ಗುರುವಾರ, ಡಿಸೆಂಬರ್ 13, 2018

ಬರದಿಂದ ತತ್ತರಿಸುತ್ತಿರುವ ಮಹಾರಾಷ್ಟ್ರ



ಬರಗಾಲವನ್ನು ನಿಭಾಯಿಸಲಾಗದ ಸರ್ಕಾರ ಗ್ರಾಮೀಣ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿದೆ.

Image result for maharashtra drought 2018


ಅನು: ಶಿವಸುಂದರ್ 

ಬರಗಾಲವನ್ನು ಹೇಗೆ ನಿರ್ವಚನ ಮಾಡಬೇಕೆಂಬ ಜಿಜ್ನಾಸೆಯಲ್ಲಿ ಸಾಕಷ್ಟು ಕಾಲ ಕಳೆದ ನಂತರ ಬರಪೀಡಿತ ಪ್ರದೇಶಗಳ ಜನರ ನಿರಂತರ ಒತ್ತಡಕ್ಕೆ ಮಣಿದು ಮಹಾರಾಷ್ಟ್ರ ಸರ್ಕಾರ ಕೊನೆಗೂ ಕಳೆದ ಅಕ್ಟೋಬರ್ ೩೧ರಂದು ೨೬ ಜಿಲ್ಲೆಗಳ ೧೫೧ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಿದೆ. ಆದರೆ ಗ್ರಾಮೀಣಮಟ್ಟದಿಂದ ಬರುತ್ತಿರುವ ವರದಿಗಳು ಮಾತ್ರ ಸರ್ಕಾರವು ಬರಪೀಡಿತ ಪ್ರದೇಶದ ಬಗ್ಗೆ ಸಾಕಷ್ಟು ಕೆಳ ಅಂದಾಜು ಮಾqದೆಯೆಂದು ಹೇಳುತ್ತಿವೆ. ೨೦೧೬ರಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕಠಿಣ ಮತ್ತು ಬೇಕಾಬಿಟ್ಟಿ ನಿಯಮಾವಳಿಗಳನ್ನು ಹೊಂದಿರುವ ಬರ ಕೈಪಿಡಿಯೇ ಸರ್ಕಾರದ ಈ ಆವಾಸ್ತವಿಕ ಅಂದಾಜಿಗೆ ಕಾರಣ.

ಮಹಾರಾಷ್ಟ್ರವು ಹಿಂದೆಂದೂ ಇಲ್ಲದಂಥ ಭೀಕರ ಬರಗಾಲವನ್ನು ಎದುರಿಸುತ್ತಿದೆ. ಈ ವರ್ಷದ ಬರಗಾಲವನ್ನು ೧೯೭೨ರ ಬರಗಾಲಕ್ಕಿಂತ ತೀವ್ರವಾದದ್ದೆಂದು ಪರಿಗಣಿಸಲಾಗಿದೆ. ಇದಕ್ಕೆ ಮೂಲ ಕಾರಣ ಪ್ರಪ್ರಥi ಬಾರಿಗೆ ಮಹಾರಾಷ್ಟ್ರವು ಖಾರಿಫ್ ಮತ್ತು ರಾಬಿ ಎರಡೂ ಬೆಳೆಗಳ ಬರಗಾಲವನ್ನು ಎದುರಿಸುತ್ತಿರುವುದು. ೨೦೧೭ರಲ್ಲಿ ಇದೇ ಋತುವಿನಲ್ಲಿ ೨೮.೩೫ ಲಕ್ಷ ಹೆಕ್ಟೇರಿನಲ್ಲಿ ರಾಬಿ ಬೆಳೆಗಳ ಬಿತ್ತನೆ ಮಾಡಲಾಗಿದ್ದರೆ ಈ ವರ್ಷ ನವಂಬರ್ ೧೫ರ ವೇಳೆಗೆ ಕೇವಲ ೧೩.೦೫ ಲಕ್ಷ ಹೆಕ್ಟೇರಿನಲ್ಲಿ ಮಾತ್ರ ರಾಬಿ ಬಿತ್ತನೆಯನ್ನು ಮಾಡಲಾಗಿದೆ. ಮಣ್ಣಿನಲ್ಲಿ ತೇವಾಂಶವಿಲ್ಲದಿರುವುದು ಮತ್ತು ಜಲಾಶಯಗಳಲ್ಲಿರುವ ನೀರನ್ನು ಬೇಸಿಗೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಮೀಸಲುಗೊಳಿಸಿರುವುದು ಈ ಬಾರಿ ರಾಬಿ ಬೆಳೆಯ ಮೇಲೆ ಪರಿಣಾಮ ಬೀರಲಿದೆ. ವಾಡಿಕೆಗಿಂತ ಶೇ.೩೦ರಷ್ಟು ಕಡಿಮೆ ಮಳೆಯಾಗಿರುವುದರಿಂದ ಈಗಾಗಲೇ ತೀವ್ರದ ನೀರಿನ ಕೊರತೆಯುಂಟಾಗಿದೆ. 

ಮಹಾರಾಷ್ಟ್ರದ ಉತ್ತರ ಭಾಗದ ನಾಸಿಕ್ ಮತ್ತು iರಾಠವಾಡ ಪ್ರದೇಶದಲ್ಲಿರುವ ಜಲಾಶಯಗಳಲ್ಲಿ ಅನುಕ್ರಮವಾಗಿ ಶೇ.೬೭ರಷ್ಟು ಮತ್ತು ಶೇ.೨೭ರಷ್ಟು ನೀರಿನ ಸಂಗ್ರಹ ಮಾತ್ರವಿರುವುದರಿಂದ ಆ ಪ್ರದೇಶಗಳು ತೀವ್ರವಾದ ನೀರಿನ ಕೊರತೆಯನ್ನು ಅನುಭವಿಸಲಿವೆ. ನವಂಬರ್‌ನ ಪ್ರಾರಂಭದ ವೇಳೆಗಾಗಲೇ ೫೭೫ ನೀರಿನ ಟ್ಯಾಂಕರ್‌ಗಳು ೪೯೮ ಹಳ್ಳಿಗಳಿಗೆ ಮತ್ತು ೯೫೯ ಹಾಡಿಗಳಿಗೆ ನೀರು ಸರಬರಾಜು ಮಾಡುತ್ತಿದವು. ತಿಂಗಳ ಕೊನೆಯ ವೇಳೆಗೆ ಆ ಸಂಖ್ಯೆಯು ಇನ್ನಷ್ಟು ಹೆಚ್ಚಿದ್ದು ೮೧೬ ಟ್ಯಾಂಕರ್‌ಗಳು ೬೯೮ ಹಳ್ಳಿಗಳಿಗೆ ಮತ್ತು ೧೫೧೧ ಹಾಡಿಗಳಿಗೆ ನೀರು ಸರಬರಾಜು ಮಾಡುತ್ತಿವೆ. ಕಳೆದ ವರ್ಷ ಈ ಪ್ರದೇಶದಲ್ಲಿ ೯೩ ಟ್ಯಾಂಕರ್‌ಗಳು ೧೨೨ ಹಳ್ಳಿಗಳಿಗೆ ಮಾತ್ರ ನೀರು ಸರಬರಾಜು ಮಾಡುತ್ತಿದ್ದವು ಎಂಬುದಕ್ಕೆ ಹೋಲಿಸಿದಲ್ಲಿ ಸಮಸ್ಯೆಯ ಗಂಭೀರತೆ ಅರಿವಾಗುತ್ತದೆ. ಇದಕ್ಕೆ ಮಳೆಯ ಕೊರತೆಯೊಂದೇ ಕಾರಣವೆಂದು ಸಾರಾಸಗಟಾಗಿ ಹೇಳಲು ಸಾಧ್ಯವಿಲ್ಲ. ಇದು ಸರ್ಕಾರದ ನೀತಿಗಳಿಂದುಂಟಾದ ಮಾನವ ನಿರ್ಮಿತ ಸಮಸ್ಯೆಯಾಗಿದೆ. ಆದರೂ ಸರ್ಕಾರವು ಕೊಚ್ಚಿಕೊಳ್ಳುತ್ತಿರುವ ಹೆಗ್ಗಳಿಕೆಗಳಿಗೂ ಮತ್ತು ವಾಸ್ತವ ಪರಿಸ್ಥಿತಿಗೂ ಇರುವ ವ್ಯತ್ಯಾಸವನ್ನು ಎತ್ತಿ ತೋರಿಸಲು ಈ ಅಂಕಿಅಂಶಗಳನ್ನು ಪುನರುಚ್ಚರಿಸುವ ಅಗತ್ಯ ಉಂಟಾಗಿದೆ. ಜಲ ಸಂಪನ್ನ ಜಮೀನುಗಳು ಯೋಜನೆಯ ಮೂಲಕ ಜಲ ಸಂರಕ್ಷಣೆಯಲ್ಲಿ ಪಥಪ್ರವರ್ತಕ ಬದಲಾವಣೆಂiiನ್ನು ತರಲಾಗಿದೆಯೆಂಬ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಹೆಗ್ಗಳಿಕೆಗಳ ಬಗ್ಗೆ ಈ ಬರಗಾಲವು ಮೂಲಭೂತ ಪ್ರಶ್ನೆಗಳನ್ನೇ ಎತ್ತುವಂತೆ ಮಾಡಿದೆ. ಈ ಯೋಜನೆಯಿಂದ ಮಹಾರಾಷ್ಟ್ರದ ೧೬,೦೦೦ ಹಳ್ಳಿಗಳು ಬರಮುಕ್ತಗೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶಿರಡಿಯಲ್ಲಿ ಘೊಷಿಸಿದ ಕೆಲ ದಿನಗಳಲ್ಲೇ ಮಹಾರಾಷ್ಟ್ರ ಸರ್ಕಾರವು ೧೫೧ ತಾಲ್ಲೂಕುಗಳ ೨೦,೦೦೦ ಹಳ್ಳಿಗಳನ್ನು ಬರಪೀಡಿತ ಎಂದು ಘೋಷಿಸಬೇಕಾಗಿ ಬಂದದ್ದು ಒಂದು ದೊಡ್ಡ ವ್ಯಂಗ್ಯವೇ ಸರಿ. ಆದರೆ ಪ್ರಧಾನಿಯವರು ಬರಮುಕ್ತವೆಂದು ಘೋಷಿಸಿದ ಎಷ್ಟು ಹಳ್ಳಿಗಳು ಈಗ ಬರಪೀಡಿತವಾಗಿವೆ ಎಂಬ ಅಂಕಿಅಂಶವನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಈ ಯೋಜನೆಯಿಂದಾಗಿ ಅಂತರ್ಜಲಮಟ್ಟವು ಹೆಚ್ಚಾಗಿದೆಯೆಂದು ಸರ್ಕಾರ ಮತ್ತು ಕೆಲವು ಪರಿಣಿತರು ಕೊಚ್ಚಿಕೊಳ್ಳುತ್ತಿದ್ದರೂ ಅಂತರ್ಜಲ ಸರ್ವೆ ಮತ್ತು ಅಭಿವೃದ್ಧಿ ಏಜೆನ್ಸಿ (ಜಿಎಸ್‌ಡಿಎ) ಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರದ ೧೧,೪೮೭ ಹಳ್ಳಿಗಳಲ್ಲಿ ಅಂತರ್ಜಲವು ಇನ್ನೂ ಒಂದು ಮೀಟರಿನಷ್ಟು ಕೆಳಗಿಳಿದಿದ್ದರೆ ೫೫೬೬ ಹಳ್ಳಿಗಳಲ್ಲಿ ಒಂದರಿಂದ ಎರಡು ಮೀಟರಿನಷ್ಟು ಕೆಳಗಿಳಿದಿದೆ. ೨೯೯೦ ಹಳ್ಳಿಗಳಲ್ಲಿ ಅಂತರ್ಜಲವು ಎರಡರಿಂದ ಮೂರು ಮೀಟರಿನಷ್ಟು ಕೆಳಗಿಳಿದಿದ್ದರೆ ೨೯೪೧ ಹಳ್ಳಿಗಳಲ್ಲಿ ಮೂರು ಮೀಟರಿಗೂ ಹೆಚ್ಚು ಆಳಕ್ಕೆ ಅಂತರ್ಜಲವು ಕುಸಿದಿದೆ. ಇದಕ್ಕೆ ಕೇವಲ ಮಳೆಯ ಕೊರತೆಯೊಂದೇ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ೨೦೧೪ ಮತ್ತು ೨೦೧೫ರ ಸಾಲಿನಲ್ಲಿ ಈ ವರ್ಷಕ್ಕಿಂತ ಕಡಿಮೆ ಮಳೆಯಾಗಿದ್ದರೂ ಅಂತರ್ಜಲವು ಒಂದು ಮೀಟರಿಗಿಂತ ಹೆಚ್ಚು ಆಳಕ್ಕೆ ಕುಸಿತಗೊಂಡ ಹಳ್ಳಿಗಳ ಸಂಖ್ಯೆ ಈ ಸಾಲಿಗಿಂತ ಕಡಿಮೆಯೇ ಇತ್ತು.

ಹೀಗಾಗಿ ನಕಾರಾತ್ಮಕ ಪರಿಣಾಮವನ್ನೇ ಬೀರಿರುವ ಅಥವಾ ಹೆಚ್ಚೆಂದರೆ ಯಾವುದೇ ಸಕಾರಾತ್ಮಕ ಫಲಿತಾಂಶವನ್ನೂ ತರದಿರುವ ಹಾಗೂ ೮೦೦೦ ಕೋಟಿ ರೂ.ಗಳಷ್ಟು ವ್ಯಯವಾಗಿರುವ ಈ  ಜಲ ಸಂಪನ್ನ ಜಮೀನು ಯೋಜನೆಯ ಬಗ್ಗೆ ಸಕಾರಣವಾಗಿಯೇ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಈ ಯೋಜನೆಯನ್ನು ಸಾರಾಂಶದಲ್ಲಿ ಜೆಸಿಬಿ-ಕಾಂಟ್ರಾಕ್ಟರುಗಳ ಲಾಬಿಯಿಂದ ಪ್ರೇರಿತವಾಗಿ ಮಾಡಲ್ಪಟ್ಟ ನಾಲೆಗಳನ್ನು ಅಗಲ-ಆಳಗೊಳಿಸುವ ಕಾಮಗಾರಿಯಷ್ಟೇ ಎಂದು ಕಂಡುಬಂದಿದ್ದು, ಈ ಯೋಜನೆಗೆ ತೆರಲಾಗಿರುವ ಪರಿಸರ, ಜಲಶಾಸ್ತ್ರೀಯ ಮತ್ತು ಸಾಮಾಜಿಕ ಬೆಲೆಯೇನೆಂದು ಹಲವಾರು ಪರಿಣಿತರು ಮತ್ತು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ತನ್ನಬೆನ್ನನ್ನು ತಾನೇ ತಟ್ಟಿಕೊಳ್ಳುವ ಸರ್ಕಾರದ ಮುಠಾಳತನಕ್ಕೆ ಈಗ ಎದುರಾಗಿರುವ ಬರಗಾಲವಾದರೂ ಕಡಿವಾಣ ಹಾಕಬೇಕು ಮತ್ತು ಇದರ ಸುತ್ತ ಎತ್ತಲಾಗುತ್ತಿರುವ ಪ್ರಶ್ನೆಗಳನ್ನು ಕೇಳಿಸಿಕೊಳ್ಳುವಂತೆ ಮಾಡಬೇಕು.


ಮಹಾರಾಷ್ಟ್ರ ಸರ್ಕಾರವು ಗಂಭೀರತೆಯ ಮುಖವಾಡ ತೊಟ್ಟು ಜಲ ಸಂಪನ್ನ ಜಮೀನುಗಳಂಥ ಚಿತ್ರ ವಿಚಿತ್ರ ಯೋಜನೆಗಳನ್ನೆಲ್ಲಾ ನವ ಸಂಶೋಧನೆಗಳೆಂಬ ಹೆಸರಿನಲ್ಲಿ ಜಾರಿಗೆ ತರ್ರುತ್ತಿರುವುದರಿಂದ ರಾಜ್ಯದಲ್ಲಿ ಜಾನುವಾರುಗಳ ಮೇವಿಗೇ ಕೊರತೆಯಾಗುವಂಥಾ ಗಂಡಾಂತರವನ್ನು ಉಂಟುಮಾಡುತ್ತಿದೆ. ತಮ್ಮ ರಾಸುಗಳಿಗೆ ಮೇವುಗಳನ್ನು ಒದಗಿಸಲು ಹೆಚ್ಚೆಚ್ಚು ಮೇವು ತಾಣಗಳನ್ನು ನಿರ್ಮಿಸಬೇಕೆಂದು ರೈತರು ಒತ್ತಡ ಹಾಕುತ್ತಿರುವುದರಿಂದ ರೈತರೇ ಸ್ವಯಂ ಹೆಚ್ಚೆಚ್ಚು ಮೇವನ್ನು ಉತ್ಪಾದಿಸುವಂತೆ ಉತ್ತೇಜನ ನೀಡಲು ರೈತರಿಗೆ ನೇರ ನಗದು ಹಸ್ತಾಂತರ ಯೋಜನೆಯನ್ನು ಜಾರಿ ಮಾಡುವ ಪ್ರಸ್ತಾಪವನ್ನು ಪಶುಸಂಗೋಪನಾ ಇಲಾಖೆಯು  ಸರ್ಕಾರದ ಮುಂದಿರಿಸಿದೆ. ರಾಜ್ಯವು ಯಾವ ಬೆಳೆಯನ್ನು ಬೆಳೆಯಲಾಗದಂಥ ಭೀಕರ ಬರಗಾಲವನ್ನು ಎದುರಿಸುತ್ತಿರುವಾಗ ಮಾಡಿರುವ ಈ ಪ್ರಸ್ತಾಪವನ್ನು ರೈತರ ಬವಣೆಯ ಬಗ್ಗೆ ಮಾಡಲಾಗಿರುವ ಕ್ರೂರ ಅಪಹಾಸ್ಯವೆಂದೇ ಪರಿಗಣಿಸಲಾಗುತ್ತಿದೆ. ಅಷ್ಟು ಮಾತ್ರವಲ್ಲದೇ ಉಳುಮಗಾಗಿ ಮೇವನ್ನು ಸಂಗ್ರಹಿಸಲು ಪ್ರತಿ ಮನೆಯಿಂದ ಒಬ್ಬೊಬ್ಬರು ಮೇವುತಾಣದಲ್ಲೇ ಕಾದುಕುಳಿತುಕೊಳ್ಳುವುದನ್ನು ತಪ್ಪಿಸಲು ಮೇವನ್ನು ಮನೆ ಬಾಗಿಲಿಗೇ ತಲುಪಿಸುವಂತಾಗಬೇಕೆಂಬ ಆಗ್ರಹವೂ ಇತ್ತೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಈ ಬರಗಾಲವು ಮತ್ತೊಂಡು ಮಹತ್ವದ ಕಾರಣದಿಂದಾಗಿಯೂ ೧೯೭೨ರ ಬರಗಾಲಕ್ಕಿಂತ ಭಿನ್ನವಾಗಿದೆ. ಆಗ ಪರಿಣಾಮಕಾರಿ ಬರಗಾಲ ನಿವಾರಣೆ ಮತ್ತು ನಿರ್ಮೂಲನಾ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ದುಡಿಯುವ ಜನತೆಯ ಹಲವಾರು ನಾಯಕರನ್ನೂ ಮತ್ತು ಜನಪರ ಬುದ್ಧಿಜೀವಿಗಳನ್ನೂ ಒಳಗೊಂಡ ದುಷ್ಕಾಲ್ ನಿವಾರಣ್ ಆಣಿ ನಿರ್ಮೂಲನ್ ಮಂಡಲ್ ನ ನೇತೃತ್ವದಲ್ಲಿ ರಾಜ್ಯಾದ್ಯಂತ ಬೃಹತ್ ಚಳವಳಿಯೇ ನಡೆಯಿತು. ಈ ಹೋರಾಟದ ಕಾರಣದಿಂದಾಗಿಯೇ ಸಮಗ್ರ ಜಲಮೂಲ ಅಭಿವೃದ್ಧಿ ಯೋಜನೆಗಳು ಅಸ್ಥಿತ್ವಕ್ಕೆ ಬಂದವಲ್ಲದೆ ಬರಗಾಲವು ಮಾನವ ನಿರ್ಮಿತವೇ ಹೊರತು ಪ್ರಕೃತಿ ಸಹಜವಲ್ಲವೆಂಬ ಪ್ರತಿಪಾದನೆಗಳು ಸಾರ್ವಜನಿಕ ಚರ್ಚೆಗಳ ಕೇಂದ್ರ ಸ್ಥಾನಕ್ಕೆ ಬರುವಂತಾಯಿತು. ಆದರೆ ಅಂದಿಗಿಂತ ಇಂದಿನ ಪರಿಸ್ಥಿತಿಯು ಹೆಚ್ಚು ವಿನಾಶಕಾರಿಯಾಗಿದ್ದರೂ ಸರ್ಕಾರವು ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳುವ ರೀತಿ ಒತ್ತಡವನ್ನು ಹಾಕಬಲ್ಲ, ೧೯೭೨ರ ರೀತಿಯ,  ಸಾರ್ವಜನಿಕ ಪ್ರತಿಸ್ಪಂದನೆಯನ್ನು ಮಾತ್ರ ಅದು ಇನ್ನೂ ಹುಟ್ಟುಹಾಕಿಲ್ಲ. ಇತ್ತೀಚಿನ ದಿನಗಳಲ್ಲಿ ದುಷ್ಕಾಲ್ ನಿವಾರಣ ಆಣಿ ನಿರ್ಮೂಲನ್ ಮಂಡಲ್ ನ ರೀತಿಯ ನಾಗರಿಕ ಮುಂದೊಡಗನ್ನು ಹುಟ್ಟಿಹಾಕುವ ಕೆಲವು ಪ್ರಯತ್ನಗಳು ನಡೆದಿವೆ. ಇಂದು ತುರ್ತು ಪರಿಹಾರದ ದೃಷ್ಟಿಯಿಂದ ಬರಗಾಲ ’ನಿವಾರಣೆ’ ಕಾರ್ಯಕ್ರಮದ ಮೇಲೆ ಸಂಪೂರ್ಣ ಗಮನವನ್ನು ಹಾಕಬೇಕಿದೆ. ಆದರೆ ಅದು ಬರಗಾಲ ’ನಿರ್ಮೂಲನೆ’ಯ ದೀರ್ಘಕಾಲೀನ ಅಗತ್ಯವನ್ನೇನೂ ಮರೆಸಬೇಕಿಲ್ಲ.  ಹಾಲೀ ಇಂಥಾ ಒಂದು ನಾಗರಿಕ ಮುಂದೊಡಗಿನಲ್ಲಿ ತೊಡಗಿಕೊಂಡಿರುವ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳು ಒತ್ತಿ ಒತ್ತಿ ಹೇಳುತ್ತಿರುವುದು ಇದನ್ನೇ. ಈ ಪರ್ಯಾಯ ದೃಷ್ಟಿಕೋನವನ್ನು ಜನಪ್ರಿಯಗೊಳಿಸಿ ಜನರನ್ನು ಅದರ ಸುತಾ ಅಣಿನೆರೆಸುವ ಮೂಲಕಮಾತ್ರ ಬರಪರಿಹಾರ ಮತ್ತು ಬರ ನಿವಾರಣಾ ಕಾರ್ಯಕ್ರಮಗಳ ಸುತ್ತಾ ಬಲಿತುಕೊಂಡಿರುವ ಪಟ್ಟಭದ್ರ ಹಿತಾಸಕ್ತಿಗಳ ಮತ್ತು ಲಾಬಿಗಳ ಪ್ರಭಾವವನ್ನು ಮೀರಲು ಸಾಧ್ಯ.

 ಕೃಪೆ: Economic and Political Weekly, Dec 8,  2018. Vol. 53. No.48
                                                              
(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )







ಭಾನುವಾರ, ನವೆಂಬರ್ 4, 2018

ಶಬರಿಮಲ ಆದೇಶವೂ ಮತ್ತು ಅದರ ವಿರೋಧಿಗಳೂ..


ಅನು: ಶಿವಸುಂದರ್ 
Image result for sabarimala

ಯಾವ ಸಮಾಜವು ಲಿಂಗನ್ಯಾಯದ ಮೌಲ್ಯಗಳನ್ನು ಅಂತರ್ಗತಗೊಳಿಸಿಕೊಂಡಿಲ್ಲವೋ ಆ ಸಮಾಜಕ್ಕೆ ಆತ್ಮಗೌರವದ ಕೊರತೆಯಿದೆಯೆಂದರ್ಥ.

ಶಬರಿಮಲ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಕುರಿತು ಇತ್ತೀಚೆಗೆ ಸುಪ್ರೀಂಕೋರ್ಟು ನೀಡಿದ ಆದೇಶವನ್ನು ಬೆಂಬಲಿಸುವವರೂ ಇದ್ದಾರೆ, ವಿರೋಧಿಸುವವರೂ ಇದ್ದಾರೆ. ಆದರೆ ವಿರೋಧಿಸುವವರಲ್ಲಿ ಎರಡು ಸ್ಪಷ್ಟವಾದ ಧಾರೆಗಳಿವೆ. ಒಂದೆಡೆ ಈ ವಿಷಯದ ಬಗ್ಗೆ ಕಾಂಗ್ರೆಸ್ ಪಕ್ಷವು ಎಡಬಿಡಂಗಿ ನಿಲುವು ತೆಗೆದುಕೊಂಡಿದೆ. ಕಾಂಗ್ರೆಸ್‌ನ ಕೇಂದ್ರ ಘಟಕವು ತೆಗೆದುಕೊಂಡಿರುವ ನಿಲುವಿಗೆ ಭಿನ್ನವಾದ ನಿಲುವನ್ನು ಅದರ ಕೇರಳ ರಾಜ್ಯ ಘಟಕ ತೆಗೆದುಕೊಂಡಿದೆ. ಮತೊಂದೆಡೆ ಭಾರತೀಯ ಜನತಾ ಪಕ್ಷದಂಥ (ಬಿಜೆಪಿ) ಹಿಂದೂತ್ವವಾದಿ ಪಕ್ಷಗಳು ಧಾರ್ಮಿಕ ಸ್ಥಾವರಗಳಲ್ಲಿರುವ ಅಧಿಕಾರ ರಚನೆಯನ್ನು ಬೆಂಬಲಿಸುವ ತನ್ನ ಧೋರಣೆಗೆ ತಕ್ಕದಾದ ನಿಲುವನ್ನೇ ತೆಗೆದುಕೊಂಡಿದೆ.

ಅದೇನೇ ಇದ್ದರೂ ಲಿಂಗನ್ಯಾಯದ ವಿರೋಧಿಗಳು ಸುಪ್ರೀಂ ಕೋರ್‍ಟಿನ ಆದೇಶವನ್ನು ವಿರೋಧಿಸುತ್ತಿರುವ ನೆಲೆಗಳು ಮಾತ್ರ ಅನೈತಿಕವಾಗಿರುವುದು ಮಾತ್ರವಲ್ಲದೆ ಸಾಂವಿಧಾನಿಕವಾಗಿ ಅಪಾಯಕಾರಿಯೂ ಆಗಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಸುಪ್ರೀಂ ಕೋರ್ಟು ಜಾರಿಮಾಡಲಾಗದ ಆದೇಶವನ್ನು ನೀಡಬಾರದು ಎಂದು  ಇತ್ತೀಚೆಗೆ ನೀಡಿರುವ ಹೇಳಿಕೆಯಲ್ಲಿ ಇದು ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಈ ಹೇಳಿಕೆಯು ಮೂರು ಮುಖ್ಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮೊದಲನೆಯದಾಗಿ ಬಿಜೆಪಿ ಮುಖ್ಯಸ್ಥರು ಕೋರ್ಟಿನ ಬಗ್ಗೆ ಈ ಅವಿಶ್ವಾಸವನ್ನೇಕೆ ಹುಟ್ಟುಹಾಕುತ್ತಿದ್ದಾರೆ? ಎರಡನೆಯದಾಗಿ ಲಿಂಗನ್ಯಾಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೇರಳದ ಕಾಂಗ್ರೆಸ್ಸಿನಂತ ರಾಜಕೀಯ ಪಕ್ಷಗಳ ಬದ್ಧತೆಯೇನು? ಮತ್ತು ಮೂರನೆಯದಾಗಿ ಯಾವ ಸಾಮಾಜಿಕ ರಾಜಕೀಯ ಶಕ್ತಿಗಳು ಸುಪ್ರೀಂಕೋರ್ಟಿನ ಶಬರಿಮಲ ಆದೇಶದ ಜೊತೆಜೊತೆಗೆ ನಿಂತುಕೊಂಡು ಪ್ರಜಾತಂತ್ರವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಸಾಮರ್ಥ್ಯವನ್ನು ಪಡೆದಿವೆ?

ಸುಪ್ರೀಂ ಕೋರ್ಟಿನ ಆದೇಶದ ಬಗ್ಗೆ ಬಿಜೆಪಿಯ ಅಧ್ಯಕ್ಷರ ಪ್ರತಿಕ್ರಿಯೆಯ ಹಿಂದೆ ಒಂದು ರಹಸ್ಯವಾದ ಅವಿಶ್ವಾಸವಿದೆ. ಕೋರ್ಟಿನ ಆದೇಶವು ಹೊರಬಿದ್ದ ನಂತರ ಬಿಜೆಪಿ ಅಧ್ಯಕ್ಷರು ಸಾರ್ವಜನಿಕರ ಪ್ರತಿರೋಧದ ಭೀತಿಯ ಗುಮ್ಮವನ್ನು ಎರಡು ಸ್ಪಷ್ಟವಾದ ಉದ್ದೇಶಗಳಿಗಾಗಿ ಬಳಕೆ ಮಾಡುತ್ತಿದ್ದಾರೆ. ಮೊದಲನೆಯದಾಗಿ ಅವರು ಈ ಆದೇಶವನ್ನು ವಿರೋಧಿಸುತ್ತಿರುವ ಕೇರಳದ ಒಂದು ವರ್ಗದ ಜನರನ್ನು ಸಂಘಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇರಳದಲ್ಲಿ ಅಧಿಕಾರವನ್ನು ಹಿಡಿಯುವ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಅವರು ಈ ಆದೇಶದಲ್ಲಿರುವ ಪರಿವರ್ತಕ ಮಹತ್ವವನ್ನು ಮತ್ತು ಸಹಜ ಪ್ರಾಮುಖ್ಯತೆಯನ್ನು ಅಲ್ಲಗೆಳೆಯುತ್ತಿದ್ದಾರೆ. ಎರಡನೆಯದಾಗಿ, ಒಂದು ಆದರ್ಶಪ್ರಾಯ ಸಮಾಜವನ್ನು ಸಾಕಾರಗೊಳಿಸಲು ಜನರು ಯಾವ ಪರಿವರ್ತನೆಯನ್ನು ತಂದುಕೊಳ್ಳಬೇಕೆಂಬ ಪ್ರಶ್ನೆಯನ್ನೇ ತಪ್ಪಿಸಲೆಂದೇ ಬಿಜೆಪಿ ಅಧ್ಯಕ್ಷರು ಈ ಹೇಳಿಕೆಯನ್ನು ನೀಡಿದ್ದಾರೆ. ವಾಸ್ತವವಾಗಿ ಬಿಜೆಪಿಯ ಅಥವಾ ಸಂಘಪರಿವಾರದ ಇತರ ಯಾವುದೇ ಸದಸ್ಯರು ಇಂಥಾ ಆದರ್ಶಮಯ ಪರಿವರ್ತನೆಗೆ ಸಂಬಂಧಪಟ್ಟ ಯಾವುದೇ ಪ್ರಶ್ನೆಗಳಿಗೆ ಮುಖಾಮುಖಿಯಾಗುವ ಆಸಕ್ತಿ ತೋರುವುದೇ ಇಲ್ಲ.  ಬಿಜೆಪಿ ಮತ್ತು ಅದರ ಮಾತೃ ಸಂಘಟನೆಯು ಭವಿಷ್ಯಕ್ಕಿಂತ ಗತದ ಬಗ್ಗೆಯೇ ಹೆಚ್ಚಿನ ಆಸಕ್ತಿ ಹೊಂದಿರುವುದರಿಂದಲೇ ಈ ಕೊರತೆಯು ಹುಟ್ಟಿಕೊಂಡಿರಬಹುದು. ಮನುಷ್ಯರು ಹೇಗಿರಬೇಕೆಂಬ ಪ್ರಶ್ನೆಯಲ್ಲಿ ಅಂತರ್ಗತವಾಗಿರುವ ನೈತಿಕತೆಯು ಬಿಜೆಪಿಯನ್ನು ಎಲ್ಲಾ ಮನುಷ್ಯರನ್ನು ಸಮಾನವಾಗಿ ನೋಡಬೇಕೆಂದು ಒತ್ತಾಯಿಸುವುದು ಮಾತ್ರವಲ್ಲದೆ ಸಮಾನತೆಯು ಅಭಿವ್ಯಕ್ತಿಗೊಳಲು ಬೇಕಾದ ಭೂಮಿಕೆಯನ್ನು ಒದಗಿಸುವಂತೆ ಆಗ್ರಹಿಸುತ್ತದೆ. ಇತರ ಧರ್ಮಗಳ ಶ್ರದ್ಧಾ ಕೇಂದ್ರಗಳಂತೆ ಶಬರಿಮಲವು ಸಹ ಸಮಾನತೆಯು ಅಭಿವ್ಯಕ್ತಗೊಳ್ಳಬೇಕಾದ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ ಆಧುನಿಕ ಭಾರತದ ಮಹಾನ್ ಚಿಂತಕರಾದ ಜ್ಯೋತಿರಾವ್ ಫುಲೆಯವರಿಂದ ನಾವು ಕೆಲವು ಅಂಶಗಳನ್ನು ಕಲಿಯಬಹುದಾಗಿದೆ. ಅವರ ಪ್ರಕಾರ ನಿರ್ಮಿಕನು (ದೇವರಿಗಿಂತ ಭಿನ್ನವಾದ ಪರಿಕಲ್ಪನೆ) ಸದಾ ಸಮಾನತೆಯ ಪರವಾಗಿದ್ದು ಆ ಮೌಲ್ಯವನ್ನು ಅಂತರ್ಗತಗೊಳಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕಿದೆ. ಫುಲೆಯವರ ಮಟ್ಟಿಗೆ ನಿರ್ಮಿಕನ ಆದರ್ಶವನ್ನು ಪೂರೈಸುವ ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿ ಹೊತ್ತಿರುವ ಗಂಡು ಮತ್ತು ಹೆಣ್ಣು ಇಬ್ಬರಿಗೂ ಸಮಾನತೆಯು ಅತ್ಯಂತ ಮಹತ್ವದ್ದಾಗಿದೆ.

ಸಾಮಾನ್ಯವಾಗಿ ಹೇಳುವುದಾದರೆ, ಯಾವುದೇ ಕಾನಾನಾತ್ಮಕ ಮಧ್ಯಪ್ರವೇಶಕ್ಕೆ ಮುನ್ನ ಮತ್ತು ಅದರಿಂದ ಸ್ವತಂತ್ರವಾಗಿಯೇ ನ್ಯಾಯ ಮತ್ತು ಸಮಾನತೆಯ ಪ್ರಶ್ನೆಯನ್ನು ಸಮಾಜವು ಗಮನಿಸಬೇಕು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ನಾಗರಿಕ ಸಮಾಜದ ಸದಸ್ಯರು ಅದರಲ್ಲೂ ಮುಖ್ಯವಾಗಿ ಔಪಚಾರಿಕವಾಗಿಯೇ ರಾಜಕೀಯ ಕ್ಷೇತ್ರದಲ್ಲಿ ವ್ಯವಹರಿಸುವ ರಾಜಕೀಯ ಪಕ್ಷಗಳು ಲಿಂಗ ಸಮಾನತೆಗೆ ಪೂರಕವಾಗಿ ಸಾರ್ವಜನಿಕರ ಧೋರಣೆಯನ್ನು ರೂಪಿಸುವಲ್ಲಿ ನಾಯಕತ್ವವನ್ನು ವಹಿಸಬೇಕಿರುತ್ತದೆ. ಸಭ್ಯವಾಗಿರಬೇಕೆಂದು ಬಯಸುವ ಯಾವುದೇ ಸಮಾಜವು ನ್ಯಾಯ ಮತ್ತು ಸಮಾನತೆಯನ್ನು ಸಾಕಾರಗೊಳಿಸಲು ಬೇಕಾದ ಪೂರಕ ಪರಿಸ್ಥಿತಿಯನ್ನು ಸೃಷ್ಟಿಸಲು ಪ್ರಾಮಾಣಿಕವಾದ ಮತ್ತು ಸಂವೇದನಾಶೀಲವಾದ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಲಿಂಗ ಸಮಾನತೆ ಮತ್ತು ನ್ಯಾಂiಗಳು ಲಿಂಗ, ವರ್ಣ ಮತ್ತು ಜಾತಿಬೇಧವಿಲ್ಲದಂತೆ ಪ್ರತಿಯೊಬ್ಬರು ಅನುಭವಿಸಬೇಕಾದ ಸಾರ್ವತ್ರಿಕ ಒಳಿತಿನ ವಿಷಯವೆಂದು ರಾಜಕೀಯ ಪಕ್ಷಗಳು ಭಾವಿಸಬೇಕು. ತಾವು ಮಾತ್ರ ದೇವಾಲಯಗಳಿಗೆ ಪ್ರವೇಶ ಮಾಡುವ ಅವಕಾಶವನ್ನು ಅನುಭವಿಸುತ್ತಾ ಮಹಿಳೆಯರಿಗೆ ಅದೇ ಅವಕಾಶವನ್ನು ನಿರಾಕರಿಸುತ್ತಿರುವುದರ ಹಿಂದಿನ ಪುರುಷಾಧಿಪತ್ಯ ಮೌಲ್ಯಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಸೃಷ್ಟಿಸಬೇಕಾದ ಅಗತ್ಯವನ್ನು ಸಂಬಂಧಪಟ್ಟ ರಾಜಕೀಯ ಪಕ್ಷಗಳು ತಾರ್ಕಿಕವಾಗಿಯಾದರೂ ಒಪ್ಪಿಕೊಳ್ಳಬೇಕು. ಹೀಗಾಗಿ ದೇವಾಲಯಗಳಿಗೆ ಮಹಿಳೆಯರ ಪ್ರವೆಶವೆಂಬ ವಿಷಯವನ್ನು ಕಾನೂನು ವ್ಯವಸ್ಥೆಯು ಪರಾಂಬರಿಸಲು ಒಪ್ಪಿಸುವ ಮುನ್ನ ಒಂದು ನೈತಿಕ ಹಾಗೂ ತಾತ್ವಿಕ ದೃಷ್ಟಿಯಲ್ಲಿ ದೇವಾಲಯವು ಮಹಿಳೆಯರು ಪ್ರವೇಶಿಸುವಂತೆ ಮಾಡುವುದು ಆ ಸಮಾಜದ ಪ್ರಾಥಮಿಕ ಕಾಳಜಿಯಾಗಬೇಕು. ಲಿಂಗನ್ಯಾಯದ ವಿರುದ್ಧವಾಗಿ ಸಾರ್ವಜನಿಕರ ಪ್ರತಿರೋಧವನ್ನು ಕಟ್ಟಲು ಪ್ರಯತ್ನಿಸುತ್ತಿರುವ ಬಿಜೆಪಿಯ ಅಧ್ಯಕ್ಷರು ಆ ದೇವಸ್ಥಾನದಲ್ಲಿ ಈಗಾಗಲೇ ಹಾಸುಹೊಕ್ಕಾಗಿರುವ ಪುರುಷಾಧಿಪತ್ಯವು ಮತ್ತಷ್ಟು ಗಟ್ಟಿಯಾಗುವಂತೆ ಮಾಡುತ್ತಿದ್ದಾರೆ. ಒಂದು ಪ್ರತಿಗಾಮಿ ಸಾರ್ವಜನಿಕರನ್ನು ಸೃಷ್ಟಿಸುವ ಮೂಲಕ ಈಗಾಗಲೇ ದೇವಾಲಯದ ಆಡಳಿತದಲ್ಲಿ ಹೊಕ್ಕಿನಿಂತಿರುವ ಪುರುಷಾಧಿಪತ್ಯದ ಶಕ್ತಿಗಳಿಗೆ ದೇವಾಲಯದ ಆಡಳಿತದ ಮೇಲೆ ಮತ್ತಷ್ಟು ನಿಯಂತ್ರಣವನ್ನು ಒದಗಿಸಿಕೊಟ್ಟಂತಾಗುತ್ತದೆ. ಹಾಗು ಅದು ಖಂಡಿತವಾಗಿ ಲಿಂಗನ್ಯಾಯದ ಪರವಾಗಿರುವುದಿಲ್ಲ. ಅದು ಮಹಿಳೆಯರ ಮತ್ತು ಕೆಳಜಾತಿಗಳ ಸಮಾನತಾ ಆದರ್ಶಗಳ ಆಶೊತ್ತರಗಳ ಮೇಲೆ ಮಿತಿಯನ್ನು ಹೇರುತ್ತದೆ.

ರಾಜಕೀಯ ಪಕ್ಷಗಳು ಮತ್ತು ಜನತೆ ಇಬ್ಬರೂ ಸಹ ಸಂವಿಧಾನವನ್ನು ಗೌರವಿಸಲು ವಿಫಲರಾದಾಗ ಲಿಂಗನ್ಯಾಯದಂಥ ಸಾರ್ವತ್ರಿಕ ಮೌಲ್ಯಗಳ ರಕ್ಷಣೆಗೆ ಸುಪ್ರೀಂ ಕೋರ್ಟು ಮುಂದಾಗಬೇಕಾಗುತ್ತದೆ. ಮಹಿಳೆಯರ ಪರವಾದ ಮುಂದೊಡಗನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನ್ಯಾಯಾಲಯದ ಮೇಲೆ ಹೊರಿಸುವುದು ಸಾರಾಂಶದಲ್ಲಿ ರಾಜಕಿಯ ಪಕ್ಷಗಳ ವೈಫಲ್ಯವೇ ಆಗಿದೆ. ಹೀಗಾಗಿ ಶಬರಿಮಲ ಆದೆಶವು ಲಿಂಗನ್ಯಾಯದ ಬಗ್ಗೆ ಸಾಮಾಜಿಕ ಸಮ್ಮತಿಯನ್ನು ರೂಢಿಸಲಾಗದ ರಾಜಕೀಯ ಪಕ್ಷಗಳ ವೈಫಲ್ಯದ ಪ್ರತಿಫಲನವಾಗಿದೆ. ಅದೇನೇ ಇದ್ದರೂ, ನ್ಯಾಯಾಲಯದ ಆದೇಶವನ್ನು ಜಾರಿ ಮಾಡುವಲ್ಲಿ ಕೇರಳದ ಎಡ ಪ್ರಜಾತಾಂತ್ರಿಕ ರಂಗದ (ಎಲ್‌ಡಿಎಫ್) ಸರ್ಕಾರವು ತೋರುತ್ತಿರುವ ಬದ್ಧತೆಯನ್ನು ಇಲ್ಲಿ ಗುರುತಿಸಲೇ ಬೇಕು. ಅದೇ ರೀತಿ ಎಲ್‌ಡಿಎಫ್  ಮತ್ತು ಇತರ ಕೆಳಜಾತಿ ಸಂಘಟನೆಗಳು ಇದರ ಸುತ್ತಾ ಜನರನ್ನು ಅಣಿನೆರೆಸುವ ಮೂಲಕ ಸುಪ್ರೀಂ ಕೋರ್‍ಟಿನ ಆದೇಶದಲ್ಲಿ ಅಡಕವಾಗಿರುವ ಪ್ರಜಾತಾಂತ್ರಿಕ ಅಂಶಗಳನ್ನು ಮತ್ತಷ್ಟು ಶ್ರೀಮಂತಗೊಳಿಸಲು ಪ್ರಯತ್ನಿಸುತ್ತಿವೆ. ಕೋರ್ಟಿನ ಈ ಆದೇಶವನ್ನು ಪರಿವರ್ತನಾವಾದಿ ನ್ಯಾಯಾಂಗ ಕ್ರಿಯಾಶೀಲತೆಯ ಮಹತ್ವದ ಹೆಜ್ಜೆಯೆಂದೇ ಪರಿಗಣಿಸಬೇಕು. ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಸಂವಿಧಾನದ ಮಾರ್ಗದರ್ಶನದ ತತ್ವಗಳಿಗನುಸಾರವಾಗಿ ಮತ್ತು ಂಬಂಧಪಟ್ಟ ಸಾಂವಿಧಾನಿಕ ಪರಿಚ್ಚೇಧಗಳಿಗನುಸಾರವಾಗಿಯೇ ತಮ್ಮ ಆದೇಶವನ್ನು ನೀಡಿದ್ದಾರೆಂದು ಮತ್ತೊಮ್ಮೆ ಹೇಳುವ ಅಗತ್ಯವಿಲ್ಲ. ಪ್ರಜಾತಂತ್ರದ ಆಶಯಗಳಿಗೆ ಮತ್ತು ಸಾಂವಿಧಾನಿಕ ನೈತಿಕತೆಗೆ ಕೇರಳ ಕಾಂಗ್ರೆಸ್ಸಿನ ಬದ್ಧತೆಯೆಷ್ಟೆಂದು ಅರ್ಥಮಾಡಿಕೊಳ್ಳಲು ವಿಶೇಷ ಸಾಧನಗಳ ಅಗತ್ಯವಿಲ್ಲ. ಸುಪ್ರೀಂಕೋರ್ಟು ಎತ್ತಿಹಿಡಿದಿರುವಂತೆ ಅವರು ವ್ಯಕ್ತಿಗಳ ಹಕ್ಕನ್ನು ಗೌರವಿಸಬೇಕು ಮಾತ್ರವಲ್ಲದೆ ಸಮಾನತೆಯ ಹಕ್ಕನ್ನು ಸಹಜ ಗುಣಲಕ್ಷಣವಾಗಿ ಪರಿಗಣಿಸಬೇಕು.
                                                                               
ಕೃಪೆ: Economic and Political Weekly Nov 3,  2018. Vol. 53. No.44
                                                                             
 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )