ಬುಧವಾರ, ನವೆಂಬರ್ 15, 2017

ಬಂಡವಾಳಿಗ ಸಮಾಜದ ಸಮಾಜೋದ್ಧಾರ


   ಅನು: ಶಿವಸುಂದರ್
Image result for indian banks
ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ ಮಾಡುವ ನೀತಿಯು ಉತ್ತರಗಳಿಗಿಂತ ಜಾಸ್ತಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ

ಇದೇ ಅಕ್ಟೋಬರ್ ೨೪ರಂದು ಭಾರತದ ಹಣಕಾಸು ಮಂತ್ರಿ ಅರುಣ್ ಜೈಟ್ಲಿಯವರು ಭಾರತದ ಸಾರ್ವಜನಿಕ ಬ್ಯಾಂಕುಗಳಿಗೆ ಒಟ್ಟಾರೆ ೨.೧೧ ಲಕ್ಷ ಕೋಟಿ ರೂ. ನಷ್ಟು ಬಂಡವಾಳ ಮರುಪೂರಣ ಮಾಡುವುದಾಗಿ ಘೋಷಿಸಿದರು. ಇದರಲ್ಲಿ ೧.೩೫ ಲಕ್ಷ ಕೋಟಿ ರೂ. ನಷ್ಟು ಮೊತ್ತವು ಬಂಡವಾಳ ಮರುಪೂರಣ ಬಾಂಡುಗಳ ಮಾರಾಟ ಮಾಡುವುದರಿಂದ ಒದಗಲಿದೆ ಎಂದು ನಿರೀಕ್ಷಿಸಲಾಗಿದೆ. ಉಳಿದ ೭೬,೦೦೦ ಕೋಟಿ ರೂ ಮೊತ್ತವನ್ನು ಬಜೆಟ್ಟಿನ ಮೂಲಕ ಮತ್ತು ಶೇರುಮಾರುಕಟ್ಟೆಯ ಮೂಲಕ ಸಂಗ್ರಹಿಸಲಾಗುವುದು. ಒಂದೆಡೆ ಮರುಪಾವತಿಯಾಗದ ಸಾಲದ ಮೊತ್ತ ಹೆಚ್ಚುತ್ತಾ ಮತ್ತೊಂದೆಡೆ ಸಾಲ ಪಡೆಯುವ ವ್ಯವಹಾರವು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಈ ಬಂಡವಾಳ ಮರುಪೂರಣವು ಉತ್ತಮ ಹೆಜ್ಜೆಯೆಂದು ಕೆಲವು ಮೂಲಗಳು ಮೆಚ್ಚಿಕೊಂಡಿವೆ. ಈ ಘೋಷಣೆಯಾದ ತಕ್ಷಣವೇ ಶೇರುಮಾರುಕಟ್ಟೆಯಲ್ಲಿ ಹಲವಾರು ಸಾರ್ವಜನಿಕ ಬ್ಯಾಂಕುಗಳ ವಹಿವಾಟು ತೀವ್ರವಾಗಿ ಏರಿಕೆ ಕಂಡಿತು. ಹೀಗಾಗಿಯೂ ಸರ್ಕಾರದ ಈ ಕ್ರಮವನ್ನು ಹಲವಾರು ಸಾರ್ವಜನಿಕ ಬ್ಯಾಂಕರುಗಳು ಮತ್ತು ಶೇರುಮಾರುಕಟ್ಟೆಯ ವಹಿವಾಟುದಾರರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

ಬಹಳ ಸ್ಪಷ್ಟವಾಗಿ ಎರಡು ನಿರ್ದಿಷ್ಟ ಕಾರಣಗಳಿಂದಾಗಿ ಪ್ರಸ್ತುತ ಬಂಡವಾಳ ಮರುಪೂರಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲನೆಯದಾಗಿ ಸಾರ್ವಜನಿಕ ಬ್ಯಾಂಕುಗಳ ಆಸ್ತಿ (ನೀಡಿರುವ ಸಾಲಗಳು)ಯ ಗುಣಮಟ್ಟ ದಿನೇದಿನೇ ಕುಸಿಯತೊಡಗಿದೆ. ಭಾರತೀಯ ರಿಸರ್ವ್ ಬ್ಯಾಂಕು (ಆರ್‌ಬಿಐ)ತನ್ನ ೨೦೧೬-೧೭ರ ವಾರ್ಷಿಕ ವರದಿಯಲ್ಲಿ ಸ್ಪಷ್ಟಪಡಿಸಿರುವಂತೆ ಭಾರತದ ಬ್ಯಾಂಕುಗಳು ನೀಡಿರುವ ಒಟ್ಟಾರೆ ಸಾಲದಲ್ಲಿ ಶೇ.೧೨.೧ರಷ್ಟು ಸಾಲಗಳು ಸಂಕಷ್ಟದ ಸಾಲಗಳಾಗಿಬಿಟ್ಟಿದ್ದು ವಾಪಸಾಗುವುದರ ಬಗ್ಗೆ ಅನುಮಾನಗಳಿವೆ. ಸಂಕಷ್ಟದಲ್ಲಿರುವ ಸಾಲಗಳೆಂದರೆ ಮರುಪಾವತಿಯಾಗದ ಸಾಲಗಳು ಮತ್ತು ಪುನರ್‌ರಚಿತವಾದ ಹಳೆಯ ಸಾಲಗಳ ಒಟ್ಟು ಸೇರಿದ ಮೊತ್ತ.  ಸಾರ್ವಜನಿಕ ಬ್ಯಾಂಕುಗಳು ೨೦೧೬-೧೭ರ ಸಾಲಿನಲ್ಲಿ ನಷ್ಟವನ್ನೇ ತೋರಿಸಿವೆ. ಸಾರ್ವಜನಿಕ ಬ್ಯಾಂಕುಗಳ ಈ ಪತನ ೨೦೦೯ರಿಂದಲೇ ಪ್ರಾರಂಭವಾಯಿತು. ೨೦೦೮ರಲ್ಲಿ ಸಂಭವಿಸಿದ ಜಾಗತಿಕ ಹಣಕಾಸು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದ ಹಣಕಾಸು ನಿಯಂತ್ರಣ ಪ್ರಾಧಿಕಾರಗಳು ನಮ್ಮ ದೇಶದಲ್ಲೂ ಅದೇ ರೀತಿಯ ಬಿಕ್ಕಟ್ಟು ಇದೆ ಎಂದು ಭಾವಿಸಿಕೊಂಡು ಸಾಲಗಳನ್ನು ನೀಡುವ ಧೋರಣೆಯಲ್ಲಿ ಅಪಾರ ಸಡಿಲತೆಯನ್ನು ತೋರಿದವು. ಅದರ ಪರಿಣಾಮವಾಗಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ನೀತಿಯ ಮುಖಾಂತರ ರೂಪಿಸಲಾದ ಹಲವಾರು ಮೂಲಭೂತ ಸೌಕರ್ಯ ಯೋಜನೆಗಳಿಗೆ ಬ್ಯಾಂಕುಗಳು ಲಕ್ಷಾಂತರ ಕೋಟಿ ರೂಗಳ ಸಾಲವನ್ನು ಉದಾರವಾಗಿ ನೀಡಿದವು. ಈ ಸಾಲಗಳನ್ನು ನೀಡುವಲ್ಲಿ ಹಲವಾರು ಸಾರ್ವಜನಿಕ ಬ್ಯಾಂಕುಗಳ ಆಡಳಿತಶಾಹಿಯು ತೋರಿದ ಪಕ್ಷಪಾತಿ ನಿರ್ಧಾರಗಳು ಮತ್ತು ಸರ್ಕಾರವು ಸಹ ಆಯ್ದ ಬಂಡವಾಳಶಾಹಿಗಳಿಗೆ ಉತ್ತೇಜನ ನೀಡಿ ಬೆಳಸಿದ ಕ್ರೋನಿ ಬಂಡವಾಳಶಾಹಿ (ಆಪ್ತಕೂಟ ಬಂಡವಾಳಶಾಹಿ)ಗಳು ಒಟ್ಟು ಸೇರಿ ಬ್ಯಾಂಕುಗಳ ಮರುಪಾವತಿಯಾಗದ ಸಾಲದ ಹೊರೆಯನ್ನು ಹೆಚ್ಚಿಸಿದವು.

ಎರಡನೆಯದಾಗಿ ೨೦೧೪-೧೫ರಿಂದೀಚೆಗೆ ಬ್ಯಾಂಕುಗಳ ಸಾಲನೀಡಿಕೆಯ ಪ್ರಮಾಣದ ವೃದ್ಧಿಯ ದರ ತೀವ್ರವಾಗಿ ಕುಸಿಯುತ್ತಿದ್ದು ೨೦೧೬-೧೭ರಲ್ಲಿ ಅದು ಕೇವಲ ಶೇ.೮.೨ರಷ್ಟಿತ್ತು; ೨೦೧೭ರ ಸೆಪ್ತೆಂಬರ್ ವೇಳೆಗೆ ಈ ದರ ಒಂದಂಕಿಗೆ ಕುಸಿದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕೃಷಿ ಮತ್ತು ಕೃಷಿ ಆಸುಪಾಸಿನ ಬಾಬತ್ತುಗಳಿಗೆ ಕೊಡುತ್ತಿದ್ದ ಸಾಲ ತೀವ್ರವಾಗಿ ಕಡಿತಗೊಂಡಿದೆ; ಕಳೆದ ವರ್ಷ ಅದು ಶೇ.೧೫.೯ರಷ್ಟು ಏರಿಕೆಯನ್ನು ಕಂಡಿದ್ದರೆ ಈ ವರ್ಷ ಅದು ಕೇವಲ ಶೇ.೫.೮ರಷ್ಟು ಮಾತ್ರವಿತ್ತು. ಕಳೆದ ವರ್ಷ ಸೇವಾ ಕ್ಷೇತ್ರಕ್ಕೆ ನೀಡಿದ ಸಾಲ ಶೇ.೧೮.೪ರಷ್ಟು ವೃದ್ಧಿಯನ್ನು ಕಂಡಿದ್ದರೆ ಅದು ಈ ವರ್ಷ ಕೇವಲ ಶೇ.೭ಕ್ಕೆ ಇಳಿದಿದೆ. ವರ್ಷಾವಳಿ ಲೆಕ್ಕಾಚಾರದಲ್ಲಿ ಒಟ್ಟಾರೆ ಆಹಾರೇತರ ವಲಯಕ್ಕೆ ಕಳೆದ ವರ್ಷ ನೀಡಿದ ಸಾಲ ಶೇ.೧೦.೮ರಷ್ಟು ಏರಿಕೆಯನ್ನು ಕಂಡಿದ್ದರೆ ಈ ವರ್ಷ ಅದು ಕೇವಲ ೬.೧ರಷ್ಟು ಏರಿಕೆಯನ್ನು ಮಾತ್ರ ಕಂಡಿತು.

ಈ ಎರಡು ಬೆಳವಣಿಗೆಗಳ ನಡುವೆ ಎಷ್ಟರ ಮಟ್ಟಿಗೆ ಪರಸ್ಪರ ಸಂಬಂಧವಿದೆ? ಮರುಪಾವತಿಯಾಗದ ಸಾ ಒಂದೇ ಸಾಲನೀಡಿಕೆಯ ದರದ ಹೆಚ್ಚಳವನ್ನು ನಿರ್ಬಂಧಿಸುತ್ತಿರುವ ಏಕೈಕ ಅಂಶವೇ? ಹಣಕಾಸು ಇಲಾಖೆ ಮತ್ತು ಅವರ ಸಚಿವಾಲಯಗಳು ಏನೇ ಹೇಳುತ್ತಿದ್ದರೂ ವಾಸ್ತವವೇನೆಂದರೆ ಕಳೆದ ಆರು ತ್ರೈಮಾಸಿಕಗಳಿಂದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಬೆಳವಣಿಗೆಯ ದರ ಒಂದೇ ಸಮನೆ ಕಡಿಮೆಯಾಗುತ್ತಿದೆ. ೨೦೧೭-೧೮ರ ಮೂರನೇ ತ್ರೈಮಾಸಿಕದಲ್ಲಿ ಭಾರತದ ಅಭಿವೃದ್ಧಿ ದರ ಶೇ.೫.೭ಕ್ಕೆ ಕುಸಿದಿದೆ. ಇದು  ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕಡಿಮೆ ಅಭಿವೃದ್ಧಿ ದರವಾಗಿದೆ. ನೋಟು ನಿಷೇಧ ಮತ್ತು ಅವಸರವಸರವಾಗಿ ಜಾರಿ ಮಾಡಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಗಳು ಆರ್ಥಿಕ ನಿಧಾನಗತಿಯ ವಿದ್ಯಮಾನವನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಹೀಗೆ ಈಗಾಗಲೇ ಹಿಂದ್ಸರಿತ ಕಂಡಿರುವ ಆರ್ಥಿಕ ವ್ಯವಸ್ಥೆಯೊಂದು ಸರ್ಕಾರದ ಅವಿವೇಕದ ನೀತಿಗಳಿಂದ ಮತ್ತಷ್ಟು ಪೆಟ್ಟನ್ನು ತಿಂದು ಹೈರಾಣಾಗಿ ಉದ್ಯಮಗಳು ಸಾಲಗಳನ್ನು ಪಡೆದುಕೊಳ್ಳಲು ಹಿಂಜರಿಯುತ್ತಿರುವಾಗ  ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ ಮಾಡುವುದರಿಂದ ಮಾತ್ರ ಉದ್ಯಮಗಳು ಸಾಲವನ್ನು ಪಡೆದುಕೊಂಡು ಹೂಡಿಕೆ ಮಾಡುವಂಥ ವಿಶ್ವಾಸವನ್ನು ಕೊಡುವುದಿಲ್ಲ. ಹಾಗಿದ್ದರೂ ಬ್ಯಾಂಕುಗಳ ಬಂಡವಾಳ ಮರುಪೂರಣದಿಂದ ಅಗಾಧವಾದ್ದನ್ನು ಏಕೆ ನಿರೀಕ್ಷಿಸಲಾಗುತ್ತಿದೆ?

ಬ್ಯಾಂಕುಗಳ ಈ ಬಂಡವಾಳ ಮರುಪೂರಣವನ್ನು ಕೃಷಿ ಸಾಲ ಮನ್ನಾದೊಂದಿಗೆ ಹೋಲಿಸಿ ನೋಡಿದಲ್ಲಿ ಈ ವೈರುಧ್ಯವು ಇನ್ನು ಸ್ಪಷ್ಟವಾಗಿ ಎದ್ದುಕಾಣುತ್ತದೆ. ಸಾಲವನ್ನು ಮನ್ನ ಮಾಡುವ ಸಂಸ್ಕೃತಿಯು ಪ್ರಾಮಾಣಿಕ ಸಾಲ ಮರುಪಾವತಿ ಸಂಸ್ಕೃತಿಯ ಮೇಲೆ ಕೆಟ್ಟ ಪ್ರಭಾವ ಬೀರಿ ಖಾಸಗಿ ಉದ್ಯಮಿಗಳಿಗೆ ಸಾಲ ದೊರೆಯದಂತೆ ಮಾಡಬಹುದೆಂದು ಈ ಹಿಂದೆ ನಮಗೆಲ್ಲಾ ಹೇಳಲಾಗುತ್ತಿತ್ತು. ಹಾಗೆಯೇ ಸಾಲ ಮರುಪಾವತಿ ಮಾಡದವರ ಪಟ್ಟಿಯನ್ನು ಪ್ರಕಟಮಾಡುವಲ್ಲಿ ವ್ಯವಸ್ಥೆಯು ತೋರುತ್ತಿದ್ದ ಅನಾಸಕ್ತಿಯು ನಮಗೆಲ್ಲ ತಿಳಿದ ವಿಷಯವೇ. ಆದರೆ ಅದೇ ಸಮಯದಲ್ಲಿ ದೊಡ್ಡದೊಡ್ಡ ಕಾರ್ಪೊರೇಟ್ ಉದ್ಯಮಪತಿಗಳು ಕೊಟ್ಟ ಸಾಲವನ್ನು ಮರುಪಾವತಿ ಮಾಡದಿದ್ದರೂ ಅದರ ವಸೂಲಾತಿಯ ಬಗ್ಗೆ ಬ್ಯಾಂಕು ಮತ್ತು ಸರ್ಕಾರಗಳು ತೋರುತ್ತಿರುವ ನಿಧಾನ ಧೋರಣೆಯು ಯಾವ ಬಗೆಯ ಸಂದೇಶವನ್ನು ರವಾನೆ ಮಾಡುತ್ತದೆ?ಸಾರ್ವಜನಿಕ ಬ್ಯಾಂಕುಗಳ ಬಂಡವಾಳ ಮರುಪೂರಣ ಮಾಡುವ ಈ ನೀತಿಯು ದೊಡ್ಡದೊಡ್ಡ ಸಾಲಗಾರರ ನೈತಿಕ ಅವಘಡಗಳಿಗೆ ಮಾನ್ಯತೆಯನ್ನು ಒದಗಿಸುವುದಿಲ್ಲವೇ? ಇದು ನಷ್ಟವನ್ನು ಸಾಮಾಜೀಕರಣಗೊಳಿಸಿ ಲಾಭವನ್ನು ಖಾಸಗೀಕರಿಸುವ ಬಂಡವಾಳಿಗರ ಸಮಾಜೋದ್ಧಾರವಲ್ಲವೇ? ಮೇಲಾಗಿ ಅದೇ ಬ್ಯಾಂಕುಗಳೇ ತಮ್ಮ ಮರುಪೂರ್ಣ ಬಾಂಡುಗಳನ್ನು ಕೂಡ ಖರೀದಿಸುತ್ತವೆಯೇ? ಹಾಗಿದ್ದಲ್ಲಿ ಈ ಪ್ರಕ್ರಿಯೆಯೂ ಸಹ ಖಾಸಗಿ ದೊಡ್ಡ ಸಾಲಗಾರರಿಗೆ ಸಾಲ ದೊರೆಯದಂತೆ ಮಾಡುವುದಿಲ್ಲವೇ? ಈ ಯಾವುದೇ ಪ್ರಶ್ನೆಗಳಿಗೆ ಸರಿಯಾದ ಉತ್ತರವಿಲ್ಲ.

ಆದರೆ ಬ್ಯಾಂಕುಗಳ ಬಿಕ್ಕಟ್ಟನ್ನು ಬಗೆಹರಿಸುವ ಬಗೆಗಿನ ನಿರೀಕ್ಷೆಗಳು ಬೇರೆಯದೇ ರೀತಿಯಲ್ಲಿವೆ. ಸರ್ಕಾರವು ೨೦೧೬ರ ಡಿಸೆಂಬರ್‌ನಲ್ಲಿ ಜಾರಿಗೆ ತಂದ ದಿವಾಳಿಕೋರತನ ಸಂಹಿತೆ ಕಾಯಿದೆಯು ಒಂದು ಹೊಸ ಶಕೆಯನ್ನೇ ಪ್ರಾಂಭಿಸುತ್ತದೆಂದು ನಿರೀಕ್ಷಿಸಲಾಗಿತ್ತು. ಆದರೆ ವಾಸ್ತವ ಬೇರೆಯದೇ ಆಗಿತ್ತು. ಉಕ್ಕು, ವಿದ್ಯುತ್ ಅಥವಾ ದೂರಸಂಪರ್ಕ ಕ್ಷೇತ್ರಗಳು ಈಗಲೂ ಸಂಕಷ್ಟವನ್ನು ಎದುರಿಸುತ್ತಿವೆ. ೨೦೧೭-೧೮ರ ಬಜೆಟ್ಟು ಸಹ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಯಾವುದೇ ಹೊಸ ಭರವಸೆಗಳನ್ನು ಹುಟ್ಟಿಸುವಂತಿರಲಿಲ್ಲ. ಹಾಗಿದ್ದಲ್ಲಿ ಬ್ಯಾಂಕುಗಳ ಬಂಡವಾಳ ಮರುಪೂರ್ಣ ನೀತಿಯನ್ನು ಈಗೇಕೆ ಕೈಗೊಳ್ಳಲಾಯಿತು?

ಎರಡು ರಾಜ್ಯಗಳಲ್ಲಿ ಚುನಾವಣೆಗಳು ಸಮೀಪಿಸುತ್ತಿವೆ. ಮತು ಆರ್ಥಿಕ ರಂಗದಲ್ಲಿ ಸರ್ಕಾರದ ವೈಫಲ್ಯಗಳು ನಿಚ್ಚಳವಾಗಿ ಎದ್ದುಕಾಣಲು ಪ್ರಾರಂಭಿಸಿವೆ. ಈ ಹಿನ್ನೆಯಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರವು ಒದಗಿಸುತ್ತದೆಂದು ಭಾವಿಸಲಾಗಿದ್ದ ವಿತ್ತೀಯ ಪ್ರೇರಣೆ ಇದೇ ಆಗಿರಬಹುದೇ? ಇದು ಶೇರುಮಾರುಕಟ್ಟೆ ದರಗಳನ್ನು ಮತ್ತಷ್ಟು ಏರಿಸಬಹುದೇ? ಇದುವೇ ಹೆಗ್ಗಳಿಕೆಯಿಂದ ಪ್ರಚಾರದಲ್ಲಿರುವ ಮೋದ್ನಾಮಿಕ್ಸ್- ಮೋದಿ ಪ್ರಣೀತ ಆರ್ಥಿಕತೆಯೇ? ಬ್ಯಾಂಕುಗಳ ಪುನರ್ ನಿರ್ಮಾಣದ ಯೋಜನೆ ಏನಾಯಿತು? ಈ ಎಲ್ಲಾ ಪ್ರಶ್ನೆಗಳು ಕಾಡುತ್ತಿರುವಾಗ ಬಂಡವಾಳ ಮರುಪೂರಣದ ಯೋಜನೆಗಳು ಉತ್ತರಕ್ಕಿಂತ ಜಾಸ್ತಿ ಪ್ರಶ್ನೆಗಳನ್ನೇ ಹುಟ್ಟುಹಾಕುತ್ತಿದೆ. ಇದೇ ಆ ಯೋಜನೆಯ ದೊಡ್ಡ ದೋಷವೂ ಆಗಿದೆ.

       ಕೃಪೆ: Economic and Political Weekly,  Nov 4, 2017. Vol. 52. No.44

                                                                                             











ಗುರುವಾರ, ನವೆಂಬರ್ 2, 2017

ಅತಂತ್ರ ಡಿ-ನೋಟಿಫೈಡ್ ಸಮುದಾಯಗಳು


   ಅನು: ಶಿವಸುಂದರ್

Image result for denotified tribes in india
ಸರ್ಕಾರಿ ಶಾಲೆಗಳನ್ನು ಸಬಲಗೊಳಿಸುವ ನಿರ್ದಿಷ್ಟ ಕ್ರಮಗಳು ಕೂಡಲೇ ಜಾರಿಯಾಗಬೇಕು.

ಹೈದರಾಬಾದಿನ ಕೌನ್ಸಿಲ್ ಫಾರ್ ಸೋಷಿಯಲ್ ಡೆವಲಪ್‌ಮೆಂಟ್ನ ನಿರ್ದೇಶಕಿಯಾದ ಪ್ರೊ. ಕಲ್ಪನಾ ಕನ್ನಾಬಿರನ್ ಬರೆಯುತ್ತಾರೆ:

ಇತ್ತೀಚೆಗೆ ಪ್ರಕಟವಾದ ಅಧ್ಯಯನವೊಂದು ಡಿ-ನೋಟಿಫೈಡ್ ಸಮುದಾಯಗಳ, ಅಲೆಮಾರಿ ಮತ್ತು ಅರೆ-ಅಲೆಮಾರಿ ಬುಡಕಟ್ಟುಗಳ ನಿರ್ದಿಷ್ಟವಾದ ಸಾಮಾಜಿಕ ಅತಂತ್ರತೆಗಳು ಮುಂದುವರೆಯುತ್ತಲೇ ಇವೆಯೆಂಬುದನ್ನು ಮತ್ತೊಮ್ಮೆ ಎತ್ತಿತೋರಿಸಿದೆ. ಅದರಲ್ಲೂ ಈ ಸಮುದಾಯಗಳು ಉದ್ಯೋಗ ಮತ್ತು ಶಿಕ್ಷಣಗಳನ್ನು ದಕ್ಕಿಸಿಕೊಳ್ಳುವಲ್ಲಿ ಎದುರಿಸುವ ಅತಂತ್ರತೆಗಳನ್ನು ಮತ್ತು ಈ ಸಮುದಾಯಗಳು ಈಗಲೂ ಎದುರಿಸುತ್ತಿರುವ ಕಳಂಕದ ಮತ್ತು ಅಪರಾಧಿಕರಣದ ಭೀತಿಗಳನ್ನೂ ಸಹ ಈ ಅಧ್ಯಯನ ವಿಶೇಷವಾಗಿ ಬಯಲುಮಾಡಿದೆ. ಈ ಹಿಂದೆ ಈ ವಿಷಯಗಳನ್ನು ನ್ಯಾಷನಲ್ ಕಮಿಷನ್ ಫಾರ್ ಡಿ ನೋಟಿಫೈದ್, ನೊಮಾಡಿಕ್, ಅಂಡ್ ಸೆಮಿ ನೊಮಾಡಿಕ್ ಟ್ರೈಬ್ಸ್ (ರೆಂಕೆ ಅಯೋಗ, ೨೦೦೮), ರಾಷ್ಟ್ರೀಯ ಸಲಹಾ ಸಮಿತಿಯು ರಚಿಸಿದ ಡಿ- ನೋಟಿಫೈಡ್ ಮತ್ತು ಅಲೆಮಾರಿ ಸಮುದಾಯಗಳ ಪರಿಸ್ಥಿತಿಗಳ ಬಗೆಗಿನ ಅಧ್ಯಯನ ಗುಂಪು ೨೦೧೧ರಲ್ಲಿ ನೀಡಿದ ವರದಿ, ಭಾರತದ ಬುಡಕಟ್ಟು ಸಮುದಾಯಗಳ ಸಮಾಜೋ-ಆರ್ಥಿಕ, ಆರೋಗ್ಯ ಮತ್ತು ಶೈಕ್ಷಣಿಕ ಸ್ಥಿಗತಿಗಳ ಬಗ್ಗೆ ಅಧ್ಯಯನ ನಡೆಸಲು ನೇಮಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯು ನೀಡಿದ ವರದಿ (ಕ್ಸಾಕ್ಸಾ ವರದಿ, ೨೦೧೪)ಗಳು ಅಧ್ಯಯನ ಮಾಡಿದ್ದವು.

ಈ ಸಮುದಾಯಗಳ ಸಮಾಜೋ-ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿಗತಿಗಳ ಬಗ್ಗೆ ಅಗತ್ಯವಾದ ಮಾಹಿತಿಗಳ ಕೊರತೆಯಿರುವುದನ್ನು ಗಮನಿಸಿದ  ಇಂಡಿಯನ್ ಕೌನ್ಸಿಲ್ ಫಾರ್ ಸೋಷಿಯಲ್ ಸೈನ್ಸ್ ರಿಸರ್ಚ್ (ಐಸಿಎಸ್‌ಎಸ್‌ಆರ್- ಭಾರತೀಯ ಸಾಮಾಜಿಕ ವಿಜ್ನಾನ ಸಂಶೋಧನಾ ಪರಿಷತ್ತು) ಒಂಭತ್ತು ರಾಜ್ಯಗಳ ವ್ಯಾಪ್ತಿಯಲ್ಲಿ ಈ ಸಮುದಾಯಗಳ ಸಮಾಜೋ-ಆರ್ಥಿಕ ಮತ್ತು ಶೈಕ್ಷಣಿಕ ಸಾಧನೆಗಳನ್ನು ಅಧ್ಯಯನವನ್ನು ಪ್ರಾಯೋಜಿಸಿತು.

ಹೈದರಾಬಾದಿನ ಕೌನ್ಸಿಲ್ ಫಾರ್ ಸೋಷಿಯಲ್ ಡೆವಲಪ್‌ಮೆಂಟ್ ಸಂಸ್ಥೆಯು ೨೦೧೨-೨೦೧೫ರ ನಡುವೆ ಈ ಅಧ್ಯಯನವನ್ನು ನಡೆಸಿತು ಮತ್ತು ಮಧ್ಯಪ್ರದೇಶ, ಚತ್ತೀಸ್‌ಘಡ್, ಗುಜರಾತ್, ಗೋವಾ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿನ ೧೩,೦೦೦ ಕುಟುಂಬಗಳನ್ನು ಈ ಅಧ್ಯಯನದಲ್ಲಿ ಒಳಗೊಂಡಿತ್ತು. ರೆಂಕೆ ಅಯೋಗವು ಗುರುತಿಸಿದ ೩೦೬ ಸಮುದಾಯಗಳಲ್ಲಿ ೭೬ ಸಮುದಾಯಗಳನ್ನು ಇದರಲ್ಲಿ ಅಧ್ಯಯನ ಮಾಡಲಾಯಿತು (ಶೇ.೬೬ರಷ್ಟು ಇತರ ಹಿಂದುಳಿದ ವರ್ಗಗಳು, ಶೇ.೧೬ರಷ್ಟು ಪರಿಶಿಷ್ಟ ಜಾತಿಗಳು ಮತ್ತು ಶೇ.೧೮ರಷ್ಟು ಪರಿಶಿಷ್ಟ ಪಂಗಡಗಳು). ಅಪರಾಧಿಗಳೆಂಬ ಕಳಂಕಕ್ಕೆ ತುತ್ತಾದ ಹಾಗೂ ತುತ್ತಾಗದ ಸಮುದಾಯಗಳೆರಡನ್ನೂ ಅಧ್ಯಯನ ಮಾಡಲಾಯಿತು. ಅಪರಾಧಿಗಳೆಂಬ ಹಣೆಪಟ್ಟಿ ಹೊತ್ತ ಸಮುದಾಯಗಳ ಮೇಲಿನ ನಿರ್ದಿಷ್ಟ ಪರಿಣಾಮಗಳನ್ನು ಅರಿತುಕೊಳ್ಳಲು ಪ್ರತ್ಯೇಕವಾದ ಪಶ್ನಾವಳಿಗಳನ್ನು ರೂಪಿಸಲಾಗಿತ್ತು. ಒಟ್ಟಾರೆಯಾಗಿ ಈ ಅಧ್ಯಯನವು ಡಿ ನೋಟಿಫೈಡ್ ಮತ್ತು ಅಲೆಮಾರಿ ಬುಡಕಟ್ಟುಗಳ ಬಡ ಸಮಾಜೋ-ಆರ್ಥಿಕ ಸ್ಥಿತಿಗತಿ, ಕಳಂಕೀಕರಣ ಮತ್ತು ಕೆಳಮಟ್ಟದ ಶೈಕ್ಷಣಿಕ ಸಾಧನೆಗಳಿಗಿರುವ ನಿಕಟ ಸಂಬಂಧಗಳನ್ನು ಮತ್ತೊಮ್ಮೆ  ಸಾಬೀತುಪಡಿಸಿದೆ.

ಅಧ್ಯಯನ ಮಾಡಲಾದ ಸಮುದಾಯಗಳು ಪ್ರಧಾನವಾಗಿ ಗ್ರಾಮೀಣವಾಸಿಗಳಾಗಿದ್ದು ಪ್ರಸ್ತುತ ಅವರು ವಾಸಿಸುತ್ತಿರುವ ಪ್ರದೇಶಗಳಲ್ಲಿ ದೀರ್ಘಕಾಲದಿಂದಲೂ (ಸುಮಾರು ೩೦ ವರ್ಷಗಳಿಂದಲೂ) ನೆಲೆಸಿರುವುದು ಕಂಡುಬಂದಿದೆ. ಇದು ಅಲೆಮಾರಿತನದಿಂದ ಸ್ಥಿರನೆಲೆಸುವಿಕೆ ಕಡೆಗೆ ನಡೆದಿರುವ ಸ್ಥಿತ್ಯಂತರವನ್ನು ಸೂಚಿಸುತ್ತದೆ. ಗುಜರಾತಿನಲ್ಲಿ ಶೇ.೨೫ರಷ್ಟು ಕುಟುಂಬಗಳು ಮತ್ತು ಮಧ್ಯಪ್ರದೇಶದಲ್ಲಿ ಶೇ. ೨೨ ರಷ್ಟು ಕುಟುಂಬಗಳು ಸಾಂಪ್ರದಾಯಿಕ ವೃತ್ತಿಗಳನ್ನೇ ಈಗಲೂ ಪ್ರಧಾನ ವೃತ್ತಿಯನ್ನಾಗಿಗಿ ಮುಂದುವರೆಸಿವೆ. ಆದರೆ ಉಳಿದ ರಾಜ್ಯಗಳಲ್ಲಿ ಈ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಬಹುಪಾಲು ಕುಟುಂಬಗಳು ಇದೀಗ ಅತ್ಯಂತ ಕನಿಷ್ಟ ಮಟ್ಟದ ಜೀವನೋಪಾಯವಾದ ಕೃಷಿಯೇತರ ಕೂಲಿಗಳಾಗಿ ಮಾರ್ಪಡುತ್ತಿರುವುದನ್ನು ಈ ಅಧ್ಯಯನ ತಿಳಿಸಿಕೊಡುತ್ತದೆ. ಒತ್ತಡವು ಹೇರಲ್ಪಟ್ಟ ವಲಸೆಯು ಕುಟುಂಬದ ಸ್ಥಿರತೆ ಮತ್ತು ಶೈಕ್ಷಣಿಕ ಅವಕಾಶಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ. ಇಲ್ಲಿ ಅಲೆಮಾರಿ ಸಂಸ್ಕೃತಿಗೂ (ಇಲ್ಲಿ ಸಮುದಾಯಗಳು ತಮ್ಮ ವಲಸೆ, ನೆಸೆ ಮತ್ತು ವಸತಿಗಳನ್ನು ಪೂರ್ವಯೋಜಿತವಾಗಿ ಮಾಡುತ್ತಿದ್ದು ಸಾಂಸ್ಕೃತಿಕ ಬೇರುಗಳನ್ನು ಹೊಂದಿರುತ್ತವೆ) ಮತ್ತು ಬಲವಂತದ ಮತ್ತು ಸಂಕಷ್ಟದ ವಲಸೆಗೂ ಇರುವ ವ್ಯತ್ಯಾಸವನ್ನು ಗಮನಿಸಬೇಕು. ಂಕಷ್ಟದಿಂದ ಹೇರಲ್ಪಡುವ ವಲಸೆಯು ಸಮುದಾಯಗಳನ್ನು ಪ್ರತಿಹಂತದಲ್ಲೂ ಅತಂತ್ರತೆಯತ್ತ ದೂಡುತ್ತದೆ. ತಮಿಳುನಾಡು ಮತ್ತು ಚತ್ತೀಸ್‌ಘಡ್ ನಲ್ಲಿ ವಲಸೆಯು ಶೇ.೪೦ರಷ್ಟಿದ್ದರೆ ತೆಲಂಗಾಣದಲ್ಲಿ ಶೇ. ೫೯ರಷ್ಟಿದೆ. ತೆಲಂಗಾಣದಲ್ಲಿ ಶೇ. ೫೪ರಷ್ಟು ವಲಸೆ ಕುಟುಂಬಗಳು ವರ್ಷಕ್ಕೊಮ್ಮೆ ವಲಸೆ ಹೋಗುತ್ತವೆ ಮತ್ತು ಅದರಲ್ಲಿ ಶೇ.೮೦ರಷ್ಟು ವಲಸೆಗಳು ೨-೩ ತಿಂಗಳ ಅವಧಿಯದ್ದಾಗಿರುತ್ತವೆ. ಒಟ್ಟಾರೆ ಕುಟುಂಬಗಳಲ್ಲಿ ಶೇ.೩೧ರಷ್ಟು ಕುಟುಂಬಗಳು ಕೂಲಿ ಕೆಲಸವನ್ನೇ ಆಧರಿಸಿವೆ. ತಮಿಳುನಾಡಿನಲ್ಲಿ ಶೇ.೫೩ ಕುಟುಂಬಗಳು ಕೃಷಿಯೇತರ ಕೂಲಿಯನ್ನೇ ತಮ್ಮ ಪ್ರಧಾನ ವೃತ್ತಿಯನ್ನಾಗಿ ಮಾಡಿಕೊಂಡಿವೆ.

ಇನ್ನು ಡಿ ನೋಟಿಫೈಡ್ ಸಮುದಾಯಗಳ ಶೈಕ್ಷಣಿಕ ಸ್ಥಿತಿಗತಿಗಳಿಗೆ ಬರುವುದಾದರೆ ಅಧ್ಯಯನ ನಡೆದ ಎಲ್ಲಾ ರಾಜ್ಯಗಳಲ್ಲೂ ಎಂದಿಗೂ ಶಾಲೆಗೆ ಹೋಗದವರ ಸಂಖ್ಯೆ ಶೇ.೨೫ಕ್ಕಿಂತ ಹೆಚ್ಚಾಗಿದೆ. ಮಹಾರಾಷ್ಟ್ರ (ಶೇ.೫.೫), ತಮಿಳುನಾಡು (ಶೇ. ೧೮), ಮತ್ತು ಆಂಧ್ರಪ್ರದೇಶ (ಶೇ.೨೧)ಗಳಲ್ಲಿ ಮಾತ್ರ ಅದು ಶೇ.೨೫ಕ್ಕಿಂತ ಕಡಿಮೆ ಇದೆ. ಆದರೆ ಶಾಲೆಯನ್ನು ಪೂರ್ಣಗೊಳಿಸಿದ್ದೇವೆಂದು ಹೇಳಿದ ಬಹುಪಾಲು ಜನರು ಪ್ರಾಥಮಿಕ ಶಿಕ್ಷಣದ ನಂತರ ಶಾಲೆ ತೊರೆದಿದ್ದರು ಅಥವಾ ಹೆಚ್ಚಿನ ಪ್ರಕರಣಗಳಲ್ಲಿ ಪ್ರೌಢ ಶಿಕ್ಷಣದ ನಂತರವಂತೂ ಶಾಲೆ ತೊರೆದಿದ್ದರು. ಶಾಲೆ ತೊರೆಯಲು ಅಥವಾ ಶಾಲೆಯಲ್ಲಿ ನೊಂದಾಯಿಸದಿರಲು ವಲಸೆಯೇ ಪ್ರಧಾನ ಕಾರಣವೆಂದು ಅಧ್ಯಯನ ನಡೆದ ಎಲ್ಲಾ ರಾಜ್ಯಗಳಲ್ಲೂ ಅಧ್ಯಯನಕ್ಕೊಳಪಟ್ಟ ಕುಟುಂಬದವರು ಹೇಳಿದರು. ಉಪಾಧ್ಯಾಯರುಗಳ ಜೊತೆ ನಡೆಸಿದ ಸಂದರ್ಶನಗಳಲ್ಲಿ ಈ ಸಮುದಾಯಗಳ ವಿದ್ಯಾರ್ಥಿಗಳ ಬಗ್ಗೆ ಇರುವ ನಕಾರಾತ್ಮಕ ಧೋರಣೆಗಳು ಉಪಾಧ್ಯಾಯ-ವಿದ್ಯಾರ್ಥಿಗಳ ನಡುವೆ ಸಕಾರಾತ್ಮಕ ಸಂಬಂಧ ರೂಪುಗೊಳ್ಳದಂತೆ ತಡೆಗಟ್ಟುತ್ತಿರುವುದು ಕಂಡುಬಂದಿತು. ಇದು  ವಿದ್ಯಾರ್ಥಿಗಳು ಗೈರುಹಾಜರಾಗಲು ಮತ್ತು ನಿಧಾನವಾಗಿ ಶಾಲೆ ತೊರೆಯಲು ಸಹ ಕಾರಣವಾಗುತ್ತಿದೆ.

ಅತಂತ್ರ ಆದಿವಾಸಿ ಸಮುದಾಯಗಳಲ್ಲಿ ಶಿಕ್ಷಣವನ್ನು ಸಾರ್ವತ್ರೀಕರಿಸುವ ಪ್ರಯತ್ನಗಳಲ್ಲಿ ವಸತಿ ನಿಲಯಗಳು ಮತ್ತು ಆಶ್ರಮಶಾಲೆಗಳು ಪ್ರಮುಖ ಪಾತ್ರವಹಿಸುತ್ತವೆ. ರೆಂಕೆ ಅಯೋಗವು ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಹಂತದಲ್ಲಿ ವಸತಿ ನಿಲಯಗಳಲ್ಲಿ ಅವಕಾಶವನ್ನು ಪಡೆದುಕೊಳ್ಳುವಲ್ಲಿ ಇರುವ ಲಿಂಗ ಅಸಮಾನತೆಯನ್ನು ಬಯಲುಗೊಳಿಸಿದೆ. ಹಾಗೂ ಅದೇ ಸಮಯದಲ್ಲಿ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ಈ ಸಮುದಾಯಗಳ ಗಂಡುಮಕ್ಕಳು ನಾಪತ್ತೆಯಾಗುವುದನ್ನೂ ಸಹ ದಾಖಲಿಸಿದೆ. ಆದರೆ ಡಿ ನೋಟಿಫೈಡ್ ಸಮುದಾಯಗಳ ಮಕ್ಕಳಿಗೆ ವಸತಿ ಶಾಲೆಗಳನ್ನು ಒದಗಿಸಿರುವ ಕಾರಣಕ್ಕೆ ಅವರ ಶೈಕ್ಷಣಿಕ ಸಾಧನೆಗಳು ಹೇಳಿಕೊಳ್ಳುವ ಮಟ್ಟಕ್ಕೇನೂ ಸುಧಾರಿಸಿಲ್ಲವೆಂದು ಪ್ರಸ್ತುತ ಅಧ್ಯಯನವು ತಿಳಿಸುತ್ತದೆ.

ಎಲ್ಲಾ ರಾಜ್ಯಗಳಲ್ಲೂ ಮಕ್ಕಳನ್ನು ಶಾಲೆಗ ಕಳಿಸುವ ಬಗ್ಗೆ ಮತ್ತು ಅವರ ಶಿಕ್ಷಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಪೋಷಕರ ಭಾಗೀದಾರಿಕೆಯ ಕೊರತೆ ಎದ್ದುಕಾಣುವಂತಿದೆ. ಇದಕ್ಕೆ ಪೋಷಕರು ಅವಿದ್ಯಾವಂತರಾಗಿರುವುದು ಮತ್ತು ಶಿಕ್ಷಣದ ಬಗ್ಗೆ ಅರಿವಿಲ್ಲದಿರುವುದು ಒಂದು ಕಾರಣವಾಗಿದ್ದಿರಬಹುದಾದರೂ, ಆ ಕುಟುಂಬಗಳು ನೆಲೆಸಿರುವ ಸ್ಥಳದಿಂದ ಶಾಲೆಗಳು ತುಂಬಾ ದೂರದಲ್ಲಿರುವುದೇ ಪ್ರಧಾನ ಕಾರಣವಾಗಿದೆ. ಇದೆಲ್ಲದರ ಹೊರತಾಗಿಯೂ ತಮ್ಮ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರೂ ಸಮಾನವಾಗಿ ಶಿಕ್ಷಣ ಪಡೆದು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕೆಂಬುದು ಪೋಷಕರೆಲ್ಲರ ಸಾಮಾನ್ಯ ಆಶಯವಾಗಿದೆ. ಶಾಲಾಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗದಿರುವುದಕ್ಕೆ ಶಾಲೆಯಿರುವ ದೂರವು ಒಂದು ಪ್ರಧಾನ ಕಾರಣವಾಗಿರುವುದನ್ನು ಗಮನದಲ್ಲಿಟ್ಟುಕೊಂಡಾಗ ಶಾಲೆಗಳನ್ನು ಈ ಸಮುದಾಯಗಳು ನೆಲೆಸಿರುವ ಸ್ಥಳಗಳ ಸಮೀಪ ಸ್ಥಾಪಿಸುವ ಮೂಲಕ ಶಾಲೆಯನ್ನು ತೊರೆಯುವವರ ಸಂಖ್ಯೆಯನ್ನು ಕಡಿಮೆ ಮಾಡಬಹುದು ಮತ್ತು ಶಾಲಾ ಶಿಕ್ಷಣವನ್ನು ಮುಂದುವರೆಸುವಂತೆಯೂ ಮಾಡಬಹುದು. ಈ ಮೂಲಕ ತಮ್ಮ ಮಕ್ಕಳ ಶಾಲಾ ಜೀವನದಲ್ಲಿ ಪೋಷಕರು ಮತ್ತು ಸಮುದಾಯಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಭಾಗವಹಿಸಲು ಸಹ ಸಾಧ್ಯವಾಗುತ್ತದೆ.

ಈ ಅಧ್ಯಯನದಲ್ಲಿ ಭಾಗವಹಿಸಿದ ಒಂಭತ್ತೂ ರಾಜ್ಯಗಳ ವಿದ್ಯಾರ್ಥಿಗಳಲ್ಲಿ ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಚತ್ತೀಸ್ ಘಡ್, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳ ಶೇ.೮೮-೯೦ರಷ್ಟು  ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಕಲಿತಿದ್ದರೆ ಆ ಸಂಖ್ಯೆ ತೆಲಂಗಾಣ ಮತ್ತು ಗೋವಾ ರಾಜ್ಯಗಳಲ್ಲಿ ಶೇ.೭೫ರಷ್ಟಿದೆ. ದೇಶದೆಲ್ಲೆಡೆ ಖಾಸಗಿ ಶಾಲೆಗಳ ಭರಾಟೆ ಎಷ್ಟೆಹೆಚ್ಚಿಗೆ ಆಗುತ್ತಿದ್ದರೂ ಅತ್ಯಂತ ಅಲಕ್ಷಿತ ಸಮುದಾಯಗಳ ಮಕ್ಕಳು ಈಗಲೂ ಸರ್ಕಾರಿ ಶಾಲೆಗಳಿಗೇ ಹೋಗುತ್ತಿದ್ದಾರೆಂಬುದನ್ನು ಈ ಅಧ್ಯಯನ ಮತ್ತೊಮ್ಮೆ ಸಾಬೀತುಮಾಡಿದೆ. ಹೀಗಾಗಿ ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಹೆಚ್ಚಳ , ಶಿಕ್ಷಕರ ಸಾಮರ್ಥ್ಯ ವೃದ್ಧಿ ಮತ್ತು ಪಠ್ಯಗಳ ಸುಧಾರಣೆಗಳು ತುರ್ತಾಗಿ ಆಗಲೇಬೇಕಿದೆ. 

ಈ ಅಧ್ಯಯನದ ಮತ್ತಷ್ಟು ಸಾರ್ವತ್ರಿಕ ಸಾರಾಂಶವೆಂದರೆ ಈಗಿರುವ ಶಿಕ್ಷಣದ ಸಾಂಸ್ಥಿಕ ಸ್ವರೂಪಗಳು ಅತ್ಯಂತ ದುರ್ಬಲವಾಗಿದ್ದು ಕಳಪೆ ಗುಣಮಟ್ಟದ್ದಾಗಿವೆ ಮತ್ತು ಹಲವು ಪೂರ್ವಗ್ರಹಗಳನ್ನು ಹೊತ್ತಿದ್ದು ಅಂತರ್ಗತವಾದ ಹೊರದೂಡುವ ಗುಣಾಂಶಗಳನ್ನು ಹೊಂದಿದೆ. ಇದು ಶಾಲಾ ಶಿಕ್ಷಣಕ್ಕೆ ದೊಡ್ಡ ಅಡೆತಡೆಯನ್ನು ಒಡ್ಡುತ್ತದೆ. ಅಲ್ಲದೆ ಸಮುದಾಯಗಳು ಈ ಅವಕಾಶಗಳನ್ನು ಎಟುಕಿಸಿಕೊಳ್ಳುವಾಗ ಹೇಗೆ ಕೆಲವು ನಿರ್ದಿಷ್ಯ ಸ್ಥಳಿಯ ಅಂಶಗಳು ಪ್ರಭಾವಿಸುತ್ತದೆಬುದನ್ನು ಈ ಅಧ್ಯಯನವು ಎತ್ತಿತೋರಿಸುತ್ತದೆ. ಹಾಗು ಅಸ್ಥಿತ್ವದಲ್ಲಿರುವ ಕ್ರಮಗಳು ಈ ಅತಂತ್ರ ಸಮುದಾಯಗಳ ನಿರ್ದಿಷ್ಟ ಅಗತ್ಯ ಮತ್ತು ಆಶೋತ್ತರಗಳನ್ನು ಗುರುತಿಸುವುದಿಲ್ಲವೆಂಬುದಕ್ಕೂ ಪುರಾವೆಗಳನ್ನು ಒದಗಿಸುತ್ತದೆ. .

   ಕೃಪೆ: Economic and Political Weekly,Oct 28, 2017. Vol 52. No. 42-43