ಭಾನುವಾರ, ಮಾರ್ಚ್ 16, 2014

ಭಾರತೀಯ ಡಯಾಸ್ಪೊರಾ – ಒಂದು ಪ್ರಾಥಮಿಕ ವಿಶ್ಲೇಷಣೆ


ಡಯಾಸ್ಪೊರಾ ಆಧುನಿಕ ಸಂಕಥನಗಳಲ್ಲಿ ಬಳಕೆಯಾಗುತ್ತಿರುವ ಪಾರಿಭಾಷಿಕ ಪದ. ವಾಸ್ತವವಾಗಿ ಡಯಾಸ್ಪೊರಾ ಪದ ಹಳೆಯದಾದರೂ ಅದೊಂದು ಪಾರಿಭಾಷಿಕ ಪದವಾಗಿ ವಿಶಾಲ ವ್ಯಾಪ್ತಿಯಲ್ಲಿ ಬಳಕೆಯಾಗುತ್ತಿರುವುದು ಆಧುನಿಕ ಸಂದರ್ಭದಲ್ಲಿಯೇ. ಡಯಾಸ್ಪೊರಾ ಎನ್ನುವ ಪದವನ್ನು ಇಂದು ಅಂತರ್ ಶಿಸ್ತೀಯ ಪದವಾಗಿ ಬಳಸಲಾಗುತ್ತಿದೆ. ಅದೊಂದು ಏಕಕಾಲದಲ್ಲಿ ಚರಿತ್ರೆ, ಆರ್ಥಿಕ, ಸಮಾಜಶಾಸ್ತ್ರೀಯ, ಮಾನವಶಾಸ್ತ್ರೀಯ, ರಾಜಕೀಯ, ಸಾಂಸ್ಕೃತಿಕ ವಲಯಗಳಲ್ಲಿ ಬಳಕೆಯಾಗುತ್ತಿರುವ ಪಾರಿಭಾಷಿಕ ಪದ. ಇದರ ಈ ವ್ಯಾಪ್ತಿಯ ಕಾರಣದಿಂದಲೋ ಏನೋ ಅದನ್ನು ವಿವರಿಸಲು ತ್ರಾಸು ಪಡಬೇಕಾದ ಸನ್ನಿವೇಶ ಉಂಟಾಗಿದೆ. ಡಯಾಸ್ಪೊರಾ ಪದವನ್ನು ಯಾರು ಯಾವ ಕಾರಣದಿಂದ, ಯಾವ ಯಾವ ಉದ್ದೇಶಗಳಿಗಾಗಿ ಬಳಸುತ್ತಿದ್ದಾರೆ ಎಂಬುದನ್ನು ಮೊದಲು ತಿಳಿದುಕೊಂಡೇ ಪದವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳಬೇಕಾದ ಸಂದರ್ಭವೂ ನಿರ್ಮಾಣವಾಗಿದೆ. ಡಯಾಸ್ಪೊರಾ ಪದ ಎನ್ನುವುದು ಒಂದು ಜಾಲ; ಅದರಲ್ಲಿ ಅನೇಕ ಉಪಜಾಲಗಳಿವೆ. ಅನೇಕ ಸರಣಿ ಜಾಲಗಳೂ ಅದರೊಳಗೆ ಇರಬಹುದು. ಹೀಗಾಗಿ ಡಯಾಸ್ಪೊರಾ ಪದವನ್ನು ಒಂದು ಆಯಾಮದಲ್ಲಿ ನೋಡಲು ಅಸಾಧ್ಯ ಎನ್ನಿಸುವಂತಿದೆ. ೧೯೯೧ರ ನಂತರ ಡಯಾಸ್ಪೊರಾ ಎನ್ನುವುದು ಕ್ಷೇತ್ರಾಧ್ಯಯನಗಳು, ಜನಾಂಗೀಯ ಅಧ್ಯಯನಗಳು, ಸಾಂಸ್ಕೃತಿಕ ಅಧ್ಯಯನಗಳ ನೆಲೆಗಳಲ್ಲಿ ಬಿಚ್ಚಿಕೊಳ್ಳುತ್ತಿದೆ.

ಡಯಾಸ್ಪೊರಾ ಎಂಬ ಪದವು ಆಕ್ಸ್‌ಫರ್ಡ ನಿಘಂಟಿನ ೧೯೮೭ರ ಆವೃತ್ತಿಯವರೆಗೂ ಬಳಕೆಯಲ್ಲಿರಲಿಲ್ಲ. ೧೯೯೧ರ ಆವೃತ್ತಿಯಲ್ಲಿ ಡಯಾಸ್ಪೊರಾ ಪದ ಅದರಲ್ಲಿ ಸೇರಿಕೊಂಡಿತು. ಈ ಹೊಸ ಆವೃತ್ತಿಯಲ್ಲಿ ಹೊಸ ಅನುಬಂಧಗಳ ಜೊತೆ ಡಯಾಸ್ಪೊರ ಪರಿಕಲ್ಪನೆಯನ್ನು ದಾಖಲಿಸಲಾಯಿತು. ೧೯೯೩ರ ಆಕ್ಸಫರ್ಡ ನಿಘಂಟಿನ ಆವೃತ್ತಿಯಲ್ಲಿ ಡಯಾಸ್ಪೊರಾ ಎಂದರೆ ‘ತಾಯ್ನಾಡಿನಿಂದ ದೂರಾಗಿ ಬದುಕುತ್ತಿರುವ ಯಾವುದೇ ಜನರು‘ ಎಂಬ ಅರ್ಥ ನೀಡಲಾಗಿದೆ.

ಮಿಶ್ರ ಸಂಸ್ಕೃತಿಯ ದ್ರವೀಕೃತ ಸಂತತಿ

ಡಯಾಸ್ಪೊರ ಮೂಲತಃ ಅಸ್ಮಿತೆಯ ತಾಕಲಾಟ, ಅದು ಧಾರ್ಮಿಕ, ಜನಾಂಗೀಯ, ರಾಷ್ಟ್ರೀಯ ಅಸ್ಮಿತೆಗಳಾಗಿರಬಹುದು. ಬರುಬರುತ್ತಾ ಡಯಾಸ್ಪೊರ ಸಮಾಜಶಾಸ್ತ್ರೀಯ ಅಧ್ಯಯನಗಳಿಗೇ ಹೆಚ್ಚು ಸೂಕ್ತವೆನಿಸುತ್ತದೆ. ಅಲೆಮಾರಿತನದ ವಾಂಛೆ, ವಲಸಿಗ ಪ್ರವೃತ್ತಿ, ಜನಾಂಗೀಯ ಕಲ್ಪನೆಗಳು, ಮಿಶ್ರತಳಿಯಲ್ಲಿ ಉಂಟಾದ ಪರಿಣಾಮಗಳು ಇತ್ಯಾದಿಗಳು ಸಮಾಜಶಾಸ್ತ್ರೀಯ ಆಂಥ್ರೋಪಾಲಜಿ ಶಿಸ್ತಿಗೆ ಹತ್ತಿರ ಇರುವಂತಹ ಅಂಶಗಳು. ಬಾಹುಳ್ಯವೇ ಪ್ರಧಾನ ಲಕ್ಷಣವಾಗಿರುವ ಡಯಾಸ್ಪೊರಾ ಗುಂಪು ತಮ್ಮದೇ ಆದ ಮಿಶ್ರ ಸಂಸ್ಕೃತಿಯನ್ನು ಹುಟ್ಟು ಹಾಕುತ್ತವೆ. ಅವು ಭಾಷಿಕ, ವರ್ಗೀಯ, ಸಾಂಸ್ಕೃತಿಕ ಅಂಶಗಳ ಬಹುಳತೆಯಿಂದ ಉಂಟಾದ ಮಿಶ್ರಣ ಸ್ಥಿತಿ.

ಡಯಾಸ್ಪೊರಾ ಪದ ಎನ್ನುವುದಕ್ಕೆ ಒಂದು ಸ್ಥಿರವಾದ ಅರ್ಥಸೂಚನೆ ಇಲ್ಲದ್ದರಿಂದ ಅದನ್ನು ಕನ್ನಡದಲ್ಲಿ ವಿವರಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ. ವಲಸೆ, ವಲಸಿಗ (immigrant) ಎಂಬರ್ಥವನ್ನು ಪಡೆದುಕೊಂಡರೂ ಡಯಾಸ್ಪೊರಾ  ಸಂಪೂರ್ಣವಾಗಿ ವಲಸೆಯನ್ನು ಕುರಿತಾದ ಪರಿಭಾಷೆ ಮಾತ್ರವಲ್ಲ. ವಲಸೆ ಮತ್ತು ಡಯಾಸ್ಪೊರಾ ಪರಿಕಲ್ಪನೆಗಳನ್ನು ಯಾವಾಗಲೂ ಒಂದರ ಮೇಲೊಂದು ಹಾದು ಹೋಗುವ ಕಿರಣಗಳಂತೆ ಕಾಣಲಾಗುತ್ತದೆ. ಡಯಾಸ್ಪೊರಾವನ್ನು ವಲಸೆ ಎಂದು ನೋಡುವ ಅಸಂದಿಗ್ಧತೆಯ ನೆರಳು ಅದರ ಮೇಲೆ ಬಿದ್ದಿರುವುದು ವಿಷಾದನೀಯ ಎಂದು ಗೇಬ್ರಿಯಲ್ ಷೆಫರ್ ಹೇಳುತ್ತಾರೆ (Diaspora Politics, 2003). ದೇಶದ ನಾಗರೀಕತೆಯನ್ನು ತೊರೆದುಹೋದ, ದೇಶಭ್ರಷ್ಟರಾಗಿ ವಿದೇಶಗಳಲ್ಲಿ ನೆಲೆಸಿರುವವರು (Expatriates) ಕೂಡಾ ಡಯಾಸ್ಪೊರಾಕ್ಕೆ ಹತ್ತಿರ ಬರುತ್ತಾರೆ. ಅನಿವಾಸಿಗಳು ಕೂಡ ಡಯಾಸ್ಪೊರಾಕ್ಕೆ ಸೇರಿದವರೇ ಅಲ್ಲವೇ?  ಡಯಾಸ್ಪೊರಾದ  ಅಧ್ಯಯನದಲ್ಲಿ ಪೂರ್ಣಪ್ರಮಾಣದಲ್ಲಿ ಈ ಎಲ್ಲವನ್ನೂ ಸೇರಿಸುವುದು ಸಾಧ್ಯವೇ ಎಂಬುದರ ಬಗ್ಗೆಯೇ ಇನ್ನೂ ಚಿಂತನೆಗಳು ನಡೆಯುತ್ತಿವೆ. ಆದ್ದರಿಂದ  ಡಯಾಸ್ಪೊರಾ ಎಂಬ ಪದವನ್ನು ಕನ್ನಡದಲ್ಲಿ ಅದು ಇರುವಂತೆಯೇ ಬಳಸಿಕೊಂಡಿದ್ದೇನೆ. ಡಯಾಸ್ಪೊರಾ ಸಮುದಾಯಕ್ಕೆ ಸೇರಿದವರನ್ನು ಡಯಾಸ್ಪೊರಿಗೆಂದೇ ಬಳಸಿಕೊಂಡಿದ್ದೇನೆ. ಡಯಾಸ್ಪೊರಾ ಎನ್ನುವದೇ ನಿರಂತರ ಒಡೆದುಕೊಳ್ಳುವ ಗುಣಕದಂತಿರುವಾಗ (ಅಥವಾ ಕವಲು ಕವಲಾಗಿ ಒಡೆದುಕೊಳ್ಳುವ ಮರದ ಟೊಂಗೆಗಳಂತಿರುವಾಗ) ಈ ದ್ರವೀಕೃತ ಪರಿಭಾಷೆಯನ್ನು ಎಲ್ಲಿ ಹೇಗೆ ಬಳಸಬೇಕೆಂಬುದು ಯಾವಾಗಲೂ ತೊಡಕಿನ ಸಂಗತಿ. ಡಯಾಸ್ಪೊರ ಹಲವು ಸಂಸ್ಕೃತಿಗಳನ್ನು ಒಮ್ಮೆಗೇ ಹಾದುಹೋಗುವ ವಿಚಿತ್ರ ಸಂದರ್ಭದಲ್ಲಿ ಹುಟ್ಟುವುದರಿಂದ ಅದರ ಸಂಕೀರ್ಣತೆ ಮನಗಾಣುವುದು ಕಷ್ಟಸಾಧ್ಯವೇ. ಆದರೆ ಅದನ್ನು ಸ್ಥಾನ ಪಲ್ಲಟಗಳ ಚಲನೆಯನ್ನು ಗುರುತಿಸುವ ಪದವಾಗಿ, ಪಲ್ಲಟಗೊಳ್ಳುತ್ತಲೇ ಇರುವ ಗುಂಪನ್ನು ಸೂಚಿಸುವ ಪದವಾಗಿ ಬಳಸಲಾಗುತ್ತಿದೆ ಎನ್ನುವುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗುತ್ತದೆ. ಡಯಾಸ್ಪೊರಾ ಎಷ್ಟು ಅಸಂಗತ ಸಂಗತಿಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ ಎಂದರೆ ಅದು ಒಂದೆಡೆ ಜಾಗ/ಪ್ರದೇಶಗಳ ವ್ಯಾಪ್ತಿ ಪ್ರದೇಶಗಳ ಬಗ್ಗೆ ಮಾತನಾಡುತ್ತದೆ; ಇನ್ನೊಂದೆಡೆ, ಜನಾಂಗೀಯ/ಭಾಷಿಕ ಸಂದರ್ಭಗಳಲ್ಲಿ ಅಖಿಲ ಜಾಗತಿಕ ವ್ಯಾಪ್ತಿಯನ್ನು ತೋರ್ಪಡಿಸುಂಥದು. ಆದ್ದರಿಂದಲೇ ಇವನ್ನು ಆಯಾ ತಲೆಬರಹದಡಿಗೆ ಚರ್ಚಿಸುವುದೇ ಸೂಕ್ತ ಎನ್ನಿಸುತ್ತದೆ.

ಈ ಹಿನ್ನೆಲೆಯಲ್ಲಿ ಭಾರತೀಯ ಡಯಾಸ್ಪೊರಾವನ್ನು ನೋಡಬೇಕಿದೆ. ಪ್ರಕಾಶಿಸುತ್ತಿರುವ ಭಾರತದ ಹೊಸ ಚಿತ್ರವೊಂದು ತೊಂಬತ್ತರ ನಂತರದ ದಶಕಗಳಲ್ಲಿ ಕಾಣಿಸತೊಡಗಿದೆ. ಇಂದು ಭಾರತೀಯರನ್ನು ಜಗತ್ತು ವಿಶೇಷವಾಗಿ ಗಮನಿಸುತ್ತಿದೆ. ಭಾರತೀಯ ಸಿನಿಮಾ, ಭಾರತೀಯ ಊಟೋಪಚಾರಗಳು, ಭಾರತೀಯ ಯೋಗ/ಅಧ್ಯಾತ್ಮಗಳೆಲ್ಲಾ ಹೆಸರು ಮಾಡುತ್ತಿವೆ. ಟೆಕ್ಕಿಗಳನ್ನು ಹೊಂದಿದ ದೇಶ ಎಂದೂ ಅದಕ್ಕೆ ಮಾನ್ಯತೆ ಸಿಗುತ್ತಲಿದೆ. ಇದನ್ನು ನೋಡಿದರೆ ಸಾಗರೋಲ್ಲಂಘನೆಯಿಂದ ಭಾರತೀಯತೆಗೇ ಒಂದು ಹೊಸ ವ್ಯಾಖ್ಯಾನ ಸಿಗುವಂತಾಗಿದೆ ಎನ್ನಿಸುತ್ತಿದೆ. ಆದ್ದರಿಂದಲೇ ಭಾರತೀಯ ಡಯಾಸ್ಪೊರಾ ಎನ್ನುವುದು ಇಂದು ಆಸಕ್ತಿಯ ವಿಷಯವಾಗಿದೆ. ಇತರೆ ಎಲ್ಲಾ ಡಯಾಸ್ಪೊರಾಗಳಿಗಿಂತ ಇನ್ನಷ್ಟು ಬಹುರೂಪತೆ, ಸಂಕರಗಳನ್ನು ಹೊಂದಿರುವ ಭಾರತೀಯ ಡಯಾಸ್ಪೊರಾ ವೈವಿಧ್ಯತೆಯ ಹೊಸ ಪರಿಭಾಷೆಯಾಗಿ ಬಳಕೆಯಾಗುತ್ತಾ ಆಧುನಿಕೋತ್ತರ ಕಾಲದ ಚರ್ಚೆಯಲ್ಲಿ ಮಹತ್ವ ಪಡೆದುಕೊಂಡಿದೆ.

ಎಂಬತ್ತೇಳು ದೇಶಗಳಲ್ಲಿ ಭಾರತೀಯ ಡಯಾಸ್ಪೊರಿಗರು! 

ಜಗತ್ತಿನಾದ್ಯಂತ ಇಂದು ಭಾರತೀಯ ಡಯಾಸ್ಪೊರಿಗರು ಇಪ್ಪತ್ತು ಮಿಲಿಯನ್ನಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಇಂದು ಜಗತ್ತಿನಾದ್ಯಂತ ೮೭ಕ್ಕೂ ಹೆಚ್ಚಿನ ದೇಶಗಳಲ್ಲಿ ಭಾರತೀಯ ಡಯಾಸ್ಪೊರಿಗರಿದ್ದಾರೆ. ಅವರೆಲ್ಲರನ್ನು ಒಂದು ಅಧ್ಯಯನದ ಅಡಿಯಲ್ಲಿ ತರುವುದು ಸಾಧ್ಯವೇ ಇಲ್ಲ ಎನ್ನುವಷ್ಟು ವೈವಿಧ್ಯತೆಗಳು ಅವರಲ್ಲಿವೆ. ಕೆಲವೊಮ್ಮೆ ಭಾರತೀಯತೆ ಎನ್ನುವುದೇ ಮಸಕಾಗಿ ಹೋಗಿರುವುದೂ ಉಂಟು. ಕೆಲವು ಭಾರತೀಯ ಡಯಾಸ್ಪೊರಿಗರು ತಮ್ಮನ್ನು ಭಾರತೀಯ ಎಂದು ಕರೆದುಕೊಳ್ಳುವುದೇ ಇಲ್ಲ. ಡಯಾಸ್ಪೊರಾ ಅಧ್ಯಯನ ಆರಂಭವಾದಾಗಿನಿಂದ ಭಾರತೀಯ ಡಯಾಸ್ಪೊರಾವನ್ನು ರಾಜಕೀಯ ಮತ್ತು ಸಾಂಸ್ಕೃತಿಕ ಕಾರಣಗಳ ದೃಷ್ಟಿಕೋನದಿಂದ ಅಭ್ಯಾಸ ಮಾಡಲಾಗುತ್ತಿದೆ. ಇಂದು ಭಾರತೀಯ ಡಯಾಸ್ಪೊರಿಗರ ಆದಾಯ ಹೆಚ್ಚಿದೆ. ಅವರು ನೆಲೆಸಿರುವ ದೇಶಗಳಲ್ಲಿ ಅವರು ಸಮೃದ್ಧಿಯ ಸ್ಥಿತಿಯಲ್ಲಿದ್ದಾರೆ. ಉನ್ನತ ಶಿಕ್ಷಣ, ಉನ್ನತ ತಾಂತ್ರಿಕ ಹುದ್ದೆಗಳನ್ನು ಭಾರತೀಯ ಡಯಾಸ್ಪೊರಿಗರು ಪಡೆದುಕೊಂಡಿದ್ದಾರೆ. ಭಾರತೀಯ ಡಯಾಸ್ಪೊರಾ ಇಂದು ಬಹುದೊಡ್ಡ ಡಯಾಸ್ಪೊರಾ ಆಗಿ ಹೊರಹೊಮ್ಮಿದ್ದರೂ ಅದರ ಸಂಸ್ಕೃತಿ ಮಧ್ಯಮವರ್ಗದ ಸಂಸ್ಕೃತಿ ಎಂಬಂತಾಗಿದೆ. ಭಾರತೀಯರು ಮೂಲತಃ ವಲಸೆಯ ಪ್ರವೃತ್ತಿ ಹೊಂದಿದವರಲ್ಲ. ಆದರೂ ಅವರೇ ಇಂದು ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುತ್ತಿರುವುದಕ್ಕೆ ಆಧುನಿಕ ಆರ್ಥಿಕ ಬದಲಾವಣೆಗಳೇ ಕಾರಣವಿರಬಹುದೆಂದು ಊಹಿಸಲಾಗಿದೆ.

ಭಾರತೀಯ ಡಯಾಸ್ಪರವನ್ನು ಯಾವ ದೃಷ್ಟಿಕೋನಗಳಿಂದ ನೋಡಬಹುದು ? ಮೊದಲನೆಯದಾಗಿ,  ಭಾರತದ ರಾಜಕೀಯ ಡಯಾಸ್ಪೊರಾವನ್ನು ನೋಡುವ ರಾಜಕೀಯ ದೃಷ್ಟಿಕೋನ. ಎರಡನೆಯದಾಗಿ ಡಯಾಸ್ಪೊರಿಗರಾದ ಭಾರತೀಯರು ಭಾರತ ಮತ್ತು ಭಾರತೀಯತೆಯನ್ನು ನೋಡುವ ದೃಷ್ಟಿ. ಮೂರನೆಯದಾಗಿ, ಭಾರತೀಯ ಸಂಸ್ಕೃತಿ ಎನ್ನುವುದು ಆರ್ಥಿಕ ಉತ್ಪಾದನೆಯಾಗಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ಭಾರತೀಯ ಡಯಾಸ್ಪೊರಾ ಕಾಣುವ ಬಗೆ. ಈ ದೃಷ್ಟಿಕೋನಗಳಿಂದ  ನಮಗೆ ಭಾರತೀಯ ಡಯಾಸ್ಪೊರಾದ ನಾನಾ ಆಯಾಮಗಳು ದೊರೆಯಬಹುದು.

ಸ್ವಾತಂತ್ರ್ಯಾ ನಂತರ ಡಯಾಸ್ಪೊರಾ ಚಟುವಟಿಕೆ ಭಾರತದಲ್ಲಿ ಹೆಚ್ಚಾಗಿದೆ. ಭಾರತದ ಡಯಾಸ್ಪೊರಿಗರು ತಮ್ಮದೇ ಆದ ಅಸ್ಮಿತೆಯನ್ನು ಪಡೆದುಕೊಂಡಿದ್ದಾರೆ. ಪಾಶ್ಚಾತ್ಯ ಸಮಾಜಗಳಲ್ಲಿ ಭಾರತೀಯ ಡಯಾಸ್ಪೊರಾವನ್ನು ಪ್ರೋತ್ಸಾಹಕ ದೃಷ್ಟಿಯಿಂದ ನೋಡಲಾಗುತ್ತಿದೆ. ಭಾರತೀಯತೆಯ ಹೊಸ ವ್ಯಾಖ್ಯಾನಗಳನ್ನು ಅವು ಉತ್ಸಾಹದಿಂದಲೇ ಸ್ವಾಗತಿಸುತ್ತಿವೆ. ಲೇಖಕ ಅಮಿತವ್ ಘೋಷ್ ಪ್ರಕಾರ ಹತ್ತೊಂಬತ್ತನೆಯ ಶತಮಾನದ ಮೊದಲ ಭಾಗದಲ್ಲಿ ಆರಂಭವಾದ ಭಾರತೀಯರ ವಲಸೆ ಒಂದು ಆಧುನಿಕ ಕಾಲದ ಮುಖ್ಯವಾದ ಜನಸಂಖ್ಯಾ ಸ್ಥಾನಾಂತರವಾಗಿದೆ. ಇದೀಗ ಭಾರತೀಯ ಸಂಸ್ಕೃತಿ ‘ವಿಶ್ವಸಂಸ್ಕೃತಿ’ಯಾಗುತ್ತಿದೆ. ಭಾರತದ ಬಗ್ಗೆ ಹೊರಗಿನ ಆಸಕ್ತಿಗಳು ಅನಿವಾಸಿ ಭಾರತೀಯರನ್ನು ಮತ್ತು ಸ್ವದೇಶದಲ್ಲಿರುವ ಭಾರತೀಯರನ್ನು ಏಕ ಕಾಲಕ್ಕೆ ಆಸಕ್ತಿಯಿಂದ ಗಮನಿಸುವಂತೆ ಮಾಡುತ್ತಿವೆ. ಭಾರತ ಸರ್ಕಾರ ಇಂದು ತನ್ನ PIO (People of Indian Origin) ಮತ್ತು NRI, ಅನಿವಾಸಿಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಅವರನ್ನು ಆದರದಿಂದ ನೋಡಬಯಸುತ್ತಿದೆ. ಈ ಕ್ರಿಯೆಯು ಸ್ಪೇನ್ ಮತ್ತು ಪೋರ್ಚಗಲ್ ದೇಶಗಳಲ್ಲಿ ಭೂಪ್ರದಕ್ಷಿಣೆಗೆ ನಾವಿಕರಿಗೆ ಆಯಾ ದೇಶದ ರಾಜರುಗಳು ಕೊಡುತ್ತಿದ್ದ ಪ್ರೋತ್ಸಾಹವನ್ನು ಹೋಲುತ್ತದೆ.

ಭಾರತೀಯ ಡಯಾಸ್ಪೊರಿಗರಿಗೆ ಜಗತ್ತಿನಾದ್ಯಂತ ಮಾನ್ಯತೆ ದೊರೆಯುತ್ತಿರುವ ಕಾರಣಗಳಾದರೂ ಏನು? ಹಾವಾಡಿಗರ, ಮಾಟಗಾರರ ದೇಶವೆನಿಸಿದ್ದ ಭಾರತಕ್ಕೆ ಇದ್ದಕ್ಕಿದ್ದಂತೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿರುವುದೇಕೆ? ಈ ಅಲೆ ಆರ್ಥಿಕತೆಯ ಪರಿಣಾಮವೇ ಅಥವಾ ಸಾಂಸ್ಕೃತಿಕ ಅಭಿರುಚಿಗಳ ಬದಲಾವಣೆಯೇ? ವಿದ್ವಾಂಸರು ಹೇಳುವಂತೆ ಭಾಷಿಕವಾಗಿ ಇಂಗ್ಲಿಷ್ ಸಾಧಿಸಿದ ಯಶಸ್ಸು ಭಾರತೀಯ ಭಾಷೆಗಳಿಗೆ ಲಭಿಸಿಲ್ಲ. ಅಧಿಕಾರ, ಸ್ಥಾನಮಾನಗಳು ಧರ್ಮ ಯಾವುದರಿಂದಲೂ ಭಾರತೀಯರಿಗೆ ಉನ್ನತ ಸ್ಥಾನಮಾನ ಸಿಕ್ಕಿಲ್ಲ ಆದರೆ ಭಾರತೀಯರಿಗೆ ವಿಶಿಷ್ಟವಾದ ‘ಸಂಸ್ಕೃತಿ’ ಅವರಿಗೆ ಜಗತ್ತಿನಲ್ಲಿಯೇ ವಿಶಿಷ್ಟ ಸ್ಥಾನವನ್ನು ಒದಗಿಸುತ್ತಿದೆ. ಭಾರತೀಯ ಸಂಸ್ಕೃತಿ ಎಂಬುದರ ಸುತ್ತ ಇಂದು ದಿವ್ಯ ಪ್ರಭಾವಳಿ ಇದೆ ಎನ್ನುವುದನ್ನಂತೂ ಮರೆಯಲಾಗದು.

ಭಾವೋದ್ದೀಪಕ “ಭಾರತೀಯ ಸಂಜಾತ’  

‘ಭಾರತೀಯ ಸಂಜಾತ‘ (Persons of Indian Origin) ಎಂಬ ಪದವು ಇತ್ತೀಚೆಗೆ ಚಲಾವಣೆಯಲ್ಲಿದೆ ಈ ಪದ ಹೆಚ್ಚು ಗೌರವಾನ್ವಿತವೂ, ನಮ್ಮದೆನ್ನುವ ಭಾವವನ್ನು ಉದ್ದೀಪಿಸುವಂಥದ್ದೂ ಆಗಿದೆ. ಭಾರತೀಯ ಹಿನ್ನೆಲೆಯುಳ್ಳ ಗುಂಪಿನವರಲ್ಲಿ ಇರಬಹುದಾದ ತಾಯ್ನಾಡಿನ ತುಡಿತ ಅದೇ ಪ್ರಮಾಣದಲ್ಲಿ ಸ್ವದೇಶೀ ಭಾರತೀಯರಲ್ಲಿ ಕಾಣುತ್ತಿದೆ. ಅಮರ್ತ್ಯ ಸೇನ್ರಿಗೆ ನೊಬೆಲ್ ಬಂದಾಗ, ತಾಂತ್ರಿಕವಾಗಿ ಪೌರತ್ವದ ದೃಷ್ಟಿಯಿಂದ ಅದು ಭಾರತಕ್ಕೆ ಸೇರಿದ್ದಾಗಿರಲಿಲ್ಲ. ಆದರೆ ‘ಭಾರತೀಯ ಸಂಜಾತ’ ಪದದಿಂದ ಅವರ ನೊಬೆಲ್ ಬಹುಮಾನದ ಸಂಭ್ರಮ ಭಾರತೀಯರಿಗೆ ಆಯಿತು. ಸುನೀತಾ ವಿಲಿಯಮ್ಸ್, ಕಲ್ಪನಾ ಚಾವ್ಲಾ ಅವರ ಸಾಧನೆ ನಮ್ಮದೆನ್ನಿಸಿತು. ವಿದೇಶಗಳಲ್ಲಿ ಅಧಿಕಾರ ಹಿಡಿಯುವುದು ಅಮೆರಿಕಾ, ಇಂಗ್ಲೆಂಡ್‌ಗಳಲ್ಲಿ ಯಶಸ್ವೀ ಉದ್ಯಮಿಯಾಗುವುದು, ಬಾಲಿವುಡ್ ನಟ/ನಟಿಯರು ಹಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಸುವುದು ಭಾರತೀಯರಿಗೆ ಇಂದು ಹೆಮ್ಮೆಯ ವಿಷಯವಾಗಿದೆ. ಅಷ್ಟೇ ಅಲ್ಲ ಈ ಸಂಗತಿಗಳು ‘ಭಾರತೀಯರನ್ನು ಎತ್ತಿಹಿಡಿಯುವ ಸಂಗತಿಗಳೂ ಆಗುತ್ತಲಿವೆ. ಭಾರತೀಯ ಸಂಜಾತ (PIO) ಮತ್ತು  ಅನಿವಾಸಿ ಭಾರತೀಯರು (NonResidents of India) ಇಂದು ಸಾಗರೋತ್ತರ ವ್ಯವಹಾರಗಳಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತಿದ್ದಾರೆ. ಈ ಪ್ರಾಮುಖ್ಯ ಸ್ವದೇಶದಲ್ಲಿಯೂ ಪ್ರತಿಫಲಿಸುತ್ತಿದೆ ಎನ್ನುವುದು ಮುಖ್ಯವಾದ ಸಂಗತಿ.

ಜಟಿಲ ಆಂತರಿಕ ಅಸ್ಮಿತೆಗಳು

ಭಾರತೀಯ ಡಯಾಸ್ಪೊರಾ ಇದೆ ಎನ್ನುವುದಾದರೆ ಅದು ಯಾವು ರೂಪದ್ದು? ಅದರ ಭಾರತೀಯತೆಯನ್ನು ಹೇಗೆ ಅರ್ಥೈಸುವುದು ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಭಾರತೀಯ ಡಯಾಸ್ಪೊರಾ ಜಗತ್ತಿನಾದ್ಯಂತ ಹರಡಿರುವುದಾದರೂ, ಎಲ್ಲೆಡೆ ಭಾರತೀಯರಿದ್ದರೂ ಅವರ ಒಳಗಿನ ಅಸ್ಮಿತೆಗಳು (ಧಾರ್ಮಿಕ, ಭಾಷಿಕ, ಪ್ರಾದೇಶಿಕ ಅಸ್ಮಿತೆಗಳು) ಅವರನ್ನು ಕೆಲವು ಸ್ಥಳಗಳಿಗೆ ಸೇರಿಸುತ್ತವೆ. ತಮಿಳರ ಸಂಖ್ಯೆ ಗಡಾಪಿಯೋದಲ್ಲಿ ಅಧಿಕವಾಗಿದೆ. ಹಾಗೆಯೇ ಹಿಂದಿ ಭಾಷಿಕರು ಮಾರಿಷಸ್‌ನಲ್ಲಿದ್ದಾರೆ, ಹಾಂಗ್‌ಕಾಂಗ್, ಸುರಿನಾಮ್‌ಗಳಲ್ಲಿ ಮುಸ್ಲಿಮರಿದ್ದಾರೆ, ಕೆನಡಾ ಮತ್ತು ಮೆಕ್ಸಿಕೋಗಳಲ್ಲಿ ಸಿಖ್ಖರು ಇದ್ದಾರೆ… ಇವರನ್ನು ಒಟ್ಟಾಗಿ ಭಾರತೀಯರೆಂದು ಗುರುತಿಸಿದರೂ, ಅವರ ಪ್ರಾದೇಶಿಕ ಪರಿಸರ, ಭಾಷಿಕ ಪರಿಸರ, ಕೊನೆಗೆ ಜಾತಿ/ಧರ್ಮ ಪರಿಸರಗಳು ಅವರನ್ನು ಪ್ರತ್ಯೇಕ ಮೀಟಿಂಗ್ ಲೈನ್ -ಕೂಡುಗೆರೆಯತ್ತ ಕೊಂಡೊಯ್ಯುತ್ತವೆ. ಇದರ ಜೊತೆಗೆ ವಲಸಿಗರಲ್ಲಿ ಒಂದೇ ಕಡೇ ವಲಸೆ ಬಂದು ನೆಲಸಿದವರ ಡಯಾಸ್ಪೊರಿಗರ ಅನುಭವಗಳಿಗೂ, ಹಲವು ಕಡೆ ಸಂಚರಿಸುವ ವಲಸಿಗರ ಅನುಭವಗಳಿಗೂ ಭಿನ್ನತೆ ಇದೆ ಎಂದು ಈಗಾಗಲೇ ಗುರುತಿಸಲಾಗಿದೆ. ಉದಾಹರಣೆಗೆ,  ಭಾರತೀಯ ಕೂಲಿಗಳಾಗಿ ಪ್ಲಾಂಟೇಷನ್ ದ್ವೀಪಗಳಿಗೆ ಬಂದವರು ವಲಸೆ ಬಂದ ಜನಾಂಗವಾಗಿದ್ದಾರೆ; ಆಫ್ರಿಕಾ ದಂಡೆಯಿಂದ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಅಮೆರಿಕಾಗಳತ್ತ ಚಲಿಸುತ್ತಿದ್ದಾರೆ. ಈ ಸಂಚಾರದಲ್ಲಿ ಇವರ ಭಾರತೀಯತೆಯ ಅಂಶ ಮಸುಕಾಗುತ್ತಾ ಬಂದಿದ್ದು, ಇವರ ಮೂಲವನ್ನು ಹುಡುಕುವುದು ಅಸಂಗತವೆನಿಸುವ ಪರಿಸ್ಥಿತಿಯಿದೆ. ಆದರೆ “ಭಾರತೀಯ” ಎನ್ನುವ ಪದ ವಿದೇಶಗಳಲ್ಲಿ ಸಡಿಲವಾದ ಪದ. ಅದನ್ನು ಬಳಸುವವರು ಭಾರತೀಯ ನಿರ್ದಿಷ್ಟತೆಗಳ ಕಡೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ವಲಸಿಗರಾಗಿ ಹೋಗಿ ನೆಲೆನಿಂತಿರುವ ಭಾರತೀಯರಲ್ಲಿ ಡಯಾಸ್ಪೊರಿಗರ ಸಂವೇದನೆಗಳು ಸಹ ಬದಲಾಗುತ್ತಿರುತ್ತವೆ. ಭಾರತೀಯ ಡಯಾಸ್ಪೊರಾದಲ್ಲಿ ಯಹೂದಿ ಡಯಾಸ್ಪೊರಾದಂತೆ ಏಕ ರೂಪತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತೀಯತೆ ಎನ್ನುವುದು ಯಾವಾಗಲೂ ಏಕ ರೂಪವಾದುದಾಗಿರುವುದಿಲ್ಲ. ಅದೊಂದು ಕುಲಾಂತರಿ ಮೆಕ್ಕೆ ಜೋಳವನ್ನು ಹೋಲುವ ಅಸ್ಮಿತೆ.

ವಸಾಹತುಶಾಹಿ ಸಂಕಥನವನ್ನು ಒಡೆದ ಬಗೆ

ಅಲ್ಪಸಂಖ್ಯಾತ, ಬಹುಸಂಖ್ಯಾತ, ಲಿಂಗ, ಭಾಷೆ-ಹೀಗೆ ಹಲವಾರು ಒಳ ಅಸ್ಮಿತೆಗಳು ಭಾರತೀಯ ಡಯಾಸ್ಪೊರಾದಲ್ಲಿ ಬಹು ದನಿಯನ್ನು ಸೃಷ್ಟಿಸುತ್ತವೆ. ಇವು ಅರಾಜಕವೆನ್ನುವಂತೆ, ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿರುವಂತೆ ಕಾಣಬಹುದು. ಆದರೆ, ಸಂಬಂಧಗಳ ತಂತುಗಳು ಹಿಡಿದುಕೊಂಡ ದಾರಗಳ ಎಳೆಗಳಲ್ಲಿ ಅವುಗಳಲ್ಲಿ ಬೆಸುಗೆ ಇದೆ. ಭಾರತೀಯತೆಯನ್ನು ರಾಷ್ಟ್ರೀಯತೆಯ ಸಂಬಂಧದಲ್ಲಿ ಹೇಗೆ ಒಮ್ಮುಖವಾಗಿ ಗ್ರಹಿಸಲಾಯಿತೋ ಹಾಗೆ, ಭಾರತೀಯ ಡಯಾಸ್ಪೊರಾದಲ್ಲಿಯೂ, ರಾಷ್ಟ್ರೀಯತೆಯ ಹುಮ್ಮಸ್ಸು ಏಕ ಮುಖವಾಗಿದೆ. ಒಂದು ದೃಷ್ಟಿಯಿಂದ ಭಾರತೀಯ ಡಯಾಸ್ಪೊರಾ ವಸಾಹತುಶಾಹಿ ಸಂಕಥನವನ್ನು ಒಡೆದಿದೆ. ದೇಶಿ ರೂಪಗಳನ್ನು ವಸಾಹತುಶಾಹಿ ತನ್ನ ಪ್ರತಿರೂಪಗಳನ್ನಾಗಿ ಮಾರ್ಪಡಿಸುವ ತಂತ್ರ ರೂಪಿಸಿದರೆ, ವಿದೇಶಿ ವಲಸೆಗಾರರು ವಸಾಹತುಶಾಹಿಯ ರೂಪಗಳನ್ನೇ ಜೀರ್ಣಿಸಿಕೊಂಡರು. ಸಾಮ್ರಾಜ್ಯಶಾಹಿ ಕಥನ ನಗರೀಕರಣದಿಂದ, ಆಧುನಿಕತೆಯಿಂದ ಕಟ್ಟಲ್ಪಟ್ಟಿದ್ದರೆ, ಅದನ್ನು ಭಾರತೀಯ ಡಯಾಸ್ಪೊರಾ ಮೆಟ್ಟಿನಿಲ್ಲುವಂತೆ, ಜೀರ್ಣಶಕ್ತಿಯನ್ನು ರೂಢಿಸಿಕೊಂಡಿದ್ದು ಸವಾಲೇ ಸರಿ. ಇಂದು ಪಾಶ್ಚಾತ್ಯ ಜ್ಞಾನಶಿಸ್ತುಗಳನ್ನು ರೂಢಿಸಿಕೊಂಡು, ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಿರುವುದು ಭಾರತೀಯರೇ.

ಭಾರತೀಯ ಡಯಾಸ್ಪೊರಾವನ್ನು ಮಧ್ಯಮವರ್ಗದ ವಲಸೆ ಮತ್ತು ಕೂಲಿಕಾರ್ಮಿಕರ ವಲಸೆ ಎಂಬುದಾಗಿ ಎರಡು ಬಗೆಯಲ್ಲಿ ವಿಂಗಡಿಸಬಹುದು. ವಸಾಹತುಪೂರ್ವ ಮತ್ತು ವಸಾಹತೋತ್ತರ ವಲಸೆ ಎಂದು ಸಹ ಭಾರತೀಯ ಡಯಾಸ್ಪೊರಾವನ್ನು ವಿಭಾಗಿಸಬಹುದು. ವಸಾಹತು ಪೂರ್ವ ವಲಸೆಗಳು ಕರಾರುಬದ್ಧ ಕೂಲಿಗಳದಾದರೆ, ವಸಾಹತೋತ್ತರ ಭಾರತದಿಂದ ಪಾಶ್ಚಾತ್ಯ ದೇಶಗಳಿಗೆ ವಲಸೆ ಹೋದವರು ಕೌಶಲವುಳ್ಳ ವೃತ್ತಿಪರರಾದ ಎಂಜಿನಿಯರುಗಳು ಮತ್ತು ವೈದ್ಯರುಗಳು ಇತ್ಯಾದಿ. ಅಷ್ಟೇನೂ ಕೌಶಲಪೂರ್ಣರಲ್ಲದ ಕೆಲಸಗಾರರು ಪಶ್ಚಿಮ ಏಷ್ಯಾದ ಕಡೆ ಚಲಿಸಿದರು. ಆಂಗ್ಲೋ-ಇಂಡಿಯನ್ನರು ಆಸ್ಟ್ರೇಲಿಯಾ ಕಡೆ ವಲಸೆ ಬಂದರು.

ಮಸುಕಾದ ತಾಯ್ನಾಡಿನ ಕಲ್ಪನೆ

ಭಾರತೀಯರು ಯಾವ ವಿದೇಶಿ ನೆಲದಲ್ಲಿ ಡಯಾಸ್ಪೊರಿಗರಾಗಿದ್ದಾರೆ ಎನ್ನುವುದರ ಮೇಲೆ ಅವರ ಭಾರತೀಯತೆಯನ್ನು ಆಯಾ ದೇಶಕಾಲಗಳಲ್ಲೇ ಅನ್ವೇಷಿಸಿಕೊಳ್ಳಬೇಕಾದ ಒತ್ತಡವಂತೂ ಭಾರತೀಯ ಡಯಾಸ್ಪೊರಿಗರಿಗೆ ಇರುತ್ತದೆ. ಉದಾಹರಣೆಗೆ, ಪ್ಲಾಂಟೇಶನ್ ಕೂಲಿಗಳಾಗಿ ವಿದೇಶಗಳಿಗೆ ವಲಸೆ ಬಂದವರಲ್ಲಿ ದ್ವಿರುಕ್ತಿ ವಲಸೆಗಳನ್ನು ಕಾಣಬಹುದು. ಕೂಲಿಗಳಾಗಿ ಬಂದ ಈ ಭಾರತೀಯರು ಸಂಬಂಧಪಟ್ಟ ವಿದೇಶಿ ನೆಲದಲ್ಲಿ  ಶಾಶ್ವತವಾಗಿ ನೆಲೆಸಲಿಲ್ಲ. ಅಲ್ಲಿಂದ ಅನೇಕ ಪಾಶ್ಚಿಮಾತ್ಯ ದೇಶಗಳಿಗೆ ವಲಸೆ ಹೋಗಲಾರಂಭಿಸಿದರು. ಈ ಕ್ರಿಯೆಯಲ್ಲಿ ಅವರು ತಮ್ಮ ಮೂಲಗಳನ್ನೇ ಮರೆತರು. ಅವರು ಭಾರತೀಯ ಅಸ್ಮಿತೆ ವಿಸ್ಮೃತಿಗೆ ಸರಿಯಿತು. ಭಾರತೀಯತೆಯ ಚಹರೆಯನ್ನು ಅಲ್ಪಸ್ವಲ್ಪ ಉಳಿಸಿಕೊಂಡಂತಿರುವ ಈ ಬಗೆಯ ಭಾರತೀಯ ಡಯಾಸ್ಪೊರಿಗರು ಭಾರತೀಯತೆ ಎನ್ನುವುದರ ವಿಶ್ಲೇಷಣೆಗೆ ಅಷ್ಟಾಗಿ ಆಸಕ್ತಿ ತೋರುವುದಿಲ್ಲ. ಜೊತೆಗೆ ಅವರಿಗೆ ‘ಮನೆಗೆ ಮರಳುವಿಕೆ’ಯ ಹಂಬಲ, ತಹತಹ ಉಳಿದಿಲ್ಲ. ಅವರ ಪೂರ್ವಜರ ನೆನಪುಗಳು ಕೂಡಾ ಸದಾ ಚಲನೆಯ ಸ್ಥಿತಿಯಲ್ಲಿರುವುದರಿಂದ, ಆ ತಲೆಮಾರಿನವರಿಗೂ ತಾಯ್ನಾಡಿನ ಕಲ್ಪನೆ ಮಸುಕಾಗಿರುತ್ತದೆ. ಆದರೆ ಇವರನ್ನು ವಿದೇಶಗಳಲ್ಲಿ ‘ಭಾರತೀಯ’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಇದೊಂದು ವಿಪರ್ಯಾಸ. ಆ ಪದದ ಅರ್ಥ, ಭಾವಗಳಿಗೆ ಹೊರತಾದ ಭಾರತೀಯ ವಲಸಿಗರನ್ನು ಆ ಹೆಸರಿನಿಂದ ಕೂಗುವುದೇ ಒಂದು ವ್ಯಂಗ್ಯ ಎನ್ನಿಸುತ್ತದೆ. ಆದ್ದರಿಂದ ಭಾರತೀಯ ಡಯಾಸ್ಪೊರಾಕ್ಕೆ ಎರಡು ಛಾಯೆಗಳಿವೆ- ಕೂಲಿಕಾರರ ಜನಾಂಗಗಳ ಸಂಸ್ಕೃತಿಯನ್ನು ಹೊತ್ತ ಡಯಾಸ್ಪೊರಾ, ಇನ್ನೊಂದು ಸಿರಿವಂತಿಕೆಯನ್ನು ಹೊತ್ತ ಡಯಾಸ್ಪ್ಪೊರ. ಇವೆರಡೂ ಸಂಸ್ಕೃತಿಯ ಅನುಸಂಧಾನ ಮಾಡುವ ಬಗೆ ವಿಭಿನ್ನವಾಗಿವೆ. ಭಾರತೀಯ ವಲಸಿಗ ಕೂಲಿಕಾರರ ಚರಿತ್ರೆ ಹೆಚ್ಚು ಕಡಿಮೆ ಆಫ್ರಿಕಾ ವಲಸಿಗರ ಚರಿತ್ರೆಗೆ ಹತ್ತಿರವಿದೆ. ವಸಾಹತು ಕಾಲದಲ್ಲಿ ವಿದೇಶಗಳಿಗೆ ಹೋದ ಭಾರತೀಯರಿಗೂ ವಸಾಹತೋತ್ತರ ಕಾಲದಲ್ಲಿ ವಲಸೆ ಹೋದವರಿಗೂ ಹೋಲಿಕೆ ಮಾಡುವಂತಿಲ್ಲ ನಿಜ, ಆದರೆ, ಹೊಟ್ಟೆ ಪಾಡಿಗಾಗಿ, ಉಳಿವಿಗಾಗಿ ದೇಶಾಂತರ ಬಂದ ಸಾಧಾರಣ ಮನುಷ್ಯರು ವಲಸಿಗ ದೇಶಗಳಲ್ಲಿ ನೆಲೆನಿಂತ ಸಾಹಸಗಾಥೆs ಹೂವಿನ ದಾರಿಯದಲ್ಲ ಎಂದು ಮಾತ್ರ ಹೇಳಬಹುದು.

ಅಲ್ಲಿರುವುದು ನಮ್ಮ ಮನೆ; ಇಲ್ಲಿದ್ದೇವೆ ಸುಮ್ಮನೆ! 

ಭಾರತೀಯ ಡಯಾಸ್ಪೊರಾದಲ್ಲಿ ಹಳೆಯ ಮತ್ತು ಹೊಸ ಡಯಾಸ್ಪೊರಾಗಳೆಂದು ಎರಡು ಹಂತಗಳಿವೆ. ಹಳೆಯ ಡಯಸ್ಪೊರಾದಲ್ಲಿ ಭಾರತ ಅಂದರೆ ತಾಯ್ನಾಡಿನ ನೆನಪುಗಳು ಜೀವಂತವಿರುತ್ತವೆ, ಮನೆಯ ಚಿತ್ರಣ ಆಪ್ತವಾಗಿರುತ್ತದೆ. ಆದರೆ ಹೊಸ ಡಯಾಸ್ಪೊರಾವು, ವಿಜಯ್‌ಮಿಶ್ರಾ ಹೇಳುವಂತೆ, ತುಂಬಾ ಸಂಕೀರ್ಣವಾದ ಸಮುದಾಯವಾಗಿದ್ದು  ಒಳಗೊಳಗೇ ಹಲವಾರು ಬಿರುಕುಗಳುಳ್ಳ ಭಾರತೀಯರನ್ನು ಒಳಗೊಂಡಿರುವಂಥದ್ದು. ಡಯಾಸ್ಪೊರಿಗರಲ್ಲಿ  ಅಮೆರಿಕಾ, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ನೆಲೆನಿಂತವರು, ಸಾಮಾನ್ಯವಾಗಿ ಭಾರತದ ಜೊತೆ ಸಂಪರ್ಕ ಸಾಧಿಸಲು ವಿಮಾನ ಪ್ರಯಾಣ, ವಿಡಿಯೊ, ಫಿಲಂಗಳು ಮತ್ತು ಡಿಜಿಟಲ್ ತಾಂತ್ರಿಕತೆಗಳನ್ನು ಉಪಯೋಗಿಸುತ್ತಾ ಕೆಲ ವೇಳೆ ಕ್ಷೆಭೆಗೊಂಡಂತೆ, ಮತ್ತೆ ಕೆಲ ಸಮಯ ಸಂತೃಪ್ತಿಗೊಂಡಂತೆ ಕಾಣುತ್ತಿರುವವರು.  ಇದೊಂದು ಹೊಸ ಬಗೆಯ ಜನಾಂಗೀಯತೆ ಎಂದು ಮಿಶ್ರಾ ಹೇಳುತ್ತಾರೆ.

ಸದಾ ಚಲಿಸುತ್ತ ಸಾಧಿಸಿದ ಸಮನ್ವಯ

ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಭಾರತೀಯ ಡಯಾಸ್ಪೊರಾ ಎನ್ನುವುದು ಒಮ್ಮೆಗೇ ಆದ ಸಾಮೂಹಿಕ ವಲಸೆಯಲ್ಲ ಅಥವಾ (ಇತರೆ ಕೆಲವು ದೇಶಗಳ ಡಯಾಸ್ಪೊರಿಗರ ವಿಷಯದಲ್ಲಿ ಆದಂತೆ) ದೇಶ ಬಿಟ್ಟು ಹೊರಗೆ ಹೋಗಲೇಬೇಕಾದಂತಹ ವಲಸೆಗೆ ಸಾಮೂಹಿಕ ಕೊಲೆ, ಬೆದರಿಕೆ, ಕ್ಷಾಮ ಮತ್ತಿತರ ಕಾರಣಗಳು  ಚಾಲನೆ ನೀಡಿದಂತೆ  ಭಾರತೀಯ ಡಯಾಸ್ಪೊರಾಕ್ಕೆ ಆಗಿಲ್ಲ. ಆದುದರಿಂದ ಭಾರತೀಯ ಡಯಾಸ್ಪೊರಾವು ನಿರ್ದಿಷ್ಟ ಕಾಲದಲ್ಲಿ ಘಟಿಸಿದ ಸಂಗತಿಯಲ್ಲ. ವಸಾಹತುಶಾಹಿ ಕಾಲದಲ್ಲಿ ಕರಾರುಬದ್ಧ ಕೂಲಿಗಳಾಗಿ ಶುರುವಾದ ಪಯಣ ಇಂದಿನ ಎಂಜಿನಿಯರುಗಳು, ವೈದ್ಯರು, ವೃತ್ತಿಪರ ಕುಶಲಿಗಳ ವಲಸೆಯ ತನಕ ಮುಂದುವರೆಯುತ್ತಲೇ ಇದೆ. ಸಫ್ರಾನ್ ಎಂಬ ವಿದ್ವಾಂಸ ಇಂಡಿಸ್ಪೊರಾ ಬಗ್ಗೆ ಹೇಳುವ ಮಾತನ್ನು ಗಮನಿಸಬೇಕು. ಅವನ ಪ್ರಕಾರ ಭಾರತೀಯ ಡಯಾಸ್ಪೊರಾಕ್ಕೆ ದೊಡ್ಡ ಚರಿತ್ರೆಯಿದ್ದು, ಅದಕ್ಕೆ ಮಧ್ಯಸ್ಥದಾರನ ಲಕ್ಷಣವಿದೆ. ಹಾಗೂ  ಸಮನ್ವಯವನ್ನು ರೂಢಿಸುವ ಲಕ್ಷಣ ಅಲ್ಲಿದೆ. ಇದರಿಂದ ಪ್ರತ್ಯೇಕತಾವಾದಿಯ ಚಹರೆಯೂ ಅದಕ್ಕಿದೆ. ಆದರೆ ಇವೆಲ್ಲವೂ ಅತೀ ಸರಳೀಕೃತಗೊಂಡಿದೆ.

ವಸಾಹತುಗಳನ್ನು ನಿರ್ಮಿಸುವುದರಲ್ಲಿ ಆಂಗ್ಲರು, ಡಚ್ಚರು ಮತ್ತು ಫ್ರ್ರೆಂಚರು ಆಧಿಪತ್ಯ ಸ್ಥಾಪಿಸಿದ್ದರು. ಅವರ ಕೈಕೆಳಗಿನ ವಸಾಹತು ಪ್ರಜೆಗಳು ಅವರಿಗೆ ಕಡಿಮೆ ಕೂಲಿ ದರದಲ್ಲಿ ಸಿಗುವಂತಾದರು. ಹೀಗಾಗಿ ಕರಾರುಬದ್ದ ಕೂಲಿಕಾರರ ವಲಸೆ ಭಾರತದಿಂದ ಆರಂಭವಾಯಿತು. ಪ್ಲಾಂಟೇಷನ್ ಕೂಲಿಗಾಗಿ ಫಿಜಿ, ದಕ್ಷಿಣ ಆಫ್ರಿಕಾ, ಮಾರಿಷಸ್, ಟ್ರಿನಿಡಾಡ್, ಗಯಾನ, ಸುರಿನಾಮ್, ಜಮೈಕಾ, ಮಾರ್ಟನಿಕ್, ಕ್ಯೂಬಾ, ಪ್ಯುರಿಟೊ ರಿಕೊ, ಬಾರ್ಬೊಡೊಸ್, ಸೇಂಟ್ ಕಿಟ್ಸ್ ಮತ್ತು ನೆವಿಸ್, ನೆದರ್‌ಲ್ಯಾಂಡ್, ಆಂಟಿಲಸ್, ಬಾರ್ಬುಡಾ, ಗ್ರೆನೇಡಿಯನ್ ಮುಂತಾದ ಪ್ರದೇಶಗಳಿಗೆ ಕೂಲಿಕಾರರ ವಲಸೆ ಹೆಚ್ಚಾಗಿ ಆಯಿತು. ಈ ಭಾಗಗಳಲ್ಲಿ ಭಾರತೀಯ ಡಯಾಸ್ಪೊರಿಗರು ಸಾಮಾನ್ಯವಾಗಿ ಉತ್ತರಭಾರತಕ್ಕೆ ಸೇರಿದವರು ಮತ್ತು ತಮಿಳು ದ್ರಾವಿಡ ಗುಂಪಿನ ದಕ್ಷಿಣಾತ್ಯರು. ಇವರನ್ನು ಭಾರತೀಯ ಡಯಾಸ್ಪೊರಿಗರೆಂದು ವಿಶೇಷವಾಗಿ ಗುರುತಿಸಲಾಗುತ್ತದೆ. ಏಕೆಂದರೆ ಇವರು ತಮ್ಮ ಉಪಭಾಷೆಗಳಾದ ಭೋಜ್‌ಪುರಿ, ಹಿಂದುಸ್ಥಾನಿ, ತಮಿಳುಗಳನ್ನು ಮಾತನಾಡುತ್ತಾ ತಮ್ಮ ತಾಯ್ನಾಡಿನ ಸಾಂಸ್ಕೃತಿಕ ಕುರುಹುಗಳನ್ನು ಉಳಿಸಿಕೊಂಡಿದ್ದರು. ಕಾಲಾಂತರದಲ್ಲಿ ಈ ಕುರುಹುಗಳು ಅಳಿಯುತ್ತಿವೆಯಾದರೂ, ಅವರ ಅಸ್ಮಿತೆಗಳು ಭಾರತೀಯ ಎಂದೇ ಗುರುತಿಸಲ್ಪಡುತ್ತಿವೆ. ಭಾರತೀಯ ಎಂಬ ಪದವನ್ನು ಬಳಸದೇ ಹೋದ ಪಕ್ಷದಲ್ಲಿ ಭಾರತೀಯ ಸಂಜಾತ ಎನ್ನುವ ಪದವನ್ನಂತೂ ಬಳಸಲಾಗುತ್ತದೆ. ಆದರೆ ಗಾಹಿಲೋಪ್‌ನಂತಹ ಕೆಲವು ವಸಾಹತುಗಳಲ್ಲಿ ಆಡಳಿತಕಾರರು ದಾಖಲೆಗಳಲ್ಲಿ ಅವರ ಮೂಲ ಹೆಸರುಗಳನ್ನೆಲ್ಲ ಬದಲಾಯಿಸಿದ್ದ ಪರಿಣಾಮ ಅಲ್ಲಿನ ಭಾರತೀಯ ಡಯಾಸ್ಪೊರಿಗರು ತಮ್ಮ ಸಂಸ್ಕೃತಿ ಸೂಚಕಗಳನ್ನು ಕಳೆದುಕೊಳ್ಳಬೇಕಾಯಿತು. ಅವರ ಅಸ್ಮಿತೆಗಳ ಮೂಲವು ವಿಸ್ಮೃತಿಗೊಳಗಾಯಿತು.

ಭಾರತೀಯ ಡಯಾಸ್ಪೊರಾವನ್ನು ಚಾರಿತ್ರಿಕವಾಗಿ ವಿಭಜಿಸುವ ಪ್ರಯತ್ನವನ್ನು ಕೆಲವು ವಿದ್ವಾಂಸರು ಮಾಡಿದ್ದಾರೆ. ಸುದೇಶ್ ಮಿಶ್ರಾ ಅವರು ತಮ್ಮ ‘ಫ್ರಂ ಶುಗರ್ ಟು ಮಸಾಲ’ ಎಂಬ ಲೇಖನದಲ್ಲಿ ಭಾರತೀಯ ಡಯಾಸ್ಪೊರಾವನ್ನು ಪ್ರಾಚೀನ ಡಯಾಸ್ಪೊರಾ ಮತ್ತು ನವೀನ ಡಯಾಸ್ಪೊರಾ ಎಂದು ಎರಡು ಭಾಗವಾಗಿ ನೋಡಬಹುದೆನ್ನುತ್ತಾರೆ. ಅವರ ಪ್ರಕಾರ, ‘ಇಷ್ಟವಿದ್ದೋ ಇಲ್ಲದೆಯೋ ಜೀವನೋಪಾಯಕ್ಕಾಗಿ ಅರೆಮನಸ್ಕರಾಗಿ ಕೆಲಸದ ಕರಾರಿನೊಂದಿಗೆ ಬಂದ ರೈತಾಪಿ ವರ್ಗವು ಪ್ಲಾಂಟೇಷನ್ ವಸಾಹತುಗಳಾದ ಫಿಜಿ, ಟ್ರ್ರಿನಿಡಾಡ್, ಮಾರಿಷಸ್, ದಕ್ಷಿಣ ಆಫ್ರಿಕಾ, ಮಲೇಶ್ಯಾ, ಸುರಿನಾಮ್, ಗಯಾನಗಳಂತಹ ಚಿಕ್ಕ ನಗರ ಪ್ರದೇಶಗಳಿಗೆ ಸುಮಾರು ೧೮೩೦ರಿಂದ ೧೯೧೭ರೊಳಗೆ ವಲಸೆ ಬಂದದ್ದು ಮೊದಲ ಹಂತ, ಎರಡನೆಯ ಹಂತವು ಬಂಡವಾಳೋತ್ತರ ಅಥವಾ ಆಧುನೀಕೋತ್ತರ ವಲಸೆ. ಈ ವಲಸೆಗಾರರ ಕೇಂದ್ರ ನಗರಗಳಾಗಿದ್ದು ಇವರು ನಗರೀಕೃತ ನೆಲೆಗಳನ್ನು (Metropoliton) ಕೇಂದ್ರವಾಗಿಸಿಕೊಂಡು ವಲಸೆ ಬಂದವರು. ಇವರು ಸಾಮಾನ್ಯವಾಗಿ ಆಯ್ದುಕೊಳ್ಳುವ ಸ್ಥಳಗಳು ಆಸ್ಟ್ರೇಲಿಯಾ, ಕೆನಡಾ, ಅಮೇರಿಕಾ, ಬ್ರಿಟನ್ ಮುಂತಾದ ದೇಶಗಳು (From Sugar To Masala: Sudesh Mishra). ಈ ವಿಭಜನೆಯು ಭಾರತೀಯ ಡಯಾಸ್ಪೊರಾ ವಿಶ್ಲೇಷಣೆಗೆ ಸೂಕ್ತ ತಳಹದಿಯನ್ನು ಒದಗಿಸುತ್ತದೆ.

ಪಾಶ್ಚಿಮಾತ್ಯ ದೇಶಗಳಿಗೆ ವಲಸೆ ಹೋದ ಭಾರತೀಯರು ಮೊದಲು ತಮ್ಮನ್ನು ಆಳಿದ ಬ್ರಿಟಿಷರ ನಾಡಿಗೆ ವಲಸೆ ಬಂದರು. ಆದರೆ ಆನಂತರದಲ್ಲಿ ಉತ್ತರ ಅಮೆರಿಕಾ ಕಡೆ ಒಲವು ತೋರಿಸಿದರು. ಈಗ ಅಂದಾಜು ೧.೭ಮಿಲಿಯನ್ ಭಾರತೀಯರು ಉತ್ತರ ಅಮೆರಿಕಾದಲ್ಲಿದ್ದಾರೆ ಎಂದು ಹೇಳಲಾಗಿದೆ. ಬ್ರಿಟಿಷ್ ಪ್ಲಾಂಟೇಷನ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಸಂಜಾvರ ಪಯಣ ನಂತರ ನೆದರ್‌ಲ್ಯಾಂಡ್ ಕಡೆಗೆ ಸಾಗಿತು. ಹೀಗೆ ಕಾಲಾನುಕ್ರಮಣಿಕೆಯಲ್ಲಿ ಡಯಾಸ್ಪೊರಾದ ಗ್ರಾಫ್ ಬೇರೆ ಬೇರೆ ಏರಿಳಿತಗಳನ್ನು ತೋರಿಸುತ್ತಾ ಬಂದಿದೆ. ಸುದೇಶ್ ಅವರ ವಿಭಜನೆಗೆ ಇನ್ನೊಂದು ಹಂತವನ್ನು ಸೇರ್ಪಡೆ ಮಾಡಬಹುದು. ಆರ್ಥಿಕ ತಜ್ಞರು ಗುರುತಿಸುವಂತೆ ೧೯೭೦ರಿಂದೀಚೆಗೆ ಕೊಲ್ಲಿ ರಾಷ್ಟ್ರಗಳಲ್ಲಿ ಕಂಡುಬಂದ ಎಣ್ಣೆಯ ನಿಕ್ಷೇಪಗಳ ಶೋಧ ಮತ್ತು ಅದನ್ನು ಹೊರತೆಗೆದಿರುವ ವಿದ್ಯಮಾನದಿಂದ ಭಾರತೀಯರು ಸೇರಿದಂತೆ ಹಲವಾರು ಏಷ್ಯನ್ನರು ಕೊಲ್ಲಿರಾಷ್ಟ್ರಗಳಿಗೆ ವಲಸೆ ಬಂದರು.

ಒಂದು ರೀತಿಯಿಂದ ಮೇಲೆ ತೋರಿಸಿದ ವಿಭಜನೆಯು ಭಾರತೀಯ ಡಯಾಸ್ಪೊರಾದ ಲಕ್ಷಣಗಳು ಏಕ ರೂಪಿಯಾದುದಲ್ಲ ಮತ್ತು ಅವುಗಳ ಹಿತಾಸಕ್ತಿಗಳು ಸಹ ಒಂದೇ ಅಲ್ಲ ಎನ್ನುವುದನ್ನು ತೋರಿಸುತ್ತಿದೆ. ಕೂಲಿ ಕಾರ್ಮಿಕರಾಗಿ ಬಂದ ಭಾರತೀಯ ಕುಟುಂಬಗಳು ಹೊಂದಿದ ಸಾಮಾಜಿಕ ಅಂತಸ್ತು ಮತ್ತು ವರ್ಗೀಕರಣಗಳು ಒಂದು ಬಗೆಯ ಡಯಾಸ್ಪೊರಾ ಸಮುದಾಯವನ್ನು ಹುಟ್ಟುಹಾಕಿವೆ. ಈ ಸಮುದಾಯಗಳು ಸಹ ಒಂದೇ ಅಲ್ಲ ಎನ್ನುವುದನ್ನು ತಿಳಿಯಬಹುದು. ಕೂಲಿ ಕಾರ್ಮಿಕರಾಗಿ ಬಂದ ಭಾರತೀಯ ಕುಟುಂಬಗಳು ಹಲವಾರು ವಾಸಸ್ಥಳಗಳನ್ನು ಹೊಂದಿವೆ. ಕೆಲವೊಮ್ಮೆ ಒಂದೆಡೆ ನೆಲೆ ನಿಂತರೂ, ಸ್ವದೇಶಕ್ಕೆ ಮರಳುವ, ಅಲ್ಲಿ ಬದುಕನ್ನು ನೆಲೆಗೊಳಿಸುವ ಬಗ್ಗೆ ಅವರು ಆಸಕ್ತಿ ತೋರುವುದಿಲ್ಲ. ಅವರ ಸಾಂಸ್ಕೃತಿಕ ನೆಲೆಗಳು ಸಹ ಚಲಿಸುತ್ತಲೇ ಇರುವುದರಿಂದ  ಭೂತಕಾಲದ ನೆನಪುಗಳು ವಿಸ್ಮೃತಿಯತ್ತ ಸಾಗುತ್ತಿರುತ್ತವೆ ಎಂದರೆ ತಪ್ಪಾಗಲಾರದು. ಆದರೆ, ಎರಡನೇ ಹಂತದ ಬಂಡವಾಳ ವ್ಯವಸ್ಥೆಯಲ್ಲಿ ವಲಸೆ ಬಂದ ಭಾರತೀಯ ಮನೋಭಾವ ಮೊದಲ ಹಂತದವರಿಗಿಂತ ವಿಭಿನ್ನವಾಗಿರುತ್ತದೆ. ತಾಯ್ನಾಡಿನ ಬಗೆಗಿನ ಹಂಬಲ, ತಾಯಿ ನೆಲದ ಸಂಸ್ಕೃತಿಯನ್ನು ಪುನಃ ಸ್ಥಾಪಿಸಿಕೊಳ್ಳುವ ಪ್ರವೃತ್ತಿ ಮಧ್ಯಮ ವರ್ಗದ ಆಶೋತ್ತರಗಳಾಗಿವೆ. ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗಗಳು ತಮ್ಮ ಸಂಸ್ಕೃತಿಯನ್ನು ಪುನಃ ಪಡೆದುಕೊಳ್ಳುವ ಬಗ್ಗೆ ಆಸಕ್ತರಾಗಿರುವುದು ದೊಡ್ಡ ಮಟ್ಟದಲ್ಲಿ ಸಾಂಸ್ಕೃತಿಕ ಉತ್ಪಾದನೆಗಳಿಗೆ ಎಡೆ ಮಾಡಿಕೊಡುತ್ತಿದೆ. ಮಾನಸಿಕ ಕ್ಷೆಭೆ, ಒಂಟಿತನ ಅನುಭವಿಸುವ ಡಯಾಸ್ಪೊರಾದ ಸ್ಥಿತಿ ಈ ಹಂತದಲ್ಲಿ ಕಾಣುವುದು ಕಡಿಮೆ. ಭಾರತೀಯ ಡಯಾಸ್ಪೊರಿಗರು ಇಂದು ವಿದೇಶಗಳಲ್ಲಿ ತಮ್ಮದೇ ಆದ ಗುಂಪುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅವರ ಅನೇಕ ಸಂಘಗಳು ತಲೆಯೆತ್ತಿವೆ. ಭಾರತೀಯ ಸಂಸ್ಕೃತಿ ಎನ್ನುವ ಬಿಂಬವನ್ನು ಅವು ಎಲ್ಲೆಡೆ ಹೆಮ್ಮೆಯಿಂದ ತೋರಿಸಲು ಅತ್ಯುತ್ಸಾಹ ತೋರಿಸುತ್ತಿವೆ.

ಹತ್ತೊಂಬತ್ತನೇ ಶತಮಾನದ ಮತ್ತು ಆನಂತರದ ಭಾರತೀಯ ವಲಸೆಗಳು ಬಲವಂತದಿಂದ ಆದವು. ಒಂದು ರೀತಿಯಲ್ಲಿ ಭಾರತೀಯರನ್ನು ಕೂಲಿಗಳ ಹೆಸರಲ್ಲಿ ಸಾಗಾಣಿಕೆ ಮಾಡಲಾಯಿತು. ಗುಲಾಮಗಿರಿಯನ್ನು ಜಗತ್ತಿನೆಲ್ಲೆಡೆ ನಿಷೇಧಿಸುತ್ತಿರುವಾಗ, ಬ್ರಿಟಿಷ್ ವಸಾಹತುಶಾಹಿ ಅದಕ್ಕೆ ‘ಕರಾರು ಬದ್ಧ ಕೂಲಿಗಳು’ ಎಂದು ಹೊಸ ಹೆಸರನ್ನು ಕೊಟ್ಟಿತು.  ಮಾರಿಷಸ್, ಬ್ರಿಟಿಷ್ ಗಯಾನ ವೆಸ್ಟ್ ಇಂಡೀಸ್ ದ್ವೀಪಗಳಾದ ಜಮೈಕಾ, ಟ್ರಿನಿಡಾಡ್, ಕ್ರಮವಾಗಿ ವಲಸೆ ನಡೆಯಿತು.

ಭಾರತೀಯ ಡಯಾಸ್ಪೊರಾದಲ್ಲಿ ಆಂತರಿಕ ವಲಸೆಗಳೂ ಸೇರಿಕೊಳ್ಳುತ್ತವೆ. ದೇಶ ವಿಭಜನೆಯ ನಂತರ ಸ್ವಾತಂತ್ರೋತ್ತರ ಸನ್ನಿವೇಶದಲ್ಲಿ ನೆರೆಹೊರೆ ದೇಶಗಳಿಂದ ಭಾರತಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಿನದ್ದಾಗಿತ್ತು. ಈಗಲೂ ಪೂರ್ವ ಬಂಗಾಳದಿಂದ ಮಾನವ ವಲಸೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಔದ್ಯೋಗಿಕ ಕಾರಣಗಳಿಂದ, ಆಹಾರ ಮತ್ತು ವಸತಿಗಳಿಗಾಗಿ ಭಾರತಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆಧುನಿಕ ಭಾರತೀಯ ಡಯಾಸ್ಪೊರಾ ಚರಿತ್ರೆ ಆರಂಭವಾಗುವುದೇ ಕೆರಿಬಿಯನ್ ದ್ವೀಪಗಳು ಮತ್ತು ಆಫ್ರಿಕಾದ ಪ್ಲಾಂಟೇಷನ್ ವಲಸೆಗಳಿಂದ. ಕೆರೆಬಿಯನ್ ಭಾರತೀಯ ಡಯಾಸ್ಪೊರರು ೧೮೭೩ ರಿಂದ ೧೯೧೬ ರ ವರೆಗೆ ಇಂಗ್ಲಿಷ್ ವಸಾಹತುಶಾಹಿ ಆಡಳಿತಕ್ಕೊಳಪಟ್ಟಿದ್ದ ಭಾರತೀಯರನ್ನು ಕರಾರುಬದ್ಧ ಕೂಲಿಗಳಾಗಿ ಕೆರೆಬಿಯನ್ ದ್ವೀಪಗಳಿಗೆ ಕರೆತರುವ ಪ್ರಕ್ರಿಯೆ ನಡೆಯಿತು. ಅಷ್ಟರಲ್ಲಿ ಸರಿಸುಮಾರು ೩೦,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಅರ್ಧದಷ್ಟು ಜನ ಭಾರತೀಯರು ಸ್ವದೇಶಕ್ಕೆ ಮರಳಿದರು. ಉಳಿದವರು ಅಲ್ಲೇ ಉಳಿದರು. ಸದ್ಯ ಅಲ್ಲಿ ಉಳಿದ ಭಾರತೀಯ ಜನರ ಸಂಖ್ಯೆ ಅಲ್ಲಿನ ಅರ್ಧ ಜನಸಂಖ್ಯೆಯಷ್ಟಿದೆ.

ಆರ್ಥಿಕತೆಯೇ ಕೇಂದ್ರ ಬಿಂದು 

ಭಾರತೀಯ ಡಯಾಸ್ಪೊರವನ್ನು ಸಾಮಾನ್ಯವಾಗಿ ಎರಡು ಹಂತಗಳಲ್ಲಿ ಗುರುತಿಸಲಾಗುತ್ತದೆ. ಒಂದು ಸಾಗರೋತ್ತರ ವಲಸೆ, ಇನ್ನೊಂದು ಇಪ್ಪತ್ತನೇ ಶತಮಾನದಲ್ಲಿ ಕೈಗಾರಿಕವಾಗಿ ಮುಂದುವರೆದ ದೇಶಗಳಿಗೆ ಬಂದ ವಲ. ಅಧ್ಯಯನದ ಸಲುವಾಗಿ (ಇಪ್ಪತ್ತು ಮಿಲಿಯನ್ನಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಡಯಸ್ಪೊರಾ ಇದೆ) ಇವನ್ನು ವಸಾಹತುಶಾಹಿ ಕಾಲದ ಮತ್ತು ವಸಾಹತೋತ್ತರ ಕಾಲದ ವಲಸೆ ಎಂದು ಕೂಡ ಹೆಸರಿಸಲಾಗಿದೆ. ಆದರೆ ಇವೆರಡೂ ಬೇರೆ ಬೇರೆಯಲ್ಲ. ಪರಸ್ಪರ ಸಂಬಂಧವುಳ್ಳ, ಆರ್ಥಿಕತೆಯನ್ನೇ ಕೇಂದ್ರವಾಗಿಟ್ಟುಕೊಂಡ ಬೆಳವಣಿಗೆಗಳು.  ಹತ್ತೊಂಬತ್ತನೇ ಶತಮಾನದಲ್ಲಿ ದಕ್ಷಿಣಾ ಆಫ್ರಿಕಾಕ್ಕೆ ಭಾರತೀಯರನ್ನು ಕರಾರು ಬದ್ಧ ಕೂಲಿಗಾಳಾಗಿ ಕರೆತಂದಿದ್ದು ಬ್ರಿಟಿಷರು. ದಕ್ಷಿಣ ಆಫ್ರಿಕಾಕ್ಕೆ ಆನಂತರದಲ್ಲಿ ವಲಸೆ ಬಂದಿದ್ದು ಗುಜರಾತಿನ ವಣಿಕ ವರ್ಗ. ಗಾಂಧಿಯವರ ದಕ್ಷಿಣ ಆಫ್ರಿಕಾ ವಾಸ ಮತ್ತು ಅಲ್ಲಿನ ಅವರ ಸತ್ಯಾಗ್ರಹಗಳ ಆರಂಭದ ದಿನಗಳು ಚಾರಿತ್ರಿಕವಾಗಿ ದಾಖಲಾಗಿರುವಂತಹವು. ದಕ್ಷಿಣ ಆಫ್ರಿಕಾದಲ್ಲಿ ಅನೇಕ ವರ್ಷಗಳಿಂದಲೂ ಭಾರತೀಯರು ನೆಲೆಸುತ್ತಾ ಬಂದಿದ್ದಾರೆ. ಇದು ಅಲ್ಲಿನ ಡಯಾಸ್ಪೊರಾ ಸನ್ನಿವೇಶಕ್ಕೆ ಕಾರಣವಾಗಿದೆ.

ಕೆನಡಾದ ಭಾರತೀಯ ಡಯಾಸ್ಪೊರ ಸಹ ಜಾಗತಿಕ ಗಮನ ಸೆಳೆದಿದೆ. ಅಲ್ಲಿ ಭಾರತೀಯ ಸಂಜಾತರ ಸಂಖ್ಯೆ ಗಣನೀಯವಾಗಿ ಏರಿದೆ. ಇವರನ್ನು ಈಸ್ಟ್ ಇಂಡಿಯನ್ ಅಥವಾ ಇಂಡೋ-ಕೆನಡಿಯನ್ ಎಂದು ಕರೆಯಲಾಗುತ್ತದೆ. ಕೆನಡಾದಲ್ಲಿ ಮೂಲನಿವಾಸಿಗಳಾದ ಇಂಡಿಯನ್ನರು ಇರುವುದರಿಂದ, ಅವರಿಂದ ಬೇರೆಯಾಗಿ ಭಾರತೀಯರನ್ನು ಗುರುತಿಸಲು ಈ ರೀತಿ ಕರೆಯಲಾಗುತ್ತದೆ. ಇಂಡಿಯನ್ ಪದವನ್ನು  ಕೆರಿಬಿಯಾದಿಂದ ವಲಸೆ ಬಂದವರಿಗೂ ಅನ್ವಯಿಸಿ ಕರೆಯಲಾಗುತ್ತದೆ. ಇಲ್ಲಿ ಹಿಂದೂಗಳು ಮತ್ತು ಸಿಖ್ಖರು, ಬೌದ್ಧರು ಸಹಾ ಇದ್ದಾರೆ. ಪ್ರಾದೇಶಿಕವಾಗಿ ಹೇಳುವುದಾದರೆ ಪಂಜಾಬಿಗಳು, ಗುಜರಾತಿಗಳು, ತಮಿಳರು, ಬಂಗಾಳಿಗಳು ಭಾರತೀಯ ಡಯಾಸ್ಪೊರಾಕ್ಕೆ ಸೇರುತ್ತಾರೆ. ಭಾರತೀಯ ಕೆನಡಾದ ಡಯಾಸ್ಪೊರಾದಲ್ಲಿ ಬಿಳಿಯರ ಶೋಷಣೆಗೆ ಭಾರತೀಯರು ಬಲಿಯಾಗಿದ್ದಾರೆ. ಬಹು ಜನಾಂಗೀಯ, ಬಹುಸಂಸ್ಕೃತಿಯ ಸಮಾಜದಲ್ಲಿ ಬದುಕಬೇಕಾದಾಗ ಅನೇಕ ಒತ್ತಡಗಳನ್ನು ಎದುರಿಸಿದ್ದಾರೆ ಮತ್ತು ತಮ್ಮ ಅಸ್ತಿತ್ವವನ್ನು ನಿರೂಪಿಸಬೇಕಾದ ಒತ್ತಡಕ್ಕೂ ಸಿಲುಕಿದ್ದಾರೆ. ಶೋಷಣೆ ತುಳಿತಕ್ಕೆ ಪ್ರತಿಯಾಗಿ ಪ್ರತಿತಂತ್ರವನ್ನು ನಿರೂಪಿಸಲು ಪ್ರಯತ್ನಗಳನ್ನೂ ನಡೆಸಿದ್ದಾರೆ. ಒಟ್ಟಾರೆ ಭಾರತೀಯ ಡಯಾಸ್ಪೊರ ಕೆನಡಾದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಹೋರಾಡುತ್ತಿದೆ. ಡಯಾಸ್ಪೊರಾದ ಕಹಿಯನ್ನು ಅಲ್ಲಿನ ಭಾರತೀಯ ಸಮುದಾಯ ಚೆನ್ನಾಗಿಯೇ ಅನುಭವಿಸಿದೆ. ಅಂಚಿಗೆ ಸರಿದ ಸಮುದಾಯವಾಗಿ, ಅಧಿಕಾರ ಬಲವಿಲ್ಲದೆ ಅಸ್ತಿತ್ವವೊಂದನ್ನು ರೂಪಿಸುವುದು ಎಷ್ಟು ಕಷ್ಟ ಎಂಬುದನ್ನು ಈ ಡಯಾಸ್ಪೊರಾ ನಿರೂಪಿಸುತ್ತದೆ. ಅದಕ್ಕಾಗಿ ಕೆಲವು ಹೋರಾಟಗಳೂ ಸಂಭವಿಸುತ್ತಿವೆ ಎನ್ನುವುದನ್ನು ಈ ಸಂದರ್ಭದಲ್ಲಿ ನೆನೆಯಬಹುದು. ಆದರೆ ಭಾರತೀಯ ಡಯಾಸ್ಪೊರಾ ಕೆನಡಾದಲ್ಲಿ ತನ್ನದೂ ಒಂದು ಅಸ್ತಿತ್ವ ಇದೆ ಎಂಬುದನ್ನು ನಿರೂಪಿಸುತ್ತಲಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಭಾರತದ ಸಿಖ್ಖರು ಅಲ್ಲಿ ಕ್ರಮೇಣ ಪ್ರಬಲರಾಗಿದ್ದಾರೆ.

ಭಾರತದಿಂದ ಸಿಖ್ಖರು ಕೆನಡಾಕ್ಕೆ ವಲಸೆ ಬಂದವರಲ್ಲಿ ಮೊದಲಿಗರು. ಅವರು ಕೆನಡಾದ ಬಿಳಿಯರಿಂದ ಸಾಕಷ್ಟು ಜನಾಂಗೀಯ ಕಿರುಕುಳಗಳನ್ನು ಅನುಭವಿಸಿದರು. ಕೆನಡಾ ವಲಸೆಯ ನಿಯಮಾವಳಿಗಳಲ್ಲಿ ಇಪ್ಪತ್ತನೇ ಶತಮಾನದ ತನಕ ಅಲ್ಲಿನ ಆಡಳಿತ ಭಾರತೀಯರಿಗೆ ಸೌಕರ್ಯ ಮಾಡಿಕೊಡಲಿಲ್ಲ. ಆನಂತರ ಅದು ತನ್ನ ನೀತಿಯನ್ನು ಬದಲಾಯಿಸಿತು. ಈಗೀಗ ಮಾಂಟ್ರಿಯಲ್ ಮತ್ತು ಎಡ್‌ಮಂಟನ್‌ನಲ್ಲಿ ನೆಲೆಸಿದ್ದಾರೆ. ‘ಸಿಂಗ್‌ಡೇಲ್’ ಎನ್ನುವ ಉಪನಗರವೇ ಬ್ರಾಮ್ಟಾನ್ ನಗರದಲ್ಲಿ ಹುಟ್ಟಿಕೊಂಡಿದೆ. ಇದು ಸಿಖ್ಖರ ಡಯಾಸ್ಪೊರಾದ ಪ್ರಾಬಲ್ಯವನ್ನು ತೋರುತ್ತದೆ.

ಭಾರತೀಯ ವಲಸಿಗರಿಗೆ ಅಮೆರಿಕಾದಲ್ಲಿ ಒಳ್ಳೆ ಸ್ಥಾನಮಾನ ಸಿಕ್ಕಿದೆ. ಮಾಹಿತಿ ತಂತ್ರಜ್ಞಾನ, ಗಣಕ ತಾಂತ್ರಿಕತೆ, ಔಷಧಿ, ವೈದ್ಯಕೀಯ, ಶಿಕ್ಷಣ ಇತ್ಯಾದಿ ಕ್ಷೇತ್ರದಲ್ಲಿ ಭಾರತೀಯರು ಪಾರಮ್ಯ ಸಾಧಿಸಿದ್ದಾರೆ. ಕೂಲಿಯಾಳುಗಳ ಸ್ಥಾನದಿಂದ ವರ್ತಕ ಸ್ಥಾನಕ್ಕೆ, ಕೌಶಲ್ಯಕ್ಕೆ, ಶೈಕ್ಷಣಿಕ ಪ್ರಗತಿಗೆ ಭಾರತೀಯರ ಸ್ಥಾನ ಬದಲಾಗಿದೆ. ಅಮೆರಿಕಾದಲ್ಲಿ ಇಂದು ಅನೇಕ ಭಾರತೀಯ ದೇವಾಲಯಗಳಿವೆ. ಅಲ್ಲಿಯೇ ನೆಲೆಸಿದವರು ಅನೇಕ ಸಂಘ ಸಂಘಟನೆಗಳನ್ನು ಕಟ್ಟಿಕೊಂಡು ಭಾರತೀಯತೆಯನ್ನು ಅಮೆರಿಕಾದಲ್ಲಿ ಸ್ಥಾಪಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಗಣಕಯಂತ್ರದ ತಂತ್ರಜ್ಞಾನ ಮತ್ತು ಮಾಹಿತಿ ಕ್ಷೇತ್ರದ ಹೆಚ್ಚಳದಿಂದ ಅಮೆರಿಕಾ ಭಾರತೀಯರತ್ತ ನೋಡುತ್ತಿದೆ. ಕೆಲವೊಮ್ಮೆ ಅಸೂಯೆಯಿಂದ, ಕೆಲವೊಮ್ಮೆ ಅಗತ್ಯಕ್ಕಾಗಿ.

ಲಂಡನ್, ಕೆನಡಾ ಮುಂತಾದ ಕಡೆ ಭಾರತೀಯರದೇ ಘೆಟ್ಟೊಗಳಿವೆ. ಅವರದೇ ಆದ ಉಪನಗರಗಳಿವೆ. ಭಾರತೀಯ ‘ವಾಸನೆ’ಯನ್ನು ಅಲ್ಲಿನ ಭಾರತೀಯರು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಭಾರತೀಯರು ಇಂದು ಜಗತ್ತಿನ ಬಹುಪಾಲು ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಯುರೋಪು, ಅಮೆರಿಕಾ, ಆಸ್ಟ್ರೇಲಿಯಾಗಳಲ್ಲದೆ ಎಲ್ಲಾ ದಿಕ್ಕುಗಳಲ್ಲೂ ಅವರ ವಲಸೆಯ ಚಲನೆ ಕಾಣುತ್ತದೆ.  ಮಾರಿಷಸ್‌ನಲ್ಲಿ ಇಂದು ಅಲ್ಲಿನ ಜನಸಂಖ್ಯೆಯು ಶೇಕಡಾ ಎಪ್ಪತ್ತಕ್ಕೂ  ಅಧಿಕ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಇವರಲ್ಲಿ ಹಿಂದೂ ಮತ್ತು ಮುಸ್ಲಿಮ್ ಭಾರತೀಯರಿದ್ದಾರೆ. ತಮಿಳು, ಭೋಜ್‌ಪುರಿ ಹಿಂದಿ ಮುಂತಾದ ಭಾಷೆಗಳನ್ನು ಅಲ್ಲಿನ ಜನ ಆಡುತ್ತಾರಾದರೂ ಅಧಿಕೃತ ಭಾಷೆಯಾಗಿ ಫ್ರೆಂಚನ್ನು ಆಡುತ್ತಾರೆ. ಇಲ್ಲಿ ಭಾಷಿಕ ಡಯಾಸ್ಪೊರಾದ ಸಾಧ್ಯತೆ ಅಧಿಕವಾಗಿದೆ.

ಭಾರತೀಯ ಡಯಾಸ್ಪೊರವನ್ನು ಪ್ರತಿನಿಧಿಸಿದ ಸಮುದಾಯಗಳೆಂದರೆ ಸಿಖ್ಖರು ಮತ್ತು ತಮಿಳರು. ಇತ್ತೀಚಿನ ತಾಂತ್ರಿಕ ವಲಸೆಯ  ಬೆಳವಣಿಗೆಗಳನ್ನು ಬಿಟ್ಟರೆ, ಅತಿ ಹೆಚ್ಚಿನ ವಲಸೆ ಇವೆರಡೂ ಸಮುದಾಯಗಳದ್ದಾಗಿದೆ. ತಮಿಳರು ಮಲೇಶ್ಯಾ ಮತ್ತು ಕೆನೆಡಾಗಳಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿದ್ದಾರೆ. ಇವರು ಕುಶಲ ಕರ್ಮಿಗಳೂ ಆಗಿರುವ ಕಾರಣ ಕಾರ್ಖಾನೆ ನಿರ್ಮಾಣಗಳಲ್ಲಿ ಇವರನ್ನು ತೊಡಗಿಸಿಕೊಳ್ಳಲಾಗಿದೆ. ಸಿಖ್ಖರು ಆಸ್ಟ್ರೇಲಿಯಾ ಮತ್ತು ಕೆನಡಾಗಳಲ್ಲಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಬನಾನ ಪ್ಲಾಂಟೇಷನ್‌ಗಳಲ್ಲಿ ಕೆಲಸಕ್ಕೆಂದು ಬಂದ ಸಿಖ್ಖರು ಆ ಖಂಡದಲ್ಲಿ ತಮ್ಮದೇ ಆದ ಅಸ್ತಿತ್ವ ಸ್ಥಾಪಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಬ್ರಿಟನ್‌ಗಳಲ್ಲಿ ಭಾರತೀಯರ ಮೇಲೆ ಅಸಹನೆಯಿಂದ ಜನಾಂಗೀಯ ಹಲ್ಲೆ ನಡೆದಿತ್ತು ಮತ್ತು ನಡೆಯುತ್ತಲೇ ಇದೆ.

ಉದಾರೀಕರಣ, ಖಾಸಗೀಕರಣಗಳ ಪ್ರಭಾವ

ಭಾರತೀಯ ಡಯಾಸ್ಪೊರಾದ ಅತ್ಯುನ್ನತ ಕಾಲ ಎಂದರೆ ೧೯೮೦ರಿಂದ ಈಚೆಗೆ. ಭಾರತ ಆರ್ಥಿಕತೆಯ ಉದಾರೀಕರಣ, ಖಾಸಗೀಕರಣಗಳಿಗೆ ಇಂಬುಕೊಟ್ಟಂತೆಲ್ಲ ಡಯಾಸ್ಪೊರಾದ ಬೆಳವಣಿಗೆಗಳು ಹೆಚ್ಚಾದವು. ೧೯೯೦ರ ಆನಂತರ ಈ ವಲಸೆಗಳಿಗೆ ರಾಜಕೀಯವಾದ ಹಿತಾಸಕ್ತಿಗಳು ಬೆರೆತು ಡಯಾಸ್ಪೊರಾವನ್ನು ಇನ್ನಷ್ಟು ಪ್ರೋತ್ಸಾಹದಾಯಕ ಕ್ರಿಯೆಯನ್ನಾಗಿ ಮಾಡಿದವು. ಡಯಾಸ್ಪೊರಾ ಸಂಘಟನೆಗಳು ಸಾಂಸ್ಕೃತಿಕವಾಗಿ ಮತ್ತು ಆರ್ಥಿಕ ದೃಷ್ಟಿಯಿಂದ ಕಟ್ಟಿಕೊಂಡಂಥವು. ಭಾರತೀಯ ಡಯಾಸ್ಪೊರಾಕ್ಕೆ ಸಹ ಈ ಒತ್ತಡಗಳಿವೆ. ಭಾರತೀಯ ಎಂದು ಗುರುತಿಸಿಕೊಳ್ಳುವ ಹಿನ್ನೆಲೆಯಲ್ಲಿ ಡಯಾಸ್ಪೊರ ಗುಂಪಿಗಾಗುವ ಲಾಭ ಏನು? ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಏನು ಲಾಭ ಸಿಗಬಹುದು? ಎಂಬ ಕಡೆ ಅವುಗಳ ದೃಷ್ಟಿಹರಿದಿರುತ್ತದೆ. ಒಂದೊಮ್ಮೆ ಡಯಾಸ್ಪೊರಿಗರಿಗೆ ತಮ್ಮ ಡಯಾಸ್ಪೊರಾ ಅಸ್ತಿತ್ವದ ಬಗ್ಗೆ ನಂಬಿಕೆಯಿಲ್ಲದಿದ್ದರೆ ಈ ತೆರನಾದ ಸಂಘಟನೆಗಳಿಂದಲೇ ದೂರವುಳಿಯುತ್ತಾರೆ. ಆದುದರಿಂದ ಭಾರತೀಯ ಡಯಾಸ್ಪೊರದ ಅತ್ಯತ್ಸಾಹದ ‘ಸೇರಿಕೊಳ್ಳುವಿಕೆ’ ಮತ್ತು ಉದಾಸೀನದಿಂದು ‘ದೂರ ಸರಿಯುವಿಕೆ’ ಎರಡೂ ಮಹತ್ವದ ತೊಯ್ದಾಟಗಳೇ ಎಂದು ಗುರುತಿಸಲಾಗಿದೆ.

ಅನುಕೂಲಸಿಂಧು ಸಂಸ್ಕೃತಿ

ಆಧುನಿಕ ಸಂದರ್ಭದಲ್ಲಿ ಸಂಸ್ಕೃತಿ ಸರಕುಗಳ ಮೂಲಕ ಪ್ರಕಟಗೊಳ್ಳುತ್ತಿದೆ. ನಿಶ್ಚಲವಾದ ಸರಕುಗಳ ಮೂಲಕ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕ್ರಿಯೆಗೆ ಚಾಲನೆ ಸಿಕ್ಕಿದೆ. ಡಯಾಸ್ಪೊರ ಭಾರತೀಯರು ಆಧುನಿಕತೆಯ ಸಂಪರ್ಕ ಸಾಧನಗಳಾದ ವಿಮಾನ, ಮೊಬೈಲು, ವೀಡಿಯೋ ಫೋನು, ಕಂಪ್ಯೂಟರ್‌ಗಳನ್ನು ಬಳಸಿಕೊಂಡು ಸಂಸ್ಕೃತಿಯ ಪ್ರಸಾರಕಾರ್ಯವನ್ನು ಮಾಡುತ್ತಿದ್ದಾರೆ. ಇದರಲ್ಲೂ ಒಂದು ವೈರುಧ್ಯ ಇದೆ. ಸಮುದ್ರೋಲ್ಲ್ಲಂಘನವು ಧರ್ಮಲಂಡತನ ಎಂದು ಭಾವಿಸಿಕೊಂಡಿದ್ದ ಸನಾತನ ವೈದಿಕ ಧರ್ಮವನ್ನು, ಮಡಿವಂತಿಕೆಯನ್ನು ಆಧುನಿಕ ಭಾರತೀಯರು ಕಳಚಿಕೊಂಡಿದ್ದಾರೆ. ಆದರೆ ಸಂಪೂರ್ಣವಾಗಿ ಸಂಸ್ಕೃತಿಯನ್ನು ಬಲಿ ಕೊಟ್ಟಿಲ್ಲ. ಅದನ್ನು ಅವರು ಸಡಿಲಗೊಳಿಸಿಕೊಂಡಿದ್ದಾರೆ. ಮೇಲಾಗಿ ಅವರಿಗೆ ಅದರ ಧಾರ್ಮಿಕ ತಿರುಳು ಅನುಪಯುಕ್ತ ಎನ್ನಿಸಿದಾಗಲೆಲ್ಲಾ ಅದನ್ನು ಅವರು ಕಳಚಿಕೊಳ್ಳುತ್ತಾ ಬಂದಿದ್ದಾರೆ. ಡಯಾಸ್ಪೊರಾ ಸಮುದಾಯಕ್ಕೆ ಸಂಸ್ಕೃತಿಯ ಆಯ್ಕೆ ಕಡ್ಡಾಯವಲ್ಲ. ಅವರೊಳಗಿನ ಡಯಾಸ್ಪೊರಾ ಪ್ರಜ್ಞೆಯಿಂದ ಸಂಸ್ಕೃತಿಯ ಕೆಲವು ಭಾಗಗಳನ್ನು ಅವರು ಆಯ್ದುಕೊಳ್ಳುತ್ತಾರೆ. ಅವರಿಗೆ ಅದರ ಬೇರುರೂಪದ ಶೋಧನೆ, ಗ್ರಹಿಕೆಗಳು ಎಷ್ಟೋ ಸಾರಿ ನಿರುಪಯುಕ್ತವಾಗಿರುತ್ತವೆ. ಭಾರತೀಯ ಡಯಾಸ್ಪೊರಿಗರು (ಅದರಲ್ಲೂ ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಬದುಕುತ್ತಿರುವ ಭಾರತೀಯರು) ಯಾವ ಸಂಸ್ಕೃತಿಯನ್ನು ತಮ್ಮದೆಂದು ಪ್ರತಿನಿಧಿಸಲು ಹೋರಾಡುತ್ತಿದ್ದಾರೋ ಅದು ಸ್ವದೇಶದಲ್ಲಿರುವ ವರ್ತಮಾನದ ಸಂಸ್ಕೃತಿಯಂತೆಯೇ ಇರುವಂಥದ್ದಲ್ಲ ಎಂಬುದನ್ನು ಗಮನಿಸಬಹುದು.

ಭಾರತೀಯರಿಗೆ ಡಯಾಸ್ಪೊರಾ ಎಂದೊಡನೆ ಸನಾತನ ಧರ್ಮ ಮತ್ತು ವಸಾಹತೋತ್ತರ ಸಂಘರ್ಷಮಯ ತಾಯ್ನಾಡಿನ ಚಿತ್ರ ಎದುರಿಗೆ ಬರುತ್ತದೆ ಎನ್ನಲಾಗಿದೆ. ಅಮರ್ತ್ಯ ಸೇನ್ ತಮ್ಮ ‘ಆರ್ಗ್ಯುಮೆಂಟೇಟಿವ್ ಇಂಡಿಯನ್“ ಕೃತಿಯಲ್ಲಿ ಗಮನಿಸುವಂತೆ ಭಾರತೀಯ ಡಯಾಸ್ಪೊರಾದಲ್ಲಿ ಪಂಥೀಯತೆಯ ಲಕ್ಷಣಗಳು ಕಾಣುತ್ತವೆ (ಪು.73).  ರಾಷ್ಟ್ರೀಯತೆಯ ಬಗ್ಗೆ, ಸಂಸ್ಕೃತಿಯ ಬಗ್ಗೆ ಭಾರತೀಯ ಡಯಾಸ್ಪೊರಿಗರಲ್ಲಿ ಹೆಮ್ಮೆಯ ಭಾವವಿದೆ. ಅದರ ಜೊತೆಗೆ ಅದರ ಬಗ್ಗೆ ಅನಿಶ್ಚಿತತೆಯೂ ಇದೆ. ಏಕೆಂದರೆ, ಯಾವುದರ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕೆನ್ನುವುದರ ಬಗ್ಗೆ ಅವರು ಗೊಂದಲದಲ್ಲಿದ್ದಾರೆ. ಸೇನ್ ಪ್ರಕಾರ ಡಯಾಸ್ಪೊರ ಬೆಳವಣಿಗೆಗಳು ಸ್ವದೇಶಗಳ ಮೂಲಭೂತವಾದಿ ಧೋರಣೆಗೆ ಸಹಕಾರಿಯಾಗುತ್ತಿವೆ; ೧೯೮೦ರಿಂದೀಚೆಗೆ ಉತ್ತರ ಅಮೇರಿಕಾ ಮತ್ತು ಯೂರೋಪುಗಳಲ್ಲಿ ಸಿಖ್ ಉಗ್ರವಾದಕ್ಕೆ ಅದು ಕಾರಣವಾಯಿತು. ಪ್ರಪಂಚದೆಲ್ಲೆಡೆ ಮುಸ್ಲಿಂ ಮೂಲ ಭೂತವಾದಕ್ಕೆ ಎಡೆ ಮಾಡಿಕೊಟ್ಟಿತು. ಹಿಂದುತ್ವವಾದವು ಸಹ ಇದೇ ಅವಧಿಯಲ್ಲಿ ಬೆಳೆಯಿತು.

ಎಲೆನಾಬಾಲ್ ಕೆರ‍್ಕಾಫ್ ಎಂಬ ಅಧ್ಯಯನಕಾರರ ಅಭಿಪ್ರಾಯದಂತೆ ಭಾರತೀಯ ಡಯಾಸ್ಪೊರಾ ವರ್ಗವು ಹಿಂದುತ್ವ ಪ್ರಧಾನವಾಗಿದೆ. ಇದರೊಳಗಿನಿಂದ ಮುಸ್ಲಿಮರನ್ನು ಹೊರಗಿಡುವ ಯತ್ನಗಳು ನಡೆಯುತ್ತಲೇ ಇವೆ. ಭಾರತೀಯ ಮುಸ್ಲೀಮರೂ ತಮ್ಮ ತಾಯ್ನಾಡನ್ನು ಧಾರ್ಮಿಕವಾಗಿ ಕಲ್ಪಿಸಿಕೊಳ್ಳುವ ಕಾರಣದಿಂದ ಅವರ ಡಯಾಸ್ಪೊರ ಅನುಭವಗಳು ಭಿನ್ನವಾಗಿವೆ. ಇತರೆ ಹಿಂದೂ ವಿದೇಶಿ ಡಯಾಸ್ಪೊರಾ ಎಂದರೆ ಒಗ್ಗೂಡುವಿಕೆಯನ್ನು ಪ್ರೋತ್ಸಾಹಿಸುತ್ತವೆ ಆದರೆ ಮುಸ್ಲಿಮರನ್ನು ಹೊರಗಿಡುತ್ತವೆ ಎಂಬ ಬಗ್ಗೆ ಅವರಿಗೆ ಆತಂಕವಿದೆ. ಹೀಗಾಗಿ ಡಯಾಸ್ಪೊರಾ ಎಂದರೆ ಅವರು ಶಂಕೆ ವ್ಯಕ್ತಪಡಿಸುತ್ತಾರೆ. ಒಟ್ಟಾರೆ ಭಾರತೀಯ ಡಯಾಸ್ಪೊರಾದಲ್ಲಿ ಸಂಸ್ಕೃತಿಯ ಪ್ರಜ್ಞೆ ಅದರಲ್ಲೂ ಹಿಂದೂ ಸಂಸ್ಕೃತಿಯ ಪ್ರಜ್ಞೆ ಜಾಗೃತವಾದುದಾಗಿದೆ. ಪ್ರಾಚೀನ ನಾಗರಿಕತೆ, ಭಾಷೆ, ಸಂಸ್ಕೃತಿಗಳ ಇಂದಿನ ವಾರಸುದಾರರು ನಾವು ಎಂಬ ಭಾವ ಅವರಲ್ಲಿ ಹೆಮ್ಮೆ ಮೂಡಿಸಿದೆ. ಇದನ್ನು ಅವರು ತಮ್ಮ ಸಾಂಸ್ಕೃತಿಕ ಅಸ್ಮಿತೆಯಾಗಿ ಗುರುತಿಸಿಕೊಳ್ಳಲು ಬಯಸುತ್ತಾರೆ. ಭಾರತೀಯ ವೈವಿಧ್ಯಮಯ ಅಸ್ಮಿತೆಗಳು ಅವುಗಳ ಭಿನ್ನತೆಗಳೊಂದಿಗೆಯೇ ವಲಸೆ ಹೋಗಿರುತ್ತವೆ ಎನ್ನುವುದನ್ನು ಮಾತ್ರ ಈ ಸಂದರ್ಭದಲ್ಲಿ ಮರೆಯುವಂತಿಲ್ಲ.

ಮೂಡುತ್ತಿರುವ ಕೋಮುವಾದಿ ಚಹರೆ

ಭಾರತೀಯತೆ ಎನ್ನುವುದು ಹಲವುತನಗಳ ಸಂಗಮದಂತೆ ಎನ್ನುವ ಚಿತ್ರ ಮೂಡುವುದಾದರೂ, ಅದರೊಳಗೆ ಅನೇಕ ಆತಂಕದ ಸಂಗತಿಗಳಿವೆ. ಕೋಮುವಾದದ ಚಹರೆ ಮತ್ತು ಪ್ರಾದೇಶಿಕ, ಭಾಷಿಕ ವೈವಿಧ್ಯತೆಗಳು ಏಕ ಪ್ರಕಾರವಾಗಿ ಸಾಮರಸ್ಯದ ಸಂಕೇತಗಳಾಗಿ ಉಳಿದಿಲ್ಲ. ಆದ್ದರಿಂದ ಭಾರತೀಯ ಡಯಾಸ್ಪರದಲ್ಲಿ ರಾಷ್ಟ್ರೀಯತೆಯನ್ನು ಎರಡು ತೆರನಾಗಿ ಗ್ರಹಿಸಬಹುದು. ಒಂದು, ಭಾರತವೆಂಬ ರಾಷ್ಟ್ರದಿಂದ ಅಕ್ಷರಶಃ ಬಂದ ಡಯಾಸ್ಪೊರಿಗರು ಗುರುತಿಸಿಕೊಳ್ಳುವ ಔಪಚಾರಿಕ ರಾಷ್ಟ್ರೀಯತೆ, ಇನ್ನೊಂದು ಭಾರತವೆಂಬ ಧರ್ಮ ಸಂಬಂಧವನ್ನು ಆತುಕೊಳ್ಳುವ  ಡಯಾಸ್ಪೊರಿಗರು. ಭಾರತವು ಘೋಷಿತ ಹಿಂದೂ ರಾಷ್ಟ್ರ ಅಲ್ಲ. ಆದರೆ ರಾಷ್ಟ್ರೀಯತೆಯ ಉತ್ಪನ್ನವಾಗಿ ಉದಯಿಸಿದ ಹಿಂದುತ್ವವಾದಿ ದೃಷ್ಟಿಕೋನವು ಹಿಂದೂ ಸಂಸ್ಕೃತಿ ಎಂದು ಓರಿಯೆಂಟಲಿಸ್ಟರು ಬೆಳೆಸಿದ ಭಾವವನ್ನು ಒಳಗೊಂಡು ಆನಂತರದಲ್ಲಿ ಉಗ್ರವಾದ ಸ್ವರೂಪವನ್ನು ಪಡೆದುಕೊಂಡಿತು. ಈ ಬೆಳವಣಿಗೆಗಳಿಂದ ಭಾರತೀಯತೆಯ ನಿರ್ವಚನವು ಕೆಲವು ಸಾಂಸ್ಕೃತಿಕ ಲಕ್ಷಣಗಳಿಗೆ ಕಟ್ಟುಹಾಕಿ ಹೇಳಲ್ಪಟ್ಟಿತು. ವೈದಿಕ ಆಚರಣೆಗಳು, ದೇವರುಗಳು ಈ ಸಂಸ್ಕೃತಿಯ ಭಾಗವಾಗಿ ವಿಜೃಂಭಿಸಿದ್ದು ‘ಕೇಸರೀಕರಣ’ದ ಪ್ರಕ್ರಿಯೆಯಾಗಿತ್ತು. ಭಾರತೀಯ ಡಯಾಸ್ಪೊರಿಗರಲ್ಲಿ ಹಿಂದೂ ಉನ್ಮತ್ತತೆಯು ಬೇರೊಂದು ರೂಪದಲ್ಲಿ ಶಕ್ತಿಯುತವಾಗಿ ಕಾಣಿಸಿಕೊಳ್ಳುತ್ತದೆ. ಕಳೆದುಕೊಂಡ ಭಾವವುಳ್ಳ, ತಾಯ್ನಾಡಿನಿಂದ ದೂರ ಇರುವ ಭಾವವುಳ್ಳ ಭಾರತೀಯ ಹಿಂದೂ ಡಯಾಸ್ಪೊರಿಗರು ತಮ್ಮ ಹಿಂದುತ್ವವನ್ನು ಮುನ್ನೆಲೆಗೆ ತರಲು ಬಯಸುತ್ತಿದ್ದಾರೆ. ಅದೇ ರೀತಿ ಭಾರತೀಯ ಮುಸ್ಲೀಮರು ಉಗ್ರವಾದಿ ಸಂಘಟನೆಗಳಲ್ಲಿ ತೊಡಗುತ್ತಿದ್ದಾರೆ. ಇದಕ್ಕೆ ಡಯಾಸ್ಪೊರಾದ ಮೂಲಭೂತ ಲಕ್ಷಣವಾದ ಅಸ್ಥಿರತೆ ಕಾರಣವಾದರೆ, ಇನ್ನೊಂದು ಕಾರಣ ತಾಯ್ನಾಡನ್ನು ಇವರು ಪರಿಭಾವಿಸುವ ರೀತಿ.

ಇತ್ತೀಚೆಗೆ ಭಾರತೀಯ ಡಯಾಸ್ಪೊರಾವನ್ನು ಭಾರತ ಸರ್ಕಾರವೇ ಉತ್ತೇಜಿಸುತ್ತಿದೆ. ಆಧುನಿಕ ಭಾರತೀಯ ಡಯಾಸ್ಪೊರಾದ  ಬೆನ್ನ ಹಿಂದೆ ಭಾರತ ಸರ್ಕಾರದ ಪ್ರೇರಣೆಯಿದೆ. ಬದಲಾದ ಜಾಗತಿಕ ರಾಜಕಾರಣದ ಪ್ರವೃತ್ತಿಗನುಗುಣವಾಗಿ ಭಾರತ ಸರ್ಕಾರವೂ ಡಯಾಸ್ಪೊರಾ ಪ್ರಕ್ರಿಯೆಯನ್ನು ತನ್ನ ರಾಜಕಾರಣದ ಭಾಗವಾಗಿ ಪರಿಗಣಿಸುತ್ತಿದೆ.  ಈಗ ಭಾರತ ಸರ್ಕಾರ ಭಾರತೀಯ ಉನ್ನತ ಸಮಿತಿಯೊಂದನ್ನು ಸ್ಥಾಪಿಸಿ ಅದರ ಮೂಲಕ ವ್ಯಾಪಕ ಡಯಾಸ್ಪೊರಾದ ಲಕ್ಷಣಗಳನ್ನು ಗುರುತಿಸುವ, ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದೆ. ಕೆಲವು ಉದಾರವಾದ ಧೋರಣೆಗಳನ್ನು ತಳೆಯುವ ಮೂಲಕ ಹೊರನಾಡ ಭಾರತೀಯರನ್ನು ಒಳಗೊಳ್ಳುವ ಯತ್ನವನ್ನು ಸರ್ಕಾರ ಕೈಗೊಂಡಿದೆ.
ಭಾರತೀಯ ಉನ್ನತ ಸಮಿತಿ ಭಾರತೀಯ ಡಯಾಸ್ಪೊರವನ್ನು ಕುರಿತು ಕಾಳಜಿ ವಹಿಸುತ್ತಿದೆ. ಡಯಾಸ್ಪೊರಾ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡಂತೆ ಹಲವಾರು ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪನೆ ಮಾಡಿ, ಅದಕ್ಕೆ ಹೈಕಮಿಷನರ್ ಅಥವಾ ತತ್ಸಮಾನ ಪದವಿಯನ್ನು ನೀಡುತ್ತಾ ಬಂದಿದೆ. ಇದರ ಉದ್ದೇಶ, ಭಾರತೀಯ ಸಂಸ್ಕೃತಿಯೊಂದಿಗೆ ತಮ್ಮ ಸಂಬಂಧವನ್ನು ಪುನಃ ಸ್ಥಾಪಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವುದು. ಇದರ ಅಂಗವಾಗಿ ಹಿಂದಿ ಕಲಿಸುವ ಶಾಲೆಗಳು ಭಾರತೀಯ ಸಂಗೀತ, ನೃತ್ಯಗಳನ್ನು ಕಲಿಸುವ ಉಪಾಧ್ಯಾಯರುಗಳನ್ನು ಕಳುಹಿಸಿಕೊಡಬೇಕೆಂಬ ಡಯಸ್ಪೊರಿಗಳ ಕೋರಿಕೆಯನ್ನು ಮನ್ನಿಸುವುದಾಗಿ ಉನ್ನತ ಸಮಿತಿ ಹೇಳಿಕೊಂಡಿದೆ. ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಸಮಿತಿ (Indian council forcultural Relations – ICCR) ಗಳಂತಹ ಸ್ವಾಯತ್ತ ಸಂಸ್ಥೆಗಳು, ಸಾಂಸ್ಕೃತಿಕ ಮುನ್ನಡೆಗಾಗಿ ಶ್ರಮಿಸುತ್ತಿರುವುದನ್ನು ಸಮಿತಿ ಸ್ಮರಿಸುತ್ತದೆ.

ಭಾರತೀಯ ಡಯಾಸ್ಪೊರದಲ್ಲಿ NRI (Non-Resident Indians) ಮತ್ತು PIO (Person of Indian Origin)ಗಳ ಪಾತ್ರ ಮಹತ್ವದ್ದಾಗಿದೆ. ಇವರಲ್ಲಿ NRI/Expatrlate ಎಂದು ಕರೆಸಿಕೊಳ್ಳುವ ಭಾರತೀಯರು ತಮ್ಮ ದೇಶದೊಡನೆ ಸಂಬಂಧ ಹೊಂದಿರುವಂತಹವರು. PIO ಆದರೆ ಭಾರತೀಯರು ನಾಗರೀಕತೆಯನ್ನು ಪಡೆದಿರುವವರಲ್ಲ. ಆದರೆ ಜನಾಂಗೀಯ ಮತ್ತು ಪ್ರಾದೇಶಿಕ ಜೀನುಗಳು ರೂಪಿಸಿದ ಚಹರೆಯಿಂದ ಅವರು ಭಾರತೀಯ ಸಂಜಾತರೆಂದು ಕರೆಯಲ್ಪಡುತ್ತಾರೆ. ಇತ್ತೀಚೆಗೆ ಭಾರತೀಯ ಸರ್ಕಾರ PIO ಗಳನ್ನು ‘ಭಾರತೀಯ’ ಪಟ್ಟಿಗೆ ಸೇರಿಸಿಕೊಳ್ಳುತ್ತಿದೆ. ಆದರೆ ಭಾರತೀಯ ಸಂಜಾತರುಗಳು ನಾಲ್ಕು ತಲೆಮಾರುಗಳನ್ನು ದಾಟಿರಬಾರದೆಂಬ ನಿಯಮವನ್ನು ಅದು ಹಾಕುತ್ತದೆ.

ಅನಿವಾಸಿ, ವಲಸಿಗರ ಸಹಾಯಹಸ್ತ
೨೦೦೩ರ ಜನವರಿಯಲ್ಲಿ (೯ರಿಂದ೧೧) ಪ್ರವಾಸಿ ಭಾರತೀಯ ದಿವಸವನ್ನು ಆಚರಿಸಲಾಯಿತು. ಅದರ ಉದ್ದೇಶ ಭಾರತದಲ್ಲಿ (ಸ್ವದೇಶ) ಮತ್ತು ಹೊರಗಡೆ ಇರುವ ಭಾರತೀಯರನ್ನು ಬೆಸೆಯುವುದು. ಮುಖ್ಯವಾಗಿ ಆರ್ಥಿಕ ಸಾಫಲ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪುಗೊಂಡಿತು. ಭಾರತ ಸರ್ಕಾರ  ಭಾರತವನ್ನು ಉದ್ಧಾರ ಮಾಡಲು ಅನಿವಾಸಿ, ವಲಸಿಗ ಭಾರತೀಯರ ಸಹಾಯಕ್ಕಾಗಿ ಕೈಚಾಚಿತು. ಇದು ಸ್ವದೇಶಿ ಭಾರತೀಯ ಮತ್ತು ಅನಿವಾಸಿ ಭಾರತೀಯ ಎಂಬ ಕಂದರವನ್ನು ಮುಚ್ಚುವ ಪ್ರಯತ್ನ. ಅನಿವಾಸಿ ಭಾರತೀಯರನ್ನು ಅವರ ದೇಶಕ್ಕಾಗಿ ತುಡಿಯುವ ಮನಸ್ಸುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಯೋಜನೆ ಇದಾಗಿತ್ತು. ಭಾರತೀಯ ಡಯಾಸ್ಪೊರಾ ಭಾರತದ ಆರ್ಥಿಕತೆಯನ್ನು ವಿಸ್ತರಿಸಬೇಕೆಂಬುದು ಈ ಹೊಸ ನೀತಿಯ ಆಕಾಂಕ್ಷೆಯಾಗಿತ್ತು. ಭಾರತ ಸರ್ಕಾರಕ್ಕೆ ಭಾರತೀಯ ಡಯಾಸ್ಪೊರವನ್ನು ಉಪಯೋಗಿಸಿಕೊಳ್ಳುವ ಆಲೋಚನೆ ಹೊಳೆದಿದ್ದು ಚೀನೀ ಮಾದರಿಯಿಂದ. ಸುಮಾರು ೫೫ ಮಿಲಿಯನ್ ಚೀನೀ ಡಯಾಸ್ಪೊರಿಗರು ತಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿದ ಮಾದರಿಯನ್ನೇ ತಾನು ಅನುಕರಿಸಲು ಭಾರತ ಸರ್ಕಾರ ಆಲೋಚಿಸಿತು. ಉದಾರೀಕರಣದ ನಿಯಮಗಳು ಸಹ ಭಾರತ ಸರ್ಕಾರದ ಕ್ರಮಕ್ಕೆ ಉತ್ತೇಜನ ನೀಡಿದವು.

ಹಣದ ಹೊಳೆ ಹರಿಸಿದ ಹಿಂದಿ ಸಿನಿಮಾಗಳು
ಸಾಂಸ್ಕೃತಿಕ ಉತ್ಪ್ಪಾದನೆಗಳ ದೃಷ್ಟಿಯಿಂದ ಹೇಳುವುದಾದರೆ ಭಾರತೀಯ ಡಯಾಸ್ಪೊರಾದ ಬೆಳವಣಿಗೆಯನ್ನು ಗಮನಿಸಲೇಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಭಾರತೀಯ ಸಿನಿಮಾUಳ ಉತ್ಪಾದನೆಯಿಂದ ಲಾಭದ ಹೊಳೆಯೇ ಹರಿದು ಬರುತ್ತಲಿದೆ. ಅದು ಉಂಟು ಮಾಡುತ್ತಿರುವ ಅಲೆ ಸಂಗೀತ ಮತ್ತು ನೃತ್ಯಗಳ ಮಾರುಕಟ್ಟೆಯನ್ನು ವಿಸ್ತರಿಸುತ್ತಲಿದೆ. ಹೀಗಾಗಿ ಬಾಲಿವುಡ್ ಸಿನಿಮಾಗಳಿಗೆ ಎಲ್ಲಿಲ್ಲದ ಬೇಡಿಕೆ ವಿದೇಶಗಳಲ್ಲಿದೆ. ಇವನ್ನು ವೀಕ್ಷಿಸುವವರು ಬರಿಯ ಭಾರತೀಯ ವೀಕ್ಷಕರಲ್ಲ, ಜಗತ್ತಿನಾದ್ಯಂತ ಇವುಗಳಿಗೆ ಗ್ರಾಹಕರಿದ್ದಾರೆ. ಜಪಾನಿನಲ್ಲಿ ರಜನೀಕಾಂತರಿಗೆ ಅಭಿಮಾನಿಗಳಿದ್ದಾರೆ; ಶಾರೂಕ್ ಖಾನ್, ಐಶ್ವರ್ಯ ರೈ ಅವರಿಗೆ ಯುರೋಪಿನಾದ್ಯಂತ ವೀಕ್ಷಕರಿದ್ದಾರೆ.

ಸಿನಿಮಾಗಳ ಜನಪ್ರಿಯ ಗೀತೆ, ನೃತ್ಯಗಳು ಇಂದು ಭಾರತೀಯತೆಯ ಒಂದು ತೆರನಾದ ಆದರ್ಶ ಮಾದರಿಯನ್ನು ಬಿಂಬಿಸುತ್ತಲಿವೆ. ಹಾಗಾಗಿ ಅವು ವಿದೇಶಿ ಭಾರತೀಯರನ್ನು ಆಕರ್ಷಿಸುತ್ತವೆ. ಭಾರತೀಯರ ಸಿನಿಮಾ ತಯಾರಿಕೆ, ಯೋಗ, ವಿದ್ಯಾಭ್ಯಾಸಗಳ ಯೋಜನೆಗಳು ಸಾಂಸ್ಕೃತಿಕ ಉತ್ಪಾದನೆಗಳ ಮುಂಚೂಣಿಯಲ್ಲಿವೆ. ಇವು ಪರೋಕ್ಷವಾಗಿ ಹೊಸ ಆರ್ಥಿಕ ಯೋಜನೆಗಳನ್ನೂ ಒತ್ತಾಯಿಸುತ್ತಿವೆ. ಸಾಂಸ್ಕೃತಿಕ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಅಷ್ಟಾಗಿ ಗಮನಹರಿಸುತ್ತಿಲ್ಲ. ಬದಲಾಗಿ, ಅವುಗಳ ಮೇಲ್ಮೈ ಸ್ವರೂಪವನ್ನೇ ತೆಗೆದುಕೊಳ್ಳಲಾಗುತ್ತದೆ. ಬಾಲಿವುಡ್ ಸಿನಿಮಾಗಳು, ಸಿನಿಮಾ ನಾಯಕ ನಾಯಕಿಯರು ವಿದೇಶಗಳಲ್ಲಿಯೂ ಚಲಾವಣೆಯಲ್ಲಿರುವ ಸಾಮಗ್ರಿಗಳಾಗಿದ್ದಾರೆ. ನಾಯಕಿಯರ ಮೇಲೆ ಹೂಡುವ ಹಣ ಇಂದು “ಸಾಗರೋತ್ತರ” ಮಾರುಕಟ್ಟೆಯ ಮೇಲೆ ಕಣ್ಣಿಟ್ಟೇ ಮಾಡುವಂಥದ್ದಾಗಿದೆ. ಉದಾರೀಕರಣದ ಲಾಭವನ್ನು ದೇಶದ ಆರ್ಥಿಕ ನೀತಿಯಲ್ಲಿ ಹೇಗೆ ಸೇರಿಸಬಹುದು ಎಂಬುದು ಸರ್ಕಾರದ ಮುಂದಿರುವ ಸಂಗತಿಯಾಗಿದೆ. ಭಾರತೀಯ ಉನ್ನತ ಸಮಿತಿ ಹೇಳಿದಂತೆ, ಕಳೆದೊಂದು ದಶಕದಲ್ಲಿ (೯೦ರ ದಶಕ) ಈ ಪ್ರವೃತ್ತಿ ಹೆಚ್ಚಾಗಿ ಕಾಣುತ್ತದೆ. ಭಾರತೀಯ ಆರ್ಥಿಕತೆ ಹೊಸ ಜನಾಂಗಕ್ಕೆ ಹೆಚ್ಚಿನ ಅವಕಾಶಗಳನ್ನು ತೆರೆದಿಟ್ಟ ಹಿನ್ನೆಲೆಯಲ್ಲಿ ಈ ಪ್ರವೃತ್ತಿ ಹೆಚ್ಚಾಗಿದೆ. ಎನ್ನಬಹುದು (ಭಾರತೀಯ ಉನ್ನತ ಸಮಿತಿಯ ವರದಿ ಹೇಳುವಂತೆ).  ಆದರೆ ಭಾರತ ಸರ್ಕಾರದ ಉದ್ದೇಶ, ಹೊರನಾಡ ಭಾರತೀಯರ ಆರ್ಥಿಕತೆಯ ಮೇಲಿನ ಅದರ ದೃಷ್ಟಿ ಇವೆಲ್ಲವೂ ತಾನಾಗಿಯೇ ಒಂದು ನೀತಿಯಾಗಿ ಬಂದಿದ್ದು ಎನ್ನವುದಕ್ಕಿಂತ ವಿದೇಶಗಳಲ್ಲಿ ಭಾರತೀಯರ ಜನಪ್ರೀಯತೆಯ ಲಾಭ ಪಡೆಯಲು ಸರ್ಕಾರ ಇದರತ್ತ ಕಣ್ಣು ಹಾಯಿಸುತ್ತಿರುವ ಸಾಧ್ಯತೆಯಿಂದಲೂ ಪ್ರೇರಿತವಾಗಿರಬಹುದು.
ಭಾರತದ ಶಾಸ್ತ್ರೀಯ ಸಂಗೀತವನ್ನು ಹಿಂದೊಮ್ಮೆ  ಪವಿತ್ರವಾದ ದೃಷ್ಟಿಯಿಂದ ಬರಮಾಡಿಕೊಳ್ಳುತ್ತಿದ್ದ ವಿದೇಶಗಳು ಇಂದು ಅದೇ ಉತ್ಸುಕತೆಯಿಂದ ಭಾರತೀಯ ಸಿನಿಮಾ, ಸುಗಮ ಸಂಗೀತ, ವೀಡಿಯೋ ಅಲ್ಬಂಗಳನ್ನು, ಸಿಡಿಗಳನ್ನು ಕರೆದುಕೊಳ್ಳುತ್ತಿವೆ. ಆರ್ಥಿಕವಾಗಿ ಯಶಸ್ಸು ಕಂಡ ಭಾರತೀಯರು ಸ್ವದೇಶದಲ್ಲಿ ಹಣ ಹೂಡಿಕೆ ಮಾಡಲು ಕೆಲವು ಯೋಜನೆಗಳು ಕೂಡ ತಯಾರಾಗುತ್ತಿವೆ. ಊಂಕ್ ತಮ್ಮ ‘ದಿ ಇಂಡಿಯನ್ ಡಯಾಸ್ಪೊರಾ‘ ಲೇಖನದಲ್ಲಿ ಹೇಳುವಂತೆ, ಭಾರತ ಸರ್ಕಾರದ ದೃಷ್ಟಿ ಸಂಪೂರ್ಣ ಹೊರನಾಡ ಭಾರತೀಯರ ಮೇಲೆ ಎಂದು ಹೇಳಲಾಗುವುದಿಲ್ಲ; “ಹೊರನಾಡ ಭಾರತೀಯರ” ಶೀರ್ಷಿಕೆಯಡಿಯಲ್ಲಿ ಪಾಕಿಸ್ತಾನ, ಶ್ರೀಲಂಕಾದ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ಹಿಂದೂ/ಮುಸ್ಲಿಮರನ್ನು ಸೇರಿಸಲು ಅದು ಇಚ್ಚಿಸುವುದಿಲ್ಲ. ಅವರನ್ನು ಭಾರತದಲ್ಲಿ ಹೂಡಿಕೆ ಮಾಡಿ ಎಂದಾಗಲೀ, ದ್ವಿಪೌರತ್ವ ಪಡೆಯುವಂತೆಯೇ ಆಗಲಿ, ಆಹ್ವಾನಿಸುವುದಿಲ್ಲ. “ಹೊರನಾಡ ಭಾರತೀಯರು” ಎಂದಾಗ ಅಮೆರಿಕಾ, ಆಸ್ಟ್ರೇಲಿಯ ಮತ್ತು ಯೂರೋಪುಗಳಲ್ಲಿ ನೆಲಸಿ, ಡಾಲರ್/ಯೂರೋಗಳನ್ನು ಗಳಿಸಿದ ಸಿರಿವಂತರಾಗಿರುವ ಭಾರತೀಯ ಸಂಜಾತರನ್ನು ಅದು ಆದರದಿಂದ ನೋಡುತ್ತದೆ. ಈ ಅಂಶವು ಡಯಾಸ್ಪೊರಾದ ಕುರೂಪೀ ಮುಖವನ್ನು ತೋರುತ್ತದೆ.
ಭಾರತೀಯರೊಳಗೆ ಆಂತರಿಕವಾಗಿ ಡಯಾಸ್ಪೊರಾ ಸನ್ನಿವೇಶಗಳಿವೆ. ಬಹುಸಂಸ್ಕೃತಿಯ ತಳಹದಿಯುಳ್ಳ ಭಾರತೀಯ ಸಮಾಜದಲ್ಲಿ ಅಂತರ್ ಜಾತಿಯ/ಧರ್ಮೀಯ/ವರ್ಗೀಯ ಸಂದರ್ಭಗಳು ಸಹಜವಾಗಿಯೇ ಒದಗಿ ಬರುವಂತಹವು. ಈ ಒಡನಾಟಗಳ ಪರಿಣಾಮವಾಗಿ ರೂಪುಗೊಳ್ಳುವ ಸಮುದಾಯವನ್ನು ಆಂತರಿಕ ಡಯಾಸ್ಪೊರ ಎಂದು ಕರೆಯಬಹುದಾದರೆ, ವಿದೇಶಗಳಲ್ಲಿರುವ ಭಾರತೀಯರ ಡಯಾಸ್ಪೊರಿಗರನ್ನು ರೂಪಿಸುವ ‘ಭಾರತೀಯತೆ’ಯಲ್ಲಿ  ಮೇಲೆ ಹೇಳಿದ ಆಂತರಿಕ ಡಯಾಸ್ಪೊರಾದ ಅಸ್ಮಿತೆಗಳು, ಸಂಕೀರ್ಣತೆಯನ್ನು ಸೃಷ್ಟಿಸುತ್ತವೆ. ಇಷ್ಟಾಗಿಯೂ ಭಾರತೀಯರು ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಾರೆ. ಅದು ಅವರ ಗುಣ.
  •  

`ಬುಡಕಟ್ಟು ನೃತ್ಯ ಮತ್ತು ಪ್ರದರ್ಶನ ಕಲೆಗಳು' ಕುರಿತ ಉಪನ್ಯಾಸ ಮತ್ತು ನೃತ್ಯ ಪ್ರಾಯೋಗಿಕತೆ

ಕನ್ನಡ ವಿಶ್ವವಿದ್ಯಾಲಯ ಹಂಪಿಯ, ಬುಡಕಟ್ಟು ಜ್ಞಾನ ಪರಂಪರೆ ಅಧ್ಯಯನ ಮತ್ತು ತರಬೇತಿ ಕೇಂದ್ರವು, ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ 18.03.2014 ರಿಂದ 22.03.2014 ರ ವರೆಗೆ `ಬುಡಕಟ್ಟು ನೃತ್ಯ ಮತ್ತು ಪ್ರದರ್ಶನ ಕಲೆಗಳು' ಕುರಿತ ಉಪನ್ಯಾಸ ಮತ್ತು ನೃತ್ಯ ಪ್ರಾಯೋಗಿಕತೆಯನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿದೆ ಆಹ್ವಾನ ಪತ್ರಿಕೆ.






ಶನಿವಾರ, ಮಾರ್ಚ್ 15, 2014

ಕಾಮನ ಹಬ್ಬ

-

  ಸೌಜನ್ಯ: ಕಣಜ


ಕಾಮದಹನದ ಕಥೆ ವಿಷ್ಣುಪುರಾಣ, ಸ್ಕಂದ ಪುರಾಣ, ಶಿವಪುರಾಣ, ಮಹಾಭಾರತ, ಭಾಗವತ ಲಿಂಗಪುರಾಣಗಳು ಅಲ್ಲದೆ ಕಾಳಿದಾಸನ ’ಕುಮಾರಸಂಭವ’ ಮಹಾಕಾವ್ಯದಲ್ಲಿ ಕನ್ನಡದ ಗಿರಿಜಾಕಲ್ಯಾಣ, ಚನ್ನಬಸವಪುರಾಣ, ಮೋಹನ ತರಂಗಿಣಿ, ಕಬ್ಬಿಗರ ಕಾಮ, ಯಶೋಧರಚರಿತೆ ಮುಂತಾದ ಕಾವ್ಯಗಳಲ್ಲಿ ಪ್ರಾಸಂಗಿಕವಾಗಿ ಕಾಣಿಸಿಕೊಳ್ಳುತ್ತದೆ. ಕಾಮ ವಿಷ್ಣುವಿನ ಮಗನೆಂದೂ ಚತುರ್ಮುಖ ಬ್ರಹ್ಮನ ಮಗನೆಂದೂ ಪುರಾಣಗಳು ಹೇಳುತ್ತ ಬಂದಿವೆ.
ಮಹಾಕವಿ ಕಾಳಿದಾಸನ ’ಕುಮಾರ ಸಂಭವ’ ಮಹಾಕಾವ್ಯದಲ್ಲಿ ರತಿವಿಲಾಪ ಸಂದರ್ಭವಿದೆ. ತಾರಕಾಸುರನ ಬಾಧೆ ಉಪಟಳ ಹೆಚ್ಚಲು ದೇವ – ದೇವತೆಯರ ಪ್ರಾರ್ಥನೆಯ ಮೇರೆಗೆ ಮನ್ಮಥನು ಧ್ಯಾನಸ್ಥ ಶಿವನ ತಪಸ್ಸನ್ನು ಭಂಗಗೊಳಿಸಿದ್ದು ಕಾರಣವಾಗಿ ಮನ್ಮಥನು ಶಿವನ ಹಣಿಗಣ್ಣೀನ ಉರಿಯಿಂದ ಸುಟ್ಟು ಬೂದಿಯಾದನು. ’ಯಾವಾಗಲೂ ನಿನ್ನ ಹೃದಯದಲ್ಲಿಯೇ ಇರುತ್ತೇನೆ ಎಂದು ಭರವಸೆ ಕೊಟ್ಟು ಹೋಗಿದ್ದ ಕಾಮ ಸುಟ್ಟು ಹೋಗಲು ರತಿ ಕಣ್ಣೀರ ಕೋಡಿ ಹರಿಸಿದಳು. ರತಿಯ ದುಃಖದೊಂದಿಗೆ ಇಡೀ ನಿಸರ್ಗವೇ ಭಾಗಿಯಾಯಿತು. ವಸಂತ, ಚಂದ್ರ, ಕೋಗಿಲೆ, ದುಂಬಿ ಅಲ್ಲದೆ ತರು-ಲತೆ-ಪುಷ್ಪಗಳೂ ತಮ್ಮ ದುಃಖವನ್ನು ತೋಡಿಕೊಂಡವು. ಇವೆಲ್ಲಾ ರತಿಯ ದುಃಖವನ್ನು ಇಮ್ಮಡಿಸುವ ಉದ್ದೀಪನಗಳಾಗುತ್ತವೆ. ಕಾಳಿದಾಸನ ಕಾವ್ಯದಲ್ಲಿ ಜಾನಪದ ಕಲ್ಪನೆಯ ಉಪಯೋಗವನ್ನು ಕಾಣಬಹುದು.
ಹರಿಹರನ ಗಿರಿಜಾಕಲ್ಯಾಣದಲ್ಲಿ ಬರುವ ’ರತಿಪ್ರಲಾಪ’ ವೂ ಅತ್ಯಂತ ಗಮನಾರ್ಹವಾಗಿದ್ದು ಇದರಲ್ಲಿ ಒಂದಿಷ್ಟು ಹೊಸ ಅಂಶಗಳಿವೆ.
ಬೆಂದ ನುಲಿಯಂತೆ
ಮದನಂ ನಿಂದಿರೆ
ಎನ್ನುವುದು ಕಾಮದಹನವಾದ ಮೇಲೆ ನಿಂತಿರುವ ಕಾಮನ ಚಿತ್ರ. ಇದನ್ನು ಕಂಡು ಕಂಗೆಟ್ಟು ಅನಾಥೆಯಾಗಿ ರತಿ ರೋಧಿಸುತ್ತ ಮೂರ್ಛೆ ಹೋದಳು. ಅನಂತರ ಗಿರಿಜೆಯ ಸೋಂಕಿನಿಂದ ರತಿ ಚೇತರಿಸಿಕೊಂಡಿದ್ದಳು.
ಇದರಂತೆ ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣ ಹಾಗೂ ಕನಕದಾಸನ ಮೋಹನತರಂಗಿಣಿಗಳಲ್ಲಿಯೂ ಕಾಮನಿಗೆ ಸಂಬಂಧಪಟ್ಟ ಕಥೆ ವರ್ಣಿತವಾಗಿದೆ.
ಕಾಮದಹನಕ್ಕೆ ಸಂಬಂಧಪಟ್ಟ ಸಂದರ್ಭ ಜನಪದ ಕವಿಗಳ ಕೈಯಲ್ಲಿ ಬೇರೊಂದು ಹದಕ್ಕೆ ತಿರುಗಿರುವುದನ್ನು ಗಮನಿಸಬಹುದು. ಪುರಾಣ  – ಕಾವ್ಯಗಳಲ್ಲಿ ಹಬ್ಬಿಕೊಂಡಿರುವ ವಿವರಗಳು ವರ್ಣನೆಗಳು ಇದರಲ್ಲಿಲ್ಲ. ತಾರಕಾಸುರನ ಭಾದೆ, ದೇವ – ದೇವತೆಗಳ ಪ್ರಾರ್ಥನೆ, ಶಿವನ ತಪಸ್ಸು ಹಾಗೂ ಶಿವನನ್ನು ಒಲಿಸಿಕೊಳ್ಳಲು ಪ್ರತಿಜ್ಞಾಬದ್ಧಳಾದ ಗಿರಿಜೆಯು ತಪಸ್ಸು ಮುಂತಾದ ವಿವರಗಳು ಪುರಾಣ ಕಾವ್ಯಗಳಲ್ಲಿ ಹೆಣೆದುಕೊಂಡಿದ್ದು, ಇವೆಲ್ಲಾ ಜನಪದ ಕವಿಗೆ ಅಮುಖ್ಯವೆನ್ನಿಸಿಬಿಟ್ಟಿವೆ. ಜನಪದ ಕವಿ ಅಖಂಡ ಜನಸಮುದಾಯದ ದನಿಯಾದ್ದರಿಂದ ಅವನ ಮನಸ್ಸಿನಲ್ಲಿ ಅಚ್ಚ ಕಾಮನ ಕಥಾಸಂದರ್ಭ ಮಾತ್ರ ಆವರಿಸಿದೆ. ಕಾಮದಹನದ ಸಂದರ್ಭ ಹಾಗೂ ಕಾಮನ ಕಥೆಯನ್ನು ಜನ ಸಮುದಾಯದ ಹೃದಯದಲ್ಲಿ ಮನಸ್ಸಿನಲ್ಲಿ ನಿಲ್ಲಿಸಿ, ಅದಕ್ಕೆ ಚಿರಂತನೆಯನ್ನು ನೀಡುವುದು ಅವನ ಉದ್ದೇಶವಾಗಿದೆ. ಆದ್ದರಿಂದ (ಜನಪದ ಕವಿ ಕಾಮದಹನದ ಸಂದರ್ಭವನ್ನು ಹೊಸ ರೀತಿಯಲ್ಲಿ ಅಂದರೆ ಸಾಮಾಜಿಕ ಸಂದರ್ಭವನ್ನಾಗಿ ಪರಿಭಾವಿಸಿರುವುದು ಗಮನಾರ್ಹವಾದದ್ದು. ಪುರಾಣ – ಕಾವ್ಯಗಳಲ್ಲಿ ಸುತ್ತಿದ್ದ ಕೃತಕ ವಾತಾವರಣ, ಉಸಿರುಗಟ್ಟಿಸುವ ಪರಿಸರವನ್ನು ಕಳಚಿಕೊಂಡು ಜಾನಪದದಲ್ಲಿ ಕಾಮದಹನ ಕಥಾಸಂದರ್ಭ ತೀರ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕಣ್ಮುಂದೆ ನಾಟಕದ ದೃಶ್ಯವೊಂದು ಸುಳಿದು ಹೋದಂತೆ ಭಾಸವಾಗುತ್ತದೆ.
ಪಾರೋತಿ- ಮಾದೇವರು ತುಂಬು ಸಭೆಯಲ್ಲಿದ್ದಾಗ ಪಾರೋತಿ ಹೇಳಚೆಲುವ್ಯಾರ? ಎಂದು ಮಾದೇವ ಕೇಳಿದ ಪ್ರಶ್ನೆಗೆ ಪಾರೋತಿ ’ತೀರ ಚೆಲುವಾನ ಕಾಮಣ್ಣ’ ಎಂದು ತಟ್ಟನೆ ಉತ್ತರಿಸುತ್ತಾಳೆ. ತನ್ನನ್ನು ಬಿಟ್ಟು ಕಾಮಣ್ಣ ಚೆಲುವನೆಂದು ಹೇಳಿದ್ದನ್ನು ಕೇಳಿ, ಶಿವನ ಸಿಟ್ಟು ನೆತ್ತಿಗೇರಿತು. ಶಿವ ಯಾವ ವಿಚಾರವನ್ನು ಮಾಡಲಿಲ್ಲ. ಶಿವ ಒಬ್ಬ ಸಾಮಾನ್ಯ ಮನುಷ್ಯನಂತೆ ವರ್ತಿಸುತ್ತಾನೆ. ’ಸಿಟ್ಟಿಗೇಳುತ ಶಿವನು ಬಿಟ್ಟಾನೊ ಉರಿಗಣ್ಣ’ ಸುಟ್ಟು ಬೂದ್ಯಾದೊ ಕಾಮಣ್ಣ ರತಿದೇವಿ’ ಹೊಟ್ಟೆ ಬಡಕೊಂಡು ಅಳತಾಳೊ’ ಈ ಪದ್ಯ ಶಿವಪಾರ್ವತಿಯರ ಮನೋಭಾವವೇನೆಂಬುದನ್ನು ಚೆನ್ನಾಗಿ ಬಣ್ಣಿಸುತ್ತದೆ. ಚೆಲುವು ಸೌಂದರ್ಯದ ಕುರಿತ ಪ್ರಶ್ನೋತ್ತರ, ಚರ್ಚೆ, ಜಿಜ್ಞಾಸೆ ಹಾಗೂ ಚೆಲುವನ್ನು, ಸುಂದರತೆಯನ್ನು, ಪ್ರೀತಿಸುವುದು ಪ್ರಶ್ನಿಸುವುದು ಎಂದಿನಿಂದಲೂ ನಡೆದು ಬಂದಿರುವುದು ಗಮನಾರ್ಹ. ಸುಂದರವಾದದ್ದು ಯಾವುದು ಅಸುಂದರವಾದದ್ದು ಯಾವುದು ಎಂಬುದನ್ನು ಗುರ್ತಿಸುವುದು ಇಂದಿಗೂ ಜಟಿಲಪ್ರಶ್ನೆಯೇ ಆಗಿದೆ. ಸುಂದರತೆ ಅಸುಂದರತೆಗಳು ಅಷ್ಟೊಂದು ಅನ್ಯೋನ್ಯವಾಗಿ ಮಿಶ್ರಣಗೊಂಡಿವೆ. ಹೀಗಾಗಿ ಒಮ್ಮೆ ರೂಪ ಯಾವುದು. ಕುರೂಪ ಯಾವುದು ಎಂಬುದನ್ನು ಗುರ್ತಿಸುವುದು ಕಠಿಣ.[1] ಹುಲಿಯ ಮರಿ ಅತ್ಯಂತ ಆಕರ್ಷಕವಾಗಿರುತ್ತವೆ. ಆದರೆ ಅವೇ ದೊಡ್ಡವುಗಳಾದ ಮೇಲೆ ಕ್ರೂರವಾಗುವುದು ನಮಗೆ ಗೊತ್ತು, ಅಂಥ ಒಂದು ಸಿಟ್ಟಿನ ಕ್ಷಣದಲ್ಲಿ ಕಾಮ ಸುಟ್ಟು ಭಸ್ಮವಾದದ್ದು. ಶಿವ – ಪಾರ್ವತಿಯರ ಆಟಕ್ಕೆ ಬಲಿಯಾದವನು. ಕಾಮ ಕರುಣಾಮಯಿಯಾದ ಪಾರೋತಿಗೆ ಇದು ಸರಿಬರಲಿಲ್ಲ. ಪತಿಯನ್ನು ಕಳೆದುಕೊಂಡ ರತಿಯಂತೂ ಹೊಟ್ಟೆ ಬಡಿದುಕೊಂಡು ಹೊರಳಾಡುತ್ತ ಅಳುತ್ತಿದ್ದಳು. ಅವಳ ರೋದನಕ್ಕೆ ಇಡೀ ಸಭೆಯೇ ಕಳವಳಗೊಂಡಿತು. ಮರುಗಿತು. ರತಿಯಿಂದ ಮತ್ತು ಸಭೀಕರಿಂದ ಪ್ರತಿಭಟನೆ ಬರುವುದಕ್ಕಿಂತ ಮೊದಲೇ ಪಾರೋತಿ ಈ ಕೆಲಸವನ್ನು ತನ್ನ ಕೈಗೆ ತೆಗೆದುಕೊಂಡಳು. ರತಿಯ ಪರವಾಗಿ ವಕೀಲಿಕಿ ಮಾಡಿದಳು. ರತಿಗೆ ಪರಿಹಾರ ಸಿಗಲೇಬೇಕೆಂದು ವಾದಿಸಿದಳು.
ಇದರ ಪರಿಣಾಮವಾಗಿ, ಹೊರಳ್ಯಾಡಿ ಅಳುತ್ತಿದ್ದ ರತಿಯ ದುರವಸ್ಥೆಯನ್ನು ನೋಡಲಾಗದ ಶಿವನ ಕಲ್ಲಿನಂಥ – ಮನಸ್ಸು ಕರಗಿ, ಕಾಮ ಕರೆದಾಗೆಲ್ಲ ಮೂಡಿಬರುತ್ತಾನೆಂದು ಅಭಯವನ್ನಿತ್ತ. ಕೊನೆಗೂ ಪಾರೋತಿಯ ಕೇಸು ಗೆದ್ದಿತು. ಕಾಮನಿಗೆ ಪುನರ್ಜನ್ಮ – ಎಂದರೆ ಚಿರಂತನತೆ ಪ್ರಾಪ್ತವಾಯಿತು. ನೆನೆದವರ ಮನದಲ್ಲಿ ಇರುವಂಥ ವರ ಅವನಿಗೆ ಸಿಕ್ಕಿತು. ಇದರಿಂದ ಪಾರ್ವತಿಗೆ ಮತ್ತು ಅಲ್ಲಿ ನೆರೆದಿದ್ದ ಎಲ್ಲಾ ಸಭಿಕರಿಗೆ ಅರ್ಥಾತ್ ದೇವ – ದೇವತೆಗಳಿಗೆ ಸಂತೋಷವೇ ಸಂತೋಷ. ಆ ಸಂತೋಷವೇ ಒಂದು ಹಬ್ಬ. ಈ ಹಬ್ಬದ ಆಚರಣೆಯಿಂದ ಕಾಮನ ಬದುಕಿನ ಕಥೆ ಇನ್ನಷ್ಟು ಹಿಗ್ಗಿತು. ಕಾಮ ಇಡೀ ಜನಸಮುದಾಯದ ಹೃದಯ – ಮನಸ್ಸುಗಳಲ್ಲಿ ನೆಲೆನಿಂತ.  ಕಾಮ ಗಂಡು-ಹೆಣ್ಣಿನಲ್ಲಿ ಪ್ರೇಮವನ್ನು ಸ್ಫುರಿಸುವ ಜೀವಂತ ನೆಲೆಯಾದ. ಮನುಷ್ಯ ಪ್ರಾಣಿ,  ಪಕ್ಷಿ ಮುಂತಾದ ಅಖಿಲ ಜೀವಗಳಲ್ಲಿ ತರು-ಲತೆ-ಪುಷ್ಪಗಳಲ್ಲಿ ಚೈತನ್ಯ. ಉತ್ಸಾಹಗಳನ್ನು ಸ್ಫುರಿಸುವ ಪ್ರಚಂಡ ಶಕ್ತಿಯಾದ, ಕನ್ನಡದಲ್ಲಿ ಕಾಮನ ಹಬ್ಬಕ್ಕೆ ಸಂಬಂಧಿಸಿದ ಸಾಹಿತ್ಯ  ಬೇಕಾದಷ್ಟು ಇದೆ. ಹಾಡು, ಲಾವಣಿ ದುಂದುಮೆಪದಗಳು ಜನಪದ ಕಾವ್ಯದಲ್ಲಿ ವಿಶಿಷ್ಟವಾಗಿದ್ದು, ಹಳ್ಳಿಗಳಲ್ಲಿ ಕಾಮನಹಬ್ಬದ ಸಂದರ್ಭದಲ್ಲಿ ಇಂದಿಗೂ ಈ ಹಾಡುಗಳು ಕೇಳಲು ಸಿಗುತ್ತವೆ. ಹಲವು ಹೋಳಿಯ ಪದಗಳು ಅವಾಚ್ಯ ಹಾಗೂ ಅಶ್ಲೀಲವಾಗಿರುವುದಕ್ಕೆ ಹೀಗೆ ಕಾರಣವನ್ನು ಹುಡುಕಬಹುದು. ಮೊದಲು ಮನುಷ್ಯನಾಕಾರದಲ್ಲಿದ್ದ ಕಾಮನ ದೇಹ ಭಸ್ಮವಾಗಿ ಆಮೇಲೆ ಅವನು ಅಂಗವಿಲ್ಲದ ಅನಂಗನಾದ. ಅಂದರೆ ನಗ್ನ ಇಲ್ಲವೆ ಬಟಬಯಲಾಗಿರುವುದೇ ಅವನ ಇನ್ನೊಂದು ರೂಪವಾಯಿತೆನ್ನಬಹುದು. ಈ ನಗ್ನತೆ, ಬಟ್ಟಬಯಲಾಗಿರುವುದನ್ನು ಸಂಕೇತಿಸುವುದಕ್ಕಾಗಿಯೇ ಜಾನಪದದಲ್ಲಿ ಅವಾಚ್ಯ ಹಾಗೂ ಅಶ್ಲೀಲ ಪದಗಳ ಸೃಷ್ಟಿಯಾಗಿರುವುದು ಗಮನಾರ್ಹವಾದದ್ದು. ಈ ತರಹದ ಆವಾಚ್ಯ ಹಾಗೂ ಅಶ್ಲೀಲ ಪದಗಳು ಮಾನವನ ಮೂಲ ಪ್ರಕೃತಿಯನ್ನು ಸಂಕೇತಿಸುವ ಪ್ರಾಚೀನತೆಯ ಕೊಂಡಿಯಾಗಿ ಉಳಿದುಕೊಂಡಿರುತ್ತವೆಂದು ಹೇಳಬಹುದು. ಶೀಲ – ಅಶ್ಲೀಲಗಳ ಅವಿನಾಭಾವ ಸಂಬಂಧವನ್ನು ಪ್ರಕಟಿಸುವ ಸಾಹಿತ್ಯ ಹಾಗೂ ಕಲೆ ಪ್ರಪಂಚದಲ್ಲಿ ಅಲ್ಲಲ್ಲಿ ಉಳಿದುಕೊಂಡು ಬಂದಿದೆ. ಇವು ಮಾನವ ಪ್ರಗತಿಯ ಹಾಗೂ ಸಂಸ್ಕೃತಿಯ ಮೆಟ್ಟಿಲುಗಳನ್ನು ಸೂಚಿಸುವ ಅತ್ಯಂತ ಮಹತ್ವದ ದಾಖಲೆಗಳಾಗಿವೆ. ಬಾದಾಮಿ, ಬೇಲೂರು, ಅಜಂತಾ, ಋಜರಾಹೊ (ಲಕ್ಷ್ಮೇಶ್ವರ) ಮುಂತಾದ ಸ್ಥಳಗಳಲ್ಲಿಯ ಶಿಲ್ಪ, ಮೂರ್ತಿಕಲೆ, ಚಿತ್ರಕಲೆಗಳಲ್ಲಿ ಮತ್ತು ವಾತ್ಸಾಯನನ ಕಾಮಸೂತ್ರಗಳಲ್ಲಿ ಅವಾಚ್ಯ, ಅಶ್ಲೀಲ ಭಾವಗಳಿಗೆ ಲೈಂಗಿಕ ಪ್ರವೃತ್ತಿಗಳಿಗೆ ಅಭಿವ್ಯಕ್ತಿ ದೊರಕಿರುವುದು ವಾಜ್ಮಯಲೋಕದ ವಿಸ್ಮಯವನ್ನು ನಿದರ್ಶಿಸುತ್ತದೆ. ಇಂಥವುಗಳಲ್ಲಿ animal instinct ಕಣ್ಣಿಗೆ ಹೊಡೆಯುವಂತೆ ಪ್ರಕಟವಾಗಿರುತ್ತದೆ. ಸಿಗ್ಮಂಡ್ ಫ್ರಾಯಿಡ್ ನಂಥ ಮನೋವಿಜ್ಞಾನಿ  ಇಂಥ ಸಾಹಿತ್ಯ, ಕಲೆ, ಶಾಸ್ತ್ರ ಮುಂತಾದವುಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ಒಂದು ಹೊಸ ಸಿದ್ಧಾಂತವನ್ನೇ ಸೃಷ್ಟಿಸಿದ್ದಾನೆ. ’ಕಾಮ’ ಎನ್ನುವುದೊಂದು ಪ್ರಚಂಡ ಶಕ್ತಿಯೆಂಬುದನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ ಹೇಳಿದ್ದಾನೆ.  ನಮ್ಮಲ್ಲಿಯ ಕಾಮನಹಬ್ಬದ ಆಚರಣೆ. ಆ ಸಂದರ್ಭದಲ್ಲಿಯ ಜನಸಮುದಾಯದ ಸ್ವಚ್ಛಂದ ಹಾಗೂ ಸ್ವೈರವರ್ತನೆ, ಹೊಯ್ಕೊಳ್ಳುವುದು, ಕುಳ್ಳು – ಕಟ್ಟಿಗೆ ಕರಿಯುವುದು, ಅವಾಚ್ಯ ಹಾಗೂ ಅಶ್ಲೀಲ ನುಡಿಗಳನ್ನಾಡುವುದು ಫ್ರಾಯ್ಡನ ಗಮನಕ್ಕೆ ಬಂದಿಲ್ಲವಾದ್ದರಿಂದ ಅವನು ’ಕನಸು’ಗಳ ವಿಶ್ಲೇಷಣೆಗೆ ತೊಡಗಿ ಮನುಷ್ಯನ ಮನಸ್ಸನ್ನು ಅಗಿದು ತೆಗೆದು ಅವನು ಕಾಮಕ್ಕೆ ಸಂಬಂಧಿಸಿದ ಹೊಚ್ಚ ಹೊಸ ಸಿದ್ಧಾಂತವನ್ನು ಜಗತ್ತಿಗೆ ನೀಡಿದ್ದಾನೆ. ಒಟ್ಟು ಜನಸಮೂಹದಲ್ಲಿ ಪ್ರಚಲಿತವಾಗಿರುವ ಕಾಮದ ಕುರಿತ ಹತ್ತಿಕ್ಕಲ್ಪಟ್ಟ ಭಾವಗಳು ಸ್ವಚ್ಛಂದ ಹಾಗೂ ಸ್ವೈರವರ್ತನೆಗೆ ಪುಟಗೊಡುವುದಕ್ಕೆ ನಿದರ್ಶನವಾಗಿವೆ. ಸುಪ್ತಪ್ರಜ್ಞೆಯಲ್ಲಿ ಹತ್ತಿಕ್ಕಲ್ಪಟ್ಟಿರುವ ಮಾನಸಿಕ ಚಟುವಟಿಕೆಗಳ ಪ್ರದರ್ಶನಕ್ಕೆ ’ಕಾಮನಹಬ್ಬ’ದ ಸಂದರ್ಭ ಒಂದು ವಿರಳ ಉದಾಹರಣೆ. ಕಾಲಾಂತರದಲ್ಲಿ ಉತ್ಕ್ರಾಂತಿ ಹೊಂದುತ್ತ, ಸಾಮಾಜಿಕನಾಗುತ್ತ, ನಾಗರಿಕನಾಗುತ್ತ ಬಂದ ಮನುಷ್ಯನಿಗೆ ಇಂಥ ಸ್ವೈರಾಚರಣೆ ಅತ್ಯಂತ ಅಗತ್ಯ ಹಾಗೂ ಅನಿವಾರ್ಯವೂ ಎನ್ನಿಸಿರಬೇಕು. ಮನಸ್ಸಿನ ಸೂಕ್ಷ್ಮ ಹಾಗೂ ತೆಳುವಾದ ಪರದೆಗಳಿಗೆ ಧಕ್ಕೆ ತಟ್ಟಿ ಅವು ಹರಿದುಹೋಗದಂತೆ ಕಾಪಾಡುವ ಶಕ್ತಿ ಇಂಥ ಜಾನಪದ ಹಬ್ಬಗಳ ಆಚರಣೆ, ವಿಧಿಗಳಲ್ಲಿ, ಸಾಹಿತ್ಯ ಕಲೆಗಳಲ್ಲಿ ಅವಿತುಕೊಂಡಂತಿದೆ.
ಕಾಮನ ಹಬ್ಬದ ಆಚರಣೆ ನಾಗರಿಕತೆ ಕಟ್ಟಿರುವ ಕೃತಕತೆಯ ಅಡ್ಡಗೋಡೆಗಳನ್ನೊಡೆದು ಮಾನವ ಸಹಜವಾದ ಮೂಲಪ್ರಕೃತಿಯನ್ನು, ಪ್ರವೃತ್ತಿಗಳನ್ನು ಬಿಚ್ಚಿ ತೋರುತ್ತದಲ್ಲದೆ ಸಂಸ್ಕೃತಿಯ ಅಸಲೀ ಮೌಲ್ಯಗಳನ್ನು ಪ್ರದರ್ಶಿಸುವ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ.
’ಕಾಮದಹನ’ದ ಹಬ್ಬ – ಶೈವರ ಹಬ್ಬವೆಂದು ಡಾ.ಎಂ.ಎಸ್. ಸುಂಕಾಪುರ ಅವರು ಧೈರ್ಯದಿಂದ ಹೇಳಿದ್ದಲ್ಲದೆ ಈ ಸಂಪ್ರದಾಯವು ಭಾರತದ ಎಲ್ಲಾ ಭಾಗಗಳಲ್ಲಿ ಕಂಡು ಬರುತ್ತದೆ ಎಂದು ಅಭಿಪ್ರಾಯ ಪಟ್ಟಿರುವುದು ಜಾನಪದ ಪಂಡಿತರ ಗಮನ ಸೆಳೆಯುವಂತಿವೆ. ಮನಸ್ಸಿನಲ್ಲಿ ಹೂತ ಕಾಮದ ಅಸಹ್ಯ ರೂಪವನ್ನು ಸುಟ್ಟು, ಪರಿಶುದ್ಧವಾಗಬೇಕೆನ್ನುವ ರೀತಿಯೊಂದು ಕಂಡು ಬರುತ್ತದೆಂಬ ಫಿಲಾಸಫಿಯನ್ನು ಮಾತ್ರ ಒಪ್ಪಲಾಗುವುದಿಲ್ಲ. ಕಾಮವನ್ನು ಸುಟ್ಟು ಹಾಕಿದ ಮೇಲೆ ಮನುಷ್ಯನ ಜೀವನ ತತ್ತರಿಸಿಹೋಗಬಹುದು. ಜಗತ್ತಿನಲ್ಲಿಯ ಜೀವ ಜೀವಗಳು, ತರು-ಮರ-ಪುಷ್ಪಗಳು ಸುರುಟಿ – ಮುರುಟಿ ಹೋಗಬಹುದು. ಆದ್ದರಿಂದ ಸುಟ್ಟಕಾಮನ ಬೂದಿಯನ್ನು ಸಂಗ್ರಹಿಸಿ, ಅದನ್ನು ಮನುಷ್ಯ ಆಕಾರದಲ್ಲಿ ನಿಲ್ಲಿಸಲು ಶಿವ ಮತ್ತೆ ಅದರಲ್ಲಿ ಜೀವ ಚೈತನ್ಯವನ್ನು, ತುಂಬಿದ ಕಥೆಯೂ ನಮ್ಮ ಪುರಾಣಗಳಲ್ಲಿದೆ.
ಸಣ್ಣ ದೊಡ್ಡ ಹಲಗೆಗಳನ್ನು ಬಡಿಯುತ್ತ ಹೊಯ್ಕೊಳ್ಳುತ್ತ ಗೋಳಿಡುವುದು ಕಾಮನನ್ನು ಕಳೆದುಕೊಂಡ ನಷ್ಟದ ಕಲ್ಪನೆಯನ್ನು ತಂದುಕೊಂಡುತ್ತದೆ. ಕಾಮನ ಬೂದಿಯಲ್ಲಿ ಮತ್ತೆ ಹೊಸ ಜೀವಚೈತನ್ಯ ತುಂಬಿದ್ದರ ಸಂಕೇತವಾಗಿ ಬೂದಿಯನ್ನು ಬಳಿಯುವುದು. ಬಣ್ಣ ಎರಚುವುದು, ಓಕಳಿಯಾಡುವುದು, ಹಾಡುವುದು, ಕುಣಿಯುವುದು ಇತ್ಯಾದಿ -  ಸಾಮೂಹಿಕ ಕ್ರಿಯೆಗಳು ಸಂತೋಷದ ಪ್ರತೀಕವಾಗಿ ಅದೇ ಹಬ್ಬವಾಗಿ ಮಾರ್ಪಟ್ಟಿತು.
ಸುಗ್ಗಿ ಮುಗಿದ ತರುವಾಯ ಈ ಹಬ್ಬ ಬರುವುದರಿಂದ ಹೊಲ – ತೋಟ ಪಟ್ಟಿಗಳಲ್ಲಿ ದುಡಿಯುವವರು. ರೈತರು, ಕೂಲಿಕಾರರು, ಕಾರ್ಮಿಕರು ಹಾಗೂ ಎಲ್ಲಾ ಸಾಮಾಜಿಕರು ಸೇರಿ ಈ ಹಬ್ಬವನ್ನು ಉತ್ಸುಕತೆಯಿಂದ ಆಚರಿಸಿ, ತಮ್ಮ ದಣಿವನ್ನು ನೀಗಿಸಿಕೊಳ್ಳುವುದು ವಾಡಿಕೆ. ಕಾಮನನ್ನು ಸುಟ್ಟ ಬೆಂಕಿಯನ್ನು, ಕೆಂಡ ಇಲ್ಲವೆ ಕೊಳ್ಳಿಯನ್ನು ತಂದು ಒಲೆ ಹೊತ್ತಿಸಿ ಕೊಳ್ಳುವ ಸಂಪ್ರದಾಯ ಹಳ್ಳಿಗಳಲ್ಲಿ ಈಗಲೂ ಇದೆ. ಕಾಮನ ಬೆಂಕಿಯಲ್ಲಿ ಕಡಲೆಯನ್ನೂ ಸುಟ್ಟು ತಿನ್ನುವುದರಿಂದ ಹಲ್ಲು ಗಟ್ಟಿಯಾಗುವವವೆಂಬ ಹಾಗೂ ಕಾಮನ ಬೂದಿಯನ್ನು ಬಿತ್ತುವ ಬೀಜಗಳಲ್ಲಿ ಬೆರಸುವುದರಿಂದ ಭೂಮಿಯಲ್ಲಿ ಪೀಕು ಬಿಗಿದು ನಿಲ್ಲುವುದೆಂಬ  ನಂಬಿಕೆ ರೈತ ಸಮುದಾಯದಲ್ಲಿದೆ.
ಫಾಲ್ಗುಣ ಮಾಸದಲ್ಲಿ ಬರುವ ಈ ಹೋಳಿಹಬ್ಬವನ್ನು ಕೆಲವರು ವಸಂತೋತ್ಸವವೆಂದೂ  ಕರೆದಿದ್ದಾರೆ. ಬಹುಶಃ ಪುರಾಣ ಕಾವ್ಯಗಳಲ್ಲಿ ಬರುವ ವರ್ಣನೆಗಳಿಗೆ ಆಕರ್ಷಿತರಾಗಿ ಅವರು ಹೋಳಿಹಬ್ಬವನ್ನು ವಸಂತೋತ್ಸವಕ್ಕೆ ಗಂಟು ಹಾಕಿರಬೇಕು.
’ಹೊಯ್ಕಂಡ ಬಾಯಿಗೆ ಹೋಳಿಗಿತುಪ್ಪ’ ಎನ್ನುವ ಮಾತು ಅರ್ಥವತ್ತಾಗಿದ್ದು ಕಾಮನ ಹಬ್ಬದ ಸಂದರ್ಭದಲ್ಲಿ ಹೊಯ್ಕೊಂಡರಷ್ಟೇ ಈ ಹೋಳಿಗೆ ತುಪ್ಪ ಖಚಿತ.
ಕಾಮನನ್ನು ಸುಟ್ಟ ಬೂದಿಯನ್ನು ಎರಚಾಡುವದು. ಬಣ್ಣ ಉಗ್ಗುವುದು, ಸಿಕ್ಕ ಸಿಕ್ಕವರನ್ನೆಲ್ಲ ಬಣ್ಣಗಳಿಂದ ವಿಕಾರಗೊಳಿಸುವುದು, ವಿರೂಪಗೊಳಿಸುವುದು ಇತ್ಯಾದಿ ಕಾಣುತ್ತೇವೆ. ಈ ವಿಕಾರ, ವಿರೂಪ ಎನ್ನುವುದು ರೂಪದ ಇನ್ನೊಂದು ತುದಿ ಎಂಬುದನ್ನು ಮರೆಯಬಾರದು. ಕಾಮ – ಚೆಲುವಿಗೆ, ರೂಪಕ್ಕೆ ಸಂಕೇತವಾಗಿರುವಂಥವನು, ಸುಟ್ಟು ಹೋದ ಮೇಲೆ ರೂಪ ವಿರೂಪಗೊಂಡದ್ದನ್ನು ಸಂಕೇತಿಸುವಂತೆ ಜನ ಸಮುದಾಯದ ಆಚರಣೆಯಲ್ಲಿ ಅದಿನ್ನೂ ಉಳಿದುಕೊಂಡು ಬಂದಿರುವುದು ವೈಜ್ಞಾನಿಕ ಸತ್ಯವನ್ನು ಪ್ರತಿಪಾದಿಸುತ್ತದೆ. ರೂಪ ವಿರೂಪಗಳಲ್ಲಿಯ ಸಾಪೇಕ್ಷ ಸಂಬಂಧಕ್ಕೆ ನಿದರ್ಶನವಾಗಿರುವ ಹೋಳಿಯ ಹಬ್ಬ. ಈ ಒಂದು ಹೊಸ ಅರ್ಥವನ್ನು ಸೂಚಿಸುತ್ತದೆ.
ಭಾರತೀಯ ಹಬ್ಬಗಳಲ್ಲಿ ಕಾಮನಹಬ್ಬ ದ್ರಾವಿಡರು ಆಚರಿಸುವ ಅತ್ಯಂತ ಮಹತ್ವದ ಹಬ್ಬ. ಇದರ ಆಚರಣೆ ವಿಧಿ  – ವಿಧಾನಗಳಲ್ಲಿ ಉಡಿಗೆ ತೊಡಿಗೆಗಳಲ್ಲಿ, ಊಟ ಉಪಾಹಾರಗಳಲ್ಲಿ ನಂಬಿಕೆ – ನಿಯತ್ತುಗಳಲ್ಲಿ ವಾದ್ಯವಿಶೇಷಗಳಲ್ಲಿ ದ್ರಾವಿಡ ಜನಾಂಗದ ಗ್ರಾಮೀಣ ಸಂಸ್ಕೃತಿಯ ಕುರುಹುಗಳು ಇಂದಿಗೂ ಉಳಿದುಕೊಂಡು ಬಂದಿರುವುದನ್ನು ಸಮಾಜಶಾಸ್ತ್ರಜ್ಞರೂ, ಇತಿಹಾಸಜ್ಞರೂ, ಗುರ್ತಿಸಿದ್ದಾರೆ. ಆದಿವಾಸಿ, ಗುಡ್ಡಗಾಡು ಜನಾಂಗಗಳಲ್ಲಿ ಆಫ್ರಿಕದ ನಿಗ್ರೋ, ಝುಲೂ ಜನಾಂಗಗಳ ಹಬ್ಬಗಳಲ್ಲಿ ಹಾಗೂ ಅವುಗಳ ಆಚರಣೆಗಳಲ್ಲಿ ಸ್ವಚ್ಛಂದ ಹಾಗೂ ಸ್ವೈರಾಚರಣೆ ಇರುವುದನ್ನು ಗಮನಿಸಬಹುದು. ಈ ದೃಷ್ಟಿಯಿಂದ, ’ಕಾಮನಹಬ್ಬ’ ಇಲ್ಲವೆ ’ಹೋಳಿಹಬ್ಬ’ ದ್ರಾವಿಡ ಜನಾಂಗದ ಸಾಂಸ್ಕೃತಿಕ ಮಹತ್ವವನ್ನು ಪ್ರಕಟಿಸುವ ಹಬ್ಬವಾಗಿದೆ.


[1] ಒಮ್ಮೆ ಸುಂದರತೆ ಮತ್ತು ಅಸುಂದರತೆ ಎಂದರೆ ರೂಪ ಮತ್ತು ಕುರೂಪ ಇವೆರಡೂ ಸ್ನಾನಕ್ಕೆ ಹೋಗಿದ್ದವಂತೆ. ಒಂದು ಸರೋವರದಲ್ಲಿ ಈಜುತ್ತಿರುವಾಗ ’ಏನೇನು ಮಾತಾಡಿಕೊಳ್ಳುತ್ತಿದ್ದವು, ಸ್ನಾನ ಮುಗಿಸಿ ಅವು ಮೇಲೆದ್ದು ಬಂದು, ರೂಪ ಕುರೂಪದ ಉಡುಪನ್ನು ಕುರೂಪ ರೂಪದ ಉಡುಪನ್ನು ತೊಟ್ಟುಕೊಂಡವು. ಹೀಗೆ ವಿಶ್ವವನ್ನು ವ್ಯಾಪಿಸಿಬಿಟ್ಟವು. ರೂಪ, ಕುರೂಪಗಳನ್ನು ಗುರ್ತಿಸುವುದು ಕಷ್ಟವಾಯಿತು.