-ಚಂದ್ರಶೇಖರ್ ಐಜೂರ್.
‘ನನ್ನಜ್ಜನಿಗೊಂದಾಸೆಯಿತ್ತು’ ಕತೆಯನ್ನು ನನ್ನದೇ ದನಿಯಲ್ಲಿ 48 ನಿಮಿಷಗಳ ಕಾಲ ರೆಕಾರ್ಡ್ ಮಾಡಿಟ್ಟುಕೊಂಡಿದ್ದೆ
1998ರ ಆಗಸ್ಟ್ ತಿಂಗಳ ಯಾವುದೋ ಒಂದು ದಿನ ಆ ಸಂಕಲನದಲ್ಲಿದ್ದ ಎಂಟು ಕತೆಗಳನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿದ್ದೆ. ಮತ್ತೆರಡು ದಿನಗಳಲ್ಲಿ ಇನ್ನೆರಡು ಸಲ ಆ ಕತೆಗಳನ್ನು ಓದಿದ್ದೆ. ಇನ್ನು ಚೇತರಿಸಿಕೊಳ್ಳಲಾರೆ ಅನ್ನಿಸಿ ಆ ಕತೆಗಳ ಕತೆಗಾರನಿಗೆ ಆರು ಪುಟಗಳ ದೀರ್ಘಪತ್ರವೊಂದನ್ನು ಬರೆದು ಸುಮ್ಮನಾಗಿದ್ದೆ. ಆ ಕಥಾ ಸಂಕಲನದ ಹೆಸರು ‘ಬುಗುರಿ’ ಅದರ ಕತೆಗಾರ ಮೊಗಳ್ಳಿ ಗಣೇಶ್.
ಅಷ್ಟು ತೀವ್ರವಾಗಿ ‘ಬುಗುರಿ’ ಸಂಕಲನದಲ್ಲಿದ್ದ ಅಷ್ಟೂ ಕತೆಗಳನ್ನು ಓದಲು ಕಾರಣ ಅವು ನನ್ನ ಕತೆಗಳಾಗಿದ್ದವು. ಅವು ನಾನು ಹುಟ್ಟಿದೂರಿನ ಕತೆಗಳಾಗಿದ್ದವು, ನನ್ನ ತಾಯಿನೆಲದ ಕತೆಗಳಾಗಿದ್ದವು, ನನ್ನ ಬೇರುಗಳ ಕತೆಗಳಾಗಿದ್ದವು, ನಾನು ನಡೆದಾಡಿದ ನೆಲದ ಕತೆಗಳಾಗಿದ್ದವು ಮತ್ತು ಅವು ನನ್ನವಷ್ಟೇ ಕತೆಗಳಾಗಿದ್ದವು. ಜಗತ್ತಿನ ಯಾವುದೇ ದೇಶದ ಯಾವುದೇ ನೆಲದ ಶ್ರೇಷ್ಠ ಕತೆಗಳ ಸಮಕ್ಕೆ ನಿಲ್ಲಬಲ್ಲ ಕತೆಗಳು ಮೊಗಳ್ಳಿ ಗಣೇಶರ ‘ಬುಗುರಿ’ ಸಂಕಲನದಲ್ಲಿ ಕಂಡವು.
1998ರಲ್ಲಿ ಶುರುಮಾಡಿದವನು ಅವರನ್ನು ಭೇಟಿಯಾಗುವ ತನಕ ಅಂದರೆ 2003ರವರೆಗೆ ಮೊಗಳ್ಳಿಯವರಿಗೆ ಪತ್ರ ಬರೆಯುತ್ತಲೇ ಇದ್ದೆ. ‘ಬುಗುರಿ’ ಸಂಕಲನದಲ್ಲಿ ‘ನನ್ನಜ್ಜನಿಗೊಂದಾಸೆಯಿತ್ತು’ ಎಂಬ ಕತೆಯೊಂದಿದೆ. ಆ ಕತೆ ನನ್ನ ಎಷ್ಟೋ ರಾತ್ರಿಗಳನ್ನು ಕೊಂದುಹಾಕಿತ್ತು. ನಿದ್ರೆಬಾರದ ರಾತ್ರಿಗಳಲ್ಲಿ ಮೊಗಳ್ಳಿ ಕತೆಗಳು ಮೈಮನಸ್ಸುಗಳನ್ನು ಆವರಿಸಿಕೊಂಡು ಮುಳ್ಳಿನ ಗಿಡ ನೆಟ್ಟು ಮಾಯವಾಗುತ್ತಿದ್ದವು. ‘ನನ್ನಜ್ಜನಿಗೊಂದಾಸೆಯಿತ್ತು’ ಕತೆಯನ್ನು ನನ್ನದೇ ದನಿಯಲ್ಲಿ 48 ನಿಮಿಷಗಳ ಕಾಲ ರೆಕಾರ್ಡ್ ಮಾಡಿಟ್ಟುಕೊಂಡು ಸರಿರಾತ್ರಿಯಲ್ಲಿ ಕೇಳುತ್ತಾ ದಿನ ಕಳೆಯುತ್ತಿದ್ದೆ. 1998ರಿಂದ 2003ರವರೆಗೆ ನನ್ನ ಬದುಕನ್ನು ಮೊಗಳ್ಳಿ ಗಣೇಶರ ಕತೆಗಳು ಯಾವ ಪರಿ ಆವರಿಸಿಕೊಂಡಿತ್ತೆಂದರೆ ಅವರ ‘ಬುಗುರಿ’ ಸಂಕಲನದ ಎಲ್ಲ ಕತೆಗಳನ್ನು ಹತ್ತಾರು ಪ್ರತಿಗಳಲ್ಲಿ ಝರಾಕ್ಸ್ ಮಾಡಿಸಿಟ್ಟುಕೊಂಡು ನನ್ನ ಹಾಸ್ಟೆಲ್ ರೂಮ್, ನನ್ನ ಬ್ಯಾಗ್, ನನ್ನ ಮನೆ, ಗೆಳೆಯ ರವಿಚಂದ್ರನ ರೂಮ್, ಜ್ಞಾನಭಾರತಿಯ ಲೈಬ್ರರಿ ಎದುರಿಗಿದ್ದ ಕೆಂಪಣ್ಣನ ಟೀ ಅಂಗಡಿ… ಹೀಗೆ ಎಲ್ಲೆಂದರಲ್ಲಿ ಒಂದೊಂದು ಪ್ರತಿ ಇಟ್ಟಿದ್ದೇ. ಕೈಗೆಟುಕಿದ ಕಡೆ ಮೊಗಳ್ಳಿ ಕತೆಗಳು.
‘ನನ್ನಜ್ಜನಿಗೊಂದಾಸೆಯಿತ್ತು’ ಕತೆ ನನ್ನ ಪಾಲಿಗೆ ಕೇವಲ ಕತೆ ಮಾತ್ರ ಆಗಿರಲಿಲ್ಲ. ನನ್ನ ಬದುಕಿನ ತಾರುಣ್ಯದ ದಿನಗಳನ್ನು ಕತ್ತರಿಸಿ ಹಾಗೇ ಹಸಿಹಸಿಯಾಗಿ ಬಿಳಿ ಹಾಳೆಯ ಮೇಲೆ ಚೆಲ್ಲಿದಂತಿತ್ತು… ಪ್ರತಿಸಲ ‘ನನ್ನಜ್ಜನಿಗೊಂದಾಸೆಯಿತ್ತು’ ಓದುವಾಗ ಎಲ್ಲಿಂದಲೋ ಕಣ್ಣೀರು ಒತ್ತರಿಸಿಕೊಂಡು ಬರುತ್ತಿತ್ತು. ಅದು ಈಗಲೂ ನಿಂತಿಲ್ಲ. ಕತೆಗಾರನ ಸ್ವಗತವೇ ನನ್ನನ್ನು ಇಕ್ಕುಳದಿಂದ ಅದುಮಿ ಹಿಡಿದು ಹಿಚುಕುವಂತಿತ್ತು:
“ನಾನು ಹುಡುಗರ ಸಹವಾಸದಿಂದ ಒಂಟಿಯಾಗುತ್ತಾ ಬಂದೆ. ಕಾರಣಗಳೇ ಇಲ್ಲದೆ ಖಿನ್ನತೆಗೆ ಈಡಾಗುವ ರೋಗವನ್ನು ಪಾರಂಪರಿಕವಾಗಿ ನನ್ನ ಮನೆ ನನಗೆ ಆಗಲೇ ಚಿರಾಸ್ತಿಯ ಹಾಗೆ ಕೊಟ್ಟುಬಿಟ್ಟಿತ್ತು. ಕಳೆದ ಕಾಲದ ಕವಣೆಕಲ್ಲಿನ ಬೀಸಿನಲ್ಲಿ ನಾನು ಎಲ್ಲರಿಂದ ದೂರವಾಗಬೇಕಾಯ್ತು. ಪತನದ ತುದಿಯೇರುವ ಮನೆತನದ ಹುಡುಗ ಇವನೊಬ್ಬನಾದರೂ ನಮ್ಮ ದುರಂತಗಳಿಂದ ಬದುಕುಳಿಯಲಿ ಎಂದು ತಾತ ನಿರ್ಧರಿಸಿದ್ದ.
ನನ್ನ ಓದಿನ ದಾಹ ಹೆಚ್ಚಾಗುತ್ತಾ ಹೋದಂತೆ ನಿರಾಯಾಸವಾಗಿ ಎಲ್ಲರೂ ಎಲ್ಲವೂ ದೂರವಾದವು. ಕೊನೆಕೊನೆಗೆ ತಾತ ಕೂಡ ಮಸುಕಾಗತೊಡಗಿದ. ಅಂಕಿ ಅಂಶಗಳ ಪ್ರಕಾರ ಮನೆಯಲ್ಲಿ ಐದು ಜನ ಸತ್ತು ಏಳು ಮಕ್ಕಳು ಹೊಸದಾಗಿ ಹುಟ್ಟಿದ್ದವು. ಪ್ರೀತಿಯ ಅಜ್ಜಿಯರು ನನ್ನ ಜೊತೆ ಅವರ ಯೌವ್ವನದ ಪ್ರೇಮಗಳನ್ನು ಹೇಳಿಕೊಂಡಿದ್ದವರು ಮರೆಯಾಗಿದ್ದರು. ಹುಟ್ಟುಸಾವುಗಳೆಲ್ಲ ನನಗೆ ತಿಳಿಯುತ್ತಿದ್ದುದು ಎಷ್ಟೋ ದಿನಗಳ ನಂತರಕ್ಕೆ
.
ಅಂತೂ ವರ್ಷಗಳು ನಿರರ್ಥಕವಾಗಿ ಕರಗಿಹೋದವು. ಊರಿನ ಎಷ್ಟೋ ನೆನಪುಗಳೆಲ್ಲವನ್ನೂ ನಾನೇ ಸಾಯಿಸಿದ್ದೆ.”
2005ರಲ್ಲಿ ಒಂದು ರಾತ್ರಿ ಮೊಗಳ್ಳಿ ಗಣೇಶರನ್ನು ರೈಲು ನಿಲ್ದಾಣಕ್ಕೆ ಬೀಳ್ಕೊಡಲೆಂದು ಹೋಗುತ್ತಿದ್ದಾಗ ಅವರು ನನ್ನ ಕತೆಗಳಲ್ಲಿ ನಿನಗೆ ಇಷ್ಟವಾದ ಕತೆ ಯಾವುದು ಎಂದು ಕೇಳಿದ್ದರು. ನಾನು ಕ್ಷಣಕೂಡ ತಡಮಾಡದೆ ‘ನನ್ನಜ್ಜನಿಗೊಂದಾಸೆಯಿತ್ತು’ ಎಂದಿದ್ದೆ. ಅದಕ್ಕೆ ನನ್ನವೇ ಆದ ಕಾರಣಗಳನ್ನು ಕೊಟ್ಟಿದ್ದೆ. ಮೊಗಳ್ಳಿ ಎಷ್ಟು ಖುಷಿಯಾದರೆಂದರೆ ಮುಂದೆ ಅವರ ಅನೇಕ ಕತೆಗಳು ಜರ್ಮನಿ, ಸ್ಪ್ಯಾನಿಷ್, ಸ್ವೀಡಿಷ್, ಲ್ಯಾಟಿನ್ ಅಮೇರಿಕನ್ ಭಾಷೆಗಳಿಗೆ ಅನುವಾದಗೊಳ್ಳುವ ಸಂದರ್ಭಗಳು ಬಂದಾಗಲೆಲ್ಲ ಅವರು ‘ನನ್ನಜ್ಜನಿಗೊಂದಾಸೆಯಿತ್ತು’ ಕತೆಯನ್ನು ಅನುವಾದ ಮಾಡಲು ತಮ್ಮ ಮೊದಲ ಆಯ್ಕೆ ಎನ್ನುವಂತೆ ಪರಿಗಣಿಸಿದ್ದರು.
ಮೊಗಳ್ಳಿ ಅವರ ಕತೆಗಳು ಹುಟ್ಟಿದ ನೆಲ ಚೆನ್ನಪಟ್ಟಣ ನನ್ನ ನೆಲವೂ ಆಗಿರುವುದರಿಂದ ಅಲ್ಲೆಲ್ಲ ಬರಿಗಾಲಲ್ಲಿ ದಣಿವರಿಯದೆ ನಡೆದಾಡಿದ್ದೇನೆ. ಆ ಕತೆಗಳ ಬೇರುಗಳ ಹಿಡಿಯಲೆತ್ನಿಸಿ ನಡೆಯುವಾಗ ಅಂಗಾಲಿಗೆ ಮುಳ್ಳನ್ನು ಚುಚ್ಚಿಸಿಕೊಂಡಿದ್ದೇನೆ. ಮೊಗಳ್ಳಿ ಕತೆಗಳ ಮೇಲಿನ ನನ್ನ ತೀವ್ರ ಪ್ರೀತಿ ಮತ್ತು ತೀವ್ರ ಹಸಿವು ಮಾತ್ರ ಇನ್ನೂ ಹಿಂಗಿಲ್ಲ.
ಮೊಗಳ್ಳಿಯವರ ಇನ್ನೊಂದು ಕತೆ ‘ಪ್ರಾಣಿಗಳು’ –ಆ ಕತೆಯ ಮೊದಲ ಮಾತುಗಳನ್ನು ಬರೆದು ಇಲ್ಲಿಗೆ ಸುಮ್ಮನಾಗುವೆ:
“ಅವರು ದುಃಖಿಸಲು ಸುಖಿಸಲು ಹಾಡಲು ಯೋಚಿಸಲು ಬೇಕಾದಷ್ಟು ಸಮಸ್ಯೆಗಳಿರುತ್ತಿದ್ದವು. ಆದರೆ ಯಾರೂ ಅಂತಹದ್ದಕ್ಕೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಅಲ್ಲಿ, ಊರಲ್ಲಿ ಭಯಂಕರ ಸಾವುಗಳಿದ್ದವು. ಸತ್ತವರ ದುಃಖಗಳು ಜಗತ್ತನ್ನು ಸುಡಬಲ್ಲಂತಾಗಿದ್ದವು. ಹಸುಳೆಗಳ ಎಳೆ ಕನಸುಗಳ ಹಿಚುಕುವ ಕ್ರೂರತೆಗಳಿದ್ದವು. ಬೆನ್ನು ಮೂಳೆಯ ಸವೆಸುವ ಕುಯುಕ್ತಿಗಳಿದ್ದವು. ಮನುಷ್ಯನ ಎಲ್ಲ ನೀಚತನಗಳನ್ನು ಧ್ವಂಸಮಾಡಬಹುದಾದವೆಲ್ಲ ಚೈತನ್ಯವೂ ಅಲ್ಲಿ ಅವರಲ್ಲಿ ಎಲ್ಲವೂ ಇತ್ತು. ಇದ್ದರೂ ಅವೆಲ್ಲ ಉಪಯೋಗಕ್ಕೆ ಬರುತ್ತಿರಲಿಲ್ಲ. ಯಾವುದಕ್ಕೆ ದುಃಖಿಸಬೇಕೋ ಅದಕ್ಕೆ ನಗುತ್ತಿದ್ದರು, ಯಾವುದಕ್ಕೆ ನಗಬೇಕೋ ಅದಕ್ಕೆ ವ್ಯಗ್ರರಾಗುತ್ತಿದ್ದರು. ಮನುಷ್ಯ ತನ್ನ ದುಃಖಕ್ಕೆ ಸೋಲಿಗೆ ಕಾರಣ ಕಂಡುಕೊಳ್ಳದೇ ಹೋದಾಗ ಏನೆಲ್ಲ ಆಗಬಹುದೋ ಅಂತಹದೆಲ್ಲ ಸರಾಗವಾಗಿ ಊರಲ್ಲಿ ಜರುಗುತ್ತಿತ್ತು.”
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ