಕ ಅವರ ಅಜ್ಜನಂಗ|| ೩೧ ||
ಅತ್ತಿಮನಿ ಸೊಸ್ತ್ಯಾರ ಜಿತ್ತಲಿಂದ ಮಾತಾಡತಾರ
ಹತ್ತ ಹಡಿಯುದಕಿಂತ ಒಂದ ಮುತ್ತಹಡಿಯಾನ
ನಮ್ಮ ಊರ ಸಂಗೊಳ್ಳಿ ರಾಯಣ್ಣನಂತವನ
ಸಿಸ್ತದಿಂದ ಉಲ್ಲಾ ಮಾಡಿ ಪದಾಮಾಡ್ಯಾರ ಚಂದ
ಹಾಡತಾರ ಗಂಡು ಹೆಣ್ಣು ರಾಯಣ್ಣನಮ್ಯಾಗ
ರಾಯಣ್ಣ ದಂಡಕೂಡಿಸುತ ನಡದಾನ ನಾಡಿನಮ್ಯಾಗ
ಪಿರಂಗ್ಯಾರನ ಹೊಡೆಯತಾನ ಮುಂದಿನ ಸಂದಿನ್ಯಾಗ|| ೩೨ ||
ಏ ಕಲ್ಪಿಕದೊಳಗ ಚಿಕ್ಕನಂದಿ
ಕವಿತಾದೊಳಗ ಬಹಳಮಂದಿ
ಪದಗೋಳ ಮಾಡತಾರ ಚಂದಚಂದಾ
ಶ್ಯಾನಾರ ಕೇಳಿರೆಪ್ಪ ಪದಾ ಪ್ರೀತಿಯಿಂದಾ
ಇಲ್ಲಿಗೆ ಆತರೆಪ್ಪ ಒಂದ ಸಂದಾ
ಸಂಗೊಳ್ಳಿ ರಾಯಣ್ಣ ಇಂಗ್ರೇಜರನ ವಧಾಮಾಡಿದ
ಕಿತ್ತೂರ ನಾಡಿಗೆ ಕೀರ್ತಿ ತರುದು ಉಳಿತ ಮುಂದಾ|| ೩೩ ||
ರಚನೆ : ಚಿಕ್ಕನಂದಿ
ಕೃತಿ : 
ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ

ಗುರುವಾರ, ಜನವರಿ 29, 2015

ಆತ್ಮಸಾಕ್ಷಿಯ ದೀಪ ಆರದಿರಲಿ......



     -ಡಾ.ಎಂ.ಡಿ.ಒಕ್ಕುಂದ

          ಗೊಮ್ಮಟನ ನಾಡಿನಲ್ಲಿ ಕನ್ನಡ ನಾಡು ನುಡಿಯ ಮಹಾಜಾತ್ರೆ ಇನ್ನೇನು ಆರಂಭವಾಗುತ್ತದೆ. ಆದರೆ ಕನ್ನಡ ಬದುಕಿನ ಸಾಕ್ಷಿಪ್ರಜ್ಞೆ ದೇವನೂರು ಮಹದೇವ ಅವರ ಆಶಯಕ್ಕೆ ಸಮ್ಮೇಳನ ವೇದಿಕೆಯಾದೀತೇ ಎಂಬ ಪ್ರಶ್ನೆ ಹಾಗೂ ಆಗಲಿಕ್ಕಿಲ್ಲ ಎಂಬ ಆತಂಕ ಕಾಡುತ್ತಿವೆ.

ಹಾಸನ ಜಿಲ್ಲಾ ಸಾಹಿತ್ಯ ಪರಿಷತ್ತಿನ ನಿಯೋಗವು ಶ್ರವಣಬೆಳಗೊಳದಲ್ಲಿ ನಡೆಯಲಿರುವ ೮೧ನೇ ಅಖಿಲಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವ ಪ್ರಸ್ತಾಪವನ್ನು ಮುಂದಿಟ್ಟಾಗ ೧೦ನೆಯ ತರಗತಿಯವರೆಗೆ ಮಾತೃಭಾಷಾ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುವವರೆಗೆ ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲಿ ಭಾಗವಹಿಸದಿರುವ ತಮ್ಮ ಮೂರು ದಶಕಗಳ ನಿಲುವಿಗೆ ಬದ್ಧತೆಯನ್ನು ಮುಂದುವರಿಸಿ ಆ ಗೌರವದ ಸ್ಥಾನವನ್ನು ದೇವನೂರು ಮಹದೇವ ನಿರಾಕರಿಸಿದರು. ಈ ಹಿಂದೆ ಎರಡು ಬಾರಿ ಇದೇ ಕಾರಣಕ್ಕೆ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನೂ,  ನೃಪತುಂಗ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನೂ ತಿರಸ್ಕರಿಸಿದ್ದರು. ಕರ್ನಾಟಕದ ಪ್ರಮುಖ ಸಾಮಾಜಿಕ ಸಾಂಸ್ಕೃತಿಕ ಚಳುವಳಿಗಳ ನೇತಾರರು ಹಾಗೂ ಅವುಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದ ನಾವು- ತಾವುಗಳೆಲ್ಲ ಕಳೆದ ಎರಡು ದಶಕಗಳಲ್ಲಿ ನಮ್ಮ ನಿಲುವುಗಳಲ್ಲಿ ಮಾಡಿಕೊಂಡ ಬದಲಾವಣೆಗಳು ಹಾಗೂ ರಾಜೀ ಮನೋಭಾವವನ್ನು ನೆನೆಸಿಕೊಂಡರೆ, ಹಾಗೂ ಜೀವನದುದ್ದಕ್ಕೂ ಸಾಹಿತ್ಯ ಪರಿಷತ್ತು, ಅಕಾಡೆಮಿಗಳ ಅಧ್ಯಕ್ಷರಾಗುವ, ಸದಸ್ಯರಾಗುವ, ಪ್ರಶಸ್ತಿಗಳನ್ನು ಸ್ವೀಕರಿಸುವ ಮನೋಭಾವವನ್ನು ತೀವ್ರವಾಗಿ ಖಂಡಿಸಿ ಕೆಲವರಿಂದ ರಾಜೀನಾಮೆ ಕೊಡಿಸಿ, ಪ್ರಶಸ್ತಿಗಳನ್ನು ಹಿಂದಿರುಗಿಸಿಸಿ ಸಂಭ್ರಮಿಸಿದ ನನ್ನ ತಲೆಮಾರಿನ ನಾವು ಕೆಲವರು ಒಂದು ಸಣ್ಣ ಸಾಂಸ್ಕೃತಿಕ ಅಧಿಕಾರ ಕೇಂದ್ರ, ಒಂದು ಪುಟ್ಟ ಪ್ರಶಸ್ತಿ ಬಂದಾಗ ಸಂಭ್ರಮಿಸುತ್ತಿರುವ ವಾಸ್ತವವನ್ನು ನೆನಪಿಸಿಕೊಂಡರೆ ಮಹಾದೇವ ಅವರ ಬದ್ಧತೆ ಮತ್ತು ದೃಢತೆಗಳ ಚಾರಿತ್ರಿಕ ಮಹತ್ವ ಅರಿವಿಗೆ ಬರುತ್ತದೆ.

ರಾಜಕೀಯ ಅಧಿಕಾರಗಳು, ಸಾಂಸ್ಕೃತಿಕ ಅಧಿಕಾರ ಕೇಂದ್ರಗಳು, ಗೌರವ- ಪ್ರಶಸ್ತಿ- ಸನ್ಮಾನಗಳು ಪ್ರತಿಭಟನಾ ಮನೋಭಾವವನ್ನು ನಿಯಂತ್ರಿಸುವ ಸಲಕರಣೆಗಳಾಗಿ ಬಳಕೆಯಾಗುತ್ತ ಸಾಂಸ್ಕೃತಿಕ ವಲಯದಲ್ಲಿ ಮೌನವನ್ನು ಉತ್ಪಾದಿಸತೊಡಗಿವೆ. ಹೀಗಾಗಿ ಪ್ರಭುತ್ವದ ನಿಲುವುಗಳಿಗೆ ಬಹುತೇಕರು ಮೌನವಾಗಿದ್ದೇವೆ. ಇಲ್ಲವೇ ಒಂದು ಸೀಮಿತ ಚೌಕಟ್ಟಿನಲ್ಲಿ ಭಿನ್ನಾಭಿಪ್ರಾಯಗಳನ್ನು ದಾಖಲಿಸಿದಂತೆ ಮಾಡಿ ಮರೆತುಬಿಡುವ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುತ್ತಿದ್ದೇವೆ.  ಚಳುವಳಿಗಳನ್ನು ಹುಟ್ಟುಹಾಕುವ ನೈತಿಕ ಶಕ್ತಿಯನ್ನೇ ಕಳೆದುಕೊಂಡು ದುರ್ಬಲರಾಗುತ್ತಿದ್ದೇವೆ. ಮಾತೃಭಾಷಾ ಮಾಧ್ಯಮದ ಶಿಕ್ಷಣ ನೀತಿಯನ್ನು ಕುರಿತಂತೆ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಸರ್ವೋಚ್ಛ ನ್ಯಾಯಾಲಯದ ತೀರ್ಮಾನವು ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ಬಂಡವಾಳಶಾಹಿ ಪ್ರಭುತ್ವಗಳ ಹಿತಾಸಕ್ತಿಯ ಪರವಾಗಿ ಹೊರಬಿದ್ದಾಗ ದಿಗ್ಭ್ರಾಂತರಾದೆವು. ಅಥವಾ ಹಾಗೆ ತೋರಿಸಿಕೊಂಡೆವು. ಜನಾಂದೋಲನವೊಂದು ಏಕಾಏಕಿಯಾಗಿ ಆರಂಭವಾಗಿ ಬಿಡಬೇಕಾದ ಚಾರಿತ್ರಿಕ ಸಂದರ್ಭವದು. ಕರ್ನಾಟಕದ ಶೂದ್ರ, ದಲಿತ, ರೈತ, ಬಂಡಾಯ, ಮಹಿಳಾ, ಪರಸರ ಇತ್ಯಾದಿ ಚಳುವಳಿಗಳು ಒಂದೊಂದು ಸಣ್ಣಪುಟ್ಟ ಕಾರಣಗಳನ್ನು ನೆಪಮಾಡಿಕೊಂಡು ಹೊರಹೊಮ್ಮಿದವು. ಯಾಕೆಂದರೆ ವ್ಯವಸ್ಥೆ ಹಾಗೂ ಮನಸ್ಥಿತಿಗಳಲ್ಲಿ ಒಳಗೇ ಚಳುವಳಿಯ ಕಾವು ಸಿದ್ಧವಾಗಿತ್ತು. ಆದರೆ ಇಲ್ಲಿ, ಚಳುವಳಿ ಹುಟ್ಟಲು ಬಲಾಢ್ಯ ಕಾರಣವಿರುವಾಗಲೂ, ಜಾಗತೀಕರಣದ ಒಪ್ಪಂದದ ನಂತರ ಹಳೆಯ ಹೊಸ ಶೋಷಣೆಗಳು ತೀವ್ರವಾಗಿರುವಾಗಲೂ, ಪ್ರಾದೇಶಿಕ ಭಾಷೆ, ಸಂಸ್ಕೃತಿ ಹಾಗೂ ಬದುಕುಗಳನ್ನು ಸರ್ವನಾಶಗೊಳಿಸುವಷ್ಟು ಆಕ್ರಮಣ ತೀವ್ರವಾಗಿರುವಾಗಲೂ ನಾವೆಲ್ಲ ನೋಯುತ್ತಿದ್ದೇವೆಯೇ ಹೊರತು ಪುಟಿದೇಳುತ್ತಿಲ್ಲ. ಆದರೆ ದೇವನೂರು ಮಹದೇವ ಪುಟಿದೇಳುವ ಚಾರಿತ್ರಿಕ ಅವಕಾಶವೊಂದನ್ನು ಕಲ್ಪಿಸಿಕೊಟ್ಟಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿಯವರು ಮನವೊಲಿಸಲು ಹೋದಾಗ ತಮ್ಮ ನಿಲುವನ್ನು ಬದಲಾಯಿಸದೇ ’ಹಾಲಂಬಿಯವರಿಗೆ ಒಂದು ಬಹಿರಂಗಪತ್ರ’ ಬರೆದರು. ಆ ಪತ್ರ ಕೇವಲ ಹಾಲಂಬಿಯವರಿಗಲ್ಲ- ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೇ ಬರೆದ ಬಹಿರಂಗ ಪತ್ರವಾಗಿತ್ತು. ಇಲ್ಲಿಯವರೆಗೆ ತಮ್ಮಷ್ಟಕ್ಕೆ ತಾವೇ ರಾಜಕೀಯ, ಸಾಂಸ್ಕೃತಿಕ ಅಧಿಕಾರ ಕೇಂದ್ರಗಳನ್ನು, ಪ್ರಶಸ್ತಿಗಳನ್ನು ತಿರಸ್ಕರಿಸಿ ಸಂಚಲನ ಸೃಷ್ಟಿಸಿ ಮೌನವಾಗುತ್ತಿದ್ದವರು ಈ ಬಾರಿ ಸಾಕಷ್ಟು ಹೆಜ್ಜೆ ಮುಂದೆ ಹೋಗಿ ಎಲ್ಲರೂ ಸೇರಿ ಜನಾಂದೋಲನವನ್ನು ಆರಂಭಿಸಬೇಕಾದ ಅಗತ್ಯವನ್ನು ಮಂಡಿಸಿದ್ದರು. ನಾಡು, ನುಡಿ, ಸಂಸ್ಕೃತಿ ಹಾಗೂ ಪ್ರಾದೇಶಿಕ ಬದುಕಿನ ನೆಲೆಗಳು ನಿರ್ನಾಮವಾಗುತ್ತಿರುವ ಇಂಥ ಸಂಕಟದ ಸಂದರ್ಭದಲ್ಲೂ ದೇವನೂರ ಅವರ ಪ್ರಸ್ತಾಪಕ್ಕೆ ತೀರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸತ್ತಂತಿಹರನು ಬಡಿದೆಚ್ಚರಿಸುವುದು, ಕಷ್ಟ ಎನ್ನುವುದು ಸಾಬೀತಾಯಿತು.
ಮಹದೇವ ತಮ್ಮ ಪತ್ರದಲ್ಲಿ ಮುಖ್ಯವಾಗಿ ಪ್ರಸ್ತಾಪಿಸಿದ ಸಂಗತಿಗಳೆಂದರೆ- ಮಾತೃಭಾಷಾ ಮಾಧ್ಯಮದ ಶಿಕ್ಷಣ ವ್ಯವಸ್ಥೆಯನ್ನು ಕುರಿತಾದ ಆಘಾತಕಾರಿ ಬೆಳವಣಿಗೆಗಳು ಕೇವಲ ಕನ್ನಡದ ಪ್ರಶ್ನೆಯಲ್ಲ. ನವಬಂಡವಾಳವಾದದ ಆಕ್ರಮಣಕ್ಕೆ ತುತ್ತಾದ ಈ ದೇಶದ ಹಾಗೂ ಬಡರಾಷ್ಟ್ರಗಳ ಪ್ರಾದೇಶಿಕ ಭಾಷೆ; ಸಂಸ್ಕೃತಿ ಬದುಕುಗಳ ಅಳಿವು ಉಳಿವಿನ ಪ್ರಶ್ನೆ. ಇದಕ್ಕಿರುವ ಏಕೈಕ ದಾರಿಯೆಂದರೆ ತಕ್ಷಣವೇ ದೇಶದ ಪಾರ್ಲಿಮೆಂಟಿನ ಮೇಲೆ ಒತ್ತಡ ಹೇರಬಲ್ಲ ಜನಾಂದೋಲನವನ್ನು ಕರ್ನಾಟಕದಿಂದ ಆರಂಭಿಸುವುದು. ಅದರ ನಾಯಕತ್ವವನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯಪರಿಷತ್ತು ವಹಿಸಿಕೊಂಡು ಮರುಹುಟ್ಟು ಪಡೆಯಬೇಕು. ಕರ್ನಾಟಕದಲ್ಲಿ ಚಳುವಳಿ ಹುಟ್ಟಲು ಪೂರಕವಾದ ರಾಜಕೀಯ ವಾತಾವರಣವೂ ಇದೆ.-  ದೇವನೂರರ ಜನಾಂದೋಲನದ ಕನಸಿಗೆ ಜೀವತುಂಬುವ ನೈತಿಕ ಜವಾಬ್ದಾರಿಯಿಂದ ನಾವೆಲ್ಲ ನುಣುಚಿಕೊಂಡೆವಲ್ಲವೇ?. ಕನಿಷ್ಟಪಕ್ಷ ಆ ಕುರಿತು ತಕರಾರುಗಳಿದ್ದರೆ  ದಾಖಲಿಸದಂತೆ  ಮೌನವಹಿಸಿದೆವು.

ಒಮ್ಮೆ ಹೀಗೆ ಊಹಿಸೋಣ- ಈಗಾಗಲೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿದ ಹಿರಿಯರು ದೇವನೂರ ಅವರನ್ನು ಬೆಂಬಲಿಸಿ ತಾವು ಬೀದಿಗಿಳಿಯುವುದಾಗಿ ಘೋಷಿಸಿದ್ದರೆ, ಮಹಾದೇವ ತಿರಸ್ಕರಿಸಿದ ೮೧ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಇದೇ ಕಾರಣ ನೀಡಿ ಈ ನಾಡಿನ ಯಾವ ಹಿರಿಯ ಸಾಹಿತಿಗಳೂ ಒಪ್ಪಿಕೊಳ್ಳದೇ ಹೋಗಿದ್ದರೆ, ಈ ಸಮ್ಮೇಳನದ ವಿಚಾರ ಸಂಕಿರಣಗಳು, ಕವಿಗೋಷ್ಠಿಗಳು, ಸನ್ಮಾನ ಗೋಷ್ಠಿಗಳಲ್ಲಿ ಭಾಗವಹಿಸಲು ಇದೇ ಕಾರಣಕ್ಕೆ ನಾವು ನೀವೆಲ್ಲ ನಿರಾಕರಿಸಿದ್ದರೆ, ಎಲ್ಲ ಅಕೆಡಮಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ರಾಜೀನಾಮೆ ನೀಡಿ ಈನಾಡಿನ ಸಾಹಿತಿ ಕಲಾವಿದರು ಮಾತೃ ಭಾಷಾಮಾಧ್ಯಮದ ಶಿಕ್ಷಣ ವ್ಯವಸ್ಥೆ ಹಾಗೂ ಸಮಾನ ಶಿಕ್ಷಣ ನೀತಿಗಳು ಜಾರಿಯಾಗುವವರೆಗೆ ಪ್ರಶಸ್ತಿಗಳನ್ನು ಸ್ವೀಕರಿಸಲು ನಿರಾಕರಿಸುವ ತೀರ್ಮಾನವನ್ನು ಪ್ರಕಟಿಸಿದ್ದರೆ, ಕನ್ನಡ ಚಿತ್ರರಂಗವನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಯತ್ನಿಸಿದ್ದರೆ...  ಆಂದೋಲನಕ್ಕೆ ಒಂದು ಸಣ್ಣ ಸಂಚಲನ ಸಿಗಬಹುದಾಗಿತ್ತಲ್ಲವೇ? ಈ ರೇ.. ಪ್ರಪಂಚ ಅತೀ ಆದರ್ಶವಾದಿಯಾಗಿ ತೋರಿದರೂ ಅಸಾಧ್ಯವಾದುದೇನಾಗಿರಲಿಲ್ಲ. ದೇವನೂರರ ತೀರ್ಮಾನ ಅಂಥದೊಂದು ಆತ್ಮಾವಲೋಕನಕ್ಕೆ ತೊಡಗಿಸಿತ್ತು. ನಾವೆಲ್ಲ ಮೌನ ವಹಿಸಿದೆವು. ಇದು ಮಹಾಮೌನ.
ಹಾಗೆ ನೋಡಿದರೆ ದೇವನೂರು ನಿಲುವಿಗೆ ತಕ್ಕಮಟ್ಟಿಗೆ ಘನತೆಯಿಂದ ಸ್ಪಂದಿಸಿದ್ದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು. ಪುಂಡಲೀಕ ಹಾಲಂಬಿಯವರು ಸಮ್ಮೇಳನವನ್ನು ಜನಾಂದೋಲನದ ಕಾರ‍್ಯಾಗಾರವಾಗಿ ರೂಪಿಸುವುದಾಗಿ ಘೋಷಿಸಿದರು. ನಿಯೋಜಿತ ಸರ್ವಾಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯನವರು ದೇವನೂರರ ಆಶಯಗಳು ಮೊದಲ ಆದ್ಯತೆಯಾಗಿ ಚರ್ಚಿಸಿ ಸಮ್ಮೇಳನದ ಮೂಲಕ ಜನಾಂದೋಲನಕ್ಕೆ ನಾಂದಿ ಹಾಡುವುದಾಗಿ ಹೇಳಿಕೊಂಡರು. ಈಗಾಗಲೇ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಯಾಗಿದೆ. ’ಸಂವಿಧಾನ-ರಾಜ್ಯಭಾಷಾನೀತಿ’, ’ಕನ್ನಡ-ಬದುಕು - ಚಳುವಳಿಗಳು’, ’ಸ್ವಾತಂತ್ರೋತ್ತರ ಕರ್ನಾಟಕ-ವರದಿಗಳ ಅನುಷ್ಠಾನ’ ಎಂಬ ಮೂರು ಪ್ರಮುಖ ಗೋಷ್ಠಿಗಳನ್ನು ರೂಪಿಸಲಾಗಿದೆ. ಮೇಲುನೋಟಕ್ಕೆ ದೇವನೂರರ ಆಶಯಗಳಿಗೆ ಆದ್ಯತೆ ಸಿಕ್ಕಂತೆ  ಭಾಸವಾಗುತ್ತದೆ. ಆದರೆ ಚಳುವಳಿಯನ್ನು ರೂಪಿಸುವ ಉದ್ದೇಶ ಇದ್ದಂತಿಲ್ಲ. ಹಾಗೇನಾದರೂ ಇದ್ದಿದ್ದರೆ ಸರ್ವೋಚ್ಛ ನ್ಯಾಯಾಲಯದ ತೀರ್ಪು-ಚಿಂತನೆಯ ಕೇಂದ್ರವಾಗುತ್ತಿತ್ತು. ಹಳ್ಳಿಯಿಂದ ದಿಲ್ಲಿಯವರೆಗೆ ದೀನ ದಲಿತರಿಂದ ಹಿಡಿದು ಪುರೋಹಿತ ಸಿರಿವಂತರವರೆಗೆ ಇಂಗ್ಲೀಷ್ ವ್ಯಾಮೋಹದಲ್ಲಿ ಮುಳಿಗೇಳುತ್ತಿರುವ ವಾಸ್ತವದ ಬಗ್ಗೆ, ಅದಕ್ಕೆ ಕಾರಣವಾಗಿರುವ ಸಾಮ್ರಾಜ್ಯಶಾಹಿ ರಾಜಕೀಯ ಹಿತಾಸಕ್ತಿಗಳ ಹಾಗೂ ಕಾರ್ಯಾಚರಣೆಗಳ ಬಗ್ಗೆ,  ಚಿಂತನ ಮಂಥನ ನಡೆಯತ್ತಿತ್ತು. ಮುಖ್ಯವಾಗಿ ಪಾರ್ಲಿಮೆಂಟಿನ ಮೇಲೆ ಒತ್ತಡ ಹೇರುವ ಜನಾಂದೋಲನವನ್ನು ರೂಪಿಸುವ ತಾತ್ವಿಕ ಹಾಗೂ ಸಂಘಟನಾತ್ಮಕ ಪ್ರಣಾಳಿಕೆಯನ್ನು ರೂಪಿಸುವುದು ಮೊದಲ ಆದ್ಯತೆಯಾಗುತ್ತಿತ್ತು. ಸಮ್ಮೇಳನವನ್ನು ಭವಿಷ್ಯದ ಆಂದೋಲನದ ನೀಲನಕ್ಷೆಯನ್ನು ತಯಾರಿಸುವ ಕಾರ‍್ಯಾಗಾರವಾಗಿ ರೂಪಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮುತುವರ್ಜಿವಹಿಸಿಲ್ಲ. ದೇವನೂರರ ಆಶಯ ಆದ್ಯತೆ ಪಡೆದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಹಾಗಾದರೆ ಮುಂದೇನು? 

   ಮಾತೃಭಾಷಾ ಮಾಧ್ಯಮ ಹಾಗೂ ಸಮಾನ ಶಿಕ್ಷಣ ನೀತಿ ಜಾರಿ ಬರುವವರೆಗೆ ಇನ್ನೊಂದು ಸಮ್ಮೇಳನ ನಡೆಸುವುದಿಲ್ಲವೆಂದೂ ಸಮ್ಮೇಳನ ಮುಗಿದ ಮಾರನೆಯ ದಿನದಿಂದಲೇ ಕರ್ನಾಟಕದ ಸಾಂಸ್ಕತಿಕ ಲೋಕದ ಒಡನಾಟದಲ್ಲಿ ರೂಪು ರೇಷೆಗಳನ್ನು ಸಿದ್ಧಪಡಿಸಿ ಜನಾಂದೋಲನವನ್ನು ಆರಂಭಿಸುವ ಏಕೈಕ ನಿರ್ಣಯವನ್ನು ಪರಿಷತ್ತು ತೆಗೆದುಕೊಳ್ಳಬಹುದೇ? ಹಾಗೆ ಪರಿಷತ್ತು ತೀರ್ಮಾನಿಸದಿದ್ದರೆ ಕರ್ನಾಟಕದ ಸಾಂಸ್ಕೃತಿಕ ಲೋಕ ಒಟ್ಟಾಗಿ ಪರಿಷತ್ತಿನ ಕಣ್ಣೊರೆಸುವ ತಂತ್ರವನ್ನು ಧಿಕ್ಕರಿಸಿ ಜನಾಂದೋಲನಕ್ಕೆ ಚಾಲನೆ ನೀಡೀತೇ? ಅಥವಾ ದೇವನೂರು ಮಹದೇವ ಬೆಳಗಿಸಿದ ಆತ್ಮ ಸಾಕ್ಷಿಯ ದೀಪ ಆರಿ ಹೋದೀತೇ?
                                       

ಬುಧವಾರ, ಜನವರಿ 28, 2015

ತೊಗಲುಗೊಂಬೆಯಾಟ : ಪರಂಪರೆ ಮತ್ತು ಆಧುನಿಕತೆ

-ಡಾ. ಎಸ್.ಎಂ. ಮುತ್ತಯ್ಯ

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ವತಿಯಿಂದ ಚಿತ್ರದುರ್ಗ ನಗರದಲ್ಲಿ ಇಂದು ಆಯೋಜನೆಗೊಂಡಿರುವ ಯಕ್ಷಗಾನ ಬಯಲಾಟ ರಂಗಸಂಭ್ರಮ ಎಂಬ ಈ ವಿಶಿಷ್ಟ ಕಾರ್ಯಕ್ರಮದ ಮೊದಲ ಗೋಷ್ಟಿಯ ಅಧ್ಯಕ್ಷರಾದ ಪ್ರೊ. ಎಚ್.ಲಿಂಗಪ್ಪನವರೆ, ಗೋಷ್ಟಿಯಲ್ಲಿ ಉಪಸ್ಥಿತರಿರುವ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರು ಹಿರಿಯರೂ ಆಗಿರುವ ಪಿ. ತಿಪ್ಪೇಸ್ವಾಮಿಯವರೇ, ಚಿತ್ರದುರ್ಗ ಶಿಕ್ಷಕರ ತರಬೇತಿ ಕೇಂದ್ರದ ಸಹ ನಿದೇರ್ಶಕರಾದ ಎಸ್.ಎನ್.ಕುಮಾರ್ ಅವರೆ, ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿರುವ ಎಲ್ಲಾ ಆಹ್ವಾನಿತ ಗಣ್ಯರೇ, ಕಲಾಸಕ್ತ ಬಂಧುಗಳೆ, ಮಾದ್ಯಮದ ಮಿತ್ರರೆ ನಿಮಗೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಷಯಗಳು.
ಬಂಧುಗಳೆ ನಮ್ಮ ಚಿತ್ರದುರ್ಗ ಇತಿಹಾಸ ಹಾಗೂ ಸಂಸ್ಕೃತಿಯ ವಿಷಯದಲ್ಲಿ ಶ್ರೀಮಂತ ಪರೆಂಪರೆಯನ್ನು ಹೊಂದಿರುವ ಪ್ರದೇಶವಾಗಿದೆ. ಇಂಥ ಮಹತ್ವದ ನೆಲದಲ್ಲಿ ನಾಡಿನ ವಿಭಿನ್ನ ಜನಪದ ಕಲೆಗಳ ಬಗೆಗಿನ ಚರ್ಚೆ ಹಾಗೂ ಪ್ರರ್ಶನಗಳನ್ನು ಏರ್ಪಡಿಸುವುದರ ಮೂಲಕ ಈ ಭಾಗದ ಜನರಿಗೆ ಸಮಾಜಿಕ ಹಾಗೂ ಕಲಾ ಜಾಗೃತಿಯನ್ನು ಜೊತೆಗೆ ಮನೋರಂಜನೆಯನ್ನು ನೀಡಬಹುದಾದ ಕಾರ್ಯಕ್ರಮವನ್ನು ಏರ್ಪಡಿಸಿರುವುದಕ್ಕೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ನಾಡೋಜ ಶ್ರೀ ಬೆಳಗಲ್ಲು ವೀರಣ್ಣ, ಹಾಗೂ ಅವರ ಸದಸ್ಯರೆಲ್ಲರಿಗೂ ಚಿತ್ರದುರ್ಗ ಪ್ರದೇಶದ ಎಲ್ಲಾ ಜನರ ಪರವಾಗಿ ಪ್ರೀತಿಪೂರ್ವಕ ಅಭಿನಂದನೆಗಳು.
ಸರ್ಕಾರ ಅಥವಾ ಸಂಘ ಸಂಸ್ಥೆಗಳ ವತಿಯಿಂದ ನಡೆಯುವ ಇಂಥ ಕಾರ್ಯಕ್ರಮಗಳಲ್ಲಿ ಕಲೆಗಳ ಬಗೆಗಿನ ಕೇವಲ ಚರ್ಚೆಯೋ ಅಥವಾ ಬರೀ ಪ್ರದರ್ಶನವೂ ನಡೆಸುವುದುಂಟು. ಆದರೆ ಈ ಕಾರ್ಯಕ್ರಮದಲ್ಲಿ ಕಲೆಯ ಬಗ್ಗೆ ಮಾಹಿತಿಪೂರ್ಣ ಚರ್ಚೆ ಹಾಗು ಕಲೆಯ ಪ್ರದರ್ಶನ ಒಟ್ಟೊಟ್ಟಿಗೆ ನಡೆಯುತ್ತಿರುವುದು ವಿಶೇಷ.  ಇದರ ಭಾಗವಾಗಿ ಈ ದಿನ ಮಧ್ಯಾಹ್ನ ೨ ಗಂಟೆಗೆ ತುಮಕೂರು ಜಿಲ್ಲೆಯ ಪುಟ್ಟ ಶಾಮಯ್ಯ ಅವರ ತಂಡದ ವತಿಯಿಂದ ತೊಗಲುಗೊಂಬೆಯಾಟ ನಡೆಯಲಿದೆ. ಅದಕ್ಕೂ ಮೊದಲು ಈಗ ತೊಗಲುಗೊಂಬೆಯಾಟ ಕಲೆಯ ಬಗ್ಗೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಬಹುದಾಗಿದೆ.
ತೊಗಲುಗೊಂಬೆಯಾಟದ ಸ್ವರೂಪ
ಹೆಸರೇ ಸೂಚಿಸುವಂತೆ ತೊಗಲಿನಿಂದ ಗೊಂಬೆಗಳನ್ನು ತಯಾರಿಸಿ ಅವುಗಳನ್ನು ವ್ಯವಸ್ಥಿತವಾಗಿ ಜೊಡಿಸಿ ರಂಗ ವೇದಿಕೆಯ ಮೇಲೆ ತಂದು ಅವುಗಳ ಮೂಲಕವೇ ಕಥೆಗಳನ್ನು ಪ್ರದರ್ಶಿಸಿ ತೋರಿಸುತ್ತಾರೆ. ಪಾತ್ರಗಳ ಲಕ್ಷಣ ಹಾಗೂ ಔಚಿತ್ಯಕ್ಕೆ ತಕ್ಕಂತೆ ತೊಗಲನ್ನು ಕತ್ತರಿಸಿ ಯಾವ ಪಾತ್ರಗಳಿಗೆ ಯಾವ ಬಣ್ಣ ಹಾಕಬೇಕು ಎಂಬುದನ್ನು ನೋಡಿಕೊಂಡು ಬಣ್ಣ ಹಾಕುತ್ತಾರೆ. ಬಿದಿರಿನ ಕಡ್ಡಿಯನ್ನು ಪೆನ್ನಿನ ರೀತಿಯಲ್ಲಿ ಬಳಸಿ ಚಿತ್ರಗಳ ರೂಪ ರಚಿಸುತ್ತಾರೆ. ವಿವಿಧ ರೀತಿಯ ಸಣ್ಣ ಉಳಿಗಳನ್ನು ಬಳಸಿ ಚಿತ್ರಗಳಲ್ಲಿ ಬೇಕಾದ ಕಡೆ ರಂಧ್ರ ಮಾಡಿ ಬೆಳಕು ತೂರಿ ಬರುವಂತೆ ಮಾಡುತ್ತಾರೆ. ಗೊಂಬೆಗಳು ಚಲಿಸುವಂತೆ ಅನುಕೂಲವಾಗಲು ಕೈ ಕಾಲು ಕತ್ತುಗಳಿಗೆ ಕೀಲುಗಳಿರುತ್ತವೆ. ಕೈಚಳಕದಿಂದ ಆಡಿಸಲು ಹಿಂದಕ್ಕೆ ಬಿದಿರಿನ ಕಡ್ಡಿಯನ್ನು ಕಟ್ಟಿರುತ್ತಾರೆ.  ಆ ಕಡ್ಡಿಗಳನ್ನು ಬೆರಳುಗಳಿಗೆ ಸಿಕ್ಕಿಸಿಕೊಂಡು ಚಮತ್ಕಾರಯುತವಾಗಿ ಕುಣಿಸುತ್ತಾರೆ. ಪರದೆಯ ಹಿಂದೆ ಕುಣಿಯುವ ಈ ಬಣ್ಣದ ಗೊಂಬೆ ಬಿಳಿ ತೆರೆಯ ಮೇಲೆ ಪಡಿ ಮೂಡುವಂತೆ ತೆರೆಯ ಹಿಂಭಾಗದಲ್ಲಿ ವಿದ್ಯುಚ್ಛಕ್ತಿ ದೀಪ ಬಳಸಿ ಮಂದವಾದ ಬೆಳಕು ನೀಡುವ ವ್ಯವಸ್ಥೆ ಮಾಡಿರುತ್ತಾರೆ. ಗೊಂಬೆಗಳು ಸುಮಾರು ಎರಡು ಮೂರು ಅಡಿ ಎತ್ತರ ಇರುತ್ತವೆ. ಕೆಲವೆಡೆ ಮಾನವಾಕೃತಿಯ ಅಳತೆಯ ಗೊಂಬೆಗಳು ಇರುವುದೂ ಉಂಟು. ಒಬ್ಬ ಅನುಭವೀ ಕಲಾವಿದ ಗೊಂಬೆಗಳನ್ನು ಪ್ರದರ್ಶಿಸಿದೆ ಉಳಿದ ಕಲಾವಿದರು ಪರದೆಯ ಹಿಂದೆ ಕುಳಿತು ಆಟಕ್ಕೆ ಅಗತ್ಯವಾದ ಧ್ವನಿ, ಸಂಗೀತ ಮತ್ತಿತರ ಸಹಾಯವನ್ನು ನೀಡುತ್ತಾರೆ. ಪ್ರದರ್ಶನಕ್ಕೆ ಬಿಳಿ ಪರದೆ, ಹಾರ್ಮೋನಿಯಂ, ಮೃದಂಗ, ತಾಳ, ಗೆಜ್ಜೆಗಳು ಅವಶ್ಯಕ. ಈ ಕಲಾವಿದರ ತಂಡ ಹಲವಾರು ಸಂದರ್ಭಗಳಲ್ಲಿ ಒಂದೇ ಕುಟುಂಬದ ಸದಸ್ಯರೇ ಆಗಿರುತ್ತಾರೆ ಎಂಬುದು ಗಮನಾರ್ಹ. ತೆರೆಯ ಹಿಂದೆ ಕುಳಿತ ಕಲಾವಿದರು ಯಾರೂ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ತೆರೆಯ ಮೇಲೆ ಪಡಿನೆಳಲಾಗುವ ಗೊಂಬೆಗಳನ್ನು ಬಿಟ್ಟು ಉಳಿದ ಗೊಂಬೆಗಳು ಯಾರಿಗೂ ಕಾಣುವುದಿಲ್ಲ. ಈ ಕಲೆಯ ಪ್ರದರ್ಶನಕ್ಕೆ ವಿಶಿಷ್ಟ ರಂಗಸಜ್ಜಿಕೆ ಬೇಕು. ಎತ್ತರದ ವೇದಿಕೆ ಮೇಲೆ ಎತ್ತರದ ಮಂಟಪ ರಚಿಸಿ, ಉದ್ದದ ಬಿಳಿ ಬಟ್ಟೆಯನ್ನು ಮುಂಭಾಗಕ್ಕೆ ಕಟ್ಟಿರುತ್ತಾರೆ. ಮಂಟಪದ ಉಳಿದ ಮೂರು ಬದಿಗಳನ್ನು ಚಾಪೆ ಅಥವಾ ಕಂಬಳಿಗಳಿಂದ ಮುಚ್ಚುತ್ತಾರೆ. ಈ ಪ್ರದರ್ಶನಗಳು ರಾತ್ರಿ ಇಡೀ ನಡೆಯುವ ಕಾಲವೊಂದಿತ್ತು ಈಗ ಎರಡು ಮೂರು ಗಂಟೆಗಳ ಅವಧಿಗೆ ಸೀಮಿತಗೊಂಡಿದೆ. 
ಉದ್ದೇಶಗಳು ಮತ್ತು ಸಂದರ್ಭಗಳು
ತೊಗಲುಗೊಂಬೆಯಾಟ ಮೊಟ್ಟ ಮೊದಲಿಗೆ ಆರಂಭಗೊಂಡಿದ್ದು ಭಕ್ತಿ ಮತ್ತು ಭಾವನೆಗಳ ಹಿನ್ನೆಲೆಯಲ್ಲಿ. ಹಾಗಾಗಿಯೇ ಈ ಆಟದಲ್ಲಿ ಪೌರಾಣಿಕ ಕಥೆಗಳು ಪ್ರಧಾನವಾಗಿದ್ದು ಅವುಗಳ ಮೂಲಕ ಭಕ್ತಿ ಪ್ರಚಾರದ ಉದ್ದೇಶವಿತ್ತು. ಈ ಕಲೆಯನ್ನು ಪ್ರದರ್ಶಿಸುವವರನ್ನು ದೈವ ಸ್ವರೂಪಿ ಎಂಬುದಾಗಿ ಭಾವಿಸಲಾಗಿತ್ತು. ಗೊಂಬೆ ಆಟದವರು ಊರು ಪ್ರವೇಶಿಸಿದರೆ ಅವರನ್ನು ಕೇವಲ ಹೊಟ್ಟೆ ಹೊರೆಯಲು ಬಂದ ಭಿಕ್ಷುಕರಂತೆ ಕಾಣುತ್ತಿರಲಿಲ್ಲ. ಗೊಂಬೆಯಾಟದವರು ಊರಿಗೆ ಪ್ರವೇಶಿಸಿದರೆ ಅವರು ಒಲೆ ಹಚ್ಚುತ್ತಿರಲಿಲ್ಲ. ಜಾತಿ ಶ್ರೇಣೀಕರಣ ಇವರಿಗೆ ಅಡ್ಡಿ ಉಂಟುಮಾಡುತ್ತಿರಲಿಲ್ಲ. ಕೊಡುವ ಧನ-ಧಾನ್ಯಗಳನ್ನು ಮೀಸಲಿರಿಸಿ ಗೌರವದಿಂದ ಸಮರ್ಪಿಸುತ್ತಿದ್ದರು.  ತೊಗಲುಗೊಂಬೆಯಾಟಗಳು ಏರ್ಪಾಟಾಗುತ್ತಿದ್ದ ಸಂದರ್ಭಗಳನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಮಳೆ-ಬೆಳೆಗಾಗಿ, ಜನ ಜಾನುವಾರುಗಳ ಕ್ಷೇಮಕ್ಕಾಗಿ, ಊರಿನ ಉಲುಸಿಗಾಗಿ, ಸಂತಾನ ಪ್ರಾಪ್ತಿಗಾಗಿ, ಸ್ವರ್ಗ ಪ್ರಾಪ್ತಿಗಾಗಿ, ದೆವ್ವ ಪ್ರೇತಗಳ ಉಚ್ಛಾಟನೆಗಾಗಿ, ಹಬ್ಬ ಹರಿದಿನ, ಜಾತ್ರೆ-ಉತ್ಸವ ಮೊದಲಾದ ಧಾರ್ಮಿಕ ಆಚರಣೆಗಳ ಭಾಗವಾಗಿ ತೊಗಲುಗೊಂಬೆಯಾಟ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ಇಂಥ ಸಂದರ್ಭಗಳಲ್ಲೆಲ್ಲ ಈ ಕಲೆ ಶುದ್ಧ ದೈವ ಸ್ವರೂಪಿ ಕಾರ್ಯವಾಗಿತ್ತು. ಹಾಗಾಗಿಯೇ ಗೊಂಬೆಯಾಟದ ತಂಡಗಳನ್ನು ಕರೆಸಿ ಗೌರವದಿಂದ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗುತಿತ್ತು. ಈ ಹಿನ್ನೆಲೆಯಲ್ಲಿ ಭಕ್ತಿ ಇರುವವರು ಗೊಂಬೆಗಳನ್ನು ಮಾಡಿಸಿ ಕೊಡುವ ಪರಿಪಾಟವೂ ಇತ್ತು. ವಿವಿಧ ಪುರಾಣ ಪಾತ್ರಗಳ ಗೊಂಬೆಗಳನ್ನು ಮಾಡಿಸಿಕೊಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೂ ಇತ್ತು. ಇತಿಹಾಸದ ರಾಜಮನೆತನಗಳು ಈ ಗೊಂಬೆಯಾಟದ ಕಲಾವಿದರಿಗೆ ಮತ್ತು ಕಲೆಗೆ ರಾಜಾಶ್ರಯವನ್ನು ನೀಡಿರುವುದು ತಿಳಿದು ಬರುತ್ತದೆ. ಆದರೆ  ನಂತರದ ಬದಲಾದ ಕಾಲ ಮಾನದ ಕಾರಣದಿಂದ ಈ ಕಲೆಯು ದೈವೀ ಆಯಾಮವನ್ನು ಕಳೆದುಕೊಂಡು ಕೇವಲ ಮನರಂಜನೆ ಹಾಗೂ ನೀತಿ ಬೋಧನೆಯ  ಮಾದ್ಯಮವಾಗಿ ಬದಲಾಯಿತು. ಅದರ ಪರಿಣಾಮವಾಗಿ ವಿವಿಧ ಪುರಾಣಕಥೆಗಳ ಮೂಲಕ ಮನೋರಂಜನೆ ಹಾಗೂ ನೀತಿಬೋಧನೆಯನ್ನು ಮಾತ್ರ ಪ್ರಧಾನವಾಗಿಸಿಕೊಳ್ಳಲಾಯಿತು. 
ಕಥೆಗಳ ಮೂಲ
  ತೊಗಲುಗೊಂಬೆಯಾಟದ ಕಲೆಯ ಪ್ರದರ್ಶನಗಳಿಗೆ ಪ್ರಧಾನವಾಗಿ ರಾಮಾಯಣ, ಮಹಾ ಭಾರತ, ಭಾಗವತ ಮತ್ತಿತರ ಮೂಲಗಳಿಂದ ಕಥೆಗಳನ್ನು ಬಳಸಿಕೊಳ್ಳುತ್ತಾರೆ. ಆಧುನಿಕ ಸಂದರ್ಭಕ್ಕೆ ಅಗತ್ಯವಾಗಿರುವ ಜಾಗೃತಿ ಕಾರ್ಯಕ್ಕಾಗಿ ಈ ಕಲೆಯನ್ನು ಬಳಸಿಕೊಂಡಿದ್ದರ ಪರಿಣಾಮ ಆ ದೃಷ್ಟಿಯಿಂದ ಹಾಗೂ ಸ್ವತಃ ಕಲಾವಿದರ ಹೊಸಕಾಲಕ್ಕೆ ಅನುಗುಣವಾಗಿ ಕಲೆಯನ್ನು ಮರು ರೂಪಿಸುವ ಪ್ರಯತ್ನವಾಗಿ ಕೆಲವು ಸಾಮಾಜಿಕ ಹಾಗೂ ಐತಿಹಾಸಿಕ  ಕಥಾ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ. ಒಟ್ಟಾರೆ ಈ ಕಲಾ ಪ್ರದರ್ಶನಗಳಿಗೆ ಬಳಕೆಯಾಗುವ ವಸ್ತುಗಳನ್ನು ಈ ಮುಂದಿನಂತೆ ಕಾಣಿಸಬಹುದು. 
ರಾಮಾಯಣ : ರಾವಣ ದಿಗ್ವಿಜಯ, ಕೌಸಲ್ಯ ಕಲ್ಯಾಣ, ಪಂಚವಟಿ, ಶತಕಂಠ ರಾವಣ, ಐರಾವಣ-ಮೈರಾವಣ, ವೈಕುಂಟ, ರಾಮಾಯಣ, ಲವ-ಕುಶ
ಮಹಾಭಾರತ :  ಭೀಮಸೇನ ಪ್ರತಿಜ್ಞೆ, ಪಾಂಡವ ವಿಲಾಸ, ವಿರಾಟ ಪರ್ವ, ಕೃಷ್ಣಾರ್ಜುನರ ಕಾಳಗ
ಭಾಗವತ :  ದೇವಿ ಮಹಾತ್ಮೆ, ಸಮುದ್ರ ಮಂಥನ, ಶಿವ ಜಲಂದರ, ತ್ರಿಪುರ ಸಂಹಾರ, ಕೃಷ್ಣ        ಪಾರಿಜಾತ
ಇತರೆ :  ರೇಣುಕಾ ಮಹಾತ್ಮೆ, ಸತ್ಯ ಹರಿಶ್ಚಂದ್ರ, ಭಕ್ತ ಮಾರ್ಕಂಡೇಯ
ಜನಪದ :  ಚಿತ್ರಕೇತು ಮಹಾರಾಜ, ಸಾರಂಗಧರ, ಸುವರ್ಣವತಿ ಪರಿಣಯ, ಪ್ರಭಾವತಿ, ಮಂಜುಘೋಷ, ಕರಿಭಂಟನ ಕಾಳಗ, ನಗಿಸಿದವರ ಕಥೆ ವಿಧಿವಿಲಾಸ
ಐತಿಹಾಸಿಕ : ಪ್ರವಾದಿ ಬಸವೇಶ್ವರ, ಬಾಪು ಕಥೆ, ಸ್ವತಂತ್ರ ಹೋರಾಟ, ಕಿತ್ತೂರು ರಾಣಿ ಚನ್ನಮ್ಮ, ಛತ್ರಪತಿ ಶಿವಾಜಿ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಮಹಾತ್ಮ ಕಬೀರ,ಸಿಪಾಯಿ ದಂಗೆ
ಸಾಮಾಜಿಕ : ತಾಯಿ ಎದೆ ಹಾಲು, ಕುಟುಂಬ ಯೋಜನೆ, ಜನ ಸಂಖ್ಯಾ ನಿಯಂತ್ರಣ, ಕಬ್ಬಿನ ಮಹಾತ್ಮೆ, ತಂಬಾಕಿನ ದುಷ್ಪರಿಣಾಮ, ಬ್ರೂಣ ಹತ್ಯೆ
ಈ ರೀತಿ ಅನೇಕ ವಸ್ತು ವಿಷಯಗಳನ್ನು ತಮ್ಮ ಆಟದೊಳಗೆ ಸೇರಿಸಿಕೊಂಡು ಸಮಾಜದ ಅಗತ್ಯಗಳನ್ನು ಪೂರೈಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿರುವುದು ತೊಗಲು ಗೊಂಬೆಯಾಟದ ಮಹತ್ವವನ್ನು ಸಾರುತ್ತದೆ. ಈ ಪ್ರಸಂಗಗಳಲ್ಲಿ ಕೆಲವನ್ನು ಕೆಲವು ನಿರ್ದಿಷ್ಟ ಉದ್ದೇಶಕ್ಕೆ ಅನುಗುಣವಾಗಿ ಪ್ರದರ್ಶಿಸಲಾಗುತ್ತದೆ. ಉದಾ : ಲವ-ಕುಶ ಪ್ರಸಂಗ ಸಂತಾನ ಪ್ರಾಪ್ತಿಗೆ, ರಾಮಾಯಣದ ಸ್ವರ್ಗಾರೋಹಣ ಪ್ರಸಂಗ ಅಪರಕರ್ಮದ ಕೊನೆದಿನ ಸ್ವರ್ಗ ಪ್ರಾಪ್ತಿಗೆ, ಮಳೆಗಾಗಿ ವಿರಾಟಪರ್ವ, ಊರಿಗೆ ಉತ್ತಮ ಉಲುಸಾಗಲೆಂದು ದೇವಿ ಮಹಾತ್ಮೆ ಇತ್ಯಾದಿ
ಪ್ರಾಚೀನತೆ- ಪ್ರದೇಶ  
ತೊಗಲುಗೊಂಬೆಯಾಟದ ಮೂಲ ಚೀನ ಎಂದು ಕೆಲವರು, ಭಾರತ ಎಂದು ಇನ್ನೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಬಹಳಷ್ಟು ಜನ ವಿದ್ವಾಂಸರು ಊಹಿಸಿರುವಂತೆ ಭಾರತವೇ ಈ ಕಲೆಯ ಮೂಲ ನೆಲ. ಇಲ್ಲಿಂದ ಜಗತ್ತಿನ ಬೇರೆ ಬೇರೆ ದೇಶಗಳಿಗೆ ವಲಸೆ ಹೋಗಿರಬಹುದು. ಈ ಕಲೆ ಭಾರತದಲ್ಲಿ ಪುರಾಣ ಕಾಲಕ್ಕಿಂತ ಪೂರ್ವದಲ್ಲೆ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಅನೇಕ ಪರಾವೆಗಳಿವೆ. ಇದರ ಪ್ರಾಚೀನತೆಯನ್ನು ಕ್ರಿ.ಪೂ.೩೦೦೦ ವರ್ಷಗಳಷ್ಟು ಹಿಂದಿನ ಭಗವದ್ಗೀತೆಯ ಕಾಲಕ್ಕೆ ಗುರುತಿಸಲಾಗಿದೆ. ಜರ್ಮನಿಯ ವಿದ್ವಾಂಸರು ಹೇಳುವಂತೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ತೊಗಲುಗೊಂಬೆ ಆಟ ಶಬ್ದದ ಉಲ್ಲೇಖವಿದೆ. ಮಹಾಭಾರತ ಗ್ರಂಥದಲ್ಲೂ ಇದರ ಪ್ರಸ್ತಾಪವಿದೆ. ಈ ಆಟವನ್ನು ಕಿಳ್ಯೇಕ್ಯಾತರು ಸಮುದಾಯ ತಮ್ಮ ಪಾರಂಪರಿಕ ಕಲೆಯಾಗಿಸಿಕೊಂಡಿದ್ದು, ಈ ಕಿಳ್ಳೇಕ್ಯಾತರ ಮೂಲ ಪುರುಷ ಪಾಂಡವರ ಜೊತೆ ವನವಾಸ ಮಾಡಿದನೆಂಬುದು ನಂಬಿಕೆ. ಮೂಲತಃ ತಮಿಳುನಾಡಿನ ಮೂಲದ ಈ ಕಲೆ ಕರ್ನಾಟಕಕ್ಕೆ ಸಮುದಾಯಗಳ ಮೂಲಕ ವಲಸೆ ಬಂದಿದೆ ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡದ ಧನಪಾಲನ ತಿಲಕಮಂಜರಿ, ವಿದ್ಯಾರಣ್ಯರ ಪಂಚಾದಶಿ, ಪಾಲ್ಕುರಿಕೆ ಸೋಮನಾಥನ ಪಂಡಿತಾರಾಧ್ಯ ಚರಿತ, ಭೀಮ ಕವಿಯ ಬಸವ ಪುರಾಣ, ನೇಮಿಚಂದ್ರನ ನೇಮಿನಾಥ ಪುರಾಣ ಗಳಲ್ಲಿ ತೊಗಲುಗೊಂಬೆಯಾಟದ ಉಲ್ಲೇಖವಿರುವುದು ಕಂಡುಬರುತ್ತದೆ. ಮುಖ್ಯವಾಗಿ ಕನ್ನಡದ ವಚನಯುಗದಲ್ಲಿ ಅನೇಕ ವಚನಕಾರರು ಈ ಕಲೆಯ ಬಗ್ಗೆ ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಕಲಕೇತ ಬೊಮ್ಮಯ್ಯ ಎಂಬ ವಚನಕಾರನಿದ್ದು ಅವನು ತೊಗಲುಗೊಂಬೆಯಾಟದ ಶಿಳ್ಳೇಕ್ಯಾತ ಸಮುದಾಯಕ್ಕೆ ಸೇರಿದವನಾಗಿರಬಹುದೆಂದು ಊಹಿಸಲಾಗಿದೆ. 
ಭಾರತದ ಮಹಾರಾಷ್ಟ್ರ, ಓರಿಸ್ಸಾ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಮೊದಲಾದ ರಾಜ್ಯಗಳಲ್ಲಿ, ಕರ್ನಾಟಕದ ಧಾರವಾಡ(ಕಿಳ್ಳೇಕ್ಯಾತರ ಆಟ), ಕೋಲಾರ,ಬಳ್ಳಾರಿ, ರಾಯಚೂರು ಬೀದರ್ (ತೋಲುಬೊಮ್ಮಲಾಟ), ಗುಲ್ಬರ್ಗಾ(ಕಟಬರಾಟ), ಬೆಳಗಾವಿ-ಕಾರವಾರ( ಚಿತ್ರಮರಾಟಿಗರು,ಕಥಾನಾಯಕರಾಟ), ಹಳೆ ಮೈಸೂರು ಭಾಗ (ಗೊಂಬೆರಾಮರಾಟ)ದ ಜಿಲ್ಲೆಗಳಲ್ಲಿ ಈ ಕಲೆ ಅಸ್ತಿತ್ವದಲ್ಲಿದೆ. ಕರ್ನಾಟಕದಲ್ಲಿ ಈ ಕಲೆಯನ್ನು ಉತ್ತುಂಗಕ್ಕೇರಿಸಿದ ಅನೇಕ ಕಲಾವಿದರಿದ್ದು ಅವರಲ್ಲಿ ಕೆಲವರನ್ನು ಹೆಸರಿಸುವುದಾದರೆ ಕರ್ನಾಟಕದ ಪ್ರಮುಖ ಕಲಾವಿದರು : ಹೊಂಬಯ್ಯ, ಗುಡ್ಡಪ್ಪ ಶಟವಾಜಿ, ಎಡ್ರಮ್ಮನಹಳ್ಳಿ ಭರಮಪ್ಪ, ಶಿಂದೆ ರಾಮಮೂರ್ತಿ, ಮೊರನಾಳದ ಭೀಮವ್ವ, ದೊಡ್ಡಬಾಳಪ್ಪ, ಬೆಳಗಲ್ಲು ವೀರಣ್ಣ, ಹನುಮಂತಯ್ಯ, ಹೊಂಬಯ್ಯ, ಅಪ್ಪಾಜಿ, ಬಡೇಲಡುಕಿನ ಕೆ. ತಿಪ್ಪೇಸ್ವಾಮಿ ಮೊದಲಾದವರು. ಇನ್ನೂ ಜಗತ್ತಿನ ಚೀನಾ, ಟರ್ಕಿ, ಗ್ರೀಸ್, ಥೈಲ್ಯಾಂಡ್, ಮಲೇಷಿಯ, ಇಂಡೋನೇಷಿಯಾ, ಪರ್ಷಿಯಾ, ಇಟಲಿ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ತೊಗಲು ಗೊಂಬೆಯಾಟ ಪ್ರಚಲಿತದಲ್ಲಿರುವುದನ್ನು ಕಾಣಬಹುದು. ವಿದೇಶಗಳಲ್ಲಿ  ತೊಗಲುಗೊಂಬೆಯಾಟಕ್ಕೆ ಅನೇಕ ವೃತ್ತಿಪರ ಸಂಸ್ಥೆಗಳು ತೊಡಗಿಸಿಕೊಂಡಿವೆ.
ತೊಗಲು ಗೊಂಬೆಯಾಟದ ಇಂದಿನ ಸ್ಥಿತಿಗತಿ
ಎಲ್ಲಾ ಕಲೆಗಳಿಗೆ ಆಧುನಿಕತೆ ತಂದೊಡ್ಡಿದ ಸವಾಲು ಹಾಗೂ ಸಂಕಟಗಳನ್ನು ಈ ಕಲೆಗೂ ತಂದಿದೆ. ಒಂದು ಕಾಲಕ್ಕೆ ಅಪಾರ ಸಂಖೆಯ ಕಲಾವಿದರು ಮತ್ತು ಕಲಾ ತಂಡಗಳು ಇದದ್ದು ಈಗ ಕೇವಲ ನೂರರ ಒಳಗಿದೆ. ಒಂದು ಸಮೀಕ್ಷೆಯ ಪ್ರಕಾರ ೧೯೮೮ ರಲ್ಲಿ ೧೬೭ ತೊಗಲು ಗೊಂಬೆಯಾಟದ ತಂಡಗಳಿದ್ದು ಅವುಗಳ ಸಂಖ್ಯೆ ಈಗ ಕ್ಷೀಣಿಸಿ ಬೆರಳೆಣಿಕೆಯಷ್ಟಾಗಿವೆ. ಈ ಕಲೆಯಲ್ಲಿ ಅದ್ಭುತ ಸಾಧಕರೆನಿಸಿದ ಬೆಳಗಲ್ಲು ವಿರಣ್ಣ ಅವರ ಪ್ರಕಾರ ಕರ್ನಾಟಕದಲ್ಲಿ ಒಂದು ಕಾಲಕ್ಕೆ ೧೮೦ ಜನ ತೊಗಲುಗೊಂಬೆ ಕಲಾವಿದರಿದ್ದರು ಆದರೆ ಈಗ ೧೦೦ಕ್ಕೆ ಇಳಿದಿದೆ.  ಆಧುನಿಕತೆಯ ವಿದುನ್ಮಾನ ಮಾಧ್ಯಮಗಳು ಮನರಂಜನೆಯ ಅನಂತ ಸಾಧ್ಯತೆಗಳನ್ನು ಸೃಷ್ಟಸಿರುವ ಹಿನ್ನೆಲೆಯಿಂದಾಗಿ ಈ ಆಟವನ್ನು ನೋಡುವ ಪ್ರೇಕ್ಷಕರ ಸಂಖ್ಯೆಯೂ ಕ್ಷೀಣಿಸಿದೆ. ಆಡಿಸುವ ಪ್ರಾಯೋಜಕರು ಇಲ್ಲವಾಗಿದ್ದಾರೆ. ಸರ್ಕಾರದ ಪ್ರೋತ್ಸಾಹವೂ ಅಷ್ಟಕ್ಕಷ್ಟೆ. ಈ ಎಲ್ಲಾ ಕಾರಣದಿಂದಾಗಿ ಈ ಕಲೆಯನ್ನು ನಂಬಿ ಬದುಕುವ ಕುಟುಂಬಗಳು ವೆಚ್ಚದಾಯಕವಾದ ಈ ಕಲೆಯನ್ನು ಮುಂದುವರೆಸಲು ಸಾಧ್ಯವಾಗದೆ ಬೇರೆ ವೃತ್ತಿಗಳನ್ನು ಹರಿಸಿ ಈ ಕಲೆಯಿಂದ ದೂರವಾಗಿವೆ. ಒಟ್ಟಾರೆ ಕಲೆಗಳನ್ನು ನೋಡಿ ಆಸ್ವಾದಿಸುವ ಜನ ಮತ್ತು ವಾತಾವರಣವಿಲ್ಲ.  ಕಲೆಯನ್ನು ಮುಂದುವರೆಸುವ ಕಲಾವಿದರಿಲ್ಲ.  ಕಲೆಗೆ ಬೇಕಾದ ಅಗತ್ಯ ಸಾಮಾಗ್ರಿ ಮತ್ತು ಕುಶಲತೆಯಿಲ್ಲ. ಆಧುನಿಕ ಸಂದರ್ಭಕ್ಕೆ ಅನುಗುಣವಾಗಿ ಇರುವ ಕಲೆಗೆ ಮರು ರೂಪಣೆಮಾಡುವ ಮನಸ್ಸು ಮತ್ತು ಕಾರ್ಯಗಳಿಲ್ಲ. ಈ ಕಲೆಗೆ ಬೇಕಾದ ಹಣ ಮತ್ತು ಜನ ಬೆಂಬಲ ಇಲ್ಲವಾಗಿದೆ. ಈ ಎಲ್ಲಾ ಕಾರಣಗಳಿಂದ ಪಾರಂಪರಿಕ ತೊಗಲು ಗೊಂಬೆಯಾಟ ನಾಶದ ಅಂಚಿಗೆ ತಲುಪಿದೆ.
ತೊಗಲು ಗೊಂಬೆಯಾಟ ಮತ್ತು ಪಾರಂಪರಿಕ ಜ್ಞಾನಗಳು
ತೊಗಲುಗೊಂಬೆಯಾಟದ ಕಲೆಯನ್ನು ಕೇವಲ ಕಲೆಯಾಗಿ ನೋಡುವಂತಿಲ್ಲ. ಅದರ ಹಿನ್ನೆಲೆಗೆ ಅಪಾರವಾದ ಜ್ಞಾನ ಸಂಪತ್ತಿದೆ. ಈ ದೃಷ್ಟಿಯಿಂದ ಗಮನಿಸಬೇಕಾದ ಸಂಗತಿಗಳೆಂದರೆ :
೧. ಗೊಂಬೆಗಳ ನಿರ್ಮಾಣ
೨. ಗೊಂಬೆಗಳ ಸಂರಕ್ಷಣೆ
೩. ವಾದ್ಯಗಳ ತಯಾರಿ ಮತ್ತು ನುಡಿಸುವುದು
೪. ಚಿತ್ರಕಲೆ
೫. ಬಣ್ಣ ತಯಾರಿಕೆ

೧. ಗೊಂಬೆಗಳ ನಿರ್ಮಾಣ 
 ಕಲಾವಿದರು ತೊಗಲುಗೊಂಬೆಯಾಟವನ್ನು ಪ್ರದರ್ಶಿಸಲು ಬೇಕಾಗುವ ಗೊಂಬೆ ತಯಾರಿಕೆಗೆ ಬೇರೆ ಯಾರನ್ನೂ ಆಶ್ರಯಿಸದೆ ತಾವೇ ಅಗತ್ಯವಿರುವ ಗೊಂಬೆಗಳನ್ನು ತಯಾರಿಸಿಕೊಳ್ಳುತ್ತಾರೆ. ಅದಕ್ಕೆ ಬೇಕಾದ ಚರ್ಮವನ್ನು ಹದಮಾಡಿ ಅದಕ್ಕೆ ಒಂದು ರೂಪು ಕೊಡುವುದು ಸಾಮಾನ್ಯ ಕಾರ್ಯವಲ್ಲ. ಎಲ್ಲರಿಗೂ ಬರುವಂತಹದ್ದಲ್ಲ. ಅದನ್ನು ತಮ್ಮ ಅಪಾರ ಶ್ರಮ ಹಾಗೂ ಪ್ರಯತ್ನಗಳಿಂದ ಕಲಿಯಬೇಕಾಗುತ್ತದೆ. ಇದನ್ನು ಕಲಾವಿದರು ದೀರ್ಘಕಾಲದ ಪ್ರಯತ್ನದಿಂದಾಗಿ ಕಲಿಯುತ್ತಾರೆ. ಈ ಗೊಂಬೆತಯಾರಿಸುವ ಕುಶಲತೆ ಇದ್ದವರು ಕಲಾ ಪ್ರದರ್ಶನಗಳು ಕಡಿಮೆಯಾದರೂ ಚಿಂತಿಸಬೇಕಾಗಿಲ್ಲ ಇತ್ತೀಚೆಗೆ ಈ ರೀತಿಯ ಗೊಂಬೆಗಳಿಗೆ ಮಾರುಕಟ್ಟೆಯಲ್ಲಿ (ವಿಶೇಷವಾಗಿ ವಿದೇಶಿಯರಿಂದ) ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ ಈ ಗೊಂಬೆ ತಯಾರಿಸುವ ಕಲೆಯನ್ನು ಉಪ ಜೀವನಕ್ಕೆ ಆದಾರವಾಗಿಸಿಕೊಳ್ಳಲು ಸಾಧ್ಯವಿದೆ. ಇದು ಕಲೆಯ ಜೊತೆ ನಶಿಸಿದರೆ ಅಷ್ಟರ ಮಟ್ಟಿಗೆ ನಮ್ಮ ಪಾರಂಪರಿಕ ಜ್ಞಾನವನ್ನು ಕಳೆದುಕೊಂಡಂತೆ
೨. ಗೊಂಬೆಗಳ ಸಂರಕ್ಷಣೆ 
ಕಲಾವಿದರು ತಾವು ತಯಾರಿಸಿದ ಗೊಂಬೆಗಳನ್ನು ಬಹು ದಿನಗಳವರೆಗೆ ಸುರಕ್ಷಿತವಾಗಿ ಇಡಬೇಕಾಗುತ್ತದೆ. ಅದಕ್ಕಾಗಿ ಬಿದಿರಿನ ಪಟ್ಟಿಗೆಗಳ ತಯಾರಿ ಮತ್ತು ವಿವಿಧ ಗಿಡಮೂಲಿಕೆಗಳನ್ನು ಗೊಂಬೆಗಳಿಗೆ ಬಳಿಯುವುದು ಕಲಾವಿದರಿಗೆ ಪರಂಪರೆಯ ಅನುಭವದಿಂದ ಲಭ್ಯವಾದ ಜ್ಞಾನ. ಹಾಗಾಗಿ ಇಂಥ ಜ್ಞಾನವನ್ನು ಉಳಿಸಿಕೊಳ್ಳಲು ಅನೇಕ ಅವಕಾಶಗಳಿವೆ. ಈ ಬಗ್ಗೆ ಗಂಭೀರವಾದ ಅಧ್ಯಯನಮಾಡಿ ಸಂರಕ್ಷಣಾ ಪುಟ್ಟಿ ತಯಾರಿಸುವ ಕೌಶಲ, ಗೊಂಬೆಗಳು ಹಾಳಾಗದಂತೆ ಸಂರಕ್ಷಿಸುವ ಆ ಗಿಮೂಲಿಕೆಗಳು ಯಾವುವು ಅವುಗಳನ್ನು ಬಳಸುವ ಕ್ರಮಗಳ ಬಗ್ಗೆ ತಿಳಿದು ಸಮಕಾಲೀನ ಸಮಾಜದ ವಿವಿಧ ಅಗತ್ಯಗಳಿಗೆ ಬಳಸಿಕೊಳ್ಳುವ ಅವಕಾಶವಿದೆ.
೩. ವಾದ್ಯಗಳ ತಯಾರಿ ಮತ್ತು ನುಡಿಸುವುದು
ತೊಗಲುಗೊಂಬೆಯಾಟದ ಪ್ರದರ್ಶನದಲ್ಲಿ ಸಂಗೀತದ ಪಾತ್ರ ಹಿರಿದು. ಇದಕ್ಕೆ ಬೇಕಾಗುವ ವಾದ್ಯಪರಿಕರಗಳು ಹಲವಾರು. ಮೃದಂಗ, ಮುಖವೀಣೆ, ಡೋಲು, ಪುಂಗಿ,ತಾಳ, ಪಾವರೆ,ಹಾರ್ಮೋನಿಯಂ, ಕೊಳಲು ವಾದ್ಯಗಳನ್ನು ಬಳಸುತ್ತಾರೆ. ಈ ವಾದ್ಯಗಳನ್ನು ತಾವೇ ತಯಾರಿಸಿಕೊಳ್ಳುವುದು ಸಾಮಾನ್ಯ. ಹಾಗೂ ಅವುಗಳನ್ನು ಸಮರ್ಥವಾಗಿ ನುಡಿಸುವ ಕಲೆಯೂ ಕೂಡ ಕಲಾವಿದರಿಗೆ ಕರಗತ. ಇಲ್ಲಿ ಬಳಸುವ ಸಂಗೀತ ವಾದ್ಯಗಳು ಈ ಕಲೆಯ ಹೊರತಾಗಿಯೂ ಬಳಸ ಬಹುದಾದವು. ಹಾಗಾಗಿ ಇವುಗಳ ತಯಾರಿಕೆ ಮತ್ತು ಬಳಕೆಯ ಕೌಶಲಗಳನ್ನು ಸಮರ್ಥವಾಗಿ ಉಳಿಸಿಕೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಈ ವಾದ್ಯಗಳಲ್ಲಿ ಪಾವರೆ ವಾದ್ಯ ವಿಶಿಷ್ಟ. ಈ ವಾದ್ಯವನ್ನು  ಕಂಚಿನ ಗಂಗಾಳದಿಂದ ಸಿದ್ದಗೊಳಿಸುತ್ತಾರೆ. ಗಂಗಾಳವನ್ನು ನೆಲದ ಮೇಲೆ ಬೋರಲು ಹಾಕಿ ಅದರ ಮೇಲೆ ಮಧ್ಯಭಾಗದಲ್ಲಿ ಮೇಣ ಮೆತ್ತಿ ಹಂಚಿ ಕಡ್ಡಿಯನ್ನು ಅದರಲ್ಲಿ ನೆಟ್ಟು ಎರಡೂ ಕೈಗಳಿಂದ ಉಜ್ಜಿದಾಗ ನಾದ ಹೊರಡುತ್ತದೆ. ಇಂಥ ವಾದ್ಯಗಳನ್ನು ಮುಂದುವರೆಸುವುದು ಪರಂಪರೆಯನ್ನು ಉಳಿಸುವ ಸಮರ್ಥವಾದ ಕಾರ್ಯವೆನಿಸುತ್ತದೆ. 
೪. ಚಿತ್ರಕಲೆ
ತೊಗಲು ಗೊಂಬೆಗಳ ತಯಾರಿಕೆಯ ಪ್ರಕ್ರಿಯೆಯಲ್ಲಿ ಚಿತ್ರಕಲೆ ಬಹು ಪ್ರಧಾನವಾದ ಪಾತ್ರವನ್ನು ವಹಿಸುತ್ತವೆ. ಅವುಗಳಲ್ಲಿ ಮುಖ್ಯವಾಗಿ ಚರ್ಮದ ಮೇಲೆ ರೇಖಾ ವಿನ್ಯಾಸ ಮಾಡುವುದು; ರೇಖಾ ವಿನ್ಯಾಸಕ್ಕನುಗುಣವಾಗಿ ಚರ್ಮವನ್ನು ಕತ್ತರಿಸುವುದು; ಬಣ್ಣ ತುಂಬುವುದು ಇತ್ಯಾದಿ ಕಾರ್ಯಗಳು ನಡೆಯುತ್ತವೆ. ಚರ್ಮವನ್ನು ತಮಗೆ ಬೇಕಾದ ಪಾತ್ರದ ಆಕಾರಕ್ಕೆ ಕತ್ತರಿಸಿಕೊಳ್ಳುವುದು ಮತ್ತು ಅದಕ್ಕೆ ಸರಿಯಾದ ಬಣ್ಣದ ಸಂಯೋಜನೆ ಮಾಡುವುದು ಬಹಳ ಮುಖ್ಯ. ಇಲ್ಲಿ ಕಲಾವಿದರ ಚಿತ್ರಕಲಾ ಕೌಶಲ್ಯ ಕಾಣುತ್ತದೆ. ಈ ಚಿತ್ರಕಲೆ ಕಲಾವಿದರ ಪಾರಂಪರಿಕ ಜ್ಞಾನದ ಮೂಲಕ ತಲೆಮಾರಿನಿಂದ ತಲೆಮಾರಿಗೆ ಸಾಕಷ್ಟು ಸೂಕ್ಷ್ಮತೆಯನ್ನು ಪಡೆದುಕೊಂಡು ಸಾಗಿ ಬಂದಿದೆ. ಇಂಥ ಜ್ಞಾನವನ್ನು ಕಲೆಯ ಜೊತೆ ಕಳೆದುಕೊಳ್ಳುವುದೆಂದರೆ ನಮಗೆ ಆಗುವ ನಷ್ಟ ಎಂತಹದ್ದು ಎಂಬುದನ್ನು ಚಿಂತಿಸಿದರೆ ಗಾಬರಿ ಹುಟ್ಟಿಸುತ್ತದೆ. 
೫. ಬಣ್ಣ ತಯಾರಿಕೆ
 ಗೊಂಬೆಗೆ ಲೇಪಿಸು ಬಣ್ಣವನ್ನು ಸ್ವತಃ ಕಲಾವಿದರೇ ತಮ್ಮ ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಿಕೊಳ್ಳುವುದು ವಿಶೇಷ. ಈ ಕಲೆಯಲ್ಲಿ ಮುಖ್ಯವಾಗಿ ಬಳಸಲ್ಪಡುವ ಬಣ್ಣಗಳೆಂದರೆ ಕೆಂಪು, ಕಪ್ಪು, ಹಳದಿ, ನೀಲಿ, ಸಿಂಧೂರ, ಪಚ್ಚೆ ನೀಲಿ ಇತ್ಯಾದಿ. ಇಷ್ಟೊಂದು ಬಣ್ಣಗಳನ್ನು ತಯಾರಿಸಲು ಕಲಿತ ಇವರ ಜ್ಞಾನ ಎಷ್ಟೊಂದು ಕುತೂಹಲಕಾರಿ? ಈ ರೀತಿ ಪಾರಂಪರಿಕ ಮಾರ್ಗದಲ್ಲಿ ತಯಾರಿಸಿದ ಬಣ್ಣಗಳ ಹೊಳಪು ಮತ್ತು ದೀರ್ಘಕಾಲ ತಾಜಾತನವನ್ನು ಕಾಪಿಡುತ್ತವೆ. ಇತ್ತೀಚಿನ ದಿನಗಳಲ್ಲಿ ಹೊಸಕಾಲದ ರಸಾಯನಿಕಗಳನ್ನು ಬಳಸಿದ ಬಣ್ಣಗಳನ್ನು ಬಳಸಿದ ಕಲಾವಿದರಿಗೆ ಅದರ ಪರಿಣಾಮಗಳು ತಿಳಿದವೆ. ಹೊಳಪು ದೀರ್ಘಕಾಲ ಬಾಳಿಕೆ ಬೇಕೆಂದರೆ ಸಾಂಪ್ರದಾಯಿಕ ರೀತಿಯಲ್ಲಿಯೆ ಬಣ್ಣ ತಯಾರಿಕೊಳ್ಳಬೇಕೆಂಬುದು ಸ್ವತಃ ಕಲಾವಿದರ ಅನಿಸಿಕೆ. ಇಲ್ಲಿ ಬಳಸುವ ಪ್ರತಿಯೊಂದು ಬಣ್ಣವನ್ನು ತಯಾರಿಸಲು ಬಳಸಬೇಕಾದ ವಸ್ತುಗಳು ಯಾವುವು ಮತ್ತು ಅದನ್ನು ತಯಾರಿಸು ವಿಧಾನ ಯಾವುದು ಎಂಬುದು ಕಲಾವಿದರೆಲ್ಲರಿಗೂ ಗೊತ್ತಿರುವ ಸತ್ಯವೆ. ಅದರ ಕೆಲವು ಮಾದರಿಗಳನ್ನು ಗಮನಿಸುವುದಾದರೆ : 
೧. ಕಪ್ಪು ಬಣ್ಣ ಬೇಕೆಂದರೆ ದೀಪದ ಕಾಡಿಗೆ ಅಥವ ತೆಂಗಿನ ಕಾಯಿಯ ಚಿಪ್ಪನ್ನು ಸುಟ್ಟು ಕರಕು ಮಾಡಿಕೊಳ್ಳಬೇಕು. ಇದನ್ನು ಪುಡಿಮಾಡಿ ನೀರಿನಲ್ಲಿ ಬೆರಸಿ ಅದಕ್ಕೆ ಜಾಲಿಯ ಅಂಟನ್ನು ಬೆರಸ ಬೇಕು. ಅನಂತರ ಅದನ್ನು ಚನ್ನಾಗಿ ಕದಡಿ ಆರುದಿನಗಳ ಕಾಲ ಕೊಳೆಯಲು ಬಿಟ್ಟು ನಂತರ ಬಿಳಿಬಟ್ಟೆಯಲ್ಲಿ ಸೋಸಬೇಕು. ಹೀಗೆ ತಯಾರಾದ ಕಪ್ಪು ಬಣ್ಣ ವರ್ಷಗಟ್ಟಲೆ ಕೆಡುವುದಿಲ್ಲ.
೨. ಸಿಂಧೂರ ಬಣ್ಣ ಬೇಕೆಂದಾಗ ಮದರಂಗಿ ಮತ್ತು ಸುಣ್ಣವನ್ನು ಬೆರಸಿ ಅದಕ್ಕೆ ಬೇವಿನ ಅಂಟನ್ನು ಸೇರಿಸಿ ಕೆಲವು ದಿನಗಳ ಕಾಲ ಕೊಳೆಯಲು ಬಿಟ್ಟು ನಂತರ ಉಪಯೋಗಿಸುತ್ತಾರೆ
ಹೀಗೆ ತಮಗೆ ಬೇಕಾದ ಎಲ್ಲಾ ತರಹದ ಬಣ್ಣಗಳನ್ನು ತಮ್ಮ ಸುತ್ತಲಿನ ಪರಿಸರದಲ್ಲಿ ಸಿಗುವ ಬಗೆಬಗೆಯ ಎಲೆ, ಹೂವು, ಅಂಟುಗಳ ಸಹಾಯದಿಂದ ಅತೀ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಗುಣಮಟ್ಟದಲ್ಲಿ ತಯಾರಿಸಿಕೊಳ್ಳುತ್ತಾರೆ. ಆಧುನಿಕ ಕಾಲದ ಬಣ್ಣಗಳಿಗಿಂತ ಹೆಚ್ಚು ಹೊಳಪು ಮತ್ತು ಬಾಳಿಕೆ ಇರುವ ಬಣ್ಣಗಳನ್ನು ತಯಾರಿಸು ಜ್ಞಾನ ನಮ್ಮಲ್ಲಿರುವಾಗ ಹೆಚ್ಚು ಖರ್ಚಿನ ದೀರ್ಘಕಾಲ ಬಾಳಿಕೆ ಬರದ ಬಣ್ಣಗಳನ್ನು ಯಾಕೆ ಉಪಯೋಗಿಸಬೇಕು ಎಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ. 
ನಮ್ಮ ಮುಂದಿರುವ ಸಾಧ್ಯತೆಗಳು
ತೊಗಲುಗೊಂಬೆಯಾಟ ವಿನಾಶದ ಕಡೆಗೆ ಸಾಗಿರುವಾಗ ಅದನ್ನು ಉಳಿಸಬೇಕಾದ ಬಗೆಗಳ ಬಗ್ಗೆ ಚಿಂತಿಸಬೇಕಾದುದು ಇಂದಿನ ತುರ್ತು. ಈ ಬಗ್ಗೆ ಅನೇಕ ವಿದ್ವಾಂಸರು ಬಹಳ ಗಂಭೀರವಾದ ಆಲೋಚನೆಗಳನ್ನು ನಡೆಸಿದ್ದಾರೆ. ಈ ಕುರಿತು ೧೯೮೯ ಫೆಬ್ರವರಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ವಿಭಾಗ ನಡೆಸಿದ ೧೬ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದಲ್ಲಿ ’ತೊಗಲುಗೊಂಬೆಯಾಟದ ಮೇಲೆ ಆಧುನಿಕತೆಯ ಪರಿಣಾಮ ಮತ್ತು ನವೀಕರಣದ ಸಾಧ್ಯತೆಗಳು’ ಎನ್ನುವ ವಿಷಯ ಕುರಿತು ಮಾತನಾಡುತ್ತಾ ಹಿ.ಚಿ. ಬೋರಲಿಂಗಯ್ಯ ಅವರು ಹೀಗೆ ಹೇಳಿದ್ದಾರೆ :
ಯಾವುದೇ ಕಲೆಗೆ ಹೆಚ್ಚು ಬೆಲೆಸಾಗಬೇಕಾದರೆ ಮತ್ತು ವ್ಯವಸ್ಥಿತವಾಗಿ ನಿಲ್ಲಬೇಕಾದರೆ ವಿದ್ಯಾವಂತರು ಅದರಲ್ಲಿ ಪ್ರವೇಶ ಮಾಡುವುದು ಅನಿವಾರ್ಯ. ಅಂದರೆ ವಿದ್ಯಾವಂತ ಇಲ್ಲಿ “ಕೋರಿಯಾಗ್ರಾಫರ್” ಆಗಿ ಕೆಲಸ ಮಾಡುವುದಷ್ಟೇ ಅಲ್ಲದೆ ಅವರ ಜೀವನ ವಿಧಾನಗಳನ್ನು ಅರ್ಥಮಾಡಿಕೊಳ್ಳುವವನಾಗಬೇಕು. ಆದ್ದರಿಂದ ಈ ವಿದ್ಯಾವಂತರು ಹಳ್ಳಿಗಳಲ್ಲಿ ಬೆಳೆದು ಕಲೆಯ ಬಗ್ಗೆ ನಿಜವಾದ ಅಭಿಮಾನ ಇರುವವರಾಗಬೇಕು. ಕಲೆಯ ಪರಂಪರೆಯ ಹಿನ್ನೆಲೆಯ ಸುಧಾರಣೆ ಹೇಗೆ ಮಾಡಬೇಕೆಂಬ ಪರಿಜ್ಞಾನವುಳ್ಳವರಾಗಿರಬೇಕು. ಕರಾವಳಿಯ ಯಕ್ಷಗಾನ ಪ್ರವೇಶದ ನಂತರ ನವೀಕರಣಗೊಂಡ ರೀತಿ ನಮ್ಮೆಲ್ಲರಿಗೂ ಗೊತ್ತೇ ಇದೆ. ಈ ಕ್ಷೇತ್ರಕ್ಕೆ ವಿದ್ಯಾವಂತರು ಪ್ರವೇಶ ಮಾಡುವುದರಿಂದ ಎರಡು ಲಾಭಗಳಿವೆ. ಒಂದು ಕೆಲವು ಅಂಧ ಸಂಪ್ರದಾಯಗಳು ಮತ್ತು ಶೋಷಣಾ ಮೂಲವಾದ ಆಚರಣೆಗಳಿಂದ ಕಲಾವಿದರನ್ನು ಅಥವಾ ಒಟ್ಟಾರೆ ಜನಪದರನ್ನು ವಿಮುಕ್ತಿಗೊಳಿಸುವುದು, ಎರಡು ಹಿಂದೆಯೇ ಹೇಳಿದಂತೆ ಕಲೆಯ ಸುಧಾರಣೆ ಮಾಡುವುದು. ಈ ಮಾತಿಗೆ ಅನೇಕ ವಿರೋಧಗಳು ಬರಬಹುದು ಆದರೆ ಇಂದಿನ ವಿಜ್ಞಾನ ಯುಗದಲ್ಲಿಯೂ ಧರ್ಮ. ದೇವರು ಮತ್ತು ಆಚರಣೆಗಳ ಹಿನ್ನೆಲೆಯಲ್ಲಿಯೇ ಕಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಅದು ಪ್ರಗತಿ ವಿರೋಧಿ ಧೋರಣೆಯೇ ಆಗುತ್ತದೆ. ಅಜ್ಞಾನ ಮತ್ತು ಬಡತನದಿಂದ ನರಳುತ್ತಿರುವ ಭಾರತದಂತ ದೇಶದಲ್ಲಿ ಶೋಷಣಾರಹಿತವಾದ ಸಮಾಜವೊಂದರ ನಿರ್ಮಾಣವಾಗಬೇಕು ಮತ್ತು ಈ ದೇಶದ ಜನರ ಸಂಸ್ಕೃತಿಯ ಪ್ರಮುಖ ಅಂಗಗಳಾದ ಜಾನಪದ ಕಲೆ ಮತ್ತು ಸಾಹಿತ್ಯ ಸಂಗೀತಗಳು ಉಳಿಯಬೇಕು. ಇದು ದೃಂದದಲ್ಲಿರುವ ಮನಸ್ಸೊಂದರ ಆಲೋಚನೆ ಅನ್ನಿಸಿದರೂ ಈ ಎರಡೂ ಆಗಬೇಕಾದುದು ಅಗತ್ಯ. ಇದರ ಜೊತೆಗೆ ಇನೆರಡು ಅಂಶಗಳನ್ನು ಅವರು ಪ್ರಸ್ತಾಪಿಸುತ್ತಾರೆ. ಅವುಗಳೆಂದರೆ- ಸಂಘ -ಸಂಸ್ಥೆಗಳು ಜಾನಪದಕ್ಕಾಗಿಯೇ ಹುಟ್ಟಿಕೊಳ್ಳಬೇಕಾದ ಅನಿವಾರ್ಯತೆ. ಸರ್ಕಾರ ಕಲಾವಿದರಲ್ಲಿ ಆತ್ಮವಿಶ್ವಾಸ ತುಂಬಬೇಕಾದ ರೀತಿ.
ಪಾಶ್ಚಾತ್ಯ ದೇಶಗಳಂತೆ ಶುದ್ದ ಮನೋರಂಜನೆ ಕಲೆಯಾಗಿಸಿ ವಾಣಿಜ್ಯೀಕರಣಗೊಳಿಸಬೇಕೆ?
ಹೌದು ಈ ಕಲೆಯಯನ್ನು ಮಾತ್ರವಲ್ಲ ಯಾವುದೇ ಕಲೆ ಇಂದಿನ ಸಮಾಜದಲ್ಲಿ ಉಳಿಯಬೇಕಾದರೆ ಅದು ವಾಣಿಜ್ಯೀಕರಣಗೊಳ್ಳಲೇ ಬೇಕು. ಇಲ್ಲವಾದರೆ ಅದಕ್ಕೆ ಉಳಿಗಾಲವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಈ ಕಲೆಯನ್ನು ವಿದೇಶಗಳು ಸ್ವೀಕರಿಸಿ ತಮ್ಮ ಪರಿಸರ ಹಾಗೂ ಸಂಸ್ಕೃತಿಗೆ ಅನುಗುಣವಾಗಿ ಹೊಂದಿಸಿಕೊಂಡು ಶುದ್ದಾಂಗವಾಗಿ ವಾಣಿಜ್ಯೀಕರಣಗೊಳಿಸಿದೆ. ಹಾಗಾಗಿ ಅಲ್ಲಿ ಗೊಂಬೆಯಾಟಕ್ಕಾಗಿ ಹಲವಾರು ವೃತ್ತಿಪರ ಸಂಸ್ಥೆಗಳು ಹುಟ್ಟಿಕೊಂಡಿದ್ದು ಸಾಕಷ್ಟು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿದು ಬರುತ್ತದೆ. ಈ ಮಾದರಿಯನ್ನು ನಾವು ಸಂಪೂರ್ಣ ಅನುಕರಿಸಬೇಕೆಂದು ಹೇಳಿದರೆ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತೇವೆ. ಏಕೆಂದರೆ ನಮ್ಮ ನೆಲೆದಲ್ಲಿ ಈ ಕಲೆ ಕೇವಲ ಮನೋರಂಜನೆಗೆ ಮೀಸಲಾದ ಕಲೆಯಲ್ಲ. ಬದಲಿಗೆ ನಮ್ಮ ಪರಂಪರೆಯನ್ನು ಮುಂದಿನ ತಲೆಮಾರಿಗೆ ರವಾನಿಸುವ, ಪ್ರೇಕ್ಷಕರಿಗೆ ಸಾಮಾಜಿಕ ಜಾಗೃತಿಯನ್ನು ಉಂಟುಮಾಡುವ, ಮಾನವನ ಅನೇಕ ರೀತಿಯ ಸಮಸ್ಯೆಗಳಿಗೆ ಪರಿಹಾರ ರೂಪವಾಗಿರುವ ಕಲೆಯಾಗಿದೆ. ಆದ್ದರಿಂದ ನಮ್ಮ ಈ ನೆಲೆದ ತೊಗಲುಗೊಂಬೆಯಾಟ ಕೇವಲ ಮನೋರಂಜನೆಯಾಗದೆ ತನ್ನ ಮೂಲೋದ್ದೇಶಗಳ ಜೊತೆಗೆ ಆಧುನಿಕ ಸಮಾಜಕ್ಕೆ ಮನೋರಂಜನೆಯೊದಗಿಸುವ ಮೂಲಕ ವಾಣಿಜ್ಯೀಕರಣ ಗೊಳ್ಳಬೇಕಿದೆ. 
ವಿದ್ಯಾವಂತ ಯುವ ಜನತೆ ಈ ಕಲಾ ಲೋಕಕ್ಕೆ ಪ್ರವೇಶಿಸಿ ಹೊಸ ರೂಪ ಕೊಡಲು ಪ್ರಯತ್ನಿಸಬೇಕೆ?
ಹೌದು ವಿದ್ಯಾವಂತ ಯುವ ಜನ ಪರಂಪರೆ ಮತ್ತು ಅದರ ಜ್ಞಾನಗಳ ಬಗ್ಗೆ ತೀವ್ರವಾದ ತಾತ್ಸಾರ ಹಾಗೂ ನಿರ್ಲಕ್ಷೆ ಮಾಡುತಿದ್ದು ಇದರಿಂದ ಪಾರಂಪರಿಕ ಕಲೆ ಸಾಹಿತ್ಯ ಮತ್ತಿತರ ಜ್ಞಾನ ಧಾರೆಗಳ ಮುಂದುವರಿಕೆಗೆ ತೀವ್ರ ಹಿನ್ನೆಡೆ ಉಂಟಾಗಿದೆ. ಹಾಗಾಗಿ ಈ ಸಮುದಾಯ ಜನಪದ ಕಲೆಯಂತಹ ಕ್ಷೇತ್ರಕ್ಕೆ ಆಸಕ್ತಿಯಿಂದ ಪ್ರವೇಶ ಪಡೆದು ನಿಷ್ಟೆ ತೋರಿದರೆ ಖಂಡಿತಾ ಈ ಕಲೆ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಮುಂದುವರೆಯುತ್ತದೆ. ಅನಕ್ಷರಸ್ಥ ಕಲಾವಿದರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಈ ಕಲೆಯನ್ನು ಮುಂದುವರೆಸಬಹುದು. ಇಲ್ಲಿ ವಿದ್ಯಾವಂತ ಯುವಕರು ಮಾತ್ರವಲ್ಲ ಇಡೀ ಯುವ ಸಮುದಾಯ ಅಂದರೆ ಹೊಸ ತಲೆಮಾರಿನ ಜನ ಈ ಕಲೆಯ ಪ್ರದರ್ಶನದಲ್ಲಿ ಭಾಗಿಯಾಗಬೇಕು ಹೀಗೆ ಆಗುವುದಾದರೆ ತೊಗಲು ಗೊಂಬೆಯಾಟ ಇನ್ನಷ್ಟು ಕಾಲ ನಮ್ಮ ನಡುವೆ ರಿಲೆವೆಂಟಾಗಿ ಉಳಿಯಬಲ್ಲದು. 
ಶಿಕ್ಷಣದ ಮಾದ್ಯಮವಾಗಿ ಬಳಸಿ ಕೊಳ್ಳಬೇಕೆ?
 ಇಂದು ಶಿಕ್ಷಣ ಕ್ಷೇತ್ರ ಸಾಕಷ್ಟು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಸಮರ್ಥವಾಗಿದೆ. ಅದರಲ್ಲೂ ಮುಖ್ಯವಾಗಿ ಮಾಹಿತಿ ತಂತ್ರಜ್ಞಾನದ ಬಹಳಷ್ಟು ಸಹಾಯವನ್ನು ಪಡೆದು ಮನ್ನೆಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಹಳೆಯ ಕಾಲದ ಉಳಿಕೆಯಾಗಿರುವ ತೊಗಲುಗೊಂಬೆಯ ಕಲೆಯನ್ನು ಶಿಕ್ಷಣ ಮಾದ್ಯಮಲ್ಲಿ ಬಳಸಿಕೊಳ್ಳುವುದೆಂದರೆ ಅಸಂಬದ್ಧವೆನಿಸಬಹುದು. ಆದರೆ ಮಕ್ಕಳ ಮನಸ್ಸಿಗೆ ಈ ಗೊಂಬೆಯಾಟ ತೀವ್ರ ಕೂತೂಹಲ ಮೂಡಿಸುವುದರಿಂದ ಇವುಗಳ ಮೂಲಕ ಕಲಿಕೆ ಸುಗಮವಾಗಬಲ್ಲದು.  
ನಮ್ಮ ದೇಶ ಸಂಪ್ರದಾಯಬದ್ದವಾಗಿರುವ ಕಾರಣ ಕಲೆಯನ್ನು ಸಾಂಪ್ರದಾಯಿಕ ನೆಲೆಯಲ್ಲಿ ಮುಂದುವರೆಸಬೇಕೆ?
ಕಾಲಕ್ಕೆ ಹೊಂದಿಕೊಂಡಂತೆ ಮಾರ್ಪಾಡುಗಳನ್ನು ಮಾಡಿಕೊಂಡು ಕಲೆಯನ್ನು ಉಳಿಸಬೇಕೆಂಬ ಅಭಿಪ್ರಾಯಗಳು ಸಾಮಾನ್ಯವಾಗಿ ಬರುತ್ತವೆ. ಗೊಂಬೆಯಾಟದ ಮೂಲಕ ಹೊಸ ಕಾಲದ ಕಥೆ ಹೇಳುವ ಪ್ರಯತ್ನ ಮಾಡುವುದು ಕಲೆಯ ಪುನರುಜ್ಜೀವನದ ನಿಟ್ಟಿನಲ್ಲಿ ನಡೆಯುವ ಒಳ್ಳೆಯ ಪ್ರಯತ್ನವೇನೊ ನಿಜ. ಆದರೆ ಹೀಗೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುವ ಜಾನಪದ ಕಲೆಗಳು ಕಳೆದು ಹೋದದ್ದೆ ಹೆಚ್ಚು. ತಂತ್ರಜ್ಞಾನವನ್ನು ಬಳಸಿಕೊಂಡು ತೊಗಲುಗೊಂಬೆಗೆ ಜೀವ ತುಂಬುವ ಪ್ರಯತ್ನಗಳಾಗುವ ನಿಟ್ಟಿನ ಚಿಂತನೆಗಳು ಸದ್ಯದ ಅಗತ್ಯ.- ಕುಮಾರ ಎಸ್.
ಗೊಂಬೆಯಾಟವನ್ನು ಹೇಗೆ ಹೊಸಕಾಲಕ್ಕೆ ಹೊದಿಸಿಕೊಂಡು ಮುಂದುವರೆಸಬೇಕೆಂಬುದಕ್ಕೆ ಇಂದುಶ್ರೀ ಅವರು ಮಾಡುತ್ತಿರುವ ಡಿಂಕು ಪ್ರಯೋಗ ಮಾದರಿಯೆನಿಸುತ್ತದೆ. ಸಂಗೀತ ಮಾತು ಮತ್ತಿತರ ಅಂಶಗಳಲ್ಲಿ ಆಧುನಿಕ ಸಾಧ್ಯತೆಗಳನ್ನು ಬಳಸಿಕೊಂಡು ಮುಂದುವರೆಸ ಬೇಕಾಗುತ್ತದೆ. ಇದಕ್ಕೆ ಆಧುನಿಕ ವಿಜ್ಞಾ ತಂತ್ರಜ್ಞಾನದ ತಿಳುವಳಿಕೆ ಬೇಕಾಗುತ್ತದೆ.


ಚಿತ್ರಗಳು : ಅಂತರ್ಜಾಲದ ಮೂಲದಿಂದ
*  ದಿನಾಂಕ : ೧೭.೦೧.೨೦೧೫ ರಂದು ಚಿತ್ರದುರ್ಗದಲ್ಲಿ ನಡೆದ ಯಕ್ಷಗಾನ ಬಯಲಾಟ ರಂಗ ಸಂಭ್ರಮ ಕಾರ್ಯಕ್ರಮದಲ್ಲಿ ಮಂಡಿಸಿದ ಪ್ರಬಂಧ

ನೀರಾವರಿ ಹೋರಾಟದ ಸoಗಾತಿ ಹಲಗೆ,ಡೊಳ್ಳು







ನೀರಾವರಿ ಹೋರಾಟಕೆ ಹರಿದುಬಂತು ಜನಸಾಗರ
************************************************
ಕರ್ನಾಟಕ ನೀರಾವರಿ ವೇದಿಕೆ ಹಾಗೂ ನಾರಾಯಣಪೂರ ಬಲದಂಡೆ 5ಎ ಕಾಲುವೆ ಜಾರಿಗಾಗಿ ಹೋರಾಟ ಸಮಿತಿಯಿಂದ ದಿನಾಂಕ: 27.1.2015ರಂದು ಮುದುಬಾಳ ಕ್ರಾಸ್ ನಿಂದ ಲಿಂಗಸುಗೂರು ಶಾಸಕರ ಕಾರ್ಯಾಲಯದವರೆಗೆ ನಡೆದ ರೈತರ ಬೃಹತ್ ಪಾದಯಾತ್ರೆಯಲ್ಲಿ 500ಕ್ಕೂ ಅಧಿಕ ರೈತರು ಭಾಗವಹಿಸಿ ತಮ್ಮ ನೀರಿನ ಹಕ್ಕನ್ನು ಕೇಳಿದರು....
******
ಹಲಗೆ ಮೇಳ 
ಡೊಳ್ಳು ವಾದ್ಯ
ಪಾದಯಾತ್ರೆಯುದ್ದಕ್ಕೂ ರೈತ ಹೋರಾಟಗಾರರ ಉಮ್ಮಸ್ಸು ಹಿಮ್ಮಡಿಸುವಂತೆ ಮಾಡಿತು...
ಈ ಯೋಜನೆ ಜಾರಿಗೊಂಡರೆ ರಾಯಚೂರು ಜಿಲ್ಲೆಯ 5 ತಾಲ್ಲೂಕಿನ ಹಲವು ಗ್ರಾಮಗಳ ಲಕ್ಷಕ್ಕೂ ಮಿಕ್ಕಿ ಎಕರೆಗೆ ನೀರು ಹರಿಯಲಿದೆ. ಇದರಿಂದ ಹೊಲ-ಮನೆ ಬಿಟ್ಟು ಹೊಟ್ಟೆ ಹೊರೆಯಲು ರೈತರು ಬೆಂಗಳೂರು, ಮಂಗಳೂರಿನಂತಹ ಮಹಾನಗರಗಳಿಗೆ ಗುಳೆ ಹೋಗುವುದು ತಪ್ಪಲಿದೆ...




ಮಂಗಳವಾರ, ಜನವರಿ 27, 2015

ಪಿ.ಯು ಕಲಿಕೆಗೆ ಜಾನಪದ ಪಠ್ಯ ಅಳವಡಿಕೆ.




  ಜಾನಪದ ಪದವೀಧರರು ನಿರಂತರವಾಗಿ ನಿರುದ್ಯೋಗದಿಂದ ಬಳಲಿದ್ದರು. ಕಾರಣ ಜಾನಪದಕ್ಕೆ ಹೇಳಿಕೊಳ್ಳುವಂತೆ ಉದ್ಯೋಗ ಸೃಷ್ಟಿಯೇ ಇಲ್ಲವಾಗಿತ್ತು. ಇದೀಗ ಪಿಯು ಕಾಲೇಜಿಗೆ ಒಂದು ಪಠ್ಯವನ್ನಾಗಿ ಜಾನಪದವನ್ನು ಕಲಿಸಲು ಸರಕಾರ ಕರಡನ್ನು ರೂಪಿಸಿದ್ದು, ಇದರ ಚರ್ಚೆಗೆ ಫೆಬ್ರವರಿ 3 ರಂದು  ವಿದ್ವಾಂಸರ ಸಭೆ ಕರೆಯಲಾಗಿದೆ. ಇದಕ್ಕೆ ಶ್ರಮಿಸಿದ  ಎಲ್ಲಾ ಹಿರಿಯರನ್ನೂ ಜಾನಪದ ಬ್ಲಾಗ್ ಪರವಾಗಿ ಅಭಿನಂದನೆ ಹೇಳುತ್ತೇವೆ.

ಸೌಜನ್ಯ:ಕನ್ನಡ ಪ್ರಭ, 28.1.2015