ಭಾನುವಾರ, ಮಾರ್ಚ್ 18, 2018

ಪ್ರಸಾರಭಾರತಿ :ಮಾಲೀಕನ ಮಾರ್ದನಿ


  ಅನು: ಶಿವಸುಂದರ್ 
Image result for prasar bharati
ಪ್ರಸಾರಭಾರತಿ ಸಂಸ್ಥೆಯು ಸ್ವತಂತ್ರ ಸಾರ್ವಜನಿಕ ಪ್ರಸಾರ ಸಂಸ್ಥೆಯೊಂದರ ಕೆಟ್ಟ ನಕಲಾಗಿಯೂ ಕೂಡಾ ಉಳಿದಿಲ್ಲ.

ಒಂದು ಸ್ವತಂತ್ರ ಮತ್ತು ಸ್ವಾಯತ್ತ ಸಾರ್ವಜನಿಕ ಪ್ರಸಾರ ಮಾಧ್ಯಮವು ಅಸ್ತಿತ್ವದಲ್ಲಿರಬೇಕೆಂಬ ಆಶಯ ಹಾಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರ್ಕಾರಕ್ಕಾಗಲೀ, ಅಥವಾ ಈ ಹಿಂದಿನ ಯಾವುದೇ ಸರ್ಕಾರಗಳಿಗಾಗಲೀ ಖಂಡಿತಾ ಇರಲಿಲ್ಲವೆಂಬುದು ಸರ್ವವಿದಿತ. ಆದರೂ ಸಾರ್ವಜನಿಕ ಪ್ರಸಾರ ಸಂಸ್ಥೆಯಾದ ಪ್ರಸಾರ ಭಾರತಿ ಮತ್ತು ಸರ್ಕಾರದ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉದ್ಭವಿಸಿದಾಗಲೆಲ್ಲಾ ಪ್ರಸಾರ ಭಾರತಿಯ ಸ್ವಾಯತ್ತತೆಯ ಬಗೆಗಿನ ಚರ್ಚೆಗಳು ಜೀವ ಪಡೆದುಕೊಳ್ಳುತ್ತವೆ. ಪ್ರಸಾರ ಭಾರತಿ ಸಂಸ್ಥೆಗೆ ವೃತ್ತಿಪರ ಪರಿಣಿತರನ್ನು ನೇಮಿಸಿಕೊಳ್ಳುವ  ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮತ್ತೆ ಅಂಥದ್ದೊಂದು ಭಿನ್ನಾಭಿಪ್ರಾಯವು ಪ್ರಸಾರ ಭಾರತಿ ಮಂಡಳಿ ಮತ್ತು ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ನಡುವೆ ತಲೆದೋರಿದೆ. ಪ್ರಸಾರ ಭಾರತಿಯು ತನ್ನ ಅಧಿಕಾರವನ್ನು ಪ್ರತಿಪಾದಿಸುವ ಮೂಲಕ ಒಂದು ಸಣ್ಣ ಕದನಕ್ಕೆ ವೇದಿಕೆಯನ್ನು ಕಲ್ಪಿಸಿಬಿಟ್ಟಿದೆ. ಹೀಗಾಗಿ ವಾರ್ತಾ ಮತ್ತು ಪ್ರಸಾರ ಇಲಾಖೆಯು ದೂದದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋದ ಉದ್ಯೋಗಿಗಳ ವೇತನಕ್ಕಾಗಿ ಕೊಡಬೇಕಾದ ಹಣವನ್ನು ಬಿಡುಗಡೆ ಮಾಡದಿರುವುದನ್ನು ವಾರ್ತಾ ಇಲಾಖೆಯು ತಮ್ಮ ನಿಗಮದ ವಿರುದ್ಧ ತೆಗೆದುಕೊಳ್ಳುತ್ತಿರುವ ಪ್ರತೀಕಾರದ ಕ್ರಮವೆಂದು ಅದು ಬಣ್ಣಿಸಿದೆ. ಆದರೆ, ನಿರೀಕ್ಷಿಸಿದಂತೆ ಕುಟುಂಬದ ಒಳಗಿನ ಸಣ್ಣ ವ್ಯಾಜ್ಯವೇನೋ ಎಂಬಂತೆ ಈ ವಿವಾದವೂ ಕೂಡಾ ನಿಧಾನವಾಗಿ ತಣ್ಣಗಾಗಿದೆ. 

೧೯೭೫-೭೭ರ ಅವಧಿಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದಾಗ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋಗಳನ್ನು ಸರ್ಕಾರದ ಪ್ರಚಾರ ಸಾಧನಗಳನ್ನಾಗಿ ಬಳಕೆ ಮಾಡಿಕೊಳ್ಳಲಾಗಿತ್ತು. ಈ ಅತಿರೇಕಗಳ ಹಿನ್ನೆಲೆಯಲ್ಲಿ ಒಂದು ಸ್ವಾಯತ್ತ ಮತ್ತು ಸ್ವತಂತ್ರ ಸಾರ್ವಜನಿಕ ಪ್ರಸಾರ ನಿಗಮದ ಪರಿಕಲ್ಪನೆಯು ಹುಟ್ಟಿಕೊಂಡಿತು. ೧೯೭೭ರಲ್ಲಿ ಅಧಿಕಾರಕ್ಕೆ ಬಂದ ಜನತಾ ಸರ್ಕಾರವು ಇಂಥಾ ಒಂದು ನಿಗಮಕ್ಕೆ ಬೇಕಾದ ನೀಲನಕ್ಷೆಯನ್ನು ರೂಪಿಸಲು ಹಿರಿಯ ಸಂಪಾದಕ ಮತ್ತು ಪತ್ರಕರ್ತ ಬಿ.ಜಿ. ವರ್ಗೀಸ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಭಾರತವು  ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಮಾದರಿಯನ್ನು ಅನುಸರಿಸಬಹುದೆಂದು  ತೀರ್ಮಾನಿಸಲಾಯಿತು. ವರ್ಗೀಸ್ ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ ೧೯೯೦ರಲ್ಲಿ ಪ್ರಸಾರ ಭಾರತಿ (ಭಾರತೀಯ ಪ್ರಸಾರ ನಿಗಮ) ಕಾಯಿದೆಯನ್ನು ರೂಪಿಸಿ ಜಾರಿ ಮಾಡಲಾಯಿತು. ಅದಾದ ನಂತರವೂ ಪ್ರಸಾರ ಭಾರತಿ ನಿಗಮವು ಏರ್ಪಾಡಾಗಲು ಭರ್ತಿ ಏಳು ವರ್ಷಗಳೇ ಬೇಕಾಯಿತು. 

ಆದರೂ ಆ ಕಾಯಿದೆಯಲ್ಲಿರುವ ಮುಖ್ಯ ಅಂಶಗಳನ್ನು ಈವರೆಗೆ ಯಾವ ಸರ್ಕಾರಗಳೂ ಪರಿಗಣನೆಗೇ ತೆಗೆದುಕೊಂಡಿಲ್ಲ. ಉದಾಹರಣೆಗೆ ಆಳುವ ಸರ್ಕಾರದ ಮಧ್ಯಪ್ರವೇಶವದಿಂದ ಪ್ರಸಾರ ಭಾರತಿಯನ್ನು ರಕ್ಷಿಸಲು ಪ್ರಸಾರ ಭಾರತಿ ಕಾಯಿದೆಯು ೨೨ ಸಂಸತ್ ಸದಸ್ಯರ ಒಂದು ಉಸ್ತುವಾರಿ ಸಮಿತಿಯೊಂದನ್ನು ರಚಿಸಬಹುದೆಂಬ ಮುಂದಾಲೋಚನೆಯುಳ್ಳ ಪ್ರಸ್ತಾಪವನ್ನು ಮಾಡಿದೆಅದರೆ ಈ ಸಮಿತಿಯ ರಚನೆಯೂ ಆಗಿಲ್ಲ. ಮತ್ತು ಯಾವ ಪಕ್ಷಗಳೂ ಅದರ ರಚನೆಗೆ ಒತ್ತಾಯಿಸಿಯೂ ಇಲ್ಲ. ಈ ಹಿಂದಿನ ಸರ್ಕಾರವು ನೇಮಿಸಿದ್ದ ಸಾಮ್ ಪಿತ್ರೋದ ಸಮಿತಿಯು ಸಹ ಈ ಪ್ರಮುಖ ಲೋಪವನ್ನು ಎತ್ತಿ ತೋರಿಸಿತ್ತು. ವಾಸ್ತವವಾಗಿ ಅಂಥ ಒಂದು ಶಾಸನಾತ್ಮಕ ಅವಕಾಶವು ಎಷ್ಟು ಪರಿಣಾಮಕಾರಿಯಾಗಿರಬಲ್ಲದು ಎಂಬುದು ೨೦೧೧ರಲ್ಲಿ ರಾಜ್ಯಸಭಾ ಟಿವಿ ವಾಹಿನಿಯು ಅಸ್ತಿತ್ವಕ್ಕೆ  ಬಂದಾಗ ಸಾಬೀತುಗೊಂಡಿತು. ಆಗ ಭಾರತದ ಉಪರಾಷ್ಟ್ರಪತಿಯಾದ ಹಮೀದ್ ಅನ್ಸಾರಿಯವರು ಅದರ ಮುಖ್ಯಸ್ಥರಾಗಿದ್ದರು ಮತ್ತು ಆ ವಾಹಿನಿಯ ಮೇಲ್ವಿಚಾರಣೆಗೆ ವಿವಿಧ ರಾಜಕೀಯ ಪಕ್ಷಗಳ ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಯಿತು. ವಾಸ್ತವವಾಗಿ ಆ ವಾಹಿನಿಯು ದೇಶದ ಅಸಂಖ್ಯಾತ ಖಾಸಗಿ ಸುದ್ದಿ ವಾಹಿನಿಗಳು ನಡೆಸುತ್ತಿರುವ ವಿವೇಕ ಶೂನ್ಯ ಸದ್ದು ಗದ್ದಲಗಳಿಂದ ಭಿನ್ನವಾದ ಗುಣಮಟ್ಟದ ಚರ್ಚೆ ಮತ್ತು ಸಂವಾದಗಳನ್ನು ತನ್ನ ವಾಹಿನಿಯಲ್ಲಿ ನಡೆಸುವ ಮೂಲಕ ಒಂದು ನೈಜವಾದ ಸಾರ್ವಜನಿಕ ಪ್ರಸಾರ ಸಂಸ್ಥೆಯೊಂದು ಎಂಥಾ ಕೊಡುಗೆ ನೀಡಬಲ್ಲದೆಂಬುದನ್ನು ಭಾರತದ ಜನತೆಗೆ ಸ್ವಲ್ಪ ಸಮಯವಾದರೂ ತೋರಿಸಿಕೊಟ್ಟಿತು.  ಆದರೆ ಆ ಪ್ರಯೋಗ ದೀರ್ಘಕಾಲ ನಡೆಯಲಿಲ್ಲ.

ಆ ಕಾಯಿದೆಯು ರಾಷ್ಟ್ರಪತಿಯವರ ಅಧ್ಯಕ್ಷತೆಯಲ್ಲಿ ಸಂಸತ್ತಿನ ಎರಡೂ ಮನೆಗಳ ತಲಾ ನಾಲ್ವರು ಸದಸ್ಯರುಳ್ಳ ಸಮಿತಿಯನ್ನು ರಚಿಸಿ, ಅದರ ಮೂಲಕ ಸಾರ್ವಜನಿಕ ವಲಯದ ೧೧ ಜನರ ಪರಿಣತರನ್ನುಳ್ಳ ಒಂದು ಪ್ರಸಾರ ಪರಿಷತ್ತನ್ನು ನೇಮಿಸುವ ಅವಕಾಶವನ್ನು ಕಲ್ಪಿಸಿದೆ. ಪ್ರಸಾರ ಭಾರತಿಯು ಪ್ರಸಾರ ಮಾಡುವ ಅಂಶಗಳ ಸಾರದ ಬಗ್ಗೆ ಇರಬಹುದಾದ ದೂರುಗಳನ್ನು ಈ ಪರಿಷತ್ತಿಗೆ ಸಾರ್ವಜನಿಕರು ಸಲ್ಲಿಸಬಹುದಿತ್ತು. ಆದರೂ ಅಂಥಾ ಒಂದು ಸಮಿತಿಯನ್ನು ಈವರೆಗೆ ರಚಿಸಲಾಗಿಲ್ಲ. ಹಾಗೆಯೇ ಆ ಕಾಯಿದೆಯ ಪ್ರಕಾರ ಈ ಅಗತ್ಯಗಳಿಗಾಗಿ ಭಾರತೀಯ ಪ್ರಸಾರ ಭಾರತಿ ನಿಗಮವನ್ನು ರಚಿಸಬೇಕಿತ್ತು. ಆದರೆ ಅದನ್ನೂ ರಚಿಸಲಾಗಿಲ್ಲ.

ಅವುಗಳೆಲ್ಲರ ಬದಲಿಗೆ ಈಗ ಆಸ್ಥಿತ್ವದಲ್ಲಿರುವುದು ಸಾರ್ವಜನಿಕ ಪ್ರಸಾರ ನಿಗಮದ ಹೆಸರೇ ಹೊರತು ಸಾರವಲ್ಲ. ವಾಸ್ತವವಾಗಿ ಈ ಹಿಂದೆ ಯಾವರೀತಿ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋಗಳನ್ನು ನೇರವಾಗಿ ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ನಿಯಂತ್ರಿಸಲಾಗುತ್ತಿತ್ತೋ ಅದೇ ಪರಿಸ್ಥಿತಿಯೇ ಈಗಲೂ ಮುಂದುವರೆದಿದೆ. ಅಷ್ಟು ಮಾತ್ರವಲ್ಲ ಈಗಿರುವ ಪ್ರಸಾರ ಭಾರತಿ ಮಂಡಳಿಯನ್ನು ಖಂಡಿತಾ ಒಂದು ಸ್ವತಂತ್ರ ವ್ಯವಸ್ಥೆಯೆಂದು ಹೇಳಲಾಗುವುದಿಲ್ಲ. ಆಳುವ ಸರ್ಕಾರಗಳ ಸಿದ್ಧಾಂತಗಳನ್ನು  ಒಪ್ಪಿಕೊಳ್ಳುವವರೇ ಅದರ ಸದಸ್ಯರಾಗುತ್ತಾರೆ. ಈಗಿನ ಅಧ್ಯಕ್ಷರೂ ಮತ್ತು ಸದಸ್ಯರುಗಳೂ ಕೂಡಾ ಈ ನಿಯಮಕ್ಕೆ ಹೊರತೇನೂ ಅಲ್ಲ. ಈಗ ಸರ್ಕಾರ ಮತ್ತು ಪ್ರಸಾರ ಭಾರತಿ ನಿರ್ದೇಶನಾಯಲದ  ನಡುವೆ ತಲೆದೋರಿರುವ ಬಿಕ್ಕಟ್ಟಿನಲ್ಲಿ ಸೈದ್ಧಾಂತಿಕವಾದದ್ದೇನೂ ಇಲ್ಲ. ಹೆಚ್ಚೆಂದರೆ ಅವು ತಮ್ಮ ನಡುವಿನ ಅಧಿಕಾರ ವ್ಯಾಪ್ತಿಗೆ ಸಂಬಂಧಪಟ್ಟವಷ್ಟೆ ಆಗಿವೆ.  ಹೀಗಾಗಿ ಈಗಿರುವ ಪ್ರಸಾರ ಭಾರತಿ ಸಂಸ್ಥೆಯನ್ನು ಒಂದು ಸಾರ್ವಜನಿಕ ಸ್ವತಂತ್ರ ಸಂಸ್ಥೆಯೆಂದು ಕರೆಯುವುದೇ ತಪ್ಪು. ಏಕೆಂದರೆ ಅದು ಹಿಂದಿನಂತೆ ಒಂದು  ಸರ್ಕಾರೀ ಪ್ರಸಾರ ಸಂಸ್ಥೆಯಾಗಿಯೇ ಮುಂದುವರೆದಿದೆ.

ಅಷ್ಟು ಮಾತ್ರವಲ್ಲ. ಒಂದು ವೇಳೆ ರೂಪಿಸಲಾಗಿರುವ ನಿಯಮಾವಳಿಯ ಪ್ರಕಾರವೇ ಒಂದು ಸಂಸ್ಥೆಯನ್ನು ರಚಿಸಲಾದರೂ ಎಲ್ಲಿಯ ತನಕ ಅದರ ನಡಾವಳಿಯಲ್ಲಿ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಮಧ್ಯಪ್ರವೇಶಕ್ಕೆ ಅವಕಾಶವಿರುತ್ತದೋ ಅಲ್ಲಿಯವರೆಗೆ ಅದನ್ನು ಒಂದು ಸ್ವಾಯತ್ತ ಸಂಸ್ಥೆಯೆಂದು ಕರೆಯಲಾಗುವುದಿಲ್ಲ. ಹಾಗೆ ನೋಡಿದಲ್ಲಿ, ಭಾರತವು ವಾರ್ತಾ ಮತ್ತು ಪ್ರಸಾರ ಇಲಾಖೆ ಯೆಂಬ ಒಂದು ಇಲಾಖೆಯನ್ನೇಕೆ ಹೊಂದಿದೆ ಎಂಬ ಪ್ರಶ್ನೆಯನ್ನೂ ಸಹ ಖಂಡಿತಾ ಕೇಳಲೇಬೇಕಾಗುತ್ತದೆ. ಸರ್ಕಾರದ ಪ್ರಚಾರವನ್ನು ಮಾಡುವುದು ಮತ್ತು ಖಾಸಗಿ ಪ್ರಸಾರ ಸಂಸ್ಥೆಗಳಿಗೆ ಪರವಾನಗಿಯನ್ನು ನೀಡುವುದನ್ನು ಬಿಟ್ಟು ಅದು ಬೇರೇನು ಮಾಡುತ್ತಿದೆ? ಸರ್ಕಾರದ ಬಳಿ ತನ್ನ ಪ್ರಚಾರಕ್ಕೆ ಈಗಾಗಲೇ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋಗಳಿವೆ. ಹಾಗೂ ಪರವಾನಗಿಯನ್ನು ನೀಡಲು ಬೇರೆ ಒಂದು ಸಂಸ್ಥೆಯನ್ನು ರಚಿಸಬಹುದು. ಒಂದು ಪ್ರಜಾಸತ್ತೆಯಲ್ಲಿ ಇಂಥಾ ಒಂದು ಇಲಾಖೆ ಅಸ್ತಿತ್ವದಲ್ಲಿರುವುದೇ ಒಂದು ಅಪಭ್ರಂಶವಲ್ಲವೇ?

ಆದರೆ ನೈಜವಾದ ಒಂದು ಸ್ವಾಯತ್ತ ಸಾರ್ವಜನಿಕ ಪ್ರಸಾರ ಸಂಸ್ಥೆಯೊಂದನ್ನು ಕಟ್ಟುವುದಂತೂ ಅತ್ಯಗತ್ಯವಾಗಿದೆ. ನೋಡುಗರ ಸಂಖ್ಯೆಯನ್ನು  ಹೆಚ್ಚಿಸುವುದಿಲ್ಲ ಎಂಬ ಕಾರಣಕಾಗಿ ಖಾಸಗಿ ಪ್ರಸಾರ ಸಂಸ್ಥೆಗಳು ನಿರ್ಲಕ್ಷಿಸುವ ಸಾಕಷ್ಟು ವಿಷಯಗಳನ್ನು ಈ ಸಂಸ್ಥೆಯು ಸಾರ್ವಜನಿಕರ ಗಮನಕ್ಕೆ ತರಬಹುದು. ಅಲ್ಲದೆ ಸದ್ಯ ಹಲವಾರು ಖಾಸಗಿ ವಾಹಿನಿಗಳು ನಡೆಸುವ ಸಮಕಾಲೀನ ವಿಷಯಗಳ ಬಗೆಗಿನ ಕಾರ್ಯಕ್ರಮಗಳ ಅಬ್ಬರದ ಗದ್ದಲಗಳಲ್ಲಿ ಕೊಚ್ಚಿಹೋಗುತ್ತಿರುವ ಸಂವಾದ ಮತ್ತು ಚರ್ಚೆಗಳಿಗೆ ಈ ಸಂಸ್ಥೆಯು ಅವಕಾಶಗಳನ್ನು ಕಲ್ಪಿಸಿಕೊಡಬಹುದು.

ಅಂತಿಮವಾಗಿ ಅದು ಭಾರತದ ಶ್ರೀಮಂತ ವೈವಿಧ್ಯತೆಗಳನ್ನು ಕಾಪಿಡುವ ಸಂಗ್ರಹಕಾರನೂ ಆಗಬಹುದು.  ಈ ಹಿಂದೆ ಆಲ್ ಇಂಡಿಯಾ ರೇಡಿಯೋ ಸಂಸ್ಥೆಯು ಭಾರತದ ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಸಂಗ್ರಹಿಸಿಡುವ ಅತ್ಯುತ್ತಮ ಕೆಲಸವನ್ನು ಮಾಡಿತ್ತು. ಒಂದು ಸ್ವತಂತ್ರ ಮತ್ತು ಸ್ವಾಯತ್ತ ಪ್ರಸಾರ ಸಂಸ್ಥೆಯು ಇದಕ್ಕಿಂತ ಸಾಕಷ್ಟು ಗುಣಾತ್ಮಕವಾದವುಗಳನ್ನು ಮಾಡಬಹುದು. ಆದರೆ ಈಗಿರುವ ಪ್ರಸಾರ ಭಾರತಿ ಅಂಥಾ ಒಂದು ಸಂಸ್ಥೆಯ ಕೆಟ್ಟ ನಕಲಾಗಿಯೂ ಉಳಿದಿಲ್ಲ. 

  ಕೃಪೆ: Economic and Political Weekly, Mar 17,  2018. Vol. 53. No.11
                                                                                                              
 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )















ಈಶಾನ್ಯ ಭಾರತದ ವಿಧಾನಸಭಾ ಚುನಾವಣೆ: ಅಧಿಕಾರ ಮೂಲದ ಸಂಬಂಧಗಳು


ಅನು: ಶಿವಸುಂದರ್ 
Related image

ಈಶಾನ್ಯ ಭಾರತದಲ್ಲಿ ಇತ್ತೀಚೆಗೆ ನಡೆದ ಮೂರೂ ವಿಧಾನಸಭಾ ಚುನಾವಣೆಗಳು ಮೂರು ಭಿನ್ನ ಭಿನ್ನ ಕಥೆಗಳನ್ನು ಹೇಳುತ್ತವೆ.

ಇತ್ತೀಚೆಗೆ ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾಗಳಲ್ಲಿ ನಡೆದ ಚುನಾವಣೆಗಳಿಂದ ಉಳಿದ ಭಾರತವು ಬಹು ಮುಖ್ಯ ಪಾಠವೊಂದನ್ನು ಕಲಿಯಬೇಕಿದೆ. ಅದೇನೆಂದರೆ ಯಾವೊಂದು ಚುನಾವಣೆಯ ಫಲಿತಾಂಶಗಳ ಪಾಠಗಳನ್ನು ಸಾರ್ವತ್ರೀಕರಿಸಬಾರದು. ತ್ರಿಪುರಾದಲ್ಲಿ ಕಳೆದ ೨೫ ವರ್ಷಗಳಿಂದ ಅಧಿಕಾರದಲ್ಲಿದ್ದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) (ಸಿಪಿಎಂ) ವನ್ನು ಭಾರತೀಯ ಜನತಾ ಪಕ್ಷವು (ಬಿಜೆಪಿ) ನಿರ್ಣಾಯಕವಾಗಿ ಸೋಲಿಸಿ ಅಧಿಕಾರವನ್ನು ಪಡೆದುಕೊಂಡಿತು. ಆದರೆ ಇದನ್ನೇ ನೆಪವಾಗಿಸಿಕೊಂಡು ಭಾರತದ ಪ್ರಧಾನ ಧಾರೆ ಮಾಧ್ಯಮಗಳೆಲ್ಲಾ ಈಶಾನ್ಯ ಭಾರತದಾದ್ಯಂತ ಕೇಸರಿ ಪಡೆಗಳ ವಿಜಯಯಾತ್ರೆ ಸಾಗಿದೆಯೆಂದು ಅತಿರಂಜಿಸಿ ಬರೆದವು. ಆದರೆ ಹಾಗೆ ಬರೆಯುವಾಗ ಅವು ಎಂದಿನಂತೆ ಈಶಾನ್ಯ ಭಾರತವೆಂದರೆ ವಿವಿಧ ರಾಜಕೀಯ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಏಳು (ಈಗ ಸಿಕ್ಕಿಂ ಅನ್ನು ಸೇರಿಸಿದರೆ ಎಂಟು) ವಿಭಿನ್ನ ರಾಜ್ಯಗಳುಳ್ಳ ಪ್ರದೇಶವೆಂಬುದನ್ನು ನಿರ್ಲಕ್ಷಿಸಿದರು. ಆ ರಾಜ್ಯಗಳನ್ನು ಏಕರೂಪಿಯಾಗಿ ಭಾವಿಸುವುದೆಂದರೆ ಅವುಗಳ ನಿರ್ದಿಷ್ಟತೆಗಳನ್ನೂ ಮತ್ತು  ಅನನ್ಯತೆಗಳನ್ನು ನಿರಾಕರಿಸುವುದು ಎಂದೇ ಅರ್ಥ. ವಾಸ್ತವವಾಗಿ ತಥಾಕಥಿತ ಪ್ರಧಾನ ಧಾರೆ ಭಾರತೀಯರು ಭಿನ್ನ ಸಂಸ್ಕೃತಿಯುಳ್ಳ ತಮ್ಮನ್ನು ಹೀಗೆ ಒಟ್ಟುರಾಶಿಯಾಗಿ ಸೇರಿಸಿ ಮೂಲೆಗುಂಪು ಮಾಡುವ ಬಗ್ಗೆ ಈ ರಾಜ್ಯಗಳ ಜನರಲ್ಲಿ ಅಪಾರ ಅಸಹನೆಯಿದೆ.

ತ್ರಿಪುರಾದಲ್ಲಿ ಅಧಿಕಾರಸ್ಥರ ವಿರೋಧಿ ಭಾವನೆಯ ಅಂಶದೊಂದಿಗೆ ಮತ್ತೊಂದು ಪ್ರಮುಖ ಅಂಶ ಅಲ್ಲಿಯ ಬಿಜೆಪಿಯ ವಿಜಯಕ್ಕೆ ಕಾರಣವಾಯಿತು. ಬಿಜೆಪಿಯ ಹಿಂದೂ ಅಜೆಂಡಾಗಳಿಗೆ ಸ್ಪಂದಿಸುವಂಥ ಹಿಂದೂ ಜನಸಂಖ್ಯೆಯೂ ಅಲ್ಲಿ ದೊಡ್ಡಮಟ್ಟದಲ್ಲಿತ್ತು. ಆದರೆ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿರುವ ಗಿರಿರಾಜ್ಯಗಳ ಕಥೆ ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ತ್ರ್ರಿಪುರಾzಲ್ಲಿ ಬಿಜೆಪಿಗೆ ಸ್ವಂತಬಲದ ಮೇಲೆ ಸರ್ಕಾರ ರಚಿಸುವಷ್ಟು ಬಹುಮತ ದೊರಕಿದ್ದರೂ ತ್ರಿಪುರಾದ ಗಿರಿಜನರಿಗೆ ಪ್ರತ್ಯೇಕ ರಾಜ್ಯದ ಬೇಕೆಂಬ ಬೇಡಿಕೆಯಿಟ್ಟುಕೊಂಡು ಚಳವಳಿ ನಡೆಸುತ್ತಿರುವ ಇಂಡೀಜೀನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಟಿಎಫ್) ಎಂಬ ಪ್ರಾದೇಶಿಕ ಪಕ್ಷದೊಡನೆ ಹೊಂದಾಣಿಕೆ ಮಾಡಿಕೊಂಡಿತ್ತು ಎಂಬುದನ್ನು ಮರೆಯಬಾರದು. ತ್ರಿಪುರಾದ ಮಟ್ಟಿಗೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಐಪಿಟಿಎಫ್ ಒಂದು ಕಿರಿಯ ಪಾಲುದಾರನೇ ಆಗಿದ್ದರೂ ಕೇಂದ್ರ ಸರ್ಕಾರಕ್ಕೆ ಅದು ಸಾಕಷ್ಟು ತಲೆನೋವನ್ನು ಉಂಟು ಮಾಡುವುದಂತೂ ಖಂಡಿತಾ. ಏಕೆಂದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಪ್ರತ್ಯೇಕ ರಾಜ್ಯದ ಆಗ್ರಹಕ್ಕೆ ಮಣಿಯುವುದು ಅಸಂಭವ.

ಮೇಘಾಲಯ ಮತ್ತು ನಾಗಾಲ್ಯಾಂಡುಗಳಲ್ಲಿ ಅಲ್ಲಿನ ಪ್ರಾದೇಶಿಕ ರಾಜಕಾರಣದ ಸ್ವರೂಪವೇ ಅಲ್ಲಿನ ನೈಜ ಕಥೆಗಳನ್ನು ಬಿಚ್ಚಿಡುತ್ತದೆ. ತಮಗೆ ಪ್ರತ್ಯೇಕ ರಾಜ್ಯ ಬೇಕೆಂದು ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫೆರೆನ್ಸ್ (ಎಪಿಎಚ್‌ಎಲ್‌ಸಿ)ಯ ನೇತೃತ್ವದಲ್ಲಿ ಖಾಸಿಗಳೂ, ಜಾಂತಿಯಾಗಳೂ, ಮತ್ತು ಗರೋವ್‌ಗಳು ಸತತವಾಗಿ ನಡೆಸಿದ ಸಂಘರ್ಷದ ಭಾಗವಾಗಿ ೧೯೭೨ರಲ್ಲಿ ಅಸ್ಸಾಮಿನ ಭಾಗವಾಗಿದ್ದ ಈ ಪ್ರದೇಶಗಳನ್ನು ಬೇರ್ಪಡಿಸಿ ಪ್ರತ್ಯೇಕ ರಾಜ್ಯವಾಗಿ ಘೋಷಿಸಲಾಯಿತು. ಆದರೆ ೧೯೭೬ರ ವೇಳೆಗೆ ಕಾಂಗ್ರೆಸ್‌ನ ಚಿತಾವಣೆಗಳಿಂದಾಗಿ ಎಪಿಎಚ್‌ಎಲ್‌ಸಿ ವಿಭಜಿತವಾಯಿತು. ಆ ವೇಳೆಗೆ ಕೇಂದ್ರದಲ್ಲಿ ಇಂದಿರಾ ಗಾಂಧಿ ಸರ್ಕಾರವಿತ್ತು ಮತ್ತು ದೇಶದ ಮೇಲೆ ತುರ್ತುಸ್ಥಿತಿಯನ್ನು ಘೋಷಿಸಿ ಒಂದು ವರ್ಷವಾಗಿತ್ತು. ಅದಾದ ನಂತರದಲ್ಲಿ ಎಪಿಎಚ್‌ಎಲ್‌ಸಿಯ ಬಹುಪಾಲು ಸದಸ್ಯರು ಒಂದೋ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು ಅಥವಾ ತಮ್ಮದೇ ಆದ ಸಣ್ಣ ಪುಟ್ಟ ಪ್ರಾದೇಶಿಕ ಗುಂಪುಗಳನ್ನು ರಚಿಸಿಕೊಂಡರು. ಮತ್ತೊಮ್ಮೆ ಅವರೆಲ್ಲರೂ ಒಟ್ಟಿಗೆ ಸೇರಿ ಕಾಂಗ್ರೆಸ್ಸೇತರ ಸರ್ಕಾರ ರಚಿಸುವ ಪ್ರಯತ್ನಪಟ್ಟಿದ್ದು ೨೦೦೮ರಲ್ಲಿ. ಆದರೆ ಅದು ಅಧಿಕಾರ ನಡೆಸಲು ಸಾಧ್ಯವಾದದ್ದು ಕೇವಲ ಒಂದು ವರ್ಷ ಮಾತ್ರ. ಆನಂತರ ರಾಷ್ಟ್ರಪತಿ ಆಡಳಿತ ಜಾರಿಗೆ ಬಂತು. ಹಾಗೂ ಮುಂದೆ ಚುನಾವಣೆ ಆಗುವ ತನಕ ಕಾಂಗ್ರೆಸ್ ಸರ್ಕಾರವೇ ಆಳ್ವಿಕೆಯಲ್ಲಿತ್ತು. ಹಾಲೀ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಪಕ್ಷವೇ ಆಯ್ಕೆಯಾದರೂ ಅದರ ದುರಾಡಳಿತದಿಂದಾಗಿ ಮತ್ತು ತನ್ನ ಎದುರಾಳಿಯಾದ ಬಿಜೆಪಿಗಿದ್ದಷ್ಟು ರಾಜಕಿಯ ಚಾತುರ್ಯವಿಲ್ಲದ ಕಾರಣದಿಂದಾಗಿ ಸರ್ಕಾರ ರಚಿಸಲು ಬೇಕಿದ್ದಷ್ಟು ಬಹುಮತವನ್ನು ಕುದುರಿಸಿಕೊಳ್ಳಲಾಗಲಿಲ್ಲ. ಈಗ ಹಾಲೀ ಅಧಿಕಾರದಲ್ಲಿರುವ ಮೈತ್ರಿಕೂಟವು ಒಂದು ವಿಚಿತ್ರ ಭಿನ್ನರಾಶಿಯಾಗಿದ್ದರೂ ಬಿಜೆಪಿಯೇ ಆ ಮಿತ್ರಕೂಟದಲ್ಲಿರುವುದರಿಂದ ತಾನೇ ಅದನ್ನು ಕೆಳಗುರುಳಿಸುವುದಕ್ಕೆ ಮುಂದಾಗಲಾರದು.

ನಾಗಾಲ್ಯಾಂಡಿನ ಕಥೆ ಇವೆಲ್ಲಕ್ಕಿಂತ ಭಿನ್ನವಾದದ್ದು. ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಮೈತ್ರಿಯಿಂದಿರಲು ಬಯಸುವ ರಾಜಕಾರಣವನ್ನು ಬಳಸಿಕೊಂಡು ಬಿಜೆಪಿಯು ಎರಡೂ ಪ್ರಾದೇಶಿಕ ಪಕ್ಷಗಳಿಗೂ ಚುನಾವಣೆಗೆ ಮುನ್ನ ಆಸೆ ಹುಟ್ಟಿಸಿತ್ತು. ಟಿ. ಆರ್. ಜೆಲಾಂಗ್ ನೇತೃತ್ವದ ನಾಗ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್)ನ ಸರ್ಕಾರವು ಕುಸಿದು ಬಿದ್ದು ಚುನಾವಣೆಗೆ ಮುನ್ನ ಸರ್ಕಾರ ರಚಿಸಿದ್ದ ನೆಯ್‌ಫಿಯು ರಿಯೋ ಅವರ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿಯ ಜೊv ಬಿಜೆಪಿಯು ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡಿತ್ತು. ಯಾವುದೇ ಸತ್ವಯುತ ಕಾರಣವಿಲ್ಲದೆ ಕೇವಲ ರಿಯೊ ಮತ್ತು ಜೆಲಾಂಗ್ ಅವರ ನಡುವಿನ ವ್ಯಕ್ತಿ ಪ್ರತಿಷ್ಟೆಯ ಕಾರಣಗಳಿಂದಾಗಿಯೇ ಎನ್‌ಪಿಎಫ್ ನಲ್ಲಿ ಉಂಟಾದ ಒಡಕೇ ಬಿಜೆಪಿಗೆ ಮೇಲುಗೈ ಸಾಧಿಸಲು ಅನುವು ಮಾಡಿಕೊಟ್ಟಿತು. ಅಂತಿಮವಾಗಿ ಬಿಜೆಪಿಯು ಎನ್‌ಡಿಪಿಪಿ ಯೊಂದಿಗೇ ಗಟ್ಟಿಯಾಗಿ ಉಳಿದುಕೊಂಡಿತಲ್ಲದೆ ಇತರ ಸಣ್ಣಪುಟ್ಟ ಪಕ್ಷಗಳನ್ನು ಒಟ್ಟುಗೂಡಿಸಿ ಸರ್ಕಾರವನ್ನು ರಚಿಸಲು ಬೇಕಾದಷ್ಟು ಸಂಖ್ಯೆಯನ್ನು ಒಟ್ಟುಮಾಡಿತು. ಎಲ್ಲಾ ಪಕ್ಷಗಳ ಶಾಸಕರೂ ಆಳುವ ಕೂಟವನ್ನು ಸೇರಿಕೊಂಡು ವಿರೋಧ ಪಕ್ಷವೇ ಇಲ್ಲದಂತಾಗಿದ್ದ ಇತ್ತೀಚಿನ ಇತಿಹಾಸವನ್ನು ಹೊಂದಿರುವ ನಾಗಾಲ್ಯಾಂಡಿನಲ್ಲಿ ಇನ್ನು ಸ್ವಲ್ಪ ಸಮಯದಲ್ಲೇ ಎನ್‌ಪಿಎಫ್‌ನಲ್ಲಿ ಮತ್ತೊಂದು ವಿಭಜನೆಯಾಗಿ ಭಿನ್ನಮತೀಯರು ಆಳುವ ಕೂಟವನ್ನು ಸೇರಿಕೊಂಡರೆ ಆಶ್ಚರ್ಯವಿಲ್ಲ. ನಾಗಾಲ್ಯಾಂಡಿನಲ್ಲಿ ಅಧಿಕಾರ ದಾಹವೇ ಭಿನ್ನಭಿನ್ನ ರಾಜಕೀಯ ಶಕ್ತಿಗಳನ್ನು ಒಂದುಗೂಡಿಸುವ ಅಂಟಾಗಿದೆ.

ಹೀಗಾಗಿ ಈಶಾನ್ಯ ಭಾರತದ ಈ ಮೂರು ರಾಜ್ಯಗಳ ಚುನಾವಣೆಗಳಿಂದ ಉಳಿದ ಭಾರತವು ಯಾವ ಪಾಠಗಳನ್ನು ಕಲಿಯಬಹುದು? ಮೊದಲನೆಯದಾಗಿ, ತ್ರಿಪುರಾದ ಫಲಿತಾಂಶವು ಇತರ ಎರಡು ರಾಜ್ಯಗಳ ರಾಜಕೀಯ ವಾಸ್ತವಗಳನ್ನು ಪ್ರತಿಫಲಿಸುವುದಿಲ್ಲ. ಬಿಜೆಪಿಯು ತ್ರಿಪುರಾದಲ್ಲಿ ಗೆದ್ದಿದ್ದರೂ ಉಳಿದೆರಡು ರಾಜ್ಯಗಳಲ್ಲಿ ಅದು ಅಲ್ಲಿಯ ಪ್ರಾದೇಶಿಕ ಪಕ್ಷಗಳನ್ನು ಆಧರಿಸಿದೆ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಯು ತನ್ನ ಸ್ವಂತ ಬಲದಲ್ಲಿ ಅಧಿಕಾರ ರಚಿಸುವ ಸಾಧ್ಯತೆಯಂತೂ ಸದ್ಯಕ್ಕಿಲ್ಲ. ಎರಡನೆಯದಾಗಿ ತನ್ನನ್ನು ತಾನು ಇತರರಿಗಿಂತ ಭಿನ್ನ ಪಕ್ಷವೆಂದು ತೋರ್ಪಡಿಸಿಕೊಳ್ಳುವ ಬಿಜೆಪಿ ಪಕ್ಷವು ತಾನು ನಿರಂತರವಾಗಿ ವಿರೋಧಿಸುತ್ತಲೇ ಬಂದಿರುವ ಕಾಂಗ್ರೆಸ್ಸಿಗಿಂತ ಯಾವ ರೀತಿಯಿಂದಲೂ ಭಿನ್ನವಿಲ್ಲ. ಅಧಿಕಾರ ಪಡೆಯಲು ಏನು ಬೇಕಾದರು ಮಾಡಬಹುದೆಂಬ ತತ್ವವನ್ನು ಎರಡೂ ಪಕ್ಷಗಳೂ ಪಾಲಿಸುತ್ತವೆ. ಮೂರನೆಯದಾಗಿ, ಕಾಂಗ್ರೆಸ್ಸಿನಂತೆ ಬಿಜೆಪಿಗೆ ಆ ರಾಜ್ಯಗಳಲ್ಲಿ ದುರಾಡಳಿತದ ಹಿನ್ನೆಲೆಯಿರದಿರುವುದರಿಂದ ಚುನಾವಣೆಯಲ್ಲಿ ಅಭಿವೃದ್ಧಿ ಮಂತ್ರವನ್ನು ಜನರಿಗೆ ದಾಟಿಸಲು ಸಾಧ್ಯವಾಯಿತು. ಆದರೆ ಅದು ಕೊಟ್ಟಿರುವ ಭರವಸೆಗಳನ್ನು ಈಡೇರಿಸಲು ಅಸಾಧ್ಯವಾಗಿದ್ದು ಸಾರ್ವತ್ರಿಕ ಚುನಾವಣೆ ನಡೆಯಲಿರುವ ಮುಂದೊಂದು ವರ್ಷದಲ್ಲಿ ಅದರ ಪೊಳ್ಳುತನ ಬಯಲಾಗಬಹುದಾಗಿದೆ. ಹಾಗೂ ಕೊನೆಯದಾಗಿ ನೇರಾನೇರಾ ಹಣಾಹಣಿ ನಡೆದ ಅಸ್ಸಾಂ ಮತ್ತು ತ್ರಿಪುರಾಗಳಂಥ ಕಡೆಗಳಲ್ಲಿ ಬಿಜೆಪಿಯು ಪ್ರಬಲವಾದ ಪ್ರತಿಸ್ಪರ್ಧಿಯೆಂಬುದು ನಿಜವೇ ಆದರೂ ಉಳಿದ ಕಡೆಗಳಲ್ಲಿ ಅದು ಅಧಿಕಾರವೆಂಬ ಅಯಸ್ಕಾಂತವನ್ನು ಮುಂದೊಡ್ಡಿ ಪರಸ್ಪರ ತದ್ವಿರುದ್ಧವಾದ ಶಕ್ತಿಗಳನ್ನು ಒಟ್ಟುಗೂಡಿಸುವ ತಂತ್ರೋಪಾಯಗಳ ಮೂಲಕ ಮಾತ್ರವೇ ಗೆಲ್ಲುತ್ತಿದೆ. 

  ಕೃಪೆ: Economic and Political Weekly,Mar 10,  2018. Vol. 53. No.10
                                                                                                                
 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )