ಶನಿವಾರ, ಮೇ 6, 2017

ಮೇ ದಿನವನ್ನು ನೆನೆಯುತ್ತಾ


ಅನು: ಶಿವಸುಂದರ್
may day 2017 ಗೆ ಚಿತ್ರದ ಫಲಿತಾಂಶ

ಚಿಕಾಗೋದ ಹೇ ಮಾರುಕಟ್ಟೆಯಲ್ಲಿ ಬಲಿಯಾದ ಹುತಾತ್ಮರನ್ನು ಗೌರವಿಸೋಣ. ಅಂತರರಾಷ್ಟ್ರೀಯ ಕಾರ್ಮಿಕ ವರ್ಗದ ಸೌಹಾರ್ದತೆಗೆ ಮರಳಿ ಜೀವ ತುಂಬೋಣ.


ಬಂಡವಾಳಶಾಹಿ ಆಳುವವರ್ಗಗಳು ಸತತ ನಾಲಕ್ಕು ದಶಕಗಳಿಂದ ಜಗತ್ತಿನಾದ್ಯಂತ ನಡೆಸುತ್ತಿರುವ ದಾಳಿಯಿಂದಾಗಿ ಕಾರ್ಮಿಕ ವರ್ಗವು ತನ್ನ ವೀರೋಚಿತ ಇತಿಹಾಸವನ್ನೇ ಮರೆತುಬಿಡುವಂತೆ ಮಾಡಿಬಿಟ್ಟಿದೆ. ಇಲ್ಲದಿದ್ದರೆ ಮೇ ದಿನದ ಹುಟ್ಟನ್ನು ಕಾರ್ಮಿಕ ವರ್ಗವು ಹೇಗೆ ತಾನೇ ಮರೆಯಲು ಸಾಧ್ಯ? ಪ್ರಾಯಶಃ ಈ ಸಂಕಷ್ಟದ ಕಾಲದಲ್ಲಿ ಕಾರ್ಮಿಕ ಚಳವಳಿಯೊಳಗೂ ಈ ಇತಿಹಾಸವನ್ನು ಹೇಳಿಕೊಡುವುದು ನಿಂತುಹೋಗಿರಬೇಕು. ವಾಸ್ತವವಾಗಿ, ಕಾರ್ಮಿಕ ವರ್ಗವು ತನ್ನ ಸುದೀರ್ಘ ವರ್ಗ ಸಂಘರ್ಷದಲ್ಲಿ  ರೂಢಿಸಿಕೊಂಡ ಪ್ರತಿರೋಧದ ಸಂಸ್ಕೃತಿಯು ಹಿಂದೆಂದಿಗಿಂತಲೂ ಅತ್ಯಗತ್ಯವಾಗಿರುವ ಇಂದಿನ ಸಂದರ್ಭದಲ್ಲೇ ಕಾರ್ಮಿಕ ವರ್ಗದ ಕ್ರಾಂತಿಕಾರಿ ಇತಿಹಾಸದ ನೆನಪಿನ ಮೇಲೆ ದೀರ್ಘ ದಮನವೂ ನಡೆಯುತ್ತಿದೆ. ಆಗಲೂ-೧೯ನೇ ಶತಮಾನದಲ್ಲಿ- ಇಂದಿನ ದಿನಗಳಂತೆ ಉದ್ಯೋಗಿಯಾಗಿರುವುದಕ್ಕಿಂತ ಭೀಕರವಾದದ್ದೆಂದರೆ ನಿರುದ್ಯೋಗಿಯಾಗಿರುವುದು ಎಂಬಂಥ ಸ್ಥಿತಿಯೇ ಇತ್ತು. ಇಂದಿನಂತೆ ಆಗಲೂ ಬಂಡವಾಳಿಗರಿಗೆ ಕಾರ್ಮಿಕರೆಂದರೆ ಕೇವಲ ಒಂದು ಉತ್ಪಾದನಾ ವೆಚ್ಚವಷ್ಟೇ ಆಗಿದ್ದರು. ಆದರೆ ಆಗ ಕಾರ್ಮಿಕರು ಭಯ ತೊರೆದು ಕೆಲಸದ ಅವಧಿಯನ್ನು ಎಂಟುಗಂಟೆಗಳಿಗೆ ಮಾತ್ರ ಸೀಮಿತಗೊಳಿಸಬೇಕೆಂಬ ಹಕ್ಕನ್ನು ಒಳಗೊಂಡಂತೆ ಇತರ ಹಕ್ಕುಗಳಿಗಾಗಿ ವೀರೋಚಿತವಾಗಿ  ಹೋರಾಡಿದರು.

೧೮೮೬ರ ಮೇ ೧ರ ಮೊದಲ ಮೇ ದಿನದಂದು ಎಂಟುಗಂಟೆ ಕೆಲಸ ಅವಧಿಯನ್ನು ಒತ್ತಾಯಿಸಿ ಉತ್ತರ ಅಮೆರಿಕಾದ ಲಕ್ಷಾಂತರ ಕಾರ್ಮಿಕರನ್ನು ಸಂಘಟಿಸಲಾಯಿತು. ಆ ದಿನಗಳಲ್ಲಿ ಚಿಕಾಗೋ ನಗರವು ಕಾರ್ಮಿಕ ವರ್ಗದ ಸಂಘಟನೆಗಳ ಕೇಂದ್ರವಾಗಿತ್ತು. ಕಾರ್ಮಿಕ ಚಳವಳಿಯಲ್ಲಿನ ಎಡಪಂಥೀಯರ ಹೃದಯವಾಗಿತ್ತು. ಅನಾರ್ಕಿಸ್ಟ್ ಚಿಂತನೆಯ (ಅರಾಜಕತಾವಾದಿ)ಅಂತರರಾಷ್ಟ್ರೀಯ ಶ್ರಮಜೀವಿಗಳ ಸಂಘಟನೆಗಳ ಒಕ್ಕೂಟವು ಅದರ ಮುಂಚೂಣಿಯಲ್ಲಿತ್ತು. ನಿರೀಕ್ಷೆಯಂತೆ ಈ ಕಾರ್ಮಿಕರ ಚಳವಳಿಯು ಬಂಡವಾಳಶಾಹಿಗಳ ಸಂಘಟಿತ ವಿರೋಧವನ್ನು ಎದುರಿಸಬೇಕಿತ್ತು. ಅವರಿಗೆ ವ್ಯಾಪಾರಿ ಮಾಧ್ಯಮ ಸಂಸ್ಥೆಗಳ ಮತ್ತು ಕ್ರೂರ ಪೊಲೀಸ್ ವ್ಯವಸ್ಥೆಯ ಸಂಪೂರ್ಣ ಬೆಂಬಲವಿತ್ತು.  ೧೮೮೬ರ ಮೇ ತಿಂಗಳಲ್ಲಿ ಚಿಕಾಗೋದ ಹೇ ಮಾರುಕಟ್ಟೆಯ ಚೌಕದ ಬಳಿ ಬಾಂಬ್ ಒಂದನ್ನು ಸ್ಫೋಟಿಸಿದರೆಂಬ ಸುಳ್ಳು ಆರೋಪದ ಮೇಲೆ ನಾಲಕ್ಕು ಅಮಾಯಕರನ್ನು ಗಲ್ಲಿಗೇರಿಸಲಾಯಿತು. ಅವರಲ್ಲಿ ಅರಾಜಕತಾವಾದಿ ಸಿದ್ಧಾಂತದ ಆಗಸ್ಟ್ ಸ್ಪೈಸ್ ಮತ್ತು ಆಲ್ಬರ್ಟ್ ಪಾರ್ಸನ್ಸ್ ಎಂಬ ಇಬ್ಬರು ಇದ್ದರು. ಅವರು ಎಸಗಿದ ಒಂದೇ ಅಪರಾಧವೆಂದರೆ ಎಂಟುಗಂಟೆ ಯ ದುಡಿತವನ್ನು ಒಳಗೊಂಡಂತೆ ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುತ್ತಿದ್ದ ಕ್ರಾಂತಿಕಾರಿ ಕಾರ್ಮಿಕ ಸಂಘಟನೆಯ ಭಾಗವಾಗಿದ್ದದ್ದು.

ಆ ವೇಳೆಗಾಗಲೇ ಹಲವಾರು ರಾಜ್ಯಗಳಲ್ಲಿ ಎಂಟುಗಂಟೆಯ ದುಡಿತವು ಶಾಸನವೇ ಆಗಿದ್ದರೂ ಬಂಡವಾಳಿಗರು ಅದರ ಅನುಷ್ಠಾನವನ್ನು ವಿರೋಧಿಸುತ್ತಲೇ ಬಂದಿದ್ದರು. ಶಾಸಕರು ಮತ್ತು ಕಾನೂನು ಪಾಲಕರು ಈ ಬಹಿರಂಗ ಕಾನೂನು ಉಲ್ಲಂಘನೆಯನ್ನು ನಿರ್ಲಕ್ಷಿಸುತ್ತಲೇ ಹೋದರು. ಹೀಗಾಗಿ ಕಾರ್ಮಿಕರಿಗೆ ಮೇ ೧ ರಿಂದ ಮುಷ್ಕರವನ್ನು ಹೂಡುವುದನ್ನು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ವಿಚಾರಣೆಯ ಸಂದರ್ಭದಲ್ಲಿ ಸರ್ಕಾರಿ ವಕೀಲರು ಕಾರ್ಮಿಕರ ವಿರುದ್ಧ ಹೀಗೆ ಕೆಂಡಕಾರಿದರು:ಕಾನೂನೇ ವಿಚಾರಣೆಗೊಳಗಾದಂತಾಗಿದೆ..ಅರಾಜಕತಾವಾದವು ವಿಚಾರಣೆಗೊಳಪಟ್ಟಿದೆ..ಈ ವ್ಯಕ್ತಿಗಳನ್ನು ಶಿಕ್ಷಿಸಿ ಗಲ್ಲಿಗೇರಿಸಿದರೆ ಮಾತ್ರ ಉಳಿದವರು ಇವರನ್ನು ಅನುಸರಿಸದಂತೆ ಮಾಡಬಹುದು. ಮತ್ತು ನಮ್ಮ ಸಮಾಜವನ್ನು ಮತ್ತು ನಮ್ಮ ಸಂಸ್ಥೆಗಳನ್ನು ಕಾಪಾಡಿಕೊಳ್ಳಬಹುದು. ಆದರೆ ಗಲ್ಲಿಗೇರುವ ಮೂನ ಸ್ಪೈಸ್ ಹೀಗೆ ಎಚ್ಚರಿಸಿದರು:

ನಮ್ಮನ್ನು ಗಲ್ಲಿಗೇರಿಸುವ ಮೂಲಕ ಕಾರ್ಮಿಕ ಚಳವಳಿಯನ್ನು ದಮನ ಮಾಡಬಹುದೆಂದು ನೀವು ಭಾವಿಸಿದ್ದರೆ..ಯಾವ ಚಳವಳಿಯ ಮೂಲಕ ಬಡತನ ಮತ್ತು ಬಯಕೆಗಳ ಬೇಗುದಿಗಳಲ್ಲಿ ಬಳಲುತ್ತಾ ಶ್ರಮಿಸುತ್ತಿರುವ ಲಕ್ಷಾಂತರ ಶ್ರಮಜೀವಿಗಳು ವಿಮೋಚನೆಯನ್ನು ಕಾಣಬಯಸುತ್ತಾರೋ ಅಂಥಾ ಚಳವಳಿಯನ್ನು ನೀವು ನಮ್ಮನ್ನು ಗಲ್ಲಿಗೇರಿಸುವ ಮೂಲಕ ದಮನ ಮಾಡಬಹುದೆಂದು ನೀವು ಭಾವಿಸಿದ್ದರೆ..ಬನ್ನಿ.. ನಮ್ಮನ್ನು ಗಲ್ಲಿಗೇರಿಸಿ! ಇಲ್ಲಿ ನೀವು ಒಂದು ಕಿಡಿಯನ್ನು ನಂದಿಸಬಹುದು. ಆದರೆ ಅದೋ ಅಲ್ಲಿ, ಇಲ್ಲಿ, ನಿಮ್ಮ ಹಿಂದೆ, ನಿಮ್ಮ ಮುಂದೆ ..ಎಲ್ಲೆಲ್ಲೂ ಹೋರಾಟದ ಜ್ವಾಲೆಗಳು ಹಬ್ಬಿಕೊಳ್ಳಲಿವೆ. ಇದು ಭೂಮಿಯ ಒಳಗಿಂದ ಉಕ್ಕುತ್ತಿರುವ ಕಾಳ್ಗಿಚ್ಚು. ನೀವು ಅದನ್ನು ನಂದಿಸಲಾರಿರಿ.

ಆ ದಿನಗಳಲ್ಲಿ ಚಿಕಾಗೋ ಕಾರ್ಮಿಕರು ಚತುರ ನಾಯಕರನ್ನೂ, ಜೊತೆಗೆ ಸ್ಪೈಸ್ ಸಂಪಾದಕತ್ವದಲ್ಲಿದ್ದ  ಅರ್ಬೆತಿರ್-ಜೆತುಂಗ್ ಎಂಬ ದಿನಪತ್ರಿಕೆಯನ್ನೂ ಒಳಗೊಂಡಂತೆ ಸಕ್ರಿಯವಾಗಿದ್ದ ಎಡ ಒಲವಿನ ಮಾಧ್ಯಮದ ಬೆಂಬಲವನ್ನು ಹೊಂದಿದ್ದರು. ಅಂದಿನ ದಿನಗಳಲ್ಲಿ ಶ್ರೀಮಂತ ವರ್ಗದವರು ಕಾರ್ಮಿಕರನ್ನು ಅಪಾಯಕಾರಿ ವರ್ಗಗಳೆಂದು ಕರೆಯುತ್ತಿದ್ದರು. ಆದರೆ ವಿಷಾದದ ವಿಷಯವೆಂದರೆ ಇಂದು ಅಮೆರಿಕದ ಬಹುಪಾಲು ಕಾರ್ಮಿಕ ವರ್ಗ ಸಂಘಟನೆರಹಿತವಾದ ಕಾರ್ಮಿಕ ವರ್ಗವಾಗಿದೆ. ಅಷ್ಟು ಮಾತ್ರವಲ್ಲ ರಸ್ಟ್ ಬೆಲ್ಟ್ ಸ್ಟೇಟ್ಸ್  (ಹಿಂದೊಮ್ಮೆ ಪ್ರಬಲ ಕೈಗಾರಿಕೆಗಳನ್ನು ಹೊಂದಿದ್ದು ಆ ನಂತರದಲ್ಲಿ ಆರ್ಥಿಕ ಹಿಂದ್ಸರಿತದ ಕಾರಣದಿಂದಾಗಿ ಕೈಗಾರಿಕೆಗಳು ಮುಚ್ಚಿಕೊಂಡು ವಲಸೆ ಇನ್ನಿತ್ಯಾದಿ  ಆರ್ಥಿಕ ಹಿನ್ನೆಡೆಗೆ ಗುರಿಯಾದ ಉತ್ತರ ಅಮೆರಿಕಾದ ಮಹಾನ್ ಸರೋವರ ಮತ್ತು ವಾಯುವ್ಯ ಅಮರಿಕೆದ ನಡುವಿನ ಪ್ರದೇಶವನ್ನು ರಸ್ಟ್ ಬೆಲ್ಟ್ ಪ್ರದೇಶ- ತುಕ್ಕು ಹಿಡಿದ ಸಂಸ್ಥಾನಗಳು ಎಂದು ಬಣ್ಣಿಸಲಾಗುತ್ತದೆ- ಅನುವಾದಕನ ಟಿಪ್ಪಣಿ) ಎಂದು ಕರೆಸಿಕೊಳ್ಳಲ್ಪಡುವ ಅಯೋವಾ, ಮಿಚಿಗನ್, ಒಹಿಯೋ, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ಪ್ರದೇಶಗಳ ಕಾರ್ಮಿಕರ ಓಟುಗಳಿಂದಲೇ ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ಡೋನಾಲ್ಡ್ ಟ್ರಂಪ್‌ನಂಥ ಜನಾಂಗೀಯವಾದಿ, ದುರಭಿಮಾನಿ ಸಂಕುಚಿತ ರಾಷ್ಟ್ರೀಯವಾದಿಯನ್ನು ಗೆಲ್ಲುವಂತೆ ಮಾಡಲು ಸಹಾಯ ಮಾಡಿತೆಂದು ಹೇಳಲಾಗುತ್ತದೆ. ಟ್ರಂಪ್‌ನಂಥವರೇ ಇಂದು ಜಗತ್ತಿನ ಇತರೆಡಗಳಲ್ಲೂ ಮೇಲೇರುತ್ತಿದ್ದಾರೆ. ಫ್ರಾನ್ಸಿನ ನ್ಯಾಷನಲ್ ಫ್ರಂಟ್, ಬ್ರೆಕ್ಸಿಟ್ (ಬ್ರೆಕ್ಸಿಟ್-ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಬೇಕೆಂದು ನಡೆದ ಚಳವಳಿ- ಅನುವಾದಕನ ಟಿಪ್ಪಣಿ) ಚಳವಳಿಗೆ ನಾಯಕತ್ವ ನೀಡಿದ ಯುನೈಟೆಡ್ ಕಿಂಗ್‌ಡಮ್‌ನ ಇಂಡಿಪೆಂಡೆಟ್ ಪಾರ್ಟಿ, ಇಟಲಿಯ ಫೈವ್ ಸ್ಟಾರ್ ಚಳವಳಿ (ಸಂಕುಚಿತ ರಾಷ್ಟ್ರೀಯವಾದಿ ಚಳವಳಿ-ಅನು), ಜರ್ಮನಿಯ ಪೆಡಿಗಾ (ಪಶ್ಚಿಮ ದೇಶಗಳಲ್ಲಿ ಇಸ್ಲಾಮಿನ ಪ್ರಭಾವವನ್ನು ವಿರೋಧಿಸಿ ಕಟ್ಟಲಾಗುತ್ತಿರುವ ಸಂಕುಚಿತ ರಾಷ್ಟ್ರೀಯವಾದಿ ಚಳವಳಿ- ಅನುವಾದಕನ ಟಿಪ್ಪಣಿ) ಮತ್ತದರ ಜೊತೆಗೆ ಅಲ್ಟರ್ನೇಟೀವ್ ಫಾರ್ ಜರ್ಮನಿಯೆಂಬ ನಿರಾಶ್ರಿತರ ವಿರೋಧಿ ಆಂದೋಲನಗಳು ಈ ವಿದ್ಯಮಾನಕ್ಕೆ ಕೆಲವು ಉದಾಹರಣೆಗಳಷ್ಟೆ.

ಭಾರತದಲ್ಲಿ ನರೇಂದ್ರಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ಸು ನಿಂತಿರುವುದೇ ತಾತ್ಕಾಲಿಕ ಅಥವಾ ಗುತ್ತಿಕೆ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳುವುದರ ಮೇಲೆ. ಈ ಗುತ್ತಿಗೆ/ತಾತ್ಕಾಲಿಕ ಕಾರ್ಮಿಕರು  ಖಾಯಂ ಕಾರ್ಮಿಕರಷ್ಟೇ ಕೆಲಸ ಮಾಡಿದರೂ ಅವರ ಕಾಲು ಭಾಗದಷ್ಟೂ ಸಂಬಳವೂ ದೊರೆಯುವುದಿಲ್ಲ. ಕೆಲಸದ ಭದ್ರತೆಯೂ ಇರುವುದಿಲ್ಲ. ಇದರ ಜೊತೆಗೆ ಅಲ್ಲಿ ಮಾಲೀಕರ ಕೈಗೊಂಬೆ ಕಾರ್ಮಿಕ ಸಂಘಸಂಸ್ಥೆಗಳನ್ನು ಬಿಟ್ಟರೆ ಯಾವುದೇ ಸ್ವತಂತ್ರ ಕಾರ್ಮಿಕ ಸಂಘಟನೆಗಳಿಗೆ ಪ್ರವೇಶ ನಿಷಿದ್ಧ. ಇದರ ಜೊತೆ ಸ್ಥಳೀಯ ಪೊಲೀಸರು ಸಹ ಮಾಲೀಕರ ಜೊತೆ ಶಾಮೀಲಾಗಿರುತ್ತಾರೆ. ಒಂದು ವೇಳೆ ಭಾರತದ ಕಾರ್ಮಿಕ ಕಾನೂನಿನಲ್ಲಿ ಖಾತರಿಪಡಿಸಿರುವ ತಮ್ಮ ಹಕ್ಕುಗಳಿಗಾಗಿ ಕಾರ್ಮಿಕರು ಹೋರಾಡಿದಲ್ಲಿ ಹರ್ಯಾಣದ  ಮಾರುತಿ-ಮಾನೇಸರ್ ಕಾರ್ಮಿಕರ ಮೇಲೆ ನಡೆಸಿದ ದಮನದಂತೆ ತೀವ್ರ ರೀತಿಯ ದಮನ ಕಾರ್ಯಾಚರಣೆಯನ್ನು ಮಾಡಿ ಕಾರ್ಮಿಕರ ಹಕ್ಕುಗಳನ್ನು ದಮನಮಾಡಲು ಪೋಲಿಸರೇ ಮುಂದಾಗುತ್ತಾರೆ. ನಿಯಮಿತ ಕೆಲಸಗಾರರಾಗಿ ಹಲವು ಅತ್ಯಗತ್ಯ ಸಮಾಜ ಸೇವೆಗಳನ್ನು ಮಾಡುವ ಲಕ್ಷಾಂತರ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಾ ನೇರ ಉದ್ಯೋಗದಾತ (ಎಂಪ್ಲಾಯರ್)ನಾಗಿರುವ ಸರ್ಕಾರವೇ ಅವರ ಹಕ್ಕುಗಳನ್ನು ಗುರುತಿಸಲು ನಿರಾಕರಿಸುತ್ತಿದೆ. ಅಂಗನವಾಡಿ ಕೆಲಸಗಾರರಿಗೆ, ಸರ್ವ ಶಿಕ್ಷಾ ಅಭಿಯಾನದ ಪೂರಕ ಶಿಕ್ಷಕರಿಗೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ನಿನಡಿಯಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತರಿಗೆ ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸಲಾಗಿದೆ. ವಿಷಾದದ ಸಂಗತಿಯೆಂದರೆ, ಕೆಲಸವನ್ನು ತಾತ್ಕಾಲಿಕಗೊಳಿಸುವುದು ಮತ್ತು ಅವನ್ನು ಗುತ್ತಿಗೆಗೆ ವಹಿಸುವುದರ ವಿರುದ್ಧ, ಕಡಿಮೆ ವೇತನದ ವಿರುದ್ಧ, ಸುದೀರ್ಘ ದುಡಿಮೆಯ ಅವಧಿಯ ವಿರುದ್ಧ, ಮತ್ತು ಕೆಲಸ ಮಾಡುವ ಜಾಗದಲ್ಲಿ ಕನಿಷ್ಟ ಸೌಲಭ್ಯವಿಲ್ಲದ ಸಮಸ್ಯೆಗಳ ವಿರುದ್ಧ ಅತ್ಯಗತ್ಯವಾಗಿರುವ ಕಾರ್ಮಿಕ ದಂಗೆಯನ್ನು ಸಂಘಟಿಸಲು ಸಾಧ್ಯವಾಗದಷ್ಟು ಕಾರ್ಮಿಕ ಸಂಘಟನೆಗಳು ಛಿದ್ರಗೊಂಡಿವೆ.

ಇಂದು ಬಹಳಷ್ಟು ಟ್ರೇಡ್ ಯೂನಿಯನ್ನುಗಳಿಗೆ ಮೇ ದಿನವು ಇತಿಹಾಸದಲ್ಲಿ ಕಾರ್ಮಿಕ ವರ್ಗವು ನಡೆಸಿದ ಹೋರಾಟಗಳನ್ನು ಸ್ಮರಿಸುವ ದಿನವೂ ಸಹ ಅಲ್ಲ.. ಹೀಗಿರುವಾಗ ಮೇ ದಿನವನ್ನು  ಬಂಡವಾಳಶಾಹಿ ಸಮಾಜದಾಚೆಗೆ ಭವಿಷ್ಯದ ಹೋರಾಟದ ಪ್ರತೀಕದಂತೆ  ನೋಡುತ್ತಾರೆಂದು ಭಾವಿಸುವುದು ದೂರದ ಮಾತಾಯಿತು. ಅಂಥವರಿಗೆ ೧೮೮೦ರ ಕಾಲದಲ್ಲಿ ಚಿಕಾಗೋದಲ್ಲಿ ಕಾರ್ಮಿಕವರ್ಗ ಹಾಡುತ್ತಿದ್ದ ಎಂಟು ಗಂಟೆಗಳ ದುಡಿತದ ಹಾಡ ನ್ನು ನೆನಪಿಸಬೇಕು. ಆ ಹಾಡಿನ ಕೊನೆಯ ಸಾಲುಗಳು ಹೆಚ್ಚೂ-ಕಡಿಮೆ ಹೀಗೆ ಸಾಗುತ್ತದೆ:

ಆನುಭವಿಸಬೇಕು ನಾವು  ಸೂರ್ಯನ ಬೆಳಕನ್ನು;  ಆಸ್ವಾದಿಸಬೇಕು ಹೂವಿನ ಪರಿಮಳವನ್ನು
ಬಲ್ಲೆವು ದೈವದ ಸಮ್ಮತಿ ಇದಕಿದೆಯೆಂದು, ಎಂಟುಗಂಟೆಗಳ ದುಡಿತ ಸಾಕೆಂಬ ಧೃಢ ಸಂಕಲ್ಪವಿಂದು
ಹೊರಟಿವೆ ನೋಡಿ, ನಮ್ಮ ಪಡೆಗಳು ಗಿರಣಿಗಳಿಂದ, ಕಾರ್ಖಾನೆಗಳಿಂದ, ಹಡಗುಕಟ್ಟೆಗಳಿಂದ
ಎಂಟು ಗಂಟೆ ದುಡಿಮೆಗೆ, ಎಂಟು ಗಂಟೆ ವಿರಾಮಕ್ಕೆ, ಇನ್ನೆಂಟು ಗಂಟೆ ನನಗೆ, ನನ್ನಿಷ್ಟಕ್ಕೆ.

     ಕೃಪೆ: Economic and Political Weekly
             April 29, 2017. Vol. 52. No. 17.

                                                                                                                                 
 






















ಮಂಗಳವಾರ, ಮೇ 2, 2017

ಸಂಘಟನೆಯಲ್ಲಿ ಬಲವಿದೆ




 ಅನು: ಶಿವಸುಂದರ್

Mumbai’s sanitation workers ಗೆ ಚಿತ್ರದ ಫಲಿತಾಂಶ

ಮುಂಬೈನ ಪೌರಕಾರ್ಮಿಕರ ಕಾನೂನಾತ್ಮಕ ದಿಗ್ವಿಜಯ ಸಂಘಟನಾ ಶಕ್ತಿಯ ಬಲವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಸುಮಾರು ಹತ್ತು ವರ್ಷಗಳಿಂದ ನಡೆದ ಸುದೀರ್ಘ ಕಾನೂನು ಸಮರದಲ್ಲಿ ಮುಂಬೈನ ಪೌರಕಾರ್ಮಿಕರಿಗೆ ಕೊನೆಗೂ ಜಯ ಸಿಕ್ಕಿದೆ. ಮೊದಲು ಕೈಗಾರಿಕಾ ನ್ಯಾಯಮಂಡಳಿಯಿಂದ ಮುಂಬೈ ಉಚ್ಚ ನ್ಯಾಯಾಲಯಕ್ಕೆ ಮತ್ತೆ ಅಲ್ಲಿಂದ ಅಂತಿಮವಾಗಿ ಸುಪ್ರಿಂ ಕೋರ್ಟಿನವರೆಗೆ ನಡೆದ ಈ ಕಾನೂನು ಸಮರದಲ್ಲಿ ಜಯಶೀಲರಾದ ಮುಂಬೈನ ೨೭೦೦ ಪೌರಕಾರ್ಮಿಕರು ಈಗ ಮುಂಬೈನ  ಬೃಹನ್ನಗರ ಪಾಲಿಕೆಯ (ಬಿಎಂಸಿ) ಖಾಯಂ ನೌಕರರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಮೂರೂ ಹಂತದ ನ್ಯಾಯಾಲಯಗಳಲ್ಲೂ ಈ ನೌಕರರ ಪರವಾಗಿಯೇ ಆದೇಶ ಬಂದಿತ್ತು. ಬಿಎಂಸಿ ಯೇ ಮೂರೂ ಬಾರಿಯೂ ಮೇಲಿನ ಕೋರ್ಟುಗಳಿಗೆ ಪ್ರಕರಣವನ್ನು ತೆಗೆದುಕೊಂಡುಹೋಗಿ ಮೂರು ಬಾರಿಯೂ ಸೋಲನ್ನಪ್ಪಿತು. ಒಂದೆಡೆ ಇದು ಪೌರ ಕಾರ್ಮಿಕರಿಗೆ ಮತ್ತು ಅವರನ್ನು ಸಂಘಟಿಸಿದ ಕಚ್ರಾ ವಾಹತೂಕ್ ಶ್ರಮಿಕ್ ಸಂW (ಕೆವಿಎಸ್ಎಸ್)ಕ್ಕೆ ದಕ್ಕಿದ ಅತ್ಯದ್ಭುತ ದಿಗ್ವ್ವಿಜಯವಾಗಿದ್ದರೆ ಮತ್ತೊಂದೆಡೆ ಸಂಘಟಿತರಾಗುವ ಮತ್ತು ಒಟ್ಟಾಗಿ ಹೋರಾಡುವ ಚೈತನ್ಯದ ಶಕ್ತಿಯ ರುಜುವಾತೂ ಆಗಿದೆ. ಅಷ್ಟು ಮಾತ್ರವಲ್ಲ. ಭಾರತದಲ್ಲಿ ಕಾರ್ಮಿಕ ಹೋರಾಟ ದುರ್ಬಲಗೊಳ್ಳುತ್ತಿರುವಾಗ ಮತ್ತು ಇನ್ನೂ ಅವು ಚೇತರಿಸಿಕೊಳ್ಳುವುದಿಲ್ಲವೆಂದೂ ಕಾರ್ಮಿಕ ವಿರೋಧಿ ಶಕ್ತಿಗಳು ದೊಡ್ಡ ಗಂಟಲಲ್ಲಿ ಅರಚುತ್ತಿರುವ ಸಂದರ್ಭದಲ್ಲಿ, ಒಂದು ಕಾರ್ಮಿಕ ಸಂಘಟನೆಯು ಹೇಗೆ ತನ್ನ ಹೋರಾಟದ ಮಾರ್ಗೋಪಾಯಗಳನ್ನು ಮುಂದಾಲೋಚನೆಯಿಂದ ರೂಪಿಸುವ ಮೂಲಕ ಮತ್ತು ತನ್ನ ಹೋರಾಟಕ್ಕೆ ನಾಗರೀಕ ಸಮಾಜದ ಬೆಂಬಲ ಮತ್ತು ಸಹಕಾರಗಳನ್ನೂ ರೂಢಿಸಿಕೊಳ್ಳುವ ಮೂಲಕ ಹೋರಾಟವನ್ನು ಗೆಲ್ಲಬಹುದೆಂಬುದನ್ನೂ ತೋರಿಸಿಕೊಟ್ಟಿದೆ. ಹಾಗಿದ್ದರೂ ಕಾನೂನು ಜಯವೊಂದರಿಂದಲೇ ಕಾರ್ಮಿಕರ ಹೋರಾಟಕ್ಕೆ ಅಂತಿಮ ಜಯ ಸಿಕ್ಕಿತೆಂದು ಅಂದುಕೊಳ್ಳುವಂತಿಲ್ಲ.

ಸಾಮಾನ್ಯವಾಗಿ ಪೌರ ಕಾರ್ಮಿಕರು ಸಮಾಜದ ಅತ್ಯಂತ ಕೆಳಸ್ಥರದ ಜಾತಿಗಳಿಗೆ ಸೇರಿದವರಾಗಿರುತ್ತಾರೆ.  ಕಸವನ್ನು ಸಂಗ್ರಹಿಸಿ ಅದನ್ನು ಸಾಗಾಟ ಮಾಡುವುದರಿಂದ ಈ ಅದೃಶ್ಯ ಕಾರ್ಮಿಕರು ಹಲವಾರು ಚರ್ಮ ಸಂಬಂಧೀ ಮತ್ತು ಉಸಿರಾಟದ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಒಳಚರಂಡಿ ಕಾರ್ಮಿಕರಂತೆ ಈ ಪೌರ ಕಾರ್ಮಿಕರೂ ಸಹ ಮುಂಬೈನಂಥ ಬಹುವೇಗವಾಗಿ ಬೆಳೆಯುತ್ತಿರುವ ನಗರಗಳ ನಿತ್ಯ ಜೀವನಕ್ಕೆ ಅತ್ಯಗತ್ಯವೇ ಆದ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ ಇಂಥಾ ಕೆಲಸಗಳಿಂದಾಗಿಯೇ ಸಮಾಜವು ಅವರನ್ನು ಮನುಷ್ಯರೆಂದು ಗುರುತಿಸುವುದಿಲ್ಲ.  ಮಾತ್ರವಲ್ಲ, ಸಮಾಜಕ್ಕಾಗಿ ಅವರು ಮಾಡುವ ಕೆಲಸಗಳಿಗಾಗಿಯೂ ಅವರನ್ನು ಗುರುತಿಸುವುದಿಲ್ಲ. ತಾವು ಮಾಡುವ ಕೆಲಸ ಮತ್ತು ವಾಸ ಮಾಡುವ ಸ್ಥಳಗಳ ಗಲೀಜುಗಳು ತನ್ನ ಇಂದ್ರಿಯಗಳ ಅನುಭವಕ್ಕೆ ಬರದಂತಿರಲು ಬಹಳಷ್ಟು ಜನ ಕುಡಿತಕ್ಕೆ ದಾಸರಾಗಿ ಸಂವೇದನೆಗಳನ್ನು ಕೊಂದುಕೊಂಡಿರುತ್ತಾರೆ. ಆದರೂ ಇಂಥಾ ಕೆಲಸಗಳಲ್ಲಿ ತೊಡಗಿಕೊಂಡಿರುವ ಪುರುಷರು ಮತ್ತು ಮಹಿಳೆಯರಿಗೆ ಇತರ ಸಂಘಟಿತ ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಉದ್ಯೋಗಿಗಳಿಗೆ ಲಭ್ಯವಾಗುವಂಥ ಕೆಲಸದ ಭದ್ರತೆ, ಖಾಯಿಲೆ ರಜೆ, ಕೆಲಸ ಮಾಡುವಾಗ ಸತ್ತರೆ ಅವರ ಕುಟುಂಬದವರಿಗೆ ಕನಿಷ್ಟ ಪರಿಹಾರದಂಥ ಯಾವುದೇ ಸಂಕ್ಷೇಮ ಯೋಜನೆಗಳ ಲಾಭ ದೊರಕುವುದಿಲ್ಲ. ಆದರೆ ಕೆವಿಎಸ್ಎಸ್ ಮತ್ತು ಚಿಂದಿ ಮತ್ತು ತ್ಯಾಜ್ಯ ವಸ್ತ್ತು ಆಯುವವರ ಸಂಘಗಳಂಥ ಸಂಸ್ಥೆಗಳು ಈ ಅದ್ರೃಶ್ಯತೆ ಮತ್ತು ಮೌನವನ್ನು ಮುರಿದು ಗುತ್ತಿಗೆ ಪೌರ ಕಾರ್ಮಿಕರ ಹಕ್ಕೊತ್ತಾಯಗಳನ್ನು ಸಾರ್ವಜನಿಕರ ಮತ್ತು ಆಡಳಿತ ವರ್ಗದ ಗಮನಕ್ಕೆ ತರಲು ಹೋರಾಡುತ್ತಿದ್ದಾರೆ. ಹಾಗೂ ಕನಿಷ್ಠ ಕೂಲಿ ಮತ್ತು ಇನ್ನಿತರ ಸೌಲಭ್ಯಗಳನ್ನು ಗಳಿಸಿಕೊಳ್ಳುವಲ್ಲಿ ಈ ಹೋರಾಟಗಳು ಒಂದಷ್ಟು ಯಶಸ್ಸನ್ನೂ ಕಂಡಿವೆ.
Mumbai’s sanitation workers ಗೆ ಚಿತ್ರದ ಫಲಿತಾಂಶ

ಈ ಕಾನೂನು ಹೋರಾಟದ ಪ್ರಕ್ರಿಯೆಯಲ್ಲಿ ಬಿಎಂಸಿ ಯು ಈ ಕೆಲಸಗಾರರನ್ನು ಗುತ್ತಿಗೆದಾರರು ನೇಮಕ ಮಾಡಿಕೊಂಡಿರುವುದರಿಂದ ತಾನು ಅವರ ಮುಖ್ಯ ಉದ್ಯೋUದಾತನಲ್ಲವೆಂದು(ಪ್ರಿನ್ಸಿಪಲ್ ಎಂಪ್ಲಾಯರ್) ವಾದಿಸಿತು. ಈಗಾಗಲೇ ಹೈದರಾಬಾದ್ ಪದ್ಧತಿ ಎಂದು ಪ್ರಖ್ಯಾತವಾಗಿರುವ ಪದ್ಧತಿಯಡಿ ಪ್ರತಿ ವಾರ್ದನ್ನು ಹಲವಾರು ಘಟಕಗಳನ್ನಾಗಿ ವಿಭಜಿಸಿ ಪ್ರತಿ ಘಟಕಗಳನ್ನು ಗುಡಿಸುವ, ಶುಭ್ರಗೊಳಿಸುವ, ಮತ್ತು ತ್ಯಾಜ್ಯ ವಸ್ತುಗಳನ್ನು ಸಾಗಾಟ ಮಾಡುವ ಕೆಲಸಕ್ಕೆ ಸರ್ಕಾರೇತರ ಸಂಸ್ಥೆಗಳಿಂದ ಮತ್ತು ಸಹಕಾರಿ ಸಂಸ್ಥೆಗಳಿಂದ ಪ್ರತ್ಯೇಕವಾಗಿ ಗುತ್ತಿಗೆ ತೆಂಡರುಗಳನ್ನು ಕರೆಯಲಾಗುತ್ತದೆ. ಹಿಗಾಗಿ ಬಿಎಂಸಿ ಯು ತನಗೂ ಈ ಕೆಲಸಗಾರರಿಗೂ ನಡುವೆ ಉದ್ಯೋಗದಾತ ಮತ್ತು ಉದ್ಯೋಗಿ ಸಂಬಂಧಗಳಿಲ್ಲವೆಂದು ವಾದಿಸಿತು. ಆದರೆ ಈ ಗುತ್ತಿಗೆದಾರರಿಗೆ ಯಾವುದೇ ಪ್ರತ್ಯೇಕ ಕೌಶಲ್ಯವಾಗಲೀ, ಸಾಮರ್ಥ್ಯವಾಗಲೀ ಇಲ್ಲದಿರುವುದರಿಂದ ತಮ್ಮ ಸಂಬಳವನ್ನು ಬಿಎಂಸಿಯೇ ಪಾವತಿಸುತ್ತಿದೆಯೆಂದು ಕೆವಿಎಸ್ಎಸ್ ವಾದಿಸಿತು. ಅಷ್ಟು ಮಾತ್ರವಲ್ಲದೆ ಪರಿಸರ ರಕ್ಷಣಾ ಕಾಯಿದೆಯ ಕಾನುನುಗಳ ಪ್ರಕಾರ  ಪ್ರಕಾರ ಚರಂಡಿಗಳನ್ನು ಶುಭ್ರ ಮಾಡುವ, ಘನತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುವ ಕಡ್ಡಾಯ ಕರ್ತವ್ಯಗಳು ನಗರ ಪಾಲಿಕೆಗಳದ್ದೇ ಆಗಿರುತ್ತದೆ ಎಂದೂ ಸಹ ಅದು ಎತ್ತಿತೋರಿಸಿತು. ಅಲ್ಲದೆ ಗುತ್ತಿಗೆದಾರನ ಎಲ್ಲಾ ಚಟುವಟಿಕೆಗಳನ್ನು ಬಿಎಂಸಿಯೇ ನಿಯಂತ್ರಿಸುವುದನ್ನೂ ಸಹ ಕೆವಿಎಸ್ಎಸ್ ತೋರಿಸಿತು:ನೇಮಕಾತಿಗಳು ಸ್ಥಳೀಯ ವಾರ್ಡ್ ಕಛೇರಿಯಲ್ಲಿ ನಡೆಯುತ್ತದೆ. ಮತ್ತು ಕೆಲಸಗಳ ಹಂಚಿಕೆ ಮತ್ತು ಉಸ್ತುವಾರಿಯನ್ನೂ ಸಹ ಬಿಎಂಸಿಯೇ ಮಾಡುತ್ತದೆ.

ಬಿಎಂಸಿಯ ವಿರುದ್ಧ ಮೇಲಿನ ಮೂರೂ ಹಂತದ ಕೋರ್ಟು ಹೋರಾಟಗಳು ಕೆವಿಎಸ್ಎಸ್ ಎದುರಿಸಿದ ಸವಾಲುಗಳ ಒಂದು ಭಾಗವಷ್ಟೆ. ಅಸಂಘಟಿತ ಕ್ಷೇತ್ರಗಳ ಕಾರ್ಮಿಕರನ್ನು ಸಂಘಟಿಸುವುದೇ ಪ್ರಾಯಶಃ ಕಾರ್ಮಿಕ ಹೋರಾಟಗಳಲ್ಲಿ ಅತ್ಯಂತ ಕಷ್ಟದ ಸವಾಲು. ಅವರ ಕೆಲಸದ ಅಭದ್ರತೆ ಮತ್ತು ಬದುಕಿನ ದುರ್ಭರ ಸ್ಥಿತಿಗತಿಗಳು ಅವರನ್ನು ಕಾರ್ಮಿಕ ಸಂಘಟನೆಗೆ ಸೇರಲು ಹೆದರುವಂತೆ ಮಾಡುತ್ತದೆ. ಒಂದು ವೇಳೆ ಸೇರಿಕೊಂಡರೂ ಅವರ ಬದುಕಿನ ಸ್ಥಿತಿಗತಿಗಳು ಬಲವಾದ ಶತೃವಿನ ವಿರುದ್ಧ ದೀರ್ಘಕಾಲ ಸೆಣಸದಂತೆ ಮಾಡುತ್ತದೆ. ದೆಲ್ಲದರ ನಡುವೆಯೂ ಈ ಕಾರ್ಮಿಕರ ಐಕ್ಯತೆ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದ ಹಿರಿಮೆ ಕೆವಿಎಸ್ಎಸ್ ಗೆ ಸೇರಬೇಕು. ಅಲ್ಲದೆ ವಿದ್ಯಾರ್ಥಿಗಳ, ಪತ್ರಕರ್ತರ, ಆರೋಗ್ಯ ಮತ್ತು ಕಾನುನು ಕಾರ್ಯಕರ್ತರ, ಚಿತ್ರ ನಿರ್ಮಾಪಕರ ಮತ್ತಿತರ ಸಮಾಜದ ಇತರ ವರ್ಗಗನ್ನು ಹಲವು ವಿಧಗಳಲ್ಲಿ ತಲುಪಿ ಈ ಹೋರಾಟಕ್ಕೆ ಅವರ ಬೆಂಬಲ ಮತ್ತು ಸಹಕಾರವನ್ನು ಪಡೆದುಕೊಳ್ಳುವಲ್ಲಿ ಸಹ ಅದು ಯಶಸ್ವಿಯಾಯಿತು. ಈ ಸಂಘಟನೆಯು ತನ್ನ ಬ್ಲಾಗಿನ ಮೂಲಕ ವಿದ್ಯಮಾನಗಳ ಬಗ್ಗೆ ತನ್ನ ನಿಲುವುಗಳನ್ನು ಮತ್ತು ಸಮಾಜದೊಡನೆ ಜೀವಂತ ಸಂಬಂಧವನ್ನು ಕಾಯ್ದುಕೊಂಡು ಬಂದಿದೆ.

ಒಂದೆಡೆ ಸ್ವಚ್ಚ ಭಾರತ ಅಭಿಯಾನದ ಬಗ್ಗೆ ಅಬ್ಬರದ ಪ್ರಚಾರ ಮಾಡುತ್ತಲೇ ಮತ್ತೊಂದೆಡೆ ವಾಸ್ತವದಲ್ಲಿ ನಗರಗಳನ್ನು ಸ್ವಚ್ಚವಾಗಿಡುವ ಕಾರ್ಮಿಕರ ಬಗ್ಗೆ ಯಾವುದೇ ಸಂವೇದನೆಗಳನ್ನು ತೋರದ ಸರ್ಕಾರದ ಮತ್ತು ಸ್ಥಳೀಯ ಸಂಸ್ಥೆಗಳ ಆಷಾಢಭೂತಿತನವನ್ನು ಕೆವಿಎಸ್ಎಸ್ ನ ಈ ಕಾನೂನು ವಿಜಯವು ಬಯಲುಗೊಳಿಸಿದೆ. ತನ್ನ ವೆಬ್ ಸೈಟಿನಲ್ಲಿ ಕೆವಿಎಸ್ಎಸ್ ಸಂಘಟನೆಯು ಕಸಪೊರಕೆಯನ್ನು ಹಿಡಿದುಕೊಂಡು ಮಾಧ್ಯಮಗಳಿಗೆ ಫೋಸು ಕೊಡುತ್ತಾ ಸ್ವಚ್ಚ ಭಾರತದ ನಾಟಕವಾಡುವ ಮಂತ್ರಿ ಮಹೋದಯರುಗಳನ್ನು ಮತ್ತು ಇತರ ತಾರಾಮಣಿಗಳನ್ನು ಬಯಲುಗೊಳಿಸಿದೆ. ಅವರು ಅವರ ನೆರಳನ್ನು ಗುಡಿಸುತ್ತಾರೆ ಆದರೆ ನಾವು ದೇಶವನ್ನು ಸ್ವಚ್ಚವಾಗಿಡುತ್ತೇವೆ ಎಂಬ ತಲೆಬರಹದ ಮೂಲಕ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ಇತ್ತೀಚಿನ ಒಂದು ಆದೇಶದಲ್ಲಿ ಸುಪ್ರೀಂ ಕೋರ್ಟು ಒಂದು ವರ್ಗದ ಜನರ ಶುಭ್ರತೆಯನ್ನು ಮತ್ತೊಂದು ವರ್ಗದವರನ್ನು ಗುಲಾಮಗಿರಿಗೆ ಹಚ್ಚುವ ಮೂಲಕ ಸಾಧಿಸಲು ಸಾಧ್ಯವಿಲ್ಲವೆಂದು ಸರಿಯಾಗಿಯೇ ಗುರುತಿಸಿದೆ. ಈ ಸಂದೇಶವನ್ನು ಸರ್ಕಾರ ಮತ್ತು ನಾಗರೀಕ ಸಮಾಜ ಅರ್ಥಮಾಡಿಕೊಳ್ಳಬೇಕಿದೆ.

ಕೃಪೆ: Economic and Political Weekly
    April 22, 2017. Vol. 52. No. 16


















ಆನಂದ ಒಕ್ಕಾಲು. ಆತಂಕ ಮುಕ್ಕಾಲು

ಅನು:ಅನು: ಶಿವಸುಂದರ್

Babri Masjid ಗೆ ಚಿತ್ರದ ಫಲಿತಾಂಶ

ಬಾಬ್ರಿ ಮಸೀದಿ ಪ್ರಕರಣದಲ್ಲಿ ವರಿಷ್ಠ ನ್ಯಾಯಾಲಯ ಕೊಟ್ಟಿರುವ ಆದೇಶವು ನ್ಯಾಯಾಂಗ ವ್ಯವಸ್ಥೆಯ ಆಳದಲ್ಲಿರುವ ಸಮಸ್ಯೆಗಳನ್ನು ಪರಿಗಣಿಸಿಲ್ಲ.

ಸುಪ್ರಿಂ ಕೋರ್ಟು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಒಂದು ಉಪಕಾರವನ್ನೇ ಮಾಡಿದಂತಾಗಿದೆ. ಅದು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಧಂಸಮಾಡಿದ ಜಾಗದಲ್ಲಿ ರಾಮಮಂದಿರವನ್ನು ಕಟ್ಟುವ ವಿವಾದಾಸ್ಪದ ವಿಷಯವನ್ನು ಜೀವಂತವಾಗುಳಿಸುವುದನ್ನು ಖಾತರಿಗೊಳಿಸಿದೆ. ಹಾಗೆಂದು ಏಪ್ರಿಲ್ ೨೩ ರಂದು ಅದು ಸಿಬಿಐಗೆ ಕೊಟ್ಟ ನಿರ್ದೇಶನದ ಉದ್ದೇಶವೇನೂ ಇದಾಗಿರಲಿಲ್ಲ. ಆ ಆದೇಶದಲ್ಲಿ ವರಿಷ್ಯ ನ್ಯಾಯಾಲಯವು ಬಾಬ್ರಿ ಮಸೀದಿಯನ್ನು ನಾಶಮಾಡಲು ತಂತ್ರ ರೂಪಿಸಿದರೆಂದು ಎಲ್ಕೆ. ಅಡ್ವಾನಿ, ಮುರಳಿ ಮನೋಹರ್ ಜೋಷಿ ಮತ್ತು ಉಮಾ ಭಾರತಿಯಂಥಾ ಬಿಜೆಪಿಯ ಹಿರಿಯ ನಾಯಕರ ಮೇಲಿರುವ ಆರೋಪದ ಪ್ರಕರಣವನ್ನೂ ಮತ್ತು ಮತ್ತು ಆ ಧ್ವಂಸ ಪ್ರಕರಣದಲ್ಲಿ ಪಾಲುಗೊಂಡಿದ್ದ ಕರಸೇವಕರ ಮೇಲಿನ ೨೫ ವರ್ಷಗಳಷ್ಟು ಹಿಂದಿನ ಪ್ರಕರಣಗಳೆರಡನ್ನೂ ಒಟ್ಟುಗೊಳಿಸಿ ಲಖನೌ ನ್ಯಾಯಾಲಯದಲ್ಲಿ ತ್ವರಿತವಾಗಿ ವಿಚಾರಣೆಯನ್ನು ಆಗಗೊಳಿಸಬೇಕೆಂದು ಸಿಬಿಐಗೆ ಆದೇಶ ನೀಡಿತ್ತು. ಆದರೆ ಇದರಿಂದ ಅನುದ್ದೇಶಪೂರ್ವಕವಾಗಿ ಬಿಜೆಪಿಗೆ ಒಂದು ಉಪಕಾರವಾಗಿಬಿಟ್ಟಿದೆ. ಏಕೆಂದರೆ ಗೆಲುಗಳಿಂದ ಬೀಗುತ್ತಿರುವ ಬಿಜೆಪಿಯು ಈ ಆದೇಶವನ್ನು ಬಳಸಿಕೊಳ್ಳುತ್ತಾ ಈ ಕೋಮು ಉನ್ಮಾದಿ ವಿಷಯವನ್ನು ಜೀವಂತವಾಗಿಟ್ಟುಕೊಂಡು ೨೦೧೯ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದೂ ಓಟುಗಳನ್ನು ಸಧೃಢೀಕರಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇವೆ. 

ಈ ಅನುದ್ದೇಶಿತ ದುಷ್ಪರಿಣಾಮಗಳನ್ನು ಬದಿಗಿಟ್ಟರೂ, ವರಿಷ್ಟ ನ್ಯಾಯಾಲಯದ ಈ ಆದೇಶದ ಮಹತ್ವವನ್ನು ಹೇಗೆ ಅಂದಾಜಿಸಬಹುದು? ೧೯೯೨ರ ಡಿಸೆಂಬರ್ ೬ ರಂದು ನೂರಾರು ಕರಸೇವಕರು ಹಾಡುಹಗಲಿನಲ್ಲೇ, ಪೋಲಿಸರ, ಮಾಧ್ಯಮಗಳ ಮತ್ತು ಹುರಿದುಂಬಿಸುತ್ತಾ ನಿಂತಿದ್ದ ರಾಜಕಾರಣಿಗಳೆಲ್ಲರ ಸಮಕ್ಷಮದಲ್ಲೇ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸುವ ತಮ್ಮ ಯೋಜನೆಯನ್ನು ಪೂರ್ಣಗೊಳಿಸಿದರು. ಇದರ ವಿರುದ್ದ ಎರಡು ಎಫ್ಐಆರ್ ಗಳು ದಾಖಲಾದವು. ಒಂದು ಅದ್ವಾನಿ ಮತ್ತಿತರರ ವಿರುದ್ಧ. ಮತ್ತೊಂದು ಲಕ್ಷಾಂತರ ಅಜ್ನಾತ ಕರಸೇವಕರ ವಿರುದ್ಧ. ಆದರೆ ಇದಕ್ಕೆ ಯಾವ ಅರ್ಥವೂ ಇರಲಿಲ್ಲ. ಏಕೆಂದರೆ ಈ ಪ್ರಕರಣಗಳು ಹತ್ತಾರು ವಿಚಾರಣೆಗಳ, ಮುಂದೂಡಿಕೆಗಳ, ಮತ್ತು ಪ್ರತ್ಯರ್ಜಿಗಳ ಚಕ್ರಗಳಲ್ಲಿ ತೆವಳುತ್ತಾ ತೆವಳುತ್ತಾ ಸಾರಾಂಶದಲ್ಲಿ ಎಲ್ಲಿತ್ತೋ ಅಲ್ಲೇ ಉಳಿದುಕೊಂಡಿತ್ತು. ಈ ಎರಡೂ ಪ್ರಕರಣಗಳ ಕಾನೂನು ಪಯಣದ ಇತಿಹಾಸವು ನಮ್ಮ ನ್ಯಾಯಿಕ ವ್ಯವಸ್ಥೆಯು ಹೇಗೆ ಆಳದಲ್ಲಿ ಕೊಳೆತು ನಾರುತ್ತಿದೆ ಎಂಬುದನ್ನು ಮತ್ತೊಮ್ಮೆ ಬಹಿರಂಗಕ್ಕೆ ತಂದಿದೆ. ಹಾಗಿದ್ದರೂ ಒಂದರ್ಥದಲ್ಲಿ ವರಿಷ್ಠ ನ್ಯಾಯಾಲಯದ ಈ ಆದೇಶವು ಒಂದು ಮಹತ್ವದ ಮಧ್ಯಪ್ರವೇಶವೇ ಆಗಿದೆ. ಈವರೆಗೆ ರಾಯ್ಬರೇಲಿಯಲ್ಲಿ ಮತ್ತು ಲಕ್ನೌಗಳಲ್ಲಿ ಪ್ರತ್ಯೇಕಪ್ರತ್ಯೇಕವಾಗಿ ವಿಚಾರಣೆಯಾಗುತ್ತಿದ್ದ ಈ ಎರಡು ಪ್ರಕರಣಗಳನ್ನು ಜೊತೆಗೂಡಿಸುವ ಮೂಲಕ, ಹಾಗೂ ಅನಗತ್ಯವಾದ ಮುಂದೂಡಿಕೆಗಳಾಗಲೀ, ನ್ಯಾಯಾಧೀಶರ ಬದಲಾವಣೆಗಳಾಗಲೀ ಇಲ್ಲದಿರುವುದನ್ನು ಖಾತರಿಗೊಳಿಸುವ ಮೂಲಕ, ಮತ್ತು ಇನ್ನೆರಡು ವರ್ಷಗಳಲ್ಲಿ ತೀರ್ಪು ನೀಡುವುದನ್ನು ಖಾತರಿಗೊಳಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಸುಪ್ರಿಂ ಕೋರ್ಟು ಸಹ ಒಪ್ಪಿಕೊಂಡಂತಾಗಿದೆ.  

ಈ ಮಧ್ಯಪ್ರವೇಶಕ್ಕೆ ಅರ್ಧ ಸಂತೋಷವನ್ನಂತೂ ಕೊಟ್ಟಿದೆ. ಅಷ್ಟೆ. ಅದಕ್ಕಿಂತ ಹೆಚ್ಚಿಲ್ಲ. ಏಕೆಂದರೆ ಎಷ್ಟೇ ಮಹತ್ವಪೂರ್ಣವಾಗಿದ್ದರೂ ಕೇವಲ ಒಂದು ಪ್ರಕರಣವನ್ನು ಹೀಗೆ ನಿಭಾಯಿಸಿದ ಮಾತ್ರಕ್ಕೆ ನಮ್ಮ ನ್ಯಾಯಿಕ ವ್ಯವಸ್ಥೆಯನ್ನು ಒಳಗಿನಿಂದ ಕೊಳೆಸುತ್ತಿರುವ ದೊಡ್ಡ ಸಮಸ್ಯೆಗಳೇನೂ ಬಗೆಹರಿಯುವುದಿಲ್ಲ. ದೇಶದಲ್ಲಿ ಲಕ್ಷಾಂತರ ಪ್ರಕರಣಗಳು ನಿರಂತರ ಮುಂದೂಡಿಕೆಗಳು ಮತ್ತು ನ್ಯಾಯಾಧೀಶರ ಬದಲಾವಣೆಗಳಂಥ ಕೊನೆಯಿಲ್ಲದ ಪ್ರಕ್ರಿಯೆಗಳ ಜಾಲಗಳಲ್ಲಿ ಸಿಲುಕಿಕೊಂಡಿವೆ. ಇದರ ಜೊತೆಗೆ ಸರ್ಕಾರಿ ವಕೀಲರ ಉದಾಸೀನಗಳು ಮತ್ತು ಸಾಕ್ಷಿಗಳನ್ನು ರಕ್ಷಿಸುವಂಥಾ ಯಾವುದೇ ನೀತಿ-ಯೋಜನೆಗಳು ಇಲ್ಲದಿರುವುದರಿಂದ ನ್ಯಾಯಾಲಯದಲ್ಲಿ ಹಾಜರುಪಡಿಸುವ ಮುನ್ನವೇ ಉಲ್ಟಾಹೊಡೆಯುವ ಕೀಲಕ ಸಾಕ್ಷಿಗಳು. ಈ ಕೆಲವು ಗಂಭೀರ ಸಮಸ್ಯೆಗಳತ್ತ ಗಮನಹರಿಸದಿದ್ದಲ್ಲಿ ಇಂಥಾ ಮಧ್ಯಪ್ರವೇಶಗಳು ಕೇವಲ ಅಪರೂಪದ ಅಪವಾದಗಳಷ್ಟೇ ಆಗುಳಿಯುತ್ತವೆ. 

ಈ ರೀತಿಯ ಆದೇಶಗಳು ಬಂದಿರುವುದು ಇದೇ ಮೊದಲಲ್ಲವೆಂಬುದನ್ನೂ ಮರೆಯುವಂತಿಲ್ಲ. ೨೦೦೪ರಲ್ಲಿ ಬೆಸ್ಟ್ ಬೇಕರಿ ಪ್ರಕರಣವೆಂದ ಕುಖ್ಯಾತಿ ಪಡೆದ ಪ್ರಕರಣದಲ್ಲಿ (೨೦೦೨ರ ಗುಜರಾತ್ ಕೋಮುವಾದಿ ಹತ್ಯಾಕಾಂಡದಲ್ಲಿ ವಡೋದ್ರಾದಲ್ಲಿ ನಡೆದ ೧೪ ಜನರ ಕಗ್ಗೊಲೆಯ ಪ್ರಕರಣ), ಗುಜರಾತಿನ ವಾತಾವರಣ ಅತ್ಯಂತ ಕೋಮುವಾದೀಕರಣಗೊಂಡು ಕಲುಷಿತಗೊಂಡಿರುವುದನ್ನು  ಪರಿಗಣನೆಗೆ ತೆಗೆದುಕೊಂಡ ವರಿಷ್ಠ ನ್ಯಾಯಾಲಯ ಇಂಥಾ ವಾತಾವರಣದಲ್ಲಿ ನ್ಯಾಯವನ್ನು ಕೋರಿ ಬಂದವರಿಗೆ ನ್ಯಾಯ ಸಿಗುವುದಿಲ್ಲವೆಂಬ ತೀರ್ಮಾನಕ್ಕೆ ಬಂದು ಆ ಪ್ರಕರಣವನ್ನು ಗುಜರಾತಿನಿಂದ ಮಹಾರಾಷ್ಟ್ರದ ತ್ವರಿತ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. ಈ ತೀರ್ಪನ್ನು ನೀಡುವಾಗ ಅದು ಮತ್ತೊಂದು ಮಹತ್ವದ ಪ್ರತಿಪಾದನೆಯನ್ನೂ ಮಾಡಿತ್ತು. ಸತ್ಯದ ಅನ್ವೇಷಣೆಯಲ್ಲಿ ನ್ಯಾಯಾಲಯಗಳು "ಅಮೂರ್ತವಾದ ತಾಂತ್ರಿಕತೆಗಳಲ್ಲಿ ತೇಲಿಹೋಗದೆ" ಕ್ರೀಯಾಶೀಲವಾದ ಮುಂದೊಡಗನ್ನು ತೋರುವುದು ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯೊಳಗೇ ಬರುತ್ತದೆಂದು ಸ್ಪಷ್ಟಪಡಿಸಿತ್ತು. ವಾಸ್ತವವಾಗಿ ಇಂಥಾ ತಾಂತ್ರಿಕ ಔಪಚಾರಿಕತೆಗಳಿಂದಾಗಿಯೇ ಬಾಬ್ರಿ ಮಸೀದಿ ಪ್ರಕರಣದಲ್ಲಿ ೧೯೯೭ರಲ್ಲಿ ಮೊದಲನೇ ದೊಡ್ಡ ವಿಳಂಬ ಉಂಟಾಯಿತು. ಆಗ ಅಲಹಾಬಾದ್ ಉಚ್ಚ ನ್ಯಾಯಾಲಯವು ಈ ಎರಡು ಪ್ರಕರಣಗಳನ್ನು ಕಡ್ಡಾಯವಾಗಿ ರಾಯ್ ಬರೇಲಿ ಮತ್ತು ಲಖನೌಗಳಲ್ಲಿ ಬೇರೆಬೇರೆಯಾಗಿಯೇ ವಿಚಾರಣೆ ನಡೆಸಬೇಕೆಂದು ಆದೇಶ ನೀಡಿದ್ದೇ ಅನಗತ್ಯ ವಿಳಂಬಕ್ಕೆ ಕಾರಣವಾಯಿತು.

ಈಗ ಸ್ವಯಂ ನ್ಯಾಯಾಲಯವೇ ಈ ಪ್ರಕರಣವನ್ನು ಕೇಂದ್ರ ಸ್ಥಾನಕ್ಕೆ ತಂದಿರುವುದರಿಂದ ಈಗಲಾದರೂ ಬಾಬ್ರಿ ಮಸೀದಿ ಧ್ವಂಸದ ನಂತರದ ೨೫ ವರ್ಷಗಳಿಗೆ ಅರ್ಥವೇನೆಂದು ಸರಿಯಾಗಿ ಅಂದಾಜುಮಾಡಬೇಕಿದೆ. ೧೯೯೦ರ ಸೆಪ್ಟೆಂಬರ್ನಲ್ಲಿ ಪ್ರಾರಂಭವಾದ ರಾಮರಥಯಾತ್ರೆಯಿಂದ ಮೊದಲುಗೊಂಡು, ರಾಮ ಮಂದಿರ ನಿರ್ಮಾಣದ ವಿಷಯದ ಸುತ್ತಾ ಜನರನ್ನು ಉದ್ರೇಕಿಸಿ ಒಟ್ಟುಗೂಡಿಸಿ ಅಂತಿಮವಾಗಿ ೧೯೯೨ರ ಡಿಸೆಂಬರ್ ೬ ರಂದು ಬಾಬ್ರಿ ಮಸೀದಿ ಧ್ವಂಸ ಮಾಡುವವರೆಗಿನ ಈ ಅವಧಿಯಲ್ಲಿ ಭಾರತವು ಕೋಮುವಾದಿ ಧೃವೀಕರಣಕ್ಕೆ ತಪ್ಪಿಸಿಕೊಳ್ಳಲಾಗದ ರೀತಿಯಲ್ಲಿ ದೂಡಲ್ಪಟ್ಟಿತು. ನಂತರದಲ್ಲೂ ಹಿಂದೂತ್ವ ಬ್ರಿಗೇಡಿನ ಆಕ್ರಮಣ ಮುಂದುವರೆಯುತ್ತಲೇ ಹೋಗಿ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಂಡರಿಯದ ಗೆಲುವನ್ನು ತಂದುಕೊಟ್ಟಿತು. ಈ ಮುನ್ನೆಡೆ ಈಗಲೂ ಕುಂದಿಲ್ಲವೆಂಬುದನ್ನು ಈ ವರ್ಷದ ಆರಂಭದಲ್ಲಿ ನಡೆದ ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳು ಎತ್ತಿ ತೋರಿಸುತ್ತಿವೆ. ೧೯೯೨ರಲ್ಲಿ ಮುಂಬೈನಲ್ಲಿ ಮತ್ತು ೨೦೦೨ರಲ್ಲಿ ಗುಜರಾತಿನಲ್ಲೂ ನಡೆದ ಕೋಮು ಗಲಭೆಗಳನ್ನೂ ಒಳಗೊಂಡಂತೆ ದೇಶಾದ್ಯಂತ ಹಲವಾರು ಪ್ರದೇಶಗಳಲ್ಲಿ ಹೆಚ್ಚುತ್ತಲೇ ಇರುವ ಕೋಮು ಗಲಭೆಗಳು ತಾವು ಈ ಪ್ರಜಾತಾಂತ್ರಿಕ ದೇಶದಲ್ಲಿ ಸಮಾನ ನಾಗರಿಕರಾಗಿ ಬದುಕಬಹುದೆಂಬ ಅಲ್ಪಸಂಖ್ಯಾತರ ವಿಶ್ವಾಸವನ್ನು ಅಕ್ಷರಶಃ ಧ್ವಂಸಮಾಡುತ್ತಿದೆ. ೨೦೧೪ರ ನಂತರದಲ್ಲಿ ಈ ಕೋಮುವಾದಿ ವಿಷವು ಪಸರಿಸುತ್ತಿರುವ ವೇಗವು ಅವರ ಅಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. 

ನ್ಯಾಯಾಲಯದ ಈ ಆದೇಶವು ಬಿಜೆಪಿಯ ನಾಯಕರ ನಿದ್ದೆಗೆಡಿಸಿದೆಯೆಂದೇನು ಭಾವಿಸಬೇಕಿಲ್ಲ. ಬದಲಿಗೆ ಈ ಆದೇಶ ಹೊರಬಂದಿರುವ ಸಮಯ ಅವರಿಗೆ ಅನಿರೀಕ್ಷಿತ ಅದೃಷ್ಟವನ್ನೇ ತಂದುಕೊಟ್ಟಿದೆ.  ಉಮಾಭಾರತಿಯವರು ಈ ಆದೇಶದ ಬಗ್ಗೆ ಕೊಟ್ಟ ವಿಜಯೋನ್ಮಾದದ ಹೇಳಿಕೆಯೇ ಇದಕ್ಕೆ ಪುರಾವೆಯನ್ನು ಒದಗಿಸುತ್ತದೆ. ಒಂದು ವೇಳೆ ನ್ಯಾಯಾಲಯವು ಅದ್ವಾನಿ ಮತ್ತಿತರರ ಮೇಲಿನ ಕುತಂತ್ರದ ಆರೋಪವನ್ನು ಪುರಸ್ಕರಿಸಿದರೂ ಅದರ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಲು ಉನ್ನತ ನ್ಯಾಯಾಲಯಗಳಿರುವುದರಿಂದ ಅವರು ಯಾವುದೇ ಚಿಂತೆ ಮಾಡುವ ಅಗತ್ಯವಿರುವುದಿಲ್ಲ. ಒಂದು ವೇಳೆ ಅವರು ದೋಷಮುಕ್ತರಾದಲ್ಲಿ ಬಿಜೆಪಿಗೆ ಸಂಪೂರ್ಣ ಲಾಭ. ನಿಜ ಹೇಳಬೇಕೆಂದರೆ ಕೋಮುಉನ್ಮಾದೀ ವಾತಾವರಣವಿರುವಾಗ ಯಾವುದೇ ರೀತಿಯ ತೀರ್ಪು ಬಂದರೂ ಅದನ್ನು ಚುನಾವಣಾ ಲಾಭಕ್ಕೆ ದುರ್ಬಳಕೆ ಮಾಡಿಕೊಳ್ಳಬಹುದು.

ಸ್ವಾತಂತ್ರ್ಯೋತ್ತರ ಭಾರತದ ಕೋಮುವಾದಿ ಇತಿಹಾಸದ ಘಟ್ಟಗಳನ್ನು ಹಲವಾರು ಘಟನೆಗಳ ಮೂಲಕ ಗುರುತಿಸಬಹುದು. ಆದರೂ, ಹಿಂದೂತ್ವ ರಾಜಕಾರಣಕ್ಕೆ  ಕೊಟ್ಟ ದೊಡ್ಡ ಉತ್ತೇಜನದ ಕಾರಣಕ್ಕೆ ೧೯೯೨ರ ಡಿಸೆಂಬರ್ ೬  ಭಿನ್ನವಾಗುಳಿದಿದೆ. ಮತ್ತು ಅದು ಈಗಲೂ ಅವರಿಗೆ ಲಾಭವನ್ನು ತಂದುಕೊಡುತ್ತಲೇ ಇದೆ. ಎರಡು ವರ್ಷಗಳ ನಂತರ  ಲಖನೌ ನ್ಯಾಯಾಲಯ ಕೊಡುವ ಆದೇಶವು ಈ ಪ್ರಕ್ರಿಯೆಯಲ್ಲಿ ಮತ್ತೊಂದು ಗಮನಾರ್ಹ ಘಟನೆಯಷ್ಟೇ ಆಗಬಹುದು.  


  ಕೃಪೆ: Economic and Political Weekly
April 22, 2017. Vol. 52. No. 16