ಗುರುವಾರ, ಮಾರ್ಚ್ 3, 2016

ಮಾರ್ಚ್ 3ರಂದು ಜೆ ಎನ್ ಯು ಕ್ಯಾಂಪಸ್ಸಿನಲ್ಲಿ ಕನ್ಹಯ್ಯ ಕುಮಾರ್ ಮಾಡಿದ ಭಾಷಣ.


ಮಧ್ಯಂತರ ಜಾಮೀನು ಪಡೆದು ಹೊರಬಂದ ಕನ್ಹಯ್ಯಕುಮಾರ್ ಜೆ.ಎನ್.ಯು ಆವರಣದಲ್ಲಿ ಸಹವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಿದ ಭಾಷಣ.
ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ
04/03/2016

ಸೌಜನ್ಯ:http://www.hingyake.in
ನಮಗೆ ಆಜಾದಿ ಬೇಕು. ಹೌದು. ಆಜಾದಿ ಬೇಕು ಅಂತ ಕೇಳೋದು ತಪ್ಪೇನು? ಈ ದೇಶದ ನೆಲದಲ್ಲಿ ನಿಂತು ಸರಿಯನ್ನು ಸರಿ ತಪ್ಪನ್ನು ತಪ್ಪು ಅಂತ ಹೆಳುವ ಆಜಾದಿ ನಮಗೆ ಬೇಕು. ಒಂದು ಮಜದ ವಿಷಯ ಗೊತ್ತಾ? ಇದು ನಿರಂತರ ಪ್ರಕ್ರಿಯೆ. ಈ ಮಾತು ನಾನ್ಯಾಕೆ ಹೇಳ್ತಿದೀನಿ ಗೊತ್ತಾ? ಮೊದಲು ಇದಕ್ಕೆ ಉಲ್ಟಾ ಇತ್ತು. ಎಲ್ಲಾ ಯೋಜಿತವಾಗಿತ್ತು. ಈಗ ಇದು ಸ್ಪಾಂಟನಸ್ ಆಗಿದೆ.
ಈ ದೇಶದ ಸಂವಿಧಾನದಲ್ಲಿ, ದೇಶದ ಕಾನೂನಿನಲ್ಲಿ, ಈ ದೇಶದ ನ್ಯಾಯ ಪ್ರಕ್ರಿಯೆಯಲ್ಲಿ ಭರವಸೆ ಇದೆ. ಹಾಗೇ, ಬದಲಾವಣೆಯೇ ಸತ್ಯ ಅನ್ನೋ ಮಾತಿನಲ್ಲೂ ಭರವಸೆ ಇದೆ. ಎಲ್ಲವೂ ಬದಲಾಗುತ್ತವೆ. ನಾವು ಬದಲಾವಣೆಯ ಪಕ್ಷದಲ್ಲಿ ನಿಂತಿದ್ದೀವಿ. ಬದಲಾವಣೆ ಸಾಧಿಸಿ ತೋರಿಸ್ತೀವಿ. ಸಂವಿಧಾನದ ಮೇಲೆ ನಮಗೆ ಸಂಫೂರ್ಣ ಭರವಸೆ ಇದೆ. ಸಂವಿಧಾನದ ಆಶಯಗಳ ಜೊತೆ ನಾವು ಗಟ್ಟಿಯಾಗಿ ನಿಲ್ತೀವಿ. ಪ್ರಸ್ತಾವನೆಯಲ್ಲಿ ಹೇಳಲಾಗಿರುವ ಅದರ ಎಲ್ಲ ಧಾರೆಗಳ ಜೊತೆ ಪ್ರವಹಿಸ್ತೀವಿ. ಸಮಾಜವಾದ, ಧರ್ಮನಿರಪೇಕ್ಷತೆ, ಸಮಾನತೆ – ಇವುಗಳ ಜೊತೆ ಬೆಸೆದುಕೊಂಡಿದ್ದೀವಿ. 

ನಾನು ಸಾಕಷ್ಟು ಪ್ರಶ್ನೆಗಳನ್ನ ಕೇಳ್ತಿದ್ದೆ. ನಾನಿವತ್ತು ಭಾಷಣ ಮಾಡೋದಿಲ್ಲ. ನನ್ನ ಅನುಭವಗಳನ್ನ ನಿಮ್ಮ ಜೊತೆ ಹಂಚಿಕೊಳ್ತೀನಿ. 

ಮೊದಲು ಭಾಷಣಕ್ಕೆ ಮುಂಚೆ ಸಿಕ್ಕಾಪಟ್ಟೆ ಓದ್ತಾ ಇದ್ದೆ, ವ್ಯವಸ್ಥೆಯನ್ನು ಛೇಡಿಸ್ತಿದ್ದೆ. ಈ ಸಲ ಓದಿದ್ದು ಕಡಿಮೆಯಾಗಿದೆ ಮತ್ತು ಛೇಡಿಸೋಕೆ ಸಾಕಷ್ಟಿದೆ. ಒಬ್ರು ಹೇಳ್ತಾರೆ, ಜೆ ಎನ್ ಯು ನ ಜಾಲಾಡಿದೀನಿ ಅಂತ. ಅವರೊಂದಷ್ಟು ದಾಖಲೆ ಕೊಡ್ತಾರೆ. ಫಸ್ಟ್ ಹ್ಯಾಂಡ್ ಇನ್ಫರ್ಮೇಷನ್ ಇದೆ ಅಂತ ಹೇಳ್ತಾರೆ! ಈಗ ನ್ಯಾಯಾಲಯದ ಅಧೀನದಲ್ಲಿರೋ ಸಂಗತಿ ಬಗ್ಗೆ ನಾನು ಏನೂ ಹೇಳೋದಿಲ್ಲ. ಆದ್ರೆ ಒಂದು ಮಾತು, ಸಂವಿಧಾನವನ್ನ ನಿಜಕ್ಕೂ ಪ್ರೀತಿಸುವ, ಬಾಬಾ ಸಾಹೇಬರ ಕನಸುಗಳನ್ನ ಸಾಕಾರಗೊಳಿಸಲು ಬಯಸುವ ಈ ದೇಶದ ಜನತೆ, ನಾನು ಏನು ಹೇಳಬಯಸ್ತಿದ್ದೀನಿ ಅನ್ನೋದನ್ನ ಇಷಾರೆಗಳಲ್ಲೇ ಅರ್ಥ ಮಾಡಿಕೊಂಡಿರುತ್ತಾರೆ.

ಇದನ್ನೂ ಓದಿ:
ಬಂಧನಕ್ಕೂ ಮುನ್ನ ಜೆ.ಎನ್.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್ ಹೇಳಿದ್ದೇನು?


ಪ್ರಧಾನ ಮಂತ್ರಿ ಟ್ವೀಟ್ ಮಾಡಿದಾರೆ; ಹೇಳಿದಾರೆ, “ಸತ್ಯಮೇವ ಜಯತೆ!”. ನಾನೂ ಹೇಳ್ತೀನಿ, “ಪ್ರಧಾನ ಮಂತ್ರೀ ಜೀ, ನಿಮ್ಮ ಜೊತೆ ಬಹಳವೇ ಮತಭೇದವಿದೆ. ಆದ್ರೆ ಸತ್ಯಮೇವ ಜಯತೆಯ ಘೋಷ ಬರೀ ನಿಮ್ಮ ಪಾಲಿಗಲ್ಲ, ಈ ದೇಶದ ಪಾಲಿಗೂ ಇದೆ, ಸಂವಿಧಾನದ ಪಾಲಿಗೂ ಇದೆ. ನಾನೂ ಕೂಡ ಹೇಳ್ತೀನಿ, ಸತ್ಯಮೇವ ಜಯತೇ!” ಮತ್ತು ಸತ್ಯಕ್ಕೆ ಜಯವಾಗುತ್ತೆ, ಮತ್ತು ಈ ಹೋರಾಟದಲ್ಲಿ ತೊಡಗಿಕೊಂಡಿರುವ ಸಮಸ್ತ ಜನತೆಗಾಗಿ ನನ್ನ ಅನುಭವಗಳನ್ನ ಹಂಚಿಕೊಳ್ತೀನಷ್ಟೆ. 

ಮೊದಲನೆಯದಾಗಿ, ಕೆಲವು ವಿದ್ಯಾರ್ಥಿಗಳ ಮೇಲೆ ಒಂದು ರಾಜಕೀಯ ಅಸ್ತ್ರವಾಗಿ ದೇಶದ್ರೋಹದ ಆಪಾದನೆ ಹೊರಿಸಲಾಗಿದೆ ಅಂತ ಅಂದುಕೊಳ್ಬೇಡಿ. ಅದನ್ನ ತಿಳಿಯಬೇಕಿರೋದು ಹೀಗೆ. ನಾನಿದನ್ನ ಈ ಹಿಂದೆಯೂ ಬಹಳ ಸಲ ಹೇಳಿದೀನಿ. ನಾವು ಹಳ್ಳಿಯಿಂದ ಬಂದವರು. ನಿಮಗೆ ಈಗಾಗ್ಲೇ ನನ್ನ ಮನೆಜನರ ಪರಿಚಯವಾಗಿರಬೇಕು. ನಮ್ಮ ಕಡೆ ರೈಲ್ವೇ ಸ್ಟೇಷನ್ ಹತ್ರ ಆಗಾಗ ಜಾದೂ ಪ್ರದರ್ಶನ ನಡೀತಾ ಇರತ್ತೆ. ಜಾದೂಗಾರ ಜಾದೂ ತೋರಿಸ್ತಾನೆ, ಹೆಬ್ಬೆಟ್ಟಿನ ಮಂದಿ ಅದನ್ನ ನೋಡ್ತಾರೆ. ಯಾರು ಏನು ಬಯಸ್ತಾರೋ ಅದನ್ನ ಅವರವರ ಹೆಬ್ಬೆಟ್ಟು ಪೂರ್ತಿಗೊಳಿಸತ್ತೆ ಅಂತ ಜಾದೂಗಾರ ನಂಬಿಸ್ತಾನೆ. ಈ ದೇಶ ಆಳೋರ ಕಥೆಯೂ ಹೀಗೇನೇ. ಅವ್ರು ಹೇಳ್ತಿದ್ರು, ಕಪ್ಪು ಹಣ ಬರುತ್ತೆ ಅಂತ. “ಹರ ಹರ ಮೋದಿ!! ಬೆಲೆ ಏರಿಕೆ ಗಗನ ಮುಟ್ಟಿದೆ. ಎಷ್ಟೂಂತ ಸಹಿಸ್ತೀರಿ? ಈ ಸಲ ಮೋದಿಯನ್ನ ಆರಿಸಿ” “ಸಬ್ ಕಾ ಸಾಥ್ ಸಬ್ ಕ ವಿಕಾಸ್” ಅಂತೆಲ್ಲ. ಆ ಎಲ್ಲ ಆಶ್ವಾಸನೆಗಳನ್ನ ಜನ ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಸಾಮಾನ್ಯವಾಗಿ ನಾವು ಭಾರತೀಯರು ಬಹಳ ಬೇಗ ಮರೀತೇವೆ. ಆದ್ರೆ ಈ ಸಲದ ತಮಾಷೆ ಎಷ್ಟು ಜೋರಿತ್ತು ಅಂದ್ರೆ, ಅದನ್ನ ಮರೆಯೋದಕ್ಕೇ ಆಗ್ತಿಲ್ಲ. ಈ ಜುಮ್ಲಾಗಳನ್ನ ಜನ ಮರೆಯುವಂತೆ ಮಾಡೋಕೆ ಅವರು ಪ್ರಯತ್ನಿಸ್ತಿದ್ದಾರೆ. ಮೊದಲು ಸುಳ್ಳುಗಳನ್ನ ಸೃಷ್ಟಿಸೋದು. ಆಮೇಲೆ ಈ ದೇಶದಲ್ಲಿ ಯಾರೆಲ್ಲ ರಿಸರ್ಚ್ ಸ್ಕಾಲರುಗಳಿದ್ದಾರೋ ಅವರ ಫೆಲೋಷಿಪ್ ನಿಲ್ಲಿಸಿಬಿಡೋದು. ಜನ ಆಗ ಏನ್ಮಾಡ್ತಾರೆ? “ಫೆಲೋಷಿಪ್ ಕೊಟ್ಬಿಡಿ, ಫೆಲೋಷಿಪ್ ಕೊಟ್ಬಿಡಿ” ಅಂತ ಬೆನ್ನು ಬೀಳ್ತಾರೆ. ಇವ್ರು ಹೇಳ್ತಾರೆ, ಮೊದಲೇನು ಕೊಡ್ತಿದ್ವೋ ಐದರಿಂದ ಎಂಟು ಸಾವಿರ… ಅಷ್ಟನ್ನೇ ಮುಂದುವರೆಸ್ತೀವಿ ಅಂತ. ಇದರರ್ಥ, ಹೆಚ್ಚಿಸೋ ಮಾತಿಗೆ ಅವಕಾಶವೇ ಇಲ್ಲ ಅಂತ. ಈಗ ಯಾರು ಮಾತಾಡೋದು? ಜೆ ಎನ್ ಯು! 

ಆದ್ರಿಂದ ನಿಮಗೆ ಬೈಗುಳ ಬೀಳ್ತಾ ಇದ್ರೆ ಚಿಂತೆ ಮಾಡ್ಬೇಡಿ. ಏನನ್ನ ಗಳಿಸಿದೀವೋ ಅದನ್ನೇ ತಿನ್ತಾ ಇದ್ದೀವಿ ನಾವಿವತ್ತು. ಈ ದೇಶದಲ್ಲಿ ಜನವಿರೋಧಿ ಸರ್ಕಾರವಿದೆ. ಈ ಜನವಿರೋಧಿ ಸರ್ಕಾರ ಆದೇಶ ಕೊಟ್ರೆ ಸಾಕು, ಅದರ ಸೈಬರ್ ಸೆಲ್ ಏನ್ಮಾಡತ್ತೆ ಹೇಳಿ? ಅದು ಡಾಕ್ಟರ್ಡ್ ವಿಡಿಯೋ ತಯಾರಿಸುತ್ತೆ!! ನಿಮ್ಮ ಮೇಲೆ ಬೈಗುಳಗಳ ಮಳೆ ಸುರಿಸುತ್ತೆ. ಮತ್ತು ಅದು ನಿಮ್ಮ ಡಸ್ಟ್ ಬಿನ್ನಿನಲ್ಲಿ ಎಷ್ಟು ಕಾಂಡೋಮ್ ಇವೆ ಅಂತ ಗಣತಿಗೆ ಶುರುವಿಡತ್ತೆ!

ಈಗ ಸಮಯ ಬಹಳ ಗಂಭೀರವಾಗಿದೆ. ಈ ಗಂಭೀರ ಸಮಯದಲ್ಲಿ ನಾವು ಯೋಚಿಸಬೇಕಿರೋದು ಬಹಳ ಇದೆ. ಜೆ ಎನ್ ಯು ಮೇಲೆ ನಡೆಸಿದ ದಾಳಿ ಒಂದು ನಿಯೋಜಿತ ದಾಳಿಯಾಗಿತ್ತು ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಬೇಕಿದೆ. ನಾವು ಅಕ್ಯುಪೈ ಯುಜಿಸಿ ಚಳವಳಿಯನ್ನ ಮುಂದುವರೆಸೋಕೆ ಬಯಸಿದ್ದರಿಂದಲೇ ಈ ದಾಳಿ ರೂಪುಗೊಳಿಸಲಾಗಿದೆ. ರೋಹಿತ್ ವೇಮುಲನ ಸಾವಿಗೆ ನ್ಯಾಯ ದೊರಕಿಸುವ ಹೋರಾಟವನ್ನ ಕೈಗೆತ್ತಿಕೊಂಡಿದ್ದೇವಲ್ಲ, ಈ ಹೋರಾಟವನ್ನ ಮುಗಿಸಿಬಿಡುವ ಉದ್ದೇಶದಿಂದ ಈ ದಾಳಿ ರೂಪಿಸಲಾಗಿದೆ.

ನೀವು ಜೆ ಎನ್ ಯು ಸಂಗತಿಯನ್ನು ಪ್ರೈಮ್ ಟೈಮಿಗೆ ತಂದಿರೋದೇ ಈ ಕಾರಣಕ್ಕೆ ಅಂತ ನಮಗೆ ಗೊತ್ತಿದೆ ಮಾನನೀಯ ಎಕ್ಸ್ ಆರೆಸ್ಸೆಸ್… ನೀವು ಈ ದೇಶದ ಜನರ ಮನಸಿನಿಂದ ಸಾಕಷ್ಟು ವಿಷಯಗಳನ್ನ ಅಳಿಸಿಹಾಕುವ ಹುನ್ನಾರದಲ್ಲಿದ್ದೀರಿ. ಈ ದೇಶದ ಪ್ರಧಾನಿ ಪ್ರತಿಯೊಬ್ಬರ ಖಾತೆಯಲ್ಲಿ ಹದಿನೈದು ಲಕ್ಷ ರುಪಾಯಿ ಜಮೆ ಮಾಡುವ ಮಾತಾಡಿದ್ದರು. ಆದರೆ ಒಂದು ಮಾತು ಹೇಳೋಕೆ ಬಯಸ್ತೀನಿ. ಜೆ ಎನ್ ಯು ನಲ್ಲಿ ಪ್ರವೇಶ ಪಡೆಯೋದು ಸುಲಭದ ಮಾತಲ್ಲ. ಜೆ ಎನ್ ಯು ನಲ್ಲಿರುವವರ ಬಳಿ ಮಾತು ಮರೆಸೋದು ಕೂಡ ಸುಲಭವಲ್ಲ. ನೀವು ಬಯಸೋದಾದ್ರೆ ನಾವು ಮರೆತುಹೋಗ್ತೀವಿ. ಆದ್ರೆ ನಾವೂ ನಿಮಗೆ ಮತ್ತೆ ಮತ್ತೆ ನೆನಪಿಸೋಕೆ ಇಷ್ಟಪಡ್ತೀವಿ, ಯಾವಾಗೆಲ್ಲ ಈ ದೇಶದ ಆಡಳಿತ ಯಂತ್ರ ಅತ್ಯಾಚಾರ ನಡೆಸಿದೆಯೋ ಆಗೆಲ್ಲ ಜೆ ಎನ್ ಯು ನಿಂದ ಗಟ್ಟಿಯಾದ ದನಿ ಮೊಳಗಿದೆ. ಮತ್ತು ನಾವು ಈಗ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ, ಈ ಮಾತನ್ನು ನಾನು ಮತ್ತೆಮತ್ತೆ ಹೇಳಲು ಬಯಸ್ತೀನಿ. ನೀವು ನಮ್ಮ ಹೋರಾಟವನ್ನ ದುರ್ಬಲಗೊಳಿಸೋಕೆ ಸಾಧ್ಯವಿಲ್ಲ. 

ನೀವೇನು ಹೇಳ್ತೀರಿ? ಒಂದು ಕಡೆ ದೇಶದ ಯುವಕರು ಗಡಿಗಳಲ್ಲಿ ಕಾದಾಡಿ ಜೀವ ಕೊಡ್ತಿದ್ದಾರೆ. ಅವರೆಲ್ಲರಿಗೆ ನನ್ನ ವಂದನೆಗಳನ್ನ ಸಲ್ಲಿಸ್ತೀನಿ. ನನ್ನದೊಂದು ಪ್ರಶ್ನೆಯಿದೆ. ನಾನು ಜೈಲಲ್ಲಿ ಒಂದು ಪಾಠ ಕಲಿತುಬಂದೆ. ವಿಚಾರಧಾರೆಯ ಸವಾಲುಗಳನ್ನು ಎತ್ತುವಾಗ ಸುಖಾಸುಮ್ಮನೆ ಯಾರೊಬ್ಬ ವ್ಯಕ್ತಿಗೂ ಪಬ್ಲಿಸಿಟಿ ಕೊಡಕೂಡದು ಅಂತ. ಆದ್ದರಿಂದ ನಾನು ಆ ಲೀಡರ್ ನ ಹೆಸರು ಹೇಳೋದಿಲ್ಲ. ಬಿಜೆಪಿಯ ಒಬ್ಬ ನೇತಾ ಲೋಕಸಭೆಯಲ್ಲಿ ಹೇಳಿದ್ರು ಈ ದೇಶದ ಗಡಿಗಳಲ್ಲಿ ಯುವಕರು ಸಾಯ್ತಿದ್ದಾರೆ ಅಂತ. ಅವರಿಗೆ ನಾನು ಕೇಳ್ತೀನಿ, ಅವರು ನಿಮ್ಮ ತಮ್ಮಂದಿರೇನು? ಈ ದೇಶದೊಳಗೆ ಕೋಟ್ಯಂತರ ರೈತರು ಸಂಕಟ ಪಡ್ತಿದ್ದಾರೆ. ನಮಗಾಗಿ ಅನ್ನ ಬೆಳೆಯುವವರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಗಡಿಯಲ್ಲಿ ನಿಂತಿರುವ ಆ ಯುವಕರ ತಂದೆಯಂದಿರೂ ಅಂಥವರಲ್ಲಿ ಸೇರಿದ್ದಾರೆ. ಈ ಜನರ ಬಗ್ಗೆ ನೀವು ಏನು ಹೇಳ್ತೀರಿ? ಹೊಲದಲ್ಲಿ ದುಡಿಯುವ ರೈತ ನನ್ನಪ್ಪ. ನನ್ನ ಅಣ್ಣ ಸೇನೆಗೆ ಸೇರಿಕೊಳ್ತಾನೆ. ರೈತನಾದ ನನ್ನಪ್ಪನೂ ಸಾಯುತ್ತಾನೆ, ಗಡಿಯಲ್ಲಿ ನಿಂತ ಅಣ್ಣನೂ ಸಾಯ್ತಾನೆ. ಇದ್ಯಾವುದಕ್ಕೂ ಸಂಬಂಧವೇ ಇಲ್ಲದ ನೀವು ಇದನ್ನೊಂದು ಸರಕಾಗಿಸ್ಕೊಂಡು ವಾಗ್ವಾದ ಶುರುಹಚ್ಚಬೇಡಿ. ನನ್ನ ಜನರು ದೇಶದ ಒಳಗೂ ಸಾಯ್ತಾರೆ. ನನ್ನ ಜನರು ದೇಶದ ಗಡಿಯಲ್ಲೂ ಸಾಯ್ತಾರೆ. ನನ್ನ ಪ್ರಶ್ನೆ ಇದೆ ನಿಮಗೆ, ಪಾರ್ಲಿಮೆಂಟಿನಲ್ಲಿ ನಿಂತು ಯಾರಿಗೋಸ್ಕರ ರಾಜಕೀಯ ಮಾಡ್ತಿದ್ದೀರಿ? ಅಲ್ಲಿ ಸಾಯ್ತಿರುವವರ ಜವಾಬ್ದಾರಿ ಯಾರು ಹೊರುತ್ತಾರೆ? ಸಾಯುವವರು ಜವಾಬ್ದಾರರಲ್ಲ, ಯುದ್ಧಕ್ಕೆ ಹಚ್ಚುವವರು ಜವಾಬ್ದಾರರು. ನನ್ನ ತಂದೆ, ನನ್ನ ಅಣ್ಣ ಇವರೆಲ್ಲ ಹೇಗೆ ಸಾಯ್ತಿದ್ದಾರೆ ನೋಡಿ. ಪ್ರೈಮ್ ಟೈಮಿನಲ್ಲಿ ಕೂತವರು ಎರಡು ಕಾಸಿನ ಸ್ಪೀಕರ್ ಮುಂದೆ ಕಿರುಚಾಡುತ್ತಾರಷ್ಟೆ. ಇವರಿಗೆ ನನ್ನ ಪ್ರಶ್ನೆಗಳಿವೆ.

ದೇಶದೊಳಗೆ ಸಮಸ್ಯೆಗಳಿವೆ. ಈ ಸಮಸ್ಯೆಗಳಿಂದ ಮುಕ್ತಿ ಬಯಸೋದು ತಪ್ಪಾ? ಅವರು ಕೇಳ್ತಾರೆ, “ಯಾರಿಂದ ಆಜಾದಿ (ಸ್ವಾತಂತ್ರ್ಯ) ಕೇಳ್ತಿದ್ದೀಯ?” ಅಂತ. “ಭಾರತ ಯಾರನ್ನಾದ್ರೂ ಗುಲಾಮರನ್ನಾಗಿ ಮಾಡಿಟ್ಟುಕೊಂಡಿದೆಯೇನು? ಹೇಳು ನೋಡೋಣ?” ಇಲ್ಲ… ನಾವು ಭಾರತದಿಂದ ಸ್ವಾತಂತ್ರ್ಯ ಕೇಳ್ತಿಲ್ಲ. ಸರಿಯಾಗಿ ಕೇಳಿಸ್ಕೊಳ್ಳಿ, ನಾವು ಭಾರತದಿಂದ ಸ್ವಾತಂತ್ರ್ಯ ಕೇಳ್ತಿಲ್ಲ… ಭಾರತದಲ್ಲಿ ಸ್ವಾತಂತ್ರ್ಯ ಕೇಳ್ತಿದ್ದೀವಿ. ಇಂದ ಮತ್ತು ಅಲ್ಲಿ – ಈ ಪ್ರತ್ಯಯಗಳಲ್ಲಿ ವ್ಯತ್ಯಾಸವಿದೆ. ಬ್ರಿಟೀಷರಿಂದ ಸ್ವಾತಂತ್ರ್ಯ ಕೇಳ್ತಿಲ್ಲ. ಈ ದೇಶದ ಜನರು ಅದನ್ನು ಹೋರಾಡಿ ಪಡೆದಿದ್ದಾರೆ.

ಈಗ ನಾನು ನನ್ನ ಅನುಭವ ಹೇಳ್ತೀನಿ ಕೇಳಿ. ಪೊಲೀಸರು ಕೇಳಿದ್ರು, “ನೀವು ಲಾಲ್ ಸಲಾಮ್, ಲಾಲ್ ಸಲಾಮ್ ಅಂತ ಕೂಗ್ತಿದ್ರಲ್ಲ ಯಾಕೆ?” ಅದೇನೂ ಔಪಚಾರಿಕ ವಿಚಾರಣೆಯಾಗಿರಲಿಲ್ಲ. ನನ್ನನ್ನ ಊಟ ತಿಂಡಿಗೆ, ಮೆಡಿಕಲ್ ಚೆಕಪ್ಪಿಗೆ ಕರೆದ್ಕೊಂಡು ಹೋಗುವಾಗ ಅವೆಲ್ಲ ಮಾತಾಡ್ತಿದ್ವಿ. ನನಗಂತೂ ಸುಮ್ಮನಿರೋಕೇ ಬರೋದಿಲ್ಲ. ನಾವು ಜೆ ಎನ್ ಯು ನವರು ಸುಮ್ಮನೆ ಇರಬಲ್ಲೆವಾದ್ರೂ ಹೇಗೆ!? ನಾನು ಅವರೊಂದಿಗೆ ಹರಟುತ್ತಿದ್ದೆ. ಮಾತುಮಾತಲ್ಲೆ ನನಗೆ ಗೊತ್ತಾಯ್ತು, ಆ ಮನುಷ್ಯನೂ ನನ್ನ ಥರದವರೇ ಅಂತ. ಪೊಲೀಸ್ ಇಲಾಖೆಯಲ್ಲಿ ಯಾರು ಕೆಲಸ ಮಾಡ್ತಾರೆ ಹೇಳಿ? ರೈತರ ಮಕ್ಕಳು, ಕಾರ್ಮಿಕರ ಮಕ್ಕಳು, ಹಿಂದುಳಿದ ವರ್ಗಗಳಿಂದ ಬಂದವರು – ಇಂಥವರೇ ಪೊಲೀಸ್ ನೌಕರಿಗೆ ಸೇರೋದು. ನಾನು ಕೂಡ ಈ ದೇಶದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಒಂದಾದ ಬಿಹಾರದಿಂದ ಬಂದವನು. ನಾನೂ ಬಡ, ರೈತ ಕುಟುಂಬದಿಂದ ಬಂದವನು. ಪೊಲೀಸ್ ಇಲಾಖೆಯಲ್ಲೂ ಬಡ ಪರಿವಾರದ ಜನರೇ ಹೆಚ್ಚು ಕೆಲಸ ಮಾಡೋದು. ನಾನು ಕಾನ್ಸ್ಟೆಬಲ್, ಹೆಡ್ ಕಾನ್ಸ್ಟೆಬಲ್, ಇನ್ಸ್ಪೆಕ್ಟರ್ ವರೆಗಿನವರ ಬಗ್ಗೆ ಹೇಳ್ತಿದೀನಿ. ಐಪಿಎಸ್ ಮಾಡಿದ ಸಾಹೇಬರೊಂದಿಗೆ ನನಗೆ ಹೆಚ್ಚು ಮಾತುಕತೆಯಿಲ್ಲ. ಅಲ್ಲಿದ್ದ ಸಿಪಾಯಿಗಳೊಂದಿಗೆ ನಾನು ಮಾತಾಡಿದೆ. ನಾನು ಹೇಳೋಕೆ ಹೊರಟಿರೋದು ಆ ಮಾತುಕತೆಯ ತುಣುಕುಗಳನ್ನೇ. ಅವರು ಕೇಳಿದ್ರು, “ಈ ಲಾಲ್ ಸಲಾಮ್ ಲಾಲ್ ಸಲಾಮ್ ಏನು!?” ನಾನೇಳಿದೆ, “ಲಾಲ್ ಅಂದ್ರೆ ಕ್ರಾಂತಿ. ಸಲಾಮ್ ಅಂದ್ರೆ ಕ್ರಾಂತಿಗೊಂದು ಸಲಾಮು” ಅಂತ. ಅವರಿಗೆ ಅರ್ಥವಾಗ್ಲಿಲ್ಲ. “ನಿಮಗೆ ಇಂಕ್ವಿಲಾಬ್ ಜಿಂದಾಬಾದ್ ಗೊತ್ತಾ?” ಅಂತ ಕೇಳಿದೆ. ಅವರು ತಲೆಯಾಡಿಸ್ತಾ ಹೇಳಿದ್ರು, “ಕ್ರಾಂತಿಯನ್ನ ಉರ್ದುವಿನಲ್ಲಿ ಇಂಕ್ವಿಲಾಬ್ ಅಂತಾರೆ ಅಲ್ವ? ಈ ಸ್ಲೋಗನ್ ಎಬಿವಿಪಿಯವ್ರೂ ಹಿಡ್ಕೊಂಡಿರ್ತಾರೆ!” ನಾನು ಹೇಳಿದೆ, “ಅದು ನಕಲಿ ಇಂಕ್ವಿಲಾಬ್. ನಮ್ಮದು ಅಸಲಿ ಇಂಕ್ವಿಲಾಬ್!!”

ಅವ್ರು ಮತ್ತೂ ವಿಚಾರಿಸಿದ್ರು, “ಜೆ ಎನ್ ಯು ನಲ್ಲಿ ನಿಮಗೆ ಎಲ್ಲವೂ ಸಸ್ತಾದಲ್ಲಿ ಸಿಗ್ತವೆ ತಾನೆ?” ಅಂತ. ಅವರು ದಿನಕ್ಕೆ ಹದಿನೆಂಟು ಗಂಟೆ ಡ್ಯೂಟಿ ಮಾಡ್ತಿದ್ದನ್ನು ನಾನು ಗಮನಿಸಿದ್ದೆ. ಆದ್ರೂ ಓಟಿ ಪಡೆಯೋಕೆ ಪರದಾಡಬೇಕಿತ್ತು. ನಿಮಗ್ಯಾಕೆ ಸಸ್ತಾದಲ್ಲಿ ಯಾವುದೂ ಸಿಗೋದಿಲ್ಲ ಅಂತ ನಾನು ಕೇಳಿದೆ. ಆತ ಅಷ್ಟು ಕೆಲಸ ಮಾಡಿಯೂ ಬಡ್ತಿ ಬೇಕು ಅಂದ್ರೆ, ಸವಲತ್ತುಗಳು ಬೇಕು ಅಂದ್ರೆ ಭ್ರಷ್ಟಾಚಾರಕ್ಕೆ ಒಳಗಾಗಬೇಕಿತ್ತು. ನಾನು ಅದನ್ನೇ ಹೇಳಿದೆ. “ಈ ಕಾರಣಗಳಿಗಾಗಿಯೇ ನಾವು ಆಜಾದಿ ಬೇಕು ಅಂತ ಕೇಳ್ತಿರೋದು. ಹಸಿವಿನಿಂದ ಆಜಾದಿ, ಭ್ರಷ್ಟಾಚಾರದಿಂದ ಆಜಾದಿ… ಇವುಗಳ ಬೇಡಿಕೆಯಿಂದಲೇ ಒಂದು ಆಂದೋಲನ ಶುರುವಾಗಿಬಿಡ್ತು. ನಿಮಗ್ಗೊತ್ತಾ, ದೆಹಲಿಯ ಬಹಳಷ್ಟು ಪೊಲೀಸರು ಹರ್ಯಾಣಾದಿಂದ ಬಂದವರಾಗಿರ್ತಾರೆ. ಅವ್ರು ತುಂಬಾ ಶ್ರಮಜೀವಿಗಳು. ಅವರು ಮಾತಾಡ್ತಾ ಹೇಳಿದ್ರು, “ಜಾತಿವಾದ ಬಹಳ ಕೆಟ್ಟದ್ದು”. ನಾನು ಹೇಳಿದೆ, “ನಾವು ಕೇಳ್ತಿರೋದು ಈ ಜಾತಿವಾದದಿಂದ ಆಜಾದಿ ಬೇಕು ಅಂತಲೇ!” ಅವರು ಹೇಳಿದ್ರು, ಇದೇನೂ ತಪ್ಪಲ್ವಲ್ಲ! ಇದು ದೇಶದ್ರೋಹ ಹೇಗಾಗತ್ತೆ? ನಾನು ಕೇಳಿದೆ, “ಹೇಳಿ ನೋಡೋಣ, ವ್ಯವಸ್ಥೆಯಲ್ಲಿ ಅತಿ ಹೆಚ್ಚು ಅಧಿಕಾರ ಇರೋದು ಯಾರಿಗೆ?” ಅವರು ಠೀವಿಯಿಂದ ಹೇಳಿದ್ರು “ನಮ್ಮ ದಂಡಕ್ಕೆ”. “ಸರಿಯೇ ಸರಿ. ನೀವು ಈ ದಂಡವನ್ನು ನಿಮ್ಮ ಇಚ್ಛೆಯಿಂದ ಚಲಾಯಿಸಬಲ್ಲಿರೇನು?” “ಇಲ್ಲ” “ಹಾಗಾದ್ರೆ ಅಧಿಕಾರವೆಲ್ಲ ಯಾರ ಬಳಿ ಹೋಯ್ತು?” “ಭರ್ಜಿ, ಟ್ವೀಟ್ ಗಳ ಮೂಲಕ ಸ್ಟೇಟ್ಮೆಂಟ್ ಕೊಡೋರ ಹತ್ತಿರ!!” “ ಈ ಭರ್ಜಿ ಇಟ್ಕೊಂಡು, ಟ್ವೀಟ್ ಮಾಡಿಕೊಂಡು ಇರೋ ಸಂಘಿಗಳಿಂದ ಆಜಾದಿ ಬೇಕಂತಲೇ ನಮ್ಮ ಹೋರಾಟ ಇರೋದು!” ಅವನಂದ, “ಹಾಗಾದ್ರೆ ನಾನೂ ನೀನೂ ಈಗ ಒಂದೇ ಕಡೆ ನಿಂತಿದ್ದೀವಿ ಅಂತಾಯ್ತು”.

ಇಲ್ಲೊಂದು ಅಡ್ಡಿ ಇದೆ. ನಾನು ಎಲ್ಲ ಮೀಡಿಯಾದವರಿಗೂ ಈ ಮಾತು ಹೇಳ್ತಿಲ್ಲ. ಎಲ್ಲರಿಗೂ ಅಲ್ಲಿಂದ ಕಪ್ಪ ಕಾಣಿಕೆ ಬರೋದಿಲ್ಲ. ಕೆಲವ್ರಿಗೆ ಮಾತ್ರ ಅದು ಬರೋದು. ಕೆಲವರು ಕುಳಿತಲ್ಲಿಯೆ ಕತೆ ಹೆಣೆದು ನನ್ನನ್ನು ಹೇಗೆ ಬಿಂಬಿಸಿದ್ರು ಅಂದ್ರೆ, ಆ ಸಿಪಾಯಿ ನನ್ನನ್ನು ಜೈಲಿಗೆ ಹಾಕಿದಾಗ ನನಗೆ ಸರಿಯಾಗಿ ಬಾರಿಸಬೇಕು ಅಂದ್ಕೊಂಡಿದ್ನಂತೆ. ಅದಕ್ಕಾಗೇ ನನ್ನ ಹೆಸರನ್ನ ಎಲ್ಲಕ್ಕಿಂತ ಮೇಲೆ ಬರೆದಿಟ್ಟುಕೊಂಡಿದ್ನಂತೆ. ನನ್ನ ಜೊತೆ ಮಾತುಕತೆಯಾಡಿದ ಮೇಲೆ ಅವನು ಹೇಳಿದ್ದನ್ನ ನಿಮಗೆ ಹೇಳ್ತೀನಿ ಕೇಳಿ. ಅವನೀಗ ಹಾಗೆಲ್ಲ ನನ್ನನ್ನು ಬಿಂಬಿಸಿದವನಿಗೆ ಒಂದು ಗತಿ ಕಾಣಿಸ್ಬೇಕು ಅಂತ ಯೋಚಿಸತೊಡಗಿದ್ದ. ಆ ಸಿಪಾಯಿ ನನ್ನ ಹಾಗೇ ಬಡ ಹಿಂದುಳಿದ ವರ್ಗದಿಂದ ಬಂದವನು. ಒಂದು ಕಾಲದಲ್ಲಿ ತಾನೂ ಉನ್ನತ ಶಿಕ್ಷಣ ಪಡೀಬೇಕು ಅನ್ನೋ ಆಸೆ ಇದ್ದವನು. ಆದರೆ ಹಣದ ಅಭಾವ ಅವನ ಆಸೆಯನ್ನ ಪೂರೈಸಲಿಲ್ಲ. ಅವನಲ್ಲಿ ಸಾಮರ್ಥ್ಯವಿತ್ತು ಆದರೆ ಅದನ್ನು ಪೂರೈಸಿಕೊಳ್ಳುವ ಹಣಬಲವಿರಲಿಲ್ಲ. ಈ ಜನ, ಇಂಥವರು ಉನ್ನತ ಶಿಕ್ಷಣ ಪಡೆಯೋದನ್ನ ತಡೀತಾರೆ. ಇವರಿಗೆ ನನ್ನ ಸಮುದಾಯದವರು, ಹಿಂದುಳಿದವರು ಪಿಎಚ್ಡಿ ಮಾಡೋದು ಬೇಕಿಲ್ಲ. ಯಾಕಂದ್ರೆ ನಮ್ಮ ಬಳಿ ವಿದ್ಯೆಯನ್ನ ಕೊಳ್ಳೋಕೆ ಹಣವಿರೋದಿಲ್ಲ. ಇಂಥವರಿಗಾಗಿ ಜೆ ಎನ್ ಯು ದನಿ ಎತ್ತಿದೆ, ಎತ್ತುತ್ತಲೇ ಇರುತ್ತೆ. ಅದು ರೈತನಿರಲಿ, ಕಾರ್ಮಿಕನಿರಲಿ ಜೆ ಎನ್ ಯು ಅವರಿಗಾಗಿ ಹೋರಾಡುತ್ತೆ.

ಬಾಬಾ ಸಾಹೇಬರು ಹೇಳಿದ್ದರು, ರಾಜನೈತಿಕ ಲೋಕತಂತ್ರದಿಂದಷ್ಟೆ ಕೆಲಸ ಆಗೋದಿಲ್ಲ, ನಾವು ಸಾಮಾಜಿಕ ಲೋಕತಂತ್ರವನ್ನ ಸ್ಥಾಪಿಸೋಣ ಅಂತ. ಆದ್ದರಿಂದಲೇ ನಾನು ಮತ್ತೆ ಮತ್ತೆ ಸಂವಿಧಾನದ ಮಾತಾಡೋದು. ‘ಡೆಮಾಕ್ರಸಿ ಇಸ್ ಇನ್ಡಿಸ್ಪೆನ್ಸಬಲ್ ಟು ಸೋಷಿಯಲಿಸಮ್’ ಅಂತಾನೆ ಲೆನಿನ್. ಆದ್ರಿಂದ್ಲೇ ನಾವು ಸಮಾಜವಾದದ ಮಾತಾಡ್ತೀವಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಮಾತಾಡ್ತೀವಿ. ಸಮಾನತೆಯ ಮಾತಾಡ್ತೀವಿ. ಒಬ್ಬ ಚಪ್ರಾಸಿಯ ಮಗ, ಒಬ್ಬ ರಾಷ್ಟ್ರಪತಿಯ ಮಗ – ಇಬ್ರೂ ಒಂದೇ ಸ್ಕೂಲಲ್ಲಿ ಜೊತೆಯಾಗಿ ವಿದ್ಯೆ ಪಡೆಯುವಂತಾಗಬೇಕು ಅನ್ನೋದು ನಮ್ಮ ಬಯಕೆ. ಅದಕ್ಕಾಗಿ ನಾವು ದನಿ ಎತ್ತುತ್ತೇವೆ. ಆದ್ರೆ ನೀವು, ನಮ್ಮ ಸದ್ದಡಗಿಸೋಕೆ ಯತ್ನಿಸ್ತಿದ್ದೀರಿ. ಆದರೆ ಎಂಥಾ ಪವಾಡ ನೋಡಿ! ವಿಜ್ಞಾನ ಹೇಳುತ್ತೆ, ನೀವು ಎಷ್ಟು ದಬಾಯಿಸಿ ತಳ್ತೀರೋ ಅಷ್ಟು ಹೆಚ್ಚಿನದಾಗಿ ಪುಟಿದೇಳುತ್ತೆ ಅಂತ. ವಿಜ್ಞಾನ ಓದೋದು ಒಂದು ಥರವಾದ್ರೆ, ವೈಜ್ಞಾನಿಕವಾಗಿರೋದು ಇನ್ನೊಂಥರ. ಎರಡೂ ಬೇರೆಬೇರೆ. ಯಾರು ವೈಜ್ಞಾನಿಕವಾಗಿ ಆಲೋಚಿಸಬಲ್ಲರೋ ಅವರಿಗೆ ಇವೆಲ್ಲ ಅರ್ಥವಾಗುತ್ತೆ. ಹಸಿವು ಮತ್ತು ಬಡತನಗಳಿಂದ ಆಜಾದಿ, ಭ್ರಷ್ಟಾಚಾರ ಮತ್ತು ಅತ್ಯಾಚಾರಗಳಿಂದ ಆಜಾದಿ ಹಾಗೂ ಬಡವರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಅಧಿಕಾರಕ್ಕಾಗಿ ನಾವು ಆ ಆಜಾದಿಯನ್ನ ಪಡೆದೇ ತೀರುತ್ತೀವಿ. ಮತ್ತು ಅದನ್ನು ಇದೇ ಸಂವಿಧಾನದ ಅಡಿಯಲ್ಲಿ. ಇದೇ ಕಾನೂನಿನ ಅಡಿಯಲ್ಲಿ, ಇದೇ ನ್ಯಾಯ ಪ್ರಕ್ರಿಯೆಯ ಮೂಲಕ ಪಡೆದು ಈ ದೇಶಕ್ಕೆ ತೋರಿಸ್ತೀವಿ. ಇದು ನಮ್ಮ ದೃಢನಿಶ್ಚಯ. 

ಇದು ನಮ್ಮ ರೋಹಿತನ ಕನಸೂ ಆಗಿತ್ತು. 

ಒಬ್ಬ ರೋಹಿತನನ್ನು ಕೊಂದಿರಿ. ಹೋರಾಟದ ಉಸಿರುಗಟ್ಟಿಸಲು ನೋಡಿದಿರಿ. ಅದೇ ಹೋರಾಟ ಈಗ ಎಷ್ಟು ವಿಸ್ತಾರವಾಗಿ ಹರಡಿಕೊಂಡಿದೆ ನೋಡಿ. ನನ್ನ ಜೈಲುವಾಸದ ಅನುಭವದಿಂದ ಹೇಳ್ತೀನಿ ಕೇಳಿ. ಇದನ್ನ ಸ್ವವಿಮರ್ಶೆ ಅಂದ್ಕೊಳ್ಳಿ. ನಾವು ಜೆ ಎನ್ ಯು ನವರು ತಳಮಟ್ಟದ ಸಂಗತಿಗಳಿಗಾಗಿ ಹೋರಾಡ್ತೀವಿ ಅನ್ನೋದೇನೋ ನಿಜವೇ. ಆದರೆ ನಾವು ಬಳಸುವ ಭಾಷೆ ಭಾರವಾಗಿರುತ್ತದೆ. ಇದು ದೇಶದ ಜನಸಾಮಾನ್ಯರನ್ನ ತಲುಪೋದಿಲ್ಲ. ಅವರಿಗೆ ಅರ್ಥವಾಗೋದಿಲ್ಲ. ಇದು ಅವರ ದೋಷವಲ್ಲ. ಅವರು ಸಜ್ಜನ, ಪ್ರಾಮಾಣಿಕ, ಬುದ್ಧಿವಂತ ಜನ. ಅವರ ಪರಿಕರಗಳ ಮೂಲಕವೇ ನಮ್ಮ ಮಾತುಗಳನ್ನ ಅವರಿಗೆ ತಲುಪಿಸಬೇಕಾಗುತ್ತೆ. ಅವರನ್ನು ಎಂಥವು ತಲುಪುತ್ತವೆ ಹೇಳಿ? “ಬೇಗ ಬೇಗ ಫಾರ್ವರ್ಡ್ ಮಾಡಿ, ಲೈನ್ ಉದ್ದವಾಗಿಬಿಡತ್ತೆ” ಅನ್ನುವಂಥ ಜಾಹೀರಾತುಗಳು. ಆನ್ ಲೈನ್ ಮಾರಾಟ ಮಾಡ್ತಾರೆ, ಓಎಲೆಕ್ಸ್ ಮೂಲಕ ಮಾರಾಟ ಮಾಡ್ತಾರೆ. ನಮ್ಮ ದೇಶದಲ್ಲಿ ಮಾರಾಟ ಮಾಡುವುದೊಂದು ವ್ಯಸನ ಶುರುವಾಗಿದೆ. ಅಂಥ ಜನರೊಂದಿಗೆ ನಮಗೆ ಸಂವಾದ ಸಾಧ್ಯವಾಗಬೇಕು.

ಜೈಲಿನಲ್ಲಿರುವಾಗ ನನಗೆ ಇನ್ನೊಂದು ಅನುಭವವಾಯ್ತು. ಅಲ್ಲಿ ಊಟದ ತಟ್ಟೆಯಲ್ಲಿ ಎರಡು ಕಟೋರಿಗಳನ್ನ ಇಡುತ್ತಿದ್ದರು. ಒಂದರ ಬಣ್ಣ ನೀಲಿ, ಒಂದರ ಬಣ್ಣ ಕೆಂಪು. ನನಗೆ ಅದೃಷ್ಟದ ಮೇಲೆ ನಂಬಿಕೆಯಿಲ್ಲ. ದೇವರ ವಿಷಯ ನನಗೆ ಗೊತ್ತಿಲ್ಲ. ಆದರೆ ಆ ತಟ್ಟೆ ಮತ್ತು ಬಟ್ಟಲುಗಳು ಈ ದೇಶದ ಒಳಿತನ್ನ ಸೂಚಿಸ್ತಿವೆಯೇನೋ ಅನಿಸುತ್ತಿತ್ತು. ನನಗೆ ತಟ್ಟೆ ಭಾರತದಂತೆಯೂ ನೀಲಿ ಬಟ್ಟಲು ಅಂಬೇಡ್ಕರ್ ಸೇನೆಯಂತೆಯೂ ಕೆಂಪು ಬಟ್ಟಲು ಕಮ್ಯುನಿಸ್ಟರಂತೆ ಕಂಡಿತು. ಈ ಎರಡು ಶಕ್ತಿಗಳು ಈ ದೇಶದಲ್ಲಿ ಒಗ್ಗೂಡಿಬಿಟ್ಟರೆ ಅದರ ಕಥೆಯೇ ಬೇರೆ. ನಮ್ಮ ದೇಶಕ್ಕೆ ಮಾರಾಟಮಾಡುವವರು ಬೇಡ. ಮಾರಾಟಗಾರರನ್ನ ಕಳಿಸಬಿಡೋಣ. ಕೊಡುಕೊಳ್ಳುವಿಕೆಯ ಸೌಹಾರ್ದವನ್ನ ಮೂಡಿಸೋಣ. ಅಂಥ ಸರಕಾರವನ್ನ ರಚಿಸೋಣ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನುವ ಮಾತನ್ನ ನಾವು ವಾಸ್ತವದಲ್ಲೂ ನಿಜಗೊಳಿಸೋಣ. ನನಗೆ ಬಲವಾಗಿ ಅನಿಸ್ತಿದೆ, ನಾವಿದನ್ನ ಸಾಧಿಸ್ತೀವಿ. ಖಂಡಿತಾ ಮಾಡಿಯೇಮಾಡ್ತೀವಿ.

ಬಹಳ ಕಾಲದ ನಂತರ ಜೆ ಎನ್ ಯು ವಿದ್ಯಾರ್ಥಿಯನ್ನ ಜೈಲಿಗೆ ಕಳಿಸಲಾಗಿದೆ. ಹೇಳಿಕೊಳ್ಳುವಂಥ ಅನುಭವಗಳು ಸಾಕಷ್ಟಿದೆ. ಆದರಣೀಯ ಮಾನನೀಯ ಪ್ರಧಾನ ಮಂತ್ರಿಯವರು… ಹಾಗೆಲ್ಲ ಹೇಳಲೇಬೇಕು ತಾನೆ? ನಮ್ಮ ಪ್ರಧಾನಮಂತ್ರಿಯವರು ದೊಡ್ಡ ದೊಡ್ಡ ಮಾತಾಡ್ತಿದ್ದರು. ಒಳ್ಳೆಯ ದಿನಗಳ ಬಗ್ಗೆ ಹೇಳ್ತಿದ್ದರು. ನನಗೆ ಹಾಗೇ ಟೀವಿಯೊಳಗೆ ನುಗ್ಗಿಬಿಡೋಣ ಅನ್ನಿಸ್ತಿತ್ತು. ಮತ್ತು ಅವರ ಸೂಟ್ ಹಿಡಿದೆಳೆದು ಕೇಳಬೇಕನ್ನಿಸ್ತು, “ಮೋದಿ ಜೀ, ಸ್ವಲ್ಪ ಹಿಟ್ಲರನ ಮಾತುಗಳನ್ನಾಡಿ ನೋಡೋಣ!” “ಹಿಟ್ಲರನದು ಬಿಡಿ, ಕರಿ ಟೊಪ್ಪಿ ತೊಡುತ್ತಿದ್ದ ಮುಸೋಲಿನಿಯದಾದರೂ ಮಾತುಗಳನ್ನಾಡಿ ನೋಡೋಣ!! ಅವರನ್ನ ನಿಮ್ಮ ಗುರೂಜಿ ಗೋಳವಾಲ್ಕರ್ ಭೇಟಿ ಮಾಡಲು ಹೋಗಿದ್ದರಲ್ವಾ? ಮತ್ತು ಭಾರತೀಯ ಪರಿಭಾಷೆಯನ್ನು ಜರ್ಮನರಿಂದ ಕಲಿಯಲು ಹೊರಟಿದ್ದರಲ್ವಾ?” ಅಂತೆಲ್ಲ. ಈ ಹಿಟ್ಲರನ ಮಾತು, ಮುಸೋಲಿನಿಯ ಮಾತು, ಪ್ರಧಾನಮಂತ್ರಿಯ ಮಾತು ಇವೆಲ್ಲ ಒಂದೇ ಥರ ಅನಿಸ್ತಿತ್ತು. ನೂರು ಸಲ ಸೂರ್ಯನನ್ನ ಚಂದ್ರ ಚಂದ್ರ ಅನ್ತಾ ಇದ್ದರೆ ಅದು ಚಂದ್ರವಾಗಿಬಿಡುತ್ತೇನು? 

ಇದನ್ನೂ ಓದಿ:


ಸಾವಿರ ಸಲ ಹೇಳಿದರೂ ಅದು ಸೂರ್ಯನಾಗೇ ಇರುತ್ತೆ. ನೀವು ಸುಳ್ಳನ್ನಷ್ಟೆ ಸುಳ್ಳಾಗಿರಿಸಬಲ್ಲಿರಿ ಹೊರತು ಸತ್ಯವನ್ನು ಸುಳ್ಳಾಗಿಸಲಾರಿರಿ. ನೀವು ಸಂಸತ್ತಿನ ಒಳಗೆ ಏನೆಲ್ಲ ಪ್ರಸ್ತಾಪಗಳನ್ನಿಡ್ತೀರಿ, ಜನರ ಮನಸ್ಸು ಅತ್ತ ತಿರುಗದಂತೆ ಮಾಡಲು ಸುಳ್ಳುಗಳನ್ನ ಹೇರುತ್ತೀರಿ. ಇಲ್ಲಿ ಅಕ್ಯುಪೈ ಯುಜಿಸಿ ಚಳವಳಿ ನಡೀತಿತ್ತು, ಅಲ್ಲಿ ರೋಹಿತನ ಹತ್ಯೆಯಾಯ್ತು. ರೋಹಿತನಿಗಾಗಿ ಜೆ ಎನ್ ಯು ದನಿ ಎತ್ತಿದರೆ, “ನೋಡಿ! ನೋಡಿ!! ಎಂಥಾ ದೇಶದ್ರೋಹ! ಜೆ ಎನ್ ಯು ರಾಷ್ಟ್ರದ್ರೋಹಿಗಳ ಅಡ್ಡೆಯಾಗ್ಬಿಟ್ಟಿದೆ” ಅಂತ ಕಥೆ ಕಟ್ಟಲಾಯ್ತು. ಇದು ಕೂಡ ಜಾಸ್ತಿ ದಿನ ನಡೆಯೋದಿಲ್ಲ. ಹೊಸ ತಯಾರಿ ಮಾಡ್ಕೊಳ್ಳಿ. ರಾಮಮಂದಿರ ಮಾಡಿ.

ಇವತ್ತಿನ ಕತೆ ಹೇಳ್ತೀನಿ. ಜೈಲಿಂದ ಹೊರಡೋ ಮುಂಚೆ ಒಬ್ಬ ಸಿಪಾಯಿ ಮಾತಿಗೆ ಸಿಕ್ಕ. “ಧರ್ಮವನ್ನ ನಂಬ್ತೀಯಾ?” ನಾನೇಳಿದೆ, “ನನಗೆ ಹಾಗೆಂದರೇನು ಅಂತಲೇ ಗೊತ್ತಿಲ್ಲ”. ಮೊದಲು ಹಾಗಂದರೇನು ಅಂತ ಗೊತ್ತಾದರೆ ತಾನೆ ನಂಬುವ ಕೆಲಸ? “ಯಾವುದಾದ್ರೂ ಪರಿವಾರದಲ್ಲಂತೂ ಹುಟ್ಟೀರ್ತೀಯ!?” “ಹೌದು. ಪವಾಡವೆಂಬಂತೆ ಹಿಂದೂ ಪರಿವಾರದಲ್ಲಿ ಹುಟ್ಟಿಕೊಂಡಿದ್ದೀನಿ”. “ಈ ಬ್ರಹ್ಮಾಂಡವನ್ನ ಭಗವಂತ ಸೃಷ್ಟಿ ಮಾಡಿದಾನೆ. ಸೃಷ್ಟಿಯ ಕಣಕಣದಲ್ಲೂ ಭಗವಂತ ಇದ್ದಾನೆ. ಈ ಮಾತಿಗೆ ನೀನೇನು ಹೆಳ್ತೀ?” “ಖಂಡಿತಾ. ಎಲ್ಲರಲ್ಲೂ ಎಲ್ಲದರಲ್ಲೂ ಭಗವಂತ ಇರಬಹುದು. ಆದರೆ ಇಂಥಾ ಭಗವಂತನಿಗೂ ಒಂದು ಮಂದಿರ ಕಟ್ಟಿಸಿ ಇಡೋಕೆ ಕೆಲವರು ಪರದಾಡ್ತಿದ್ದಾರೆ. ಅಂಥವರ ಬಗ್ಗೆ ನೀನೇನು ಹೇಳ್ತೀ?” “ಬಹಳ ಕೆಟ್ಟ ಯೋಚನೆ ಇದು!” ಅವನಂದ. ಹೀಗೆ ಯೋಚಿಸುವ ಜನರನ್ನೂ ಅವರು ಪ್ರಚೋದಿಸ್ತಾರೆ. ಈ ದೇಶದೊಳಗೆ ಸದಾ ಪ್ರಕ್ಷುಬ್ಧತೆ ಇರಲೆಂದು ಅವರ ಬಯಸುತ್ತಾರೆ.

ನೀವಿವತ್ತು ಇಲ್ಲಿ ಕುಳಿತಿದ್ದೀರಲ್ಲ, ನಿಮಗನ್ನಿಸ್ತಿದೆ ತಾನೆ, ನಿಮ್ಮ ಮೇಲೆ ದೊಡ್ಡದೊಂದು ದಾಳಿ ನಡೆದಿದೆ ಅಂತ? ಆದರೆ ಈ ದಾಳಿ ಹೊಸತಲ್ಲ. ಇದು ಈಗಿನದ್ದೂ ಅಲ್ಲ. ನಿಮಗೆ ನೆನಪಿದೆಯಾ, ಆರೆಸ್ಸೆಸ್ಸಿನ ಮುಖವಾಣಿ ಆರ್ಗನೈಸರಿನಲ್ಲಿ ಜೆ ಎನ್ ಯು ಕುರಿತು ಕವರ್ ಸ್ಟೋರಿ ಮಾಡಲಾಗಿತ್ತು. ಸ್ವಾಮಿ ಜೆ ಎನ್ ಯು ಕುರಿತು ಸಾಕ್ಷ್ಯ ಹೇಳಿದ್ದರು. ಆದರೆ ನನಗೆ ಸಂವಿಧಾನದ ಮೇಲೆ ಭರವಸೆ ಇದೆ. ನನ್ನ ಎಬಿವಿಪಿ ಗೆಳೆಯರಿದ್ದರೆ ಕೇಳಿಸಿಕೊಳ್ಳಲಿ, ಒಂದು ಬಾರಿ ಆ ಸ್ವಾಮಿಯನ್ನು ಕರೆತರಲಿ. ಮುಖಾಮುಖಿಯಾಗಿ ಮಾತಿಗೆ ಕೂರಿಸಲಿ. ನಾವು ಸೋಲಿಸ್ತೀವಿ. ತಾರ್ಕಿಕವಾಗಿಯೇ ಸೋಲಿಸ್ತೀವಿ, ಕುತರ್ಕದಿಂದಲ್ಲ. ಹಾಗೇ ಅವರು ಕೂಡ ಜೆ ಎನ್ ಯುವನ್ನು ನಾಲ್ಕು ತಿಂಗಳ ಕಾಲ ಬಂದ್ ಮಾಡಬೇಕು ಅಂತ ತಾರ್ಕಿಕವಾಗಿಯೇ ಒಪ್ಪಿಸಲು ಸಫಲರಾದರೆ, ನಾನು ಅವರ ಪಾದಸೇವಕನಾಗ್ತೀನಿ. ಅವರಿಂದ ಸಾಧ್ಯವಾಗದೆ ಹೋದರೆ, ನಾನು ಅವರಲ್ಲಿ ಭಿನ್ನವಿಸಿಕೊಳ್ತೀನಿ, “ಮೊದಲು ಹೇಗೆ ನೀವು ಈ ದೇಶದಿಂದ ಹೊರಗಿರ್ತಿದ್ದರೋ ಈಗಲೂ ಹಾಗೇ ಹೊರಟುಹೋಗಿ” ಅಂತ.

ನಿಮಗೆ ಇನ್ನೊಂದು ಮಜದ ವಿಷಯ ಹೇಳಲಿಕ್ಕಿದೆ. ನೀವೆಲ್ಲ ಕ್ಯಾಂಪಸ್ಸಿನ ಒಳಗಿದ್ದುದರಿಂದ ನಿಮ್ಮ ಕಣ್ಣಿಗೆ ಬೀಳದೆ ಹೋಗಿರಬಹುದು. ಎಂಥಾ ಯೋಜನೆ ರೂಪಿಸ್ಕೊಂಡಿದ್ದರು… ಮೊದಲ ದಿನದಿಂದಲೂ ಪ್ರತಿಯೊಂದನ್ನೂ ಯೋಜಿತವಾಗಿಯೇ ನಡೆಸಿದ್ದರು. ಇಷ್ಟೆಲ್ಲ ತಲೆಕೆಡಿಸಿಕೊಂಡು ಪ್ಲಾನ್ ಮಾಡಬಾರದಿತ್ತು ಗೆಳೆಯರೇ! ಪೋಸ್ಟರ್ ಕೂಡ ಬದಲಿಸೊದಿಲ್ಲ ನೀವು! ಯಾವ ಸ್ಲೋಗನ್ ಇಟ್ಟುಕೊಂಡು, ಹ್ಯಾಂಡ್ ಬಿಲ್ ಇಟ್ಟುಕೊಂಡು ಹಿಂದೂಕ್ರಾಂತಿ ಸೇನೆ ಗಲಭೆ ನಡೆಸುತ್ತದೆಯೋ ಅದೇ ಸ್ಲೋಗನ್ ಇಟ್ಟುಕೊಂಡು ಎಬಿವಿಪಿ ಕೂಡ ಹೋರಾಡುತ್ತದೆ. ಅವೇ ಎಲ್ಲ ಪರಿಕರಗಳನ್ನು, ಘೋಷಣೆಗಳನ್ನು ಇಟ್ಟುಕೊಂಡು ಮಾಜಿ ಯೋಧರೊಂದಷ್ಟು ಜನ ಪ್ರತಿಭಟನೆಗೆ ಇಳಿಯುತ್ತಾರೆ. ಇದರರ್ಥ ಇವರೆಲ್ಲರ ಕಾರ್ಯಕ್ರಮಗಳನ್ನು ಒಮ್ಮೆಗೇ ನಾಗ್ಪುರದಲ್ಲಿ ಯೋಜಿಸಲಾಗಿರುತ್ತದೆ! ಅವರಾಡೋದೆಲ್ಲ ದೊಡ್ಡ ದೊಡ್ಡ ಮಾತುಗಳು. ಅಬ್ಬರದ ಮಾತುಗಳು. ಈ ದೇಶದ ಸಂಘರ್ಷವನ್ನ, ಪ್ರತಿಭಟನೆಯ ದನಿಯನ್ನ ಹೊಸಕಿಹಾಕುವಂಥ ಮಾತುಗಳು. ಈ ದೇಶದ ಜನರು ತಮ್ಮ ಜೀವನದ ಅಗತ್ಯಗಳಿಗಾಗಿ ಎತ್ತುವ ಪ್ರಶ್ನೆಗಳ, ನಡೆಸುವ ಚಿಂತನೆಗಳ ದಿಕ್ಕುತಪ್ಪಿಸುವ ಮಾತುಗಳು. ಅದೇ ಜೆ ಎನ್ ಯುನಲ್ಲಿಯೂ ದೊಡ್ಡ ದೊಡ್ಡ ಪ್ರಶ್ನೆಗಳಿವೆ. ನಾವು ಈ ಹೇರಲಾಗುವ ಭಾರದ ಮಾತುಗಳನ್ನ ಪ್ರಶ್ನಿಸ್ತೀವಿ. ನನ್ನ, ಉಮರನ, ಅನಿರ್ಬಾಣ್, ಆಶುತೋಶ್, ನಾಗ, ಶೆಹ್ಲಾ, ಯಾರೇ ಇರಲಿ ನಮ್ಮೆಲ್ಲರ ಗಂಟಲೊತ್ತುವ ಪ್ರಯತ್ನ ಅದೆಷ್ಟು ಮಾಡಿದರೂ ಅಷ್ಟೇ, ನಮ್ಮ ಸಂಘರ್ಷ ಮುಗಿಸಿಬಿಡಲು ಎಷ್ಟು ಹೆಣಗಾಡಿದರೂ ಅಷ್ಟೇ, ನಾವು ಹೋರಾಟದಿಂದ ಹಿಂದೆ ಸರಿಯೋದಿಲ್ಲ. ಸರಿಯಾಗಿ ಕೇಳಿಸಿಕೊಳ್ಳಿ, ನೀವೆಷ್ಟೋ ದಬ್ಬಿದರೂ ನಾವು ಮತ್ತೆಮತ್ತೆ ಎದ್ದುಬರುತ್ತೀವಿ. ನಮ್ಮ ಸಂಘರ್ಷವನ್ನು ನೀವು ಅದುಮಿಹಾಕಲು ಸಾಧ್ಯವಿಲ್ಲ. ನೀವೆಷ್ಟು ದಬ್ಬುತ್ತೀರೋ ನಾವು ಅಷ್ಟೇ ಪುಟಿದು ಬರುತ್ತೇವೆ. ಅಷ್ಟೇ ತೀವ್ರವಾಗಿ ಹೋರಾಟ ಮುಂದುವರೆಸುತ್ತೇವೆ.

ಇದನ್ನೂ ಓದಿ:

ಇದು ಸುದೀರ್ಘ ಕದನ. ಎಲ್ಲಿಯೂ ನಿಲ್ಲದೆ, ಯಾರಿಗೂ ಬಾಗದೆ, ಉಸಿರು ಬಿಗಿಹಿಡಿದು ನಾವು ಇದನ್ನು ಮುನ್ನಡೆಸಬೇಕು. ಮತ್ತು ಈ ಕ್ಯಾಂಪಸ್ ಒಳಗಿನ ವಿಧ್ವಂಸಕ ಚಿಂತನೆಯ ಎಬಿವಿಪಿ ಜನರು, ಕ್ಯಾಂಪಸ್ ಹೊರಗಿನ ಈ ದೇಶವನ್ನು ಬರಬಾದ್ ಮಾಡಲು ಹವಣಿಸ್ತಿರುವ ಭಾಜಪದ ಜನರು ಅದ್ಯಾರೇ ಇದ್ದರೂ ನಾವು ಅವರೆಲ್ಲರ ವಿರುದ್ಧ ಒಗ್ಗಟ್ಟಿನಿಂದ ಎದ್ದು ನಿಲ್ಲುತ್ತೇವೆ. ಜೆ ಎನ್ ಯು ಎದ್ದು ನಿಲ್ಲುತ್ತದೆ. ಜೆ ಎನ್ ಯು ಗಾಗಿ ಶುರುವಾದ ಈ ಹೋರಾಟ, ರೋಹಿತ್ ವೇಮುಲಾನ ಸಾವಿನ ನ್ಯಾಯಕ್ಕಾಗಿ ಶುರುವಾದ ಈ ಹೋರಾಟ, ನಿಮ್ಮೆಲ್ಲರ ಕಳಕಳಿಯಿಂದ ಶುರುವಾದ ಈ ಹೋರಾಟ, ಈ ದೇಶದ ಸೌಹಾರ್ದ ಜೀವಿಗಳು, ಪ್ರಗತಿಪರರು ಶುರುಮಾಡಿದ ಈ ಹೋರಾಟವೇನಿದೆ, ಈ ಹೋರಾಟವನ್ನು ನಾವು ನಡೆಸ್ತೀವಿ, ಗೆದ್ದೇಗೆಲ್ತೀವಿ. 
ಇದು ನಮ್ಮ ವಿಶ್ವಾಸ.

***

ಕನ್ಹಯ್ಯನ ‘ಆಜಾದಿ ಕಾ ನಾರಾ’
ಮನುವಾದದಿಂದ ಆಜಾದಿ
ಬ್ರಾಹ್ಮಣ್ಯವಾದದಿಂದ ಆಜಾದಿ
ಸಾಮ್ರಾಜ್ಯವಾದದಿಂದ ಆಜಾದಿ
ಅಸ್ಪೃಶ್ಯತೆಯಿಂದ ಆಜಾದಿ
ಜಾತಿಪದ್ಧತಿಯಿಂದ ಆಜಾದಿ
ಕೋಮುವಾದದಿಂದ ಆಜಾದಿ
ಭಯೋತ್ಪಾದನೆಯಿಂದ ಆಜಾದಿ
ಫ್ಯಾಸಿಸ್ಟ್ ವಾದದಿಂದ ಆಜಾದಿ
ಬಂಡವಾಳಶಾಹಿಯಿಂದ ಆಜಾದಿ
ಹಸಿವಿನಿಂದ ಆಜಾದಿ
ಅನಾರೋಗ್ಯದಿಂದ ಆಜಾದಿ
ಅನಕ್ಷರತೆಯಿಂದ ಆಜಾದಿ
ನಿರುದ್ಯೋಗದಿಂದ ಆಜಾದಿ
ಲಿಂಗ ಅಸಮಾನತೆಯಿಂದ ಆಜಾದಿ
ಶೋಷಣೆ-ವಂಚನೆ ಅನ್ಯಾಯಗಳಿಂದ ಆಜಾದಿ

ಶುಕ್ರವಾರ, ಫೆಬ್ರವರಿ 19, 2016

ನಿಮ್ಮೆಲ್ಲರಲ್ಲಿ ಒಗ್ಗಟ್ಟಾಗಿರಲು ಮನವಿ ಮಾಡಿಕೊಳ್ಳುತ್ತೇನೆ..ಕನ್ಹಯ್ಯ ಕುಮಾರ್

ಕನ್ನಡೀಕರಿಸಿದವರು: ‘ಸತ್ಯ’


ರಾಷ್ಟ್ರದ್ರೋಹದ ಆಪಾದನೆಯಲ್ಲಿ ಜೈಲಿನಲ್ಲಿರು JNU ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಫೆ.11 ರಂದು ಬಂಧನಕ್ಕೆ ಮುನ್ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ್ದ ಭಾಷಣದ ಪೂರ್ಣಪಾಠ.

ಗೆಳೆಯರೆ,
ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಸುಟ್ಟು ಹಾಕಿದ ಜನ ಅವರು; ಬ್ರಿಟಿಷರೆದುರು ಕ್ಷಮೆಯಾಚಿಸಿದ ಸಾವರ್ಕರನ ಚೇಲಾಗಳು ಅವರು. ಈಗ, ಹರ್ಯಾಣದಲ್ಲಿ ಕಟ್ಟರ್ ಸರ್ಕಾರವನ್ನು ನಡೆಸುತ್ತಿದ್ದು ಭಗತ್ ಸಿಂಗ್ ಹೆಸರಿನಲ್ಲಿದ್ದ ಒಂದು ವಿಮಾನ ನಿಲ್ದಾಣಕ್ಕೆ ಸಂಘಿಯೊಬ್ಬನ ಹೆಸರಿಟ್ಟಿರುವವರು ಅವರು. ನಮಗೆ RSS ನಿಂದ ದೇಶಭಕ್ತಿಯ ಸರ್ಟಿಫಿಕೇಟ್ ಬೇಕಾಗಿಲ್ಲ. RSS ಬಂದು ನಮ್ಮನ್ನು ರಾಷ್ಟ್ರೀಯವಾದಿಗಳು ಎಂದು ಗುರುತಿಸಿ ಹೇಳಬೇಕಾಗಿಲ್ಲ. ನಾವು ಈ ದೇಶದ ಪ್ರಜೆಗಳಾಗಿದ್ದು ನಮ್ಮ ದೇಶದ ನೆಲವನ್ನು ಪ್ರೀತಿಸುವವರು. ಈ ದೇಶದ ಶೇಡಕಾ 80 ರಷ್ಟು ಬಡವರಿಗಾಗಿ ನಾವು ಹೋರಾಡುತ್ತೇವೆ. ನಮ್ಮ ದೃಷ್ಟಿಯಲ್ಲಿ ದೇಶಭಕ್ತಿ ಅಂದೆ ಇದೇ. ಬಾಬಾಸಾಹೇಬರಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ಈ ದೇಶದ ಸಂವಿಧಾನದಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ನಾವು ಗಟ್ಟಿದನಿಯಲ್ಲಿ ಹೇಳಬಯಸುವುದೇನೆಂದರೆ ಅವನು ಸಂಘಿಯಾಗಲೀ, ಮತ್ಯಾವನೇ ಆಗಲೀ ಈ ದೇಶದ ಸಂವಿದಾನದ ವಿರುದ್ಧ  ಬೆರಳು ತೋರಿಸಿದ್ದೇ ಆದಲ್ಲಿ ಯಾವ ಕಾರಣಕ್ಕೂ ನಾವು ಸಹಿಸಿಕೊಂಡು ಸುಮ್ಮನೇ ಕೂರುವುದಿಲ್ಲ. ನಮಗೆ ಸಂವಿಧಾನದಲ್ಲಿ ನಂಬಿಕೆಯಿದೆ. ಆದರೆ ಜಾಂಡೇವಾಲನ್ ನಲ್ಲಿ (ದೆಹಲಿಯ ಆರೆಸ್ಸೆಸ್ ಕಚೇರಿ) ಹೇಳಿಕೊಡಲಾಗುವ ಸಂವಿಧಾನದ ಬಗ್ಗೆ ನಮಗೆ ಎಳ್ಳಷ್ಟೂ ನಂಬಿಕೆಯಿಲ್ಲ. ಮನುಸ್ಮೃತಿಯಲ್ಲಿ ನಮಗೆ ನಂಬಿಕೆಯಿಲ್ಲ. ಈ ದೇಶದಲ್ಲಿ ಆಳಕ್ಕೆ ಬೇರುಬಿಟ್ಟಿರುವ ಜಾತಿ ವ್ಯವಸ್ಥೆಯಲ್ಲಿ ನಮಗೆ ನಂಬಿಕೆಯಿಲ್ಲ.  ನಾವು ನಂಬಿಕೆ ಇಟ್ಟಿರುವ ಅದೇ ಸಂವಿಧಾನದಲ್ಲಿ ನಾವು ನಂಬಿರುವ ಅದೇ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಸಾಂವಿಧಾನಿಕ ಪರಿಹಾರದ ಹಕ್ಕುಗಳನ್ನು ತಿಳಿಸಿದ್ದಾರೆ. ಅದೇ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಮರಣದಂಡನೆಯನ್ನು ಈ ದೇಶದಲ್ಲಿ ರದ್ದು ಮಾಡಬೇಕೆಂದು ಹೇಳಿದ್ದಾರೆ. ಅದೇ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯೂ ಹೇಳಿದ್ದಾರೆ. ಈ ಸಂವಿಧಾನವನ್ನು ನಾವು ಎತ್ತಿಹಿಡಿದಿದ್ದೇವೆ. ನಾವು ನಮ್ಮ ಮೂಲ ಹಕ್ಕನ್ನು, ನಮ್ಮ ಸಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯಲು ಬಯಸುತ್ತೇವೆ.

ಆದರೆ ಅತ್ಯಂತ ನಾಚಿಕೆಗೇಡಿನ ಸಂಗತಿ ಮತ್ತು ಅತ್ಯಂತ ದುಃಖದ ಸಂಗತಿಯೆಂದರೆ ಇಂದು ಈ ABVP ತನ್ನ ಪರವಾದ ಮೀಡಿಯಾಗಳನ್ನು ಕರೆತಂದು ಒಂದು ಸುಳ್ಳು ಪ್ರಚಾರ ನಡೆಸುತ್ತಿದೆ. ನೈಜ ವಿಷಯಗಳನ್ನು ದಿಕ್ಕುತಪ್ಪಿಸುತ್ತಿದೆ. ನೆನ್ನೆಯಷ್ಟೇ ABVP ಸಹಕಾರ್ಯದರ್ಶಿ ನಾವು ಫೇಲೋಶಿಪ್ ಗೆ ಹೋರಾಟ ನಡೆಸ್ತೀವಿ ಎನ್ನುವ ಹೇಳಿಕೆ ನೀಡಿದ. ಇದೆಂತಹ ಹಾಸ್ಯಾಸ್ಪದ ಮಾತು ನೋಡಿ. ಅಲ್ಲಿ ಅವರದೇ ಸರ್ಕಾರವಿದ್ದು, ಮೇಡಂ ಮನು-ಸ್ಮೃತಿ ಇರಾನಿ ಅಲ್ಲಿ ಕುಳಿತುಕೊಂಡು ಫೆಲೋಶಿಪ್ ಗಳನ್ನು ಕಡಿತಗೊಳಿಸುತ್ತಿದ್ದಾರೆ. ಇಲ್ಲಿ ABVP “”ನಾವು ಫೆಲೋಶಿಪ್ ಗಾಗಿ ಹೋರಾಡುತ್ತೇವೆ” ಅಂತ ಬಜಾಯಿಸುತ್ತದೆ. ನಾಲ್ಕು ವರ್ಷಗಳಾದರೂ ನಮ್ಮ ಹಾಸ್ಟೆಲ್ ಕಟ್ಟಿ ಆಗಿಲ್ಲ. ಈ ಕ್ಷಣದವರೆಗೂ ವೈ-ಫೈ ಸೌಲಭ್ಯ ನಮಗೆ ನೀಡಿಲ್ಲ. BHEL ನಮಗೆ ಒಂದು ಬಸ್ ಸೌಲಭ್ಯ ಕಲ್ಪಿಸಿದೆ. ಆದರೆ ಅದಕ್ಕೂ ಇಂಧನ ತುಂಬಿಸೋಕೆ ನಮ್ಮ ಆಡಳಿತಾಂಗದ ಬಳಿ ದುಡ್ಡಿಲ್ಲ. ಈ ABVPಯ ಮಂದಿ ರೋಲರುಗಳ ಮುಂದೆ ನಿಂತುಕೊಂಡು ದೇವಾನಂದನ ರೀತಿ ಪೋಸು ಕೊಟ್ಟು ಫೋಟೋ ತೆಗೆಸಿಕೊಂಡು “ನಾವು ಹಾಸ್ಟೆಲ್ ಕಟ್ಟಿಸ್ತೀವಿ, ವೈಫೈ ಕೊಡಿಸ್ತೀವಿ, ಫೇಲೋಶಿಪ್ ಹೆಚ್ಚಿಸ್ತೀವಿ” ಅಂತ ಬಡಾಯಿ ಕೊಚ್ಚುತ್ತಾರೆ. ಅವರ ಸುಳ್ಳುಗಳು ಬಯಲಾಗಲಿವೆ. ಗೆಳೆಯರೇ, ಈ ದೇಶದಲ್ಲಿ ದೇಶದ ಮೂಲಭೂತ ಪ್ರಶ್ನೆಗಳ ಕುರಿತು ಏನಾದರೂ ಒಂದು ಚರ್ಚೆ ನಡೆಸಿದ್ದೇ ಆದರೆ, JNU ವಿದ್ಯಾರ್ಥಿಗಳು ಅತ್ಯಂತ ಮೂಲಭೂತ ಪ್ರಶ್ನೆಗಳನ್ನು ಎತ್ತುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ.

ಆ (ಸುಬ್ರಹ್ಮಣಿಯನ್) ಸ್ವಾಮಿ ಎನ್ನುವ ಮನುಷ್ಯ, JNU ನಲ್ಲಿ ಜಿಹಾದಿಗಳಿದ್ದಾರೆ, JNUನಲ್ಲಿ ಹಿಂಸೆ ಪ್ರಚೋದಿಸುವ ಜನ ಇದ್ದಾರೆ ಅಂತ ಬಡಕೊಳ್ಳುತ್ತಾನೆ. ಬನ್ನಿ ನಾವು ಹಿಂಸೆಯ ಪರಿಕಪಲ್ಪನೆ ಬಗ್ಗೆ ಚರ್ಚೆ ಮಾಡಲಿಕ್ಕೆ ಬಯಸುತ್ತೇವೆ. ನಾವು ನಿಮಗೆ ಪ್ರಶ್ನೆ ಕೇಳಲಿಕ್ಕೆ ಇಚ್ಛಿಸುತ್ತೇವೆ. ಈ ABVP ಘೋಷಣೆ ಹಾಕುತ್ತದೆಯಲ್ಲಾ -“ಖೂನ್ ಸೇ ತಿಲಕ್ ಕರೇಂಗೇ, ಗೋಲಿಯೋಂಸೆ ಆರತಿ” (ರಕ್ತದಿಂದ ಸಿಂಧೂರ ಇಡ್ತೀವಿ, ಬುಲೆಟ್ಟುಗಳಿಂದ ಆರತಿ ಇಡ್ತೀವಿ”) –  ನಾವು ಕೇಳ್ತೀವಿ, ಈ ದೇಶದಲ್ಲಿ ಯಾರ ರಕ್ತ ಹರಿಸಲಿಕ್ಕೆ ನೀವು ಹೊರಟಿದ್ದೀರಿ? ಬ್ರಿಟಿಷರ ಜೊತೆಯಾಗಿ ನಿಂತುಕೊಂಡು ಭಾರತೀಯರೆ ಮೇಲೆ ಬುಲೆಟ್ ಹಾರಿಸಿದ ಜನ ನೀವು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ದೇಶಪ್ರೇಮಿಗಳ ವಿರುದ್ಧ ಬುಲೆಟ್ ಹಾರಿಸಿದ ಜನ ನೀವಲ್ಲವೇ? ಉತ್ತರ ಕೊಡಿ.


ಈ ದೇಶದ ಬಡವರು ಹೊಟ್ಟೆಗೆ ಅನ್ನ ಕೇಳುತ್ತಿರುವಾಗ, ಹಸಿವಿನಿಂದ ಜನರು ಸಾಯುತ್ತಿರುವಾಗ, ಜನರು ತಮ್ಮ ಹಕ್ಕುಗಳನ್ನು ಕೇಳುವಾಗ ನೀವು ಅವರ ಅವರ ವಿರುದ್ಧ ಬುಲೆಟ್ ಪ್ರಯೋಗಿಸುತ್ತೀರಿ. ನೀವು ಮುಸ್ಲಿಮರ ವಿರುದ್ಧ ಬುಲೆಟ್ ಉಪಯೋಗಿಸಿದ್ದೀರಿ. ಹಾಗೆಯೇ ಮಹಿಳೆಯರು ಅವರ ಹಕ್ಕುಗಳ ಬಗ್ಗೆ ಮಾತಾಡಿದಾಗ ಅವರ ಮೇಲೆ ನೀವು ಬುಲೆಟ್ ಹಾರಿಸಿದ್ದೀರಿ. ಕೈಯಲ್ಲಿನ ಐದೂ ಬೆರಳೂ ಸಮವಾಗಿರುವುದಿಲ್ಲ ಅಂತ ಹೇಳುತ್ತಾ ಮಹಿಳೆಯರು ಸೀತೆಯ ಹಾಗೆ ಇರಬೇಕು, ಸೀತೆಯ ಹಾಗೆ ಅಗ್ನಿಪರೀಕ್ಷೆಗೆ ಒಳಗಾಗಬೇಕು ಎಂದು ತಾಕೀತು ಮಾಡುತ್ತೀರಿ. ಆದರೆ ತಿಳಿದುಕೊಳ್ಳಿ, ಈ ದೇಶದಲ್ಲಿ ಪ್ರಜಾಪ್ರಭುತ್ವ ಇದೆ. ಈ ಪ್ರಜಾಪ್ರಭುತ್ವ ಪ್ರತಿಯೊಬ್ಬ ಮನುಷ್ಯನೂ ಸಮಾನ ಎಂದಿದೆ. ಒಬ್ಬ ವಿದ್ಯಾರ್ಥಿಯಾಗಿರಲಿ, ಪೌರಕಾರ್ಮಿಕನಾಗಿರಲಿ, ಕಾರ್ಮಿಕ, ರೈತನೇ ಆಗಿರಲಿ, ಯಾರೋ ಬಡ ಬೋರೇಗೌಡನಾಗಿರಲಿ, ಶ್ರೀಮಂತ ಕುಳ ಅಂಬಾನಿ, ಅದಾನಿಯೇ ಆಗಿರಲಿ, ಎಲ್ಲರಿಗೂ ಸಮಾನ ಹಕ್ಕುಗಳಿವೆ. ಹೀಗಾಗಿ ನಾವು ಮಹಿಳೆಯರ ಹಕ್ಕುಗಳ ಬಗ್ಗೆ ಮಾತಾಡಿದೊಡನೆ ಅವರು ನಾವು ಭಾರತದ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದೇವೆ ಎಂದು ಗೂಬೆ ಕೂರಿಸುತ್ತಾರೆ. ನಾವು ಈ ಶೋಷಣೆ, ಜಾತೀವಾದ, ಮನುವಾದ ಮತ್ತು ಬ್ರಾಹ್ಮಣವಾದದ ಪರಂಪರೆಗಳನ್ನು ಕಸದ ಬುಟ್ಟಿಗೆಸೆಯಬಯಸಿದ್ದೇವೆ.

ಈ ದೇಶದ ಜನ ಪ್ರಜಾಪ್ರಭುತ್ವದ ಬಗ್ಗೆ ಮಾತಾಡು ಶುರು ಮಾಡಿದ ಕೂಡಲೇ ಆ ಜನರಿಗೆ ಸಮಸ್ಯೆ ಶುರುವಾಗುತ್ತದೆ. ಜನರು ಲಾಲ್ ಸಲಾಂ ಜೊತೆಗೆ ನೀಲಾ ಸಲಾಂ ಮಾಡಿದರೆ, ಮಾರ್ಕ್ಸ್ ಜೊತೆಗೆ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಮಾತಾಡಿದರೆ, ಹುತಾತ್ಮ ರಾಮ್ ಪ್ರಸಾದ್ ಬಿಸ್ಮಿಲ್ ಜೊತೆಯಲ್ಲೇ ನೇಣಿಗೇರಿದ ಅಶ್ಫಾಖ್ ಉಲ್ಲಾಖಾನ್ ಬಗ್ಗೆ ಮಾತಾಡಿಬಿಟ್ಟರೆ ಅವರಿಗೆ ಉರಿ ಶುರುವಾಗುತ್ತದೆ. ಅವರು ಕುತಂತ್ರಿಗಳು. ಅವರು ಬ್ರಿಟಿಷರ ಚೇಲಾಗಳು. ಬನ್ನಿ, ನನ್ನ ಮೇಲೆ ಮಾನನಷ್ಟ ಮೊಕ್ಕದ್ದಮೆ ಹೂಡಿ. ನಾನು ಹೇಳ್ತೇನೆ, RSSನ ಚರಿತ್ರೆ ಅಂದರೆ ಬ್ರಿಟಿಷರ ಜೊತೆ ರಾಜಿ ಮಾಡಿಕೊಂಡು ಭಾರತೀಯರ ವಿರುದ್ಧವೇ ನಿಂತ ಚರಿತ್ರೆ ಎಂದು ಕೂಗಿ ಹೇಳುತ್ತೇನೆ. ಈ ದೇಶಕ್ಕೆ ಅಂದು ದ್ರೋಹ ಬಗೆದವರು ಇಂದು ದೇಶಭಕ್ತಿಯ ಸರ್ಟಿಫಿಕೇಟ್ ಹಂಚುತ್ತಿದ್ದಾರೆ. ನನ್ನ ಮೊಬೈಲ್ ಚೆಕ್ ಮಾಡಿನೋಡಿ. ಗೆಳೆಯರೇ, ಅವರು ನನ್ನ ತಾಯಿ ಮತ್ತು ನನ್ನ ಸಹೋದರಿಯ ಬಗ್ಗೆ ಕೆಟ್ಟದಾಗಿ ಬೈದು ಕಳಿಸಿದ ಮೆಸೇಜುಗಳಿವೆ. ನನ್ನ ತಾಯಿ ಭಾರತಮಾತೆಯ ಭಾಗವಾಗಿಲ್ಲವವೇ? ಹಾಗಾದರೆ ಇವರು ಹೇಳುವ ಭಾರತ ಮಾತೆ ಯಾರು? ನನ್ನವ್ವ ಒಬ್ಬಳು ಅಂಗನವಾಡಿ ಕಾರ್ಯಕರ್ತೆ. ತಿಂಗಳಿಗೆ 3,000 ರೂಪಾಯಿಯಲ್ಲಿ ನನ್ನ ಕುಟುಂಬ ಬದುಕು ನಡೆಸುತ್ತಿದೆ. ಇವರು ನನ್ನ ತಾಯಿಯನ್ನು ನಿಂದಿಸುತ್ತಾರೆ. ಈ ದೇಶದಲ್ಲಿ ಬಡವರ, ಕಾರ್ಮಿಕರ, ದಲಿತರ, ರೈತರ ತಾಯಿಯಂದಿರು ಭಾರತಮಾತೆಯ ಭಾಗವಲ್ಲದಿದ್ದರೆ ಅದೆಂತಹ ನಾಚಿಕೆಗೇಡಿನ ವಿಷಯವಲ್ಲವೇ?. ಭಾರತದ ಹಲವು ಮಾತೆಯರಿಗೆ, ತಂದೆಯರಿಗೆ, ಸಹೋದರಿಯರಿಗೆ, ರೈತರಿಗೆ, ಕಾರ್ಮಿಕರಿಗೆ, ದಲಿತರಿಗೆ, ಆದಿವಾಸಿಗಳಿಗೆ ಜಯವಾಗಲಿ ಎಂದು ನಾನು ಹೆಳುತ್ತೇನೆ. ತಾಕತ್ತಿದ್ದರೆ ಅವರು ಹೇಳಿ ಬಿಡಲಿ ಇಂಕ್ವಿಲಾಬ್ ಝಿಂದಾಬಾದ್ ಎಂದು. ಅವರಿಗೆ ದಮ್ಮಿದ್ದರೆ ಭಗತ್ ಸಿಂಗ್ ಚಿರಾಯುವಾಗಲಿ, ಸುಖದೇವ್ ಚಿರಾಯುವಾಗಲಿ, ಆಶ್ಪಾಖುಲ್ಲಾಖಾನ್ ಚಿರಾಯುವಾಗಲಿ ಎಂದು ಹೇಳಿಬಿಡಲಿ. ಆಗ ಅವರಿಗೆ ಈ ದೇಶದ ಮೇಲೆ ನಿಜಕ್ಕೂ ವಿಶ್ವಾಸವಿದೆ ಎಂದು ನಾನು ಒಪ್ಪುತ್ತೇನೆ.

ಬಾಬಾಸಾಹೇಬರ 125ನೇ ಜನ್ಮದಿನಾಚರಣೆ ಆಚರಿಸುವ ನಾಟಕ ಮಾಡ್ತೀರಿ. ಬನ್ನಿ. ನಿಮಗೆ ತಾಕತ್ತಿದ್ದರೆ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಎತ್ತಿದ್ದ ಪ್ರಶ್ನೆಗಳನ್ನು ಎತ್ತಿ ನೋಡೋಣ. ಈ ದೇಶದಲ್ಲಿ ಜಾತಿವಾದ ಅತಿದೊಡ್ಡ ಸಮಸ್ಯೆ. ಬನ್ನಿ ಇಲ್ಲಿ. ಜಾತಿವಾದದ ಬಗ್ಗೆ ಮಾತಾಡಿ. ಮೀಸಲಾತಿ ತರಲು ಬನ್ನಿ. ನಿಮಗೆ ತಾಕತ್ತಿದ್ದರೆ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ತನ್ನಿ ನೋಡೋಣ.

ಈ ದೇಶ ಯಾವತ್ತೂ ನಿಮ್ಮದಾಗಿರಲಿಲ್ಲ, ಯಾವತ್ತೂ ಆಗಿರುವುದೂ ಇಲ್ಲ. ಒಂದು ರಾಷ್ಟ್ರ ರೂಪಿಸಲ್ಪಟ್ಟಿರುವುದು ಅದರ ಜನರಿಂದ. ಒಂದು ರಾಷ್ಟ್ರದಲ್ಲಿ ಹಸಿದವರ, ಬಡವರ, ಕಾರ್ಮಿಕರ ಮಾತುಗಳಿಗೆ ಬೆಲೆ ಇಲ್ಲ ಅಂತಾದರೆ ಅದು ರಾಷ್ಟ್ರವೇ ಅಲ್ಲ. ನೆನ್ನೆ ಇದೇ ಮಾತನ್ನು ನಾನು ಒಂದು ಟಿವಿ ಸಂವಾದದಲ್ಲಿ ದೀಪಕ್ ಚೌರಾಸಿಯವರಿಗೆ ಹೇಳುತ್ತಿದ್ದೆ. ಈ ದೇಶದಲ್ಲಿ ಹರಡುತ್ತಿರುವ ಫ್ಯಾಸಿಸಂ ಇದೇ ರೀತಿ ಬೆಳೆಯಲು ಬಿಟ್ಟರೆ ಮೀಡಿಯಾ ಕೂಡಾ ಸುರಕ್ಷಿತವಾಗಿರುವುದಿಲ್ಲ ಎಂದು ಹೇಳಿದೆ. RSS ಕಚೇರಿಗಳಲ್ಲಿ ತಯಾರಾಗುವ ಸ್ಕ್ರಿಪ್ಟ್ ಗಳನ್ನು ತಂದು ನಿಮ್ಮ ಬಳಿ ಓದಿಸುತ್ತಾರೆ. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಕಚೇರಿಗಳಲ್ಲಿ ಸ್ಕ್ರಿಪ್ಟುಗಳು ತಯಾರಾಗುತ್ತಿದ್ದವಂತಲ್ಲಾ ಹಾಗೆ.

ನಿಮಗೆ ನಿಜಕ್ಕೂ ನಿಮ್ಮ ದೇಶಭಕ್ತಿಯನ್ನು ತೋರಿಸಲೇಬೇಕು ಅಂತಿದ್ದರೆ, ಇದನ್ನು ನೆನಪಿಟ್ಟುಕೊಳ್ಳಿ. ಕೆಲವು ಮಾದ್ಯಮದವರು ಹೇಳುತ್ತಿದ್ದರು. JNU ತೆರಿಗೆದಾರರ ಹಣದಲ್ಲಿ ನಡೆಯುತ್ತದೆ ಎಂದು. ಹೌದು. ಇದು ನಿಜವೇ. JNU ನಡೆಯುವುದು ತೆರಿಗೆದಾರರ ಹಣದಿಂದ, ಸಬ್ಸಿಡಿಯಿಂದ. ಆದರೆ ಇಲ್ಲಿ ಪ್ರಶ್ನೆ ಬರುತ್ತದೆ. ವಿಶ್ವವಿದ್ಯಾಲಯ ಇರುವುದು ಯಾತಕ್ಕೆ? ವಿಶ್ವವಿದ್ಯಾಲಯಗಳು ಇರುವುದು ಸಮಾಜದ ಸಾಮಾನ್ಯ ಪ್ರಜ್ಞೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಸಿಸುವ ಕೆಲಸ ಮಾಡಲು. ವಿಮರ್ಶಾತ್ಮಕ ಆಲೋಚನಾ ದೃಷ್ಟಿಯನ್ನು ಬೆಳೆಸುವ ಕೆಲಸವನ್ನು ವಿಶ್ವವಿದ್ಯಾಲಯಗಳು ಮಾಡಬೇಕು. ಈ ಕರ್ತವ್ಯದಲ್ಲಿ ವಿಶ್ವವಿದ್ಯಾಲಯಗಳು ವಿಫಲವಾದರೆ ಆಗ ರಾಷ್ಟ್ರವೇ ಇರುವುದಿಲ್ಲ ಮಾತ್ರವಲ್ಲ ಅಲ್ಲಿ ಜನರ ಪಾಲ್ಗೊಳ್ಳುವಿಕೆಯೂ ಇರುವುದಿಲ್ಲ. ಆಗ ದೇಶ ಅನ್ನುವುದು ಬಂಡವಾಳಶಾಹಿಗಗಳು ತಿನ್ನುವ ಮೇವಷ್ಟೇ ಆಗಿಬಿಡುತ್ತದೆ. ಶೋಷಣೆ ಮತ್ತು ಲೂಟಿಗೆ ದೇಶ ಈಡಾಗುತ್ತದೆ. ಜನರ ಸಂಸ್ಕೃತಿ, ಮೌಲ್ಯಗಳು, ಹಕ್ಕುಗಳು ಇವೆಲ್ಲ ಇರದೇ ಹೋದರೆ ದೇಶ ಇರುವುದೇ ಇಲ್ಲ. ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಕನಸಿದ ದೇಶದ ಪರವಾಗಿ ನಾವಿದ್ದೇವೆ. ಸರ್ವರಿಗೂ ಸಮಪಾಲು- ಸಮಬಾಳು ಎಂಬ ಕನಸಿನ ಪರವಾಗಿ, ಸರ್ವರ ಬದುಕುವ ಹಕ್ಕಿನ ಪರವಾಗಿ, ಎಲ್ಲರಿಗೂ ಗಂಜಿ, ನೀರು ಮತ್ತು ಸೂರು ಪಡೆಯುವ ಹಕ್ಕಿನ ಪರವಾಗಿ ನಾವು ನಿಲ್ಲುತ್ತೇವೆ. ಈ ಕನಸುಗಳ ಪರವಾಗಿ ನಾವೆಲ್ಲ ನಿಲ್ಲಬೇಕೆಂದು ರೋಹಿತ್ ವೇಮುಲ ತನ್ನ ಅಮೂಲ್ಯ ಜೀವವನ್ನೇ ಅರ್ಪಿಸಿದ್ದಾನೆ. ಆದರೆ ಈ ಸಂಘಿಗಳಿಗೆ ನಾನು ಹೇಳಲಿಚ್ಛಿಸುತ್ತೇನೆ. ನಾಚಿಕೆಯಾಗಬೇಕು ನಿಮ್ಮ ಸರ್ಕಾರಕ್ಕೆ ಎಂದು. ಕೇಂದ್ರ ಸರ್ಕಾರಕ್ಕೆ ಸವಾಲೆಂದರೆ, ರೋಹಿತ್ ಪ್ರಕರಣೆದಲ್ಲಿ ನೀವು ಏನೇನು ಮಾಡಿದ್ದಿರೋ ಅದನ್ನು ಮಾಡಲು JNU ನಲ್ಲಿ ನಾವು ಬಿಡುವುದಿಲ್ಲ. ರೋಹಿತ್ ನ ಬಲಿದಾನವನ್ನು ಸ್ಮರಿಸಿಕೊಂಡು ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ದೃಢವಾಗಿ ನಿಂತೇ ನಿಲ್ಲುತ್ತೇವೆ.

ಪಾಕಿಸ್ತಾನ, ಬಾಂಗ್ಲಾದೇಶ ಬಿಟ್ಟಾಕಿ, ನಾವು ಹೇಳುತ್ತೇವೆ ಇಡೀ ಜಗತ್ತಿನ ಬಡವರೆಲ್ಲಾ ಒಂದಾಗಬೇಕು, ಶ್ರಮಿಕರೆಲ್ಲಾ ಒಂದಾಗಬೇಕು.  ನಾವು ಪ್ರಪಂಚದ ಮಾನವತೆಗೆ, ಭಾರತದ ಮಾನವತೆಗೆ ಶಿರಭಾಗುತ್ತೇವೆ. ಇಂದು ಮಾನವತೆಯ ವಿರುದ್ಧ ನಿಂತಿರುವ ಸಮೂಹ ಯಾವುದು ಎಂಬುದನ್ನು ಕಂಡುಕೊಂಡಿದ್ದೇವೆ. ಇದು ಇಂದು ನಮ್ಮೆದುರಿನ ಗಂಭೀರ ವಿಷಯ. ಇದನ್ನು ನಾವು ಮರೆಯಕೂಡದು. ಜಾತಿವಾದದ ಆ ಮುಖವನ್ನು, ಮನುವಾದದ ಆ ಮುಖವನ್ನು ಹಾಗೂ ಬ್ರಾಹ್ಮಣವಾದ-  ಬಂಡವಾಳವಾದದ ನಡುವಿನ ಮೈತ್ರಿಯ ಆ ಮುಖವನ್ನು ನಾವು ಮರೆಯಕೂಡದು. ಈ ಮುಖಗಳನ್ನು ನಾವು ಬಯಲುಗೊಳಿಸಬೇಕು. ನಾವು ಈ ದೇಶದಲ್ಲಿ ನಿಜವಾದ ಪ್ರಜಾಪ್ರಭುತ್ವ, ನಿಜವಾದ ಸ್ವಾತಂತ್ರ್ಯ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯಗಳನ್ನು ಸ್ಥಾಪಿಸಬೇಕಾಗಿದೆ. ಅಂತಹ ಸ್ವಾತಂತ್ರ್ಯ ಬರುತ್ತದೆ. ಅದು ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವಗಳೊಂದಿಗೆ ಬರುತ್ತದೆ. ಈ ಕಾರಣದಿಂದಾಗಿಯೇ ನಾನು ನನ್ನ ಮಿತ್ರರಲ್ಲಿ ವಿನಂತಿಸುವುದೇನೆಂದರೆ ಎಲ್ಲರೂ ನಿಮ್ಮ ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಡಿ. ನಾವು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ನಮ್ಮ ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕಾಗಿದೆ. ನಮ್ಮ ಈ ದೇಶವನ್ನು ಉಳಿಸಿಕೊಳ್ಳಬೇಕಿದೆ. ನಮ್ಮ ದೇಶ ಒಂದಾಗಿರಲು ನಾವು ಮೊದಲು ಒಗ್ಗಟ್ಟಾಗಿರಬೇಕಾಗಿದೆ. ಆ ಮೂಲಕವೇ ಇಲ್ಲಿ ಭಯೋತ್ಪಾದಕರಿಗೆ, ಭಯೋತ್ಪಾದನೆಗೆ ಆಶ್ರಯತಾಣ ಒದಗಿಸುವ ವಿಧ್ವಂಸಕಾರಿ ಶಕ್ತಿಗಳನ್ನು ವಿರೋಧಿಸಲು ನಾವು ಐಕ್ಯತೆಯಿಂದ ಇರಬೇಕಾಗಿದೆ.

ಕಸಬ್ ಯಾರು? ಅಫ್ಜಲ್ ಗುರು ಯಾರು? ತಮ್ಮನ್ನು ತಾವೇ ಉಡಾಯಿಸಿಕೊಳ್ಳುವ ಮಟ್ಟಕ್ಕೆ ತಲುಪುವ ಇವರೆಲ್ಲಾ ಯಾರು? ಈ ಪ್ರಶ್ನೆಯನ್ನು ಒಂದು ವಿಶ್ವವಿದ್ಯಾಲಯದಲ್ಲಿ ಎತ್ತಲಾಗದಿದ್ದರೆ ನನ್ನ ಪ್ರಕಾರ ಆ ವಿಶ್ವವಿದ್ಯಾಲಯವನ್ನು ಇಟ್ಟುಕೊಂಡಿರುವುದರಲ್ಲಿ ಅರ್ಥವಿಲ್ಲ.

ಹಿಂಸೆಯ ಅರ್ಥ ನಮಗೆ ಸರಿಯಾಗಿ ಆಗದಿದ್ದರೆ ನಾವು ಅದನ್ನು ನೋಡುವುದು ಹೇಗೆ? ಬಂದೂಕುಗಳಿಂದ ಜನರನ್ನು ಕೊಲ್ಲುವುದು ಮಾತ್ರ ಹಿಂಸೆಯಲ್ಲ. JNU ಆಡಳಿತಾಂಗವು ಸಂವಿಧಾನದಲ್ಲಿ ದಲಿತರಿಗೆ ನೀಡಿರುವ ಹಕ್ಕುಗಳನ್ನು ಗೌರವಿಸಲು ನಿರಾಕರಿಸಿದರೆ ಅದೂ ಹಿಂಸೆಯೇ ಆಗುತ್ತದೆ. ಇದನ್ನೇ ಸಾಂಸ್ಥಿಕ ಹಿಂಸೆ ಎಂದು ಹೇಳುವುದು. ಈ ಮಂದಿ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಯಾವುದು ನ್ಯಾಯ ಎಂದು ತೀರ್ಮಾನಿಸುವುದು ಯಾರು? ಬ್ರಾಹ್ಮಣ್ಯ ಪ್ರಾಬಲ್ಯ ಪಡೆದಿದ್ದಾಗ ದಲಿತರಿಗೆ ದೇಗುಲ ಪ್ರವೇಶವಿರಲಿಲ್ಲ. ಆ ಕಾಲದಲ್ಲಿ ಅದೇ ನ್ಯಾಯವಾಗಿತ್ತು. ಬ್ರಿಟಿಷರ  ವಸಾಹತುಶಾಗಿ ಆಳ್ವಿಕೆಯ ಕಾಲದಲ್ಲಿ  ನಾಯಿಗಳಿಗೂ, ಭಾರತೀಯರಿಗೂ ಹೊಟೆಲುಗಳ ಒಳಗೆ ಪ್ರವೇಶವಿರಲಿಲ್ಲ. ಆಗ ಅದೇ ಅವರಿಗೆ ನ್ಯಾಯ. ಅವರ ಈ ನ್ಯಾಯಕ್ಕೆ ನಾವು ಸವಾಲೊಡ್ಡಿದೆವು. ಹಾಗೆಯೇ ಇಂದೂ ಸಹ RSS ಮತ್ತು ABVPಗಳ ನ್ಯಾಯದ ವ್ಯಾಖ್ಯಾನಕ್ಕೆ ನಾವು ಸವಾಲು ಹಾಕುತ್ತಿದ್ದೇವೆ. ನೀವು ಹೇಳುವ ನ್ಯಾಯ ನಾವು ಹೇಳುವ ನ್ಯಾಯದ ಅರ್ಥಕ್ಕೆ ಸರಿಹೊಂದದಿದ್ದರೆ ನಿಮ್ಮ ನ್ಯಾಯವನ್ನು ನಾವು ಒಪ್ಪುವುದಿಲ್ಲ. ನಿಮ್ಮ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಒಪ್ಪುವುದಿಲ್ಲ. ಈ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಸಂವಿಧಾನದ ಹಕ್ಕುಗಳು ಸಿಕ್ಕಿದ ದಿನವೇ ನಾವು ಈ ದೇಶ ಸ್ವತಂತ್ರಗೊಂಡಿದೆ ಎಂದು ಒಪ್ಪಿಕೊಳ್ಳುವುದು. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನದಡಿ ಸಮಾನ ಎಂದು ಗುರುತಿಸಲ್ಪಟ್ಟಾಗ ಮಾತ್ರ ಅಲ್ಲಿ ನ್ಯಾಯಸ್ಥಾಪನೆಯಾಗಿದೆ ಎಂದು ಒಪ್ಪುತ್ತೇವೆ.

JNUSU ಯಾವುದೇ ಹಿಂಸೆಯನ್ನಾಗಲೀ ಯಾವುದೇ ಭಯೋತ್ಪಾದಕನನ್ನಾಗಲೀ, ಯಾವುದೇ ಭಯೋತ್ಪಾದಕ ದಾಳಿಯನ್ನಾಗಲೀ ಅಥವಾ ಯಾವುದೇ ದೇಶವಿರೋಧಿ ಚಟುವಟಿಕೆಯನ್ನಾಗಲೀ ಬೆಂಬಲಿಸುವುದಿಲ್ಲ. ಈ ಮಾತನ್ನು ನಾನು ಎಷ್ಟು ಸಲ ಬೇಕಾದರೂ ಮತ್ತೆ ಮತ್ತೆ ಹೇಳುತ್ತೇನೆ. ಪಾಕಿಸ್ತಾನ್ ಜಿಂದಾಬಾದ್” ಎಂದು ಕೂಗಿರುವ ಆದರೆ ನಮಗೆ ತಿಳಿಯದ ಕೆಲವರಿದ್ದಾರೆ. ಅಂತಹ ವ್ಯಕ್ತಿಗಳಿಗೆ JNUSU ಛೀಮಾರಿ ಹಾಕುತ್ತದೆ. JNU ಆಡಳಿತಾಂಗ ಮತ್ತು ABVPಗೆ ನಾನು ಒಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ಈ ಕ್ಯಾಂಪಸ್ಸಿನಲ್ಲಿ ಸಾವಿರಾರು ಘಟನೆಗಳು ಜರುಗುತ್ತಿರುತ್ತವೆ. ABVPಯ ಘೋಷಣೆಗಳಿಗೆ ದಯಮಾಡಿ ಕಿವಿಕೊಟ್ಟು ಕೇಳಿ. ಅವರು ಹೇಳುತ್ತಾರೆ ಕಮ್ಯುನಿಷ್ಟ್ ನಾಯಿಗಳು” ಎಂದು. “ಅಫ್ಜಲ್ ಗುರುನ ಕುನ್ನಿಗಳು”ಎಂದು ಘೋಷಣೆ ಕೂಗುತ್ತಾರೆ. ಜಿಹಾದಿಗಳ ಮಕ್ಕಳು ಎನ್ನುತ್ತಾರೆ. ಹಾಗಾದರೆ ನಮಗೆಲ್ಲಾ ನಮ್ಮ ಸಂವಿಧಾನ ನಾಗರಿಕರ ಹಕ್ಕುಗಳನ್ನು ನೀಡಿದೆ ಎಂಬುದನ್ನು ನೀವು ಒಪ್ಪುವುದಿಲ್ಲವಾ? ಹಾಗಾದರೆ ನಮ್ಮ ತಂದೆತಾಯಿಯನ್ನು ನಾಯಿ ಎಂದು ಕರೆಯುವುದು ನಮ್ಮ ಸಂವಿಧಾನದತ್ತವಾದ ಹಕ್ಕುಗಳನ್ನು ಅವಮಾನಿಸಿದಂತಲ್ಲವೇ? ಈ ಪ್ರಶ್ನೆಯನ್ನು ನಾನು ABVPಗೆ ಕೇಳಲು ಇಚ್ಛಿಸುತ್ತೇನೆ. JNU ಆಡಳಿತಾಂಗಕ್ಕೆ ನಾನು ಈ ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ. ನೀವು ಯಾರಿಗಾಗಿ ಕೆಲಸ ಮಾಡುತ್ತೀರಿ ಸ್ವಾಮಿ? ಯಾವುದರ ಆಧಾರದಲ್ಲಿ ನೀವು ಕೆಲಸ ಮಾಡುತ್ತಿದ್ದೀರಿ? ಇವತ್ತು ನಮಗೆ ಸ್ಪಷ್ಟವಾಗಿದೆ. JNU ಆಡಳಿತಾಂಗ ಮೊದಲು ಅನುಮತಿ ನೀಡುತ್ತದೆ. ನಂತರ ನಾಗಪುರದಿಂದ ಒಂದು ಕರೆ ಬಂದ ಕೂಡಲೇ ಅದು ಅನುಮತಿ ನಿರಾಕರಿಸುತ್ತದೆ. ಹೀಗೆ ಅನುಮತಿ ಕೊಟ್ಟು ವಾಪಾಸು ತೆಗೆದುಕೊಳ್ಳುವ ಅದರ ನೀತಿ ಫೆಲೋಶಿಪ್ ಗಳನ್ನು ನೀಡಿ ವಾಪಾಸು ತೆಗೆದುಕೊಳ್ಳುವಷ್ಟೇ ಸಲೀಸಾಗಿಬಿಟ್ಟಿದೆ ಇವರಿಗೆ. ಅವರು ಮೊದಲಿಗೆ ಫೆಲೋಶಿಪ್ ಕೊಡುವುದಾಗಿ ಘೋಷಣೆ ಮಾಡಿ ನಂತರ ಮತ್ತೆ ಇಲ್ಲಾ ಫೇಲೋಶಿಪ್ ರದ್ದು ಮಾಡಲಾಗಿದೆ ಎಂದು ಹೇಳಿದ್ದರಲ್ಲಾ ಹಾಗೆ. ಇದು ಸಂಘಿ ಚಾಳಿ. ಇದು RSS-ABVP ಚಾಳಿ. ಇಡೀ ದೇಶದಲ್ಲೇ ಅವರು ಜಾರಿಗೊಳಿಸಲು  ಹೊರಟಿರುವ ಚಾಳಿ. ಅದೇ ರೀತಿಯಲ್ಲಿ JNUವನ್ನೂ ನಡೆಸಲು ಹೊರಟಿದ್ದಾರೆ ಇವರು.

JNU ಉಪಕುಲಪತಿಗಳಿಗೆ ನಾವು ಕೇಳುವ ಪ್ರಶ್ನೆ ಇದು. JNUನಲ್ಲಿ ಪೋಸ್ಟರ್ ಗಳನ್ನು ಹಾಕಲಾಗಿತ್ತು. ಮೆಸ್ ಒಳಗೆ ಕರಪತ್ರಗಳನ್ನು ಹಂಚಲಾಗಿತ್ತು. ನಿಮಗೆ ಸಮಸ್ಯೆಯೆನಿಸಿದ್ದರೆ ನೀವು ಆಗಲೇ ಅನುಮತಿ ನಿರಾಕರಿಸಬೇಕಿತ್ತು. ಆದರೆ ನೀವು ಮಾಡಿದ್ದೇನು? ಮೊದಲು ಅನುಮತಿ ಕೊಟ್ಟು ಆಮೇಲೆ ಅದನ್ನು ವಾಪಾಸು ಪಡೆಯಲು ಕಾರಣವೇನಿತ್ತು ಎಂದು ನಮಗೆ ಸ್ಪಷ್ಟಪಡಿಸಿ.  ಈ ಮಂದಿಯ ಬಗ್ಗೆಯೂ ನಾನು ಸತ್ಯ ಹೇಳಲಿಚ್ಛಿಸುತ್ತೇನೆ. ದಯಮಾಡಿ ಅವರನ್ನು ದ್ವೇಷಿಸಬೇಡಿ.  ಯಾಕೆಂದರೆ ದ್ವೇಷಗುಣದವರಲ್ಲ ನಾವು. ನಿಜ ಅಂದರೆ ಅವರ ಬಗ್ಗೆ ನನಗೆ ಪಾಪ ಅನಿಸುತ್ತದೆ. ಅವರು ಒಂಥರಾ ಬುಟ್ಟಿಕೋಳಿಗಳಂತೆ ಕುಣಿಯುತ್ತಿದ್ದಾರೆ.  ಯಾಕೆ ಹೇಳಿ? ಯಾಕಂದ್ರೆ ಗಜೇಂದ್ರ ಚೌಹಾಣನನ್ನು ಕೂರಿಸಿಬಿಟ್ಟಹಾಗೆ ಹೋದಲ್ಲೆಲ್ಲಾ ಚೌಹಾಣ್, ದಿವಾನ್ ಮತ್ತು ಫರ್ಮಾನ್ ಗಳನ್ನು ಕೂರಿಸಿಬಿಡುತ್ತೇವೆ ಅನ್ನುವ ಹುಂಬತನ ಅವರಿಗೆ. ಫರ್ಮಾನ್ ಗಳನ್ನು ಕಳಿಸಿ ಅವರಿಂದ ಕೆಲಸ ಮಾಡಿಸಿಕೊಳ್ಳಬಹುದು ಅನ್ನುವುದು ಅವರ ಹಕೀಕತ್ತು. ಅದಕ್ಕಾಗಿಯೇ, ಅವರು ಭಾರತ್’ಮಾತಾ ಕೀ ಜೈ’ಅಂದ ಕೂಡಲೇ ನಿಮಗೆ ಅರ್ಥವಾಗಿಬಿಡಬೇಕು ಅವರು ಸಧ್ಯದಲ್ಲೇ ಸಂದರ್ಶನಕ್ಕೆ ಹಾಜರಾಗುತ್ತಿದ್ದಾರೆ ಅಂತ. ಆದರೆ ಅವರಿಗೆ ಕೆಲಸ ಸಿಕ್ಕಿದ ಕೂಡಲೇ ದೇಶಭಕ್ತಿಯನ್ನೂ ಮೂಲೆಗೆ ಎಸೆದು ಭಾರತ ಮಾತೆಯನ್ನೂ ಮರೆತು ಕೂರುವ ಜನ ಅವರು. ಅವರು ಎಂದೂ ಗೌರವಿಸದೇ ಇರುವ ತ್ರಿವರ್ಣ ಧ್ವಜ ಹೋಗಲಿ ಕೇಸರಿ ಧ್ವಜವನ್ನೂ ಅವರು ಗೌರವಿಸುವುದಿಲ್ಲ. ಅಂತಾ ದುಸ್ಥಿತಿಗೆ ತಲುಪುತ್ತಾರೆ.

ಇದು ಯಾವ ಸೀಮೆಯ ದೇಶಭಕ್ತಿ? ಉದ್ಯೋಗದಾತನಾದವನು ಉದ್ಯೋಗಿಯನ್ನೂ, ರೈತನು ಕೃಷಿಕೂಲಿಗಾರನನ್ನೂ, ಬಂಡವಾಳಗಾರ ಉದ್ಯೋಗಿಗಳನ್ನೂ, ಮತ್ತು 15,000 ರೂಪಾಯಿಗೆಲ್ಲಾ ಕೆಲಸ ಮಾಡುವ TV ಜರ್ನಲಿಸ್ಟುಗಳನ್ನು ಅವರ CEO ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ ಅದೆಂತಹ ದೇಶಭಕ್ತಿ ಎಂದು ನಾನು ಕೇಳುತ್ತೇನೆ. ABVP-RSS ದೇಶಭಕ್ತಿಯೇನಿದ್ದರೂ ಇಂಡಿಯಾ-ಪಾಕಿಸ್ತಾನ್ ಮ್ಯಾಚಿಗಷ್ಟೇ ಸೀಮಿತವಾಗಿಬಿಡುತ್ತದೆ. ಈ ಕಾರಣಕ್ಕಾಗಿಯೇ ಅವರು ಬೀದಿಯಲ್ಲಿ ಹೋಗುವಾಗ ಒಬ್ಬ ತಳ್ಳುಗಾಡಿಯ ಹಣ್ಣುಮಾರುವವ ಬಡಪಾಯಿಯನ್ನೂ ಅವಮಾನಿಸುವ ಕೆಲಸಕ್ಕೆ ಕೈಹಾಕುತ್ತಾರೆ. ಹಣ್ಣಿನಂಗಡಿಯವ ಸ್ವಾಮೀ”, ಡಜನ್ನು ಬಾಳೆಹಣ್ಣಿಗೆ 40 ರೂಪಾಯಿ” ಅಂದ ಕೂಡಲೇ ಇವರು “ನೀವೆಲ್ಲಾ ನಮ್ಮನ್ನು ಲೂಟಿ ಮಾಡ್ತಾ ಇದೀರಾ, ನಿಂಗೆ ಕೊಡೋದು ಬರೀ 30 ರೂಪಾಯಿ” ಎಂದು ಗದರಿಸುತ್ತಾರೆ. ಅದೇ ಎಂದಾದರೂ ಅದೇ ಹಣ್ಣಿನಂಗಡಿಯವ ತಿರುಗಿಬಿದ್ದು  “ದೊಡ್ಡ ಖದೀಮರು ನೀವೇ. ಕೋಟಿಗಟ್ಟಲೇ ಲೂಟಿ ಮಾಡಿರೋರು ನೀವು” ಅಂತ ಎಲ್ಲಾದರೂ ಹೇಳಿದರೆ ಮುಗಿದೇ ಹೋಯ್ತು ಅವನು ರಾಷ್ಟ್ರದ್ರೋಹಿಯೇ ಆಗಿಬಿಡುತ್ತಾನೆ.


ABVPಯಲ್ಲಿ ಅನೇಕ ಗೆಳೆಯರು ನನಗೆ ಗೊತ್ತು. ಅವರಿಗೆ ಆಗಾಗ ಕೇಳುತ್ತಿರುತ್ತೇನೆ. “ನಿಜಕ್ಕೂ ನಿಮಗೆ ದೇಶಪ್ರೇಮ ಅನುಭವವಾಗುತ್ತಾ?” ಅಂತ. ಅದಕ್ಕವರು ಹೇಳೋದೇನು ಗೊತ್ತೇ? “ಏನು ಮಾಡೋದು ಗುರೂ, ಸರ್ಕಾರ ಅಧಿಕಾರದಲ್ಲಿರೋದು ಐದೇ ವರ್ಷ, ಆಗಲೇ ಎರಡು ವರ್ಷ ಮುಗಿದೇ ಹೋದ್ವು. ಮೂರು ವರ್ಷದ ಟಾಕ್ ಟೈಮ್ ಅಷ್ಟೇ ಬಾಕಿ ಇರೋದು. ಏನೇ ಮಾಡೋದಿದ್ರೂ ಅಷ್ಟರೊಳಗಡೆಯೇ ಮಾಡಿಕೊಂಡುಬಿಡಬೇಕು” ಇದು ಅವರ ಉತ್ತರ. ಹೀಗಾಗಿ ನಾನು ಅವರಿಗೆ ಹೇಳುವುದೇನೆಂದರೆ ನೀವು JNU ಬಗ್ಗೆ ಸುಳ್ಳು ಹೇಳಿದ್ದೇ ಆದರೆ ನಾಳೆ ಮತ್ಯಾರಾದರೂ ನಿಮ್ಮ ಕೊಳ್ಳುಪಟ್ಟಿಯನ್ನೂ ಹಿಡಿದು ಕೇಳಬಹುದು. ಹಾಗೆ ಮಾಡುವವರು ಬೇರೆ ಯಾರೂ ಆಗಿರುವುದಿಲ್ಲ. ನಿಮ್ಮ ದೋಸ್ತುಗಳೇ ಆಗಿರುತ್ತಾರೆ. ರೈಲುಭೋಗಿಗಳಲ್ಲಿ ಬೀಫ್ ಇದೆ ಅಂತ ಹುಡುಕಿದ್ದರಲ್ಲಾ ಅಂತವರು ಯಾರಾದ್ರೂ ನಿಮ್ಮನ್ನೂ ಕೇಳಬಹುದು. ಯಾಕಂದರೆ ನೀವೂ ಸಹ JNU ವಿದ್ಯಾರ್ಥಿಗಳೇ ಆಗಿರುತ್ತೀರಲ್ಲ? ಈಗ ನೀವು ಮಾಡುತ್ತಿರುವುದೇನು, ಅದರಲ್ಲಿ ನಿಮಗೂ ಇರುವ ಅಪಾಯ ಏನು ಎಂದು ನಿಮಗೆ ಅರ್ಥವಾಗುತ್ತಿದೆಯಾ?  ಹೀಗೆ ಕೇಳಿದ್ದಕ್ಕೆ ಅವರು ‘ಹೌದೌದು ಅದಕ್ಕೇ ನಾವು #JNUShutdown ವಿರೋಧಿಸ್ತೀವಿ’ ಅಂತ ಹೇಳಿದರು. ನಾ ಹೇಳಿದೆ ಓಹೋ ಬಾಳಾ ಗ್ರೇಟ್! ಮೊದಲು #JNUShutdown ಗೆ ಎಲ್ಲಾ ವಾತಾವರಣ ಸೃಷ್ಟಿ ಮಾಡೋದು, ನಂತರ ನೀವೂ JNUನಲ್ಲೇ ಇರುವುದು ಅಂತ ನೆನಪಾದ ಕೂಡಲೇ ನಾವೂ ವಿರೋಧಿಸ್ತೀವಿ ಅನ್ನುವುದು.

ಗೆಳೆಯರೆ, ಮಾರ್ಚ್ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ABVPಯವರು ಓಂ ಗುರುತು ಹಿಡಿದುಕೊಂಡು ನಿಮ್ಮ ಬಳಿ ಬರುತ್ತಾರಲ್ಲಾ ಆಗ ನೀವು ಅವರಿಗೆ ಕೇಳಬೇಕು. ಅಲ್ರಪ್ಪಾ, ನಾವು” ರಾಷ್ಟ್ರ-ವಿರೋಧಿಗಳು, ಜಿಹಾದಿಗಳು, ಭಯೋತ್ಪಾದಕರು. ನೀವೀಗ ನಮ್ಮ ಓಟು ಪಡೆದುಬಿಟ್ಟರೆ ನೀವೂ ರಾಷ್ಟ್ರ ವಿರೋಧಿಗಳಾಗಿಬಿಡುವುದಿಲ್ಲವಾ” ಅಂತ.  ಆದ ಅವರು “ಹೇ ಇಲ್ಲಾ ಇಲ್ಲಾ, ನೀವಲ್ಲ, ಕೆಲವರು ಮಾತ್ರ ಹಾಗೆ ಮಾಡಿದವರು’ ಎನ್ನುತ್ತಾರೆ. ಅದಕ್ಕೆ ನೀವು “ಮತ್ತೆ ನೀವು ಆವೊತ್ತೇ ಹಾಗೆ ಘೋಷಣೆ ಕೂಗಿದವರು ಇಡೀ JNU ವಿದ್ಯಾರ್ಥಿಗಳಲ್ಲ, ಯಾರೋ ಕೆಲವರು ಮಾತ್ರ ಅಂತ ಮೀಡಿಯಾಗಳಿಗೆ ಹೇಳೋದಿಕ್ಕೆ ನಿಮಗೆ ಯಾಕೆ ಗಂಟಲು ಕಟ್ಟಿಹೋಗಿತ್ತು? VC ಎದುರು ಹಾಗೆ ಹೇಳೋದಿಕ್ಕೇನಾಗಿತ್ತು? ರಿಜಿಸ್ಟ್ರಾರ್ ಎದರು ಇದನ್ನ ಹೇಳೋದಿಕ್ಕೇನಾಗಿತ್ತು ನಿಮಗೆ?” ಅಂತ ಕೇಳಬೇಕು.

ಈಗ ಆ ಯಾರೋ ಕೆಲವು ಜನರ ಕಥೆ ಏನು? ಅವರೇನಾದರೂ ನಾವು ಪಾಕಿಸ್ತಾನ್ ಜಿಂದಾಬಾದ್’ ಅಂತ ಕೂಗೇ ಇಲ್ಲ ಅನ್ನುತ್ತಿದ್ದಾರಾ? ಆ ಕೆಲವು ಜನ ನಾವು ಭಯೋತ್ಪಾದನೆಗೆ ಬೆಂಬಲಿಸುವುದಿಲ್ಲ ಅನ್ನುತ್ತಿದ್ದಾರಲ್ಲವೇ? ನಾವು ನ್ಯಾಯಬದ್ಧವಾಗಿ ಪಡೆದಿದ್ದ ಅನುಮತಿಯನ್ನು ಹಿಂಪಡೆದಿದ್ದು ಅವರಿಗೆ ತಮ್ಮ ಪ್ರಜಾತಾಂತ್ರಿಕ ಹಕ್ಕಿನ ಮೇಲಿನ ಹಲ್ಲೆ ಎಂದು ಆ ಕೆಲವು ಜನ ಹೇಳುತ್ತಿದ್ದಾರಾ? ದೇಶದ ಯಾವುದಾದರೂ ಭಾಗದಲ್ಲಿ ಹೋರಾಟ ನಡೆದರೆ ಅದರ ಪರವಾಗಿ ನಿಲ್ಲುತ್ತೇವೆ ಅನ್ನುವವರು ಆ ಕೆಲವು ಮಂದಿಯಲ್ಲವೇ?. ಅವರಿಗೆ ಈ ಸಣ್ಣ ವಿಷಯ ಅರ್ಥವಾಗುವುದಿಲ್ಲ. ನಮ್ಮ ಮೇಲೆ ಭಯೋತ್ಪಾದಕರನ್ನು ಬೆಂಬಲಿಸುವ ಗೂಬೆ ಕೂರಿಸಿದವರು? ಆದರೆ ಒಂದು ಸಣ್ಣ ನೋಟೀಸ್ ನೋಡಿದೊಡನೆ ಇಲ್ಲಿ ನೆರೆದಿರುವ ನಿಮಗೆಲ್ಲರಿಗೂ ಇದು ಅರ್ಥವಾಗಿದೆ ಎಂದು ನನಗೆ ಖಾತ್ರಿಯಿದೆ. ಈ ಕ್ಯಾಂಪಸ್ ನಲ್ಲಿರುವ ಪ್ರತಿ ವಿದ್ಯಾರ್ಥಿಗೂ ನೀವು ತಿಳಿಹೇಳಬೇಕಾಗಿದೆ. ABVP ನಮ್ಮ JNUವನ್ನು ಒಡೆಯಲು ಯತ್ನಿಸುತ್ತಿದೆ ಆದರೆ JNUವನ್ನು ಒಡೆಯಲು ನಾವು ಬಿಡುವುದಿಲ್ಲ. JNU ಚಿರಾಯುವಾಗಲಿ! ದೇಶದಲ್ಲಿ ಈಗ ನಡೆಯುತ್ತಿರುವ ಎಲ್ಲಾ ಹೋರಾಟಗಳಿಗೂ ಜಯವಾಗಲಿ. ಅವೆಲ್ಲವುಗಳಲ್ಲಿ JNU ಭಾಗವಹಿಸುತ್ತದೆ ಮತ್ತು ಪ್ರಜಾಪ್ರಭುತ್ವದ ಧ್ವನಿಯನ್ನು, ಸ್ವಾತಂತ್ರ್ಯದ ಧ್ವನಿಯನ್ನು ಗಟ್ಟಿಗೊಳಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಧ್ವನಿಯನ್ನು ಗಟ್ಟಿಗೊಳಿಸುತ್ತದೆ.

ನಾವು ಮುನ್ ಮುಂದಕ್ಕೆ ನಡೆಯುತ್ತೇವೆ. ಗೆಲುವು ನಮ್ಮದು, ಸೋಲು ದ್ರೋಹಿಗಳದ್ದು. ಇಷ್ಟು ಹೇಳುತ್ತಾ ನಿಮ್ಮೆಲ್ಲರಲ್ಲಿ ಒಗ್ಗಟ್ಟಾಗಿರಲು ಮನವಿ ಮಾಡಿಕೊಳ್ಳುತ್ತೇನೆ.

ಜೈ ಭೀಮ್, ಲಾಲ್ ಸಲಾಂ                                     
: ಈ ಪೂರ್ಣ ಪಠ್ಯ  ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ 18-02-2016ರ ಸಂಚಿಕೆಯಲ್ಲಿ ಪ್ರಕಟವಾಗಿದೆ.


ಶುಕ್ರವಾರ, ಫೆಬ್ರವರಿ 5, 2016

ಕೃಷಿಯಲ್ಲಿ ನಾಟಿಕೋಳಿಗಳ ಚಮತ್ಕಾರ, ಕೂಲಿ ಬೇಡದ ಆಳುಗಳು

- ಕಿಶನ್ ರಾವ್ ಕುಲಕರ್ಣಿ
ಸೌಜನ್ಯ: ಕಣಜ

ತಮ್ಮ ಪಾಡಿಗೆ ತಾವು ಹಾರಿಡಿಕೊಂಡು ಹೊಗುವ ಬೆಳ್ಳಕ್ಕಿ, ಕೋಳಿಗಳು ಅದ್ಹೇಗಪ್ಪಾ ಕೂಲಿ ಆಳಾಗಿ ಹೊಲ ಕಾಯುವುದು ಅಂತ ನೀವು ಹುಬ್ಬೇರಿಸಬೇಡಿ, ಅಂತಹದ್ದೊಂದು ಮಾದರಿ ಕೃಷಿ ಪದ್ಧತಿ ಕೆಲವೊಂದು ಗ್ರಾಮೀಣ ಪ್ರದೇಶದಲ್ಲಿ ಈಗಲೂ ಇದೆ ನೋಡಿ.
ಮೊದಲೇ ಸರಿಯಾಗಿ ಮಳೆ ಇಲ್ಲ, ಅಂತದ್ರೊಳಗೆ ಶಿವಾಶಿವಾ ಅಂತ ಎರೆ ಹೊಲದಲ್ಲಿ ರೈತರು ಕಡಲೆ, ಜೋಳ ಬಿತ್ತನೆ ಮಾರುತ್ತಾರೆ. ಆದರೇನು ಮಾಡುವುದು ಕೀಡೆಗಳ ಹಾವಳಿ ಹೇಳತೀರದಂತಾಗಿರುತ್ತದೆ.
ಏನೆಲ್ಲ ಕಸರತ್ತು ಮಡಿದರೂ ಕೀಡೆಗಳು ನಿಯಂತ್ರಣಕ್ಕೆ ಬಾರದಿರುವುದನ್ನು ಕಂಡಾಗ ರೈತರು ಕೈ ಸೋತು ಕುಳಿತ ಸಂದರ್ಭದಲ್ಲಿ ಅಂಬರದಿಂದ ಹಾರಿ ಬಂದ ಬೆಳ್ಳಕ್ಕಿಗಳು ಮೆಲ್ಲ-ಮೆಲ್ಲಗೆ ಕಡಲೆ ಬೆಳೆಯಲ್ಲಿ ಇಳಿದು ತಮ್ಮ ಸೂಕ್ಷ್ಮ ದೃಷ್ಠಿ ಹರಿಸಿ ಚಳಿಗೆ ಮುದುಡಿಕೊಂಡು ಕುಳಿತ ಅಥವಾ ಎಲೆಯಲ್ಲಿ ಮರೆಯಗಿ ಕುಳಿತಂತಹ ಕೀಡೆಗಳ ಬೆನ್ನತ್ತಿ ಹುಡುಕಿ, ಹೆಕ್ಕಿ ತಿನ್ನಲು ಆರಂಭಿಸುತ್ತವೆ. ಕ್ರಮೇಣ ಕೀಡೆಗಳ ಸಂತತಿ ಕಡಿಮೆಯಗಿ ಬೆಳೆ ನಿಯಂತ್ರಣಕ್ಕೆ ಬಂರುತ್ತದೆ.
ಕಡಲೆ ಹೊಲಗಳಿಗೆ ಬರುತ್ತಿರುವ ಬೆಳ್ಳಕಿಗಳ ದಂಡು
“ಸಾಲ-ಸೂಲ ಮಡಿ ಕಡಲಿ ಬಿತ್ತಿದ್ವಿ, ಹೂ ಮೂಡದಕ್ಕಿಂತ ಮುಂಚೆ ಹುಳುಗಳು ಅಮರಿಕೊಂಡು ಕುಂತಿದ್ವು, ಇಂತಾದ್ರಾಗ ಏನ ಮಡಬೇಕಪಾ ಅಂತ ಚಿಂತಿಟ್ಟಾಗ ಈ ಪಕ್ಷಿಗಳೇ ಬಂದು ಬೆಳೆಗಲ್ಲಿದ್ದ ಹುಳುಗಳನ್ನೆ ಸ್ವಚ್ಚಮಡ್ಯಾವ ನೋಡ್ರಿ, ಕೈತುಂಬ ಕೂಲಿ ಕೊಡುತೀವಿ ಬರ್ರೋ… ಎಂದರೂ ಬಾರದ ಕೂಲ್ಯಾಳುಗಳು ಈ ಕಾಲ್ದಾಗ ಕೂಲಿ ಬಯಸದೇ ಬೆಳೆ ಹಸನ ಮಾಡಿ ಹೋಗುವ ಈ ಪಕ್ಷಿಗಳು ಬಂದಿದ್ದು ನಮ್ಮ ಪುಣ್ಯ ನೋಡ್ರಿ ” ಎಂದು ಕೀಡೆಯ ಹಾವಳಿಗೆ ನಲುಗಿದ ರೈತರು ಹೀಗೆ ಹೇಳುತ್ತಾರೆ.
ಪಕ್ಷಿಗಳಿಗೆ ಮರಕವಾಗುವ ರಾಸಾಯನಿಕ :
ಬೆಳ್ಳಕ್ಕಿಗಳು ಈ ಪ್ರಮಾಣದಲ್ಲಿ ಮೊದಲಿನಿಂದಲೂ ಬರುತ್ತವೆ. ಆದರೆ ಕ್ರಮೇಣ ಕೃಷಿಯಲ್ಲಿ ರೈತರು ಅನುಸರಿಸುತ್ತಿರುವ ವಿಷ ಚಟುವಟಿಕೆಗಳು ಪಕ್ಷಿಗಳಿಗೆ ಮರಕವಾಗುತ್ತಿರುವುದರಿಂದಲೇ ಪಕ್ಷಿಗಳ ಸಂಖ್ಯೆ ಕ್ರಮೇಣ ಇಳಿಮುಖವಾಯಿತು, ಜೊತೆಗೆ ಕ್ರಿಮಿನಾಶಕಗಳ ಬಳಕೆಯಿಂದ ಅವುಗಳ ಸಂತತಿಯ ಮೇಲೆ ಪರಿಣಾಮ ಬೀರಿ ಪಕ್ಷಿಗಳು ನಸಿಸಲು ಕಾರಣವಾಯಿತು. ಯಾವ ಜಮೀನಿನಲ್ಲಿ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರದ ಭರಾಟೆ ಇರುವುದಿಲ್ಲವೋ ಆ ಜಮೀನಿಗೆ ಅಲ್ಲಿಂದ… ಇಲ್ಲಿಂದ… ಹಾರಿಬಂದ ಕಾಬಕ್ಕಿಗಳು ಅಲ್ಲಿ ಒಟ್ಟುಗೂಡಿ ಕೀಡೆಗಳನ್ನು ಗುಳುಂ ಮಾಡುತ್ತಿವೆ.
ಆದರೆ ವಿಪರ‍್ಯಾಸವೆಂದರೆ ಸಾಮೂಹಿಕವಾಗಿ ರೈತರು ಕ್ರಿಮಿನಾಶಕಗಳ ಬಳಕೆ ನಿಯಂತ್ರಿಸಿಲ್ಲ ಕೆಲವರು ಈಗಲೂ ಅಂತಹ ವಿಷ ಪದಾರ್ಥಗಳನ್ನು ಕಡಲೆ ಬೆಳೆಗಳಿಗೆ ಬಳಸುತ್ತಿರುವುದರಿಂದ ವಿಷ ಪದಾರ್ಥ ಸೇವಿಸಿ ಸತ್ತು ಬಿದ್ದಿರುವ ಕೀಡೆಗಳನ್ನು ಏನು ಅರಿಯದೇ ಹಾರಿ ಬರುವ ಈ ಹಕ್ಕಿಗಳು ನುಂಗಿ ಕೀಡೆಗಳ ತರಹ ಅಲ್ಲಿಯೇ ಪಕ್ಷಿಗಳೂ ಪ್ರಾಣ ಬಿಡುವುದು ನೋವಿನ ಸಂಗತಿಯಗಿದೆ.
ಆಕರ್ಷಣೆಗೆ ಏನೆಲ್ಲ ಕಸರತ್ತು :
ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದ ರೈತರು ಈಗ ಬೆಳ್ಳಕ್ಕಿಗಳ ಮೊರೆ ಹೋಗುತ್ತಿರವುದು ಕಂಡು ಬರುತ್ತಿದೆ. ‘ಬಾ… ಬಾ… ಎಂದರೂ ಬಾರುವುದೂ ಇಲ್ಲ, ಪ್ರತಿ ದಿನ ಒಂದೇ ಹೊಲಕ್ಕೂ ಬರುವುದೂ ಇಲ್ಲ, ಒಂದೆಡೆ ಕೂಡುವುದು ಇಲ್ಲ,
ಹೇಗಿದೆ ನೋಡಿ ಬೆಳ್ಳಕ್ಕಿಗಳು ರಕ್ಷಿಸಿದ ಕಡಲೆ ಬೆಳೆ
ಕೊಂಚ ಸದ್ದಾದರೂ ಸಾಕು ಪುರ್ರೆಂದು ಹಾರಿ ಹೋಗುವ ಈ ನಾಜೂಕು ಮನಸ್ಸಿನ ಹಕ್ಕಿಗಳನ್ನು ಹೇಗಪ್ಪಾ ನಮ್ಮ ಹೊಲದೆಡೆಗೆ ಬರಸೆಳೆಯುವುದು?’ ಎಂಬಂತಹ ಲೆಕ್ಕಾಚಾರದಲ್ಲಿ ತೊಡಗಿರುವ ರೈತರು ಪಕ್ಷಿಗಳ ಆಕರ್ಷಣೆಗೆ ಕಸರತ್ತ್ತೂ ನಡೆಸುತ್ತಾರೆ. ಹಾರಿಬಂದ ಹಕ್ಕಿಗಳು ಇಲ್ಲಿಯೇ ನೀರು ಕುಡಿದು ತಮ್ಮ ಜಮೀನಿನಲ್ಲಿಯೇ ನೆಲಸಿ ಹುಳು-ಹುಪ್ಪಡಿಗಳನ್ನು ತಿನ್ನಲಿ ಎಂದು ತಮ್ಮ-ತಮ್ಮ ಜಮೀನುಗಳ ಮಧ್ಯದಲ್ಲಿ ಹಾಗೂ ಆಸುಪಾಸು ಗಿಡಗಳ ರೆಂಬೆಗಳಿಗೆ ನೀರು ತುಂಬಿದ ಮಣ್ಣಿನ ತಟ್ಟೆಗಳನ್ನು ತೂಗುಬಿಟ್ಟಿರುತ್ತಾರೆ, ಅಲ್ಲದೇ ಬೆಳಗಿನ ಹಾಗೂ ಸಾಯಂಕಾಲದ ಸಮಯದಲ್ಲಿ ಕಡಲೆ ಬೆಳೆಯ ಹೊಲಗಳಲ್ಲಿ ಮಂಡಕ್ಕಿ (ಮಂಡಾಳು, ಚೂರಮರಿ) ಚೆಲ್ಲುವ ಕೆಲಸ ಮಾಡುತ್ತಾರೆ. ದೂರದಲ್ಲಿ ಹಾರಿ ಹೋಗುವ ಹಕ್ಕಿಗಳ ಕಣ್ಣಿಗೆ ಮಂಡಕ್ಕಿ ಫಳಕ್ಕೆಂದು ಹೊಳೆದು ಹಕ್ಕಿಗಳ ಹಾರಿ ಬರಲಿ ಎಂಬ ಉದ್ದೇಶವೇ ಈ ಮಂಡಕ್ಕಿ ಚಲ್ಲುವ ಕರಾಮತ್ತಾಗಿದೆ.
ಕೋಳಿ ಹಿಂಡು ತಂದ ಮಕ್ಕಳ ದಂಡು.
ಕಡಲೆಯಲ್ಲಿ ಕೋಳಿ ‘ಚಮತ್ಕಾರ’! :
ಬೆಳ್ಳಕ್ಕಿಗಳ ಹಿಂಡುಗಳು ಬಂದವರ ಬೆಳೆಯೇನೂ ಉಜ್ವಲವಾಯಿತು, ಆದರೆ ಬೆಳ್ಳಕ್ಕಿಗಳು ಬಾರದವರ ಗತಿ ಏನು? ಎಂದು ವಿಚಾರಿಸದಿರಿ! ಅತ್ಯಂತ ಹಳೆಯ ಕೃಷಿ ಪದ್ಧತಿಯೊಂದಾದ ಕಡಲೆ ಹೊಲದಲ್ಲಿ ನಾಟಿ ಕೋಳಿಗಳ ಚಮತ್ಕಾರ ಇಲ್ಲಿ ಈಗಲೂ ಜೀವಂತವಾಗಿದೆ. ಹೈಟೆಕ್ ಕೃಷಿಗೆ ಸೆಡ್ಡು ಹೊಡೆದ ಕೊಪ್ಪಳ ಜಿಲ್ಲೆಯ ನೆರೆಬೆಂಚಿ ಗ್ರಾಮದ ಸಣ್ಣ ಹನಮಗೌಡ ಪೊಲೀಸಪಾಟೀಲ ಎಂಬ ಸಣ್ಣ ರೈತ ತನ್ನ ಕಡಲೆ ಹೊಲದಲ್ಲಿ ಪ್ರತಿ ವರ್ಷ ಈ ಪದ್ಧತಿ ಅನುಸರಿಸುತ್ತಾ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಸಣ್ಣ ಹನಮಗೌಡ ಪೊಲೀಸಪಾಟೀಲರದ ದೊಡ್ಡ ಸಂಸಾರ ಆದರೆ ಅವರಿಗೆ ಇರುವುದು ಒಂದೇ ಎಕರೆ ಭೂಮಿ ಮಾತ್ರ. ಆ ಒಂದು ಎಕರೆಯಲ್ಲಿ ಬೆಳೆ ದಕ್ಕದಿದ್ದರೆ ಆ ವರ್ಷದ ಅನ್ನಕ್ಕೆ ಕಲ್ಲುಬಿದ್ದಂತೆ. ಅಲ್ಲದೇ ದುಬಾರಿ ಕ್ರಿಮಿನಾಶಕಗಳನ್ನು (ವಿಷ) ತಂದು ಸಿಂಪಡಿಸಿವಷ್ಟು ಸ್ಥಿತಿವಂತರೂ ಅವರಲ್ಲ. ಈ ಕಾರಣದಿಂದ ತಮ್ಮ ಮುತ್ತಜ್ಜನ ಕಾಲದಿಂದಲೂ ನಡೆದು ಬಂದಿರುವ ಕೋಳಿ ಚಮತ್ಕಾರವನ್ನು ಈಗಲೂ ಮುನ್ನಡೆಸಿಕೊಂಡು ಬಂದಿದ್ದಾರೆ. ಇದರಿಂದ ವರ್ಷಕ್ಕೆ ನೂರಾರು ಕೋಳಿಗಳು ಬೆಳೆಗಳಲ್ಲಿನ  ಹುಳು-ಹುಪ್ಪಡಿಗಳನ್ನು ತಿಂದು ದಷ್ಟಪುಷ್ಟವಾಗಿ ಬೆಳೆದು ಪೇಟೆಯಲ್ಲಿ ನಾಲ್ಕು ದುಡ್ಡು ಹೆಚ್ಚಿಗೆ ಸಂಪಾದಿಸಲು ಪಾಟೀಲರಿಗೆ ನೆರವಾಗುತ್ತವೆ. ಈ ಕೆಲಸಕ್ಕೇನೂ ಅವರ ದೊಡ್ಡ ಬಂಡವಾಳ ಹಾಕಿಲ್ಲ!! ಮನೆಯಲ್ಲಿ ೨೦-೩೦ ನಾಟಿ ಕೋಳಿಗಳನ್ನು ಸಾಕಿದ್ದಾರೆ, ಹಂತ-ಹಂತವಾಗಿ ಮಾರುತ್ತಾ ಹೋದಂತೆ ತಾಯಿ ಕೋಳಿಗಳು ಮೊಟ್ಟೆ ಹಾಕುತ್ತಾ ಹೋಗುತ್ತವೆ, ಅದೇ ಮೊಟ್ಟೆಗಳನ್ನು ಮರಿ ಮಾಡಿಸಿ ಕೋಳಿ ಸಂತತಿ ಹೆಚ್ಚಿಸುತ್ತಾರೆ, ಮೊಟ್ಟೆ, ಬಲಿತ ಕೋಳಿಗಳನ್ನು ಮಾರುಕಟ್ಟೆಗೆ ಸಾಗಿಸುತ್ತಾರೆ. ಹೈಬ್ರಿಡ್ ಹಾಗೂ ಕಲಬೆರಕೆಯ ಈ ಕಾಲದಲ್ಲಿ ಹೇಳಿ ಕೇಳಿ ಇವರ ನಾಟಿ ಕೋಳಿಗಳೆಂದರೆ ಜನರು ಬಾಯಿಯಲ್ಲಿ ನೀರೂರಿ ಕೊಂಚ ಹೆಚ್ಚು ಬೆಲೆಯಾದರೂ ಪರ‍್ವಾಯಿಲ್ಲ ಖರೀದಿಸುತ್ತಾರೆ. ಬೆಳಗಿನ ಸಮಯದಲ್ಲಿ ಮಕ್ಕಳು ಕೋಳಿಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು ಬಂದು ಹೊಲದಲ್ಲಿ ಬಿಟ್ಟು ಹೋದರೆ ನಂತರ ಬಂದ ಹಿರಿಯರು ಕೋಳಿಗಳನ್ನು ಮೇಯಿಸಿಕೊಂಡು ಮುಸ್ಸಂಜೆ ಹೊತ್ತಿಗೆ ಮನೆಯೆಡೆಗೆ ಸಾಗಿಸುತ್ತಾರೆ. ಹೂವು ಬಿಡುವ ಅವಧಿಯಿಂದ ಒಂದೂವರೆ ತಿಂಗಳವರೆಗೆ ಈ ಕೆಲಸ ನಿರಂತರ ನಡೆಯುತ್ತದೆ. ಮತ್ತೇ ಮುಂದಿನ ಬೆಳೆಗೆ ಹೀಗೆನೇ ಕೋಳಿ ಕರಾಮತ್ತು ನಡೆಯುತ್ತಿರುತ್ತದೆ. ಇದು ಕೋಳಿ ಮತ್ತು ಗೌಡರ ನಿತ್ಯದ ದಿನಚರಿಯಾಗಿದೆ.
ಬಾ... ಬಾ... ಕೋಳಿ.
ಆಧುನಿಕ ಕೃಷಿ ಪದ್ಧತಿ ಚಾಲ್ತಿಗೆ ಬಂದ ನಂತರ ಸಾಂಪ್ರದಾಯಿಕ ಜ್ಞಾನ ಮೂಲೆ ಗುಂಪಾಯಿತು. ಈಗೇನಿದ್ದರೂ ಅತ್ಯಾಧುನಿಕ ಕೃಷಿಯ ಭರಾಟೆಯಾಗಿದೆ. ಹಾಗೆಂದು ಸಣ್ಣಹನಮಗೌಡರಂತಹ ಅನೇಕ ರೈತರು ತಮ್ಮ ಕ್ರಿಯಶೀಲತೆ ಬಿಟ್ಟುಕೊಟ್ಟಿಲ್ಲ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾದೀತು.
ಜಗತ್ತಿನ ಕೃಷಿ ವ್ಯವಸ್ಥೆಯಲ್ಲಿ ಏನೆಲ್ಲ ವೈಜ್ಞಾನಿಕ ಬದಲಾವಣೆಗಳಾದರೂ ಬಹುತೇಕ ರೈತರ ಬದುಕು ಹಸನಾಗಿಸುವುದಕ್ಕೆ ಸಾಧ್ಯವಾಗಿಲ್ಲ ಎಂಬುದಕ್ಕೆ ಪಟ್ಟಿ ಮಾಡಿದರೆ ಸಾಕಷ್ಟು ಉದಾಹರಣೆಗಳು ದೊರಕುತ್ತವೆ. ಆದರೆ ಪಾರಂಪರಿಕ ವ್ಯವಸ್ಥೆಯಲ್ಲಿಯೇ ಅನೇಕ ರೈತರು ತಮ್ಮ ಅನುಭವದಿಂದ ಕಲಿತ ಇಂತಹ ಪಾಠವನ್ನೇ ಕೃಷಿ ವ್ಯವಸಾಯದಲ್ಲಿ ಅಳವಡಿಸಿ ಯಶಸ್ವಿಯಗುತ್ತಿರುವುದು ಸಮಧಾನ ತರುವ ಸಂಗತಿಯಾಗಿದೆ.
ಈ ಬಾರಿ ಬಂಪರ್ ಫಸಲು ತರುತ್ತಿರುವ ಹಿಂಗಾರಿ ಕಡಲೆ ಬೆಳೆಯಲ್ಲಿನ  ಕೀಡೆಗಳ ನಿಯಂತ್ರಣಕ್ಕಾಗಿ ಪೇಟೆಯಲ್ಲಿ ರೈತರಿಗಾಗಿಯೇ (?) ಆಕರ್ಷಕ ಡಬ್ಬಾಗಳಲ್ಲಿ ಸಿದ್ಧವಾಗಿರುವ ತರಹೇವಾರಿ ಪೀಡೆನಾಶಗಳನ್ನು ಇಟ್ಟಿದ್ದಾರೆ. ಇವುಗಳನ್ನು ತಂದು ಬೆಳೆಗಳಿಗೆ ಸ್ನಾನ ಮಡಿಸಿದರೂ ಕಾಯಿಕೊರಕ ಹುಳು ನಿಯಂತ್ರಿಸಲಾಗುತ್ತಿಲ್ಲ. ಆದರೆ ಕ್ರಿಮಿನಾಶಕಗಳಿಗೆ ಮಾಡಿದ ಖರ್ಚು ಮಾತ್ರ ಸಾಲವಾಗಿ ಉಳಿದಿರುತ್ತದೆ. ಅಂಥದ್ದರಲ್ಲಿ ಒಂದಿಷ್ಟೂ ವಿಷ ಉಣಿಸದೆ ನಾಟಿ ಕೋಳಿಗಳಿಂದಲೇ ಕೀಡೆಗಳನ್ನು ನಿಯಂತ್ರಿಸಿ ‘ಸೈ’ಎನ್ನುವ ರೀತಿಯಲ್ಲಿ ಬೆಳೆ ಬೆಳೆಯುತ್ತಿರುವ ಪೊಲೀಸಪಾಟೀಲ ಅವರದು ಕಡಿಮೆ ಸಾಧನೆ ಅಲ್ಲ. ಕುಷ್ಟಗಿ ಯಿಂದ ಕೊಪ್ಪಳಕ್ಕೆ ಹೋಗುವ ಮರ್ಗದಲ್ಲಿ ಇರುವ ನೆರೆಬೆಂಚಿ ಗ್ರಾಮದ ಬಳಿ ಅವರ ಕಡಲೆ ಹೊಲ ಕಾಣುತ್ತದೆ. ಹಗಲು ಹೊತ್ತಿನಲ್ಲಿ ಸದಾ ಕೋಳಿಗಳಿಗೆ ‘ಬಾಯಿತುಂಬ’ ಕೆಲ್ಸ ಎಂದರೆ ಅಚ್ಚರಿ ಅಲ್ಲವೆ? ಯಾವುದೋ ಒಂದು ಕೋಳಿಗೆ ಒಂದು ಕೀಡೆ ದೊರೆತರೆ ಕ್ಕೊ… ಕ್ಕೊ… ಎಂದು ಎಲ್ಲ ಕೋಳಿಗಳಿಗೆ ಹುಯ್ಲೆಬ್ಬಿಸಿ ಕೀಡೆ ಹುಡುಕುವುದಕ್ಕೆ ಪ್ರೇರಣೆ ನೀಡುತ್ತವೆ.
ಹೀಗಿದೆ ನೋಡಿ ಕಡಲೆ ಬೆಳೆ
ಕಾರಣವಿಲ್ಲದೇ ಕಾದಾಡುವುದಕ್ಕೆ ಕೋಳಿ ಜಗಳ ಎಂದೇ ಜರಿಯುವುದುಂಟು. ಆದರೆ ಕೋಳಿಗಳಿಲ್ಲಿ ಕಾದಾಡುವುದಿಲ್ಲ, ಬದಲಾಗಿ  ಕಡಲೆ ಹೊಲದಲ್ಲಿ ಈ ನಾಟಿ ಕೋಳಿಗದ್ದೇ ಕಾರುಬಾರು! ಕೀಟನಿಯಂತ್ರಣದಲ್ಲಿ ಮುಖ್ಯಪಾತ್ರಧಾರಿಗಳಾದ ಅವುಗಳ ನಿತ್ಯ ಕಾಯಕವನ್ನು ನೋಡಿಯೇ ತಿಳಿಯಬೇಕು. ಒಂದೂವರೆ ತಿಂಗಳವರೆಗೂ ಹುಳು ‘ಗುಳುಂ’ ಮಡಿರುವ ಕೋಳಿಗಳೂ ದಷ್ಟಪುಷವಾಗಿವೆ. ಹಾಗೇನೇ ಗಿಡಗಳೂ ಮೈತುಂಬ ಕಾಯಿ ಹೊತ್ತು ನಿಂತಿರುವುದು ಕಂಡುಬರುತ್ತದೆ.
ಅಕ್ಕಪಕ್ಕದ ರೈತರು ತಮ್ಮ ಜೇಬಿನಲ್ಲಿನ ಸಾವಿರಾರು ರೂಪಾಯಿಗಳನ್ನು ಬರೀ ಪೀಡೆನಾಶಕಗಳಿಗೇ ಖರ್ಚು ಮಡಿದ್ದಾರೆ. ಆದರೆ ಕೋಳಿಗಳನ್ನೇ ನಂಬಿದ ಹನಮಗೌಡರಿಗೆ ಒಂದು ನಯಪೈಸೆ ಖರ್ಚು ಇಲ್ಲ, ಸಂಜೆವರೆಗೂ ಆಜೂ ಬಾಜಿನ ಮತ್ತೊಬ್ಬರ ಹೊಲಗಳಿಗೆ ಹೋಗದಂತೆ ಕೋಳಿಗಳನ್ನು ಕಾಯುತ್ತ ನಿಂತರೆ ಸಾಕು. ಇದು ಹನಮಗೌಡ ಅಥವಾ ಅವರ ಪತ್ನಿ ಹನುಮವ್ವ ಅವರ ನಿತ್ಯದ ಜವಾಬ್ದಾರಿ.
ಚಳಿ, ಬಿಸಿಲಿಗೆ ಒಗ್ಗಿಕೊಳ್ಳುವ ನಾಟಿ ಕೋಳಿಗಳು ಸಂಜೆವರೆಗೂ ಫುಲ್‌ಬ್ಯೂಸಿ! ಗಿಡಗಳಲ್ಲಷ್ಟೇ ಅಲ್ಲ ಕಾಯಿಯ ಒಳಗೆ ಅವಿತಿರುವ ಬಾಲಹುಳುಗಳನ್ನೂ ಹೆಕ್ಕಿಹೆಕ್ಕಿ ತಿಂದು ತೇಗುತ್ತವೆ. ಅತ್ತ ಬೆಳೆಗೆ ಗಂಟುಬಿದ್ದ ಪೀಡೆ ನಾಪತ್ತೆ, ಇತ್ತ ಕೋಳಿಗಳಿಗೆ ತೃಪ್ತಿ. ಈ ವಿಧಾನ ಅನುಸರಿಸಿದ ಹನುಮಗೌಡರಿಗೂ ಎರಡು ಲಾಭ ಹೇಗಿದೆ ಕೋಳಿ ಚಮತ್ಕಾರ!.
‘ಕಡ್ಲಿಗೆ ಯವ ಎಣ್ಣಿನೂ ಹೊಡ್ದಿಲ್ರಿ, ಮುಂಜಾನಿಂದ ಸಂಜೀಮಟ ಹೊಲ್ದಾಗ ಇದ್ದಾಂಗೂ ಆತೂ ಕೋಳಿ ಮೇಯ್ಸಿದಾಂಗೂ ಆಕೈತಿ ಮತ್ತ ಕೋಳ್ಗಿನೂ ಹೊಲ್ದಾಗ ಯವ ಜಡ್ಡೂ ಬರಂಗಿಲ್ಲ ನೋಡ್ರಿ’ ನಾಳೆ ಪ್ಯಾಟ್ಯಾಗ ಕೋಳಿ ಮರಿದ್ರ ನಾಲ್ಕು ಕಾಸೂ ಕೈಗೆ ಹತ್ತಾವ, ನಾವ್ಯಾಕ ಎಣ್ಣಿಪಣ್ಣಿಹೊಡ್ದು ಸಾಲ ಮಾಡ್ಕೋಳ್ಳಾಣ, ಅಲ್ದ ಹೊಲಗಳಿಗ್ಯಾಕೆ ವಿಷಾಉಣ್ಸಬೇಕ್ರಿ?’ ಎನ್ನುವ ಈ ಮುಗ್ಧ ದಂಪತಿಗಳ ಮತಿನ ಹಿಂದೆ ಎಂಥ ಉದಾತ್ತ ಚಿಂತನೆ ಅಡಗಿದೆ ಅಲ್ಲವೇ. ಅಂದಹಾಗೆ ಯವ ವಿಶ್ವವಿದ್ಯಾಲಯಗಳೂ ಗೌಡರ ಕುಟುಂಬಕ್ಕೆ ಈ ಕೋಳಿ ಪಾಠ ಕಲಿಸಿ ಕೊಟ್ಟಿಲ್ಲ.
ಪರಿಸರದಲ್ಲಿ ಇಂತಹ ಅನೇಕ ಸಹಜ ಹಾಗೂ ಕೃತಕ ನೈಸರ್ಗಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಇತ್ತೀಚಿಗೆ ಬಂದ ಕೃಷಿಯಲ್ಲಿನ ವಿಷಕಾರಿ ಚಟುವಟಿಕೆಗಳು ಈ ಸಹಜ ಪ್ರಕ್ರಿಯೆಗೆ ಮುಳುವಾಗಿವೆ. ಅದರ ಜೊತೆಗೆ ಕೃಷಿ ಸಮತೋಲನ ತಪ್ಪಿದೆ. ಅಂದ ಹಾಗೆ
ಈ ಮೇಲಿನ ಎರಡೂ ಪದ್ಧತಿಗಳು ಸಹಜ ಕೃಷಿ ವಿಧಾನಗಳು ಜೊತೆಗೆ ಬಂಡವಾಳ ಬಯಸದ ಕೃಷಿಗಳೂ ಆಗಿವೆ

ಸೋಮವಾರ, ಫೆಬ್ರವರಿ 1, 2016

ಸಾವಿನ ಬಾಗಿಲಲ್ಲಿ ಇಣುಕುತ್ತ…


-ಡಾ. ಅನಸೂಯ ಕಾಂಬಳೆ
kamble
ನಾನು ಪಿ.ಯು.ಸಿ ಓದಲು ಹಾರೂಗೇರಿಯ ಎಚ್.ವಿ.ಎಚ್ ಕಾಲೇಜಿಗೆ ಸೇರಿದ್ದೆ. ಬಸ್ ಪಾಸ್ ತೆಗೆಸಿ ಓಡಾಡುತ್ತಿದ್ದುದರಿಂದ ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡಲು ಸಾಧ್ಯವಾಗುತ್ತಿತ್ತು. (ಯಾಕೆ ಎನ್ನುವುದು ಮುಂದಿನ ಭಾಗದಲ್ಲಿಗೆ). ಇದರಿಂದಾಗಿ ರಕ್ತಹೀನತೆಯಿಂದ ಬಳಲುತ್ತಿದ್ದೆ. ಮುಂದೆ ಆರೋಗ್ಯ ಸಮಸ್ಯೆ ತೀವ್ರವಾಗಿ ವಿಲ್ಬಣಿಸಿತು. ನಾನು ತೀರ ಹತಾಸೆಯಿಂದ “ನಂಗೆ ಈ ನೋವು ತಡೆಯೋಕಾಗಲ್ಲ… ನನಗಿನ್ನು ಸಾವು ಬರಲಿ” ಎಂದು ನನ್ನ ತಾಯಿಯ ಮುಂದೆ ಹೇಳಿದೆ. ಆಗ ಅವ್ವ ದುಖಃದಿಂದ ‘ನೀನು ಇಷ್ಟು ದೊಡ್ಡವಳಾದ ಮೇಲೆ ಸಾಯೋದು ಬ್ಯಾಡ; ನಿನ್ನ ತೂಕದಷ್ಟು ರೊಕ್ಕ ಹಾಕಿ ನಿನ್ನ ಬದುಕಿಸಿಕೊಂಡಿದ್ದೇವೆ’ ಎಂದಳು. ನಾನು ಕುತೂಹಲ ತಡೆಯದೆ ಯಾಕೆ ಬದುಕಿಸಿಕೊಂಡೆ, ಏನಾಗಿತ್ತು ನನಗೆ ಎಂದೆ.
ಅವ್ವ ನನ್ನನ್ನು ಹೆತ್ತಾಗ ಅವಳಿಗೆ ಕೇವಲ ಹದಿಮೂರು ವರ್ಷ. ಹೆರಿಗೆ ಸಮಯದಲ್ಲಿ ತನಗೆ ಏನಾಗುತ್ತಿದೆ ಎಂಬುದೇ ತಿಳಿಯುತ್ತಿರಲಿಲ್ಲವಂತೆ. ಏನಾಗುತ್ತಿದೆ ಎಂದು ಕೇಳಿದಾಗ ತನಗೆ ಇಲ್ಲಿ… ಇಲ್ಲಿ… ಇಲ್ಲಿ ನೋಯುತ್ತಿದೆ ಎಂದು ಬೆನ್ನು, ತೊಡೆ, ಹೊಟ್ಟೆ ತೋರಿಸುತ್ತಿದ್ದಳಂತೆ. ನಾನು ಹುಟ್ಟಿದ ಮೇಲೆ ನನಗೂ ಅವ್ವನಿಗೂ ಇಬ್ಬರಿಗೂ ಆರೋಗ್ಯ ಸರಿ ಇಲ್ಲದಿದ್ದರಿಂದ ದನಹಟ್ಟಿಯ ದವಾಖಾನೆಗೆ ಕರೆದೊಯ್ದರಂತೆ. ನನಗೆ ಗಂಟಲಲ್ಲಿ ಗುಳ್ಳೆಗಳೆದ್ದು, ಲಿವರ್ ತೊಂದರೆಯೂ ಇತ್ತು. ಅವ್ವನ ಮೊಲೆಗೆ ಹಾಲು ಬರದ್ದರಿಂದ ನಮ್ಮ ದೊಡ್ಡವ್ವ ಆಡಿನ ಹಾಲನ್ನು ಹಿಂಡಿ ಹತ್ತಿ ಅರಳಿ ಅದ್ದಿ ಅದರಿಂದ ನನಗೆ ಹಾಲು ಕುಡಿಸುತ್ತಿದ್ದಳಂತೆ.
ಒಂದು ತಿಂಗಳ ನಂತರ ಮತ್ತೆ ನನಗೆ ತೀವ್ರವಾಗಿ ಆರೋಗ್ಯ ಕೆಟ್ಟು ನಿತ್ರಾಣವಾಗಿ ಒಂದು ದಿನ ಉಸಿರಾಡಿಸುವುದನ್ನು ನಿಲ್ಲಿಸಿದೆ. ನನ್ನನ್ನು ಮಣ್ಣುಮಾಡಲು, ಗೋರಿ ತೆಗೆಯಲು ಗುದ್ದಲಿ, ಸಲಿಕೆ, ಬುಟ್ಟಿ ತೆಗೆದುಕೊಂಡು ಹೋಗಲು ನಾಲ್ಕಾರು ಜನ ಸಜ್ಜಾದರು. ನನ್ನ ಅಜ್ಜ (ತಾಯಿಯ ತಂದೆ) ‘ಇಷ್ಟು ಚಂದದ ಕೂಸನ್ನು ಹ್ಯಾಂಗ ಮಣ್ಣಾಗ ಹಾಕಲಿ’ ಎಂದು ಸ್ವಲ್ಪ ಹೊತ್ತು ಅಂಗಳದಲ್ಲಿ ಕುಸಿದು ಕುಳಿತನಂತೆ. ಎಲ್ಲರೂ ಅಜ್ಜನನ್ನು ಸಮಾಧಾನ ಪಡಿಸತೊಡಗಿದರು. ನನ್ನನ್ನು ಎಲ್ಲರೂ ಮುಟ್ಟಿ ಮುಟ್ಟಿ ಅಳುತ್ತಿದ್ದಾಗ ಮತ್ತೆ ನನಗೆ ಸಣ್ಣಗೆ ಉಸಿರಾಟ ಪ್ರಾರಂಭವಾಗಿ ಕೈ, ಕಾಲು ಆಡಿಸಲು ಪ್ರಾರಂಭಿಸಿದೆನಂತೆ.
‘ಏ…. ಹುಡುಗಿ ಇನ್ನ ಜೀವಂತ ಐತಿ’ ಎಂದು ದೊಡ್ಡವ್ವ ಗಾಬರಿಯಿಂದ ಜೋರಾಗಿ ಹೇಳಿದಾಗ ನಾ ‘ಹೂಂ…’ ಅಂತ ಏನೋ ಮಾತಾಡಿದೆನಂತೆ. ಆಗ ಎಲ್ಲರೂ ಕಂಗಾಲಾಗಿ ಒಂದ ತಿಂಗಳ್ನ್ಯಾಗ ಹ್ಯಾಂಗ ಮಾತಾಡತ್ತೈತಿ… ಇದಕ್ಕ ಏನೋ ಆಗೇತಿ… ದೇವರ ಪ್ರಸಾದ ಹಚ್ಚರಿ’ ಎಂದು ಹೇಳಿದಾಗ ನನ್ನ ಹಣೆಗೆ ದೇವರ ಮುಂದಿನ ಬೂದಿ-ಭಂಡಾರ ಹಚ್ಚಿದರು.
ಹೀಗೆ ಹುಟ್ಟಿದಾಗಲೇ ಸಾವಿನ ಮನೆಗೆ ಹೋಗಿ ಬಂದ ಜೀವ ಆಗಾಗ ಅನಾರೋಗ್ಯದಿಂದ ನರಳುತ್ತಲೇ ಇತ್ತು. ಹಳ್ಳಿಗಳಲ್ಲಿ ಎಂ.ಬಿ.ಬಿ.ಎಸ್/ಎಂ.ಡಿ ಪದವಿ ಪಡೆದ ಡಾಕ್ಟರ್‍ಗಳಾರೂ ಇರುವುದಿಲ್ಲ. ಡಾಕ್ಟರ್ ಹತ್ತಿರ ಕಂಪೌಡರ್ ಅಥವಾ ಸಹಾಯಕರಾಗಿ ಸೇವೆ ಸಲ್ಲಿಸಿದವರೇ ಹಳ್ಳಿಗಳಲ್ಲಿ ದೊಡ್ಡ ಡಾಕ್ಟರು. ಹಳ್ಳಿಯ ಜನರು ನಗರದ ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಳ್ಳುವಷ್ಟು ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ನನ್ನ ತಂದೆಗೆ ನಾನು ಹುಟ್ಟಿದಾಗ ಕೇವಲ ಮಾಸಿಕ ಎಂಬತ್ತು ರೂಪಾಯಿ ಸಂಬಳ ಬರುತ್ತಿತ್ತು. ನನ್ನನ್ನು ಪರಿಣತ ವೈದ್ಯರಲ್ಲಿಗೆ ತೋರಿಸುವಷ್ಟು ಸಬಲರಾಗಿರಲಿಲ್ಲ. ಪರಮಾನಂದವಾಡಿಯಲ್ಲಿ ಡಾಕ್ಟರ್ ಕುಮಾರ ಅಂತ ಅಪ್ಪನ ಸ್ನೇಹಿತರು ಆಸ್ಪತ್ರೆ ಇಟ್ಟುಕೊಂಡಿದ್ದರು. ಅಪ್ಪ ನಮ್ಮ ಜನರ ಆರೋಗ್ಯ ಕೆಟ್ಟಾಗ ಅವರಲ್ಲಿಯೇ ಕರೆದುಕೊಂಡು ಹೋಗಿ ತೋರಿಸುತ್ತಿದ್ದರು. ನನ್ನನ್ನು ಅವರ ಹತ್ತಿರವೇ ತೋರಿಸುತ್ತಿದ್ದರು.
ನನಗೆ ಇನ್ನೂ ಒಂದು ವರ್ಷ ಆಗಿರಲಿಲ್ಲ. ಮತ್ತೊಮ್ಮೆ ನನ್ನ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಅವ್ವ-ಅಪ್ಪ ನನ್ನನ್ನು ಡಾಕ್ಟರ್ ಕುಮಾರ ಅವರ ಹತ್ತಿರ ಕರೆದುಕೊಂಡು ಹೋದರು. ಮರಳಿ ಮನೆಗೆ ಬರುವಾಗ ನಡು ರಸ್ತೆಯಲ್ಲಿ ನನಗೆ ಮತ್ತೆ ಪ್ರಜ್ಞೆ ತಪ್ಪಿತ್ತು. ದಾರಿಯಲ್ಲಿ ಹೋಗುತ್ತಿರುವ ಜನರೆಲ್ಲ ಸೇರಿ ಕಿವಿಯಲ್ಲಿ ಊದಿ, ಕಿರು ಬೆರಳು ಗಟ್ಟಿಯಾಗಿ ಹಿಡಿದು ತಿಕ್ಕಿದರು. ಮತ್ತೆ ಉಸಿರಾಡಿದೆ. ಅವ್ವ-ಅಪ್ಪ ಕುಮಾರ ಡಾಕ್ಟರ್ ಹತ್ತಿರ ಮರಳಿ ಕರೆದೊಯ್ದರು. ರಾತ್ರಿ ಮತ್ತೆ ಏನಾದರೂ ಆದರೆ ನಿಮಗೆ ಬರಲು ಕಷ್ಟವಾಗುತ್ತದೆ ಇಲ್ಲೇ ಉಳಿದುಕೊಳ್ಳಿ ಎಂದರು.
ಆದರೆ ಆ ದವಾಖಾನೆಯಲ್ಲಿ ಕೇವಲ ಎರಡೇ ರೂಮುಗಳಿದ್ದವು. ಅದರಲ್ಲಿ ಒಂದು ಒಳಗೆ ರೋಗಿಗಳನ್ನು ನೋಡಲು ಇರುವ ರೂಮಾದರೆ ಇನ್ನೊಂದು ರೋಗಿಗಳು ಚಿಕಿತ್ಸೆಗಾಗಿ ಕಾಯ್ದು ಕುಳಿತುಕೊಳ್ಳಲು ಇರುವ ರೂಮು. ಇದರಿಂದಾಗಿ ಅಪ್ಪ-ಅವ್ವ ಅಪ್ಪನ ಸರ್ಕಾರಿ ಶಾಲೆಯಲ್ಲಿ ರಾತ್ರಿ ಕಳೆಯಲು ನಿರ್ಧರಿಸಿದರು. ಹಾಸಲು-ಹೊದೆಯಲು ಏನು ಇರಲಿಲ್ಲ. ಅವ್ವ ನನ್ನನ್ನು ತನ್ನ ಸೀರೆ ಸೆರಗಲ್ಲಿ ಸುತ್ತಿಕೊಂಡು ಮಗು ಬೆಚ್ಚಗಿರಲಿ ಅಂತ ಹೊಟ್ಟೆಗೆ ಆನಿಸಿಕೊಂಡು ಗಟ್ಟಿಯಾಗಿ ಹಿಡಿದುಕೊಂಡು ಕುಳಿತು ಇಡೀ ರಾತ್ರಿ ಶಾಲೆಯಲ್ಲಿ ಕಳೆದರು. ಬೆಳಗ್ಗೆ ಡಾಕ್ಟರಿಗೆ ತೋರಿಸಿಕೊಂಡು ಮನೆಗೆ ಬಂದರು.
ಹೀಗೆ ನನ್ನ ಆರೋಗ್ಯ ಆಗಾಗ ಕೆಡುತ್ತಲೇ ಇತು. ಮತ್ತೊಮ್ಮೆ ತೀವ್ರ ಆರೋಗ್ಯ ಕೆಟ್ಟಾಗ ಕುಡಚಿಯ ಕದ್ದು ದವಾಖಾನೆಯಲ್ಲಿ ಅಡ್ಮಿಟ್ ಮಾಡಿದರು. ಮೂರು ತಾಸಿಗೆ ಒಂದು ಇಂಜೆಕ್ಷನ್ ಕೊಡುತ್ತಿದ್ದರು. ಹೀಗೆ ಅನಾರೋಗ್ಯದ ಮಧ್ಯೆಯೇ ನನ್ನನ್ನು ಬೆಳೆಸಿದ್ದರಿಂದ ನನಗೆ ಏನಾದರು ಆದರೆ ಅವ್ವ-ಅಪ್ಪ ದಿಗಿಲುಗೊಳ್ಳುತ್ತಿದ್ದರು. ನನ್ನ ಅಪ್ಪ ಶಿಕ್ಷಣ ಪಡೆದು ನೌಕರಿ ಇದ್ದುದರಿಂದ ಇಷ್ಟಾದರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗಿತ್ತು. ನಮ್ಮ ಜನ ಆನಾರೋಗ್ಯ ಪೀಡಿತರಾದಾಗ ಬಹಳ ನರಳುತ್ತಿದ್ದರು. ವಯಸ್ಸಾದವರಂತೂ ಸಾವಿನ ದಿನ ಎನಿಸುತ್ತಾ ಕಳೆಯಬೇಕಿತ್ತು. ನನ್ನ ಬಾಲ್ಯದಲ್ಲಿ ನಡೆದ ಘಟನೆಯೊಂದು ನನ್ನ ಮನಸ್ಸಲ್ಲಿ ಹಾಗೇ ಅಚ್ಚಳಿಯದೆ ಉಳಿದಿದೆ.
ನಮ್ಮ ಓಣಿಯಲ್ಲಿ ಅತ್ಯಂತ ಹಿರಿಯರೆಂದರೆ ಯಮನಪ್ಪ ಅಂತ ಇದ್ದರು. ಅವರನ್ನು ಎಲ್ಲರೂ ಗೌರವದಿಂದ ಯಮನಪ್ಪಣ್ಣಾ ಅಂತ ಕರೆಯುತ್ತಿದ್ದರು. ಅವರ ದೂರದ ಸಂಬಂಧಿ ಒಬ್ಬಳು ತೀವ್ರ ಅನಾರೋಗ್ಯದಿಂದ ತನ್ನ ಊರಾದ ಕೋಳಿಗುಡ್ಡದಿಂದ ಅವರ ಮನೆಗೆ ಬಂದಿದ್ದಳು. ಅವಳಿಗೆ ಅರವತ್ತರ ಸಮೀಪ ವಯಸ್ಸಿರಬಹುದೆಂದು ತೋರುತ್ತದೆ. ಅವಳನ್ನು ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವಷ್ಟು ಯಮನಪ್ಪಣ್ಣಾ ಆರ್ಥಿಕವಾಗಿ ಸ್ಥಿತಿವಂತನಾಗಿರಲಿಲ್ಲ. ಮಹಾರಾಷ್ಟ್ರದ ಮೀರಜ ದವಾಖಾನೆಗಳ ನಗರ ಎಂದೇ ಪ್ರಸಿದ್ದಿ ಪಡೆದದ್ದು. ಅದು ನಮಗೆ ತೀವ್ರ ಹತ್ತಿರದಲ್ಲಿರುವ ನಗರ. ಅಲ್ಲಿ ಮಶಿನ್ ಹಾಸ್ಪೀಟಲ್ ಅಂತ ತುಂಬಾ ಫೇಮಸ್ಸು. ಈಗಲೂ ಇದೆ. ಆದರೆ ಅಲ್ಲಿಗೆ ಹೋದವರು ಜೀವಂತ ಮರಳಿ ಬರುವುದಿಲ್ಲ ಅಂತ ನಮ್ಮ ಜನರ ನಂಬಿಕೆ ಆಗಿತ್ತು. ಹೀಗಾಗಿ ಆ ಹಾಸ್ಪೀಟಲ್‍ಗೆ ಕರೆದುಕೊಂಡು ಹೋಗಲು ಹೆದರುತ್ತಿದ್ದರು. ತಾವು ಕೊನೆ ಕ್ಷಣದಲ್ಲಿ ಅಲ್ಲಿಗೆ ಕರೆದುಕೊಂಡು ಹೋಗಿರುತ್ತೇವೆಂಬ ಬಗ್ಗೆ ಅವರಿಗೆ ಅರಿವಿರುತ್ತಿರಲಿಲ್ಲ.
ಹೀಗೆ ಅಣ್ಣನೆಂದು ನಂಬಿ ಬಂದಿದ್ದ ಆ ಹೆಣ್ಣು ಮಗಳನ್ನು ಒಳಗೆ ಬಾಗಿಲಿಗೆ ಎದುರಾಗಿ ಒಂದು ಚಾಪೆ ಹಾಸಿ ಮಲಗಿಸಿದ್ದರು. ಅವಳ ಹೊಟ್ಟೆ ದಿನದಿಂದ ದಿನಕ್ಕೆ ಉಬ್ಬುತ್ತಲೇ ಇತ್ತು. ಅವಳು ಓ ಎಂದು ಒದರುತ್ತ ನರಳುತ್ತಿದ್ದಳು. ಕಂಡ ಕಂಡ ದೇವರಿಗೆ ಕೈ ಮುಗಿದ ಸಾಯಿಸಲು ಕೇಳುತ್ತಿದ್ದಳು. ಓಣಿಯ ಬಂಧುಗಳೆಲ್ಲ ದಿನಾ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರು. ದೇವರು ಅವಳನ್ನು ಬೇಗ ಕರೆದುಕೊಂಡು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತಿದ್ದರು. ಕೆಲವರು “ಈ ಪರಿ ನೆಳ್ಳುದ ನೋಡಕೊಂತ ಹ್ಯಾಂಗ ಕುಂತೈರಿ… ಮಿರಜಕ್ಕಾದರೂ ಒಯ್ಯಿರಿ” ಎಂದು ಸಲಹೆ ನೀಡುತ್ತಿದ್ದರು. “ಅವಳಿಗೆ ವಯಸ್ಸ್ ಆಗೇತಿ…. ಇನ್ನೆಷ್ಟ ದಿನಾ ಬದಕ್ತಾಳು? ಸಾಯೋ ಮುಂದ ಮಕ್ಕಳಿಗೆ ಸಾಲಾ ಮಾಡಿ ಹೋಗೋದು ಬ್ಯಾಡ. ನಮ್ಮ ಕಣ್ಮುಂದ ಜೀಂವಾ ಬಿಡಲಿ ಇರೂತನಾ ಏನ್ ತಿಂತಾಳು ತಿನ್ನಲ್ಲಿ.” ಅಂತಾ ಯಮನಪ್ಪಣ್ಣಾ ಹೇಳುತ್ತಿದ್ದ. ಆ ಮಾತೂ ಜನರಿಗೆ ಖರೆ ಅನಿಸ್ತಿತ್ತು. ಸೈಕಲ್ ಮ್ಯಾಲ ಹಳ್ಳಿ ಹಳ್ಳಿ ತಿರುಗ್ಯಾಡೊ ಡಾಕ್ಟರ್ ಎರಡು ದಿನಕ್ಕೊಮ್ಮೆ ಬಂದು ನೋವು ಕಡಿವೆ ಆಗುವ ಇಂಜೆಕ್ಷನ್ ಮಾಡಿ ಗುಳಗಿ (ಮಾತ್ರೆ) ಕೊಟ್ಟು ಹೋಗುತ್ತಿದ್ದ.
ನಾನು ಶಾಲೆಗೆ ಹೋಗುವ ಮೊದಲು ಒಂದು ಸಲ, ಶಾಲೆ ಬಿಟ್ಟು ಬಂದ ಮೇಲೆ ಸಂಜೆ ಒಂದು ಸಲ ಅವಳನ್ನು ನೋಡಲು ಓಡೋಡಿ ಹೋಗುತ್ತಿದ್ದೆ. ನಾನು ಶಾಲೆಯಲ್ಲಿ ಕುಳಿತಾಗಲೂ ಅವಳು ಸತ್ತಿದ್ದಾಳೋ ಇಲ್ಲಾ ಬದುಕಿದ್ದಾಳೋ ಎಂದು ಯೋಚಿಸುತ್ತ ಕುಳಿತಿರುತ್ತಿದ್ದೆ. ಮುಂದೆ ನೋವು ತಡೆಯಲಾರದೆ ಅವಳು ಊಟ ಮಾಡುವುದನ್ನು ನಿಲ್ಲಿಸಿದಳು. ಜನರೆಲ್ಲಾ “ ಯಮನಪ್ಪಣ್ಣಾ ದವಾಖಾನಿಗೆ ಒಯ್ಯಲಿಲ್ಲಾ. ಅಣ್ಣ ಉಳಿಸಿಕೋತಾನು ಅಂತ ನಂಬಿ ಬಂದಾಳು. ಆದಕ್ಕ ಆಕಿ ಸಿಟ್ಟಾಗಿ ಊಟಾ ಬಿಟ್ಟು ಸಾಯೋ ನಿರ್ಧಾರ ಮಾಡ್ಯಾಳ. ಬಡವರ ಜೀವನಾ ಅಂದ್ರ ಬಾಳ ಕೆಟ್ಟದ್ದು ಅಂತ ಮರಗತೊಡಗಿದರು.
ಅವಳು ಊಟ ಬಿಟ್ಟರೂ ಅವಳ ಹೊಟ್ಟೆ ಊದಿಕೊಳ್ಳುವುದು ನಿಲ್ಲಲಿಲ್ಲ. ನರಳಿ ನರಳಿ ಹದಿನೈದು ದಿನಗಳ ನಂತರ ಕಣ್ಮುಚ್ಚಿದಳು. ಎಲ್ಲರೂ ನಿಟ್ಟುಸಿರು ಬಿಟ್ಟರು. ಅವಳು ಸತ್ತ ದಿನ ಸೋಮವಾರವಾಗಿತ್ತು. ನರು “ಬಾಳ ಛೋಲೋ ಆತು. ಶ್ರಾವಣ ಸ್ವಾಮಾರ ಸತ್ತು ಶಿವನ ಪಾದ ಸೇರಿದಳು” ಅಂದರು. ಅನಾರೋಗ್ಯದಿಂದ ನರಳುತ್ತಿದ್ದರೂ ಸಾಲಮಾಡುವುದಕ್ಕಿಂತ ಅನಿವಾರ್ಯವಾಗಿ ಸಾವನ್ನು ಬರಮಾಡಿಕೊಳ್ಳುವ ನನ್ನ ಜನರ ಈ ಸಲ್ಲೇಖನಗಳು ನನ್ನನ್ನು ಕಾಡುತ್ತಲೇ ಇರುತ್ತವೆ.
ಹೀಗೆ ಮನ ಕಲಕುವ ಸಾವಿನ ಕುರಿತು ಯೋಚಿಸುವಾಗಲೆಲ್ಲ ನಾನು ಅಂದೇ ಸತ್ತಿದ್ದರೆ!…. ನಾನು ಬರೆದ ಕವಿತೆಗಳಲ್ಲಿ ಯಾವುದಾದರೊಂದು ಜೀವಂತ ಸಾಲು ಇದ್ದರೆ ಅದು ನನ್ನೊಂದಿಗೇ ಸತ್ತು ಹೋಗುತ್ತಿತ್ತಲ್ಲಾ ಅಂತ ಅನಿಸುತ್ತದೆ. ಆದರೂ ಶಾಶ್ವತವಾದ ಸಾವಿನ ಬಗ್ಗೆ ಭಯವಿಲ್ಲ; ಮೋಹವಿದೆ.