ಶುಕ್ರವಾರ, ಮಾರ್ಚ್ 16, 2018

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣವೊಂದರ ಪಾಠಗಳು


     ಅನು: ಶಿವಸುಂದರ್ 
ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುತ್ತಿರುವ ವಂಚನೆಗಳನ್ನು ಖಾಸಗೀಕರಣದ ಮೂಲಕ ತಡೆಗಟ್ಟಬಹುದೆಂಬ ವಾದ ತಪ್ಪು.
Image result for The Punjab National Bank (PNB)

ಭಾರತವನ್ನು ದಿಕ್ಕೆಡಿಸಿದ ನೈಜ ಹಾಗೂ ಕಲ್ಪಿತ ಹಗರಣಗಳ ಸಾಲಿಗೆ ಇತ್ತೀಚಿನ ಸೇರ್ಪಡೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣ. ಪಿಎನ್‌ಬಿ ಹಗರಣಕ್ಕೆ ಸಂಬಂಧಪಟ್ಟಂತೆ ಎರಡು ಮುಖ್ಯ ವಿಷಯಗಳು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿರುವುದನ್ನು ಗುರುತಿಸಲೇಬೇಕು. ಮೊದಲನೆಯದಾಗಿ ಈ ಬ್ಯಾಂಕ್ ಹಗರಣವನ್ನು ಯೋಜಿತವಾಗಿ ನಡೆಸಿಕೊಂಡು ಬರಲಾಗಿದೆ. ಸಾಮಾನ್ಯವಾಗಿ ಬ್ಯಾಂಕಿನ ಉದ್ಯೋಗಿಗಳು ಅಥವಾ ಹೊರಗಿನವರು ಬ್ಯಾಂಕಿನ ನೀತಿನಿಯಮಗಳನ್ನು ಅಡ್ಡದಾರಿಗಳ ಮೂಲಕ ಉಲ್ಲಂಘಿಸಿ ಬ್ಯಾಂಕುಗಳಿಗೆ ನಷ್ಟವುಂಟು ಮಾಡಿದಾಗ ಬ್ಯಾಂಕ್ ಹಗರಣಗಳು ಸಂಭವಿಸುತ್ತವೆ. ಆದರೆ ಈ ಹಗರಣವು ತದ್ವಿರುದ್ಧವಾಗಿ ನಡೆದಿದೆ. ಈ ಹಗರಣದಲ್ಲಿ ಸ್ವಯಂ ಬ್ಯಾಂಕೇ ಮುಂದೆ ನಿಂತು ತನ್ನ ಶೇರುದಾರರು ಮತ್ತು ಮ್ಯಾನೇಜರುಗಳು ಲಾಭ ಮಾಡಿಕೊಳ್ಳಲು ಅನುವುಮಾಡಿಕೊಟ್ಟು ತಮ್ಮ ಗ್ರಾಹಕರು ಅಥವಾ ತೆರಿಗೆದಾರರಿಗೆ ವಂಚನೆ ಮಾಡಿದೆ. ವಸೂಲಾಗದ ಸಾಲ-ನಿಷ್ಕ್ರಿಯ ಸಂಪತ್ತು (ನಾನ್ ಪರ್‌ಫಾರ್ಮಿಂಗ್ ಅಸೆಟ್ಸ್-ಎನ್‌ಪಿಎ)ಗಳು ಸಾಲಗಾರನ ಜೊತೆ ಬ್ಯಾಂಕ್ ಸಿಬ್ಬಂದಿಯೂ ಕೈಗೂಡಿಸಿ ಮಾಡುವ ವಂಚನೆಯಿಂದಲೂ ಸಂಭವಿಸಬಹುದು ಅಥವಾ ಸಾಲ ತೆಗೆದುಕೊಂಡ ವಿಶ್ವಾಸಾರ್ಹ ಉದ್ಯಮವೊಂದು ತನ್ನ ವ್ಯವಹಾರದಲ್ಲಿ ತೆಗೆದುಕೊಂಡ ತಪ್ಪಾದ ವ್ಯಾವಹಾರಿಕ ನಿರ್ಣಯಗಳಿಂದಲೂ ಸಂಭವಿಸಬಹುದು.

ಈ ವಂಚನೆಯಲ್ಲಿ ಎದ್ದುಕಾಣುತ್ತಿರುವ ಎರಡನೇ ಸಂಗತಿಯೆಂದರೆ ಈ ಹಗರಣವು ಬ್ಯಾಂಕ್ ವ್ಯವಸ್ಥೆ ಮತ್ತು ವಿಧಿವಿಧಾನಗಳ ಆಚರಣೆಯಲ್ಲಿರುವ ಲೋಪದೋಷಗಳ ದುರ್ಬಳಕೆಯಿಂದ (ಆಪರೇಷನಲ್ ರಿಸ್ಕ್-ಆಚರಣಾತ್ಮಕ ಅಪಾಯ ಎಂದು ಕರೆಯಲ್ಪಡುವ ವಿದ್ಯಮಾನದಿಂದ) ಸಂಭವಿಸಿದೆ. ಎಂದರೆ ಈ ಅಪಾಯವು ಸಾಲದ ವಾಪಸಾತಿ ಸಂಬಂಧಿತ ಅಪಾಯವಾಗಿರಲಿಲ್ಲ. ಈ ಹಗರಣವು ಹೊರಬಂದ ಕೂಡಲೇ ಪಡೆದುಕೊಂಡ ಅಪಾರ ರಾಜಕೀಯ ಆಯಾಮಗಳನ್ನು ಗಮನಿಸಿದಾಗ ಈ ಭಿನ್ನತೆಯ ಮಹತ್ವವು ಗೊತ್ತಾಗುತ್ತದೆ. ವಿರೋಧ ಪಕ್ಷಗಳು ಈ ಹಗರಣಕ್ಕೆ ಆಳ್ವಿಕೆಯಲ್ಲಿರುವ ಎನ್‌ಡಿಎ ಸರ್ಕಾರವೇ ಹೊಣೆ ಎಂದು ಕೂಡಲೇ ಆರೋಪ ಹೊರಿಸಿದವು. ಭಾರತೀಯ ಜನತಾ ಪಕ್ಷವು ಇದಕ್ಕೆ ಪ್ರತ್ಯುತ್ತರವಾಗಿ ಆರೋಪಿ ನೀರವ್ ಮೋದಿಗೂ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರಿಗೂ ಸಂಂಧ ಇತ್ತೆಂದು ಆರೋಪಿಸಿದೆ.

ಸಾಲ ವಾಪಸಾತಿ ಸಂಬಂಧಿತ ಅಪಾಯಗಳಲ್ಲಿ (ಕ್ರೆಡಿಟ್ ರಿಸ್ಕ್) ಗಳಲ್ಲಿ ಸಾಮಾನ್ಯವಾಗಿ ರಾಜಕೀಯ ಅಥವಾ ಮೇಲಧಿಕಾರಿಗಳ ಮಧ್ಯಪ್ರವೇಶವೂ ಸಹ ಒಂದು ಪ್ರಮುಖ ಅಂಶವಾಗಿರುತ್ತದೆ. ಅವು ಶಿಫಾರಸ್ಸಿನ ಮೇಲೆ (’ಬಿಹೆಸ್ಟ್’ ಲೆಂಡಿಂಗ್) ನೀಡಿದ ಸಾಲಗಳಾಗಿರುತ್ತವೆ. ಹಲವಾರು ಪ್ರಸಂಗಗಳಲ್ಲಿ ವಾಣಿಜ್ಯದೃಷ್ಟಿಯಿಂದ ಲಾಭದಾಯಕವಲ್ಲದ ವ್ಯವಹಾರಗಳಿಗೆ ಸಾಲವನ್ನು ನೀಡಲು ರಾಜಕಾರಣಿಗಳು ಮತ್ತು ಮೇಲಧಿಕಾರಿಗಳು ಸಾರ್ವಜನಿಕ ಬ್ಯಾಂಕುಗಳ ಮೇಲೆ ಒತ್ತಡವನ್ನು ಹಾಕುವುದು ಚಿರಪರಿಚಿತವಾದ ಸಂಗತಿಯೇ ಆಗಿದೆ. ಆದರೆ ಆಪರೇಷನಲ್ ರಿಸ್ಕ್- ಆಚರಣಾತ್ಮಕ ಲೋಪದೋಷಗಳ ದುರ್ಬಳಕೆ-ಯಿಂದ ನಡೆಯುವ ವಂಚನೆಗಳು ಬೇರೆ ರೀತಿಯವು. ಸಾಮಾನ್ಯವಾಗಿ ಇಂಥಾ ವಂಚನೆಗಳು ಪ್ರಧಾನವಾಗಿ ಬ್ಯಾಂಕು ಸಿಬ್ಬಂದಿಗಳಿಗೆ  ಹಾಗೂ ಕೆಲವೊಮ್ಮೆ ಹೊರಗಿನವರಿಗೆ ಲಾಭ ಮಾಡಿಕೊಡುತ್ತದೆ. ಇದರಲ್ಲಿ ರಾಜಕೀಯ ಮಧ್ಯಪ್ರವೇಶದಂಥ ಅಂಶಗಳು ಅಪರೂಪ. ನೀರವ್ ಮೋದಿಗೆ ಎಷ್ಟೇ ರಾಜಕೀಯ ಬೆಂಬಲವಿದ್ದರೂ ಈ ಸದ್ಯಕ್ಕಂತೂ ಪಿಎನ್‌ಬಿ ಬ್ಯಾಂಕಿನಲ್ಲಿ ನಡೆದಿರುವ ವಂಚನೆಗೆ ರಾಜಕಿಯ ನಿರ್ದೇಶನ ಅಥವಾ ಬೆಂಬಲವಿತ್ತು ಎಂದು ಸಾಬೀತುಪಡಿಸುವ ಆಧಾರಗಳಿಲ್ಲ.

ಈ ವಂಚನೆಯ ವಿವರಗಳೇ ಇನ್ನೂ ಸ್ಪಷ್ಟವಾಗಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ ಹೊರದೇಶಗಳಲ್ಲಿ ವ್ಯವಹಾರ ನಡೆಸುತ್ತಿರುವ ನೀರವ್ ಮೋದಿಯರ ಸಂಸ್ಥೆಗಳ ಪರವಾಗಿ ಪಿಎನ್‌ಬಿ ಬ್ಯಾಂಕು ಹಲವಾರು ’ಲೆಟರ್ ಆಫ್ ಅಂಡರ್‌ಸ್ಟಾಂಡಿಂಗ್’-ಎಲ್‌ಒಯು- ಒಂದು ಬಗೆಯ ಗ್ಯಾರಂಟಿ ಪತ್ರ-ಗಳನ್ನು ನೀಡಿದೆ. ಆ ಬ್ಯಾಂಕಿನ ಉದ್ಯೋಗಿಯೊಬ್ಬರು ತನಗೆ ಅಧಿಕಾರವಿಲ್ಲದಿದ್ದರೂ ಬ್ಯಾಂಕುಗಳು ತಮ್ಮ ನಡುವಿನ ವ್ಯವಹಾರಗಳಿಗಾಗಿ ಬಳಸುವ ’ಸ್ವಿಫ್ಟ್’ ವ್ಯವಸ್ಥೆಯನ್ನು ಬಳಸಿಕೊಂಡು ಆ ಪತ್ರಗಳನ್ನು ಒದಗಿಸಿದ್ದಾರೆ. ಆ ಉದ್ಯೋಗಿಯು ಇಂಥಾ ಹಲವಾರು ಎಲ್‌ಒಯುಗಳನ್ನು ನೀಡಿದ್ದರಿಂದ ಹೊರದೇಶದಲ್ಲಿರುವ ಬ್ಯಾಕುಗಳು ನೀರವ್ ಮೋದಿಗೆ ಸಾಲಗಳನ್ನು ನಿರಂತರವಾಗಿ ನೀಡುತ್ತಲೇ ಹೋಗಿವೆ.

ಸಾಮಾನ್ಯವಾಗಿ ಇಂಥಾ ಎಲ್‌ಒಯುಗಳನ್ನು ೯೦ ದಿನಗಳಷ್ಟು ಸಣ್ಣ ಅವಧಿಗೆ ಮಾತ್ರ ನೀಡಲಾಗುತ್ತದೆ. ಆದರೆ ಈ ಸಿಬ್ಬಂದಿಯು ನೀತಿನಿಯಮಗಳನ್ನೆಲ್ಲಾ ಮುರಿದು ೩೬೫ ದಿನಗಳಷ್ಟು ದೀರ್ಘಾವಧಿಯನ್ನು ನೀಡಿದ್ದಾರೆ. ವರದಿಗಳ ಪ್ರಕಾರ ಇದು ಕಳೆದ ಏಳು ವರ್ಷಗಳಿಂದ ನಡೆಯುತ್ತಾ ಬಂದಿದೆ. ಅಂದರೆ ನೀರವ್ ಮೋದಿಯ ಕಂಪನಿಗಳು ಈ ಹಿಂದೆ ತಾವು ಪಡೆದುಕೊಂಡ ಸಾಲಗಳನ್ನು ಅವಧಿಯೊಳಗೆ ಹಿಂತಿರುಗಿಸಿದ್ದರಿಂದಲೇ ಅವರಿಗೆ ಹೊಸ ಸಾಲಗಳನ್ನು ಹೊರದೇಶದ ಬ್ಯಾಂಕುಗಳು ನೀಡಿವೆ ಅಂದರ್ಥ. ಇಲ್ಲದಿದ್ದರೆ ಪಿಎನ್‌ಬಿ ಕೊಡುತ್ತಿದ್ದ ಎಲ್‌ಒಯುಗಳನ್ನು ಹೊರದೇಶದ ಬ್ಯಾಂಕುಗಳು ಒಂದು ಕಾಲದ ನಂತರ ಮಾನ್ಯ ಮಾಡುತ್ತಿರಲಿಲ್ಲ. ಹಾಗಿದ್ದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಮೋದಿಯು ಸಾಲ ವಾಪಸ್ ಮಾಡದೇ ಇದ್ದರಿಂದ ಈ ಸಮಸ್ಯೆ ಪ್ರಾರಂಭವಾಯಿತೇ? ಅಥವಾ ನೀರವ್ ಮೋದಿಯ ಕಂಪನಿಗೆ ಎಲ್‌ಒಯುಗಳನ್ನು ಒದಗಿಸುತ್ತಿದ್ದ ಹಳೆಯ ಉದ್ಯೋಗಿಯ ಸ್ಥಾನಕ್ಕೆ ಬಂದ ಹೊಸ ಸಿಬ್ಬಂದಿಯು ಮೊದಲಿನಂತೆ  ಎಲ್‌ಒಯು ನೀಡಲು ನಿರಾಕರಿಸಿದ್ದರಿಂದ ಸಮಸ್ಯೆ ಪ್ರಾರಂಭವಾಯಿತೇ? ಈ ಮಹತ್ವದ ವಿಷಯವು ಇನ್ನೂ ತನಿಖೆಗೊಳಪಡಬೇಕಿದೆ.

ಹೀಗಾಗಿ ಏನನ್ನು ಮಾಡಬೇಕೆಂಬುದನ್ನು ಮತ್ತು ಅವಸರ ಮಾಡಿ ಏನನ್ನು ಮಾಡಬಾರದು ಎಂಬುದನ್ನು ಸ್ಪಷ್ಟಗೊಳಿಸಿಕೊಳ್ಳುವುದು ಅತ್ಯಂತ ಮುಖ್ಯ. ಮೊಟ್ಟ ಮೊದಲನೆಯದಾಗಿ ಈವರೆಗೆ ನೀಡಲಾಗಿರುವ ಎಲ್ಲ ಎಲ್‌ಒಯುಗಳ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ವಾಪಸ್ ಬರಬೇಕಿರುವ ಸಾಲದ ಮೊತ್ತವೆಷ್ಟು ಮತ್ತು ಅದನ್ನು ಸರಿದೂಗಿಸುವಲ್ಲಿ ಲಭ್ಯವಿರುವ ನೀರವ್ ಮೋದಿಯ ಆಸ್ತಿಪಾಸ್ತಿಗಳೆಷ್ಟು ಎಂಬ ಲೆಕ್ಕಾಚಾರವನ್ನು ಮಾಡಬೇಕಿದೆ. ಆಗ ಬ್ಯಾಂಕುಗಳಿಗೆ ಆಗಿರುವ ನಷ್ಟವೆಷ್ಟು ಎಂಬ ಸರಿಯಾದ ಲೆಕ್ಕ ಸಿಗುತ್ತದೆ. ಇದನ್ನು ಅತ್ಯಂತ ತ್ವರಿತವಾಗಿ ಮಾಡಬೇಕು. ಏಕೆಂದರೆ ಆಗಿರುವ ನಷ್ಟದ ಬಗ್ಗೆ ತಳಬುಡವಿಲ್ಲದೆ ನಡೆಯುತ್ತಿರುವ ಊಹಾಪೋಹಗಳಿಂದ ಸಾರ್ವಜನಿಕ ಬ್ಯಾಂಕುಗಳ ಶೇರುಬೆಲೆ ಕುಸಿಯುತ್ತಿದೆ. ಎರಡನೆಯದಾಗಿ ಅಂತರಿಕ ನಿಯಂತ್ರಣಾ ವ್ಯವಸ್ಥೆಗಳನ್ನು ಉಲ್ಲಂಘಿಸಲು ಹೇಗೆ ಸಾಧ್ಯವಾಯಿತು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇದಕ್ಕೆ ಪಿಎನ್‌ಬಿ ಬ್ಯಾಂಕು ತನ್ನ ಸ್ವಿಫ್ಟ್ ವ್ಯವಸ್ಥೆಯನ್ನು ಇತರ ಬ್ಯಾಂಕುಗಳಂತೆ ಕೇಂದ್ರೀಯ ಬ್ಯಾಂಕು ಸಾಫ್ಟ್‌ವೇರಿಗೆ  (ಕೋರ್ ಬ್ಯಾಂಕಿಂಗ್ ಸಾಫ್ಟ್‌ವೇರ್)ಜೋಡಿಸದೇ ಇದ್ದದ್ದು ಒಂದು ಕಾರuವೆಂದು ಹೇಳಲಾಗುತ್ತಿದೆ. ಒಂದು ವೇಳೆ ಅದೇ ಕಾರಣವಾಗಿದ್ದರೂ ನೀತಿ ನಿಯಮಗಳ ಈ ಉಲ್ಲಂಘನೆಯನ್ನು ಬ್ಯಾಂಕಿನ ಅಂತರಿಕ ಲೆಕ್ಕ ಪರಿಶೋಧಕರಾಗಲೀ (ಆಡಿಟರ್ಸ್). ಆ ನಂತರದ ಹಂತಗಳ ಲೆಕ್ಕ ಪರಿಶೋಧಕರಾಗಲೀ ಏಕೆ ಗಮನಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆ ಎದುರಾಗುತ್ತದೆ. ಸರ್ಕಾರವಂತೂ ಈ ಹೊಣೆಯನ್ನು ರಿಸರ್ವ್ ಬ್ಯಾಂಕಿನ ಉಸ್ತುವಾರಿಯಲ್ಲಿ ಆಗಿರುವ ಲೋಪಕ್ಕೆ ಕಟ್ಟಲು ಆತುರ ತೋರುತ್ತಿದೆ. ಆದರೆ ಸಾಮಾನ್ಯವಾಗಿ ಉಸ್ತುವಾರಿಯ ಜವಾಬ್ದಾರಿಯುಳ್ಳ ಆರ್‌ಬಿಐ,  ವಂಚನೆಗೊಳಗಾದ ಬ್ಯಾಂಕು ಆ ಬಗ್ಗೆ ತನಗೆ ವರದಿ ಮಾಡಿದ ನಂತರವಷ್ಟೇ ಪ್ರತಿಕ್ರಿಯಿಸುತ್ತದೆ.

ಪಿಎನ್‌ಬಿ ಬ್ಯಾಂಕಿನ ಈ ಹಗರಣ ಮತ್ತೊಂದು ಸುತ್ತಿನ ಸಾರ್ವಜನಿಕ ಬ್ಯಾಂಕುಗಳ ದೂಷಣೆಗೆ ಎಡೆಮಾಡಿಕೊಟ್ಟಿದೆ. ಸಾರ್ವಜನಿಕ ಬ್ಯಾಂಕುಗಳಲ್ಲಿ ನಡೆಯುತ್ತಿರುವ ವಂಚನೆಗೆ ಹಾಗೂ ನಿಯಂತ್ರಣದಲ್ಲಿ ಆಗುತಿರ್ರುವ ಪ್ರಮಾದಗಳಿಗೆ ಸರ್ಕಾರಿ ಒಡೆತನವೇ ಕಾರಣವೆಂದು ಹೇಳಲಾಗುತ್ತಿದೆ. ವಂಚನೆಗಳನ್ನು ತಡೆಗಟ್ಟುವಲ್ಲಿ ಮತ್ತು ಸಾರ್ವಜನಿಕರ ಹಣದ ದುರುಪಯೋಗವನ್ನು ತಡೆಗಟ್ಟುವಂತೆ ಮಾಡುವಲ್ಲಿ ಸಾರ್ವಜನಿಕ ಬ್ಯಾಂಕುಗಳ ಮ್ಯಾನೇಜರುಗಳಿಗೆ ಯಾವುದೇ ವಿಶೇಷ ಆಸಕ್ತಿಯನ್ನು ಬಿತ್ತದಿರುವುದೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಹೀಗಾಗಿ ಈ ತರ್ಕಸರಣಿಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋದರೂ ಸಕಲ ರೋಗಕ್ಕೂ ಖಾಸಗೀಕರಣವೇ ಮದ್ದು ಎನ್ನುವ ತೀರ್ಮಾನಕ್ಕೆ ತಲುಪುತ್ತೇವೆ. 

ಕಳೆದ ಕೆಲವು ವರ್ಷಗಳಲ್ಲಿ ಜಗತ್ತಿನ ಹಲವು ಪ್ರಖ್ಯಾತ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಆಗಿರುವ ದೊಡ್ಡ ಮಟ್ಟದ ವಂಚನೆಗಳ ಬಗ್ಗೆ ಮಾಹಿತಿ ಇರುವವರಿಗೆ ಈ ತರ್ಕವು ಹಾಸ್ಯಾಸ್ಪದವೆನಿಸುವುದು ಸಹಜ. ೧೯೯೫ರಲ್ಲಿ ಜಗತ್ತಿನ ಅತಿದೊಡ್ಡ ಇನ್‌ವೆಸ್ಟ್‌ಮೆಂಟ್ ಬ್ಯಾಂಕುಗಳಲ್ಲಿ ಒಂದಾಗಿದ್ದ ಇಂಗ್ಲೆಂಡಿನ ’ಬೇರಿಂಗ್ಸ್ ಬ್ಯಾಂಕ್ನ್ನು  ನಿಕ್ ಲೀಸನ್ ಎಂಬ ಧೂರ್ತ ವ್ಯಾಪಾರಿ ಕುಸಿದುಬೀಳುವಂತೆ ಮಾಡಿದ್ದ. ಇಂಥಾ ವ್ಯಕ್ತಿಗಳು ನೀತಿ ನಿಯಮಗಳನ್ನು ಉಲ್ಲಂಘಿಸುತ್ತಾ ಹಣಕಾಸು ಸಂಸ್ಥೆಗಳಿಗೆ ಅಪಾರವಾದ ನಷ್ಟವನ್ನುಂಟುಮಾಡಿದ್ದಾರೆ.

ಮತ್ತೊಂದು ಕಡೆ ಖಾಸಗಿ ಒಡೆತನದ ಜಗತ್ತಿನ ಹಲವಾರು ಖ್ಯಾತ  ಬ್ಯಾಂಕುಗಳು ಕಾನೂನುಗಳನ್ನು ಉಲ್ಲಂಘಿಸಿ ಲಕ್ಷಾಂತರ ಬಿಲಿಯನ್ ಡಾಲರ್‌ಗಳಷ್ಟು ದಂಡವನ್ನು ಕಟ್ಟಿದ್ದಾರೆ. ಹಲವಾರು ಖಾಸಗಿ ಅಂತರರಾಷ್ಟ್ರೀಯ ಬ್ಯಾಂಕುಗಳು ಲೈಬರ್ ರಿಗ್ಗಿಂಗ್ (ಅಂತರರಾಷ್ಟ್ರೀಯ ಸಾಲದ ದರವನ್ನು ತಮಗೆ ಅನುಕೂಲವಾದ ದರದಲ್ಲಿ ಇರುವಂತೆ ನಿಗದಿಗೊಳಿಸುವ ವಂಚನೆ-ಅನು), ವಿನಿಮಯ ದರಗಳಲ್ಲಿ ಹಸ್ತಕ್ಷೇಪ, ಕಪುಹಣವನ್ನು ಕಳ್ಳಲೆಕ್ಕಗಳ ಮೂಲಕ ಬಿಳಿಮಾಡಿಕೊಳ್ಳುವುದು (ಮನಿ ಲಾಂಡರಿಂಗ್), ಹಣಕಾಸು ಉಪಕರಣಗಳ ಮೋಸದ ಮಾರಾಟಗಳಂಥ ಹಲವಾರು ಬಗೆಗಳ ಕಾನೂನು ಉಲ್ಲಂಘನೆಗಳಲ್ಲಿ ಮತ್ತು ವಂಚನೆಗಳಲ್ಲಿ ತೊಡಗಿಕೊಂಡಿವೆ. ಈ ರೀತಿ ಕಾನೂನು ಉಲ್ಲಂಘಿಸುವುದರಲ್ಲಿ ಖಾಸಗಿ ಬ್ಯಾಂಕುಗಳ ಮ್ಯಾನೇಜರುಗಳಿಗೆ ಸ್ವಂತ ಲಾಭವಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಡೆಯುತ್ತಿರುವ ವಂಚನೆಗಳು ಮತ್ತು ಬ್ಯಾಂಕಿಂಗ್ ವ್ಯವಹಾರದಲ್ಲಿನ ವೈಫಲ್ಯತೆಗಳು ಆಯಾ ಬ್ಯಾಂಕುಗಳ ಒಡೆತನದ ಸ್ವರೂಪದ ಮೇಲೆ ಆಧಾರಪಟ್ಟಿರುವುದಿಲ್ಲ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಂಡುಬರುತ್ತಿರುವ ವಂಚನೆಗಳಿಗೆ ಖಾಸಗೀಕರಣವು ಪರಿಹಾರವೆಂಬುದು ಕೇವಲ ಒಂದು ಭ್ರಮೆಯಷ್ಟೆ.

 ಕೃಪೆ: Economic and Political Weekly, Feb 24,  2018. Vol. 53. No.8
    (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )



ಪ್ರಜಾಸತ್ತೆಯ ಕಾವಲುಗಾರರನ್ನು ಸಬಲೀಕರಿಸುವುದು ಹೇಗೆ?



             ಅನು: ಶಿವಸುಂದರ್ 
ಭ್ರಷ್ಟಾಚಾರದ ವಿರುದ್ಧ ನಿಜವಾದ ಹೋರಾಟ ಮಾಡುತ್ತಿರುವವರು ಅಂಥಾ ಮಾಹಿತಿಗಳನ್ನು ಬಯಲುಮಾಡುತ್ತಿರುವವರೇ (ವಿಷಲ್‌ಬ್ಲೋಯರ್) ಆಗಿದ್ದಾರೆ.

Image result for whistle-blower

ಒಟ್ಟಾರೆಯಾಗಿ ಬ್ಯಾಂಕುಗಳಿಗೆ ೧೧,೪೦೦ ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ಹಣವನ್ನು ಮೋಸ ಮಾಡಿದ್ದಾರೆ ಎಂಬ ಆರೋಪ ಹೊತ್ತಿರುವ ವಜ್ರಾಭರಣ ವ್ಯಾಪಾರಿ ನೀರವ ಮೋದಿ ಮತ್ತವರ ಸಂಗಡಿಗರ ಪ್ರಕರಣದಲ್ಲಿ ಇದನ್ನು ಬಯಲಿಗೆ ತಂದ ವಿಷಲ್‌ಬ್ಲೋಯರ್‌ನ ಪಾತ್ರ ಹೆಚ್ಚು ಗಮನಕ್ಕೆ ಬಾರದೆ ಹೋಗಿಬಿಟ್ಟಿದೆ. ಈ ನೀರವ ಮೋದಿಯ ವ್ಯವಹಾರ-ಪಾಲುದಾರನಾದ ಮತ್ತು ಗೀತಾಂಜಲಿ ಜೆಮ್ಸ್ ಎಂಬ ಕಂಪನಿಯ ಮಾಲೀಕನೂ ಆದ ಮೆಹುಲ್ ಚೋಸ್ಕಿಯೆಂಬುವರ ವ್ಯವಹಾರಗಳಲ್ಲಿ ತುಂಬಾ ಗಂಭೀರವಾದ ಲೋಪಗಳಿರುವ ಬಗ್ಗೆ ಬೆಂಗಳೂರು ಮೂಲದ ಹರಿಪ್ರಸಾದ್ ಎಂಬುವರು ೨೦೧೬ರಲ್ಲೇ ಕಂಪನಿಗಳ ರಿಜಿಸ್ಟ್ರಾರ್ ಅವರ ಕಚೇರಿಗೆ ದೂರು ನೀಡಿದ್ದರು. ಹಾಗಿದ್ದರೂ ಆ ಕಂಪನಿಯ ಮೇಲೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಅಷ್ಟು ಮಾತ್ರವಲ್ಲ. ತಾವೂ ಈ ಮುಂಚೆಯೇ ಕೊಟ್ಟ ಎಚ್ಚರಿಕೆಯ ಬಗ್ಗೆ ಹರಿಪ್ರಸಾದ್ ಅವರು ಮಾಧ್ಯಮದವರಿಗೆ ತಿಳಿಸಿದ ನಂತರದಲ್ಲಿ ಮಾತ್ರವೇ ಚೋಕ್ಸಿ ಅವರ ಹೆಸರು ಬಯಲಿಗೆ ಬಂತು.

ಅಧಿಕಾರಿಗಳು ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ೨೦೦೩ರಲ್ಲಿ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲುಪಡಿಸಿದ್ದಕ್ಕೆ ಸತ್ಯೇಂದ್ರ ದುಬೆ ಎಂಬ ಯುವ ಇಂಜನಿಯರ್ ಕೊಲೆಯಾದಾಗಿನಿಂದ ಈ ರೀತಿ ಭ್ರಷ್ಟಾಚಾರವನ್ನು ಬಯಲುಮಾಡುವವರ (ವಿಷಲ್‌ಬ್ಲೋಯರ್) ಪರಿಸ್ಥಿತಿ ಮಾತ್ರ ತುಂಬಾ ಅಪಾಯದಲ್ಲೇ ಇದ್ದಿದೆ. ದುಬೆಯಂಥ ಕೆಲವರು ಕೊಲೆಯಾದರೆ ಇನ್ನಿತರರು ಹಿಂಸಾಚಾರಕ್ಕೆ ಮತ್ತು ಬೆದರಿಕೆ ಕರೆಗಳಿಗೆ ಗುರಿಯಾದರು ಅಥವಾ ಇನ್ನೂ ಕೆಲವರು ಭ್ರಷ್ಟಾಚಾರದ ಬಗ್ಗೆ ನೀಡಿದ ಮುನ್ನೆಚ್ಚರಿಕಾ ಮಾಹಿತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಇಂಥಾ ಘಟನೆಗಳು ಆಗಾಗ ಮಾಧ್ಯಮದ ಮತ್ತು ಜನರ ಗಮನವನ್ನು ಸೆಳೆದು ನಂತರ ಮರೆಯಾಗುತ್ತಿವೆ.

ಭ್ರಷ್ಟಾಚಾರವನ್ನು ಬಯಲುಗೊಳಿಸುವವರ (ವಿಷಲ್‌ಬ್ಲೋಯರ್ಸ್) ರಕ್ಷಣಾ ಕಾಯಿದೆಯೊಂದು ೨೦೧೪ರಲ್ಲೇ ಲೋಕಸಭೆಯ ಅನುಮೋದನೆಯನ್ನು ಪಡೆದರೂ ಈವರೆಗೂ ಅದು ಬಳಕೆಯಾಗುತ್ತಿಲ್ಲ. ೨೦೧೫ರಲ್ಲಿ ನರೇಂದ್ರಮೋದಿ ಸರ್ಕಾರವು ಈ ಮಸೂದೆಯಲ್ಲಿ ಮಹತ್ವದ ಅಂಶಗಳನ್ನು ಕೈಬಿಟ್ಟು ದುರ್ಬಲಗೊಳಿಸಿದ ಮಸೂದೆಯೊಂದನ್ನು ಮಂಡಿಸಿತು. ತನ್ನ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬದ್ಧವಾಗಿದೆಯೆಂಬುದನ್ನು ಹಲವಾರು ಬಾರಿ ಘೊಷಿಸಿದ್ದ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ವಿಷಲ್‌ಬ್ಲೋಯರ್‌ಗಳ ಪಾತ್ರವನ್ನು ಪರಿಗಣಿಸಿದ್ದ ಈ ಸರ್ಕಾರವು ವಿಷಲ್‌ಬ್ಲೋಯರ್ ಮಸೂದೆಯನ್ನು ಮಾತ್ರ ದುರ್ಬಲಗೊಳಿಸಿದ್ದು ಹೇಗೆಂಬುದು ಆಶ್ಚರ್ಯಕರವಾಗಿದೆ! ತಮ್ಮ ಸರ್ಕಾರವು ವಿಷಲ್‌ಬ್ಲೋಯರ್‌ಗಳು ಕೊಟ್ಟ ಮಾಹಿತಿಗಳನ್ನು ಆಧರಿಸಿ ಕಪ್ಪುಹಣವನ್ನು ನಿಯಂತ್ರಿಸುವುದಾಗಿ ಹಣಕಾಸು ಇಲಾಖೆಯ ರಾಜ್ಯಮಂತ್ರಿ ಜಯಂತ್ ಸಿನ್ಹಾ ಅವರು ರಾಜ್ಯಸಭೆಗೂ ತಿಳಿಸಿದ್ದರು.

ಆದರೆ ವಿಷಲ್‌ಬ್ಲೋಯರ್ಸ್‌ಗಳ ಮಹತ್ವವನ್ನು ಪರಿಗಣಿಸಿದ್ದೇವೆ ಎಂದು ಸರ್ಕಾರವು ಎಷ್ಟೇ ಕೊಚ್ಚಿಕೊಂಡರೂ ತಿದ್ದುಪಡಿಯಾದ ಕಾನೂನು ವಿಷಲ್‌ಬ್ಲೋಯರ್ಸ್‌ಗಳಿಗೆ ಅಧಿಕೃತ ರಹಸ್ಯ ಕಾಯಿದೆ (ಅಫಿಷಿಯಲ್ ಸೀಕ್ರೆಟ್ಸ್ ಆಕ್ಟ್)ಯಿಂದ ರಕ್ಷಣೆ ಕೊಡುವುದಿಲ್ಲ. ಈ ಮಾರ್ಪಾಡಾದ ಕಾಯಿದೆಯ ಪ್ರಕಾರ ದೇಶದ ಸಾರ್ವಭೌಮತೆ, ಸಮಗ್ರತೆ, ಭದ್ರತೆ ಮಾತು ಆರ್ಥಿಕ ಆಸಕ್ತಿಗಳಿಗೆ ಹಾನಿಯುಂಟುಮಾಡುವ ಮಾಹಿತಿಗಳನ್ನು ಪರಿಶೋಧಿಸಲಾಗುವುದಿಲ್ಲ ಮತ್ತು ಅಂಥ ಸಂಗತಿಗಳನ್ನು ಮಾಹಿತಿ ಹಕ್ಕುಗಳ ಕಾಯಿದೆಯಡಿ ಪಡೆದುಕೊಂಡಿದ್ದ ಹೊರತೂ ಬಹಿರಂಗಪಡಿಸಲಾಗುವುದಿಲ್ಲ. ಇದರಲ್ಲಿ ಬೌದ್ಧಿಕ ಆಸ್ತಿ ಹಕ್ಕು ಮತ್ತು ವಾಣಿಜ್ಯ ರಹಸ್ಯಗಳೂ ಸಹ ಸೇರಿಕೊಳ್ಳುತ್ತವೆ. ಅಧಿಕೃತ ರಹಸ್ಯ ಕಾಯಿದೆಯ ರೀತಿ ಮಾಹಿತಿ ಹಕ್ಕು ಕಾಯಿದೆಯೂ (ಆರ್‌ಟಿಐ) ಸಹ ಯಾವುದೇ ವ್ಯಕ್ತಿಯ ಪ್ರಾಣಕ್ಕೆ ಹಾನಿಯಾಗುವಂಥ ಮಾಹಿತಿಗಳು, ಸಂಪುಟ ಸಭೆಯ ಕೆಲವು ಚರ್ಚೆಗಳು, ಹಾಗೂ ಸಂಸತ್ತಿನ ಮತ್ತು ಶಾಸಕಾಂಗದ ಹಕ್ಕುಚ್ಯುತಿ ಮಡಬಹುದಾದ ಯಾವುದೇ ಮಾಹಿತಿಗಳನ್ನು  ನ್ಯಾಯಾಲಯವೂ  ಸಹ ಬಹಿರಂಗಗೊಳಿಸದಂತೆ ನಿಷೇಧಿಸುತ್ತದೆ.

ವಿಷಲ್‌ಬ್ಲೋಯರ್ಸ್ ಇನ್ ಯೂರೋಪ್: ಲೀಗಲ್ ಪ್ರೊಟೆಕ್ಷನ್ ಫಾರ್ ವಿಷಲ್‌ಬ್ಲೋಯರ್ಸ್ ಇನ್ ಇಯು (ಯೂರೋಪಿನ ವಿಷಲ್‌ಬ್ಲೋಯರ್ಸ್: ಐರೋಪ್ಯ ಒಕ್ಕೂಟದಲ್ಲಿ ವಿಷಲ್‌ಬ್ಲೋಯರ್ಸ್‌ಗಳಿಗಿರುವ ಕಾನೂನು ರಕ್ಷಣೆಗಳು) ಎಂಬ ವರದಿಯಲ್ಲಿ ಹೇಳುವಂತೆ ವಿಷಲ್‌ಬ್ಲೋಯರ್ಸ್ ಗಳಿಗೆ ಬಲವಾದ ರಕ್ಷಣೆ ಕೊಡುವ ವ್ಯವಸ್ಥೆ ಮತ್ತು ಅವರಿಗೆ ರಕ್ಷಣೆ ಕೊಡಬಹುದಾದ ಲೋಪರಹಿತ ಕಾನೂನುಗಳಿಲ್ಲದಿರುವುದು ಎಲ್ಲಾ ನಾಗರಿಕರಿಗೂ, ಆರ್ಥಿಕತೆಗೂ ಮತ್ತು ಪರಿಸರಕ್ಕೆ ಹಾನಿಯನ್ನುಂಟುಮಾಡುತ್ತದೆ. ಅಂಥ ಒಂದು ಬಲಿಷ್ಟ ಕಾನೂನು ಇಲ್ಲದೇ ಹೋದರೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಮೌಲಿಕ ಪಾಲುದಾರರಾಗಬಹುದಾದ ’ಜನತೆ’ಯನ್ನು ಯೂರೋಪು ಕಳೆದುಕೊಳ್ಳುತ್ತದೆ ಎಂದು ಆ ವರದಿಯಲ್ಲಿ ಹೇಳಲಾಗಿದೆ. ಭಾರತದ ಬಗ್ಗೆ ಹೇಳುವುದಾದರೆ ಸಾರ್ವಜನಿಕ ಕ್ಷೇತ್ರದಲ್ಲಾಗಲೀ ಅಥವಾ ಖಾಸಗಿ ಕಾರ್ಪೊರೇಟ್ ಕ್ಷೇತ್ರದಲ್ಲಾಗಲೀ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆ ತಂದದ್ದು ಈಬಗೆಯ ವಿಷಲ್‌ಬ್ಲೋಯರ್‌ಗಳು ಮತ್ತು ಆರ್‌ಟಿಐ ಕಾರ್ಯಕರ್ತರು. ಹಲವಾರು ಅಧಿಕಾರಿಗಳು ಮತ್ತು ಪೊಲೀಸ್ ಆಧಿಕಾರಿಗಳು ತಮ್ಮ ಜೀವ ಮತ್ತು ಉದ್ಯೋಗವನ್ನು ಲೆಕ್ಕಿಸದೆ ಬಚ್ಚಿಡಲಾಗಿದ್ದ ಮಾಹಿತಿಗಳನ್ನು ಹೊರಗೆಡವಿದ್ದಾರೆ. ಗುಜರಾತಿನ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಮತ್ತು ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸಸ್‌ನಲ್ಲಿ ಹಾಗೂ ಹರ್ಯಾಣದಲ್ಲಿ ಹುದ್ದೆ ಭರ್ತಿಗಳನ್ನು ಮಾಡುವಾಗ ನಡೆಯಲಾಗಿದ್ದ ಹಲವಾರು ಅಕ್ರಮಗಳನ್ನು ಬಯಲಿಗೆಳೆದ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸಂಜೀವ್ ಚತುರ್ವೇದಿ- ಆ ಬಗೆಯ ಅಧಿಕಾರಿಗಳು.  ಕಾರ್ಪೊರೇಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ಕಂಪನಿಗಳು ವಿಷಲ್‌ಬ್ಲೋಯರ್‌ಗಳನ್ನು ರಕ್ಷಿಸುವ ನೀತಿಗಳನ್ನು ರಚಿಸಿಕೊಂಡಿದ್ದಾರೆ. ಆದರೆ ಆ ನೀತಿಗಳೆಲ್ಲಾ ಕೇವಲ ಕಾಗದ ಮೇಲೆ ಮಾತ್ರವಿದೆಯೋ ಅಥವಾ ನಿಜಕ್ಕೂ ಜಾರಿಯಲ್ಲಿವೆಯೇ ಎಂಬುದು ಬೇರೆಯದೇ ಆದ ವಿಷಯ. ಒಂದು ವೇಳೆ ಅಂಥಾ ನೀತಿಯೊಂದು ಅಸ್ಥಿತ್ವದಲ್ಲಿದ್ದರೂ ಅವನ್ನು ಅನುಷ್ಠಾನಕ್ಕೇನೂ ತರುವುದಿಲ್ಲ ಎಂಬುದಕ್ಕೆ ಇತ್ತೀಚಿಗೆ ಒಂದು ವಿಮಾನ ಸೇವಾ ಕಂಪನಿಯ ಸಿಬ್ಬಂದಿಯೊಬ್ಬರು ತಮ್ಮ ಸಹಸಿಬ್ಬಂದಿಗಳು ಪ್ರಯಾಣಿಕರೊಬ್ಬರ ಮೇಲೆ ಮಾಡುತ್ತಿದ್ದ ಹಲ್ಲೆಯ ವಿಡಿಯೋ ಚಿತ್ರಣವನ್ನು ಬಹಿರಂಗಗೊಳಿಸಿದ ಉದಾಹರಣೆಯೇ ಸಾಕು.

ಇನ್ನು ಮಾಹಿತಿ ಹಕ್ಕಿನ ಕಾಯಿದೆಯ ಬಗ್ಗೆ ಹೇಳುವುದಾದರೆ ೨೦೧೭ರ ಕರಡು ನೀತಿ ನಿಯಮಗಳು ಕೇಂದ್ರೀಯ ಮಾಹಿತಿ ಅಯೋಗದ ಮುಂದೆ ಅರ್ಜಿ ಹಾಕಿದ ಅರ್ಜಿದಾರರು ನಿಧನಹೊಂದಿದರೆ ಅದರ ಬಗೆಗಿನ ವಿಚಾರಣೆಯು ಸ್ಥಗಿತಗೊಳ್ಳಬೇಕೆಂಬ ಪ್ರಸ್ತಾಪವನ್ನು ಹೊಂದಿದೆ. ಇದೊಂದು ಅಪಾಯಕಾರಿ ನಿಯಮವೆಂದು ಕಾರ್ಯಕರ್ತರು ಬಲವಾಗಿ ಆಕ್ಷೇಪಿಸಿದ್ದಾರೆ. ಈಗಾಗಲೇ ದೇಶಾದ್ಯಂತ ೬೫ಕ್ಕೂ ಹೆಚ್ಚು ಆರ್‌ಟಿಐ ಕಾರ್ಯಕರ್ತರ ಕೊಲೆಯಾಗಿರುವುದಲ್ಲದೆ ಹಲವಾರು ಹಿಂಸಾಚಾರಕ್ಕೆ ಮತ್ತು ಬೆದರಿಕೆಗಳಿಗೆ ತುತ್ತಾಗಿದ್ದಾರೆ.

ಇದರ ಜೊತೆಗೆ ನಮ್ಮ ನ್ಯಾಯದಾನ ಪದ್ಧತಿಯಲ್ಲಿ ಸಾಕ್ಷಿಗಳನ್ನು ರಕ್ಷಿಸುವ ಯೋಜನೆಗಳೇ ಇಲ್ಲ. ಭಾರತೀಯ ಕಾನೂನು ಅಯೋಗ ಮತ್ತು ಪೊಲೀಸ್ ಅಯೋಗದ ಹಲವಾರು ವರದಿಗಳು ಮತ್ತು ಅಪರಾಧ ಪ್ರಕರಣಗಳಲ್ಲಿನ ನ್ಯಾಯ ವಿತರಣಾ ವ್ಯವಸ್ಥೆಯ ಸುಧಾರಣೆಗಳ ಬಗ್ಗೆ ರಚಿಸಲಾಗಿದ್ದ ನ್ಯಾಯಮೂರ್ತಿ ಮಳಿಮಠ್ ಸಮಿತಿಯ ವರದಿಯೂ ಸಹ ಅಂಥ ಒಂದು ಸಾಕ್ಷಿ ರಕ್ಷಣಾ ಕಾರ್ಯಕ್ರಮ ಜಾರಿಗೆ ಬರಬೇಕೆಂದು ಶಿಫಾರಸ್ಸು ಮಾಡಿದೆ. ಪ್ರಕರಣಗಳು ವಿಚಾರಣೆಯ ಹಂತಕ್ಕೆ ಬಂದಾಗ ಸಾಕ್ಷಿದಾರರು ಉಲ್ಟಾ ಹೊಡೆಯುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಇದು ಮಧ್ಯಪ್ರದೇಶದ ವ್ಯಾಪಂ ಪ್ರಕರಣದಲ್ಲಿ, ಗುಜರಾತಿನ ಬೆಸ್ಟ್ ಬೇಕರಿ ಪ್ರಕರಣದಲ್ಲಿ, ನವದೆಹಲಿಯ ಜೆಸ್ಸಿಕಾ ಲಾಲ್ ಪ್ರಕರಣದಲ್ಲಿ ಮತ್ತು ಇತ್ತೀಚೆಗೆ ಮುಂಬೈ ನ್ಯಾಯಾಲಯದಲ್ಲಿ ನಡೆಯುತ್ತಿರುವ ಸೊಹ್ರಾಬುದ್ದೀನ್ ಶೇಕ್ ಎನ್‌ಕೌಂಟರ್ ಪ್ರಕರಣದ ವಿಚಾರಣಾ ಸಂದರ್ಭದಲ್ಲಿ ಸಂಭವಿಸಿದೆ.

ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಬಗ್ಗೆ ಮತ್ತು ಭ್ರಷ್ಟಾಚಾರಿಗಳ ಬಗ್ಗೆ ಮಾಹಿತಿ ಕೊಡುವವರನ್ನು ರಕ್ಷಿಸುವ ಬಗ್ಗೆ ಸರ್ಕಾರವು ನಿಜಕ್ಕೂ ಗಂಭೀರವಾಗಿದ್ದಲ್ಲಿ ಮೇಲೆ ಹೇಳಿದ ಮೂರೂ ವಿಷಯಗಳನ್ನೂ-ವಿಷಲ್‌ಬ್ಲೋಯರ್‌ಗಳನ್ನು ರಕ್ಷಿಸುವುದು, ನ್ಯಾಯಾಲಯದ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ರಕ್ಷಿಸುವುದು  ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರನ್ನು ರಕ್ಷಿಸುವುದು-ಸೂಕ್ತವಾಗಿ ನಿಭಾಯಿಸಬೇಕಿದೆ. ಖಾಸಗಿ ಕಾರ್ಪೊರೇಟ್ ಸಂಸ್ಥೆಗಳ ಉದ್ಯೋಗಿಗಳು, ಸರ್ಕಾರಿ ಸೇವಕರು ಮತ್ತು ಆತ್ಮಸಾಕ್ಷಿಯಿಂದ ಪ್ರೇರಿತರಾದ ಅಥವಾ ನೊಂದಿರುವ ನಾಗರಿಕರು ಪ್ರಜಾಸತ್ತೆಯ ನಿಜವಾದ ಕಾವಲುಗಾರರಾಗಿ ಕಾರ್ಯನಿರ್ವಹಿಸಬಲ್ಲರು. ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕೆಂಬ ಆಶಯವಿರುವ ಸರ್ಕಾರವೊಂದು ಇಂಥಾ ಸಾರ್ವಜನಿಕ ಹೀರೋಗಳನ್ನು ರಕ್ಷಿಸಿಕೊಳ್ಳಲೇಬೇಕು.

 ಕೃಪೆ: Economic and Political Weekly Feb 24,  2018. Vol. 53. No.8
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

                                                                                               




.