ಗುರುವಾರ, ಮಾರ್ಚ್ 5, 2015

ಡಾ.ವಸು ಮಳಲಿ ಅವರ`ಕಳ್ಳು-ಬಳ್ಳಿ' ಪ್ರಜಾವಾಣಿ ಅಂಕಣ ಬರಹಗಳು-6

ಸೌಜನ್ಯ: ಪ್ರಜಾವಾಣಿ

ಕನ್ನಡಿಗರಿಗೆ ಬೇಡವಾದನೇ ಬುದ್ಧ?
Tue, 10/15/2013

ಬುದ್ಧ ಕನ್ನಡ ನಾಡಿಗೆ ಬಂದು ಹೋದ ದಾಖಲೆಗಳು ಈವರೆಗೆ ದೊರೆತಿಲ್ಲ. ಬುದ್ಧನ ಎಲ್ಲೆಯರಿಯದ ಸುತ್ತಾಟದಲ್ಲಿ ದಕ್ಷಿಣ ದಲ್ಲಿ ಎಷ್ಟು ದೂರ ಬಂದಿರಬಹುದೆಂದು ಊಹಿ ಸಲು ಸರಿಯಾದ ಪುರಾವೆಗಳಿಲ್ಲ. ಆದರೆ ಬೌದ್ಧ ಚಿಂತನೆ ಹರಿದು ಬಂದ ಮಾರ್ಗ ಮಾತ್ರ ಸ್ಪಷ್ಟವಾದುದು.
ಕನ್ನಡ ನಾಡನ್ನು ಆಳಿರಬಹುದಾದ ಮೊದಲ ರಾಜರು ಯಾರು? ಕನ್ನಡ ಭಾಷೆ ಎಷ್ಟು ಪ್ರಾಚೀನವಾದುದು? ಕನ್ನಡ ಲಿಪಿ ಯಾವಾಗ ಆರಂಭವಾಯಿತು? ಕನ್ನಡ ನಾಡು ನುಡಿಯ ಬಗೆಗೆ ತಿಳಿಯ ಬಯಸುವವರಿಗೆಲ್ಲ ಇಂತಹ ಹತ್ತಾರು ಪ್ರಶ್ನೆಗಳು ಬಂದು ಹೋಗುತ್ತವೆ. ಇದಕ್ಕೆಲ್ಲಾ ಉತ್ತರಿಸಬಲ್ಲ ಜಾಗ ಸನ್ನತಿ.
ಗುಲ್ಬರ್ಗದಿಂದ ೩೨ ಕಿ.ಮೀ. ದೂರದಲ್ಲಿ ಭೀಮಾ ನದಿ ತೀರದಲ್ಲಿ ಇರುವ ಹಳ್ಳಿ ಸನ್ನತಿ. ಅದರ ಸಮೀಪದಲ್ಲಿ ಭೀಮಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ.  ನದೀ ತಟದಲ್ಲೇ ಕಾಣುವುದು ಚಂದ್ರಲಾಂಬಾ ಪರಮೇಶ್ವರಿ ದೇವ ಸ್ಥಾನ. ದೇವಾಲಯದ ಸಮೀಪದಲ್ಲಿ ಮಾರುವ, ದೇವಾಲಯದ ಪುಸ್ತಕಗಳು ಚಂದ್ರಭಾಗಾ ದೇವಿಯ ಕಥೆಯನ್ನು ಹೇಳುತ್ತವೆ.
ನದಿಯ ಆಚೆ ದಡಕ್ಕೆ ಅನತಿ ದೂರದಲ್ಲಿ ಕಾಣುವುದು ಬಿಳಿಯ ಗೋಳಾಕಾರದ ಸ್ತೂಪವನ್ನು ಹೋಲುವ ಕಟ್ಟಡ. ಅದು ಪ್ರಾಕ್ತನ ವಸ್ತುಗಳ ಪ್ರದರ್ಶನ ಕ್ಕೆಂದು ಸಿದ್ಧವಾಗುತ್ತಿರುವ ಮ್ಯೂಸಿಯಂ ಕಟ್ಟಡ. ದಾಟಿ ಮುಂದೆ ಹೋದರೆ ಅದು ಕಾನಗಾನಹಳ್ಳಿ. ಅಲ್ಲಿ ಕಾಣುವುದು ಕಳಚಿಬಿದ್ದ ಪುರಾತನವಾದ ಮಹಾ ಸ್ತೂಪದ ಅವಶೇಷ.  ಯಾರ ಕಾಲದ್ದು. ಇನ್ನೂ ಯಾಕೆ ಹೀಗೆ ಕಳಚಿ ಬಿದ್ದಿದೆ?
ಇದರ ಸುತ್ತ ಸಂಶೋಧನೆಗಾಗಿ ಬೇಲಿ ಹಾಕಿ ಹದಿನೈದು ವರ್ಷಗಳೇ ಕಳೆದು ಹೋಗಿವೆ. ಅಮೂಲ್ಯವಾದ ಆ ಶಿಲ್ಪಗಳನ್ನು ಕಾಯಲು ನಿಯೋಜನೆಗೊಂಡಿರುವ ಸೆಕ್ಯುರಿಟಿ ಗಾರ್ಡ್‌ ಗಳು, ಸಾರ್ವಜನಿಕರನ್ನು ಸುಲಭವಾಗಿ ಒಳಕ್ಕೆ ಬಿಡುವುದಿಲ್ಲ. ವಿಶೇಷ ಅನುಮತಿಯೊಂದಿಗೆ ಹೋದರೆ ಮಾತ್ರ ಫೋಟೊ ತೆಗೆದುಕೊಳ್ಳಬ ಹುದು. ಈ ಎಲ್ಲಾ ಪ್ರಶ್ನೆ ಉತ್ತರಗಳ ನಂತರ ‘ನಾವು ಯಾವಾಗ ನಮ್ಮ ಊರಿನ ಚರಿತ್ರೆ ತಿಳಿಯಲು ಸಾಧ್ಯ’ ಎಂಬುದು ಸ್ಥಳೀಯ ಯುವಕರ ಪ್ರಶ್ನೆ.
ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ಈ ಕನ್ನಡನಾಡು ಮೌರ್ಯರ ಆಳ್ವಿಕೆಗೆ ಒಳಪಟ್ಟಿತ್ತು. ದೇವನಾಂಪ್ರಿಯ ಪ್ರಿಯ ದರ್ಶಿ ಅಶೋಕನ ರಾಜ್ಯದ ದಕ್ಷಿಣದ ರಾಜಧಾನಿ ಸುವರ್ಣಗಿರಿಯಾಗಿತ್ತೆಂದು ಅವನ ಶಾಸನಗಳು ಹೇಳುತ್ತವೆ. ಅಲ್ಲಿಗೆ ಧರ್ಮ ಮಹಾಮಾತ್ರರನ್ನು ನೇಮಕ ಮಾಡಿದ್ದನು. ಆ ಸುವರ್ಣಗಿರಿಯೇ ಸನ್ನತಿ ಇರಬಹುದೆಂದು ಹಲವು ವಿದ್ವಾಂಸರ ವಾದ.
ಆ ವಾದಕ್ಕಿಳಿಯುವುದು ನನ್ನ ಉದ್ದೇಶವಲ್ಲ. ಅಶೋಕ, ಶಾಸನಗಳನ್ನು ಕೆತ್ತಿಸಿದ್ದರೂ ಅತ್ಯಂತ ಹೆಚ್ಚಿನ ಸಂಖ್ಯೆಯ ಶಾಸನಗಳು ಲಭಿಸಿರುವುದು ಕನ್ನಡ ನಾಡಿನಲ್ಲಿ ಎನ್ನುವುದು ಕುತೂಹಲದ ಸಂಗತಿ. ಈವರೆಗೆ ಸಿಕ್ಕ ಹದಿನಾರು ಶಾಸನಗಳು ಬಹುಶಃ ಅವನ ರಾಜ್ಯದ ಗಡಿಯನ್ನು ಸೂಚಿಸು ತ್ತವೆ. ಅವು ಅವನ ರಾಜ್ಯದ ವ್ಯಾಪಾರದ ಮಾರ್ಗಗಳೂ ಆಗಿರಬೇಕು. ಪ್ರಾಣಿ ದಯೆ, ಹಿರಿಯರಿಗೆ ಗೌರವ, ಅಹಿಂಸೆಯನ್ನು ಪಾಲಿಸು ವಂತೆ ಹೇಳುವ ಈ ಶಾಸನಗಳು ಅಂತರಂಗದಲ್ಲಿ ಬುದ್ಧ ನೀತಿಯನ್ನು ಸಾರುತ್ತವೆ. ಉತ್ತರದ ಪಾಟಲೀಪುತ್ರದಿಂದ ಆಳುವ (ಇಂದಿನ ಬಿಹಾರ) ಮೌರ್ಯಾಶೋಕ ಕನ್ನಡ ನಾಡಿನ ಬಗೆಗೆ ಇಷ್ಟೊಂದು ಕಾಳಜಿಯನ್ನು ತೋರಿರಬೇಕಾದರೆ, ಇಲ್ಲಿನ ನೈಸರ್ಗಿಕ ಸಂಪತ್ತು ಪ್ರಮುಖ ಆಕರ್ಷಣೆಯಾಗಿದ್ದಿರಬೇಕು.
ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಕರಿ ಮೆಣಸು ಆ ಕಾಲಕ್ಕೇ ಗ್ರೀಕ್ ದೇಶಕ್ಕೆ ರಫ್ತಾಗುತ್ತಿತ್ತು. ಆದ್ದರಿಂದಲೇ ಅವನ್ನು ‘ಯವನ ಪ್ರಿಯ’ ಎಂದು ಕರೆಯಲಾಗುತ್ತಿತ್ತು. ಅಲೆಕ್ಸಾಂಡರ್‌ನ ದಾಳಿ ನಂತರ ಭಾರತ ಮತ್ತು ಗ್ರೀಸ್‌ನ ನಡುವೆ ಉತ್ತಮ ಸಂಪರ್ಕ ಏರ್ಪಡಲು ಸಾಧ್ಯವಾಗಿತ್ತು.
ಇಲ್ಲಿ ಸಿಗುವ ಚಿನ್ನವೂ ಉತ್ತರದ ಜನರನ್ನು ದಕ್ಷಿಣಕ್ಕೆ ಕರೆ ತಂದಿರಬೇಕು. ಪಶ್ಚಿಮ ಘಟ್ಟದಲ್ಲಿ ದೊರೆಯುವ ಶ್ರೀಗಂಧ, ದಂತ... ವ್ಯಾಪಾರಗಾರ ರನ್ನು ಹಿಮಾಲಯದ ತಪ್ಪಲಿನಿಂದ ಕನ್ನಡ ನಾಡಿಗೆ ಸೆಳೆದಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಹೀಗೆ ಬಂದ ವ್ಯಾಪಾರಗಾರರು ತಮ್ಮ ಜೊತೆ ಬೌದ್ಧ ಧರ್ಮವನ್ನು ಕನ್ನಡ ನಾಡಿನಲ್ಲಿ ಪರಿಚ ಯಿಸಿದರು. ಮತ್ತೊಂದು ಕಡೆಯಿಂದ ರಾಜಾಶ್ರಯದಲ್ಲಿ ಅಧಿಕೃತವಾಗಿ ಬೌದ್ಧ ಧರ್ಮ ಈ ನಾಡನ್ನು ಪ್ರವೇಶಿಸಿತು.
ಭೀಮಾ ನದಿ ತೀರದಲ್ಲಿರುವುದು ಅಶೋಕನ ಕಾಲದ ಬೌದ್ಧ ಸ್ತೂಪ. ಅದರ ಮೇಲ್ ಹೊದಿ ಕೆಯ ಶಿಲಾ ಫಲಕಗಳ ಮೇಲೆ ಬುದ್ಧನ ಬದು ಕನ್ನು ಕುರಿತಾದ ಶಿಲ್ಪಗಳು, ಸುಂದರವಾದ ಕಪ್ಪು ಶಿಲೆಯ ಕೆತ್ತನೆ ಇದೆ. ಈ ಸ್ತೂಪದ ನಿರ್ಮಾಣ ಅಶೋಕನ ಕಾಲದಲ್ಲಿ ಆರಂಭಗೊಂಡು ಶಾತವಾಹನರ ಕಾಲಕ್ಕೂ ಮುಂದುವರೆದಿರುವು ದರಿಂದ  ಹೀನಯಾನ ಹಾಗೂ ಮಹಾಯಾನ ಬೌದ್ಧ ಪಂಥಗಳೆರಡರ ಲಕ್ಷಣಗಳೂ ಇಲ್ಲಿ ಕಾಣು ತ್ತದೆ.
ಈ ಸ್ತೂಪದ ವಿಶೇಷವೆಂದರೆ ಅಶೋಕನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಹೀನಯಾನ ಬೌದ್ಧ ಪಂಥದಲ್ಲಿ ಬುದ್ಧನನ್ನು ಸಂಕೇತಗಳ ರೂಪದಲ್ಲಿ ಮಾತ್ರ ಪೂಜಿಸುತ್ತಿದ್ದರು. ಛತ್ರಿ, ಪಾದಗಳು, ತೆರೆದ ಸಿಂಹಾಸನ, ಬೋಧಿವೃಕ್ಷ ಇತ್ಯಾದಿ. ಮಹಾಯಾನ  ಬೌದ್ಧಪಂಥ ಬುದ್ಧನನ್ನೇ ದೇವರಾಗಿ ಸ್ವೀಕರಿಸಿ ಶಿಲ್ಪವಾಗಿಸಿತು.
ಅತ್ಯಂತ ಸುಂದರವಾದ ಬುದ್ಧನ ಶಿಲ್ಪಗಳು ಈ ಕಾಲದಲ್ಲಿ ಮೂಡಿ ಬಂದವು. ಅಮರಾವತಿಯ ಸ್ತೂಪವನ್ನು ಹೋಲುವ ಈ ಮಹಾಸ್ತೂಪದಲ್ಲೂ ಸುಂದರ ಬುದ್ಧನ ಶಿಲ್ಪಗಳಿವೆ. ಶಿಲ್ಪಗಳ ಮೇಲೆ ಅದರ ಹೆಸರು ಉಲ್ಲೇಖಗೊಂಡಿರುವುದರಿಂದ ಆ ಒಟ್ಟು ಶಾಸನಗಳ ಸಂಖ್ಯೆ ಎಂಬತ್ತಕ್ಕೂ ಹೆಚ್ಚೇ ಆಗಿರು ತ್ತದೆ. ಇಲ್ಲಿರುವ ಆಳೆತ್ತರದ ಅಶೋಕ ಮತ್ತು ಅವನ ರಾಣಿಯ ಶಿಲ್ಪ ಈ ಸ್ತೂಪಕ್ಕೆ ಚಾರಿತ್ರಿಕ ಮಹತ್ವವನ್ನು ತಂದು ಕೊಟ್ಟಿದೆ. ಅದರ ಮೇಲ್ಭಾ ಗದಲ್ಲಿ ‘ರಾಜ ಅಸೋಕೊ’ ಎಂದು ನಮೂದಿಸಿದೆ.
ಅಶೋಕನ ‘ದಮ್ಮ’ ಪ್ರಚಾರಕ್ಕಾಗಿ ಕೆತ್ತಿದ ಶಾಸನಗಳು ಈ ನಾಡಿಗೆ ಲಿಪಿಯನ್ನು ಪರಿಚಯಿಸಿ ದವು. ಕನ್ನಡದ ಲಿಪಿಯ ಮೂಲ ಅಶೋಕನ ‘ಬ್ರಾಹ್ಮಿ’ ಲಿಪಿಯೇ ಆಗಿರುವುದರಿಂದ ಕನ್ನಡದ ಲಿಪಿಯ ಪ್ರಾಚೀನತೆಯು ಎರಡು ಸಾವಿರದ ಮುನ್ನೂರು ವರ್ಷಗಳಷ್ಟು ಹಿಂದಕ್ಕೆ ಹೋಗು ತ್ತದೆ. ಕಾನಗಾನಹಳ್ಳಿಯ ಸುತ್ತಮುತ್ತಲೂ ನಡೆಯ ಬೇಕಾಗಿರುವ ಪ್ರಾಕ್ತನ ಸಂಶೋಧನೆ ಈ ಎಲ್ಲದರ ಮೇಲೆ ಬೆಳಕು ಚೆಲ್ಲಬಲ್ಲದು.
ಸುಮಾರು ಕ್ರಿಸ್ತಪೂರ್ವ ಮೂರನೆಯ ಶತ ಮಾನದಲ್ಲಿ ಅಧಿಕೃತವಾಗಿ ಪ್ರವೇಶಿಸಿದ ಬೌದ್ಧ ಧರ್ಮ ಹತ್ತು ಶತಮಾನಗಳ ಕಾಲ ಹರಡಿದ್ದ ದಟ್ಟ ಪುರಾವೆಗಳು ಸಿಗುತ್ತವೆ. ಅಂಕೋಲ, ಮೂಡುಬಿದರೆ, ಧರ್ಮಸ್ಥಳ, ಉಡುಪಿ, ಬನ ವಾಸಿ, ಜೋಗ, ಬಳ್ಳಿಗಾವೆ ಇವೆಲ್ಲಾ ಪ್ರಮುಖ ಬೌದ್ಧ ಕೇಂದ್ರಗಳಾಗಿದ್ದವು. ಪಶ್ಚಿಮ ಘಟ್ಟದಿಂದ ನಡೆಯುತ್ತಿದ್ದ ವ್ಯಾಪಾರವು ಈ ಕೇಂದ್ರಗಳ ಬೆಳವಣಿಗೆಗೆ ಕಾರಣವಾಗಿತ್ತು.
ನಿಧಾನವಾಗಿ ಈ ಕೇಂದ್ರಗಳು ಜೈನರಿಂದಲೂ ಆ ನಂತರ ಶೈವರ ಆಕ್ರಮಣಕ್ಕೂ ಒಳಗಾಗಿವೆ. ಅದನ್ನು ಸೂಚಿಸುವ ಶಾಸನಾಧಾರಗಳೂ, ಪ್ರಾಕ್ತನ ಆಧಾರಗಳೂ ನಮಗಿಂದು ದೊರೆಯು ತ್ತವೆ. ಸಾವಿರ ವರ್ಷಗಳ ಹಿಂದೆ ಶೈವ ಪಂಥ ಹರಡಿದಾಗ ಬೌದ್ಧರು ಕ್ಷೀಣಿಸತೊಡಗಿದರು.
ಬೌದ್ಧ ಧರ್ಮದ ಹಿನ್ನೆಲೆಯಲ್ಲಿ ಹೆಚ್ಚು ಆರಾಧನೆಗೆ ಒಳಗಾಗಿದ್ದ ಭಗವತಿ, ರಾಜ ರಾಜೇಶ್ವರಿ ದೇವತೆಗಳೂ ನಿಧಾನವಾಗಿ ವೈದಿಕ ಹಿಡಿತಕ್ಕೆ ಒಳಪಟ್ಟಿವೆ. ಅಂತಹ ಒಂದು ದೇವಾ ಲಯ ಸನ್ನತಿಯಲ್ಲಿರುವ ಚಂದ್ರಲಾಂಬಾ ಪರಮೇಶ್ವರಿ. ದೇವಾಲಯದ ಆವರಣದಲ್ಲೇ ಕಾಳಿಗುಡಿಯೊಂದಿದೆ. ಅಶೋಕನ ಶಾಸನವನ್ನೇ ಪಾಣಿಪೀಠವಾಗಿ ಅದರ ಮೇಲೆ ದೇವಿಯನ್ನು ಸ್ಥಾಪಿಸಲಾಗಿದೆ. ಇಂತಹ ಸಾಹಸ ಸುಮಾರು ಸಾವಿರ ವರ್ಷದ ಹಿಂದೆಯೇ ನಡೆದಿದೆ.
ಕರ್ನಾಟಕದಲ್ಲಿ ಮೊದಲಿಗೆ ಪಟ್ಟಣಗಳು ಬೆಳವಣಿಗೆಯಾಗಿದ್ದರೆ, ಅದರ ಹೆಗ್ಗಳಿಕೆಯೂ ಈ ಕಾಲಕ್ಕೆ ಸೇರುತ್ತದೆ. ಇಟ್ಟಿಗೆಯಲ್ಲಿ ಕಟ್ಟಿದ ಮನೆ ಗಳು, ಅಂತಸ್ತಿನ ಕಟ್ಟಡ, ಕಣಜಗಳು ಈ ಕೇಂದ್ರಗಳಲ್ಲಿ ದೊರೆಯುತ್ತವೆ. ಅಶೋಕನ ಆಡಳಿತಕ್ಕೆ ಒಳಪಟ್ಟ ಜಾಗಗಳಲ್ಲೇ ಮುಂದು ವರೆದ ಶಾತವಾಹನರು ರೋಮ್‌ ಸಾಮ್ರಾಜ್ಯ ದೊಂದಿಗೆ ವ್ಯಾಪಾರದ ಸಂಪರ್ಕವನ್ನು ಹೊಂದಿ ದ್ದರು. ಹಾಗಾಗಿ ರೋಮನ್ನರ ಮಡಕೆಯ ಚೂರುಗಳು, ನಾಣ್ಯಗಳು ಯಥೇಚ್ಛವಾಗಿ ದೊರೆ ಯುತ್ತವೆ. ಕನ್ನಡ ನಾಡಿಗೆ ನಾಗರಿಕತೆಯನ್ನು ತಂದ ಬೌದ್ಧಧರ್ಮ ತನ್ನ ಅಸ್ತಿತ್ವ ಕಳೆದು ಕೊಂಡುದು ಮಾತ್ರ ಆಶ್ಚರ್ಯವನ್ನುಂಟು ಮಾಡುತ್ತದೆ.
ಕನ್ನಡದ ಆರಂಭದ ಕೃತಿಗಳು ಬೌದ್ಧ ಹಿನ್ನೆಲೆ ಯಲ್ಲೇ ಬಂದಿರಬೇಕು. ಅಂತಹ ಒಂದು ಕೃತಿಯೂ ಉಳಿಯದಂತೆ ನಾಶವಾಗಿರುವುದನ್ನು ಗಮನಿಸಿದರೆ, ವ್ಯವಸ್ಥಿತವಾಗಿಯೇ ಅದನ್ನು ಕೊನೆಗೊಳಿಸಿದಂತೆ ಕಾಣುತ್ತದೆ. ಶಾತವಾಹನರ ನಂತರ ಬಂದ ರಾಜಮನೆತನಗಳು ಬೌದ್ಧರನ್ನು ಉದಾರವಾಗಿ ಕಂಡರೂ, ಜೈನ ಹಾಗೂ ವೈದಿಕ ಗುರುಗಳ ಮಾರ್ಗದರ್ಶನ ಪಡೆಯತೊಡಗಿ ದರು. ಮತ್ತೆ ಬೌದ್ಧ ಧರ್ಮದ ಚಿಂತನೆಗೆ ಆಸ್ಪದವೇ ಸಿಕ್ಕಿದಂತೆ ಕಾಣುವುದಿಲ್ಲ.
ಏಳನೆಯ ಶತಮಾನದಲ್ಲೂ ಬೌದ್ಧರು ವ್ಯಾಪಾರದಲ್ಲಿ ಒಂದಷ್ಟು ಪ್ರಾಬಲ್ಯವನ್ನು ಹೊಂದಿದ್ದರು. ಐಯ್ಯಾವೊಳೆ ಐನೂರ್ವರಲ್ಲಿ (ವ್ಯಾಪಾರಿ ಶ್ರೇಣಿ) ಶೈವ ಬ್ರಾಹ್ಮಣರು, ಜೈನರು, ಬಣಜಿಗರು ಅಲ್ಲದೇ ಬೌದ್ಧರು ಇದ್ದರು.
ಜನಪದರಲ್ಲಿ ತತ್ವ ಸಿದ್ಧಾಂತಗಳ ಹಂತದ ಬುದ್ಧನ ಮಾರ್ಗಕ್ಕಿಂತ ಆಚರಣೆಯ ಹಂತದ ವೈದಿಕ ಮಾರ್ಗ ಹೆಚ್ಚೆಚ್ಚು ವಿಸ್ತರಿಸುತ್ತಾ ಹೋಯಿತು. ಜನಪದ ದೈವಗಳು ಬಹು ಸುಲಭ ವಾಗಿ ಶೈವೀಕರಣಗೊಂಡವು. ಅವರು ಪೂಜಿಸುತ್ತಿದ್ದ ಕಲ್ಲುಗಳನ್ನು ಉದ್ಭವ ಲಿಂಗಗಳೆಂದು ಕರೆದರು.
ಇಂದು ಚಾರಿತ್ರಿಕ ಮಹತ್ವವುಳ್ಳ ಬೌದ್ಧ ಕೇಂದ್ರಗಳು ಸಂಶೋಧನೆಯ ದೃಷ್ಟಿಯಿಂದಲೂ ಹಿಂದೆ ಬಿದ್ದಿರುವುದನ್ನು ಗಮನಿಸಿದರೆ ಬುದ್ಧ, ಸಂಶೋಧಕರಿಗೂ ಬೇಡವಾಗಿದ್ದಾನೆಯೇ ಎಂದು ಕೇಳಿಕೊಳ್ಳಬೇಕಾಗಿದೆ. ಸನ್ನತಿ ಅತ್ಯಂತ ಪ್ರಾಚೀನ ಬೌದ್ಧ ಸ್ತೂಪವಿದ್ದ ಸ್ಥಳವೆಂದು ಚರಿತ್ರಾಕಾರರ ಗಮನಕ್ಕೆ ಬಂದು ಮೂರು ದಶಕಗಳೇ ಕಳೆದು ಹೋಗಿವೆ. ‘ಆರ್ಕಿಯಲಾ ಜಿಕಲ್ ಸರ್ವೆ ಆಫ್ ಇಂಡಿಯಾ’, ಸಂಶೋ ಧನೆಯ ಜವಾಬ್ದಾರಿಯನ್ನು ಹೊತ್ತು ದಶಕವೇ ಕಳೆದಿದೆ.
ಅದರ ವರದಿಗಾಗಿ ಕಾಯಲೇಬೇಕಲ್ಲ. ಸನ್ನತಿ ಅಭಿವೃದ್ಧಿ ಪ್ರಾಧಿಕಾರವೂ ಸ್ಥಾಪನೆ ಯಾಗಿದೆ. ಆ ಪ್ರದೇಶದ ಸುತ್ತ ಮುತ್ತ ಬೌದ್ಧ ಕೇಂದ್ರಗಳನ್ನು ಉಳಿಸುವ ಜವಾಬ್ದಾರಿ ಅದ ರದ್ದು. ಆ ಕಾರ್ಯವನ್ನು ನಿಭಾಯಿಸಲು ಎಂದು ಮುಂದಾಗುವುದೋ. - ಎಲ್ಲಕ್ಕೂ ಸರ್ಕಾರದ ಒತ್ತಾಸೆ ಬೇಕಲ್ಲವೇ?
ದೊಡ್ಡಬಳ್ಳಾಪುರ ಸಮೀಪದ ರಾಜಘಟ್ಟ ಊರಿನ ನೆಲದಡಿಯಲ್ಲಿ ಸೇರಿ ಹೋದ ಕಟ್ಟಡದ ಮೇಲೆ ರೈತರು ಉಳುಮೆ ಮಾಡುತ್ತಿದ್ದಾರೆ. ಇದು ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಚಾರಿತ್ರಿಕ ನಿವೇಶನ. ಚಾರಿತ್ರಿಕ ಮಹತ್ವಕ್ಕೆ ಧಾರ್ಮಿಕ ಉದ್ದೇಶವನ್ನು ಬೆರೆಸಿ ಗೋಜಲಾಗಿಸುವ ನಮ್ಮ ನಡೆಯಿಂದಾಗಿ ಈ ಬೌದ್ಧ ಕೇಂದ್ರಗಳು ಇನ್ನೂ ಅನಾಥವಾಗಿವೆ. ಕಡೆಗೆ ಅಶೋಕನ ಶಾಸನಗಳು ಜನರ ಗಮನ ಸೆಳೆಯದೇ ಹೋಗುತ್ತವೆ. ಸನ್ನತಿಯ ಕೇಂದ್ರ ಗಮನಕ್ಕೆ ಬಂದಾಗಿನಿಂದ ಈವರೆಗೆ ಅಲ್ಲಿನ ಶಿಲ್ಪಗಳು ಹಲವು ಕಡೆ ಹಂಚಿ ಹೋಗಿವೆ.
ಅಲ್ಲಿ ಸಿಕ್ಕ ಮಡಕೆ ಚೂರುಗಳು, ಆಭರಣ ಗಳು, ನಾಣ್ಯಗಳು ಹಾಗೂ ಶಿಲ್ಪಗಳನ್ನು ಮೈಸೂರು, ಬೆಂಗಳೂರು, ಧಾರವಾಡ, ಹೈದ ರಾಬಾದ್ ಹೀಗೆ ಹಲವಾರು ಮ್ಯೂಸಿಯಂಗಳಿಗೆ  ತೆಗೆದುಕೊಂಡು ಹೋಗಲಾಗಿದೆ. ಅದರ ಮೂಲ ಜಾಗಕ್ಕೆ ವಸ್ತುಗಳು ಇಲ್ಲದಂತಾಗುತ್ತವೆ. ಶಿಲ್ಪ ಗಳು ಅಪಹರಣಗೊಂಡಿದ್ದರೆ, ಅದೆಲ್ಲಾ ಭಾರತ ಚರಿತ್ರೆಯ ದುರ್ದೆಸೆಯೆಂದು ಕೈ ಚೆಲ್ಲುತ್ತೇವೆ.
ಗುಲ್ಬರ್ಗದ ಹಿನ್ನೆಲೆಯಿಂದ ಬಂದ ರಾಜ ಕೀಯ ಧುರೀಣರು, ಪುರಾತನವಾದ ಚಾರಿತ್ರಿಕ ಮಹತ್ವವುಳ್ಳ ಬೌದ್ಧ ನಿವೇಶನಕ್ಕೆ ಮಹತ್ವ ನೀಡುವ ಬದಲು ಹೊಸದಾದ, ಭವ್ಯವಾದ ಸ್ತೂಪವನ್ನು ಗುಲ್ಬರ್ಗದಲ್ಲಿ ಕಟ್ಟಿ ಆ ಮೂಲಕ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಈ ವಿಚಾರದಲ್ಲಿ ತಲೆ ಹಾಕಿದರೆ ಕಾಳಿಗುಡಿ ಅಥವಾ ಚಂದ್ರಲಾಂಬಾ ಪರಮೇಶ್ವರಿ ದೇವಾಲಯಗಳು ಎಲ್ಲಿ ವಿವಾದವನ್ನು ಹುಟ್ಟು ಹಾಕುತ್ತವೋ ಎಂಬ ಕಾರಣಕ್ಕೆ ಎಚ್ಚರಿಕೆಯನ್ನು ವಹಿಸುತ್ತಾರೆ. ಅತಿಯೆನಿಸಿದರೂ ಅದು ವಾಸ್ತವ. 
ಇಂದು ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿ ನವಬೌದ್ಧರಾಗಿದ್ದಾರೆ. ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದಾಗ ಮಹಾರಾಷ್ಟ್ರದ ಹಲವು ಬೌದ್ಧ ಕೇಂದ್ರಗಳ ಮೇಲೆ ಆಕ್ರಮಣಗಳೂ ನಡೆದವು. ಇಂತಹ ಹಲವು ನೆಪಗಳಿಂದಾಗಿ ಬೌದ್ಧ ಕೇಂದ್ರಗಳ ರಕ್ಷ ಣೆಯ ವಿಷಯದಲ್ಲಿ ದಲಿತ ನಾಯಕರು ಸೌಜನ್ಯ ದಿಂದ ಹಿಂದಕ್ಕೆ ಸರಿಯುತ್ತಾರೆ.
ಪ್ರವಾಸೋದ್ಯ ಮದ ಹಿನ್ನೆಲೆಯಿಂದಲೂ ಇವುಗಳ ಕಡೆ ಗಮನ ಹರಿಸಿಲ್ಲ. ಈ ನಾಡಿನ ಮೊದಲ ಶಾಸನಗಳು, ಮೊದಲ ನಗರ ಕೇಂದ್ರಗಳು, ಮೊದಲ ವ್ಯಾಪಾರ ಕೇಂದ್ರಗಳು ಅಷ್ಟೇ ಅಲ್ಲ ಮೊದಲ ರಾಜಕೀಯ ಕೇಂದ್ರಗಳೆಂಬ ಕಾರಣಕ್ಕಾಗಿಯೂ ಇವುಗಳತ್ತ ಗಮನ ಹರಿಸಬೇಕಾಗಿದೆ. ಭೌತಿಕ ವಾದ ಈ ಪುರಾವೆಗಳನ್ನು ಗೌರವಿಸುವುದು ಒಂದೆಡೆಯಾದರೆ ಅದರ ಜ್ಞಾನ ಪರಂಪರೆ ಯನ್ನು ಗಮನಿಸುವುದು ಇನ್ನೂ ಆಳವಾದ ಅಧ್ಯಯನವನ್ನು ಬೇಡುತ್ತದೆ.
ಕನ್ನಡನಾಡಿನಲ್ಲಿ ಹರಿಯುವ ಹಲವು ವಿಚಾರ ಧಾರೆಗಳಲ್ಲಿ ಬೌದ್ಧ ವಿಚಾರಧಾರೆ ಸೇರಿ ಹೋಗಿದೆ. ಸಿದ್ಧ, ಆರೂಢ, ಅವಧೂತ, ನಾಥ ಪರಂಪರೆಗಳಲ್ಲಿ ಬೌದ್ಧ ಪರಂಪರೆ ಅಂತರ್ಗತ ವಾಗಿ ಹರಿಯುತ್ತದೆ. ಮೇಲ್ನೋಟಕ್ಕೆ ಕನ್ನಡಿಗರಿಗೆ ಬುದ್ಧ ಬೇಡವಾದಂತೆ ಕಂಡರೂ ಕನ್ನಡದ ವಿಚಾರವಂತಿಕೆಗೆ ಅಡಿಪಾಯ ಹಾಕಿದ್ದು ಬುದ್ಧನ ಚಿಂತನೆಯಲ್ಲವೇ?


ಅಹಿಂಸಾ ನೆಲೆಯ ಹೋರಾಟದ ಮಾರ್ಗ
Tue, 10/01/2013

ಗಾಂಧೀಜಿ ಅವರನ್ನು ಅಹಿಂಸಾತ್ಮಕ ಹೋರಾಟಕ್ಕೆ ರೂಪಕವಾಗಿ ಇಂದು ಇಡೀ ಜಗತ್ತೇ  ನೋಡುತ್ತಿದೆ. ವಸಾಹತು ವಿರೋಧಿ ಹೋರಾಟಕ್ಕೆ ಖಚಿತವಾದ ಅಹಿಂಸಾತ್ಮಕ ಸ್ವರೂಪವನ್ನು ತಂದುಕೊಟ್ಟವರು ಅವರು. ‘ಅಹಿಂಸಾತ್ಮಕ’  ಎಂದಾಗ ಅದರ ಅರ್ಥ ಮೊದಲನೆಯದಾಗಿ ನಿರಾಯುಧರಾಗಿ ನಡೆಸುವ ಪ್ರತಿಭಟನೆ. ನೇರವಾದ ಯದ್ಧಕ್ಕಿಳಿ ಯದೇ ಸತ್ಯಕ್ಕಾಗಿ, ನ್ಯಾಯಕ್ಕಾಗಿ ಪಟ್ಟುಹಿಡಿಯು ವುದು. ಕಾಯ್ದೆ ಭಂಗ, ಅಸಹಕಾರ ಮುಂತಾದ ಪ್ರತಿರೋಧದ ಬಗೆಗಳು-  ಸತ್ಯಾಗ್ರಹವೆಂದು ಕರೆಸಿಕೊಳ್ಳುತ್ತವೆ.
ಗಾಂಧೀಜಿ ಹೋರಾಟಕ್ಕೆ ಇಳಿಯುವ ಮೂರು ದಶಕಗಳಿಗೆ ಮುಂಚೆಯೇ, ಜನರ ಸಹಭಾಗಿತ್ವ ದಲ್ಲಿ ಭಾರತದಲ್ಲಿ ಹೋರಾಟ ನಡೆದಿತ್ತು. ೧೮೫೭ರ ನಂತರ ಶಸ್ತ್ರಸಜ್ಜಿತವಾದ ಹೋರಾಟ ಗಳು ಕಾಣುವುದಿಲ್ಲ.  ೧೯೦೫ ರಲ್ಲಿ ಬಂಗಾಳ ವಿಭಜನೆ ವಿರೋಧಿಸಿ ನಡೆದ ಚಳವಳಿಯಾಗಲೀ, ಹೋಂ ರೂಲ್ ಚಳವಳಿಯಾಗಲೀ ಸಂಯಮದ ಹೋರಾಟಗಳೇ ಆಗಿದ್ದವು.  ವಸಾಹತು ನೀತಿಯನ್ನು ಸಂವಿಧಾನದ ಚೌಕಟ್ಟಿನಲ್ಲೇ ಪ್ರಶ್ನಿಸುತ್ತಾ ಬಂದ ಗೋಖಲೆ, ದಾದಾಬಾಯ್ ನವರೋಜಿ ಅವರು ಆ ವೇಳೆಗಾಗಲೇ  ಇಂತಹದ್ದೊಂದು ಮಾರ್ಗವನ್ನು ಕಂಡುಕೊಂಡಿ ದ್ದರು.
ಸತ್ಯಾಗ್ರಹವನ್ನು ಸ್ಪಷ್ಟ ರಾಜಕೀಯ ಸಿದ್ಧಾಂತವಾಗಿಸಿದ ಹೆಗ್ಗಳಿಕೆ ಗಾಂಧೀಜಿಗೆ ಸಲ್ಲುತ್ತದೆ. ರಾಜಕೀಯ ಸೂತ್ರವಾಗಿ ‘ಅಹಿಂಸೆ’ ಪರಿಕಲ್ಪನೆಯನ್ನು ನೋಡುವುದಾದರೆ ಅದರ ಹಿಂದೆ ಭಾರತದ ಅತ್ಯಂತ ಪ್ರಾಚೀನ ಪ್ರಯೋಗಗಳನ್ನು ನೆನೆಯಬೇಕಾಗುತ್ತದೆ. ಜೈನ ಧರ್ಮ ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ‘ಅಹಿಂಸೊ ಪರಮೊ ಧರ್ಮಃ’ ಎಂದು ಪ್ರತಿಪಾದಿಸುತ್ತದೆ. ಆದರೆ ಅದನ್ನು ವ್ಯಕ್ತಿ ನೆಲೆಯಲ್ಲಿ ಆಚರಿಸುತ್ತದೆ. ಅದೊಂದು ರಾಜಕೀಯ ಚಿಂತನೆಯಾಗಿ ರೂಪುಗೊಳ್ಳಲಿಲ್ಲ.
ಹಾಗೆ ರಾಜಕೀಯ ಸಿದ್ಧಾಂತವಾಗಿ ರೂಪು ಪಡೆದದ್ದು  ಬುದ್ಧನಿಂದ. ಅಹಿಂಸೆ, ಯುದ್ಧ ವಿರೋಧಿ ನಿಲುವಾಗಿ ಅರ್ಥ ಪಡೆಯಿತು. ಬುದ್ಧನ ವಿಚಾರಗಳನ್ನು ರಾಜಕೀಯ ತತ್ವವಾಗಿ ಆಚರಣೆಗೆ ತರಲು ಸಾಧ್ಯವಾಗಿದ್ದು ಅಶೋಕನಿಗೆ. ಯುದ್ಧವನ್ನು ಕೈಬಿಟ್ಟು ಅಹಿಂಸೆಯ ಚಿಂತನೆ ಯನ್ನು ಹರಡುವುದನ್ನು ತನ್ನ ಗುರಿಯಾಗಿಸಿ ಕೊಂಡನು. ಜಗತ್ತಿನ ಚರಿತ್ರೆಯಲ್ಲೇ ಅಶೋಕ ಕಂಡುಕೊಂಡ ಮಾರ್ಗ ಅದ್ವಿತೀಯವಾದುದು. ’ಅಹಿಂಸೆ’ ಎಂಬ ಆದರ್ಶವೇ ಅಶೋಕನಿಗೆ ಶಸ್ತ್ರವಾಗಿ ಪರಿಣಮಿಸಿತು. ಅಹಿಂಸೆಯನ್ನು ರಾಜಕೀಯ ಚಿಂತನೆಯಾಗಿ ನೀಡಿದ ಬುದ್ಧ, ದೇವರ ಬಗೆಗೆ ಮಾತ್ರ ಮೌನ ವಹಿಸಿದ್ದನ್ನು ನಾವಿಂದು ಮತ್ತೆ ಪರಿಗಣಿಸಬೇಕಾಗಿದೆ.
ಆಧುನಿಕ ಕಾಲಘಟ್ಟದಲ್ಲಿ ಅಹಿಂಸೆ, ರಾಜಕೀಯ ಚಿಂತನೆಯಾಗಬೇಕಾದ ಅನಿವಾರ್ಯವನ್ನು ಕಂಡುಕೊಳ್ಳಲು ಸಾಧ್ಯ ವಾಗಿದ್ದು ಗಾಂಧೀಜಿಗೆ. ವಿಪರ್ಯಾಸವೆಂದರೆ ಬುದ್ಧನ ಚಿಂತನೆಗಳನ್ನು ಆದರ್ಶವಾಗಿ ಗಾಂಧೀಜಿ ಎತ್ತಿ ಹಿಡಿಯಲಿಲ್ಲ. ಬಡತನ, ಶೋಷಣೆ ಇವು ಅವರ ಹೋರಾಟದ ಬದ್ಧತೆಯಾಗಿದ್ದರೂ ಪರಿಹಾರದ ನೆಲೆಗಳು ಬೇರೆಯಾಗಿದ್ದವು. ರಾಜಕೀಯದಲ್ಲಿ ಅಧ್ಯಾತ್ಮವನ್ನು ಬಯಸಿದರು. ಹಾಗೆ ಬುದ್ಧನ ಕಡೆಗೆ ನೋಡಿದವರು ಅಂಬೇಡ್ಕರ್. ಬುದ್ಧನ ನಂತರ ದೇವರ ಬಗೆಗೆ ಮಾತನಾಡದೆ ವಾಸ್ತವ ನೆಲೆಗಟ್ಟಿನ ಮೇಲೆ ನೋವಿಗೆ ಉತ್ತರ ಹುಡುಕಿದವರು ಕಾರ್ಲ್‌ ಮಾರ್ಕ್ಸ್‌.
ಗಾಂಧಿ ಅವರನ್ನು  ಮಾರ್ಕ್ಸ್‌ಗೆ ಹೋಲಿಸು ವುದು ಇಲ್ಲಿ ನನ್ನ ಉದ್ದೇಶವಲ್ಲ. ಹಾಗೆ ಎರಡು ವ್ಯಕ್ತಿತ್ವಗಳನ್ನು ಹೋಲಿಸಿ ನೋಡುವುದರಲ್ಲಿ ನನಗೆ ಅರ್ಥವಿಲ್ಲವೆನಿಸುತ್ತದೆ ಅಥವಾ ಅಕಾಡೆಮಿಕ್ ಆದ ವ್ಯಾಯಾಮವೆನಿಸುತ್ತದೆ. ಬುದ್ಧ, ಮಾರ್ಕ್ಸ್‌, ಗಾಂಧಿ  ತಮಗೆ ತಾವೇ ಬದುಕನ್ನು ಪೂರೈಸಿದ ವ್ಯಕ್ತಿಗಳಲ್ಲ. ಇವರ ಬರಹ, ಭಾಷಣ ಕಡೆಗೆ ಬದುಕು ಸಮಾಜದ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡಿದ್ದರಿಂದ ಇವರ ವಿಚಾರಗಳನ್ನು ಹಲವು ಮಗ್ಗುಲುಗಳಿಂದ ಪ್ರಶ್ನಿಸಬೇಕಾಗಿದೆ.
ಹತ್ತೊಂಬತ್ತನೇ ಶತಮಾನದಲ್ಲಿ ಮಾರ್ಕ್ಸ್‌ ವಿಚಾರಗಳು ಪ್ರಕಟಗೊಂಡ ನಂತರ ಆ ವಿಚಾರಗಳ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಚಿಂತಕರಿಗೆ ಅಷ್ಟು ಸುಲಭದ ವಿಷಯ ವಾಗಿರಲಿಲ್ಲ. ಮಾರ್ಕ್ಸ್‌ನ ವಿರೋಧದ ನೆಲೆಯಲ್ಲಿ ನಿಂತು ವಾದಿಸಿದವರು ಇದ್ದಾರೆ. ಅದನ್ನು ಒಪ್ಪಿ ದೇಶದ ರಾಜಕೀಯ ವ್ಯವಸ್ಥೆಗಳನ್ನೇ ಬದಲಿಸಿದ ವರು ಇದ್ದಾರೆ. ಭಾರತದಲ್ಲಿ  ಮಾರ್ಕ್ಸ್‌ನ ವಿಚಾರಧಾರೆ ಅಧಿಕೃತವಾಗಿ ಪ್ರವೇಶಿಸಿದ ಹೊತ್ತಿಗೇ, ಗಾಂಧೀಜಿಯವರೂ ಭಾರತದ ರಾಜಕೀಯ ವೇದಿಕೆಯನ್ನು ಪ್ರವೇಶಿಸಿದರು. ಗಾಂಧೀಜಿಯವರು ಎಲ್ಲೂ ತಮ್ಮನ್ನು ತಾವು  ಮಾರ್ಕ್ಸ್‌ವಾದಿಯಾಗಿ ಗುರುತಿಸಿಕೊಳ್ಳಲಿಲ್ಲ. ಆದರೆ ಸಮಾಜವಾದವನ್ನು ನಂಬಿದವರೇ ಆಗಿದ್ದರು. ಸದಾ ಅವರ ಒಡನಾಟದಲ್ಲಿದ್ದ ನೆಹರೂ ಆರಂಭದ ದಿನಗಳಲ್ಲಿ ಮಾರ್ಕ್ಸ್‌ವಾದ ವನ್ನು ಬಲವಾಗಿ ನಂಬಿದ್ದರು.
ಭಾರತದ ಮಾರ್ಕ್ಸ್‌ವಾದಿ ಚಿಂತಕರು  ಗಾಂಧೀಜಿಯವರ ಒಟ್ಟು ಧೋರಣೆಗಳನ್ನು ಕಠಿಣ ವಿಮರ್ಶೆಗೆ ಒಳಪಡಿಸುತ್ತಾರೆ. ಕೇರಳದ ನಂಬೂದರಿ ಪಾಡ್ ಸ್ವಾತಂತ್ರ್ಯ ಹೋರಾಟದ ಬಗೆಗೆ ಬರೆಯುತ್ತಾ ವಸಾಹತು ವಿರೋಧಿ ಹೋರಾಟದ ಗೆಲುವಿಗೆ ಕಾರ್ಮಿಕರನ್ನು
ಕಾರಣ ವಾಗಿಸುತ್ತಾರೆ. ಅವರಿಗೆ ಗಾಂಧಿ ನೇತೃತ್ವದ ಕಾಂಗ್ರೆಸ್ ಮುಖ್ಯವಾಗುವುದಿಲ್ಲ. ಮಾರ್ಕ್ಸ್‌ವಾದಿ ಚರಿತ್ರೆಕಾರ ಸುಮಿತ್ ಸರ್ಕಾರ್ ಅವರು ಸಹ ಗಾಂಧೀ ಹೋರಾಟವನ್ನು ಪರಿಗಣಿಸಲು ಹಿಂದೆ ಬೀಳುತ್ತಾರೆ.
  ಮಾರ್ಕ್ಸ್‌ವಾದಿಗಳ ಕಠಿಣ ಟೀಕೆಗೆ ಒಳಗಾಗಲು ತಾತ್ವಿಕ ಕಾರಣಗಳಿದ್ದವು. ಎಡಪಂಥೀಯರು ಕಾರ್ಮಿಕರ ಹಾಗೂ ರೈತ ಹೋರಾಟಗಳಿಗೆ  ಆದ್ಯತೆಯನ್ನು ನೀಡುತ್ತಾರೆ. ಬಂಡವಾಳಶಾಹಿ ಹಾಗೂ ಜಮೀನ್ದಾರಿ ವ್ಯವಸ್ಥೆ ಯನ್ನು  ವಿರೋಧಿಸುವ ಅವರು ಸಮಸಮಾಜ ವನ್ನು ಕಟ್ಟಲು ಬಯಸುತ್ತಾರೆ. ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಹೊತ್ತಿಗೇ ಈ ಆಂತರಿಕ ಸುಧಾರಣೆಗಳನ್ನು ಬಯಸಿದ್ದರು.
ಗಾಂಧೀಜಿ ೧೯೧೮–-೧೯ರಲ್ಲಿ ರೈತ ಹಾಗೂ ಕಾರ್ಮಿಕ ಹೋರಾಟಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಭಾರತದಲ್ಲಿ ಅವರ ಚಳವಳಿಯ ಸ್ವರೂಪವನ್ನು ಪ್ರಯೋಗಿಸಿದರು. ಬಂಡವಾಳ ಗಾರರು ಹಾಗೂ ಕಾರ್ಮಿಕರ ನಡುವೆ ಹೊಂದಾಣಿಕೆ ತರುವುದು ಅವರ ಪ್ರಯತ್ನ ವಾಗಿತ್ತು. ಅದಕ್ಕೆ ಅವರು ಕಂಡುಕೊಂಡ ಮಾರ್ಗ ಟ್ರಸ್ಟಿಷಿಪ್. ಅಂದರೆ ತಂದೆಯು ಮಗನ ಜವಾಬ್ದಾರಿಯನ್ನು ಹೊರುವಂತೆ ಬಂಡವಾಳ ಗಾರನೇ ಕಾರ್ಮಿಕರ ಜವಾಬ್ದಾರಿಯನ್ನು ಹೊರುವುದು.
ಜಮೀನ್ದಾರನೇ ಕೂಲಿಕಾರರ ಒಳಿತನ್ನು ಕಾಯ್ದುಕೊಳ್ಳುವುದು. ಅಲ್ಲಿ ಸಂಘರ್ಷವಿರುವುದಿಲ್ಲ - ಸೌಹಾರ್ದ ಇರುತ್ತದೆ ಎಂಬುದು ಟ್ರಸ್ಟಿಷಿಪ್‌ನ ಆದರ್ಶವಾಗಿತ್ತು. ಮಾರ್ಕ್ಸ್‌ವಾದದ ವರ್ಗ ಸಂಘರ್ಷಕ್ಕೆ ಪ್ರತಿಕ್ರಿಯೆ ನೀಡದ ಗಾಂಧಿ, ತಮ್ಮ ನಡೆಯಲ್ಲಿ ಉತ್ತರ ಕೊಟ್ಟಂತೆ ಕಾಣುತ್ತಾರೆ. ಮಾಲೀಕ ಮತ್ತು ಕಾರ್ಮಿಕನ ನಡುವೆ ಸಂಧಾನಗಳಾದಲ್ಲಿ ಅಲ್ಲಿ ಕಾರ್ಮಿಕನ ಸೋಲು ಖಚಿತವಾಗಿರುತ್ತದೆಂದು ಮಾರ್ಕ್ಸ್‌ವಾದ ನಂಬುತ್ತದೆ.
ಏಕೆಂದರೆ ಅಲ್ಲಿ ಕ್ರಾಂತಿ ಸಂಭವಿಸು ವುದಿಲ್ಲ. ಹೋರಾಟದ ಗುರಿ ಕ್ರಾಂತಿ. ಆದರೆ ಸಂಧಾನಗಳು ಅದರ ದಿಕ್ಕು ತಪ್ಪಿಸುತ್ತವೆ. ಕಾರ್ಮಿಕ, ಸಣ್ಣಪುಟ್ಟ ಇತ್ಯರ್ಥಗಳಿಗೆ ಸಮಾಧಾನ ಹೊಂದಿ ದೊಡ್ಡ ಬದಲಾವಣೆ ಯನ್ನು ಕೈಬಿಡುತ್ತಾನೆ. ಕಡೆಗೂ ಬಂಡವಾಳ ಶಾಹಿಯ ಆಳಾಗಿ ಕಾರ್ಮಿಕ ದುಡಿಯುತ್ತಾನೆ. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಭೂ ಸುಧಾರಣಾ ಹೋರಾಟಗಳೂ ಯಶಸ್ಸನ್ನು ಪಡೆಯಲಿಲ್ಲ. ಜಮೀನ್ದಾರರು ಮತ್ತು ಕೃಷಿ ಕೂಲಿ ಕಾರ್ಮಿಕರೆಂಬ ವರ್ಗಭೇದವನ್ನು ಕಾಂಗ್ರೆಸ್ ಪರಿಗಣಿಸಲಿಲ್ಲ. ರೈತ, ಜಮೀನ್ದಾರ, ಕೂಲಿ ಕಾರ್ಮಿಕ  ಹೀಗೆ ಎಲ್ಲರ ಬೆಂಬಲವನ್ನು ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಬಳಸಿಕೊಳ್ಳಲಾಯಿತು.
ಆದ್ದರಿಂದ ಜಮೀನ್ದಾರರ ವಿರುದ್ಧದ ಹೋರಾಟ ವನ್ನು ಬೆಂಬಲಿಸುವುದು ಕಾಂಗ್ರೆಸ್‌ಗೆ ಸಾಧ್ಯವಿರ ಲಿಲ್ಲ. ಕಡೆಗೆ ಜಾತಿ ನೆಲೆಯ ಹೋರಾಟಗಳೂ ಕಾಂಗ್ರೆಸ್‌ನಿಂದ ಹೊರಗುಳಿದವು. ಅಂಬೇಡ್ಕರ್ ಕೈಗೆತ್ತಿಕೊಂಡ ದಲಿತ ಹೋರಾಟ, ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರಿಬ್ಬರ ಪರಿಧಿಯಲ್ಲೂ ಉಳಿದಿರಲಿಲ್ಲ. ಗಾಂಧೀಜಿಯವರ ಹರಿಜನ ಹೋರಾಟ ಸುಧಾರಣಾ ನೆಲೆಯದ್ದಾಗಿತ್ತು. ಅಂದಿನ ಮಾರ್ಕ್ಸ್‌ವಾದ ಜಾತಿ ನೆಲೆಯ ಶೋಷಣೆಯನ್ನು ಪರಿಗಣಿಸಲು ವಿಫಲವಾಗಿತ್ತು.
ಇಂತಹದೇ ಕಠಿಣವಾದ ಟೀಕೆ ಭೂದಾನ ಚಳವಳಿಯ ಹೊತ್ತಿನಲ್ಲೂ ಕೇಳಿಬರುತ್ತದೆ. ಸಾವಿರಾರು ಎಕರೆ ಜಮೀನು ಹೊಂದಿದವರು  ಐದಾರು ಎಕರೆ ಜಮೀನು ದಾನ ನೀಡಿ ದಾನ ಶೂರರೆನಿಸಿಕೊಳ್ಳುತ್ತಾರೆ. ಉಳಿದ ಸಾವಿರ ಎಕರೆ ಭೂಮಿ ಹಂಚಿಕೆಯಾಗದೆ ಹಾಗೆಯೇ ಉಳಿಯು ತ್ತದೆ. ಕಡೆಗೂ ಶ್ರೀಮಂತ ಜಮೀನ್ದಾರರು ಶ್ರೀಮಂತರಾಗಿಯೇ ಉಳಿಯುತ್ತಾರೆ. ಭೂಮಿ ಇಲ್ಲದ ರೈತರು ಕೂಲಿಗಳಾಗಿಯೇ ಉಳಿಯು ತ್ತಾರೆ.  ಸ್ವಾತಂತ್ರ್ಯಾ ನಂತರವೂ ಭೂ ಹಂಚಿಕೆ ಯನ್ನು ಬಯಸುವ ರೈತ ಹೋರಾಟಗಳು ನೆಲ ಕಚ್ಚುತ್ತವೆ. ಹಾಗಾಗಿ ಭಾರತದಲ್ಲಿ ಮಾರ್ಕ್ಸ್‌ ವಾದಿ ನೆಲೆಯ ಹೋರಾಟದ ಹಿನ್ನಡೆಗೆ ಪರೋಕ್ಷವಾಗಿ ಗಾಂಧೀಜಿ ಕಾರಣರಾಗುತ್ತಾರೆ.
ವಿಪರ್ಯಾಸವೆಂದರೆ ಚರಕವನ್ನು  ಗಾಂಧೀಜಿ ರಾಷ್ಟ್ರೀಯ  ಹೋರಾಟದ ಸಂಕೇತವಾಗಿ ಬಳಸಿ ದರು. ಅದರಲ್ಲೂ ಗುಡಿ ಕೈಗಾರಿಕೆಯನ್ನು ಅದು ಬೆಂಬಲಿಸುತ್ತಿತ್ತು. ಬೃಹತ್ ಕೈಗಾರಿಕೆಗಳನ್ನು ಅವರು ವಿರೋಧಿಸಿದರು. ವಿದೇಶಿ ವಸ್ತುವಿನ ಬಳಕೆಯನ್ನು ಸದಾಕಾಲಕ್ಕೂ ನಿರಾಕರಿಸಿದರು. ಅದೇ ಹೊತ್ತಿಗೆ ಭಾರತೀಯ ಬಂಡವಾಳಗಾರ ರನ್ನು ಬೆಂಬಲಿಸಿದರು. ಇದೆಲ್ಲವನ್ನೂ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲೇ ಅರ್ಥೈಸಿಕೊಳ್ಳ ಬೇಕಾಗುತ್ತದೆ. ಇಲ್ಲವಾದಲ್ಲಿ ವಿರೋಧಾಭಾಸಕ್ಕೆ ತರ್ಕವನ್ನು ಹುಡುಕಬೇಕಾಗುತ್ತದೆ.
ಕೈಗಾರಿಕಾ ಕ್ರಾಂತಿಯ ಹಿನ್ನೆಲೆಯ ನಾಡಿನಿಂದ ಬಂದ ಮಾರ್ಕ್ಸ್‌ಗೆ ರಾಷ್ಟ್ರವೊಂದರ ಬಿಡುಗಡೆ ಮಾತ್ರ ಗುರಿಯಾಗಿರಲಿಲ್ಲ.
ಕಾರ್ಮಿಕನ ದುಡಿ ಮೆಯನ್ನು ಬಂಡವಾಳವಾಗಿಸುವ ತಂತ್ರಗಾರಿಕೆಗೆ ಪ್ರತ್ಯಕ್ಷದರ್ಶಿಯಾಗಿದ್ದರಿಂದ ದುಡಿಮೆಗಾರರ ಹಿತವನ್ನು ಬಯಸುವ ಆಲೋಚನೆ ಅವರದಾ ಗಿತ್ತು. ಸಂಪತ್ತಿನ ಅಸಮಾನ ಹಂಚಿಕೆಯೇ ಬಡತನಕ್ಕೆ ಕಾರಣವೆಂದು ಬಲವಾಗಿ ಪ್ರತಿಪಾದಿಸಿ ದರು. ಊಳಿಗಮಾನ್ಯ ವ್ಯವಸ್ಥೆಯ ಅಡಿಯಲ್ಲಿ ನಡೆದು ಬಂದ ರೈತನ ನಿರಂತರ ಶೋಷಣೆ ಯಿಂದ ಬಿಡುಗಡೆಯನ್ನು ಬಯಸಿದ್ದರು. ಇಲ್ಲಿ ಚಾರಿತ್ರಿಕವಾಗಿ ನಡೆಯುತ್ತಾ ಬಂದ ಹಿಂಸೆಯ ವಿರುದ್ಧದ ಹೋರಾಟಕ್ಕೆ ಯೋಜನೆಯನ್ನು ರೂಪಿಸಿದರು. ಆ ಹಿಂಸೆಯನ್ನು ತಪ್ಪಿಸುವ ಮೂಲಕ ಅಹಿಂಸೆಯನ್ನು ನೆಲೆಗೊಳಿಸಬೇಕಾ ಗಿತ್ತು. ಹೋರಾಟದ ಮಾರ್ಗದಲ್ಲಿ ಎದುರಾ ಗುವ ಪ್ರತಿರೋಧಗಳನ್ನು ಕಠಿಣವಾಗಿ ಎದುರಿಸ ಬೇಕಾದ ಅನಿವಾರ್ಯವನ್ನು ಮನಗಂಡಿದ್ದರು.
ಮಾರ್ಕ್ಸ್‌ವಾದವನ್ನು ಹಾಗೂ ಮಾರ್ಕ್ಸ್‌ ವಾದಿಗಳನ್ನು ಸದಾ ಗುಮಾನಿಯಿಂದ ಕಾಣುತಿದ್ದ ಬ್ರಿಟಿಷರು ಭಾರತದಲ್ಲಿ ಬಹು ಬೇಗನೇ  ಕಮ್ಯುನಿಸ್ಟ್‌  ಪಕ್ಷವನ್ನು ನಿಷೇಧಿಸಿದರು.  ಎಡ ಪಂಥೀಯ ಹೋರಾಟ ಭೂಗತವಾಗಿ ಮುಂದುವರೆದಿತ್ತು. ಹೋರಾಟಗಳು ಅಹಿಂಸಾ ನೆಲೆಯದ್ದೇ  ಆಗಿದ್ದರೂ ಜನಾಂದೋಲನಗಳನ್ನು ಬ್ರಿಟಿಷರು ಹತ್ತಿಕ್ಕುತ್ತಿದ್ದರು. ಈ ಎಲ್ಲದರ ನಡುವೆಯೂ ತಲೆ ಎತ್ತಿದ ಉಗ್ರವಾದವನ್ನು ಮರೆಯುವಂತಿಲ್ಲ.
ಭಗತ್ ಸಿಂಗ್, ರಾಜಗುರು, ಸುಖದೇವ್ ಅವರಿಗೆ ವಿಧಿಸಿದ ಮರಣ ದಂಡನೆಯನ್ನು ಹಿಂತೆಗೆದುಕೊಳ್ಳುವಂತೆ ಬ್ರಿಟಿಷ ರನ್ನು ಕೇಳದಿದ್ದುದು ಗಾಂಧೀಜಿಯ ಬಗೆಗೆ ಕಾಂಗ್ರೆಸ್ ನಾಯಕರಲ್ಲೂ ಅಸಮಾಧಾನ ಮೂಡಿಸಿತ್ತು. ಮನುಕುಲದಲ್ಲಿ ಬೇರು ಬಿಟ್ಟ ಹಿಂಸೆಯನ್ನು ತೊಡೆದು ಹಾಕಲು ಮಾರ್ಕ್ಸ್‌, ಪ್ರಣಾಳಿಕೆ ಯನ್ನು ರೂಪಿಸಿದರೆ, ಅಹಿಂಸಾ ನೆಲೆಯ ಹೋರಾಟದ ಮಾರ್ಗವನ್ನು ಜಗತ್ತಿಗೆ ನೀಡಿದ ಹೆಗ್ಗಳಿಕೆ ಭಾರತದ್ದು.



ಮುರಿದು ಕಟ್ಟುವ ಸವಾಲು...
Tue, 09/17/2013

ನನ್ನ ಬಂಧುಗಳ ಮನೆಯಲ್ಲಿ ಅಜ್ಜಿ­ಯೊ­ಬ್ಬರು ಮೊಮ್ಮಗುವಿಗೆ ಊಟ ಮಾಡಿಸು­ತ್ತಿದ್ದರು. ಆಕಾಶದತ್ತ ಕೈತೋರಿಸಿ, ‘ಮೂನ್ ನೋಡಪ್ಪಾ ಮೂನ್’ ಎನ್ನುತ್ತಿದ್ದರು. ಚಂದ­ಮಾಮ­ನನ್ನು ನೋಡಿ ಬೆಳೆದ ನನಗೆ ಇದೇಕೋ ವಿಚಿತ್ರವೆನಿಸಿತು.
ಸ್ವಲ್ಪ ಹೊತ್ತಿಗೆ ಮಗುವಿಗೆ ಮೂಲೆ­ಯಲ್ಲಿದ್ದ ಜಿರಲೆ ತೋರಿಸಿ, ‘ಬೇಬಿ ಕಾಕ್ರೋಚ್ ನೋಡಪ್ಪಾ’ ಎಂದರು. ಅವರಿಗೆ ಗೊತ್ತಿದ್ದ ಕೆಲವು ಪದಗಳನ್ನು ಹೇಳಿಕೊಡುವ ಪ್ರಯತ್ನ ನಡೆದಿತ್ತು. ಮಗುವಿನ ತೊದಲು ನುಡಿಯಲ್ಲೇ ಇಂಗ್ಲಿಷ್ ಕೇಳುವ ಬಯಕೆ ಅವರದು. ಅಷ್ಟೇನೂ ಹಣವಂತರಲ್ಲದ ಅವರು ತಮ್ಮ ಸಾಮಾಜಿಕ ಘನತೆಯನ್ನು ಹೆಚ್ಚಿಸಿ­ಕೊ­ಳ್ಳಲು ಇಂಗ್ಲಿಷ್ ಭಾಷೆಯ ಮೊರೆ ಹೋಗಿ­ದ್ದರು. ಒಟ್ಟಿನಲ್ಲಿ ಮಗುವಿನ ಅನ್ನದ ತುತ್ತಿ­ನೊಳಕ್ಕೂ ವಸಾಹತುಶಾಹಿಯ ನರಳಾಟ ಇಳಿದಿತ್ತು.
ಇದು ವಸಾಹತು ಕಾಲದ ನರಳಾಟವಲ್ಲ. ವಸಾಹತು ಕಾಲಕ್ಕೆ ಇಂಗ್ಲಿಷ್ ಬಲ್ಲವರ ಸಂಖ್ಯೆ ಬಹಳ ಕಡಿಮೆ. ಬಹುಶಃ ತಮ್ಮ ಮಕ್ಕಳು ಇಂಗ್ಲಿಷ್ ಕಲಿತು ಕಲೆಕ್ಟರ್ ಆಗಲಿ ಎಂದು ನಗರದ ಹಿಡಿಮಂದಿ ಮಾತ್ರ ಬಯಸಿರಬಹುದು. ಇಂಗ್ಲಿಷ್‌ನವರ ಮುಂದೆ ಒಳ್ಳೆ ಇಂಗ್ಲಿಷ್ ಮಾತನಾಡಿ ಮೆಚ್ಚುಗೆ ಪಡೆದು ಬದುಕು ಸಾರ್ಥಕವಾಯಿತೆಂದು ಭಾವಿಸಿದವರು ಇದ್ದರು. ಅದರೆ ಅದು ಬಹುಸಂಖ್ಯಾತರ ಕನಸಾಗಿರಲಿಲ್ಲ. ಹಾಗೆ ಕನಸಾಗಿ ಮಾರ್ಪಾಡಾಗಿದ್ದು ಮಾತ್ರ ೭೦ರ ದಶಕದಿಂದ ಈಚೆಗೆ.
ಶಿಕ್ಷಣ ಕ್ಷೇತ್ರದಲ್ಲಂತೂ ಈ ನರಳಾಟ ಬಹುಆಯಾಮವನ್ನು ಪಡೆದುಕೊಂಡಿದೆ. ಶಿಕ್ಷಣದ ಭಾಷಾ ಮಾಧ್ಯಮವನ್ನು ಕುರಿತ ಚರ್ಚೆ, ಹೋರಾಟ ಇವೆಲ್ಲಾ ಅರಂಭವಾಗಿ ದಶಕಗಳೇ ಕಳೆದುಹೋಗಿವೆ. ಮಾತೃ ಭಾಷೆಯಲ್ಲಿ ಬೋಧನೆ, ರಾಜ್ಯ ಭಾಷೆಯಲ್ಲಿ  ಬೋಧನೆ ಈ ಎಲ್ಲಾ ಘೋಷಣೆಗಳ ನಂತರವೂ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಅಧಿಕೃತವಾಗಿ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿದೆ.
ಎಷ್ಟೋ ವರ್ಷಗಳ ಕೋರಿಕೆಯ ನಂತರ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಉತ್ತರ ಬರೆಯಲು ಅವಕಾಶ ಸಿಕ್ಕಿತು. ಎಷ್ಟೋ ಜನ ಬೋಧಕರೂ ನಿರಾಳವಾಗಿ ಕನ್ನಡದಲ್ಲಿ ಪಾಠ ಮಾಡ­ತೊಡಗಿದರು. ವಿಜ್ಞಾನ ವಿಷಯಗಳನ್ನು ಪಿಯುಸಿ ಹಂತದಿಂದ ಬೋಧಿಸದಿರುವುದರಿಂದ ಉನ್ನತ ಶಿಕ್ಷಣದಲ್ಲಿ   ಮಾಧ್ಯಮದ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅಷ್ಟಲ್ಲದೇ ಹಳ್ಳಿ ಮಕ್ಕಳ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು?
ಮಾನವಿಕ ವಿಷಯಗಳಿಗೆ ಬಂದಾಗ ಭಾಷಾಭಿವ್ಯಕ್ತಿಯ ಅಗತ್ಯ ಹೆಚ್ಚಾಗಿರುವುದರಿಂದ ಶೇಕಡಾ ಹತ್ತರಷ್ಟು ವಿದ್ಯಾರ್ಥಿಗಳು ಮಾತ್ರವೇ ಕನ್ನಡದಲ್ಲಿ ಉತ್ತರಿಸುತ್ತಿದ್ದಾರೆ. ಸಂಶೋಧನಾ ಮಹಾಪ್ರಬಂಧವನ್ನೂ ಕನ್ನಡದಲ್ಲೇ ಬರೆಯುತ್ತಿ­ದ್ದಾರೆ. ಆದರೆ ಕನ್ನಡ ಮಾಧ್ಯಮದಲ್ಲೂ ಅಧ್ಯಯನ ಮಾಡಬಹುದೆಂದು ಹೇಳಲು ವಿಶ್ವ­ವಿದ್ಯಾ­ಲಯಗಳು ಹಿಂಜರಿಯುತ್ತಿವೆ. ಪತ್ರವ್ಯವ­ಹಾರವೂ ಇಂಗ್ಲಿಷ್‌ನಲ್ಲಿ ನಡೆಯುತ್ತದೆ. ಕನ್ನಡದ ಬಳಕೆಯನ್ನು ವಿ.ವಿ.ಗಳು ಅವಮಾನವೆಂದು ಭಾವಿಸುತ್ತವೆಯೋ, ಅಥವಾ ಬ್ರಿಟಿಷರ ಕಾಲದ ಶಿಕ್ಷಣ ನೀತಿಯನ್ನು ಉಳಿಸಿಕೊಳ್ಳಲು ಹೋರಾಡು­ತ್ತಿವೆಯೋ ತಿಳಿಯದು.  ಕರ್ನಾಟಕ­ದಲ್ಲಿ ಮಾತ್ರವಲ್ಲ; ಭಾರತದ ಎಲ್ಲಾ ರಾಜ್ಯಗಳ ವಿ.ವಿ.ಗಳ ಪರಿಸ್ಥಿತಿಯೂ ಇದೇ ಆಗಿದೆ.
ಇಂಗ್ಲಿಷ್ ಭಾಷೆ ಹಲವು ರೀತಿಯಲ್ಲಿ ಜೀವ ಹಿಂಡುತ್ತಿದೆ. ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಹೊರ ರಾಜ್ಯಗಳಿಂದ ಮೂರು ನಾಲ್ಕು ಜನರನ್ನಾದರೂ ಕರೆದಿರುತ್ತಾರೆ. ಉಳಿದಂತೆ ಪ್ರಬಂಧ ಮಂಡನಕಾರರು ಸ್ಥಳೀಯರೇ ಆಗಿರುತ್ತಾರೆ. ಅಂತಹದೊಂದು ವಿಚಾರ ಸಂಕಿರಣದಲ್ಲಿ ಸಭೆಯಲ್ಲಿದ್ದ ವಿದ್ಯಾರ್ಥಿಗಳಲ್ಲಿ ಶೇ ೯೯ರಷ್ಟು  ಮಂದಿ ಕನ್ನಡಿಗರಿದ್ದರು. ಉದ್ಘಾಟನೆ, ಹಾಡು, ಸಂಭ್ರಮ ಈ ಎಲ್ಲದರಾಚೆಗೆ ಪ್ರಬಂಧ ಮಂಡನೆಯ ಹಂತಕ್ಕೆ ಬಂದಾಗ ಸಭಿಕರಿಗೂ ವೇದಿಕೆಯ ಮೇಲಿನ ವಿದ್ವಾಂಸರಿಗೂ ಸಂಬಂಧ ಕಡಿದು ಹೋಗಿತ್ತು.
ಇಂಗ್ಲಿಷ್‌ನಲ್ಲೇ ವಿಚಾರ­ವನ್ನು ಮಂಡಿಸುವ ಹಟಕ್ಕೆ ಬಿದ್ದಂತೆ, ಕೆಲವರು ಓದಿದರು, ಮತ್ತೆ ಕೆಲವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಬಳಸಿ ಸಂಭಾಳಿಸಿದರು. ಪ್ರಬಂಧ ಮಂಡನೆ ಮುಗಿದಾಗ ವಿದ್ಯಾರ್ಥಿಗಳು ಜೋರಾಗಿ ಚಪ್ಪಾಳೆ ಹೊಡೆಯುತ್ತಿದ್ದರು. ಅಧ್ಯಕ್ಷರು ‘ನೌ ದ ಫ್ಲೋರ್ ಈಸ್ ಓಪನ್ ಫಾರ್ ಡಿಸ್ಕಷನ್’ ಎನ್ನುತ್ತಿದ್ದರು. ಹೊರಗಿನಿಂದ ಬಂದ ವಿದ್ವಾಂಸರಲ್ಲಿ ಯಾರಾದರೊಬ್ಬರು ಪ್ರಶ್ನೆ ಕೇಳುತ್ತಿದ್ದರು.
ಸಭಿಕರು ಮೂಕ ಪ್ರೇಕ್ಷಕರಾಗಿ  ವೇದಿಕೆ ಮೇಲೆ ನಡೆಯುತ್ತಿದ್ದ ಒಟ್ಟಾರೆ ಪ್ರಸಂಗವನ್ನು ವೀಕ್ಷಿಸುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಅವರೊಳಗೆ ಮಾತು ಆರಂಭ­ವಾಗುತ್ತಿತ್ತು. ನಡು ನಡುವೆ ಬರುವ ಕಾಫಿ, ಬಿಸ್ಕತ್ ಅವರಿಗೆ ಪರಿಹಾರ ನೀಡಿದಂತಿತ್ತು. ಮತ್ತೆ ಗೋಷ್ಠಿ ಆರಂಭವಾದರೆ ಊಟದ ವಿರಾಮಕ್ಕಾಗಿ ಕಾದು ಕುಳಿತಿರುತ್ತಿದ್ದರು. ಕಡೆಗೆ ನನ್ನ ಮತ್ತು ನನ್ನ ಮಿತ್ರರ ಸರದಿ ಬಂತು. ನಾಲ್ಕು ಜನ ವಿದ್ವಾಂಸರ ಹಿತಕ್ಕಿಂತ ವಿದ್ಯಾರ್ಥಿಗಳ ಹಿತ ಮುಖ್ಯ ಎಂದು ಭಾವಿಸಿ  ಕನ್ನಡದಲ್ಲಿ ಮಾತು ಆರಂಭಿಸಿದೆವು. ಮುಂದೆ ಮೂರು ದಿನ ಮಾತನಾಡಬೇಕಾದವರ ದಾರಿ ಸುಗಮಗೊಳಿಸಿದೆವು. 
ಏನೂ ಅರ್ಥವಾಗದಿದ್ದರೂ ಗಂಭೀರವಾಗಿ ಕೂರುವ ಸೌಜನ್ಯ, ಅರ್ಥವಾದಂತೆ ಅಭಿನಯಿ­ಸುವ ಅನಿವಾರ್ಯಕ್ಕೆ  ವಿದ್ಯಾರ್ಥಿಗಳು ಒಳಗಾ­ದಂತಿತ್ತು. ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದಕ್ಕಾಗಿ ಸರ್ಟಿಫಿಕೇಟ್ ಪಡೆದ ಧನ್ಯತೆ ಅಧ್ಯಾಪಕರಿಗೆ, ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ವಿ.ವಿಗೆ ಹೆಮ್ಮೆ. ಹೀಗೆ ಸಾರ್ಥಕ್ಯದ ಭ್ರಮೆಯಲ್ಲಿ ವಸಾಹತೋತ್ತರ ಭಾರತದ ಶೈಕ್ಷಣಿಕ ಸಾಧನೆಗೆ ಇಂಗ್ಲಿಷ್  ಭಾಷೆ ಹೊಣೆಯಾಗಿದೆ.
ಇನ್ನು ವಸಾಹತುಶಾಹಿ ಹುಟ್ಟುಹಾಕಿದ ವ್ಯವಸ್ಥೆಗಳಲ್ಲಿ ನ್ಯಾಯಾಂಗವೂ ಒಂದು. ಬ್ರಿಟಿಷರ ಕಂದಾಯ ವಸೂಲಾತಿಗೆ ಪೂರಕವಾಗಿ ಹುಟ್ಟು­ಹಾಕಿದ ಸಂಸ್ಥೆ ಅದು. ನ್ಯಾಯಾಧೀಶರುಗಳ ಸಂಘಕ್ಕೊಮ್ಮೆ ಭಾಷಣ ಮಾಡಲು ಹೋದಾಗ ಅವರ ನಡೆ ನುಡಿ ನನ್ನನ್ನು ಶತಮಾನಗಳ ಹಿಂದಕ್ಕೆ ಕರೆದುಕೊಂಡು ಹೋಗಿತ್ತು.
ಕೋರ್ಟ್‌ ಹಾಲ್‌ನ ಹೊರಗೂ, ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ‘ಹೈರಾರ್ಕಿ’ಯನ್ನು ಬಿಡಲಾಗದೆ ಬಿಗಿಯಾದ ವಾತಾವರಣವನ್ನು ಅಲ್ಲಿ ಸೃಷ್ಟಿಸಿಕೊಂಡಿದ್ದರು. ಕಾಫಿ ತಂದುಕೊಡಲಾ ಲಾರ್ಡ್‌ ಎಂದು ಸಂಬೋಧಿಸುವ ಕಿರಿಯ ಜಡ್ಜ್‌­ಗಳು, ಸೊಂಟದವರೆಗೂ ಬಾಗಿ ನಮಸ್ಕರಿಸುವ ಅವರ ನಡತೆ, ಅವರಿಗೆ ಪ್ರಜಾಪ್ರಭುತ್ವದ ಬದುಕಿನ ಅರಿವಿದ್ದಂತೆ ಕಾಣಲಿಲ್ಲ. ಕೋರ್ಟ್‌ನಲ್ಲಿ ಕೆಲವು ವಕೀಲರು ಕನ್ನಡದಲ್ಲಿ ವಾದಿಸುತ್ತಿದ್ದಾರೆ, ಮತ್ತೆ ಕೆಲವು ನ್ಯಾಯಾಧೀಶರು ಕನ್ನಡದಲ್ಲಿ ಆದೇಶಗಳನ್ನು ಕೊಡುತ್ತಿದ್ದಾರೆ ಎಂಬುದು ನ್ಯಾಯಾಲಯ, ವಸಾಹತು ನೆರಳಿನಿಂದ ಅಷ್ಟು ದೂರಕ್ಕೆ ಬಂದಿದೆ ಎಂದು ಅರ್ಥವಾಗುತ್ತದೆ.
ಭಾರತದಲ್ಲಿ ಬ್ಯಾಂಕ್ ವ್ಯವಸ್ಥೆ ಹುಟ್ಟುಹಾಕಿದ ಬ್ರಿಟಿಷರು ಸಾಂಪ್ರದಾಯಿಕ ವ್ಯವಸ್ಥೆಗೆ ತಿಲಾಂಜಲಿ ನೀಡುವಂತೆ ಮಾಡಿದರು. ನಾನು   ಈವರೆಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾತ್ರ ವ್ಯವಹರಿಸಿ ಬಲ್ಲೆ. ಸಾಲ ತೆಗೆದುಕೊಳ್ಳಲು  ಹೋದರೆ ಹತ್ತಾರು ಪುಟಗಳಿಗೆ ಸಹಿ ಹಾಕ­ಬೇಕಾಗುತ್ತದೆ. ಕೆಂಪು ಹಳದಿ ಹಸಿರು ಬಣ್ಣದ ಹಾಳೆಗಳೂ ಅಲ್ಲಿರುತ್ತವೆ. ಅವರು ತೋರಿಸಿದ ಜಾಗದಲ್ಲಿ ಜನ ಸಹಿ ಹಾಕುತ್ತಾರೆ. ಸಹಿ ಹಾಕುವುದಕ್ಕೂ ಹೆಬ್ಬೆರಳನ್ನು ಒತ್ತು­ವುದಕ್ಕೂ ಹೆಚ್ಚೇನೂ ವ್ಯತ್ಯಾಸವಿರುವುದಿಲ್ಲ.
ಏಕೆಂದರೆ ಒಳಗೇನಿದೆಯೆಂದು ತಿಳಿಯಲು ಸಮಯ­ವಾಗಲೀ ವ್ಯವಧಾನವಾಗಲೀ ಇರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆ ಪತ್ರಗಳೆಲ್ಲಾ ಇಂಗ್ಲಿಷ್‌ನಲ್ಲಿರುತ್ತವೆ. ಸಾಲ ಪಡೆಯುವವರು ಇಂಗ್ಲಿಷ್ ಬಲ್ಲವರಾಗಿರಬೇಕೆಂಬುದು  ಬ್ಯಾಂಕ್‌ನ ನೀತಿಯೋ ಅಥವಾ ಇಂಗ್ಲಿಷ್‌ಗೆ  ಹೆದರಿ ಓದದೇ ಸಹಿ ಹಾಕಲೆಂಬ ಉದ್ದೇಶವೋ ಅಥವಾ ವಸಾಹತು  ಹಾಕಿಕೊಟ್ಟ ವ್ಯವಸ್ಥೆಯನ್ನು ಮುರಿಯಲಾಗದ ದೌರ್ಬಲ್ಯವೋ ಒಟ್ಟಿನಲ್ಲಿ ಇಡೀ ಜನಾಂಗವೇ ವಸಾಹತು ಭಾಷಾ ಹೇರಿಕೆಯನ್ನು ಹೊತ್ತ ಕತ್ತೆಗಳಾಗಿದ್ದೇವೆ.
ಕಾಫಿ ಡೇಗಳಲ್ಲಿ, ಮಾಲ್‌ಗಳಲ್ಲಿ ಸೇಲ್ಸ್ ಹುಡುಗ ಹುಡುಗಿಯರಿಗೆ ಇಂಗ್ಲಿಷ್‌ನಲ್ಲಿ ಮಾತನಾಡಬೇಕು ಎಂದು ಆದೇಶಿಸ­ಲಾಗಿರು­ತ್ತದೆ. ಪಾಪದ ಹುಡುಗಿಯರು, ಕಲಿತ ಕೆಲವೇ ಇಂಗ್ಲಿಷ್ ಪದಗಳಲ್ಲಿ ವ್ಯವಹರಿಸುತ್ತಾರೆ. ಹೀಗೆ ಒಮ್ಮೆ ಸೇಲ್ಸ್ ಹುಡುಗನೊಬ್ಬನ ಫಜೀತಿಯನ್ನು ನೋಡಲಾರದೆ ‘ಕನ್ನಡದಲ್ಲಿ ಮಾತಾಡಪ್ಪ, ಯಾಕೆ ಒದ್ದಾಡ್ತೀಯ’ ಎಂದಾಗ, ‘ಕನ್ನಡದಲ್ಲಿ ಮಾತನಾಡಿದರೆ ಕೆಲಸದಿಂದ ತೆಗೆದು ಹಾಕ್ತಾರೆ, ಸಿ.ಸಿ ಟಿ.ವಿ ಬೇರೆ ಇಟ್ಟಿದ್ದಾರೆ’ ಎಂದು ಅವನ ಕಷ್ಟ ಹೇಳಿಕೊಂಡ.
ಯಾವ ದೇಶದಲ್ಲೂ ಕಾಣದ ಇಂಗ್ಲಿಷ್ ನಿಷ್ಠೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಣು­ತ್ತದೆ. ವಿಮಾನ ನಿಲ್ದಾಣದಲ್ಲಾಗಲೀ, ವಿಮಾನದ ಒಳಭಾಗದಲ್ಲಾಗಲೀ ವಿಮಾನ ಹಾರಾಟಕ್ಕೆ ಸಂಬಂಧಿಸಿದ ಮಾಹಿತಿಗಳನ್ನು  ಯಾರೂ ಕನ್ನಡ­ದಲ್ಲಿ ಪ್ರಕಟಿಸುವುದಿಲ್ಲ. ಅವರ ಉಡುಗೆ ತೊಡುಗೆ ಮೇಕಪ್‌ಗೆ ಕನ್ನಡ ಒಪ್ಪುವುದಿಲ್ಲವೋ ಏನೋ! ವಿಮಾನ ನಿಲ್ದಾಣದಲ್ಲೇ ತಾವು ಬೇರೆ ದೇಶದಲ್ಲಿ ಇದ್ದವರಂತೆ ಜನ ಭಾವಿಸಬೇಕಾ­ಗುತ್ತದೆ. ನಾವು ಇನ್ನೂರು ವರ್ಷಗಳ ಕಾಲ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದೆವೆಂಬ ನೆನಪು ಹೆಜ್ಜೆ ಹೆಜ್ಜೆಗೂ ಮರುಕಳಿಸುತ್ತದೆ.
ಇಂಗ್ಲಿಷ್ ಭಾಷೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೆಂಬ ಒತ್ತಾಯಕ್ಕೆ ಕನ್ನಡದ ಜನತೆ ಮಾತ್ರವಲ್ಲ; ಪಂಜಾಬಿ, ಬಂಗಾಳಿ, ಮರಾಠಿ ಎಲ್ಲಾ ಭಾಷಿಕರೂ ಒಳಗಾಗಿದ್ದಾರೆ. ಮೊದಲ ಪೀಳಿಗೆ ಶಿಕ್ಷಿತ ಸಮುದಾಯ ತಮ್ಮ ಮಕ್ಕಳಿಗೆ ಇಂಗ್ಲಿಷ್ ಭಾಷೆಯಲ್ಲಿ ಕಲಿಸುವುದನ್ನು ಹೆಗ್ಗಳಿಕೆಯ ಸಂಕೇತವಾಗಿ ಭಾವಿಸಿದರೆ,  ಎರಡು, ಮೂರು ಪೀಳಿಗೆ ಶಿಕ್ಷಣ ಪಡೆದವರು ಅದೊಂದು ಸಹಜ ಪ್ರಕ್ರಿಯೆಯೆಂದು ಭಾವಿಸುತ್ತಿದ್ದಾರೆ.
ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಾ ಬಂದ ಮಕ್ಕಳು ಎಷ್ಟೋಬಾರಿ ಮನೆ ಮಾತನ್ನು ಕಳೆದುಕೊಂಡು, ಇಂಗ್ಲಿಷನ್ನು ತಮ್ಮದಾಗಿಸಿ­ಕೊಳ್ಳದೇ ಅವರ ಭಾಷಾಭಿವ್ಯಕ್ತಿ ಹಳಸಿ ಹೋಗಿರುತ್ತದೆ. ಶಾಲೆಗೆ ಹೋಗದ ಮಕ್ಕಳಲ್ಲಿ ಇರುವ ಭಾಷಾ ಗಟ್ಟಿತನವೂ ಇವರಲ್ಲಿ ಕಾಣುವುದಿಲ್ಲ. ಎಡಬಿಡಂಗಿತನದಲ್ಲೂ ಒಂದು ಸೌಂದರ್ಯವಿದ್ದರೆ ಉಳಿಸಿ ಬೆಳೆಸಬಹುದಿತ್ತು. ಆದರೆ ಆ ಸ್ಥಿತಿ ಒಂದು ತಲೆಮಾರಿನ ಅಭಿವ್ಯಕ್ತಿ­ಯನ್ನೇ ಹಾಳುಗೆಡವಿದೆ. ವಸಾಹತೋತ್ತರ ಕಾಲದ (ಪೋಸ್ಟ್‌ ಕಲೋನಿಯಲ್) ಲಕ್ಷಣಗಳಲ್ಲಿ ಇದೂ ಒಂದು.
ಒಂದು ಕಾಲಕ್ಕೆ ಬ್ರಿಟನ್, ಜರ್ಮನಿ, ಫ್ರಾನ್ಸ್, ಬೆಲ್ಜಿಯಂ, ಪೋರ್ಚುಗೀಸ್, ಸ್ಪೇನ್ ಹೀಗೆ ಯಾವುದೋ ಒಂದು ದೇಶದಾಳ್ವಿಕೆಗೆ ತುತ್ತಾಗಿ ಎರಡನೇ ಮಹಾಯುದ್ಧಾನಂತರ ಸ್ವತಂತ್ರ­ಗೊಂಡ ದೇಶಗಳಲ್ಲಿ ವಿಚಿತ್ರ ಸನ್ನಿವೇಶ ಇದಾಗಿದೆ. ವಸಾಹತುವಾಗಿದ್ದು ಸ್ವಾತಂತ್ರ್ಯ ಪಡೆದ ದೇಶ­ಗಳಲ್ಲಿ ಜನ ಮಾನಸಿಕವಾಗಿ ನರಳುತ್ತಿದ್ದಾರೆ. ವಸಾಹತು ಸರ್ಕಾರಗಳು ಹೇರಿದ್ದ ಭಾಷೆ, ಧರ್ಮ ಉಡುಗೆ ತೊಡುಗೆ ಹೀಗೆ ಹತ್ತು ಹಲವು ವಿಚಾರಗಳು ರಕ್ತನಾಳಗಳಿಗೆ ಇಳಿದು ಅದರಿಂದ ಹೊರಬರಬೇಕೆಂಬ ಅರಿವು ಇಲ್ಲದಂತಾಗಿದೆ.
ಭಾರತದಲ್ಲಿ ಈಗ ಇರುವುದು ಸಮ್ಮಿಶ್ರ  ಸಂಸ್ಕೃತಿ (ಹೈಬ್ರಿಡ್ ಕಲ್ಚರ್). ಒಂದು ಸಮಾಜ ಮತ್ತೊಂದರ ಮೇಲೆ ನಡೆಸಿದ ಹಲ್ಲೆಯಿಂದ ಹುಟ್ಟಿದ ಸಂಸ್ಕೃತಿ. ಅದನ್ನು ಗೌರವದಿಂದ ಒಪ್ಪಿ ಮುಂದುವರಿಯುವುದು ಎಲ್ಲರಿಗೂ ಸಾಧ್ಯ­ವಾಗುವ ವಿಚಾರವಲ್ಲ. ಗುಲಾಮಗಿರಿಯಿಂದ ಕುಗ್ಗಿದ ಮನಸ್ಥಿತಿ ಇಂದಿಗೂ ಹಲವು ರೂಪದಲ್ಲಿ ಕಾಡುತ್ತಿದೆ. ಅರಿವಿಗೆ ಬಾರದಂತೆ ಮಾನಸಿಕ ಜಾಡ್ಯಗಳನ್ನೂ ಚಟಗಳನ್ನೂ ನಮ್ಮದಾಗಿಸಿ­ಕೊಂಡಿರುತ್ತೇವೆ– ಕಾಫಿ, ಟೀ, ತಂಬಾಕು ಸೇವನೆಯಂತೆ. ಸರ್, ಮೇಡಂ ನಮ್ಮನ್ನು ಬಿಟ್ಟು ಹೋಗುವುದಿಲ್ಲ.
ಕ್ರೈಸ್ತರಾದ ಕನ್ನಡಿಗರು ಕ್ರಿಸ್ತನನ್ನು ಕುರಿತಾದ ಹಾಡುಗಳನ್ನು ಕಟ್ಟಿ ಇಂಗ್ಲಿಷ್ ದನಿಯಲ್ಲಿ ಹಾಡುವ ಹಾಡುಗಳು ಮಧುರವಾಗಿವೆಯೋ ಇಲ್ಲವೋ ಎಂದು ಅರಿವಿಗೆ ಬಾರದೆ ಅದನ್ನೇ ಭಕ್ತಿಯಿಂದ ಒಪ್ಪಿ ತಲೆದೂಗುವ ಸ್ಥಿತಿಯನ್ನು ತಲುಪಿರುತ್ತಾರೆ. ಜಾನಪದ ಗಾಯನ ಸ್ಪರ್ಧೆ­ಯೊಂದರಲ್ಲಿ  ನಾಗಾಲ್ಯಾಂಡ್‌ನ ಹುಡುಗನೊಬ್ಬ ಪಾಶ್ಚಾತ್ಯ ರಾಗದಲ್ಲಿ ಹಾಡತೊಡಗಿದಾಗ ಜನ ನಗತೊಡಗಿದರು. ಅದನ್ನು ಜಾನಪದವೆಂದು ಒಪ್ಪುವುದು ಜನರಿಗೆ ಸಾಧ್ಯವಾಗಿರಲಿಲ್ಲ. ಸಂಸ್ಕೃತಿಗಳ ಸಮ್ಮಿಲನ ಸಹಜವಾಗಿದ್ದರೆ ಅದು ಒಂದರೊಳಗೊಂದು ಮಧುರವಾಗಿ ಸೇರಿ ಹೋಗಿರುತ್ತದೆ.
ಇಂದು ವಸಾಹತುಶಾಹಿ ಹೇರಿಕೆಯಿಂದ ವಿಕೃತಗೊಂಡ ಸಾಂಸ್ಕೃತಿಕ ರೂಪಗಳ ಕುರಿತು ಆಫ್ರಿಕಾದ ಬರಹಗಾರರು ಚರ್ಚಿಸುತ್ತಿದ್ದಾರೆ. ವಸಾಹತೋತ್ತರ ಪರಿಸ್ಥಿತಿಯ ದೊಡ್ಡ ಅಧ್ಯಯ­ನವೇ ಆರಂಭಗೊಂಡಿದೆ. ವಸಾಹತು ವ್ಯವಸ್ಥೆ ಸೃಷ್ಟಿಸಿದ ಮೂರನೇ ವಿಶ್ವದ ಐಡೆಂಟಿಟಿ ಪ್ರಶ್ನೆ ಇಂದು ನಮ್ಮ ಮುಂದಿದೆ. ವಾಸ್ತವದಲ್ಲಿ ಅದು ವಸಾಹತುಶಾಹಿಯ ಅತ್ಯಾಚಾರಕ್ಕೆ ಬಸುರಾದ ಹೆಣ್ಣಿನ ಮನಸ್ಥಿತಿ. ಹೀಗೆ ಕಟ್ಟಿ ಹಾಕಿದ ಬಾಯಿಗೆ ದನಿ ಬರಬೇಕಾದರೆ ಸಾಮಾಜಿಕ, ಮಾನಸಿಕ ಕುಬ್ಜತೆಯಿಂದ ಹೊರಬರಬೇಕಾಗು­ತ್ತದೆ.
ಬ್ರಿಟನ್ ಸರ್ಕಾರ, ೧೯೫೦-ರ ದಶಕದಲ್ಲಿ ಕೀನ್ಯಾದ ಜನತೆ ನಡೆಸಿದ ಸ್ವಾತಂತ್ರ್ಯ ಹೋರಾಟ­ದಲ್ಲಿ ೫,೨೦೦ ಜನರನ್ನು ಹತ್ಯೆಮಾಡಿತ್ತು. ಅದಕ್ಕೆ ಪ್ರಾಯಶ್ಚಿತ್ತವಾಗಿ ಇಂದು ಕ್ಷಮೆ ಕೋರುತ್ತಾ ೧೩.೯ ದಶಲಕ್ಷ   ಪೌಂಡ್‌ಗಳನ್ನು ಕೊಡಲು ಮುಂದಾ­ಗಿದೆ. ಆ ಸಮಯದಲ್ಲಿ ಮಾಡಿದ ಪುರುಷತ್ವ ಶಕ್ತಿ ಹರಣಕ್ಕಾಗಿ ಆರು ದಶಲಕ್ಷ  ಪೌಂಡ್‌­­ಗಳನ್ನು ನೀಡುತ್ತಿದೆ. ಇದು ಅಪರೂಪದ ನಿರ್ಧಾರವೇ ಸರಿ. ಜೀವಹಾನಿ ಕಣ್ಣಿಗೆ ಕಾಣು­ತ್ತದೆ. ಹಣದ ರೂಪದ ಪರಿಹಾರದಿಂದ ಇಂಗ್ಲೆಂಡ್ ಅಪರಾಧಿ ಭಾವದಿಂದ ಹೊರ­ಹೋಗ­­ಬಹುದು. ಆದರೆ ಹದಗೆಡಿಸಿದ ಕೀನ್ಯಾದ ಸಂಸ್ಕೃತಿಯನ್ನು ಸರಿಪಡಿಸಲಾದೀತೇ?
ಗುಂಗುರು ಗುಂಗುರಾದ ಅವರ ಕೂದಲು­ಗಳನ್ನು ಬೋಳಿಸಿಕೊಂಡು ಮಕ್ಕಳು ಶಾಲೆಗೆ ಹೋಗುತ್ತಾರೆ.  ಉದ್ದನೆಯ ಜಡೆಯನ್ನು ಕತ್ತರಿಸಿ­ಕೊಂಡರೆ ತನ್ನ ಸಮಾಜವನ್ನು ಉಳಿಸಿಕೊಳ್ಳ ಬಹುದೇನೋ ಎಂಬ ನಿರ್ಧಾರಕ್ಕೆ ಬಂದ ಕೆಂಪು ಇಂಡಿಯನ್ ಮಕ್ಕಳ ಕಥೆ ಯಾರಿಗಾದರೂ ಕಣ್ಣೀರು ತರಿಸುತ್ತದೆ.
ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ- ವಾ-ಥಿಯಾಂಗೊ ಇಂಗ್ಲಿಷ್ ಬರಹವನ್ನು ಬಿಟ್ಟು ದೇಸಿ ಭಾಷೆಯಲ್ಲಿ ಬರೆಯತೊಡಗಿದ್ದು ಇದೇ ಕಾರಣಕ್ಕೆ. ‘ಡಿಕಾಲೋನೈಸಿಂಗ್ ದ ಮೈಂಡ್’ ಕೇವಲ ಗೂಗಿಯ ಬರಹವಾಗಿ ಉಳಿದಿಲ್ಲ. ಅದು ಅವರ ಚಳವಳಿಯ ಕರೆಯಾಗಿದೆ. ಆಫ್ರಿಕಾದ ಬುಡಕಟ್ಟು ಧರ್ಮಗಳ ಮೇಲೆ ಪಾಶ್ಚಿಮಾತ್ಯ  ನಾಗರಿಕತೆ ನಡೆಸಿದ ಹಲ್ಲೆ ಕುರಿತು ಬರೆದ ಕಾದಂಬರಿಯ ಕಾರಣಕ್ಕೆ ಗೂಗಿ ಸೆರೆಮನೆ­ವಾಸವನ್ನೂ ಅನುಭವಿಸಬೇಕಾಗಿ ಬಂದಿತು.
ವಸಾಹತುಶಾಹಿ ವಿರೋಧಕ್ಕೆ  ದೇಶಗಳು ನೇರವಾಗಿ ಕೈಜೋಡಿಸಲು ಸಾಧ್ಯವಾಗಲಿಲ್ಲ. ಆದರೆ ಸಿದ್ಧಾಂತಗಳು ಬೆಂಬಲಿಸಿದವು. ಇವತ್ತು ತಾತ್ವಿಕವಾಗಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳ ಬೇಕಾಗಿದೆ. ಇದು ಬೇರೆ ಯಾರದೋ ವಿರುದ್ಧ ನಡೆಸುವ ಹೋರಾಟವಲ್ಲ. ನಮಗೆ ನಾವೇ ಕಂಡು­ಕೊಳ್ಳಬೇಕಾದ ಮಾರ್ಗವಾಗಿದೆ.
ಪಾಶ್ಚಾತ್ಯರು ಕಂಡ ಭಾರತವನ್ನು ನಮ್ಮ ಚರಿತ್ರೆ, ಸಂಸ್ಕೃತಿ, ಸಮಾಜವೆಂದು ಪಠ್ಯಕ್ರಮವಾಗಿಸಿ­ಕೊಂಡು ಓದುತ್ತಿದ್ದೇವೆ. ಅವರ ಗ್ರಹಿಕೆಗೆ ಸಿಕ್ಕ ವಿಚಾರಗಳೆಷ್ಟು ಎಂಬ ಅವಲೋಕನಕ್ಕಿಂತ ಆ ಮಾದರಿಗಳನ್ನೇ ಮುಂದುವರಿಸಿ ಸಂಭ್ರಮಿಸುತ್ತಿ­ದ್ದೇವೆ. ಅದನ್ನೇ ನಿಜವಾದ ವಿದ್ಯೆ ಎಂದು ಕಲಿಯುತಿದ್ದೇವೆ. ಅದನ್ನು ಓರಿಯಂಟಲ್ ವಾದ ಎಂದು ಕರೆದು ಹೊಸ ಸಂಶೋಧನೆಗೆ ತೊಡಗುವುದು, ಮತ್ತು ಪಾಶ್ಚಿಮಾತ್ಯ ಕಲ್ಪಿತ ಭಾರತ ಚರಿತ್ರೆಯನ್ನು ಮುರಿದು ಕಟ್ಟುವುದು ವಸಾಹತೋತ್ತರ ಕಾಲದ ಒಂದು ಸವಾಲು.


ಕೆಂಪು ದೀಪ ಉರಿಸುವವರು...
Tue, 09/03/2013 

ಭಾರತದ ಆಕರ್ಷಕ ನಗರಗಳಲ್ಲಿ ಬೆಂಗಳೂರು ಎರಡು ಅಥವಾ ಮೂರನೆಯ ಸ್ಥಾನದಲ್ಲಿ ನಿಲ್ಲುತ್ತದೆ. ರಾತ್ರಿ ಹೊತ್ತಿನಲ್ಲಿ ಜಗಜಗಿಸುವ ದೀಪಗಳು, ಅದರಲ್ಲೂ ಮೇಲ್ಸೇತುವೆ ಮೇಲೆ ರಭಸವಾಗಿ ಸಾಗುವ ವಾಹನಗಳ ಬೆಳಕು ಕಣ್ಣು ಕೋರೈಸುವಾಗ ಭಾರತಕ್ಕೆಲ್ಲಿದೆ ಬಡತನ ಎನಿಸುತ್ತದೆ. ಹೀಗೇ ಎಂಟು ಗಂಟೆಯ ಹೊತ್ತಿನಲ್ಲಿ ಲಹರಿಯಲ್ಲಿ ಸಾಗುತ್ತಿರುವಾಗ ಟ್ರಾಫಿಕ್ ಸಿಗ್ನಲ್‌ನಲ್ಲಿ ಕೆಂಪು ದೀಪ ಹೊತ್ತಿತು. ಕಾರ್ ಬ್ರೇಕ್ ಒತ್ತಿದೆ. ಯಾರೋ ಹಿಂದಿನಿಂದ ಬಂದಂತಾಗಿ ತಿರುಗಿ ನೋಡಿದರೆ ಸೀರೆ ತೊಟ್ಟ ಗಂಡಸು, ಗಡ್ಡ ಮೀಸೆ ತೆಗೆದು ವೈಯಾರ ಮಾಡುತ್ತಾ ಚಪ್ಪಾಳೆ ತಟ್ಟುವುದು ಹೊಸದೇನೂ ಆಗಿರಲಿಲ್ಲ. ಬಡತನವೋ ಭಂಡತನವೋ ಗಂಡಸುತನಕ್ಕೆ ಕೊಟ್ಟ ಉತ್ತರವೋ? ಆದರೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುವವರಿಗೆ ಮನರಂಜನೆ ಇಲ್ಲವೇ ಕಿರಿಕಿರಿ. ಅದಾವುದರ ಪರಿವೆ ಇಲ್ಲದವರಂತೆ ಅಥವಾ ಅದೆಲ್ಲವನ್ನೂ ಒಪ್ಪಿದವರಂತೆ ನಿಂತ ಪೊಲೀಸರು, ರಾಜ್ಯ ನೀತಿಯ ಪ್ರತೀಕವಾಗಿದ್ದರು. ದೀಪದ ಬಣ್ಣ ಬದಲಾಯಿತು. ವಾಹನಗಳು ಆತುರದಲ್ಲಿ ನುಗ್ಗಿ ಹೋದವು. ಎಷ್ಟೇ ವೇಗವಾಗಿ ಬಂದರೂ ತಡೆಯಲು ಸಿದ್ಧವಾಗಿತ್ತು ಕೆಂಪು ದೀಪ. ಆ ಬೆಳಕಿನಲ್ಲಿ ಚಂದದ ಲಂಗ (ಗಾಗ್ರ ಚೋಲಿ) ತೊಟ್ಟ ಹತ್ತು ವರ್ಷದ ಹುಡುಗಿ ವಾಹನಗಳ ನಡುವೆ ಸಾಗಿ ಬಂದಳು. ಇಷ್ಟು ಹೊತ್ತಿನಲ್ಲಿ ಒಬ್ಬಳ್ಳನ್ನೇ ಕಳಿಸಿದ್ದಾರಲ್ಲಾ ಎಂಬ ಪ್ರಶ್ನೆ ಮನಸಿನಲ್ಲಿ ಮೂಡಿತು. ಚುರುಕಾದ ಹುಡುಗಿ. ಅವಳ ಕುಣಿತದ ನಡಿಗೆಗೆ ಹೊಸ ಬಟ್ಟೆಯ ಸಂಭ್ರಮ ಕಾರಣವೇ ಎಂದುಕೊಳ್ಳುವ ಹೊತ್ತಿಗೆ, ಅವಳ ಚಲನೆಯನ್ನೇ ದಿಟ್ಟಿಸುತ್ತಾ ವ್ಯಕ್ತಿಯೊಬ್ಬ ಮರಕ್ಕೆ ಒರಗಿ ನಿಂತಿರುವುದು ಕಾಣಿಸಿತು. ನನ್ನ ಹಿಂದಿನ ಲಾರಿಯ ಚಾಲಕನ ಕಡೆ ಆ ಹುಡುಗಿ ನಗೆ ಬೀರಿದ್ದು ಕನ್ನಡಿಯಲ್ಲಿ ನನಗೆ ಕಾಣಿಸಿತು.
ಹಸಿರು ದೀಪ ಹೊತ್ತಿತು. ಗಾಡಿಗಳು ಚಲಿಸಿದವು. ನನ್ನಲ್ಲಿ ವೈಚಾರಿಕತೆ ಜಾಗೃತವಾಗುವ ಹೊತ್ತಿಗೆ ಸರ್ಕಲ್ ದಾಟಿ ಮುಂದೆ ಬಂದಿದ್ದೆ. ಸರ್ಕಲ್‌ನಲ್ಲಿ ನಿಂತಿದ್ದ ಪೊಲೀಸರ ಹೊಗೆ ಕುಡಿದ ಕಣ್ಣುಗಳಿಗೆ ಏನೂ ಕಾಣುವಂತಿರಲಿಲ್ಲ. ಅನತಿ ದೂರದಲ್ಲಿ ನಿಂತಿದ್ದ ಪೊಲೀಸ್ ವಾಹನ, ಅದರಲ್ಲಿದ್ದ ಬಿಗುಮುಖದ ಪೊಲೀಸರು ಲಾರಿಗಳನ್ನು ಪಕ್ಕಕ್ಕೆ ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದರು. ಗಾಡಿ ನಿಲ್ಲಿಸಿ ಹಿಂದಿರುಗಿ ನೋಡುವಷ್ಟರಲ್ಲಿ ಆ ಹುಡುಗಿ ಅಲ್ಲಿರಲಿಲ್ಲ. ಅವಳ ಅಪ್ಪನೂ (?) ಅಲ್ಲಿ ಕಾಣಲಿಲ್ಲ. ಜುಗುಪ್ಸೆಯಿಂದ ಮನೆಗೆ ಮರಳಿದೆ.
ಭಾರತದ ಸಂವಿಧಾನ, ಹ್ಯೂಮನ್ ಟ್ರಾಫಿಕಿಂಗ್ (ದೇಹ ಮಾರಾಟವನ್ನು) ನಿಷೇಧಿಸುತ್ತದೆ ಎಂದು ತರಗತಿಯಲ್ಲಿ ಪಾಠ ಮಾಡಿದೆ. ಮನಸ್ಸು ಮರಗಟ್ಟಿತ್ತು. ಕೆಲ ದಿನಗಳಲ್ಲಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ಸಹಾಯವಾಣಿ ಬಿಡುಗಡೆ ಮಾಡಬೇಕೆಂದು ಕರೆ ಬಂದಿತು. ಹಿಂದೆ ಮುಂದೆ ನೋಡದೆ ಅದಕ್ಕೆ ಒಪ್ಪಿಕೊಂಡಿದ್ದೆ.
ನನ್ನ ಓದು, ಲೈಂಗಿಕ ಕಾರ್ಯಕರ್ತರ ಬಗ್ಗೆ ಚಿತ್ರಣವೊಂದನ್ನು ಕಟ್ಟಿಕೊಟ್ಟಿತ್ತು. ಬುದ್ಧನ ಪಾದಕ್ಕೆ ಬಂದೆರಗಿದ ರಾಜನರ್ತಕಿ ಆಮ್ರಪಾಲಿ ತನ್ನ ವೇಶ್ಯಾವೃತಿಯನ್ನು ಬಿಟ್ಟು ಬಿಕ್ಕುವಾಗಿದ್ದಳು. ಅಂದರೆ 2,600 ವರ್ಷಗಳ ಹಿಂದೆಯೂ ಈ ವೃತ್ತಿಯನ್ನು ರಾಜ್ಯ ಪೋಷಿಸಿತ್ತು ಹಾಗೂ ಅದರಿಂದ ಬಿಡುಗಡೆಗೊಳಿಸುವುದು ಬುದ್ಧನ ಉದ್ದೇಶವೂ ಆಗಿರಬೇಕು. ಈ ಕಥೆಯನ್ನು ಆಧರಿಸಿ ಬಂದ ಸಿನಿಮಾ `ಆಮ್ರಪಾಲಿ'. ನಟಿ ಮೀನಾಕುಮಾರಿ ಅವರ ನಟನೆಯಿಂದ ಆ ಪಾತ್ರಕ್ಕೆ ಮತ್ತಷ್ಟು ಗಾಂಭೀರ್ಯ ಬಂದಿತ್ತು.
ಇಂತಹದೇ ಪಾತ್ರ ಬೈಬಲ್‌ನಲ್ಲಿಯೂ ಕಾಣುತ್ತದೆ. ಮೇರಿ ಮ್ಯೋಕ್‌ಡಲೀನಳನ್ನು ಜನ ವ್ಯಭಿಚಾರಿಣಿ ಎಂದು ಕರೆದು ಕಲ್ಲು ತೂರಿದಾಗ ಅಲ್ಲಿಗೆ ಬಂದ ಜೀಸಸ್ ಪಾದಕ್ಕೆ ಅವಳು ಎರಗುತ್ತಾಳೆ. ಆಕೆ ತನ್ನ ಕಣ್ಣೀರಿನಿಂದ ಏಸುವಿನ ಪಾದವನ್ನು ತೊಳೆಯುತ್ತಾಳೆ. ಪ್ರಾಯಶ್ಚಿತ್ತದಿಂದ ಅವಳು ಪಾವನಳಾಗುತ್ತಾಳೆ. ಏಸುವಿನ ಶಿಷ್ಯರಲ್ಲಿ ಒಬ್ಬಳಾಗುತ್ತಾಳೆ.
ಭಾರತೀಯ ಸಾಹಿತ್ಯದಲ್ಲಿ ಶೂದ್ರಕ ಕವಿಯ `ಮೃಚ್ಛಕಟಿಕ' ವೇಶ್ಯೆಯಾದ ವಸಂತಸೇನೆಯ ಬದುಕನ್ನು ಬಹು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಅವಳ ಪ್ರೇಮಿ ಚಾರುದತ್ತ, ಇವರ ಸುತ್ತ ಹೆಣೆದ ಕಥೆ. ದುರಂತ ಕಥೆಯೇ ಆದರೂ ಅದು ಅವಳ ಬದುಕಿನ ಬಗೆಗೆ ಜುಗುಪ್ಸೆ ಹುಟ್ಟಿಸುವುದಿಲ್ಲ. ಇದನ್ನು ಆಧರಿಸಿದ ಕಾರ್ನಾಡರ ಚಿತ್ರ `ಉತ್ಸವ್' ಸಹ ವಸಂತಸೇನೆ ಕುರಿತು ಮುಜುಗರವನ್ನೋ ಅಶ್ಲೀಲ ಭಾವನೆಯನ್ನೋ ಬಿತ್ತುವುದಿಲ್ಲ. `ಕೋಠಿ', `ಮಂಡಿ' ಇಂತಹ ಸಾಕಷ್ಟು ಸಿನಿಮಾಗಳು ಒಂದಷ್ಟು ವಾಸ್ತವ ಹಾಗೂ ರೋಚಕತೆಯೊಂದಿಗೆ ಅವರ ಬದುಕಿನ ಕಲ್ಪನೆಯನ್ನು ಕಟ್ಟಿಕೊಡುತ್ತವೆ.
ಶಿವರಾಮ ಕಾರಂತರ `ಮೈಮನಗಳ ಸುಳಿಯಲ್ಲಿ', ಬರುವ ವೇಶ್ಯೆ ಹಾಡುಗಾರ್ತಿ. ಅವಳ ಮನದ ಒಳತೋಟಿಯನ್ನು ಹಿಡಿಯುವಾಗ ಕಾರಂತರು ಎಲ್ಲೂ ಎಚ್ಚರ ತಪ್ಪುವುದಿಲ್ಲ. ಓದುಗನಲ್ಲಿ ಒಂದು ವಿಷಾದದ ಭಾವನೆ ಮಾತ್ರ ಉಳಿಯುತ್ತದೆ.
ನೇರವಾಗಿ ಲೈಂಗಿಕ ಕಾರ್ಯಕರ್ತೆಯರನ್ನೇ ಸಂಬೋಧಿಸಬೇಕಾದುದು ಈಗ ನನ್ನ ಜವಾಬ್ದಾರಿಯಾಗಿತ್ತು. ಲೈಂಗಿಕ ಕಾರ್ಮಿಕರೆಂದು, ಅವರ ಬದುಕನ್ನು ಒಂದು ವೃತ್ತಿಯಾಗಿ ಪರಿಗಣಿಸಬೇಕೆಂದು ಒಂದು ವಾದ ಕೇಳಿಬರುತ್ತಿದೆ. ಅದರಲ್ಲೂ ಲೈಂಗಿಕ ಕಾರ್ಯಕರ್ತೆಯರ ಸಮಾವೇಶಗಳಲ್ಲಿ ಅವರ ಹಲವು ಸಮಸ್ಯೆಗಳಲ್ಲಿ ಈ ವಿಚಾರವನ್ನು ಮಂಡಿಸಲಾಗುತ್ತಿದೆ.
ಅವರ ಒಳಿತಿಗಾಗಿ ದುಡಿಯುವ ಸಂಘಟನೆಗಳು ಇದನ್ನೇ ಸೂಚಿಸುತ್ತವೆ. ಈ ವಿಷಯದಲ್ಲಿ ನನ್ನ ಭಿನ್ನಮತವಿದೆ. ಅದನ್ನೊಂದು ಉದ್ಯೋಗವೆಂದು ಪರಿಗಣಿಸುವುದಾದರೆ ಮುಂದೆ ಅದೊಂದು ಉದ್ದಿಮೆಯಾಗಿಯೂ ಬೆಳೆಯುತ್ತದೆ. ಹಾಗಾದಲ್ಲಿ ಅತ್ಯಂತ ಶೋಷಣೆಗೆ ಒಳಗಾದ ಸಮುದಾಯವೆಂದು, ಲೈಂಗಿಕ ಸೇವೆಯಿಂದ ಅವರನ್ನು ಹೊರತರುವ ಆಲೋಚನೆಯೇ ತಪ್ಪಾಗುತ್ತದೆ. ದೇಹ ಮಾರಾಟವೆಂದು ಬಗೆದಲ್ಲಿ ಮಾತ್ರ ಅದು ಶೋಷಣೆಯಾಗಿ ಕಾಣುತ್ತದೆ. ಆ ಬದುಕು ಅವರ ಆಯ್ಕೆಯ ಬದುಕಾಗಿಲ್ಲ, ಬಡತನ ಅವರನ್ನು ಅಲ್ಲಿಗೆ ನೂಕಿದೆ. ಹಾಗಾಗಿ, ಅದನ್ನೊಂದು ಸಾಮಾಜಿಕ ಸಮಸ್ಯೆಯಾಗಿಯೇ ನೋಡಬೇಕಾಗಿದೆ. ಅದರಲ್ಲೂ ಸಾಮಾಜಿಕ ಮನ್ನಣೆಯನ್ನು ಪಡೆದ ಬದುಕನ್ನು ಸಾಗಿಸುತ್ತಾ ಉಳಿದವರ ಬಗೆಗೆ ಮಾತನಾಡುವುದರಲ್ಲಿ ಬೇರೆಯದೇ ಆದ ಹುನ್ನಾರುಗಳಿರುತ್ತವೆ ಎಂದು ಹೇಳಬೇಕೆಂದು ಅಲ್ಲಿಗೆ ಹೊರಟೆ.
ಅಲ್ಲಿದ್ದ ನೂರಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ನೋಡಿದ ಕೂಡಲೇ ನನ್ನ ಓದು, ಚರಿತ್ರೆಯ ಪಾಠಗಳೆಲ್ಲಾ ಹೊಟ್ಟೆ ತೊಳಸಿ ಬಾಯಿಗೆ ಬರತೊಡಗಿತು. ತೀವ್ರ ಬಡತನದ ಹೊಗೆ ಅವರನ್ನು ಆವರಿಸಿತ್ತು. ಅಲ್ಲಿದ್ದ ಬಹುತೇಕ ಹೆಣ್ಣು ಮಕ್ಕಳು ದಲಿತರು. ಬಡತನ ಅವರಲ್ಲಿ ಸೌಂದರ್ಯ, ಆಕರ್ಷಣೆ, ಯೌವನ ಯಾವುದನ್ನೂ ಉಳಿಸಿರಲಿಲ್ಲ. ಪ್ರತಿಯೊಬ್ಬರ ಹಿಂದೆ ಒಂದೊಂದು ಭೀಕರ ಕಥೆ ಅಡಗಿತ್ತು. ಮಕ್ಕಳ ಊಟ ಬಟ್ಟೆಗಾಗಿ, ತಮ್ಮ ತಂಗಿಯ ಓದಿಗಾಗಿ, ಆಸ್ಪತ್ರೆ ಕರ್ಚಿಗಾಗಿ, ಕಳೆದುಕೊಂಡ ಗಂಡನ ಸಾಲ ತೀರಿಸಲು, ಮೋಸಕ್ಕೆ ಒಳಗಾಗಿ... ಹೀಗೆ ನೂರಾರು ಕಾರಣಗಳಿಗಾಗಿ ಅವರು ದೇಹ ಒತ್ತೆ ಇಟ್ಟಿದ್ದರು.
ಅವರಿಗಾಗಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ, ಸ್ವಯಂ ಸೇವಾ ಸಂಸ್ಥೆಯೊಂದು ನಡೆಸಿದ ಕಾರ್ಯಾಗಾರದ ಕಡೆಯ ದಿನ ಅದಾಗಿತ್ತು. ನಾನು ಮಾತನಾಡಲು ಆರಂಭಿಸಿದ್ದೆ. ಇವತ್ತು ಊಟಕ್ಕೆ ನನಗೊಂದು ಉದ್ಯೋಗವಿದೆ. ಸೂರು ಇದೆ. ಆದ್ದರಿಂದ ದೊಡ್ಡ ಆದರ್ಶದ ಮಾತುಗಳನ್ನಾಡಲು ನನಗೆ ಯಾವ ನೈತಿಕತೆಯೂ ಇಲ್ಲ. ಆ ಎಲ್ಲಾ ಸೋದರಿಯರನ್ನು ನೋಡಿ ನನ್ನೊಳಗಿನ ಅಹಂ ಕರಗಿ ನೀರಾಗಿತ್ತು. ಅಪರಿಚಿತವಾದ ವ್ಯಕ್ತಿಗೆ ದೇಹವನ್ನು ಅರ್ಪಿಸುವ ಸ್ಥಿತಿ ದುರಂತವೇ ಸರಿ. ಲೈಂಗಿಕ ಕ್ರಿಯೆ ಕೇವಲ ದೇಹಕ್ಕೆ ಅನ್ವಯಿಸಿದ್ದಲ್ಲ. ಅದರ ಒಳಗೊಂದು ಮನಸ್ಸೂ ಅಡಗಿದೆ. ಹೀಗೆ ಹೇಳುತ್ತಾ ಹೋಗುವಾಗ ನನ್ನ ದನಿ ನಡುಗತೊಡಗಿತ್ತು. ಭಾವನೆಗಳು ಕಟ್ಟೆಯೊಡೆಯದಂತೆ ಸಹಿಸಿ ಮಾತು ಮುಂದುವರಿಸಿದ್ದೆ.
ಪ್ರಾಚೀನ ಕಾಲದಿಂದ ರಾಜ್ಯ, ವೇಶ್ಯಾವಾಟಿಕೆಯನ್ನು ಪೋಷಿಸಿಕೊಂಡು ಬರುತ್ತಿದೆ. ರಾಜ್ಯದ ಬೇಹುಗಾರಿಕೆಗೆ ವೇಶ್ಯೆಯರನ್ನು ಬಳಸಲಾಗುತ್ತಿತ್ತು. ಮುದ್ರಾಮಂಜೂಷ ಎಂಬ ಕೃತಿ ಚಂದ್ರಗುಪ್ತ ಹಾಗೂ ಚಾಣಕ್ಯ, ರಾಜ್ಯ ವಿಸ್ತರಣೆ ಮಾಡಿದ ಬಗೆಯನ್ನು ರಂಜನೀಯವಾಗಿ ವಿವರಿಸುತ್ತದೆ. ತಮ್ಮ ಕಾರ್ಯ ಸಾಧನೆಗಾಗಿ ಹಲವು ರಾಜರನ್ನು ಕೊಲೆ ಮಾಡುತ್ತಾರೆ. ಹಾಗೆ ಕೊಲೆ ಮಾಡುವಾಗ ವಿಷಕನ್ಯೆಯನ್ನು ಬಳಸುತ್ತಾರೆ. ಅದೊಂದು ಖಚಿತ ಚಾರಿತ್ರಿಕ ದಾಖಲೆ ಅಲ್ಲದಿದ್ದರೂ ವಿಷಕನ್ಯೆಯ ಸುಳಿವನ್ನು ಆ ಕೃತಿ ನೀಡುತ್ತದೆ.
ರಾಜರು, ಸಾಮಂತರು, ಮುಂದೆ ಪಾಳೇಗಾರರು ಇವರಿಗೆಲ್ಲಾ ವೇಶ್ಯೆಯರನ್ನು ಇರಿಸಿಕೊಳ್ಳುವುದು ಹೆಗ್ಗಳಿಕೆಯ ವಿಚಾರವಾಗಿತ್ತು. ಹತ್ತನೆಯ ಶತಮಾನದ ಶಾಸನಗಳಲ್ಲಿ ರಾಜನೊಬ್ಬ ದೇವಾಲಯಕ್ಕೆ ಹೋದರೆ ಅವನ ಹಿಂದೆ ತಟ್ಟೆ, ತಾಂಬೂಲ, ಚಾಮರ ಹಿಡಿಯುವ ಸೂಳೆಯರಿರುತ್ತಿದ್ದರೆಂದು ಬರೆಯಲಾಗಿದೆ. ಒಂದೊಂದು ಕಂಬದ ಬಳಿಯೂ ಕಂಬದ ಸೂಳೆಯರು ನಿಲ್ಲುತ್ತಿದ್ದರು. ಈ ಹೊತ್ತಿಗಾಗಲೇ ದೇವಾಲಯ ಶಿಲ್ಪಗಳಲ್ಲಿ ಸುಂದರವಾದ ಹೆಣ್ಣಿನ ಶಿಲ್ಪಗಳನ್ನು ಕೆತ್ತತೊಡಗಿದ್ದರು. ಹೊಯ್ಸಳರ ಕಾಲಕ್ಕೆ ಅದು ಉತ್ಕರ್ಷವನ್ನು ತಲುಪಿತ್ತು. ದೇಗುಲಗಳಲ್ಲಿ ಕಾಣುವ ಮದನಿಕೆಯರಿಗೆ ರೂಪದರ್ಶಿಯಾಗಿದ್ದವರು ನೃತ್ಯಗಾತಿಯರು. ದೇವದಾಸಿಯರೆಂದು ಕರೆಸಿಕೊಳ್ಳುತ್ತಿದ್ದ ಇವರು ಸಂಗೀತ, ನೃತ್ಯಕಲೆಗಳನ್ನು ಮೈಗೂಡಿಸಿಕೊಂಡು ಪೋಷಕರ ಮನ ತಣಿಸುತ್ತಿದ್ದರು. ಸಾಮಾಜಿಕವಾಗಿ ಸಾಕಷ್ಟು ಗೌರವವನ್ನು ಹೊಂದಿದ್ದರು.
ಸೂಳೇಕೆರೆ, ಬಂಗಾರದೊಡ್ಡಿ ನಾಲೆ ಇವುಗಳನ್ನು ಕಟ್ಟಿಸಿದವರು ವೇಶ್ಯೆಯರಾಗಿದ್ದರು. ಹೀಗೆ ಸಮಾಜದ ಅನುಕೂಲಕ್ಕಾಗಿ ಕೆಲಸ ಮಾಡಿ ಹೆಸರು ಮಾಡಿದ ಹೆಣ್ಣುಮಕ್ಕಳಿದ್ದಾರೆ. ವಿಜಯನಗರ ಕಾಲಕ್ಕೆ ಅವರ ರಾಜಧಾನಿಯಲ್ಲಿ ವೇಶ್ಯೆಯರ ಸಂಖ್ಯೆ ಹೆಚ್ಚಾಗಿತ್ತು. ಹಂಪಿಯಲ್ಲಿ ಅವರಿಗಾಗಿಯೇ ಮೀಸಲಾದ ಬೀದಿಯನ್ನು ಇಂದು ನೋಡಬಹುದು. ಇವರು ಹಂಪಿ ನಗರಕ್ಕೆ ಬರುತ್ತಿದ್ದ ವಿದೇಶೀಯರ ಮುಖ್ಯ ಆಕರ್ಷಣೆಯಾಗಿದ್ದರು. ವಿಜಯನಗರ ಸಾಮ್ರೋಟರು ಸೂಳೇದೆರೆ ಎಂದರೆ ಸೂಳೆಯರ ಮೇಲೆ ವಿಧಿಸುತ್ತಿದ್ದ ತೆರಿಗೆಯಿಂದ ಆದಾಯ ಗಳಿಸುತ್ತಿದ್ದರು. ಹಾಗಾದರೆ ಆ ಹೆಣ್ಣುಮಕ್ಕಳು ಯಾರು? ಯುದ್ಧಗಳಲ್ಲಿ ಸೋತ ರಾಜರಿಂದ ಪಡೆದ ಕಾಣಿಕೆಗಳಲ್ಲಿ ಹೆಣ್ಣುಮಕ್ಕಳೂ ಸೇರಿರುತ್ತಿದ್ದರು. ಇಲ್ಲವೇ ಆಕ್ರಮಣದ ಹೊತ್ತಿನಲ್ಲಿ ಸಿಕ್ಕ ಹೆಣ್ಣುಮಕ್ಕಳನ್ನು ಹೊತ್ತು ತರುತ್ತಿದ್ದರು. ವಂಶಪಾರಂಪರ್ಯವಾಗಿ ದೇವದಾಸಿಯರಾದವರೂ ಇರುತ್ತಿದ್ದರು.
ಲೈಂಗಿಕ ಸೇವೆಯಲ್ಲಿ ತೊಡಗಿದ್ದ ಮಹಿಳೆಯರ ಸ್ಥಿತಿ ಅಧೋಗತಿಯನ್ನು ತಲುಪಿದ್ದು ಬ್ರಿಟಿಷರ ಕಾಲಕ್ಕೆ. ಇಂದು ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನುಬಾಹಿರವಾದುದು. ಆದರೆ ಪರೋಕ್ಷವಾಗಿ ರಾಜ್ಯ ಅದರ ಪೋಷಣೆಯನ್ನೂ ಮಾಡುತ್ತಾ ಬಂದಿದೆ ಎಂದರೂ ತಪ್ಪಾಗಲಾರದು. ನಾಲ್ಕು ವರ್ಷಗಳ ಹಿಂದೆ ಬೆಂಗಳೂರನ್ನು ಥಾಯ್ಲೆಂಡ್ ಮಾಡುವ ಯೋಜನೆಯೂ ಇತ್ತೆಂದರೆ ಗಾಬರಿಯಾಗುತ್ತದೆ. ಬೆಂಗಳೂರು ಐ.ಟಿ ನಗರವಾಗಿ ಬೆಳೆದು ಆ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವ ಜನರನ್ನು ತಣಿಸುವ ವರ್ಗವನ್ನು ಹುಟ್ಟುಹಾಕುವ ಯೋಜನೆ ನಡೆದೇ ಇದೆ.
ಈ ಎಲ್ಲಾ ವಿಚಾರಗಳನ್ನು ಹೇಳುತಿದ್ದಂತೆ ವ್ಯವಸ್ಥಾಪಕರೊಬ್ಬರು ಎದ್ದು ನನ್ನ ಮಾತು ನಿಲ್ಲಿಸುವಂತೆ ಹೇಳಿದರು. ಅವರಿಗೆ ನಾನು ನೈತಿಕ ಬೋಧನೆ ಮಾಡುವುದು ಬೇಕಾಗಿರಲಿಲ್ಲ. ಆ ಕಸುಬಿನಲ್ಲೂ ಆತ್ಮವಿಶ್ವಾಸದಿಂದ ಬದುಕಲು ಕಲಿಸುವುದು ಅವರ ಉದ್ದೇಶವಾಗಿತ್ತು. ಸಭಿಕರಲ್ಲಿ ಕುಳಿತಿದ್ದವರೊಬ್ಬರು ಮಾತು ಮುಂದುವರಿಸಿ ಎಂದರು. ವ್ಯವಸ್ಥಾಪಕರೆಂದರು, `ನಮ್ಮ ದೇಹ ನಮ್ಮ ಹಕ್ಕು ಎಂದು ನಾವು ನಂಬಿದ್ದೇವೆ. ಇದಕ್ಕೆ ಪೂರಕವಾಗಿ ಮಾತನಾಡುವುದಾದರೆ ಮಾತು ಮುಂದುವರಿಸಿ'. ಹಾಗೆ ಆತ್ಮ ವಿಶ್ವಾಸ ತುಂಬಿ ಅವರ ಕಸುಬಿನಲ್ಲಿ ಹೆಚ್ಚು ಗಳಿಸುವಂತೆ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಆ ಸೋದರಿಯರ ಪುನರ್ವಸತಿಯನ್ನು ಬಯಸುತ್ತೇನೆಂದು ಹೇಳಿ ಮಾತು ನಿಲ್ಲಿಸಿದೆ.
ಸಹಾಯವಾಣಿಯ ಉದ್ದೇಶವೂ ಅವರೆಲ್ಲರ ಭಾವಚಿತ್ರ, ಮೊಬೈಲ್ ಸಂಖ್ಯೆಯನ್ನು ನೀಡಿ ಗಿರಾಕಿಗಳನ್ನು ಸುಲಭವಾಗಿ ಆನ್‌ಲೈನ್ ಮೂಲಕ ಪಡೆಯುವಂತೆ ಮಾಡುವುದಾಗಿತ್ತು. ಸಮಾಜ ಆಧುನಿಕವಾದರೆ ಪಿಡುಗುಗಳಿಗೆ ಆಧುನಿಕ ಸ್ವರೂಪ ಬರುತ್ತದೆ. ಆಧುನಿಕ ಸಲಕರಣೆಗಳು ಬಳಕೆಯಾಗುತ್ತವೆ. ಕೆಂಪು ದೀಪ ಸದಾ ಉರಿಯುವಂತೆ ನೋಡಿಕೊಳ್ಳಲು ಜಾಗತಿಕ ಮಾರುಕಟ್ಟೆ ಎಣ್ಣೆಯನ್ನು ಸಿದ್ಧಮಾಡುವುದರಲ್ಲಿ ಆಶ್ಚರ್ಯ ಏನಿದೆ!




ರಾಷ್ಟ್ರೀಯತೆ ಗುಂಗಿನಲ್ಲಿ ಆಧುನಿಕ ಜಗತ್ತು
Tue, 08/20/2013


ಹುಬ್ಬಳ್ಳಿ ಸಮೀಪದ ಹಳ್ಳಿಯೊಂದರಲ್ಲಿ ಭಾರತ ಮಾತೆಗೆ ದೇವಾಲಯವನ್ನು ಕಟ್ಟಿರುವ ಸುದ್ದಿ ಸ್ವಾತಂತ್ರ್ಯ ದಿನ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಚಿಕ್ಕದಾದ ಗುಡಿಯ ಒಳಗೆ ಪೀಠದ ಮೇಲೆ ಪುಟ್ಟದಾದ ವಿಗ್ರಹ ಕಾಣುತ್ತದೆ. ಅದು ಭಾರತ ಮಾತೆಯ ವಿಗ್ರಹವಂತೆ.
ಗೋಡೆಯ ಮೇಲೆ `ಓಂ' ಸಂಕೇತ, ಮುಂಭಾಗದಲ್ಲಿ ಕಾವಿ ಬಣ್ಣದ ಬಾವುಟ. ನೋಡಿದ ಕೂಡಲೇ ಯಾರಿಗಾದರೂ ಏನಿದು ದೇಶ ಪ್ರೇಮ ಎನಿಸದಿರದು. ನಿಧಾನವಾಗಿ ಗಮನಿಸಿದರೆ ಗೋಚರವಾಗುವುದು ರಾಷ್ಟ್ರೀಯತೆಯ ಚಿಹ್ನೆಗಳಲ್ಲ, ಅದನ್ನೂ ಮೀರಿದ ಹಿಂದೂ ಧಾರ್ಮಿಕ ಸಂಕೇತಗಳು. ಮತ್ತೊಂದು ಕಡೆ ಟಿ.ವಿ.ಯಲ್ಲಿ ನರೇಂದ್ರ ಮೋದಿ ಅವರ ಭಾಷಣಗಳ ಸರಮಾಲೆ. ಧರ್ಮ, ಸಂಸ್ಕೃತಿ, ರಾಷ್ಟ್ರಪ್ರೇಮ, ಅಭಿವೃದ್ಧಿ- ಈ ಪದಗಳು ಪುಂಖಾನುಪುಂಖವಾಗಿ ಬರುತ್ತವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು ಆರೂವರೆ ದಶಕ ಕಳೆದರೂ ನೂರು ವರ್ಷಗಳ ಹಿಂದಿನ ಮಾದರಿಗಳು ಇನ್ನೂ ಬದಲಾಗಲಿಲ್ಲವೇ?
ರಾಷ್ಟ್ರೀಯತೆಯ ಕಲ್ಪನೆಗೆ ಧರ್ಮ ಬೆರೆತರೆ ಮಾದಕ ದ್ರವ್ಯಗಳೆರಡನ್ನು ಬೆರೆಸಿ ಒಂದೇ ಬಾರಿಗೆ ಕುಡಿದಂತೆ. ಧರ್ಮವಾಗಲೀ, ರಾಷ್ಟ್ರೀಯತೆ ಯಾಗಲೀ ಎರಡೂ ಮತ್ತೇರಿಸುವ ವಿಚಾರಗಳೇ. ಭಾರತ ಮಾತೆಯ ಕಲ್ಪನೆ ಹುಟ್ಟಲು ಕಾರಣವಾದವರೂ ಬ್ರಿಟಿಷರೇ ಎಂದರೆ ಸೋಜಿಗವೆನಿಸಬಹುದು. ರಾಷ್ಟ್ರೀಯತೆಯ ಚಿಂತನೆ ಆರಂಭವಾಗಿ ಇಲ್ಲಿಗೆ 250 ವರ್ಷಗಳೇ ಸಂದಿವೆ. ಫ್ರಾನ್ಸ್ ಮಹಾಕ್ರಾಂತಿ ಸಂದರ್ಭದಲ್ಲಿ ಹೊಗೆಯಾಡಿದ ಈ ಚಿಂತನೆ ನೆಪೋಲಿಯನ್‌ನ ಕಾಲಕ್ಕೆ ಹೊತ್ತಿ ಉರಿಯಿತು. ಹದಿನೆಂಟನೇ ಶತಮಾನದ ಫ್ರಾನ್ಸ್‌ನ ದಾರ್ಶನಿಕರು ಹೊಸ ರಾಜಕೀಯ ಆಲೋಚನೆಯನ್ನುಹುಟ್ಟುಹಾಕಿದರು. ಸರ್ವಾಧಿಕಾರಿಗಳ ದರ್ಪವನ್ನು ಪ್ರಶ್ನೆ ಮಾಡಿದರು. ಈ ಆಲೋಚನೆಗಳು ರಾಜತ್ವದ ವಿರುದ್ಧ ಫ್ರಾನ್ಸಿನ ಜನತೆ ಸಂಘಟಿತರಾಗುವಂತೆ ಮಾಡಿತು.
ಬ್ರಿಟಿಷ್ ವಸಾಹತುವಾಗಿದ್ದ ಅಮೆರಿಕ, ವಸಾಹತು ನೀತಿಯನ್ನು ವಿರೋಧಿಸಿತು. ಅಮೆರಿಕ, ವಸಾಹತು ಆಳ್ವಿಕೆಯನ್ನು ವಿರೋಧಿಸಿ ಹೋರಾಡಿದ ಮೊದಲ ದೇಶ. 1776ರಲ್ಲೇ ಅದು ಸ್ವಾತಂತ್ರ್ಯ ಪಡೆಯಿತು. ಆನಂತರದಲ್ಲಿ ಘಟಿಸಿದ ಫ್ರೆಂಚ್ ಮಹಾಕ್ರಾಂತಿ ಯೂರೋಪಿನಲ್ಲಿ ಹೊಸ ಅಲೆಗೆ ಕಾರಣವಾಯಿತು. ಕ್ರಾಂತಿಯ ಶಿಶುವೆಂದು ಕರೆದುಕೊಂಡ ನೆಪೋಲಿಯನ್, ರಾಷ್ಟ್ರರಾಜ್ಯಗಳ ಕಲ್ಪನೆಯನ್ನು ರೂಢಿಗೆ ತರಲು ಸಹಾಯಕನಾದ. ಮಹತ್ವಾಕಾಂಕ್ಷೆಯ ನೆಪೋಲಿಯನ್ ಯೂರೋಪಿನ ದಿಗ್ವಿಜಯದ ಸಂದರ್ಭದಲ್ಲಿ ಗೆದ್ದ ಪ್ರದೇಶಗಳನ್ನು ಭಾಷೆ ಹಾಗೂ ಜನಾಂಗದ ಆಧಾರದ ಮೇಲೆ ರಾಜ್ಯಗಳನ್ನಾಗಿ ರೂಪಿಸಿದನು. ಜನಾಂಗದ ಆಧಾರದ ಮೇಲೆ ಮೊದಲ ಬಾರಿಗೆ ಜರ್ಮನಿಯನ್ನು ಒಂದು ರಾಜ್ಯವಾಗಿ ರೂಪಿಸಿದ್ದು, ಜರ್ಮನರಲ್ಲಿ ಮೂಡಿದ ಏಕತೆಯ ಭಾವನೆ ಆಸ್ಟ್ರಿಯಾದಿಂದ ಹೊರಬರಲು ಸಹಕಾರಿ ಯಾಯಿತು. ಇಂತಹ ರಾಷ್ಟ್ರೀಯ ಭಾವನೆಯನ್ನು ಬಿತ್ತುವ ಜಾಕೋಬಿನ್ ಸಂಘಕ್ಕೆ ಟಿಪ್ಪು ಸುಲ್ತಾನ್ ಸಹ ಸದಸ್ಯನಾಗಿದ್ದನು. 
ರಾಷ್ಟ್ರೀಯತೆಯ ವಿಚಾರ ಹದಿನೆಂಟು, ಹತ್ತೊಂಬತ್ತನೆಯ ಶತಮಾನದ ನೂರಾರು ವಿದ್ವಾಂಸರ, ರಾಜಕೀಯ ಧುರೀಣರ ಭಾವುಕತೆಯನ್ನು ಬೆರೆತ ಬೌದ್ಧಿಕ ಕಸರತ್ತಾಗಿತ್ತು. ರೂಸೊ, ವಾಲ್ಟೇರ್‌ರಂತಹ ದಾರ್ಶನಿಕರಿಂದ ಆರಂಭವಾದ ಚರ್ಚೆ, ಹಲವು ರೂಪಗಳನ್ನು ಪಡೆದು ಕಡೆಗೆ ಹಿಟ್ಲರ್, ಮುಸಲೋನಿಯಂತಹ ಸರ್ವಾಧಿಕಾರಿಗಳ ಕೈಸೇರಿ ಆರ್ಭಟಿಸಿತು. ಇದೆಲ್ಲವೂ ಚರಿತ್ರೆಯ ಪಾಠ ಮಾತ್ರವಾಗಿದ್ದರೆ ಓದಿ ಮರೆಯಬಹುದಿತ್ತು. ಆದರೆ ರಾಷ್ಟ್ರದ ಕಲ್ಪನೆ ಭೂತಾಕಾರವಾಗಿ ಬೆಳೆದು ಆಧುನಿಕ ಕಾಲದ ರಾಜಕೀಯ, ಭೌಗೋಳಿಕ, ಸಾಂಸ್ಕೃತಿಕ ನೆಲೆಗಟ್ಟಾಗಿ ಹೋಗಿದೆ. ಅಮೂರ್ತವಾದ `ರಾಷ್ಟ್ರ' ಕಲ್ಪನೆ ಶ್ರೇಷ್ಠತೆಯ, ಪಾವಿತ್ರ್ಯದ ಅರ್ಥ ಪಡೆದುಕೊಂಡಿದೆ. ದಿನ ಬೆಳಗಾದರೆ ಬಗೆಹರಿಯದ ಭಾರತ, ಪಾಕಿಸ್ತಾನದ ಗಡಿ ಸಮಸ್ಯೆ, ಅನುಮಾನದ ವಿರಸ, ಆಗಾಗ್ಗೆ ಉಗ್ರರ ಬಾಂಬ್ ದಾಳಿ ಇದು ರಾಷ್ಟ್ರೀಯತೆಯ ವಿಕೃತ ಕಲ್ಪನೆಗೆ ತೆರುತ್ತಿರುವ ಬೆಲೆ. ಆಧುನಿಕತೆ ಇಂತಹ ವಿಕಾರಗಳನ್ನು ಹೊತ್ತು ಸಾಗುತ್ತಿರುವುದು ಮಾತ್ರ ವಿರೋಧಾಭಾಸದ ಸಂಗತಿ.
ಭಾರತ ನಡೆಸಿದ ವಸಾಹತು ವಿರೋಧಿ ಸ್ವಾತಂತ್ರ ಹೋರಾಟವನ್ನು ರಾಷ್ಟ್ರೀಯ ಚಳವಳಿ ಎಂದೇ ಕರೆಯಲಾಗುತ್ತಿದೆ. 1857ರಲ್ಲಿ ಭಾರತೀಯ ರಾಜರೂ, ಸೈನಿಕರೂ, ಜಮೀನುದಾರರು ಎಲ್ಲರೂ ಒಟ್ಟಾಗಿ ನಾನಾ ಸಾಹೇಬ್, ಝಾನ್ಸಿ ಲಕ್ಷ್ಮೀ ಬಾಯಿ ಇವರ ನೇತೃತ್ವದಲ್ಲಿ ದಂಗೆ ಎದ್ದಾಗ ಅವರು ಮೊಘಲ್ ಸಾಮ್ರೋಜ್ಯವನ್ನು ಪುನಃ ಸ್ಥಾಪಿಸಬೇಕೆಂದಿದ್ದರೆ ಹೊರತು ರಾಷ್ಟ್ರವಾಗಲು ಹೊರಟಿರಲಿಲ್ಲ. ಮೊಘಲ್ ದೊರೆ ಬಹದ್ದೂರ್ ಷಾ ಜಾಫರ್ ಏಕತೆಯ ಸಂಕೇತವಾಗಿದ್ದರು. ಸೈನ್ಯದಲ್ಲಿ ಹಿಂದೂ ಮುಸ್ಲಿಮರೆಲ್ಲ ಒಂದಾಗಿಯೇ ಹೋರಾಡಿದ್ದರು.
ಇದೇ ಹೊತ್ತಿಗೆ ಯೂರೋಪಿನಲ್ಲಿ ಆದ ಬೆಳವಣಿಗೆಯಲ್ಲಿ ಒಂದು ಭಾಷೆ, ಒಂದು ಜನಾಂಗ, ಒಂದು ಧರ್ಮಕ್ಕೆ ಸೇರಿದ ಜನ ಒಂದು ಪ್ರದೇಶದಲ್ಲಿ ಬದುಕಿದ್ದು ತಾವು ಒಂದು ಎಂಬ ಭಾವನೆಯನ್ನು ಹೊಂದುವುದನ್ನು ರಾಷ್ಟ್ರ ಎಂದು ವ್ಯಾಖ್ಯಾನಿಸತೊಡಗಿದ್ದರು. ತಲೆಮಾರುಗಳಿಂದ ತಾವು ಒಂದು ಸಮೂಹವಾಗಿ ಬದುಕಿದ ಆ ಭಾವವೇ ರಾಷ್ಟ್ರವೆಂದು ವಿವರಿಸಿದರು. ವಾಸ್ತವದಲ್ಲಿ ಫ್ರಾನ್ಸ್‌ನಲ್ಲಿದ್ದ ಉಪಭಾಷಿಕರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡರು.
ಇಟಲಿ ಒಂದು ರಾಷ್ಟ್ರವಾಗಬೇಕೆಂದು ಏಕೀಕರಣ ಹೋರಾಟ ಆರಂಭವಾದಾಗ ಇಟಲಿ (ಇತಾಲಿಯ) ಎಂದರೇನೆಂದು ಎಷ್ಟೋ ಜನರಿಗೆ ತಿಳಿದೇ ಇರಲಿಲ್ಲ. ರಾಜನ ಹೊಸ ಹೆಂಡತಿಯ ಹೆಸರಿರಬೇಕೆಂದು ಕೇಳಿದವರೂ ಇದ್ದರು. ನಾನಾ ಬಗೆಯ ಭಾಷೆ, ಬದುಕನ್ನು ಹೊಂದಿದ ಜನರನ್ನು  ರಾಷ್ಟ್ರದ ಹೆಸರಲ್ಲಿ ಒಂದುಗೂಡಿಸಿದರು. ಬಹುಶಃ ಧರ್ಮವೊಂದೇ ಅವರಿಗಿದ್ದ ಸಾಮಾನ್ಯವಾದ ವಿಚಾರ. ಅವರೆಲ್ಲ ಕ್ರೈಸ್ತರಾಗಿದ್ದರು. ಅದೆಲ್ಲಕ್ಕಿಂತ ಮುಖ್ಯವಾಗಿ ರಾಷ್ಟ್ರದ ಕಲ್ಪನೆಯನ್ನು ಬಲವಾಗಿ ನಂಬಿದ್ದ ನಾಯಕರು ಅವರ ಭಾಷಣಗಳಿಂದ ಜನರನ್ನು ನಂಬಿಸಿದ್ದರು.
ಈ ಅಬ್ಬರ ಭಾರತೀಯರ ಕಿವಿಯನ್ನೂ ಮುಟ್ಟಿತ್ತು. ಭಾರತೀಯರಿಗಿದ್ದ ಸಮಸ್ಯೆಯೆಂದರೆ ಯೂರೋಪಿನವರಂತೆ ಹೇಳಿಕೊಳ್ಳಲು ಒಂದು `ಧರ್ಮ'ವಿರಲಿಲ್ಲ. ಯೂರೋಪ್‌ನವರ ಧರ್ಮದ ಕಲ್ಪನೆ ಸ್ಪಷ್ಟವಾಗಿತ್ತು-ಒಬ್ಬ ಪ್ರವಾದಿ, ಒಂದು ಧರ್ಮಗ್ರಂಥದಲ್ಲಿ ನಂಬಿಕೆ ಹೊಂದಿರುವುದು. ಆ ಲೆಕ್ಕಕ್ಕೆ ಇಸ್ಲಾಂ ಸಹ ಒಂದು ಧರ್ಮವಾಗಿತ್ತು. ಈ ಹೊತ್ತಿಗೆ ಭಾರತದ ಸಮಾಜ ಸುಧಾರಕರು ಹಿಂದೂ ಧರ್ಮವನ್ನು ವ್ಯಾಖ್ಯಾನಿಸತೊಡಗಿದರು. ಆರ್ಯ ಸಮಾಜದಲ್ಲಿ ಆರಂಭವಾದ ಹಿಂದೂ ಧರ್ಮದ ವ್ಯಾಖ್ಯಾನ ಹಿಂದೂ ಮಹಾಸಭಾದಲ್ಲಿ ವಿಸ್ತರಿಸಿ ರಾಜಕೀಯಗೊಂಡಿತು.
ಸಂಸ್ಕೃತ ಭಾಷೆ, ವೇದಕಾಲೀನ ಸಾಹಿತ್ಯ, ಯಜ್ಞಯಾಗಾದಿಗಳು ಇವೆಲ್ಲವನ್ನೂ ಹಿಂದೂ ಸಂಸ್ಕೃತಿ ಎಂದು ವಿವರಿಸಲಾಯಿತು. ವಿವರಿಸಿದ್ದು ವೈದಿಕ ಬದುಕನ್ನು, ಆದರೆ ಹೇಳಿದ್ದು ಮಾತ್ರ ಅದು ಹಿಂದೂ ಧರ್ಮವೆಂದು. ಭಿನ್ನ ಭಾಷೆ, ಭಿನ್ನ ಸಂಸ್ಕೃತಿಯುಳ್ಳ ಈ ನಾಡಿನಲ್ಲಿ ಉತ್ತರದಿಂದ ದಕ್ಷಿಣದವರೆಗೆ ಇದ್ದ ಸಾಮ್ಯತೆ ಎಂದರೆ ಜಾತಿ ಪದ್ಧತಿ. ಹಾಗಾಗಿ ಇಂತಹ ಸಂಕೀರ್ಣವಾದ ಪ್ರಶ್ನೆಗಳಿಗೆ ವಾಸ್ತವದ ನೆಲೆಯಲ್ಲಿ ಕಾಣದ ಅರ್ಥಕ್ಕೆ ಚರಿತ್ರೆ, ಪುರಾಣ, ಅಧ್ಯಾತ್ಮ ಭಾಷೆಯಲ್ಲಿ ಉತ್ತರ ಹುಡುಕಿಕೊಂಡವರು ಸಾವರ್ಕರ್.
ರಾಷ್ಟ್ರೀಯತೆಯ ಸಮರ್ಥನೆಗೆ ಹೊರಟ ಸಾವರ್ಕರ್ ಹಿಂದೂ ರಾಷ್ಟ್ರೀಯತೆಯ ಘೋಷಣಾ ವಾಕ್ಯದೊಂದಿಗೆ ಹೊರಬಂದರು. ಹಿಂದೂ ಒಂದು ಧರ್ಮವಲ್ಲ, ಅದು ರಾಷ್ಟ್ರವೆಂದರು. `ಹಿಂದೂ ರಾಷ್ಟ್ರೀಯತೆ'ಯ ವಾದದಲ್ಲಿ ಈ ನಾಡು ಹಿಂದೂಗಳಿಗೆ ಮಾತ್ರ ಸೇರಬೇಕು. ಆ ಹಿಂದೂಗಳು ಯಾರೆಂದು ಅವರು ಗುರುತಿಸಿದ್ದರು. ಆವರೆಗೆ ಹಿಂದೂಸ್ತಾನಿ ಎಂದು ಕರೆಸಿಕೊಳ್ಳುತ್ತಿದ್ದ ಮುಸಲ್ಮಾನರು ಶತ್ರುಗಳಾದರು. ಮುಸಲ್ಮಾನರನ್ನೂ ವಿದೇಶೀಯರೆಂದು ಮಂಡಿಸಿದರು. ಈ ನಾಡಿನಲ್ಲೇ ಹುಟ್ಟಿ ಬೆಳೆದು ಜೊತೆಯಲ್ಲೇ ಬದುಕಿದ ಜನ ಇದ್ದಕ್ಕಿದ್ದಂತೆ ಹೊರಗಿನವರಾಗಿ ಕಾಣಿಸಿದರು.
1885ರಲ್ಲಿ ಆರಂಭವಾದ ರಾಜಕೀಯ ವೇದಿಕೆಯನ್ನು `ನ್ಯಾಷನಲ್' ಕಾಂಗ್ರೆಸ್ ಎಂದು ಹೆಸರಿಸಲಾಯಿತು. ಇವರು ನಂಬಿದ `ನೇಷನ್' ಕಲ್ಪನೆಯಲ್ಲಿ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟ ಪ್ರದೇಶದ ಜನರೆಲ್ಲರೂ ಒಳಗೊಂಡಿದ್ದರು. ವಸಾಹತು ಆಳ್ವಿಕೆಯಲ್ಲಿ ಆದ ಅನ್ಯಾಯ ಅದರಲ್ಲೂ ಆರ್ಥಿಕ ಶೋಷಣೆಯನ್ನು ವಿರೋಧಿಸುವುದು ಮುಖ್ಯ ಗುರಿಯಾಗಿತ್ತು. ರಾಜಕೀಯ ದಬ್ಬಾಳಿಕೆ, ಆರ್ಥಿಕ ಶೋಷಣೆಯ ಕಾರಣಕ್ಕೆ ತಾವು ಒಂದು ಎಂದು ಭಾವಿಸಿದ್ದರಿಂದ ಅದು ರಾಜಕೀಯ ರಾಷ್ಟ್ರೀಯತೆ ಹಾಗೂ ಆರ್ಥಿಕ ರಾಷ್ಟ್ರೀಯತೆ ಎಂದು ಗುರುತಿಸಲಾಗಿದೆ. ಕಾಂಗ್ರೆಸ್ಸಿಗರು, ಹಿಂದೂ ರಾಷ್ಟ್ರೀಯವಾದಿಗಳಂತೆ ಧರ್ಮ ಹಾಗೂ ಸಂಸ್ಕೃತಿಗಳಿಗಾಗಿ ಹೋರಾಡಲಿಲ್ಲ.
ಹದಿನೆಂಟನೇ ಶತಮಾನದ ಯೂರೋಪಿನ ಕಲಾವಿದರು ರಾಷ್ಟ್ರವನ್ನು ಚಿತ್ರಿಸುವಾಗ ಹೆಣ್ಣಿನ ರೂಪಕದಲ್ಲಿ ಕಂಡರು. ಈ ರೂಪಕಗಳು ಜನಪ್ರಿಯವಾದವು. ಆ ಸಂದರ್ಭದಲ್ಲಿ ಹುಟ್ಟಿದ `ತಾಯ್ನೊಡು' (ಮದರ್ ಲ್ಯಾಂಡ್) ಸಂಬೋಧನೆ ರಾಷ್ಟ್ರೀಯತೆಯ ಅತ್ಯಂತ ಪ್ರಬಲ ಭಾವುಕ ರೂಪಕವಾಗಿ ಮೂಡಿಬಂತು. ಜರ್ಮನಿ `ಫಾದರ್ ಲ್ಯಾಂಡ್' ಎಂದು ಕರೆದುಕೊಂಡರೆ, ಸಾವರ್ಕರ್ ಸಹ ಹಾಗೆ ಸಂಬೋಧಿಸುವುದನ್ನು ಬಯಸಿದ್ದರು. ಆದರೆ ಭಾರತೀಯರು ಇಂಗ್ಲಿಷರನ್ನು ಅನುಸರಿಸಿ ತಾಯ್ನೊಡಿನ ರೂಪಕಕ್ಕೆ ಹೆಚ್ಚು ಮಾರುಹೋದರು. ಹಾಗೆ ಹತ್ತೊಂಬತ್ತನೆಯ ಶತಮಾನದಲ್ಲಿ ಹುಟ್ಟಿ ಬಂದವಳು `ಭಾರತ ಮಾತೆ'.
ಅಮೂರ್ತವಾಗಿದ್ದ ರಾಷ್ಟ್ರೀಯತೆಯ ಕಲ್ಪನೆಗೆ ಮೂರ್ತಸ್ವರೂಪ ಬರತೊಡಗಿತು. ಬಂಗಾಳದಲ್ಲಿ ಭಾರತ ಮಾತೆಯನ್ನು ಕಾಳಿಕಾ ಮಾತೆಯಲ್ಲಿ ಬೆಸೆದು ನೋಡತೊಡಗಿದಾಗ ಕಲ್ಪಿತ ರಾಷ್ಟ್ರೀಯತೆಗೆ ಧರ್ಮವೂ ಬೆರೆತು ಜನಸಾಮಾನ್ಯರ ಮನಸ್ಸನ್ನು ಸೂರೆಗೊಳ್ಳಲು ಭಾವನೆ ಹದಗೊಂಡಿತು. ಧರ್ಮ ಹಾಗೂ ರಾಷ್ಟ್ರೀಯತೆಯನ್ನು ಬೆರೆಸಿ ವಿವರಿಸಿದ ಬಂಕಿಮರು `ವಂದೇ ಮಾತರಂ' ಗೀತೆಯನ್ನು ಬರೆದರು.  ಕಾಂಗ್ರೆಸ್‌ನಲ್ಲಿದ್ದ ಉಗ್ರರಾಷ್ಟ್ರೀಯ ವಾದಿಗಳಾದ ಅರವಿಂದ ಘೋಷ್ ಅವರು ಕಾಳಿಕಾ ಮಾತೆಯ ಮುಂದೆ ದೀಕ್ಷೆಯನ್ನು ನೀಡುವ ಆಚರಣೆಯನ್ನು ಅನುಶೀಲನಾ ಸಮಿತಿಯಲ್ಲಿ ರೂಢಿಸಿದರು. ರಾಷ್ಟ್ರೀಯತೆಯನ್ನು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ವಿವರಿಸಿದರು.
ದುರಂತವೆಂದರೆ ಈ ಆಚರಣೆಗಳು ಮುಸಲ್ಮಾನರನ್ನು ರಾಷ್ಟ್ರೀಯ ಹೋರಾಟದಿಂದ ದೂರವಿಡತೊಡಗಿತು. ಇದರ ರಾಜಕೀಯ ಲಾಭ ಮಾಡಿಕೊಂಡವರು ಮಾತ್ರ ಬ್ರಿಟಿಷರು. ಜನರನ್ನು ಒಂದುಗೂಡಿಸಲು ತಿಲಕರು ಆರಂಭಿಸಿದ ಶಿವಾಜಿ ಜಯಂತಿ, ಗಣೇಶ ಚತುರ್ಥಿಗಳು ಮುಂದೆ ಶಿವಸೇನೆಯ ಭಾಗವಾದುದನ್ನು ಇಲ್ಲಿ ಗಮನಿಸಬಹುದು. 
ಕಾಂಗ್ರೆಸ್‌ನ್ಲ್ಲಲಿದ್ದ ಹಿಂದೂ ಸಂಪ್ರದಾಯ ವಾದಿಗಳು ಪಾಶ್ಚಿಮಾತ್ಯ ಪ್ರಭಾವದಿಂದ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಬಯಸುತ್ತಿದ್ದರೇ ಹೊರತು ಹಿಂದೂ ರಾಷ್ಟ್ರೀಯತೆಯನ್ನು ಬೋಧಿಸಿರಲಿಲ್ಲ. ಹಿಂದೂ ರಾಷ್ಟ್ರೀಯತೆ ಮುಸಲ್ಮಾನರಿಗೆ ನೀಡಿದ ಮೀಸಲಾತಿಯನ್ನು ವಿರೋಧಿಸಿತು. ಈ ಎಲ್ಲಾ ಬೆಳವಣಿಗೆ ಇಸ್ಲಾಂ ಮೂಲಭೂತವಾದವನ್ನು ಹುಟ್ಟುಹಾಕಲು ಕಾರಣವಾಗಿತ್ತು. ಜಿನ್ನಾರಿಗೆ ಇಸ್ಲಾಂ ರಾಷ್ಟ್ರದ ಆಲೋಚನೆ ಬರುವ ಹೊತ್ತಿಗೆ ಎರಡನೇ ಮಹಾಯುದ್ಧ ಆರಂಭವಾಗಿತ್ತು.
ಭಾರತದಲ್ಲಿ ವೈವಿಧ್ಯಮಯವಾದ ಸಮುದಾಯಗಳಿರುವುದರಿಂದ ಇದು ಒಂದು ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ ಎಂದು ಗಾಂಧೀಜಿ ಹೇಳುತ್ತಿದ್ದರು. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಗಾಂಧೀಜಿಯ ರಾಷ್ಟ್ರೀಯತೆಯ ಆವೇಶ `ಮಾಡು ಇಲ್ಲವೇ ಮಡಿ' ಎಂಬ ಕರೆಯಲ್ಲಿ ಮೊಳಗಿತು. ಅವರು ರಾಷ್ಟ್ರೀಯವಾದಿಯಾಗಿದ್ದರು ಹಾಗೂ ತಾನು ಹಿಂದೂ ಎಂದೂ ಕರೆದುಕೊಳ್ಳುತ್ತಿದ್ದರು. ಆದರೆ ಹಿಂದೂ ರಾಷ್ಟ್ರೀಯವಾದಿ ಆಗಿರಲಿಲ್ಲ. ಹಿಂದೂ, ಮುಸ್ಲಿಂ ಏಕತೆಯಲ್ಲಿ ಸ್ವಾತಂತ್ರ್ಯ ಹೋರಾಟದ ಬಲವಿದೆ ಎಂದು ನಂಬಿದ್ದರು. ಪಾಕಿಸ್ತಾನದ ಪ್ರತ್ಯೇಕತೆಯನ್ನು ತೀವ್ರವಾಗಿ ವಿರೋಧಿಸಿದರು.    
ಇಪ್ಪತ್ತನೇ ಶತಮಾನದಲ್ಲಿ ಯೂರೋಪ್‌ನ ಕೆಲವು ರಾಷ್ಟ್ರಗಳಿಗೆ ರಾಷ್ಟ್ರೀಯತೆಯ ಕಲ್ಪನೆಯಲ್ಲಿ ಜನರನ್ನು ಒಂದುಗೂಡಿಸಲು ಸಾಧ್ಯವಾಗಿತ್ತು. ಆರ್ಥಿಕ ಪೈಪೋಟಿಯಿಂದ ಆರಂಭಗೊಂಡ ಧೋರಣೆ ರಾಷ್ಟ್ರ ವಿಸ್ತರಣೆಯ ಕಡೆಗೆ ಹೊರಳಿತು. ಅತಿಯಾದ ರಾಷ್ಟ್ರೀಯತೆ ಭಾವನೆ ಫ್ಯಾಸಿಸ್ಟ್ ರಾಷ್ಟ್ರಗಳನ್ನು ರೂಪಿಸಿತು. ಜನಾಂಗ ದ್ವೇಷ ಅದರ ನೆಲೆಗಟ್ಟಾಯಿತು. ಫ್ಯಾಸಿಸ್ಟ್ ನಾಯಕರು ಜನರ ಭಾವನೆಗಳನ್ನು ತಮ್ಮ ಮಹತ್ವಾಕಾಂಕ್ಷೆಗೆ ತಕ್ಕ ಹಾಗೆ ರೂಪಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಫ್ಯಾಸಿಸಂ ಅನ್ನು ಮೆರೆದ ಜರ್ಮನಿ, ಜಪಾನ್, ಇಟಲಿ ಇವುಗಳ ಉತ್ಕರ್ಷ ಎರಡನೆಯ ಮಹಾಯುದ್ಧದಲ್ಲಿ ಪರಿಸಮಾಪ್ತಿಯಾಯಿತು.
ಎರಡನೆಯ ಮಹಾಯುದ್ಧದ ನಂತರ ಹಲವು ಹೊಸ ರಾಷ್ಟ್ರಗಳು ಉದಯಿಸಿದವು. ಇಂದು ಬಹುತೇಕ ವಸಾಹತು ಆಳ್ವಿಕೆ ಕೊನೆಗೊಂಡಿದೆ, ಆದರೆ ಜನಾಂಗ ದ್ವೇಷ ಕೊನೆಗೊಳ್ಳಲಿಲ್ಲ. ಜನಾಂಗ ನೆಲೆಯ ರಾಷ್ಟ್ರಗಳ ಹುಟ್ಟು ಮುಂದುವರೆದಿದೆ. ರಷ್ಯಾದಿಂದ ಹೊರ ಬಂದ ದೇಶಗಳ ತಳಹದಿ ಜನಾಂಗ ಕಲ್ಪನೆಯೇ ಆಗಿದೆ.
ಇದೇ ಕಾರಣದಿಂದ ಬಹು ಕಾಲದ ಹೋರಾಟದ ನಂತರ ಜೆಕ್ ಮತ್ತು ಸ್ಲೊವಾಕಿಯಾ ಬೇರ್ಪಟ್ಟವು. ರಾಷ್ಟ್ರದ ಕಲ್ಪನೆ ಭೂತಾಕಾರವಾಗಿ ಬೆಳೆದು ಆಧುನಿಕ ಕಾಲದ ರಾಜಕೀಯ, ಭೌಗೋಳಿಕ, ಸಾಂಸ್ಕೃತಿಕ ನೆಲೆಗಟ್ಟಾಗಿ ಹೋಗಿದೆ. ಅಮೂರ್ತವಾದ ಈ ಕಲ್ಪನೆ ಶ್ರೇಷ್ಠತೆಯ, ಪಾವಿತ್ರ್ಯದ ಅರ್ಥಪಡೆದುಕೊಳ್ಳತೊಡಗಿತು. ರಾಜತ್ವವನ್ನು, ವಸಾಹತು ಆಳ್ವಿಕೆಯನ್ನು ಉರುಳಿಸಲು `ನ್ಯಾಷನಲಿಸಂ' ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ ನಿಜ, ಆದರೆ ಅದೇ ಸಮಯಕ್ಕೆ ರಾಷ್ಟ್ರಗಳು ತಮ್ಮ ಸುತ್ತ ಕೃತಕ ಗೋಡೆಯನ್ನು ಹಾಕಿಕೊಂಡು ಸಂಘರ್ಷಕ್ಕೆ ಸದಾ ಸಿದ್ಧವಾಗಿವೆ.
ರಾಷ್ಟ್ರೀಯತೆ ಅವಾಸ್ತವಿಕ ನೆಲೆಯಲ್ಲಿ ಹುಟ್ಟಿದ ತರ್ಕ ಎಂದು ಹೇಳಲು ಸಾಧ್ಯವಾಗಿದ್ದು ರವೀಂದ್ರನಾಥ ಟ್ಯಾಗೋರರಿಗೆ. `ನಾನು ರಾಷ್ಟ್ರಗಳನ್ನು ವಿರೋಧಿಸುತ್ತೇನೆ' ಎಂದು ನೇರವಾಗಿ ಬರೆದವರು ಅವರು. ಯೂರೋಪಿನ ರಾಷ್ಟ್ರದ ಕಲ್ಪನೆಯಲ್ಲಿ ಒಂದು ಧರ್ಮವನ್ನು ಹೇಳುವುದು ಸಹಜವಾಗಿತ್ತು. ಏಕೆಂದರೆ ಕ್ರೈಸ್ತ ಧರ್ಮ ಹರಡುವಾಗಲೇ ಅಲ್ಲಿನ ವೈವಿಧ್ಯ ಅಳಿಸಿಹೋಗಿತ್ತು. ಭಾರತದ ವಿಚಾರದಲ್ಲಿ ಟ್ಯಾಗೋರರು ಹಿಂದೂ ಧರ್ಮವನ್ನು ಒಂದು ಭ್ರಮೆಯೆಂದೇ ತಿಳಿದಿದ್ದರು.




ಕಾಮೆಂಟ್‌ಗಳಿಲ್ಲ: