ಗುರುವಾರ, ಜುಲೈ 18, 2013

ಲಾಡಸಾಹೇಬರೆಂಬ ಬಡಾ ಕಲಾವಿದರು


ಆಧುನಿಕ ರಂಗಭೂಮಿಯ ಸಂದರ್ಭದಲ್ಲಿ ಉತ್ತರ ಕರ್ನಾಟದ ವೃತ್ತಿರಂಗಭೂಮಿಯ ಎರಡನೇ ತಲೆಮಾರಿನ ಪ್ರತಿಭಾವಂತ ಕಲಾವಿದರಲ್ಲಿ ಲಾಡಸಾಹೇಬ ಅಮೀನಗಡ (1914-2013) ಒಬ್ಬರು. ಇವರು ಏಣಗಿ ಬಾಳಪ್ಪ, ಎಲಿವಾಳ ಸಿದ್ದಯ್ಯ, ಡಿ.ದುರ್ಗದಾಸ ಮುಂತಾದ ವೃತ್ತಿರಂಗಭೂಮಿ ಕಲಾವಿದರ ಸಮಕಾಲೀನರು. ನಟರಾಗಿ, ಕಂಪನಿಯ ಮಾಲೀಕರಾಗಿ ಕನ್ನಡ ರಂಗಭೂಮಿಗೆ ತಮ್ಮ ಜೀವನವನ್ನು ಮುಡುಪಿಟ್ಟು ದುಡಿದ ಪ್ರತಿಭಾನ್ವಿತ ಕಲಾವಿದರು ಲಾಡಸಾಹೇಬರು.

ಸ್ತ್ರೀ-ಪುರುಷ, ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಲಾಡಸಾಹೇಬರು ಬೇಡಿಕೆಯ ನಟರಾಗಿದ್ದರು. ಬಾಗಲಕೋಟೆ ಜಿಲ್ಲೆಯ ಅಮೀನಗಡ ಇವರ ಹುಟ್ಟೂರು. ಮೂಲತಃ ಇವರು ನೇಕಾರ ಮನೆತನದವರು. 1928ರಲ್ಲಿ ವೃತ್ತಿರಂಗಭೂಮಿಯ ನಂಟು ಬೆಳೆಸಿದರು. ಎಸ್.ಆರ್. ಕಂಠಿ (ಕಂಠಿ ಸಿದ್ಧಲಿಂಗಪ್ಪ) ಅವರ ನಾಟಕ ಮಂಡಳಿಯಲ್ಲಿ ಶಾಲೆ, ನಾಟಕ ಕಲೆತು, ಬಾಲಪಾತ್ರಗಳಿಂದ ರಂಗಪ್ರವೇಶ ಪಡೆದರು. ನಂತರ ಶಿರಹಟ್ಟಿ ವೆಂಕೋಬರಾಯರ `ಶ್ರೀ ಮಹಾಲಕ್ಷ್ಮೀ ಪ್ರಾಸಾದಿಕ ಸಂಗೀತ ನಾಟಕ ಮಂಡಳಿ'ಯಲ್ಲಿ (1903) ನಾಟಕಗಳಲ್ಲಿ ಅಭಿನಯಿಸಿದ್ದರು.


ಭೀಮಪ್ಪ ಹೂಗಾರರ ಅಥಣಿಯ `ಶ್ರೀ ಭಾಗ್ಯೋದಯ ನಾಟಕ ಮಂಡಳಿ' (1933)ಯಲ್ಲಿ `ಹೇಮರಡ್ಡಿ ಮಲ್ಲಮ್ಮ' ನಾಟಕದಲ್ಲಿ ನಾಗಮ್ಮನ ಪಾತ್ರ ಮಾಡಿದರು. `ಉತ್ತರಭೂಪ' ನಾಟಕದಲ್ಲಿ ಉತ್ತರಭೂಪ, ಅನಸೂಯಾ, ಮತ್ತು ಆದಿಶಕ್ತಿ ಪಾತ್ರಗಳಿಗೆ ಜೀವತುಂಬಿದರು. `ಭೌಮಾಸೂರ' ನಾಟಕದಲ್ಲಿ ನಾರದನ ಪಾತ್ರ ಮಾಡಿದರು.

ದೇಸಾಯಿಯರ `ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯಸಂಘ'ದ `ಕಿತ್ತೂರ ಚೆನ್ನಮ್ಮ' ನಾಟಕದಲ್ಲಿ (1966) ಮಲ್ಲಪ್ಪಶೆಟ್ಟಿ ಪಾತ್ರವನ್ನು ಮಾಡಿದರು. ಮಲ್ಲಪ್ಪಶೆಟ್ಟಿ ಪಾತ್ರ ನೋಡಲು ಬಾದಾಮಿ, ಬಾಗಲಕೋಟೆಯ ಆಮಂತ್ರಿತ ಜನರು ಆಗಮಿಸಿದ್ದರು.
30-40ರ ದಶಕದ ನಾಟಕಗಳಲ್ಲಿ ರಂಗಸಂಗೀತ ಸಂಭ್ರಮಿಸುತ್ತಿತ್ತು. ಹಿಂದೂಸ್ತಾನಿ ಸಂಗೀತದಲ್ಲಿ ಹೆಸರು ಮಾಡಿದವರು ಅನೇಕರಿದ್ದರು. ಕಂಪನಿ ಮಾಲೀಕರು ತಮ್ಮ ಮಂಡಳಿ ಉನ್ನತ ಸ್ಥಿತಿ ತಲುಪಲು ಕಲಾವಿದರ ಸಂಗೀತ ಜ್ಞಾನ ಅಗತ್ಯವೆಂದು ನಂಬಿದ್ದರು.

  ವೆಂಕೋಬರಾಯರು ಬುವಾಗಳನ್ನು ಕಂಪನಿಗಳಿಗೆ ಆಹ್ವಾನಿಸುತ್ತಿದ್ದರು. ಅದರಲ್ಲಿ ನಿಪ್ಪಾಣಿಯ ರಾಚಪ್ಪ ಗವಾಯಿಗಳು, ಶಂಕರಭಟ್ಟರು, ಧಾರವಾಡದ ಗುರುರಾವ ದೇಶಪಾಂಡೆ (ಗ್ವಾಲಿಯರ್ ಘರಾಣೆಯ ಪ್ರಸಿದ್ಧ ಗಾಯಕರಾದ ರಾಮಕೃಷ್ಣ ಬುವಾ ವಝೆಯವರ ಶಿಷ್ಯ) ಅಂದಿನ ನಾಟಕಗಳಲ್ಲಿ ಸಂಗೀತ ಕಲಿಸುವ ದೊಡ್ಡ ಗವಾಯಿಗಳು.
`ನನಗೂ ಸಂಗೀತ ಕಲಿಸ್ರೀ ಅಂತ ಕೇಳ್ದೆ, ಅದ್ಕ ಅವ್ರ ಸರಿಗಮಪದನಿಸ ಸನಿದಪಮಗರಿಸ, ಲೇ ಸಾಬ ಹೊರಗೋಗೋ ಅಂತಿದ್ರು. ಎಲ್ರೂ ಹಿಂದೂಗಳು, ನಾನೊಬ್ಬ ಮುಸಲ್ಮಾನ್ರವ, ಹಿಂಗಾಗಿ ನನಗ ರಂಗಸಂಗೀತ ಕಲಿಸ್ತಿರಲಿ' ಎಂದು ಲಾಡಸಾಹೇಬರು ಬೇಸರದಿಂದ ಹೇಳಿಕೊಂಡಿದ್ದಾರೆ. ಒಳ್ಳೆಯ ಗುರುಗಳು ಸಿಗದೆ ಅವರು ಸಂಗೀತವನ್ನು ಬಿಟ್ಟು ಹಾಸ್ಯ ಪಾತ್ರಗಳಿಗೆ ಹೊರಳಿಕೊಂಡರು.

ಲಾಡಸಾಹೇಬರು ಭೀಮಪ್ಪ ಹೂಗಾರರ ಅಥಣಿಯ `ಶ್ರೀ ಭಾಗ್ಯೋದಯ ನಾಟಕ ಮಂಡಳಿ'ಯಲ್ಲಿ (1933) ಹೆಚ್ಚಾಗಿ ಹಾಸ್ಯ ಪಾತ್ರಗಳನ್ನು ಮಾಡಿದರು. ಶ್ರೀಕಂಠಶಾಸ್ತ್ರಿಗಳು ವಿರಚಿತ `ಪ್ರಪಂಚ ಪರೀಕ್ಷೆ ಅರ್ಥಾತ್ ರಾಜಾ ಭರ್ತೃಹರಿ' ನಾಟಕದ ಹಾಸ್ಯ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು.

1934ರಲ್ಲಿ ಡಿ. ದುರ್ಗಾದಾಸರು ಮತ್ತು ಲಾಡಸಾಹೇಬರು ಸೇರಿ ಧಾರವಾಡದಲ್ಲಿ `ಸ್ನೇಹವಿಲಾಸ ನಾಟ್ಯ ಸಂಘ' ಸ್ಥಾಪಿಸಿದರು. ಈ ಕಂಪನಿಯಲ್ಲಿ ಸಾಹೇಬರು `ಸತ್ಯ ಹರಿಶ್ಚಂದ್ರ' ನಾಟಕದಲ್ಲಿ ತಾರಾಮತಿಯಾದರೆ, ದುರ್ಗಾದಾಸರು ಹರಿಶ್ಚಂದ್ರನ ಪಾತ್ರ ನಿರ್ವಹಿಸುತ್ತಿದ್ದರು. ಎಲಿವಾಳ ಸಿದ್ದಯ್ಯನವರು ಹಾಸ್ಯ ಪಾತ್ರ ಮಾಡುತ್ತಿದ್ದರು.

ಹೀಗೆ ಕಂಪನಿ ಸುಸೂತ್ರವಾಗಿ ನಡೆಯುವಾಗ ಮನಸ್ತಾಪಗೊಂಡು ದುರ್ಗಾದಾಸರು ಅರ್ಧಕ್ಕೆ ಬಿಟ್ಟು ಹೋದರು. ಮುಂದೆ ಲಾಡ ಸಾಹೇಬರು ಮುಂದುವರಿಸಿದರಾದರೂ ಕಂಪನಿ ನಷ್ಟವನ್ನು ಅನುಭವಿಸಿತು. ಇದನ್ನೂ ಕೈಬಿಟ್ಟರು. ಆನಂತರ ತಳಕಲ್‌ನ `ಶ್ರೀರಂಜನಿ ನಾಟಕ ಮಂಡಳಿ' (1938), ನ್ಯಾಮತಿಯ `ಶ್ರೀ ಮಹೇಶ ನಾಟ್ಯಸಂಘ' (1942) ಮುಂತಾದ ನಾಟಕ ಕಂಪನಿಗಳಲ್ಲಿ ಅಭಿನಯಿಸಿದರು.

1934ರ ಸಂದರ್ಭದಲ್ಲಿ ಮುಧೋಳದಲ್ಲಿ ಅಮೀರಬಾಯಿ ಕರ್ನಾಟಕಿ ಹಾಗೂ ಗೋಹರ್‌ಬಾಯಿ ಕರ್ನಾಟಕಿ ಅಕ್ಕ-ತಂಗಿಯರ ನಾಟಕ ಕಂಪನಿ ಸಣ್ಣ ಮಠದಲ್ಲಿ ಕ್ಯಾಂಪ್ ಮಾಡಿತ್ತು. ಅದೇ ಊರಲ್ಲಿ ಶಿರಹಟ್ಟಿ ವೆಂಕೋಬರಾಯರ ಕಂಪನಿ ಮೊಕ್ಕಾಂ ಹೂಡಿತ್ತು. ಈ ಕಂಪನಿಯಲ್ಲಿ ನಟರಾಗಿ ಲಾಡ ಸಾಹೇಬರು ಸೇವೆ ಸಲ್ಲಿಸುತ್ತಿದ್ದರು. ಅಂದಿನ ನಾಟಕದಲ್ಲಿ ಸಾಹೇಬರು ನಾರದನ ಪಾತ್ರದಲ್ಲಿ ಅಭಿನಯಿಸಿದ್ದರು. ಆ ನಾಟಕವನ್ನು ನೋಡಲು ಅಮೀರಬಾಯಿಯವರು ಬಂದಿದ್ದರು. ಮುಧೋಳದ ಅಂದಿನ ಜನರು ಲಾಡ ಸಾಹೇಬರನ್ನು ಕಂಡು `ಅಮೀರಬಾಯಿಯವರ ದತ್ತಕ ಮಗ ಇವ್ಹಾ' ಎಂದು ಸಂಬೋಧಿಸುತ್ತಿದ್ದದ್ದು ಉಂಟು.

ಲಾಡ ಸಾಹೇಬರ ಸಮಕಾಲೀನರಲ್ಲಿ ಬಹುತೇಕರು ಈಗ ಉಳಿದಿಲ್ಲ. ಹಳೆಯ ಕಲಾವಿದರು ಬದುಕಿರುವಾಗಲೇ ಅವರ ರಂಗಭೂಮಿಯ ಕಲಾಬದುಕನ್ನು ಗ್ರಂಥವಾಗಿಸಿದರೆ ಸಾಧಕರಿಗೂ ಒಂದು ನೆಮ್ಮದಿ. ಆ ಕೃತಿ ಮುಂದಿನ ಪೀಳಿಗೆಗೆ, ಅಧ್ಯಯನಕಾರರಿಗೆ ಇತಿಹಾಸವನ್ನು ಪರಿಚಯಿಸಿದಂತೆ ಆಗುತ್ತದೆ. ಲಾಡ ಸಾಹೇಬರಂಥ ಕಲಾವಿದರನ್ನು ಸಾಂಸ್ಕೃತಿಕ ದೃಷ್ಟಿಯಿಂದ ಚರ್ಚಿಸುವ ಅಗತ್ಯವಿದೆ.

ಬುಧವಾರ, ಜುಲೈ 17, 2013

ಬಡವರ ಮನೆಯಂಗಳದ ಮರಣಶಾಸನ


 







 ಸೌಜನ್ಯ: ವಿಜಯ ಕರ್ನಾಟಕ

      ಇತರ ಸರಕಾರಿ ಕೆಲಸಗಳು ಸುಲಭದಲ್ಲಿ ದಕ್ಕುವುದಿಲ್ಲವಾದ ಕಾರಣಕ್ಕೆ ಬಡವರಿಗೆ ಮಿಲಿಟರಿ ಅನಿವಾರ್ಯ ಆಯ್ಕೆ ಆಗುತ್ತಿದೆ. ಪಿ.ಯು.ಸಿ.ಯಲ್ಲಿ 82% ಮಾರ್ಕ್ಸ್ ಪಡೆಯುವುದು ಪವಾಡವಲ್ಲ. ಆದರೆ ಈ ಹುಡುಗನ ಬದುಕಿನಲ್ಲದು ಪವಾಡವೇ. ಅವನ ದಿನ ಶುರುವಾಗುತ್ತಿದ್ದುದೇ ಎಮ್ಮೆಗೆ ಹುಲ್ಲು ತರೋದ್ರಲ್ಲಿ. ಅವ್ವ ಎಂಬ ಜೀವ 'ಮಗ ಸಾಲಿ ಕಲೀಲಿ' ಎಂದು ಬಯಸುತ್ತಿದ್ದುದರಿಂದ ಹೇಗೋ ವೇಳೆ ಹೊಂದಿಸಿ ಸೈಕಲ್ ಹತ್ತಿ 8 ಕಿ.ಮೀ.ದೂರದ ಸರಕಾರೀ ಕಾಲೇಜಿನಲ್ಲಿ ಕಲಿ ತಿದ್ದ. ಅವ್ವ ನಾಕ ಮನಿ ಮುಸರಿ ತಿಕ್ಕಿ, ನಾಕ ಮಕ್ಳನ್ನ ಸಲುವು ತ್ತಿದ್ದಳು. ಇವನೇ ದೊಡ್ಡ ಮಗ. ಅಪ್ಪ ಕುಡ್ದು ಕುಡ್ದು ಅದಾಗಲೇ ಮಣ್ಣಾಗಿದ್ದ. ಕೈಯಲ್ಲಿ ಮಾರ್ಕ್ಸ್‌ಕಾರ್ಡ್ ಹಿಡಿದು ನಿಂತಿದ್ದವನ ಈ ಕಥೆ ತಿಳಿದದ್ದು ಆಮೇಲೆ. ಅವನ ಎರಡಕ್ಷರದ ಶಬ್ದ ನನ್ನ ಮಾಸ್ತರಕಿಯ ಸೊಕ್ಕಡಗಿಸಿ ಹೆಡೆಮುರಿ ಕಟ್ಟಿದ ಮೇಲೆ.

ಆತ ಬಂದಿದ್ದು ಬಿ.ಎ. ಅಡ್ಮಿಷನ್‌ಗಾಗಿ. ಬಡತನ ಮೈಮುಚ್ಚಿದ ಬಟ್ಟೆಯಂತೆ ಹೊಚ್ಚಿಕೊಂಡಿರುವ ಈ ಸೀಮೆಯಲ್ಲಿ ಮಕ್ಕಳ ಶಿಕ್ಷಣ ಮುಖ್ಯ ಆದ್ಯತೆಯಲ್ಲ. ನಮ್ಮಂತಹ ಸರಕಾರಿ ಕಾಲೇಜು ಗಳನ್ನು ಹುಡುಕಿಕೊಂಡು ಬರುವ ಬಡಮಕ್ಕಳ ಮಾರ್ಕ್ಸ್‌ ಕಾರ್ಡಿನಲ್ಲಿ 50-60ರ ಗಡಿಯಲ್ಲಿ ಮಾತ್ರ ಅಂಕಗಳಿ ರುತ್ತವೆ. ಕೂತು ಓದಿ ಹೆಚ್ಚಿನ ಪರ್ಸಂಟೇಜ್ ಮಾಡಿದ ಇದ್ದುಳ್ಳವರ ಮನೆಯ ಮಕ್ಕಳು ದೊಡ್ಡ ಊರುಗಳಿಗೆ ದೊಡ್ಡ ಕಾಲೇಜುಗಳಿಗೆ ಓಡಾಡುತ್ತಾರೆ. ಹಾಗಾಗಿ ಅಪರೂಪಕ್ಕೆ ಕೈಗೆ ಹತ್ತುವ ಇಂತಹ ಮಾರ್ಕ್ಸ್ ಕಾರ್ಡ್ ಖುಷಿಯನ್ನುಂಟುಮಾಡು ತ್ತದೆ. ಅದೇ ಉಮೇದಿಯಲ್ಲಿ ಮಾರ್ಕ್ಸ್‌ಗಳನ್ನೇ ನೋಡುತ್ತ 'ಮುಂದೇನು ಮಾಡ್ಬೇಕಂತಿದೀಯಾ?' ಎಂದೆ. ಅವನ ಕಾಲು ಗಳ ಹಿಮ್ಮಡ ಕಿತ್ತ ಚಪ್ಪಲಿಯನ್ನೋ ಕಾಲರು ಪಿಸಿದ ಅಂಗಿ ಯನ್ನೋ ನೋಡಿದ್ದರೆ ಅಷ್ಟು ಸಲೀಸಾಗಿ ಈ ಪ್ರಶ್ನೆ ಕೇಳುತ್ತಿರ ಲಿಲ್ಲವೇನೋ. ಅವನು ಕನಸು ತುಂಬಿ ಒದ್ದೆಯಾದ ದನಿಯಲ್ಲಿ ಹೇಳಿದ್ದ 'ಮಿಲ್ಟ್ರಿ'. ಒಂಚೂರು ಸಾವರಿಸಿಕೊಂಡೆ. ಬಿ.ಎ., ಬಿ.ಎಡ್. ಮಾಡಿಕೊಂಡಿದ್ದರೆ... ಅಂತ ಏನೋ ಹೇಳ ಹೊರಟೆ. ನನಗೇ ಖಚಿತವಿರಲಿಲ್ಲ. ಇನ್ನೂ 4 ವರ್ಷಗಳನ್ನು ಓದಿನಲ್ಲಿ ಕಳೆ ಯುವ ಸ್ಥಿತಿಯಲ್ಲಿ ಅವನಿರಲಿಲ್ಲ. ದಿನದಿಂದ ದಿನಕ್ಕೆ ಜೀವ ತೇದು ಹಣ್ಣಾಗುತ್ತಿರುವ ತಾಯಿ, ಅಣ್ಣನ ಕಡೆ ಆಸೆಕಂಗಳಿಂದ ನೋಡೋ ತಮ್ಮ, ತಂಗಿಯರು ಅವನ ಭವಿಷ್ಯದ ರೂಪುರೇಷೆ ಬರೆಯುತ್ತಿದ್ದರು. 'ಮತ್ತ್ಯಾವ ನೌಕರಿ ಸಿಗೋದೂ ಅಷ್ಟ ಸುಲಭ ಅಲ್ಲ' ಅಂದ. ತಲೆ ಎತ್ತರಿಸಿ ಅವನ ಮುಖ ನೋಡಿದೆ. ಮಕ್ಕಳು ತಲೆದಾಟಿ ಬೆಳೆಯುವು ದೆಂದರೆ ಇದೇ ಏನೋ?

ಇದು ಇವನೊಬ್ಬನ ಕಥೆಯಲ್ಲ. ಕ್ಲಾಸಿನಲ್ಲಿರುವ ಹುಡುಗರ ಮನಸ್ಸಿನಲ್ಲಿ ಮಿಲ್ಟ್ರಿ ಸೆಲೆಕ್ಷನ್ ಎಂಬ ಗುಂಗಿಹುಳು ಕೊರೆಯುತ್ತಿರುತ್ತದೆ. ಸುತ್ತಮುತ್ತಲ ನಗರಗಳಲ್ಲಿ ಐ.ಎ.ಎಸ್., ಐ.ಪಿ.ಎಸ್. ಕೋಚಿಂಗ್ ಸೆಂಟರ್‌ಗಳಂತೆ ಮಿಲಿಟ್ರಿ ಸೆಲೆಕ್ಷನ್‌ಗಾಗಿಯೂ ಕೋಚಿಂಗ್ ಸೆಂಟರ್‌ಗಳು ನಡೆಯುತ್ತವೆ. ನಾವು ಮತ್ತು ನಮ್ಮಂಥವರು ಆಗಾಗ ಕಾಂಪಿಟೇಟಿವ್ ಎಕ್ಸಾಮ್‌ಗಳ ಬಗ್ಗೆ ವಿಶೇಷ ಉಪನ್ಯಾಸಗಳನ್ನು ಇಡಿಸುತ್ತೇವೆ. ಈ ಮಕ್ಕಳು ಅದನ್ನೊಂದು ನಗೆ ನಾಟಕದಂತೆ ನೋಡುತ್ತಾರೋ ಏನೋ? ಹುಡುಗರು ಅಲ್ಲಲ್ಲಿ ಸೇರಿ ಏನೋ ಗಂಭೀರವಾಗಿ ಮಾತಾಡಿ ಕೊಳ್ಳುತ್ತಿ ದ್ದಾರೆಂದರೆ, ಅದು ಈ ಮಿಲಿಟ್ರಿ ಸೆಲೆಕ್ಷನ್ ಕೋಚಿಂಗ್ ಕ್ಲಾಸ್‌ಗಳ ಬಗ್ಗೆ ಮಾಹಿತಿ ಮತ್ತು ಅದಕ್ಕೆ ಫೀಸು ಹೊಂದಿಸೋ ಹೆಣಗಾಟ. ಮಿಲಿಟ್ರಿಯಲ್ಲಿ ಉದ್ಯೋಗ ಪಡೆದು ವರ್ಷಕ್ಕೊಮ್ಮೆ ಬಂದು ಮನೆಯುಪಚಾರ ಊರ ಮರ‌್ಯಾದೆ ಪಡೆದು ಹೋಗುವವರು ಇವರ ಹೀರೋಗಳು. ಇದೇ ಸುಮಾರಿಗೆ ಉತ್ತರಾ ಖಾಂಡದಲ್ಲಿ ಸಂತ್ರಸ್ತರ ನೆರವಿಗೆ ದುಡಿಯುತ್ತಿದ್ದ ನರಗುಂದದ ಯೋಧ ಮರಣ ಹೊಂದಿದ್ದ. ಅವನೂ ಇಂಥ ಕನಸುಗಳ ಬೆನ್ನೇರಿ ಹೋದವನೇ. 2 ದಿನವಾ ದರೂ ಶವ ಬಂದಿರ ಲಿಲ್ಲ. ಆ ಕುಟುಂಬದ ಗೋಳು ನೋಡು ವಂತಿರಲಿಲ್ಲ. ಪತ್ರಿಕೆಗಳಲ್ಲಿ ಅದೇ ಸುದ್ದಿ, ವರಾಂಡದಲ್ಲಿ ಪತ್ರಿಕೆ ಓದುತ್ತ ನಿಂತ ಹುಡುಗರು ಮಾತಾಡಿಕೊಳ್ಳುತ್ತಿದ್ದರು. 'ಸಾವ ಬರೂದ ಐತಿ, ಬ್ಯಾಡಂದ್ರ ಬಿಟ್ಟಿತೇನ ಯಾರನ್ನಾರ? ಹಿಂಗ್ ಸಾಯಾಕೂ ಪುಣ್ಣೇವು ಬೇಕ್, ಏನ್ಲೇ...' ಕಿವಿ ಕೊಡವಿ ಮುಂದಿನ ಕ್ಲಾಸಿಗೆ ಹೋಗಿದ್ದೆ. ಶಾಸನಗಳಲ್ಲಿ ಓದಿದ್ದೆವು. 'ಗೆದ್ದರೆ ರಾಜ್ಯಲಕ್ಷ್ಮಿ, ಸೋತರೆ ಸ್ವರ್ಗದಲ್ಲಿ ಅಪ್ಸರೆ. ಕ್ಷಣಭಂಗುರವಾದ ದೇಹಕ್ಕೆ ರಣಾಂಗಣದಲ್ಲಿ ಮರಣ ಸಂಭವಿಸಬಹುದೆಂದು ಚಿಂತಿಸ ಬಾರದು.' ರಾಜಪ್ರಭುತ್ವವು ಸೈನಿಕರನ್ನು ಪ್ರಚೋದಿ ಸಲು ಬರೆಸುತ್ತಿದ್ದ ಶಾಸನಗಳವು. ಈಗ ರಾಜರಿಲ್ಲ. ಆದರೆ ಪ್ರಚೋದ ನೆಯೂ ಶಾಸನವೂ ಬಡವರ ಮನೆ ಅಂಗಳ ಬಿಟ್ಟು ಕದಲಲಿಲ್ಲ.

ನದಿ ಹರಿದ ಗುರುತಿನಂತೆ ತಿರುವುತಿರುವಾಗಿ ಉದ್ದಕ್ಕೆ ಚಾಚಿಕೊಂಡ ರಸ್ತೆಯಲ್ಲಿ ಹಳಿಯಾಳದಿಂದ ಬೆಳಗಾವಿ ಬಳಸಿ ಮಹಾರಾಷ್ಟ್ರದ ಬೇರೆ ಬೇರೆ ದೊಡ್ಡ ಊರುಗಳಿಗೆ ಬಸ್ಸುಗಳು ಓಡಾಡುತ್ತವೆ. ಅಲ್ಲಲ್ಲಿ ಹಳ್ಳಿಯ ಜನ ಹತ್ತುತ್ತಾರೆ. ಅಥವಾ ಬಿಳಿ ಬಿಳಿ ಗೊಬ್ಬರ ಚೀಲಗಳು ಹತ್ತುತ್ತವೆ. ಊರ ಹೊಲಗಳಿಗೆ ಗೊಬ್ಬರ ತುಂಬಿಕೊಂಡು ಬಂದ ಚೀಲಗಳು ಈಗ ತೊಳೆದು ಹಸನಾಗಿ ಗುಳೆ ಹೋಗುವವರ ಸಾಮಾನು ತುಂಬಿ ಕೊಂಡು ಬಾಯ್ಕಟ್ಟಿ ಕೂತಿವೆ. ಪರಿಚಯದ ಕಂಡಕ್ಟರ್ ಡ್ರೈವರ್‌ ಗಳು ಅಲ್ಲಿ ಕಾಯುತ್ತಿರುವವರಿಗೆ ಅವನ್ನು ತಲುಪಿಸು ತ್ತಾರೆ. ಹಬ್ಬ ವೊಂದು ಮುಗಿದ ಮಾರನೇ ದಿನವಂತೂ ಗದ್ದ ಲವೋ ಗದ್ದಲ. ಬಂದವರು, ಹೋಗುವವರು, ಕಳಿಸಲು ಬರು ವವರು ಬಸ್ಸಿಡೀ ಸಿದ್ದಪ್ಪಜ್ಜನ ಜಾತ್ರೆಯಂತಾಗುತ್ತದೆ. ಇಲ್ಲೊಂದು ಊರಿದೆ. ಇಲ್ಲಿಂದ ಕನಿಷ್ಠ 50ರಿಂದ 100 ಮಕ್ಕಳು ದುಡಿ ಯಲು 'ಮರಾಠಿ ದೇಸ'ಕ್ಕೆ ಹೋಗಿದ್ದಾರೆ. ಹೈಸ್ಕೂಲು ಕಲಿವ ವಯಸ್ಸಿನ ಇವರು ಅದಾಗಲೇ ದೊಡ್ಡವರ ಸ್ಟೈಲಿಗೆ ತಮ್ಮನ್ನು ಎತ್ತರಿಸಿ ಕೊಂಡಿ ದ್ದಾರೆ. ಅಲ್ಲಿ ಅವರು ಕಟ್ಟಡ ಕಟ್ಟುವ ಗೌಂಡಿಗಳ ಕೈಯಾಳುಗಳು. ಮುಖ್ಯ-ಗೌಂಡಿ ಊರೊಟ್ಟಿನ ಮಕ್ಕಳನ್ನು ಕೂಡಿಸಿಕೊಂಡು ಅಲ್ಲಿ ಕಂಟ್ರಾಕ್ಟ್ ಹಿಡಿಯುವವ. ಅಲ್ಲಿಯ ದುಬಾರಿ ಕೂಲಿಯಿಂದ ತಪ್ಪಿಸಿಕೊಳ್ಳುವವ. ಅದಕ್ಕಾತ ಮಕ್ಕಳ ಹೆತ್ತವರಿಗೆ ಅಡ್ವಾನ್ಸ್ ಕೊಟ್ಟಿರುತ್ತಾನೆ. ಇದೊಂದು ರೀತಿ ಹೊಸ ಜೀತಪದ್ಧತಿ. ಊರಲ್ಲಿ ಶಾಲೆಯಿದೆ, ಸವಲತ್ತುಗಳೂ ಸಿಗುತ್ತಿವೆ. ಆದರೂ ಈ ಮಕ್ಕಳ ಓದು ಕನ್ನಡ ಶಾಲೆಗೇ ಮುಕ್ತಾಯವಾಗಿ ಬಿಡುತ್ತಿದೆ. ಬಡತನವೂ ಸೇರಿದಂತೆ ಶಿಕ್ಷಣದ ಬಗೆಗಿನ ಅವಜ್ಞೆ, ನಿರುದ್ಯೋಗದ ಭಯ, ಗಿಡ ಎಳಕಲಿದ್ದಾಗಲೇ ಬಗ್ಗಿಸಿ ಕಟ್ಟ ಬೇಕು ಎನ್ನೋ ಭಾವನೆ... ಹೀಗೆ ಏನೆಲ್ಲ ಕಾರಣಗಳಿವೆ. ಈ ಜನರಿಗೆ ಹೆಚ್ಚಿನ ಭೂಮಿಯಿಲ್ಲ. ಆದರವರು ಕಷಿ ಪರಿಣತರು. ಮಾವಿನ ಗಿಡಗಳಿಗೆ ಕಸಿಕಟ್ಟುವ ವಿಶಿಷ್ಟ ಜ್ಞಾನವನ್ನೇ ಉದ್ಯೋಗ ವಾಗಿಸಿಕೊಂಡಿದ್ದಾರೆ. ಎರಡು ಹೊತ್ತಿನ ಊಟಕ್ಕೆ ಸಾಲುತ್ತಿದೆ. ಆದರೆ ಮಕ್ಕಳು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಂಪಾ ದನೆಗೆ ಕೈಜೋಡಿಸಿದರೆ ಒಂದಿಷ್ಟು ನೆಮ್ಮದಿಯಿಂದ ಉಸಿರಾಡ ಬಹುದೆಂಬ ತುರ್ತು ಇದೆ. ಇದು ತಪ್ಪಲ್ಲ. ಆದರೆ ಸರಿಯೇ?

ಹಬ್ಬಕ್ಕೆ ಮನೆಗೆ ಬಂದ ಮಗ ಮತ್ತೆ ಮರಳಿ ಹೋದಾನೆ ಇಲ್ಲವೆ ಎಂಬ ಆತಂಕ ಹೆತ್ತವರಿಗೆ. ಅಂವ ವಾರಿಗೆಯವರೊಂದಿಗೆ ತಯಾರಾಗದಿದ್ದರೆ ಪುಸಲಾಯಿಸಿ ಸನ್ನದ್ಧಗೊಳಿಸಲಾಗುತ್ತದೆ. ಒಣರೊಟ್ಟಿ ಚಟ್ನಿಗಳೊಂದಿಗೆ ಹಸಿ ಕಣ್ಣೀರನ್ನೂ ಕಟ್ಟಿ ಕಳಿಸಲಾಗುತ್ತದೆ. ಆದರೆ ಕಲಿಯಬೇಕಾದ, ಚಿತ್ರ ಬರೆಯ ಬೇಕಾದ, ಆಡಬೇಕಾದ ವಯಸ್ಸಿನಲ್ಲಿ ಗಾರೆ ಕೆಲಸಕ್ಕೆ ಹೋಗುವ ಮಕ್ಕಳ ಮನಸ್ಸಿನಲ್ಲಿ ಏನನ್ನೋ ಕಳಕೊಂಡ ಯಾತನೆಯ ಮೊಹರು ಉಳಿದುಹೋಗುತ್ತದೆ. ವರ್ಷಗಳು ಸರಿಯುತ್ತವೆ. ಹುಡುಗರು 18 ಚಟಗಳ ಮೇಲುಸ್ತುವಾರಿಯಲ್ಲಿ ಸೊಪ್ಪಾಗಿ ಹೋಗಿರುತ್ತಾರೆ. ಮುಂದೆ ಅವರವರ ಬದುಕು ಗಳಲ್ಲಿ ಏನೇನು ಸಂಭವಿ ಸುತ್ತದೋ ಆ ಎಲ್ಲಕ್ಕೂ ಊರ ಮಾರಮ್ಮ ಹೊಣೆಗಾರ ಳಾಗಬೇಕಾಗುತ್ತದೆ. ಜನಪದ ಕಥೆಯೊಂದು ಹೀಗಿದೆ- ಭಿಕ್ಷುಕಿಯೊಬ್ಬಳು ಎಳೆಮಗು ವನ್ನೆತ್ತಿಕೊಂಡು ಭಿಕ್ಷಕ್ಕೆ ಬರುತ್ತಾಳೆ. ಮೂರು ದಿನ ಗ ಳಿಂದ ಹಸಿವು. ಒಬ್ಬ ಗಹಿಣಿಗೆ ಪಾಪ ಅನ್ನಿಸುತ್ತದೆ. ಅನ್ನ ಕಲಸಿ ತಂದು ಇಲ್ಲೇ ಮಗುವಿಗೆ ಉಣ್ಣಿಸಲು ಹೇಳುತ್ತಾಳೆ. ಆ ಭಿಕ್ಷುಕಿ ತಾಯಿ ಖುಷಿಯಿಂದ ಉಣ್ಣಿಸುತ್ತಾಳೆ. ಆಮೇಲೆ ಅವಳು ಸೀದಾ ಊರ ಹೊರಗೆ ಹೋಗಿ ಸೆರಗು ಹಾಸಿ ಮಗುವನ್ನು ಮಲಗಿಸಿ ಕೈಲಿರೋ ಚಾಕುವಿನಿಂದ ಮಗುವಿನ ಹೊಟ್ಟೆ ಕುಯ್ದು ಅನ್ನ ತಗೊಂಡು

ತಿಂತಾಳೆ-ಅಯ್ಯೋ ಯಾಕಿಂಥ ಕಥೆ ಕಟ್ಟಿದರೋ?

ಎಲ್ಲೆಲ್ಲೂ ರೂಪಾಯಿಗೆ ಕೆ.ಜಿ. ಅಕ್ಕಿಯದೇ ಸುದ್ದಿ. ಇದ್ದುಳ್ಳವರು ದುಡಿಯಲು ಕೂಲಿಯವರು ಸಿಗದಿದ್ದರೆ ಅಂಥ ಭಯಬಿದ್ದಿದ್ದಾರೆ. ಆ ಅಕ್ಕಿ ಆ ಹಾಲು ಆ ಊಟ ಎಲ್ಲ ಸೇರಿ ಇಂಥ ಊರುಗಳಲ್ಲಿ ಕಣ್ಣು ಬಿಡುತ್ತಿರುವ ಮಕ್ಕಳ ಕೈಗೆ ಗಾರೆತೂತು ಬೀಳದಂತೆ ತಡೆಯಲಿ. ಸರಕಾರಿ ಶಾಲೆಗಳು ಜೀವ ಹಿಡಿಯಲಿ. ಶೇ. 82 ಮಾರ್ಕ್ಸ್‌ಕಾರ್ಡಿನವನಿಗೆ ಮಿಲ್ಟ್ರಿ ಬಿಟ್ಟೂ ಬೇರೆ ಉದ್ಯೋಗ ಸಿಗಲಿ.


ಮಂಗಳವಾರ, ಜುಲೈ 16, 2013

ಸ್ವಾಭಿಮಾನ ಕುರಿತು ಅಂಬೇಡ್ಕರರ ಆತ್ಮಕತೆಯ ಪುಟಗಳಿಂದ.... ಭಾಗ-1




ರಘೋತ್ತಮ ಹೊ.ಬ, 

ಚಾಮರಾಜನಗರ
ಸೌಜನ್ಯ : ವಾರ್ತಾಭಾರತಿ

‘ಎಲ್ಲಿ ನಿಮ್ಮ ಸ್ವಾಭಿಮಾನಕೆ ಧಕ್ಕೆ ಬರುತ್ತದೆಯೋ ಅಲ್ಲಿ ನಿಮ್ಮ ಚಪ್ಪಲಿಯನ್ನು ಸಹ ಬಿಡಬೇಡಿ’. ಖಛ್ಝ್ಛಿ ್ಟಛಿಛ್ಚಿಠಿ  ಅಥವಾ ಸ್ವಾಭಿಮಾನಕ್ಕೆ ಸಂಬಂಧಿಸಿದಂತೆ ಅಂಬೇಡ್ಕರರ ಶ್ರೇಷ್ಠ ನುಡಿ ಗಳಿವು. ಬಹುಶಃ ವ್ಯಕ್ತಿ ಗೌರವ ಅಥವಾ ಸ್ವಾಭಿಮಾನದ ಬಗ್ಗೆ ಅಂಬೇಡ್ಕರರು ತಲೆಕೆಡಿಸಿ ಕೊಂಡಷ್ಟು ಈ ವಿಶ್ವದಲ್ಲಿ ಯಾರೂ ತಲೆಕೆಡಿಸಿ ಕೊಂಡಿರಲಿಕ್ಕಿಲ್ಲ. ಅದರಲ್ಲೂ ದಲಿತರ ಸ್ವಾಭಿಮಾನದ ಪ್ರಶ್ನೆ? ಹಾಗೆಯೇ ದಲಿತ ಮಹಿಳೆಯ ಸ್ವಾಭಿಮಾನದ ಪ್ರಶ್ನೆ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಲ್ಲಿಯೇ, ಶೋಷಿತರಿಗೆ ಸ್ವಾಭಿಮಾನದ ಪಾಠ ಕಲಿಸುವುದರಲ್ಲಿಯೇ, ಆತ್ಮಗೌರವ ತಂದುಕೊಡುವುದರಲ್ಲಿಯೇ ಅಂಬೇಡ್ಕರ್ ತಮ್ಮ ಜೀವನವಿಡೀ ಶ್ರಮಿಸಿದರು. ಒಂದರ್ಥದಲ್ಲಿ ಅವರು ಸ್ವಾಭಿಮಾನದ ಕಿಡಿ.

ಕಿಡಿ ಅಥವಾ ಕೋಪ, ಹಾಗೆಂದಾಕ್ಷಣ ಅಂಬೇಡ್ಕರರು ಇದ್ದಕ್ಕಿದ್ದ ಹಾಗೆಯೇ ದಲಿತರ ಸ್ವಾಭಿಮಾನದ ಬಗ್ಗೆ ಈ ಪರಿ ತಲೆಕೆಡಿಸಿ ಕೊಂಡರೆ ಅಥವಾ ಯಾರದೋ ಮೇಲಿನ ದ್ವೇಷಕ್ಕೆ ಹಾಗೆ ನಿರ್ಧಾರಕ್ಕೆ ಬಂದರೆ? ಖಂಡಿತ ಇಲ್ಲ. ಹಾಗಿದ್ದರೆ? 1935 ಅಕ್ಟೋಬರ್ 13ರಂದು ನಾಸಿಕ್‌ನ ಇಯೋಲಾ ಎಂಬಲ್ಲಿ ಅಂಬೇಡ್ಕರರು ಕೇಳುವ ಪ್ರಶ್ನೆಗಳನ್ನು ನೋಡಿ.

 1. ಈ ಭಾರತದಲ್ಲಿ ನೀವೊಬ್ಬರೇ(ದಲಿತರು) ಯಾಕೆ ಶೋಷಣೆಗೊಳಗಾಗುತ್ತಿದ್ದೀರಿ?
2. ಹಿಂದೂ ಧರ್ಮ ನಿಮಗೆ ಕರುಣೆ ತೋರಿಸುತ್ತಿಲ್ಲವೇಕೆ?
3. ಹಿಂದುತ್ವದಲ್ಲಿ ನಿಮಗೆ ಸಮಾನತೆ ಇದೆಯೇ?
4. ಹಿಂದುತ್ವದಲ್ಲಿ ನಿಮಗೆ ಸ್ವಾತಂತ್ರ ವಿದೆಯೇ?

ಬಹುಶಃ ಈ ಪ್ರಶ್ನೆಗಳು ಹಿಂದೂಗಳಿಗೆ ಎಲ್‌ಕೆಜಿ ಮಕ್ಕಳ ಪ್ರಶ್ನೆಗಳ ಹಾಗೆ ಕಾಣ ಬಹುದು. ಆದರೆ ಶೋಷಿತರಿಗೆ? ಅವು ಅಂಬೇಡ್ಕರರ ಸ್ವಾಭಿಮಾನದ ಕಿಡಿಯ ಸಣ್ಣ ಕಣಗಳಂತೆ ಕಂಡರೆ ಅತಿಶಯೋಕ್ತಿ ಯೇನಲ್ಲ. ಯಾಕೆಂದರೆ ಅಂಬೇಡ್ಕರರಿಂದ ಇಂತಹ ಪ್ರಶ್ನೆಗಳನ್ನು ಎದುರಿಸಿದ ಯಾವುದೇ ದಲಿತನಾದರೂ ‘ತನ್ನೊಬ್ಬನ ಮೇಲೆ ಯಾಕೆ ದೌರ್ಜನ್ಯ ನಡೆಯುತ್ತಿದೆ? ಯಾಕೆಂದರೆ ನಾನು ಕೀಳು ಜಾತಿಯವನು. 

ಹಿಂದೂಗಳೆಲ್ಲ ನಮಗೆ ಕರುಣೆ ತೋರಿಸುತ್ತಿಲ್ಲ ಯಾಕೆಂದರೆ ನಾವು ಕರುಣೆಗೆ ಅರ್ಹರಲ್ಲ. ಹಿಂದೂಗಳೆಲ್ಲ ನಮಗೆ ಸಮಾನತೆ ನೀಡುತ್ತಿಲ್ಲ. ಯಾಕೆಂದರೆ ನಾವು ಸಮಾನತೆಗೆ ಅರ್ಹರಲ್ಲ. ಹಿಂದುತ್ವದಲ್ಲಿ ನಮಗೆ ಸ್ವಾತಂತ್ರವಿಲ್ಲ. ಯಾಕೆಂದರೆ ನಾವು ಸ್ವಾತಂತ್ರಕ್ಕೂ ಕೂಡ ಅರ್ಹರಲ್ಲ’ ಎಂದುಕೊಳ್ಳುತ್ತಾನೆಯೇ? ಖಂಡಿತ ಇಲ್ಲ. ಬದಲಿಗೆ ಆತ ಅಂಬೇಡ್ಕರರ ಪ್ರಶ್ನೆಗಳ ಬಗ್ಗೆ ಗಹನವಾಗಿ ಚಿಂತಿಸುತ್ತಾನೆ. ನಾನು ಯಾರು? ನಾನೇಕೆ ಹೀಗಾದೆ? ನನ್ನ ಹೀನಾಯ ಸ್ಥಿತಿಗೆ ಕಾರಣರಾರು? ಎಂದು ತನ್ನನ್ನೆ ತಾನು ಪ್ರಶ್ನಿಸಿಕೊಳ್ಳುತ್ತಾನೆ.

ಒಮ್ಮೆ ಆತ ಪ್ರಶ್ನಿಸಿಕೊಳ್ಳಲು ಪ್ರಾರಂಭಿಸಿದನೆಂದರೆ ಮುಗಿಯಿತು ಆತ ಸ್ವಾಭಿಮಾನಿಯಾದನೆಂದೇ ಅರ್ಥ. ಅಂದಹಾಗೆ ಅಂಬೇಡ್ಕರರು ಬಯಸಿದ್ದು ಇದನ್ನೆ! ಹಾಗೆ ಹೇಳುವುದಾದರೆ ಸ್ವಾಭಿಮಾನಕ್ಕೆ ಸಂಬಂಧಿಸಿದಂತೆ ಅಂಬೇಡ್ಕರರ ಪ್ರಶ್ನೆ ಇಲ್ಲಿಗೇ ಮುಗಿಯುವುದಿಲ್ಲ. ಈ ನಿಟ್ಟಿನಲ್ಲಿ ಅವರ ಆತ್ಮಕತೆಯ ಪುಟಗಳತ್ತ ಚಿತ್ತಹರಿಸುವುದಾದರೆ, ಅಂಬೇಡ್ಕರರು 1936 ಮೇ 17ರಂದು ಮಹಾ ರಾಷ್ಟ್ರದ ಥಾಣೆ ಎಂಬಲ್ಲಿ ತನ್ನ ಸ್ವಾಭಿಮಾನವನ್ನು ಕೆಣಕಿದ ಬಾಲ್ಯದ ಕೆಟ್ಟ ಘಟನೆಯನ್ನು ಹೀಗೆ ವಿವರಿಸುತ್ತಾರೆ ‘ನಾನು ಇಂಧೋರ್ ಸಮೀಪದ ಮಹೌ ಎಂಬಲ್ಲಿ ಹುಟ್ಟಿದೆ. 

ನನ್ನ ತಂದೆ ಮಹೌನಲ್ಲಿ ಸೇನೆಯ ಸುಬೇದಾರ್ ಹುದ್ದೆಯಲ್ಲಿದ್ದರು. ನಾವು ಅಲ್ಲಿದ್ದಷ್ಟು ದಿನ ಅಂದರೆ ಸೇನೆಯ ಕ್ವಾರ್ಟರ್ಸ್‌ನ ಕಾರ್ಯಸ್ಥಾನದಲ್ಲಿಷ್ಟೂ ದಿನ ನಮಗೆ ಅಸ್ಪಶ್ಯತೆಯ ಗಂಧ ಗಾಳಿಯೂ ತಿಳಿದಿರಲಿಲ್ಲ. ಆದರೆ ನನ್ನ ತಂದೆ ಸೇನೆಯಿಂದ ನಿವೃತ್ತರಾಗಿ ಸತಾರಕ್ಕೆ ಬಂದಾಗ ನನಗೆ ಅಸ್ಪಶ್ಯತೆಯ ಪ್ರಥಮ ಅನುಭವವಾಯಿತು. ಮುಖ್ಯವಾಗಿ ಅದು ಕ್ಷೌರಕ್ಕೆ ಸಂಬಂಧಪಟ್ಟಂತೆ.

ಯಾಕೆಂದರೆ ಸತಾರದಲ್ಲಿ ಅಷ್ಟೊಂದು ಕ್ಷೌರಿಕ ರಿದ್ದರೂ ಯಾವುದೇ ಕ್ಷೌರಿಕನೂ ನಮ್ಮ ತಲೆಕೂದಲು ಕತ್ತರಿಸಲು ಮುಂದೆ ಬರುತ್ತಿರಲಿಲ್ಲ. ಈ ಕಾರಣಕ್ಕಾಗಿ ದುರಂತವೆಂದರೆ ನಮ್ಮ ಹಿರಿಯ ಅಕ್ಕನೇ ನಮ್ಮನ್ನು ಮನೆಯ ಹೊರಗಡೆ ಕೂರಿಸಿ ನಮ್ಮ ತಲೆಗೂದಲನ್ನು ಕತ್ತರಿಸಬೇಕಾಗುತ್ತಿತ್ತು! ಒಂದರ್ಥದಲ್ಲಿ ಇದು ನನ್ನನ್ನು ವಿಚಲಿತ ಗೊಳಿಸಿತು. ಯಾಕೆ ಹೀಗೆ ಇಷ್ಟೊಂದು ಕ್ಷೌರಿಕರಿದ್ದರೂ ನಮ್ಮ ಕೂದಲನ್ನು ಕತ್ತರಿಸಲು ಅವರು ಮುಂದೆ ಬರುತ್ತಿಲ್ಲವೇಕೆ? ಎಂಬ ಪ್ರಶ್ನೆ ನನ್ನನ್ನು ಪದೇ ಪದೇ ಕಾಡತೊಡಗಿತು’.

ಮತ್ತೊಂದು ಘಟನೆ ‘ನಮ್ಮ ತಂದೆ ಗೋರೇಗಾಂವ್‌ನಲ್ಲಿರಬೇಕಾದರೆ ಅವರು ಒಮ್ಮೆ ನಮ್ಮನ್ನು ಗೋರೇಗಾಂವ್‌ಗೆ ಬನ್ನಿ ಎಂದು ಕರೆದರು. ಹಾಗೆಯೇ ಪ್ರಯಾಣದ ಖರ್ಚಿಗೆ ಎಂದು ಅವರು ಸ್ವಲ್ಪ ಹಣವನ್ನೂ ಕಳುಹಿಸಿ ದ್ದರು. ಆ ಹಣದಿಂದ ಹೊಸಬಟ್ಟೆ ಖರೀದಿಸಿ, ರೈಲಿನಲ್ಲಿ ಪಯಣಿಸುವ ಕನಸು ಕಾಣುತ್ತಾ ಖುಷಿಯಿಂದ ನಾನು, ನನ್ನ ಸಹೋದರ ಮತ್ತು ನನ್ನ ಅಕ್ಕನ ಮಗಳು ಮೂವರು ಗೋರೆಗಾಂವ್ ನತ್ತ ಹೊರಟೆವು. ಹಾಗೆಯೇ ನಾವು ಬರುವುದಾಗಿ ಅದಾಗಲೇ ನಮ್ಮ ತಂದೆಯವರಿಗೆ ಪತ್ರವೊಂದನ್ನು ಸಹ ಕಳುಹಿಸಿದ್ದೆವು. ಆದರೆ ಅದು ಅವರಿಗೆ ತಲುಪಿರಲಿಲ್ಲ. 

ಆ ಕಾರಣಕ್ಕಾಗಿ ನಾವು ಗೋರೆಗಾಂವ್ ತಲುಪಿದಾಗ ನಮ್ಮ ತಂದೆಯವರು ಕಳುಹಿಸಿರಬಹುದೆನ್ನುವ ಸೇವಕ ನಿಗಾಗಿ ನಾವು ಹುಡುಕಿದರೂ ಆತ ನಮಗೆ ಕಾಣಲಿಲ್ಲ. ವಿಧಿಯಿಲ್ಲದೆ ಮುಕ್ಕಾಲು ಗಂಟೆ ನಾವು ಸ್ಟೇಷನ್‌ನಲ್ಲಿಯೇ ಕಳೆದೆವು. ಯಾರಾದರೂ ಬರಬಹುದು ನಮ್ಮನ್ನು ಕರೆದುಕೊಂಡು ಹೋಗಬಹುದು ಎಂದು ಕಾಯುತ್ತಾ ಕುಳಿತೆವು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಸ್ಟೇಷನ್ ಮಾಸ್ಟರ್ ‘ನೀವು ಯಾರಿಗಾಗಿ ಕಾಯುತ್ತಿದ್ದೀರಿ? ಯಾವ ಜಾತಿ? ಎಲ್ಲಿಗೆ ಹೋಗಬೇಕು?’ ಎಂದೆಲ್ಲ ಕೇಳಿದ. ನಾನು ಅವನಿಗೆ ‘ನಾವು ಮಹಾರ್ ಜಾತಿಗೆ ಸೇರಿದವರು’ ಎಂದು ನೇರವಾಗಿಯೇ ಹೇಳಿದೆ. 

ನಾನು ಹಾಗೆನ್ನುತ್ತಲೇ ಆತ ಆಘಾತಕ್ಕೊಳಗಾದ! ತಕ್ಷಣ ನಮ್ಮಿಂದ ಐದು ಹೆಜ್ಜೆ ಹಿಂದೆ ಸರಿದ! ಆದರೆ ನಾವು ಉತ್ತಮವಾಗಿ ಡ್ರೆಸ್ ಮಾಡಿಕೊಂಡಿದ್ದನ್ನು ನೋಡಿ ಉತ್ತಮ ಕುಲಕ್ಕೆ ಸೇರಿದವರಿರಬಹುದೆಂದುಕೊಂಡು ಎತ್ತಿನ ಗಾಡಿಯೊಂದನ್ನು ವ್ಯವಸ್ಥೆ ಮಾಡುವುದಾಗಿ ಹೇಳಿದ. ಆದರೆ ನಾವು ಮಹಾರ್ ಜಾತಿಯವರಾಗಿದ್ದರಿಂದ ಯಾವುದೇ ಎತ್ತಿನಗಾಡಿಯವನು ನಮ್ಮನ್ನು ಕೂರಿಸಿಕೊಂಡು ಹೋಗಲು ಮುಂದೆ ಬರಲಿಲ್ಲ. ಕಡೆಗೂ ಒಬ್ಬ ಒಪ್ಪಿಕೊಂಡನಾದರೂ ಆತನ ಕಂಡೀಷನ್ ಏನೆಂದರೆ ‘ನಾನು ಗಾಡಿ ಚಲಾಯಿಸುವುದಿಲ್ಲ. 

ನಿಮ್ಮಲ್ಲೆ ಯಾರಾದರೊಬ್ಬರು ಗಾಡಿ ಚಲಾಯಿಸಿ. ನಾನು ನಿಮ್ಮ ಜೊತೆ ಬರುತ್ತೇನೆ’ ಎಂಬುದಾಗಿತ್ತು! ಅಂದಹಾಗೆ ಆತ ಹಾಗೆ ಬರುತ್ತೇನೆ ಎಂದಾಗ ಸಮಯ ಸಂಜೆ ಏಳು ಗಂಟೆಯಾಗಿತ್ತು. ಹಾಗೆಯೇ ಮಿಲಿಟರಿ ಏರಿಯಾದವನಾದ್ದರಿಂದ ನನಗೆ ಗಾಡಿ ಚಲಾಯಿಸುವುದು ಕಷ್ಟವೇನಿರಲಿಲ್ಲ. ಅವನ ಕಂಡೀಷನ್‌ಗೆ ಒಪ್ಪಿಕೊಂಡು ನಾನು ಮತ್ತು ಉಳಿದ ಮಕ್ಕಳೆಲ್ಲ ಗಾಡಿಯಲ್ಲಿ ಗೋರೆಗಾಂವ್ ಕಡೆ ಹೊರಟರೆವು.

ಸ್ವಲ್ಪ ದೂರ ಹೋದನಂತರ ಒಂದು ಒಂದು ಊರಿನ ಹೊರಗಡೆ ಒಂದು ಕೊಳ ಕಂಡೆವು. ‘ಮುಂದೆ ಎಲ್ಲಿಯೂ ನಿಮಗೆ ನೀರು ಸಿಗುವ ಸಾಧ್ಯತೆ ಇಲ್ಲವಾದ್ದರಿಂದ ನೀವು ಇಲ್ಲಿಯೇ ನಿಮ್ಮ ಊಟವನ್ನು ಮಾಡಬಹುದು’ ಎಂದು ಗಾಡಿಯವನು ನಮಗೆ ಸೂಚಿಸಿದ. ಅವನು ಹೇಳಿದ ಹಾಗೆ ಗಾಡಿಯಿಂದ ಇಳಿದ ನಾವು, ಅಲ್ಲಿಯೇ ನಾವು ತಂದಿದ್ದ ಬುತ್ತಿಯನ್ನು ತಿಂದು ಕೆಸರು ಕೆಸರಾದ ಗಬ್ಬುನಾರುತ್ತಿದ್ದ ಆ ಕೊಳದ ನೀರನ್ನೆ ಕುಡಿದೆವು. ಗಾಡಿಯವ ಗ್ರಾಮದ ಒಳಕ್ಕೆ ಹೋಗಿ ಅಚ್ಚುಕಟ್ಟಾಗಿ ತನ್ನ ಊಟ ಮುಗಿಸಿ ಮತ್ತೆ ನಮ್ಮ ಬಳಿ ಬಂದ! 

ಇತ್ತ ನಮ್ಮ ಪ್ರಯಾಣ ಮುಂದುವರಿದ ಹಾಗೇ ಕತ್ತಲು ಹೆಚ್ಚಾಗತೊಡಗಿತ್ತು. ಯಾವುದೇ ಬೀದಿ ದೀಪವಾಗಲೀ ಬೆಳಕಿನ ಸಣ್ಣ ತುಣುಕಾಗಲೀ ನಮಗೆ ಕಾಣಲಿಲ್ಲ. ಈ ಕಾರಣಕ್ಕಾಗಿ ಭಯ ಗೊಂಡ ನಾವು ಕತ್ತಲೆ ಮತ್ತು ಒಂಟಿತನ ದಿಂದಾಗಿ ಹೆದರಿ ಜೋರಾಗಿ ಅಳಲಾರಂಭಿಸಿದೆವು. ಅಷ್ಟೊತ್ತಿಗಾಗಲೇ ಅರ್ಧರಾತ್ರಿಯಾ ಗಿತ್ತು. ಆ ಸಂದರ್ಭದಲ್ಲಿ ನಾವು ಎಂತಹ ಸ್ಥಿತಿ ತಲುಪಿದ್ದೆವೆಂದರೆ ‘ನಾವು, ನಮ್ಮಪ್ಪಣಾಣೆಗೂ ಗೋರಾಗಾಂವ್ ತಲುಪುವುದಿಲ್ಲ’ ಎಂದು ಹತಾಶೆಗೊಂಡೆವು.ಹಾಗೆ ಮುನ್ನಡೆಯುತ್ತಲೇ ನಾವು ಒಂದು ಚೆಕ್‌ಪೋಸ್ಟ್ ತಲುಪಿದೆವು. ಚೆಕ್‌ಪೋಸ್ಟ್‌ನ ಕಾವಲುಗಾರನನ್ನು ನಾನು ‘ಇಲ್ಲಿ ಎಲ್ಲಾದರೂ ತಿನ್ನಲು ಏನಾದರೂ ಸಿಗುತ್ತದೆಯಾ?’ ಎಂದು ಕೇಳಿದೆ.ಕಾವಲುಗಾರ ಪರ್ಷಿ ಯನ್ ಭಾಷೆ ಮಾತನಾಡುತ್ತಿದ್ದನಾದ್ದ ರಿಂದ ಅವನ ಜೊತೆ ಪರ್ಷಿಯನ್ ಭಾಷೆಯಲ್ಲಿಯೇ ಮಾತನಾಡಿದೆ.

ಸೋಮವಾರ, ಜುಲೈ 15, 2013

Fighting Caste Fighting Patriarchy


EPW

 
 
Ilavarasan's death warns us that one cannot be fought without attacking the other.

Caste prejudice and caste as a relationship, as B R Ambedkar pointedly asserted, rest upon endogamous marriages. Inter-caste marriages have always been resented by casteists all over India – parents, caste bodies and political parties. The recent death of Ilavarasan, a young dalit man in Tamil Nadu’s Dharmapuri district, highlights once again the vice-like grip of caste prejudice.

While the immediate circumstances leading to Ilavarasan’s death are still under investigation, the fact remains that its root cause was the immense pressure on him and his wife Divya by the leaders of the Vanniyar community to which Divya belonged. Ilavarasan and Divya got married last year against the wishes of her parents, a decision which led her father, Nagarajan, to commit suicide. In itself this is doubly tragic – a death forced by a feeling of insult and humiliation that flowed from some extremely regressive ideas. The role of the Pattali Makkal Katchi (PMK), which has its mass base among the Vanniyars, is particularly dubious in this tragic episode. The PMK actively fanned the violence which erupted in the aftermath of this marriage and its activists led the attack on dalit homes in Naickenkottai village of Dharmapuri district in November 2012 after the death of Divya’s father. Similar attacks were reported on a dalit colony in Marakkanam in Villupuram district in April this year.

The PMK campaigned against the marriage, with its leader S Ramadoss openly opposing marriages between dalits and Vanniyars and demanding amendments to the Scheduled Caste/ Scheduled Tribe (Prevention of Atrocities) Act to subvert the clauses which protect dalits from physical and verbal attacks. He went on to suggest that parents should be given a legal say in their children’s marriage. Ramadoss’ virulent attacks on inter-caste marriage and the autonomy of young adults underline how much of a threat inter-caste weddings pose to the institution of caste. The PMK has now formed a federation of intermediate castes to further push this regressive programme.

The PMK has long been seen as the Vanniyar community’s political representative after it managed to achieve “compartmental reservation” for the “most backward classes” among the backward classes in the late 1980s. But in recent times its political fortunes seem to be ebbing and it has been reduced to holding only three assembly seats in the state.

In the near past, the PMK had resorted to demands and agitations to carve a bigger political constituency for itself. These demands were either chauvinistic (Tamil exclusivism) or parochial (demand for a separate state in north Tamil Nadu). However, these have not been successful political manoeuvres. It now seems to have latched on to an aggressive anti-dalit politics where opposition to “our girls” being taken by “dalit boys” is the rallying cry. PMK’s present politics exposes the limitations of identity politics which fails to move beyond its exclusivism and is today a visible by-product of Dravidian politics in Tamil Nadu. The limiting of social justice to identity assertion has seen the continuation of age-old caste antagonisms, rather than their gradual erosion. It is tragic and ironic to witness the revival of such fatal casteism in a state which pioneered powerful anti-caste movements in south Asia.

The caste-based antagonism between the dalit and Vanniyar communities has been present in Tamil Nadu for a long time. The Vanniyar agitations in the late 1980s were directed not only at obtaining affirmative action, but also against the fact that dalits were “beneficiaries” of the reservation policy.

The Vanniyars have traditionally been a poor, lower caste community. The socio-economic status of the dalits in northern Tamil Nadu has been worse. Yet, following migrations of upper and middle caste communities to urban areas, many among the Vanniyars became landowners, and dalits farm labourers on these lands.
As a result of reservation, the Vanniyars have improved their socio-economic status and have done well for themselves among the most backward classes. The recent rise in the socio-economic condition of dalits, sections of whom are moving from farm labour into various forms of urban or migrant work, has created a situation of conflict with the landowning backward classes. This has occasionally resulted in aggressive violence against dalits in several parts of Tamil Nadu in the past decade with the dalits facing attacks largely from the landed backward classes – Vanniyars in the north, Kallars in the south. The ruling Dravidian parties have been unable (or perhaps unwilling) to do much about this issue, for they too derive a fair amount of support from these landed backward communities. These pages had commented (“Dalits in Tamil Nadu”, 21 July 2012) on the need for a stronger political mobilisation of the dalits in the state.

Ilavarasan’s tragic death is an indication that progressive forces need to come out more forcefully against the intermeshing of caste and patriarchy. Whether it is the middle class families of India’s growing cities, or the Khap panchayats of rural north India or criminal politicians, it is becoming clear that caste cannot be fought without fighting patriarchy.
 

ಶನಿವಾರ, ಜುಲೈ 13, 2013

ಪಡ್ಡೆ ಹೈಕಳ ಜಾನಪದ



ಪಡ್ಡೆಗಳ ಲೋಕದ ಪದಾರ್ಥ ಚಿಂತಾಮಣಿ!

 
 ಸೌಜನ್ಯ: ವಿಜಯ ಕರ್ನಾಟಕ
ಭಾಷೆಯಲ್ಲಿ ಕೇವಲ ಶಿಷ್ಟತೆಯೊಂದೇ ಇರುವುದಿಲ್ಲ. ಅದರ ಬಾಗು-ಬಳುಕುಗಳು ಹೇಗಿದೆಯೆಂದರೆ, ಅದರಲ್ಲಿ ಅಭಿಜಾತತೆಯ ಜೊತೆಗೆ ತುಂಟತನದ ಲೀಲೆಯೂ ಹದವಾಗಿ ಇರುತ್ತದೆ. ಹಾಗಿದ್ದರಷ್ಟೇ ಭಾಷೆ ಜೀವಂತವಾಗಿ ಬೆಳೆಯುತ್ತಿರುತ್ತದೆ. ಅಂದಹಾಗೆ, ಪ್ರತೀ ಭಾಷೆಯಲ್ಲೂ ಹದಿಹರೆಯದ ಹುಡುಗ-ಹುಡುಗಿಯರದೇ ಆದ ಒಂದು 'ಪದಾರ್ಥ ಚಿಂತಾಮಣಿ' ಇರುತ್ತದೆ. ಲೋಕರೂಢಿಯಲ್ಲಿ ಇವರೆಲ್ಲ ಪಡ್ಡೆಗಳು! ಅವರ ಭಾಷೆಯಲ್ಲಿರುವ ಲಾಲಿತ್ಯವಿದೆಯಲ್ಲ, ಅದು ಉಲ್ಲಾಸದ ಸಂಕೇತ.
***

* ಶ್ರೀದೇವಿ ಕಳಸದ
ಯಾವುದೋ ಊರಿಂದ ಬಂದವರು, ಬೆಂಗಳೂರಿನ ಸಿಟಿ ಬಸ್ಸೇರಿರುತ್ತೀರಿ. ಕಂಡಕ್ಟರ್ ಕೂಗುತ್ತ ಬರುತ್ತಾನೆ: 'ಯಾರ‌್ರೀ ಟಿಕೆಟ್? ಮುಂದೆ ಮಾಮ ಬರ್ತಾನೆ, ಬೇಗ ತಗೊಳ್ಳಿ'.

ಹುಡುಗರ ಗುಂಪೊಂದು ಸೀಟಿದ್ದರೂ ಜೋತಾಡುತ್ತ ಜೋರು ಮಾತು ಶುರು ಮಾಡುತ್ತದೆ. 'ಏನಾಯ್ತ್ ಗೊತ್ತಾ? ನಿನ್ನೆ ರಾತ್ರಿ ನಾವೇನೋ ಸೀರಿಯಸ್ಸಾಗ್ ಮಾತಾಡ್ತಿದ್ರೆ ಇವನೊಬ್ಬ ಬಂದು ಮಧ್ಯೆ ತೊಪ್ಪೆ ಹಾಕ್ಕಂಡ್ ಕುಂತ ಗೂಬೆ ನನ್ಮಗ.'

'ಅಯ್ಯೋ ಅವನ್ನ ಬಿಡು ಮಚ್ಚಾ, ಯಾವಾಗ್ ನೋಡಿದ್ರೂ ಐಟಂ ಸಮೇತ ಇರ್ತಾನೆ. ಏನ್ ಐಟಮ್ಮಮ್ಮಾ ಅದೂ, ನೋಡ್ದಕೂಡ್ಲೇ ಕಳ್ದೋಗಿಬಿಟ್ಟೆ.'

'ಅದು ಇರ‌್ಲಿ ಬಿಡು ಮಾಮು, ನಿನ್ನೆ ಯಾರೋ ನನ್ನ ಪುಸ್ತಕಾನ ಅಬೇಸ್ ಮಾಡ್ಕೊಂಡ್ ಹೋಗ್ಬಿಟ್ಟಿದ್ರು. ಬಹುಶಃ ಆ ಕುಡುಮೀನೇ ಇರಬೇಕು. ಬಾರೋ ಎತ್ಹಾಕ್ಕೊಂಡ್ ಬರಾನ ಅಂದ್ರೆ ಈ ನನ್ಮಗ 'ನಾನೇನು ಗೂಬೆ ಕೆಟ್ಟೋದ್ನಾ, ರಾತ್ರಿಯೆಲ್ಲಾ ಲಾಟ್ರಿ ಹೊಡೆಯೋಕೆ' ಅಂತ ಕೈ ಎತ್ತಿಬಿಡೋದೇ!'

'ಹೌದೇನ್ಲಾ? ಆ ಕಥೆ ಮೇಷ್ಟ್ರು ಪಾಠ ಓದಿ ನೀನು ಭಾರತರತ್ನ ಆಗ್ಬೇಕಂತಿದ್ದೀಯೇನೋ ಗುಲಾಮ. ನಿನ್ನಾಟ ಗೊತ್ತಿಲ್ವಾ ನಮ್ಗೆ? ಆ ತುರೀಮಣಿ ಬಂದ್‌ಕೂಡ್ಲೇ ಹಲ್ ಬಿಟ್ಕಂಡು ಡವ್ ಹೊಡಿಯೋಕೆ ಹೋಗ್ತೀ. ಇರ‌್ಲಿ ಎಷ್ಟ್ ದಿನ ಆಡ್ತೀಯೋ ಆಡು. ಒಮ್ಮೆ ಸರಿಯಾಗಿ ಬೆಂಡೆತ್ತೀವಿ ಡಬ್ಬಾ ನನ್ಮಗನೇ.' 'ತಪ್ಪಾಯ್ತು ಕಣ್ರೋ. ಇನ್ನೇಲೆ ಇಂಥ ಮಣ್ ತಿನ್ನಾ ಕೆಲ್ಸ ಮಾಡಂಗಿಲ್ಲ.' 'ಅದುಮ್ಕಂಡ್ ಸುಮ್ಕಿರಲೇ ಕಂಡಿದ್ದೀವಿ ನಿನ್ನ ಛತ್ರಿ ಬುದ್ಧೀನಾ.'
...
ನೀವು ಕಿವಿ ಬಿಟ್ಕೊಂಡು, ಬಾಯಿ ತೆರಕೊಂಡು, ಅರ್ಥವಾಗದೇ ಕೂತಿದ್ದೀರಿ ಅಂದ್ರೆ ನಿಮಗೆ ಗೊತ್ತಿರೋ ಕನ್ನಡ ದಶಕಗಳಷ್ಟು ಹಳೇದಾಯ್ತು ಅಂತಾನೇ ಅರ್ಥ. ಇದೂ ಪಕ್ಕಾ ಕನ್ನಡವೇ ಸ್ವಾಮಿ. ನಮ್ಮ ಹಳಗನ್ನಡ, ನಡುಗನ್ನಡ, ಹೊಸಕನ್ನಡ, ಸಿನಿಮಾ ಕನ್ನಡದಂತೆ, ಇದು ಪಡ್ಡೆ ಕನ್ನಡ. ಇದಕ್ಕೆ ಭಾಷೆಗಳ ಹಂಗಿಲ್ಲ. ಶಬ್ದದ ನಿಜಾರ್ಥಗಳ ಗೊಡವೆ ಮೊದಲೇ ಇಲ್ಲ. ಆಗಿನ ಸಂದರ್ಭಕ್ಕೆ ತಕ್ಕಂತೆ ಹುಟ್ಟಿದ್ದು, ಬಳಕೆಯಾಗಿದ್ದು, ಹೊಸ ಹೊಸ ಶಬ್ದಗಳನ್ನು, ಹಳೆಯ ಶಬ್ದಗಳಿಗೆ ಹೊಸ ಅರ್ಥಗಳನ್ನು-ಅಪಾರ್ಥಗಳನ್ನು ಸೇರಿಸುತ್ತ ಬೆಳೆದಿದ್ದು. ಬೆಳೆಯುತ್ತಲೇ ಇರುವಂಥದ್ದು. ಒಂದಿಷ್ಟು ಗೇಲಿ, ಇನ್ನೊಂದಿಷ್ಟು ಪೋಲಿ, ತಕ್ಕಷ್ಟು ಅರ್ಥ, ಒಂದಿಷ್ಟು ಹಾಸ್ಯ, ಮತ್ತಷ್ಟು ಪರಿಹಾಸ್ಯ ಸೇರಿಸಿಕೊಳ್ಳುತ್ತ ಹುಡುಗರ ಭಾಷೆಗೆ ಹೊಸ ಗತ್ತು-ಗಮ್ಮತ್ತು ತರ್ತಾನೇ ಇದೆ.

ಪಡ್ಡೆ ಹುಡುಗರ ಈ ಪಡ್ಡೆಭಾಷೆಗೆ ಒಂದೊಂದು ಕಡೆ ಒಂದೊಂದು ಅರ್ಥ. ಸಿನಿಮಾ, ಸಾಹಿತ್ಯ, ಸಾಮಾಜಿಕ ಜಾಲತಾಣಗಳ ಬೇಲಿ ಮೀರಿ ತನ್ನದೇ ಆದ ವಲವಯನ್ನು ಸೃಷ್ಟಿಸಿಕೊಂಡಿದೆ. ಮಂಗಳೂರು ಕಡೆಯ ಪಡ್ಡೆಕನ್ನಡಕ್ಕೆ ಒಂಥರಾ ಸೊಗಸಾದ್ರೆ, ಮೈಸೂರು, ಬೆಂಗಳೂರಿನ ಪಡ್ಡೆಕನ್ನಡಕ್ಕೆ ಇನ್ನೊಂದು ಸೊಗಸು. ಉತ್ತರ ಕರ್ನಾಟಕದ ಪಡ್ಡೆಕನ್ನಡದು ಮತ್ತೊಂಥರಾ ಸೊಗಸು. ಅವೆಲ್ಲ ಸೊಗಸುಗಳ ಚೌಚೌ ಕನ್ನಡದ ಸ್ಯಾಂಪಲ್ ಇಲ್ಲಿದೆ ನೋಡಿ.
***

ಮೈಸೂರ್‌ನಲ್ ಹಿಂಗ್ ನೋಡಿ
ಗಂಗೋತ್ರಿಯಾದ್ರೆ, 'ಲೊ ಬಾರೊ ಮಗಾ ತಲೆ ಕೆಟ್ಟೋಗಿದೆ, ಒಂದು ಕಾಫಿ ಕುಡಿಯೋಣ' ಎಂದು ನಾಲ್ಕೈದು ಮಂದಿ ಕ್ಯಾಂಟಿನ್‌ಗೆ ತೆರಳುತ್ತಾರೆ. 'ಯಾಕೊ ಇವತ್ತು ಕ್ಲಾಸ್ ಸ್ವಲ್ಪ ಬೇಜಾರಾಯ್ತು ಕಣೊ, ನೀನೇನಪ್ಪ ಅಷ್ಟೊಂದು ಗಾಂಧಿ ಥರ ಕೂತಿದ್ದೆ,ರ‌್ಯಾಂಕ್ ಗೀಂಕ್ ಬರೊ ಐಡಿಯಾ ಏನಾದ್ರೂ ಮಾಡಿದಿಯಾ ಗುರು? ನಮ್ಮ ಮನೆಗೆ ನೀನು ಪರಿಚಯ ಇದ್ದೀಯೆ. ಹಂಗೇನಾದ್ರೂ ಮಾಡಿದ್ರೆ ನಮ್ಮಪ್ಪ ಬೆಂಡೆತ್ತಾನೆ, ಹುಷಾರಾಗಿರು...' ಹೀಗೆ ಸಾಗುತ್ತವೆ ಮಾತು.
ಇನ್ನು ಗ್ರಾಮೀಣ ವಿದ್ಯಾರ್ಥಿಗಳಾದರೆ 'ಯ್ಯಾನಪ್ಪ, ಈಗಾ ಬಂದಯಾ ಇಲ್ವ. ನಂಗ ತಲೆ ಕೆಟ್ಟೋಗದೆ, ಟಿ ಕುಡ್ಕೋಡ್ ಬರಮು ಬಾ, ಆಯ್ತು ಬಡೆ ಹೋಗಮು, ನಂಗು ಯಾಕೊ ಆಯ್ತಾ ಇಲ್ಲ' 'ನಂಗೆ ಆಗಲ್ಲ ಉಷಾರಿಲ್ಲ ಕಡ ಇನ್ನೊಂದು ಸಾರಿ ಬತ್ತೀನಿ'. 'ಲೇಯ್ ಪಿಚ್ಚರ್‌ಗೆ ಹೋಗಮ ಬಂದಯಾ, ಎಲ್ಲ ಹೈಕ್ಳು ಹೋಯ್ತಾವ್ರೆ, ನಾವು ಹೋಗ್ಬೇಕು ಅನ್ಕೊಂಡಿವಿ ಏನ್ ಮಾಡ್ದಯಿ ಯೋಳು ಬೇಗ'. 'ಇಲ್ಲ ಕನ ನಂಗ ಆಗಲ್ಲ ನನ್ ತಪು ದುಡ್ಡಿಲ್ಲ. ಇವತ್ತು ಊಟ ಮಾಡಕ್ಕೆ ಅದೆ ಅಷ್ಟೆ. ಅದೂ ಖಾಲಿ ಆಗೋದ್ರ ಉಣ್ಣಕ್ಕೆ ಯಾನ್‌ಮಾಡ್ದಯಿ? ಕಷ್ಟ ಆಗೋಯ್ತದೆ. ನಾನು ಬರಲ್ಲ ಕಣ್ಲ...' ಹೀಗೆ ಇನ್ನೊಂದು ಧಾಟಿ ಸ್ನೇಹಿತರಲ್ಲಿ ಮುಂದುವರಿಯುತ್ತದೆ.
ಮೈಸೂರು ನಿಘಂಟು
ಮಚ್ಚಾ: ಮಗಾ, ಅಣ್ಣ
ಆವಾಝ್: ಕರೆಯುವುದು
ಸ್ಟೆಂಟ್ ಹೊಡಿಬೇಡ: ಅಹಂಕಾರ ಬೇಡ
ಹೈಕ್ಳು: ಹುಡುಗರು
ನೈಂಟಿ ಟೀ ಹಾಕೋಣ: ಸ್ವಲ್ಪ ಟೀ ಕುಡಿಯೋಣ
ಚಮಕ್ ತೋರಿಸಬೇಡ: ಹೆಚ್ಚು ಚಾಣಾಕ್ಷತನ ತೋರಿಸಬೇಡ.
ಚಂಗಾ ಬಿಂಗಿ ಆಡಬೇಡ: ತಳಕು ಬಳಕಿನ ಬುದ್ಧಿ ತೋರಿಸಬೇಡ.
ಕಾಳ್/ಬಿಸ್ಕೀಟ್ ಹಾಕುವುದು: ಹುಡುಗಿಯರನ್ನು ಪ್ರೀತಿಯ ಬಲೆಗೆ ಬೀಳಿಸಲು ಗಾಳ ಹಾಕುವುದು.
ಏನ್ ಮಾಮು: ಪ್ರೀತಿಪಾತ್ರರಾದವರನ್ನು ಆತ್ಮೀಯವಾಗಿ ಕರೆಯುವ ಪರಿ.
ಗಿಣಿ ಆಟ ಬೇಡ: ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸುವುದು ಬೇಡ.
***

ಮಂಗಳೂರು
ನಮ್ ಕುಡ್ಲ ಮಾರಾಯ್ರೆ
ಕರಾವಳಿಯ ಪಡ್ಡೆ ಹೈಕಳ ಅಡ್ಡೆಯಲ್ಲಂತೂ ಹೊಸ ಪದಗಳ ಹುಡುಕಾಟದ ವೇಗದ ಮಿತಿ ಜಾಸ್ತಿ ಪ್ರಮಾಣದಲ್ಲಿದೆ. ತೀರಾ ಜಿಪುಣತನ ತೋರಿಸುವ ವ್ಯಕ್ತಿಗೆ ಈ ಹಿಂದೆ ಕರಾವಳಿಯ ಕ್ಯಾಂಪಸ್‌ನಲ್ಲಿ 'ಜುಗ್ಗ', 'ಕಂಜೂಸ್' ಎಂಬ ಪದಗಳಿದ್ದವು. ಈ ಪದದ ಅರ್ಥ ಎಲ್ಲ ಕಡೆಯೂ ಪ್ರಚಾರವಾಗುತ್ತಿದ್ದಂತೆ 'ಎಸ್‌ಎಂಎಸ್' ಎನ್ನುವ ಆಂಗ್ಲ ಪದ ಬಳಕೆಗೆ ಬಂದಿದೆ. ಎಸ್‌ಎಂಎಸ್‌ನಲ್ಲಿ ವ್ಯವಹಾರ ಮಾಡುವವರು ಜಾಸ್ತಿ ಪ್ರಮಾಣದಲ್ಲಿ ಜಿಪುಣಯಾಗಿರುತ್ತಾರೆ ಎನ್ನೋದು ಪಡ್ಡೆ ಹೈಕಳ ಮಾತು. ಈ ಹಿಂದೆ ಬಳಕೆಯಲ್ಲಿದ್ದ ತುಳು ಪಡ್ಡೆ ಭಾಷೆಯ ಜಾಗದಲ್ಲಿ ಆಂಗ್ಲ ಭಾಷೆ ಬಂದು ಕೂತಿದೆ. ಆತ ಬಹಳ ವಾಚಾಳಿ ಎನ್ನುವ ಪದಕ್ಕೆ ಕರಾವಳಿಯ ಕ್ಯಾಂಪಸ್‌ನಲ್ಲಿ 'ಮೋಟಾರ್' ಎನ್ನುತ್ತಾರೆ. ಧಡೂತಿ ಹಾಗೂ ಯಾವ ವಿಚಾರಕ್ಕೂ ತಲೆ ಭಾಗಗದವ ಗ್ರಾಮೀಣ ಕರಾವಳಿಯಲ್ಲಿ ಎರ್ಮೆ(ಎಮ್ಮೆ) ಜಾತಿಯವನಾದರೆ, ನಗರದ ಕಡೆ 'ಬ್ಯಾರಿಕೇಡ್'.
ಕರಾವಳಿ ಡೈರಿ
ಊದುಬತ್ತಿ - ತುಂಬಾ ತೆಳ್ಳಗಿರೋರು
ಪೆತ್ತ(ದನ) - ಸಾಧು ಮನುಷ್ಯ
ಬೂಬ - ಕಿವಿ ಮಂದ
ಬುರ್ನಾಸ್ - ಕೆಲಸ ಸರಿಯಾಗಿ ಬಾರದವನು
ಚಂಡಿಕೋರಿ- ನಿರುತ್ಸಾಹಿ
ಮುಂಚಿ- ಖಾರವಾಗಿ ಪ್ರತಿಕ್ರಿಯೆ ನೀಡುವವ
ಕಯಿಪೆ- ಹಠವಾದಿ
ದಪ್ಪ- ಏನೂ ಗೊತ್ತಿಲ್ಲದವ
ಕುದಿಕೆ- ತುಂಬಾನೇ ಚಾಣಾಕ್ಷ
ಮುಜು- ಕುರೂಪಿ
ಕಂದಡಿ- ದ್ರೋಹಿ
ಪೆರ್ಮಾರಿ- ಹೊಟ್ಟೆಬಾಕ
ಅರಣೆ- ಮರೆಗುಳಿ
ಪೆಟ್ಟಿಗೆ- ಹೆಂಡತಿ
ಪಕ್ಕಿ- ಹುಡುಗಿಯರು.
ಎರ್ಮೆ- ಸೋಮಾರಿ
ಕುಂಡಕೋರಿ- ತೆಳ್ಳನೆ ಕಾಲುಗಳ ದೊಡ್ಡ ದೇಹದ ವ್ಯಕ್ತಿ
***

ಉತ್ತರ ಕರ್ನಾಟಕ
ಬೈಗುಳಾನ ಬಂಗಾರ
ಉತ್ತರ ಕರ್ನಾಟಕದಲ್ಲಿ ಬೈಗುಳಿಗೆ ಭಾಷೆಯ ಸ್ಥಾನಮಾನ. ಯಾವ ಬೈಗುಳಿಗೂ ಶಬ್ದದ ಮೂಲ ಅರ್ಥ ಇರೋದಿಲ್ಲವಾದರೂ ಕೇಳೋದಕ್ಕೆ ಬಲೇ ಖಾರ. ಸಾಮಾನ್ಯ ಭಾಷೆಯೇ ಈ ಪರಿ ಇರುವಾಗ ಇನ್ನು ಪಡ್ಡೆಕನ್ನಡ ಹೇಗಿರಬಹುದು? ಅದನ್ನೆಲ್ಲ ಇಲ್ಲಿ ಬರೆಯೋದು ಕಷ್ಟ. ಕೆಲ ಸ್ಯಾಂಪಲ್‌ಗಳನ್ನು ಮಾತ್ರ ಕೊಡಬಹುದು. ಉಳಿದವನ್ನು ಕೇಳಿಯೇ ಅನುಭವಿಸಬೇಕು.
'ಅಲೆಲೆ ಮಗನ, ನಿನ್ನೆ ಸಂಜಿಮುಂದ ಕರದ್ರೂ ಕೇಳಿಸಿಲ್ಲ ಅನ್ನಂಗ ಹೋದೆಲ್ಲಲೆ. ಬಾಜೂ ಯಾವ್ದೋ ಫಟ್‌ಪಟ್ಟಿ ಐತಂದಕೂಡ್ಲೇ ನಾವ್ಯಾರೂ ಕಾಣದ ಇಲ್ಲನು?'
'ಹಂಗೇನಿಲ್ಲೋಪ, ನಂಗ ಖರೇನ ಕೇಳಸಿಲ್ಲ.'
'ಗೊತ್ತೈತಿ ಸುಮ್ನಿರಲೇ ಮಂಗ್ಯಾನ ಒಯ್ದೊಂದ್, ಏ ನಿನ ಮಾರಿ ಮಣ್ಣಾಗ ಹಾಕ್ಲಿ... ನಿನ್ನ ಹ... ಬುದ್ಧಿ ನಮಗ ಗೊತ್ತಿಲ್ಲ ಅನ್ಕೊಂಡಿಯನು?'

ಫಟ್‌ಪಟ್ಟಿ - ಚಮಕ್ ಹುಡುಗಿ
ಡಿಂಗಿಚಕ್ಕ - ಕದ್ದುಮುಚ್ಚಿ ಪ್ರೇಮ
ಶಿರಹಟ್ಟಿ - ಬೈರಿಗೆ, ಕೊರೆಯುವವ
ಇದಿ - ಪೀಡೆ
***

ಮಧ್ಯ ಕರ್ನಾಟಕ
ಹಾವೇರಿ ಹಾದ್ಯಾಗ
ಇಲ್ಲಿ ದೇಸಿ ಭಾಷೆ ಸೊಗಡಿನ ಮೇಲೆ ಮೈಸೂರು ಪ್ರಾದೇಶಿಕತೆ ಸವಾರಿ ಮಾಡುತ್ತಿದೆ. ಆಂಗ್ಲ ಭಾಷೆಯ ತುಣುಕುಗಳೂ ಜಾಸ್ತಿಯಾಗಿವೆ. ಸಿನಿಮಾಗಳ ಪ್ರಭಾವ ಬೇರೆ. ಜೊತೆಗೆ, ಮೀಸೆ ಮೇಲೆ ಕೈಹಾಕುವ ಅಥವಾ ಕುಡಿಹುಬ್ಬು ಜತೆಗೆ ಭುಜ ಕುಣಿಸುವ ಶೈಲಿಯೂ ಎದ್ದು ಕಾಣುತ್ತಿದೆ. ಇದುವರೆಗೆ ಎವ್ವಾ, ಬೇ ಎಂದು ಅವ್ವನನ್ನು ಕರೆಯುತ್ತಿದ್ದ ಮಗ ನಾನು ಬರ‌್ಲಾ ಅಮ್ಮಾ ಅನ್ನುತ್ತಿದ್ದಾನೆ. ಲೇ ಬಾರಲೇ, ಬರ‌್ರಲೇ ಎಂದು ಗೆಳೆಯರನ್ನು ಕರೆಯುತ್ತಿದ್ದವರು, ಬನ್ರಲೇ ಬೇವಾರ್ಸಿ ನನ್ಮಕ್ಳ, ಎಲ್ರೋ ಹಾಳಾಗಿ ಹೋಗಿದ್ರೀ? ಅಂತಿದ್ದಾರೆ. ಹೊಡಿ ಮಗಾ, ಹೊಡಿ ಮಗಾ ಬಿಡಬೇಡ ಅವನ್ನಾ! ಎಷ್ಟೋ ಪೊಗರು ನಿನಗೆ? ಏನ್ ಕಣಮ್ಮಿ ಸಂದಾಕಿ, ಪೊಗರದಸ್ತಾಗಿ ಬೆಳ್ದಿದ್ದೀಯಾ? ಎನ್ನುವ ಹುಂಬತನ ಬೇರೆ.
***

ಬಳ್ಳಾರಿ ಬಯಲಲ್ಲಿ
ತಲೆ ತಿನ್ನೋರಿಗೆ ಪಿಟೀಲು, ಕೊರಕ, ಗೆಳೆಯರಿಗೆ ಪ್ರೀತಿಯಿಂದ ಮಚ್ಚ, ಮಾಮಾ, ತಂದೆಗೆ ಬಾಸ್, ಪ್ರೀತಿಯಲ್ಲಿ ಬಿದ್ದ ಜೋಡಿಗಳು ಪರಸ್ಪರ ಜಾನು-ಜಾನ್ ಇವು ಬಳ್ಳಾರಿಯ ಪಡ್ಡೆಭಾಷೆಯ ಪದಗಳು. ಹುಡುಗಿಯರ ಹಿಂದೆ ಸದಾ ಸುತ್ತುವವ ವೋಡಾಫೋನ್; ಬೇಕೆಂದಾಗ ಸಿಗುವವರು, ಸ್ಪಂದಿಸುವವರು ಏರ್‌ಟೆಲ್, ಇನ್ನು ತೆಲುಗು ಭಾಷೆಯ ಪ್ರಭಾವವೂ ಇರುವುದರಿಂದ ಪರಸ್ಪರರು ದೊಂಗ (ಕಳ್ಳ) ಅಂತ ಪ್ರೀತಿಯಿಂದ ಕರೆದುಕೊಳ್ಳೋದೂ ಉಂಟು. ಜತೆಗೆ ಅಪ್ಪಜಿ ಎಂಬ ಆತ್ಮೀಯ ಪದವೂ ಪಡ್ಡೆಗಳ ನಡುವೆ ಬಳಕೆಯಲ್ಲಿದೆ.
***

ಮಲೆನಾಡ ಮಾತಲ್ಲಿ
ಶಿವಮೊಗ್ಗ
'ಏನ್ ಮಚ್ಚಿ, ಏನೋ ಇವತ್ತು ಒಂದೇ ಒಂದೂ ಸೋನಿ ಎರಿಕ್ಸನ್ ಆಗ್ಲಿ, ಸ್ಯಾಮ್ಸಂಗ್ ಆಗ್ಲಿ ಕಾಣ್ತಾನೇ ಇಲ್ಲ. ಎಲ್ ನೋಡಿದ್ರೂ ನೋಕಿಯಾ ಡಬಲ್ ಒನ್ ಡಬಲ್ ಜಿರೋ (1100), ರಿಲೈಯನ್ಸ್, ಸ್ಪೈಸ್, ಎಂಟಿಎಸ್ಸೇ ಕಾಣ್ತಿವೆ'. 'ನೋಡ್ ಮಚ್ಚಾ, ಗಿರಿ ಆ ಟಕ್ಲೂ ರೂಮನಲ್ಲೇ ಎರಡ್ ಗಂಟೆಯಿಂದ ಕೂತವ್ನೆ. ಇವತ್ತು ಅವನು ಸಿಂಟೆಕ್ ಬದ್ಲು ತೊಟ್ಟೀನೇ ಹಿಡಿದಿರ?ಬೇಕು ಕಣೋ.' 'ಓಕೆ ಮಾಮು ನಾಳೆ ಸಿಗ್ತೀನಿ'. ಇವನ್ನೆಲ್ಲ ಕೇಳೋಕೆ ಕಾಲೇಜ್‌ಗೇ ಹೋಗ್ಬೇಕು ಅಂತೇನಿಲ್ಲ. ಬೆಳಗ್ಗೆ 9ರಿಂದ 10ರ ವೇಳೆಗೆ ಕಾಲೇಜು ಕಡೆಗೆ ಹೋಗುವ ಬಸ್ ಹತ್ತಿದ್ರೂ ಸಾಕು, ನಿಮ್ಮ ಕಿವಿಗೆ ಬಿದ್ದೇಬೀಳ್ತವೆ.
ಯಾವ ಹುಡುಗಿಯನ್ನ ಲೈನ್ ಹೊಡೀತಿದ್ದಾನೋ ಆ ಹುಡುಗಿಯ ಹೆಸರಿನ, ಭಾಷೆ, ಕುಲದ ಆಧಾರದ ಮೇಲೂ ಸಂಬೋಧನೆಗಳು ಸೃಷ್ಟಿಯಾಗುತ್ತವೆ. ಮಲೆಯಾಳಿ ಹುಡುಗಿಗೆ ಲೈನ್ ಹೊಡೀಯೋನಿಗೆ ಕುಟ್ಟ ಎಂಬ ಹೆಸರು. ನಿನ್ನೆ ಪರಿಚಯವಾದವನಾದ್ರೆ ಮಚ್ಚಾ, ಇವತ್ತು ಶಿಷ್ಯಾ, ನಾಳೆ ಮಗಾ.
ಮಲ್ನಾಡ್ ಡಿಕ್ಷನರಿ
ಓಳು- ಯವಾಗ್ಲೂ ಸುಳ್ಳು ಹೇಳೋನು
ಕಾಗೆ ಹಾರಿಸೋದು- ಉಡಾಫೆ
ಎಲ್‌ಎಲ್‌ಟಿಟಿ (ಲುಕಿಂಗ್ ಅಟ್ ಲಂಡನ್ ಟಾಕಿಂಗ್ ಅಟ್ ಟೋಕಿಯೋ)- ಮೆಳ್ಳಗಣ್ಣಿನವರಿಗೆ
ಪೆಂಡಾಲ್ ಹಾಕಿಸಿಕೊಂಡ, ಹೊಗೆ ಡಾಟ್ ಕಾಂ- ಮೃತಪಟ್ಟವರಿಗೆ
ಓಟಿ- ಎಣ್ಣೆ ಹೊಡೆಯುವುದು
ಮೈಕ್ ಮಾದೇವಿ- ಯಾವಾಗ್ಲೂ ಮಾತಾಡೊ ಹುಡುಗಿ
ಸೀಗೇಪುಡಿ- ಇರಿಟೇಟ್ ಮಾಡುವವನು
ಬೋರಂಗಿಗಳು-ಬೋರ್ ಹೊಡೆಸುವವರಂತೆ ಮಾತನಾಡುವವರು
ಗಿಣಿಮರಿ- ಮಳ್ಳಗಿರುವವರು
ಚಿಂದಿ, ಸಕ್ಕಾತ್ತಾಗಿದ್ದಾನೆ- ತುಂಬ ಸುಂದರವಾಗಿರುವವರು
ಕೂಳೆ-ಕುಳ್ಳಗಿದ್ದು ಯಾವಾಗಲೂ ಮಂಕಾಗಿರುವವರು
ಬೋಟಿ- ತೆಳ್ಳಗೆ ಕಡ್ಡಿಯಂತಿರುವವರು
ಇಟಾಚಿ- ಕುಳ್ಳಗೆ ದಪ್ಪಗಿರುವವರು
ದಾವಣಿ- ಸಾಂಪ್ರದಾಯಿಕ ಉಡುಪು ಧರಿಸುವವರು
ಗಿರ್ಮಿಟ್- ಬಣ್ಣ ಬಣ್ಣದ ಡ್ರೆಸ್ ಹಾಕಿದೋರು
ಮಸ್ಕಿರಿ- ಟೈಂಪಾಸ್ ಮಾಡೋರು
ಮಾನಸಿಕ್- ಆಕಾಶ ತಲೆ ಮೇಲೆ ಬಿದ್ದಂಗೆ ಆಡೋರು
ಚಾಂಬಾಳ್ಯಾ- ಹುಡುಗಿಯರ ಜೊತೆ ಹೆಚ್ಚಾಗಿ ಮಾತನಾಡೋನು
ಚೂಯಿಂಗ್ ಗಮ್- ಮಾತು ಮುಗಿಸದವನು
ಬಾಡಕೋ- ರೋಪು ಹಾಕೋನು
ಹಲ್ಕಡ್ಡಿ ಸರ್- ವಿದ್ಯಾರ್ಥಿಗಳ ಮುಂದೆ ಏನೇನೋ ಮಾತಾಡೋ ಮೇಸ್ಟ್ರಿಗೆ
ಹಸ್ಮುಖಲಾಲ್- ಸದಾ ನಗೋ ಮೇಸ್ಟ್ರಿಗೆ
ಶಕ್ತಿಮಾನ್- ಸದಾ ತೂಕಡಿಸೋ ಮೇಸ್ಟ್ರಿಗೆ
ಪಾಯಿಂಟರ್- ಪ್ರತಿ ಪಾಠಕ್ಕೂ ಪಾಯಿಂಟ್ ಹಾಕಿ ಹೇಳೋನಿಗೆ
ಫ್ರೆಶ್ಶಿ- ಹೊಸದಾಗಿ ಕಾಲೇಜ್‌ಗೆ ಸೇರಿದ ಫ್ರೆಶರ್
ಸ್ಕ್ರೂಡ್- ಲೆಕ್ಚರರಿಂದ ಚೆನ್ನಾಗಿ ಬೈಸಿಕೊಂಡವನು
***

ಬೆಂಗಳೂರು ಪದಕೋಶ
ಸಿಸಿ (ಚಮ್ಮಕ್ ಚಲೋ) - ಮಜಾ ಮಾಡು
ಹೊಸಾ ಫೋನ್ ಸಿಕ್ತು - ಹೊಸ ಗರ್ಲ್ ಫ್ರೆಂಡ್
ಎಲ್‌ಡಿ ಐಟಮ್ - ಲಾಂಗ್ ಡ್ರೈವ್ ಐಟಮ್
ದೇವ್ರ - ವಾಸನೆ ಬರುವವರು
ಗುಯ್ಯಾ - ಮಾತಾಡಿದ್ರೂ ಅರ್ಥ ಆಗದೇ ಇರುವ ಹುಡುಗ
ಕಥೆ ಮೇಷ್ಟ್ರು - ಮಾತಿಗೆ ಮೊದಲೇ ಕಥೆ ಹೇಳೋವ್ರ
ಮಚ್ಚಿ - ಮಚ್ಚಾ (ಕನ್ನಡದ ಬಾಮೈದ ಅರ್ಥ ಕೊಡುವ ತಮಿಳು ಶಬ್ದ)
ಮಗಾ - ಮಗನೇ ಎಂಬ ಆತ್ಮೀಯ ಸಂಬೋಧನೆ
ಚಮಕ್ - ಕೊಂಕು ತೋರಿಸುವ ಹುಡುಗಿ
ಬೀಟ್ - ಹುಡುಗಿಯರ ಕಾಲೇಜಿನ ಮುಂದೆ ಠಳಾಯಿಸುವುದು
ಕಾಳ್/ಬಿಸ್ಕೀಟ್ ಹಾಕೋದು, ಡವ್ ಹೊಡೆಯೋದು - (ಹುಡುಗಿಯರನ್ನು) ಒಲಿಸಿಕೊಳ್ಳೋ ಪ್ರಯತ್ನ
ಹೊಗೆ ಹಾಕಿಸ್ಕೊಳ್ಳೋದು - ಸಾವು ಶಬ್ದದ ಪರ್ಯಾಯ ಪರ್ಯಾಯ ಪದ
ಅಪೀಟು, ಜೂಟು - ಜಾಗ ಖಾಲಿ ಮಾಡೋದು
ತೂಕು - ಪರೀಕ್ಷೆಯಲ್ಲಿ ಫೇಲಾಗೋದು ಆಗೋದು.
ಚಂಬು : ಫೇಲು, ವಿಫಲನಾಗೋದು
ಭಗಿನಿ ಗೂಟ - ತಪ್ಪಿಸಿಕೊಳ್ಳದಂತೆ ಸಿಕ್ಕಿಹಾಕಿಕೊಳ್ಳೋದು, ಮರ್ಮಾಘಾತ
ಇಕ್ಕಳ - ಎದ್ದು ಹೋಗದ ಪರಿಸ್ಥಿತಿ, ಸಿಲುಕಿಕೊಳ್ಳೋದು, ಕಿರಿಕಿರಿ, ತಲೆಹರಟೆ
ಮೀಟ್ರು - ಧೈರ್ಯ
ಡೀಲ್ - ನಿಭಾಯಿಸು, ಕುದುರಿಸು,
ತಳ್ಳು - ಲಂಚ ಕೊಡು
ಮಾರಿಹಬ್ಬ - ಗ್ರಹಚಾರ ಬಿಡಿಸೋದು
ದೇಪೋದು - ಕದಿಯೋದು
ಟ್ಯಾಕ್ಸ್ - ಇನ್ನೊಬ್ಬರಿಗಾಗಿ ಮಾಡಿದ ಖರ್ಚು
ಓಸಿ - ಬೇರೆಯವರ ದುಡ್ಡಿನಲ್ಲೇ ಮಜಾ ಮಾಡೋದು
ಮುಂಡಾಯ್ಸು - ಮೋಸ ಮಾಡು
'ಮಕ್ಕರ್' ಆಗುವುದು - ಬೆಪ್ಪನಾಗುವುದು
ಗಲ್ ಬಸ್ಕಿ - ಗೊಂದಲ, ಕಸಿವಿಸಿ
ಅಪೋಲಿ - ಸರ್ವನಾಶ
ಪೋಟುಕೋ - ಕುಡಿದು ಚಿತ್ತಾದವನು
ಗೈರು - ಗಾಬರಿ, ಕಕ್ಕಾಬಿಕ್ಕಿ
ಅಬೇಸ್ - ಕಳ್ಳತನ
ಕೂಳೆ - ಅದ್ಭುತ
ಪೋಟ್ - ತಪ್ಪಿಸಿಕೋ
ಜೈ ಆಗು - ತಪ್ಪಿಸಿಕೋ
ಕುಡುಮಿ - ಸದಾ ಓದುವವ
ಮೈಲೇಜ್ - ತಾನು ಮಾಡಿದೆನೆಂಬ ಹಿರಿಮೆ
ದೇವ್ರ - ಯಾವಾಗಲೋ ಒಮ್ಮೆ ಸಿಗೋನು
ಮಾಲ್ - ಹುಡುಗಿ, ಸುಲಭವಾಗಿ ಸಿಗೋಳು
ಗುಲ್ಡು/ಪ್ಯಾದೆ - ಪೆದ್ದ, ಮಂಕ
ತಗಡು - ಕಳಪೆ
ತುರಿಮಣೆ - ಉಬ್ಬುಹಲ್ಲು
ಹತ್ತಿಸು - ಹೊಗಳು
ಉಡೀಸ್ - ಧ್ವಂಸ
ಲಗಾಯ್ಸು - ಮಜಾಮಾಡು
ಭಾರತರತ್ನ - ಅತಿ ಪ್ರಾಮಾಣಿಕ
ಗಾಂಧಿ - ಪ್ರಾಮಾಣಿಕ
ಬತ್ತಿ - ಧೂಮಪಾನ
ಎಲ್ಕೇಜಿ - ಎಳಸು, ಮಾಗಿಲ್ಲ
ಇಕ್ಕು - ಹೊಡೆ, ಥಳಿಸು
ಕಣ್ಣುತಂಪು - ಹುಡುಗಿಯರನ್ನು ನೋಡೋ ಸುಖ,
ರೈನ್‌ಬೋ ನನ್ ಮಗ- ಬಣ್ಣ ಬದಲಾಯಿಸೋನು
ಜಾತ್ರೆ ನನ್ ಮಗ - ಅಪರೂಪದ ವ್ಯಕ್ತಿ
ಕಾಗೆ ನನ್ ಮಗ - ಸುಳ್ಳು ಹೇಳುವವನು
ಓಸಿ ನನ್ ಮಗ - ಜಿಪುಣ
ತಟ್ಟೆ ಇಡ್ಲಿ - ಚಪ್ಪಟೆ ಮುಖ
***

ಬೆಕ್ಕಿನ ಹೆಜ್ಜೆ ಹಾದಿಯೊಳಗೆ
ಫ್ಯಾಷನ್ ಲೋಕದಲ್ಲಿ ಪೋಲಿ ಭಾಷೆ ಬಳಕೆ ವಿಪರೀತ. ಬಹುಶಃ ಬೇರೆ ಯಾವುದೇ ಕ್ಷೇತ್ರದಲ್ಲಿ ಚಾಲ್ತಿಯಲ್ಲಿ ಇಲ್ಲದಷ್ಟು ಪದಗಳು ಇಲ್ಲಿ ವ್ಯಂಗ್ಯ, ಕುಹಕ, ಕೀಟಲೆ, ಪೋಲಿ ಅರ್ಥವನ್ನು ನೀಡುತ್ತವೆ. ಆಡುವ ಪ್ರತಿಯೊಂದು ಪದಗಳ ಸಾಲಿನಲ್ಲಿ ಒಂದಾದರೂ ಅಂಥ ಪಡ್ಡೆ ಪದವು ಎದ್ದು ಹಲ್ಲು ಕಿರಿಯುತ್ತದೆ. ವಿಶೇಷವೆಂದರೆ ಇವೆಲ್ಲ ಪದಗಳು ಫ್ಯಾಷನ್ ಕ್ಷೇತ್ರಕ್ಕೆ ಸಂಬಂಧಿಸಿದವು. ಅಂದರೆ ಈ ಬಣ್ಣದ ಜಗತ್ತಿನಲ್ಲಿ ಅಗತ್ಯ ಬಳಕೆಯ ಪದಗಳು ಎನಿಸಿಕೊಂಡಂಥವು. ಹೆಚ್ಚಿನವು ಡ್ರೆಸ್ ಹಾಗೂ ಫ್ಯಾಷನ್ ಆ್ಯಕ್ಸಸರಿಯ ಪದಗಳು.
ಜೋಜೋ- ಡ್ರೆಸ್ ವಿನ್ಯಾಸ ಪ್ರಕಾರವನ್ನು ಅತಿಯಾಯಿತು ಸಭ್ಯತೆ ಎನ್ನುವ ಅರ್ಥದಲ್ಲಿ ಬಳಕೆ
ಬ್ಯಾಕ್ ಸ್ಟೇಜ್ ಲೀಡ್- ಫ್ಯಾಷನ್ ಲೋಕದಲ್ಲಿ ಕ್ಲಿಕ್ ಆಗದ ಮಾಡೆಲ್‌ಗೆ ವ್ಯಂಗ್ಯ ಮಾಡುವ ರೀತಿ
ಪ್ರಾಂಪಿ-ಮಿತಿಮೀರಿ ಸ್ಟೈಲ್ ಹೊಡೆಯುವ ರೂಪದರ್ಶಿಗೆ ಡಿಸೈನ್‌ವೊಂದರ ಹೆಸರಿಂದ ಗುರುತಿಸುವುದು
ಡಬಲ್ ಮಾಸ್ಕ್-ಅತಿಯಾಗಿ ಮೇಕಪ್ ಮಾಡಿಕೊಳ್ಳುವ ಹಾಗೂ ಅಲಂಕರಿಸಿಕೊಳ್ಳುವ ಹುಡುಗಿ
ಡ್ಯಾಪರ್-ಹುಡುಗಿಯರ ಎದೆಗೆ ಕನ್ನ ಹಾಕುವಂಥ ಸುರಸುಂದರಾಂಗ ಯುವಕ
ವೋಜ್-ಸದಾ ಸುದ್ದಿಯಲ್ಲಿ ಇರಬೇಕೆನ್ನುವ ಕ್ರೇಸ್ ಹೊಂದಿರುವ ರೂಪದರ್ಶಿ
ಹೈಹೀಲ್ಸ್-ಬಿಂದಾಸ್ ಆಗಿ ಬೇರೆಯವರಿಂದ ಹಣ ಬಿಚ್ಚಿಸುವಂಥ ಚಾಲಾಕಿನ ಮಾಡೆಲ್
ಬೇಬಿ ಆನ್ ಬೋರ್ಡ್-ತಿದ್ದಿ ತೀಡಿ ಮುಗ್ಧತೆ ತುಂಬಿದ ಮುದ್ದು ಮುಖ. ಹಾಲುಗೆನ್ನೆ
69-ಮಾಡಿ ತೋರಿಸುವ ತಾಕತ್ತಿಲ್ಲದೇ ಬರಿ ಬಾಯಲ್ಲಿ ಆಡಿ ತೋರಿಸುವ ಗುಣ
ಬರ್ಡ್ ಲಿಪ್-ಯಾವುದನ್ನೂ ಚುರುಕಾಗಿ ಮಾಡುವುದಿಲ್ಲ, ಎಲ್ಲದರಲ್ಲೂ ನಿಧಾನ
ಚೀ ಚೀ-ಎಲ್ಲರೂ ಇಷ್ಟಪಡುವಂಥ ಸೆಕ್ಸಿ ಲುಕ್ ಹುಡುಗಿ
ಡಬಲ್ ಡಿ-ಸ್ಲಿಮ್ ಆಗಿದ್ದರೂ ದೇಹದ ಬಾಕಿ ಅಂಗಳಿಗೆ ಒಪ್ಪದಂಥ ಎದೆಗಾತ್ರ
***

ಆಡ್ತಾ ಆಡ್ತಾ...
ಕ್ರೀಡಾ ಲೋಕದಲ್ಲಿ ಪ್ರತಿಯೊಂದು ಆಟದ ನಿಯಮ ಹಾಗೂ ತಂತ್ರಗಳ ಹೆಸರುಗಳು ಪೋಲಿ ಪದಗಳಾಗಿವೆ. ಅಂಥ ಕೆಲವು ಪದಗಳು ಆಟಗಾರರ ನಡುವೆ ಮಾತ್ರ ಉಳಿದಿದ್ದರೆ, ಇನ್ನು ಕೆಲವು ಆಟಗಾರರ ನಡುವಿನಿಂದ ಹರಿದು ಜನರ ನಡುವೆಯೂ ಬಳಕೆ ಆಗುತ್ತಿವೆ.
ಸ್ಪಿನ್ನರ್-ಹಳೆಯ ಬೌಲ್‌ನಿಂದ ಆಟವಾಡಲು ಇಷ್ಟಪಡುವವನು
ಶಾರ್ಟ್ ಮಿಡ್ ವಿಕೆಟ್-ಇದು ಸಭ್ಯತೆಯನ್ನು ಮೀರಿದ ಮರ್ಮಾಂಗವನ್ನು ಚೂಚಿಸುವ ಪದ
ಗಲ್ಲಿ ಕ್ರಿಕೆಟರ್-ಬೆಲೆವೆಣ್ಣುಗಳನ್ನು ಹುಡುಕಿಕೊಂಡು ಹೋಗುವ ಗುಣದ ವ್ಯಕ್ತಿ
ಗೋಲ್ ಪೋಸ್ಟ್-ಚೆಂಡು ಸೇರುವ ಗುರಿಯಾದರೂ, ಅದಕ್ಕೂ ಗುಪ್ತಾಂಗದ ಸಂಕೇತಾರ್ಥ
ದೂಸ್ರಾ ಅಲ್ಲ ತೀಸ್ರಾ-ದೂಸ್ರಾ ಎನ್ನುವುದು ಕ್ರಿಕೆಟ್‌ನಲ್ಲಿನ ಬೌಲಿಂಗ್ ತಂತ್ರ, ತೀಸ್ರಾ ಎನ್ನುವುದು ಲೈಂಗಿಕ ಪ್ರಚೋದನೆ
ಡಾಟ್ ಬಾಲ್-ಹಲವಾರು ಹುಡುಗಿಯರಿಗೆ ಗಾಳ ಹಾಕಿಯೂ ಪ್ರೇಮ ಬೆಸೆಯುವಲ್ಲಿ ವಿಫಲನಾದವ
ಚೆಕ್ ಮೇಟ್-ಹುಡುಗನೊಬ್ಬ ಹುಡುಗಿದೆ ಪ್ರಪೋಸ್ ಮಾಡಿ ಯಶಸ್ವಿ ಆಗುವುದು
ಡ್ರಿಬ್ಲರ್-ನಿರಂತರವಾಗಿ ಒಂದೇ ಹುಡುಗಿಯ ಬೆನ್ನತ್ತಿದವನು
ಕಬಡ್ಡಿ-ಮೂಲಾರ್ಥದಲ್ಲಿ ಆಟವೊಂದರ ಹೆಸರಾದರೂ, ಅದಕ್ಕೆ ರತಿಕ್ರೀಡೆ ಎನ್ನುವ ಪರ್ಯಾಯಾರ್ಥ
ಪಾಟಿಂಗ್-ಸಕ್ಸಸ್‌ಫುಲ್ ಆಗುವ ಲವ್ ಪ್ರಪೋಜಲ್ ಹಾಗೂ ಡೇಟಿಂಗ್ ಒಪ್ಪಿಗೆ
ಅಂಡರ್ ಪಾರ್-ಗಾಲ್ಫ್‌ನಲ್ಲಿ ಬಳಕೆಯಾಗುವ ಟೆಕ್ನಿಕಲ್ ವರ್ಡ್‌ಗೆ ಶೃಂಗಾರ ಲೀಲೆಯ ನಿಗೂಢಾರ್ಥ
ಪಿಚ್-ಆಟದ ಅಂಗಳವನ್ನು ಹೆಣ್ಣಿಗೆ ಹೋಲಿಕೆ ಮಾಡುವುದು

ಗಣಕಗಳಾಗಿರುವ ಎಳೆ ತಲೆಮಾರು




ರಹಮತ್ ತರೀಕೆರೆ






 

    ಬಹಳ ವರ್ಷಗಳ ಬಳಿಕ ನನ್ನ ಹಳೇ ಗೆಳೆಯ ಮತ್ತು ಸಹಪಾಠಿಯೊಬ್ಬನ ಮನೆಗೆ ಹೋದೆ. ಅವನೂ ಅವನ ಮಡದಿಯೂ ಪ್ರೀತಿಯಿಂದ ಬರಮಾಡಿಕೊಂಡರು. ಮನೆಯೊಳಗೆ ಪ್ರವೇಶಿಸಿದಾಗ ಒಂದು ದೃಶ್ಯ ಕಣ್ಣಿಗೆ ಬಿತ್ತು. ಅವರ ಕಿರಿಯ ಮಗಳು ಬೊಂಬೆಯಲ್ಲಿ ಆಟಕೊಂಡಿದ್ದಳು.   ಮಗ- ೧೫-೧೬ ವರ್ಷದವನಿರಬೇಕು- ಸೋಫಾದಲ್ಲಿ ಮೈಚೆಲ್ಲಿಕೊಂಡು ಕಾಲನ್ನು
 ಆಗಸಕ್ಕೆ ಚಾಚಿ ಲ್ಯಾಪ್‌ಟಾಪಿನಲ್ಲಿ ವಿಡಿಯೊ ಗೇಂ ಆಡುತ್ತಿದ್ದ. ಮನೆಗೆ ಬಂದು ಹೋದವರ ಬಗ್ಗೆ ಖಬರಿಲ್ಲದಷ್ಟು ಆಟದಲ್ಲಿ ತನ್ಮಯನಾಗಿದ್ದ. ನನ್ನ ಗೆಳೆಯ ಶಿಷ್ಟಾಚಾರಕ್ಕಾಗಿ ‘ಲೇ ನೋಡೊ. ನನ್ನ ಕ್ಲಾಸ್‌ಮೇಟ್ ಬಂದಿದ್ದಾನೆ. ಅಂಕಲ್‌ಗೆ
 ನಮಸ್ಕಾರ ಮಾಡು’ ಎಂದ. ಅವನು ಕಣ್ಣೆತ್ತಿಯೂ ನೋಡಲಿಲ್ಲ. ಆದರೆ ನಾವು ಒಯ್ದ ತಿಂಡಿಯ ಪ್ಯಾಕೇಟನ್ನು 
ಹರಿದು ಒಬ್ಬನೇ ಮುಕ್ಕತೊಡಗಿದ. ಅದು ಮುಗಿದ ಬಳಿಕ ತನಗೆ ಪ್ರಿಯವಾದ ಕಾರ್ಟೂನನ್ನು ಟಿವಿಯಲ್ಲಿ
 ಹಾಕಿಕೊಂಡು ಕುಳಿತ. ಅವನ ಜತೆಗೆ ಹಟಮಾಡಿ ಮಾತಾಡಿದೆ. ಕನ್ನಡದಲ್ಲೇನೊ ಜವಾಬುಕೊಟ್ಟ. ಆದರೆ ಅವನ
 ನಿಘಂಟಿನಲ್ಲಿ ಬಣ್ಣಕ್ಕೆ ಮತ್ತು ಅಂಕಿಗಳಿಗೆ  ಮನೆಮಾತಿನಲ್ಲಿ ಗುರುತಿಸುವ ಶಬ್ದಗಳೇ ಇರಲಿಲ್ಲ. ಮಕ್ಕಳನ್ನು ನಮ್ಮ
 ಇಚ್ಛೆಯಂತೆ ಯಾಕೆ ರೂಪಿಸಬೇಕು. ಅವುಗಳಿಂದ ಯಾಕೆ ಕಲಿಯಬಾರದು ಎಂಬ ಖಲೀಲ್ ಗಿಬ್ರಾನನ 
ಹಿತನುಡಿಯನ್ನು ಇಲ್ಲಿ ಒಪ್ಪಲು ಆಗಲಿಲ್ಲ. 



ನನ್ನ ಮುಖವನ್ನು ನೋಡುತ್ತಿದ್ದ ಗೆಳೆಯ ಹುಸಿನಗುತ್ತ ಹೇಳಿದ: ‘ಮಿತ್ರಾ, ನೋಡಿದೆಯಾ ಕಾಲ ಹೇಗೆ ಬದಲಾಗಿದೆ? 

ನಾವು ಸಣ್ಣವರಿದ್ದಾಗ ಗೋಲಿ, ಚೆಂಡು, ಚಿನ್ನಿದಾಂಡು ಆಡುತ್ತಿದ್ದೆವು. ಈಗಿನವಕ್ಕೆ ಆಡೋಕೆ ಲ್ಯಾಪ್‌ಟಾಪೇ ಬೇಕು’. 
ಗೆಳೆಯನ ದನಿಯಲ್ಲಿ ಹೊಸ ತಲೆಮಾರಿನ ಮಕ್ಕಳ ಅಭಿರುಚಿ ಬದಲಾದ ಬಗ್ಗೆ ಸಣ್ಣಗಿನ ವಿಷಾದವಿತ್ತು. ಜತೆಗೇ ನನ್ನ 
ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಬೆಳೆಸಿದ್ದೇನೆ ಎಂಬ ಹಮ್ಮೂ ಇದ್ದಂತೆ ಭಾಸವಾಯಿತು.
ಈಗ ಭಾರತದ ಬಹುತೇಕ ಪ್ರಜೆಗಳ ಕೈಗೂ ಮೊಬೈಲು ಬಂದಿವೆ. ಕೆಲವರಿಗೆ ಕಂಪ್ಯೂಟರ್ ಲ್ಯಾಪ್‌ಟಾಪುಗಳೂ ಸಿಕ್ಕಿವೆ. 

ಈ ತಂತ್ರಜ್ಞಾನಿ  ಸರಕುಗಳ ಆಗಮನದಿಂದ ಬದುಕಿನ ಗತಿಯಲ್ಲಿ ವಿಚಿತ್ರ ವೇಗ ಬಂದಿದೆ. ಕೂಲಿಕಾರರ, 
ಮನೆಗೆಲಸ ಮಾಡುವ ಮಹಿಳೆಯಿಂದ ಹಿಡಿದು ದಿನಗೂಲಿ ಹುಡುವವರ ತನಕ, ವ್ಯಾಪಾರಿಯಿಂದ ರೈತರ ತನಕ
 ಅನೇಕರ ವೃತ್ತಿಯಲ್ಲಿ ಸಂಚಲನೆ ಸಿಕ್ಕಿದೆ; ಬರೆಹಗಾರರ, ಅಧ್ಯಾಪಕರ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ
 ದುಡಿಯವವರ ಪತ್ರಕರ್ತರ ಬದುಕಿನಲ್ಲಿಯೂ ಒಂದು ಹೊಸ ನೆಗೆತ ಸಿಕ್ಕಿದೆ. ನಿಜಕ್ಕೂ ಇದೊಂದು ಅದ್ಭುತ 
ಸಂಚಲನೆಯೆಂದು ಒಪ್ಪಲೇಬೇಕು.



ಆದರೆ ಈ ಸಂಚಲನೆಯ ಜತೆಗೆ ಈ ಸಲಕರಣೆಗಳ ಒಡೆಯರಾದವರಲ್ಲಿ, ಅದರಲ್ಲೂ ಮಕ್ಕಳ ಮತ್ತು ತರುಣರ 

ವರ್ತನೆಯಲ್ಲಿ ಒಂದು ಚಿಕ್ಕ ಬದಲಾವಣೆಯಾಗಿದೆ. ಅದೆಂದರೆ ಅವರು ಮನುಷ್ಯರ ಸಹವಾಸವಿಲ್ಲದೆ ಕಾಲಕಳೆಯುವವರಾಗಿದ್ದಾರೆ. ಪಕ್ಕದಲ್ಲಿ ಯಾ ಎದುರುಗಡೆ ಯಾರಿದ್ದಾರೆ ಎಂಬ ಖಬರಿಲ್ಲದೆ, ಮೈಕ್ರೊಫೋನಿನ ಬೆಂಡೋಲೆಯನ್ನು ಕಿವಿಗೆ ತುರುಕಿಕೊಂಡು ಹಾಡುಕೇಳುತ್ತ ಧ್ಯಾನಸ್ಥರಾಗಿ ನಮ್ಮದೇ ಆದ ಏಕಾಂತದ ಜಗತ್ತನ್ನು ಸೃಷ್ಟಿಸಿಕೊಂಡು ಮುಳುಗಿಬಿಡಬಲ್ಲವರಾಗಿದ್ದಾರೆ; ಮೊಬೈಲ್ ಪರದೆಯ ಅಥವಾ ಗುಂಡಿಗಳ ಮೇಲೆ ಬೆರಳುಗಳನ್ನು 
ಆಡಲು ಬಿಟ್ಟು ಕಣ್ಣನ್ನು ಅಂಟಿಸಿ ಕಾಲಕಳೆವವರಾಗಿದ್ದಾರೆ; ಹೊರಗಿಂದ ಕರೆ ಬರಲಿ ಬಾರದಿರಲಿ, ಅಲ್ಲಾವುದ್ದೀನನ 
ದೀಪವನ್ನು ಕೈಸೆರೆ ಮಾಡಿಕೊಂಡಿರುವಂತೆ ಅವರ ಅಂಗೈಗಳು ಮೊಬೈಲುಧಾರಿಯಾಗಿವೆ. ಕೆಲವರ ಮನೆಯಲ್ಲಿ 
ಚಿಕ್ಕಮಕ್ಕಳು ಅತಿಥಿಗಳ ಮೇಲುಬಿದ್ದು ಸ್ನೇಹ ಮಾಡಿಕೊಂಡು, ಉಪಾಯವಾಗಿ ಅವರ ಮೊಬೈಲನ್ನು ಎಗರಿಸಿ
 ಗೇಮನ್ನಾಡಲು ಆರಂಭಿಸುವುದುಂಟು. ಆನೆ ಕೋತಿಯ ಬೊಂಬೆಗಳ ಜಾಗದಲ್ಲಿ ಮೊಬೈಲು ಆಟಿಕೆಗಳು 
ಬಂದಾಗಿದೆ. ರೈಲಿನಲ್ಲೊ ಬಸ್ಸಿನಲ್ಲೊ ಅಕ್ಕಪಕ್ಕ ಕೂತವರು, ಹತ್ತು ನಿಮಿಷದಲ್ಲಿ ಮುಗುಳುನಗು ವಿನಿಮಯ 
ಮಾಡಿಕೊಂಡು ಎಲ್ಲಿಗೆ ಹೊರಟಿದ್ದೀರಿ ಯಾಕೆ ಎಂದು ಸುರುಮಾಡಿ, ತಮ್ಮ ಸ್ಟೇಶನ್ ಬರುವ ಹೊತ್ತಿಗೆ ಎಷ್ಟೆಲ್ಲ 
ಹಂಚಿಕೊಳ್ಳುವ ಪದ್ಧತಿಗೆ ವ್ಯತ್ಯಯ ಸಂದಿದೆ. (ಈ ಬದಲಾವಣೆಯಿಂದ ಅನಗತ್ಯವಾಗಿ ಗುದ್ದಲಿ ಹಿಡಿದು ನಮ್ಮ 
ವೈಯಕ್ತಿಕ ವಿಷಯವನ್ನು ಅಗೆಯುವ ಕೆಟ್ಟಕುತೂಹಲಿಗಳ ಕಾಟದಿಂದ ಪಾರಾಗಲು ಸಾಧ್ಯವಾಗಿದೆ ಎಂಬುದನ್ನು ಮರೆಯುವಂತಿಲ್ಲ.) ಆದರೂ ದೂರದಲ್ಲಿದ್ದ ಜನರನ್ನು ಪರಸ್ಪರ ಸಂಪರ್ಕಿಸಲು ಹುಟ್ಟಿದ ತಂತ್ರಜ್ಞಾನವು, ಜನರ 
ಪರಸ್ಪರ ಜನರ ಸಂಪರ್ಕವನ್ನೇ ಕಡಿತಮಾಡಿರುವುದು ಒಂದು ವೈರುಧ್ಯ. 


    ಕೇಳುವ ಓದುವ ಕ್ರಿಯೆಗಿಂತ ನೋಡುವ ಮಾಧ್ಯಮದ ಶಕ್ತಿ ಪ್ರಚಂಡವಾದುದು. ಅದಕ್ಕೆ ಹೊಸ ಈ ತಂತ್ರಜ್ಞಾನ ಸೇರಿಕೊಂಡು ಅದನ್ನು ಮತ್ತಷ್ಟು ವಶೀಕರಣ ಮಾಡಿದೆ. ಯಾವಾಗಲೂ ಹೊಸ ತಲೆಮಾರು ಹೊಸ ತಂತ್ರಜ್ಞಾನವನ್ನು ಬೇಗ ತನ್ನದಾಗಿಸಿಕೊಳ್ಳುತ್ತದೆ. ದೋಷ ಇರುವುದು ತಂತ್ರಜ್ಞಾನದಲ್ಲೊ, ತಂತ್ರಜ್ಞಾನ ಬಳಸುತ್ತಿರುವ ಮನೋಧರ್ಮದಲ್ಲೊ? ತಂತ್ರಜ್ಞಾನ ಸಾಮಾನ್ಯವಾಗಿ ಮೌಲ್ಯ ನಿರ್ಲಿಪ್ತ. ಅದನ್ನು ಯಾರು ಯಾತಕ್ಕಾಗಿ ಬಳಸುತ್ತಿದ್ದಾರೆ ಎನ್ನುವುದರ ಮೇಲೆ ಅದು ದೋಷಪೂರ್ಣವೊ ಉಪಯುಕ್ತವೊ ಅನಾಹುತಕಾರಿಯೊ ಆಗುತ್ತದೆ. ಅದೊಂದು ಇಬ್ಬಾಯ ಕತ್ತಿ. ಬುಲ್ಡೋಜರನ್ನು ದಿಬ್ಬಕಡಿದು ಹಳ್ಳಿಗೆ ರಸ್ತೆ ಮಾಡಲು, ಕಬ್ಬಿಣದ ಅದಿರನ್ನು ಅಕ್ರಮವಾಗಿ ಅಗಿಯಲು, ಹೆಣಗಳ ಸಾಮೂಹಿಕ ಸಂಸ್ಕಾರ ಮಾಡಲು ಅಥವಾ ತಮ್ಮ ಭೂಮಿ ಬಿಟ್ಟುಕೊಡದ ರೈತರ ಮನೆಕೆಡವಿ ಒಕ್ಕಲೆಬ್ಬಿಸಲು ಎಷ್ಟೊಂದು ದಿಸೆಯಲ್ಲಿ ಬಳಸಬಹುದು. ಭಾಷೆಯ ವಿಷಯದಲ್ಲಿಯೂ ಅಷ್ಟೆ. ತನಗೆ ತಾನೇ ಇಂಗ್ಲೀಶು ಕೆಡುಕೂ ಅಲ್ಲ ಒಳಿತೂ ಅಲ್ಲ. ಅದನ್ನು ಸಮಾಜ ಹೇಗೆ ಬಳಸುತ್ತಿದೆ ಎಂಬುದು ಮುಖ್ಯ.  ಹೀಗಾಗಿ ಸಮಸ್ಯೆ ಇರುವುದು ತಂತ್ರಜ್ಞಾನದಲ್ಲಿಯಲ್ಲ. ಅದನ್ನೊಂದು ಬದುಕಿನ ಭಾಗ್ಯವೆಂದು ಭಾವಿಸಿ ಸಂಭ್ರಮಿಸಿರುವ ಸಾಮಾಜಿಕ ಮನೋಭಾವದಲ್ಲಿ. 

    ಈ ಚರ್ಚೆಯನ್ನು ಇನ್ನೊಂದು ಮಜಲಿಗೆ ಒಯ್ಯುವುದಾದರೆ, ಮಕ್ಕಳು ಕಂಪ್ಯೂಟರ್‌ನಲ್ಲಿ ಆಟವಾಡುತ್ತವೆ, ಇಂಗ್ಲೀಶ್ ಮೀಡಿಯಮ್ಮಿನಲ್ಲಿ ಓದುತ್ತಿವೆ, ಅವಕ್ಕೆ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿದೆ, ಅವು ವಿದೇಶದಲ್ಲಿವೆ, ನಾವು ನಿವೃತ್ತಿಯಾಗುವಾಗ ಪಡೆದ ಸಂಬಳವನ್ನು ಅವು ಈಗಲೇ ಗಳಿಸುತ್ತಿವೆ-ಮುಂತಾದ ಗರಿಗಳನ್ನು ತಲೆಗೆ ಸಿಕ್ಕಿಸಿಕೊಂಡು ತಿರುಗಾಡುವ ಮಧ್ಯಮವರ್ಗದ ತಂದೆತಾಯಿಗಳನ್ನು ಗಮನಿಸಬೇಕು. ಈ ಸಾಧನೆಗಳ ಫಲವಾಗಿ ಏನೆಲ್ಲ ಕಳೆದುಹೋಗಿದೆ ಎಂಬುದರ ಲೆಕ್ಕಾಚಾರವನ್ನೇ ಅವರು ಮಾಡಿದಂತಿಲ್ಲ ಅಥವಾ ಈಗ ಮಾಡಲು ಆರಂಭಿಸಿದ್ದಾರೆ. ಅವರು  ವರ್ಷಗಳ ಹಿಂದೆ ಕಂಡ ಕನಸು ನಿಜವಾಗಿರಬಹುದು. ಆದರೆ ದೊಡ್ಡಮನೆಗಳಲ್ಲಿ ಒಂಟಿಯಾಗಿ ಬದುಕನ್ನು ಕಳೆಯುವ ಬೆಲೆಯನ್ನೂ ಅವರು ತೆರುತ್ತಿದ್ದಾರೆ. ಅವರ ಈ ಅನಾಥಪ್ರಜ್ಞೆಗೆ ಅವರು ಮಾತ್ರವಲ್ಲ, ಅವರನ್ನು ಸೆಳೆದಿರುವ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯೂ ಕಾರಣ. ಮಿತ್ರರೊಬ್ಬರು ಹೇಳಿದ ಮಾತು ನೆನಪಾಗುತ್ತಿದೆ: ‘ಎಸ್‌ಎಸ್‌ಎಲ್‌ಸಿ ಫೇಲಾದ ಒಬ್ಬ ದಡ್ಡಮಗ ಇದ್ದಿದ್ದರೆ ನಾವು ಒಂಟಿಯಾಗಿರುತ್ತಿರಲಿಲ್ಲ’.
ಹೊಸತಲೆಮಾರು ತನ್ನ ಅಪ್ಪಅಜ್ಜಂದಿರ ಹಾಗೆ ಬದುಕಬೇಕು ಎಂತಲ್ಲ. ಹಾಗೆ ಬದುಕುವುದು ಯಾವ ತಲೆಮಾರಿಗೂ ಸಾಧ್ಯವಿಲ್ಲ. 



    ಪ್ರತಿ ತಲೆಮಾರು ತನ್ನದೇ ಆದ ಲೋಕದೃಷ್ಟಿಯನ್ನು ಜೀವನ ನಡೆಸುವ ಕ್ರಮವನ್ನೂ ವೈಯಕ್ತಿಕ ಅಭಿರುಚಿಯಿಂದಲೂ ಪರಿಸರದ ಒತ್ತಡದಿಂದಲೊ ಪಡೆದುಕೊಳ್ಳುತ್ತದೆ. ಅದು ಅದರ ಹಕ್ಕು ಕೂಡ. ಆಗ ಹಳೆಯ ಮತ್ತು ಹೊಸ ತಲೆಮಾರುಗಳ ನಡುವೆ ಮೌಲ್ಯಗಳ ತಿಕ್ಕಾಟ ಆರಂಭವಾಗುತ್ತದೆ. ಈ ತಲೆಮಾರುಗಳ ನಡುವಣ ಮೌಲ್ಯ ಸಂಘರ್ಷವನ್ನೇ ಕನ್ನಡದ ಕತೆ ಕಾದಂಬರಿಗಳು ಚಿತ್ರಿಸುತ್ತ ಬಂದಿವೆ- ‘ಇಂದಿರಾಬಾಯಿ’ಯಿಂದ ಹಿಡಿದು ಈಚಿನ ‘ಹಳ್ಳಬಂತು ಹಳ್ಳ’ದ ತನಕ. ಪ್ರಶ್ನೆಯೆಂದರೆ ಹೊಸ ತಲೆಮಾರು ತನ್ನ ಬದುಕನ್ನು ಅದು ತನ್ನ  ಸ್ವಂತ ವಿವೇಚನೆ ಮತ್ತು ನಿರ್ಧಾರದಿಂದ ರೂಪಿಸಿಕೊಳ್ಳುತ್ತಿಲ್ಲ. ಅದನ್ನು ಬೇರೆ ಯಾವ್ಯಾವುದೊ ಶಕ್ತಿಗಳು ರೂಪಿಸುತ್ತಿವೆ. ಮಾರುಕಟ್ಟೆ ನಮ್ಮ ಶಿಕ್ಷಣವನ್ನು, ಅದರ ಮಾಧ್ಯಮವನ್ನು, ಆಡುವ ಭಾಷೆಯನ್ನು, ಮಾಡುವ ಉದ್ಯೋಗವನ್ನು ಅಷ್ಟೇಕ ನಮ್ಮ ಆಲೋಚನೆ ವರ್ತನೆ ಮಾತುಕತೆಗಳನ್ನು ಪ್ರಭಾವಿಸುತ್ತಿದೆ. ಇಲ್ಲಿ ಸ್ಪರ್ಧೆ, ಗೆಲುವು, ಯಶಸ್ಸು, ವ್ಯಕ್ತಿವಾದಗಳು ಹೊಸ ಮೌಲ್ಯಗಳಾಗುತ್ತಿವೆ. ನಗರಗಳಲ್ಲಿ ಬೇರುರಹಿತ ಹೊಸತಲೆಮಾರು-ಅನಾಥ ಪ್ರಜ್ಞೆಯ ಹಳೆಯ ತಲೆಮಾರು ನಿರ್ಮಾಣವಾಗುತ್ತಿದೆ.

   ವಿಜ್ಞಾನ ತಂತ್ರಜ್ಞಾನ ಪ್ರಧಾನವಾದ ಶಿಕ್ಷಣ ಪಡೆದು ದೇಶಾಂತರ ಚಲನೆ ಪಡೆದಿರುವ ಮಕ್ಕಳ ಸೀಮೋಲ್ಲಂಘನೆಯ ಬಗ್ಗೆ ಸರೀಕರ ಎದುರು ಬಡಾಯಿ ಕೊಚ್ಚಿಕೊಳ್ಳುವ ತಂದೆತಾಯಿಗಳು, ಏಕಾಂತದಲ್ಲಿ ವಿಚಿತ್ರವಾಗಿ ಚಡಪಡಿಸುತ್ತಿರುತ್ತಾರೆ. ತಮ್ಮ ಮಕ್ಕಳಿಗೆ ಲ್ಯಾಪ್‌ಟಾಪು ಕೊಡಿಸುವಾಗ, ಶಾಲೆಗೆ ಹೋಗಲು ಅಂಗಿಯಿಲ್ಲದ ಚಪ್ಪಲಿಯಿಲ್ಲದ ಮಕ್ಕಳು ಬೀದಿಯ ತುದಿಗಿವೆ ಎಂಬುದನ್ನು ಅವರು ಬಹುಶಃ ಯೋಚಿಸಲಿಲ್ಲ. ಆಕಾಶನೀಲಿ ಯೂನಿಫಾರ್ಮು ಹಾಕಿಕೊಂಡು ಬರಿಗಾಲಲ್ಲಿ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ಹಾಗಾಗಿರಲು, ವ್ಯವಸ್ಥೆ ಮಾತ್ರವಲ್ಲ, ಮಧ್ಯಮವರ್ಗದವರ ಸ್ವಕೇಂದ್ರಿತ ಆಲೋಚನ ಕ್ರಮವೂ ಕಾರಣವೆಂದು ಹೊಳೆಯಲಿಲ್ಲ. ಸುತ್ತಲಿನ ಪರಿಸರದ ಬಗ್ಗೆ ಮಕ್ಕಳನ್ನು ಸೆನ್ಸಿಟೈಜ್ ಮಾಡಲು ಯತ್ನಿಸಲಿಲ್ಲ. ಮಕ್ಕಳನ್ನು ಹೆರುವ ಜೈವಿಕ ಕ್ರಿಯೆ ಸುಲಭ. ಅವನ್ನು ಪರಿಸರದ ಬಗ್ಗೆ ಪ್ರೀತಿ ಕಾಳಜಿ ಕಲಿಸಿ ಸೂಕ್ಷ್ಮ ಸಂವೇದಿ ಮನುಷ್ಯರನ್ನಾಗಿ ಮಾಡುವುದು ಸವಾಲಿನ ಕೆಲಸ. ಸಮಸ್ಯೆ ತಂತ್ರಜ್ಞಾನದಲ್ಲಿಲ್ಲ. ಅದನ್ನು ಬಳಸಿಕೊಳ್ಳುವ ಮನೋಭಾವದಲ್ಲಿದೆ. ಸಮಸ್ಯೆ ಆಧುನಿಕತೆಯಲ್ಲಿಲ್ಲ. ಅದರಲ್ಲಿ ಅಳವಟ್ಟಿರುವ ಮೌಲ್ಯಗಳಲ್ಲಿದೆ.

   ಬದಲಾಗಿರುವ ಯುಗಧರ್ಮವನ್ನು ಅರ್ಥಮಾಡಿಕೊಳ್ಳುವಲ್ಲಿ ಅಥವಾ ಅದಕ್ಕೆ ಹೊಂದಿಕೊಳ್ಳುವಲ್ಲಿ ಸೋತಿರುವುದರಿಂದ ಈ ಎಲ್ಲ ಭಾವುಕ ಗೊಣಗಾಟಗಳು ಹುಟ್ಟುತ್ತಿವೆಯೆ? ನನ್ನ ಸಹಪಾಠಿ ತನ್ನ ಮಗನನ್ನು ಇನ್ಸೆನ್ಸಿಟಿವ್ ಮಾಡುತ್ತ ಕೊನೆಗಾಲದಲ್ಲಿ ಅನಾಥನಾಗುವ ಹಾದಿಯಲ್ಲಿ ಹೊರಟಿರಬಹುದೇ? ನನ್ನ ಮನಸ್ಸು ಹೊಯ್ದಾಡಿತು. ಹರಟೆ ಮುಗಿಸಿ ಹೊರಡುವಾಗ ಆಗಾಗ್ಗೆ ಮಂಕುಗವಿಯುತ್ತಿದ್ದ ಗೆಳೆಯನ ಮುಖಗಗನ್ನಡಿಯನ್ನು ತುಸು ಮರುಕದಿಂದ ನಿಟ್ಟಿಸಿದೆ. ಅದರಲ್ಲಿ ನನ್ನ ಪ್ರತಿಬಿಂಬವೂ ಕಂಡಿತು.    

ಶುಕ್ರವಾರ, ಜುಲೈ 12, 2013

ಮಳೆ ಜಾನಪದ



 -ಅರುಣ್ ಜೋಳದಕೂಡ್ಲಿಗಿ

ಉತ್ತರ ಭಾರತದಲ್ಲಿ ಮಳೆ ತನ್ನ ರೌದ್ರಾವತಾರವನ್ನು ತೋರಿದೆ. ಭಯ ಹುಟ್ಟಿಸುವ ಮೈ ನಡುಗಿಸುವ ಮಳೆಯ ಅವತಾರವಿದು. ಹೀಗೆ ಕೋಪಗೊಂಡ ಮಳೆದೇವನನ್ನು ಶಾಂತಗೊಳಿಸುವ ಆಚರಣಾಲೋಕವೂ ಜನರಲ್ಲಿದೆ. ಇಂತಹ ಸಂದರ್ಭದಲ್ಲಿ ಸಾಕಪ್ಪೋ ಮಳೆರಾಯ ಎಂದು ಗೋಗರೆಯುತ್ತಾರೆ. ಈಗ ಕರ್ನಾಟಕದ ಬಹುಭಾಗದಲ್ಲಿ ಮಳೆ ಬಂದು ಬಿತ್ತನೆ ಮಾಡಿ ಜನರು ಖುಷಿಯಲ್ಲಿದ್ದಾರೆ. ಇಂತಹ ಹೊತ್ತಲ್ಲಿ ಮಳೆ ಜತೆ ಜನರ ನಂಬಿಕೆ ನಂಟನ್ನು ಅರಿಯುವ ಮನಸ್ಸಾಗುತ್ತಿದೆ.

ಮಳೆಯೆಂದರೆ ಸಂಭ್ರಮ, ಮಳೆಯೆಂದರೆ ರೈತರ ನರ ನಾಡಿಗಳಲ್ಲಿ ಉಕ್ಕುವ ಚೈತನ್ಯ. ಮಳೆಯೆಂದರೆ ಮನಸ್ಸು ಉಲ್ಲಸಿತವಾಗುವ ತಂಪು. ಆಕಾಶದಲ್ಲಿ ಮೋಡ ಕಟ್ಟುವ ಕ್ರಿಯೆ ಆರಂಭವಾಗುತ್ತಲೂ ರೈತರಲ್ಲಿ ನೂರಾರು ಕನಸು ಕಲ್ಪನೆಗಳು ಗರಿಗೆದರುತ್ತವೆ. ಸಂತಸ, ಭಯ, ಆತಂಕ, ಸಂಭ್ರಮ ಒಟ್ಟೊಟ್ಟಿಗೆ ಒಡಮೂಡುತ್ತವೆ.

ಮಳೆಯೆಂಬುದು ನೈಸರ್ಗಿಕ ಕ್ರಿಯೆ. ಪ್ರತಿಯಾಗಿ ಜೈವಿಕ ಅಸಮತೋಲನವನ್ನು ಕಡಿಮೆ ಮಾಡುವ ಪ್ರಕ್ರಿಯೆಗಳಿಂದ ಒಂದಷ್ಟು ಮಳೆಯನ್ನು ಬರಿಸಬಹುದಾದರೂ, ಕೇವಲ ನಂಬಿಕೆ ಆಚರಣಲೋಕ ಹೆಚ್ಚು ಫಲಕಾರಿಯಲ್ಲ. ಹೀಗಿದ್ದಾಗಲೂ ಮಳೆಯ ಜತೆ ಜನ ನಂಬುಗೆಯ ನಂಟನ್ನು ಬೆಸೆಯುತ್ತಲೇ ಬಂದಿದ್ದಾರೆ. ವೈಜ್ಞಾನಿಕವಾಗಿ ಇದೆಲ್ಲಾ ಮೂಡನಂಬಿಕೆ ಎಂದು ತಳ್ಳಿಹಾಕುವ ಒರಟುತನವನ್ನು ತೋರಬಹುದು. ಆದರೆ ನಿಸರ್ಗದ ಜತೆಗಿನ ಬೆಸುಗೆಯನ್ನು ಗಟ್ಟಿಗೊಳಿಸಿದ ಈ ನಂಬಿಕೆಗಳು ಪರಿಸರ ಸ್ನೇಹಿ ಕೂಡ.

ನಂಬಿಕೆಯೊಂದು ಜಾತಿ ಧರ್ಮ ಲಿಂಗದ ತರತಮಗಳನ್ನು ದಾಟುವಂತಿದ್ದರೆ, ಈ ಕಾಲದ ಸಂಗಾತಿಯಾಗಿ ಅದರ ಜತೆ ಸ್ನೇಹದ ಸಲುಗೆಯನ್ನು ಮಾಡಬಹುದು. ಹೀಗಾಗಿ ಮಳೆಕುರಿತ ನಂಬಿಕೆ, ಆಚರಣೆಯ ಲೋಕ ಈ ಕಾಲದ ಸಂಗಾತಿಯೂ ಹೌದು. ಜನರ ಚೈತನ್ಯವನ್ನು ಇಮ್ಮಡಿಗೊಳಿಸುವ ಆಚರಣಾ ಲೋಕದಲ್ಲಿ ಒಂದು ಸುತ್ತು ಸುತ್ತಿದರೆ, ಧಣಿವಾಗದು. ನಂಬಿಕೆಲೋಕದ ಕುತೂಹಲಕಾರಿ ಸಂಗತಿಗಳು ಹುಟ್ಟಿಸುವ ಅಚ್ಚರಿ ಹೊಸ ತಲೆಮಾರಿನಲ್ಲಿ ಮಳೆಯ ಜತೆ ಹೊಸ ನಂಟನ್ನು ಗಟ್ಟಿಗೊಳಿಸಬಲ್ಲದು.

ಮಳೆ ತಯಾರಿ
ಆಕಾಶದಲ್ಲಿ ಮೋಡ ಕಟ್ಟಲು ಶುರುವಾಗುವ ಮೊದಲು ಗ್ರಾಮಜಗತ್ತು ತನ್ನದೇ ಆದ ತಯಾರಿಯನ್ನು ಮಾಡಿಕೊಳ್ಳುತ್ತದೆ. ಇರುವೆಯೊಂದು ತನ್ನ ಮನೆಯಲ್ಲಿ ಆಹಾರ ಸಂಗ್ರಹಿಸಿಕೊಂಡಂತೆ, ರೈತರು ಹೊಲ ಉಳುವ ಪರಿಕರಗಳನ್ನೆಲ್ಲಾ ಮೈದಡವಿ, ಸಜ್ಜುಗೊಳಿಸುತ್ತಾರೆ. ಮನೆಯ ಮಾಡಿ, ಹಂಚುಗಳ ಸರಿಪಡಿಸಿ ಮಳೆಗೆ ಮನೆಯ ಸಿದ್ಧಗೊಳಿಸುತ್ತಾರೆ. ಮಲೆನಾಡಿನಲ್ಲಿ ಗಂಡಸರು ಕಂಬಳಿ, ಕೊಡೆ ಹೊರತೆಗೆದು ಹಳತಾದರೆ ರಪೇರಿ ಮಾಡಿ ಮಳೆಗೆ ಅಣಿಗೊಳಿಸುತ್ತಾರೆ. ಕೃಷಿಕರಾದರೆ ಬಿತ್ತನೆ, ನಾಟಿ, ತೋಟಕ್ಕೆ ಬೇಕಾಗುವ ನೇಗಿಲು-ನೊಗ, ಹಾರೆ-ಪಿಕಾಸಿ, ಗುದ್ದಲಿ, ಕುಳ, ಕುಂಟೆ, ಕೊಲ್ಡುಗಳ ಕಡೆ ಗಮನಹರಿಸುತ್ತಾರೆ.
ಕೂಡಿಟ್ಟ ಹಣವನ್ನು ಮತ್ತೊಮ್ಮೆ ಎಣಿಸಿಟ್ಟು ಬೀಜ ಗೊಬ್ಬರಗಳ ಬೆಲೆಯ ಜತೆ ತಾಳೆ ಹಾಕುತ್ತಾರೆ. ಬಡ ರೈತರು ಉಳ್ಳವರ ಮನೆ ಮುಂದೆ ಸಾಲದ ಸೂಚನೆ ನೀಡಿ ಕುಶಲೋಪರಿ ಮಾತಾಡಿ ಬರುತ್ತಾರೆ. ಹೊಲದ ಗಿಡಗಂಟೆಯ ಕತ್ತರಿಸಿ ಊಳಲು ಸಪಾಟುಗೊಳಿಸಿರುತ್ತಾರೆ. ಮಹಿಳೆಯರು ಮಳೆಗಾಲದ ಚಳಿಗೆ ಹಪ್ಪಳ-ಸಂಡಿಗೆ, ಉಪ್ಪಿನಕಾಯಿ, ಹುಳಿ, ವಿವಿಧ ಕಾಳು-ಬೇಳೆಗಳನ್ನು ತಯಾರುಗೊಳಿಸಿ ಡಬ್ಬಿಗಳಲ್ಲಿ ಬೆಚ್ಚಗೆ ಅಡಗಿಸಿಡುತ್ತಾರೆ. ಹೆಂಗಳೆಯರು ಜತನದಿಂದ ಕಾಪಿಡುವುದು ಬರಿ ತಿನಿಸು- ಖಾದ್ಯಗಳನ್ನಷ್ಟೇ ಅಲ್ಲ, ಪ್ರೀತಿ, ಮಮತೆಯನ್ನೂ ಕೂಡ. ಹಾಗಾಗಿ ಈ ತಿನಿಸುಗಳ ಜತೆ ಮಳೆ ಪ್ರೀತಿಯೂ ಸೇರಿ ಮನೆಯಲ್ಲಿ ಸಂತಸ ತುಂಬುತ್ತದೆ.

ಮಳೆ ಮೊರೆ
ಹೀಗೆ ಮಳೆಗೆ ತಯಾರಿಯಾದ ಮೇಲೆ ಮಳೆಗಾಗಿ ಮುಗಿಲು ನೋಡುತ್ತಾರೆ. ರೈತರ ಲೆಕ್ಕಾಚಾರದ ಪ್ರಕಾರ ಮಳೆ ಬರದಿದ್ದಾಗ, ಮಳೆಯ ಮನವೊಲಿಸಲು ಮೊರೆ ಹೋಗುತ್ತಾರೆ. ಕರ್ನಾಟಕದ ತುಂಬೆಲ್ಲಾ ಹೀಗೆ ಮಳೆ ಮೊರೆಯ ಆಚರಣಾ ಲೋಕ ವೈವಿದ್ಯಮಯವಾಗಿದೆ. ಮಳೆ ಬರಿಸುವ ಅಥವಾ ನಿಲ್ಲಿಸುವ ಎರಡೂ ಆಚರಣೆಗಳಲ್ಲಿ ನಗ್ನತೆ ಬಹು ಮುಖ್ಯವಾದದ್ದು. ಗುರ್ಚಿ, ಮಳೆಮಲ್ಲಪ್ಪ, ಮೊದಲಾದ ಆಚರಣೆಗಳಲ್ಲಿ ಮಳೆರಾಯನ ಪ್ರತೀಕವನ್ನು ಹೊರುವ ಹುಡುಗ ನಗ್ನನಾಗಿರುತ್ತಾನೆ.

ಇಲ್ಲಿ ಮಳೆ ಫಲವಂತಿಕೆಯ ಸಂಕೇತವಾಗಿದ್ದು ಇದನ್ನು ಪ್ರೇರೇಪಿಸುವುದಕ್ಕೆ ನಗ್ನತೆ ಅಗತ್ಯವಾಗುತ್ತದೆ. ಹಾಗಾಗಿಯೇ ಮಳೆಬರಿಸಲು ಮದುವೆ ಆಚರಣೆ ದೊಡ್ಡ ಪ್ರಮಾಣದಲ್ಲಿದೆ. ಕಪ್ಪೆಗಳ ಮದುವೆ, ಕತ್ತೆಗಳ ಮದುವೆ, ಗಂಡು ಗಂಡಿನ ಮದುವೆ, ಮಕ್ಕಳ ಮದುವೆ ಹೀಗೆ ಮದುವೆ ಆಚರಣೆಯೂ ಫಲವಂತಿಕೆಯನ್ನು ಬಿಂಬಿಸುತ್ತದೆ. ಎನ್ನುವುದನ್ನು ನೆನೆಯಬೇಕು.

ಮಳೆ ದೈವ
ಮರದೈವ, ಮಣ್ಣುದೈವ, ಕಲ್ಲುದೈವದಂತೆ ಮಳೆ ದೈವವೂ ಇದೆ. ಮುಂಗಾರಿಗೆ ಮುಂಚೆ ನಡೆದ ಯಾವುದೇ ದೈವದ ಜಾತ್ರೆಯು ಮಳೆಯ ಬರವಿನ ಭವಿಷ್ಯವನ್ನು ನುಡಿಯುತ್ತವೆ. ಅಂತೆಯೇ ಮಳೆ ಮಲ್ಲಯ್ಯ, ಮಳೆ ಮಲ್ಲಿಕಾರ್ಜುನ, ಮಳೆ ದುರುಗಮ್ಮ, ಮಳೆ ಮಾದೇವ, ಮಳೆ ಮಾರಮ್ಮ, ಮಳೆ ಗುಂಡಯ್ಯ ಮುಂತಾದ ಮಳೆ ದೈವಗಳು ಪ್ರಾದೇಶಿಕವಾಗಿ ಆಚರಣೆಯಲ್ಲಿವೆ. ಸಾಮಾನ್ಯವಾಗಿ ಪ್ರತಿ ಹಳ್ಳಿಗಳಲ್ಲೂ ಇರುವ ಆಂಜನೇಯ, ಹನುಮಂತ ದೇವರನ್ನು ಪೂಜೆ ಮಾಡುವುದರಿಂದ ಮಳೆ ಬರುತ್ತದೆ ಎಂದು ನಂಬುತ್ತಾರೆ. ಈ ದೈವಗಳಿಗೆ ಮಳೆ ಬರದಿದ್ದಾಗ ಹಾರೈಕೆಯೂ, ಪೂಜೆ ಪುರಸ್ಕಾರಗಳೂ ನಡೆಯುತ್ತವೆ. ಅದೇ ಮಳೆ ಬರದಿದ್ದಾಗ ಪೂಜಿಸಿದ ದೈವಗಳನ್ನೇ ದೂಷಿಸುವುದೂ ಇದೆ. ಬೈಯುವುದಿದೆ.

ಮಳೆ ನಂಬಿಕೆ

ಮಳೆ ಕುರಿತ ನಂಬಿಕೆಗಳು ಪ್ರಾದೇಶಿಕವಾಗಿ ಹಲವಿವೆ. ಈ ನಂಬಿಕೆಗಳಿಗೆ ಅಲ್ಲಿಯದೇ ಆದ ದಂತಕಥೆಗಳಿರುತ್ತವೆ. ಪ್ರತಿ ಮಳೆ ಒಂದೊಂದು ಜಾತಿಯವರ ಮನೆಯಲ್ಲಿ ವಾಸವಾಗಿರುತ್ತದೆ ಎಂಬ ನಂಬಿಕೆಯೂ ಇದೆ. ಹೂಗಾರರಲ್ಲಿ ಅಶ್ವಿನಿ, ತಳವಾರರಲ್ಲಿ ಕೃತ್ತಿಕೆ, ಅಗಸರ ಮನೆಯಲ್ಲಿ ಭರಣಿ, ಬಣಜಿಗರಲ್ಲಿ ರೋಹಿಣಿ, ಕ್ವಾಮಟರ (ವೈಶ್ಯ) ಮನೆಯಲ್ಲಿ ಮೃಗಶಿರಮಳೆ ವಾಸವಾಗಿರುತ್ತದಂತೆ. ಉತ್ತರ ಕರ್ನಾಟಕದಲ್ಲಿ ನಂಬಿಕಸ್ತ ಮೃಗಶಿರ ಮಳೆ ಕ್ವಾಮಟರ ಮನೆಯಲ್ಲಿದ್ದರೆ, ಹೊರಬರುವುದು ಅಸಾಧ್ಯದ ಮಾತು, ಹೇಗಾದರೂ ಸರಿ ಹೊರ ತರಬೇಕೆಂದು ಪಣತೊಟ್ಟ ಯುವಕರ ಗುಂಪು ಅವರ ಮನೆ ಮುಂದೆ ಹಾಡನ್ನು ಪುನರಾವರ್ತಿಸುತ್ತಾರೆ.

ಇಂತಹ ಯುವಕರ ಗುಂಪು ಮಳೆ ಬಾರದಿದ್ದಾಗ ಓಣಿ-ಓಣಿ ತಿರುಗಿ ಭಿಕ್ಷೆ ಬೇಡುವ ಆಚರಣೆ ವಿಶೇಷವಾಗಿದೆ. ಯುವಕರಲ್ಲಿ ಒಬ್ಬನಿಗೆ ಹೆಣ್ಣಿನ ವೇಷ ಹಾಕಿಸಿ, ಮಗುವೊಂದನ್ನು ಎತ್ತಿಕೊಂಡು ಭಿಕ್ಷೆ ಬೇಡುವ ಹೆಂಗಸಿನಂತೆ ಬೀದಿಗೆ ಹೊರಡಿಸುತ್ತಾರೆ. ಆತನ ಹಿಂದಿರುವ ಯುವಕರ ಹಿಂಡು ‘ಯವ್ವ ನೀಡವ್ವ, ಯಕ್ಕ ನೀಡವ್ವ,/ಮಕ್ಕಳು ಮರಿ ಹಸಗೊಂಡಾವೆ,/ಮೂರು ದಿನದಿಂದ ಅನ್ನ ನೀರು ಕಂಡಿಲ್ಲ,/ಯವ್ವ ನೀಡವ್ವ, ಯಕ್ಕ ನೀಡವ್ವ/ನಿಮ್ಮ ಮನಿ ತಣ್ಣಗಿರತೈತಿ’ ಎಂದು ಹಾಡುತ್ತಾರೆ.

ತಲೆಯ ಮೇಲೆ ಕಪ್ಪೆಯನ್ನು ಹೊತ್ತು ನೀರು ಸುರಿದುಕೊಳ್ಳುತ್ತಾ ಬೀದಿ-ಬೀದಿ ತಿರುಗಿ ಭಿಕ್ಷೆ ಬೇಡುತ್ತಾ ಮಳೆ ಕರೆಯುವ ಆಚರಣೆಯೂ ಇದೆ. ಒಬ್ಬ ಯುವಕನ ತಲೆಯ ಮೇಲೆ ರೊಟ್ಟಿ ಹಾಕುವ ಹೆಂಚು(ಕಾವಲಿ) ಇಟ್ಟು, ಆ ಹೆಂಚಿನ ಮೇಲೆ ಸಗಣಿಯ ಉಂಡೆಯನ್ನಿಟ್ಟು ಅದರೊಳಗೆ ಒಂದು ಕಪ್ಪೆ ಇಡುತ್ತಾರೆ. ಇದೇ ಗುರ್ಜಿ. ಈ ಗುರ್ಜಿಯನ್ನೊತ್ತ ಯುವಕನನ್ನು ಮುಂದೆ ಬಿಟ್ಟು ಯುವಕರ ಗುಂಪು ತಾಟು, ಜೋಳಿಗೆ ಇತ್ಯಾದಿಗಳನ್ನಿಡಿದು ಆತನನ್ನು ಹಿಂಬಾಲಿಸುತ್ತಾರೆ.

ತುಮಕೂರು, ಚಿತ್ರದುರ್ಗ ಭಾಗಗಳಲ್ಲಿ ಗಡಿ ಮಾರಮ್ಮನ ಬೊಂಬೆಯನ್ನು ತಮ್ಮ ಗ್ರಾಮದ ಗಡಿಗೆ ಕೊಂಡೊಯ್ದು ಪಕ್ಕದ ಗ್ರಾಮದ ಗಡಿಯೊಳಕ್ಕೆ ಇಟ್ಟು ಬರುತ್ತಾರೆ, ಇದರಿಂದಾಗಿ ಮಳೆ ಬರುವ ನಂಬಿಕೆ ಇದೆ. ಇದೇ ಸಂದರ್ಭಕ್ಕೆ ಚಿಕ್ಕ ಗಾಡಿಯಲ್ಲಿ ಹಳೆ ಮೊರ, ಮೊಂಡು ಪೊರಕೆ, ಹಳೆ ಬುಟ್ಟಿ ಇತ್ಯಾದಿಗಳ ಬೊಂಬೆ ಜೊತೆ ಇಟ್ಟು ರಾತ್ರಿ ಮೆರವಣಿಗೆ ಮಾಡಿ ಊರ ದಾಟಿಸುತ್ತಾರೆ.

ಮಳೆ ಕಂಬಳಿ

ಉತ್ತರ ಕರ್ನಾಟಕದಲ್ಲಿ ಹಾಲುಮತದ ವ್ಯಕ್ತಿಯೊಬ್ಬ ಕಂಬಳಿಯನ್ನು ಐದು ಸಲ ಬೀಸುತ್ತಾನೆ. ಹೀಗೆ ಮಾಡಿ ಮನೆಗೆ ಹಿಂತಿರುವಷ್ಟರಲ್ಲಿ ಮಳೆ ಬರುವುದೆಂದು ನಂಬಿಕೆ ಇದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಗುಡ್ಡದ ಮೇಲೆ ನಿಂತು ಕಂಬಳಿ ಬೀಸುವ ಆಚರಣೆ ಇದೆ. ಕಂಬಳಿ ಬೀಸುವುದರ ಜತೆ ಕಪ್ಪು ಮೋಡಗಳು ಇತ್ತ ತೇಲಿ ಬರಲಿ ಎಂಬ ಆಶಯವಿದ್ದಂತಿದೆ. ಹೀಗೆ ಕಂಬಳಿ ಬೀಸಿ ಮಳೆ ತರಿಸಿದ ವ್ಯಕ್ತಿಗಳ ಕುರಿತ ಐತಿಹ್ಯಗಳಿವೆ.

ಮಳೆ ಹಾಡು
ಮಳೆ ಕುರಿತಂತೆ ಜನಪದರಲ್ಲಿ ಮಳೆಗೀತೆಗಳಿವೆ. ಇವು ಮಳೆಯ ರಮಣೀಯತೆಯನ್ನು, ಅದರ ಸೌಂದರ್ಯವನ್ನು ವರ್ಣಿಸುವ ಜತೆ, ಅದೊಂದು ನೈಸರ್ಗಿಕ ಕ್ರಿಯೆ ಎನ್ನುವುದನ್ನು ಹೇಳುವಂತಿವೆ. ‘ಆಕಾಶದೊಳಗೆ ಆರ್ಭಟವೇನಿರೆ/ದೇವೇಂದ್ರರಾಯ ಹೊರ ಪಯಣ ಹೋಗ್ವಾಗ/ಸಿಡಿಲು ಮಿಂಚಿನ ಐಭೋಗ/ಕೆಂಧೂಳು ಎದ್ದೂ ಮುಗಿಲ ಮೋಡ ಕವಿದೂ/ಹಗಲ್ ಇರುಳಾದೂ ಜಗಕೆಲ್ಲ-ಮಳೆರಾಯ/ಮುಗಿಲಿಳಿದು ಬರುವೊ ಸಡಗರ’ ಎನ್ನುವ ಮಳೆ ಸಡಗರದ ಹಾಡುಗಳಿವೆ. ‘ಬಾರೆಂದರೆ ಬಾರನು/ ಹೋಗೆಂದರೆ ಹೋಗನು/ ಯಾರಿಚ್ಛೆ ಹೇಳು ಮಳೆರಾಯ’ ಎನ್ನುವ ಮಳೆಯ ಅನಿಶ್ಚಿತತೆಯನ್ನೂ ಹೇಳುತ್ತಿವೆ. ‘ಮಳಿ ಹೋಯ್ತು ಅಂತ ಮಳೆರಾಯ್ನ ಬೈಬೇಡ/ಒಕಾಳ ಹೊನ್ನ ಸೆರಗಲ್ಲಿ ಕಟ್ಕೊಂಡು/ಸಾಲಕ್ಹೋಗವ್ನೆ ಮಳೆರಾಯ’ ಎನ್ನುವಲ್ಲಿ ನಮಗೆ ಮಳೆ ಬರಿಸಲು ಮಳೆರಾಯ ಸಾಲ ತರಲು ಹೋಗಿದ್ದಾನೆ ಎನ್ನುತ್ತಾ ತಮ್ಮ ಕಷ್ಟಗಳ ಜತೆ ಮಳೆರಾಯನ ಕಷ್ಟವನ್ನೂ ಬೆಸೆಯುವಿಕೆ ಇದೆ.

ಮಳೆಗಾದೆ
ಮಳೆ ಕಾದು ಸಸ್ತಾದಾಗ ಜನ ‘ಬೆಂಕಿಯ ಮಳೆ ಸುರಿಸಿಯಾದರೂ ಕೊಲ್ಲಬಾರದೆ’ ಎಂಬು ಆರ್ತಧ್ವನಿಯಲ್ಲಿ ಗಾದೆಯೊಂದನ್ನು ಕಟ್ಟಿದ್ದಾರೆ. ರೈತರು ಕಟ್ಟಿದ ಮಳೆ ನಕ್ಷತ್ರದ ಗಾದೆಗಳು ಆಯಾ ಮಳೆಯ ಲಕ್ಷಣಗಳನ್ನೂ ಹೇಳುತ್ತಿವೆ. ಆಶ್ಲೇಷಾ ನಕ್ಷತ್ರದ ಮಳೆಗೆ ಭೂಮಿ ಹಸಿರಾಗುವುದನ್ನು ‘ಅಸಲೆ ಮಳೆಗೆ ನೆಲವೆಲ್ಲ ಹಸಲೆ’ ’ಅಸಲೆ ಮಳೆಗೆ ಹಂಚ್ಮೇಲೆಲ್ಲ ಹುಲ್ಲು’ ಎಂದಿದ್ದಾರೆ. ‘ಭರ್ಣಿ ಸುರಿದ್ರೆ ಬರಗಾಲ್ದ ಭಯಿಲ್ಲ’ ’ಭರಣಿ ಮಳೆ ಹುಯ್ದರೆ ಧರಣೆಲ್ಲ ಬೆಳೆ’ ಎಂಬ ಗಾದೆಗಳು ಸಮೃದ್ಧ ಬೆಳೆಯನ್ನು ಸೂಚಿಸುತ್ತಿವೆ. ಸ್ವಾತಿಮಳೆ ಸಕಲಜೀವಕ್ಕೆ ಚೇತನ ತರುವುದೆನ್ನುವುದು ಅನುಭವದ ಮಾತು. ‘ಚಿತ್ತಿ ಸ್ವಾತಿ ಆದ್ರೆ ಹಿಂಗಾರು ಬೆಳೆ ಬಂಗಾರದಂಗೆ’ ‘ಸ್ವಾತಿ ಮಳೆಯಾದ್ರೆ ಹುಲ್ಲೂ ಹೊಡೆ’ ‘ಸ್ವಾತಿ ಮಳೆಗೆ ಚಾಪೆ ಕೆಳಗೂ ತೆನೆ’ ಎಂಬ ಗಾದೆಗಳು ಸ್ವಾತಿ ಮಳೆಯ ಅಗತ್ಯವನ್ನು ಹೇಳುತ್ತಿವೆ.

‘ಅಳಿಯ ಬಂದ ಮರುದಿನ ಮಗಳ ಮಾರಿ ನೋಡು, ಮಳೆ ಬಂದ ಮರುದಿನ ಬೆಳಿ ಮಾರಿ ನೋಡು’ ‘ಮಳೆ ಬರೋದಿಲ್ಲ ಅಂತ ಕಂಬಳಿ ಬಿಟ್ಟು ಹೋಗ್ಬಾರ್ದು, ಕೆಸರು ಆಗಿದೆ ಅಂತ ಕೆರ ಬಿಟ್ಟು ಹೋಗ್ಬಾರ್ದು’ ಮುಂತಾದ ಮಳೆ ಮತ್ತು ಬದುಕಿನ ಜತೆ ಬೆಸೆದ ಗಾದೆಗಳೂ ಸಾಕಷ್ಟಿದೆ.

ಮಳೆ ಸೂಚನೆ
ಕೊಡತಿ ಹುಳ ಎದ್ದರೆ, ಕಾಗೆಗಳು ಊರಸುತ್ತ ಕೂಗುತ್ತ ಹಾರಾಡಿದರೆ, ಮೊಟ್ಟೆ ಇರುವೆ ಹೆಚ್ಚಾದರೆ, ಗುಬ್ಬಿ ಮಣ್ಣಿನ ಸ್ನಾನ ಮಾಡಿದರೆ, ಈಚಲ ಹುಳ ಭೂಮಿಯಿಂದೆದ್ದು ಆಗಲೇ ನೆಲ ಕಚ್ಚಿದರೆ ಮಳೆಯ ಸೂಚನೆ ಎಂದು ಹೇಳುತ್ತಾರೆ. ಎತ್ತು ಕತ್ತನ್ನು ಮೇಲಕೆತ್ತಿ ಆಕಾಶ ಮೂಸಿದರೆ, ಮುಸ್ಸಂಜೆಯಲ್ಲಿ ಗೂಬೆ ಕೂಗಿದರೆ, ಬೆಕ್ಕು ಮುಖ ತೊಳೆದರೆ, ಕೋಳಿ ಪುಕ್ಕ ಕಾಯಿಸಿದರೆ, ಕಪ್ಪೆ ಎಡಬಿಡದೆ ವಟಗುಟ್ಟಿದರೆ ಮಳೆಯ ಸೂಚನೆ ಎನ್ನುತ್ತಾರೆ. ಜೇನು ಹುಳುಗಳು ಗೂಡಿನಿಂದ ಯಾವ ದಿಕ್ಕಿಗೆ ಹೋಗುವವೋ ಆ ದಿಕ್ಕಿಗೆ ಮಳೆ ಬರುತ್ತದೆಂದು ನಂಬುತ್ತಾರೆ. ಮಳೆ ಬರದಿರುವ ಸೂಚನೆಗಳೂ ಇವೆ. ಚಂದ್ರನ ಸುತ್ತ ಮಂಡಲ ಕಟ್ಟಿದರೆ, ಹೆಚ್ಚು ಇಬ್ಬನಿ ಬಿದ್ದರೆ, ಮಳೆಗೆ ಮುಂಚೆ ಗುಡುಗಿದರೆ, ಎರಡು ಕಾಮನಬಿಲ್ಲುಗಳು ಕಾಣಿಸಿದರೆ ಮಳೆಯಾಗುವುದಿಲ್ಲ ಎಂದು ತಿಳಿಯುತ್ತಾರೆ. ಪ್ರಾದೇಶಿಕವಾಗಿಯೂ ಈ ನಂಬಿಕೆಗಳು ಭಿನ್ನವಾಗಿವೆ.

ಮಳೆ ಅಳತೆ
ವೈಜ್ಞಾನಿಕವಾಗಿ ಮಳೆ ಅಳತೆ ಸೆಂಟಿಮೀಟರುಗಳಲ್ಲಿದೆ, ಆದರೆ ಜನಪದರ ಅಳತೆ ಮಾಪನವೇ ಬೇರೆ. ಶ್ರೀಕಂಠ ಕೂಡಿಗೆಯವರು ತಮ್ಮ ’ಭೂಮಿ ಹುಣ್ಣಿಮೆ’ ಕೃತಿಯಲ್ಲಿ ಶಿವಮೊಗ್ಗೆ ಭಾಗದ ಮಳೆ ಅಳತೆಯ ಪದಗಳನ್ನು ಪಟ್ಟಿಮಾಡಿದ್ದಾರೆ. ಧೂಳಡಗೋಮಳೆ, ಹನಿಮಳೆ, ಹದಮಳೆ, ಜಡಿಮಳೆ, ಕ್ಯಾಣನ ಮಳೆ, ಸ್ಯಾನೆಮಳೆ, ಬಟ್ಟಿಹದ, ಬಟ್ಟಿದೇವ, ಕಂಬಳಿ ಮಳೆ, ದೋಣಿಹದ, ಉಕ್ಕೆಹದ, ಬಿತ್ನೆಹದ, ಹರ್ತೆದೇವ, ಮಾರಿಮಳೆ, ದೆವ್ವಮಳೆ ಇತ್ಯಾದಿ ಬಳಕೆಯನ್ನು ಗುರುತಿಸಿದ್ದಾರೆ. ಈ ಪದ ಬಳಕೆಯಲ್ಲಿ ಪ್ರಾದೇಶಿಕ ಭಿನ್ನತೆಯೂ ಇದೆ.

ಮಳೆ ಬೀಜ
ಮಳೆ ಬೀಜ ತರುವ ಭಿನ್ನ ಆಚರಣೆಯೊಂದು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಉಜ್ಜಯನಿಯಲ್ಲಿದೆ. ಐದು ವರ್ಷಕ್ಕೊಮ್ಮೆ ನಡೆವ ಈ ಆಚರಣೆಯಲ್ಲಿ ಒಂಭತ್ತು ಆಯಗಾರರು ನೂರು ಕಿಲೋಮೀಟರ್ ದೂರದ ಸಿಂದೋಗಿಯಿಂದ ಕಾಲುನಡಿಗೆಯಲ್ಲಿ ತೆರಳಿ ಸಾಂಕೇತಿಕವಾಗಿ ಮಳೆ ಬೀಜ ತರುತ್ತಾರೆ. ಇದಕ್ಕೆ ದಂತ ಕಥೆಯೊಂದಿದೆ, ಉಜ್ಜಿನಿ ಪೀಠದಲ್ಲಿದ್ದ ಮಳೆ ಮಲ್ಲಿಕಾರ್ಜುನರು ಧರ್ಮ ಪ್ರಚಾರಕ್ಕೆ ಸಿಂಧೋಗಿಗೆ ಬಂದರಂತೆ. ಚರ್ಮಕಾರರಿಗೆ ಲಿಂಗ ದೀಕ್ಷೆ ನೀಡಿ ಮರಳುವಾಗ ಮಳೆಬೀಜವನ್ನು ಮರೆತು ಬಂದರಂತೆ. ಹಾಗಾಗಿ ಈಗ ಮಳೆ ಬೀಜ ತರುವ ಆಚರಣೆ ಮಾಡಿದರೆ ಉಜ್ಜಿನಿ ಭಾಗಕ್ಕೆ ಮಳೆ ಬರುತ್ತದೆ ಎನ್ನುವ ನಂಬಿಕೆ ಈಗಲೂ ಉಳಿದಿದೆ. ಈ ನಂಬಿಕೆ ಮಳೆಯನ್ನು ಫಲವಂತಿಕೆಯ ಸಂಕೇತವೆಂಬಂತೆ ನೋಡುತ್ತದೆ.

ಮಳೆಹಬ್ಬ
ಜೂನ್ ತಿಂಗಳಿನಲ್ಲಿ ಬರುವ ಆದ್ರಿ ಬಿರುಸಿನ ಮಳೆ. ಮಲೆನಾಡಿನಲ್ಲಿ ಇದರ ಆರ್ಭಟ ಜೋರು. ಈ ಮಳೆಯಲ್ಲಿ ಮಲೆನಾಡಿಗರು ವಿಶಿಷ್ಟ ಹಬ್ಬ ಆಚರಿಸುತ್ತಾರೆ. ಈ ಹಬ್ಬದಲ್ಲಿ ಹಲಸಿನ ಹಣ್ಣು ಮತ್ತು ಕೋಳಿಸಾರು ವಿಶೇಷ ಭಕ್ಷ್ಯಗಳು. ಹೆಚ್ಚಾಗಿ ದೀವರ ಜನಾಂಗದವರು ಇದನ್ನು ಆಚರಿಸುತ್ತಾರೆ. ಇದು ಅವರಿಗೆ ಸಂಭ್ರಮದ ಆಚರಣೆ. ಈ ಹಬ್ಬ ಮಾಡುವ ಹೊತ್ತಿಗೆ ಹೊಲದಲ್ಲಿ ಬಿತ್ತನೆಯಾದ ಬೀಜ ಮೊಳಕೆಯೊಡೆದು ಸಸಿಯಾಗಿರುತ್ತದೆ. ಹಬ್ಬದ ದಿನ ಊರ ಗಂಡುಮಕ್ಕಳು ಸುರಿವ ಮಳೆ, ರಭಸ ಗಾಳಿಯನ್ನೂ ಲೆಕ್ಕಿಸದೆ ಮುಖಕ್ಕೆ ಗ್ರಾಮದೇವತೆಯ ಹಾಗೂ ದೀವರ ದೈವ ಕುಮಾರರಾಮನ ಮುಖವಾಡ ಧರಿಸಿ ಬೀದಿ-ಬೀದಿಯಲ್ಲಿ ಮೆರವಣಿಗೆ ಹೊರಡುತ್ತಾರೆ. ತಂತಮ್ಮ ಮನೆ ಮುಂದೆ ಮೆರವಣಿಗೆ ಬಂದಾಗ ಹೆಣ್ಣುಮಕ್ಕಳು ಆರತಿ ಬೆಳಗುತ್ತಾರೆ. ಶಿವಮೊಗ್ಗ ಜಿಲ್ಲೆ ಸಾಗರ-ಸೊರಬ ತಾಲೂಕುಗಳಲ್ಲಿ ಈ ಹಬ್ಬ ಜೋರು.

ಮಳೆ ನಿಲ್ಲಿಸುವಿಕೆ
ಮಳೆಬರಿಸುವ ಆಚರಣಲೋಕದಂತೆ, ವಿಪರೀತ ಮಳೆ ಬರುವಾಗ ಸಾಕು ಮಳೆಯೆ ನಿಂತು ಬಿಡು ಎಂದು ನಿವೇದಿಸುವ ಆಚರಣಲೋಕವೂ ಇದೆ. ‘ಹೋಗು’ ಎಂದು ಗಟ್ಟಿಯಾಗಿ ಕೂಗಿ ಕೆಂಡವನ್ನು ಮನೆ ಮುಂದೆ ಮೇಲಕ್ಕೆ ಎಸೆಯುತ್ತಾರೆ. ಬೆಣಚುಕಲ್ಲು, ಕಪ್ಪೆ ಮುಂತಾದುವನ್ನು ಅತಿಮಳೆಯಾದಲ್ಲಿ ಬೆಂಕಿಯ ಬಳಿ ಇಡುವುದಿದೆ. ಚಿಕ್ಕಮಕ್ಕಳನ್ನು ಬೆತ್ತಲೆಮಾಡಿ ಅವರಿಂದ ಬೆಂಕಿಕೊಳ್ಳಿ ಹೊರಗೆಸೆಯುವಂತೆ ಮಾಡಿದರೆ, ಮಕ್ಕಳು ಚಡ್ಡಿ ಬಿಚ್ಚಿ ತಮ್ಮ ಹಿಂಭಾಗವನ್ನು ಆಕಾಶಕ್ಕೆ ತೋರಿಸಿದರೆ, ಬಯಲಲ್ಲಿ ಕಕ್ಕಸಿಗೆ ಕೂತರೆ, ಮನೆಮುಂದೆ ಹರಿವ ನೀರೊಳು ಎಲೆಯಲ್ಲಿ ತುಪ್ಪ ಬಿಟ್ಟರೆ, ಕುಡುಗೋಲನ್ನು ಬೆಂಕಿಯಲ್ಲಿ ಕೆಂಪಗೆ ಕಾಯಿಸಿ ಮಳೆಹನಿಗೆ ಹಿಡಿದರೆ, ಮಳೆ ನಿಲ್ಲುವ ನಂಬಿಕೆ ಇದೆ. ಕೆಲವು ಕಡೆ ಮಳೆರಾಯನನ್ನು ಬೈಯ್ದು ಮಳೆಯನ್ನು ಹೋಗಲಾಡಿಸುವ, ಪೊರಕೆಯನ್ನು ತಲೆಕೆಳಗಾಗಿ ಇಡುವ ವಿಧಾನಗಳೂ ರೂಢಿಯಲ್ಲಿವೆ.

ಮಳೆ ಮುನಿಸು
ಮಳೆ ಮುನಿಸಿಕೊಂಡು ಮೊಂಡು ಹಠ ಮಾಡುವುದೂ ಇದೆ. ಆಗ ಜನ ಮಳೆಯ ಜತೆಗೂ ಮುನಿಸಿಕೊಳ್ಳುತ್ತಾರೆ. ಮಳೆ ಕಾದು ತಾಳ್ಮೆಗೆಟ್ಟಾಗ ದೈವದೊಂದಿಗೆ ಜಗಳ ಕಾಯುವುದೂ ಇದೆ. ಶಿವನಿಗೆ ಕಾರ ಹಚ್ಚುವುದು, ಮಳೆ ದೇವನನ್ನು ಬೈಯುವುದಿದೆ. ಉತ್ತರ ಕರ್ನಾಟಕದ ಕೆಲವೆಡೆ ಮಳೆದೇವ ಮಲ್ಲಪ್ಪನನ್ನು ಬಿಸಿಲಿಗಿಡುತ್ತಾರೆ. ತಾಪ ತಾಳದೆ ದೇವ ಒಲಿದು ಮಳೆ ಸುರಿಸುತ್ತಾನೆಂಬ ನಂಬಿಕೆ ಅವರದು. ಗುಳ್ಳವ್ವನ ಆಚರಣೆಯಲ್ಲಿ ಮಳೆದೇವರನ್ನು ಮುಳ್ಳುಕಂಟಿಯಲ್ಲಿ ಎಸೆಯುತ್ತಾರೆ. ಕೋಲಾರದ ಹಲವೆಡೆ ಕೆರೆದೇವತೆ ದುಗ್ಗಮ್ಮನಿಗೆ ಕಲ್ಲು ಹೊಡೆಯುತ್ತಾರೆ. ದೇಗುಲದ ಬಾವಿಗೆ ಸಗಣಿ ಕರಡುವುದು, ದೇವರ ವಿಗ್ರಹಕ್ಕೆ ತಿಗಣೆ, ಚೇಳುಗಳನ್ನು ಬಿಡುವ ನಂಬಿಕೆಗಳೂ ಇವೆ. ಜೋಕುಮಾರ ಸ್ವಾಮಿಯನ್ನು ಕಲ್ಲಿನಹಾರೆ ಹಾಕಿ ಸಾಯಿಸುವುದೂ, ಮಾಟಗಾತಿಯ ಮನೆಯ ಮುಂದೆ ಕಲ್ಲು ರಾಶಿ ಹಾಕುವುದು, ಬಸುರಿ ಕಪ್ಪೆಯನ್ನು ಸಿಗಿದು ಊರ ಮುಂದೆ ನೇತಾಡಿಸುವುದು ಸಹ ಇವು ಗಳಲ್ಲಿ ಒಂದು.

ಹೀಗೆ ಮಳೆ ಕುರಿತ ನಂಬಿಕೆಯ ಜಗತ್ತು ದೊಡ್ಡದಿದೆ. ಅದು ಜನರಲ್ಲಿ ಮಳೆಯ ಬಗೆಗೆ ನೂರಾರು ಕನಸು ಕಲ್ಪನೆಗಳನ್ನು ಹುಟ್ಟಿಸಿದೆ. ಮಳೆಯೆಂಬ ಜೀವಜಲದ ಜತೆ ಉಸಿರು ಬಸಿದ ಜನ ಅದರ ನರನಾಡಿಗಳಲ್ಲಿ ಒಂದಾಗಿದ್ದಾರೆ. ಹಾಗಾಗಿ ಮಳೆ ಬರದಿದ್ದರೆ ಜನರಿಗೆ ಉಸಿರುಕಟ್ಟಿದ ಅನುಭವವಾಗುತ್ತದೆ. ಮಳೆ ಬಂದರೆ ಹುಸಿರಾಡಿ ಹಗುರಾಗುತ್ತಾರೆ. ಹಸಿರಾಗುತ್ತಾರೆ, ಚಿಗುರಾಗಿ ಕುಡಿಯೊಡೆಯುತ್ತಾರೆ.