ಗುರುವಾರ, ನವೆಂಬರ್ 2, 2017

ಅಪಮಾನ ಮತ್ತು ಸಾವುಗಳಿಂದ ಖೈದಿಗಳಿಗೆ ಬಿಡುಗಡೆ ಬೇಕಿದೆ


   ಅನು: ಶಿವಸುಂದರ್
Image result for Jailed criminals

ಖೈದಿಗಳಿಗೆ ಸುಧಾರಣೆಯ ಮತ್ತು ಪುನರ್ವಸತಿಯ ಅವಕಾಶಗಳನ್ನು ಒದಗಿಸುವ ಜವಾಬ್ದಾರಿ ನಮ್ಮ ನ್ಯಾಯವ್ಯವಸ್ಥೆಯ ಮೇಲಿದೆ.

 ಭಾರತದ ಜೈಲುಗಳ ಪರಿಸ್ಥಿತಿಗಳ ಬಗ್ಗೆ ಅತ್ಯಂತ ಪ್ರಗತಿಪರ ನ್ಯಾಯಾದೇಶವೊಂದನ್ನು ಭಾರತದ ಸುಪ್ರೀಂ ಕೋರ್ಟು ೨೦೧೭ರ ಸೆಪ್ಟೆಂಬರ್ ೧೫ರಂದು ನೀಡಿದೆ. ಆ ಆದೇಶವು ಜೈಲುವಾಸದಲ್ಲಿರುವಾಗ ಅಸಹಜ ಮರಣಕ್ಕೆ ಗುರಿಯಾದ ಖೈದಿಗಳ ಕುಟುಂಬದವರನ್ನು ಗುರ್ತಿಸಿ ಅವರಿಗೆ ಪರಿಹಾರವನ್ನು ನೀಡಬೇಕೆಂದು ಸರ್ಕಾರಗಳಿಗೆ ಸೂಚಿಸಿದೆ. ಜೈಲುಗಳಲ್ಲಿ ಸಂಭವಿಸುತ್ತಿರುವ ಸಾವುಗಳ ಸಮಸ್ಯೆಯ ತೀವ್ರತೆಯನ್ನು ಮತ್ತು ಅದರ ಬಗ್ಗೆ ಸರ್ಕಾರದ ಯಾಂತ್ರಿಕ ಧೋರಣೆಯನ್ನು ಗುರುತಿಸಿರುವ ಸುಪ್ರೀಂ ಕೋರ್ಟು  ಎಲ್ಲಾ ರಾಜ್ಯಗಳ ಉಚ್ಚ ನ್ಯಾಯಾಲಯಗಳು ಇಂಥಾ ಪ್ರಕರಣಗಳ ಬಗ್ಗೆ ಸ್ವಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಬೇಕೆಂದು ಮನವಿ ಮಾಡಿದೆ. ಖೈದಿಗಳ ಹಕ್ಕುಗಳ ಬಗ್ಗೆ ಕ್ರಿಯಾಶೀಲರಾಗಿರುವ ಕಾರ್ಯಕರ್ತದಿಂದ ಮತ್ತು ಜೈಲು ಸುಧಾರಣವಾದಿಗಳಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿರುವ ಈ ಆದೇಶವು ಜೈಲುಗಳಲ್ಲಿ ಅಸಹಜ ಸಾವುಗಳನ್ನು ತಡೆಯುವ ಕ್ರಮಗಳ ಬಗ್ಗೆ, ಆಪ್ತರನ್ನು ಭೇಟಿಯಾಗುವ ಹಕ್ಕುಗಳ ಬಗ್ಗೆ, ಕಾನೂನು ಮತ್ತು ಆರೋಗ್ಯ ಸೇವೆ, ಮಾದರಿ ಜೈಲು ನಡವಳಿ ಸಂಹಿತೆ (ಮ್ಯನುಯಲ್)ಯ ಅನುಷ್ಠಾನ, ಖೈದಿಗಳ ಕುರಿತು ಜೈಲು ಸಿಬ್ಬಂದಿಗಳ ಸಂವೇದನೆಯನ್ನು ಹೆಚ್ಚಿಸುವ ಬಗ್ಗೆ  ಮತ್ತು ಮುಕ್ತ ಜೈಲುಗಳ ಬಗ್ಗೆ ಸಹ ಶಿಫಾರಸ್ಸುಗಳನ್ನು ಮಾಡಿದೆ.

ಈ ಆದೇಶದ ಅತಿಮುಖ್ಯ ಭಿನ್ನತೆ ಏನೆಂದರೆ ಅದು ಜೈಲಿನಲ್ಲಿ ಸಂಭವಿಸುವ ಸಾವುಗಳನ್ನು ಕೇವಲ ಜೈಲು ಆಡಳಿತದ ವೈಫಲ್ಯವೆಂದು ಪರಿಗಣಿಸುವ ಧೋರಣೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತದೆ. ಬದಲಿಗೆ ಅಂಥಾ ಧೋರಣೆಯು ಖೈದಿಗಳ ಸುಧಾರಣೆ ಮತ್ತು ಪುನರ್ವಸತಿಗಳ ಬಗ್ಗೆ ಇರುವ ನಕಾರಾತ್ಮಕ ಮನಸ್ಥಿತಿಯ ಪ್ರತಿಫಲನವೆಂದು ಪರಿಗಣಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ ನಮ್ಮ ಕ್ರಿಮಿನಲ್ ನ್ಯಾಯವ್ಯವಸ್ಥೆಯು ಪ್ರತೀಕಾರ ಮತ್ತು ಶಿಕ್ಷಾ ಅಂಜಿಕೆಯ (ಡಿಟರೆನ್ಸ್) ತಾತ್ವಿಕತೆಯನ್ನು ಅನುಸರಿಸುತ್ತಾ ಬಂದಿದೆ. ಇದರ ಪರಿಣಾಮವಾಗಿಯೇ ಬಂಧನದಲ್ಲಿರುವ ಖೈದಿಗಳ ಚಿತ್ರಹಿಂಸೆಗಳು ಮತ್ತು ಸಾವುಗಳು ನಿರಂತರವಾಗಿ ಸಂಭವಿಸುತ್ತಲೇ ಇವೆ. ಏಕೆಂದರೆ ಖೈದಿಗಳನ್ನು ಶಿಕ್ಷಾ ಯೋಗ್ಯ ವ್ಯಕ್ತಿಗಳನ್ನಾಗಿ ಮಾತ್ರ ಪರಿಗಣಿಸುತ್ತಾ ಬರಲಾಗಿದೆ.

ಈ ಆದೇಶವು ಖೈದಿಗಳ ಪರಿಸ್ಥಿತಿಗಳ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿರುವುದು ನಿಜವಾದರೂ, ಜೈಲು ಸುಧಾರಣೆಯ ಬಗ್ಗೆ ಸುಪ್ರಿಂ ಕೋರ್ಟು ಈ ಹಿಂದೆ ನೀಡಿದ ಬಹುಪಾಲು ನಿರ್ದೇಶನಗಳು ದುರದೃಷ್ಟವಶಾತ್, ಕೇಳುವವರಿಲ್ಲದೆ ಬಿದ್ದಿವೆ. ಆರೋಪಿಯೋರ್ವ ತಾನು ಎಸಗಿದ ಅಪರಾಧಕ್ಕೆ ನಿಗದಿಯಾಗಿರುವ ಶಿಕ್ಷೆಯ ಅರ್ಧದಷ್ಟನ್ನು ಈಗಾಗಲೇ ಅನುಭವಿಸಿದ್ದ ಪಕ್ಷದಲ್ಲಿ ಅಂಥವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡತಕ್ಕದ್ದೆಂದು ಸುಪ್ರೀಂ ಕೋರ್ಟು ೨೦೧೫ರ ಏಪ್ರಿಲ್‌ನಲ್ಲಿ ಆದೇಶಿಸಿತ್ತು. ಆದರೆ ಅದನ್ನು ಜಾರಿಗೆ ತರದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟು ೨೦೧೭ರ ಅಕ್ಟೋಬರ್‌ನಲ್ಲಿ ಆದೇಶವೊಂದನ್ನು ನೀಡಿ ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶಗಳಿಗೆ ಜಾರಿ ವರದಿಯನ್ನು ನೀಡಲು ಅಂತಿಮ ಗಡುವನ್ನು ವಿಧಿಸಿದೆ.

 ಅಪರಾಧಿಯೆಂದರೆ ಯಾರು? ಸಾಮಾನ್ಯವಾಗಿ ಆಯಾ ಅಪರಾಧಕ್ಕೆ ಸಂಬಂಧಿಸಿದ ಕಾನೂನನ್ನು ಉಲ್ಲಂಘಿಸಿದವರನ್ನು ಅಪರಾಧಿಗಳೆಂದು ಗುರುತಿಸಲಾಗುತ್ತದೆ. ಆದರೆ ಅಪರಾಧಿಕತನದ ಪರಿಧಿಗಳು ಮತ್ತು ನಿರ್ವಚನಗಳು ಅಷ್ಟೊಂದು ಕಟ್ಟುನಿಟ್ಟಾಗಿ ಕಾನೂನುಬದ್ಧವಾಗಿಯೇ ಇರುವುದಿಲ್ಲವೆಂಬ ಅಭಿಪ್ರಾಯ ಈಗ ಸರ್ವಸಮ್ಮತಗೊಳ್ಳುತ್ತಿದೆ. ಕ್ರಿಮಿನಲ್ ಅಪರಾಧಗಳ ವ್ಯಾಪ್ತಿಯನ್ನು ನಿರ್ವಚನ ಮಾಡುವಾಗ ವರ್ಗ, ಅಧಿಕಾರ ಹಾಗೂ ಸಮಾಜವನ್ನು ಆಳುತ್ತಿರುವವರು ಹೇರುವ ಸಾಮಾಜಿಕ ನಂಬಿಕೆಗಳ ಪ್ರಭಾವವನ್ನು ಅಲ್ಲಗೆಳೆಯಲು ಖಂಡಿತಾ ಸಾಧ್ಯವಿಲ್ಲ. ಹೀಗಾಗಿಯೇ ಖೈದಿಗಳ ಸಂಖ್ಯೆಯಲ್ಲಿ ಸಮಾಜದ ವಂಚಿತ ಸಮುದಾಯಗಳವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಆಶ್ಚರ್ಯವೇನಲ್ಲ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ರಾಷ್ಟ್ರೀಯ ಅಪರಾಧಗಳ ದಾಖಲೆ ಸಂಸ್ಥೆ- ಎನ್‌ಸಿಆರ್‌ಬಿ) ದ ಅಂಕಿಅಂಶಗಳು ಹೇಳುವಂತೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತಂತ್ರವಾಗಿರುವ ಸಮುದಾಯಗಳ ಜನರು ಈ ವ್ಯವಸ್ಥೆಯಲ್ಲಿ ಹೆಚ್ಚಿನ ಅನ್ಯಾಯಕ್ಕೆ ಗುರಿಯಾಗುತ್ತಾರೆ. ಜೈಲುಗಳಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮುಸ್ಲಿಮರ ಜನಸಂಖ್ಯೆಯ ಅನುಪಾತವು ದೇಶದ ಜನಸಂಖ್ಯೆಯಲ್ಲಿ ಆ ಸಮುದಾಯಗಳ ಅನುಪಾತಕ್ಕಿಂತ  ಸಾಕಷ್ಟು ಹೆಚ್ಚಿಗಿದೆ. ದೇಶದ ನ್ಯಾಯದಾನ ವ್ಯವಸ್ಥೆಯಲ್ಲಿ ನ್ಯಾಯಪಡೆದುಕೊಳ್ಳಲು ಬೇಕಾದ ಆರ್ಥಿಕ ಮತ್ತು ಸಾಮಾಜಿಕ ಬಂಡವಾಳವು ಈ ಸಮುದಾಯಗಳಿಗೆ ಇಲ್ಲದಿರುವುದೂ ಸಹ ಈ ಅಸಾಂಗತ್ಯಕ್ಕೆ ಮತ್ತೊಂದು ಕಾರಣವಾಗಿದೆ.

ಈ ರೀತಿ ಖೈದಿಗಳ ಬಗ್ಗೆ ಮತ್ತು ಅವರ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲಗಳ ಬಗ್ಗೆ ಇರುವ ಅಂತರ್ಗತ ಪೂರ್ವಗ್ರಹಗಳು ಜೈಲಿನೊಳಗೆಯೂ ಮುಂದುವರೆದಿರುತ್ತದೆ. ಬಂಧನದಲ್ಲಿದ್ದಾಗ ಸಂಭವಿಸುವ ಚಿತ್ರಹಿಂಸೆ ಮತ್ತು ಸಾವುಗಳು, ಹಾಗೂ ಅದರೊಡನೆ ಖೈದಿಗಳ ಮೂಲಭೂತ ಹಕ್ಕುಗಳ ಮತ್ತು ಘನತೆಯ ನಿರಾಕರಣೆಗಳು ಈ ಪೂರ್ವಗ್ರಹದ ಅಭಿವ್ಯಕ್ತಿಗಳೇ ಆಗಿವೆ. ಖೈದಿಗಳ ಸುಧಾರಣೆ ಮತ್ತು ಪುನರ್ವಸತಿಯ ಆದರ್ಶಗಳಿಲ್ಲದ ಪರಿಸ್ಥಿತಿಯಲ್ಲಿ ಜೈಲುಗಳು ಅಮಾನವೀಯಗೊಳಿಸುವ ವ್ಯವಸ್ಥೆಯಾಗಿಬಿಡುತ್ತವೆ. ಸಾಕಷ್ಟು ಬಾರಿ ಒಂದು ಜೈಲು ಶಿಕ್ಷೆಯು ಒಬ್ಬ ವ್ಯಕ್ತಿಯು ತನ್ನ ಕುಟುಂಬ ಮತ್ತು ಸಮುದಾಯಗಳಿಂದ ಪಡೆದುಕೊಳ್ಳುತ್ತಿದ್ದ ಸಾಂಪ್ರದಾಯಿಕ ಬೆಂಬಲಗಳನ್ನು ಕಡಿತಗೊಳಿಸುತ್ತವೆ.  ಈ ಹಿನ್ನೆಲೆಯಲ್ಲಿ ಇಂಥಾ ವ್ಯವಸ್ಥೆಯಿಂದ ಹೊರಬರುವ ವ್ಯಕ್ತಿಯ ಪರಿಸ್ಥಿತಿ ಏನಾಗಬಹುದೆಂಬುದನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕು. ಒಂದು ಪುನರ್ವಸತಿ ಪ್ರಕ್ರಿಯೆಯಿಂದ ಅವರು ಏನನ್ನು ನಿರೀಕ್ಷಿಸಬಹುದು?

ಈ ಸದ್ಯಕ್ಕೆ ಪೆರೋಲ್‌ಗಳು ಮತ್ತು ಪ್ರೊಬೇಷನ್ (ಸನ್ನಡತೆಯ ಆಧಾರದ ಮೇಲೆ ಉಸ್ತುವಾರಿಯಡಿ ತಾತ್ಕಾಲಿಕ ಬಿಡುಗಡೆ)ಗಳ ಕಾನೂನುಬದ್ಧ ಅವಕಾಶಗಳಿವೆ. ಆದರೆ ಅವುಗಳೂ ಸಹ ಸಾಕಷ್ಟು ಬಳಕೆಯಲ್ಲಿಲ್ಲ. ಇವನ್ನು ಹೊರತುಪಡಿಸಿದಲ್ಲಿ ಪುನರ್ವಸತಿಯ ಪ್ರಶ್ನೆ  ಆದ್ಯತೆಯಲ್ಲೇ ಇಲ್ಲ. ಸ್ಕಾನ್ಡಿನೇವಿಯನ್ ದೇಶಗಳು  (ನಾರ್ವೆ, ಸ್ವೀಡನ್ ಇತ್ಯಾದಿ ದೇಶಗಳು) ಜೈಲು ಸುಧಾರಣೆಯಲ್ಲಿ ಜಗತ್ತೇ ಅಚ್ಚರಿಪಡುವಂಥ ದಿಕ್ಸೂಚಿ ಮಾದರಿಗಳನ್ನು ಅನುಸರಿಸುತ್ತಿವೆ. ನಾವು ಸಾಧ್ಯವಾಗಬಲ್ಲ ಬದಲಾವಣೆಗಳನ್ನು ತರಲು ಅಷ್ಟು ದೂರವೂ ಹೋಗಬೇಕಿಲ್ಲ. ವಾಸ್ತವವಾಗಿ ಈ ವಿಷಯದಲ್ಲಿ ಅತ್ಯಂತ ಪರಿಣಾಮಕಾರಿ ಕ್ರಮಗಳನ್ನು ಅತ್ಯಂತ ಸಣ್ಣ ದ್ವೀಪರಾಷ್ಯ್ರವಾದ ಡೊಮಿನಿಕನ್ ಗಣರಾಜ್ಯವು ಜಾರಿಗೆ ತಂದಿದೆ. ಹಾಗೂ ಅದರ ಪರಿಣಾಮವಾಗಿ ಆ ರಾಷ್ಟ್ರದಲ್ಲಿ ಅಪರಾಧಿಗಳು ಅಪರಾಧಗಳಿಗೆ ಮರಳುವ ಪ್ರಮಾಣ ತೀವ್ರಗತಿಯಲ್ಲಿ ಕಡಿಮೆಯಾಗಿದೆ. ಆ ದೇಶವು ಕೆಲವು ಸಾಂಸ್ಥಿಕ ಬದಲಾವಣೆಗಳನ್ನು ಜಾರಿಗೆ ತಂದಿದೆ. ಜೈಲು ನಿರ್ವಹಣೆಯಲ್ಲಿ ಪೊಲೀಸ್ ಮತ್ತು ಸೇನೆಯ ನಿಯುಕ್ತಿಯ ಬದಲಿಗೆ ನಾಗರಿಕ ಸೇವಾ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಆ ಮೂಲಕ ಪರಿವರ್ತನಾ ಸಂಸ್ಥೆಗಳ ಜೊತೆಗಿನ ಪೊಲೀಸ್ ಮತ್ತು ಸೇನೆಯ ಸಂಬಂಧವನ್ನು ಕಡಿದುಹಾಕಿದೆ. ಸೆರೆಮನೆಯಲ್ಲಿ ಕೋಣೆಯೊಳಗೆ ಇರಬೇಕಾದ ಅವಧಿಯನ್ನು ದೊಡ್ಡಮಟ್ಟದಲ್ಲಿ ಕಡಿತಗೊಳಿಸಿದೆ. ಮತ್ತು ಪ್ರತಿಯೊಬ್ಬ ಖೈದಿಯೂ ಕಡ್ಡಾಯವಾಗಿ ಅಕ್ಷರಸ್ಥರಾಗಲೇಬೇಕಾದ ಕ್ರಮಗಳನ್ನು ಜಾರಿ ಮಾಡಿದೆ. ಇಂಥಾ ಕ್ರಮಗಳು ಪರಿಣಾಮಕಾರಿಯಾಗಿದ್ದು ಭಾರತದಂಥ ಸಂದರ್ಭದಲ್ಲೂ ಸುಲಭವಾಗಿ ಜಾರಿಮಾಡಬಹುದು.

ಸುಪ್ರೀಂ ಕೋರ್ಟಿನ ಆದೇಶವು ಜೈಲು ಸಿಬ್ಬಂದಿಯ ಮತ್ತು ನಾಗರಿಕ ಸಮಾಜದ ಸಂವೇದನಾಶೀಲತೆಯು ಹೆಚ್ಚುವುದನ್ನು, ಜೈಲಿನೊಳಗೆ ಆಪ್ತಸಮಾಲೋಚಕರನ್ನು, ಸರ್ಕಾರೇತರ ಸಂಸ್ಥೆಗಳ ನಿಯೋಜನೆಯನ್ನೂ ನಿರೀಕ್ಷಿಸುತ್ತದೆ. ಇವರುಗಳು ಪುನರ್ವಸತಿ ಪ್ರಕ್ರಿಯೆಯ ಪ್ರಧಾನ ಪ್ರಭಾರಿಗಳಾಗಿದ್ದು ನಾಗರಿಕ ಸಮಾಜದೊಳಗೆ ಖೈದಿಗಳ ಮರುಪ್ರವೇಶವನ್ನು ಸುಲಭಗೊಳಿಸುತ್ತಾರೆ. ಅಷ್ಟುಮಾತ್ರವಲ್ಲದೆ. ಸುಪ್ರೀಂ ಕೋರ್ಟಿನ ನಿರ್ದೇಶನದ ಅನುಸಾರವಾಗಿ ದೆಹಲಿ, ಮುಂಬೈ, ಮದ್ರಾಸ್ ಮತ್ತು ಜಮ್ಮು-ಕಾಶ್ಮೀರ ಹಾಗೂ ಇನ್ನಿತರ ಉಚ್ಚ ನ್ಯಾಯಾಲಯಗಳು ಜೈಲುಗಳಲ್ಲಿ ಅಸಹಜ ಮರಣಕ್ಕೆ ತುತ್ತಾಅದ ಖೈದಿಗಳ ಕುಟುಂಬಗಳಿಗೆ ಪರಿಹಾರವನ್ನು ಒದಗಿಸುವತ್ತ ಸ್ವಪ್ರೇರಿತ ನ್ಯಾಯಿಕ ಕ್ರಮಗಳನ್ನು ಪ್ರಾರಂಭಿಸಿವೆ. ಆದರೂ ಎಲ್ಲಿಯ ತನಕ ಇಂಥಾ ಕ್ರಮಗಳು ನಮ್ಮ ದಂಡನಾರ್ಹ ಅಪರಾಧಗಳ ನ್ಯಾಯ ವ್ಯವಸ್ಥೆಯೊಳಗೆ ಅಂತರ್ಗತವಾಗದೆ ಕೇವಲ ನ್ಯಾಯಾಲಯಗಳ ಶಕ್ತಿ ಮತ್ತು ಪ್ರಭುತ್ವಗಳ ಪ್ರತಿಸ್ಪಂದನೆಯನ್ನು ಮಾತ್ರ ಆಧರಿಸಿರುತ್ತದೋ ಅಲ್ಲಿಯವರೆಗೆ ಈ ಕ್ರಮಗಳು ಅಸ್ಥಿರವಾಗಿಯೇ ಇರುತ್ತವೆ. ಹೀಗಾಗಿ ಜೈಲು ಸುಧಾರಣೆಯ ಬಗೆಗಿನ ಚರ್ಚೆಗಳು ಆ ಸುಧಾರಣೆಗಳ ಪ್ರಧಾನ ಪಾತ್ರಧಾರಿಗಳಾಗಿರುವ ಖೈದಿಗಳನ್ನು ಒಳಗೊಳ್ಳುವ ಅಗತ್ಯವಿದೆ.

ಅಂತಿಮವಾಗಿ ಜೈಲು ಸುಧಾರಣೆಯ ಉದ್ದೇಶಗಳು ಬಂಧನದೊಳಗೆ ಹಿಂಸೆಯನ್ನು ನಿಯಂತ್ರಿಸುವ ಸೀಮಿತ ಉದ್ದೇಶಗಳಾಚೆ ಬೆಳೆಯಬೇಕು. ಸಮಾಜದ ಕೆಲವು ವರ್ಗಗಳ ಮೇಲೆ ವಿಧಿಸಲಾದ ಶಿಕ್ಷೆಯನ್ನು ಸಾಂಸ್ಥೀಕರಿಸುವಲ್ಲಿ ಜೈಲುಗಳು ವಹಿಸುತ್ತಿರುವ ಪ್ರಧಾನ ಪಾತ್ರವನ್ನು ಅದು ಗುರುತಿಸಬೇಕು ಮತ್ತು ಸುಧಾರಣೆಯ ಪ್ರಕ್ರಿಯೆಯಲ್ಲಿ ಈ ಪ್ರಜ್ನೆಯು ಅಂತರ್ಗತವಾಗಿರಬೇಕು. ಇದರೊಡನೆ ಮುಕ್ತ ಜೈಲುಗಳ ಪರಿಕಲ್ಪನೆಯ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಶಿಫಾರಸ್ಸು ಮಾಡುವ ಮೂಲಕ ಸರ್ವೋಚ್ಚ ನ್ಯಾಯಾಲಯವು ಜೈಲುಗಳ ಬಗ್ಗೆ ಈವರೆಗೆ ಇದ್ದ ಸಂಪ್ರದಾಯಿಕ ತಿಳವಳಿಕೆಗಿಂತ ಪೂರ್ತಿಭಿನ್ನವಾದ ಪರಿಕಲ್ಪನೆಯ ಚರ್ಚೆಗೆ ದಾರಿಮಾಡಿಕೊಟ್ಟಿದೆ.

 ಇಂಥಾ ಸಂದರ್ಭದಲ್ಲಿ ಜೈಲು ಸುಧಾರಣೆಗಳ ಬಗೆಗಿನ ಚಳವಳಿಗಳನ್ನು ಖೈದಿಗಳನ್ನು ಶಿಕ್ಷಾ ಮುಕ್ತರನ್ನಾಗಿಸುವ ನಡೆಗಳೆಂದು ತಿಳಿಯುವುದು ತುಂಬಾ ತಪ್ಪು. ಬದಲಿಗೆ ಅದು ಖೈದಿಗಳನ್ನು ಅಪಮಾನ, ತಾರತಮ್ಯ ಮತ್ತು ಸಾವುಗಳಿಂದ ಮುಕ್ತರನ್ನಾಗಿಸುವ ನಡೆಯಾಗಿದೆ.
   ಕೃಪೆ: Economic and Political Weekly, Oct 28, 2017. Vol. 52. No. 42-43

                                                                                             










ನ್ಯಾಯವನ್ನು ಪಡೆದುಕೊಳ್ಳುವ ಹಕ್ಕು


                ಅನು: ಶಿವಸುಂದರ್

Image result for goa
ನ್ಯಾಯಾಲಯಗಳು ಫಿರ್ಯಾದುದಾರರ ಅನುಕೂಲತೆಗಳನ್ನು ಗಮನಿಸಬೇಕೇ ವಿನಃ ಸರ್ಕಾರಗಳದ್ದಲ್ಲ

 ಗೋವಾದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಸುಸ್ಥಿರ ಪರಿಸರದ ಬಗೆಗೆ ಯಾವ ಪರಿಕಲ್ಪನೆಯೂ ಇಲ್ಲದೆ ಜಾರಿಗೆ ತರಲೆತ್ನಿಸಿದ ಎಲ್ಲಾ ತಥಾಕಥಿತ ಅಭಿವೃದ್ಧಿ ಯೋಜನೆಗಳಿಗೂ ಅಲ್ಲಿನ ಕ್ರಿಯಾಶೀಲ ಪರಿಸರವಾದಿ ಸಂಘಟನೆಗಳು ನಿರಂತರ ತಡೆಯೊಡ್ಡುತ್ತಿವೆ. ಮತ್ತು  ಸರ್ಕಾರಗಳ ಬಗಲಮುಳ್ಳುಗಳಾಗಿ ಬಿಟ್ಟಿವೆ. ಹೀಗಾಗಿಯೇ ಗೋವಾದ ಹಾಲಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ತಮ್ಮ ಸರ್ಕಾರದ ವಿರುದ್ಧ ಇದ್ದ ಎಲ್ಲಾ ಪರಿಸರ ಸಂಬಂಧೀ ದಾವೆಗಳನ್ನು ಪುಣೆಯಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪಶ್ಚಿಮ ಪೀಠದಿಂದ ದೆಹಲಿ ಪೀಠಕ್ಕೆ ವರ್ಗಾಯಿಸಲು ವಿಫಲ ಪ್ರಯತ್ನಗಳನ್ನು ನಡೆಸಿದ್ದು  ಆಶ್ಚರ್ಯಕರವಾಗಿಯೇನೂ ಕಾಣುವುದಿಲ್ಲ. ಆದರೆ ಈ ವರ್ಗಾವಣೆಗೆ ಅದು ನೀಡಿದ ಅತ್ಯಂತ ಪ್ರಮುಖ ಕಾರಣ ಮಾತ್ರ ಅತ್ಯಂತ ಹಾಸ್ಯಾಸ್ಪದವಾಗಿತ್ತು. ಅದೇನೆಂದರೆ  ಗೋವಾದಿಂದ ಸಾರಿಗೆ ಸೌಕರ್ಯಗಳು ಹತ್ತಿರದ ಪುಣೆಗಿಂತ ದೂರದ ದೆಹಲಿಗೆ ಅನುಕೂಲಕಾರಿಯಾಗಿಲ್ಲವೆಂಬುದು. ಇದಕ್ಕಿಂತ ಆಶ್ಚರ್ಯಕರ ಸಂಗತಿಯೆಂದರೆ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಇಲಾಖೆಯು ಗೋವಾ ಸರ್ಕಾರದ ಈ ಮನವಿಗೆ ಅತ್ಯಂತ ಉತ್ಸಾಹದಿಂದ ಸ್ಪಂದಿಸಿದ್ದು ಮಾತ್ರವಲ್ಲದೆ, ಈ ಪ್ರಕರಣಗಳಲ್ಲಿ ಪ್ರಮುಖ ಸಂತ್ರಸ್ತರಾಗಿರುವ ಗೋವಾದ ಜನತೆಯೊಂದಿಗೆ ಯಾವುದೇ ಸಮಾಲೋಚನೆಯನ್ನೂ ಸಹಾ ಮಾಡದೆ ಕೇವಲ ಎರಡು ತಿಂಗಳ ಅವಧಿಯೊಳಗೆ ಗೋವಾ ಸರ್ಕಾರದ ಮನವಿಯನ್ನು ಪುರಸ್ಕರಿಸಿ ಪ್ರಕರಣಗಳನ್ನು ದೆಹಲಿ ಪೀಠಕ್ಕೆ ವರ್ಗಾಯಿಸಲು ಸಮ್ಮತಿ ನೀಡಿಬಿಟ್ಟಿತು.

 ಆದರೆ ಬಾಂಬೆ ಉಚ್ಚ ನ್ಯಾಯಾಲಯದ ಪಣಜಿ ಪೀಠವು ಕೇಂದ್ರದ ಈ ಸೂಚನೆಯನ್ನು ವಿವೇಚನಾ ರಹಿತ ವೆಂದು ಬಣ್ಣಿಸಿ ರದ್ದುಮಾಡಿದೆ. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೂತನ್ ಸರ್ದೇಸಾಯಿಯವರು ನೀಡಿರುವ ೪೭ ಪುಟದ ಆದೇಶವು ಒಂದು ಸರಳ ವಿಷಯದ ಬಗ್ಗೆಯೇ ಆಗಿದ್ದರೂ ಈ ದೇಶದ ನ್ಯಾಯದಾನದ ವ್ಯವಸ್ಥೆಯ ಸ್ಥಿತಿಗತಿಗಳ ಮೇಲೆ ವಿಸ್ತೃತ ಪರಿಣಾಮ ಬೀರುವಂಥ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನ್ಯಾಯವನ್ನು ದಕ್ಕಿಸಿಕೊಳ್ಳುವ ಅವಕಾಶದ ಹಕ್ಕು ಈ ದೇಶದ ಸಂವಿಧಾನದ ೨೧ನೇ ಕಲಮಿನ ಪ್ರಕಾರ ನೀಡಲಾಗಿರುವ ಜೀವಿಸುವ ಮತ್ತು ವ್ಯಕ್ತಿಗತ ಸ್ವಾತಂತ್ರ್ಯದ ಹಕ್ಕಿನ ಭಾಗವೇ ಆಗಿದೆಯೆಂದು ತಮ್ಮ  ಈ ತೀರ್ಮಾನದಲ್ಲಿ ನ್ಯಾಯಮೂರ್ತಿಗಳು ಅತ್ಯಂತ ಮುಖ್ಯವಾಗಿ ಅಭಿಪ್ರಾಯಪಟ್ಟಿದ್ದಾರೆ. 

 ಹೀಗಾಗಿ ನ್ಯಾಯವನ್ನು ಪಡೆದುಕೊಳ್ಳುವ ಪ್ರಕ್ರಿಯೆಗೆ ಅಡ್ಡಿಯಾಗುವ ಎಲ್ಲಾ ಕ್ರಮಗಳು ಈ ಮೂಲಭೂತ ಹಕ್ಕಿನ ನಿರಾಕರಣೆಯೇ ಆಗುತ್ತದೆ. ಅಲ್ಲದೆ :  ನ್ಯಾಯಾಂಗವು ದೇಶದ ವಿವಿಧೆಡೆ ನ್ಯಾಯಪೀಠಗಳ ಶಾಖೆಗಳನ್ನು ಪ್ರಾರಂಭಿಸಿ ನ್ಯಾಯದಾನವನ್ನು ಇನ್ನಷ್ಟು ಸಾರ್ವಜನಿಕರಿಗೆ ಹತ್ತಿರ ತೆಗೆದುಕೊಂಡುಹೋಗುವ ಕ್ರಮಗಳನ್ನು ಅನುಸರಿಸುತ್ತಿರುವ ಈ ಹೊತ್ತಿನಲ್ಲಿ ಸರ್ಕಾರ್ವೊಂದು ತನ್ನ ಅನಾನುಕೂಲತೆ ಅಥವಾ ಅನುಕೂಲತೆಗಳನ್ನು ಮುಂದುಮಾಡಿ ದಾವೆಯನ್ನು ಸಾವಿರಾರು ಕಿಲೋಮೀಟರ್ ದೂರ ಇರುವ ಪೀಠಕ್ಕೆ ಒಯ್ಯುವ ನಿರ್ಧಾರ ತೆಗೆದುಕೊಂಡಿರುವುದು ಮತ್ತು ಅದನ್ನು ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಮಾಡುತ್ತಿರುವುದು ನಿಜಕ್ಕೂ ಒಂದು ಅಸಾಧಾರಣವಾದ ನಡೆಯಾಗಿದೆ. ಖಂಡಿತಾ ಇದರ ಹಿಂದೆ ಯಾವುದೇ ಸಾರ್ವಜನಿಕ ಹಿತಾಸಕ್ತಿಯಡಗಿಲ್ಲ ಎಂದೂ ಸಹ ನ್ಯಾಯಾಲಯವು ಸ್ಪಷ್ಟವಾದ ಅಭಿಪ್ರಾಯ ನೀಡಿದೆ.

  ಇಷ್ಟಾಗಿಯೂ, ರಾಜ್ಯದಲ್ಲಿ ದಾಖಲಾದ ಎಲ್ಲಾ ಪರಿಸರ ಸಂಬಂಧೀ ಪ್ರಕರಣಗಳನ್ನು ದೆಹಲಿ ಪೀಠಕ್ಕೆ ವರ್ಗಾಯಿಸಲು ನಡೆದ ಪ್ರಯತ್ನಗಳು  ರಾಷ್ಟ್ರೀಯ ಹಸಿರು ಪೀಠ (ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್- ಎನ್‌ಜಿಟಿ) ದ ಸ್ವರೂಪಕ್ಕೆ ವ್ಯತಿರಿಕ್ತವಾಗಿದೆ.  ೨೦೧೧ರಲ್ಲಿ ಈ ಪರಿಸರ ನ್ಯಾಯಪೀಠವನ್ನು ಸ್ಥಾಪಿಸಿದಾಗ ಫಿರ್ಯಾದುದಾರರು ನ್ಯಾಯವನ್ನು ಅರಸುತ್ತಾ ದೂರದ ದೆಹಲಿಯತನಕ ಬರುವುದನ್ನು ತಡೆಯಲೆಂದೇ ಈ ಪೀಠದ ಐದು ಪ್ರಾದೇಶಿಕ ಶಾಖೆಗಳನ್ನು ಸ್ಥಾಪಿಸಲಾಯಿತು. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಹೆಚ್ಚೆಚ್ಚಾಗಿ ದಾಖಲಾಗುತ್ತಿದ್ದ ಸಿವಿಲ್ ದಾವೆಗಳು ಮತ್ತು ಆ ಫಿರ್ಯಾದುಗಳೆಲ್ಲಾ ಸಾರಾಂಶದಲ್ಲಿ ಪರಿಸರ ಸಂಬಂಧೀ ಪ್ರಶ್ನೆಗಳೇ ಆಗಿರುವುದನ್ನು ಗಮನಿಸಿ ಈ ಎನ್‌ಜಿಟಿ- ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ಸ್ಥಾಪಿಸಲಾಯಿತು. ವಾಸ್ತವವಾಗಿ ಈ ಪ್ರಾದೇಶಿಕ ಪೀಠಗಳನ್ನು ಮಾತ್ರವಲ್ಲದೆ,  ಅಧಿಕ ಸಂಖ್ಯೆಯಲ್ಲಿ ಪರಿಸರ ಸಂಬಂಧೀ ಪ್ರಕರಣಗಳನ್ನು ಹುಟ್ಟುಹಾಕುತ್ತಿರುವ ಗೋವಾದಂಥ ರಾಜ್ಯಗಳಲ್ಲಿ,  ವರ್ತುಲ ಪೀಠಗಳನ್ನು ಸ್ಥಾಪಿಸಬೇಕೆಂಬ ವಾದಗಳು ಗಟ್ಟಿಯಾಗಿ ಕೇಳಿಬರುತ್ತಿದೆ. ಉದಾಹರಣೆಗೆ ಹೇಳುವುದಾದರೆ ಈ ಹಸಿರುಪೀಠದ ಪಶ್ಚಿಮ ಪ್ರದೇಶಿಕ ಶಾಖೆಯಲ್ಲಿ ಗೋವಾ ರಾಜ್ಯವೊಂದರಿಂದಲೇ ೧೪೬ ಪ್ರಕರಣಗಳು ದಾಖಲಾಗಿದ್ದರೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಂದ ಒಟ್ಟು ಸೇರಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ೩೪೦.

 ಆದರೆ ಸರ್ಕಾರವು ಫಿರ್ಯಾದುದಾರರಿಗೆ ಅನುಕೂಲವಾಗುವಂಥ ಕ್ರಮಗಳನ್ನು ತೆಗೆದುಕೊಳ್ಳುವ ಬದಲಿಗೆ, ಪ್ರಾಯಶಃ ಉದ್ದೇಶಪೂರ್ವಕವಾಗಿ, ಹೆಚ್ಚು ಅನಾನುಕೂಲತೆಗಳನ್ನು ಸೃಷ್ಟಿಸುವಂಥ ಕ್ರಮಗಳನ್ನು ಆಯ್ಕೆಮಾಡಿಕೊಂಡಿದೆ. ಗೋವಾದ ಅನನ್ಯ ಮತ್ತು ಶಿಥಿಲಗೊಂಡಿರುವ ಪರಿಸರಕ್ಕೆ ಧಕ್ಕೆ ತರಬಹುದಾದ ಸರ್ಕಾರಿ ನೀತಿ ಅಥವಾ ಕ್ರಮಗಳ ಬಗ್ಗೆ ಸದಾ ಜಾಗೃತರಾಗಿರುವ ಹಲವಾರು ಕ್ರಿಯಾಶೀಲ ಪರಿಸರವಾದಿ ಗುಂಪುಗಳಿವೆ. ಹಾಗಿದ್ದರೂ ಪರಿಕ್ಕರ್ ಸರ್ಕಾರ ಪರಿಸರ ಸಂಬಂಧೀ ದಾವೆಗಳಿಗೆ ಅಡ್ಡಿಗಳನ್ನು ಸೃಷ್ಟಿ ಮಾಡುವಂಥ ಕ್ರಮಗಳಿಗೆ ಮುಂದಾಗಿದ್ದು ಆಶ್ಚರ್ಯಕರವಾಗಿದೆ.

 ನ್ಯಾಯಮೂರ್ತಿಗಳಾದ ಪಟೇಲ್ ಮತ್ತು ಸರ್ದೇಸಾಯಿ ಅವರುಗಳು ಗುರುತಿಸಿರುವಂತೆ ಗೋವಾದ ಅತಿ ದೊಡ್ಡ ಆಸ್ತಿಯೆಂದರೆ ಅದರ ಪರಿಸರ ಮತ್ತು ಪ್ರಕೃತಿ. ಗೋವಾ ರಾಜ್ಯದ ಒಟ್ಟು ಜನಸಂಖ್ಯೆ ಕೇವಲ ೧೪ ಲಕ್ಷ ಮಾತ್ರವೇ ಇದ್ದರೂ ಅದು ಪ್ರಾಯಶಃ ದೇಶದಲ್ಲೇ ಅತಿಹೆಚ್ಚು ಪರಿಸರ ಕಾಳಜಿ ಹೊಂದಿರುವ ರಾಜ್ಯವಾಗಿದೆ. ಅಲ್ಲಿರುವ ಹೆಚ್ಚಿನ ಸಾಕ್ಷರತೆ ಮತ್ತು ಕ್ರಿಯಾಶೀಲ ಸ್ಥಳೀಯ ಮತ್ತು ತಳಮಟ್ಟದ  ಆಡಳಿತ ವ್ಯವಸ್ಥೆಗಳ ಕಾರಣದಿಂದಾಗಿ ಪರಿಸರವನ್ನು ಉಳಿಸಿಕೊಳ್ಳುವ ಹೋರಾಟಗಳು ಗ್ರಾಮಮಟ್ಟದಿಂದಲೇ ದಿನನಿತ್ಯ ನಡೆಯುತ್ತಿರುತ್ತದೆ.  ಗ್ರಾಮಪಂಚಾಯತಿಗಳು ಸರ್ಕಾರವು ಜಾರಿಗೆ ತರುವ ಹಲವಾರು ಯೋಜನೆಗಳನ್ನು ಪರಿಸರದ ದೃಷ್ಟಿಯಿಂದ ಕ್ರಿಯಾಶಿಲವಾಗಿ ಪ್ರಶ್ನಿಸುತ್ತವೆ. ಮತ್ತು ಸರ್ಕಾರಗಳು ಅಲಕ್ಷ್ಯ ಮಾಡಿರುವ ಹಲವು ಆಂಶಗಳನ್ನು ಮುಂದಕ್ಕೆ ತರುತ್ತವೆ. ಸರ್ಕಾರದೊಂದಿಗೆ ಎಲ್ಲಾ ಬಗೆಯ ವಕೀಲಿಕೆ ಮತ್ತು ಸಂವಾದಗಳು ವಿಫಲವಾದಾಗ ಮಾತ್ರ ನಾಗರಿಕರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಹೀಗಾಗಿ ಪರಿಸರ ಸಂಬಂಧೀ ಪ್ರಶ್ನೆಗಳ ಇತ್ಯರ್ಥಕ್ಕಾಗಿಯೇ ಹಸಿರುಪೀಠದ ರಚನೆ ಮತ್ತು ಅದರಿಂದ ನ್ಯಾಯದಾನ ಪಡೆದುಕೊಳ್ಳಲು ಸುಲಭವಾಗುವಂತೆ ಪ್ರಾದೇಶಿಕ  ಶಾಖೆಗಳ ಸ್ಥಾಪನೆಯಾಗಿರುವುದು ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ.

ನ್ಯಾಯವನ್ನು ಪಡೆದುಕೊಳ್ಳುವ ಅವಕಾಶದ ಹಕ್ಕು ಕೇವಲ ನ್ಯಾಯಾಲಯಗಳು ಎಲ್ಲಿ ಭೌತಿಕವಾಗಿ ಸ್ಥಾಪನೆಗೊಂಡಿರುತ್ತದೆ ಎಂಬ ವಿಷಯಕ್ಕೆ ಮಾತ್ರ ಸೀಮಿತವಾಗಿರುವ ವಿಷಯವಲ್ಲ. ಅದು ನ್ಯಾಯನೀಡಿಕೆಯ ವ್ಯವಸ್ಥೆಗೆ ಸಂಬಂಧಪಟ್ಟಿರುವ ವಿಷಯವಾಗಿದೆ. ನ್ಯಾಯಾಲಯಗಳು ಸನಿಹದಲ್ಲೇ ಇದ್ದರೂ ಸುದೀರ್ಘ ವಿಚಾರಣೆಯ ಪ್ರಕ್ರಿಯೆಗಳು, ಹಣಕಾಸು ವೆಚ್ಚ, ವಿಳಂಬ ಇತ್ಯಾದಿಗಳಿಂದಾಗಿ ನ್ಯಾಯವು ಮಾತ್ರ  ಸಾಮಾನ್ಯ ಜನರಿಗೆ ಎಟುಕುವುದೇ ಕಷ್ಟವಾಗಿರುತ್ತದೆ. ನ್ಯಾಯವನ್ನು ಪಡೆದುಕೊಳ್ಳುವ ಅವಕಾಶದ ಹಕ್ಕನ್ನು ಮತ್ತೊಮ್ಮೆ ಪ್ರತಿಪಾದಿಸುವ ಮೂಲಕ ಈ ನ್ಯಾಯಾದೇಶವು ಈ ದೇಶದಲ್ಲಿ ನ್ಯಾಯನೀಡಿಕೆಯ ವ್ಯವಸ್ಥೆಯಲ್ಲಿರುವ ದೋಷಗಳನ್ನು ತುರ್ತಾಗಿ ಸರಿಪಡಿಸುವ ಅಗತ್ಯದ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ. ತಮ್ಮ ಆದೇಶದಲ್ಲಿ ನ್ಯಾಯಾಧೀಶರು ಜೇಮ್ಸ್ ಬಾಲ್ಡ್ವಿನ್ ಅವರ ದಿ ಪ್ರೈಸ್ ಆಪ್ ದಿ ಟಿಕೆಟ್ ಪುಸ್ತಕದಲ್ಲಿರುವ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಅದು ಹೀಗಿದೆ:

 ಒಂದು ದೇಶದಲ್ಲಿ ನ್ಯಾಯನೀಡಿಕೆಯ ವ್ಯವಸ್ಥೆಯು ಹೇಗಿದೆ ಎಂದು ಅರ್ಥಮಾಡಿಕೊಳ್ಳಲು ಆ ದೇಶದ ಪೊಲೀಸರನ್ನಾಗಲೀ, ನ್ಯಾಯಾಧೀಶರನ್ನಾಗಲೀ, ಸುರಕ್ಷಿತ ವಲಯದಲ್ಲಿರುವ ಮಧ್ಯಮವರ್ಗದವರನ್ನಾಗಲೀ ಕೇಳಬಾರದು. ಬದಲಿಗೆ ಯಾರಿಗೆ ಕಾನೂನಿನ ಮತ್ತು ನ್ಯಾಯನೀಡಿಕೆಯ ಅತಿ ಹೆಚ್ಚು ಅಗತ್ಯವಿದೆಯೋ ಅಂಥ ಅರಕ್ಷಿತ ಜನರ ಬಳಿ ಹೋಗಿ ಆ ದೇಶದ ನ್ಯಾಯನೀಡಿಕೆಯ ವ್ಯವಸ್ಥೆಯ ಬಗ್ಗೆ ಅವರ ಅನುಭವದ ಕಥನವನ್ನು ಕೇಳಿಸಿಕೊಳ್ಳಬೇಕು.

ಈ ಸಂದೇಶವು ರಕ್ಷಣೆಯಿಲ್ಲದ ಜನರನ್ನು ರಕ್ಷಿಸುವಲ್ಲಿ ಪದೇಪದೇ ವಿಫಲವಾಗುವಂಥ ಕಾನೂನುಗಳಿರುವ ಭಾರತಕ್ಕೆ ಹೇಳಿಮಾಡಿಸಿದಂತಿದೆ. 
ಕೃಪೆ: Economic and Political Weekly, Oct 28, 2017. Vol. 52. No. 42-43