ಶನಿವಾರ, ಮಾರ್ಚ್ 17, 2018

ಮಾಲ್ಡೀವ್ಸನಲ್ಲಿ ಭಾರತದ ಹಸ್ತಕ್ಷೇಪ


 ಅನು: ಶಿವಸುಂದರ್ 
Image result for maldives

ಹಿಂದೂ ಮಹಾಸಾಗರದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸುವುದೇ ಅಮೆರಿಕ ಹಾಗೂ ಭಾರತದ ದೀರ್ಘಕಾಲೀನ ಯೋಜನೆಯಾಗಿರುವಂತೆ ಕಾಣುತ್ತಿದೆ.


ಕಳೆದ ಒಂದು ತಿಂಗಳಿಂz ಮಾಲ್ಡೀವ್ಸ್‌ನಲ್ಲಿ ಮುಂದುವರೆದಿರುವ ರಾಜಕೀಯ ಬಿಕ್ಕಟ್ಟನ್ನು ಗಮನಿಸದ ನಂತರವೂ ಯಾರಿಗಾದರೂ ಅಮೆರಿಕ ಹಾಗೂ ಭಾರತಕ್ಕೆ ಮಾಲ್ಡೀವ್ಸ್ ಜನತೆಯ ಪ್ರಜಾತಾಂತ್ರಿಕ ಹಕ್ಕುಗಳ ಬಗ್ಗೆ ಕಾಳಜಿ ಇದೆ ಎಂದು ಅನಿಸಿದಲ್ಲಿ ಅದಕ್ಕಿಂತ ರಾಜಕೀಯ ಮುಠಾಳತನ ಮತ್ತೊಂದಿಲ್ಲ ಎಂದೇ ಹೇಳಬೇಕು. ಹಿಂದೂ ಮಹಾಸಾಗರದಲ್ಲಿರುವ ಈ ದ್ವೀಪ ಸಮೂಹವು ಭಾರತ, ಜಪಾನ್, ಚೀನಾ ಮತ್ತಿತರ ಪೂರ್ವ ನೈರುತ್ಯದ ದೇಶಗಳಿಗೆ ತೈಲವನ್ನು ಸರಬರಾಜು ಮಾಡುವ ಹಾಗೂ ಆ ದೇಶಗಳ ಉತ್ಪನ್ನವನ್ನು ಪಶ್ಚಿಮ ಏಷಿಯಾ, ಆಫ್ರಿಕಾ ಮತ್ತು ಐರೋಪ್ಯ ದೇಶಗಳಿಗೆ ಸಾಗಾಟ ಮಾಡುವ ರಹದಾರಿಗೆ ಅತ್ಯಂತ ಸಮೀಪವಾಗಿದೆ. ಭಾರತವು ಮಾಲ್ಡೀವ್ಸ್ ಅನ್ನು ತನ್ನ ಆಶ್ರಿತ ದೇಶವೆಂದು ಭಾವಿಸಿಕೊಂಡಿದೆ. ಹಾಗಿದ್ದರೂ ಅಮೆರಿಕ ಹಾಗೂ ಭಾರತಗಳ ಆಶಯಕ್ಕೆ ತದ್ವಿರುದ್ಧವಾಗಿ ಮಾಲ್ಡೀವ್ಸ್ ಸರ್ಕಾರವು ಚೀನಾದ ಮಹಾನ್ ಹೆದ್ದಾರಿ ಮೂಲಸೌಕರ್ಯ ಯೋಜನೆಯ ಭಾಗವಾಯಿತಲ್ಲದೆ ಚೀನಾದೊಡನೆ ಮುಕ್ತ ವ್ಯಾಪಾರ ಒಪ್ಪಂದಕ್ಕೂ ಸಹಿ ಹಾಕಿದೆ.

ಇದೇ ಫೆಬ್ರವರಿ ೫ ರಂದು ಮಾಲ್ಡೀವ್ಸ್ ದೇಶದ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರು ತಮ್ಮ ದೇಶದ ಜನತೆಯ ಎಲ್ಲಾ ಪ್ರಜಾತಾಂತ್ರಿಕ ಹಕ್ಕುಗಳನ್ನೂ ೧೫ ದಿನಗಳ ಕಾಲ ಮೊಟಕುಗೊಳಿಸಿ ತುರ್ತುಪರಿಸ್ಥಿತಿಯನ್ನು ಘೋಷಿಸಿದರು ಮತ್ತು ಸುಪ್ರೀಂ ಕೋರ್ಟಿನ ಇಬ್ಬರು ನ್ಯಾಯಾಧೀಶರನ್ನು ಬಂಧಿಸಿದರು. ಈ ಇಬ್ಬರು ನ್ಯಾಯಾಧೀಶರು ಫೆಬ್ರವರಿ ೧ ರಂದು ದೇಶದ ಮಾಜಿ ಅಧ್ಯಕ್ಷರಾಗಿದ್ದ ಮುಹಮ್ಮದ್ ನಶೀದ್ ಅವರನ್ನೂ ಒಳಗೊಂಡಂತೆ ವಿರೋಧ ಪಕ್ಷದ ಹಲವು ಪ್ರಮುಖರನ್ನು ಬಿಡುಗಡೆಗೊಳಿಸಿದ್ದರು. ಅದಾದ ಮರುದಿನವೇ ದೇಶಭ್ರಷ್ಟರಾಗಿ ಶ್ರೀಲಂಕಾದಲ್ಲಿದ್ದ ನಶೀದ್ ಅವರು ಭಾರತವು ಮಾಲ್ಡಿವ್ಸ್ ಮೇಲೆ ಸೇನಾ ಆಕ್ರಮಣವನ್ನು ನಡೆಸಿ ಯಾಮೀನ್ ಅವರನ್ನು ಪದಚ್ಯುತಗೊಳಿಸಬೇಕೆಂದು ಪ್ರಚೋದನಾತ್ಮಕ ಹೇಳಿಕೆಯನ್ನು ಕೊಟ್ಟರು. ಸುಪ್ರೀಂ ಕೋರ್ಟು ತನ್ನ ನಿಲುವನ್ನು ಬೆಂಬಲಿಸುತ್ತದೆಂಬ ಖಚಿತ ನಿರೀಕ್ಷೆಯಲ್ಲಿದ್ದ ಯಾಮೀನರಿಗೆ ಆದರ ದಿಡೀರ್ ಆದೇಶ ಆಘಾತವನ್ನೇ ಉಂಟುಮಾಡಿತ್ತು. ಅಮೆರಿಕ, ಭಾರತದ ಮತ್ತು  ಐರೋಪ್ಯ ಒಕ್ಕೂಟಗಳು ಮಾಲ್ಡೀವ್ಸ್‌ನ ವಿರೋಧ ಪಕ್ಷವನ್ನು ಬೆಂಬಲಿಸುತ್ತಿದ್ದರಿಂದ ಆ ನ್ಯಾಯಾಧೀಶರ ಮೇಲೆ ತೀವ್ರವಾದ ಒತ್ತಡವಿದ್ದಿರಬೇಕು. ಯಾಮೀನ್‌ನ ಭಿನ್ನಮತೀಯರನ್ನೂ ಸಹ ನ್ಯಾಯಾಲಯ ಬಿಡುಗಡೆ ಮಾಡಿರುವುದರಿಂದ ಅವರು ಪಕ್ಷಾಂತರ ಮಾಡಿದ್ದರೆ ಯಾಮೀನ್ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತಿತ್ತು. ಮತ್ತು ಅದರಿಂದಾಗಿ ನಷೀದ್ ಅವರು ವರ್ಷಾಂತ್ಯದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಯಾಗಿಬಿಡುತ್ತಿದ್ದರು. ಹೀಗಾಗಿ ಯಾಮೀನ್ ತುರ್ತುಸ್ಥಿತಿಯನ್ನು ಘೋಷಿಸಿದ್ದಲ್ಲದೆ ಸುಪ್ರೀಂ ಕೋರ್ಟಿನ ಉಳಿದ ನ್ಯಾಯಾಧೀಶರು ತೀರ್ಮಾನವನ್ನು ಬದಲಿಸುವಂತೆ ಮಾಡಿದರು.

ಭಾರತದ ಕಾರ್ಪೊರೇಟ್ ಮಾಧ್ಯಮಗಳು ಸೂಚನೆ ದೊರೆತ ಅಲ್ಪಾವಧಿಯಲ್ಲೇ ಭಾರತದ ಸೇನಾಪಡೆಗಳು ನಿಯೋಜನೆಗೊಳ್ಳಲು ಸನ್ನದ್ಧವಾಗಿವೆಯೆಂದು ವರದಿ ಮಾಡುತ್ತಿವೆ. ಆದರೆ ಮಾಲ್ಡೀವ್ಸ್‌ನ ಸೇನಾಪಡೆಗಳು ಈಗಲೂ ಯಾಮೀನ್‌ಗೆ ನಿಷ್ಟವಾಗಿವೆಯೆಂಬುದನ್ನೂ, ಹಾಗೂ ಭಾರತವು ಮಾಲ್ಡೀವ್ಸ್‌ನ ಅಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಆ ದ್ವೀಪರಾಷ್ಟ್ರದ ಸಾರ್ವಭೌಮತೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಚೀನಾ ಗಟ್ಟಿಯಾಗಿ ಆದರೆ ಪರೋಕ್ಷವಾಗಿ ಸ್ಪಷ್ಟಪಡಿಸಿರುವುದನ್ನು ಭಾರತ ಸರ್ಕಾರ ಗಮನದಲ್ಲಿರಿಸಿಕೊಳ್ಳಬೇಕಿದೆ. ಅಷ್ಟು ಮಾತ್ರವಲ್ಲ. ಭಾರತದ ಸೇನಾಕ್ರಮವನ್ನು ಅಮೆರಿಕ ಮತ್ತು ಬ್ರಿಟನ್ ಬೆಂಬಲಿಸಿದರೂ ಸಹ ತಾನು ಅಮೆರಿಕದೆದುರು ವ್ಯೂಹಾತ್ಮಕ ಸ್ವಾಯತ್ತತೆಯನ್ನು ಕಾಪಾಡಿಕೊಂಡಿದೆ ಎಂದು ಕೊಚ್ಚಿಕೊಳ್ಳುವ ಭಾರತದ ನಿಲುವಿನ ವಿಶ್ವಾಸಾರ್ಹತೆಗೂ ಅದರಿಂದ ಧಕ್ಕೆ ತಗಲುತ್ತದೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟಿನ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮಾತನಾಡಿದ್ದಾರೆ. ಮತ್ತು ಆ ಸಂಭಾಷಣೆಯ ಮುದ್ರಿತ ಪ್ರತಿಯನ್ನು ಟ್ರಂಪ್ ಆಡಳಿತ ಬಿಡುಗಡೆ ಮಾಡಿದೆ. ಈ ಹಿಂದೆ ಹೇಗೆ ಅಮೆರಿಕ ಮತ್ತು ಭಾರತ ಜೊತೆಗೂಡಿ ಶ್ರೀಲಂಕಾದಲ್ಲಿ ಚೀನಾದ ಪರವಾದ ನಿಲುವು ತೆಗೆದುಕೊಳ್ಳುತ್ತಿದೆ ಎಂದು ತಾವು ಭಾವಿಸಿದ್ದ ಮಹೀಂದ್ರ ರಾಜಪಕ್ಸೆಯವರ ಸರ್ಕಾರದಿಂದ ಸಿರಿಸೇನಾ ಮೈತ್ರಿಪಾಲಾರವರು ಪಕ್ಷಾಂತರ ಮಾಡುವಂತೆ ಮಾಡಿ, ಅವರನ್ನು ೨೦೧೫ರ ಅಧ್ಯಕ್ಷೀಯ ಚುನಾವಣೆಯಲ್ಲಿ ವಿರೋಧಪಕ್ಷಗಳ ಸರ್ವ ಸಮ್ಮತ ಅಭ್ಯರ್ಥಿಯಾಗಿಸಿ ಗೆಲ್ಲುವಂತೆ ಮಾಡಿ ಶ್ರೀಲಂಕಾದಲ್ಲಿ ಆಳುವಕೂಟದ ಬದಲಾವಣೆಗೆ ಕಾರಣರಾಗಿದ್ದರೋ ಅದೇರೀತಿ ಮಾಲ್ಡೀವ್ಸ್‌ನಲ್ಲೂ ಆಳುವ ಸರ್ಕಾರದಲ್ಲಿ ಬದಲಾವಣೆ ತರಲು ತಂತ್ರೋಪಾಯಗಳನ್ನು ಮಾಡುತ್ತಿವೆ. ೧೯೮೮ರಲ್ಲಿ ಮಾಲ್ಡೀವ್ಸ್‌ನ ಆಗಿನ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಅವರ ಸರ್ವಾಧಿಕಾರಿ ಆಡಳಿತದ ವಿರುದ್ಧ ನಡೆದ ಕ್ಶಿಪ್ರಕ್ರಾಂತಿಯನ್ನು ಹತ್ತಿಕ್ಕಲು ಭಾರತದ ಸಹಕರಿಸಿತ್ತು. ನಂತರ ಗಯೂಮ್ ಅವರು ಭಾರತದ ಬೆಂಬಲದೊಂದಿಗೆ ೨೦೦೮ರ ತನಕ ಅಧ್ಯಕ್ಷರಾಗಿ ಮುಂದುವರೆದಿದ್ದರು.

ಆದರೆ ಅಧ್ಯಕ್ಷ ಯಾಮೀನ್ ಅವರು ರಾಷ್ಟ್ರೀಯ ಭದ್ರತೆಗೆ ತೀವ್ರ ಗಂಡಾಂತರವಿದೆಯೆಂಬ ನೆಪವೊಡ್ಡಿ ತುರ್ತುಸ್ಥಿತಿಯನ್ನು ಇನ್ನೂ ಮೂವತ್ತು ದಿನಗಳ ಕಾಲ ವಿಸ್ತರಿಸಿ ಭಾರತ ಮತ್ತು ಅಮೆರಿಕವನ್ನು ದಿಗ್ಭ್ರಾಂತಗೊಳಿಸಿದ್ದಾರೆ. ತನ್ನ ಹಿತ್ತಲಲ್ಲೇ ತನ್ನ ಪ್ರಭಾವವು ಕಳೆಗುಂದುವುದಕ್ಕೆ ಭಾರತವು ಅವಕಾಶ ನೀಡಬಾರದೆಂದು ಭಾರತದ ಕಾರ್ಪೊರೇಟ್ ಮಾಧ್ಯಮಗಳು ಮತ್ತು ಭದ್ರತಾ ವ್ಯವಸ್ಥೆಯ ಮುಖ್ಯಸ್ಥರುಗಳು ಸಲಹೆಗಳನ್ನು ಕೊಡುತ್ತಿದ್ದರೂ ಭಾರತವು ಈವರೆಗೆ ತನ್ನ ಪ್ರತಿಕ್ರಿಯೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ. ತನ್ನ ಹಿತ್ತಲಲ್ಲಿ ನಡೆಯುತ್ತಿರುವ ಬೆಳವಣಿಗಳನ್ನೇ ತಾನು  ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ ಭಾರತವು ಹೇಗೆತಾನೆ ಒಂದು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವೆಂದು ಕೆಲವು ಭದ್ರತಾ ಪರಿಣಿತರು ಪ್ರಶ್ನಿಸಿದ್ದಾರೆ. ಕಾರ್ಪೊರೇಟ್ ಮಾಧ್ಯಮದಲ್ಲಿನ ಒಂದು ವರ್ಗ ಭಾರತವು ಬಲಪ್ರಯೋಗದ ರಾಜತಾಂತ್ರಿಕತೆಯನ್ನು ಅನುಸರಿಸಬೇಕೆಂದೂ ಅಗತ್ಯಬಿದ್ದರೆ ಸೈನಿಕ ಮಧ್ಯಪ್ರವೇಶವನ್ನೂ ಮಾಡಬೇಕೆಂದೂ ಆಗ್ರಹಿಸುತ್ತಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಹೆಚ್ಚುತ್ತಿರುವ ಚೀನೀ ಪ್ರಭಾವಕ್ಕೆ ತಡೆಯೊಡ್ಡುವುದು ಹೇಗೆ ಎಂಬುದು ಸರ್ಕಾರದ ವರ್ತುಲಗಳನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಚೀನೀ ಪ್ರಭಾವವನ್ನು ಯಾವ್ಯಾವ ರೀತಿಗಳಲ್ಲಿ ತಡೆಗಟ್ಟಬಹುದೆಂಬುದರ ಬಗ್ಗೆಯೇ  ಟ್ರಂಪ್ ಮತ್ತು ಮೋದಿಯವರೂ ಸಹ ತಲೆಕೆಡಿಸಿಕೊಂಡಿದ್ದಾರೆ. ಚೀನಾ ತನ್ನ ವಿದೇಶೀ ವ್ಯಾಪಾರಕ್ಕಾಗಿ ಅವಲಂಬಿಸಿರುವ ಸಮುದ್ರಮಾರ್ಗದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸುವುದು ಅವರ ಪ್ರಧಾನ ಲಕ್ಷ್ಯವಾಗಿದೆ. ಮಾಲ್ಡೀವ್ಸ್ ನಲ್ಲಿ ಒಂದು ಸೇನಾನೆಲೆಯನ್ನು ಸ್ಥಾಪಿಸಿ ಅಲ್ಲಿಂದ ಸೀಶೆಲ್ಸ್ ಮತ್ತು ಡಿಯಾಗೋ ಗಾರ್ಸಿಯಾಗಳಲ್ಲಿರುವ ತಮ್ಮ ಸೇನಾನೆಲೆಗಳೊಂದಿಗೆ ಜಾಲವನ್ನು ನಿರ್ಮಿಸಿಕೊಳ್ಳಲು ಭಾರತ ಮತ್ತು ಅಮೆರಿಕಗಳು ಪಣ ತೊಟ್ಟಿರುವಂತೆ ಕಾಣುತ್ತದೆ. ಪ್ರಾಯಶಃ, ಮಾಲ್ಡೀವ್ಸ್ ನಲ್ಲಿ ಸರ್ಕಾರವು ಬದಲಾದ ನಂತರ ಅಲ್ಲಿ ಸೇನಾ ನೆಲೆಯನ್ನು ಸ್ಥಾಪಿಸಲು ಬೇಕಾದ ಶಾಸನಾತ್ಮಕ ಚೌಕಟ್ಟನ್ನು ಒದಗಿಸುವ ಸ್ಟೇಟಸ್ ಆಫ್ ಫೋರ್ಸ್ ಅಗ್ರಿಮೆಂಟ್ಗೆ ಸಹಿ ಹಾಕುವಂತೆ ಹೊಸ ಸರ್ಕಾರದ ಮೇಲೆ ಟ್ರಂಪ್ ಆಡಳಿತವು ಒತ್ತಡ ಹಾಕಲಿದೆ.

ಕೃಪೆ: Economic and Political Weekly, Mar 3,  2018. Vol. 53. No.9
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )






ಎನ್‌ಕೌಂಟರ್ ಸಾವುಗಳು: ಪ್ರಭುತ್ವವೇ ಧೂರ್ತನಾದರೆ..?

         ಅನು: ಶಿವಸುಂದರ್ 
Image result for encounter
ಉತ್ತರಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಎನ್‌ಕೌಂಟರ್ ಸಾವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲೇಬೇಕು.

ಅಪರಾಧಿಗಳನ್ನು ನಿರ್ಮೂಲನೆ ಮಾಡಲು ಇರುವ ಅತ್ಯುತ್ತಮ ಮಾರ್ಗವೆಂದರೆ ಅಪರಾಧಿಗಳನ್ನೇ ನಿರ್ಮೂಲನೆ ಮಾಡುವುದು. ಉತ್ತರಪ್ರದೇಶವನ್ನು ಆರ್ಥಿಕ ಹೂಡಿಕೆಗೆ ಸುರಕ್ಷಿತವಾದ ಪ್ರದೇಶವನ್ನಾಗಿ ಮಾಡಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಅನುಸರಿಸುತ್ತಿರುವ ಮಾರ್ಗ ಇದೆ ಎಂದು ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು, ೧೮ ಜನ ಕೇಂದ್ರ ಕ್ಯಾಬಿನೆಟ್ ಮಂತ್ರಿಗಳು ಮತ್ತು ಪ್ರಮುಖ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದ ಉತ್ತರಪ್ರದೇಶದ ಹೂಡಿಕಾ ಸಮಾವೇಶಕ್ಕೆ ಮುಂಚಿನ ೧೦ ದಿನಗಳಲ್ಲಿ ಪೊಲೀಸರು ಮತ್ತು ತಥಾಕಥಿತ ಕ್ರಿಮಿನಲ್‌ಗಳ ನಡುವೆ ನಾಲ್ಕು ಎನ್‌ಕೌಂಟರ್ಗಳು ನಡೆದವು. ಇದನ್ನೂ ಸೇರಿಸಿದರೆ ಯೋಗಿ ಆದಿತ್ಯನಾಥರ ನೇತೃತ್ವದಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ೨೦೧೭ರ ಮಾರ್ಚ ಮತ್ತು ೨೦೧೮ರ ಜನವರಿಯ ನಡುವೆ ೯೨೧ ಎನ್‌ಕೌಂಟರ್ಗಳು ನಡೆದಿವೆ ಮತ್ತು ಇವುಗಳಲ್ಲಿ ೩೩ ಜನರು ಸಾವನ್ನಪ್ಪಿದ್ದಾರೆ. ಈ ಅಪಾರ ಸಂಖ್ಯೆಯ ಕೊಲೆಗಳನ್ನು ಗಮನಕ್ಕೆ ತೆಗೆದುಕೊಂಡ ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗವು ತಾನೇ ಸ್ವಯಂ ಪ್ರೇರಿತವಾಗಿ ಉತ್ತರಪ್ರದೇಶ ಸರ್ಕಾರಕ್ಕೆ ಕಳೆದ ನವಂಬರ್‌ನಲ್ಲಿ ನೋಟೀಸನ್ನು ನೀಡಿದೆ. ಆದರೆ ಉತ್ತರಪ್ರದೇಶ ಸರ್ಕಾರ ಈವರೆಗೆ ಅದಕ್ಕೆ ಉತ್ತರಿಸುವ ಗೋಜಿಗೂ ಹೋಗಿಲ್ಲ.
ಈಗ ಉತ್ತರಪ್ರದೇಶದಲ್ಲಿ ನಡೆಯುತ್ತಿರುವುದು ಈ ಹಿಂದೆ ಎಲ್ಲೂ ನಡೆದೇ ಇಲ್ಲ ಅಂತೇನಲ್ಲ. ಇಂಥ ಎನ್‌ಕೌಂಟರ್ ಕೊಲೆಗಳಿಗೆ ಮಹಾರಾಷ್ಟ್ರವೇ ನೇತಾರ. ಅಲ್ಲಿ ಕ್ರಿಮಿನಲ್ ಗ್ಯಾಂಗ್‌ಗಳನ್ನು ನಿರ್ಮೂಲನೆ ಮಾಡುವ ಹೆಸರಿನಲ್ಲಿ ೧೯೮೨-೨೦೦೩ರ ನಡುವೆ ಅಪರಾಧದ ಆರೋಪ ಹೊತ್ತಿದ್ದ ೧೨೦೦ ಜನರನ್ನು ಕೊಲ್ಲಲಾಗಿದೆ. ಅತಿಹೆಚ್ಚು ಎನ್‌ಕೌಂಟರ್ ಕೊಲೆಗಳನ್ನು ಮಾಡಿದ ಪೋಲಿಸ್ ಅಧಿಕಾರಿಯನ್ನು ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದು ಹಾಡಿಹೊಗಳಲಾಗುತ್ತಿತ್ತಲ್ಲದೆ ಅಂಥವರ ಬಗ್ಗೆ ಸಿನಿಮಾಗಳನ್ನು ಮಾಡಲಾಯಿತು. 

ಅಪರಾಧಿಯೆಂದು ಅನುಮಾನಿಸಲ್ಪಟ್ಟ ವ್ಯಕ್ತಿಗೂ ನ್ಯಾಯಬದ್ಧ ವಿಚಾರಣೆಯ ಹಕ್ಕಿರುತ್ತದೆಂದೂ, ಯಾವ ವ್ಯಕ್ತಿಯನ್ನು ಕಾನೂನಿನ ಸಮ್ಮತಿಯಿಲ್ಲದೆ ಕೊಲ್ಲಲಾಗದೆಂದೂ ಕೆಲವು ಮಾನವ ಹಕ್ಕು ಸಂಘಟನೆಗಳು ಯಾವಾಗ ಈ ಎನ್‌ಕೌಂಟರ್ಗಳನ್ನು ಪ್ರಶ್ನಿಸಲು ಪ್ರಾರಂಭಿಸಿದರೋ ಆಗ ಮಾತ್ರ ಕೆಲವು ಅಧಿಕಾರಿಗಳಿಗೆ ತಮ್ಮ ಕಾರ್ಯಾಚರಣೆಯ ಬಗ್ಗೆ ಉತ್ತರಿಸಲೇಬೇಕಾದ ಅನಿವಾರ್ಯತೆ ಉಂಟಾಯಿತು. ಕೆಲವರಿಗೆ ಶಿಕ್ಷೆಯಾಯಿತಾದರೂ ಬಹಳಷ್ಟು ಜನ ಬಚಾವಾದರು. ವಾಸ್ತವವಾಗಿ ಪ್ರದೀಪ್ ಶರ್ಮಾ ಎಂಬ ಎನ್‌ಕೌಂಟರ್ ಪರಿಣಿತ ಅಧಿಕಾರಿಯೊಬ್ಬ ೨೦೦೯ರಲ್ಲಿ ಅಮಾನತ್ತಿಗೊಳಗಾದರೂ ೨೦೧೩ರಲ್ಲಿ ಎಲ್ಲಾ ಆರೋಪಗಳಿಂದ ಮುಕ್ತನಾದ. ಆತನ ಪ್ರಕಾರ ಕ್ರಿಮಿನಲ್‌ಗಳು ಕೊಚ್ಚೆನೀರಿನಂತೆ. ಮತ್ತು ತಾನು ಪರಿಶುದ್ಧ ನೀರಿನಂತೆ. ಈತ ವೈಯಕ್ತಿಕವಾಗಿ ೧೦೪ ಎನ್‌ಕೌಂಟರ್ ಕೊಲೆಗಳಿಗೆ ಕಾರಣಕರ್ತನೂ ಆಗಿದ್ದಾನೆ.

ಉತ್ತರಪ್ರದೇಶದ ಪೊಲೀಸರ ಈ ಕಾರ್ಯಾಚರಣೆಗಳಿಗೆ ಆ ರಾಜ್ಯದ ಮುಖ್ಯಮಂತ್ರಿಯ ಬಹಿರಂಗ ಬೆಂಬಲವಿದೆ. ಇನ್ನು ಮುಂದೆ ಉತ್ತರಪ್ರದೇಶದ ಪೊಲೀಸರು ಗುಂಡಿಗೆ ಗುಂಡಿನಿಂದಲೇ ಉತ್ತರ ಕೊಡುತ್ತಾರೆ. ಹಿಂದಿನ ಸರ್ಕಾರಗಳಂತಲ್ಲದೆ ನಮ್ಮ ಸರ್ಕಾರವು ಈ ಸಮಸ್ಯೆಯನ್ನು ಬಗೆಹರಿಸಲು ಯಾವ ಪದ್ಧತಿಯು ಸಮರ್ಪಕವಾದದ್ದೋ ಅದನ್ನು ಅನುಸರಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರವನ್ನು ಕೊಟ್ಟಿದ್ನ್ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳು ಹಾಗೂ ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳ ಬಗ್ಗೆ ಸಂವೇದನಾಶೂನ್ಯರೆಂದು ಹೆಸರು ಪಡೆದಿರುವ ಅಲ್ಲಿನ ಪೊಲೀಸ್ ಪಡೆಗೆ ಈ ರೀತಿ ಸಂಪೂರ್ಣ ಹಸಿರು ನಿಶಾನೆ  ದೊರೆತೆರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಒಬ್ಬ ಮನುಷ್ಯನನ್ನು ಕೊಂದುಹಾಕಿದ ಮೇಲೆ ಆತನು ಅಪರಾಧಿಯೆಂದು ಹೇಗೆ ಸಾಬೀತು ಮಾಡಲು ಸಾಧ್ಯ? ಪೂರ್ವ ನಿರ್ಧಾರಿತವಾಗಿಯೇ ಒಬ್ಬನನ್ನು ಅಪರಾಧಿಯೆಂದು ತೀರ್ಮಾನಿಸಿ ಕೊಲೆ ಮಾಡಿಬಿಡುವ ಈ ಪದ್ಧತಿ ಈ ದೇಶದ ಕಾನೂನು ಹಾಗೂ ನ್ಯಾಯ ವ್ಯವಸ್ಥೆಯನ್ನೇ ಲೇವಡಿ ಮಾಡುವಂತಿದೆ. ಒಬ್ಬ ವ್ಯಕ್ತಿಯು ಅಪರಾಧಿಯಾಗಿದ್ದರೂ, ಆಗಿರದಿದ್ದರೂ ಇದು ವ್ಯಕ್ತಿಯೊಬ್ಬನ ಹಕ್ಕಿನ ಮೂಲಭೂತ ಉಲ್ಲಂಘನೆಯೇ ಆಗಿದೆ. ಒಂದು ನಾಗರಿಕ ಸಮಾಜದಲ್ಲಿ ಇಂಥ ಕೃತ್ಯಗಳಿಗೆ ಕಿಂಚಿತ್ತೂ ಸಮರ್ಥನೆಯಿರುವುದಿಲ್ಲ.

ಹೀಗೆ ಅಪರಾಧಿಗಳನ್ನು ಅಕ್ಷರಶಃ ನಿರ್ಮೂಲನೆ ಮಾಡುವುದರ ಜೊತೆಜೊತೆಗೆ ಉತ್ತರಪ್ರದೇಶ ಸರ್ಕಾರವು ಮಹಾರಾಷ್ಟ್ರದ ಅನುಭವಗಳಿಂದ ಮತ್ತೊಂದು ಕ್ರಮವನ್ನು ಆಮದು ಮಾಡಿಕೊಂಡಿದೆ. ೧೯೯೯ರಲ್ಲಿ ಮಹಾರಾಷ್ಟ್ರದಲ್ಲಿ ಜಾರಿಯಾದ (ಮ ಕೋಕಾ) ಕಾಯಿದೆಯನ್ನೇ ಹೋಲುವ ಉತ್ತರ ಪ್ರದೇಶ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯನ್ನು (ಉಪ್ರ ಕೋಕಾ)ಉತ್ತರಪ್ರದೇಶ ಶಾಸನಸಭೆಯು ಚರ್ಚೆಯನ್ನೇ ಮಾಡದೆ ೨೦೧೭ರ ಡಿಸೆಂಬರ್‌ನಲ್ಲಿ ಅನುಮೋದಿಸಿತು. ಮಹತ್ವದ ವಿಷಯವೇನೆಂದರೆ ೨೦೦೮ರಲ್ಲಿ ಆಗಿನ ಮುಖ್ಯಮಂತ್ರಿ ಮಾಯಾವತಿಯವರ ಬಹುಜನ ಸಮಾಜ ಪಕ್ಷದ ನೇತೃತ್ವದ ಸರ್ಕಾರವೂ ಸಹ ಇದೇ ಬಗೆಯ ಶಾಸನವೊಂದನ್ನು ಜಾರಿ ಮಾಡಲು ಪ್ರಯತ್ನಿಸಿದಾಗ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಅದನ್ನು ತಿರಸ್ಕರಿಸಿದ್ದರು. ಆದರೆ ಹಾಲಿ ರಾಷ್ಟ್ರಪತಿಗಳು ಈ ಬಾರಿ ಅದಕ್ಕೆ ಅನುಮತಿ ಕೊಡುವ ಸಾಧ್ಯತೆ ಹೆಚ್ಚಾಗಿದೆ.

ಈ ಬಗೆಯ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಗಳ ಸಮಸ್ಯೆಯೇನೆಂದರೆ (ಉಪ್ರಕೋಕಾ, ಮಕೋಕಾ) ಅಂತರ್ಗತವಾಗಿರುವ ಕರಾಳ ಸ್ವರೂಪದಿಂದಾಗಿ ಆ ಕಾಯಿದೆಯ ಕಾನೂನಿನ ದುರುಪಯೋಗಕ್ಕೆ ಸಾಕಷ್ಟು ಅವಕಾಶಗಳನ್ನು ತೆರೆದಿಡುತ್ತದೆ. ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳು ಹಲವಾರು ಬಾರಿ ಹೇಳಿರುವಂತೆ ಅಪರಾಧಗಳನ್ನು ಮತ್ತು ಅಪರಾಧಿಗಳನ್ನು ನಿಯಂತ್ರಿಸಲು ಪೊಲೀಸರ ಬಳಿ ಸಾಕಷ್ಟು ಅಧಿಕಾರವಿಲ್ಲವಂತೇನಲ್ಲ. ಈಗಾಗಲೇ ಇರುವ ಕಾನೂನುಗಳಲ್ಲೇ ಅಂತ ಕಠಿಣ ಕ್ರಮಗಳ ಅವಕಾಶವಿದ್ದು, ಕೇಂದ್ರದ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ-೧೯೬೭ (ಅನ್‌ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್-ಯುಎಪಿಎ)ಯು ಪೊಲೀಸರ ಅಧಿಕಾರದ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸುತ್ತದೆ. ಆದರೆ ಇರುವ ಅಧಿಕಾರಗಳನ್ನು ಬಳಸಿಕೊಳ್ಳುವ ಬದಲಿಗೆ ಅಪರಾಧ ಮತ್ತು ಭಯೋತ್ಪಾದನೆಯನ್ನು ನಿಗ್ರಹಿಸುವ ಹೆಸರಿನಲ್ಲಿ ರಾಜ್ಯಗಳು ತಮಗೆ ಇನ್ನಷ್ಟು ಅಧಿಕಾರವನ್ನು ಕೊಡುವಂಥ ಪ್ರತ್ಯೇಕ ಕಾಯಿದೆಗಳನ್ನು ಜಾರಿ ಮಾಡಲು ಯತ್ನಿಸುತ್ತಿರುತ್ತವೆ. ಬಹಳಷ್ಟು ಸಾರಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಸಮರ್ಥರಾದವರನ್ನು ಬಂಧಿಸಲು ಇಂಥಾ ಕಾನೂನುಗಳು  ಬಳಕೆಯಾಗುತ್ತಿರುತ್ತವೆ. 

ಇತ್ತೀಚಿನ ದಿನಗಳಲ್ಲಿ ಉತ್ತರಪ್ರದೇಶದಲ್ಲಿ ಮಾಡಲಾಗುತ್ತಿರುವ ಎನ್‌ಕೌಂಟರ್ ಕೊಲೆಗಳ ಬಗ್ಗೆ ಮಾಧ್ಯಮದಲ್ಲಿ ಬರುತ್ತಿರುವ ವರದಿಗಳು ಎನ್‌ಕೌಂಟರ್ ಕೊಲೆಯಾಗುತ್ತಿರುವ ರೀತಿಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಕೊಲೆಯಾದ ಕುಟುಂಬದವರು ಹೇಳುವಂತೆ ಆ ವ್ಯಕ್ತಿಗಳನ್ನು ಪೊಲೀಸರು ಮನೆಯಿಂದ ಎಳೆದೊಯ್ದಿರುತ್ತಾರೆ. ಆದರೆ ನಂತರದಲ್ಲಿ ಅವರು ಎನ್‌ಕೌಂಟರ್‌ನಲ್ಲಿ ಕೊಲೆಯಾzರೆಂಬ ಸುದ್ದಿ ಪತ್ರಿಕೆಗಳಲ್ಲಿ ಬರುತ್ತದೆ. ಆದರೆ ರಾಜ್ಯ ಸರ್ಕಾರವು ಮಾತ್ರ ಈ ಆತಂಕಗಳನ್ನು ಕಿಂಚಿತ್ತೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಬದಲಿಗೆ ಈ ಎನ್ಕೌಂಟರ್ ಕೊಲೆಗಳು ರಾಜ್ಯದ ಕ್ರಿಮಿನಲ್ ಲೋPದ ಮೇರ್ಸರ್ಕಾರವು ಗಳಿಸಿದ ಜಯವೆಂಬಂತೆ ಬಣ್ಣಿಸುತ್ತಿದೆ. ಆದರೆ ವಾಸ್ತವದಲ್ಲಿ ಉತ್ತರಪ್ರದೇಶದ ಕ್ರಿಮಿನಲ್ ಗ್ಯಾಂಗುಗಳ ಬೇರುಗಳು ರಾಜ್ಯದ ರಾಜಕೀಯದಲ್ಲೇ ಇದೆ. 

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈ ಎನ್ಕೌಂಟರ್ ಕೊಲೆಗಳ ಬಗ್ಗೆ ಉತ್ತರಪ್ರದೇಶ ಸರ್ಕಾರವನ್ನು ಉತ್ತರದಾಯಿಯನ್ನಾಗಿ ಮಾಡುವ ಕ್ರಮಗಳನ್ನು ಮುಂದುವರೆಸುವುದು ತುಂಬಾ ಮುಖ್ಯ. ಒಂದು ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರೆ ಅದನು ಅವರು ಸಂಶಯಾತೀತವಾಗಿ ಸಾಬೀತುಮಾಡಬೇಕು. ಹಾಗಿಲ್ಲದೆ ಎನ್‌ಕೌಂಟರ್ ಕೊಲೆಯಾದ ಕೆಲವು ವ್ಯಕ್ತಿಗಳ ಮರಣೋತ್ತರ ಪರೀಕ್ಷೆಗಳ ವರದಿಗಳು ತೋರಿಸುವಂತೆ ತೀರಾ ಹತ್ತಿರದಿಂದ ಗುಂಡು ಹೊಡೆದು ವ್ಯಕ್ತಿಯ ಕೊಲೆಯಾಗಿದ್ದಲ್ಲಿ ಕಾನೂನನ್ನು ಪಾಲಿಸಲು ನೇಮಕವಾದವರೆ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಭಾವಿಸಲು ಅದು ಸಾಕಷ್ಟು ಕಾರಣಗಳನ್ನು ಒದಗಿಸುತ್ತದೆ. ಅಪರಾಧಿಗಳನ್ನು ಮಟ್ಟ ಹಾಕುವ ಹೆಸರಿನಲ್ಲಿ ಪ್ರಭುತ್ವವೇ ಧೂರ್ತನಾಗಿ ವರ್ತಿಸತೊಡಗಿದಾಗ ಅಮಾಯಕರ ಜೀವನಗಳು ಹೆಚ್ಚೆಚ್ಚು ಅಪಾಯಕ್ಕೆ ಈಡಾಗುತ್ತವೆ. 


 ಕೃಪೆ: Economic and Political Weekly, Feb 24,  2018. Vol. 53. No.8
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )