ಬುಧವಾರ, ಏಪ್ರಿಲ್ 19, 2017

ಕಾಶ್ಮೀರವು ನೀಡಿರುವ ಸಂದೇಶ ಸ್ಪಷ್ಟವಾಗಿದೆ


  ಅನುಶಿವಸುಂದರ್
kashmir ಗೆ ಚಿತ್ರದ ಫಲಿತಾಂಶ


ಸಂಸತ್ ಉಪಚುನಾವಣೆಯ ಬಹಿಷ್ಕಾರವು ಭಾರತದ ಪ್ರಭುತ್ವದ ಬಗ್ಗೆ ಕಾಶ್ಮೀರಿಗಳು ಎಷ್ಟು  ಭ್ರಮನಿರಸನಗೊಂಡಿದ್ದಾರೆಂಬುದನ್ನು ತೋರಿಸುತ್ತದೆ.

ಕಾಶ್ಮೀರದ ಕಣಿವೆಯಲ್ಲಿ ನಡೆದ ಚುನಾವಣೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿರುವುದು ಅಲ್ಲಿನ ಜನರ ಬದಲಾಗುತ್ತಿರುವ ಮನೋಧರ್ಮಕ್ಕೆ ಸೂಚಕವೆಂದು ತುಂಬಾದಿನಗಳಿಂದ ಭಾರತೀಯರನ್ನು ನಂಬಿಸಿಕೊಂಡು ಬರಲಾಗಿದೆ. ನಾವೂ ಸಹ ಚುನಾವಣೆಯಲ್ಲಿ ಮತಹಾಕಿದವರ ಸಂಖ್ಯೆಯನ್ನು ಗಮನಿಸುತ್ತಿದ್ದೇವೆಯೇ ವಿನಃ ಮತವನ್ನು ಬಹಿಷ್ಕಾರ ಮಾಡಿದವರ ಸಂಖ್ಯೆಂiನ್ನು ಗಮನಿಸುತ್ತಿಲ್ಲ. ದಮನದ ತೀವ್ರತೆ ಎಷ್ಟೇ ಇದ್ದರೂ ಕಾಶ್ಮೀರಿಗಳು ಹೊರಬಂದು ತಮ್ಮ ಮತಗಳನ್ನು ಚಲಾಯಿಸುತ್ತಾರೆಂದು ನಮ್ಮನ್ನು ನಂಬಿಸಲಾಗಿತ್ತು.

ಆದರೆ ಏಪ್ರಿಲ್ ರಂದು ನಡೆದ ಶ್ರೀನಗರದ ಉಪಚುನಾವಣೆಯಲ್ಲಿ ದಾಖಲಾದ ಅತ್ಯಂತ ಕನಿಷ್ಟ- ಶೇ..೧೪ - ಮತದಾನ ಮತ್ತು ಅದೇ ದಿನ ನಡೆದ ಹಿಂಸಾಚಾರಗಳಲ್ಲಿ ಯುವ ಪ್ರತಿಭಟನಾಕಾರರು ಸತ್ತು ೨೦೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ನಿಜವಾದ ಕಥೆಯನ್ನು ಬಿಚ್ಚಿಟ್ಟಿದೆಭಾರತದ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಕಾಶ್ಮೀರಿಗಳು ಸಂಪೂರ್ಣವಾಗಿ ಭ್ರಮನಿರಸನಗೊಂಡಿದ್ದಾರೆಂಬುದನ್ನು ಇದು ಸಾಬೀತುಪಡಿಸುತ್ತದೆ.

ಇಲ್ಲಿ ಮತ್ತೊಂದು ವಿಷಯವನ್ನು ನಾವು ಸ್ಪಷ್ಟವಾಗಿ ಗಮನಿಸಬೇಕು. ಕಾಶ್ಮೀರದ ಸ್ಥಳೀಯ ಸಂಸ್ಥೆಗಳಿಗೆ, ಶಾಸನ ಸಭೆಗಳಿಗೆ ಮತ್ತು ಲೋಕಸಭಗೆಳಿಗೆ ನಡೆಯುವ ಚುನಾವಣೆಗಳಲ್ಲಿ ಭಿನ್ನ ಭಿನ್ನ ರೀತಿಯಲ್ಲಿ ಕಾಶ್ಮೀರಿಗಳು ಮತದಾನ ಮಾಡುತ್ತಾರೆ. ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳಲ್ಲಿ ಹೆಚ್ಚು ಮತದಾನ ದಾಖಲಾದರೆ ಲೋಕಸಭಾ ಚುನಾವಣೆಗಳಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲಾಗುತ್ತದೆ. ಇದು ಆಯಾ ಸಂಸ್ಥೆಗಳ ಪ್ರಸ್ತುತತೆ ಮತ್ತು ಅವುಗಳ ಬಗ್ಗೆ ಕಾಶ್ಮೀರಿಗಳು ಇಟ್ಟಿರುವ ವಿಶ್ವಾಸದ ಮಟ್ಟವನ್ನು ಕೂಡಾ ಪ್ರತಿಫಲಿಸುತ್ತದೆ. ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವ ಮತದಾನವು ತಮ್ಮ ನಿತ್ಯದ ಸಮಸ್ಯೆಗಳ ಪರಿಹಾರದ ಬಗ್ಗೆ ಜನರು ತೋರುತ್ತಿರುವ ಬಯಕೆಯನ್ನು ತೋರಿಸುತ್ತದೆ. ಶಾಸನಸಭೆಗೆ ಓಟುಹಾಕುವಾಗ ತಮ್ಮ ರಾಜ್ಯ ಸರ್ಕಾರವು ದಶಕಗಳಿಂದ ಜನರು ಎದುರಿಸುತ್ತಿರುವ ದಮನದ ವಿನಾಶಕಾರಿ ಪರಿಣಾಮಗಳನ್ನು ನಿವಾರಿಸಬಲ್ಲದೇ ವಿನಃ ರಾಜಕೀಯ ಬಿಕ್ಕಟ್ಟನಲ್ಲ ಎಂದು ಅರಿತುಕೊಂಡೇ ಮತದಾನ ಮಾಡುತ್ತಾರೆ. ಸಂಸತ್ತಿಗೆ ನಡೆಯುವ ಮತದಾನ ಸಂಪೂರ್ಣ ಭಿನ್ನವಾದದ್ದು. ೧೯೯೩ರಲ್ಲಿ ಭಾರತದದ ಸಂಸತ್ತು ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೆಂದು ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವೂ ಭಾರತಕ್ಕೇ ಸೇರಬೇಕೆಂದು ಸರ್ವಸಮ್ಮತಿಯಿಂದ ನಿರ್ಣಯವನ್ನು ಕೈಗೊಂಡಾಗಲಿಂದ ಬಹುಸಂಖ್ಯಾತ ಕಾಶ್ಮೀರಿಗಳ ಮಟ್ಟಿಗೆ ಭಾರತದ ಸಂಸತ್ತು ಪ್ರಸ್ತುತತೆಯನ್ನೆ ಕಳೆದುಕೊಂಡಿದೆ. ಅದೇ ಸಮಯದಲ್ಲಿ ಭಾರತದ ಸಂಸತ್ತು ಕಾಶ್ಮೀರಿಗಳು ಎದುರಿಸುತ್ತಿರುವ ಸೈನಿಕ ದಮನದ ಬೀಭತ್ಸತೆಯನ್ನು ಮತ್ತು ಅವರ ಪ್ರಜಾತಾಂತ್ರಿಕ ಆಶೋತ್ತರಗಳನ್ನು ಸಂಪೂರ್ಣವಾಗಿ ಕಡೆಗಣಿಸಿತು. ಹಾಲಿ ಸರ್ಕಾರವಾಗಲೀ ಅಥವಾ ಹಿಂದಿನ ಸರ್ಕಾರಗಳಾಗಲೀ ಕಾಶ್ಮೀರದ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸಲು ಕಾಶ್ಮೀರಿಗಳೊಂದಿಗೆ ಒಂದು ಗಂಭೀರ ರಾಜಕೀಯ ಸಮಾಲೋಚನೆಯನ್ನು ಮಾಡಬೇಕೆಂಬ ಆಸಕ್ತಿಯನ್ನೇ ತೋರಲಿಲ್ಲ. ಇನ್ನು ಕಾಶ್ಮೀರಕ್ಕೆ ಸಂವಿಧಾನಿಕವಾಗಿ ದತ್ತವಾಗಿದ್ದ ಸ್ವಾಯತ್ತತೆಯ ಸ್ವರೂಪವನ್ನು  ೧೯೬೪ರ ವೇಳೆಗೆ ಒಂದೊಂದಾಗಿ ಹಿಂತೆಗೆದುಕೊಂಡು ಟೊಳ್ಳಾಗಿಸಿದ ಮೇಲೆ ಕಾಶ್ಮೀರದ ಸ್ವಾಯತ್ತತೆಯ ವಿಷಯವನ್ನು ಕೇವಲ ಕಾಶ್ಮೀರದಲ್ಲಿ ಮಾತ್ರವಲ್ಲ ಕಾಶ್ಮೀರದ ಹೊರಗೂ ಯಾರೂ ಗಂಭೀರವಾಗಿ ಪರಿಗಣಿಸಲು ಸಿದ್ಧರಿಲ್ಲ.

ಹೀಗೆ ಸರ್ಕಾರದ ಮುಂದಿಡುತ್ತಿರುವ ತರ್ಕ ಸರಣಿಯನ್ನು ಪರಿಶೀಲಿಸಿದರೂ ಭಾರತದ ಸಂಸತ್ ಚುನಾವಣೆಯ ಬಗ್ಗೆ ೧೯೯೮ರಿಂದಲೂ ಕಾಶ್ಮೀರ ಕಣಿವೆಯಲ್ಲಿ ನಿರಾಸಕ್ತಿಯೇ ವ್ಯಕ್ತವಾಗಿರುವುದನ್ನು ಗಮನಿಸಬಹುದು. ೧೯೯೮ರಲ್ಲಿ ಶೇ. ೭೦-೮೦ರಷ್ಟು ಕಾಶ್ಮೀರಿ ಮತದಾರರು ಮತದಾನವನ್ನು ಬಹಿಷ್ಕರಿಸಿದ್ದರು. ೨೦೧೪ರಲ್ಲಿ ಶೇ.೭೪ರಷ್ಟು ಜನರು ಮತದಾನವನ್ನು ಬಹಿಷ್ಕರಿಸಿದ್ದರೆ ಈಗ ಶೇ.೯೩ ರಷ್ಟು ಜನರು ಸಂಸತ್ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಇದು ಕೇಂದ್ರದ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿರುವ ಸರ್ಕಾರದ ಆಳ್ವಿಕೆಯಡಿಯಲ್ಲಿ ಕಾಶ್ಮೀರದೊಳಗೆ ಭಾರತದ gವಾಗಿರುವವರ ಮತಸಂಖ್ಯೆ ಗಮನೀಯವಾಗಿ ಇಳಿಕೆಯಾಗಿರುವುದನ್ನೂ ಸಹ ಸೂಚಿಸುತ್ತದೆ. ನರೇಂದ್ರ ಮೋದಿಯವರು ತಮ್ಮ ಪ್ರವಾಸೋದ್ಯಮವೋ ಅಥವಾ ಭಯೋತ್ಪಾದನೆಯೋ ಎಂಬ ಪ್ರಾಸಬದ್ಧ ಹೇಳಿಕೆಗಳಿಂದ ಭಾರತದೊಳಗಿನ ತನ್ನ ಮತೋನ್ಮಾದಿ ಮತ್ತು ಭಾವೋನ್ಮಾದೀ ಭಕ್ತಗಣವನ್ನು ತೃಪ್ತಗೊಳಿಸಬಹುದು. ಆದರೆ ಇಂಥಾ ಘೋಷಣೆಗಳು ಕಾಶ್ಮೀರ ಕಣಿವೆಯಲ್ಲಿ ಯಾವ ಅರ್ಥವನ್ನಾಗಲೀ ಅಥವಾ ಅತಿಸಣ್ಣ ಪರಿಣಾಮವನ್ನಾಗಲೀ ಉಂಟುಮಾಡುವುದಿಲ್ಲ. ದುರಂತವೆಂದರೆ ಕಾಶ್ಮೀರದ ಎಲ್ಲಾ ಸಮಸ್ಯೆಗಳಿಗೆ ಪಾಕಿಸ್ತಾನವೇ ಕಾರಣ ಎಂದು ಇತರರನ್ನು ನಂಬಿಸಲು ತಾನು ಮಾಡುತ್ತಿರುವ ಹುಸಿಪ್ರಚಾರವನ್ನು ತಾನೇ ನಿಜವೆಂದು ನಂಬಿಕೊಂಡುಬಿಡುವ ಸರ್ಕಾರವೊಂದು ಪ್ರವಾಸೋದ್ಯಮ ಮತ್ತು ಉದ್ಯೋಗಗಳ ಆಮಿಷವನ್ನು ಮುಂದಿಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಬಿಡಬಹುದೆಂದು ತನ್ನನ್ನು ತಾನೇ ನಂಬಿಸಿಕೊಳ್ಳುವುದು ಮತ್ತು ಇತರರನ್ನು ನಂಬಿಸಲು ಯತ್ನಿಸುವುದು.. ತಿಳವಳಿಕೆಯನ್ನು ಹಲವಾರು ಸಂಪುಟ ದರ್ಜೆ ಸಚಿವರುಗಳು, ಒಬ್ಬ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರರು, ಮತ್ತು ಮಾಜಿ ಸೇನಾಧಿಕಾರಿಗಳನ್ನು ಒಳಗೊಂಡಂತೆ ಹಿಂದೆ ಭಾರತೀಯ ಆಡಳಿತ ವ್ಯವಸ್ಥೆಯ ಭಾಗವಾಗಿದ್ದವರೇ ಪ್ರಶ್ನಿಸಿದ್ದಾರೆ. ಕಾಶ್ಮೀರಿ ಬಂಡಾಯದ ಮೂಲವು ಅದರ ಸ್ಥಳೀಯತೆಯಲ್ಲೇ ಇರುವುದನ್ನೂ ಮತ್ತು ಪರಿಣಾಮಕಾರಿ ರಾಜಕೀಯ ಮಾತುಕತೆಗನ್ನು ಪ್ರಾರಂಭಿಸುವುದರ ಅಗತ್ಯವನ್ನೂ ಅಂಥವರು ಪ್ರತಿಪಾದಿಸಿದ್ದಾರೆ. ದುರದೃಷ್ಟವಶಾತ್ ದೆಹಲಿ ಸರ್ಕಾರವು ಕಾಶ್ಮೀರ ನೀತಿಯಲ್ಲಿ ತನಗಿರುವ ವಿವೇಕದ ಕೊರತೆಯ ಪ್ರದರ್ಶನವನ್ನು ಮುಂದುವರೆಸುತ್ತಲೇ ಇದೆ.

ಭಾರತದ ಸಾರ್ವಜನಿಕ ನೀತಿ ಮತ್ತು ಅಭಿಪ್ರಾಯಗಳನ್ನು ರೂಪಿಸುವ ಮಹಾಶಯರುಗಳು ಕಾಶ್ಮೀರಿಗಳನ್ನು ತಮ್ಮ ಮುಸ್ಲಿಮ್ತನ ವನ್ನು ಎತ್ತಿಹಿಡಿಯುವುದನ್ನೂ ಮತ್ತು ಪಾಕಿಸ್ತಾನದ ಕೈಗೊಂಬೆಗಳಂತೆ ವರ್ತಿಸುವುದನ್ನೂ ತೀವ್ರವಾಗಿ ಆಕ್ಷೇಪಿಸುತ್ತಾರೆ. ಆದರೆ ಇದೇ ಮಹಾಶಯರುಗಳು ಇದೇ ಭಾರತದ ಪ್ರಭುತ್ವವು ಭಾರತದೊಳಗಿನ ಮುಸ್ಲಿಮರ ವಿರುದ್ಧವಾಗಿರುವುದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ. ಉದಾಹರಣೆಗೆ, ಜಮ್ಮು ವಾಣಿಜ್ಯ ಮತ್ತು ಕೈಗಾರಿಗೆಳ ಒಕ್ಕೂಟದ ಅಧ್ಯಕ್ಷ ರಾಕೇಶ್ ಮೆಹ್ತಾ ಅವರು ಇತ್ತೀಚೆಗೆ ಜನರು ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸ್ಲಿಮರನ್ನು ಪತ್ತೆಹಚ್ಚಿ ಕೊಲ್ಲಬೇಕೆಂದು ಕೊಟ್ಟ ಹೇಳಿಕೆಯನ್ನೇ ತೆಗೆದುಕೊಳ್ಳಿ. ಇದೊಂದು ಅಪವಾದದ ಸಂಗತಿಯೇನಲ್ಲ. ಇದು ದೇಶದ ಹಲವಾರು ಕಡೆ ಹೆಚ್ಚುತ್ತಿರುವ ಮತ್ತು ನಿರ್ಲಜ್ಜ ಬಹಿರಂಗ ಮುಸ್ಲೀಮ್ ವಿರೋಧಿ ದಾಳಿಗಳ ಮುಂದುವರೆಕೆಯಾಗಿದೆ.

ಅದೇ ರೀತಿ ಕಾಶ್ಮೀರದ ಬೀದಿಗಳಲ್ಲಿ ಅತ್ಯಂತ ಆಕ್ರೋಶ ಮತ್ತು ಬಂಡಾಯದ ಮನೋಭಾವಗಳು ಮಡುಗಟ್ಟಿದೆ ಎಂಬುದನ್ನೂ ಅರ್ಥಮಾಡಿಕೊಳ್ಳುವುದೂ ಅತ್ಯಗತ್ಯವಾಗಿದೆ. ಒಂದೆಡೆ ಗುಂಡುಗಳು ಮತ್ತು ಪೆಲೆಟ್ಟುಗಳ ದಾಳಿಗಳಿಗೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಿದ್ದರೆ ಮತ್ತೊಂದು ಕಡೆ ಭಾರತ ಸರ್ಕಾರಕ್ಕೆ ಸಶಸ್ತ್ರ ಹೋರಾಟದ ಭಾಷೆ ಮಾತ್ರ ಅರ್ಥವಾಗುತ್ತದೆ ಎಂಬ ಮನೋಭಾವ ಬಹುಪಾಲು ಕಾಶ್ಮೀರಿಗಳಲ್ಲಿ ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ಗಟ್ಟಿಯಾಗತೊಡಗಿದೆ. ಎನ್ಕೌಂಟರ್ಗಳು ನಡೆಯುತ್ತಿರುವಾಗಲೇ ಎನ್ಕೌಂಟರ್ ನಡೆಯುತ್ತಿರುವ ಪ್ರದೇಶದಲ್ಲಿ  ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿ ತಮಗಾಗಿ ಬಂದೂಕನ್ನು ಕೈಗೆತ್ತಿಕೊಂಡ ತಮ್ಮವರನ್ನು ಬೆಂಬಲಿಸಲೂ ಮತ್ತು ರಕ್ಷಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ವಿದ್ಯಮಾನಗಳು  ಹೇಳುತ್ತಿರುವುದಿಷ್ಟೆ. ಹಿಂದೂ ಬಹುಸಂಖ್ಯಾv ಪರವಾಗಿರುವ ಪ್ರಭುತ್ವವು ಅಧಿಕಾರದಲ್ಲಿರುವ ಭಾರತ ಒಕ್ಕೂಟದ ಜೊತೆ ಸೇರಿಕೊಳ್ಳುವುದು ತಮ್ಮ ಹಿತಾಸಕ್ತಿಗೆ ವಿರುದ್ಧವೆಂಬ  ತೀರ್ಮಾನಕ್ಕೆ ಕಾಶ್ಮೀರಿಗಳು ಬಂದಂತಿದೆ. ಸರ್ಕಾರದ ಪರ ವಕಾಲತ್ತು ವಹಿಸುವವರು ಪ್ರಚಾರ ಮಾಡುತ್ತಿರುವಂತೆ ಕಾಶ್ಮೀರಿ ಯುವಕರು ಕೆಲವು ನೂರು ರೂಪಾಯಿಗಳಿಗಾಗಿ ತಮ್ಮ ಪ್ರಾಣವನ್ನು ಮತ್ತು ಅಂಗಾಂಗಗಳನ್ನು ಪಣಕ್ಕಿಡುತ್ತಿಲ್ಲ. ತಮ್ಮ ಕೂಗನ್ನು ಹಾಗೂ ಆಜಾದಿಗಾಗಿನ ತಮ್ಮ ಹಕ್ಕೊತ್ತಾಯಗಳನ್ನು ಕೇಳಿಸಿಕೊಳ್ಳುವಂತೆ ಮಾಡಲು ಇದಕ್ಕಿಂತ ಬೇರೆ ಮಾರ್ಗೋಪಾಯಗಳಿಲ್ಲವೆಂದು ಅವರು ಭಾವಿಸುತ್ತಿರುವುದರಿಂದ ಅವರು ದಾರಿಯನ್ನು ಹಿಡಿದಿದ್ದಾರೆ.

ಕಾಶ್ಮೀರಿಗಳ ಭ್ರಮ ನಿರಸನಕ್ಕೆ ಮತ್ತು ಆಕ್ರೋಶಕ್ಕೆ ಇರುವ ಕಾರಣಗಳು ಸಹ ಕಣ್ಣಿಗೆ ರಾಚುವಂತಿದೆ. ಜಮ್ಮು ಪ್ರಾಂತ್ಯದಲ್ಲಿ ಗೋ ರಕ್ಷಕರ ಕಾರ್ಯಾಚರಣೆ ಎಗ್ಗೂಸಿಗ್ಗಿಲ್ಲದೆ ಮುಂದುವರೆದಿರುವುದೂ, ಗಲಭೆ ಪೀಡಿತ ಪ್ರದೇಶಗಳಲಿ ರಾಷ್ಟ್ರೀಯ ಸ್ವಯಂಸೇವಕರ ದಂಡುಗಳಿಗೆ ಶಸ್ತ್ರಾಸ್ತ್ರಗಳನ್ನು ಝಳಪಿಸಲು ಅವಕಾಶ ಮಾಡಿಕೊಟ್ಟಿದ್ದು, ೨೦೧೪ರ ಸೆಪ್ಟೆಂಬರ್ನಲ್ಲಿ ಸಂಭವಿಸಿದ ಘನಘೋರ ಪ್ರವಾಹದ ಸಂದರ್ಭದಲ್ಲಿ ಪರಿಹಾರ ಮತ್ತು ಪುನರ್ವಸತಿಯನ್ನು ವಿತರಿಸುವಲ್ಲಿ ಉದ್ದೇಶಪೂರ್ವಕವಾದ ವಿಳಂಬ ತೋರಿದ್ದು, ೨೦೧೬ರ ಜುಲೈ ರಂದು ಬುರ್ಹಾನ್ ವಾನಿ ಹತ್ಯೆಯ ನಂತರದಲ್ಲಿ ನಡೆದ ಸಾಮಾನ್ಯ ನಾಗರಿಕರ ಹತ್ಯೆಗಳು..ಇಂಥಾ ಸಾಲು ಸಾಲು ಉದಾಹರಣೆಗಳು ಕಾಶ್ಮೀರಿಗಳ ಭ್ರಮನಿರಸನಕ್ಕೆ ಕಾರಣವನ್ನು ಒದಗಿಸುತ್ತವೆ.

ಕಾಶ್ಮೀರದ ಸಮಸ್ಯೆಯ ಮೂಲ ಇರುವುದು ಪಾಕಿಸ್ತಾನದಲ್ಲಲ್ಲ, ಬದಲಿಗೆ ಭಾರತೀಯರಾದ ನಮ್ಮೊಳಗೆ ಇದೆ ಎಂಬುದನ್ನೂ ಮತ್ತು ಭಾರತದ ಬಗ್ಗೆ ಮತ್ತು ಭಾರತೀಯ ನಾಗರಿಕ ಸಮಾಜದ ಬಗ್ಗೆ ಕಾಶ್ಮೀರಿಗಳ ಭ್ರಮನಿರಸನ ಇನ್ನಷ್ಟು ಆಳವಾಗುತ್ತಿದೆ ಎನ್ನುವ ಸತ್ಯವನ್ನೂ ಭಾರತೀಯರಾದ ನಾವು ಈಗಲಾದರೂ ಅರ್ಥಮಾಡಿಕೊಳ್ಳಬೇಕಿದೆ. ಇದೇ ಚುನಾವಣೆಯನ್ನು ಬಹಿಷ್ಕರಿಸಿದ ಶೇ.೯೩ ಜನರು ಭಾರತಕ್ಕೆ ಕೊಡುತ್ತಿರುವ ಸಂದೇಶವಾಗಿದೆ.


    ಕೃಪೆ: Economic and Political Weekly
      April 15, 2017. Vol. 52, No. 15
                                                                                             
.












ಶುಕ್ರವಾರ, ಏಪ್ರಿಲ್ 14, 2017

ಮೌನದ ಕುತಂತ್ರ


                                                                                                                                             ಅನುಶಿವಸುಂದರ್
vyapam scam ಗೆ ಚಿತ್ರದ ಫಲಿತಾಂಶ
ವ್ಯಾಪಂ ಹಗರಣದಲ್ಲಿ ಕಂಡುಬರುವ ಶಿಕ್ಷಾಭೀತಿ ಇಲ್ಲದಿರುವಿಕೆ ಮತ್ತು ಸಿನಿಕತನಗಳು ಕಂಗೆಡಿಸುವಂತಿದೆ.

ಸದಾ ಹಗರಣಗಳ ಮತ್ತು ಭ್ರಷ್ಟಾಚಾರಗಳ ಸುದ್ದಿಗೆ ಬಕಾಸುರ ಹಸಿವಿನಿಂದ ಕಾಯುವ ಮಾಧ್ಯಮಗಳು ವ್ಯಾಪಂ ಹಗರಣ ಎಂದೇ ಕುಖ್ಯಾತಿ ಪಡೆದ ಮಧ್ಯಪ್ರದೇಶದ ವೃತ್ತಿ ತರಬೇತಿ ಇಲಾಖೆಯ ನೊಂದಾವಣೆ ಮತ್ತು ನೇಮಕಾತಿ ಹಗರಣದ ಹಿಂದೆ ಯಾಕೆ ಬೀಳಲಿಲ್ಲ ಎನ್ನುವುದು ಮಾತ್ರ ಯಾವ ವಿವರಣೆಗೂ ದಕ್ಕುತ್ತಿಲ್ಲ. ಹಗರಣದ ಬೃಹತ್ ಸ್ವರೂಪವು ೨೦೧೩ರ ವೇಳೆಗೆ ಬಯಲಿಗೆ ಬಿದ್ದ ನಂತರದಲ್ಲಿ ೪೫ಕ್ಕೂ ಹೆಚ್ಚು ಸಾಕ್ಷಿಗಳು ಮತ್ತು ಆರೋಪಿಗಳು ನಿಗೂಢ ರೀತಿಯಲ್ಲಿ ಸತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ರಾಜ್ಯದ ಮುಖ್ಯಮಂತ್ರಿಗಳನ್ನೂ ಒಳಗೊಂಡಂತೆ ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ಅವರ ಒಡನಾಡಿಗಳನ್ನೂ ಸೇರಿದಂತೆ ೨೦೦೦ಕ್ಕೂ ಹೆಚ್ಚು ಜನರ ಮೇಲೆ ತನಿಖೆಗಳು ನಡೆಯುತ್ತಿವೆ ಅಥವಾ ಗುರುತರ ಆರೋಪವನ್ನು ಹೊರಿಸಲಾಗಿದೆ. ಪ್ರಕ್ರಿಯೆಯ ಮೂಲಕವೇ ವೈದ್ಯಕೀಯ ಶಿಕ್ಷಣವನ್ನೂ ಒಳಗೊಂಡಂತೆ ಇನ್ನಿತರ ಹಲವಾರು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದಿದ್ದ ಸಾವಿರಾರು ಯುವಕರ ವೃತ್ತಿಪರ ಭವಿಷ್ಯವನ್ನು ಮತ್ತು ಬದುಕನ್ನೇ ಹಾಳುಮಾಡಿದೆ. ಆದರೂ ಇಂಥಾ ಒಂದು ಬೃಹತ್ ಹಗರಣದ ಬಗ್ಗೆ ಕುಂಟುತ್ತಾ ನಡೆದಿರುವ ವಿಚಾರಣೆಯಿಂದ ಯಾವ ರಾಷ್ಟ್ರೀಂii ಮಾಧ್ಯಮಗಳೂ ನಿರ್ಣಾಯಕ ಉತ್ತರಗಳನ್ನು ಆಗ್ರಹಿಸುವ ಉತ್ಸುಕತೆಯನ್ನು ತೋರುತ್ತಿಲ್ಲ. ಹಗರಣದಿಂದಾಗಿ ಸಾರ್ವಜನಿಕರು ವೈದ್ಯರ  ಮೇಲಿಟ್ಟಿದ್ದ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದಾರೆಮತ್ತೊಂದು ಕಡೆ ಇತರ ಹಲವಾರು ಪ್ರಕರಣಗಳ ಭಾರದಿಂದಾಗಿ ನ್ಯಾಯಾಲಯವೂ ಸಹ ಕಾಲಮಿತಿಯೊಳಗೆ ಹಗರಣದ ತನಿಖೆ ಮುಕ್ತಾಯವಾಗುವಂತೆ ನೋಡಿಕೊಳ್ಳುವ ಮುಂದೊಡಗನ್ನು ತೆಗೆದುಕೊಳ್ಳುತ್ತಿಲ್ಲ. ಅಷ್ಟು ಮಾತ್ರವಲ್ಲ, ಇತ್ತೀಚೆಗೆ ಸಾರ್ವಜನಿಕ ಲೇಖಾಯುಕ್ತರು (ಕಾಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್- ಸಿಎಜಿ) ಕೂಡಾ ಪ್ರಕರಣದಲ್ಲಿ ತುಂಬಾ ವ್ಯವಸ್ಥಿತವಾಗಿ ಕಾನೂನುಗಳ ಉಲ್ಲಂಘನೆ ಮಾಡಿರುವ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರವನ್ನು ಹೀಗೆಳೆಯಲು ಸದಾ ತುದಿಗಾಲ ಮೇಲೆ ನಿಲ್ಲುವ ಅಧಿಕಾರರೂಢ ಬಿಜೆಪಿ ಪಕ್ಷ ತನ್ನದೇ ಸರ್ಕಾರದ ಮೇಲೆ ಬಂದಿರುವ   ಆರೋಪದ ಬಗ್ಗೆ ಮಾತ್ರ ಯೋಜಿತ ಮೌನವನ್ನು ಪಾಲಿಸುತ್ತಿದೆ.

 ಸಿಎಜಿ ವರದಿಯನ್ನು ಕಳೆದ ಮಾರ್ಚ್ ನಲ್ಲಿ ಮಧ್ಯಪ್ರದೇಶದ ವಿಧಾನಮಂಡಲದಲ್ಲಿ ಮಂಡಿಸಲಾಯಿತು. ಹಗರಣವು ಬಯಲಿಗೆ ಬಂದ ನಂತರವೂ ವೃತ್ತಿಪರ ಶಿಕ್ಷಣದ ಪರೀಕ್ಷಾ ಮಂಡಳಿ (ವ್ಯಾವಸಾಯಿಕ್ ಪರೀಕ್ಷಾ ಮಂಡಲ್-ವ್ಯಾಪಂ)ಯು ತಾನು ನಡೆಸಿದ ಪ್ರವೇಶ ಪರೀಕ್ಷೆಗಳಿಗೆ ಸಬಂಧಪಟ್ಟಂತೆ ಯಾವುದೇ ನಿಯಂತ್ರಣಾ ನಿಯಮಗಳ ಚೌಕಟ್ಟನ್ನು ರೂಪಿಸದೆ ಪ್ರವೇಶ ಮತ್ತು ನೇಮಕಾತಿಗಳನ್ನು ಬಯಸಿದ ಸಾವಿರಾರು ಆಕಾಂಕ್ಷಿಗಳ ಭವಿಷ್ಯವನ್ನು ಹಾಳುಮಾಡಿದೆ ಎಂದು ವರದಿ ನೇರವಾಗಿ ಹೇಳಿದೆ. ಅಲ್ಲದೆ ಅಭರ್ಥಿಯನ್ನು ಸರ್ಕಾರದ ಸೇವೆಗೆ ನೇಮಕಾತಿ ಮಾಡಿಕೊಳ್ಳಲು ಎಷ್ಟು ಪರೀಕ್ಷೆಗಳನ್ನು ಪಾಸು ಮಾಡಬೇಕೆಂಬ ಬಗ್ಗೆಯೂ ಯಾವುದೇ ದತ್ತಾಂಶಗಳ ದಾಖಲೆಯನ್ನು  ಮಂಡಳಿಯು ಪಾಲಿಸುತ್ತಿಲ್ಲ. ಇದೂ ಸಹ ಪ್ರವೇಶ ಮತ್ತು ನೇಮಕಾತಿ ವಿಚಾರದಲ್ಲಿ  ಮಂಡಳಿಯು ಅಪಾರದರ್ಶಕವಾಗಿದೆಯೆಂಬುದನ್ನು ತೋರಿಸುತ್ತದೆ ಮತ್ತು ಅದು ಮಂಡಳಿಯ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಎಲ್ಲಕ್ಕಿಂತ ಹೀನಾಯ ಸಂಗತಿಯೆಂದರೆ ಉಳಿದ ಎಲ್ಲಾ ವಿಷಯಗಳಲ್ಲಿ ಸಿಎಜಿಯು  ಒಂದು ಸರ್ಕಾರೀ ನಿಯಂತ್ರಿತ ಸಂಸ್ಥೆಯೇ ಆಗಿದ್ದರೂ ಸಿಎಜಿಯು ಸರ್ಕಾರೀ ಸಂಸ್ಥೆಯಲ್ಲವೆಂಬ ನೆಪವೊಡ್ಡಿ ಅದರ ಪರಿಶೀಲನೆಗೆ ವ್ಯಾಪಂ ಹಗರಣದ ಕಡತಗಳನ್ನು ಸರ್ಕಾರ ಒದಗಿಸಿಲ್ಲ. ಅಧಿಕೃತವಾದ ರಾಜ್ಯ ಸಿಬ್ಬಂದಿ ಆಯ್ಕೆ ಅಯೋಗವನ್ನು ಬದಿಗೆ ಸರಿಸಿದ ಸರ್ಕಾರವು ವ್ಯಾಪಂ ಮೂಲಕವೇ ಎಲ್ಲಾ ನೇಮಕಾತಿಗಳನ್ನು ಮಾಡಿತಲ್ಲದೆ ಅದರ ಅಧ್ಯಕ್ಷ, ನಿರ್ದೇಶಕರು ಮತ್ತು ನಿಯಂತ್ರಕರನ್ನು ಸರ್ಕಾರದ ಸಿಬ್ಬಂದಿಗಳಿಂದಲೇ ಆಯ್ಕೆ ಮಾಡಿತೆಂದು ಸಿಎಜಿ ವರದಿಯು ಹೇಳಿದೆ.
   
ವ್ಯಾಪಂ ನಲ್ಲಿ ಹಲವಾರು ಪಟ್ಟಭದ್ರ ಹಿತಾಸಕ್ತಿಗಳು ಆಳವಾಗಿ ಬೇರೂರಿವೆಯೆಂದೂ, ಹಲವು ವಿಧಾನಗಳಲ್ಲಿ ಹಲವಾರು ಅಕ್ರಮಗಳು ನಡೆಯುತ್ತಿದೆಯೆಂದು ೨೦೦೯ರಿಂದಲೇ ಹಲವಾರು ಭ್ರಷ್ಟಾಚಾರ ವಿರೋಧಿಗಳು ಸಾರ್ವಜನಿಕರ ಗಮನ ಸೆಳೆಯಲು ಯತ್ನಿಸಿದ್ದರು. ಅಕ್ರಮಗಳು ಹಲವು ರೀತಿಯಲ್ಲಿದ್ದವು. ನಕಲಿ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡುವುದು, ತಮಗೆ ಬೇಕಾದ ಅಭ್ಯರ್ಥಿಗಳಿಗೆ ಪೂರ್ವಭಾವಿಯಾಗಿ ಉತ್ತರಗಳ ಸೋರಿಕೆ, ಉತ್ತರ ಪತ್ರಿಕೆಗಳನ್ನೇ ತಿದ್ದಿಬಿಡುವುದು ಮತ್ತು ಉತ್ತಮ ಅಭ್ಯರ್ಥಿಯಿಂದ ಉತ್ತರಗಳನ್ನು ನಕಲು ಮಾಡಲು ಅವಕಾಶ ಮಾಡಿಕೊಡುವುದು..ಇತ್ಯಾದಿ. ಇವುಗಳ ಬಗ್ಗೆ ಮೊದಲು ಪೊಲೀಸರಿಂದ, ನಂತರ ವಿಶೇಷ ಪರಿಶೋಧನಾ ಪಡೆಯಿಂದ  ಮತ್ತು ಈಗ ಕೇಂದ್ರ ತನಿಖಾ ದಳ (ಸಿಬಿಐ)ನಿಂದ ನಡೆಯುತ್ತಿರುವ ತನಿಖೆಗಳು ಹಲವಾರು ಪ್ರಶ್ನೆಗಳನ್ನು ಮತ್ತು ಆರೋಪಗಳನ್ನು ಹೊರಿಸಿವೆ. ಅದೇನೇ ಇದ್ದರೂ ಹಗರಣದ ಹಿಂದಿನ ನಿಜವಾದ ರೂವಾರಿಗಳ ಬಗ್ಗೆ ಹೆಚ್ಚೇನೂ ಮಾಹಿತಿಗಳು ದೊರಕಿಲ್ಲ. ಸಿಬಿಐ ತನಿಖೆಯು ವಿಳಂಬ ಮತ್ತು ನಿಗೂಢತನದ ಆರೋಪಗಳನ್ನು ಎದುರಿಸುತ್ತಿದೆ. ಭ್ರಷ್ಟಾಚಾರವನ್ನು ಬಯಲಿಗೆಳೆದವರು ಹೆಸರಿಸಿರುವ ಆರೋಪಿಗಳಲ್ಲಿ ಸಾಕ್ಷಾತ್ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಬಿಜೆಪಿಯ ಓರ್ವ ಖ್ಯಾತ ಬಿಜೆಪಿ ನಾಯಕರೂ ಸೇರಿದ್ದಾರೆ. ಶಿವರಾಜ್ ಸಿಂಗ್ ಮತ್ತವರ ಮಡದಿಯ ಮೇಲೆ ಇದೇರೀತಿಯ ಆರೋಪ ಹೊರಿಸಿದ್ದ ಕಾಂಗ್ರೆಸ್ ನಾಯಕರೊಬ್ಬರ ಮೇಲೆ ಮುಖ್ಯಮಂತ್ರಿಗಳು ಮಾನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ

  ನಿರೀಕ್ಷಿಸಿದ ಹಾಗೆ ಪ್ರಕರಣದಲ್ಲಿ ಪ್ರಮುಖವಾಗಿ ಬಂಧಿತರಾಗಿರುವವರು ಪರೀಕ್ಷೆಗಳಿಗೆ ಹಾಜರಾಗುವಾಗ ಅಥವಾ ಕೆಲಸಕ್ಕೆ ನೇಮಕಾತಿಗೊಳ್ಳುವಾಗ ಭ್ರಷ್ಟಾಚಾರದ ಫಲವನ್ನುಂಡ ಅಭ್ಯರ್ಥಿಗಳು, ಅವರ ಪೋಷಕರು ಮತ್ತು ನಡುವಿನ ದಲ್ಲಾಳಿಗಳು ಮಾತ್ರ. ದೊಡ್ಡ ಸಂಖ್ಯೆಯ ಕಾಂಟ್ರಾಕ್ಟ್ ಉಪಾಧ್ಯಾಯರುಗಳನ್ನೂ ಒಳಗೊಂಡಂತೆ ಸರ್ಕಾರಿ ನೌಕರಿಯನ್ನು ಪಡೆಯಲು ಮತ್ತು ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಅಭ್ಯರ್ಥಿಗೆ ಇರಬೇಕಾದ ಅರ್ಹತೆಯನ್ನು ಸರ್ಕಾರ ರದ್ದುಪಡಿಸಿದೆ. ಹೀಗೆ ಬದುಕಿನ ಅಭದ್ರತೆ ಮತ್ತು ಮತ್ತು ಆತಂಕಗಳನ್ನು ನೀಗಿಕೊಳ್ಳಲು ಅತ್ಯುತ್ತಮ ಮಾರ್ಗವಾಗಿರುವ ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ವ್ಯವಸ್ಥೆಯೇ ಭ್ರಷ್ಟಗೊಳಿಸಿಟ್ಟಿರುವ ಪ್ರಕ್ರಿಯೆಗಳ ಲಾಭವನ್ನು ಪಡೆದುಕೊಳ್ಳುವ ಮಾರ್ಗ ಹಿಡಿದ ಹತಾಶ ಬಲಿಪಶುಗಳನ್ನೇ ಮತ್ತಷ್ಟು ಬಲಿಪಶುಗಳನ್ನಾಗಿಸಲಾಗಿದೆ. ಶಿಕ್ಷಣ ತಜ್ನರ ಪ್ರಕಾರ ವ್ಯಾಪಂ ಹಗರಣವು ಕೇವಲ ಪರೀಕ್ಷಾ ಸಂಬಂಧೀ ಹಗರಣವಲ್ಲ. ಬದಲಿಗೆ ಅದೊಂದು ಪ್ರಭುತ್ವದ ಬೆಂಬಲದೊಂದಿಗೆ ನಡೆಯುತ್ತಿರುವ ವ್ಯವಸ್ಥಿತ ವಂಚನೆಯಾಗಿದ್ದು ಒಂದು ಸೇವಾ ಉದ್ಯಮವೇ ಆಗಿಬಿಟ್ಟಿದೆ. ಇದು ಶಿಕ್ಷಣ ಕ್ಶೇತ್ರವನ್ನು ಉದ್ದೇಶಪೂರ್ವಕವಾಗಿಯೇ ಹಂತಹಂತವಾಗಿ ದುರ್ಬಲಗೊಳಿಸಿ ಅದರಲ್ಲಿ ಖಾಸಗಿ ಕುಳಗಳಿಗೆ ದೊಡ್ಡ ಪಾತ್ರವನ್ನು ಕಲ್ಪಿಸಿಕೊಟ್ಟಿದ್ದರ ನೇರ ಪರಿಣಾಮವೂ ಆಗಿದೆ.

ಹಗರಣವನ್ನು ಗಂಭೀರವಾಗಿ ಪರಿಗಣಿಸಿ ತೀವ್ರವಾಗಿ ತನಿಖೆ ನಡೆಸುತ್ತಿದ್ದ ದೆಹಲಿ ಮೂಲದ ಓರ್ವ ಯುವ ಟೆಲಿವಿಷನ್ ಪತ್ರಕರ್ತರೊಬ್ಬರ ಕೊಲೆಯಾದ ನಂತರದಲ್ಲಿ ಮಾತ್ರ ರಾಷ್ಟ್ರೀಯ ಮಾಧ್ಯಮಗಳು ಹಗರಣವನ್ನು ಗಂಭೀರವಾಗಿ ಪರಿಗಣಿಸಿದವು. ಇದರ ಬಗ್ಗೆ ವಿವರವಾದ ತನಿಖಾ ವರದಿಯನ್ನು ಪ್ರಕಟಿಸಿದ ನಿಯತಕಾಲಿಕವೊಂದು ಪತ್ರಕರ್ತರ ಮತ್ತು ನ್ಯಾಯಾಧೀಶರ ವಸತಿ ಸಹಕಾರ ಸಂಘವು ಸರ್ಕಾರದಿಂದ ಅತ್ಯಂತ ಕಡಿಮೆ ಬೆಲೆಗೆ ಭೂಮಿಯನ್ನು ಪಡೆದುಕೊಂಡಿದ್ದನ್ನು ಪ್ರಸ್ತಾಪಿಸಿತ್ತು ಮತ್ತು ಪ್ರಾಯಶಃ ಅದುವೇ ಹಗರಣವನ್ನು ವರದಿ ಮಾಡುವಲ್ಲಿ ಸ್ಥಳೀಯ ಪತ್ರಕರ್ತರ ಅನಾಸಕ್ತಿಗೆ ಕಾರಣವಿರಬಹುದೆಂದೂ ಸೂಚಿಸಿತ್ತು. ಹಗರಣಕ್ಕೆ ಸಂಬಂಧಪಟ್ಟಂತೆ ಆಗಿರುವ ೪೫ ಕೊಲೆಗಳ ಬಗ್ಗೆ (ಅಧಿಕೃತ ವರದಿಯ ಪ್ರಕಾರ ೨೫) ಮಾಧ್ಯಮಗಳು ವರದಿ ಮಾಡಿದರೂ ತನಿಖೆಯನ್ನು ಮುಂದುವರೆಸಲಿಲ್ಲ. ಎಲ್ಲೆಡೆ ಆಗುವಂತೆ ಇಲ್ಲಿಯೂ ಮಾಧ್ಯಮದ  ವರದಿಗಳು ಅಧಿಕಾರರೂಢ ಬಿಜೆಪಿ ಮತ್ತು ವಿರೋಧಪಕ್ಷವಾದ ಕಾಂಗ್ರೆಸ್ ಗಳ ನಡುವೆ ನಡೆಯುತ್ತಿದ್ದ ಆರೋಪ-ಪ್ರತ್ಯಾರೋಪಗಳ ಮೇಲೆ ಕೇಂದ್ರೀಕರಿಸಿವಿಯೇ ವಿನಃ ಸಿಎಜಿ ಎತ್ತಿರುವ ಮೂಲಭೂತ ಪ್ರಶ್ನಗಳ ಬಗ್ಗೆಯಲ್ಲ.

ಹಗರಣ ಹೊರಗೆ ಬಂದು ವರ್ಷಗಳಾದವು. ಭ್ರಷ್ಟಾಚಾರವನ್ನು ಬಯಲಿಗೆಳೆದ ಪ್ರಮುಖ ಕೂಗೆಚ್ಚರಿಕೆದಾರ (ವಿಸಲ್ ಬ್ಲೋಯರ್) ಮತ್ತು ಇತರ ಸಾಕ್ಷಿಗಳು ಈಗಲೂ ಜೀವಭಯದಲ್ಲಿ ಬದುಕುತ್ತಿದ್ದಾರೆ. ಮತ್ತು  ಅರೋಪಿತರು ಸಣ್ಣಪುಟ್ಟ ಮಿಕಗಳು ಮಾತ್ರವೇ ಆಗಿದ್ದಾರೆ. ಒಂದೆಡೆ ಸಾವಿರಾರು ಯುವಜನರ ಭವಿಷ್ಯ ಅತಂತ್ರವಾಗಿದ್ದರೆ ಮತ್ತೊಂದೆಡೆ ಹಗರಣದ ತನಿಖೆ ಚುಕ್ಕಾಣಿಯಿಲ್ಲದ ನಾವೆಯಂತಾಗಿದೆ. ನಾಗರಿಕ ಸಮಾಜವೂ ಸಹ ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗುವಂತೆ ಒತ್ತಡ ಹಾಕಲು ವಿಫಲವಾಗಿದೆ. ಭಾರತದ ರಾಜಕಾರಣವನ್ನು ಸಿನಿಕ ಬೇಜವಾಬ್ದಾರಿತನ ಮತ್ತು ತಪ್ಪಿಗೆ ಶಿಕ್ಷೆಯಾಗುತ್ತದೆಂಬ ಭೀತಿಯೂ ಸಹ ಇಲ್ಲದಿರುವ ಧೋರಣೆಗಳೇ ಆಳುತ್ತಿವೆಯೆಂಬುದನ್ನು ಪ್ರಾಯಶಃ ಇತ್ತೀಚೆಗೆ ನಡೆದ ಇನ್ಯಾವುದೇ ಹಗರಣಕ್ಕಿಂತ ವ್ಯಾಪಂ ಹಗರಣವು ಇನ್ನಷ್ಟು ಸ್ಪಷ್ಟವಾಗಿ ಬಯಲಿಗೆಳೆದಿದೆ.

    ಕೃಪೆ: Economic and Political Weekly
           April 8, 2017. Vol 52, No.14






.