ಶುಕ್ರವಾರ, ಫೆಬ್ರವರಿ 19, 2016

ನಿಮ್ಮೆಲ್ಲರಲ್ಲಿ ಒಗ್ಗಟ್ಟಾಗಿರಲು ಮನವಿ ಮಾಡಿಕೊಳ್ಳುತ್ತೇನೆ..ಕನ್ಹಯ್ಯ ಕುಮಾರ್

ಕನ್ನಡೀಕರಿಸಿದವರು: ‘ಸತ್ಯ’


ರಾಷ್ಟ್ರದ್ರೋಹದ ಆಪಾದನೆಯಲ್ಲಿ ಜೈಲಿನಲ್ಲಿರು JNU ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಫೆ.11 ರಂದು ಬಂಧನಕ್ಕೆ ಮುನ್ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ್ದ ಭಾಷಣದ ಪೂರ್ಣಪಾಠ.

ಗೆಳೆಯರೆ,
ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಸುಟ್ಟು ಹಾಕಿದ ಜನ ಅವರು; ಬ್ರಿಟಿಷರೆದುರು ಕ್ಷಮೆಯಾಚಿಸಿದ ಸಾವರ್ಕರನ ಚೇಲಾಗಳು ಅವರು. ಈಗ, ಹರ್ಯಾಣದಲ್ಲಿ ಕಟ್ಟರ್ ಸರ್ಕಾರವನ್ನು ನಡೆಸುತ್ತಿದ್ದು ಭಗತ್ ಸಿಂಗ್ ಹೆಸರಿನಲ್ಲಿದ್ದ ಒಂದು ವಿಮಾನ ನಿಲ್ದಾಣಕ್ಕೆ ಸಂಘಿಯೊಬ್ಬನ ಹೆಸರಿಟ್ಟಿರುವವರು ಅವರು. ನಮಗೆ RSS ನಿಂದ ದೇಶಭಕ್ತಿಯ ಸರ್ಟಿಫಿಕೇಟ್ ಬೇಕಾಗಿಲ್ಲ. RSS ಬಂದು ನಮ್ಮನ್ನು ರಾಷ್ಟ್ರೀಯವಾದಿಗಳು ಎಂದು ಗುರುತಿಸಿ ಹೇಳಬೇಕಾಗಿಲ್ಲ. ನಾವು ಈ ದೇಶದ ಪ್ರಜೆಗಳಾಗಿದ್ದು ನಮ್ಮ ದೇಶದ ನೆಲವನ್ನು ಪ್ರೀತಿಸುವವರು. ಈ ದೇಶದ ಶೇಡಕಾ 80 ರಷ್ಟು ಬಡವರಿಗಾಗಿ ನಾವು ಹೋರಾಡುತ್ತೇವೆ. ನಮ್ಮ ದೃಷ್ಟಿಯಲ್ಲಿ ದೇಶಭಕ್ತಿ ಅಂದೆ ಇದೇ. ಬಾಬಾಸಾಹೇಬರಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ಈ ದೇಶದ ಸಂವಿಧಾನದಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ನಾವು ಗಟ್ಟಿದನಿಯಲ್ಲಿ ಹೇಳಬಯಸುವುದೇನೆಂದರೆ ಅವನು ಸಂಘಿಯಾಗಲೀ, ಮತ್ಯಾವನೇ ಆಗಲೀ ಈ ದೇಶದ ಸಂವಿದಾನದ ವಿರುದ್ಧ  ಬೆರಳು ತೋರಿಸಿದ್ದೇ ಆದಲ್ಲಿ ಯಾವ ಕಾರಣಕ್ಕೂ ನಾವು ಸಹಿಸಿಕೊಂಡು ಸುಮ್ಮನೇ ಕೂರುವುದಿಲ್ಲ. ನಮಗೆ ಸಂವಿಧಾನದಲ್ಲಿ ನಂಬಿಕೆಯಿದೆ. ಆದರೆ ಜಾಂಡೇವಾಲನ್ ನಲ್ಲಿ (ದೆಹಲಿಯ ಆರೆಸ್ಸೆಸ್ ಕಚೇರಿ) ಹೇಳಿಕೊಡಲಾಗುವ ಸಂವಿಧಾನದ ಬಗ್ಗೆ ನಮಗೆ ಎಳ್ಳಷ್ಟೂ ನಂಬಿಕೆಯಿಲ್ಲ. ಮನುಸ್ಮೃತಿಯಲ್ಲಿ ನಮಗೆ ನಂಬಿಕೆಯಿಲ್ಲ. ಈ ದೇಶದಲ್ಲಿ ಆಳಕ್ಕೆ ಬೇರುಬಿಟ್ಟಿರುವ ಜಾತಿ ವ್ಯವಸ್ಥೆಯಲ್ಲಿ ನಮಗೆ ನಂಬಿಕೆಯಿಲ್ಲ.  ನಾವು ನಂಬಿಕೆ ಇಟ್ಟಿರುವ ಅದೇ ಸಂವಿಧಾನದಲ್ಲಿ ನಾವು ನಂಬಿರುವ ಅದೇ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಸಾಂವಿಧಾನಿಕ ಪರಿಹಾರದ ಹಕ್ಕುಗಳನ್ನು ತಿಳಿಸಿದ್ದಾರೆ. ಅದೇ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಮರಣದಂಡನೆಯನ್ನು ಈ ದೇಶದಲ್ಲಿ ರದ್ದು ಮಾಡಬೇಕೆಂದು ಹೇಳಿದ್ದಾರೆ. ಅದೇ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯೂ ಹೇಳಿದ್ದಾರೆ. ಈ ಸಂವಿಧಾನವನ್ನು ನಾವು ಎತ್ತಿಹಿಡಿದಿದ್ದೇವೆ. ನಾವು ನಮ್ಮ ಮೂಲ ಹಕ್ಕನ್ನು, ನಮ್ಮ ಸಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯಲು ಬಯಸುತ್ತೇವೆ.

ಆದರೆ ಅತ್ಯಂತ ನಾಚಿಕೆಗೇಡಿನ ಸಂಗತಿ ಮತ್ತು ಅತ್ಯಂತ ದುಃಖದ ಸಂಗತಿಯೆಂದರೆ ಇಂದು ಈ ABVP ತನ್ನ ಪರವಾದ ಮೀಡಿಯಾಗಳನ್ನು ಕರೆತಂದು ಒಂದು ಸುಳ್ಳು ಪ್ರಚಾರ ನಡೆಸುತ್ತಿದೆ. ನೈಜ ವಿಷಯಗಳನ್ನು ದಿಕ್ಕುತಪ್ಪಿಸುತ್ತಿದೆ. ನೆನ್ನೆಯಷ್ಟೇ ABVP ಸಹಕಾರ್ಯದರ್ಶಿ ನಾವು ಫೇಲೋಶಿಪ್ ಗೆ ಹೋರಾಟ ನಡೆಸ್ತೀವಿ ಎನ್ನುವ ಹೇಳಿಕೆ ನೀಡಿದ. ಇದೆಂತಹ ಹಾಸ್ಯಾಸ್ಪದ ಮಾತು ನೋಡಿ. ಅಲ್ಲಿ ಅವರದೇ ಸರ್ಕಾರವಿದ್ದು, ಮೇಡಂ ಮನು-ಸ್ಮೃತಿ ಇರಾನಿ ಅಲ್ಲಿ ಕುಳಿತುಕೊಂಡು ಫೆಲೋಶಿಪ್ ಗಳನ್ನು ಕಡಿತಗೊಳಿಸುತ್ತಿದ್ದಾರೆ. ಇಲ್ಲಿ ABVP “”ನಾವು ಫೆಲೋಶಿಪ್ ಗಾಗಿ ಹೋರಾಡುತ್ತೇವೆ” ಅಂತ ಬಜಾಯಿಸುತ್ತದೆ. ನಾಲ್ಕು ವರ್ಷಗಳಾದರೂ ನಮ್ಮ ಹಾಸ್ಟೆಲ್ ಕಟ್ಟಿ ಆಗಿಲ್ಲ. ಈ ಕ್ಷಣದವರೆಗೂ ವೈ-ಫೈ ಸೌಲಭ್ಯ ನಮಗೆ ನೀಡಿಲ್ಲ. BHEL ನಮಗೆ ಒಂದು ಬಸ್ ಸೌಲಭ್ಯ ಕಲ್ಪಿಸಿದೆ. ಆದರೆ ಅದಕ್ಕೂ ಇಂಧನ ತುಂಬಿಸೋಕೆ ನಮ್ಮ ಆಡಳಿತಾಂಗದ ಬಳಿ ದುಡ್ಡಿಲ್ಲ. ಈ ABVPಯ ಮಂದಿ ರೋಲರುಗಳ ಮುಂದೆ ನಿಂತುಕೊಂಡು ದೇವಾನಂದನ ರೀತಿ ಪೋಸು ಕೊಟ್ಟು ಫೋಟೋ ತೆಗೆಸಿಕೊಂಡು “ನಾವು ಹಾಸ್ಟೆಲ್ ಕಟ್ಟಿಸ್ತೀವಿ, ವೈಫೈ ಕೊಡಿಸ್ತೀವಿ, ಫೇಲೋಶಿಪ್ ಹೆಚ್ಚಿಸ್ತೀವಿ” ಅಂತ ಬಡಾಯಿ ಕೊಚ್ಚುತ್ತಾರೆ. ಅವರ ಸುಳ್ಳುಗಳು ಬಯಲಾಗಲಿವೆ. ಗೆಳೆಯರೇ, ಈ ದೇಶದಲ್ಲಿ ದೇಶದ ಮೂಲಭೂತ ಪ್ರಶ್ನೆಗಳ ಕುರಿತು ಏನಾದರೂ ಒಂದು ಚರ್ಚೆ ನಡೆಸಿದ್ದೇ ಆದರೆ, JNU ವಿದ್ಯಾರ್ಥಿಗಳು ಅತ್ಯಂತ ಮೂಲಭೂತ ಪ್ರಶ್ನೆಗಳನ್ನು ಎತ್ತುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ.

ಆ (ಸುಬ್ರಹ್ಮಣಿಯನ್) ಸ್ವಾಮಿ ಎನ್ನುವ ಮನುಷ್ಯ, JNU ನಲ್ಲಿ ಜಿಹಾದಿಗಳಿದ್ದಾರೆ, JNUನಲ್ಲಿ ಹಿಂಸೆ ಪ್ರಚೋದಿಸುವ ಜನ ಇದ್ದಾರೆ ಅಂತ ಬಡಕೊಳ್ಳುತ್ತಾನೆ. ಬನ್ನಿ ನಾವು ಹಿಂಸೆಯ ಪರಿಕಪಲ್ಪನೆ ಬಗ್ಗೆ ಚರ್ಚೆ ಮಾಡಲಿಕ್ಕೆ ಬಯಸುತ್ತೇವೆ. ನಾವು ನಿಮಗೆ ಪ್ರಶ್ನೆ ಕೇಳಲಿಕ್ಕೆ ಇಚ್ಛಿಸುತ್ತೇವೆ. ಈ ABVP ಘೋಷಣೆ ಹಾಕುತ್ತದೆಯಲ್ಲಾ -“ಖೂನ್ ಸೇ ತಿಲಕ್ ಕರೇಂಗೇ, ಗೋಲಿಯೋಂಸೆ ಆರತಿ” (ರಕ್ತದಿಂದ ಸಿಂಧೂರ ಇಡ್ತೀವಿ, ಬುಲೆಟ್ಟುಗಳಿಂದ ಆರತಿ ಇಡ್ತೀವಿ”) –  ನಾವು ಕೇಳ್ತೀವಿ, ಈ ದೇಶದಲ್ಲಿ ಯಾರ ರಕ್ತ ಹರಿಸಲಿಕ್ಕೆ ನೀವು ಹೊರಟಿದ್ದೀರಿ? ಬ್ರಿಟಿಷರ ಜೊತೆಯಾಗಿ ನಿಂತುಕೊಂಡು ಭಾರತೀಯರೆ ಮೇಲೆ ಬುಲೆಟ್ ಹಾರಿಸಿದ ಜನ ನೀವು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ದೇಶಪ್ರೇಮಿಗಳ ವಿರುದ್ಧ ಬುಲೆಟ್ ಹಾರಿಸಿದ ಜನ ನೀವಲ್ಲವೇ? ಉತ್ತರ ಕೊಡಿ.


ಈ ದೇಶದ ಬಡವರು ಹೊಟ್ಟೆಗೆ ಅನ್ನ ಕೇಳುತ್ತಿರುವಾಗ, ಹಸಿವಿನಿಂದ ಜನರು ಸಾಯುತ್ತಿರುವಾಗ, ಜನರು ತಮ್ಮ ಹಕ್ಕುಗಳನ್ನು ಕೇಳುವಾಗ ನೀವು ಅವರ ಅವರ ವಿರುದ್ಧ ಬುಲೆಟ್ ಪ್ರಯೋಗಿಸುತ್ತೀರಿ. ನೀವು ಮುಸ್ಲಿಮರ ವಿರುದ್ಧ ಬುಲೆಟ್ ಉಪಯೋಗಿಸಿದ್ದೀರಿ. ಹಾಗೆಯೇ ಮಹಿಳೆಯರು ಅವರ ಹಕ್ಕುಗಳ ಬಗ್ಗೆ ಮಾತಾಡಿದಾಗ ಅವರ ಮೇಲೆ ನೀವು ಬುಲೆಟ್ ಹಾರಿಸಿದ್ದೀರಿ. ಕೈಯಲ್ಲಿನ ಐದೂ ಬೆರಳೂ ಸಮವಾಗಿರುವುದಿಲ್ಲ ಅಂತ ಹೇಳುತ್ತಾ ಮಹಿಳೆಯರು ಸೀತೆಯ ಹಾಗೆ ಇರಬೇಕು, ಸೀತೆಯ ಹಾಗೆ ಅಗ್ನಿಪರೀಕ್ಷೆಗೆ ಒಳಗಾಗಬೇಕು ಎಂದು ತಾಕೀತು ಮಾಡುತ್ತೀರಿ. ಆದರೆ ತಿಳಿದುಕೊಳ್ಳಿ, ಈ ದೇಶದಲ್ಲಿ ಪ್ರಜಾಪ್ರಭುತ್ವ ಇದೆ. ಈ ಪ್ರಜಾಪ್ರಭುತ್ವ ಪ್ರತಿಯೊಬ್ಬ ಮನುಷ್ಯನೂ ಸಮಾನ ಎಂದಿದೆ. ಒಬ್ಬ ವಿದ್ಯಾರ್ಥಿಯಾಗಿರಲಿ, ಪೌರಕಾರ್ಮಿಕನಾಗಿರಲಿ, ಕಾರ್ಮಿಕ, ರೈತನೇ ಆಗಿರಲಿ, ಯಾರೋ ಬಡ ಬೋರೇಗೌಡನಾಗಿರಲಿ, ಶ್ರೀಮಂತ ಕುಳ ಅಂಬಾನಿ, ಅದಾನಿಯೇ ಆಗಿರಲಿ, ಎಲ್ಲರಿಗೂ ಸಮಾನ ಹಕ್ಕುಗಳಿವೆ. ಹೀಗಾಗಿ ನಾವು ಮಹಿಳೆಯರ ಹಕ್ಕುಗಳ ಬಗ್ಗೆ ಮಾತಾಡಿದೊಡನೆ ಅವರು ನಾವು ಭಾರತದ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದೇವೆ ಎಂದು ಗೂಬೆ ಕೂರಿಸುತ್ತಾರೆ. ನಾವು ಈ ಶೋಷಣೆ, ಜಾತೀವಾದ, ಮನುವಾದ ಮತ್ತು ಬ್ರಾಹ್ಮಣವಾದದ ಪರಂಪರೆಗಳನ್ನು ಕಸದ ಬುಟ್ಟಿಗೆಸೆಯಬಯಸಿದ್ದೇವೆ.

ಈ ದೇಶದ ಜನ ಪ್ರಜಾಪ್ರಭುತ್ವದ ಬಗ್ಗೆ ಮಾತಾಡು ಶುರು ಮಾಡಿದ ಕೂಡಲೇ ಆ ಜನರಿಗೆ ಸಮಸ್ಯೆ ಶುರುವಾಗುತ್ತದೆ. ಜನರು ಲಾಲ್ ಸಲಾಂ ಜೊತೆಗೆ ನೀಲಾ ಸಲಾಂ ಮಾಡಿದರೆ, ಮಾರ್ಕ್ಸ್ ಜೊತೆಗೆ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಮಾತಾಡಿದರೆ, ಹುತಾತ್ಮ ರಾಮ್ ಪ್ರಸಾದ್ ಬಿಸ್ಮಿಲ್ ಜೊತೆಯಲ್ಲೇ ನೇಣಿಗೇರಿದ ಅಶ್ಫಾಖ್ ಉಲ್ಲಾಖಾನ್ ಬಗ್ಗೆ ಮಾತಾಡಿಬಿಟ್ಟರೆ ಅವರಿಗೆ ಉರಿ ಶುರುವಾಗುತ್ತದೆ. ಅವರು ಕುತಂತ್ರಿಗಳು. ಅವರು ಬ್ರಿಟಿಷರ ಚೇಲಾಗಳು. ಬನ್ನಿ, ನನ್ನ ಮೇಲೆ ಮಾನನಷ್ಟ ಮೊಕ್ಕದ್ದಮೆ ಹೂಡಿ. ನಾನು ಹೇಳ್ತೇನೆ, RSSನ ಚರಿತ್ರೆ ಅಂದರೆ ಬ್ರಿಟಿಷರ ಜೊತೆ ರಾಜಿ ಮಾಡಿಕೊಂಡು ಭಾರತೀಯರ ವಿರುದ್ಧವೇ ನಿಂತ ಚರಿತ್ರೆ ಎಂದು ಕೂಗಿ ಹೇಳುತ್ತೇನೆ. ಈ ದೇಶಕ್ಕೆ ಅಂದು ದ್ರೋಹ ಬಗೆದವರು ಇಂದು ದೇಶಭಕ್ತಿಯ ಸರ್ಟಿಫಿಕೇಟ್ ಹಂಚುತ್ತಿದ್ದಾರೆ. ನನ್ನ ಮೊಬೈಲ್ ಚೆಕ್ ಮಾಡಿನೋಡಿ. ಗೆಳೆಯರೇ, ಅವರು ನನ್ನ ತಾಯಿ ಮತ್ತು ನನ್ನ ಸಹೋದರಿಯ ಬಗ್ಗೆ ಕೆಟ್ಟದಾಗಿ ಬೈದು ಕಳಿಸಿದ ಮೆಸೇಜುಗಳಿವೆ. ನನ್ನ ತಾಯಿ ಭಾರತಮಾತೆಯ ಭಾಗವಾಗಿಲ್ಲವವೇ? ಹಾಗಾದರೆ ಇವರು ಹೇಳುವ ಭಾರತ ಮಾತೆ ಯಾರು? ನನ್ನವ್ವ ಒಬ್ಬಳು ಅಂಗನವಾಡಿ ಕಾರ್ಯಕರ್ತೆ. ತಿಂಗಳಿಗೆ 3,000 ರೂಪಾಯಿಯಲ್ಲಿ ನನ್ನ ಕುಟುಂಬ ಬದುಕು ನಡೆಸುತ್ತಿದೆ. ಇವರು ನನ್ನ ತಾಯಿಯನ್ನು ನಿಂದಿಸುತ್ತಾರೆ. ಈ ದೇಶದಲ್ಲಿ ಬಡವರ, ಕಾರ್ಮಿಕರ, ದಲಿತರ, ರೈತರ ತಾಯಿಯಂದಿರು ಭಾರತಮಾತೆಯ ಭಾಗವಲ್ಲದಿದ್ದರೆ ಅದೆಂತಹ ನಾಚಿಕೆಗೇಡಿನ ವಿಷಯವಲ್ಲವೇ?. ಭಾರತದ ಹಲವು ಮಾತೆಯರಿಗೆ, ತಂದೆಯರಿಗೆ, ಸಹೋದರಿಯರಿಗೆ, ರೈತರಿಗೆ, ಕಾರ್ಮಿಕರಿಗೆ, ದಲಿತರಿಗೆ, ಆದಿವಾಸಿಗಳಿಗೆ ಜಯವಾಗಲಿ ಎಂದು ನಾನು ಹೆಳುತ್ತೇನೆ. ತಾಕತ್ತಿದ್ದರೆ ಅವರು ಹೇಳಿ ಬಿಡಲಿ ಇಂಕ್ವಿಲಾಬ್ ಝಿಂದಾಬಾದ್ ಎಂದು. ಅವರಿಗೆ ದಮ್ಮಿದ್ದರೆ ಭಗತ್ ಸಿಂಗ್ ಚಿರಾಯುವಾಗಲಿ, ಸುಖದೇವ್ ಚಿರಾಯುವಾಗಲಿ, ಆಶ್ಪಾಖುಲ್ಲಾಖಾನ್ ಚಿರಾಯುವಾಗಲಿ ಎಂದು ಹೇಳಿಬಿಡಲಿ. ಆಗ ಅವರಿಗೆ ಈ ದೇಶದ ಮೇಲೆ ನಿಜಕ್ಕೂ ವಿಶ್ವಾಸವಿದೆ ಎಂದು ನಾನು ಒಪ್ಪುತ್ತೇನೆ.

ಬಾಬಾಸಾಹೇಬರ 125ನೇ ಜನ್ಮದಿನಾಚರಣೆ ಆಚರಿಸುವ ನಾಟಕ ಮಾಡ್ತೀರಿ. ಬನ್ನಿ. ನಿಮಗೆ ತಾಕತ್ತಿದ್ದರೆ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಎತ್ತಿದ್ದ ಪ್ರಶ್ನೆಗಳನ್ನು ಎತ್ತಿ ನೋಡೋಣ. ಈ ದೇಶದಲ್ಲಿ ಜಾತಿವಾದ ಅತಿದೊಡ್ಡ ಸಮಸ್ಯೆ. ಬನ್ನಿ ಇಲ್ಲಿ. ಜಾತಿವಾದದ ಬಗ್ಗೆ ಮಾತಾಡಿ. ಮೀಸಲಾತಿ ತರಲು ಬನ್ನಿ. ನಿಮಗೆ ತಾಕತ್ತಿದ್ದರೆ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ತನ್ನಿ ನೋಡೋಣ.

ಈ ದೇಶ ಯಾವತ್ತೂ ನಿಮ್ಮದಾಗಿರಲಿಲ್ಲ, ಯಾವತ್ತೂ ಆಗಿರುವುದೂ ಇಲ್ಲ. ಒಂದು ರಾಷ್ಟ್ರ ರೂಪಿಸಲ್ಪಟ್ಟಿರುವುದು ಅದರ ಜನರಿಂದ. ಒಂದು ರಾಷ್ಟ್ರದಲ್ಲಿ ಹಸಿದವರ, ಬಡವರ, ಕಾರ್ಮಿಕರ ಮಾತುಗಳಿಗೆ ಬೆಲೆ ಇಲ್ಲ ಅಂತಾದರೆ ಅದು ರಾಷ್ಟ್ರವೇ ಅಲ್ಲ. ನೆನ್ನೆ ಇದೇ ಮಾತನ್ನು ನಾನು ಒಂದು ಟಿವಿ ಸಂವಾದದಲ್ಲಿ ದೀಪಕ್ ಚೌರಾಸಿಯವರಿಗೆ ಹೇಳುತ್ತಿದ್ದೆ. ಈ ದೇಶದಲ್ಲಿ ಹರಡುತ್ತಿರುವ ಫ್ಯಾಸಿಸಂ ಇದೇ ರೀತಿ ಬೆಳೆಯಲು ಬಿಟ್ಟರೆ ಮೀಡಿಯಾ ಕೂಡಾ ಸುರಕ್ಷಿತವಾಗಿರುವುದಿಲ್ಲ ಎಂದು ಹೇಳಿದೆ. RSS ಕಚೇರಿಗಳಲ್ಲಿ ತಯಾರಾಗುವ ಸ್ಕ್ರಿಪ್ಟ್ ಗಳನ್ನು ತಂದು ನಿಮ್ಮ ಬಳಿ ಓದಿಸುತ್ತಾರೆ. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಕಚೇರಿಗಳಲ್ಲಿ ಸ್ಕ್ರಿಪ್ಟುಗಳು ತಯಾರಾಗುತ್ತಿದ್ದವಂತಲ್ಲಾ ಹಾಗೆ.

ನಿಮಗೆ ನಿಜಕ್ಕೂ ನಿಮ್ಮ ದೇಶಭಕ್ತಿಯನ್ನು ತೋರಿಸಲೇಬೇಕು ಅಂತಿದ್ದರೆ, ಇದನ್ನು ನೆನಪಿಟ್ಟುಕೊಳ್ಳಿ. ಕೆಲವು ಮಾದ್ಯಮದವರು ಹೇಳುತ್ತಿದ್ದರು. JNU ತೆರಿಗೆದಾರರ ಹಣದಲ್ಲಿ ನಡೆಯುತ್ತದೆ ಎಂದು. ಹೌದು. ಇದು ನಿಜವೇ. JNU ನಡೆಯುವುದು ತೆರಿಗೆದಾರರ ಹಣದಿಂದ, ಸಬ್ಸಿಡಿಯಿಂದ. ಆದರೆ ಇಲ್ಲಿ ಪ್ರಶ್ನೆ ಬರುತ್ತದೆ. ವಿಶ್ವವಿದ್ಯಾಲಯ ಇರುವುದು ಯಾತಕ್ಕೆ? ವಿಶ್ವವಿದ್ಯಾಲಯಗಳು ಇರುವುದು ಸಮಾಜದ ಸಾಮಾನ್ಯ ಪ್ರಜ್ಞೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಸಿಸುವ ಕೆಲಸ ಮಾಡಲು. ವಿಮರ್ಶಾತ್ಮಕ ಆಲೋಚನಾ ದೃಷ್ಟಿಯನ್ನು ಬೆಳೆಸುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮಾಡಬೇಕು. ಈ ಕರ್ತವ್ಯದಲ್ಲಿ ವಿಶ್ವವಿದ್ಯಾಲಯಗಳು ವಿಫಲವಾದರೆ ಆಗ ರಾಷ್ಟ್ರವೇ ಇರುವುದಿಲ್ಲ ಮಾತ್ರವಲ್ಲ ಅಲ್ಲಿ ಜನರ ಪಾಲ್ಗೊಳ್ಳುವಿಕೆಯೂ ಇರುವುದಿಲ್ಲ. ಆಗ ದೇಶ ಅನ್ನುವುದು ಬಂಡವಾಳಶಾಹಿಗಗಳು ತಿನ್ನುವ ಮೇವಷ್ಟೇ ಆಗಿಬಿಡುತ್ತದೆ. ಶೋಷಣೆ ಮತ್ತು ಲೂಟಿಗೆ ದೇಶ ಈಡಾಗುತ್ತದೆ. ಜನರ ಸಂಸ್ಕೃತಿ, ಮೌಲ್ಯಗಳು, ಹಕ್ಕುಗಳು ಇವೆಲ್ಲ ಇರದೇ ಹೋದರೆ ದೇಶ ಇರುವುದೇ ಇಲ್ಲ. ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಕನಸಿದ ದೇಶದ ಪರವಾಗಿ ನಾವಿದ್ದೇವೆ. ಸರ್ವರಿಗೂ ಸಮಪಾಲು- ಸಮಬಾಳು ಎಂಬ ಕನಸಿನ ಪರವಾಗಿ, ಸರ್ವರ ಬದುಕುವ ಹಕ್ಕಿನ ಪರವಾಗಿ, ಎಲ್ಲರಿಗೂ ಗಂಜಿ, ನೀರು ಮತ್ತು ಸೂರು ಪಡೆಯುವ ಹಕ್ಕಿನ ಪರವಾಗಿ ನಾವು ನಿಲ್ಲುತ್ತೇವೆ. ಈ ಕನಸುಗಳ ಪರವಾಗಿ ನಾವೆಲ್ಲ ನಿಲ್ಲಬೇಕೆಂದು ರೋಹಿತ್ ವೇಮುಲ ತನ್ನ ಅಮೂಲ್ಯ ಜೀವವನ್ನೇ ಅರ್ಪಿಸಿದ್ದಾನೆ. ಆದರೆ ಈ ಸಂಘಿಗಳಿಗೆ ನಾನು ಹೇಳಲಿಚ್ಛಿಸುತ್ತೇನೆ. ನಾಚಿಕೆಯಾಗಬೇಕು ನಿಮ್ಮ ಸರ್ಕಾರಕ್ಕೆ ಎಂದು. ಕೇಂದ್ರ ಸರ್ಕಾರಕ್ಕೆ ಸವಾಲೆಂದರೆ, ರೋಹಿತ್ ಪ್ರಕರಣೆದಲ್ಲಿ ನೀವು ಏನೇನು ಮಾಡಿದ್ದಿರೋ ಅದನ್ನು ಮಾಡಲು JNU ನಲ್ಲಿ ನಾವು ಬಿಡುವುದಿಲ್ಲ. ರೋಹಿತ್ ನ ಬಲಿದಾನವನ್ನು ಸ್ಮರಿಸಿಕೊಂಡು ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ದೃಢವಾಗಿ ನಿಂತೇ ನಿಲ್ಲುತ್ತೇವೆ.

ಪಾಕಿಸ್ತಾನ, ಬಾಂಗ್ಲಾದೇಶ ಬಿಟ್ಟಾಕಿ, ನಾವು ಹೇಳುತ್ತೇವೆ ಇಡೀ ಜಗತ್ತಿನ ಬಡವರೆಲ್ಲಾ ಒಂದಾಗಬೇಕು, ಶ್ರಮಿಕರೆಲ್ಲಾ ಒಂದಾಗಬೇಕು.  ನಾವು ಪ್ರಪಂಚದ ಮಾನವತೆಗೆ, ಭಾರತದ ಮಾನವತೆಗೆ ಶಿರಭಾಗುತ್ತೇವೆ. ಇಂದು ಮಾನವತೆಯ ವಿರುದ್ಧ ನಿಂತಿರುವ ಸಮೂಹ ಯಾವುದು ಎಂಬುದನ್ನು ಕಂಡುಕೊಂಡಿದ್ದೇವೆ. ಇದು ಇಂದು ನಮ್ಮೆದುರಿನ ಗಂಭೀರ ವಿಷಯ. ಇದನ್ನು ನಾವು ಮರೆಯಕೂಡದು. ಜಾತಿವಾದದ ಆ ಮುಖವನ್ನು, ಮನುವಾದದ ಆ ಮುಖವನ್ನು ಹಾಗೂ ಬ್ರಾಹ್ಮಣವಾದ-  ಬಂಡವಾಳವಾದದ ನಡುವಿನ ಮೈತ್ರಿಯ ಆ ಮುಖವನ್ನು ನಾವು ಮರೆಯಕೂಡದು. ಈ ಮುಖಗಳನ್ನು ನಾವು ಬಯಲುಗೊಳಿಸಬೇಕು. ನಾವು ಈ ದೇಶದಲ್ಲಿ ನಿಜವಾದ ಪ್ರಜಾಪ್ರಭುತ್ವ, ನಿಜವಾದ ಸ್ವಾತಂತ್ರ್ಯ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯಗಳನ್ನು ಸ್ಥಾಪಿಸಬೇಕಾಗಿದೆ. ಅಂತಹ ಸ್ವಾತಂತ್ರ್ಯ ಬರುತ್ತದೆ. ಅದು ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವಗಳೊಂದಿಗೆ ಬರುತ್ತದೆ. ಈ ಕಾರಣದಿಂದಾಗಿಯೇ ನಾನು ನನ್ನ ಮಿತ್ರರಲ್ಲಿ ವಿನಂತಿಸುವುದೇನೆಂದರೆ ಎಲ್ಲರೂ ನಿಮ್ಮ ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಡಿ. ನಾವು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ನಮ್ಮ ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕಾಗಿದೆ. ನಮ್ಮ ಈ ದೇಶವನ್ನು ಉಳಿಸಿಕೊಳ್ಳಬೇಕಿದೆ. ನಮ್ಮ ದೇಶ ಒಂದಾಗಿರಲು ನಾವು ಮೊದಲು ಒಗ್ಗಟ್ಟಾಗಿರಬೇಕಾಗಿದೆ. ಆ ಮೂಲಕವೇ ಇಲ್ಲಿ ಭಯೋತ್ಪಾದಕರಿಗೆ, ಭಯೋತ್ಪಾದನೆಗೆ ಆಶ್ರಯತಾಣ ಒದಗಿಸುವ ವಿಧ್ವಂಸಕಾರಿ ಶಕ್ತಿಗಳನ್ನು ವಿರೋಧಿಸಲು ನಾವು ಐಕ್ಯತೆಯಿಂದ ಇರಬೇಕಾಗಿದೆ.

ಕಸಬ್ ಯಾರು? ಅಫ್ಜಲ್ ಗುರು ಯಾರು? ತಮ್ಮನ್ನು ತಾವೇ ಉಡಾಯಿಸಿಕೊಳ್ಳುವ ಮಟ್ಟಕ್ಕೆ ತಲುಪುವ ಇವರೆಲ್ಲಾ ಯಾರು? ಈ ಪ್ರಶ್ನೆಯನ್ನು ಒಂದು ವಿಶ್ವವಿದ್ಯಾಲಯದಲ್ಲಿ ಎತ್ತಲಾಗದಿದ್ದರೆ ನನ್ನ ಪ್ರಕಾರ ಆ ವಿಶ್ವವಿದ್ಯಾಲಯವನ್ನು ಇಟ್ಟುಕೊಂಡಿರುವುದರಲ್ಲಿ ಅರ್ಥವಿಲ್ಲ.

ಹಿಂಸೆಯ ಅರ್ಥ ನಮಗೆ ಸರಿಯಾಗಿ ಆಗದಿದ್ದರೆ ನಾವು ಅದನ್ನು ನೋಡುವುದು ಹೇಗೆ? ಬಂದೂಕುಗಳಿಂದ ಜನರನ್ನು ಕೊಲ್ಲುವುದು ಮಾತ್ರ ಹಿಂಸೆಯಲ್ಲ. JNU ಆಡಳಿತಾಂಗವು ಸಂವಿಧಾನದಲ್ಲಿ ದಲಿತರಿಗೆ ನೀಡಿರುವ ಹಕ್ಕುಗಳನ್ನು ಗೌರವಿಸಲು ನಿರಾಕರಿಸಿದರೆ ಅದೂ ಹಿಂಸೆಯೇ ಆಗುತ್ತದೆ. ಇದನ್ನೇ ಸಾಂಸ್ಥಿಕ ಹಿಂಸೆ ಎಂದು ಹೇಳುವುದು. ಈ ಮಂದಿ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಯಾವುದು ನ್ಯಾಯ ಎಂದು ತೀರ್ಮಾನಿಸುವುದು ಯಾರು? ಬ್ರಾಹ್ಮಣ್ಯ ಪ್ರಾಬಲ್ಯ ಪಡೆದಿದ್ದಾಗ ದಲಿತರಿಗೆ ದೇಗುಲ ಪ್ರವೇಶವಿರಲಿಲ್ಲ. ಆ ಕಾಲದಲ್ಲಿ ಅದೇ ನ್ಯಾಯವಾಗಿತ್ತು. ಬ್ರಿಟಿಷರ  ವಸಾಹತುಶಾಗಿ ಆಳ್ವಿಕೆಯ ಕಾಲದಲ್ಲಿ  ನಾಯಿಗಳಿಗೂ, ಭಾರತೀಯರಿಗೂ ಹೊಟೆಲುಗಳ ಒಳಗೆ ಪ್ರವೇಶವಿರಲಿಲ್ಲ. ಆಗ ಅದೇ ಅವರಿಗೆ ನ್ಯಾಯ. ಅವರ ಈ ನ್ಯಾಯಕ್ಕೆ ನಾವು ಸವಾಲೊಡ್ಡಿದೆವು. ಹಾಗೆಯೇ ಇಂದೂ ಸಹ RSS ಮತ್ತು ABVPಗಳ ನ್ಯಾಯದ ವ್ಯಾಖ್ಯಾನಕ್ಕೆ ನಾವು ಸವಾಲು ಹಾಕುತ್ತಿದ್ದೇವೆ. ನೀವು ಹೇಳುವ ನ್ಯಾಯ ನಾವು ಹೇಳುವ ನ್ಯಾಯದ ಅರ್ಥಕ್ಕೆ ಸರಿಹೊಂದದಿದ್ದರೆ ನಿಮ್ಮ ನ್ಯಾಯವನ್ನು ನಾವು ಒಪ್ಪುವುದಿಲ್ಲ. ನಿಮ್ಮ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಒಪ್ಪುವುದಿಲ್ಲ. ಈ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಸಂವಿಧಾನದ ಹಕ್ಕುಗಳು ಸಿಕ್ಕಿದ ದಿನವೇ ನಾವು ಈ ದೇಶ ಸ್ವತಂತ್ರಗೊಂಡಿದೆ ಎಂದು ಒಪ್ಪಿಕೊಳ್ಳುವುದು. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನದಡಿ ಸಮಾನ ಎಂದು ಗುರುತಿಸಲ್ಪಟ್ಟಾಗ ಮಾತ್ರ ಅಲ್ಲಿ ನ್ಯಾಯಸ್ಥಾಪನೆಯಾಗಿದೆ ಎಂದು ಒಪ್ಪುತ್ತೇವೆ.

JNUSU ಯಾವುದೇ ಹಿಂಸೆಯನ್ನಾಗಲೀ ಯಾವುದೇ ಭಯೋತ್ಪಾದಕನನ್ನಾಗಲೀ, ಯಾವುದೇ ಭಯೋತ್ಪಾದಕ ದಾಳಿಯನ್ನಾಗಲೀ ಅಥವಾ ಯಾವುದೇ ದೇಶವಿರೋಧಿ ಚಟುವಟಿಕೆಯನ್ನಾಗಲೀ ಬೆಂಬಲಿಸುವುದಿಲ್ಲ. ಈ ಮಾತನ್ನು ನಾನು ಎಷ್ಟು ಸಲ ಬೇಕಾದರೂ ಮತ್ತೆ ಮತ್ತೆ ಹೇಳುತ್ತೇನೆ. ಪಾಕಿಸ್ತಾನ್ ಜಿಂದಾಬಾದ್” ಎಂದು ಕೂಗಿರುವ ಆದರೆ ನಮಗೆ ತಿಳಿಯದ ಕೆಲವರಿದ್ದಾರೆ. ಅಂತಹ ವ್ಯಕ್ತಿಗಳಿಗೆ JNUSU ಛೀಮಾರಿ ಹಾಕುತ್ತದೆ. JNU ಆಡಳಿತಾಂಗ ಮತ್ತು ABVPಗೆ ನಾನು ಒಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ಈ ಕ್ಯಾಂಪಸ್ಸಿನಲ್ಲಿ ಸಾವಿರಾರು ಘಟನೆಗಳು ಜರುಗುತ್ತಿರುತ್ತವೆ. ABVPಯ ಘೋಷಣೆಗಳಿಗೆ ದಯಮಾಡಿ ಕಿವಿಕೊಟ್ಟು ಕೇಳಿ. ಅವರು ಹೇಳುತ್ತಾರೆ ಕಮ್ಯುನಿಷ್ಟ್ ನಾಯಿಗಳು” ಎಂದು. “ಅಫ್ಜಲ್ ಗುರುನ ಕುನ್ನಿಗಳು”ಎಂದು ಘೋಷಣೆ ಕೂಗುತ್ತಾರೆ. ಜಿಹಾದಿಗಳ ಮಕ್ಕಳು ಎನ್ನುತ್ತಾರೆ. ಹಾಗಾದರೆ ನಮಗೆಲ್ಲಾ ನಮ್ಮ ಸಂವಿಧಾನ ನಾಗರಿಕರ ಹಕ್ಕುಗಳನ್ನು ನೀಡಿದೆ ಎಂಬುದನ್ನು ನೀವು ಒಪ್ಪುವುದಿಲ್ಲವಾ? ಹಾಗಾದರೆ ನಮ್ಮ ತಂದೆತಾಯಿಯನ್ನು ನಾಯಿ ಎಂದು ಕರೆಯುವುದು ನಮ್ಮ ಸಂವಿಧಾನದತ್ತವಾದ ಹಕ್ಕುಗಳನ್ನು ಅವಮಾನಿಸಿದಂತಲ್ಲವೇ? ಈ ಪ್ರಶ್ನೆಯನ್ನು ನಾನು ABVPಗೆ ಕೇಳಲು ಇಚ್ಛಿಸುತ್ತೇನೆ. JNU ಆಡಳಿತಾಂಗಕ್ಕೆ ನಾನು ಈ ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ನೀವು ಯಾರಿಗಾಗಿ ಕೆಲಸ ಮಾಡುತ್ತೀರಿ ಸ್ವಾಮಿ? ಯಾವುದರ ಆಧಾರದಲ್ಲಿ ನೀವು ಕೆಲಸ ಮಾಡುತ್ತಿದ್ದೀರಿ? ಇವತ್ತು ನಮಗೆ ಸ್ಪಷ್ಟವಾಗಿದೆ. JNU ಆಡಳಿತಾಂಗ ಮೊದಲು ಅನುಮತಿ ನೀಡುತ್ತದೆ. ನಂತರ ನಾಗಪುರದಿಂದ ಒಂದು ಕರೆ ಬಂದ ಕೂಡಲೇ ಅದು ಅನುಮತಿ ನಿರಾಕರಿಸುತ್ತದೆ. ಹೀಗೆ ಅನುಮತಿ ಕೊಟ್ಟು ವಾಪಾಸು ತೆಗೆದುಕೊಳ್ಳುವ ಅದರ ನೀತಿ ಫೆಲೋಶಿಪ್ ಗಳನ್ನು ನೀಡಿ ವಾಪಾಸು ತೆಗೆದುಕೊಳ್ಳುವಷ್ಟೇ ಸಲೀಸಾಗಿಬಿಟ್ಟಿದೆ ಇವರಿಗೆ. ಅವರು ಮೊದಲಿಗೆ ಫೆಲೋಶಿಪ್ ಕೊಡುವುದಾಗಿ ಘೋಷಣೆ ಮಾಡಿ ನಂತರ ಮತ್ತೆ ಇಲ್ಲಾ ಫೇಲೋಶಿಪ್ ರದ್ದು ಮಾಡಲಾಗಿದೆ ಎಂದು ಹೇಳಿದ್ದರಲ್ಲಾ ಹಾಗೆ. ಇದು ಸಂಘಿ ಚಾಳಿ. ಇದು RSS-ABVP ಚಾಳಿ. ಇಡೀ ದೇಶದಲ್ಲೇ ಅವರು ಜಾರಿಗೊಳಿಸಲು  ಹೊರಟಿರುವ ಚಾಳಿ. ಅದೇ ರೀತಿಯಲ್ಲಿ JNUವನ್ನೂ ನಡೆಸಲು ಹೊರಟಿದ್ದಾರೆ ಇವರು.

JNU ಉಪಕುಲಪತಿಗಳಿಗೆ ನಾವು ಕೇಳುವ ಪ್ರಶ್ನೆ ಇದು. JNUನಲ್ಲಿ ಪೋಸ್ಟರ್ ಗಳನ್ನು ಹಾಕಲಾಗಿತ್ತು. ಮೆಸ್ ಒಳಗೆ ಕರಪತ್ರಗಳನ್ನು ಹಂಚಲಾಗಿತ್ತು. ನಿಮಗೆ ಸಮಸ್ಯೆಯೆನಿಸಿದ್ದರೆ ನೀವು ಆಗಲೇ ಅನುಮತಿ ನಿರಾಕರಿಸಬೇಕಿತ್ತು. ಆದರೆ ನೀವು ಮಾಡಿದ್ದೇನು? ಮೊದಲು ಅನುಮತಿ ಕೊಟ್ಟು ಆಮೇಲೆ ಅದನ್ನು ವಾಪಾಸು ಪಡೆಯಲು ಕಾರಣವೇನಿತ್ತು ಎಂದು ನಮಗೆ ಸ್ಪಷ್ಟಪಡಿಸಿ.  ಈ ಮಂದಿಯ ಬಗ್ಗೆಯೂ ನಾನು ಸತ್ಯ ಹೇಳಲಿಚ್ಛಿಸುತ್ತೇನೆ. ದಯಮಾಡಿ ಅವರನ್ನು ದ್ವೇಷಿಸಬೇಡಿ.  ಯಾಕೆಂದರೆ ದ್ವೇಷಗುಣದವರಲ್ಲ ನಾವು. ನಿಜ ಅಂದರೆ ಅವರ ಬಗ್ಗೆ ನನಗೆ ಪಾಪ ಅನಿಸುತ್ತದೆ. ಅವರು ಒಂಥರಾ ಬುಟ್ಟಿಕೋಳಿಗಳಂತೆ ಕುಣಿಯುತ್ತಿದ್ದಾರೆ.  ಯಾಕೆ ಹೇಳಿ? ಯಾಕಂದ್ರೆ ಗಜೇಂದ್ರ ಚೌಹಾಣನನ್ನು ಕೂರಿಸಿಬಿಟ್ಟಹಾಗೆ ಹೋದಲ್ಲೆಲ್ಲಾ ಚೌಹಾಣ್, ದಿವಾನ್ ಮತ್ತು ಫರ್ಮಾನ್ ಗಳನ್ನು ಕೂರಿಸಿಬಿಡುತ್ತೇವೆ ಅನ್ನುವ ಹುಂಬತನ ಅವರಿಗೆ. ಫರ್ಮಾನ್ ಗಳನ್ನು ಕಳಿಸಿ ಅವರಿಂದ ಕೆಲಸ ಮಾಡಿಸಿಕೊಳ್ಳಬಹುದು ಅನ್ನುವುದು ಅವರ ಹಕೀಕತ್ತು. ಅದಕ್ಕಾಗಿಯೇ, ಅವರು ಭಾರತ್’ಮಾತಾ ಕೀ ಜೈ’ಅಂದ ಕೂಡಲೇ ನಿಮಗೆ ಅರ್ಥವಾಗಿಬಿಡಬೇಕು ಅವರು ಸಧ್ಯದಲ್ಲೇ ಸಂದರ್ಶನಕ್ಕೆ ಹಾಜರಾಗುತ್ತಿದ್ದಾರೆ ಅಂತ. ಆದರೆ ಅವರಿಗೆ ಕೆಲಸ ಸಿಕ್ಕಿದ ಕೂಡಲೇ ದೇಶಭಕ್ತಿಯನ್ನೂ ಮೂಲೆಗೆ ಎಸೆದು ಭಾರತ ಮಾತೆಯನ್ನೂ ಮರೆತು ಕೂರುವ ಜನ ಅವರು. ಅವರು ಎಂದೂ ಗೌರವಿಸದೇ ಇರುವ ತ್ರಿವರ್ಣ ಧ್ವಜ ಹೋಗಲಿ ಕೇಸರಿ ಧ್ವಜವನ್ನೂ ಅವರು ಗೌರವಿಸುವುದಿಲ್ಲ. ಅಂತಾ ದುಸ್ಥಿತಿಗೆ ತಲುಪುತ್ತಾರೆ.

ಇದು ಯಾವ ಸೀಮೆಯ ದೇಶಭಕ್ತಿ? ಉದ್ಯೋಗದಾತನಾದವನು ಉದ್ಯೋಗಿಯನ್ನೂ, ರೈತನು ಕೃಷಿಕೂಲಿಗಾರನನ್ನೂ, ಬಂಡವಾಳಗಾರ ಉದ್ಯೋಗಿಗಳನ್ನೂ, ಮತ್ತು 15,000 ರೂಪಾಯಿಗೆಲ್ಲಾ ಕೆಲಸ ಮಾಡುವ TV ಜರ್ನಲಿಸ್ಟುಗಳನ್ನು ಅವರ CEO ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ ಅದೆಂತಹ ದೇಶಭಕ್ತಿ ಎಂದು ನಾನು ಕೇಳುತ್ತೇನೆ. ABVP-RSS ದೇಶಭಕ್ತಿಯೇನಿದ್ದರೂ ಇಂಡಿಯಾ-ಪಾಕಿಸ್ತಾನ್ ಮ್ಯಾಚಿಗಷ್ಟೇ ಸೀಮಿತವಾಗಿಬಿಡುತ್ತದೆ. ಈ ಕಾರಣಕ್ಕಾಗಿಯೇ ಅವರು ಬೀದಿಯಲ್ಲಿ ಹೋಗುವಾಗ ಒಬ್ಬ ತಳ್ಳುಗಾಡಿಯ ಹಣ್ಣುಮಾರುವವ ಬಡಪಾಯಿಯನ್ನೂ ಅವಮಾನಿಸುವ ಕೆಲಸಕ್ಕೆ ಕೈಹಾಕುತ್ತಾರೆ. ಹಣ್ಣಿನಂಗಡಿಯವ ಸ್ವಾಮೀ”, ಡಜನ್ನು ಬಾಳೆಹಣ್ಣಿಗೆ 40 ರೂಪಾಯಿ” ಅಂದ ಕೂಡಲೇ ಇವರು “ನೀವೆಲ್ಲಾ ನಮ್ಮನ್ನು ಲೂಟಿ ಮಾಡ್ತಾ ಇದೀರಾ, ನಿಂಗೆ ಕೊಡೋದು ಬರೀ 30 ರೂಪಾಯಿ” ಎಂದು ಗದರಿಸುತ್ತಾರೆ. ಅದೇ ಎಂದಾದರೂ ಅದೇ ಹಣ್ಣಿನಂಗಡಿಯವ ತಿರುಗಿಬಿದ್ದು  “ದೊಡ್ಡ ಖದೀಮರು ನೀವೇ. ಕೋಟಿಗಟ್ಟಲೇ ಲೂಟಿ ಮಾಡಿರೋರು ನೀವು” ಅಂತ ಎಲ್ಲಾದರೂ ಹೇಳಿದರೆ ಮುಗಿದೇ ಹೋಯ್ತು ಅವನು ರಾಷ್ಟ್ರದ್ರೋಹಿಯೇ ಆಗಿಬಿಡುತ್ತಾನೆ.


ABVPಯಲ್ಲಿ ಅನೇಕ ಗೆಳೆಯರು ನನಗೆ ಗೊತ್ತು. ಅವರಿಗೆ ಆಗಾಗ ಕೇಳುತ್ತಿರುತ್ತೇನೆ. “ನಿಜಕ್ಕೂ ನಿಮಗೆ ದೇಶಪ್ರೇಮ ಅನುಭವವಾಗುತ್ತಾ?” ಅಂತ. ಅದಕ್ಕವರು ಹೇಳೋದೇನು ಗೊತ್ತೇ? “ಏನು ಮಾಡೋದು ಗುರೂ, ಸರ್ಕಾರ ಅಧಿಕಾರದಲ್ಲಿರೋದು ಐದೇ ವರ್ಷ, ಆಗಲೇ ಎರಡು ವರ್ಷ ಮುಗಿದೇ ಹೋದ್ವು. ಮೂರು ವರ್ಷದ ಟಾಕ್ ಟೈಮ್ ಅಷ್ಟೇ ಬಾಕಿ ಇರೋದು. ಏನೇ ಮಾಡೋದಿದ್ರೂ ಅಷ್ಟರೊಳಗಡೆಯೇ ಮಾಡಿಕೊಂಡುಬಿಡಬೇಕು” ಇದು ಅವರ ಉತ್ತರ. ಹೀಗಾಗಿ ನಾನು ಅವರಿಗೆ ಹೇಳುವುದೇನೆಂದರೆ ನೀವು JNU ಬಗ್ಗೆ ಸುಳ್ಳು ಹೇಳಿದ್ದೇ ಆದರೆ ನಾಳೆ ಮತ್ಯಾರಾದರೂ ನಿಮ್ಮ ಕೊಳ್ಳುಪಟ್ಟಿಯನ್ನೂ ಹಿಡಿದು ಕೇಳಬಹುದು. ಹಾಗೆ ಮಾಡುವವರು ಬೇರೆ ಯಾರೂ ಆಗಿರುವುದಿಲ್ಲ. ನಿಮ್ಮ ದೋಸ್ತುಗಳೇ ಆಗಿರುತ್ತಾರೆ. ರೈಲುಭೋಗಿಗಳಲ್ಲಿ ಬೀಫ್ ಇದೆ ಅಂತ ಹುಡುಕಿದ್ದರಲ್ಲಾ ಅಂತವರು ಯಾರಾದ್ರೂ ನಿಮ್ಮನ್ನೂ ಕೇಳಬಹುದು. ಯಾಕಂದರೆ ನೀವೂ ಸಹ JNU ವಿದ್ಯಾರ್ಥಿಗಳೇ ಆಗಿರುತ್ತೀರಲ್ಲ? ಈಗ ನೀವು ಮಾಡುತ್ತಿರುವುದೇನು, ಅದರಲ್ಲಿ ನಿಮಗೂ ಇರುವ ಅಪಾಯ ಏನು ಎಂದು ನಿಮಗೆ ಅರ್ಥವಾಗುತ್ತಿದೆಯಾ?  ಹೀಗೆ ಕೇಳಿದ್ದಕ್ಕೆ ಅವರು ‘ಹೌದೌದು ಅದಕ್ಕೇ ನಾವು #JNUShutdown ವಿರೋಧಿಸ್ತೀವಿ’ ಅಂತ ಹೇಳಿದರು. ನಾ ಹೇಳಿದೆ ಓಹೋ ಬಾಳಾ ಗ್ರೇಟ್! ಮೊದಲು #JNUShutdown ಗೆ ಎಲ್ಲಾ ವಾತಾವರಣ ಸೃಷ್ಟಿ ಮಾಡೋದು, ನಂತರ ನೀವೂ JNUನಲ್ಲೇ ಇರುವುದು ಅಂತ ನೆನಪಾದ ಕೂಡಲೇ ನಾವೂ ವಿರೋಧಿಸ್ತೀವಿ ಅನ್ನುವುದು.

ಗೆಳೆಯರೆ, ಮಾರ್ಚ್ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ABVPಯವರು ಓಂ ಗುರುತು ಹಿಡಿದುಕೊಂಡು ನಿಮ್ಮ ಬಳಿ ಬರುತ್ತಾರಲ್ಲಾ ಆಗ ನೀವು ಅವರಿಗೆ ಕೇಳಬೇಕು. ಅಲ್ರಪ್ಪಾ, ನಾವು” ರಾಷ್ಟ್ರ-ವಿರೋಧಿಗಳು, ಜಿಹಾದಿಗಳು, ಭಯೋತ್ಪಾದಕರು. ನೀವೀಗ ನಮ್ಮ ಓಟು ಪಡೆದುಬಿಟ್ಟರೆ ನೀವೂ ರಾಷ್ಟ್ರ ವಿರೋಧಿಗಳಾಗಿಬಿಡುವುದಿಲ್ಲವಾ” ಅಂತ.  ಆದ ಅವರು “ಹೇ ಇಲ್ಲಾ ಇಲ್ಲಾ, ನೀವಲ್ಲ, ಕೆಲವರು ಮಾತ್ರ ಹಾಗೆ ಮಾಡಿದವರು’ ಎನ್ನುತ್ತಾರೆ. ಅದಕ್ಕೆ ನೀವು “ಮತ್ತೆ ನೀವು ಆವೊತ್ತೇ ಹಾಗೆ ಘೋಷಣೆ ಕೂಗಿದವರು ಇಡೀ JNU ವಿದ್ಯಾರ್ಥಿಗಳಲ್ಲ, ಯಾರೋ ಕೆಲವರು ಮಾತ್ರ ಅಂತ ಮೀಡಿಯಾಗಳಿಗೆ ಹೇಳೋದಿಕ್ಕೆ ನಿಮಗೆ ಯಾಕೆ ಗಂಟಲು ಕಟ್ಟಿಹೋಗಿತ್ತು? VC ಎದುರು ಹಾಗೆ ಹೇಳೋದಿಕ್ಕೇನಾಗಿತ್ತು? ರಿಜಿಸ್ಟ್ರಾರ್ ಎದರು ಇದನ್ನ ಹೇಳೋದಿಕ್ಕೇನಾಗಿತ್ತು ನಿಮಗೆ?” ಅಂತ ಕೇಳಬೇಕು.

ಈಗ ಆ ಯಾರೋ ಕೆಲವು ಜನರ ಕಥೆ ಏನು? ಅವರೇನಾದರೂ ನಾವು ಪಾಕಿಸ್ತಾನ್ ಜಿಂದಾಬಾದ್’ ಅಂತ ಕೂಗೇ ಇಲ್ಲ ಅನ್ನುತ್ತಿದ್ದಾರಾ? ಆ ಕೆಲವು ಜನ ನಾವು ಭಯೋತ್ಪಾದನೆಗೆ ಬೆಂಬಲಿಸುವುದಿಲ್ಲ ಅನ್ನುತ್ತಿದ್ದಾರಲ್ಲವೇ? ನಾವು ನ್ಯಾಯಬದ್ಧವಾಗಿ ಪಡೆದಿದ್ದ ಅನುಮತಿಯನ್ನು ಹಿಂಪಡೆದಿದ್ದು ಅವರಿಗೆ ತಮ್ಮ ಪ್ರಜಾತಾಂತ್ರಿಕ ಹಕ್ಕಿನ ಮೇಲಿನ ಹಲ್ಲೆ ಎಂದು ಆ ಕೆಲವು ಜನ ಹೇಳುತ್ತಿದ್ದಾರಾ? ದೇಶದ ಯಾವುದಾದರೂ ಭಾಗದಲ್ಲಿ ಹೋರಾಟ ನಡೆದರೆ ಅದರ ಪರವಾಗಿ ನಿಲ್ಲುತ್ತೇವೆ ಅನ್ನುವವರು ಆ ಕೆಲವು ಮಂದಿಯಲ್ಲವೇ?. ಅವರಿಗೆ ಈ ಸಣ್ಣ ವಿಷಯ ಅರ್ಥವಾಗುವುದಿಲ್ಲ. ನಮ್ಮ ಮೇಲೆ ಭಯೋತ್ಪಾದಕರನ್ನು ಬೆಂಬಲಿಸುವ ಗೂಬೆ ಕೂರಿಸಿದವರು? ಆದರೆ ಒಂದು ಸಣ್ಣ ನೋಟೀಸ್ ನೋಡಿದೊಡನೆ ಇಲ್ಲಿ ನೆರೆದಿರುವ ನಿಮಗೆಲ್ಲರಿಗೂ ಇದು ಅರ್ಥವಾಗಿದೆ ಎಂದು ನನಗೆ ಖಾತ್ರಿಯಿದೆ. ಈ ಕ್ಯಾಂಪಸ್ ನಲ್ಲಿರುವ ಪ್ರತಿ ವಿದ್ಯಾರ್ಥಿಗೂ ನೀವು ತಿಳಿಹೇಳಬೇಕಾಗಿದೆ. ABVP ನಮ್ಮ JNUವನ್ನು ಒಡೆಯಲು ಯತ್ನಿಸುತ್ತಿದೆ ಆದರೆ JNUವನ್ನು ಒಡೆಯಲು ನಾವು ಬಿಡುವುದಿಲ್ಲ. JNU ಚಿರಾಯುವಾಗಲಿ! ದೇಶದಲ್ಲಿ ಈಗ ನಡೆಯುತ್ತಿರುವ ಎಲ್ಲಾ ಹೋರಾಟಗಳಿಗೂ ಜಯವಾಗಲಿ. ಅವೆಲ್ಲವುಗಳಲ್ಲಿ JNU ಭಾಗವಹಿಸುತ್ತದೆ ಮತ್ತು ಪ್ರಜಾಪ್ರಭುತ್ವದ ಧ್ವನಿಯನ್ನು, ಸ್ವಾತಂತ್ರ್ಯದ ಧ್ವನಿಯನ್ನು ಗಟ್ಟಿಗೊಳಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಧ್ವನಿಯನ್ನು ಗಟ್ಟಿಗೊಳಿಸುತ್ತದೆ.

ನಾವು ಮುನ್ ಮುಂದಕ್ಕೆ ನಡೆಯುತ್ತೇವೆ. ಗೆಲುವು ನಮ್ಮದು, ಸೋಲು ದ್ರೋಹಿಗಳದ್ದು. ಇಷ್ಟು ಹೇಳುತ್ತಾ ನಿಮ್ಮೆಲ್ಲರಲ್ಲಿ ಒಗ್ಗಟ್ಟಾಗಿರಲು ಮನವಿ ಮಾಡಿಕೊಳ್ಳುತ್ತೇನೆ.

ಜೈ ಭೀಮ್, ಲಾಲ್ ಸಲಾಂ                                     
: ಈ ಪೂರ್ಣ ಪಠ್ಯ  ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ 18-02-2016ರ ಸಂಚಿಕೆಯಲ್ಲಿ ಪ್ರಕಟವಾಗಿದೆ.


1 ಕಾಮೆಂಟ್‌:

Anil ಹೇಳಿದರು...

ಇದು ಯಾವನೋ ತಲೆ ಕೆಟ್ಟವನು ಬರೆದಿರುವ ವಿಷಯದ ಹಾಗೆ ಇದೆ.
ತಲೆಯ ತುಂಬಾ ಕಮ್ಯೂನಿಸ್ಟ್ ಚಿಂತನೆ ತುಂಬಿಕೊಂಡು ಬ್ರೈನ್ ವಾಷ್ ಆಗಿರುವವರಿಂದ ಈ ತರಹದ ಬರಹ ಬಿಟ್ಟು ಬೇರೆ ಏನನ್ನು ನಿರೀಕ್ಷಿಸಬಹುದು????
ಒಬ್ಬ ದೇಶ ಪ್ರೇಮಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವರ್ಕರ್ ನಿಮಗೆ ದೇಶದ್ರೋಹಿಯಾಗಿ ಕಾಣಿಸ್ತಾರೆ. ಅದೇ ದೇಶದ ಮೇಲೆ ಭಯೋತ್ಪಾದಕ್ಕ ದಾಳಿ ಮಾಡಿದ ಕಸಬ್ ಅಪ್ಜಲ್ ಗುರು ಮತ್ತು ಅವರಿಗೆ ಬೆಂಬಲವಾಗಿ ಮಾತನಾಡುವ ಜನಗಳು ನಿಮಗೆ ದೇಶಪ್ರೇಮಿಗಳು ಅಲ್ವಾ.
ನಮ್ಮ ದೇಶದ ಕಾನೂನಿಗೆ ಮೊದಲು ಗೌರವ ಕೊಡೋದನ್ನು ಕಲಿತ್ತುಕೊಳ್ಳಿ...