ಮಂಗಳವಾರ, ಅಕ್ಟೋಬರ್ 13, 2015

೨೦೦೮ ರ ಸಾಲಿನಲ್ಲಿ ನೀಡಿದ ಅರಳು ಸಾಹಿತ್ಯ ಪ್ರಶಸ್ತಿಯನ್ನು ಹಿಂತಿರುಗಿಸಿದ್ದು ಯಾಕಾಗಿ?

ಸಂಗಾತಿಗಳೆ,
ಅರಳು ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೆ.
-ಅರುಣ್ ಜೋಳದಕೂಡ್ಲಿಗಿ.

ಇಂದ,
ಅರುಣ್ ಜೋಳದಕೂಡ್ಲಿಗಿ
ಪೋಸ್ಟ್ ಡಾಕ್ಟರಲ್ ಫೆಲೋ
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ.
ವಿದ್ಯಾರಣ್ಯ-೫೮೩೨೭೬
ಹೊಸಪೇಟೆ ತಾ. ಬಳ್ಳಾರಿ ಜಿ.
ಮೊ:೯೯೦೧೪೪೫೭೦೨

ಇವರಿಗೆ,
ಪುಂಡಲೀಕ ಹಾಲಂಬಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
ಪಂಪ ಮಹಾಕವಿ ರಸ್ತೆ
ಚಾಮರಾಜಪೇಟೆ, ಬೆಂಗಳೂರು-೫೬೦೦೧೮


ಮಾನ್ಯರೆ,

ವಿಷಯ: ೨೦೦೮ ರ ಸಾಲಿನಲ್ಲಿ ನೀಡಿದ ಅರಳು ಸಾಹಿತ್ಯ ಪ್ರಶಸ್ತಿಯನ್ನು ಹಿಂತಿರುಗಿಸುವ ಬಗ್ಗೆ.


ದೇಶವ್ಯಾಪಿ ಕರ್ನಾಟಕದ ಹಿರಿಯ ಸಂಶೋಧಕರಾದ ಎಂ.ಎಂ.ಕಲ್ಬುರ್ಗಿ ಅವರ ಹತ್ಯೆಯನ್ನು ಖಂಡಿಸಿ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಮತೀಯ ಅಸಹನೆಯನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರಕಾರ ನೀಡಿದ ಪ್ರಶಸ್ತಿಗಳನ್ನು ಸಾಹಿತಿಗಳು ಚಿಂತಕರು ದೇಶದ್ಯಾಂತ ಹಿಂತಿರುಗಿಸುತ್ತಿದ್ದಾರೆ. ಸತ್ಯಾಗ್ರಹ, ಧರಣಿಯನ್ನು ಒಳಗೊಂಡಂತೆ ಚಳವಳಿಯ ಹಲವು ರೂಪಗಳಲ್ಲಿ ಪ್ರಭುತ್ವದ ನೀತಿಗಳನ್ನು ವಿರೋಧಿಸಿ ಪ್ರಭುತ್ವ ನೀಡಿದ ಗೌರವಗಳನ್ನೂ ಪ್ರಶಸ್ತಿಗಳನ್ನೂ ಬಹಿಷ್ಕರಿಸುವುದೂ ಕೂಡ ಚಳವಳಿಯ ಒಂದು ಕ್ರಮವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತೀಯ ಮತ್ತು ಪ್ರಭುತ್ವದ ಪರವಾದ ಶಕ್ತಿಗಳು ಈ ಕ್ರಮವನ್ನು ಸಮೂಹ ಸನ್ನಿ ಎಂದು ನಕಾರಾತ್ಮಕವಾಗಿ ಸಿನಿಕತೆಯಿಂದ ಟೀಕಿಸುತ್ತಿವೆ. ಆದರೆ ನಿಜದಲ್ಲಿ ಈ ಪ್ರಕ್ರಿಯೆ ಸಮೂಹ ಸನ್ನಿಯಾಗಿರದೆ, ಪ್ರತಿರೋಧವಾಗಿಯೂ ಚಳವಳಿಯ ಭಾಗವಾಗಿಯೂ ನಡೆಯುತ್ತಿದೆ.


ಎಂ.ಎಂ.ಕಲ್ಬುರ್ಗಿ ಅವರ ಹತ್ಯೆ ಕೌಟುಂಬಿಕ ಕಾರಣಕ್ಕಲ್ಲದೆ ಮತೀಯ ಕಾರಣಕ್ಕೆ ನಡೆದಿದೆ ಎಂದು ಸಿ.ಐ.ಡಿ ತಿಳಿಸಿದೆ. ಇಂತಹ ಮತೀಯ ಕಾರಣಕ್ಕಾಗಿಯೇ ದಾದ್ರಿಯಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯ ಹತ್ಯೆ ನಡೆದಿದೆ. ಹೀಗೆ ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ಮತೀಯ ಗುಂಪುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇವುಗಳ ನಿಯಂತ್ರಣಕ್ಕೆ ಕೇಂದ್ರ ಸರಕಾರ ತೋರುವ ದಿವ್ಯ ನಿರ್ಲಕ್ಷವು ಎದ್ದು ಕಾಣುತ್ತಿದೆ. ಉತ್ತರ ಪ್ರದೇಶದ ಲಕ್ನೋ ಸಮೀಪದ ಗೌತಮಬುದ್ಧ ನಗರದಲ್ಲಿ ದಲಿತ ಕುಟುಂಬವನ್ನು ವಿವಸ್ತ್ರಗೊಳಿಸುವ ದರ್ಪವನ್ನು ಪೋಲೀಸ್ ಇಲಾಖೆ ತೋರಿರುವುದು ಅಮಾನವೀಯವಾಗಿದೆ. ಈಚೆಗೆ ದಲಿತ ಸಮುದಾಯದ ಮೇಲೆ ನಿರಂತರ ಹಲ್ಲೆಗಳು ಸರಣಿರೂಪದಲ್ಲಿ ಘಟಿಸುತ್ತಿವೆ. ರಾಜ್ಯ ಮತ್ತು ದೇಶದಲ್ಲಿ ನಿರಂತರವಾಗಿ ಸಾಮಾನ್ಯ ಸುದ್ದಿಯಂತೆ ವರದಿಯಾಗುತ್ತಿರುವ ರೈತರ ಆತ್ಮಹತ್ಯೆಗಳಿಗೆ ನೇರವಾಗಿ ಪ್ರಭುತ್ವದ ರೈತ ವಿರೋಧಿ ನೀತಿಗಳೆ ಕಾರಣವಾಗಿವೆ. ಈ ಬಗೆಯ ಎಲ್ಲಾ ನಡೆಗಳನ್ನು ವಿರೋಧಿಸುವುದು, ಈ ವಿರೋಧದ ಸಂಕೇತವಾಗಿ ಪ್ರಭುತ್ವದ ಪ್ರಶಸ್ತಿಯನ್ನು ಹಿಂತಿರುಗಿಸುವುದು ಚಳವಳಿಯ ಭಾಗವಾಗಿದೆ.

ಇಂತಹ ಚಳವಳಿಯ ಜತೆ ಕೈಜೋಡಿಸುವ ಆಶಯದೊಂದಿಗೆ ಈ ಪ್ರತಿರೋಧದ ಧ್ವನಿಯನ್ನು ದೊಡ್ಡದಾಗಿಸುವ ಮತ್ತು ಜನಾಭಿಪ್ರಾಯವನ್ನು ರೂಪಿಸುವ ನಿಟ್ಟಿನಲ್ಲಿ ಪ್ರಜ್ಞಾವಂತ ಜೀವಪರ ಸಾಹಿತಿಗಳು ಈ ಚಳವಳಿಯ ಜೊತೆಗೂಡುವ ಅಗತ್ಯವಿದೆ. ಹಾಗಾಗಿ ಈ ಚಳವಳಿಯ ಜತೆಗಾರನಾಗುವುದು ಒಬ್ಬ ಲೇಖಕನಾಗಿ ನನ್ನ ಜವಾಬ್ದಾರಿ ಎಂದು ಭಾವಿಸಿ, ವಯಕ್ತಿಕವಾಗಿ ನಾನು ತೆಗೆದುಕೊಳ್ಳುತ್ತಿರುವ ಈ ನಿರ್ಧಾರ ಸಕಾಲಿಕವಾದದ್ದು ಎನ್ನುವ ಖಚಿತ ನಿಲುವಿನೊಂದಿಗೆ ಈ ಅರಳು ಪ್ರಶಸ್ತಿಯನ್ನು ಹಿಂತಿರುಗಿಸುವ ನಿರ್ಧಾರಕ್ಕೆ ಬಂದಿದ್ದೇನೆ.

ಕನ್ನಡ ಸಾಹಿತ್ಯ ಪರಿಷತ್ತು ಮೊದಲ ಬಾರಿಗೆ ೨೦೦೮ ರಲ್ಲಿ ನೃಪತುಂಗ ಪ್ರಶಸ್ತಿಯ ಜೊತೆಗೆ ೩೫ ವರ್ಷದ ಒಳಗಿನ ಯುವ ಸಾಹಿತಿಗಳಿಗೆ ಅರಳು ಪ್ರಶಸ್ತಿ ನೀಡಲು ಆರಂಭಿಸಿತು. ಆಗ ಕನ್ನಡ ವಿಶ್ವವಿದ್ಯಾಲಯ ಹಂಪಿ, ಪ್ರಸಾರಾಂಗವು ೨೦೦೮ ರಲ್ಲಿ ಪ್ರಕಟಿಸಿದ ನನ್ನ ಸಂಶೋಧನೆಯಾದ `ಸಂಡೂರು ಭೂಹೋರಾಟ' ಎನ್ನುವ ಕೃತಿಗೆ ೨೦೦೮ ನೇ ಸಾಲಿನ `ಅರಳು ಸಾಹಿತ್ಯ' ಪ್ರಶಸ್ತಿಯನ್ನು ನೀಡಿತ್ತು. ಮೂಲತಃ ಒಂದು ರೈತ ಹೋರಾಟದ ಕುರಿತ ಸಂಶೋಧನೆಗೆ ಈ ಪ್ರಶಸ್ತಿಯು ಬಂದ ಕಾರಣ, ಪ್ರಭುತ್ವ ಕೊಡಮಾಡಿದ ಪ್ರಶಸ್ತಿಯನ್ನು ಹಿಂತಿರುಗಿಸುವಿಕೆಯೂ ಚಳವಳಿಯ ರೂಪು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಹಿಂತಿರುಗಿಸುವುದು ಹೆಚ್ಚು ಅರ್ಥಪೂರ್ಣ ಎಂದು ಭಾವಿಸಿದ್ದೇನೆ.

ಚೆಕ್ ಸಂಖ್ಯೆ: 096951
CANARA BANK, IFSC:CNRB0000698
ರೂ. ೧೦೦೦೦/- (ಹತ್ತು ಸಾವಿರ ರೂಗಳು ಮಾತ್ರ)

(ಪಲಕ, ನೆನಪಿನ ಕಾಣಿಕೆಯನ್ನು ನಂತರ ಪರಿಷತ್ತಿಗೆ ತಲುಪಿಸುತ್ತೇನೆ)
ವಂದನೆಗಳೊಂದಿಗೆ
ದಿನಾಂಕ: ೧೩.೧೦.೨೦೧೫ ತಮ್ಮ ವಿಶ್ವಾಸದ
ಸ್ಥಳ: ವಿದ್ಯಾರಣ್ಯ. 
(ಅರುಣ್ ಜೋಳದಕೂಡ್ಲಿಗಿ)

ಬುಧವಾರ, ಸೆಪ್ಟೆಂಬರ್ 9, 2015

ಎಂ.ಎಂ.ಕಲ್ಬುರ್ಗಿ ಅವರ ಹತ್ಯೆ ಮತ್ತು ಪ್ರಶಸ್ತಿ ಹಿಂತಿರುಗಿಸುವಿಕೆಯ ಪ್ರಶ್ನೆ

    
-ಕೆ. ಪುಟ್ಟಸ್ವಾಮಿ.



  ಸರ್ಕಾರ ಕೊಟ್ಟ ಪ್ರಸಸ್ತಿ, ಬಿರುದು, ಗೌರವ ಇತ್ಯಾದಿಗಳನ್ನು ಪ್ರತಿಭಟನೆಯಾಗಿ ಹಿಂದಿರುಗಿಸುವ ಪರಂಪೆರೆಯೊಂದಿದೆ. ಅದೂ ಕೂಡ ಎರವಲು ಅನುಕರಣೆ. (ಕೊಡುವುದಕ್ಕೆ ಮುನ್ನ ತಿರಸ್ಕರಿಸುವುದು ಬೇರೆ. ಪ್ರಶಸ್ತಿಗಾಗಿಯೇ ಲಾಬಿ ಮಾಡುವ ಜನರೇ ಹೆಚ್ಚಿರುವಾಗ ತಿರಸ್ಕರಿಸುವುದು ಇನ್ನೆಲ್ಲಿ? ಸಾಹಿತ್ಯಕ್ಕಾಗಿ 1964ರಲ್ಲಿ ನೀಡಿದ ನೊಬೆಲ್ ಪ್ರಶಸ್ತಿಯನ್ನು ಚಿಂತಕ ಜಾನ್ ಪಾಲ್ ಸಾರ್ತ್ರೆ ಅವರು 'ಒಂದು ಗೌರವ ರೂಪವಾದರೂ ಸಹ ಲೇಖಕ ಒಂದು ಸಂಸ್ಥೆಯಾಗಿ ಮಾರ್ಪಾಡಾಗಲು ಅವಕಾಶಕೊಡಬಾರದು' ಎಂದು ತಿರಸ್ಕರಿಸಿದರು. 1973ರಲ್ಲಿ ಶಾಂತಿಗಾಗಿ ನೀಡುವ ನೊಬೆಲ್ ಪಾರಿತೋಷಕವನ್ನು ವಿಯಟ್ನಾಮಿನಲ್ಲಿ ಶಾಂತಿ ನೆಲೆಸಲು ಹೆಣಗಿದ ವಿಯೆಟ್ನಾಮಿನ ಕ್ರಾಂತಿಕಾರಿ ಜನರಲ್ ಲಿ ಡಕ್ ಥೊ ಮತ್ತು ಅಮೆರಿಕದ ಸೆಕ್ರೆಟರಿ ಜನರಲ್ ಹೆನ್ರಿ ಕಿಸಿಂಜರ್ ರವರಿಗೆ ಹಂಚಲಾಯಿತು. ಆದರೆ ಶಾಂತಿ ಒಪ್ಪಂದದ ನಂತರವೂ ವಿಯೆಟ್ನಾಮಿನಲ್ಲಿ ಶಾಂತಿ ನೆಲಸಲಿಲ್ಲ ೆಂಬ ಕಾರಣಕ್ಕೆ ಲೇ ಡಕ್ ಥೋ ಪ್ರಶಸ್ತಿ ನಿರಾಕರಿಸಿದರು). 

   ಪ್ರಶಸ್ತಿ ಕೊಟ್ಟ ಒಂದು ಸರ್ಕಾರವು ಜನವಿರೋಧಿ ನೀತಿಗಳನ್ನು ಜಾರಿಮಾಡಿದಾಗ, ಅಸಮಾನತೆಯನ್ನು ವೃದ್ಧಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಿದಾಗ, ಅಮಾನವೀಯ ಕಾರ್ಯದ ಮೂಲಕ ಜನತೆಯನ್ನು ಮಾರಣಹೋಮಮಾಡಿದಾಗ, ಪ್ರಜಾತಂತ್ರದ ಧವನಿಯನ್ನು ಅಡಗಿಸಿದಾಗ ಹಿಂದೆ ಸರ್ಕಾರ ಕೊಟ್ಟ ಪ್ರಶಸ್ತಿಯನ್ನು ಅದರ ನೀತಿಯ ವಿರುದ್ಧ ಪ್ರತಿಭಟನೆಯಾಗಿ ಹಿಂದಿರುಗಿಸಿದರೆ ಅದಕ್ಕೊಂದು ಅರ್ಥ ಮತ್ತು ಸಮರ್ಥನೆ ಇದೆ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಡಾ. ಕೆ. ಶಿವರಾಮ ಕಾರಂತ ಮತ್ತು ಆಪರೇಷನ್ ಬ್ಲೂಸ್ಟಾರ್ ವಿರೋಧಿಸಿ ಖುಶ್ವಂತ್‍ ಸಿಂಗ್ ತಮ್ಮ ಪದ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದು ಇಂತಹ ಕಾರಣಗಳಿಂದ. 

    ಪ್ರೊ. ಕಲ್ಬುರ್ಗಿ ಹತ್ಯೆಯ ಹಿಂದೆ ಮತ್ತು ಮುಂದಿನ ದಿನಗಳಲ್ಲಿ ಸರ್ಕಾರ ಬಹಳ ಜವಾಬ್ಧಾರಿಯಿಂದಲೇ ವರ್ತಿಸಿದೆ. ಸರ್ಕಾರ ಕೊಟ್ಟ ಪೊಲೀಸ್ ರಕ್ಷಣೆಯನ್ನುಪ್ರೊಫೆಸರ್ರವರ ಸೂಚನೆಯಂತೆ ಹಿಂಪಡೆಯಲಾಗಿತ್ತು. ಹತ್ಯೆಯ ನಂತರ ಪ್ರಕರಣವನ್ನು ಸರ್ಕಾರ ಗಂಭೀರವಾಗಿಯೇ ಪರಿಗಣಿಸಿದೆ. ಸರ್ಕಾರದ ಪ್ರಚೋದನೆ ಅಥವಾ ನೀತಿಗಳಿಂದೆನೂ ಹತ್ಯೆ ಸಂಭವಿಸಿಲ್ಲ. ಆದರೂ ಪ್ರೊ. ಚಂಪಾ ಅವರು ಪಂಪ ಪ್ರಶಸ್ತಿಯನ್ನು ಹಿಂದಿರುಗಿಸಿದ ಕಾರಣ ಮೇಲಿನ ಎರಡೂ ಪರಂಪರೆಗಳಿಗೆ ಸೇರುವುದಿಲ್ಲ. ಸರ್ಕಾರ ತನಿಖೆ ಚುರುಕು ಮಾಡಿ ಆಪಾದಿತರನ್ನು ಹಿಡಿಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವ ಹೊತ್ತಿನಲ್ಲಿ ಈ ಹಿಂದಿರುಗಿಸುವ ಕ್ರಿಯೆಯಿಂದ ಯಾವ ಪ್ರಯೋಜನವೂ ಇಲ್ಲ. ಇವರನ್ನು ಅನುಕರಿಸಿ ಅನೇಕ ಯುವ ಸಾಹಿತಿಗಳು ಕ.ಸಾ.ಪ ನೀಡಿದ 'ಅರಳು' ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದಾರೆ. (ಪಟ್ಟಿಯಲ್ಲಿ ಗೆಳೆಯ ಸತೀಶ ಜವರೇಗೌಡ ಕೂಡ ಇದ್ದಾರೆ).ಚಂಪಾರವರಿಗಾದರೋ ಅರವತ್ತು ದಾಟಿದೆ,ಈ ಯುವಕರಿಗೆ ಇಷ್ಟು ಬೇಗ ಅರಳು ಮರಳು ಬಂತೇ?

ಮಂಗಳವಾರ, ಸೆಪ್ಟೆಂಬರ್ 8, 2015

ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ.ಮಲ್ಲಿಕಾ ಘಂಟಿ ಮೇಡಂ

ಸಮಸಮಾಜದ ಕನಸಿನ ಪ್ರೊ.ಮಲ್ಲಿಕಾ ಘಂಟಿ ಮೇಡಂ ಅವರು ಇಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡರು. 22 ವರ್ಷ ಪೂರೈಸಿದ ಕನ್ನಡ ವಿಶ್ವವಿದ್ಯಾಲಯದ ಮೊದಲ ಮಹಿಳಾ ಕುಲಪತಿ ಎನ್ನುವ ಚಾರಿತ್ರಿಕ ದಾಖಲೆಯನ್ನೂ ಬರೆದರು. ಚಳವಳಿಯ ಹಿನ್ನೆಲೆಯಿಂದ ಬಂದ, ನಿರಂತರ ಕ್ರಿಯಾಶೀಲವಾಗಿರುವ ಪ್ರೊ.ಮಲ್ಲಿಕಾ ಘಂಟಿ ಮೇಡಂ ಆಗಮನದಿಂದ ಕನ್ನಡ ವಿಶ್ವವಿದ್ಯಾಲಯದ ಬೆಳವಣಿಗೆಯ ಬಗೆಗೆ ಹೊಸ ಕನಸುಗಳು ಗರಿಗೆದರಿವೆ. ಕುಲಪತಿಯಾಗಿ ಅಧಿಕಾರವಹಿಸಿಕೊಂಡ ಸಂದರ್ಭದ ಕೆಲವು ಸಂತಸದ ಕ್ಷಣಗಳಿವು..








ಸೋಮವಾರ, ಸೆಪ್ಟೆಂಬರ್ 7, 2015

ರೊಟ್ಟಿ ಮತ್ತು ಹುಡುಗಿ -ಮಲ್ಲಿಕಾ ಘಂಟಿ ಅವರ ಕಾವ್ಯ ವಿಶ್ಲೇಷಣೆ


ರೊಟ್ಟಿ ಮತ್ತು ಹುಡುಗಿ



ಈ ಪದ್ಯದ ವಾಚನ ಕೇಳಲು ಈ ಲಿಂಕ್  ಒತ್ತಿ:

http://www.karnatakasahithyaacademy.org/drMallikaGhanti4.html

ಹೆಪ್ಪುಗಟ್ಟಿದ ಕತ್ತಲ ರಾತ್ರಿಯ
ಮಾಗಿ ಚಳಿ ತಬ್ಬಿ. ಬಯಲ
ಬಾಗಿಲಿನಿಂದ ಸರಿದು ಬರುವ
ಸಿಳ್ ಗಾಳಿ ಕಂಪನ ಹುಟ್ಟಿಸಿತು
ಹರಿದ ಸೀರೆಯಲಿ ಹುಡುಗಿಗೆ.
ಕಳೆದುಕೊಂಡ ವಸಂತಗಳ
ಮಿಣಿಕು ದೀಪದಲಿ ಕನವರಿಸಿ
ಬಾಚಿ ಹಿಡಿದ ಹುಡುಗಿಯ ಕೈಗೆ ಸಿಕ್ಕಿದ್ದು
ಬಡಮನೆಯ ಚೆಕ್ಕಳು.
ಸಾವಿನ ಕುಣಿಕೆಯ ಹಿಡಿದು ಬರುವ
ಸರದಾರನ ಹೆಜ್ಜೆ ಭಾರ, ಬೆಸೆದ ಎವೆಗಳ ಮಧ್ಯ ಕನಸುಬಾರ
ತೆರೆದ ಕಣ್ಣುಗಳಲಿ ಸಾಲುಗಟ್ಟಿನಿಂತ ಸಾವಿನ ಸರದಾರರ ಚಿತ್ರ
ದನಿಬಿದ್ದವಳ ಕೊರಳಲ್ಲಿ ಕರಗಲಾರದ ಹೆಪ್ಪಿಟ್ಟ ನೋವು
ನಡುಗಿದಳು ಹುಡುಗಿ ರೊಟ್ಟಿ ಕಾಣದ ಮುದಿ
ತಂದೆ-ತಾಯಿಗಳ ನೆನೆನೆನೆದು. ಸಾವಿನ
ಸಂಕಟದಲ್ಲಿಯೂ ಶ್ರವಣಕುಮಾರನ ನೆನಪು
ರೆಕ್ಕೆ ಬಡಿದು ಹಲಬುವ ಪ್ರಾಣ ಪಕ್ಷಿಯ ಒತ್ತಿ
ಹರಿದ ಕುಪ್ಪಸದಲ್ಲಿಕ್ಕಿ ಹೊತ್ತಿಸಿದಳು ಬದುಕ ಕುಲುಮೆ.
ಬಂದವರು ಹೋದವರು ತಿಂದವ
ರು; ಸರಿದು ಹೋಗುವಾಗ ಕೇಳುವುದು
ಹುಡುಗಿಯ ಜೀವ `ನನ್ನ ಕಿಚ್ಚಿಗೆ ಮೈಕಾಯಿಸಿ'
ಕೊಂಡ; ನೀವು ಆರಿ ತಣ್ಣಗಾಗುವುದೆಂದು.
ಕಗ್ಗತ್ತಲ ಬಂಡೆಯ ಕೆಳಗೆ
ಇಳಿದೊಗಲ ತಂದೆ ತಾಯಿಗಳ ಕಂಡು ಹುಡುಗಿ
ಕಣ್ಣ ಬತ್ತಿಯ ಮೈಯ ಪಣತೆಯಲ್ಲಿಟ್ಟು
ಹಚ್ಚಿದಳು ಛಲದ ಬಿಸಿಯುಸಿರ ದೀಪ.
ಭರವಸೆಯ ಬೆಳಕಲಿ ಕೇಳಿದಳು ಜಗಕೆ
ಬಾಗಿದ ಬೆನ್ನಿಗೆ ಊರುಗೋಲು ಗಂಡು ಮಾತ್ರ ಎಂದಿರಲ್ಲ
ಹೇಳಿ ಈಗ ಸಾಲುಸಾಲಾಗಿ ಹುಟ್ಟಿದ
ಗಂಡುಗಳೆಲ್ಲ ಊರುಗೋಲಾಗದೆ ಉರಿವ ಕೊಳ್ಳಿಯಾದವೇಕೆ?
ಹೆಪ್ಪಿಟ್ಟ ಇರುಳ ಸೂರ್ಯನ ಕಡೆದು
ಬೆಳಕ ಮಜ್ಜಿಗೆಯಲಿ ತೇಲಿಬಿಟ್ಟ
ಹುಡುಗಿಯ ಕನಸಿನ ಚಿಕ್ಕಚಂದ್ರಾಮರು
ಕತ್ತಲಾಗದೆ ಮಿನಿಗಲಾರೆವೆಂದು ಹೊಸೆದ ಕಾಲುಗಳ
ಮುರಿದು, ಅಲ್ಲಾಡಿಸಿದ ಕತ್ತು ಹಿಚುಕಿ
ಹುಡುಕುತ್ತಿರುವಳು ಹುಡುಗಿ ಕತ್ತಲೆ ಹೊತ್ತು
ಬೆಳಕಿನಲಿ ರೊಟ್ಟಿ ತರುವ ಕೈಗಳಿಗಾಗಿ.
-ಮಲ್ಲಿಕಾ ಘಂಟಿ
ಸ್ವಂತದ ಹುಡುಕಾಟ; ಬದುಕಿನ ಹೋರಾಟ
ರೊಟ್ಟಿ ಮತ್ತು ಹುಡುಗಿ ಎರಡೂ ಸಂಧಿಸದ ಸಮಾಂತರ ರೇಖೆಗಳಾಗಿ ಲಂಬವಾಗಿ ನಿಂತ ಧ್ರುವಗಳು. ರೊಟ್ಟಿ ಹುಡುಗಿಗೆ ದಕ್ಕದಂತೆ ಮಾಡಲಾಗಿದೆ. ಕೃಷಿಗೆ ಮೂಲ ಹೇಗೋ ಹಾಗೆ ಹುಡುಗಿಯಿಂದಲೇ ರೊಟ್ಟಿಯ ಸೃಷ್ಟಿ. ಭೂಮಿ / ಆಸ್ತಿಗೆ ಅವಳು ಒಡೆಯಳಲ್ಲ; ದುಡಿಮೆಗೆ ಸೀಮಿತಗೊಂಡವಳು. ಹೀಗಾಗಿ ಅವಳು ಭೂಮಿ. ಇಲ್ಲಿ ಭೂಮಿಗೂ, ಹುಡುಗಿಗೂ, ರೊಟ್ಟಿಗೂ ಅವಿನಾಭಾವ ಸಂಬಂಧ.
ಭೂಹಂಚಿಕೆಯಿಂದ ವಂಚಿತಳಾದರೂ ಬದುಕಿನ ಬಿಕ್ಕಟ್ಟಿಗೆ ದೇಹವನ್ನೇ ಕ್ಷೇತ್ರವಾಗಿಸಿ ರೊಟ್ಟಿಗೆ ಕಾರಣಳು. ಹೆತ್ತವರ ಹಸಿವನ್ನು ಹಿಂಗಿಸಿದವಳು. ಹಾಗಾಗಿ ಇಲ್ಲಿ ಹುಡುಗಿ ಪರಂಪರೆಯ ಪ್ರಜ್ಞೆ ಮತ್ತು ವಂಶೋದ್ಧಾರದ ಜಿಜ್ಞಾಸೆಯೂ ಹೌದು. ಸಮಾಂತರ ರೇಖೆಗಳನ್ನು ಕೂಡಿಸದ ಹಾಗೂ ಲಂಬವನ್ನು ಲಂಘಿಸದಂತೆ ಮಾಡಿದ ವ್ಯವಸ್ಥೆಯನ್ನು ಪಲ್ಲಟಿಸುವ, ಪರಂಪರಾಗತ ನಂಬಿಕೆಯ ಬೇರುಗಳನ್ನು ಅಲ್ಲಾಡಿಸುವುದು ಬದುಕಿಗೆ ಊರುಗೋಲಾಗಿರುವ ಹುಡುಗಿ. ಪಿತೃಪ್ರಾಧಾನ್ಯತೆಯಲ್ಲಿಯ ಲಿಂಗಾಧಾರಿತ ದುಡಿಮೆ ಮತ್ತು ಲೈಂಗಿಕ ದುಡಿಮೆ ಇವುಗಳ ವಿಭಜನೆಯಲ್ಲಿನ ರಾಜಕೀಯ ಪ್ರಶ್ನೆಯೇ ಕಾವ್ಯಕಾರಣ.
ಹರಿದ ಸೀರೆಗೆ ಬಯಲ ಬಾಗಿಲಿನಿಂದ ಸರಿದು ಬಂದ ಚಳಿ ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ. ಮಾಗಿ ಚಳಿ ತಬ್ಬಿದ್ದು ಸಖನ ಸಾಂಗತ್ಯದ ಸವಿನೆನಕೆಗಲ್ಲ. ಹಸಿದ ಹೊಟ್ಟೆಯಲ್ಲಿ ಕೊರೆಯುವ ಚಳಿ ವಸಂತಾಗಮನವನ್ನು ಸಂಭ್ರಮಿಸದ ಮನಸ್ಥಿತಿಯಲ್ಲಿ ಅವಳಿಗೆ ಸಿಕ್ಕಿದ್ದು ಮಾತ್ರ ತನ್ನನ್ನು ತಾನು ಸುಧಾರಿಸಿಕೊಳ್ಳಲಾಗದ ಬಡಮನೆಯ ಚಕ್ಕಳು. ಬಯಲಬಡತನ ಮತ್ತು ಹರಿದ ಸೀರೆ. ವ್ಯವಸ್ಥೆಯ ನಿಯಂತ್ರಣದಲ್ಲಿ ಚಲನರಹಿತತೆಯಿಂದಾಗಿ ಹುಟ್ಟಿದ ಹುಡುಗಿಯ ತಲ್ಲಣ-ಆತಂಕ-ಪ್ರಶ್ನೆಗಳು ಅಸ್ಮಿತೆಯ ಹುಡುಕಾಟವಾಗಿ `ಭಿನ್ನತೆ'ಯ ಇತಿಹಾಸವನ್ನು ಮರುಸ್ಥಾಪಿಸಬಯಸುತ್ತದೆ.
ಸಾವು ಬದುಕುಗಳ ಸಂಘರ್ಷದಲ್ಲಿ ಸಾಲುಗಟ್ಟಿನಿಂತ ಸಾವಿನ ಸರದಾರರ ಚಿತ್ರ ಹುಡುಗಿಯ ಜೀವ ರಕ್ಷಕಗಳಾಗದೆ ಸಾವಿನ ಸರದಾರರ ವ್ಯಂಗ್ಯ ಅಸಮ ಸಮಾಜದ ಅನಾವರಣವಾಗಿದೆ. ಹೆಣ್ಣು ಎಂದೂ ಧ್ವನಿ ಎತ್ತದಂತೆ ಮಾಡಿದ ವ್ಯವಸ್ಥೆ ಅವಳು ಚಲನಶೀಲಳಾಗುವುದನ್ನು ನಿರಾಕರಿಸುತ್ತದೆಂಬುವುದನ್ನು ಕರಗಲಾರದ ಹೆಪ್ಪಿಟ್ಟ ನೋವು ಧ್ವನಿಪೂರ್ಣವಾಗಿ ಹಿಡಿದಿಟ್ಟಿದೆ.  ಅದನ್ನು ಕಡೆದು ಮಜ್ಜಿಗೆ, ಬೆಣ್ಣೆ, ತುಪ್ಪದಂತೆ ರೂಪಾಂತರ ಮಾಡಲಾಗುವುದಿಲ್ಲ. ಅದು ಕಾಲಾನುಕಾಲದಿಂದ ಒಂದೇ ತೆರನಾದುದು. ಅದಕ್ಕೆ ಅದು ಹೆಪ್ಪಿಟ್ಟ ನೋವು. ಶೋಷಕ ವ್ಯವಸ್ಥೆ ಯಾವತ್ತೂ ಯಥಾಸ್ಥಿತಿಯನ್ನು ವ್ಯವಸ್ಥಿತವಾಗಿ ಕಾಪಾಡುತ್ತದೆ.
ರೆಕ್ಕೆ ಬಡಿವ ಹಕ್ಕಿ ಹುಡುಗಿಯ ಜೀವನೋತ್ಸಾಹ ಹಾಗೂ ಚಲನೆಯ ಸಂಕೇತ. ಈ ಚಲನಶೀಲತೆಯನ್ನು ಹತ್ತಿಕ್ಕಿಕೊಳ್ಳುವುದು ಹರಿದ ಕುಪ್ಪಸದಲ್ಲಿ. ಅದು ರೊಟ್ಟಿಗಾಗಿ. ಈ ರೊಟ್ಟಿ ತನಗಾಗಿ ಮಾತ್ರ ಅಲ್ಲ; ಹೆತ್ತವರಿಗಾಗಿಯೂ. ಆದರೆ ಹೆತ್ತವರಿಗೆ ವಂಶೋದ್ಧಾರಕನ ನೆನಪು. ಶ್ರವಣಕುಮಾರ ಒಂದು ಅನ್ವರ್ಥಕ ಮತ್ತು ಪ್ರಶ್ನೆ ಕೂಡ. ಗಂಡನ್ನು ಮಾತ್ರ ವಾರಸುದಾರನನ್ನಾಗಿ ನಂಬಿಸಲು ಯಾಜಮಾನ್ಯ ರೂಪಿಸಿದ ಸಾಮಾಜಿಕ ನೀತಿ, ನಿರೂಪಣೆಗಳು `ಶ್ರವಣಕುಮಾರ' ರೂಪಕದ ಸಾಂಸ್ಕೃತಿಕ ಲಿಂಗರಾಜಕಾರಣವನ್ನು `ಹುಡುಗಿ ತನ್ನ ಪ್ರಾಣ ಪಕ್ಷಿಯ ಒತ್ತಿ ಹರಿದ ಕುಪ್ಪಸದಲ್ಲಿ ಹೊತ್ತಿಸಿದಳು ಬದುಕ ಕುಲುಮೆ' ಒಡೆಯುವ ಮೂಲಕ ಪ್ರತಿರೋಧ ಒಡ್ಡುತ್ತದೆ. ತನ್ನ ದೇಹದ ಮೇಲೆ ಸಾಧಿಸುವ ಪುರುಷಾಧಿಪತ್ಯವನ್ನು ಪ್ರಶ್ನಿಸುತ್ತದೆ. `ನನ್ನ ಕಿಚ್ಚಿಗೆ ಮೈಕಾಯಿಸಿಕೊಂಡ; ನೀವು ಆರಿ ತಣ್ಣಗಾಗುವುದೆಂದು' ಉರಿವ ಸೂರ‌್ಯನನ್ನು ಕೆಣಕುತ್ತಲೇ ಚಂದ್ರನಂತ ಪ್ರಿಯತಮನ ಸ್ನೇಹ-ಸಾಂಗತ್ಯದ ಹಂಬಲದ ಬಯಕೆ ನಿರಂತರವಾಗುತ್ತದೆ.
ಇಲ್ಲಿ ಮೈಮಾರಿ ತಂದೆ-ತಾಯಿಯನ್ನು ಬದುಕಿಸಿದ ಹುಡುಗಿ ನೈತಿಕತೆಯ ನಿಷ್ಕರ್ಷೆ ಮಾಡುವ ಸಮಾಜದಲ್ಲಿ ಅಧೀರಳಲ್ಲ. ಅವಳು ಛಲದ ಬಿಸಿಯುಸಿರ ದೀಪ ಹಚ್ಚಿದವಳು. ಅದಕ್ಕೆಂದೇ `ಬಾಗಿದ ಬೆನ್ನಿಗೆ ಊರುಗೊಲು ಗಂಡು' ಮಾತ್ರ ಎನ್ನುವ ಲಿಂಗತ್ವಕ್ಕೆ ಸವಾಲಾಗುತ್ತಾಳೆ. ಪಿತೃಶಾಹಿಯ `ವಂಶೋದ್ದಾರಕ' ಪರಿಕಲ್ಪನೆ ಹೇಗೆ ನಿರಾಧಾರವಾದುದು, ನಯವಂಚಕತೆಯಿಂದ ಕೂಡಿದೆ ಎಂಬುದನ್ನು ಹುಡುಗಿ ಬದುಕ ಕುಲುಮೆ ಹೊತ್ತಿಸುವ ಮೂಲಕ ನಿರೂಪಿಸುತ್ತಾಳೆ.
ಅದು ಪುರುಷದ್ವೇಷವಲ್ಲ. ಅವನು ಅವಳ ಸಹಜೀವಿ; ಸಖ. `ಹುಡುಗಿಯ ಕನಸಿನ ಚಿಕ್ಕಿಚಂದ್ರಾಮರು... ಕತ್ತಲೆ ಹೊತ್ತು ಬೆಳಕಿನಲಿ ರೊಟ್ಟಿ ತರುವ ಕೈಗಳಿಗಾಗಿ'- ರೊಟ್ಟಿಯ ಸಮಹಂಚಿಕೆಯ ಪ್ರತಿಪಾದನೆ ಪಿತೃಪ್ರಧಾನತೆಗೆ ಪರ್ಯಾಯವಾಗಿ ಮಹಿಳಾ ಇತಿಹಾಸಕ್ಕೆ ವಿಮೋಚನೆ ನೀಡುವ ದಿಸೆಯಲ್ಲಿ `ಲಿಂಗತ್ವ' ಸಂಬಂಧವನ್ನು ಪ್ರಜಾಸತ್ತಾತ್ಮಕಗೊಳಿಸುವತ್ತ ವೈಚಾರಿಕ ಸ್ಫೋಟವನ್ನುಂಟು ಮಾಡಿದೆ.               
-ಡಾ. ಅನಸೂಯಾ ಕಾಂಬಳೆ