ಮಂಗಳವಾರ, ಜನವರಿ 23, 2018

ಸಮಸ್ಯೆ ಇರುವುದು ಸುಪ್ರೀಂ ಕೋರ್ಟಿನಲ್ಲಿ ಮಾತ್ರವಲ್ಲ

Image result for suprim court delhi
 ಅನು: ಶಿವಸುಂದರ್ 
ಸುಪ್ರೀಂಕೋರ್ಟನ್ನು ಒಳಗೊಂಡಂತೆ ಪ್ರಜಾತಂತ್ರದ ಹಲವಾರು ಸಂಸ್ಥೆಗಳು ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿವೆ.

ಸುಪ್ರೀಂ ಕೋರ್ಟಿನಲ್ಲಿ ಕಳೆದ ವಾರ ನಡೆದ ಘಟನೆಗಳು ಖಂಡಿತಾ ಸಣ್ಣ ಸಂಗತಿಯಲ್ಲ. ಅಥವಾ ಒಂದು ಕುಟುಂಬದೊಳಗಿನ ತಕರಾರೂ ಅಲ್ಲ. ೨೦೧೮ರ ಜನವರಿ ೧೨ರಂದು ಸುಪ್ರೀಂಕೋರ್ಟಿನ ನಾಲ್ವರು ಅತಿ ಹಿರಿಯ ನ್ಯಾಯಾಧೀಶರು ನವ ದೆಹಲಿಯಲ್ಲಿ ನಡೆಸಿದ ಪತ್ರಿಕಾ ಗೋಷ್ಟಿಯು ಹುಟ್ಟುಹಾಕಿದ ಚರ್ಚೆಗಳು ಯಾವ ಸಂಸ್ಥೆಯು ಪ್ರಶ್ನಾತೀತವೂ ಅಲ್ಲ ಅಥವಾ ಸುಧಾರಣೆಗೆ ಹೊರತಾದದ್ದೂ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಾಧೀಶರುಗಳಾದ ನ್ಯಾಯಮೂರ್ತಿ ಜೆ. ಚಲಮೇಶ್ವರ್, ರಂಜನ್ ಗೋಗೋಯ್, ಮದನ್ ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರುಗಳು ೨೦೧೭ರ ನವಂಬರ್‌ನಲ್ಲಿ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಬರೆದ ಪತ್ರವು ಅವರುಗಳ ನಡುವೆ ಇದ್ದ ಭಿನ್ನಾಭಿಪ್ರಾಯಗಳ ಸ್ವರೂಪದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುವುದಿಲ್ಲವಾದರೂ, ಈ ಭಿನ್ನಾಭಿಪ್ರಾಯಗಳು ಯಾವುದೋ ಒಂದು ವಿಷಯದ ಸುತ್ತ ಇಲ್ಲದೆ ಸರಣಿಯೋಪಾದಿಯಲ್ಲಿ ಘಟಿಸಿಸಿರುವ ಹಲವು ಸಂಗತಿಗಳ ಬಗೆಗೆ ಇದೆಯೆಂಬುದು ಈಗ ಸ್ಪಷ್ಟವಾಗಿದೆ. ಆದರೆ ಕಾರಣ-ಪರಿಣಾಮಗಳ ಬಗ್ಗೆ ಸಂಕುಚಿತ ಮತ್ತು ರೋಚಕ ಸಂಗತಿಗಳನ್ನು ವರದಿ ಮಾಡಲು ತುದಿಗಾಲಲ್ಲಿ ನಿಂತಿದ್ದ ಮಾಧ್ಯಮಗಳು ಮಾತ್ರ ಈ ವಿವಾದಕ್ಕೆ ಸಿಬಿಐ ನ್ಯಾಯಾಧೀಶರಾಗಿದ್ದ ಲೋಯಾ ಅವರ ಕೊಲೆಯ ವಿಚಾರಣೆಯನ್ನು ನಡೆಸಲು ನೇಮಿಸಲಾದ ಪೀಠದ ಬಗ್ಗೆ ಮುಖ್ಯ ನ್ಯಾಯಾಧೀಶರಿಗೂ ಮತ್ತು ನಾಲ್ವರು ಹಿರಿಯ ನ್ಯಾಯಾಧೀಶರಿಗೂ ನಡುವೆ ಏರ್ಪಟ್ಟ ಭಿನ್ನಭಿಪ್ರಾಯಗಳೇ ಕಾರಣವೆಂದು ಬಿತ್ತರಿಸಿದವು.

ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶರುಗಳು ಹೀಗೆ ಪತ್ರಿಕಾಗೋಷ್ಟಿಯನ್ನು ನಡೆಸಿರುವುದರ ಔಚಿತ್ಯದ ಬಗ್ಗೆ ಕೆಲವರು ಪ್ರಶ್ನೆಗಳನ್ನು ಎತ್ತಿದ್ದಾರಾದರೂ, ಭಾರತದ ನಾಗರಿಕರ ಪಾಲಿನ ಅಂತಿಮ ಆಸರೆಯಾಗಿರುವ ಈ ಸಂಸ್ಥೆಯ ನಡಾವಳಿಗಳಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಬರಬೇಕಿರುವುದು ಮಾತ್ರ ಅತ್ಯಂತ ಅಗತ್ಯವಾಗಿದೆ. ನಾಲ್ವರು ನ್ಯಾಯಾಧೀಶರು ಮುಖ್ಯ ನ್ಯಾಯಾಧೀಶರಿಗೆ ಬರೆದಿರುವ ಪತ್ರದಲ್ಲಿ ಎಳ್ಳು ಕಾಳಿನಷ್ಟು ಸತ್ಯಾಂಶವಿದ್ದರೂ ಸಹ ಅದು ಅತ್ಯಂತ ಗಂಭೀರವಾದ ಸಂಗತಿಯೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಮುಖ್ಯ ನ್ಯಾಯಾಧೀಶರು ರಾಜಕೀಯವಾಗಿ ಅತ್ಯಂತ ಸೂಕ್ಷವಾಗಿರುವ ಹಲವಾರು ಪ್ರಕರಣಗಳನ್ನು, ಪ್ರಾಯಶಃ ಒಂದು ನಿರ್ದಿಷ್ಟ ಆದೇಶವನ್ನು ಅಪೇಕ್ಷಿಸುತ್ತಾ, ಉದ್ದೇಶಪೂರ್ವಕವಾಗಿ ಕೆಲವು ನಿರ್ದಿಷ್ಟ ಪೀಠಗಳಿಗೆ ವಹಿಸುತ್ತಿದ್ದಾರೆ ಎಂಬುದು ಆ ನಾಲ್ವರು ಹಿರಿಯ ನ್ಯಾಯಾಧೀಶರು ತಮ್ಮ ಪತ್ರದಲ್ಲಿ ಎತ್ತಿರುವ ಅತ್ಯಂತ ಗಂಭೀರವಾದ ವಿಷಯವಾಗಿದೆ. ಮುಖ್ಯ ನ್ಯಾಯಾಧೀಶರು ಪೀಠಗಳ ಹಂಚಿಕೆಯನ್ನು ನಿರ್ವಹಣೆ ಮಾಡುವಾಗ (ರೋಸ್ಟರ್)ಒಂದು ಸರಿಯಾದ ನೀತಿ ಮತ್ತು ನಿಯಮಗಳನ್ನು ಅನುಸರಿಸುವ ಅಗತ್ಯವನ್ನು ಈ ನಾಲ್ವರು ಹಿರಿಯರು ಒತ್ತಿಹೇಳಿದ್ದಾರೆ.  ನ್ಯಾಯಾಧೀಶರುಗಳು ಹಾಗೆ ನಿಯಮವನ್ನು ಪಾಲಿಸದಿದ್ದಲ್ಲಿ  ಈ ಸಂಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಜನತೆಯಲ್ಲಿ ಸಂದೇಹಗಳು ಹುಟ್ಟುಕೊಂಡು ಅನಗತ್ಯವಾದ ಮತ್ತು ಅನಪೇಕ್ಷಿತ ಹಾಗೂ ಅಹಿತವಾದ ಪರಿಣಾಮಗಳಿಗೆ ದಾರಿಮಾಡಕೊಡಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟುಮಾತ್ರವಲ್ಲ ಪೀಠ ಹಂಚಿಕೆಯಲ್ಲಿ ಯಾವುದೇ ನಿಯಮವನ್ನು ಪಾಲಿಸದ ಕಾರಣ ಮತ್ತು ಈವರೆಗೆ ಅನುಸರಿಸಿಕೊಂಡು ಬಂದ ಪದ್ಧತಿಯನ್ನು ಪಾಲಿಸದ ಕಾರಣ ಈಗಾಗಲೇ ಈ ಸಂಸ್ಥೆಯ ಘನತೆಗೆ ಒಂದಷ್ಟು ಹಾನಿಯಾಗಿದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ. ಮುಖ್ಯನ್ಯಾಯಾಧೀಶರು ಮತ್ತು ನಂತರದ ಹಿರಿಯ ನಾಲ್ವರು ನ್ಯಾಯಾಧೀಶರುಗಳ ನಡುವೆ ಮುರಿದು ಬಿದ್ದಿರುವ ವಿಶ್ವಾಸವು ಹೇಗೆ ಮತ್ತೆ ಸರಿಯಾಗಬಲ್ಲದು ಎಂಬುದನ್ನು ಕಾದುನೋಡಬೇಕಿದೆ. ಈ ಎಲ್ಲಾ ವಿವರಗಳಿಗಿಂತ ಅತ್ಯಂತ ಮುಖ್ಯವಾದ ಸಂಗತಿಯೆಂದರೆ ಈ ವಿವಾದವು ಬಗೆಹರಿಯುವುದು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮತ್ತು ಸಂಸ್ಥೆಯ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದದ್ದಾಗಿದೆ. ಈ ಸಂಸ್ಥೆಯ ವಿಶ್ವಾಸಾರ್ಹತೆಗೆ ಕುಂದು ಉಂಟಾದರೆ ಅದು ಈ ನೆಲದಲ್ಲಿ ಪ್ರಜಾಸತ್ತೆಗೆ ಒಂದು ದೊಡ್ಡ ಹೊಡೆತವನ್ನು ಕೊಟ್ಟಂತಾಗುತ್ತದೆ ಎಂದು ನ್ಯಾಯಮೂರ್ತಿ ಚಲಮೇಶ್ವರ್ ಅವರು ಆ ಪತ್ರಿಕಾಗೊಷ್ಟಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಆದರೂ ಈಗ ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ಎದುರಿಸುತ್ತಿರುವುದು ಕೇವಲ ಸುಪ್ರೀಂ ಕೋರ್ಟು ಮಾತ್ರವಲ್ಲ. ಬದಲಿಗೆ ಪ್ರಜಾಸತ್ತೆಯ ಎಲ್ಲಾ ಸಂಸ್ಥೆಗಳು ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿವೆ. 

ಉದಾಹರಣೆಗೆ ಶಾಸಕಾಂಗವನ್ನು ತೆಗೆದುಕೊಳ್ಳಿ. ಕಾಲಕಳೆದಂತೆ ಶಾಸನಗಳನ್ನು ಚರ್ಚೆ ಮಾಡಬೇಕಾದ ವೇದಿಕೆಯಾದ ಸಂಸತ್ತಿನಲ್ಲಿ ಅಂಥದ್ದೇನೂ ನಡೆಯುತ್ತಿಲ್ಲ. ಇತ್ತೀಚೆಗೆ ಕೇವಲ ೧೫ ದಿನಗಳ ಕಾಲ ನಡೆದು ಮುಕ್ತಾಯವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಯಾವ ಮುಖ್ಯ ಶಾಸನಗಳ ಬಗ್ಗೆಯೂ ಗಂಭೀರವಾದ ಚರ್ಚೆಯೇ ನಡೆಯಲಿಲ್ಲ. ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣಾ ಮಸೂದೆ-೨೦೧೭ರ ಬಗ್ಗೆಯೂ ಲೋಕಸಭೆಯಲ್ಲಿ ತರಾತುರಿ ಚರ್ಚೆಗಳು ನಡೆದು ಈಗ ಆ ಮಸೂದೆಯು ರಾಜ್ಯಸಭೆಯಲ್ಲಿದೆ. ಸಂಸತ್ತಿನಲ್ಲಿ  ಈಗ ಇದೊಂದು ರೂಢಿಗತವಾದ ಪದ್ಧತಿಯೇ ಆಗಿಬಿಟ್ಟಿದೆ. ದೇಶದ ತೆರಿಗೆದಾರರ ಹಣದಲ್ಲಿ ಪಗಾರ ಪಡೆಯುವ ಇಂಥಾ ಸಂಸತ್ತಿನಲ್ಲಿ ಜನತೆಯ ಬದುಕನ್ನು ಪ್ರಭಾವಿಸುವ ವಿಷಯಗಳ ಬಗ್ಗೆ ಚರ್ಚೆಯೇ ನಡೆಯದೇ ಹೋದರೆ ಇಂಥಾ ಸಂಸ್ಥೆಗಳು ಜನರಿಗೆ ಎಷ್ಟರ ಮಟ್ಟಿಗೆ ಪ್ರಯೋಜನಕಾರಿಯಾಗುತ್ತವೆ?

ಒಂದು ಸಂಸದೀಯ ಪ್ರಜಾತಂತ್ರದಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗವನ್ನು ಹೊರತುಪಡಿಸಿದರೆ ಕಾರ್ಯಾಂಗವು ಶಾಸಕಾಂಗಕ್ಕೆ ಉತ್ತರದಾಯಿತ್ವವನ್ನು ಹೊಂದಿರಬೇಕೆಂದು ನಿರೀಕ್ಷಿಸಲಾಗಿದೆ. ಆದರೆ ಹಾಲೀ ಸರ್ಕಾರವು ಈ ಅಡ್ಡಿಯನ್ನು ನಿವಾರಿಸಿಕೊಳ್ಳಲು ಅಡ್ಡದಾರಿಯನ್ನು ಹುಡುಕಿಕೊಂಡಿದೆ. ತನಗೆ ಒಂದು ಕಾನೂನನ್ನು ಜಾರಿಗೆ ತರಬೇಕೆಂದಾಗ ಅದು ಹಣಕಾಸೇತರ ವಿಷಯವಾದರೂ ಅದನ್ನು ಹಣಕಾಸು ಮಸೂದೆಯೊಳಗೆ ಸೇರಿಸುವ ಮೂಲಕ  ರಾಜ್ಯಸಭೆಯ ಅನುಮೋದನೆಯ ಅಗತ್ಯವಿಲ್ಲದಂತೆ ಮಾಡಿಕೊಂಡು ಜಾರಿಗೆ ತಂದುಬಿಡುವ ಹುನ್ನಾರವನ್ನು ಮಾಡುತ್ತಿದೆ. ಒಂದು ಮಸೂದೆಯನ್ನು ಅನುಮೋದಿಸುವ ಅಥವಾ ತಿರಸ್ಕರಿಸುವ ಚುನಾಯಿತ ಪ್ರತಿನಿಧಿಗಳ ಹಕ್ಕನ್ನೇ ಕಸಿದುಬಿಡುವ ಇಂಥಾ ಬೇಜವಾಬ್ದಾರಿ ವರ್ತನೆಗಳನ್ನು ಈ ಹಿಂದಿನ ಸರ್ಕಾರಗಳು ಅದನ್ನೇ ಮಾಡುತ್ತಿದ್ದವು ಎನ್ನುತ್ತಾ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೋರ್ಟಿನ ಹಿಂದಿನ ಆದೇಶಗಳು ಮತ್ತು ಅದೇ ಕಾನೂನಿನ ಕೆಲವು ಅಂಶಗಳು ಬಲಾತ್ಕಾರವಾಗಿ ಆಧಾರ್ ಅನ್ನು ಹೇರುವುದನ್ನು ನಿಷೇಧಿಸಿದ್ದರೂ ಸರ್ಕಾರವು ಆಧಾರ್ ಅನ್ನು ಜನರ ಮೇಲೆ ಹೇರುತ್ತಾ ಹೋದದ್ದನ್ನು ಸಂಸತ್ತಾಗಲೀ ಸುಪ್ರೀಂ ಕೋರ್ಟಾಗಲೀ ಪರಿಗಣಿಸಲಿಲ್ಲ ಎಂಬುದನ್ನು ಇಲ್ಲಿ ಮರೆಯಲಾಗದು.

ಇನ್ನು ಪ್ರಜಾಸತ್ತೆಯ ನಾಲ್ಕನೆಯ ಸ್ತಂಭವೆಂದು ಪರಿಗಣಿಸಲ್ಪಡುವ ನಮ್ಮ ತಥಾಕಥಿತ ಮುಕ್ತ ಮಾಧ್ಯಮ. ಪ್ರಾಯಶಃ ಇಂದು ಭಾರತದ ರಾಜಕೀಯ ವಾಗ್ವಾದಗಳ ಘನತೆಯು ಪಾತಾಳಕ್ಕೆ ಕುಸಿದಿದ್ದರೆ ಅದಕ್ಕೆ ಅತಿಮುಖ್ಯ ಕಾರಣ ಈ ಮಾಧ್ಯಮಗಳೇ. ಪ್ರತಿಯೊಂದು ಸಂಕೀರ್ಣ ವಿಷಯವನ್ನು ಮಾಧ್ಯಮಗಳು ಅತ್ಯಂತ ಸರಳೀಕೃತಗೊಳಿಸಿ ತಪ್ಪು-ಒಪ್ಪೆಂಬ ರೀತಿಯಲ್ಲಿ ಮುಖಾಮುಖಿಗೊಳಿಸುತ್ತವೆ. ಅವೆರಡರ ಮಧ್ಯೆ ನಡುವೆ ಯಾವ ಸಮ್ವಾದಕ್ಕೂ ಜಾಗವೇ ಇರುವುದಿಲ್ಲ. ಮತ್ತು ತಾನೇ ಕಲ್ಪಿಸಿ ಹುಟ್ಟಿಹಾಕುವ ವಿವಾದಗಳನ್ನು ತಾನೇ ಬಗೆಹರಿಸುವ ಅಂತಿಮ ನ್ಯಾಯಾಧೀಶರ ಸ್ಥಾನವನ್ನೂ ಸಹ ಮಾಧ್ಯಮವು ತನಗೇ ತಾನೇ ಆರೋಪಿಸಿಕೊಂಡಿದೆ. ಇಂಥಾ ಮಾದರಿಗಳಿಗೆ ಭಿನ್ನವಾದ ಒಂದೆರೆಡು ಅಪವಾದಗಳಿರುವುದರಿಂದಲೇ ಅಧಿಕಾರಸ್ಥರೂ ಕೂಡಾ ಆಗೀಗ ಉತ್ತರದಾಯಿಗಳಾಗಲೇ ಬೇಕಾದ ಅನಿವಾರ್ಯತೆ ಹುಟ್ಟುತ್ತಿದೆ. ಆದರೆ ಅಂಥ ಪ್ರಕರಣಗಳು ತೀರಾ ಅಪರೂಪವೇ ಆಗಿಬಿಡುತ್ತಿದೆ. 

ಇತ್ತೀಚಿನವರೆಗೆ ತನ್ನ ಸ್ವತಂತ್ರ ತೀರ್ಮಾನಗಳಿಂದ ಜನರ ವಿಶ್ವಾಸಗಳಿಸಿಕೊಂಡಿದ್ದ ಚುನಾವಣಾ ಅಯೋಗವೂ ಸಹ ಗುಜರಾತಿನಲ್ಲಿ ಚುನಾವಣೆಯನ್ನು ನಡೆಸಲು ತಡಮಾಡಲು ಒಪ್ಪಿಕೊಂಡಂಥ ತನ್ನ ಇತ್ತೀಚಿನ ಹಲವು ನಿರ್ಣಯಗಳ ಮೂಲಕ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಚುನಾವಣ ಆಯೋಗದ ಈ ಕ್ರಮವು ಸರಕು ಮತ್ತು ಸೇವಾ ತೆರಿಗೆಯಲ್ಲಿ ಕೆಲವು ಬದಲಾವಣೆಗಳನ್ನು ತರುವ ಮೂಲಕ ತನ್ನ ಸಾಂಪ್ರದಾಯಿಕ ಬೆಂಬಲಿಗರಾದ ವರ್ತಕರ ಬೆಂಬಲವನ್ನು ಮರುಗಳಿಸಿಕೊಳ್ಳಲು ಆಳುವ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿತು.

ಸುಪ್ರೀಂ ಕೋರ್ಟು ಈಗ ಎದುರಿಸುತ್ತಿರುವ ಬಿಕ್ಕಟ್ಟು ಈ ದೇಶದ ಪ್ರಜಾಸತ್ತೆಯ ಉಳಿವಿಗೇ ಆತಂಕವನ್ನು ಉಂಟುಮಾಡಿರುವುದು ಖಂಡಿತಾ ನಿಜ.  ಆದರೂ ಪ್ರಜಾಸತ್ತೆಂi ಇತರ ಸಂಸ್ಥೆಗಳಲ್ಲಿ ನಿಧಾನವಾಗಿ ಸಂಭವಿಸುತ್ತಿರುವ  ವಿಶ್ವಾಸಾರ್ಹತೆಯ ಅಧಃಪತನಗಳು ಸಹ ಪ್ರಜಾಸತ್ತೆಗೆ ಉಳಿವಿಗೆ ಗಂಭೀರವಾದ ಸವಾಲನ್ನು ಒಡ್ಡಿವೆಯೆಂಬುದೂ ಸಹ ಅಷ್ಟೇ ನಿಜ. 

 ಕೃಪೆ: Economic and Political Weekly,Jan 20,  2018. Vol. 53. No. 3
 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )






ಸೇನಾತ್ಮಕ ರಾಷ್ಟ್ರವಾದವನ್ನು ವಿರೋಧಿಸಬೇಕು


  ಅನು: ಶಿವಸುಂದರ್ 
Image result for zionism

ಜಿಯೋನಿಸಂ (ಯೆಹೂದಿಗಳ ಪ್ರತ್ಯೇಕ ರಾಷ್ಟ್ರವಾದ) ಎಂಬುದು ಯೆಹೂದಿ ಧರ್ಮವನ್ನಾಗಲೀ ಹಿಂದೂತ್ವ ಎಂಬುದು ಹಿಂದೂಧರ್ಮವನ್ನಾಗಲೀ ಪ್ರತಿನಿಧಿಸುವುದಿಲ್ಲ ಎಂಬುದನ್ನು ನಾವು ಮರೆಯಬಾರದು.

ಎರಡನೆ ಪ್ರಪಂಚ ಯುದ್ಧದ ನಂತರ ಅಮೆರಿಕ ಮತ್ತು ರಷ್ಯಾಗಳ ನಡುವೆ ದೀರ್ಘಕಾಲ ಶೀತಲ ಸಮರ ನಡೆಯಿತು. ಆದರೆ ೧೯೯೧ರಲ್ಲಿ ಸೋವಿಯತ್ ಒಕ್ಕೂಟದ ಪತನದೊಂದಿಗೆ ಈ ಯುದ್ಧದಲ್ಲಿ ಅಮೆರಿಕ ವಿಜಯವನ್ನು ಗಳಿಸಿತು ಮತ್ತು ಅದು ಹಲವಾರು ಅಂತರರಾಷ್ಟ್ರೀಯ ಪರಿಣಾಮಗಳಿಗೆ ದಾರಿ ಮಾಡಿತು. ೧೯೯೨ರಲ್ಲಿ ಭಾರತವು ಇಸ್ರೇಲ್‌ನೊಂದಿಗೆ ಕಡಿತಗೊಡಿಸಿಕೊಂಡಿದ್ದ ರಾಜತಾಂತ್ರಿಕ ಸಂಬಂಧವು ಮರುಸ್ಥಾಪನೆಗೊಂಡಿತು. ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧವು ಸ್ಥಾಪನೆಗೊಂಡ  ೨೫ ವರ್ಷಗಳ ನಂತರ ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಅವರು ಭಾರತಕ್ಕೆ ಇದೇ ಜನವರಿ ೧೪ರಿಂದ ೧೯ರವರೆಗೆ ವರೆಗೆ ಅಧಿಕೃತ ಭೇಟಿ ನೀಡಿದರು. ಕಳೆದ ವರ್ಷ ಜುಲೈ ೪-೬ರವರೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್‌ಗೆ ಭೇಟಿ ನೀಡಿದ್ದರು. ಬ್ರಿಟಿಷ್ ವಸಾಹತುಶಾಹಿಗಳು ೧೯೧೭ರಲ್ಲಿ ಪ್ಯಾಲೆಸ್ತೇನಿನಲ್ಲಿ ಪ್ರತ್ಯೇಕ ಯೆಹೂದಿ ರಾಷ್ಟ್ರದ ನಿರ್ಮಾಣ ಮಾಡುವುದಾಗಿ ಜಿಯೋನಿಸ್ಟ್‌ಗಳಿಗೆ (ಯೆಹೂದಿ ಪ್ರತ್ಯೇಕ ರಾಷ್ಟ್ರವಾದಿಗಳು)ಭರವಸೆ ನೀಡುತ್ತ ಮಾಡಿದ ಬೆಲ್ಫೋರ್ ಘೋಷಣೆಗೆ ೨೦೧೭ಕ್ಕೆ ೧೦೦ ವರ್ಷ ತುಂಬಿದ ನೆನಪು ಸಹ ಮೋದಿಯವರ ಇಸ್ರೇಲ್ ಭೇಟಿಗೆ ಹಿನ್ನೆಲೆಯನ್ನು ಒದಗಿಸಿತ್ತು. ೧೯೪೮ರ ಮೇ ೧೪ರಂದು ಜಿಯೋನಿಸ್ಟರ ನಾಯಕತ್ವದಲ್ಲಿ ಮಾಡಲಾದ ಪ್ರತ್ಯೇಕ ಇಸ್ರೇಲ್ ಘೊಷಣೆಗೆ ಈಗ ೭೦ ವರ್ಷವಾಗುತ್ತದೆ. ಆಗ ಜಗತ್ತಿನಲ್ಲಿ ವಸಾಹತುಶಾಹಿ ಆಳ್ವಿಕೆಯ ಸಾಮೂಹಿಕ ಕಹಿ ನೆನಪು ಎಲ್ಲರಲ್ಲೂ ಬಲವಾಗಿತ್ತು. ಆ ನೆಹರೂ ಯುಗದಲ್ಲಿ ಇಸ್ರೇಲಿನ ನಿರ್ಮಾಣಕ್ಕಾಗಿ ಸ್ಥಳೀಯ ಪ್ಯಾಲೆಸ್ತೀನಿಯನ್ನರನ್ನು ಬರ್ಬರ ದಮನದ ಮೂಲಕ ತಾಯ್ನೆಲದಿಂದ ಎತ್ತಂಗಡಿ ಮಾಡಿದ ಕ್ರಮವನ್ನು ಭಾರತವು ಅಧಿಕೃತವಾಗಿ ಗಮನಕ್ಕೆ ತೆಗೆದುಕೊಂಡಿತ್ತು.

ಜಿಯೋನಿಸಂ (ಪ್ರತ್ಯೇಕ ಯೆಹೂದಿ ರಾಷ್ಟ್ರವಾದ) ಎಂದರೇನೆಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ- ಜಿಯೋನಿಸಂ ಎಂಬುದು ಒಂದು ವಸಾಹತುಶಾಹಿ ಮತ್ತು ಜನಾಂಗೀಯವಾದಿ ಸಿದ್ದಾಂತವಾಗಿದ್ದು ಸ್ಥಳೀಯ ಅರಬ್ ಜನರನ್ನು ಬಲಾತ್ಕಾರದಿಂದ ಎತ್ತಂಗಡಿ ಮಾಡುವುದನ್ನೂ ಹಾಗೂ ಅರಬ್ ಜನರ ಮಾನವ ಹಕ್ಕುಗಳ ಹರಣವನ್ನು ಸಮರ್ಥಿಸಿಕೊಳ್ಳುತ್ತದೆ. ಹೀಗಾಗಿ ಜಿಯೋನಿಸಂ ಅನ್ನು ವಿರೋಧಿಸುವುದೆಂದರೆ ಯೆಹೂದಿಗಳನ್ನು ವಿರೋಧಿಸಿದಂತೇನಲ್ಲ; ಅಥವಾ ಯೆಹೂದಿ ವಿರೋಧ ವಾದವೂ (ಆಂಟಿ-ಸೆಮಿಟಿಸಂ) ಅಲ್ಲ. ತಾನು ಪ್ಯಾಲೆಸ್ತೀನಿಯನ್ನರ ವಿರುದ್ಧ ನಡೆಸುತ್ತಿರುವ ಎಲ್ಲಾ ಕ್ರೂರ ಕಾರ್ಯಾಚರಣೆಗಳನ್ನು ವಿಶ್ವದ ಎಲ್ಲಾ ಯೆಹೂದಿಗಳ ಹಿತಾಸಕ್ತಿಯಿಂದಲೇ ನಡೆಸುತ್ತಿದ್ದೇನೆ ಎಂದು ಸಮರ್ಥಿಸಿಕೊಳ್ಳುವ ಮೂಲಕ ಇಸ್ರೇಲ್ ವಿಶ್ವದ ಎಲ್ಲಾ ಯೆಹೂದಿಗಳಿಗೂ ಆತಂಕವನ್ನು ಹುಟ್ಟುಹಾಕಿದೆ. ಜಿಯೋನಿಸ್ಟರ ನೇತ್ರೂತ್ವದ ಇಸ್ರೇಲ್ ಪ್ಯಾಲೇಸ್ತೀನ್ ಅನ್ನು ಬಲಾತ್ಕಾರದಿಂದ ವಶಪಡಿಸಿಕೊಡಿರುವ ದುರಾಕ್ರಮಿಯಾಗಿದೆ. ಇಸ್ರೇಲ್‌ನ ಪ್ರಭುತ್ವ ಪ್ಯಾಲೆಸ್ತೀನಿಯರನ್ನು ಸಮಾನ ನಾಗರಿಕರೆಂದು ಪರಿಗಣಿಸಲು ನಿರಾಕರಿಸುತ್ತದೆ. ಹೀಗಾಗಿ ಇಸ್ರೇಲ್ ಉಪ ಸಾಮ್ರಾಜ್ಯಶಾಹಿಯ ವಿರುದ್ಧ ಪ್ಯಾಲೆಸ್ತೀನಿಯರು ನಡೆಸುತ್ತಿರುವ ವಿಮೋಚನಾ ಹೋರಾಟವು ಸಾಮ್ರಾಜ್ಯಶಾಹಿಗಳ ವಿರುದ್ಧ ಮತ್ತು ಅವರೊಡನೆ ಕೈಗೂಡಿಸಿರುವ ಪ್ರತಿಗಾಮಿ ಅರಬ್ ಶಕ್ತಿಗಳ ವಿರುದ್ಧ ನಡೆಯುತ್ತಿರುವ ಹೋರಾಟಗಳ ಭಾಗವೇ ಆಗಿದೆ. ಅಮೆರಿಕದ ಬೆಂಬಲದೊಂದಿಗೆ ೧೯೪೮, ೧೯೬೭ ಮತ್ತು ೧೯೭೩ರಲ್ಲಿ ನಡೆಸಿದ ಯುದ್ಧಗಳ ಮೂಲಕ ಈಗ ಇಸ್ರೇಲ್ ಜೋರ್ಡಾನ್ ನದಿಯ ಪಶ್ಚಿಮ ಭಾಗಕ್ಕಿರುವ ಇಡೀ ಪ್ರದೇಶವನ್ನು ವಶಪಡಿಸಿಕೊಂಡಿದೆ. ಅಷ್ಟು ಮಾತ್ರವಲ್ಲದೆ, ಅದು ಪ್ಯಲೆಸ್ತೀನಿಯರನ್ನು ಅತ್ಯಂತ ಬರ್ಬರವಾಗಿ ನಿಯಂತ್ರಿಸುತ್ತಾ ಅಧೀನರನ್ನಾಗಿಸಿಕೊಂಡಿದೆ. ಪ್ಯಲೆಸ್ತೀನಿಯರು ತಮ್ಮದೇ ಪ್ರದೇಶಗಳಲ್ಲಿ ಓಡಾಡುವುದಕ್ಕೂ ನಿರ್ಬಂಧವನ್ನು ಹೇರಿದೆ.

 ವಾಸ್ತವವಾಗಿ ನೆಹರೂ ನಂತರದ ಭಾರತದ ರಾಜಕಾರಣಿಗಳು ಬಾಯಲ್ಲಿ ಏನೇ ಮಾತನಾಡಿದರೂ ಅವರ ಅಸಲಿ ಚಹರೆಯೇನೆಂಬುದು ೧೯೯೧ರ ನಂತರದಲ್ಲಿ ಸ್ಪಷ್ಟವಾಗಿ ಬಯಲಾಗುತ್ತಾ ಹೋಯಿತು. ವಾಸ್ತವವಾಗಿ ೧೯೯೧ರಲ್ಲಿ ವಿಶ್ವಸಂಸ್ಥೆಯು ಜಿಯೋನಿಸಂ ಅನ್ನು ಜನಾಂಗೀಯವಾದಕ್ಕೆ ಸಮೀಕರಿಸಿ ಒಂದು ನಿರ್ಣಯವನ್ನು ಪ್ರಸ್ತಾಪ ಮಾಡಿತ್ತು. ೧೯೭೦ರ ಮಧ್ಯಭಾಗದಲ್ಲಿ ವಿಶ್ವಸಂಸ್ಥೆಯು ಮಾಡಿದ ಇಂಥದ್ದೇ ನಿರ್ಣಾಯವನ್ನು ಭಾರತ ಬೆಂಬಲಿಸಿತ್ತು. ಆದರೆ ೧೯೯೧ರಲ್ಲಿ ಮಾತ್ರ ಆ ನಿರ್ಣಯದ ವಿರುದ್ಧ ತನ್ನ ಮತ ಚಲಾಯಿಸಿತು. ಕಳೆದ ೨೫ ವರ್ಷದಲ್ಲಿ ಭಾರತವು ಇಸ್ರೇಲಿನೊಂದಿಗೆ ಪ್ರಧಾನವಾಗಿ ಸೈನಿಕ ಸಂಬಂಧವನ್ನು ಬೆಳೆಸಿಕೊಂಡಿದೆ. ಇಸ್ರೇಲಿನಿಂದ ಶಸ್ತ್ರಾಸ್ತ್ರಗಳನ್ನು ಕೊಂಡುಕೊಂಡಿರುವುದು ಮಾತ್ರವಲ್ಲದೆ ಅಂತರಿಕ ಬಂಡಾಯವನ್ನು ಹತ್ತಿಕ್ಕುವ ಮತ್ತು ನಾಗರಿಕರ ಮೇಲೆ ಬೇಹುಗಾರಿಕೆ ನಡೆಸುವಂಥ ಅಂತರಿಕ ಭದ್ರತೆಯ ವಿಷಯದಲ್ಲೂ ಇಸ್ರೇಲಿನ ಜೊತೆ ಸಮಾಲೋಚನೆ ಮತ್ತು ಸಹಕಾರಗಳನ್ನು ಪಡೆದುಕೊಂಡಿದೆ. ಇಸ್ರೇಲಿನ ಶಸ್ತ್ರಾಸ್ತ್ರ ಮಾರುಕಟ್ಟೆಗೆ ಭಾರತವು ಈಗ ಅತಿದೊಡ್ಡ ಮಾರುಕಟ್ಟೆಯಾಗಿದೆ. ’ಜೇನ್ಸ್ ಟೆರರರಿಸಂ ಅಂಡ್ ಸೆಕ್ಯುರಿಟಿ ಮಾನಿಟರ್’ ಎಂಬ ಪತ್ರಿಕೆಯ ಹಲವು ಸಂಚಿಕೆಗಳಲ್ಲಿ ವರದಿಯಾಗಿರುವಂತೆ ಭಾರತದ ಸೇನಾಧಿಕಾರಿಗಳು ಮತ್ತು ಗೂಢಚರ್ಯೆ ಸಿಬ್ಬಂದಿಗಳು ಪ್ಯಾಲೆಸ್ತೀನಿಯರನ್ನು ಹತ್ತಿಕ್ಕುವಲ್ಲಿ ಇಸ್ರೇಲಿ ಸೇನೆ ಮತ್ತು ಅವರ ಗೂಢಚರ್ಯೆ ಸಿಬ್ಬಂದಿ ಯಾವ ಪದ್ಧತಿಗಳನ್ನು ಬಳಸಿದರೋ ಅದೇ ಪದ್ಧತಿಗಳನ್ನು ಕಾಶ್ಮೀರಿ ಬಂಡಾಯವನ್ನು ಹತ್ತಿಕ್ಕುವಲ್ಲಿ ಬಳಸುವಂತೆ ಭಾರತದ ಭದ್ರತಾ ಸಿಬ್ಬಂದಿಗಳು  ತರಬೇತಿ ಪಡೆದಿದ್ದಾರೆ.

ನೇತಾನ್ಯಾಹು ಅವರ ಭೇಟಿಯ ಸಂದರ್ಭದಲ್ಲಿ ಯಾವುದೇ ಹೊಸ ರಕ್ಷಣಾ ಒಪ್ಪಂದ ಅಥವಾ ಯೋಜನೆಗಳು ಘೋಷಿತವಾಗದಿದ್ದರೂ ರಕ್ಷಣಾ ಉತ್ಪಾದನೆಯಲ್ಲಿ ಭಾರತವು ತನ್ನ ಭಾರತದಲ್ಲಿ ಉತ್ಪಾದಿಸಿ ಯೋಜನೆಯ ಭಾಗವಾಗಿ ಇಸ್ರೇಲಿನಿಂದ ತಂತ್ರಜ್ನಾನವನ್ನು ಪಡೆದುಕೊಳ್ಳಲು ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿತು (ಭಾರತ-ಇಸ್ರೇಲ್ ಜಂಟಿ ಹೇಳಿಕೆ, ಜನವರಿ ೧೫, ೨೦೧೮). ನಮ್ಮ ಸ್ವಂತ ರಕ್ಷಣಾ ತಂತ್ರಜ್ನಾನ ಮತ್ತು ಸಂಶೋಧನಾ ಕೇಂದ್ರಗಳು ಸ್ವದೇಶೀ ಶಸ್ತ್ರಾಸ್ತ್ರಗಳ ಉತ್ಪಾದನೆ ಮಾಡುವ ತನಕ ಕಾಯದ ಸರ್ಕಾರವು ಈಗಾಗಲೇ ಇಸ್ರೇಲಿನಿಂದ ಉನ್ನತೀಕರಿಸಿದ ರಫೇಲ್ ರಕ್ಷಣಾ ವ್ಯವಸ್ಥೆಯನ್ನು ಮತ್ತು ಟ್ಯಾಂಕ್ ಧಾಳಿ ನಿರೋಧಕ ದೂರ ನಿರ್ದೇಶಿತ ’ಸ್ಪೈಕ್’ ಅಸ್ತ್ರಗಳನ್ನು ಕೊಂಡುಕೊಳ್ಳಲು  ಒಲವನ್ನು ತೋರಿಸಿರುವುದರಿಂದ ಆ ನಿಟ್ಟಿನಲ್ಲಿ ಒಂದು ಅಂತರ್‌ಇಲಾಖಾ ಮಟ್ಟದ ಒಪ್ಪಂದವಾದರೂ ಆಶ್ಚರ್ಯ ಪಡಬೇಕಿಲ್ಲ. ಭಾರತದ ಸೇನೆಗಾಗಿ ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಯೋಜಿಸಿರುವ ಮಧ್ಯಮ ದೂರದ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳ ಉತ್ಪಾದನೆ, ಕಳೆದ ವರ್ಷ ಇಸ್ರೇಲ್ ವಾಯುಪಡೆ ಆಯೋಜಿಸಿದ ವಾಯುದಾಳಿ ಕವಾಯತಿನಲ್ಲಿ ಭಾರತದ ವಾಯುಪಡೆ ಭಾಗವಹಿಸಿದ್ದು, ಮತ್ತೀಗ  ಸಮಗ್ರ ಭಯೋತ್ಪಾದನಾ ನಿಗ್ರಹ ಸಹಕಾರದ ಒಪ್ಪಂದಗಳು- ಒಟ್ಟಿನಲ್ಲಿ ಪ್ರಖರ ಹಿಂದೂತ್ವವಾದಿಗಳ ಸರ್ಕಾರದ ನಾಯಕತ್ವದಲ್ಲಿ ಭಾರತ ಮತ್ತು ಇಸ್ರೇಲ್ ದೇಶಗಳ ನಡುವಿನ ಸೈನಿಕ ಮತ್ತು ವ್ಯೂಹಾತ್ಮಕ ಮೈತ್ರಿಯು ಹಿಂದೆಂದೂ ಇಲ್ಲದಷ್ಟು ತೀವ್ರಗತಿಯನ್ನು ಪಡೆದುಕೊಂಡಿದೆ. ಭಾರತದ ಹಿಂದೂತ್ವವಾದಿಗಳು ಜಿಯೋನಿಸ್ಟರ ಸೈನಿಕ ರಾಷ್ಟ್ರವಾದವನ್ನು ಬೆರಗಿನಿಂದ ಮೆಚ್ಚಿಕೊಂಡಿದ್ದಾರೆ.

ಆದರೆ ಈಗ ಒಂದು ಸಮಗ್ರ ಭಯೋತ್ಪಾದನಾ ನಿಗ್ರಹ ಸಹಕಾರ ಒಪ್ಪಂದ ವಾಗಿರುವ ಹಿನ್ನೆಲೆಯಲ್ಲಿ ಜಿಯೋನಿಸ್ಟರು ಹೇಗೆ ಪ್ಯಾಲೆಸ್ತೀನೀಯರನ್ನು ದಮನ ಮಾಡುತ್ತಿದ್ದಾರೋ ಅದೇ ರೀತಿಯಲ್ಲಿ ಭಾರತವು ಕಾಶ್ಮೀರಿಗಳ ಬಗ್ಗೆ ತನ್ನ ನೀತಿಯನ್ನು ಬದಲಿಸಿಕೊಳ್ಳುತ್ತದೆಯೇ? ಆದರೆ ಹೇಗೆ ಯೆಹೂದಿತನವನ್ನು ಜಿಯೋನಿಸಂ ಇಂದ ಬೇರ್ಪಡಿಸಿ ನೋಡಬೇಕೋ ಅದೇ ರೀತಿ ಹಿಂದೂಧರ್ಮವನ್ನು ಹಿಂದೂತ್ವದಿಂದ ಬೇರ್ಪಡಿಸಿ ನೋಡಬೇಕು. ಹಿಂದೂಧರ್ಮವು ಆಧ್ಯಾತ್ಮಿಕ ಮೋಕ್ಷವನು ಪಡೆದುಕೊಳ್ಳುವ ಉದ್ದೇಶದಿಂದ ಸಮ್ಮಿಳಿತವಾಗಿರುವ ವಿವಿಧ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಗಳಾಗಿದ್ದರೆ ಹಿಂದೂತ್ವ ಆನ್ನುವುದು ಒಂದು ಫ್ಯಾಸಿಸ್ಟ್ ಸಿದ್ಧಾಂತವಾಗಿದೆ. ಅದು ನಾಜೀವಾದದ ಭಾರತೀಯ ಮಾದರಿಯಾಗಿದೆ. ಹೇಗೆ ಜಿಯೋನಿಸಂ ಎಂಬುದು ಯೆಹೂದಿತನಕ್ಕೆ ತದ್ವಿರುದ್ಧವಾದ ಸಂಗತಿಯಾಗಿದೆಯೋ ಹಾಗೆ ಹಿಂದೂತ್ವವೂ ಸಹ ಹಿಂದೂಧರ್ಮದ ತದ್ವಿರುದ್ಧವಾದ ಸಂಗತಿಯಾಗಿದೆ. ಹೇಗೆ ಯೆಹೂದಿಗಳು ಜಿಯೋನಿಸ್ಟರು ತಮ್ಮನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳುವ ಅಗತ್ಯವಿದೆಯೋ ಅದೇ ರೀತಿ ಹಿಂದೂಗಳು ಸಹ ಹಿಂದೂತ್ವವಾದಿಗಳು ತಮ್ಮನ್ನು ಪ್ರತಿನಿಧಿಸುವುದಿಲ್ಲ ಎಂದು ಗಟ್ಟಿಯಾಗಿ ಹೇಳುವ ಅಗತ್ಯವಿದೆ. ಈ ಹೋರಾಟದಲ್ಲಿ ಹಿಂದೂಗಳು, ಯೆಹೂದಿಗಳು ಮತ್ತು ಮುಸ್ಲಿಮರು ಎಲ್ಲರೂ ಒಂದಾಗಿ ಮಾನವತೆ ಮತ್ತು ಪ್ಯಾಲೆಸ್ತೀನೀಯರ ಪರವಾಗಿ, ಮಾನವತೆ ಮತ್ತು ಕಾಶ್ಮೀರಿಗಳ ಪರವಾಗಿ ನಿಂತು ಯೆಹೂದಿಗಳ ಬಗ್ಗೆ, ಮುಸ್ಲಿಮರ ಬಗ್ಗೆ ಮತ್ತು ಪ್ಯಲೆಸ್ತೀನೀಯರ ಬಗ್ಗೆ ಇರುವ ಎಲ್ಲ ಪೂರ್ವಗ್ರಹಗಳನ್ನು ಮತ್ತು ಪ್ರತಿರೋಧಗಳನ್ನು ಕೊನೆಗಾಣಿಸಬೇಕಿದೆ.

  ಕೃಪೆ: Economic and Political Weekly, Jan 20,  2018. Vol. 53. No. 3
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )