ಭಾನುವಾರ, ಡಿಸೆಂಬರ್ 4, 2016

ಲಿಂಗಾಂತರಿಗಳ ಹೋರಾಟದ ಕಥನ


-ಅರುಣ್ ಜೋಳದಕೂಡ್ಲಿಗಿ
21hpt04-480x321
ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ತಪ್ಪು ತಿಳುವಳಿಕೆಯನ್ನು ಪ್ರಸಾರ ಮಾಡಿದ ಟಿ.ವಿ 9 ಕುರಿತು ಟ್ರಾನ್ಸ್‍ಜೆಂಡರ್ ಸಮುದಾಯವು `ಸ್ಟಾಪ್ ಟ್ರಾನ್ಸ್ ಫೋಬಿಯಾ’ ಎನ್ನುವ ಅಭಿಯಾನವನ್ನು ಮಾಡಿದ್ದರು. ಇದರ ಮುಂದುವರಿದ ಭಾಗವಾಗಿ 21 ಅಕ್ಟೋಬರ್ 2016 ರಂದು ಬೆಂಗಳೂರಿನ ರೈಲ್ವೇ ನಿಲ್ದಾಣದಿಂದ ಟೌನ್ ಹಾಲ್ ವರೆಗೂ `ಟ್ರಾನ್ಸ್ ಜೆಂಡರ್ ಸಮುದಾಯದ ನಡಿಗೆ; ಸಮಾನತೆಯೆಡೆಗೆ’ ಎನ್ನುವ ಸ್ವಾಭಿಮಾನಿ ಹಕ್ಕೊತ್ತಾಯದ ಜಾಥಾವನ್ನು ಹಮ್ಮಿಕೊಂಡಿದ್ದರು. ಸಾವಿರಾರು ಲಿಂಗಾಂತರಿ ಸಮುದಾಯದ ಪ್ರತಿನಿಧಿಗಳು ಈ ಹೋರಾಟದಲ್ಲಿ ಭಾಗವಹಿಸಿದ್ದರು. ಕರ್ನಾಟಕ ಟ್ರಾನ್ಸ್ ಜೆಂಡರ್ ಸಮಿತಿ, ಕರ್ನಾಟಕ ಮಂಗಳಮುಖಿ ಸಂಘಟನೆ, ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ, ಜೀವ, ಒಂದೆಡೆ, ಸಮರ, ಸಾರಥ್ಯ, ಸ್ವಾತಂತ್ರ್ಯ, ಮುಂತಾದ ಸಂಘಟನೆಗಳು ಈ ಹೋರಾಟವನ್ನು ಜಂಟಿಯಾಗಿ ಆಯೋಜಿಸಿದ್ದವು.

1111ಈ ಚಳವಳಿಯಲ್ಲಿ ತಮ್ಮ ಉಳಿವಿನ ಹೋರಾಟದಂತೆ ಲಿಂಗಾಂತರಿ ಸಮುದಾಯವು ಆತಂಕದಿಂದಲೂ, ಸಿಡಿದೆದ್ದ ಕೆಚ್ಚಿನಿಂದಲೂ ಕೂಗುತ್ತಾ ತಮ್ಮ ಹಕ್ಕೊತ್ತಾಯಗಳನ್ನು ಸರಕಾರಕ್ಕೆ ಸಲ್ಲಿಸಿದರು. ಈಚಿನ ಐದಾರು ವರ್ಷಗಳಲ್ಲಿ ಬೆಂಗಳೂರು ಒಳಗೊಂಡಂತೆ ಕರ್ನಾಟಕದಾದ್ಯಾಂತ ಇಂತಹ ಲಿಂಗಾಂತರಿ ಸಮುದಾಯದ ಪ್ರತಿಭಟನೆಗಳು ನಡೆದಿವೆ. ಈ ಎಲ್ಲಾ ಹೋರಾಟಗಳ ಒಂಟಿ ಧ್ವನಿಯೆಂದರೆ, `ನಮ್ಮನ್ನು ಘನತೆಯಿಂದ ಬದುಕಲು ಬಿಡಿ, ಘನತೆಯ ಬದುಕಿಗೆ ಅವಕಾಶ ಕೊಡಿ, ಮನುಷ್ಯರಂತೆ ನಮ್ಮನ್ನು ಭಾವಿಸಿ’ ಎನ್ನುವುದೇ ಆಗಿದೆ. ಜಾಗತಿಕ ನೆಲೆಯಲ್ಲಿಯೂ ಇದೇ ಬೇಡಿಕೆ ಮುಖ್ಯವಾಗಿದೆ.
1546365_552513911506058_1290251370_n

ಹೀಗೆ ಲಿಂಗಾಂತರಿ ಸಮುದಾಯವು ಇಂದು ಒಟ್ಟಾಗಿ ದೊಡ್ಡಮಟ್ಟದಲ್ಲಿ ಹೋರಾಟಗಳನ್ನು ರೂಪಿಸುತ್ತಿದೆ. ತನ್ನ ಸಂವಿಧಾನಿಕ ಹಕ್ಕುಗಳನ್ನು ಗಟ್ಟಿಧ್ವನಿಯಲ್ಲಿ ಕೇಳುತ್ತಿದೆ. ಲಿಂಗಬದಲಾವಣೆ ತಮ್ಮ ತಪ್ಪಲ್ಲ ಸಹಜ ಜೈವಿಕ ಬದಲಾವಣೆ ಎನ್ನುವುದನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡುತ್ತಿದೆ. ಜಾಗತಿಕವಾಗಿ ಈ ಹೋರಾಟಕ್ಕೆ ದೊಡ್ಡ ಚರಿತ್ರೆಯಿದೆ. ಭಾರತದಲ್ಲಿ ಮುಖ್ಯವಾಗಿ ತಮಿಳುನಾಡಿನ ಲಿಂಗಾಂತರಿಗಳ ಹೋರಾಟ ದೇಶಕ್ಕೇ ಮಾದರಿಯಾಗಿದೆ. ಇದೀಗ ಕರ್ನಾಟಕದ ಸಂದರ್ಭದಲ್ಲಿಯೂ ಈ ಬಗೆಯ ಲಿಂಗಾಂತರಿಗಳ ಹೋರಾಟ ಗಟ್ಟಿ ಸ್ವರೂಪವನ್ನು ಪಡೆಯುತ್ತಿದೆ. ಇಂತಹ ಲಿಂಗಾಂತರಿ ಸಮುದಾಯದ ಹೋರಾಟದ ಕಥನದ ಕೆಲವು ಎಳೆಗಳಲ್ಲಿ ಇಲ್ಲಿವೆ.
**
ದೇಶದಾದ್ಯಾಂತ ಗಂಡಿನಿಂದ ಹೆಣ್ಣಾಗಿ ಬದುಕುವವರನ್ನು ಹಿಜಿಡಾ, ಕೋತಿ, ಷಂಡ, ನಂಬರ್ ನೈನ್, ಗಂಡುಜೋಗ್ತಿ, ಹೀಗೆ ದೊಡ್ಡ ಪಟ್ಟಿ ಮಾಡುವಷ್ಟು ನುಡಿಗಟ್ಟುಗಳಿಂದ ಈ ಸಮುದಾಯವನ್ನು ಗುರುತಿಸಲಾಗುತ್ತಿದೆ. ಈ ಅವಮಾನದ ಬಿಡುಗಡೆಗಾಗಿ ಹಲವರು ಗೌರವಸೂಚಕಗಳಾದ ಶಿವಶಕ್ತಿ, ಅರವಣೀಸ್, ಮಂಗಳಮುಖಿ ಮುಂತಾದ ನುಡಿಗಟ್ಟುಗಳನ್ನೂ ಬಳಕೆಗೆ ತಂದರು. ವಿಪರ್ಯಾಸವೆಂದರೆ ಈ ನುಡಿಗಟ್ಟುಗಳೂ ಕಾಲಾನಂತರದಲ್ಲಿ ಅವಮಾನಿಸುವ ಪದಗಳಾಗಿ ಬದಲಾಗಿವೆ. ಸುಪ್ರಿಂ ಕೋರ್ಟ್ ಮಾನ್ಯ ಮಾಡಿದ ಥರ್ಡ್ ಜೆಂಡರ್ ನುಡಿಗಟ್ಟು ಕೂಡ ತರತಮದ್ದು. ಕಾರಣ ಗಂಡನ್ನು ಪ್ರಥಮಲಿಂಗ, ಹೆಣ್ಣನ್ನು ದ್ವಿತೀಯಲಿಂಗ, ಈ ಎರಡೂ ಅಲ್ಲದವರನ್ನು ತೃತೀಯ ಲಿಂಗವೆಂದು ಕರೆಯುವ ಈ ಪದ ಸಮಾಜದ ಶ್ರೇಣೀಕರಣಕ್ಕೆ ಪುಷ್ಟಿಯಾಗಿದೆ. ನಿಜವೆಂದರೆ ಜೈವಿಕವಾಗಿ ಹಾರ್ಮೋನ್ಸ್ ವೈಪರೀತ್ಯದಿಂದಾಗಿ ದೇಹದ ಒಳಗೆ ಒಂದು `ಲಿಂಗಾಂತರ’ ಪ್ರಕ್ರಿಯೆ ನಡೆಯುತ್ತದೆ. ಅದನ್ನು `ಟ್ರಾನ್ಸ್’ ಎನ್ನಬಹುದು. ಈ ನೆಲೆಯಲ್ಲಿ ಟ್ರಾನ್ಸ್ ಜೆಂಡರ್ ಎನ್ನುವುದು ಜೈವಿಕವಾಗಿ ವೈಜ್ಞಾನಿಕ ನುಡಿಗಟ್ಟು. ಇದೀಗ ಈ ಸಮುದಾಯವೂ ಜಾಗತಿಕವಾಗಿ ಈ ಪದವನ್ನು ಮಾನ್ಯ ಮಾಡುತ್ತಿದೆ. ಇದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ `ಲಿಂಗಾಂತರಿ’ ಸಮೀಪವರ್ತಿ ಪದವಾಗಿದೆ.
1525108_10152125768833764_691664526_n

  `ಲಿಂಗಾಂತರಿ’ ಎಂದರೆ ಗಂಡು ಹೆಣ್ಣೆಂಬ ಎರಡು ಲಿಂಗಗಳ ನಡುವೆ ಅಂತರವನ್ನು ಕಾಯ್ದುಕೊಂಡು, ಈ ಎರಡರ ಲಕ್ಷಣಗಳನ್ನೂ ಒಳಗೊಂಡು, ಪ್ರತ್ಯೇಕ ಲಿಂಗದ ಗುಣಗಳನ್ನು ಹೊಂದಿದ ದೈಹಿಕ, ಮಾನಸಿಕ, ಲೈಂಗಿಕ ಸ್ಥಿತಿಯನ್ನು ತೋರ್ಪಡಿಸುವ ಒಂದು ಸಮುದಾಯ ಎಂದು ಹೇಳಬಹುದು. ಅಂದರೆ ಎರಡೂ ಲಿಂಗಗಳ ಅಂತರವಿರುವ, ಏಕಕಾಲಕ್ಕೆ ಎರಡೂ ಲಿಂಗಗಳ ಲಕ್ಷಣಗಳನ್ನು ಅಡಗಿಸಿಟ್ಟುಕೊಂಡ ಒಂದು ದೈಹಿಕ ಸ್ವರೂಪವಾಗಿದೆ. ಅಂತೆಯೇ ಗಂಡು ಹೆಣ್ಣು ಎಂಬ ಎರಡು ಲಿಂಗಗಳಿಗೆ ಆರೋಪಿಸಲಾದ ಗುಣಗಳನ್ನು ಪಾಲಿಸದ, ಅಥವಾ ಆ ಎಲ್ಲೆಗಳನ್ನು ಮೀರುವ ಒಂದರೊಳಗೊಂದು ಸಂಕರಗೊಂಡ ಲಕ್ಷಣಗಳನ್ನು ತೋರ್ಪಡಿಸುವ ಸಮುದಾಯ ಎಂತಲೂ ಗುರುತಿಸಬಹುದು.

ಲಿಂಗಾಂತರಿ ಸಮುದಾಯದಲ್ಲಿ ಗುರುತಿಸಬಹುದಾದ ಕೆಲವು ಗುಂಪುಗಳನ್ನು ಪರಿಶೀಲಿಸೋಣ. ಗಂಡಿನಿಂದ ಹೆಣ್ಣಾದ, ಹೆಣ್ಣಿನಿಂದ ಗಂಡಾದ ಮತ್ತು ಗಂಡಿನಲ್ಲಿ ಹೆಣ್ಣಿನ ಭಾವನೆಗಳೊಂದಿಗೆ, ಹೆಣ್ಣಿನಲ್ಲಿ ಗಂಡಿನ ಭಾವನೆಗಳೊಂದಿಗೆ ಬದುಕುವ ಸಮುದಾಯ, ಅಂತೆಯೇ ಹೆಣ್ಣು ಹೆಣ್ಣಿನೊಂದಿಗೆ, ಗಂಡು ಗಂಡಿನೊಂದಿಗೆ ಅದಲು ಬದಲಾದ ಲೈಂಗಿಕ ಇಚ್ಚೆಗಳನ್ನು ವ್ಯಕ್ತಪಡಿಸುವ ಮತ್ತು ಪೂರೈಸಿಕೊಳ್ಳುವ ಸಮುದಾಯ. ಹೀಗೆ ಲಿಂಗಾಂತರದ ಕಾರಣಕ್ಕೆ ಗಂಡು ಹೆಣ್ಣಿನ ಚೌಕಟ್ಟುಗಳಾಚೆಗೆ ರೂಪುಗೊಂಡ ಉಪ ಗುಂಪುಗಳನ್ನು ಲಿಂಗಾಂತರಿ ಸಮುದಾಯ ಎಂದು ಗುರುತಿಸಬಹುದು.
**
ಟ್ರಾನ್ಸ್‍ಜೆಂಡರ್ ಸಮುದಾಯವನ್ನು ಜಾಗತಿಕ ನೆಲೆಯಲ್ಲಿ ನೋಡಿದಾಗಲೂ ಗಂಡು-ಹೆಣ್ಣು ಲಿಂಗರಚನೆಯ ಸಾಮಾಜಿಕ ದೃಷ್ಟಿಕೋನದ ಕೆಂಗಣ್ಣಿಗೆ ತುತ್ತಾದ ದುಃಖದ ಕಥನಗಳೇ ತುಂಬಿವೆ. ಹಾಗೆ ನೋಡಿದರೆ ಈ ಹಾರ್ಮೋನ್ಸ್ ವೈಪರೀತ್ಯಕ್ಕೆ ಒಳಗಾದ ಸಮುದಾಯವನ್ನು ಜಾಗತಿಕವಾಗಿಯೂ ಒಂದೇ ತೆರನಾಗಿ ಕಂಡಿದೆ. ಅಂತೆಯೇ ಇಂತಹ ದೃಷ್ಟಿಕೋನವನ್ನು ಬದಲಾಯಿಸಲು ಜಾಗತಿಕವಾಗಿಯೂ ಈ ಸಮುದಾಯ ದೊಡ್ಡ ಮಟ್ಟದ ಹೋರಾಟಗಳನ್ನು ರೂಪಿಸಿದೆ. ನಿರಂತರವಾಗಿ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಅದೇ ಸಮುದಾಯ ಹಗಲಿರುಳು ಶ್ರಮಿಸಿದೆ. ಈ ಹೋರಾಟಗಳು ಗಂಡು ಹೆಣ್ಣು ಸಂರಚನೆಯ ಸಮಾಜದಾಚೆಯ ಹೊಸ ಜಗತ್ತನ್ನು ಕಣ್ಣೆದುರು ತಂದಿವೆ. ಗಂಡು ಹೆಣ್ಣಿಗೆ ಆರೋಪಿಸಿದ ಲಕ್ಷಣಗಳಿಗೆ ಲಗತ್ತಾಗದ ಮತ್ತೊಂದು ಸಮುದಾಯವೇ ಜಗತ್ತಿನಾದ್ಯಾಂತ ರೂಪುಗೊಂಡಿದೆ. ಜಾಗತಿಕವಾಗಿ ಈ ಸಮುದಾಯ ಹಲವು ಹಕ್ಕೊತ್ತಾಯಗಳನ್ನು ಮಂಡಿಸುತ್ತಿದೆ.
11

ಲಿಂಗ ಪರಿವರ್ತಿತ ಶಾಲಾ ಮಕ್ಕಳ ರಕ್ಷಣೆಗೆ ಕಾಯ್ದೆ
ಕ್ಯಾಲಿಫೋರ್ನಿಯಾದಲ್ಲಿ ಲಿಂಗ ಪರಿವರ್ತಿತ ವಿದ್ಯಾರ್ಥಿಗಳ ಹಕ್ಕನ್ನು ಕಾಪಾಡಲು ಮತ್ತು ಇವರ ವಿದ್ಯಾಭ್ಯಾಸವನ್ನು ಮುಂದುವರಿಸಲು ಅನುವಾಗುವಂತೆ ಆರಂಭಿಕವಾಗಿ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಈ ಕುರಿತಾದ School Succ1525108_10152125768833764_691664526_ness and Opportunity Act, (SSOA) ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ಈ ಕಾಯಿದೆ ಜಾರಿಗೆ ಸಾಕಷ್ಟು ವಿರೋಧ ಬಂದರೂ ಅದನ್ನು ಲೆಕ್ಕಿಸದೆ ಕಾಯಿದೆ ಜಾರಿ ಮಾಡುವಲ್ಲಿ ಈ ಭಾಗದ ಎಲ್.ಜಿ.ಬಿ.ಟಿ ಕಮ್ಯನಿಟಿ (ಲೆಸ್ಬಿಯನ್, ಗೇ, ಬೈಸೆಕ್ಸುವಲ್, ಟ್ರಾನ್ಸ್‍ಜೆಂಡರ್) ಸಾಕಷ್ಟು ಶ್ರಮಪಟ್ಟಿದೆ.

ಎಲ್ಜಿಬಿಟಿ ಸಮುದಾಯದ 40% ರಷ್ಟು ವಿದ್ಯಾರ್ಥಿಗಳು ಮನೆ ಇಲ್ಲದೆ ಅಲೆಯುತ್ತಿದ್ದಾರೆ. 6 ರಿಂದ 12 ನೇ ತರಗತಿ ಒಳಗಿನ 8,500 ಎಲ್ಜಿಬಿಟಿ ವಿದ್ಯಾರ್ಥಿಗಳಲ್ಲಿ 85% ಹಿಯಾಳಿಸುವುದರಿಂದ ಹಿಂಸೆಗೆ ಒಳಗಾಗಿದ್ದರೆ, 38% ರಷ್ಟು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಈ ಬಗೆಯ ಎಲ್ಜಿಬಿಟಿ ಸಮುದಾಯಕ್ಕೆ ಆಗುತ್ತಿರುವ ಹಿಂಸೆಯನ್ನು ವಿರೋಧಿಸಿ GLSEN (Gay, Lesbian and Straight Education Network)  ಸಂಸ್ಥೆಯು ಇದರ ವಿರುದ್ಧ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿತ್ತು.

ಲಿಂಗ ವೈಪರೀತ್ಯವನ್ನು ಅನುಭವಿಸುವ ಸಮುದಾಯಗಳು ಎಲ್ಲಾ ಬಗೆಯ ಹಿಂಸೆ, ಕಿರುಕುಳ, ಅವಮಾನಗಳನ್ನು ಎದುರಿಸಲು ಈ ಸಮುದಾಯ ಶಿಕ್ಷಿತರಾಗಬೇಕು, ಶಿಕ್ಷಣ ಮಾತ್ರ ಈ ಸಮುದಾಯ ತನ್ನನ್ನು ತಾನು ಬಿಡುಗಡೆಗೊಳಿಸಿಕೊಳ್ಳುವ ದಾರಿಗಳನ್ನು ತೆರೆಯಬಲ್ಲದೆಂದು ಕ್ಯಾಲಿಫೋರ್ನಿಯಾದ National Center for Transgender  Equality  ಅಭಿಪ್ರಾಯ ಪಟ್ಟಿತ್ತು. ಈ ಸಂಸ್ಥೆ 2010 ರಲ್ಲಿ ಮಾಡಿದ ಅಧ್ಯಯನದ ಪ್ರಕಾರ ಲಿಂಗ ಬದಲಾವಣೆಯ ಲಕ್ಷಣ ಕಾಣಿಸಿಕೊಂಡ ಶೇ 60 ರಷ್ಟು ಮಕ್ಕಳು ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆಂದು ತಿಳಿಸಿದೆ. ಅಂತೆಯೇ ಇವರ ಶಿಕ್ಷಣ ಕುಂಟಿತವಾಗುವುದೂ ಕೂಡ ಈ ಸಮುದಾಯ ಪ್ರಭಲವಾಗಿ ಹೋರಾಟ ಕಟ್ಟದಿರಲು ಕಾರಣವಾಗಿದೆ ಎಂದಿದೆ. ಓಅಖಿಇ ವರದಿಯನ್ನು ಆಧರಿಸಿಯೇ ಲಿಂಗ ಬದಲಾವಣೆಯ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆಯಲಾಗಿದೆ.

ಅಂತೆಯೇ SSOA ಕಾಯ್ದೆಯು ಸಾಮಾನ್ಯ ಶಾಲೆಗಳು ಅನುಸರಿಸಬೇಕಾದ ಕಟ್ಟುನಿಟ್ಟಿನ ನಿಯಮಗಳನ್ನೂ ಜಾರಿಗೊಳಿಸಿದೆ. ಯಾವುದೇ ಶಾಲೆಯಲ್ಲಿ ಲಿಂಗಬದಲಾವಣೆಯ ಲಕ್ಷಣಗಳಿರುವ ಮಕ್ಕಳಿಗೆ ಹಿಂಸಿ ಕೊಟ್ಟರೆ, ಅವಮಾನ ಮಾಡಿದರೆ, ಪ್ರತ್ಯೇಕವಾಗಿ ಗುರುತಿಸಿ ಹೊರಗಿಡುವ ಪ್ರಯತ್ನ ಮಾಡಿದರೆ ಅದು ಶಿಕ್ಷಾರ್ಹ ಅಪರಾದ ಎಂದು ಈ ಕಾಯಿದೆ ಹೇಳುತ್ತದೆ. ಪ್ರತಿಶಾಲೆಯಲ್ಲಿಯೂ ಈ ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಒಳಗೊಂಡಂತೆ, ವಿರಾಮ ಕೊಠಡಿಗಳನ್ನೂ ಮಾಡಬೇಕಾಗಿದೆ ಎಂದು ಹೇಳಿದೆ. ಅಂತೆಯೇ ಲಿಂಗವೈಪರೀತ್ಯದ ಸಹಜ ಪ್ರಕ್ರಿಯೆಗಳನ್ನು ಅರ್ಥಮಾಡಿಸುವ ಪಾಠಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವುದನ್ನು ಈ ಕಾಯಿದೆ ಕಡ್ಡಾಯಗೊಳಿಸಿದೆ. ವಿಶೇಷವೆಂದರೆ, California State Parent Teacher Association, or PTA  ಕೂಡಾ ಈ ಕಾಯಿದೆಯನ್ನು ಬೆಂಬಲಿಸಿದೆ.
1546365_552513911506058_1290251370_n

ವಿಶ್ವಲಿಂಗಾಂತರಿ ದಿನ
ಲಿಂಗಾಂತರಿ ಸಮುದಾಯವು ` Transgender Day of Remembrance’ ’ ಎಂದು ಕರೆದುಕೊಂಡಿದ್ದಾರೆ. ಲಿಂಗಬದಲಿ ಸಮುದಾಯಕ್ಕೆ ಜಾಗತಿಕವಾಗಿ ಒಂದೇ ಬಗೆಯ ನೋವಿದೆ, ಒಂದೇ ಬಗೆಯ ಹಿಂಸೆ ಇದೆ ಹಾಗಾಗಿ ಇದನ್ನು ವಿರೋಧಿಸಲು ಸಹಾ ಜಾಗತಿಕ ಹೋರಾಟಗಳನ್ನು ರೂಪಿಸಬೇಕಾದ ಅಗತ್ಯವನ್ನು ಇಂದು ಈ ಸಮುದಾಯ ಮನಗಂಡಿದೆ. ಹಾಗಾಗಿ ಜಾಗತಿಕ ನೆಲೆಯ ಸಂಕೇತಗಳ ಅಡಿಯಲ್ಲಿ ಈ ಸಮುದಾಯ ತನ್ನ ಅಸ್ಥಿತ್ವವನ್ನು ಕಂಡುಕೊಳ್ಳುತ್ತಿದೆ. ಇದರ ಭಾಗವಾಗಿಯೇ ನವೆಂಬರ್ 20 ನೇ ತಾರೀಕನ್ನು ಟ್ರಾನ್ಸ್ ಜೆಂಡರ್ ಡೇ ಎಂದು ಆಚರಣೆ ಮಾಡಲಾಗುತ್ತಿದೆ. ಈ ದಿನವನ್ನು ಭಾರತದಲ್ಲಿನ ಈ ಸಮುದಾಯಗಳೂ ಹೋರಾಟದ ಸಂಕೇತವಾಗಿ ಆಚರಿಸಲು ಆರಂಭಿಸಿವೆ.

ಅಮೇರಿಕಾದ ಆಫ್ರಿಕನ್ ಮೂಲದ ರಿತ ಹೆಸ್ಟರ್ ಎಂಬ ಟ್ರಾನ್ಸ್ ಮಹಿಳೆಯನ್ನು 1998 ರ ನವೆಂಬರ್ ನಂದು ಕೊಲೆಗೈಯಲಾಗುತ್ತದೆ. ಈ ಕೊಲೆಯನ್ನು ವಿರೋಧಿಸಿ ಅಮೇರಿಕಾದಾದ್ಯಾಂತ ಹೋರಾಟ ಚಳವಳಿಗಳು ನಡೆದವು. ಈ ಸಾವನ್ನು ನೆನಪಿಸಿಕೊಳ್ಳುವ ಭಾಗವಾಗಿ ನವೆಂಬರ್ 20ನ್ನು ರಾಷ್ಟ್ರೀಯ `ಟ್ರಾನ್ಸ್ ಜೆಂಡರ್ ಡೇ ಆಪ್ ರಿಮೆಂಬರನ್ಸ್’ ಎಂಬ ಹೆಸರಲ್ಲಿ ಆಚರಿಸಲಾಗುತ್ತದೆ.

ಲಿಂಗಾಂತರಿ ಬಾವುಟ
LONDON - JULY 05: A flag flies during the Gay Pride parade on July 5, 2008 in London. The parade consists of celebrities, floats, and performers celebrating the UK's largest gay and lesbian festival. (Photo by Mark Wieland/Getty Images)  (Photo by Mark Wieland/Getty Images)

LONDON - JULY 05: A flag flies during the Gay Pride parade on July 5, 2008 in London. The parade consists of celebrities, floats, and performers celebrating the UK's largest gay and lesbian festival. (Photo by Mark Wieland/Getty Images)  (Photo by Mark Wieland/Getty Images)
LONDON – JULY 05: A flag flies during the Gay Pride parade on July 5, 2008 in London. The parade consists of celebrities, floats, and performers celebrating the UK’s largest gay and lesbian festival. (Photo by Mark Wieland/Getty Images) (Photo by Mark Wieland/Getty Images)

ಟ್ರಾನ್ಸ್ ಜೆಂಡರ್ ಸಮುದಾಯದ ಹೋರಾಟಗಳಲ್ಲಿ ಬಾವುಟವೊಂದು ಹಾರಾಡುತ್ತಿದೆ. ಈ ಬಾವುಟವು ಈ ಸಮುದಾಯದ ಅನನ್ಯತೆಯನ್ನು ಸಾರುತ್ತಿದೆ. ಮೇಲೆ ಕೆಳಗೆ ಕ್ರಮವಾಗಿ ಎರಡು ನೀಲಿ, ಎರಡು ಗುಲಾಬಿ, ನಡುಮಧ್ಯೆ ಬಿಳಿ ಬಣ್ಣವನ್ನು ಒಳಗೊಂಡ ಈ ಬಾವುಟದ ರಚನೆಯು ಲಿಂಗಸಂಬಂಧಿ ಸಂಕರಶೀಲತೆಯನ್ನು ಸಂಕೇತಿಸುತ್ತದೆ. ಗಂಡು ಮಗುವಿನ ಸಂಪ್ರದಾಯಿಕತೆಯನ್ನು ನೀಲಿ ಬಣ್ಣ ಸೂಚಿಸುತ್ತದೆ. ಹೆಣ್ಣು ಮಗುವಿನ ಸಾಂಪ್ರದಾಯಿಕತೆಯನ್ನು ಗುಲಾಬಿ ಬಣ್ಣ ಸೂಚಿಸುತ್ತಿದೆ. ಅಂತೆಯೇ ನಡುವಿನ ಬಿಳಿ ಬಣ್ಣ ಲಿಂಗ ಬದಲಾದ ಅಥವಾ ತಟಸ್ಥ ಲಿಂಗಿಗಳನ್ನು ಸೂಚಿಸುತ್ತದೆ. ಇಂದು ಈ ಬಾವುಟವನ್ನು ಜಗತ್ತಿನಾದ್ಯಾಂತ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಕ್ಕೆ ಒಂದು ಸಾಂಕೇತಿಕವಾಗಿ ಬಳಕೆಯಾಗುತ್ತಿದೆ.

ಟ್ರಾನ್ಸ್ ಜೆಂಡರ್ ಮಹಿಳೆ ಮೋನಿಕಾ ಹೆಲ್ಮ್‍ಈ ದ್ವಜವನ್ನು ವಿನ್ಯಾಸಗೊಳಿಸಿದ್ದಾರೆ. ಇದನ್ನು ಮೊದಲ ಬಾರಿಗೆ 2000 ರಲ್ಲಿ ಫೀನಿಕ್ಸ್ ಅರಿಜೋನ, USಂ ನಲ್ಲಿ ಒಂದು ಪ್ರೈಡ್ ಪೆರೇಡ್‍ನಲ್ಲಿ ಹಾರಿಸಲಾಯಿತು. ಹೆಲ್ಮ್ ಈ ಧ್ವಜ ಹಾರಿದ ಸಂದರ್ಭದಲ್ಲಿ `ಬೆಳಕಿನ ನೀಲಿ ಬೇಬಿ ಹುಡುಗರ ಸಾಂಪ್ರದಾಯಿಕ ಬಣ್ಣವಾಗಿದೆ, ನಸುಗೆಂಪು ಹುಡುಗಿಯರನ್ನು ಸೂಚಿಸುತ್ತದೆ, ಮಧ್ಯದ ಬಿಳಿ ಬಣ್ಣ ಯಾವುದೇ ಲಿಂಗ ಹೊಂದದ ಭಾವವಾಗಿದೆ. ಈ ಬಾವುಟ ಹಾರುತ್ತಿದ್ದರೆ, ನಮ್ಮ ಜೀವನದಲ್ಲಿ ಬದುಕುವ ಹಕ್ಕಿಗಾಗಿ ನಾವು ತಹತಹಿಸುತ್ತಿದ್ದೇವೆ ಎನ್ನುವುದನ್ನು ಸಾಂಕೇತಿಸುತ್ತದೆ’ ಎಂದು ಹೇಳಿದ್ದಾಳೆ.

ಲಿಂಗಬದಲಿ ಮಹಿಳಾ ಸಮುದಾಯ ಇತಿಹಾಸದಲ್ಲಿ ಮೊದಲ ಬಾರಿಗೆ, ಸ್ಯಾನ್ ಫ್ರಾನ್ಸಿಸ್ಕೊನ ಹಾರ್ವೆ ಮಿಲ್ಕ್ ಪ್ಲಾಜಾದಲ್ಲಿರುವ ಸಾಂಪ್ರದಾಯಿಕ ಸ್ತಂಭದಲ್ಲಿ ಟ್ರಾನ್ಸ್‍ಜೆಂಡರ್ ಗುರುತಿನ ಬಾವುಟವನ್ನು 2012 ರ ನವೆಂಬರ್ 20 ರಂದು ಹಾರಿಸಲಾಯಿತು. ಜಾಗತಿಕವಾಗಿ ನವೆಂಬರ್ 20 ಟ್ರಾನ್ಸ್‍ಜೆಂಡರ್ ನೆನಪಿನ ದಿನವನ್ನಾಗಿ ಆಚರಿಸಲು ಅಂದು ಈ ಸಮುದಾಯ ಜಗತ್ತಿನ ತನ್ನ ಸಮುದಾಯಕ್ಕೆ ಕರೆ ಕೊಟ್ಟಿದೆ.

ಲಿಂಗಾಂತರಿ `ಚಿಟ್ಟೆ’

ಜೆನ್ನಿಫರ್ ಫೆಲ್ಲಿನೆನ್ 2002 ರಲ್ಲಿ ಟ್ರಾನ್ಸ್ ಜೆಂಡರ್ ಸಂಕೇತವಾಗಿ ಪರ್ಯಾಯ ವಿನ್ಯಾಸ ರಚಿಸಿದಳು. ಅದು ಚಿಟ್ಟೆ. ಮನುಷ್ಯದೇಹದ ಲಿಂಗ ರೂಪಾಂತರವನ್ನು ಈ ಚಿಟ್ಟೆ ಸಾಂಕೇತಿಸುತ್ತದೆ ಎಂದು ಜೆನ್ನಿಫರ್ ಹೇಳಿಕೊಂಡಿದ್ದಾಳೆ. ಒಂದು ಗುಲಾಬಿ ಮತ್ತು ತಿಳಿ ನೀಲಿ ಯಿನ್ ಮತ್ತು ಯಾಂಗ್ ಚಿಹ್ನೆಯನ್ನು ಸೇರಿದೆ. ಈ ಚಿಟ್ಟೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ಸಮುದಾಯದ ಸಂಗಾತಿಗಳು ಹೆಚ್ಚಾಗಿ ಬಳಸುತ್ತಿದ್ದಾರೆ. ಇದು ಈ ಸಮುದಾಯದ ಕೋಮಲತೆಯನ್ನೂ ಬಿಂಬಿಸುವಂತಿದೆ.

ರಾಜಕೀಯ ಹಕ್ಕೊತ್ತಾಯಗಳು
ಲೈಂಗಿಕ ಅಲ್ಪಸಂಖ್ಯಾತರ ಗುಂಪು ಅಲಕ್ಷಿತವಾಗಿರುವ ಕಾರಣ, ಪ್ರತ್ಯೇಕ ರಾಜಕೀಯ ಮೀಸಲಾತಿಗಾಗಿ ಹೋರಾಟಗಳು ನಡೆಯುತ್ತಿವೆ. ಅಂತೆಯೇ `ಪಾರ್ಲಿಮೆಂಟರಿ ಫೋರಂ ಆನ್ ಟ್ರಾನ್ಸ್‍ಸೆಕ್ಸ್ವಲಿಜಮ್’ `ನ್ಯಾಷನಲ್ ಸೆಂಟರ್ ಫಾರ್ ಟ್ರಾನ್ಸ್‍ಜೆಂಡರ್ ಇಕ್ವಾಲಿಟಿ’ ಯಂತಹ ಸಂಘಟನೆಗಳು ಎಲ್.ಜಿ.ಬಿ.ಟಿ ಸಮುದಾಯದ ರಾಜಕೀಯ ಮೀಸಲಾತಿಗಾಗಿ ಜಾಗತಿಕ ಹೋರಾಟಗಳನ್ನೂ ನಡೆಸುತ್ತಿವೆ. ಈ ಹೋರಾಟಗಳು ದ್ವಿಲಿಂಗಿ ರಾಜಕಾರಣವನ್ನು ಪ್ರಶ್ನಿಸುತ್ತಾ, ತಮ್ಮ ರಾಜಕೀಯ ಪ್ರವೇಶವನ್ನು ಕೇಳುತ್ತಿದ್ದಾರೆ. ಈ ಕಾಲದ ಒಳಗಿಂದಲೇ ಹುಟ್ಟಿದ ಇಂತಹ ಪ್ರಶ್ನೆಯೊಂದನ್ನು ನಿರಾಕರಿಸುವಂತಿಲ್ಲ, ಗಂಭೀರವಾಗಿ ಪರಿಗಣಿಸಲೇಬೇಕಿದೆ.

ಭಾರತದ ರಾಜಕೀಯ ಇತಿಹಾಸದಲ್ಲಿ ಇದಕ್ಕೊಂದು ಚರಿತ್ರೆಯೂ ಇದೆ. ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಹಿಜ್ರಾ ಶಬನಂ ಮೌಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 1998-2003 ರ ಅವಧಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಇವಳ ಬದುಕನ್ನು ಆಧರಿಸಿ ಸಿನೆಮಾವೊಂದು ಬಂದಿದೆ. ಮಧ್ಯಪ್ರದೇಶದ ಅತ್ಯಂತ ಹಳೆಯದಾದ ಪೌರಾಡಳಿತ ಸಂಸ್ಥೆಯಲ್ಲಿ ಹಿಜ್ರಾ ಮಿನಾಬಾಯಿ ಸೆಹೊರಾ ನಗರ ಮುನಿಸಿಪಾಲಿಟಿಗೆ ಅಧ್ಯಕ್ಷರಾಗಿದ್ದರು. 2000ರಲ್ಲಿ ಆಶಾದೇವಿ ಮಹಿಳಾ ಮೀಸಲಾತಿ ಕೋಟಾದಡಿ ಗೋರಕ್‍ಪುರದ ಮೇಯರ್ ಆಗಿ ಆಯ್ಕೆಯಾಗಿದ್ದರು. 2005ರಲ್ಲಿ 24 ವರ್ಷ ವಯಸ್ಸಿನ ಸೋನಿಯಾ ಅಜ್ಮೆರಿ 40,000 ಜನ ಹಿಜ್ರಾಗಳ ಪ್ರತಿನಿಧಿಯಾಗಿ ಗುಜಾರಾತ್‍ನ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆಗ ಅಲ್ಲಿನ ನ್ಯಾಯಾಲಯ ಆಶಾದೇವಿ ಗಂಡಸು ಎಂದು ತೀರ್ಪು ಕೊಟ್ಟಿದ್ದರಿಂದ ಸ್ಥಾನವನ್ನು ಕಳೆದುಕೊಂಡಿದ್ದರು. ಆನಂತರ ಅವರು ಕಾನೂನಾತ್ಮಕ ಹೋರಾಟ ಮಾಡಿ ತಮ್ಮ ಶಾಸಕಿ ಸ್ಥಾನವನ್ನು ಪುನಃ ಪಡೆದುಕೊಂಡಿದ್ದರು.
 ಭಾರತಕ್ಕೆ ಹೊಂದಿಕೊಂಡತಿರುವ ನೇಪಾಳ ಸರಕಾರವು 2013 ರಲ್ಲಿ `ಮೂರನೆ ಲಿಂಗ’ ಅಥವಾ `ಲೈಂಗಿಕ ಅಲ್ಪಸಂಖ್ಯಾತ’ ಸಮುದಾಯವು ಚುನಾವಾಣೆಗೆ ಸ್ಪರ್ಧಿಸುವ ಮತ್ತು ಮತ ಚಲಾಯಿಸುವ ಹಕ್ಕನ್ನು ಅಧಿಕೃತವಾಗಿ ಘೋಷಿಸಿತ್ತು. ಹಾಗಾಗಿ 2013ರ ನೇಪಾಳದ ವಿಧಾನ ಸಭಾ ಚುನಾವಣೆಯಲ್ಲಿ 63 ಲೈಂಗಿಕ ಅಲ್ಪಸಂಖ್ಯಾತರು ಚುನಾವಣೆಗೆ ಸ್ಪರ್ಧಿಸಿದ್ದರು.

2013 ರಲ್ಲಿ ನಡೆದ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಲಿಂಗಾಂತರಿ ಬಿಂದಿಯಾ ರಾಣ ಮತ್ತು ವೀರೂ ಕೊಹ್ಲಿಯವರು ಚುವಾವಣೆಗೆ ಸ್ಪರ್ಧಿಸಿದ್ದರು. ಇದನ್ನು ಇಲ್ಲಿನ ಚುನಾವಣಾ ಆಯೋಗವು ಅಂಗೀಕರಿಸಿತ್ತು. “ರಾಷ್ಟ್ರದ ರಾಜಕಾರಣದಲ್ಲಿ ಭೂಮಾಲೀಕರು, ಉದ್ಯಮಿಗಳು ಹಾಗೂ ವೃತ್ತಿಪರ ರಾಜಕಾರಣಿಗಳ ಮಾಫಿಯಾ ಜಗತ್ತನ್ನು ಮುರಿಯುವ ನಿಟ್ಟಿನಲ್ಲಿ ನಮ್ಮಂಥವರು ಚುನಾವಣೆಯಲ್ಲಿ ಸ್ಪರ್ಧಿಸುವ ಅಗತ್ಯವಿದೆ” ಎಂದು ಬಿಂದಿಯಾ ಅಭಿಪ್ರಾಯ ಪಟ್ಟಿದ್ದರು. ಅಂತೆಯೇ ವೀರೂಕೋಹ್ಲಿ ಚುನಾವಣೆ ಸ್ಪರ್ಧೆಗೆ ನೀಡಿದ ಕಾರಣ ವಿಶಿಷ್ಟವಾಗಿತ್ತು. “2004ರಲ್ಲಿ ನಮ್ಮ ಸಮುದಾಯದ ಸದಸ್ಯರೋರ್ವರು ಸಾವನ್ನಪ್ಪಿದ್ದರು. ಮೃತದೇಹವನ್ನು ಆಕೆಯ ತವರು ಪಂಜಾಬ್‍ಗೆ ತಲುಪಿಸಲು ನಾನು ನನ್ನ ಸ್ನೇಹಿತೆ ಹೋಗಿದ್ದೆವು. ಆಗ ವಿಮಾನ ನಿಲ್ದಾಣ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಅಧಿಕಾರಿಗಳು ನಮ್ಮನ್ನು ತುಂಬಾ ಅವಮಾನಿಸಿದ್ದರು. ಆ ನೋವಿನಿಂದ ಬೇಸತ್ತು ನಮ್ಮ ಸಮುದಾಯವನ್ನು ಬಲಪಡಿಸುವ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎನ್ನುತ್ತಾಳೆ.

ಇತ್ತೀಚೆಗೆ ಚತ್ತೀಸಗಡ ರಾಜ್ಯದ ರಾಯಗಡನಲ್ಲಿ ಮೇಯರ್ ಆಗಿ ಲಿಂಗಾಂತರಿ ಸಮುದಾಯದ ಮಧು ಕಿನ್ನರ್ ಆಯ್ಕೆಯಾಗಿದ್ದಾರೆ. ಇದು ಚತ್ತೀಸಗಡ ರಾಜ್ಯದ ಚುನಾವಣಾ ಇತಿಹಾಸದಲ್ಲಿ ಚಾರಿತ್ರಿಕ ಸಂಗತಿ. ಆಡಳಿತ ಪಕ್ಷ ಬಿಜೆಪಿ ಇದ್ದಾಗಲೂ ಇದೇ ಪಕ್ಷದ ಮಹಾವೀರ್ ಗುರೂಜಿ ಅವರನ್ನು 4537 ಮತಗಳ ಅಂತರದಲ್ಲಿ ಸೋಲಿಸಿ 33168 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾಳೆ. ಈ ವಿಜಯವನ್ನು ದೇಶದಾದ್ಯಾಂತ ಲಿಂಗಾಂತರಿ ಸಮುದಾಯವು ಸಂಭ್ರಮಿಸಿತು. ಸುಪ್ರಿಂ ಕೋರ್ಟ್ ತೃತೀಯ ಲಿಂಗಿ ಎಂದು ಗುರುತಿಸಿದ ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೊದಲ ಲಿಂಗಾಂತರಿ ಮಧು.

ಹಿಜಿಡಾಗಳ ಸ್ಪರ್ಧೆ, ಗೆಲುವನ್ನು ದ್ವಿಲಿಂಗಿ ಸಮಾಜ ನೋಡುವ ನೋಟಕ್ರಮವೂ ಭಿನ್ನವಾಗಿದೆ. ಬಳ್ಳಾರಿಯ ನಗರಸಭೆ ಸದಸ್ಯೆಯಾಗಿ ಲಿಂಗಾಂತರಿ ಪರ್ವಿನಾಬಾನು ಆಯ್ಕೆಯಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಭಾಗದ ಹಿಜಿಡಾ ಸಮುದಾಯದಲ್ಲಿ ಪರ್ವಿನಾಬಾನು ಕುರಿತು ಆತಂಕ ವ್ಯಕ್ತಪಡಿಸುತ್ತಾರೆ. ಕಾರಣ ಪುರುಷ ಸದಸ್ಯರಿಗಿಂತ ಚೆನ್ನಾಗಿ ಕೆಲಸ ಮಾಡುವ ಬಾನುಗೆ ಈ ಗಂಡಸರು ಏನಾದರೂ ಮಾಡಿಬಿಟ್ಟಾರು ಎಂಬ ಭಯವಿದೆ. ಅಂತೆಯೇ ಈ ಸಮುದಾಯ ಬಜಾರು ಭಿಕ್ಷೆಗೆ ಹೋದಾಗ ವ್ಯಾಪಾರ ಮಳಿಗೆ/ಅಂಗಡಿಯವರು `ನಿಮ್ಮ ಸಮುದಾಯದ ಕಾರ್ಪೋರೇಟ್ ಗೆದ್ದಿದ್ದಾರಲ್ಲ ಮತ್ಯಾಕೆ ನೀವು ಭಿಕ್ಷೆಗೆ ಬರುತ್ತೀರಿ, ನಿಮ್ಮ ಕಾರ್ಪೋರೇಟ್‍ನ್ನ ಕೇಳಿ ಏನಾದ್ರೂ ಮಾಡ್ಕೊಳ್ರಿ’ ಎಂದು ಕೊಂಕು ನುಡಿಯುತ್ತಾರಂತೆ.

ಅಂತೆಯೇ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಒಬ್ಬ ಹಿಜಿಡಾ ವಿರುದ್ಧ ಸೋತ ಗಂಡಸರನ್ನು `ಒಬ್ಬ ಶಿಖಂಡಿ ಎದುರು ಸೋತವನು’ ಎಂದು ತುಚ್ಛವಾಗಿ ಕಾಣುವುದಿದೆ. ಹೀಗೆ ತುಚ್ಛವಾಗಿ ಕಾಣುವ ಕಾರಣಕ್ಕೆ ಸೋತ ಅಭ್ಯಾರ್ಥಿಯೇ ಹಿಜಿಡಾಗಳ ಮೇಲೆ ಸೇಡುತೀರಿಸಿಕೊಳ್ಳಬಹುದೆಂದು, ಬಳ್ಳಾರಿ ಭಾಗದ ಲೈಂಗಿಕ ಅಲ್ಪಸಂಖ್ಯಾತರಿಗೆ ಆತಂಕವಿದೆ. ಪರ್ವಿನಾ ಕಾರ್ಪೋರೇಟರ್ ಆದ ಮೇಲೆ ಅನಿಲ್ ಲಾಡ್ ನೆರವಿನೊಂದಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸುದ್ದಿ ಮಾಡಿದ್ದಳು.

ಕರ್ನಾಟಕದಲ್ಲಿ ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಅಂಬೇಡ್ಕರ್ ಜನತಾ ಪಕ್ಷದ ಅಭ್ಯರ್ಥಿಯಾಗಿ ಮಂಗಳಮುಖಿ ಚಾಂದಿನಿ ನಾಮಪತ್ರ ಸಲ್ಲಿಸಿದ್ದರು. ಆಗ ಚಾಂದನಿ, `ನಮಗೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಮೂಲ ಸೌಲಭ್ಯಗಳು ಸಿಗುತ್ತಿಲ್ಲ. ರೇಷನ್ ಕಾರ್ಡ್, ಆಧಾರ್ ಕಾರ್ಡ್ ನೀಡಿಲ್ಲ. ಸಮಾಜದ ಜನರು ನಮ್ಮನ್ನು ಸಮಾನರಂತೆ ಕಾಣಬೇಕಾಗಿದೆ. ಮೈಸೂರು ಜಿಲ್ಲೆಯಲ್ಲಿ ಸುಮಾರು 10,000 ಮಂಗಳಮುಖಿಯರಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ’ ಹೇಳಿದ್ದರು. ಅಂತೆಯೇ ಮಂಗಳಮುಖಿ ಸೌಮ್ಯ ಕೂಡ ಬೆಂಗಳೂರಿನ ಗಾಂಧಿನಗರ ಕ್ಷೇತ್ರದಿಂದ ಬಿಎಸ್ಪಿ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿದ್ದರು.

ಭಾರತದ ಚುನಾವಣಾ ಆಯೋಗವು ಬಿಡುಗಡೆ ಮಾಡಿದ 2014 ರ ಮತದಾರರ ಸಂಖ್ಯೆಯಲ್ಲಿಯೂ ಲೈಂಗಿಕ ಅಲ್ಪಸಂಖ್ಯಾತರ ಸಂಖ್ಯೆಯನ್ನು ಸೇರಿಸಿತ್ತು. ದೇಶದಲ್ಲಿ 81,45,91184 ರಷ್ಟು ಮತದಾರರಿದ್ದಾರೆ. ಪುರುಷರು 52.4% ರಷ್ಟಿದ್ದರೆ, ಮಹಿಳೆಯರು 47.6% ರಷ್ಟಿದೆ. `ಇತರೆ’ ವಿಭಾಗದಲ್ಲಿ ದಾಖಲಿಸಿಕೊಂಡ ಲೈಂಗಿಕ ಅಲ್ಪಸಂಖ್ಯಾತರು 0.0035% ರಷ್ಟಿದೆ. ಕರ್ನಾಟಕದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಸಂಖ್ಯೆ 8,453 ರಷ್ಟಿದ್ದಾರೆ. ಇದು ಭಾರತದ 17 ರಾಜ್ಯಗಳಿಗೆ ಹೋಲಿಸಿದರೆ ಚುನಾವಣ ಆಯೋಗ ಮತದಾನದ ಹಕ್ಕು ನೀಡಿದಂದಿನಿಂದ `ಇತರೆ’ ವಿಭಾಗದಲ್ಲಿ ದಾಖಲಿಸಿಕೊಂಡ ಲೈಂಗಿಕ ಅಲ್ಪಸಂಖ್ಯಾತರ ಸಂಖ್ಯೆ ಕರ್ನಾಟಕದಲ್ಲಿಯೇ ಹೆಚ್ಚಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಲೈಂಗಿಕ ಅಲ್ಪಸಂಖ್ಯಾತರು: ಕ್ರೀಡೆ

1999 ರಿಂದಲೂ ಓಲಂಪಿಕ್ ಕ್ರೀಡೆ ಆಯೋಜನೆಯಲ್ಲಿ ಇಂಟರ್ ನ್ಯಾಷನಲ್ ಓಲಂಪಿಕ್ ಕಮಿಟಿಯು (ಐ.ಓ.ಸಿ) ಲಿಂಗ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದು ಮಹಿಳಾ ಅಥ್ಲೆಟಿಕ್ಸ್ ಗೆ ಮಾತ್ರ ಮಾಡುವ ಒಂದು ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಮಹಿಳಾ ಕ್ರೀಡಾಪಟುಗಳನ್ನು ಒಳಪಡಿಸಲಾಗುತ್ತದೆ. ಈ ಪರೀಕ್ಷೆ ಇರುವುದೇ ಇವಳು ನಿಜವಾಗಲೂ ಮಹಿಳೆಯೇ? ಎಂದು ಪರೀಕಷಿಸುವ ಸಲುವಾಗಿ. ಕಾರಣ ಟ್ರಾನ್ಸ್ ಜೆಂಡರ್ ವಿಮೆನ್ಸ್ ಈ ಕೋಟದಲ್ಲಿ ಬರಬಹುದು ಎನ್ನುವುದು ಈ ಪರೀಕ್ಷೆಯ ಮೂಲ ಕಾರಣವಾದರೂ, ಹೆಣ್ಣಿನೊಳಗೆ ಗಂಡಿನ ಅಂಶ ಅಡಗಿದ್ದರೂ ಆಕೆಯನ್ನು ಗಂಡಿನಂಶ ಇರುವ ಹೆಣ್ಣು ಎಂದು ಕ್ರೀಡೆಯಿಂದ ಹೊರಗಿಡುವ ಪ್ರಕ್ರಿಯೆ ನಡೆದಿದೆ.

2000 ರ ಸಿಡ್ನಿ ಓಲಂಪಿಕ್ ಗೇಮ್ಸ್ ನಲ್ಲಿ ಲಿಂಗ ಪರೀಕ್ಷೆಯನ್ನು ನಿಲ್ಲಿಸಲಾಗಿದೆ. ಮೇ 17, 2004 ರಲ್ಲಿ ಇಂಟರ್ ನ್ಯಾಷನಲ್ ಓಲಂಪಿಕ್ ಕಮಿಟಿಯು ಲಿಂಗ ಬದಲಾದ ಪುರುಷ ಅಥವಾ ಮಹಿಳೆಯರು ಓಲಂಪಿಕ್ ಆಟಗಳಿಗೆ ಅರ್ಹರು ಎನ್ನುವ ಚಾರಿತ್ರಿಕ ನಿಲುವು ತಳೆದಿದೆ. ಹಾರ್ಮೋನ್ಸ್ ಥೆರಪಿ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿ ಕನಿಷ್ಟ 2 ವರ್ಷದ ನಂತರ ಗಂಡಿನಿಂದ ಹೆಣ್ಣಾದವರನ್ನು (ಒಣಈ) ಹುಡುಗಿ ಅಥವಾ ಹೆಣ್ಣು ಎಂತಲೂ, ಹೆಣ್ಣಿನಿಂದ ಗಂಡಾದ( ಈಣಒ) ವರನ್ನು ಗಂಡು ಎಂತಲೂ ಪರಿಗಣಿಸಲಾಗುತ್ತಿದೆ. ಆದರೆ ಇದಕ್ಕೆ ವೈದ್ಯಕೀಯ ದಾಖಲೆಗಳು ಬೇಕಾಗುತ್ತದೆ. ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ವೈದ್ಯರ, ಮನೋವೈದ್ಯರ ಪ್ರಮಾಣ ಪತ್ರಗಳು ಬೇಕಾಗುತ್ತದೆ. ಕಾನೂನಾತ್ಮಕ ಬೆಂಬಲದ ದಾಖಲೆಗಳೂ ಬೇಕಾಗುತ್ತದೆ. ಇದು ಭಾರದಲ್ಲಿ ಇನ್ನು ಕಾನೂನಿನ ಮಾನ್ಯತೆ ಸಿಗದ ಕಾರಣ ಭಾಗವಹಿಸುವುದು ಕಷ್ಟಕರವಾಗಿದೆ.

The Science of Transgenderism

ಇಂದು ಜಾಗತಿಕವಾಗಿಯೂ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಬದಲಾವಣೆಗಳಾಗಿವೆ. ಅಮೆರಿಕ ಮುಂತಾದ ರಾಷ್ಟ್ರಗಳಲ್ಲಿ ವೈದ್ಯರೇ ಟ್ರಾನ್ಸ್ ಜೆಂಡರ್ ಸಮುದಾಯವು ನೈಸರ್ಗಿಕವಾಗಿ ರೂಪುಗೊಂಡಿರುವುದೆಂದು ಸಬೀತುಪಡಿಸುತ್ತಿದ್ದಾರೆ. ಈ ಸಂಗತಿಯನ್ನು ವೈದ್ಯರ ಅಸೋಷಿಯೇಷನ್ಸ್‍ಗಳು ಬಹಿರಂಗ ಹೇಳಿಕೆಗಳನ್ನು ಕೊಡುವ ಮೂಲಕ ಈ ಸಮುದಾಯದ ಬಗ್ಗೆ ಜನರಲ್ಲಿರುವ ಅಜ್ಞಾನವನ್ನು ಹೋಗಲಾಡಿಸಲಾಗುತ್ತಿದೆ. ಆದರೆ ಭಾರತದಂತಹ ದೇಶಕ್ಕೆ ಹೋಲಿಸಿಕೊಂಡರೆ ವೈದ್ಯರಿಗೂ ಮಡಿವಂತಿಕೆ ಇರುವುದು ಗೋಚರಿಸುತ್ತದೆ. ಲೈಂಗಿಕತೆ ಬಗ್ಗೆ ಬರೆಯುವವರನ್ನು ಸಲಹೆಗಳನ್ನು ಕೊಡುವ ವೈದ್ಯರನ್ನು ಜನರು ಲೈಂಗಿಕ ವೈದ್ಯರು ಎಂದು ತುಚ್ಚವಾಗಿ ನೋಡುವ ಕ್ರಮವೂ ಇದೆ. ಹಾಗಾಗಿ ಇಂಡಿಯಾದಲ್ಲಿನ ವೈದ್ಯರು ಟ್ರಾನ್ಸ್ ಜೆಂಡರ್ ನಂತಹ ಸಮುದಾಯದ ಬಗ್ಗೆ ಮುಕ್ತವಾಗಿ ಮಾತನಾಡುವುದೂ ಸಾದ್ಯವಾಗಿಲ್ಲ.

ಹಾಗೆ ನೋಡಿದರೆ ಜೆಂಡರ್ ವಿಷಯಗಳಿಗೆ ಸಂಬಂಧಿಸಿದಂತೆ ಒಂದು ಪ್ರತ್ಯೇಕ ವೈದ್ಯಕೀಯ ಶಾಸ್ತ್ರವೇ ರೂಪುಗೊಂಡಿದೆ. The Science of Transgenderism ರು ಎಂಬ ವಿಜ್ಞಾನದ ವಿಭಾಗವೊಂದು ಆರಂಭವಾಗಿದೆ. ಇದು ಜೆಂಡರ್ ವೇರಿಯೇಷನ್ ಕು ವಿಷಯಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವಾಗಿದೆ. ಈ ಶಾಸ್ತ್ರದ ಮುಖ್ಯ ಉದ್ದೇಶವೆ ಜನರಲ್ಲಿ ಜೆಂಡರ್ ವೇರಿಯೇಷನ್‍ಗೆ ಒಳಗಾದ ಸಮುದಾಯವನ್ನು ತುಚ್ಚವಾಗಿ ನೋಡುವ ಮತ್ತು ಕೀಳಾಗಿ ಕಾಣುವ ಸಂಗತಿಯನ್ನು ಇಲ್ಲವಾಗಿಸುವುದು. ಜೆಂಡರ್ ವಿಷಯದಲ್ಲಿ ಸೂಕ್ಷ್ಮಸಂವೇದನೆಗೊಳಿಸುವುದಾಗಿದೆ. ಈ ನೆಲೆಯ ಬೆಳವಣಿಗೆ ಟ್ರಾನ್ಸ್ ಜೆಂಡರ್ ಸಮುದಾಯದ ಹೋರಾಟಕ್ಕೂ ಸ್ಪೂರ್ತಿಯಾಗಿದೆ.

ಲಿಂಗಾಂತರಿ ವಲಸಿಗರು
ಇದು ಲಿಂಗ ಬದಲಾವಣೆಯ ಕಾರಣಕ್ಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಿ ಬದುಕುವ ಕ್ರಮವನ್ನು ಅಥವಾ ಲಿಂಗದ ಕಾರಣಕ್ಕೆ ವಲಸೆ ಹೋಗುವ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ದೊಡ್ಡಮಟ್ಟದ ಹೋರಾಟ ನಡೆಯುತ್ತಿದೆ. ಅಂತೆಯೇ ಲಿಂಗ ಬದಲಾವಣೆಯೇ ವಲಸೆಯನ್ನು ಅನಿವಾರ್ಯ ಮಾಡುತ್ತದೆ ಎನ್ನುವುದನ್ನು ಈ ಹೋರಾಟ ಮನವರಿಕೆ ಮಾಡುತ್ತಿದೆ. ಮನೆಯಲ್ಲಿ ಲಿಂಗ ಬದಲಾವಣೆಯ ಪ್ರಕ್ರಿಯೆ ಶುರುವಾದಾಗ ಮನೆ ಅಂತವರನ್ನು ಹೊರ ಹಾಕುತ್ತದೆ. ಹೀಗೆ ಮನೆಯಿಂದ ಹೊರ ಹಾಕಲ್ಪಟ್ಟ ಸಮುದಾಯವು ಅನುಭವಿಸುವ ಅನಾಥಪ್ರಜ್ಞೆ, ನೋವು, ಹಿಂಸೆ, ಮುಂತಾದ ಅಮಾನವೀಯ ನರಕಕ್ಕೆ ದೂಕಲ್ಪಡುತ್ತಾರೆ. ಈ ಬಗೆಯ ವಲಸೆಯ ಕಾರಣಕ್ಕೆ ಈ ಸಮುದಾಯ ಅನುಭವಿಸುವ ಯಾತನೆಯನ್ನು ಹೋರಾಟದ ಭಾಗವಾಗಿಯೂ ವಿವರಿಸುವ, ವಿಶ್ಲೇಷಿಸುವ ಪ್ರಕ್ರಿಯೆಗಳು ಜಾಗತಿಕವಾಗಿ ನಡೆಯುತ್ತಿವೆ.
**
ಆರಂಭಕ್ಕೆ ಚರ್ಚಿಸಿದಂತೆ ಕರ್ನಾಟಕದ ಸಂದರ್ಭದಲ್ಲಿಯೂ ಲಿಂಗಾಂತರಿಗಳ ಹಕ್ಕುಗಳ ರಕ್ಷಣೆಗಾಗಿ ದೊಡ್ಡಮಟ್ಟದ ಹೋರಾಟಗಳು ನಡೆಯುತ್ತಿವೆ. ಮನೋಹರ, ಅಕ್ಕೈ ಪದ್ಮಶಾಲಿ, ಚಾಂದಿನಿ, ಉಮೇಶ್, ಮಲ್ಲಪ್ಪ ಮುಂತಾದವರು ಮುಂದಾಳತ್ವ ವಹಿಸಿದ್ದಾರೆ. ಸಂಗಮ ಸಂಸ್ಥೆ ಒಳಗೊಂಡಂತೆ ಕರ್ನಾಟಕ ಟ್ರಾನ್ಸ್ ಜೆಂಡರ್ ಸಮಿತಿ, ಕರ್ನಾಟಕ ಮಂಗಳಮುಖಿ ಸಂಘಟನೆ, ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ, ಜೀವ, ಒಂದೆಡೆ, ಸಮರ, ಸಾರಥ್ಯ, ಸ್ವಾತಂತ್ರ್ಯ, ಮುಂತಾದ ಸಂಘಟನೆಗಳು ಜಂಟಿಯಾಗಿ ಹೋರಾಟಗಳನ್ನು ಆಯೋಜಿಸುತ್ತಿವೆ. ಈ ಹೋರಾಟದ ಫಲವಾಗಿ ಹಲವು ಯೋಜನೆಗಳ ಜಾರಿಗೂ ಕಾರಣವಾಗಿವೆ. ಕರ್ನಾಟಕ ಸರಕಾರದ ಮೈತ್ರಿ ಅಂತಹ ಯೋಜನೆಗಳಲ್ಲೊಂದು. 2009 ರಲ್ಲಿ ಡಾ. ಸಿ.ಎಸ್. ದ್ವಾರಕಾನಾಥ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ, ಹಿಜಿಡಾ/ಮಂಗಳಮುಖಿ ಸಮುದಾಯವನ್ನು ಪ್ರವರ್ಗ 2 ಬಿ ನಲ್ಲಿ ಸೇರಿಸುವ ಮೂಲಕ ಸಮುದಾಯಕ್ಕೆ ನೆರವಾಗಿದ್ದರು.

ಕರ್ನಾಟಕದ ಸಂದರ್ಭದಲ್ಲಿನ ಲಿಂಗಾಂತರಿ ಸಮುದಾಯಗಳ ಹೋರಾಟಗಳು ಕೆಲವು ಮುಖ್ಯ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ವಯಸ್ಕರರ ಒಪ್ಪಿಗೆಯ ಸೆಕ್ಸ್ ಅಪರಾಧವಲ್ಲ. ಐ.ಪಿ.ಸಿ ಸೆಕ್ಷನ್ 377 ರದ್ದುಮಾಡಿ ಎಲ್ಲಾ ಬಗೆಯ ಲೈಂಗಿಕ ಕಿರುಕುಳ ಅಪರಾಧವೆಂದು ಕಾನೂನಿನಲ್ಲಿರಬೇಕು, ಮುಖ್ಯವಾಗಿ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ನಿಗಾ ಇಡಬೇಕು. ಲೈಂಗಿಕ ಅಲ್ಪಸಂಖ್ಯಾತ ಮಕ್ಕಳಿಗೆ ಶಿಕ್ಷಣದ ತಾರತಮ್ಯ ಆಗಬಾರದು. ತಾರತಮ್ಯವಿಲ್ಲದ ಸಾಮಾಜಿಕ ಸವಲತ್ತುಗಳು ಸಿಗಬೇಕು. ಉದಾ: ರೇಷನ್ ಕಾರ್ಡ್, ವಸತಿ, ವೋಟಿಂಗ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಉಳಿತಾಯ ಮತ್ತು ಸಾಲ ಸೌಲಭ್ಯಗಳು, ವಿಮೆ ಮತ್ತು ವೃದ್ದಾಪ್ಯ ವೇತನ, ವೃದ್ದಾಪ್ಯಾದವರಿಗೆ ಉಳಿಯಲು ಮನೆ (ಶೆಲ್ಟರ್) ಇತ್ಯಾದಿ. ಈ ಸಮುದಾಯದ ಬಗ್ಗೆ ಪೂರ್ವಾಗ್ರಹವಿಲ್ಲದ ಮನೋಭಾವವನ್ನು ಬೆಳೆಸಲು ಸಾರ್ವಜನಿಕ ಪ್ರಚಾರ ಮಾಡಬೇಕು. ಶಿಕ್ಷಣದ ಪಠ್ಯಕ್ರಮಗಳಲ್ಲಿ ಈ ವಿಷಯವನ್ನು ಅಳವಡಿಸಬೇಕು. ಪೋಲೀಸ್/ಗೂಂಡಾ ದೌರ್ಜನ್ಯ ತಡೆಯಬೇಕು. ದೌರ್ಜನ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು.
1111

ವಯಸ್ಕರ ಸ್ವಇಚ್ಚೆಯ ಲೈಂಗಿಕ ಚಟುವಟಿಕೆ ಅಪರಾಧವಲ್ಲ. ಹಾಗಾಗಿ ಐ.ಟಿ.(ಪಿ).ಎ. ಕಾನೂನು ರದ್ದುಪಡಿಸಿ ಲೈಂಗಿಕ ಕಾರ್ಮಿಕರೆಂದು ಗುರುತಿಸಿ ಅವರ ಹಕ್ಕುಗಳನ್ನು ರಕ್ಷಿಸಬೇಕು. ಈ ಸಮುದಾಯದ ಅಂಚಿಗೆ ತಳ್ಳಲ್ಪಟ್ಟವರಿಗೆ ಸರ್ಕಾರ ಪ್ರತ್ಯೇಕ ಯೋಜನೆ ರೂಪಿಸಬೇಕು. ಈ ಸಮುದಾಯವನ್ನು ಅಪರಾಧಿಗಳಂತೆ ಬಿಂಬಿಸುವ ಕಾನೂನುಗಳ ತಿದ್ದುಪಡಿ ಮಾಡಬೇಕು. ಈ ಸಮುದಾಯದ ಮದುವೆ ಹಕ್ಕು, ಆಸ್ತಿಹಕ್ಕು, ಭವಿಷ್ಯನಿಧಿ, ಪಿಂಚಣಿ ಮತ್ತು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಹಕ್ಕುಗಳಲ್ಲಿ ಬದಲಾವಣೆಯಾಗಬೇಕು. ಲಿಂಗ ಬದಲಾವಣೆಯನ್ನು ಕಾನೂನುಬದ್ಧಗೊಳಿಸಿ ಶಸ್ತ್ರಚಿಕಿತ್ಸೆ ಸಾರ್ವತ್ರಿಕವಾಗಿ ಲಭ್ಯವಿರಬೇಕು. ಲಿಂಗ ಬದಲಾವಣೆಯಾದ ಬಳಿಕ ಹೊಸ ಲಿಂಗತ್ವ/ಲಿಂಗದ ಆಯ್ಕೆಗೆ ಸ್ವತಂತ್ರ್ಯವಿರಬೇಕು. ಲಿಂಗಾಂತರಿ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ಮಿನಿಸ್ಟ್ರಿಯನ್ನೂ, ಸಮಾಜೋರಾಜಕೀಯಾರ್ಥಿಕ ಶೈಕ್ಷಣಿಕ ಸೌಲಭ್ಯಗಳಿಗಾಗಿ ಪ್ರತ್ಯೇಕ ಅಕಾಡೆಮಿ ಅಥವಾ ನಿಗಮ ಮಂಡಳಿಯನ್ನು ರಚಿಸಬೇಕು.

ಮುಂತಾದ ಹಕ್ಕೊತ್ತಾಯಗಳನ್ನು ಈ ಸಮುದಾಯ ಮಂಡಿಸುತ್ತಿದೆ. ಈ ಸಮುದಾಯದ ಹೋರಾಟಕ್ಕೆ ಇತರೆ ಪ್ರಗತಿಪರ ಸಂಘಟನೆಗಳೂ ಬೆಂಬಲವಾಗಿ ನಿಲ್ಲಬೇಕಿದೆ. ಕಾರಣ ಈಚಿನ ಉಡುಪಿ ಚಲೋದಲ್ಲಿ ಲಿಂಗಾಂತರಿ ಸಮುದಾಯ ಸಕ್ರಿಯವಾಗಿ ಭಾಗವಹಿಸಿತ್ತು. ಇವರೂ ದಮನಿತ ಸಮುದಾಯವಾದ ಕಾರಣ, ದಮನಿತರ ಪರವಾದ ಮನಸ್ಸುಗಳು ಲಿಂಗಾಂತರಿಗಳ ಹೋರಾಟಕ್ಕೂ ಜತೆಯಾಗಬೇಕಿದೆ.

ಕಾಮೆಂಟ್‌ಗಳಿಲ್ಲ: