ಬುಧವಾರ, ಅಕ್ಟೋಬರ್ 18, 2017

ಸ್ಪೇನ್ ದೇಶದ ಕೆಟಲೋನಿಯಾ ಬಿಕ್ಕಟ್ಟು: ರಾಷ್ಟ್ರತ್ವದ ಆಯ್ಕೆ


  ಅನುಶಿವಸುಂದರ್
Image result for spain nationality in spanish
ಕೆಟಲೋನಿಯಾ ಬಿಕ್ಕಟ್ಟಿನಿಂದ ಇತರ ರಾಷ್ರಪ್ರಭುತ್ವಗಳು ಸಾಕಷ್ಟು ಪಾಠಗಳನ್ನು ಕಲಿಯುವುದಿದೆ.

ರಾಷ್ಟ್ರೀಯತಾ ಸಮಸ್ಯೆಯು ಯೂರೋಪಿನಲ್ಲಿ ಹೆಚ್ಚು ಕಡಿಮೆ ಸಂಪೂರ್ಣವಾಗಿ ಬಗೆಹರಿದಿದೆ ಎಂದೇ ಈವರೆಗೆ ಭಾವಿಸಲಾಗಿತ್ತು. ಯೂರೋಪೇತರ ಪ್ರಪಂಚದಲ್ಲಿ ಅದರಲ್ಲೂ ಯೂರೋಪಿನ ಮಾಜಿ ವಸಾಹತು  ಮತ್ತು ಅರೆವಸಾಹತುಗಳಲ್ಲಿ ರಾಷ್ಟ್ರೀಯತೆಯ ಪ್ರಶ್ನೆಯು ಇನ್ನೂ ತೀವ್ರ ಹಿಂಸಾಚಾರ ಮತ್ತು ಸಂಘರ್ಷಗಳಿಗೆ ಕಾರಣವಾಗಿರುವುದು ದೇಶಗಳು ಹಿಂದುಳಿದಿರುವಿಕೆಗೆ ಸಾಕ್ಷ್ಯವೆಂಬಂತೆ ಅಂತರರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸುತ್ತಿದ್ದವು. ಸ್ಪೇನ್ ದೇಶದ ಈಶಾನ್ಯ ಪ್ರಾಂತ್ಯವಾದ ಕೆಟಲೋನಿಯಾದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳು ಐರೋಪ್ಯ ಮಿಥ್ಯೆಯನ್ನು ಸಂಪೂರ್ಣವಾಗಿ ನಾಶಗೊಳಿಸಿದೆ.

ಸ್ಪೇನಿನ ಸಾಂವಿಧಾನಿಕ ನ್ಯಾಯಾಲಯವನ್ನು ಮತ್ತು ಕೇಂದ್ರ ಸರ್ಕಾರವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕೆಟಲೋನಿಯಾ ಪ್ರಾಂತ್ಯವು ೨೦೧೭ರ ಅಕ್ಟೋಬರ್ ರಂದು ತನ್ನ ಜನಕ್ಕೆ ಪ್ರತ್ಯೇಕ ರಾಷ್ಟ್ರ ಬೇಕೆ ಎಂಬ ಬಗ್ಗೆ ಜನಮತಗಣನೆ ನಡೆಸಿತು. ಕೂಡಲೇ ಸ್ಪೇನ್ ಪ್ರಭುತ್ವವು ಜನರ ಮೇಲೆ ದಮನ ಮಾಡಲು ಪ್ರಾರಂಭಿಸಿತು. ಹಾಗಿದ್ದರೂ ಅಸಂಖ್ಯಾತ ಜನ ತಮ್ಮ ಮತ ಚಲಾಯಿಸಲು ಮುಂದೆಬಂದರು. ಆದರೆ ಸ್ಪಾನಿಶ್ ಪೊಲೀಸರು ಶಾಂತಿಯುತವಾಗಿ ಮತದಾನ ನಡೆಸುತ್ತಿದ್ದ ಜನತೆಯ ಮೇಲೆ ದಾಳಿ ನಡೆಸಿ ನೂರಾರು ಜನರನ್ನು ಗಾಯಗೊಳಿಸಿದರು. ಇಷ್ಟಾದರೂ ಶೇ. ೪೨.೩ರಷ್ಟು ಜನ ಮತದಾನ ಮಾಡಿದರು ಮತ್ತು ಅವರಲ್ಲಿ ಶೇ.೯೦.೯ರಷ್ಟು ಜನ ಕೆಟಲೋನಿಯಾದ ಸ್ವಾತಂತ್ಯದ ಪರವಾಗಿ ಮತ ಚಲಾಯಿಸಿದ್ದರು. ಆದರೂ ಕೆಟಲೋನಿಯಾದೊಳಗಡೆಯೇ ಸ್ವತಂತ್ರ ಕೆಟಲೋನಿಯಾವನ್ನು ವಿರೋಧಿಸುವ ಜನರಿದ್ದು ಅವರು ಮತದಾನವನ್ನು ಬಹಿಷ್ಕರಿಸಿದ್ದರು. ಆದರೂ ಇದು ಕೆಟಲೋನಿಯಾ ರಾಷ್ಟ್ರೀಯತೆಗೆ ದಕ್ಕಿದ ಒಂದು ನೈತಿಕ ವಿಜಯವೇ ಆಗಿತ್ತು. ಮತ್ತೊಂದೆಡೆ ತನ್ನ ಹಿಂಸಾಚಾರಗಳ ಕಾರಣದಿಂದಾಗಿ ಸ್ಪೇನಿನ ಪ್ರಭುತ್ವ ಬಯಲುಗೊಂಡಿತ್ತು. ಹಿಂದೆ ವಸಾಹತು ವಿರೋಧಿ ರಾಷ್ಟ್ರೀಯತೆಗಳು ಅನುಸರಿಸಿದ್ದ ನಾಗರಿಕ ಅಸಹಕಾರಗಳ ಹಿಂದಿದ್ದ ತರ್ಕವೇ ಈಗಿನ ಸ್ಪೇನ್ ಸರ್ಕಾರವನ್ನು ತಲೆತಗ್ಗಿಸುವಂತೆ ಮಾಡಿತ್ತು. ತಮ್ಮ ವಸಾಹತು ಅಧಿಪತ್ಯವು ಹೇಗೆ ಕೊನೆಗೊಂಡಿತೆಂಬ ಇತಿಹಾಸವನ್ನೊಮ್ಮೆ ಐರೋಪ್ಯ ಪ್ರಭುತ್ವಗಳು ನೆನೆಸಿಕೊಳ್ಳುವುದು ಒಳಿತು.
Image result for catalonia independence

ಸ್ಪೇನಿನ ಸರ್ವಾದಿಕಾರಿ ಫ್ರಾನ್ಸಿಸ್ಕೊ ಪ್ರಾನ್ಕೋನ ಫ್ಯಾಸಿಸ್ಟ್ ಆಳ್ವಿಕೆಯು ಜಾರಿಮಾಡಿದ್ದ ಭೀಕರ ದಮನಕಾಂಡಕ್ಕೆ ಪ್ರತಿಕ್ರಿಯೆಯಾಗಿ ಕೆಟಲೋನಿಯಾ ಜನರ ಸ್ವನಿರ್ಣಯಾಧಿಕಾರದ ಆಶೋತ್ತರಗಳು ಬಲಿಷ್ಠಗೊಂಡವು. ಫ್ರಾನ್ಕೋನ ಆಳ್ವಿಕೆಯು ಕೆಟಲಾನ್ ಭಾಷೆಯನ್ನು ನಿಷೇಧಿಸಿದ್ದು ಮಾತ್ರವಲ್ಲದೆ ಯಾವುದೇ ಬಗೆಯ ಕೆಟಲಾನ್ ಹೆಸರುಗಳನ್ನು ಬಳಸುವುದನ್ನೂ ಸಹ ನಿಷೇಧಿಸಿತ್ತು. ಆದರೆ ದಮನವೇ ಕೆಟಲನ್ನಿನ ಸಾಂಸ್ಕೃತಿಕ ಪುನರುತ್ಥಾನಕ್ಕೂ ದಾರಿಮಾಡಿಕೊಟ್ಟಿತು. ಸ್ಪಾನಿಷ್ ಭಾಷೆಯ ಹೇರಿಕೆಯನ್ನು ಪ್ರತಿರೋಧಿಸುತ್ತಾ ಕೆಟಲನ್ನರು ತಮ್ಮ ಭಾಷೆಯನ್ನು ಖಾಸಗಿಯಾಗಿ ಬಳಸುತ್ತಾ, ಬೆಳಸುತ್ತಾ ಒಂದು ಮಹಾನ್ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಹಿರಿಮೆಗೆ ಕಾರಣರಾದರು. ಹೀಗಾಗಿ ಕಟೆಲನ್ ರಾಷ್ಟ್ರೀಯತೆಯು ಒಂದು ಪ್ರಬಲವಾದ ಸಾಂಸ್ಕೃತಿಕ ಮತ್ತು ಭಾಷಿಕ ರಾಷ್ಟ್ರೀಯತೆಯಾಗಿದೆ. ಫ್ರಾನ್ಕೋನ ಫ್ಯಾಸಿಸ್ಟ್ ಆಳ್ವಿಕೆಯಲ್ಲಿ ಕೆಟಲಾನ್ ಪ್ರಾಂತ್ಯವು ಅತ್ಯಂತ ಅಭಿವೃದ್ಧಿ ಹೊಂದಿ ಇಡೀ ಯೂರೋಪಿನಲ್ಲೇ ಸಂಪದ್ಭರಿತ ಪ್ರಾಂತ್ರ್ಯವಾಗಿ ಬೆಳೆದದ್ದೂ ಸಹ ನಿಜವೇ. ಫ್ಯಾಸಿಸ್ಟ್ ಆಳ್ವಿಕೆಯ ನಿಯಂತ್ರಣದಲ್ಲಿರುವ ಕೆಲವು ಪ್ರಾಂತ್ಯಗಳು ಹೀಗೆ ಅಭಿವೃದ್ಧಿ ಹೊಂದಿಬಿಡುವುದು ಒಮ್ಮೊಮ್ಮೆ ಸಂಭವಿಸಿಬಿಡುತ್ತದೆ. ಇದು ಕೆಟಲನ್ ರಾಷ್ಟ್ರೀಯವಾದಿಗಳಿಗೆ ತಾವು ಒಂದು ಸ್ವತಂತ್ರ ರಾಷ್ಟ್ರವಾಗಿ ಉಳಿದು ಬೆಳೆಯುವುದು ಸಾಧ್ಯವೆಂಬ ವಿಶ್ವಾಸವನ್ನು ಗಳಿಸಿಕೊಟ್ಟಿದೆ. ಆದರೆ ತಮ್ಮ ಪ್ರಾಂತ್ಯದ ಅಭಿವೃದ್ಧಿಯ ಫಲವನ್ನು ಸ್ಪೇನಿನ ಇತರ ಭಾಗಗಳೊಂದಿಗೆ ಹಂಚಿಕೊಳ್ಳಲು ತಯಾರಿಲ್ಲದ ಕೆಟಲನ್ನಿಗರ ಸ್ವಾರ್ಥವೇ ಕೆಟಲನ್ ರಾಷ್ಟ್ರೀಯತೆಯ ಹಿಂದಿರುವ ಏಕೈಕ ಪ್ರೇರಣೆಯೆಂಬ ಅಪಪ್ರಚಾರವೂ ಹೋರಾಟದ ಬಗ್ಗೆ ನಡೆಯುತ್ತಿದೆ. ಬಗೆಯ ಅಪಪ್ರಚಾರದಲ್ಲಿ ತೊಡಗಿರುವವರ ಹಿಂದಿನ ಉದ್ದೇಶವು ಅರ್ಥವಾಗುವಂಥದ್ದೇ. ಒಂದೆಡೆ ಕೆಟಲೋನಿಯಾವನ್ನು ಕಳೆದುಕೊಂಡರೆ ಸ್ಪೇನಿಗೆ ಬೃಹತ್ ಆರ್ಥಿಕ ಹಿನ್ನೆಡೆಯಾಗಲಿದೆ. ಮತ್ತೊಂದೆಡೆ ಐರೋಪ್ಯ ಒಕ್ಕೂಟ (ಇಯು) ಇತರ ದೇಶಗಳಿಗಂತೂ ಕೆಟಲೋನಿನ ವಿಜಯ ತಮ್ಮ ತಮ್ಮ ದೇಶಗಳಲ್ಲಿ ಇದೇ ರೂಪದ ಹೋರಾಟಗಳನ್ನು ಹುಟ್ಟಿಹಾಕಿಬಿಡಬಹುದೆಂಬ ಆತಂಕವನ್ನೇ ಹುಟ್ಟುಹಾಕಿದೆ.
Image result for catalonia independence

ಕೆಟಲನ್ ರಾಷ್ಟ್ರೀಯತೆಯ ಬಗೆಗಿನ ಜನಮತಗಣನೆಯನ್ನು ವಿರೋಧಿಸುತ್ತಿರುವವರು ಮಾಡುವ ಮುಖ್ಯವಾದ ಆರೋಪ ಅದು ಕಾನೂನು ಬಾಹಿರವೆಂಬುದು. ಇಂಥಾ ಜನಮತಗಣನೆಯನ್ನು ಒಂದು ರಾಷ್ಟ್ರೀಯ ಸರ್ಕಾರ ನಡೆಸಬಹುದೇ ವಿನಃ ಪ್ರಾದೇಶಿಕ ಸರ್ಕಾರಗಳಲ್ಲವೆಂಬ ತರ್ಕದ ಆಧಾರಲ್ಲಿ ಸ್ಪೇನಿನ ಸಾಂವಿಧಾನಿಕ ಕೋರ್ಟು ಜನಮತಗಣನೆಯನ್ನು ಕಾನೂನು ಬಾಹಿರವೆಂದು ಘೋಷಿಸಿತ್ತು. ಆದರೆ ವಾದಸರಣಿ ಮೇಲ್ನೋಟಕ್ಕೆ ಅತಾರ್ಕಿಕವಾಗಿಯೂ ಮತ್ತು ಹಾಸ್ಯಾಸ್ಪದವಾಗಿಯೂ ಇದೆ. ವಾದಸರಣಿ ಅತಾರ್ಕಿಕವೇಕೆಂದರೆ ಯಾವುದೇ ರಾಷ್ಟ್ರೀಯ ಪ್ರಭುತ್ವದ ಪ್ರಧಾನ ಲಕ್ಷ ಅದರ ಭೌಗೋಳಿಕ ಸಮಗ್ರತೆಯನ್ನು ಕಾಪಾಡಿಕೊಳ್ಳುವುದೇ ಆಗಿರುವಾಗ ಅಂಥ ಒಂದು ರಾಷ್ಟ್ರೀಯ ಸರ್ಕಾರ ತಾನೇ ವಿಘಟಿತಗೊಳ್ಳುವ ಕ್ರಮವನ್ನು ಕೈಗೊಳ್ಳುತ್ತದೆಂದು ನಿರೀಕ್ಷಿಸುವುದು ಮೂರ್ಖತನ. ಒಂದು ರಾಷ್ಟ್ರವಾಗಿ ರೂಪುಗೊಂಡು ಒಂದು ಪ್ರಭುತ್ವವನ್ನು ರೂಪಿಸಿಕೊಳ್ಳುವುದು ಜನತೆಯ ಪ್ರಾಥಮಿಕ ಹಕ್ಕು; ಅದು ಹಾಲಿ ಅಸ್ಥಿತ್ವದಲ್ಲಿರುವ ರಾಷ್ಟ್ರಪ್ರಭುತ್ವಗಳು ನೀಡುವುದಕ್ಕೆ ಮೊದಲಿಂದಲೂ ಅಸ್ಥಿತ್ವದಲ್ಲಿದ್ದು, ಯಾವ ಹಾಲೀ ರಾಷ್ಟ್ರಪ್ರಭುತ್ವಗಳು ಅಂಥ ಹಕ್ಕನ್ನು ಕೊಡುವುದಾಗಲೀ, ಕಿತ್ತುಕೊಳ್ಳುವುದಾಗಲೀ ಮಾಡಲು ಸಾಧ್ಯವಿಲ್ಲ.

ವಾದರಸರಣಿಯು ಹಾಸ್ಯಾಸ್ಪದವೇಕೆಂದರೆ ಅದು ರಾಷ್ಟ್ರೀಯ ಸರ್ಕಾರಗಳು ಸಂಘಟಿಸುವ ಎಲ್ಲಾ ಜನಮತಗಣನೆಗಳು ತನ್ನಂತೆ ತಾನೇ ಸರ್ವಮಾನ್ಯವೆಂಬ ತಿಳವಳಿಕೆಯನ್ನು ಹೊಂದಿದೆ. ಇತ್ತೀಚೆಗೆ ಬ್ರೆಕ್ಸಿಟ್ ವಿಷಯದಲ್ಲಿ ಯೂರೋಪ್ ಸ್ವತಃ ಎದುರಿಸಬೇಕಾದ ದ್ವಂದ್ವಗಳ ನಂತರವೂ ಮಾತುಗಳನ್ನಾಡುವುದು ಇನ್ನೂ ಹಾಸ್ಯಾಸ್ಪದವಾಗಿ ಕಾಣುತ್ತದೆ. ಬ್ರೆಕ್ಸಿಟ್ ಸಂದರ್ಭದಲ್ಲಿ, ಬ್ರಿಟನ್ನಿನ ಬಲಪಂಥೀಯ ಸರ್ಕಾರವು ಜನಮತಗಣನೆಗೆ ಮುನ್ನ ಹೊರದೇಶೀಯರ ಬಗ್ಗೆ ಸಾಕಷ್ಟು ಭೀತಿಯನ್ನು, ಜನಾಂಗೀಯವಾದವನ್ನೂ ಹುಟ್ಟುಹಾಕಿ. ಅದರ ಜೊತೆಜೊತೆಗೆ ಪ್ರತ್ಯೇಕಗೊಳ್ಳುವುದರ ಮೂಲಕ ಬ್ರಿಟನ್ ತನ್ನ ಹಳೆಯ ವೈಭವದ ವಸಾಹತುಶಾಹಿ ದಿನಗಳಿಗೆ ಮರಳಲಿದೆಯೆಂಬ ಉನ್ಮಾದವನ್ನು ಹುಟ್ಟುಹಾಕಿತು. ತದನಂತರ ಬ್ರಿಟನ್ ಪ್ರತ್ಯೇಕ ಸಾರ್ವಭೌಮಿ ರಾಷ್ಟ್ರವಾಗಬೇಕೋ ಅಥವಾ ಇತರ ಬಡ ಯೂರೋಪಿಯನ್ನರಿಂದ ಶೋಷಣೆಗೆ ತುತ್ತಾಗಬೇಕೋ ಎಂಬ ಬಗ್ಗೆ ಮತ ಚಲಾಯಿಸಲು ಕೇಳಲಾಯಿತು. ಒಂದು ಅತ್ಯಲ್ಪ ಬಹುಮತದದಿಂದ ಬ್ರಿಟನ್ ಬೇರೆಯಾಗಬೇಕು ಎಂಬ ತೀರ್ಪು ಬಂದ ತಕ್ಷಣ ಸರ್ಕಾರವು ಜನತೆಯ ಆಶಯವನ್ನು ಸಂಸತ್ತಿಗೆ ಕೂಡ ತೆಗೆದುಕೊಂಡುಹೋಗದೇ ಅಥವಾ ಒಂದು ಪ್ರಜಾತಾಂತ್ರಿಕ ತೀರ್ಮಾನ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಯಾವುದೇ ಇತರ ಪರಿಶೀಲನೆಗೆ ಕಿಂಚಿತ್ತೂ ಒಳಪಡಿಸದೆ ನೇರವಾಗಿ ಜಾರಿಗೆ ತರಲು ತೀರ್ಮಾನಿಸಿತು. ಇದು ಇಡೀ ಪ್ರಕ್ರಿಯೆಯಲ್ಲಿ ಬ್ರಿಟನ್ನಿನಲ್ಲಿ ಕಾರ್ಯಶೀಲರಾಗಿದ್ದ ಇತರ ಯೂರೋಪಿಯನ್ನರು ಬ್ರಿಕ್ಸಿಟ್ ಅನ್ನು ನೋಡುವ ರೀತಿ. ಆದರೂ ಇವೆಲ್ಲವನ್ನು ಕಾನೂನುಬದ್ಧ ಮತ್ತು ಸರ್ವಮಾನ್ಯವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಪ್ರತಿಯಾಗಿ, ಹಿಂದೆಯೇ ಹಲವಾರು ಬಾರಿ ಅನುಷ್ಠಾನವನ್ನು ಒತ್ತಾಯಿಸದ ಹಲವಾರು ಜನಮತಗಣನೆಗಳನ್ನು ನಡೆಸಿದ ನಂತರ ಕೆಟಲನ್ನರು ಬಾರಿಯ ಜನಮತಗಣನೆಯನ್ನು ನಡೆಸಿದರು. ಪೊಲೀಸ್ ದಮನದ ನಡುವೆಯೂ ಜನಮತಗಣನೆಯನ್ನು ಯಶಸ್ವಿಯಾಗಿ ನಡೆದರೂ ಅದನ್ನು ಕಾನೂನು ಬಾಹಿರವೆಂದು ನಗಣ್ಯಗೊಳಿಸಿರುವುದು ಮಾತ್ರವಲ್ಲದೆ ಯಾವುದೇ ಬಗೆಯ ರಾಜಕೀಯ ಮಾತುಕತೆಯನ್ನೂ ಸ್ಪೇನ್ ಸರ್ಕಾರ ನಿರಾಕರಿಸುತ್ತಿದೆ

ಕೆಟಲೋನಿಯಾದ ಜನಮತಗಣನೆಯ ಸುತ್ತ ಹಲವು ವಿದ್ಯಮಾನಗಳು ಮುಂದುವರೆದಿವೆ. ಕೆಟಲಾನ್ ಸಂಸತ್ತು ಸ್ವಾತಂತ್ರ್ಯದ ಘೋಷಣೆಯನ್ನು ಅನುಮೋದಿಸಿದೆ. ಆದರೂ ಅದರ ಅಧ್ಯಕ್ಷ ಕಾರ್ಲ್ಸ್ ಪ್ಯೂಜ್ಡಿಮಾಂಟ್ ಅವರು ಸ್ಪೇನ್ ಆಡಳಿತದೊಂದಿಗೆ ಮಾತುಕತೆ ನಡೆಸಲೋಸುಗ ಸ್ವಾತಂತ್ರ್ಯ ಘೋಷಣೆಯ ತಾರ್ಕಿಕ ಮುನ್ನಡೆಗೆ ತಡೆಯೊಡ್ಡಿದ್ದಾರೆ. ಆದರೆ ಸ್ಪೇನಿನ ಪ್ರಧಾನಿ ಮಾರಿಯಾನೋ ರಜಯ್ ಅವರು ಕೆಟಲನ್ನರೊಂದಿಗೆ ಯಾವುದೇ ಮಾತುಕತೆಯನ್ನು ನಿರಾಕರಿಸಿರುವುದಲ್ಲದೆ ಸ್ಪೇನ್ ಸಂವಿಧಾನದ ೧೫೫ನೇ ಕಲಮನ್ನು ಬಳಸಿ ಕೆಟಲನ್ ಪ್ರದೇಶಿಕ ಸರ್ಕಾರವನ್ನು ರದ್ದುಗೊಳಿಸುವ ಬೆದರಿಕೆಯನ್ನೂ ಹಾಕಿದ್ದಾರೆ. ಸಂದರ್ಭವನ್ನು ಮುಂಜಾಗರೂಕತೆ ಮತ್ತು ಪ್ರಬುದ್ಧತೆಯಿಂದ ನಿಭಾಯಿಸದಿದ್ದರೆ ಬಿಕ್ಕಟ್ಟು ಉಲ್ಫಣಗೊಳ್ಳುವುದು ಖಂಡಿತ. ಐರೋಪ್ಯ ಒಕ್ಕೂಟವೂ ಸಹ   ಜವಾಬ್ದಾರಿಯಿಂದ ಕೈತೊಳೆದುಕೊಳ್ಳುವುದು ಸಾಧ್ಯವಿಲ್ಲ. ತನ್ನ ಸದಸ್ಯರಾಷ್ಟ್ರಗಳ ಆಸಕ್ತಿ ಮತ್ತು ತೀರ್ಮಾನಗಳಿಗೆ ಮಾತ್ರ ಬದ್ಧವಾಗದೆ ತನ್ನ ಮುಂದೊಡಗನ್ನು ಮತ್ತು ಸ್ವಾಯತ್ತತೆಯನ್ನು ಸಂದರ್ಭದಲ್ಲಿ ಉಳಿಸಿಕೊಳ್ಳುವುದು ಐರೋಪ್ಯ ಒಕ್ಕೂಟಕ್ಕೆ ಅತ್ಯಗತ್ಯವಾಗಿದೆ.

ಕೆಟಲೋನಿಯಾ ಬಿಕ್ಕಟ್ಟು ಭಾರತದಂಥ ಯುವ ರಾಷ್ಟ್ರಗಳಿಗೆ ಒಂದು ಪ್ರಮುಖ ಪಾಠವನ್ನು ಕಲಿಸಿಕೊಡುತ್ತದೆ. ಒಂದು ರಾಷ್ಟ್ರೀಯ ಆಶೋತ್ತರಗಳನ್ನು ದಮನ ಮಾಡಿದ ಮಾತ್ರಕ್ಕೆ ಅವು ಕಣ್ಮರೆಯಾಗುವುದಿಲ್ಲ. ಯುರೋಪನ್ನು ಹಲವು ರಾಷ್ಟ್ರೀಯ ಎಲ್ಲೆಗಳಲ್ಲಿ ವಿಂಗಡಿಸಿ ಜನರನ್ನು ಆಯಾ ರಾಷ್ಟ್ರಗಳ ನಾಗರಿಕರೆಂದು ಗುಡ್ಡೆಹಾಕಿ ಶತಮಾನಗಳೇ ಕಳೆದರೂ ಜನತೆಯ ರಾಷ್ಟ್ರೀಯ ಆಶೋತ್ತರಗಳನ್ನು ಇನ್ನೂ ನಾಶಮಾಡಲಾಗಿಲ್ಲ; ಹಾಗೆಯೇ ಬೇರೆ ಕಡೆಗಳಲ್ಲೂ ಅದು ಸಾಧ್ಯವಾಗುವುದಿಲ್ಲ. ಹೀಗಾಗಿ ರಾಷ್ಟ್ರೀಯತೆಯೆಂಬುದು ಆಧುನಿಕ ರಾಷ್ಟ್ರಪ್ರಭುತ್ವಗಳ ಹುಟ್ಟಿಗೆ ಕಾರಣವಾಗುವ ಸಿದ್ಧಾಂತವಾಗಿರುವಷ್ಟು ಕಾಲ ಹಾಲಿ ಅಸ್ಥಿತ್ವದಲ್ಲಿರುವ ರಾಷ್ಟ್ರಪ್ರಭುತ್ವಗಳು ತಮ್ಮ ರಾಷ್ಟ್ರದೊಳಗೆ ಹುಟ್ಟುಕೊಳ್ಳುವ ರಾಷ್ಟ್ರೀಯವಾದಗಳನ್ನು ರಾಜಕೀಯವಾಗಿ ನಿಭಾಯಿಸಬೇಕೆ ವಿನಃ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳೆಂಬಂತೆ ಅಲ್ಲ.

   ಕೃಪೆ: Economic and Political Weekly, Oct 17, 2017. Vol. 52. No. 41

                                                                                              









                

ಬುಧವಾರ, ಅಕ್ಟೋಬರ್ 11, 2017

ಗೌರಿಯನ್ನು ಏಕೆ ಕೊಲ್ಲಲಾಗುವುದಿಲ್ಲ?


  ಅನುಶಿವಸುಂದರ್
Image result for ಗೌರಿಲಂಕೇಶ್
ಮುಕ್ತ ಮಾಧ್ಯಮಕ್ಕಿರುವ ನ್ಯಾಯಸಮ್ಮತ ಪಾತ್ರವನ್ನು ಉದ್ದೇಶಪೂರ್ವಕವಾಗಿ ನಾಶಗೊಳಿಸುತ್ತಿರುವುದರ ವಿರುದ್ಧ ನಾವೆಲ್ಲರೂ ಕೂಡಲೇ ಕಾರ್ಯಪ್ರವೃತ್ತರಾಗಬೇಕಿದೆ.

ಪತ್ರಕರ್ತೆ ಮತ್ತು ಸಂಪಾದಕಿ ಗೌರಿ ಲಂಕೇಶರನ್ನು ಅವರ ಮನೆಯ ಮುಂದೆಯೇ ಹತ್ಯೆ ಮಾಡಿ ಒಂದು ತಿಂಗಳೇ ಕಳೆದಿದ್ದರೂ ಆಕೆ ಇನ್ನೂ ಸಾರ್ವಜನಿಕ ನೆನಪಿನಲ್ಲಿ ಜೀವಂತವಾಗಿದ್ದಾರೆ. ಇದು ದೇಶಾದ್ಯಂತ ಆಕೆಯ ಹತ್ಯೆಯ ವಿರುದ್ಧ ಎಡಬಿಡದೆ ನಡೆಯುತ್ತಿರುವ ಪ್ರತಿಭಟನೆಗಳಿಂದ ಮತ್ತಷ್ಟು ಸ್ಪಷ್ಟವಾಗುತ್ತಿದೆ. ಅಕ್ಟೋಬರ್ ಗಾಂಧೀ ಜಯಂತಿಯಂದು ಮತ್ತು ಅವರ ಹತ್ಯೆಯಾಗಿ ಒಂದು ತಿಂಗಳು ತುಂಬಿದ ಅಕ್ಟೋಬರ್ ರಂದು ಪ್ರಜಾತಂತ್ರದ ಹತ್ಯೆಯನ್ನು ಖಂಡಿಸಿ ಮತ್ತು ಗೌರಿ ಲಂಕೇಶರ ಹಂತಕರನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಲು ಆಗ್ರಹಿಸಿ ದೇಶಾದ್ಯಂತ ಪತ್ರಕರ್ತರು, ಕಲಾವಿದರು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಹಾಗು ಮತ್ತಿತರರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕೊಲೆಯಾದ ಹಲವಾರು ಪತ್ರಕರ್ತರಲ್ಲಿ ಒಬ್ಬ ಪತ್ರಕರ್ತೆಯ ಸಾವು ಮಾತ್ರ ಏಕೆ ಇಷ್ಟೊಂದು ದೊಡ್ಡ ಪ್ರತಿರೋಧವನು ಹುಟ್ಟಿಸಿದೆ?

ಗೌರಿ ಲಂಕೇಶರಂತೆ ಹಲವಾರು ಪತ್ರಕರ್ತರು ಕೊಲೆಯಾಗಲ್ಪಟ್ಟಿದ್ದಾರೆ. ವಾಸ್ತವವಾಗಿ ಸೆಪ್ಟೆಂಬರ್ ೨೦ರಂದು ಶಂತನು ಭೌಮಿಕ್ ಎಂಬ ಮತ್ತೊಬ್ಬ ಪತ್ರಕರ್ತರನ್ನು ಅಗರ್ತಲಾದಲ್ಲಿ ಇಂಡಿಜೀನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಟಿಎಫ್) ಎಂಬ ಸಂಘಟನೆಯ ಪ್ರತಿಭಟನಾ ಪ್ರದರ್ಶನವನ್ನು ವರದಿ ಮಾಡುತ್ತಿದ್ದಾಗ ಇರಿದು ಕೊಲ್ಲಲಾಯಿತು. ವರ್ಷ ಕೊಲ್ಲಲ್ಪಟ್ಟ ಎಲ್ಲಾ ವರದಿಗಾರರನ್ನು ಅವರ ವರದಿಗಾರಿಕೆಗಾಗಿಯೇ ಕೊಲ್ಲಲಾಗಿದೆಯೆಂದು ಹೇಳಲಾಗದಿದ್ದರೂ ವರ್ಷ ಒಟ್ಟು ಎಂಟು ಪತ್ರಕರ್ತರನ್ನು ಕೊಲ್ಲಲಾಗಿದೆ. ಆದರೂ ಗೌರಿ ಲಂಕೇಶರ ಹತ್ಯೆಯಿಂದ ಜನರ ಸಹನೆಯ ಕಟ್ಟೆ ಒಡೆದಂತಾಗಿದೆ. ದೇಶದಲ್ಲಿರುವ ರಾಜಕೀಯ ವಾತಾವರಣದಿಂದ ಉತ್ತೇಜಿತಗೊಂಡಿರುವ ಗುಂಪುಗಳು ನಡೆಸುತ್ತಿರುವ ಗುಂಪುಹತ್ಯೆ, ಹಿಂಸಾತ್ಮಕ ದಾಳಿ ಮತ್ತು ಕೊಲೆಗಳಿಂದ ಕಳವಳಗೊಂಡಿರುವ ಪತ್ರಕರ್ತರನ್ನೂ ಒಳಗೊಂಡಂತೆ ಹಲವಾರು ನಾಗರಿಕ ಸಮಾಜದ ಗುಂಪುಗಳನ್ನು ಹತ್ಯೆಯು ಒಟ್ಟಿಗೆ ತಂದಿವೆ.

ಗೌರಿ ಲಂಕೇಶ್ ಮತ್ತು ಭೌಮಿಕ್ ಅವರ ಹತ್ಯೆಯ ನಂತರ ದೇಶದ ಮುಂದಿರುವ ಪ್ರಧಾನ ವಿಷಯ ಪತ್ರಕರ್ತರ ಸುರಕ್ಷತೆಯದ್ದಲ್ಲ. ಬದಲಿಗೆ ಒಂದು ಪ್ರಜಾತಂತ್ರದಲ್ಲಿ ಸ್ವತಂತ್ರ ಮಾಧ್ಯಮದ ಪಾತ್ರವು ಎದುರಿಸುತ್ತಿರುವ ಬೆದರಿಕೆಯದ್ದು. ತುರ್ತುಪರಿಸ್ಥಿತಿಯ ಸಮಯದಲ್ಲಿ ಇಡೀ ರಾಷ್ಟ್ರಕ್ಕೇ ಗಂಡಾಂತರ ಒದಗಿದೆ ಎಂದು ಭಾವಿಸಿದ್ದ ಇಂದಿರಾಗಾಂಧಿಯವರ ದೃಷ್ಟಿಯಲ್ಲಿ ಮಾಧ್ಯಮಗಳಿಗೆ ಸ್ವತಂತ್ರವಾಗಿ ಕಾರ್ಯಾಚರಣೆ ಮಾಡಲು ಅವಕಾಶಕೊಡಬೇಕೆಂಬ ವಿಷಯ ಯಾವುದೇ ಮಹತ್ವವನ್ನು ಪಡೆದುಕೊಂಡಿರಲಿಲ್ಲ. ಅಸ್ಥಿತ್ವದಲ್ಲಿದ್ದ ಶಾಸನಗಳನ್ನು ಬಳಸಿಕೊಂಡು ಆಕೆ ತುರ್ತುಪರಿಸ್ಥಿತಿಯನ್ನು ಘೋಷಿಸಿ ಪತ್ರಿಕಾ ಸ್ವಾತಂತ್ರ್ಯವನ್ನು ನಿಷೇಧಿಸಿದರು. ಇಂದು ಜನರು ಅಘೋಷಿತ ತುರ್ತುಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ನೇರವಾಗಿ ಪತ್ರಿಕಾ ಸ್ವಾತಂತ್ರ್ಯವನ್ನು ನಿಷೇಧಿಸಿಲ್ಲ. ಆದರೆ, ಯಾವುದನ್ನು ಭೀತಿಯನ್ನು ಬಿತ್ತುವ ರಾಷ್ಟ್ರೀಯ ಯೋಜನೆ ಎಂದು ಎನ್ಡಿಟಿವಿ-ಇಂಡಿಯಾದ ನಿರೂಪಕ ರವೀಶ್ಕುಮಾರ್ ಅವರು ಬಣ್ಣಿಸಿದ್ದಾರೋ ಅದು ನಿಷೇಧದ ಉದ್ದೇಶಗಳನ್ನು ಈಡೇರಿಸುತ್ತಿದೆ. ಸೆಪ್ಟೆಂಬರ್ ರಿಂದಾಚೆಗೆ ರವೀಶ್ ಕುಮಾರ್ ಅವರನ್ನೂ ಒಳಗೊಂಡಂತೆ ಹಲವು ಸ್ವತಂತ್ರ ಮನೋವೃತ್ತಿಯ ಪತ್ರಕರ್ತರಿಗೆ ಗೌರಿ ಲಂಕೇಶರ ಗತಿಯೇ ಒದಗುತ್ತದೆಂಬ ಬೆದರಿಕೆ ಕರೆಗಳು ಬರುತ್ತಿವೆ. ಬೆದರಿಕೆ ಕರೆಗಳನ್ನು ಮಾಡಿದವರಲ್ಲಿ ಕನಿಷ್ಟ ಒಬ್ಬರನ್ನಂತೂ ಪತ್ತೆ ಹಚ್ಚಲಾಗಿದ್ದು ಆತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿಯನ್ನು ಅನುಸರಿಸುವುದಲ್ಲದೆ ಪ್ರಧಾನಿಯೂ ಆತನನ್ನು ಅನುಸರಿಸುತ್ತಾರೆ. ಪ್ರಧಾನಿಗಳು ಮಾತ್ರ  ಆತನನ್ನು ಇನ್ನು ತರಾಟೆಗೂ ತೆಗೆದುಕೊಂಡಿಲ್ಲ ಅಥವಾ ತನ್ನ ಅನುಚರರ ಪಟ್ಟಿಯಿಂದ ತೆಗೆದೂ ಹಾಕಿಲ್ಲ. ಬಗೆಯ ಉದ್ದೇಶಪೂರ್ವಕ ನಿಷ್ಕ್ರಿಯತೆ ಮತ್ತು ಭಿನ್ನಮತ ಹಾಗೂ ವಿಮರ್ಶೆಗಳನ್ನು ದೇಶದ ಮೇಲಿನ ದಾಳಿಗೆ ಸಮೀಕರಿಸುವಂಥ ಕಥನಗಳನ್ನು ಉದ್ದೇಶಪೂರ್ವಕವಾಗಿ ಹರಿಬಿಡುವ ಸರ್ಕಾರದ ಕ್ರಿಯೆಗಳು ಒಂದು ಸಂದೇಶವನ್ನು ಮಾತ್ರ ಅತ್ಯಂತ ಸ್ಪಷ್ಟವಾಗಿ ರವಾನಿಸುತ್ತಿದೆ; ರವೀಶ್ಕುಮಾರ್ ರಂಥ ಪತ್ರಕರ್ತರ ಮೇಲೆ ದಾಳಿ ಮಾಡುವುದು ಅಥವಾ ಒಬ್ಬ ದೇಶದ್ರೋಹಿ ಪತ್ರಕರ್ತರನ್ನು ಕೊಲ್ಲುವುದು ನ್ಯಾಯಸಮ್ಮತವಾದದ್ದು.

ಆದರೆ, ಕೆಲವು ಪತ್ರಕರ್ತರಿಗೆ ಬೆದರಿಕೆ ಕರೆಗಳು ಬಂದ ಮಾತ್ರಕ್ಕೆ ತಮ್ಮ ರಕ್ಷಣೆಗಾಗಿ ಒಂದು ವಿಶೇಷ ಕಾನೂನು ಜಾರಿಯಾಗಬೇಕೆಂದು ಅವರು ಆಗ್ರಹಿಸುವುದು ಸರಿಯೇ? ವರ್ಷದ ಏಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರವು ಮಹಾರಾಷ್ಟ್ರ ಪತ್ರಕರ್ತರ ಮತ್ತು ಮಾಧ್ಯಮ ಸಂಸ್ಥೆಗಳ (ಹಿಂಸೆ ಮತ್ತು ಆಸ್ತಿ ಹಾನಿ ಅಥವಾ ನಷ್ಟ ಪ್ರತಿಬಂಧಕ) ಕಾಯಿದೆಯನ್ನು ಜಾರಿಗೆ ತಂದಿತು. ಮುಕ್ತ ಮಾಧ್ಯಮಗಳ ಸ್ವಾಯತ್ತತೆಯ ಹಿನ್ನೆಲೆಯಲ್ಲಿ ಅಂಥಾ ಒಂದು ಕಾನೂನು ಹಲವಾರು ವಿಮರ್ಶೆಗಳನ್ನು ಮತ್ತು ಪ್ರಶ್ನೆಗಳನ್ನೂ ಹುಟ್ಟಿಹಾಕುತ್ತದೆ. ಪ್ರಭುತ್ವದ ಜೊತೆ ಹಲವಾರು ಬಾರಿ ಸಂಘರ್ಷದಲ್ಲಿರುವ ಮಾಧ್ಯಮವು ತನ್ನನ್ನು ರೀತಿ ವಿಶೇಷವಾಗಿ ಪರಿಗಣಿಸಬೇಕೆಂದು ಕೇಳುವುದು ತರವೇ? ಮಾಹಿತಿ ಹಕ್ಕುಗಳ ಕಾರ್ಯಕರ್ತರಂಥ ಕಾರ್ಯಕರ್ತರು ಪ್ರಬಲರನ್ನು ಬಯಲು ಮಾಡುವ ಪ್ರಕ್ರಿಯೆಯಲ್ಲಿ ಜೀವಗಳನ್ನೇ ಕಳೆದುಕೊಳ್ಳುತ್ತಿರುವಾಗ ಅದೇ ಉದ್ದೇಶಗಳನ್ನು ಇಟ್ಟುಕೊಂಡಿರುವ ಪತ್ರಕರ್ತರು ಮಾತ್ರ ವಿಶೇಷ ರಕ್ಷಣೆಯನ್ನು ನಿರೀಕ್ಷಿಸುವುದೇಕೆ? ಪತ್ರಕರ್ತರಿಗೆ ಮತ್ತು ಕಾರ್ಯಕರ್ತರಿಗೆ ನಿಜವಾದ ರಕ್ಷಣೆ ದೊರೆಯುವುದು ಅಧಿಕಾರದೆದುರು ಸತ್ಯವನ್ನು ನುಡಿಯುವುದಕ್ಕೆ ಇರುವ ಪಾತ್ರವನ್ನು ಅರ್ಥಮಾಡಿಕೊಂಡಿರುವ ಒಂದು ಸಮಾಜದಿಂದ ಮಾತ್ರ.

ಅದೇ ಸಂದರ್ಭದಲ್ಲಿ ಮುಕ್ತಮಾಧ್ಯಮವು ವಹಿಸಬೇಕಾದ ಟೀಕಾಕಾರನ ಪಾತ್ರಕ್ಕೆ ಇರುವ ಮಾನ್ಯತೆಯು ದಿನೇದಿನೇ ಕುಸಿಯುತ್ತಿರುವ ಬಗ್ಗೆಯು ನಾವಿಂದು ಚರ್ಚಿಸಬೇಕಿದೆ. ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಧಾರೆ ಮಾಧ್ಯಮಗಳೆನ್ನೆಲ್ಲ ನಕಲಿ ಮಾಧ್ಯಮವೆಂದು ದಿನಬೆಳಗಾದರೆ ಬಹಿರಂಗವಾಗಿ ದೂಷಿಸುತ್ತಾ ಅಮಾನ್ಯಗಳಿಸುತ್ತಿದ್ದರೆ ಇಲ್ಲಿ ಅದು  ಅತ್ಯಂತ ನಯವಂಚಕತನದಿಂದ ಸಂಭವಿಸುತ್ತಿದೆ.

ಇವೆಲ್ಲ ೨೦೧೪ರಲ್ಲಿ ಮೋದಿಯು ಅಧಿಕಾರಕ್ಕೆ ಬಂದ ನಂತರದಿಂದ ಪ್ರಾರಂಭಗೊಂಡಿತು. ತಾನು ನೇರವಾಗಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುವುದಿಲ್ಲವೆಂದು ಪ್ರಧಾನಿಗಳು ಸ್ಪಷ್ಟಪಡಿಸಿದ್ದರು. ಅವರು ಈವರೆಗೆ ಒಂದೂ ಪತ್ರಿಕಾಗೋಷ್ಟಿಯನ್ನು ನಡೆಸಿಲ್ಲ. ಬದಲಿಗೆ ತಮ್ಮ ಬಗ್ಗೆ ಸಹಾನುಭೂತಿ ಇರುವ ಮಾಧ್ಯಮ ಸಂಸ್ಥೆಗಳಿಗೆ ಮಾತ್ರ ಪ್ರತ್ಯೇಕ ಸಂದರ್ಶನಗಳನ್ನು ನೀಡಿದ್ದಾರೆ. ಇದರ ಜೊತೆಗೆ ಸಾಕಷ್ಟು ಪ್ರಚಾರ ಮಾಡಿ ನಡೆಸಲಾಗುವ ಬಹಿರಂಗಸಭೆಗಳಲ್ಲಿ ಭಾರತದ ಸಾರ್ವಜನಿಕರ ಜೊತೆ ಅವರು ಬಹಿರಂಗವಾದಸ್ವಗv’ ಸಂಭಾಷಣೆ ನಡೆಸುತ್ತಾರೆ ಅಥವಾ ತಿಂಗಳಿಗೊಮ್ಮೆ ಬಿತ್ತರಗೊಳ್ಳುವ ಮನ್ ಕಿ ಬಾತ್ ಮತ್ತು ಪತ್ರಿಕೆಗಳಿಗೆ ನೀಡುವ ವಿಭಿನ್ನ ಬಗೆಯ ಜಾಹಿರಾತುಗಳ ಮೂಲಕ ತಮ್ಮ ಮತ್ತು ತಮ್ಮ ಸರ್ಕಾರಗಳನ್ನು ವೈಭವೀಕರಿಸಿಕೊಳ್ಳುತ್ತಾರೆ. ಮಾಧ್ಯಮವನ್ನು ನೇರವಾಗಿ ಮುಖಾಮುಖಿ ಮಾಡುವುದಿಲ್ಲವೆಂಬ ಪ್ರಧಾನಿಯವರ ನಿರ್ಧಾರವನ್ನು ಏಕೆ ಯಾವ ಪ್ರಧಾನ ಮಾಧ್ಯಮಸಂಸ್ಥೆಗಳೂ ಪ್ರಶ್ನಿಸಿಲ್ಲ? ಒಂದು ಚುನಾಯಿತ ಸರ್ಕಾರವು ಎಷ್ಟೇ ಟೀಕೆಯಿಂದ ಕೂಡಿದ ಪ್ರಶ್ನೆಗಳಿಗೂ ಉತ್ತರ ನೀಡುವ ಬಾಧ್ಯತೆ ಹೊಂದಿರುವಾಗ ಪ್ರಶ್ನೆಗಳಿಗೆ ಉತ್ತರ ಕೊಡುವುದನ್ನೇ ಒಂದು ಉಪಕಾರವೆಂದು ಏಕೆ ಪರಿಗಣಿಸಲಾಗುತ್ತಿದೆ? ವಾಸ್ತವವಾಗಿ ಅಂಥ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನೀವು ಪ್ರಜೆಗಳಿಗೆ ಉತ್ತರದಾಯಿಗಳೆಂಬ ಸಂದೇಶವನ್ನು ನೀಡಿದಂತಾಗುತ್ತದೆ. ಅದಕ್ಕೆ ಅವಕಾಶವನ್ನು ನಿರಾಕರಿಸುವ ಮೂಲಕ ಜನರ ಆಲೋಚನೆಗಳ ಬಗ್ಗೆ ನೀವು ಕಿಂಚಿತ್ತೂ ಕಾಳಜಿ ಮಾಡುವುದಿಲ್ಲವಂಬ ಸಂದೇಶವನ್ನಷ್ಟೇ ರವಾನಿಸಿದಂತಾಗುತ್ತದೆ. ಅಂಥ ಧೋರಣೆಯು ಪ್ರಜಾತಂತ್ರಕ್ಕೆ ತದ್ವಿರುದ್ಧವಾದ ಧೋರಣೆಯಾಗಿದೆ.

ತಮ್ಮ ನ್ಯಾಯಸಮ್ಮತ ಪ್ರಶ್ನೆಗಳನ್ನು ಕೇಳಲು ಮಾಧ್ಯಮಗಳಿಗೆ ಅವಕಾಶವನ್ನು ನಿರಾಕರಿಸುವ ಮೂಲಕ ಮಾತ್ರವಲ್ಲದೆ ಇನ್ನೂ ಹಲವು ರೀತಿಗಳಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಹರಣಮಾಡಲಾಗುತ್ತಿದೆ. ಕಿರಿಕಿರಿ ಉಂಟುಮಾಡುತ್ತಿದ್ದ ಮಾಧ್ಯಮ ಸಂಸ್ಥೆಗಳನ್ನು ಸರ್ಕಾರಕ್ಕೆ ಸನಿಹವಿರುವ ಉದ್ಯಮಿಗಳ ಮೂಲಕ ಖರೀದಿಸುವುದು ಮತ್ತು ಸರ್ಕಾರದ ಬಗ್ಗೆ ತುಂಬಾ ವಿಮರ್ಶಾತ್ಮಕ ಧೋರಣೆಯುಳ್ಳ ಸಂಪಾದಕರನ್ನು ಹದ್ದುಬಸ್ತಿಗೆ ತರುವುದು ಅಥವಾ ವಜಾ ಮಾಡುವ ಮೂಲಕ ಸಹಾ ಮಾಧ್ಯಮ ಸ್ವಾತಂತ್ರ್ಯವನ್ನು ಹರಣಮಾಡಲಾಗುತ್ತಿದೆ. ಮಾಧ್ಯಮದೊಳಗೆ ವಿಮರ್ಶಾತ್ಮಕ ಅಭಿವ್ಯಕ್ತಿಗೆ ಇದ್ದ ಅವಕಾಶಗಳು ಕಿರಿದಾಗುತ್ತಿದೆ. ಇದರ ಜೊತೆಗೆ, ಕಾರ್ಪೊರೇಟೀಕರಣಗೊಂಡ ಮಾಧ್ಯಮಲೋಕದಲ್ಲಿನ ಕತ್ತುಕೊಯ್ಯುವ ಸ್ಪರ್ಧಾತ್ಮಕ ಸನ್ನಿವೇಶವು ಎಲ್ಲರಿಗೂ ಸಂಬಂಧಪಟ್ಟಂಥ ವಿಶಾಲವಾದ ವಿಷಯಗಳ ಬಗ್ಗೆಯೂ ಪತ್ರಕರ್ತರ ನಡುವೆ ಒಂದು ಸೌಹಾರ್ದತೆ ಮೂಡಲಾಗದಂಥ ಪರಿಸ್ಥಿತಿಯನ್ನು ಸೃಷ್ಟಿಸಿದೆ.

ಇಂದು ಸರ್ಕಾರಗಳಿಗೆ ಮತ್ತು ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ಬಗ್ಗದ ಕೆಲವೇ ಪರಿಣಾಮಕಾರೀ ಪತ್ರಕರ್ತರ ಸಂಘಗಳೂ, ಪ್ರೆಸ್ ಕ್ಲಬ್ಗಳೂ ಅಸ್ಥಿತ್ವದಲ್ಲಿದ್ದು ಬೆರಳೆಣಿಕೆಯಷ್ಟು ಸ್ವತಂತ್ರ ಸಂಸ್ಥೆಗಳು ಮಾತ್ರ ಪತ್ರಕರ್ತರನ್ನು ಒಟ್ಟಿಗೆ ತರಲು ಯತ್ನಿಸುತ್ತಿವೆ. ವಾಸ್ತವವು ಹೀಗಿರುವ ಹೊತ್ತಿನಲ್ಲಿ ಗೌರಿ ಲಂಕೇಶರ ಹತ್ಯೆಯು ಪತ್ರಕರ್ತರನ್ನು ದೊಡ್ಡ ಸಂಖ್ಯೆಯಲ್ಲಿ ಹೊರಬಂದು ಪ್ರತಿಭಟಿಸುವಂತೆ ಪ್ರೇರೇಪಿಸಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಆದರೆ ಪ್ರತಿಭಟನೆಗಳು  ಪತ್ರಕರ್ತರಿಗೆ ಸುರಕ್ಷತೆಯನ್ನು ಆಗ್ರಹಿಸುವುದರಾಚೆಗೂ ಬೆಳೆಯಬೇಕಿದೆ. ಪ್ರಭುತ್ವ ಮತ್ತು ಇನ್ನಿತರ ಪ್ರಬಲರನ್ನು ಪ್ರಶ್ನಿಸುವ ಸ್ವತಂತ್ರ ಧ್ವನಿಯಾಗಿರಬೇಕಾದ ಮಾಧ್ಯಮದ ನ್ಯಾಯಸಮ್ಮತ ಪಾತ್ರವನ್ನು ಉದ್ದೇಶಪೂರ್ವಕವಾಗಿ ನಿಗ್ರಹಿಸುತ್ತಿರುವ ಹುನ್ನಾರಗಳ ವಿರುದ್ಧವೂ ಅದು ತನ್ನ ಪ್ರತಿರೋಧವನ್ನು ವಿಸ್ತರಿಸಿಕೊಳ್ಳಬೇಕಿದೆ.

 ಕೃಪೆ: Economic and Political Weekly , Oct 7, 2017. Vol. 52. No. 40