ಮಂಗಳವಾರ, ಫೆಬ್ರವರಿ 18, 2014

ಡಾ. ಮೂಡ್ನಾಕೂಡು ಚಿನ್ನಸ್ವಾಮಿ.









ಪರಿಚಯ ಟಿಪ್ಪಣಿ: ಹೆಚ್. ಎಸ್ ಅನುಪಮಾ
    
ಗಡಿನಾಡು ಚಾಮರಾಜನಗರ ಜಿಲ್ಲೆಯವರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ (೧೯೫೪) ಕನ್ನಡದ ಹಿರಿಯ ಕವಿಗಳಲ್ಲಿ ಒಬ್ಬರು.  ಎಂ.ಕಾಂ., ಮತ್ತು ಎಂ.ಎ. (ಕನ್ನಡ)., ಪದವೀಧರರಾದ ಇವರು ಬೆಂಗಳೂರು ಮಹಾನಗರ ಸಾರಿಗೆ ನಿಗಮದಲ್ಲಿ ನಿರ್ದೇಶಕರು (ಹಣಕಾಸು) ಹುದ್ದೆಯಲ್ಲಿದ್ದಾರೆ. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಸಮಾಜ ಸೇವೆ ಇವರ ಪ್ರವೃತ್ತಿಗಳು.  ಇದುವರೆಗೆ ೨೬ ಪುಸ್ತಕಗಳನ್ನು ಹೊರತಂದಿರುವ ಇವರ ಪ್ರಮುಖ ಆಸಕ್ತಿ ಕವಿತೆ. ಮತ್ತೆ ಮಳೆ ಬರುವ ಮುನ್ನ, ನಾನೊಂದು ಮರವಾಗಿದ್ದರೆ, ಚಪ್ಪಲಿ ಮತ್ತು ನಾನು, ಪ್ರಮುಖ ಕವಿತಾಸಂಕಲನಗಳು. ಮೋಹದ ದೀಪ, ಕಥೆ. ಕೆಂಡ ಮಂಡಲ, ಬಹುರೂಪಿ - ನಾಟಕಗಳು ಹಾಗೂ ವೈಚಾರಿಕ ಬರಹಗಳಾದ, ನೊಂದವರ ನೋವು, ಒಂದು ಕೊಡ ಹಾಲಿನ ಸಮರ, ಅಪರಿಮಿತದ ಕತ್ತಲೆ ಇವರ ಇತರ ಪ್ರಮುಖ ಕೃತಿಗಳು.

ಇವರ ಕವಿತೆಗಳು ಅನೇಕ ಭಾರತೀಯ ಭಾಷೆಗಳೂ ಸೇರಿದಂತೆ ಇಂಗ್ಲೀಷ್, ಸ್ಪ್ಯಾನಿಷ್ ಹಾಗೂ ಹೀಬ್ರೂ ಭಾಷೆಗಳಿಗೆ ಅನುವಾದಗೊಂಡಿವೆ. ಕನ್ನಡದ ಪ್ರತಿಷ್ಠಿತ ಕವಿಗೋಷ್ಠಿಗಳಲ್ಲದೆ ಅನೇಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇವರು ಕವಿತಾ ವಾಚನ ಮಾಡಿದ್ದಾರೆ.  ವೆನೆಜುಯೇಲಾ ದೇಶದ ಸರ್ಕಾರ ಸ್ಪ್ಯಾನಿಷ್ ಅನುವಾದಿತ ಕವಿತೆಗಳನ್ನು ಪ್ರಕಟಿಸಿದೆ. ಸ್ಪ್ಯಾನಿಷ್ ಭಾಷೆಗೆ ಗ್ರಂಥರೂಪದಲ್ಲಿ ಪ್ರಕಟಗೊಂಡ ಮೊದಲ ಕನ್ನಡ ಕವಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ.      

ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ತಮ್ಮದೇ ಆದ ರೀತಿಯಲ್ಲಿ ಸಕ್ರಿಯವಾಗಿರುವ ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ. ನಾಡ ಚೇತನ ಪ್ರಶಸ್ತಿ, ವಾರಂಬಳ್ಳಿ ಕಾವ್ಯ ಪ್ರಶಸ್ತಿ, ಶಿರಸಂಗಿ ಲಿಂಗರಾಜ ಸಾಹಿತ್ಯ ಪ್ರಶಸ್ತಿ ಹಾಗೂ ಬೇಂದ್ರೆ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳೂ ಸಂದಿವೆ ಮತ್ತು ೨೦೦೯ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಫೆ, ೨೦೧೦ ರಲ್ಲಿ ೨ನೇ ಚಾಮರಾಜನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ, ಏಪ್ರಿಲ್ ೨೦೧೧ ರಲ್ಲಿ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ಮತ್ತು ಜೂನ್ ೨೦೧೧ ರಲ್ಲಿ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ.

ಕೆಲವು ಕವಿತೆಗಳು

ಅಳುವ ಬುದ್ಧ

ಮುಗಿಲಿನೊಂದಿಗೆ ಮುಗುಳುನಗುತ್ತಿದ್ದ
ಬಮಿಯಾನದ ಆ ಘನಶಿಲೆಗೆ
ಕಲೆಯ ಎರಕ ಹೊಯ್ದಾಗ
ನಾನು ಬುದ್ಧ ಎಂದಿತು

ಮೇಘಧೂಪ, ಸೂರ್ಯನಾರತಿ
ಬೆಳದಿಂಗಳಿನಭಿಷೇಕದೊಂದಿಗೆ
ಸದಾ ಕಂಗೊಳಿಸುವ ಮೂರ್ತಿ 
ನಾನು ಘನ ಮೌನಿ ಎಂದಿತು

ಒಂದು ದಿನ ಶಿಲಾಯುಗದ
ಪಳಿಯುಳಿಕೆ ಗುಂಪೊಂದು ದಾಂಧಲೆ ಎಬ್ಬಿಸಿದಾಗ

ನೀನು ಹೊಡಿ ಬಡಿ ಸಿಡಿಸು
ನಾನು ಶಿಲೆ ಅಲ್ಲದಿದ್ದರೆ 
ಅದರೊಳಗಿನ ಪಾವಕ

ನಿನ್ನ ಮುತ್ತಾತನನ್ನು ಕೇಳು
ನನ್ನನ್ನು ಯಾಕೆ ಬಿಚ್ಚಿಟ್ಟ ಎಂದಿತು

ಅವರೇನು ಬೆಚ್ಚಿ ಬೀಳಲಿಲ್ಲ
ಹೊಡೆದುರುಳಿಸಿಯೇ ಬಿಟ್ಟರು

೨
ಜೆನ್ ಗುರು ತಂಕ ಒಂದು ದಿನ
ದೇವಾಲಯವೊಂದರಲ್ಲಿ ತಂಗಿದ್ದ
ಕೊರೆಯುವ ಚಳಿಗೆ ಮೈ ಕಾಯಿಸಿಕೊಳ್ಳಲು
ಅಲ್ಲಿದ್ದ ಕಟ್ಟಿಗೆಯ ಮೂರ್ತಿಯೊಂದನ್ನು ಸುಟ್ಟ
ಅರ್ಚಕನಿಗೆ ಭಯವುಂಟಾಯಿತು, ಆಕ್ಷೇಪಿಸಿದ.

ಆಗ ತಂಕ ಸುಟ್ಟ ಬೂದಿಯನ್ನು ಕೆದಕಿ
ಚಿತಾಭಸ್ಮಕ್ಕಾಗಿ ಹುಡುಕತೊಡಗಿದ
ಅರ್ಚಕ, ‘ಇದು ಮೂರ್ಖತನ
ಕಟ್ಟಿಗೆ ಮೂರ್ತಿಯಲ್ಲಿ ಆತ್ಮವಿರುತ್ತದೆಯೆ ಎಂದ.

ಅದಕ್ಕೆ ತಂಕ, ‘ಹಾಗಾದರೆ
ಉಳಿದೆರಡು ಮೂರ್ತಿಗಳನ್ನು ಕೊಡು
ಚಳಿ ಹೆಚ್ಚಾಗಿದೆ ಎಂದ.

೩
ಸ್ವರ್ಗಕ್ಕೂ ಮಿಗಿಲಾದದ್ದು ನಿಸರ್ಗ
ಎಂದವನು ಬುದ್ಧ
ಶಿಲೆಯಲ್ಲಿ, ಪಾವಕದಲ್ಲಿ
ಹಿಮದಲ್ಲೂ, ನಾದದಲ್ಲೂ ಇರಬಲ್ಲಾತ

ಅರಿತವರ ನಗೆಯಲ್ಲೂ
ಅರಿಯದವರ ಅಳುವಿನಲ್ಲೂ.



ಈ ಪ್ರಮದೆಯರೇ ಹೀಗೆ
    
ಸಮಾನತೆಯ ಕೂಗು ಹಾಕುವ
ಹೆಣ್ಣಿಗೊಂದು ಸವಾಲು
ಪೂರ್ಣತ್ವಕ್ಕೆ ಬೇಡವೆ
ಗಂಡಿನ ಶಾಮೀಲು

ನಲ್ಲ ಬಳಿ ಸಾರಿದಾಗ
ತಲೆ ತಗ್ಗಿಸುವಿರೇಕೆ
ನೆಲ ಕೆದಕುವುದೇಕೆ ಕಾಲ್ಬೆರಳು
ನಾಚಿ ನೀರಾಗುವಿರೇಕೆ
ಆಯ ತಪ್ಪಿದ ನಾಡಿ ಮಿಡಿತಕ್ಕೆ
ಸ್ತಬ್ಧರಾಗುವಿರೇಕೆ

ಎದೆ ಸೆಟಿಸಿ
ಹುಬ್ಬೇರಿಸಿ
ಹಲೋ ಎಂದು ಒಮ್ಮೆ
ಕೈಕುಲುಕಿ ಬೆನ್ನು
ಚಪ್ಪರಿಸಿಬಿಡಿ

    ೨

ಹೆಣ್ಣ ಕಂಡಲ್ಲಿ
ಕುಡಿಗಣ್ಣಲ್ಲೆ ಮೀಟುವ
ಅಸಭ್ಯರು
ಗೇಲಿಮಾಡುವ ಪೋಲಿಗಳು
ಎನ್ನುವ ನೀವು
ಎದುರಿಗೆ ಬಂದ ಹುಡುಗರು
ತಿರುಗಿ ನೋಡದಿದ್ದರೆ
ಒಳಗೊಳಗೆ
ಕುದಿಯುವುದಿಲ್ಲವೇನು

ಸುಂದರ ಸಹಪಾಠಿಯೊಬ್ಬ
ನಿಮ್ಮ ಮಾತಾಡಿಸದಿದ್ದರೆ
ನಿಮ್ಮ ಸೇಡಿಗದೆಷ್ಟು ಕಿಡಿ
ನಿಮ್ಮ ನಾಲಿಗೆಗವನೆಷ್ಟು ಹಗುರ

ಬೆತ್ತಲೆ ಪೋಸ್ಟರುಗಳಿಗೆ ಬೆಂಕಿ
ಎಂದು ಕೂಗಿ
ಸ್ಟೆಲೋನನ ಮೈ ಕಟ್ಟನ್ನು
ಮನದಲ್ಲೆ ರಮಿಸುವುದಿಲ್ಲವೆ
ಟೈಸನ್ನನ ವಕ್ಷ
ದಿಂಬಾದರೆಂಥ ಚೆನ್ನ ಎಂದು
ಕನಸುವುದಿಲ್ಲವೇನು

    ೩

ನಾವೂ ದುಡಿಯುತ್ತೇವೆಂದು
ಕಛೇರಿಗೆ ಹೋದರೂ
ಗಂಡನಾದರಿಸುವ
ಗೃಹಿಣಿಯ ಕಂಡು
ಕರುಬುವುದಿಲ್ಲವೆ ಹೇಳಿ

ಅಕ್ಕ ಪಕ್ಕದವರ
ಚಿಕ್ಕ ಮಾತುಗಳಿಗೆ ಕುಗ್ಗಿ
ನನ್ನ ಗಂಡ ಸಾಹೇಬನಾಗಿದ್ದರೆ
ನನಗಿಂಥ ಪಾಡೇಕೆ
ಎಂದು ನೊಂದ ಗೆಳತಿಯರೊಂದಿಗೆ
ಕೊರಗುತ್ತೀರಿ

    ೪

‘ಗಡ್ಡ ಮೀಸೆ ಬಂದರೆ ಗಂಡು
ಮೊಲೆಮುಡಿ ಬಂದರೆ ಹೆಣ್ಣು’

ಹೆಣ್ಣು ಶೋಷಿತೆಯೆಂದು
ಹೊರಗೆ ಬಿಕ್ಕಳಿಸುತ್ತಾ
ಮನೆಗೆ ತಡವಾಗಿ ಬಂದ ಗಂಡನ
ಮುಖಕ್ಕೆ ಇಕ್ಕುವ
ನಿಮ್ಮ ಸೌಟಿಗೆ
ಶೋಷಣೆಯ ಹಲವು ಮುಖಗಳು ಗೊತ್ತು

ಪೌರುಷದ ಹೆಡೆಗಳಿಗೆ
ನೀವೆ ಪುಂಗಿನಾದ
ಗಂಡೆಂಬ ಬುಗುರಿಯನ್ನು
ಆಡಿಸುವ ದಾರ ನೀವೆ

    ೫
ಹೌದೆನ್ನಲು ಅಲ್ಲವೆನ್ನುವ
ಅತ್ತ ತಿರುಗಿ ಇತ್ತ ಮಾತಾಡುವ
ನಗುವಿಗೆ ಅಳುವಿನ
ಲೇಪ ಹಚ್ಚುವ
ಕೇಳಿದರೆ ‘ಸುಮ್ಮನೆ’ ಎಂದು ಬಿಡುವ
ಈ ಪ್ರಮದೆಯರೇ ಹೀಗೆ.



ಊರ ತೆಂಕಣ ತಜ್ಞರು

ನೆರಕೆಯಲ್ಲಿ ನಿರುಕಿಸಿದ
ಸಿಲವಾರದ ಬಟ್ಟಲು ಹಿಡಿದು ಹೊರಗೆ
ಕುಕ್ಕರಗಾಲು ಕೂತು ಒಸಿ
ಕಾಪಿ ಉಯ್ರಿ ಸೊಮ್ಯೊ ಎಂದು ಹಲುಬಿ
ಬೇಡುತ್ತಿದ್ದ ಅಪ್ಪನ ಕಂಡು ಬಿಸಿಯಾಗಿ ನಾನು
ತಳಮಳಗೊಂಡಿದ್ದು ಎಷ್ಟೋ ಸಲ.

ಹಟ್ಟಿಗೆಲ್ಲಾ ತೊಪ್ಪೆ ಸಾರಿಸಿ ಇದ್ದ
ಅರಿವಾಣ ತಪ್ಪಲೆಗಳ ತೊಳೆದು ಬಳಿದು
ತುಪ್ಪದ ದೀಪ ಉರಿಸಿ ತಪ್ಪು ಕಾಣಿಕೆ
ಕಟ್ಟಿ ನಿನ್ನ ಪಾದ ನಮ್ಮವ್ವ ಎಂದು
ಓಡೋಡಿ ಸಾಗಿ ಗುಡಿಯಾಚೆ
ಗಡಿಪಾರಾಗುತ್ತಿದ್ದ ನನ್ನವ್ವಳ ಪಾಡು ನೋಡಿ
ಹೊಟ್ಟೆ ತೊಳಸಿ ಕ್ಯಾಕರಿಸಿದ್ದು ಹಲವು ಸಲ.

ಬ್ರಾಹ್ಮಣರಿಗೆ ಮುಕ್ತಿ ಮಾರ್ಗವೇ ಸುಲಭ!
ಹೊಲೆಮಾದಿಗರಿಗೆ ಹೋಟೆಲಿನ ಮಾರ್ಗವೂ ದುರ್ಲಭ?
ಇಷ್ಟು ಪ್ರಜ್ಞಾಪೂರ್ವಕವಾಗಿ ವಿಚಾರ ಮಾಡುವ
ತಜ್ಞರಾಗಿ ತುಂಡು ಹುಡುಗರಾದ ನಾವು ಬೆಳೆದದ್ದು, ನಂತರ
ಮೇಲಿನ ಕೇರಿಯ ಮಹದೇಶ್ವರ ಕಾಫಿ ಕ್ಲಬ್‌ಗೆ ಲಗ್ಗೆ ಹಾಕಿ
ಇಡ್ಲಿ ದೋಸೆ ನುಂಗಿದ್ದು, ಊರಿನ ಮಾರಾಮಾರಿ
ಪೊಲೀಸರ ಪ್ರವೇಶ, ಇತ್ಯಾದಿಯೊಂದು ಘಟನೆ

ಇಷ್ಟಾದರೂ ಊರ ತೆಂಕಲೇ ಯಾಕೆ
ಹೊಲಗೇರಿ? ಇನ್ನೂ ಬಗೆಹರಿದಿಲ್ಲ.

ನಾನೊಂದು ಮರವಾಗಿದ್ದರೆ

ನಾನೊಂದು ಮರವಾಗಿದ್ದರೆ
ಹಕ್ಕಿ ಗೂಡು ಕಟ್ಟುವ ಮುನ್ನ
ಕೇಳುತ್ತಿರಲಿಲ್ಲ ನೀನು ಯಾವ ಕುಲ;
ಬಿಸಿಲನ್ನ ಅಪ್ಪಿಕೊಂಡಾಗ
ನೆರಳಿಗಾಗುತ್ತಿರಲಿಲ್ಲ ಮೈಲಿಗೆ;
ತಂಬೆಲರ ಕೂಡ ಎಲೆಗಳ ಸ್ನೇಹ
ಮಧುರವಾಗಿರುತ್ತಿತ್ತು. 

ಮಳೆಹನಿಗಳು ನಾನು ಶ್ವಪಚನೆಂದು
ಹಿಂದೆ ಸರಿಯುತ್ತಿರಲಿಲ್ಲ, ನಾನು
ಬೇರೂರಿ ಕುಡಿಯಿಡುತ್ತಿರುವಾಗ ಭೂದೇವಿ 
ಮಡಿಮಡಿಯೆಂದು ಓಡುತ್ತಿರಲಿಲ್ಲ.

ಪವಿತ್ರ ಗೋವು ನನ್ನ ತೊಗಟೆಗೆ ತನ್ನ ಮೈಯುಜ್ಜಿ 
ತುರಿಕೆ ತೀರಿಸಿಕೊಳ್ಳುವಾಗ ಅದರ ಅಂಗಾಂಗಗಳಲ್ಲಿ
ಅಡರಿಕೊಂಡ ಮುಕ್ಕೋಟಿ ದೇವತೆಗಳು
ನನ್ನ ಮುಟ್ಟಿಸಿಕೊಳ್ಳುತ್ತಿದ್ದರು.

ಯಾರಿಗೆ ಗೊತ್ತು?
ನನ್ನ ಅಂತ್ಯಕಾಲದಲ್ಲಿ
ಕಡಿದು ತುಂಡಾದ ಒಣ ಸೀಳೊಂದು
ಹೋಮಾಗ್ನಿಯಲ್ಲಿ ಬೆಂದು
ಪಾವನವಾಗುತ್ತಿತ್ತೇನೋ
ಅಥವಾ 
ಸತ್ಪುರುಷನೊಬ್ಬನ ಹೆಣಕ್ಕೆ ಚಟ್ಟವಾಗಿ 
ನಾಲ್ಕು ಜನ ಸಜ್ಜನರ ಹೆಗಲೇರಬಹುದಿತ್ತೆ?

ಸೋಮವಾರ, ಫೆಬ್ರವರಿ 17, 2014

ನಡುವೆ ಸುಳಿವಾತ್ಮ






ಡಾ. ಎಚ್. ಎಸ್. ಅನುಪಮಾ


‘ನನಗೆ ಸೆಮಿನಾರಿಗೆ ಬರಬಾರದಂತ ಇಲ್ಲ, ಆದರೆ.. ಎರಡು ಕಷ್ಟ ಇದೆ. ನೀವು ಬಸ್ ಚಾರ್ಜ್ ಕೊಡ್ತೀರಾ? ಯಾಕಂದ್ರೆ..’
‘ಬಸ್ ಚಾರ್ಜ್ ಅಷ್ಟೇ ಅಲ್ಲ, ನಡೆಸುತ್ತಿರುವವರು ವಿಶ್ವವಿದ್ಯಾನಿಲಯದವರು. ಅವರು ದಿನದ ಭತ್ಯೆಯನ್ನೂ, ಉಳಿಯಲು ವಸತಿ ವ್ಯವಸ್ಥೆಯನ್ನೂ ಮಾಡುತ್ತಾರೆ, ನೀವು ಬನ್ನಿ.’
‘ಅಯ್ಯೋ, ನಮಗೆಲ್ಲ ಯಾರೂ ವಸತಿ ವ್ಯವಸ್ಥೆ ಮಾಡುವುದಿಲ್ಲ, ಸುಲಭಕ್ಕೆ ರೂಮು ಕೊಡುವುದೂ ಇಲ್ಲ. ಅದ್ಕೇ..’
‘ಇಲ್ಲಮ್ಮ, ನಿಮ್ಮ ಮುಂಚಿನ ಅನುಭವ ಅನುಭವ ಹೇಗಾದರೂ ಇರಲಿ, ಖಂಡಿತವಾಗಿ ಹೇಳುತ್ತೇನೆ, ವಸತಿ ವ್ಯವಸ್ಥೆ ಮತ್ತು ಭತ್ಯೆ ಸಿಗುತ್ತದೆ, ನಾವೆಲ್ಲ ಇರುತ್ತೇವೆ, ಬರಬೇಕು..’
‘ನನ್ನ ಧ್ವನಿ ಕೇಳಿ ಬಾರಮ್ಮ ಅನ್ನಬೇಡಿ, ನನಗೆ ಹೋಗೋಬಾರೋ ಅಂದ್ರೆ ತುಂಬ ಖುಷಿ. ಪುಲ್ಲಿಂಗ ಬಳಸಿ. ಹುಡ್ಗಿಯಾಗೇ ಬೆಳೆಸಿದ್ದರು, ಆದರೆ ನಾನು ಆಪರೇಷನ್ ಮಾಡಿಸಿಕೊಂಡ ಮೇಲೆ ಗಂಡಾಗಿ ಬದಲಾಗಿದೇನೆ..’
‘ಕ್ಷಮಿಸಿ, ಪುಲ್ಲಿಂಗ ಸ್ತ್ರೀಲಿಂಗ ತಲೆಬಿಸಿಯೇ ಬೇಡ, ಬಹುವಚನ ಬಳಸುತ್ತೇನೆ. ಆಗಬಹುದೇ?’
‘ಸರಿ, ಆದ್ರೆ ನೀವು ಹೇಳಿದ ದಿನನೇ ನಂಗೆ ಸಂಗೀತ ಟೀಚರ್ ಕ್ಲಾಸ್ ಇಟ್ಟಿದಾರೆ, ಈ ವರ್ಷ ಸಂಗೀತ ಪರೀಕ್ಷೆಗೆ ಕೂತಿದೀನಿ. ಹೋದೊರ್ಷ ಡಯಾಬಿಟಿಸ್ ಹೆಚ್ಚಾಗಿ ಕೂತಿದ್ದ ಪರೀಕ್ಷೆ ಬರೆಯಕ್ಕೆ ಆಗಲಿಲ್ಲ. ಅದ್ಕೇ ಈ ವರ್ಷ ಕೂರ‍್ಲೇಬೇಕು. ಕಷ್ಟಪಟ್ಟು ಕಲೀತಿದೀನಿ. ನಾನು ಹೀಗೆ ಅಂತ ಗೊತ್ತಾದ ಮೇಲೂ ಅವ್ರು ಹೇಳ್ಕೊಡ್ತಿದಾರೆ, ಅದಕೇ ತಪ್ಪಿಸೋಕೆ ಮನಸ್ಸಿಲ್ಲ.’
ಸಂಭಾಷಣೆ ಪೂರಾ ಹೀಗೇ ಆತಂಕ, ಅನುಮಾನಗಳಲ್ಲೇ ಮುಗಿದುಹೋಯಿತು. ಅವರಿವರನ್ನು ಕೇಳಿ, ಹೇಳಿ ಅಂತೂ ತಾನು ಸೆಮಿನಾರಿಗೆ ಬರುವುದಿಲ್ಲ ಎಂದು ನಿರ್ಧಾರವಾಯಿತು! ಓ ದೇವರೇ, ಜೀವವೊಂದು ತನ್ನನ್ನೇ ತಾನು ಪಾಪಕೂಪದಲ್ಲಿ ಊಹಿಸಿಕೊಂಡು ಮುಳುಗಿದರೆ ಅದರ ಬಳಿ ಹೋಗುವುದಾದರೂ ಹೇಗೆ?
***
ಆ ರೈಲಿನಲ್ಲಿ ಕಾಲಿಟ್ಟರೆ ಅದೇನು ಬೋಗಿಯೋ, ಕಡಲೇಕಾಯಿ ಪರಿಷೆಯಾದ ಬೀದಿಯೋ ಅನುಮಾನವಾಯಿತು. ಕಾಲಬುಡದಲ್ಲಿ ಹಾಸಿನಂತೆ ಹರಡಿದ್ದ ಸೇಂಗಾ ಸಿಪ್ಪೆ, ಕಸದ ರಾಶಿ. ಕೈಲಿದ್ದ ಕಿತ್ತಳೆಹಣ್ಣು ಬಾಯಿಗೆ ಹೋಗಲೊಲ್ಲೆ ಎಂದಿತು. ಒಂದು ಗಂಟೆ ಕಳೆಯುವುದರಲ್ಲಿ ಹದಿನಾಲ್ಕು, ಹದಿನೈದರ ಆಸುಪಾಸಿನ ಹುಡುಗ ಒಂದು ಬಟ್ಟೆಯಲ್ಲಿ ಸಿಪ್ಪೆಕಸ ಒಟ್ಟುಕೂಡಿಸುತ್ತ ಬಂದ. ಎಲ್ಲ ಒಂದು, ಎರಡು ರೂ ಅವನ ಕೈಗೆ ಹಾಕಿದರು. ಬೇಡುವ ಬದಲು ಏನೋ ಕೆಲಸ ಮಾಡಿ ದುಡ್ಡು ಕೇಳುತ್ತಿದ್ದಾನಲ್ಲ, ಸಮಾಧಾನವಾಯಿತು. ನನ್ನ ಬಳಿಯಿದ್ದ ಎರಡು ಕಿತ್ತಳೆ ಅವನ ಸೇರಿದವು.
ಅವನ ಹಿಂದೇ ಆತ/ಕೆ ಬಂದ/ಳು. ಸೀರೆ ಉಟ್ಟ ದಪ್ಪ ದನಿಯ ಗಂಡಸು. ನೋಡಲು ಬಲಶಾಲಿ. ಢಾಳು ಅಲಂಕಾರ. ಗೋಟುಹಣೆಯಲ್ಲಿ ಹರಳು ಕೂರಿಸಿದ ಉದ್ದನಾಮದಂತಹ ಟಿಕ್ಲಿ. ಬಣ್ಣ ಮೆತ್ತಿದ್ದರೂ ಹೆರೆದ ಗಡ್ಡಮೀಸೆ ಕಾಣುತ್ತಿದ್ದ ಚೌಕಮುಖ. ದುಡ್ಡು ಕೊಡದಿದ್ದವರನ್ನು ತಿವಿದು, ಕಿಸೆಗೆ ಕೈಹಾಕಿ ಕಾಸು ಸೆಳೆಯುತ್ತಿದ್ದಳು. ಮತ್ತೆ ಕೆಲವರನ್ನು ಒತ್ತಿ, ಮುಟ್ಟಿ ನಕ್ಕು ಮುಂದೆ ಸರಿದಳು. ನಾನು ನಗುತ್ತ ಎರಡು ಕಿತ್ತಳೆ ಹಣ್ಣು ಕೊಟ್ಟರೆ ಗಹಗಹಿಸುತ್ತ ಸ್ವೀಕರಿಸಿ ನನ್ನ ಕೈಯನ್ನೂ, ಕಿತ್ತಳೆಯನ್ನೂ ಗಟ್ಟಿ ಅಮುಕಿದಳು. 
ನಾನು ಸಾವರಿಸಿಕೊಳ್ಳುವುದರಲ್ಲಿ ರೈಲು ಚಲಿಸತೊಡಗಿತು. ನಿಲ್ದಾಣದಲ್ಲಿರುವವರೆಲ್ಲ ಹಿಂದೆ ಓಡುತ್ತಿರುವಂತೆ ಕಾಣುವಾಗ ಅರೆ, ಇದೇನಿದು, ಆಕೆ/ತ ಕಸಗುಡಿಸಿದ ಆ ಹುಡುಗನನ್ನು ನೆಲಕ್ಕೆ ಹಾಕಿ ತುಳಿಯುತ್ತಿದ್ದಾಳೆ. ಎದ್ದು ನಿಂತು ಬಗ್ಗಿ ನೋಡುವುದರಲ್ಲಿ ರೈಲು ವೇಗ ಹೆಚ್ಚಿಸಿಕೊಂಡಿತು.
‘ಸ್ಟೇಶನ್ನಿಗೊಬ್ಬೊಬ್ರು ಚಕ್ಕಾ ಬರತಾರ ನೋಡ್ರಿ. ಇಂವ, ಅತವ ಈಕಿ ಆಟಾಟು ದಿನಕ ಒಬ್ಬೊಬ್ಬ ಹುಡುಗನ ಸಂತೀ ಬರತಾನ. ನಾ ದಿನಾ ನೋಡತೀನಲ್ಲ, ಈ ಹುಡುಗನ್ನ ತಂದು ಭಾಳ್ ದಿನಾ ಆಗಿಲ್ಲ, ಹಿಂಗ ಒದಿಯೂದು, ಬಡಿಯೂದು, ಕೊನೀಗೆ ತರಡ ಒಡಿಯೂದು..’
ಯಾವುದೋ ಜೋಕು ಕೇಳಿದಂತೆ ಇಡೀ ರೈಲೇ ನಗತೊಡಗಿದಾಗ ಸಂಕಟವೋ, ಮತ್ತೆಂಥದೋ ಹೊಟ್ಟೆಯೊಳಗೆ ನುಲಿಯತೊಡಗಿತು
***
ಇವೆಲ್ಲ ಹೆಣ್ಣೂ ಅಲ್ಲ, ಗಂಡೂ ಅಲ್ಲ, ಎರಡೂ ಆದ ಅಥವಾ ಎರಡೂ ಅಲ್ಲದ ಮೂರನೇ ಲಿಂಗದವರ ಕುರಿತ ಮಾತುಗಳು ಎನ್ನುವುದನ್ನು ನೀವು ಇಷ್ಟು ಹೊತ್ತಿಗಾಗಲೇ ಊಹಿಸಿರುತ್ತೀರಿ. ಲೈಂಗಿಕತೆ ಬಗ್ಗೆ ಮುಕ್ತ ಮಾತುಗಳನ್ನೇ ಆಡದ ಭಾರತೀಯ ಸಮಾಜ ಸಲಿಂಗಿಗಳ ಬಗೆಗೆ ಹೇಸಿಕೆ ಮತ್ತು ಅತಿ ಮಡಿವಂತಿಕೆ ಇಟ್ಟುಕೊಂಡಿದೆ. ಈಗಲೂ ಆಡಲು, ಬರೆಯಲು ತುಂಬ ಕಸಿವಿಸಿ, ದ್ವಂದ್ವ ಹುಟ್ಟಿಸುವ ವಿಚಾರ ಸಲಿಂಗರತಿಯದು. ಇದರಿಂದ ನಾನೂ ಹೊರತಲ್ಲ.

ಒಂದು ಕುಟುಂಬ ಬುದ್ಧಿಮಾಂದ್ಯ, ಅಂಗವಿಕಲ ಮಗುವನ್ನು ತನ್ನದೆಂದುಕೊಳ್ಳುತ್ತದೆ. ಒಂದು ಧರ್ಮ/ಜಾತಿ/ಪ್ರಾಂತ್ಯ ಅನಾಥರನ್ನು, ವಿಧವೆಯರನ್ನು, ಕೊಲೆಗಡುಕರನ್ನೂ ತನ್ನವರೆಂದುಕೊಳ್ಳುತ್ತದೆ. ಆದರೆ ಮೂರನೇ ಲಿಂಗಿಗಳನ್ನು ಯಾವ ಜಾತಿ, ಧರ್ಮ, ಕುಟುಂಬವೂ ಮುಕ್ತವಾಗಿ ತನ್ನದೆಂದು ಹೇಳಿಕೊಳ್ಳಲು ಹಿಂಜರಿಯುತ್ತವೆ. ಕಲಿತವರು, ಸಮಾಜದ ಬೇರೆಬೇರೆ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾದವರು, ಬರಹಗಾರರೂ ಸಹಾ ಸಲಿಂಗಿ ಎಂದಕೂಡಲೇ ‘ಏನೋ ಒಂಥರಾ’ ವರ್ತಿಸುವುದನ್ನು ನೋಡಬಹುದು. ಅವರ ಜೊತೆ ಒಂದು ಕೊಡೆಕೊಳೆಯೇ ಏರ್ಪಡದ ಸ್ಥಿತಿ ಇರುವುದರಿಂದಲೇ ಅವರ ದಲಿತತ್ವಕ್ಕಿರುವ ಹಲವು ಮುಖಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ. 
ತನ್ನದಲ್ಲದ ‘ತಪ್ಪಿಗೆ’ ನಿರಂತರ ಅವಮಾನಕ್ಕೆ, ಕ್ರೌರ್ಯಕ್ಕೆ, ಶಿಕ್ಷೆಗೆ ಒಳಗಾಗುವ ಮೂರನೇ ಲಿಂಗಿಗಳ ಜೊತೆ ಕೆಲಕಾಲ ಒಡನಾಡಿದರೆ ಒಂದು ಅನೂಹ್ಯ ಲೋಕ ತೆರೆದುಕೊಳ್ಳುತ್ತದೆ. ಉಳಿದವರ ಗಮನ ಸೆಳೆಯುವ ಪ್ರಯತ್ನವಾಗಿ ಉತ್ಪ್ರೇಕ್ಷಿತ ನಡವಳಿಕೆ-ಅಲಂಕಾರ-ಭಾವತೀವ್ರತೆ-ಹಿಂಸೆಗಳು ಮೊದಲಿಗೇ ಎದ್ದು ಕಾಣುತ್ತವೆ. ಸಮಾಜದ ನಿರಾಕರಣೆ ಆ ಸಮುದಾಯದವರಲ್ಲಿ ಎಂಥ ಐಡೆಂಟಿಟಿ ಕ್ರೈಸಿಸ್ ಹುಟ್ಟಿಸಿದೆಯೆಂದರೆ ಅಪರಿಚಿತರಾಗಿ ಬಳಿ ಹೋದರೆ ಅಸಭ್ಯವೆನಿಸುವ ನಡವಳಿಕೆ ಕಸಿವಿಸಿ ಹುಟ್ಟಿಸುತ್ತದೆ; ಆಪ್ತವಾಗಿ ಸಂಪರ್ಕ ಏರ್ಪಟ್ಟಾಗ ಹಿಂಜರಿಕೆ, ಆತ್ಮದೂಷಣೆ, ಅನುಮಾನಗಳು ಢಿಕ್ಕಿಹೊಡೆಯುತ್ತವೆ.
ಸಮಾಜವಾದರೂ ಸಲಿಂಗಿಗಳ ಕುರಿತು ಏಕಷ್ಟು ಹಿಂಜರಿಯುತ್ತದೆ? ‘ಹಿಜ್ಡಾ ನನಮಗ’ ಎಂಬ ಬೈಗಳ ಕೇಳುತ್ತೇವೆ. ಮಕ್ಕಳಾಗದ ಸೊಸೆಯನ್ನು ಆಸ್ಪತ್ರೆಗೆ ತರುವ ಅತ್ತೆ ‘ನನ ಮಗ ಚಕ್ಕಾ ಅಲ್ಲ, ಇವ್ಳದ್ದೇ ಏನೋ ಮಿಸ್ಟೇಕು, ಸ್ವಲ್ಪ ಸರಿಮಾಡಿನೋಡಿ’ ಎನ್ನುತ್ತಾರೆ. ಬಹುಶಃ ಹೆಣ್ಣು-ಗಂಡು ಎಂಬ ಎರಡೇ ಲಿಂಗಗಳಿರುವ ಬೈನರಿ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದರಿಂದ ಮೂರನೆಯದರ ಬಗೆಗೆ ಅಸಡ್ಡೆ, ತಿರಸ್ಕಾರ ಉಳಿದುಹೋಗಿದೆಯೆ? 
ಯಾವ ದೇಶದ ಚರಿತ್ರೆ-ಪುರಾಣಗಳ ತೆಗೆದು ನೋಡಿದರೂ ಮೂರನೇ ಲಿಂಗದ ಅಸ್ತಿತ್ವ ಎಲ್ಲ ಕಾಲದಲ್ಲೂ ಇರುವುದು ಕಂಡುಬರುತ್ತದೆ. ಭಾರತದಲ್ಲಿ ವಾತ್ಸಾಯನನ ಕಾಮಸೂತ್ರ ಯಾವ ಹಿಂಜರಿಕೆಯಿಲ್ಲದೆ ಸ್ಪಷ್ಟ ಮಾತುಗಳಲ್ಲಿ ಸಲಿಂಗ ಸಂಬಂಧವನ್ನು ವಿವರಿಸಿತು. ಖಜುರಾಹೋ ಸೇರಿದಂತೆ ಅನೇಕ ದೇವಾಲಯಗಳ ಶಿಲ್ಪಗಳೂ ಕೂಡಾ ಲೈಂಗಿಕತೆಯ ವಿವಿಧ ಭಂಗಿಗಳನ್ನು ನಿರೂಪಿಸುತ್ತ ಸಲಿಂಗ ಸಂಬಂಧವನ್ನೂ ಚಿತ್ರಿಸಿದವು. ಕಾವ್ಯ, ಶಿಲ್ಪ, ಸ್ಮೃತಿ, ನೀತಿಸಂಹಿತೆಗಳು ಅವರನ್ನು ಗುರುತಿಸಿವೆ. ಭಾರತೀಯ ಸಮಾಜವು ಹಿಜ್ರಾ, ಚಕ್ಕಾ, ಅರಾವಣಿ, ಸಲಿಂಗಿ ಎಂದೆಲ್ಲ ಬೇರೆಬೇರೆ  ಹೆಸರುಗಳಿಂದ ಕರೆದು, ಅವರು ಹಾಗಾಗಲು ಕಾರಣವೇನೆಂದು ರಾಮಾಯಣ-ಮಹಾಭಾರತಗಳಲ್ಲಿ ಕತೆ ಸೇರಿಸಿತು. ಅರ್ಧನಾರೀಶ್ವರ ಶಿವ, ಬಹುಚರಾದೇವಿ, ಮಹಾಭಾರತದ ಶಿಖಂಡಿ, ಕುರುಕ್ಷೇತ್ರ ಯುದ್ಧದ ಹಿಂದಿನ ದಿನ ಕೃಷ್ಣನನ್ನು ಮದುವೆಯಾದ ಅಹಿರಾವಣ, ಶಿವ-ಮೋಹಿನಿ ಸಂಗಮದಿಂದ ಹುಟ್ಟಿದ ಷಣ್ಮುಖ - ಇವರೆಲ್ಲ ದೇವರಾದರು. ಇದನ್ನೆಲ್ಲ ಗಮನಿಸಿದರೆ ಮೂರನೇ ಲಿಂಗದ ಅಸ್ತಿತ್ವ ಮತ್ತು ಸಲಿಂಗರತಿ ಭಾರತೀಯ ಸಮಾಜಕ್ಕೆ ಮೊದಲಿನಿಂದ ಗೊತ್ತಿತ್ತು. ಅವರಿಗೆ ಧಾರ್ಮಿಕ ಸ್ಥಾನ ಕಲ್ಪಿಸಲೆಂದೇ ಪುರಾಣದ ಕಥೆ, ಉಪಕಥೆಗಳನ್ನು ಸೇರಿಸಲಾಯಿತು. 
 
ಆದರೆ ಅನಾದಿಯಿಂದ ಸಲಿಂಗಕಾಮ ನೈಸರ್ಗಿಕ ಎಂದು ಜಗತ್ತಿನ ಯಾವ ಧರ್ಮವೂ, ಸಮಾಜವೂ ಒಪ್ಪಿಕೊಳ್ಳಲಿಲ್ಲ. ಕೌಟಿಲ್ಯನ ಅರ್ಥಶಾಸ್ತ್ರ ಹೆಣ್ಣು ಯಾ ಗಂಡಿನೊಡನೆ ಯೋನಿ ಹೊರತಾದ ಲೈಂಗಿಕತೆ ಅಪರಾಧವೆಂದು ಅತಿಕಡಿಮೆ ದಂಡ ವಿಧಿಸುವಂತೆ ಸೂಚಿಸಿತು. ಮನುಸ್ಮೃತಿಯು ಸಲಿಂಗಕಾಮವನ್ನು ನಿಯಂತ್ರಿಸಬೇಕಾದ ಅಪರಾಧ ಎಂದು ಕರೆಯಿತು. ೧೮೬೦ಕ್ಕಿಂತ ಮುಂಚೆ ಸಲಿಂಗಕಾಮ ಕಾನೂನು ಪ್ರಕಾರ ಅಪರಾಧವಾಗಿರಲಿಲ್ಲ. ೧೫೪ ವರ್ಷ ಕೆಳಗೆ ೧೮೬೦ರಲ್ಲಿ ರೂಪುಗೊಂಡ ಇಂಡಿಯನ್ ಪೀನಲ್ ಕೋಡ್ ತನ್ನ ೩೭೭ನೇ ಸೆಕ್ಷನ್ ಪ್ರಕಾರ ಸಲಿಂಗರತಿಯನ್ನು ಅಪರಾಧ, ಅನೈಸರ್ಗಿಕ ಎನ್ನುತ್ತದೆ. ಆ ಕಾನೂನಿನಡಿ ಬಂಧನಕ್ಕೊಳಗಾಗಿ ಶಿಕ್ಷೆ ಪಡೆದವರ ಪ್ರಮಾಣ ಇಲ್ಲವೆನ್ನುವಷ್ಟು ಕಡಿಮೆಯಾದರೂ, ಪೊಲೀಸರು ಲೈಂಗಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಲು ಆ ಕಾನೂನು ಸಾಕಷ್ಟು ಅವಕಾಶ ಕಲ್ಪಿಸಿತು. ಸಮಾಜದಿಂದಷ್ಟೇ ಅಲ್ಲ, ಕಾನೂನಾತ್ಮಕವಾಗಿಯೂ ಮೂರನೇ ಲಿಂಗಿಗಳಿಗೆ ಅಸ್ತಿತ್ವವಿಲ್ಲದೇ ಸಲಿಂಗಕಾಮಿ ಎಂದುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಯಿತು. ಅವರು ಒಳಹೊರಗೆ ಏನು, ಹೇಗಿರಬಹುದು ಎಂಬ ದುಷ್ಟ ಕುತೂಹಲದ ಹೊರತಾಗಿ ಮತ್ತಿನ್ಯಾವ ಭಾವವೂ ಜನರಲ್ಲಿ ಸುಳಿಯಲಿಲ್ಲ. ಅವರನ್ನು ಬಳಕೆ ಮಾಡಿಕೊಳ್ಳುವವರಿಗೂ ಅವರ ಎದೆಯ ಮಾತು-ಕಷ್ಟ-ಅನುಭವಗಳನ್ನು ಕೇಳುವ ಗರಜು ಬೀಳಲಿಲ್ಲ. 
ಹೀಗೆ ಎಲ್ಲ ಬಗೆಯ ತಾರತಮ್ಯ, ವಂಚನೆಗೆ ಒಳಗಾದ ಲೈಂಗಿಕ ಅಲ್ಪಸಂಖ್ಯಾತರ ಮಾನವಹಕ್ಕುಗಳನ್ನು ರಕ್ಷಿಸಬೇಕೆಂದು ಅಮರ್ತ್ಯಸೆನ್ ಹಾಗೂ ವಿಕ್ರಮ್ ಸೇಠ್ ಸೇರಿದಂತೆ ಹಲವರು ಪ್ರತಿಪಾದನೆ ಮಾಡುತ್ತಲೇ ಇದ್ದರು. ಸರ್ಕಾರೇತರ ಸಂಸ್ಥೆಗಳೂ ಕ್ರಿಯಾಶೀಲವಾಗಿದ್ದವು. ೧೯೯೪ರಲ್ಲಿ ಭಾರತ ಮೂರನೇ ಲಿಂಗವನ್ನು ಕಾನೂನು ಪ್ರಕಾರ ಗುರುತಿಸಿ ಅವರಿಗೆ ಎಲ್ಲ ಮೂಲಭೂತ ಹಕ್ಕುಗಳನ್ನೂ ನೀಡಿತು. ೧೯೯೮ರಲ್ಲಿ ಶೋಭಾ ನೆಹ್ರು ಎಂಬ ಹಿಜ್ರಾ ಹರಿಯಾಣದ ಹಿಸ್ಸಾರ್‌ನ ಪುರಸಭೆಗೆ ಆಯ್ಕೆಯಾದರು. ೨೦೦೬ರಲ್ಲಿ ಪಾಟ್ನಾ ನಗರಸಭೆ ತೆರಿಗೆ ಸಂಗ್ರಹಣಾಕಾರರ ಸಹಾಯಕರನ್ನಾಗಿ ಮೂರನೇ ಲಿಂಗಿಗಳನ್ನು ನೇಮಿಸಿ ೪% ಕಮಿಷನ್ ಕೊಡತೊಡಗಿತು. ಅತಿ ಹೆಚ್ಚು ಅತ್ಯಾಚಾರ, ಲೈಂಗಿಕ ಹಿಂಸೆ, ದೌರ್ಜನ್ಯಕ್ಕೊಳಗಾಗುವ ಸಲಿಂಗಿ ಸಮುದಾಯ ಅತ್ಯಾಚಾರ ಕಾನೂನು ಬದಲಿಸಲು ನೇಮಕವಾದ ವರ್ಮಾ ಸಮಿತಿ ಎದುರು ಹಲವು ಬಾರಿ ಹೋಯಿತು. ಆದರೆ ಬದಲಾದ ಕಾನೂನಿನಲ್ಲಿ ಆ ಸಮುದಾಯದ ಬೇಡಿಕೆಗಳಿಗೆ ಮನ್ನಣೆಯಿರಲಿಲ್ಲ. ಅದರ ಬೆನ್ನಲ್ಲೇ ಬಂದಿರುವ ಸರ್ವೋಚ್ಛ ನ್ಯಾಯಾಲಯದ ತೀರ್ಪು ದೇಶಾದ್ಯಂತ ಆ ಸಮುದಾಯದವರಷ್ಟೇ ಅಲ್ಲ, ಸರ್ಕಾರೇತರ ಮತ್ತು ಪ್ರಗತಿಪರ ಮನಸ್ಸಿನ ಸಂಘಟನೆಗಳೂ ತೀರ್ಪನ್ನು ಪ್ರಶ್ನಿಸುವಂತೆ ಮಾಡಿದೆ. ಆ ಸಮುದಾಯ ಸಂಘಟಿತವಾಗುತ್ತ, ತನ್ನ ಅನುಭವ ಹಂಚಿಕೊಳ್ಳುತ್ತ, ಬರೆಯುತ್ತ, ಹಕ್ಕುಗಳಿಗೆ ಹೋರಾಡತೊಡಗಿದೆ. 
೨೦೦೯ರಲ್ಲಿ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿ ಸಲಿಂಗ ಕಾಮವನ್ನು ಅಪರಾಧೀಕರಣಗೊಳಿಸುವುದು ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಹೇಳಿತು. ಸಲಿಂಗಕಾಮಿಯೆಂದು ಹೇಳಿಕೊಳ್ಳುವುದು ಅಪರಾಧವಲ್ಲ ಎಂದಮೇಲೆ ಅವರ ಸಂಘಟನೆಗಳು ಬಲವಾದವು. ಆದರೆ ಹೈಕೋರ್ಟ್ ತೀರ್ಪಿನ ವಿರುದ್ಧ ಹಲವರು ಧ್ವನಿಯೆತ್ತಿದರು. ಪ್ರಕರಣ ಸುಪ್ರೀಂಕೋರ್ಟಿನ ಮೆಟ್ಟಿಲೇರಿತು. ೨೦೧೨ರ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡುತ್ತ ‘sಸಲಿಂಗಕಾಮವನ್ನು ಅಪರಾಧೀಕರಣಗೊಳಿಸುವುದನ್ನು ನಿಲಿಸಬೇಕು. ಈ ಮೊದಲು ಅನೈಸರ್ಗಿಕವೆಂದು ಅಮಾನ್ಯವಾಗಿದ್ದ ಲಿವ್‌ಇನ್ ಸಂಬಂಧ, ಸಿಂಗಲ್ ಪೇರೆಂಟ್, ಕೃತಕ ಗರ್ಭಧಾರಣೆ ಇತ್ಯಾದಿಗಳನ್ನು ನ್ಯಾಯವ್ಯವಸ್ಥೆ ಮತ್ತು ಸಮಾಜ ಹೇಗೆ ಮಾನ್ಯಮಾಡಿವೆಯೋ ಹಾಗೇ ಬದಲಾಗುತ್ತಿರುವ ಕಾಲದಲ್ಲಿ ಸಲಿಂಗಕಾಮವನ್ನು ನೈಸರ್ಗಿಕ ಎಂದೇ ಭಾವಿಸಬೇಕು’ ಎಂದು ಹೇಳಿತು. ಆದರೆ ಒಂದೇ ವಾರದಲ್ಲಿ ಕೇಂದ್ರ ಗೃಹ ಸಚಿವಾಲಯವು ಸುಪ್ರೀಂಕೋರ್ಟಿನ ತೀರ್ಪಿಗೆ ವಿರುದ್ಧವಾಗಿ ಸಲಿಂಗ ಕಾಮ ಅನೈತಿಕ ಮತ್ತು ಸಾಮಾಜಿಕ ಸಂಬಂಧಗಳನ್ನೇ ಹಾಳುಮಾಡುವ ಸಂಗತಿ ಎಂದು ಬಣ್ಣಿಸಿತು. ಆದರೆ ಹಾಗೆ ಹೇಳಿದ ಮರು ವಾರದಲ್ಲಿ ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳುವುದು ತಪ್ಪೇನಲ್ಲ ಎಂದು ತಿರುವುಮುರುವು ಹೇಳಿಕೆ ಕೊಟ್ಟಿತು. ಇದನ್ನು ಗಮನಿಸಿದ ಸುಪ್ರೀಂಕೋರ್ಟ್ ‘ಅದು ಅಲ್ಲ, ಇದು ಅಲ್ಲ ಎಂದು ಕೋರ್ಟಿನ ಸಮಯ ಹಾಳುಮಾಡಬೇಡಿ’ ಎಂದು ಪರಿಶೀಲನೆಗೆ ಸಮಯ ನೀಡಿತು. ಹಲವು ಗುಂಪುಗಳು ತಂತಮ್ಮ ಅಭಿಪ್ರಾಯ ದಾಖಲಿಸಿದವು. ಕೊನೆಗೆ ಡಿ. ೧೧ರಂದು ಕೋರ್ಟು ತೀರ್ಪು ನೀಡಿ, ‘ಒಪ್ಪಿಗೆಯಿಲ್ಲದ, ಅಪ್ರಾಪ್ತರೊಡನೆಯ ಅಯೋನಿ-ಶಿಶ್ನ ಲೈಂಗಿಕತೆಯನ್ನು ಸೆಕ್ಷನ್ ೩೭೭ ಐಪಿಸಿ ಮೊದಲಿನಂತೇ ಅಪರಾಧವೆಂದು ಪರಿಗಣಿಸುತ್ತದೆ. ಅಪ್ರಾಪ್ತನೆಂದರೆ ೧೮ ವರ್ಷಕ್ಕಿಂತ ಕಡಿಮೆ ಪ್ರಾಯದ ಒಪ್ಪಿಗೆ ನೀಡುವಷ್ಟು ಪ್ರೌಢನಲ್ಲದ ವ್ಯಕ್ತಿ. ಸಂಸತ್ತು ಕಾನೂನಿಗೆ ತಿದ್ದುಪಡಿ ತರುವವರೆಗೆ ಈ ನಿರ್ದೇಶನ ಅನ್ವಯಿಸುತ್ತದೆ’ ಎಂದು ತೀರ್ಪು ನೀಡಿತು.
ಧರ್ಮಧರ್ಮಗಳ ನಡುವೆ ಮತ್ಯಾವುದೇ ವಿಷಯಕ್ಕೆ ಭಿನ್ನಮತವಿರಲಿ, ಅಸಹನೆಯಿರಲಿ, ಈ ವಿಷಯದಲ್ಲಿ ಎಲ್ಲ ಧರ್ಮಗಳೂ ಒಂದೇ ನಿಲುವು ತಳೆದವು. ಆ ಸಮುದಾಯದವರ ದಾರುಣ ಬದುಕಿಗೆ ಬೆಂಬಲವಾಗಿ ನಿಲ್ಲದ ಧರ್ಮಗಳು ಸಲಿಂಗಿಗಳ ಲೈಂಗಿಕತೆಯನ್ನು ಅಧಾರ್ಮಿಕ ಎಂದವು! ಬಾಬಾ ರಾಂದೇವ್ ತಾನು ಯೋಗದಿಂದ ಸಲಿಂಗರತಿ ಎನ್ನುವ ಕಾಯಿಲೆಯನ್ನು ಗುಣಪಡಿಸುವುದಾಗಿ ಹೇಳಿಕೊಂಡರೆ, ವಿಎಚ್‌ಪಿ ತೀರ್ಪನ್ನು ಬೆಂಬಲಿಸಿತು. ಜೊತೆಗೆ ಹಿಂದೂ, ಇಸ್ಲಾಂ, ಕ್ರೈಸ್ತ, ಯಹೂದಿ ಧರ್ಮಗಳ ಧಾರ್ಮಿಕ ಮುಖಂಡರು ಸಲಿಂಗಕಾಮಕ್ಕೆ ಧರ್ಮಸಮ್ಮತಿಯಿಲ್ಲ, ಅದು ಅನೈಸರ್ಗಿಕ ಎಂದರು. 
ಆದರೆ ನಮ್ಮೊಳಗಿನ, ಹೊರಗಿನ ನಿಸರ್ಗವನ್ನು ನೋಡಲಾರದಷ್ಟು ಧಾವಂತದ ಈ ಬದುಕಿನಲ್ಲಿ ಯಾವುದು ನೈಸರ್ಗಿಕ, ಯಾವುದು ಅನೈಸರ್ಗಿಕ ಎಂದು ವಿಂಗಡಿಸುವುದು ಸುಲಭವಲ್ಲ. ಅದರ ಅವಶ್ಯಕತೆಯೂ ಇಲ್ಲ. ಅಗತ್ಯವಾಗಿರುವ, ಅನಿವಾರ್ಯವಾಗಿರುವ ಎಲ್ಲವೂ ನೈಸರ್ಗಿಕವೇ ಎನ್ನುವುದು ಮಾನವಹಕ್ಕು ಯುಗದ ಮಾತು.
***
ವೈದ್ಯಕೀಯವಾಗಿ ಸರಳಗೊಳಿಸಿ ಹೇಳುವುದಾದರೆ ಘಿಘಿ ವರ್ಣತಂತು ಹೊಂದಿರುವ ಜೀವಿ ಹೆಣ್ಣಾದರೆ, ಘಿಙ ವರ್ಣತಂತು ಹೊಂದಿರುವ ಜೀವಿ ಗಂಡಾಗಿರುತ್ತದೆ. ಪ್ರಾಣಿ ಸಾಮ್ರಾಜ್ಯದಲ್ಲಿ, ಅದರಲ್ಲೂ ಬೆನ್ನುಹುರಿಯಿಲ್ಲದ ಪ್ರಾಣಿಗಳಲ್ಲಿ (ಅಕಶೇರುಕಗಳು ಮತ್ತು ಅದಕ್ಕಿಂತ ಕೆಳ ಸ್ತರದ ಬಸವನಹುಳು, ಕೆಲ ಜಾತಿಯ ಮೀನು, ಎರೆಹುಳ ಇತ್ಯಾದಿಗಳಲ್ಲಿ) ಒಂದೇ ಪ್ರಾಣಿಯು ಎರಡೂ ಲಿಂಗಗಳ ಲೈಂಗಿಕ ಅಂಗಾಂಗಗಳನ್ನು ಹೊಂದಿರುತ್ತದೆ. ಸಂಗಾತಿಯೊಂದಿಗೆ ಕೂಡುವುದು ಎಂದರೆ ಗರ್ಭ ಕಟ್ಟುವುದು, ಕಟ್ಟಿಸಿಕೊಳ್ಳುವುದು ಎರಡೂ ಆಗಿರುತ್ತದೆ. ವಿಕಾಸದ ಮೇಲಿನ ಹಂತದಲ್ಲಿರುವ ಮಾನವ ಮತ್ತಿತರ ಪ್ರಾಣಿಗಳಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಪ್ರಭೇದಗಳು ವಿಶಿಷ್ಟವಾಗಿ, ಬೇರೆಬೇರೆಯಾಗಿ ಸೃಷ್ಟಿಯಾಗಿವೆ. 

ವೈದ್ಯಕೀಯವಾಗಿ ಸರಳಗೊಳಿಸಿ ಹೇಳುವುದಾದರೆ ಘಿಘಿ ಲಿಂಗ ವರ್ಣತಂತು ಹೊಂದಿರುವ ಜೀವಿ ಹೆಣ್ಣಾದರೆ, ಘಿಙ ಲಿಂಗ ವರ್ಣತಂತು ಹೊಂದಿರುವ ಜೀವಿ ಗಂಡಾಗಿರುತ್ತದೆ. ಪ್ರಾಣಿ ಸಾಮ್ರಾಜ್ಯದಲ್ಲಿ, ಅದರಲ್ಲೂ ಬೆನ್ನುಹುರಿಯಿಲ್ಲದ ಪ್ರಾಣಿಗಳಲ್ಲಿ (ಅಕಶೇರುಕಗಳು ಮತ್ತು ಅದಕ್ಕಿಂತ ಕೆಳ ಸ್ತರದ ಬಸವನಹುಳು, ಕೆಲ ಜಾತಿಯ ಮೀನು, ಎರೆಹುಳ ಇತ್ಯಾದಿಗಳಲ್ಲಿ) ಒಂದೇ ಪ್ರಾಣಿಯು ಎರಡೂ ಲಿಂಗಗಳ ಲೈಂಗಿಕ ಅಂಗಾಂಗಗಳನ್ನು ಹೊಂದಿರುತ್ತದೆ. ಸಂಗಾತಿಯೊಂದಿಗೆ ಕೂಡುವುದು ಎಂದರೆ ಗರ್ಭ ಕಟ್ಟುವುದು, ಕಟ್ಟಿಸಿಕೊಳ್ಳುವುದು ಎರಡೂ ಆಗಿರುತ್ತದೆ. ವಿಕಾಸದ ಮೇಲಿನ ಹಂತದಲ್ಲಿರುವ ಮಾನವ ಮತ್ತಿತರ ಪ್ರಾಣಿಗಳಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಪ್ರಭೇದಗಳು ವಿಶಿಷ್ಟವಾಗಿ, ಬೇರೆಬೇರೆಯಾಗಿ ಸೃಷ್ಟಿಯಾಗಿವೆ.
ಹೀಗೆ ಹುಟ್ಟುವ ಮಕ್ಕಳನ್ನು ಸಾಧಾರಣವಾಗಿ ತಾಯ್ತಂದೆಯರು ಮತ್ತು ಸಮಾಜ ಯಾವುದೋ ಒಂದು ಲಿಂಗವೆಂದು ಗುರುತಿಸಿ ಬೆಳೆಸುತ್ತಾರೆ. ಆದರೆ ಹೆಣ್ಣು-ಗಂಡು ಎಂಬ ಲಿಂಗ ನಿಸರ್ಗ ಸೃಷ್ಟಿ. ಹೆಣ್ತನ, ಗಂಡಸ್ತನ ಎನ್ನುವ ಲೈಂಗಿಕತೆ ಸಮಾಜದ ಸೃಷ್ಟಿ. ಆದರೂ ಅವರು ದೊಡ್ಡವರಾಗುತ್ತ ಹೋದಾಗ ತಮ್ಮ ಲೈಂಗಿಕ ಅಂಗಾಂಗ ತಾನು ಬೆಳೆಸಲ್ಪಟ್ಟ ಲಿಂಗಕ್ಕೆ ಸರಿಯಾಗಿ ಕೆಲಸ ಮಾಡುವುದಿಲ್ಲ, ತಾನು ಬೆಳೆಸಲ್ಪಟ್ಟ ಲಿಂಗತ್ವವೂ, ತನ್ನ ಆಂಗಿಕ ಲಿಂಗತ್ವವೂ ಬೇರೆ ಎಂದು ತಿಳಿದಾಗ ದಿಗ್ಭ್ರಮೆಯಾಗುತ್ತದೆ, ಹತಾಶೆಯಾಗುತ್ತದೆ. ಆ ಸ್ಪ್ಲಿಟ್ ಏನಿದೆಯೋ ಅದು ಆ ವ್ಯಕ್ತಿತ್ವವನ್ನು ಉದ್ದುದ್ದ, ಅಡ್ಡಡ್ಡ ಸೀಳುತ್ತದೆ. ಮೊದಲು ಕುಟುಂಬದಿಂದ ಅವಜ್ಞೆಗೆ ಒಳಗಾಗುತ್ತಾರೆ. ಅಂಥ ವ್ಯಕ್ತಿ ತಮ್ಮ ಕುಟುಂಬದಲ್ಲಿರುವುದು ಅವಮಾನ ಎಂದು ಕುಟುಂಬ ಆದಷ್ಟು ಮುಚ್ಚಿಡಲು ಯತ್ನಿಸುತ್ತದೆ. ಎಷ್ಟೋ ಕುಟುಂಬಗಳು ಬೆಳೆದ ಮೇಲೆ ಆ ವ್ಯಕ್ತಿ ತನ್ನ ಲಿಂಗ ಬೇರೆ ಎಂದು ಘೋಷಿಸಿಕೊಳ್ಳಲು ಬಿಡುವುದಿಲ್ಲ. ಆಗ ಹಠ, ಕ್ರೌರ್ಯ, ಹಿಂಸೆ, ಮನೆ ಬಿಟ್ಟೋಡುವುದು ಶುರುವಾಗುತ್ತದೆ. ಮನೆಯಿಂದ, ಸಮಾಜದಿಂದ ತಿರಸ್ಕೃತರಾದ ಹುಡುಗರು ಒಬ್ಬ ಗುರುವಿನ ಕೈಗೆ ಸಿಕ್ಕರೆ ಆತ ನಿರ್ವಾಣ ಕ್ರಿಯೆ ನಡೆಸಿ ಹಿಜ್ರಾ ಗುಂಪಿಗೆ ಸೇರಿಸಿಕೊಳ್ಳುತ್ತಾನೆ. ಅಲ್ಲಿ ಗುರು-ಗುರು ಸೋದರರಿಂದ ನಿರಂತರ ಲೈಂಗಿಕ/ಆರ್ಥಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಕೆಲವರು ಸರ್ಜರಿ ಮಾಡಿಕೊಂಡು ತನಗೊಂದು ಸ್ಪಷ್ಟ ಲಿಂಗತ್ವ ಸಿಗಬಹುದೆಂದು ಪ್ರಯತ್ನಿಸುತ್ತಾರೆ. ಆದರೆ ಎಷ್ಟೋ ಜನ ನಂತರವೂ ತನಗೊಬ್ಬ ಆಪ್ತ ಸಂಗಾತಿ ಸಿಗದೇ; ತನ್ನದೇ ವಲಯ ಕಟ್ಟಿಕೊಳ್ಳಲಾಗದೇ ಅಸಹಾಯಕತೆಯಲ್ಲಿ ಬಳಲುತ್ತಾರೆ. ಸಿಗರೇಟು, ಕುಡಿತದ ದಾಸರಾಗದವರೇ ಇಲ್ಲ. 
ಬಹುಪ್ರಚಾರದಲ್ಲಿರುವ ರೇವತಿ, ಲಿವಿಂಗ್ ಸ್ಮೈಲ್ ವಿದ್ಯಾ ಅವರ ಆತ್ಮಕಥೆಗಳೆಲ್ಲ ಗಂಡಾಗಿ, ಅರೆಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಬದಲಾದವರ ಕಡುಕಷ್ಟದ ಜೀವನ ವಿವರಗಳಾಗಿವೆ. ಆದರೆ ಅಲ್ಲಿ ವಿಭಿನ್ನ ಗುಂಪುಗಳಿವೆ: ಗಂಡಾಗಿ ಹೆಣ್ಣಾಗಿರಬಯಸುವ, ಗಂಡಾಗಿಯೂ ಗಂಡಿನೊಡನೇ ಇರಬಯಸುವ, ಹೆಣ್ಣಾಗಿ ಕಂಡರೂ ಅರೆಗಂಡಾಗಿ ಹೆಣ್ಣಿನೊಡನೆ ಇರಬಯಸುವ; ಹೆಣ್ಣಾದರೂ ಹೆಣ್ಣಿನೊಡನೆ ಇರಬಯಸುವ - ಹೀಗೇ ದ್ವಂದ್ವ ಲಿಂಗಿ, ಏಕಲಿಂಗಿ, ಉಭಯ ಲಿಂಗಿ, ಸಲಿಂಗಿ, ಮಿಶ್ರಲಿಂಗಿ ಎಂಬ ಹಲವು ಗುಂಪುಗಳಿವೆ. ಲಿಂಗಬದಲಾವಣೆಯ ಶಸ್ತ್ರಕ್ರಿಯೆಗೊಳಗಾಗಿ ಕೆಲವರು ಶಿಶ್ನ, ಬೀಜ ತೆಗೆಸಿ ಉಡುಗೆ, ತೊಡುಗೆ, ಹಾವಭಾವಗಳಲ್ಲಿ ಪೂರಾ ಹೆಣ್ಣಿನಂತೆಯೇ ವರ್ತಿಸಿ ಗಂಡಸರ ಜೊತೆ ಇರಲು ಶುರುಮಾಡಿದರೆ; ಹುಟ್ಟುವಾಗ ಹೆಣ್ಣಿನಂತಿದ್ದ ಮತ್ತೆ ಕೆಲವರು ಶಿಶ್ನದ ಆಪರೇಷನ್‌ಗೆ ಒಳಗಾಗಿ ಗಂಡಸಾಗಿ ಬದಲಾಗುತ್ತಾರೆ. ಸರಳಗೊಳಿಸಿ ಹೇಳುವಾಗ ಇವೆಲ್ಲ ತುಂಬ ಸುಲಭ ಎನಿಸಬಹುದು. ಆದರೆ ಮಾನವದೇಹವೆಂಬ ಸೂಪರ್ ಕಂಪ್ಯೂಟರ್ ಸೂಪರ್ ಸಮಸ್ಯೆಗಳ ಸರಮಾಲೆಯನ್ನೇ ತಂದೊಡ್ಡುತ್ತದೆ.
ಈ ಮಾತುಗಳು ಹೇಳಬಯಸುವುದಿಷ್ಟೆ: ಸಲಿಂಗಿಯ ಸೃಷ್ಟಿ ಸೃಷ್ಟಿಕ್ರಿಯೆಯ ಏರುಪೇರಿನಿಂದ ಆಗುವಂಥದು. ಮನೋವೈದ್ಯದ ಪ್ರಕಾರವೂ ಅದು ವಿಕೃತಿಯಲ್ಲ. ಅನೈಸರ್ಗಿಕವಲ್ಲ, ಏಕೆಂದರೆ ನಿಸರ್ಗವೇ ಅವರನ್ನು ಸೃಷ್ಟಿ ಮಾಡಿರುವುದು. ಲೈಂಗಿಕ ಅಂಗಾಂಗವೂ, ದೇಹವೂ ಉಳಿದವರಿಗಿಂತ ಭಿನ್ನವಾಗಿರುವಾಗ ಅವರ ಲೈಂಗಿಕತೆಯೂ ಭಿನ್ನವಾಗಿರಲೇಬೇಕಾಗುತ್ತದೆ. ಎಂದೇ ಪುರುಷ-ಪುರುಷ, ಸ್ತ್ರೀ-ಸ್ತ್ರೀ ಸಂಬಂಧಗಳು ಸಂತಾನೋತ್ಪತ್ತಿಯ ಉದ್ದೇಶವಿಲ್ಲದೆ ಏರ್ಪಡುತ್ತದೆ. ಮಕ್ಕಳಿರುವ ಕುಟುಂಬವನ್ನು ಹೊಂದುವ ಸಾಧ್ಯತೆ ಇಲ್ಲವೆಂದ ಮೇಲೆ ಲೈಂಗಿಕ ಕ್ರಿಯೆ ಲೈಂಗಿಕ ತೃಪ್ತಿಗಾಗಿಯೇ ನಡೆದು, ಸಲಿಂಗಿಗಳದು ಢಾಳಾದ ಅತಿ ಲೈಂಗಿಕಾಸಕ್ತಿಯೆನಿಸುವಂತೆ ಮಾಡುತ್ತದೆ. ಸಾಂಪ್ರದಾಯಿಕ ಬೈನರಿ ಲಿಂಗತ್ವದ ಸಮಾಜಕ್ಕೆ ಅದು ವಿಕೃತಿಯಂತೆ, ಅನೈಸರ್ಗಿಕವೆಂಬಂತೆ ಕಾಣುತ್ತದೆ. ಇದಾವುದನ್ನೂ ಹೇಳಿಕೊಳ್ಳಲಾಗದ ಪ್ರಪಾತದಂಚಿನಲ್ಲಿ ಸಮಾಜ ಅವರನ್ನು ಇಷ್ಟೂ ಕಾಲ ಇಟ್ಟುಕೊಂಡುಬಂದಿದೆ.
‘ಸೃಷ್ಟಿಯ ಬೆಳೆ ಬೆಳೆಯುವಾಗ ಸೈತಾನನು ಅಲ್ಲೊಂದು ಇಲ್ಲೊಂದು ಕಳೆ ಬೀಜ ನೆಟ್ಟನು. ಬೆಳೆಯ ನಡುವಿನ ಕಳೆಯೇ ನಾವು ಅಂಗವಿಕಲರು’ ಎನ್ನುತ್ತಾನೆ ಮಲೆಯಾಳಿ ಅಂಗವಿಕಲ ಕವಿ ನಾರಾಯಣ್. ಇದೇ ಮಾತನ್ನು ಹಿಜಡಾಗಳೂ ಅನ್ವಯಿಸಿಕೊಳ್ಳುತ್ತಾರೆ.
***
ಸದ್ಯದ ಸಾಮಾಜಿಕ ಪರಿಸ್ಥಿತಿಯಲ್ಲಿ ಹಿಜ್ಡಾಗಳಿಗೆ ಬದುಕಲು ವೇಶ್ಯಾವಾಟಿಕೆ ಅನಿವಾರ್ಯ ಎನ್ನುವಂತಹ ಸ್ಥಿತಿ ಇದೆ. ರೇವತಿ, ಲಿವಿಂಗ್ ಸ್ಮೈಲ್ ವಿದ್ಯಾ ಮೊದಲಾದವರ ಆತ್ಮಕತೆಗಳನ್ನು ಓದಿದರೆ ಸಮಾಜದ ನಿರಂತರ ನಿರಾಕರಣೆ, ಅದನ್ನು ಮೀರಲು ಆ ಜೀವಗಳು ಪಡುವ ಪ್ರಯತ್ನ, ಅಭದ್ರತೆ ಹಾಗೂ ಅದು ಹುಟ್ಟಿಸುವ ವಿಕ್ಷಿಪ್ತ ಮತ್ತು ಸೂಕ್ಷ್ಮ ವ್ಯಕ್ತಿತ್ವ - ಈ ಎಲ್ಲದರ ಪರಿಚಯವಾಗುತ್ತದೆ. ಆ ಸಮುದಾಯದೊಳಗಿನ ಕಷ್ಟಗಳನ್ನು ಉಳಿದ ಸಮಾಜ ಅರ್ಥಮಾಡಿಕೊಳ್ಳುವುದು ಕಷ್ಟವಾಗಿರುವಾಗ ಆ ಸಮುದಾಯವೂ ತನ್ನೊಳಗಿನ ಲೋಪಗಳ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎನಿಸುತ್ತಿದೆ: 
  • ಸಲಿಂಗಿಗಳಲ್ಲಿಯೂ ಪುರುಷಪ್ರಾಧಾನ್ಯವಿದೆ, ಪುರುಷಪ್ರಧಾನ ಸಮಾಜದ ಎಲ್ಲ ತಾರತಮ್ಯ ಇದೆ. ಹೆಣ್ಣು ಧ್ವನಿ ಎತ್ತಲು ಅಲ್ಲಿಯೂ ಕಷ್ಟವಿದೆ. ಅಲ್ಲಿ ಗುರು ಇದ್ದಾನೆ. ಪರಂಪರೆಯಿದೆ. ವರ್ಷಕ್ಕೊಮ್ಮೆ ಅವನನ್ನು ಎಲ್ಲಿದ್ದರೂ ಭೇಟಿಯಾಗಬೇಕು. ತಪ್ಪಿದರೆ ನಾಣ್ಯದಿಂದ ಹಣೆ ಸುಡುತ್ತಾರೆ, ಏಳು ವರ್ಷ ಸಮುದಾಯದಿಂದ ಹೊರಹಾಕುತ್ತಾರೆ, ಸತ್ತರೆ ಹೆಣ ತೆಗೆಯುವುದಿಲ್ಲ ಎಂಬಿತ್ಯಾದಿ ಕಠೋರ ಶಿಕ್ಷೆಗಳಿವೆ. ಸಮುದಾಯದೊಳಗಿರುವ ಪುರುಷ ಪ್ರಾಧಾನ್ಯ, ಏಣಿಶ್ರೇಣಿ, ಪರಂಪರೆಯನ್ನು ಈ ಕಾಲದ ಸಲಿಂಗಿಗಳು ಪ್ರಶ್ನಿಸಿ ಅದರಿಂದ ಹೊರಬರಲು ಯತ್ನಿಸದಿದ್ದರೆ ಅವರನ್ನು ಪಾರಂಪರಿಕವಾಗಿ ನೋಡುವ ಸಮಾಜದ ಕಣ್ಣು ಬದಲಾಗುವುದು ಹೇಗೆ?
  • ತಮ್ಮನ್ನು ಲೈಂಗಿಕ ಕಾರ್ಮಿಕರೆಂದು ಕರೆದುಕೊಳುವ ಅವರು ಯೂನಿಯನ್ ಕಟ್ಟಿಕೊಂಡಿದ್ದಾರೆ. ಸಂತೆಯ ಸಾಮಾನುಗಳಂತೆ ವೇಶ್ಯಾವಾಟಿಕೆಗೆ ಅಪ್ರಾಪ್ತರು, ಅಸಹಾಯಕರು ಮಾರಾಟವಾಗುತ್ತಿರುವಾಗ, ಎಚ್‌ಐವಿ ಮತ್ತಿತರ ಸಾಂಕ್ರಾಮಿಕ ರೋಗಗಳು ಕಣ್ಣೆದುರು ಕುಣಿಯುವಾಗ ಈ ಕಾರ್ಮಿಕರ ಉದ್ಯೋಗವನ್ನು ಬೆಂಬಲಿಸುವುದು ಹೇಗೆ?
  • ಉಳಿದ ಸಮಾಜ ಲಿಂಗ, ಲೈಂಗಿಕತೆ, ಲಿಂಗತ್ವದ ಬಗೆಗೆ ಯೋಚಿಸುವಂತೆ ಮಾಡುವವರು ಸಲಿಂಗಿಗಳು. ಆದರೆ ಸಲಿಂಗಿ ಜೋಡಿಗಳು ಲಿಂಗತ್ವ ಮೀರಿ ಬದುಕುವುದಿಲ್ಲ. ಜೋಡಿಗಳಲ್ಲಿ ಒಬ್ಬರು ಪೂರಾ ಗಂಡು/ಗಂಡನಂತೆ, ಅವರ ಜೊತೆಗಾರರು ಪೂರಾ ಹೆಣ್ಣು ಅಥವಾ ಹೆಂಡತಿಯಂತೆ ಪಾತ್ರ ನಿರ್ವಹಿಸುತ್ತಾರೆ. ಲಿಂಗತ್ವ ಬಿಡಬೇಕೆನ್ನುವವರು ಮತ್ತದೇ ಪಾರಂಪರಿಕ ಕುಟುಂಬ ಚೌಕಟ್ಟಿನ ಲಿಂಗತಾರತಮ್ಯ, ದೌರ್ಜನ್ಯಕ್ಕೆ ತಮ್ಮನ್ನು ಈಡುಮಾಡಿಕೊಳ್ಳುತ್ತಾರೆ. ದೌರ್ಜನ್ಯಕ್ಕೆ ಮೂಲ ಕಾರಣವಾದ ಲಿಂಗತ್ವವನ್ನು ತಾವು ಮೀರದೇ ಸಮಾಜ ಮಾತ್ರ ಮೀರಬೇಕೆಂದು ಬಯಸುವುದು ಸರಿಯೆ?
  • ಲೈಂಗಿಕಾಸಕ್ತಿಗೆ ವಿರುದ್ಧ ಲಿಂಗವು ಸುಲಭವಾಗಿ ಸಿಗದಿದ್ದರೆ ಸಲಿಂಗಕಾಮವನ್ನು ರೂಢಿಸಿಕೊಳ್ಳುವವರು ಮಿಶ್ರಲಿಂಗಿಗಳು. ಅವರದು ಅನುಕೂಲಸಿಂಧು ಲಿಂಗತ್ವ. ಕಡಿಮೆ ದುಡ್ಡಿಗೆ ಸುಲಭವಾಗಿ ಹುಡುಗರು ಸಿಕ್ಕರೆ ಸಲಿಂಗಿಗಳು, ಇಲ್ಲದಿದ್ದರೆ ಹೆಣ್ಣೇ ಬೇಕೆನ್ನುವವರು. ಕುಟುಂಬದಿಂದ ದೀರ್ಘಕಾಲ ದೂರವುಳಿವ, ಒಂಟಿಯಾಗಿರುವ ಗಂಡಸರು ಎಳೆಯ ಹುಡುಗರನ್ನು, ನಿರ್ಗತಿಕ, ಅಸಹಾಯಕ ಬಾಲಕರನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡು ಆ ತರುಣಬಾಲರ ವ್ಯಕ್ತಿತ್ವ, ಲೈಂಗಿಕತೆಯನ್ನೇ ನಾಶಮಾಡಿದ ಅಸಂಖ್ಯ ಉದಾಹರಣೆಗಳು ನಮ್ಮೆದುರಿಗಿವೆ. ಸಲಿಂಗಕಾಮ ಅಪರಾಧವಲ್ಲ ಎಂದಾದರೆ ಇಂಥ ಕಾಮಪಿಪಾಸು ಮಿಶ್ರಲಿಂಗಿಗಳು ಅಸಹಾಯಕ ಹುಡುಗರನ್ನು ನಾಶ ಮಾಡುತ್ತಲೇ ಹೋಗುತ್ತಾರೆ. ಅತ್ಯಾಚಾರವೆಂದ ಕೂಡಲೇ ಹೆಣ್ಣಿನ ಮೇಲೆ ಗಂಡಿನ ಆಕ್ರಮಣವೆಂದಷ್ಟೇ ಬಿಂಬಿತವಾಗುತ್ತದೆ. ಹಾಗಾದರೆ ಸಲಿಂಗಕಾಮ ಕಾನೂನುಬದ್ಧ ಎಂದಾದಾಗ ಆ ತರುಣ-ಬಾಲರ ಪರವಾಗಿ ಹೇಗೆ, ಯಾರು ಧ್ವನಿಯೆತ್ತುವುದು?
  • ಸಲಿಂಗಕಾಮ ಸಿಂಧು ಎಂದಾದರೆ ಅತ್ಯಾಚಾರ, ವ್ಯಭಿಚಾರ, ಒಪ್ಪಿಗೆ, ಮದುವೆ, ವಿಚ್ಛೇದನ, ಆಸ್ತಿಹಕ್ಕು ಇವುಗಳ ವ್ಯಾಖ್ಯೆ ಏನು? 
ಆಗಬೇಕಿರುವುದೇನು? 
  • ಸಮಾಜದ ದೃಷ್ಟಿಕೋನ ಬದಲಾಗಬೇಕು. ಆಗಮಾತ್ರ ಅಂಥ ವ್ಯಕ್ತಿಗಳು ಮನೆಬಿಟ್ಟು ಬೇರೆ ಸಮುದಾಯವಾಗಿ ಗುಂಪುಗಳಲ್ಲಿ ಬದುಕುವ ಅನಿವಾರ್ಯತೆ ತಪ್ಪುತ್ತದೆ. ಕೌಟುಂಬಿಕ ಸುರಕ್ಷೆ ಸಿಗುತ್ತದೆ. ಇದು ಹಲವು ಸಮಸ್ಯೆಗಳಿಗೆ ಪರಿಹಾರವಾಗಿದೆ.
  • ಲಿಂಗಬದಲಾವಣೆಯ ಶಸ್ತ್ರಚಿಕಿತ್ಸೆ ಹಾಗೂ ನಂತರದ ಕೌನ್ಸೆಲಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. 
  • ಶಿಕ್ಷಣದ ಪ್ರಾಮುಖ್ಯತೆ ಅರಿತುಕೊಳ್ಳಬೇಕು. ಔದ್ಯೋಗಿಕ ತರಬೇತಿ, ವೃತ್ತಿ ಶಿಕ್ಷಣ, ಸ್ವಉದ್ಯೋಗದತ್ತ ಗಮನ ಹರಿಸಬೇಕು.
  • ಸಮುದಾಯ ಸುರಕ್ಷತೆಯ ವಿಶ್ವಾಸ ಹೊಂದಲು ಸಂಘಟಿತವಾಗಬೇಕು. ತಾವೂ ಈ ಸಮಾಜದ ನಾಗರಿಕರು; ಉಳಿದ ಸಮಾಜಕ್ಕೆ ಶಿಕ್ಷಣ, ಉದ್ಯೋಗ, ರಾಜಕಾರಣ, ಅಭಿವ್ಯಕ್ತಿಗಾಗಿ ಯಾವ್ಯಾವ ಹಕ್ಕುಗಳಿವೆಯೋ ಅವೆಲ್ಲ ತಮಗೂ ಇವೆ ಎಂದು ತಿಳಿಯಬೇಕು. ತಮ್ಮ ಹಕ್ಕುಗಳ ಕುರಿತು ಸಮುದಾಯದೊಳಗೊಂದು ಪ್ರಜ್ಞೆ ಮೂಡಿಸುತ್ತಲೇ ಉಳಿದ ಸಮಾಜಕ್ಕೂ ಅದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವಾಗಬೇಕು.
  • ಸ್ಪಷ್ಟ ಲಿಂಗ ಅಸ್ಮಿತೆ ಇಲ್ಲದಿರುವುದು ವ್ಯಕ್ತಿತ್ವದ ಒಂದು ದೊಡ್ಡ ಕೊರೆ ನಿಜ. ಆದರೆ ಅದರ ಆಚೆಗೂ ತಮ್ಮ ಪ್ರತಿಭೆ, ಉದ್ಯೋಗ, ಅವಕಾಶದ ಸಲುವಾಗಿ ಸಮಾಜದಲ್ಲಿ ಗುರುತಿಸುವಂತಾಗಬೇಕು.
  • ಸಮಾಜದ ಇತರೆಲ್ಲ ಸಮಸ್ಯೆ, ಸವಾಲುಗಳಲ್ಲಿಯೂ ತಮ್ಮನ್ನು ಗುರುತಿಸಿಕೊಂಡು ಮುಖ್ಯವಾಹಿನಿಯಲ್ಲಿರಬೇಕು. ಸಲಿಂಗಿ ಎಂಬ ಅಸ್ಮಿತೆಯ ಜೊತೆಜೊತೆಗೆ ಉಳಿದ ಸಮಾಜದ ಭಾಗ ತಾವೆಂದು ತಿಳಿದು ಜವಾಬ್ದಾರಿ ನಿಭಾಯಿಸಬೇಕು. ಈ ಮಾತು ಕೇವಲ ಸಲಿಂಗಿಗಳಿಗಷ್ಟೇ ಅಲ್ಲ, ಎಲ್ಲ ಶೋಷಿತರಿಗೂ ಅನ್ವಯಿಸುತ್ತದೆ.
ಘೋರ ಅತ್ಯಾಚಾರಕ್ಕೊಳಗಾಗುವ, ಸಂಗಾತಿ-ತಲೆಹಿಡುಕ-ಗಿರಾಕಿ-ಪೊಲೀಸರು ಹೀಗೆ ಎಲ್ಲ ದಿಕ್ಕಿನಿಂದಲೂ ಕೇವಲ ನಿಂದನೆ, ಬೈಗುಳ, ಅವಮಾನ, ಹಿಂಸೆಯನ್ನೇ ಎದುರಿಸುವ ಸಮುದಾಯವನ್ನು ಸಮಾಜ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು. ಹೆಚ್ಚೇನೂ ಬೇಡ, ಕನಿಷ್ಠ ಮನುಷ್ಯರಂತೆ ನಡೆಸಿಕೊಳ್ಳುವುದನ್ನು ಕಲಿಯಬೇಕು. ಲೈಂಗಿಕ ವಸ್ತುಗಳಾಗಿಸಿ ನೋಡುವ ಪರಿಪಾಠ ನಿಲ್ಲಿಸಬೇಕು. ಈ ದೇಶದಲ್ಲಿ ಯಾವುದೇ ವ್ಯಕ್ತಿಗಾದರೂ ಒಂದು ಅಯಾಚಿತ ಬೆಂಬಲ ಸಿಕ್ಕೇ ಸಿಗುತ್ತದೆ. ಅದು ಜಾತಿ ಬೆಂಬಲ. ಆದರೆ ಹಿಜಡಾಗಳಿಗೆ, ದ್ವಂದ್ವ ಲಿಂಗಿಗಳಿಗೆ ಆ ಬೆಂಬಲವೂ ಇಲ್ಲ. ಪ್ರಕೃತಿಯೇ ತೋರಿದ ತಾರತಮ್ಯಕ್ಕೆ ಇತ್ತ ಹೆಣ್ಣೂ ಅಲ್ಲದೆ, ಅತ್ತ ಗಂಡೂ ಅಲ್ಲದೆ, ನಡುವೆ ಸುಳಿವ ಆತ್ಮಗಳಾದ ಅವರು ತನ್ನ ಬಂಧುವೆಂದು ಹೇಳಿಕೊಳ್ಳಲು ಎಲ್ಲರಿಗೂ ಹಿಂಜರಿಕೆ. 
ಲಿಂಗ ಕಾಲಂ ತುಂಬಲಾಗದ ಕಾರಣಕ್ಕೆ ಪ್ರಮಾಣಪತ್ರ ಸಿಗುವುದೂ ಕಷ್ಟವಾದ ಅವರ ಬದುಕು ಎಷ್ಟು ದುರ್ಭರ! ಎರಡೇ ಲಿಂಗಗಳಿರುವ ಸಮಾಜದ ಬೈನರಿ ಮಾಡೆಲ್ ಅವರನ್ನು ಇದುವರೆಗೆ ಘಾಸಿಗೊಳಿಸಿದ್ದು ಸಾಕು. ಕೋರ್ಟಿನ ತೀರ್ಮಾನ ಏನೇ ಇದ್ದರೂ ಅವರು ಮಾನವರಂತೆ ಬದುಕಲು ಅನುವು ಮಾಡಿಕೊಡುವುದೊಂದೇ ಆ ಸಮುದಾಯಗಳ ಬಿಡುಗಡೆ, ಸಬಲೀಕರಣಕ್ಕೆ ಹಲವು ದಾರಿಗಳನ್ನು ತೆರೆಯಬಹುದು.

ಭಾನುವಾರ, ಫೆಬ್ರವರಿ 9, 2014

ಜಾನಪದ ಲೋಕದ ಲೋಕೋತ್ಸವ-2014 ರ ಆಹ್ವಾನ ಪತ್ರಿಕೆ.









ಇಲಿ ತಿಂಬುವರ ತಟ್ಟೆಗಳು ಅನ್ನ ಕಾಣುವುದೆಂದು?

soujany :vijaykarnataka


ಡೆಲ್ಲಿ ಡೈರಿ: ಇಲಿ ತಿಂಬುವರ ತಟ್ಟೆಗಳು ಅನ್ನ ಕಾಣುವುದೆಂದು?
ರಾಜಧಾನಿ ದಿಲ್ಲಿ ಪತ್ರಿಕೆಗಳ ಪುಟ ತೆರೆದರೆ ನರೇಂದ್ರ ಮೋದಿ, ರಾಹುಲ್ ಗಾಂಧಿ, ಕೇಜ್ರೀವಾಲರೇ ಅಬ್ಬರಿಸುತ್ತಾರೆ. ಆಕಾಶದಲ್ಲೆಲ್ಲೋ ಇರುವ ಯಾರೂ ಕಾಣದ ಸ್ವರ್ಗವನ್ನು ಧರೆಗೆ ಇಳಿಸುವ ಬಣ್ಣಬಣ್ಣದ ಕನಸುಗಳನ್ನು ಹರವಿ ಕೂಗಿ ಕರೆಯುತ್ತಾರೆ-ಅವನ ಕನಸು ಕುರೂಪಿ, ಇತ್ತ ಬನ್ನಿ, ನನ್ನ ಕನಸು ಕೊಳ್ಳಿ ಎಂದು.

ಇಂಥದ್ದೇ ವ್ಯಕ್ತಿ, ಇಲ್ಲವೇ ಇಂಥದ್ದೇ ಪಕ್ಷದ ಪರ ಅಲೆ ಎದ್ದಿದೆ ಎಂದು ಒಂದಲ್ಲ ಒಂದು ಬಗೆಯಲ್ಲಿ ನಿನ್ನೆ ಮೊನ್ನೆ ಹೇಳಿದ್ದನ್ನೇ ಇಂದೂ ಹೇಳಿ ಓದುಗರ ಮಿದುಳು ತೊಳೆಯುವ ಪ್ರಯತ್ನದ ಚುನಾವಣೆ ಸಮೀಕ್ಷೆಗಳು. ಪ್ರಧಾನಿ ಅಭ್ಯರ್ಥಿಗಳು, ಅಭಿವೃದ್ಧಿ ದರಗಳು, ಬಡ್ಡಿ ದರಗಳು, ಕಾರುಗಳು, ಟಿ.ವಿ.ಗಳು, ಏರ್ ಕಂಡೀಷನರ್, ಫ್ರಿಜ್ಜುಗಳ ಮಾರಾಟ ಕುಸಿತ ಕುರಿತ, ಪುಟ ತುಂಬಿ ಚೀತ್ಕರಿಸುವ ಸುದ್ದಿಗಳೇ ಸುದ್ದಿಗಳು.

ಹಸಿವು, ಅವಮಾನ, ಅಸಮಾನತೆ, ಸಂಕಟ, ಶೋಷಣೆಗಳು ಬೈಗುಳದ ಪದಗಳೇನೋ ಅವುಗಳು ಇತಿಹಾಸದ ಯಾವುದೋ ಕಾಲಗರ್ಭದ ಪಳೆಯುಳಿಕೆಗಳೇನೋ ಎಂಬಂತೆ ದೂರ ದೂರ ಇರಿಸಿರುವ ಭಾವನೆ. ಅನ್ನ-ಅರಿವೆಗೆ ಗತಿ ಇಲ್ಲದೆ ನಿತ್ಯ ತುಳಿಸಿಕೊಂಡು ನುಗ್ಗಾಗಿ ಮಣ್ಣು ಸೇರುವ ಕೋಟಿ ಕೋಟಿ ಅವಮಾನಿತ ಬದುಕುಗಳು, ನೋವು ದಹಿಸಿ ರಕ್ತವೇ ಕಣ್ಣೀರಾಗಿ ಕೆನ್ನೆಗೆ ಹರಿಯಿತೆಂಬಂತಹ ಕತೆಗಳು, ಕಾರ್ಪಣ್ಯಗಳನ್ನು ಸುದ್ದಿಯ ಪುಟಗಳು ಮುಟ್ಟಿಸಿಕೊಳ್ಳುವುದೇ ಇಲ್ಲ. ಯಾಕೆಂದರೆ ಕಣ್ಣ ನೀರಿನಲ್ಲಿ ಮಣ್ಣ ಧೂಳಿನಲಿ ಹೊರಳುವವರು ಓದುಗರೇ ಅಲ್ಲ. ಇಂತಹ ಜಾತ್ರೆ ಮರುಳಿನ ಮಧ್ಯದಲ್ಲಿ ಅಚ್ಚರಿ ಎಂಬಂತೆ ಮೊನ್ನೆ ಮೊನ್ನೆ ಅಪರೂಪಕ್ಕೆ ಅಚ್ಚಾದ ಬರಹವೊಂದು ಮನ ಕಲಕಿತು.

ಈತ ಕುಶೀನಗರ ಜಿಲ್ಲೆಯ ಕುಗ್ರಾಮವಾಸಿ. ಹೆಸರು ರಾಮ ಅವತಾರ. ರಾತ್ರಿ ಹೊತ್ತು ಗೋಧಿ, ಭತ್ತಗಳ ಹೊಲ-ಗದ್ದೆಗಳಿಗೆ ಹೋಗುವ ಈ ರಾಮ ಅವತಾರ, ಇಲಿ-ಹೆಗ್ಗಣಗಳ ಬಿಲಗಳನ್ನು ತೋಡುತ್ತಾನೆ. ಅವುಗಳು ಅಲ್ಲಿ ಕೂಡಿಟ್ಟ ಕಾಳುಕಡ್ಡಿಗಳನ್ನು ಕದ್ದು ತಂದು ಹೊಟ್ಟೆ ಹೊರೆಯುತ್ತಾನೆ. ಹೊಲಗಳಿಗೆ ಹಗಲು ಹೆಜ್ಜೆ ಇಟ್ಟರೆ, ಕೀಳು ಜಾತಿಯವನೊಬ್ಬ ಕಾಲಿಟ್ಟು ಭೂತಾಯಿ ಮುನಿಸಿಕೊಂಡರೆ ಫಸಲು ಹಾಳಾದೀತು ಎಂಬುದು ಮೇಲ್ಜಾತಿಯ ಜಮೀನುದಾರನ ಭಯ. ಮುಖ ಮೂತಿ ಮುರಿಯುವಂತೆ ಥಳಿಸಿಕೊಂಡ ನೆನಪು ಆರುವುದೇ ಇಲ್ಲ. ಹೀಗಾಗಿ ಇರುಳು ಇಳಿಯುವುದನ್ನೇ ಕಾಯುತ್ತಾನೆ ರಾಮ ಅವತಾರ. ಮುಸಹರಿ ಎಂಬ ಅಸ್ಪೃಶ್ಯರಲ್ಲಿ ಅಸ್ಪೃಶ್ಯ ಎನಿಸಿದ ಅತಿವಂಚಿತ ಜಾತಿಯಲ್ಲಿ ಜನಿಸಿದ್ದು ಅವತಾರಿಯದೇ ತಪ್ಪು! ಮುಸ್ ಎಂದರೆ ಭೋಜಪುರಿ ಭಾಷೆಯಲ್ಲಿ ಇಲಿ ಎಂದರ್ಥ. ಇಲಿಯನ್ನು ಹಿಡಿದು ಕೊಂದು ತಿನ್ನುವವರು ಮುಸಹರಿಗಳು.

ಕಾಳು ದೊರೆಯುವುದಿಲ್ಲ. ಹಸಿವು ಹಿಂಗುವುದಿಲ್ಲ. ದನಗಳ ಹೊಟ್ಟೆಯಲಿ ಜೀರ್ಣವಾಗದೆ ಉಳಿದ ದವಸದ ಕಾಳುಗಳು ಸೆಗಣಿಯಲ್ಲಿ ಹೊರಬೀಳುವುದು ಸಾಮಾನ್ಯ. ಈ ಕಾಳುಗಳಿಗಾಗಿ ರಾಮ ಅವತಾರಿಯು ಸೆಗಣಿಯನ್ನು ತೊಳೆದು ಸೋಸಿ ತೆಗೆಯುತ್ತಾನೆ. ಕಾಲುವೆಯಲ್ಲಿ ದೊರೆಯುವ ಬಸವನಹುಳುಗಳೇ ಇವನ ಕುಟುಂಬದ ಪಾಲಿನ ವಿಲಾಸಿ ಮಾಂಸಾಹಾರ.

ಅವತಾರಿಗೆ ಮೊಮ್ಮಕ್ಕಳು ನಾಲ್ವರು. ಅವರನ್ನು ಒಂದು ಕೋಣೆಯ ಸರಕಾರಿ ಶಾಲೆಗೆ ಕಳಿಸಿದ. ಆದರೆ ಸರಕಾರ ಈ ಶಾಲೆಯನ್ನು ಮೇಲ್ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಮತ್ತೊಂದು ಹಟ್ಟಿಗೆ ವರ್ಗಾವಣೆ ಮಾಡಿತ್ತು. ಜಮೀನುದಾರರ ಮಕ್ಕಳು ಮುಸಹರ ಮಕ್ಕಳತ್ತ ಕಲ್ಲು ತೂರಿ ಹಿಂಸಿಸತೊಡಗಿದರು. ಮುಸಹರ ಮಕ್ಕಳತ್ತ ಶಿಕ್ಷಕರಿಗೂ ಅಸಡ್ಡೆ. ಇದೀಗ ಈ ಮಕ್ಕಳು ಕೂಡ ಹೊಲಗಳಲ್ಲಿ ಇಲಿಗಳ ಬಿಲಿ ತೋಡುವುದರಲ್ಲಿ ನಿರತರು.

ಕಂದಾಯ ದಾಖಲೆಗಳ ಪ್ರಕಾರ ರಾಮ ಅವತಾರಿ ಒಂದು ಎಕರೆ ನೆಲದ ಒಡೆಯ. ಆದರೆ ಅಪ್ಪಿತಪ್ಪಿಯೂ ಈ ಜಮೀನಿನ ಬಗೆಗೆ ಉಸಿರೆತ್ತುವುದಿಲ್ಲ. ಯಾಕೆಂದರೆ, ಜಮೀನುದಾರಿ ಪದ್ಧತಿಯನ್ನು ರದ್ದುಗೊಳಿಸಿ ಭೂ ಸುಧಾರಣೆ ಕಾನೂನು ಜಾರಿಗೆ ತಂದ ನಂತರ ಜಮೀನದಾರನಿಂದ ಸರಕಾರ ವಶಪಡಿಸಿಕೊಂಡಿದ್ದ ಒಂದು ಎಕರೆಯಿದು. ಬಲಾಢ್ಯ ಜಮೀನುದಾರನಿಂದ ಜಮೀನು ಕೇಳುವ ಶಕ್ತಿ ಮುಸಹರನಿಗೆ ಯಾವ ಕಾಲಕ್ಕೆ ಬರಬೇಕು? ಸರಕಾರ ಇವನ ಬದುಕನ್ನು ಪ್ರವೇಶ ಮಾಡಿದೆ ಎಂಬುದಕ್ಕೆ ಒಂದು ಪುರಾವೆ ಉಂಟು. ಅದು ಅರ್ಧಂಬರ್ಧ ಕಟ್ಟಿದ ಇಂದಿರಾ ಆವಾಸ ಯೋಜನೆಯ ಸೂರು.

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಇಂತಹ ಲಕ್ಷ ಲಕ್ಷ ಮುಸಹರಿಗಳು ಹೊತ್ತು ಹೊತ್ತಿನ ಕೂಳಿಗೆ ಹೋರಾಟ ಮಾಡಬೇಕಾದ ದೈನ್ಯ ಬದುಕನ್ನು ಸವೆಸಿದ್ದಾರೆ. ಐವತ್ತಾರು ಅಂಗುಲ ಹರವಿನ ಛಾತಿ ತೆರೆದು ರಾಮ ಅವತಾರಿ ಮುಸಹರಿಯನ್ನು ಮೋದಿ ಸಾಹೇಬರು ಆಲಂಗಿಸಿಯಾರೇ, ರಾಹುಲ್ ಗಾಂಧಿ ಮುಸಹರರ ಮಹಲುಗಳಲ್ಲಿ ಒಪ್ಪೊತ್ತು ಉಂಡು ಇರುಳು ಕಳೆದಾರೆಯೇ ಎಂದು ಕೇಳುತ್ತದೆ ಈ ಬರಹ. ಇದ್ದಾನೆಯೇ ಉತ್ತರ ನೀಡಬಲ್ಲ ಛಾತಿವಂತ?

ಜಾತಿಭೇದದ ತಾರತಮ್ಯದ ತಳಾತಳಕ್ಕೆ ಬಿದ್ದಿರುವ ಈ ಅವಮಾನಿತರು ಅನ್ನ, ಅರಿವೆ, ಅಕ್ಷರ, ಮಾನ, ಅಭಿಮಾನ ಎಲ್ಲವುಗಳಿಂದ ವಂಚಿತರು. ಇಂದಿಗೂ ಬಹುಮಂದಿ ಮುಸಹರರು ಮೇಲುಜಾತಿಗಳ ಜೀತದಾಳುಗಳು. ಇವರ ಶ್ರಮವನ್ನು ಗುತ್ತಿಗೆದಾರ, ಜಮೀನುದಾರ ಸುಲಿಗೆ ಮಾಡುತ್ತಾನೆ. ಹೊತ್ತು ಹುಟ್ಟಿ ಮುಳುಗುವ ತನಕ ದುಡಿದರೂ ಕವಡೆ ಕಾಸು ಕೈಗಿಟ್ಟು ವಂಚಿಸುತ್ತಾನೆ. ಮುಸಹರ ಹೆಣ್ಣಾಳುಗಳಿಗೆ ಅವರದೇ ಗಂಡಾಳುಗಳಿಗಿಂತ ಕಡಿಮೆ ಕೂಲಿ. ಜತೆಗೆ ಇರುಳು ಇಳಿದರೆ ಲೈಂಗಿಕ ಶೋಷಣೆಯ ಬಲಿಪಶುಗಳು.

ಹಂದಿಗೂಡುಗಳಂತಹ ಜೋಪಡಿಗಳಲ್ಲಿ ಆರೆಂಟು ಮಂದಿ ತಲೆ ಮರೆಸಿಕೊಳ್ಳುವ ಮುಸಹರ ಸಂಸಾರಗಳು ಹಸಿವು ತಾಳದೆ ಇಲಿಗಳನ್ನು ಹಿಡಿದು ತಿನ್ನುತ್ತವೆ. ಒಡೆದ ಮಡಕೆ ಕುಡಿಕೆಗಳು, ಹರಿದ ಬಟ್ಟೆಗಳು, ಸೊರಗಿದ ಅರೆಬೆತ್ತಲೆ ದೇಹಗಳೇ ಇವರ ಆಸ್ತಿಪಾಸ್ತಿಗಳು. ರೋಗರುಜಿನಗಳಿಗೆ ತುತ್ತಾಗುವ ಬವಣೆಯ ಬದುಕುಗಳಿಗೆ ಸಾವೇ ದೊಡ್ಡ ವಿಮೋಚನೆ. ಕಲ್ಲು ಗಣಿಗಳಲ್ಲಿ, ಇಟ್ಟಿಗೆ ಭಟ್ಟಿಗಳಲ್ಲಿ, ಹೊಲಗದ್ದೆಗಳಲ್ಲಿ ಜೀತದಾಳುಗಳಾಗಿಯೋ, ಕೂಲಿ ಆಳುಗಳಾಗಿಯೋ ದುಡಿಯುತ್ತಾರೆ ಮುಸಹರಿಗಳು. ಹಳ್ಳಿಗಳ ಹೊರಗೆ ಇವರು ಬದುಕುವ ಕೊಳಕುಕೂಪಗಳನ್ನು 'ಮುಸಹರ ಟೋಲಿ' ಎಂದೇ ಕರೆಯುತ್ತಾರೆ. ಇವರ ಸಾಕ್ಷರತೆಯ ಪ್ರಮಾಣ ನೂರಕ್ಕೆ ಮೂರರಷ್ಟು ಮಾತ್ರ. ಪಟನಾದ ಸಾಮಾಜಿಕ ಸ್ವಯಂಸೇವಾ ಸಂಸ್ಥೆಗಳು ಹೀಗೊಂದು ಲೆಕ್ಕಾಚಾರ ಹಾಕಿವೆ, ಈಗಿನ ಶೋಚನೀಯ ಸ್ಥಿತಿಯೇ ಮುಂದುವರಿದರೆ ಮುಸಹರರು ಪೂರ್ತಿ ಅಕ್ಷರಸ್ಥರಾಗಲು 4,419 ವರ್ಷಗಳೇ ಬೇಕಂತೆ.

ಮುಸಹರರ ಶೋಷಣೆಗೊಂದು ಉದಾಹರಣೆ ನೋಡಿ. ಜವಾಹರ ಮಾಂಝಿ ಎಂಬ ಮುಸಹರ 1980ರಲ್ಲಿ ಕುಟುಂಬದ ಮದುವೆಯೊಂದಕ್ಕೆ 40 ಕೆ.ಜಿ. ಅಕ್ಕಿಯನ್ನು ಹಳ್ಳಿಯ ಹಣವಂತನಿಂದ ಸಾಲವಾಗಿ ಪಡೆದಿದ್ದ. ಈ ಸಾಲ ತೀರಿಸಲು ಹಣವಂತನ ಹೊಲದಲ್ಲಿ ಆತ ಜೀತದಾಳಾಗಿ ದುಡಿದದ್ದು 27 ವರ್ಷ. ಹೇಗೆ ಅಂತೀರಾ? ಕರಾರಿನ ಪ್ರಕಾರ ಮಾಂಝಿ ಜೀತದಾಳಾಗಿ ದುಡಿದ ಪ್ರತಿ ದಿನಕ್ಕೂ ಸಾಲದ ಒಂದು ಕೆ.ಜಿ. ಅಕ್ಕಿ ತೀರಿದಂತೆ. ಅಂದರೆ ಆರು ವಾರಗಳ ಒಳಗಾಗಿ ಆತನ 40 ಕೆ.ಜಿ. ಅಕ್ಕಿ ಸಾಲ ತೀರಬೇಕಿತ್ತು. ಆದರೆ ಮಾಂಝಿ ಅಕ್ಕಿ ಸಾಲ ಮಾಡುತ್ತಲೇ ಹೋದ. ತನ್ನ ಮತ್ತು ತನ್ನ ಹೆಂಡತಿ ಮಕ್ಕಳ ಹೊಟ್ಟೆ ತುಂಬಿಸಬೇಕಿತ್ತಲ್ಲ? 27 ವರ್ಷಗಳ ನಂತರವೂ ತನ್ನ ಸಾಲ ಎಷ್ಟು ತೀರಿತು ಎಂಬ ಲೆಕ್ಕ ಬಗೆಹರಿಯಲಿಲ್ಲ ಅವನಿಗೆ. ಅಮಾನವೀಯ ಪರಿಸ್ಥಿತಿಯಲ್ಲಿ, ಕೆಂಡದಂತಹ ಬಿಸಿಲಿನಲ್ಲಿ ಮೈ ದಣಿಸುತ್ತಲೇ ಹೋದ. ಸಾಲ ತೀರಿತೇ ಎಂದು ಅಪರೂಪಕ್ಕೊಮ್ಮೆ ಕೇಳಲು ಹೋದರೆ ಒಡೆಯ ಥಳಿಸುತ್ತಿದ್ದ ಇಲ್ಲವೇ ಉಪವಾಸ ಕೆಡವುತ್ತಿದ್ದ. ಕೆಲವೊಮ್ಮೆ ಥಳಿತ, ಉಪವಾಸ ಎರಡೂ ಅನುಭವಿಸಬೇಕಿತ್ತು. ಕಡೆಗೆ ಐದು ಸಾವಿರ ರೂಪಾಯಿ ತೆತ್ತರೆ ಬಿಡುಗಡೆಯ ಭರವಸೆಯೇನೋ ದೊರೆಯಿತು. ಆದರೆ ಅಷ್ಟೊಂದು ಹಣವನ್ನು ಬಡ ಮಾಂಝೀ ಎಲ್ಲಿಂದ ತಂದಾನು? ಬಿಹಾರದ ಸಾಲಗಾರರು ವಿಧಿಸುವ ಬಡ್ಡಿದರ ಶೇ.10-20ರದು. ಕಿಬ್ಬದಿಯ ಕೀಲು ಮುರಿಯವಂತಹುದು. 90ರ ಇತ್ತೀಚಿನ ದಶಕದಲ್ಲಿ ಕೂಡ ಉತ್ತರ ಪ್ರದೇಶ, ಬಿಹಾರದಲ್ಲಿ ನಾಲ್ಕು ಲಕ್ಷ ಮುಸಹರರು ಜೀತದಾಳುಗಳಾಗಿ ಬದುಕಿದ್ದರು ಎಂದು ಅಧ್ಯಯನಗಳು ಹೇಳುತ್ತವೆ.

ಉತ್ತರ ಬಿಹಾರದ ಮಧುಬನಿ, ಮುಝಫ್ಫರ್‌ಪುರ ಜಿಲ್ಲೆಗಳಲ್ಲಿ ಹಸಿವಿನ ಬಾಧೆ ತಾಳಲಾರದೆ ಮುಸಹರರು ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನೇ ದಲ್ಲಾಳಿಗಳಿಗೆ 400ರಿಂದ 4,000 ರೂಪಾಯಿಗಳಿಗೆ ಮಾರಿಕೊಂಡ ಉದಾರಣೆಗಳಿವೆ. ಮಧುಬನಿಯೊಂದರಲ್ಲೇ ಇಂತಹ ಪ್ರಕರಣಗಳ ಸಂಖ್ಯೆ ಐನೂರು ದಾಟಿದ್ದೂ ಉಂಟು. ಮೇಲ್ಜಾತಿಗಳು ತಮ್ಮನ್ನು ಕುರಿತು ರಚಿಸಿರುವ ಹೀಯಾಳಿಕೆ ಮೂದಲಿಕೆಯ ಮಿಥಕಗಳು ಮತ್ತು ಗಾದೆಗಳನ್ನು ಮುಸಹರರು ಅಂತರ್ಗತ ಮಾಡಿಕೊಂಡಂತಿದೆ. ಕೆಲ ಮುಸಹರರು ತಮ್ಮ ಮಕ್ಕಳನ್ನು ಅಛೂತ (ಅಸ್ಪೃಶ್ಯ), ಸುವ್ವರ್ ಕೇ ಬಚ್ಚೇ (ಹಂದಿಮಗ), ದುಃಖಾನ್ (ದುಃಖಿ), ಸುಖಾಲಿ (ಒಣಕಲ), ಮರ್ನಿಛಿಯಾ (ಸತ್ತಂತವನು), ಬುದ್ಧೂ (ಮುಠ್ಠಾಳ), ಸಡಾಲಿ (ಕೊಳೆತವನು), ಫೆಂಕಿ ಇಲ್ಲವೇ ಫೇಕು (ಬಿಸಾಡಿದವನು) ಎಂದು ಕರೆಯುವುದನ್ನು ಕಾಣಬಹುದು.

ಅಂದಹಾಗೆ ಬಿಹಾರದ ಗಯಾ ಜಿಲ್ಲೆಯಲ್ಲಿ ಮುನ್ನೂರು ಅಡಿ ಬೆಟ್ಟವನ್ನು ಏಕಾಂಗಿಯಾಗಿ ಒಡೆದು ದಾರಿ ಮಾಡಿ ದಂತಕತೆಯೇ ಆಗಿಹೋದ ಅಸೀಮ ಸಾಹಸಿ ದಶರಥ ಮಾಂಝಿಯೂ ಒಬ್ಬ ಮುಸಹರಿ. ಆತ ಕ್ಯಾನ್ಸರಿಗೆ ತುತ್ತಾಗಿ 2007ರಲ್ಲಿ ತೀರಿಹೋದ.

ಬುಡಕಟ್ಟುಗಳ ಕೃಷಿ ಮತ್ತು ಪಾರಂಪರಿಕ ಜ್ಞಾನ ಪರಂಪರೆ ತರಬೇತಿ ಶಿಬಿರ





ಬುಡಕಟ್ಟುಗಳ ಕೃಷಿ ಮತ್ತು ಪಾರಂಪರಿಕ ಜ್ಞಾನ ಪರಂಪರೆ

ತರಬೇತಿ ಶಿಬಿರ
ಸ್ಥಳ: ಹುಣುಸೂರು
ಸಹಕಾರ: ಡೀಡ್ ಸಂಸ್ಥೆ, ಹುಣುಸೂರು
ದಿ: ೨೦.೦೨.೨೦೧೪ ರಿಂದ ೨೪.೦೨.೨೦೧೪ ವರೆಗೆ

ಡಾ. ಎ ಎಸ್ ಪ್ರಭಾಕರ್
ನಿರ್ದೇಶಕರು
ಬುಡಕಟ್ಟು ಜ್ಞಾನ ಪರಂಪರೆ ಅಧ್ಯಯನ ಮತ್ತು ತರಬೇತಿ ಕೇಂದ್ರ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ ೫೮೩ ೨೭೬








                          
                          
                          
                          
                          
                           
                           

ಶನಿವಾರ, ಫೆಬ್ರವರಿ 8, 2014

ಡೊಂಬರ ಸಮುದಾಯದ ಪ್ರತಿಭಟನೆಯ ಚಿತ್ರಗಳು



   ಫೆ.೭ ರಂದು ಶಿವಮೊಗ್ಗದ ಮುಖ್ಯ ರಸ್ತೆಗಳಲ್ಲಿ ಡೊಂಬರ ಸಮುದಾಯವು ಮೂಲಭೂತ ಸೌಲಭ್ಯಗಳಿಗಾಗಿ ಪ್ರತಿಭಟನಾ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲಿ ಕನ್ನಡ ದ್ವಜಗಳೆ ತುಂಬಿದ್ದವು. ಈ ಮೂಲಕ ನಾಡಾಭಿಮಾನವನ್ನು ಬಿಂಬಿಸುತ್ತಲೇ, ಇದೇ ನಾಡಿನಲ್ಲಿ ನಮ್ಮಂತಹ ಮೂಲಭೂತ ಸೌಲಭ್ಯಗಳೂ ಸಿಗದ ಜನರಿದ್ದೇವೆ ಎಂದು ಹೇಳುವ ಸಾಂಕೇತಿಕ ರೂಪಕದಂತಿತ್ತು. ಮೆರವಣಿಗೆಯಲ್ಲಿ ಮಹಿಳೆಯರ ಪ್ರಮಾಣವೂ ಹೆಚ್ಚಿತ್ತು. ಅವರುಗಳು ತಮ್ಮ ತಮ್ಮ ಹಳ್ಳಿಗಳಿಂದ ಬಂದವರೆ ಗಂಟು ಮೂಟೆ ಸಮೇತ ಈ ಮೆರವಣಿಗೆಯಲ್ಲಿ ಸಾಗುತ್ತಿದ್ದರು. 


 ಅಂತೆಯೇ ಇಡೀ ಕುಟುಂಬದ ಸದಸ್ಯರೆಲ್ಲಾ ಈ ಮೆರವಣಿಗೆಯಲ್ಲಿ ಸೇರಿಕೊಂಡಂತಿತ್ತು. ಆರಂಭಕ್ಕೆ ಹಿಡಿದುಕೊಂಡ ಬ್ಯಾನರ್ ನಲ್ಲಿ ‘ಭ್ರಷ್ಠ ವ್ಯವಸ್ಥೆಯ ವಿರುದ್ಧ ಹೋರಾಡೋಣ, ನವಕರ್ನಾಟಕ ನಿರ್ಮಾಣ ಮಾಡೋಣ’ ಎನ್ನುವ ಸ್ಲೋಗನ್ನಿನ ಕೆಳಗೆ ಈ ಪ್ರತಿಭಟನೆಯನ್ನು ಆಯೋಜಿಸಿದ್ದು ‘ನವಕರ್ನಾಟಕ ನಿರ್ಮಾಣವೇದಿಕೆ’ ಎಂದು ಬರೆದಿತ್ತು. ಇದರ ಕೆಳಗೆ ‘ದೊಂಬರ ಸಮುದಾಯಕ್ಕೆ ಮೂಲಭೂತ ಸೌಲಭ್ಯಗಳನ್ನು ಆಗ್ರಹಿಸಿ ಪ್ರತಿಭಟನೆ’ ಎಂದಿತ್ತು. ಅಂತೆಯೇ ‘ನವಕರ್ನಾಟಕ ನಿರ್ಮಾಣವೇದಿಕೆ’ಯ ಅಧ್ಯಕ್ಷರ ಚಿತ್ರವೊಂದು ದೊಡ್ಡದಾಗಿ ಕಾಣುತ್ತಿತ್ತು.




  ಇದು ಪ್ರತಿಭಟನೆಯ ಮೆರವಣಿಗೆ ಎಂದಿದ್ದರೂ, ಈ ಮೆರವಣಿಗೆಯಲ್ಲಿ ದೊಂಬ ಸಮುದಾಯ ವಿಶಿಷ್ಟಕಲೆಗಳ ಪ್ರದರ್ಶನದ ಮೆರವಣಿಗೆಯೂ ಆಗಿತ್ತು. ರಿಂಗಿನಲ್ಲಿ ತೂರುವ ಹುಡುಗಯರು, ಹಗ್ಗದ ಮೇಲೆ ನಡೆಯುವುದು, ಬಾಗುತ್ತಾ ನೆಲ ಮುಟ್ಟುವುದು ಪಲ್ಟಿ ಹೊಡೆಯುವುದು ಮಾಡುತ್ತಿದ್ದರು. ಒಬ್ಬರು ಎಂಟತ್ತು ವರ್ಷದ ಹುಡುಗಿಯ ಬೆನ್ನಿನ ಭಾಗಕ್ಕೆ ಒಂದು ಕೋಲಿನ ತುದಿಗೆ ಸಿಕ್ಕಿಸಿಕೊಂಡು ಮೇಲೆತ್ತುತ್ತಲೂ ರಸ್ತೆ ಬದಿಯ ಜನರೆಲ್ಲಾ ಉಸಿರುಗಟ್ಟಿ ನೋಡುತ್ತಿದ್ದರು. ಹೀಗೆ ಕೋಲಿನ ತುದಿಗೆ ಸಿಕ್ಕಿಸಿಕೊಂಡ ಹುಡುಗಿಯನ್ನು ಮೇಲೆತ್ತುತ್ತಲೂ ಎಲ್ಲರೂ ಅಬ್ಬಾ ಎಂದು ಅಚ್ಚರಿಯಾಗಿ ದೃಷ್ಟಿನೆಟ್ಟರು. ನೋಡು ನೋಡುತ್ತಿದ್ದಂತೆಯೇ ಕೋಲಿನಿಂದ ಚಂಗನೆ ಮೇಲಕ್ಕೆತ್ತಿ ಚೆಂಡಿನಂತೆ ಎಸೆದಾಗ ಆ ಹುಡುಗಿ ಮೇಲಕ್ಕೇರಿ ಕೆಳಕ್ಕೆ ಬೀಳುತ್ತಲೂ ತೂರಿದವನು ಕೆಳಕ್ಕೆ ಬೀಳದಂತೆ ಹಿಡಿದುಕೊಂಡನು. ಈ ಘಟನೆ ನೋಡುಗರ ಮೈನೆವರೇಳಿಸಿತು. ಇಂತಹದ್ದೆ ಸಮುದಾಯ ನಿಷ್ಠ ಕಲೆಗಳನ್ನು ತೋರುತ್ತಲೆ ದಾರಿಯಲ್ಲಿ ಮೆರವಣಿಗೆ ಸಾಗುತ್ತಿತ್ತು. ಆಗಾಗ ಬೇಕೇ ಬೇಕು ನ್ಯಾಯ ಬೇಕು ಎನ್ನುವ ಘೋಷಣೆಯೊಂದು ಕೇಳಿಬರುತ್ತಿತ್ತು.






 ಚಿಕ್ಕ ಹಲಗೆ, ಸಮಾಳ, ಫೈಬರ್ ತರಹದ ಡೊಳ್ಳು ಮುಂತಾದವುಗಳನ್ನು ಬಾರಿಸುತ್ತಿದ್ದರು. ಅಂತೆಯೇ ಬ್ಯಾಂಡ್ ಸೆಟ್ ನ ಓಲಗಗಳ ನಾದವೂ ಇದರೊಂದಿಗೆ ಬೆರೆತಿತ್ತು. ಹಕ್ಕೊತ್ತಾಯದ ಕೂಗುಗಳು ಯಾರಿಗೂ ಕೇಳಿಸದೆ, ವಾದ್ಯಗಳ ಸದ್ದಿನೊಳಗೆ ಬೆರೆತು ಗದ್ದಲವಾಗಿ ಮಾರ್ಪಡುತ್ತಿದ್ದವು.  




ಗುರುವಾರ, ಫೆಬ್ರವರಿ 6, 2014

ಕ್ವಾರಣ್ಯ ನೀಡಮ್ಮ... ಜನಪದ ಸಮೂಹ ಗಾಯನ


ಕ್ವಾರಣ್ಯ ನೀಡಮ್ಮ... : ರಂಗಸಂಸ್ಥಾನ ಸಂಸ್ಥೆಯು ನಗರದ ಸಂಸ ಬಯಲು ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕ್ವಾರಣ್ಯ ನೀಡಮ್ಮ’ ಜನಪದ ಸಮೂಹ ಗಾಯನ ಕಾರ್ಯಕ್ರಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಲಾವಿದರು ಜನಪದ ಗೀತೆಗಳನ್ನು ಹಾಡಿದರು. ಒಂದೇ ವೇದಿಕೆಯಿಂದ ಸಾವಿರ ಹಿರಿ ಕಿರಿಯ ಕಲಾವಿದರು ಹಾಡಿದ ಜನಪದ ಗೀತೆಗಳ ಮಾಧುರ್ಯ ಕಲಾಪ್ರೇಮಿಗಳನ್ನು ಮುದಗೊಳಿಸಿತು