ಗುರುವಾರ, ಮಾರ್ಚ್ 5, 2015

ಡಾ.ವಸು ಮಳಲಿ ಅವರ`ಕಳ್ಳು-ಬಳ್ಳಿ' ಪ್ರಜಾವಾಣಿ ಅಂಕಣ ಬರಹಗಳು-3

ಸೌಜನ್ಯ: ಪ್ರಜಾವಾಣಿ
ಸಮಾಜ ವಿಜ್ಞಾನ: ಗಾಳ ನುಂಗಿದ ಮೀನು
Tue, 05/27/2014

ಇಂದು ಮಕ್ಕಳನ್ನು ಕಾಲೇಜಿಗೆ ಸೇರಿ­ಸುವ ಹೊತ್ತು. ಹತ್ತನೇ ತರಗತಿ­ಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳೆಲ್ಲಾ ಹಿಂದು­ಮುಂದು ಯೋಚಿಸದೆ ವಿಜ್ಞಾನವನ್ನು ಆಯ್ಕೆ ಮಾಡಿ­ಕೊಳ್ಳುವುದು ಸಹಜ ಮನೋಧರ್ಮ­ವೆನ್ನು­­ವಂತಾಗಿದೆ. ಅದಲ್ಲದೆ ಬೇರೆ ವಿಷಯ­ಗಳನ್ನು ಮನುಷ್ಯಮಾತ್ರದವರು ಓದಲಾರರು ಎಂಬಂತೆ ನಡೆದುಕೊಳ್ಳುವ ತಂದೆತಾಯಂದಿರೂ ಇದ್ದಾರೆ. ಇಲ್ಲವಾದಲ್ಲಿ ಮಕ್ಕಳ ಭವಿಷ್ಯದ ಕಾರಣ­­ವನ್ನು ಮುಂದಿಟ್ಟುಕೊಂಡು ಮಾನವಿಕ ವಿಷಯಗಳ ಮೂದಲಿಕೆ ನಡೆಸೇ ಇರುತ್ತಾರೆ. ಅದರಾಚೆಗೂ ‘ಹೆಚ್ಚು ಅಂಕ ಪಡೆದ ಪ್ರತಿಭಾ­ನ್ವಿ­ತರು’ ಕಲಾ ವಿಭಾಗಕ್ಕೆ ಬರಬೇಕಾದರೆ ಯಾರಾ­ದರೂ ಅವರ ಮೇಲೆ ವಿಶೇಷ ಪ್ರಭಾವ ಬೀರಿರಬೇಕು.
ಕಲೆ, ಮಾನವಿಕ, ಸಮಾಜ ವಿಜ್ಞಾನ ಎಂದು ಕರೆಸಿಕೊಳ್ಳುವ ತತ್ವ ಶಾಸ್ತ್ರ, ಚರಿತ್ರೆ, ರಾಜ್ಯ­ಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರಗಳ ಅಳಿವು ಉಳಿವಿನ ಪ್ರಶ್ನೆ ಇಂದು ಕಾಣಬರುತ್ತಿದೆ. ಈ ಆತಂಕ ಭಾರತದಲ್ಲಿ ಮಾತ್ರವಲ್ಲ ಅಮೆರಿಕದ ವಿದ್ವಾಂಸರು ಆ ದೇಶದ ಭವಿಷ್ಯದ ಬಗೆಗೆ ಚಿಂತಿತರಾಗಿದ್ದಾರೆ. ಮಾರುಕಟ್ಟೆಯ ಬೇಡಿಕೆಯ ತತ್ವದ ಆಧಾರದ ಮೇಲೆ ಇಂದಿನ ವಿಶ್ವವಿದ್ಯಾ­ಲಯಗಳನ್ನು ರೂಪಿಸಲು ಹೊರಟಿ­ರುವ ಪಾಶ್ಚಿಮಾತ್ಯರಿಗೆ ಕಾಣುವ ಪ್ರಶ್ನೆಗಳು ಬೇರೆ­ಯದೇ ಆಗಿರುತ್ತವೆ. ತನ್ನ ಬೆಂಬಲ­ದಲ್ಲಿ ನಡೆ­ಯುವ ವಿಶ್ವವಿದ್ಯಾಲಯಗಳ ಮೂಲಕ ಸರ್ಕಾರ ತನ್ನ ರಾಜಕೀಯ ನೀತಿಯನ್ನು ಪ್ರತಿಪಾದಿ­ಸು­­ತ್ತದೆಂ­ಬುದು ಆ ದೇಶಗಳಲ್ಲಿ ಕೇಳಿಬರುವ ಟೀಕೆ.
ಇಲ್ಲಿ ನಮ್ಮನ್ನು ಕಾಡಿಸುತ್ತಿರುವ ಪ್ರಶ್ನೆಗಳು ಭಿನ್ನವಾಗಿವೆ. ಈ ವಿಷಯಗಳನ್ನು ಭಾರತದಲ್ಲಿ ಪರಿಚಯಿಸುವಾಗ ಅದರ ಹಿಂದೆ ಇರಬಹು­ದಾದ ರಾಜಕಾರಣವನ್ನು ಮರುಪರಿಶೀಲಿಸಿ ಕೊಳ್ಳ­ಬೇಕಾಗಿದೆ. ಪಾಶ್ಚಿಮಾತ್ಯ ಮಾದರಿಯ ಉನ್ನತ ಶಿಕ್ಷಣವನ್ನು ೧೮೫೭ರಲ್ಲಿ ಭಾರತದಲ್ಲಿ ಆರಂಭಿಸಲಾಯಿತು. ಭಾರತದ ಮೂರು ಪ್ರೆಸಿಡೆನ್ಸಿ­ಗಳಾದ ಕಲ್ಕತ್ತ, ಮುಂಬೈ, ಮದ್ರಾಸು­ಗಳಲ್ಲಿ ವಿಶ್ವವಿದ್ಯಾಲಯಗಳು ಆರಂಭವಾದವು.
ಬ್ರಿಟಿಷರು ತಮ್ಮಂತೆ ಆಲೋಚಿಸುವ, ತಮಗೆ ವಿಧೇಯವಾಗಿರುವ  ವರ್ಗವನ್ನು ಹುಟ್ಟು­ಹಾಕುವ ದಿಸೆಯಲ್ಲಿ ಉನ್ನತ ಶಿಕ್ಷಣವನ್ನು ಇಂಗ್ಲಿಷ್ ನಲ್ಲಿ ನೀಡಲು  ನಿರ್ಧರಿಸಿದರು. ಅಂದರೆ ಚರ್ಮ ಕಪ್ಪಾಗಿದ್ದರೂ ಇಂಗ್ಲಿಷ್‌ನಲ್ಲೇ ನಗುವ, ಇಂಗ್ಲಿಷನ್ನೇ ಉಸಿರಾಡುವ ಇಂಗ್ಲಿಷ್‌­ರಂತೆ ವರ್ತಿಸುವ ಜನರು ಅವರಿಗೆ ಬೇಕಾಗಿದ್ದರು. ಅವರನ್ನು ಬೆಂಬಲಿಸುವ ಬೌದ್ಧಿಕವರ್ಗದ ಸೃಷ್ಟಿ ವಿಶ್ವವಿದ್ಯಾಲಯಗಳ ಹಿಂದಿನ ಉದ್ದೇಶವಾಗಿತ್ತು. ಅದರಲ್ಲಿ ಅವರು ಹಿಂದೆ ಬೀಳಲಿಲ್ಲ. ಬ್ರಿಟಿಷರು ಈ ದೇಶವನ್ನು ಬಿಟ್ಟರೂ ವಿಧೇಯತೆಯನ್ನು ನಾವು ಬಿಟ್ಟುಕೊಡಲಿಲ್ಲ.
ಅವರು ಹಾಕಿದ ಯಾವುದೇ ಚೌಕಟ್ಟನ್ನು ಮುರಿಯುವುದು ಅಷ್ಟೇನು ಸುಲಭದ ವಿಚಾರವಾಗಿಲ್ಲ. ಇಂದಿಗೂ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣವನ್ನು ಅಧಿಕೃತವಾಗಿ ಇಂಗ್ಲಿಷ್ ಮಾಧ್ಯಮದಲ್ಲೇ ನೀಡ­ಲಾಗುತ್ತಿದೆ. ಕನ್ನಡದಲ್ಲಿ ಓದಲು, ಬರೆಯಲು ಅನುಮತಿಯನ್ನು ನೀಡಲಾಗಿದೆ ಅಷ್ಟೆ. ವಿಪ­ರ್ಯಾಸ­ವೆಂದರೆ ಚರಿತ್ರೆ, ಸಮಾಜ ಶಾಸ್ತ್ರ­ದಂತಹ ವಿಭಾಗಗಳಲ್ಲಿ ನೂರಕ್ಕೆ ತೊಂಬತ್ತು ಮಂದಿ ವಿದ್ಯಾರ್ಥಿಗಳು ಕನ್ನಡದಲ್ಲಿ ಓದಿ ಕನ್ನಡ­ದಲ್ಲೇ ಉತ್ತರಿಸುತ್ತಿರುತ್ತಾರೆ. ಕನ್ನಡದಲ್ಲಿ ಉತ್ತಮ ಪುಸ್ತಕಗಳಿಲ್ಲ ಎಂಬ ಅವರ ದೂರು ನರಳಾಟವಾಗಿ ಸದಾ ಕಾಲಕ್ಕೂ ಕೇಳಿಬರುತ್ತಿದೆ.
ಬ್ರಿಟಿಷರಿಂದ ಪರಿಚಯವಾದ ಸಾಹಿತ್ಯ ಮತ್ತು ಸಮಾಜ ವಿಜ್ಞಾನ ಈ ಹೊತ್ತಿಗೆ ಬೃಹತ್ತಾಗಿ ಬೆಳೆದು ತನ್ನದೇ ಆದ ಸ್ವತಂತ್ರವಾದ ಅಸ್ತಿತ್ವವನ್ನು ಪಡೆದುಕೊಳ್ಳಬೇಕಾಗಿತ್ತು. ಇತ್ತೀ­ಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾನವಿಕ ವಿಷಯಗಳ ಕುರಿತ ಚರ್ಚೆಯೊಂದನ್ನು ಏರ್ಪ­ಡಿಸ­ಲಾಗಿತ್ತು. ಅಲ್ಲಿ ಸೇರಿದ್ದ ವಿದ್ವತ್ ಮಿತ್ರರೆ­ಲ್ಲರಿಗೂ ಸ್ಪಷ್ಟವಾಗಿ ಕಂಡುಬಂದ ಅಂಶವೆಂದರೆ ಪ್ರತಿ ವಿಷಯದ ಹಿನ್ನೆಲೆಯನ್ನು ಹುಡುಕುತ್ತಾ ಹೋದರೆ ಮಾನವಿಕ ವಿಜ್ಞಾನಗಳಲ್ಲಿ ನಾವು ಅಷ್ಟೇನೂ ಬೆಳವಣಿಗೆಯನ್ನು ಸಾಧಿಸಿಲ್ಲ. ಬ್ರಿಟಿಷರು ಹಾಕಿಕೊಟ್ಟ ಜಾಡಿನಲ್ಲೇ ಚಾಚೂ ತಪ್ಪದೆ ಮುಂದುವರಿಯುತ್ತಿದ್ದೇವೆ.
ಕನ್ನಡದಲ್ಲಿ ಅಂದರೆ ಸ್ಥಳೀಯ ಭಾಷೆಯಲ್ಲಿ ನಡೆದಷ್ಟು ಸಂಶೋಧನೆ ಹಾಗೂ ಬರವಣಿಗೆಗಳು ಮಾನವಿಕ ವಿಷಯಗಳಲ್ಲಿ ನಡೆಯಲೇ ಇಲ್ಲ. ಕರ್ನಾಟಕದ ಸಂದರ್ಭದಲ್ಲಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ಕನ್ನಡ ತಮ್ಮ ಭಾಷೆಯೂ ಆಗಿರುವ ಕಾರಣಕ್ಕೆ ಓದು ಆತ್ಮೀಯವಾಗುತ್ತದೆ. ಆದ್ದರಿಂದ ಕನ್ನಡ ವಿಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ನಂತರವೂ ಸಂಶೋಧನೆ ಅಥವಾ ಸಾಹಿತ್ಯ ಬರವಣಿಗೆಯಲ್ಲಿ ತೊಡಗಿಕೊ­ಳ್ಳು­ತ್ತಾರೆ. ಅದೇ ಚರಿತ್ರೆ ಅಥವಾ ರಾಜ್ಯಶಾಸ್ತ್ರ­ವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ವಿದ್ಯಾರ್ಥಿಯೊಬ್ಬ ಎಂ.ಎ ಮಾಡಲು ಬಂದರೆ ಮೊದಲಿಗೆ ಎದುರಾಗುವ ಸಮಸ್ಯೆ ಭಾಷಾ ಮಾಧ್ಯಮ.
ಅವನಿಗೆ ಆಪ್ಯಾಯಮಾನವಾದ ಕನ್ನಡದಲ್ಲಿ ಪುಸ್ತಕಗಳ ಕೊರತೆಯಿಂದಾಗಿ ಕೈಗೆ ಎಟುಕಬಹುದಾದ ಕನ್ನಡದ ಕೆಲವೇ ಪುಸ್ತಕ­ಗಳನ್ನು ಆಧರಿಸುತ್ತಾನೆ. ಉತ್ತಮ ಪರಾಮರ್ಶನ ಕೃತಿಗಳು ಇಂಗ್ಲಿಷ್‌ನಲ್ಲಿ ಇರುವ ಕಾರಣಕ್ಕೆ ಅರ್ಧದಷ್ಟು ವಿದ್ಯಾರ್ಥಿಗಳು ಓದುವ ಪ್ರಯತ್ನ­ವನ್ನೂ ಮಾಡದೇ ಉಳಿಯುತ್ತಾರೆ. ಆನಂತರ ಸಂಶೋಧನೆಗೆ ಬಂದಾಗಲೂ ಇಂಗ್ಲಿಷ್‌ನ ಸಮಸ್ಯೆ ಬೆಂಬಿಡದ ಬೇತಾಳವಾಗಿ ಕಾಡುತ್ತದೆ. ಅದರಲ್ಲೂ ಸಂಶೋಧನಾ ಬರವಣಿಗೆ ಇಂಗ್ಲಿಷ್‌­ನಲ್ಲಿ ಮಾಡುವಂತೆ ಒತ್ತಾಯವಿರುತ್ತದೆ. ವಿದ್ಯಾರ್ಥಿಗಳ ಅರ್ಧಭಾಗದ ಶ್ರಮ ತಮ್ಮದಲ್ಲದ ಭಾಷೆಯಲ್ಲಿ ವಿಚಾರವನ್ನು ಆಲೋಚಿಸುವ, ಬರೆಯುವ ಸಾಹಸದಲ್ಲೇ ಕಳೆದು ಹೋಗುತ್ತದೆ. ಈ ಸಮಸ್ಯೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರವಲ್ಲ, ಇಂಗ್ಲಿಷ್ ಮಾಧ್ಯಮದಲ್ಲಿ ಓದಿಬಂದವ­ರನ್ನೂ ಹಿಂಡುತ್ತಿದೆ.
ಆಯಾ ಭಾಷಾ ಪ್ರಯೋಗಗಳು ಆಯಾ ಸಮಾಜದ ಬದುಕಿನ ಹಿನ್ನೆಲೆಯಲ್ಲಿ ಹುಟ್ಟಿ­ಕೊಂಡಿ­ರುತ್ತವೆ. ಆದ್ದರಿಂದ ನಮ್ಮ ಸಮಾಜದ ವಿಚಾರ­­ವನ್ನು ಮತ್ತೊಬ್ಬರ ನಾಲಗೆಯಲ್ಲಿ ಹೇಳಿಸುವುದು, ಅಥವಾ ನಮ್ಮ ನಾಲಗೆಯನ್ನು ಅವರಂತೆ ತಿರುಚುವುದು ಎರಡೂ ಆಭಾಸವಾಗಿ ಕೇಳುತ್ತದೆ. ಆದರೂ ಅದಕ್ಕೇ ನಮ್ಮನ್ನು  ಒಗ್ಗಿ­ಸುವ ಒಗ್ಗಿಕೊಳ್ಳುವ ಹರಸಾಹಸವನ್ನು ಮಾಡುತ್ತಾ ಬಂದಿದ್ದೇವೆ. ಇಷ್ಟೆಲ್ಲಾ ಮಾಡಿ ನಮ್ಮ ವಿಚಾರವನ್ನು ಇಂಗ್ಲಿಷ್‌ನವರ ಮುಂದಿ­ಟ್ಟಾಗ ಮಾಹಿತಿಯನ್ನು ತೆಗೆದುಕೊಂಡು ಹೋಗಿ­ರುತ್ತೇವೆಯೋ ಹೊರತು ಹೊಸದೊಂದು ಸಿದ್ಧಾಂತವನ್ನೋ ಚಿಂತನೆಯನ್ನೋ ಕಟ್ಟಿಕೊಡಲು ಸೋಲುತ್ತೇವೆ. ಇಷ್ಟಾಗಿಯೂ ಇಂಗ್ಲಿಷ್‌ನಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಈ ಪ್ರೋತ್ಸಾಹ ಅಥವಾ ಒತ್ತಡ ಬೇರೆ ಬೇರೆ ಆಯಾಮಗಳಲ್ಲಿ ನಡೆದಿದೆ.
ಅಧ್ಯಾಪಕನೊಬ್ಬ ಮುಂಬಡ್ತಿ ಪಡೆಯಬೇಕಾದರೆ ತನ್ನ ಸಂಶೋಧನೆ­ಗಳನ್ನು ಮುಂದಿಡಬೇಕಾಗುತ್ತದೆ. ಆ ಸಂಶೋಧನೆ­ಗಳು ಅಂತರರಾಷ್ಟ್ರೀಯ ಪ್ರಕಟಣೆಯಾಗಿದ್ದಲ್ಲಿ ಅತಿಹೆಚ್ಚು ಅಂಕಗಳನ್ನು ನೀಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಬರೆದ ಬರಹವನ್ನು ಅಂತರ­ರಾಷ್ಟ್ರೀಯ ಮಟ್ಟದಲ್ಲಿ ಪ್ರಕಟ ಮಾಡಲು ಸಾಧ್ಯ­ವಿಲ್ಲದಿರುವುದರಿಂದ ಮೊದಲ ಹಂತದಲ್ಲಿ ಕನ್ನಡ­ದಲ್ಲಿ ಬರೆಯುವ ವಿದ್ವಾಂಸರಿಗೆ ತಣ್ಣೀರು ಎರಚಿ­ದಂ­ತಾಗುತ್ತದೆ. ಈ ಮಾನದಂಡ ಯಾರದು. ನೀತಿ ನಿಯಮಗಳನ್ನು ರೂಪಿಸಿದ್ದು ಯಾರು?
ಕನ್ನಡ ನಾಡಿನ ದೊಡ್ಡ ಸಂಶೋಧಕರು ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದವರು ಷ.ಷೆಟ್ಟರ್ ಅವರು. ಅವರ ಹಲವು ಮಹತ್ವದ ಸಂಶೋಧನೆಗಳು ‘ಇನ್‌ವೈಟಿಂಗ್‌ ಡೆತ್’, ‘ಪರ್ಸೀವಿಂಗ್ ಡೆತ್’ ಇತ್ಯಾದಿ ಇಂಗ್ಲಿಷ್‌ನಲ್ಲಿ ಪ್ರಕಟಗೊಂಡಿವೆ. ಅಂತರರಾಷ್ಟ್ರೀಯ ಮಟ್ಟದ ವಿದ್ವಾಂಸರ ಮನ್ನಣೆಯನ್ನೂ ಪಡೆದಿವೆ. ಆದರೆ ಅವರೂ ಅಭಿಪ್ರಾಯಪಟ್ಟಂತೆ ಕನ್ನಡದಲ್ಲಿ ಅವರು ಬರೆದ ‘ಷಂಗಂ ತಮಿಳಗಂ’ ಕೃತಿ ಅವರಿಗೆ ತಂದುಕೊಟ್ಟ ಗೌರವವನ್ನು ಇಂಗ್ಲಿಷ್ ಕೃತಿಗಳು ತಂದುಕೊಟ್ಟಿರಲಿಲ್ಲ. ಕನ್ನಡ ಭಾಷೆ ಮತ್ತು ಲಿಪಿಯ ಪ್ರಾಚೀನತೆ ಕುರಿತು ಮಾತನಾಡುವ ಈ ಕೃತಿ ತಮ್ಮ ನೆಲದಲ್ಲೂ ಮತ್ತು ಹೊರಗೂ ಮೆಚ್ಚುಗೆಯನ್ನು ಪಡೆಯಿತು.
ಅದಾದ ನಂತರ ಹಲವು ವರ್ಷಗಳ ಅವರ ಸಂಶೋಧನೆಯ ಫಲವಾಗಿ ಮೂಡಿಬಂದ ಬೃಹತ್‌ ಕೃತಿ ಹಳಗನ್ನಡ. ಅದನ್ನು ಇಂಗ್ಲಿಷ್‌ನಲ್ಲಿ ಬರೆಯು­ವುದು ಅವರಿಗೆ ತ್ರಾಸವೇನೂ ಆಗುತ್ತಿರಲಿಲ್ಲ. ಕನ್ನಡದಲ್ಲಿ ಅದರ ಬರವಣಿಗೆ ಸುಲಲಿತವಾಗಿ ಸಾಗಿದೆ. ಕರ್ನಾಟಕ ಚರಿತ್ರೆಗೊಂದು ಹೊಸ ಹೊಳಹು. ಹೀಗೆ ಕರ್ನಾಟಕದಲ್ಲಿ ಬೆರಳೆಣಿಕೆಯ ವಿದ್ವಾಂಸರು ಮಾತ್ರವೇ ಸಮಾಜ ವಿಜ್ಞಾನದಲ್ಲಿ ಮೂಡಿಬಂದಿದ್ದಾರೆ.
ಈವರೆಗಿನ ಸಮಾಜಶಾಸ್ತ್ರ ಸಂಶೋಧನೆ­ಗಳನ್ನು ಗಮನಿಸಿದರೆ ಅವೆಲ್ಲಾ ಫೋರ್ಡ್‌ ಫೌಂಡೇಷನ್‌ ಅಥವಾ ಅಂತಹ ಬೃಹತ್ ಪ್ರಾಯೋಜಕರಿಗಾಗಿ ನಡೆಸಿದ ಸಂಶೋಧನೆ­ಗಳಾಗಿವೆ. ಅಂದರೆ ಈ ಸಂಶೋಧನೆಗಳ ಮೂಲಕ ಸಮಾಜವನ್ನು ನಿರ್ದೇಶಿಸುವ ಪ್ರಯತ್ನ ಈ ಸಂಸ್ಥೆಗಳಿಗಿರುತ್ತದೆಂಬುದನ್ನು ನಿರಾಕರಿಸ­ಲಾಗದು. ನಮ್ಮ ಸಮಾಜದ ಒಳಗೆ ಚಿಟುಕು ಮುಳ್ಳಾಗಿ ಆಡುವ ನೂರಾರು ಯೋಜನೆಗಳನ್ನು ನಾವು ಗುಮಾನಿಯಿಂದ ನೋಡಬೇಕಾಗಿದೆ. ನಾವು ಕಲೆಹಾಕುವ ಮಾಹಿತಿ ಅದು ನಮಗಾಗಿ ಮಾತ್ರವೇ ಆಗಿ ಉಳಿದಿರುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಜಾಗತಿಕ ಮಾರುಕಟ್ಟೆ ಅದರ ಲಾಭ ಪಡೆಯಲು ಕಾಯುತ್ತಿರುತ್ತದೆ ಅಥವಾ ನಮ್ಮನ್ನು ಅವರ ಅಗತ್ಯಗಳಿಗಾಗಿ ಬಳಸಿಕೊಂಡಿ­ರು­ತ್ತದೆ.
ಭಾರತದ ಸರ್ಕಾರೇತರ ಸಂಸ್ಥೆಗಳಿಗೆ ಹರಿದು ಬರುವ ಹಣದ ಬಗ್ಗೆ ಇಂತಹ ಅನುಮಾನ, ಎಚ್ಚರ ಪ್ರಾಜ್ಞರ ಗಮನಕ್ಕೆ ಬಂದ ವಿಚಾರವೇ ಆಗಿದೆ. ಹಾಗೆಯೇ ಸಂಶೋಧನೆ­ಗಳಿಗೆ ಬರುವ ವಿದೇಶಿ ಹಣದ ಹಿಂದೆ ಖಚಿತ­ವಾದ ಉದ್ದೇಶ­ವಿರುತ್ತದೆ. ಇಂತಹ ಭಯ ಭಾರತಕ್ಕೆ ಮಾತ್ರವಲ್ಲ, ಭಾರತದಂತಹ ದೇಶದ­ವರ­ನ್ನೆಲ್ಲಾ ಆವರಿಸಿದೆ. ಆಫ್ರಿಕದ ಜನತೆ ತಮ್ಮ ಬಗೆಗೆ ಕೀಳಾಗಿ ಕಂಡ ವಿಷಯಗಳನ್ನು ಅವರು ಓದಿ ಬರೆಯುವಾಗ ಅವರ ಕರುಳು ಚುರುಗುಟ್ಟುತ್ತದೆ.
ನಾವು ಬ್ರಿಟಿಷರು ಹಾಕಿಕೊಟ್ಟ ಜಾಡಿನಲ್ಲಿ ಹೋಗುತ್ತಾ ಇಂಗ್ಲಿಷ್ ಹೊರೆಯನ್ನು ಮಾತ್ರ ಹೊತ್ತಿಲ್ಲ, ವಿಚಾರಗಳಿಗೂ ಅವರೇ ಅದಿದೈವ­ವಾಗಿ ಕಾಣುತ್ತಾರೆ. ಯಾವುದನ್ನು ಅವರು ಚರಿತ್ರೆ ಎಂದು ಹೇಳಿಕೊಟ್ಟರೋ, ಅಥವಾ ಅರ್ಥಶಾಸ್ತ್ರವೆಂದು ಕರೆದರೋ, ಸಮಾಜಶಾಸ್ತ್ರ­ವೆಂದು ಬೋಧಿಸಿದರೋ ಚಾಚೂ ತಪ್ಪದೆ ಅದೇ ಬಟ್ಟೆಯಲ್ಲಿ ಸಾಗುತ್ತಿದ್ದೇವೆ. ಇಂಗ್ಲಿಷ್ ಭಾಷೆ­ಯಲ್ಲಿ ಮಾತ್ರವಲ್ಲ, ಇಂಗ್ಲಿಷ್ ಪರಿಭಾಷೆಯಲ್ಲೇ ನಮ್ಮ ಸಮಾಜವನ್ನು ಅರ್ಥೈಸುತ್ತಿದ್ದೇವೆ. ಭಾರತದ ಪ್ರಾಚೀನ ರಾಜರನ್ನು ಕಿಂಗ್ ಎಂತಲೂ ರಾಣಿಯರನ್ನು ಕ್ವೀನ್ ಎಂತಲೂ ಕರೆಯ­ಲಾಗಿದೆ. ಭಾರತದಲ್ಲಿ ರಾಣಿಯರಿಗೆ ಎಷ್ಟು ಮಾತ್ರ ಅಧಕಾರವಿತ್ತೆಂದು ನಮಗೆ ತಿಳಿದೇ ಇದೆ. ಅವಳು ರಾಜನ ಹೆಂಡತಿಯಾಗಿದ್ದಳೇ ಹೊರತು ಅವಳೇ ಆಧಿಕಾರ ನಿರ್ವಹಿಸುವ ಅವಕಾಶ­ವಿರ­ಲಿಲ್ಲ. ಇಂತಹ ಸಾವಿರಾರು ತಪ್ಪು ಗ್ರಹಿಕೆಗಳನ್ನು ಜ್ಞಾನವೆಂದು ಬೋಧಿಸುತ್ತಾ ಬಂದಿದ್ದೇವೆ.
ಭಾರತದಲ್ಲಿಂದು ೫೭೩ ವಿಶ್ವವಿದ್ಯಾಲಯ­ಗಳಿದ್ದೂ, ಸಮಾಜ ವಿಜ್ಞಾನಗಳಲ್ಲಿ ಬರವಣಿಗೆ­ಗಳೇಕೆ ಸೊರಗಿವೆ? ಪ್ರತಿ ವಿಚಾರವನ್ನು ಪಶ್ಚಿಮದ ಆಲೋಚನಾ ಕ್ರಮದಿಂದಲೇ ಆರಂಭಿಸುತ್ತಿ­ದ್ದೇವೆ. ಪೂರ್ವದ ಚಿಂತನೆಗಳು ಏನು ಎಂದು ತಿಳಿಯುವ ಹೊಸದೊಂದು ಕಣ್ಣೋಟವನ್ನೇ ಕಟ್ಟಿ­ಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮದೇ ನೆಲದ ಜನಪದವನ್ನು ಅರಿಯುವಾಗಲೂ ಫೋಕ್ಲೋರ್ ನಲ್ಲಿ ಬಳಸುವ ಮಾದರಿಗಳನ್ನು ಅಳವಡಿಸಿ­ಕೊಳ್ಳುತ್ತೇವೆ.
ನಮ್ಮದೇ ಭಾಷೆಯಲ್ಲ್ಲಿ ನಾವು ಓದಲಾರದ್ದು, ನಮ್ಮದೇ ಆದ ಆಲೋಚನಾ ಕ್ರಮವನ್ನು ಕಂಡುಕೊಳ್ಳಲಾಗದ್ದೂ ಸಹ ನಮ್ಮ ಕೀಳರಿಮೆಗೆ ಕಾರಣವಾಗಿದೆ. ಕನ್ನಡ ಸಾಹಿತ್ಯ­ವನ್ನೇ ಓದುವವರು ನಿಸ್ಸಂಕೋಚವಾಗಿ ಕನ್ನಡದಲ್ಲಿ ಸಂಶೋಧನೆಯನ್ನು ನಡೆಸುವುದ­ರಿಂದ ಅಲ್ಲಿ ಬರವಣಿಗೆಗಳು ನಿರಂತರವಾಗಿವೆ ಮತ್ತು ಸಮಾಜ ವಿಜ್ಞಾನಗಳ ಬರವಣಿಗೆಗಳನ್ನೂ ಮಾಡುತ್ತಾ ಬಂದಿದ್ದಾರೆ.
ಸಮಾಜ ವಿಜ್ಞಾನಗಳ ಸಂಶೋಧನೆಗಳಿರಲಿ ನಾವೆಲ್ಲರೂ ಓದುತ್ತಾ ಬೋಧಿಸುತ್ತಾ ಬಂದ ವಿಷಯಗಳ ಕಡೆಯೂ ಗಮನ ಹರಿಸಬೇಕಾಗಿದೆ. ಖಾಸಗಿ ವಿಶ್ವವಿದ್ಯಾಲಯಗಳು, ವಿದೇಶಿ ವಿದ್ಯಾ­ಲಯ­ಗಳು ಆರಂಭವಾಗಿರುವ ಈ ಕಾಲದಲ್ಲಿ ಬೋಧನಾ ವಿಷಯ ಎಷ್ಟರ ಮಟ್ಟಿಗೆ ನಮ್ಮದಾಗಿ ಉಳಿಯಬಲ್ಲದು ಕಾದು ನೋಡಬೇಕಾಗಿದೆ. ಯೂರೋಪಿನ ಚರಿತ್ರೆಗೆ ಗಮನಕೊಟ್ಟಂತೆ ಏಷ್ಯಾದ ಚರಿತ್ರೆಯನ್ನು ನಾವು ಬೋಧಿಸಲಿಲ್ಲ. ಅಮೆರಿಕದ ಚರಿತ್ರೆಗೆ ಜಾಗ ಕೊಟ್ಟಂತೆ ಆಫ್ರಿಕದ ಚರಿತ್ರೆ ನಮಗೆ ಲಾಭಕರವಾಗಿ ಕಾಣಲಿಲ್ಲ.
ಭವಿಷ್ಯ­ದಲ್ಲಿ ಸಮಾಜ ಅಧ್ಯಯನಗಳೂ ಮಾರು­ಕಟ್ಟೆಯ ಬೇಡಿಕೆಯನ್ನು ಗಮನದಲ್ಲಿ ಇರಿಸಿಕೊಳ್ಳ ಬೇಕಾಗಿ­ರುವುದರಿಂದ ಅದರಲ್ಲೂ ಅಂತರ­ರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಒತ್ತಡವನ್ನು ಹೊರಲೇ ಬೇಕಾಗಿರುವುದರಿಂದ ಭವಿಷ್ಯದ ಬೌದ್ಧಿಕ  ಗುಲಾಮಗಿರಿಯ ಕೊಳ ಹಾಕಿಸಿ­ಕೊಳ್ಳಲೂ ಎಲ್ಲ ರೀತಿಯಲ್ಲೂ ಸಿದ್ಧತೆ ಹದವಾಗಿ ನಡೆದಿದೆ. ಈ ಎಲ್ಲಕ್ಕೂ ಭಾಷಾ ಮಾಧ್ಯಮದ ನಿರ್ಣಯ ಸಹಜವಾಗಿ ಪೂರಕವಾಗಿದೆ.

ಬಂಡವಾಳಗಾರ ಕೊಂಡು ಮಾರುವ ಭಾಷಾ ಮಾಧ್ಯಮ

Tue, 13th May, 2014
ಪ್ರಾಥಮಿಕ ಹಂತದಲ್ಲಿ ಮಾತೃ­ ಭಾಷೆಯಲ್ಲಿ ಶಿಕ್ಷಣವನ್ನು ನಿರ್ಧರಿ­ಸುವ ಹಕ್ಕು ಪೋಷಕರದ್ದು ಮತ್ತು ಮಗುವಿನದು ಎಂದು  ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇಲ್ಲವಾದಲ್ಲಿ ಅದು ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತ­ದೆಂದು ನಮೂದಿಸಿದೆ.  ಖಾಸಗಿ ಶಾಲೆಗಳನ್ನು ನಡೆ­ಸುವ ಬಂಡವಾಳಗಾರರು ಇಂಗ್ಲಿಷ್‌ನ ಹೆಸರಲ್ಲಿ ತಮ್ಮ ಬಂಡವಾಳದ ರಕ್ಷಣೆಗಾಗಿ ಗೆದ್ದ ವಾದ ಇದು.
ಶಿಕ್ಷಣ ಪದ್ಧತಿ ಹುಟ್ಟಿದಾಗಲೂ ಅದು ಬಂಡ­ವಾಳಗಾರನ ಅಗತ್ಯವೇ ಆಗಿತ್ತು. ಇನ್ನೂರು ವರ್ಷ­ಗಳ ನಂತರವೂ ಅದೇ ಕನ್ನಡಿಯಲ್ಲಿ ಪ್ರತಿಫಲಿಸಿದಂತಿದೆ. ಇವತ್ತು ನಾವು ಒಪ್ಪಿ ಅಪ್ಪಿ­ಕೊಂಡಿರುವ ಶಿಕ್ಷಣ, ಬಂಡವಾಳಗಾರರ ಅಗತ್ಯ­ಕ್ಕಾಗಿ ರೂಪುಗೊಂಡ ವ್ಯವಸ್ಥೆಯಾಗಿದೆ. ಹತ್ತೊಂ­ಬತ್ತನೆ ಶತಮಾನದ ಭಾರತದಲ್ಲಿ ಪರಿಚಿತವಾ­ದಾಗಲಂತೂ ಆ ಬಂಡವಾಳಗಾರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯೇ ಆಗಿತ್ತು.
ಕೈಗಾರಿಕಾ ಕ್ರಾಂತಿ ಪರಿಣಾಮವಾಗಿ ಹತ್ತೊಂ­ಬತ್ತನೇ ಶತಮಾನದಲ್ಲಿ ಬ್ರಿಟನ್ನಿನಲ್ಲಿ ಆರಂಭ­ವಾದ ಶಾಲಾ ಪದ್ಧತಿಯೇ ಬೆಳೆದು ಇಂದು ಜಗತ್ತನ್ನೇ ವ್ಯಾಪಿಸಿದೆ. ಇದ್ದಕ್ಕಿದ್ದಂತೆ ಕಾರ್ಖಾನೆ­ಗಳಲ್ಲಿ ದುಡಿಯಲು ಕಾರ್ಮಿಕರ ಅಗತ್ಯ ಹೆಚ್ಚ­ತೊ­ಡಗಿತು. ಹಳ್ಳಿಯಿಂದ ಬಂದ ಅನಕ್ಷರಸ್ಥರಿಗೆ ಬದಲಾಗಿ ಓದಿದ ಹಾಗೂ ಕೈಗಾರಿಕೆಗಳಲ್ಲಿ ದುಡಿಯಲು ಬೇಕಾದ ಕುಶಲತೆಯನ್ನು ಹೆಚ್ಚಿಸಿ­ಕೊಂಡ ಜನರಿಗೆ ಬೇಡಿಕೆ ಹೆಚ್ಚತೊಡಗಿತು. ಅಷ್ಟೇ ಅಲ್ಲದೆ ಒಂದು ವಯೋಮಿತಿಯ ಮಕ್ಕಳು ಒಂದು ಬ್ಯಾಚ್ ಆಗಿ ಶಿಕ್ಷಣ ಪಡೆದು ಹೊರ ಬರುವಂತೆ ನೋಡಿಕೊಳ್ಳಲಾಯಿತು. ಇದರಿಂದ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಮತ್ತು ನಿವೃತ್ತಿ ಹೊಂದುವಾಗ ಕೈಗಾರಿಕೆಗಳ ಆಡಳಿತದ ದಾರಿ ಸುಗಮವಾಯಿತು. ಬ್ರಿಟನ್ನಿನ ರಾಜ ಮನೆತನವೂ ಈ ಕಾರಣಕ್ಕಾಗಿ ಶಿಕ್ಷಣವನ್ನು ಸಾರ್ವತ್ರೀಕರಿಸಲು ಮುಂದಾಯಿತು.
ಇಂತಹ ದೊಡ್ಡ ಲಾಭವಿಲ್ಲದೆ ಮೇಲ್ವರ್ಗದ ಸ್ವತ್ತಾದ ಓದು ಬರಹವನ್ನು ಆಳುವ ವರ್ಗ, ಜನಸಾ­ಮಾನ್ಯರಿಗೆ ತೆರೆದಿಡುತ್ತಿರಲಿಲ್ಲ. ಅದರ ಪರಿಣಾ­ಮ­ವಾಗಿ ಮಧ್ಯಮ ವರ್ಗದ ಹುಟ್ಟನ್ನು ಮೇಲ್ವರ್ಗ ನಿರೀಕ್ಷಿಸಿರಲಿಲ್ಲ. ಹಾಗೂ ಅದರ ಅರಿವಿಲ್ಲದೆ ಯೂರೋಪು ತನ್ನ ಸಾಂಪ್ರದಾಯಿಕ ಊಳಿಗಮಾನ್ಯ ವ್ಯವಸ್ಥೆಯನ್ನು ಕಳೆದುಕೊಳ್ಳಲು ಅನುಕೂಲ ಮಾಡಿಕೊಟ್ಟಿತು. ಬ್ರಿಟನ್ನಿನಲ್ಲಿ ೧೮೭೦ ರಲ್ಲಿ ಫಾಸ್ಟರ್ ಎಜುಕೇಷನ್ ಆ್ಯಕ್ಟ್ ನಿಂದ ಪ್ರಾಥಮಿಕ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿತು. ಅಂದರೆ ಶಿಕ್ಷಣವನ್ನು ರೂಪಿಸುವ ಜವಾಬ್ದಾರಿಯನ್ನು ರಾಜ್ಯ ನಿರ್ಧರಿಸು­ವುದು ರೂಢಿಗತವಾಗಿ ಬೆಳೆದು ಬಂದಿದೆ ಎಂದು ಸ್ಪಷ್ಟವಾಗುತ್ತದೆ. ಸುಪ್ರೀಂಕೋರ್ಟ್ ತೀರ್ಮಾನದ ಸಂದರ್ಭದಲ್ಲಿ ಈ ಅಂಶವನ್ನು ಗಮನಿಸಬೇಕಾಗಿದೆ.
ಈ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಬ್ರಿಟಿಷರು ಪರಿಚಯಿಸಲಾಗಿ ಬಿಟನ್ನಿನ ಮಾದರಿಯಲ್ಲೇ ಆಳುವ ವರ್ಗಕ್ಕೆ ಅಗತ್ಯವಾದ ರೀತಿಯ ಶಾಲಾ ಪದ್ಧತಿ ಭಾರತವನ್ನೂ ಹೊಕ್ಕಿತು. ಅಂದು ಭಾರತ­ದಲ್ಲಿ ಬ್ರಿಟಿಷರಿಗೆ ಬೇಕಾದುದು ಕಾರ್ಮಿಕರಾ­ಗಿರಲಿಲ್ಲ. ಬ್ರಿಟಿಷ್ ಭಾರತ ಕೈಗಾರಿಕೆಯಲ್ಲಿ ಮುಂದೆ ಬರಲು ಸಾಧ್ಯವಾಗಲೇ ಇಲ್ಲ. ಆ ನಂತರವೂ ಭಾರತ ಕೈಗಾರಿಕಾ ಕ್ರಾಂತಿಯನ್ನು ಕಾಣಲೇ ಇಲ್ಲ. ಆದ್ದರಿಂದ ಶಿಕ್ಷಣದ ಉದ್ದೇಶ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ದುಡಿಯುವ ಕಾರಕೂನರನ್ನು ಹುಟ್ಟುಹಾಕುವುದಾಗಿತ್ತು. ಹಾಗಾಗಿ ಅದಕ್ಕೆ ತಕ್ಕ ವಿಷಯಗಳನ್ನೂ, ಭಾಷೆ­ಯನ್ನೂ ರೂಪಿಸಲಾಯಿತು. ಭಾರತದಲ್ಲಿ ಶಿಕ್ಷಣ ಮಾಧ್ಯಮವನ್ನು ಕುರಿತಾದ ಚರ್ಚೆ ಹತ್ತೊಂಬ­ತ್ತನೆ ಶತಮಾನದ ಆದಿಭಾಗದಲ್ಲ್ಲಿ ತೀವ್ರವಾ­ಗಿತ್ತು.
ಆ ಸಮಯದಲ್ಲಿ ಕಂಡುಕೊಂಡ ಮೆಕಾಲೆ ಸೂತ್ರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲೂ, ಉನ್ನತ ಶಿಕ್ಷಣವನ್ನು ಇಂಗ್ಲಿಷ್ನಲ್ಲೂ ಕೊಡಲು ತೀರ್ಮಾನಿಸಲಾಯಿತು. ವಸಾಹತುಶಾಹಿ ತನ್ನೆಲ್ಲಾ ಹಿತಾಸಕ್ತಿಗಳನ್ನು ಇರಿಸಿಕೊಂಡಾಗಲೂ, ಸ್ಥಳೀಯ ಭಾಷೆಯನ್ನು ಕೈ ಬಿಡುವ ಹಂತಕ್ಕೆ ಯೋಚಿಸಲು ಸಾಧ್ಯವಾಗಿರ­ಲಿಲ್ಲ. ವಾಸ್ತವವಾಗಿ ಸ್ಥಳೀಯ ಭಾಷೆಗಳನ್ನು ಕಲಿತು ಕಿಟ್ಟೆಲ್‌ರಂತಹವರು ನಿಘಂಟನ್ನು ಬರೆದು ಆ ಮೂಲಕ ದೇಶಿ ಭಾಷಾ ಜ್ಞಾನವನ್ನು ಹೀರಲು ಪ್ರಯತ್ನಿಸಿದರು. ಇಂದು ವಸಾಹತು ಭಾಷೆಗಾಗಿ ನಮ್ಮ ಭಾಷೆಯನ್ನೇ ಬಲಿ ಕೊಡಲು ಹೊರಟಿದ್ದೇವೆ.
ಇನ್ನು ಸ್ವಾತಂತ್ರ್ಯಾ ನಂತರ ರಾಷ್ಟ್ರೀಯತೆಯ ಭಾವನೆಗಳನ್ನು ಬೆಳೆಸುವ ಶಿಕ್ಷಣವನ್ನು ರೂಪಿ­ಸುವ ಪ್ರಯತ್ನ ಬೆಳೆದು ಬಂದಿತು. ಅಂದರೆ ಸರ್ಕಾರ ಅಥವಾ ಆಳುವ ವರ್ಗ ತನ್ನ ನಿರೀಕ್ಷೆಗೆ ತಕ್ಕ ಸಮಾಜವನ್ನು ಶಿಕ್ಷಣದ ಮೂಲಕ ರೂಪಿ­ಸುತ್ತಾ ಹೋಗುತ್ತದೆ ಎಂಬ ವಾದಕ್ಕೆ ಅಪವಾ­ದವಿಲ್ಲವೆಂಬಂತೆ ಭಾರತದಲ್ಲೂ ಪಠ್ಯವನ್ನು ರೂಪಿ­ಸಿಕೊಂಡಿದೆ. ಭಾರತದ ಪ್ರಜಾಪ್ರಭುತ್ವ ಸರ್ಕಾರಕ್ಕೆ ತಕ್ಕಹಾಗೆ ತಗ್ಗಿಬಗ್ಗಿ ನಡೆಯುವ ಸಮಾಜವನ್ನು ರೂಪಿಸಲು ಶಿಕ್ಷಣವನ್ನು ಬಳಸು­ತ್ತದೆ. ಅದರಲ್ಲಾದ ಭ್ರಷ್ಟತೆಯನ್ನು ಪ್ರಶ್ನಿಸಲಾ­ಗದ ಮನಸ್ಥಿತಿ ಅಲ್ಲಿ ನಿರ್ಮಾಣವಾಗಿರುತ್ತದೆ. ವಸಾಹತೋತ್ತರ ನೆರಳು ಬಿಡದಂತೆ  ಅನುಸರಿಸಿಕೊಂಡು ಬಂದಿದೆ.
ತೊಂಬತ್ತರ ದಶಕದ ಹೊತ್ತಿಗೆ ಬೆಳೆಯ­ಲಾರಂಭಿಸಿದ ಐ.ಟಿ ಉದ್ದಿಮೆ ಜನರನ್ನು ತನ್ನ ಕಡೆಗೆ ಎಳೆದುಕೊಳ್ಳಲಾರಂಭಿಸಿತು. ಜನ ಮುಗಿ­ಬಿದ್ದು ಕೈಗಾರಿಕೆಗಳಿಗೆ ಅಗತ್ಯವಾದ ಎಂಜಿನಿ­ಯರಿಂಗ್ ಕೋರ್ಸ್ ಗಳನ್ನು ಓದತೊಡಗಿದ್ದು, ಭಾರತದ ಸಮಾಜ, ಆರ್ಥಿಕತೆ, ಸಂಸ್ಕೃತಿ ಎಲ್ಲವೂ ಆ ದಿಕ್ಕಿಗೇ ತನ್ನನ್ನು ಹೊಂದಿಸಿಕೊಳ್ಳತೊಡಗಿದೆ. ಎಂಜಿನಿಯರಿಂಗ್ ಕೋರ್ಸ್ ಅನ್ನು ಇಂಗ್ಲಿಷ್ ನಲ್ಲಿ ರೂಪಿಸಲಾಗಿ, ಆ ಮೂಲಕ ಬಹು ದೊಡ್ಡ ಬದುಕು ಕಟ್ಟಿಕೊಳ್ಳುವ ಚಾಲನೆ ದೊರಕಿದಾಗ ಅದರ ಹೆಗ್ಗಳಿಕೆಗೆ ಇಂಗ್ಲಿಷ್ ಕಾರಣವೆಂದು ಭ್ರಮಿಸಲಾಗಿದೆ. ಅದರಲ್ಲೂ ವಿದೇಶಗಳಿಗೆ ಹರಿದು ಹೋದ ದುಡಿಯುವ ವರ್ಗ ಇಂಗ್ಲಿಷ್ ಭಾಷಾ ವ್ಯಾಮೋಹವನ್ನು ಮತ್ತಷ್ಟು ಬಲಗೊ­ಳಿಸಿತು.
ಇಲ್ಲೆಲ್ಲಾ ವ್ಯಕ್ತಿಯ ಬೆಳವಣಿಗೆಯನ್ನು ಅವನು ತೆಗೆದುಕೊಳ್ಳುವ ಸಂಬಳದ ಮೇಲೆ ಅಳೆಯಲಾ­ರಂ­ಭಿಸಿತು. ಮಾರುಕಟ್ಟೆಯಲ್ಲಿ ಇಂಗ್ಲಿಷ್ ಭಾಷೆಗೆ ಬೇಡಿಕೆ ಹೆಚ್ಚಲು ಕಾರಣವಾಯಿತು. ಜಾಗತೀಕರಣದ ನಂತರ ಇಂಗ್ಲಿಷ್ ಭಾಷೆಯನ್ನು ಅನಿವಾರ್ಯವೇನೋ ಎನ್ನುವಂತೆ ಭಾವಿಸಿ ಜನ ಪಡುತ್ತಿರುವ ಪಡಿಪಾಟಲು ಹೇಳತೀರದು.
ಜನರ ಈ ದೌರ್ಬಲ್ಯದ ಜಾಡು ಹಿಡಿದು ಬಂಡವಾಳಗಾರರು ತಮ್ಮ ಕೈಗಾರಿಕಾ ಅಗತ್ಯ­ವನ್ನು ನೀಗಿಸಿಕೊಳ್ಳುವುದೂ ಅಲ್ಲದೆ ಶಿಕ್ಷಣದ ಮೂಲಕವೂ ಲಾಭ ಮಾಡಲು ಮುಂದಾದರು. ಹೀಗೆ ಶಿಕ್ಷಣವನ್ನು ಬಂಡವಾಳವಾಗಿಸಿಕೊಳ್ಳಲು ಹೊಸ ಬಂಡವಾಳಗಾರ ವರ್ಗ ಹುಟ್ಟಿಕೊಂಡಿದೆ. ಹೀಗೆ ಶಿಕ್ಷಣವನ್ನೇ ಬಂಡವಾಳವಾಗಿಸಿಕೊ­ಳ್ಳುವು­ದರ ಹಿಂದೆ ಜಾಗತೀಕರಣದ ಅಬ್ಬರವನ್ನಂತೂ ಕಡೆಗಣಿಸಲಾಗದು. ಇದೆಲ್ಲವೂ ಶಿಕ್ಷಣದ ಖಾಸಗೀ­ಕರಣಕ್ಕೆ ತೆರುತ್ತಿರುವ ಬೆಲೆಯಾಗಿದೆ. ಶಿಕ್ಷಣ ಬೇಡಿಕೆ ಅಗತ್ಯದ ಆಧಾರದ ಮೇಲೆ ನಡೆಯುವ ಮಾರುಕಟ್ಟೆಯ ಸರಕಾಗಿರುವಾಗ ತನಗಿಷ್ಟ ಬಂದ ವಸ್ತುವನ್ನು ಕೊಳ್ಳುವುದು ಗ್ರಾಹಕನ ಹಕ್ಕೆಂದು ಭಾವಿಸಬೇಕಾಗಿದೆ. 
ಈ ಅತಿರೇಕಕ್ಕೆ ಹೋಗುವ ಎಲ್ಲಾ ನಿರೀಕ್ಷೆ ಇದ್ದರೂ ಯಾರೂ ಇಷ್ಟು ಬೇಗನೆ ಸ್ಥಳೀಯ ಸಂಸ್ಕೃತಿ ಅದರ ದ್ಯೋತಕವಾದ ಸ್ಥಳೀಯವಾದ ಭಾಷೆಯ ಅಸ್ತಿತ್ವಕ್ಕೆ ಕುತ್ತು ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಅದರಲ್ಲೂ ಭಾರತದಂತಹ ಬಹು ಸಂಸ್ಕೃತಿಯ ನಾಡಿನಲ್ಲಿ ಅದರ ರಕ್ಷಣೆಗೆ ನಿಲ್ಲಬೇಕಾದ ನ್ಯಾಯಾಲಯ ಕಾನೂನಿನ  ಪರಿ­ಭಾಷೆಯಲ್ಲಿ ಮಾತೃಭಾಷೆ, ಮೂಲಭೂತ ಹಕ್ಕು, ಇವುಗಳನ್ನು ಮುಂದುಮಾಡಿ ಇಂಗ್ಲಿಷನ್ನು ಸರ್ವೋಚ್ಚಗೊಳಿಸುವ ತೀರ್ಮಾನ ಯಾವುದೇ ಶಿಕ್ಷಣ ತಜ್ಞನಿಗೆ ಆಘಾತವನ್ನುಂಟುಮಾಡುತ್ತದೆ. ಕೋರ್ಟ್‌ ಮೆಟ್ಟಿಲನ್ನು ಹತ್ತಿದ ಜನ ಶಿಕ್ಷಣ ತಜ್ಞರಾಗಲಿ, ಭಾಷಾ ತಜ್ಞರಾಗಲಿ, ಮಕ್ಕಳ ಮನಸ್ಸನ್ನು ಅರಿಯಬಲ್ಲ ಮನಶಾಸ್ತ್ರಜ್ಞರಾಗಲಿ ಆಗದೆ ಖಾಸಗಿ ಶಾಲೆಗಳ ಮಾಲೀಕರಾಗಿದ್ದಾರೆ. ಇಂತಹ ಬಂಡವಾಳಗಾರರಲ್ಲಿ ಕೈಗಾರಿಕೋದ್ಯಮಿ­ಗಳು, ಮಂತ್ರಿಗಳು, ಅಧಿಕಾರಿಗಳು, ಮಠಗಳೂ ಸೇರಿಹೋಗಿದ್ದಾರೆ. ಉಳಿಸಬೇಕಾದವರೇ ಮಾರಲು ಹೊರಟಾಗ ನ್ಯಾಯಾಲಯವಾ­ದರೂ ಇನ್ನೆಂತಹ ತೀರ್ಮಾನವನ್ನು ನೀಡಲು ಸಾಧ್ಯ. 
ಈ ಖಾಸಗಿ ಶಾಲೆಯ ಸಂಘಟನೆಗಳ ನಾಯಕರ ಮಾತು ತೋಳ–ಕುರಿಯ ವಾದ­ದಂತೆ ಕಾಣುತ್ತದೆ. ಪ್ರಾಥಮಿಕ ಹಂತದಲ್ಲಿ ಶಾಲೆಗೆ ಸೇರುವ ಮಗುವಿನ ಮತ್ತು ಪೋಷಕರ ಹಕ್ಕನ್ನು ಎತ್ತಿಹಿಡಿಯುತ್ತಾ ಸಂವಿಧಾನದ ವಿಧಿ­ವಿಧಾನಗಳನ್ನು ಉಲ್ಲೇಖಿಸುವುದು ಒಂದು ಯೋಜನಾಬದ್ಧ ಹುನ್ನಾರವೇ ಆಗಿದೆ. ಏಕೆಂದರೆ ಐದನೇ ತರಗತಿಯ ಮಗುವಿಗೆ ಆಯ್ಕೆ ಇರುವು­ದಾದರೂ ಹೇಗೆ ಸಾಧ್ಯ. ತಂದೆ ತಾಯಿ­ಗ­ಳಾದರೂ ಅವರ ಮುಂದಿನ ಹಲವು ಒತ್ತಡಗಳಿಗೆ ಮಣಿದು ಯಾವುದೋ  ನಿರ್ಧಾರಕ್ಕೆ ಬಂದಿರು­ತ್ತಾರೆ. ಅವರು ತಮ್ಮ ಮಗುವಿನ ಒಳಿತೆಂದು ಭಾವಿಸಿದ ಭ್ರಮೆಯೂ ಆಗಿರಬಹುದು. ಯಾವುದೋ ಪ್ರವಾಹಕ್ಕೆ ಸಿಕ್ಕಿಹೋಗಿರುತ್ತೇವೆ.  ಸಮಾಜ ತಲುಪಬೇಕಾದ ಗುರಿ ಯಾವುದೆಂಬ ಅರಿವು, ದೂರದೃಷ್ಟಿಯನ್ನು ಕಟ್ಟಿಕೊಡುವವ­ರಾರು. ನಮ್ಮೂರ  ಬೀದಿಯಲ್ಲಿ ಅರ್ಥ ಕಾಣದ ಆಕ್ಸಫರ್ಡ್, ಕೇಂಬ್ರಿಜ್‌ ಶಾಲೆಗಳು ತಮ್ಮ ಲಾಭಕ್ಕಾಗಿ ಇಂತಹ ಯಾವುದೇ ವಾದವನ್ನು ಮುಂದೆ ಮಾಡಲೂ ಸಾಧ್ಯ.
ಇನ್ನು ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ಅದನ್ನು ಉಳಿಸಿ ಬೆಳೆಸಿದವರಲ್ಲಿ ವಿದ್ಯಾವಂತ ಮಧ್ಯಮ ವರ್ಗದ ಪಾತ್ರ ಬಹು ಮುಖ್ಯವಾಗು­ತ್ತದೆ. ಅವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಂಡವಾಳಕ್ಕೆ ಇಂಗ್ಲಿಷ್ ಭಾಷೆಯ ಹಮ್ಮು ಬಿಮ್ಮು ಬೇಕಾಗುತ್ತದೆ. ಈಗಾಗಲೇ ನಗರದಲ್ಲಿ ನೆಲೆಸಿ ನೆರಳಿನಲ್ಲಿ ಬದುಕು ಕಂಡವರಿಗೆ ಇಂಗ್ಲಿಷನ್ನು ಜೊತೆಯಲ್ಲಿ ವ್ಯಾನಿಟಿ ಬ್ಯಾಗ್‌ ಆಗಿಸಿ­ಕೊಂಡು ಕನ್ನಡ ಬಾರದವರಂತೆ ವರ್ತಿಸು­ವುದು ಹೊಸದೇನಲ್ಲ.
ಅವರ ಮಕ್ಕಳು ಪುಸ್ತಕವೇ ಸರ್ವಸ್ವವಾಗಿ ಪರೀಕ್ಷೆಗಳಲ್ಲಿ ಅಂಕಗಳನ್ನು ಪಡೆದು ಪ್ರತಿಭಾವಂತರೆನಿಸಿಕೊಳ್ಳುವುದು ಉಳಿ­ದ­ವರಿಗೆ ಅವರು ಆದರ್ಶವಾಗಿ ಕಾಣುವುದು ಒಂದ­ಕ್ಕೊಂದು ಸೇರುತ್ತಾ ಇಂತಹ ಸ್ಥಿತಿಗೆ ಕಾರಣ­ವಾಗಿದೆ. ಹಳ್ಳಿಯ ಮಕ್ಕಳ ಪರವಾಗಿ ಮಾತನಾ­ಡುವ ನೈತಿಕ ಹಕ್ಕೂ ವಿದ್ಯಾವಂತ ಮಧ್ಯಮ ವರ್ಗಕ್ಕೆ ಇಲ್ಲದಂತಾಗಿದೆ. ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಶಕ್ತಿಯುಳ್ಳ ಕೆಲವರು ಅವರಲ್ಲಿ ಅಪವಾದವಾಗುತ್ತಾರೆ.
ಶಿಕ್ಷಣದ ಜವಾಬ್ದಾರಿಯನ್ನು ಸಂವಿಧಾನ, ರಾಜ್ಯ­ಗಳಿಗೆ ಕೊಡುವಾಗ ಅದರ ಉದ್ದೇಶ ಸ್ಥಳೀಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳವುದೇ ಆಗಿತ್ತು. ಒಂದು ರಾಜ್ಯದ ಸಂಸ್ಕೃತಿ ಆ ರಾಜ್ಯದ ಭಾಷೆಯನ್ನೂ ಒಳಗೊಂಡಿರುತ್ತದೆ. ಭಾಷೆಗಾಗಿ ಭಾಷೆಯನ್ನು ಉಳಿಸುವುದಕ್ಕಿಂತ ಅದನ್ನಾಡುವ ಜನರ ಹಿತಾಸಕ್ತಿಯಿಂದ ಭಾಷೆಯನ್ನು ಉಳಿಸಬೇ­ಕಾಗಿರುತ್ತದೆ. ಆ ಭಾಷೆ ಆ ಪರಿಸರದ ಭಾಷೆ­ಯಾ­­ಗಿರುತ್ತದೆ. ಶಿಕ್ಷಣ ಇಂದು ಸಾಂಸ್ಥಿಕ ರೂಪ­ವನ್ನು ಪಡೆದು ಆ ಮೂಲಕವೇ ವ್ಯಕ್ತಿಯ ಬದು­ಕಿಗೆ ಮಾರ್ಗ ತೋರುತ್ತಿರುವುದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸಲಾಗುವ ಭಾಷೆಯ ಮೇಲೆ ಸಮಾಜ ನಿಗಾ ವಹಿಸಲೇಬೇಕಾಗುತ್ತದೆ.  ಇಲ್ಲ­ವಾ­ದಲ್ಲಿ ನಮ್ಮ ಪರಿಸರವನ್ನು ತಮ್ಮ ಅನು­ಕೂಲಕ್ಕೆ ರೂಪಿಸಿಕೊಳ್ಳಲು ದೈತ್ಯ ಶಕ್ತಿಗಳು ಸದಾ ಬೆನ್ನು ಹತ್ತಿರುತ್ತವೆ. ದೇಶವೆಲ್ಲಾ ಇಂಗ್ಲಿಷ್ ಭಾಷೆಗೆ ಗುಲಾಮರಾಗುವುದರಿಂದ ಇಂಗ್ಲಿಷ್ ಮಾರುಕಟ್ಟೆ ಮತ್ತಷ್ಟು ಕೊಬ್ಬುತ್ತದೆ. ಶಾಲೆಗಳ ಮೂಲಕ ಜಾಗತಿಕ ಮಾರುಕಟ್ಟೆ ತನ್ನ ಹಿಡಿತವನ್ನು ಸಮಾಜದ ಮೇಲೆ ಸಂಪೂರ್ಣ­ವಾಗಿ ಸಾಧಿಸಲು ಸಾಧ್ಯವಾಗುತ್ತದೆ. ಇಂಗ್ಲಿಷ್ ಭಾಷೆಯ ಆಯ್ಕೆ ಆಯ್ಕೆಯಾಗಿ ಉಳಿದಿಲ್ಲ.  ಮಾರುಕಟ್ಟೆ ನಮ್ಮ ಆಯ್ಕೆಯನ್ನು ನಿಯಂತ್ರಿಸುತ್ತಿದೆ.
ಕರ್ನಾಟಕ ಸರ್ಕಾರ ಇವತ್ತು ಪರಿತಪಿಸುತ್ತಾ ಪರಿಹಾರ ಮಾರ್ಗಗಳನ್ನು ಹುಡುಕತೊಡಗಿದೆ. ಆದರೆ ಶಿಕ್ಷಣದ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡುವ ಹಿನ್ನೆಲೆಯ  ಭ್ರಷ್ಟತೆಗೆ ಅಥವಾ ದೌರ್ಬಲ್ಯಕ್ಕೆ ಬೆಲೆತೆರಬೇಕಾಗಿದೆ. ಪ್ರಾಥಮಿಕ ಶಿಕ್ಷಣದ ಹಿನ್ನೆಲೆಯಲ್ಲಿ ಆರಂಭವಾದ ಸಮಾಜ ವಿರೋಧಿ ನಿಲುವಿನ ಹಿನ್ನೆಲೆಯಲ್ಲಿ ಒಟ್ಟಾರೆ ಶಿಕ್ಷಣವನ್ನು ಪುನರ್ ಪರಶೀಲಿಸಬೇಕಾಗಿದೆ.  ಪ್ರಜಾಪ್ರತಿನಿಧಿ ಸರ್ಕಾರ ಇನ್ನಾದರೂ ತನ್ನ ನಿಲುವುಗಳಲ್ಲಿ ಯಾರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕಾಗಿದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳ ಬೇಕಾಗುತ್ತದೆ.
ಮಾತೃ ಭಾಷೆಯ ಕಲ್ಪನೆಯನ್ನು ಕಟ್ಟಿಕೊಟ್ಟ ಈ ನುಡಿಗಳಿಗೆ ಬೆಲೆ ಎಲ್ಲಿ?
ಮೊಲೆವಾಲಿನೊಡಗೂಡಿ
ಬಂದನುಡಿ ತಾಯಿನುಡಿ
ಕೊಲೆಗೈದರಮ್ಮನನೆ ಕೊಲಿಸಿದಂತೆ
–ಕುವೆಂಪು (ಕನ್ನಡ ಡಿಂಡಿಮ)

ಆತ್ಮಸಾಕ್ಷಿಯನ್ನು ನುಂಗಿದ ಜಾತೀಯತೆ

Tue, 29th Apr, 2014
ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಅಹಿಂದ ತನ್ನ ಸಾಧ್ಯತೆಗಳನ್ನು ಪ್ರಕಟ­ಪಡಿಸಿದಾಗ ಈವರೆಗಿನ  ಪ್ರಮುಖ ರಾಜಕೀಯ ಹುರಿಯಾಳುಗಳಾದ  ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳನ್ನು ಪಕ್ಕಕ್ಕೆ ಸರಿಸಲು ಸಾಧ್ಯ­ವಾಗಿದ್ದು ದಿಟ.
ಅಹಿಂದದಿಂದ ಹೊರಗುಳಿದ ಒಕ್ಕಲಿಗ  ಲಿಂಗಾಯತ ಮತ್ತು ಬ್ರಾಹ್ಮಣ ಜಾತಿ­ಗಳು ಚಾರಿತ್ರಿಕವಾಗಿ ಎಸಗಿರುವ ನ್ಯಾಯ ಅನ್ಯಾಯಗಳ ಆತ್ಮಾವಲೋಕನ ಮಾಡಿಕೊಳ್ಳ­ಬೇಕಾದ ಅಗತ್ಯ ಇಂದು ಒದಗಿಬಂದಿದೆ. ಅಹಿಂದ  ಕೇವಲ ರಾಜಕೀಯ ಬಲಾಬಲದ ಪ್ರಶ್ನೆಯಾಗದೆ ಹೊಸ ಸಾಮಾಜಿಕ ಮೌಲ್ಯ ಮತ್ತು ಬದುಕಿನ ಮಾರ್ಗಗಳನ್ನು ಹುಟ್ಟುಹಾಕಬೇಕಾಗಿದೆ. ಇಲ್ಲ­ವಾದಲ್ಲಿ ಪ್ರಬಲ ಕೋಮುಗಳು ಕಟ್ಟಿಕೊಂಡ ಜಾತಿ ಬಲಾಢ್ಯದ ವರ್ತನೆಗಳನ್ನೇ ಅಧಿಕಾರಕ್ಕೆ ಬರುವ ಎಲ್ಲಾ ಜಾತಿಗಳು ರೂಢಿಸಿಕೊಳ್ಳುತ್ತವೆ.
ಭಾರತದಲ್ಲಿ ಬ್ರಾಹ್ಮಣ್ಯದಿಂದ ಜಾತಿ ವ್ಯವಸ್ಥೆ ನೆಲಗಟ್ಟಿದೆ ಎಂಬ ದೂರು ಆ ಸಮುದಾಯಕ್ಕೆ ಅಂಟಿದ ಶಾಪವೇ ಆಗಿದೆ. ಚರಿತ್ರೆಯುದ್ದಕ್ಕೂ ಬ್ರಾಹ್ಮಣ್ಯದ ಜಿಡ್ಡುತನ, ಜಾತಿ ಕಾರಣದ ಅವಕಾಶ ರಾಜಕಾರಣ, ಸ್ವಾರ್ಥ, ಮೇಲು ಕೀಳು, ಮಡಿ ಮೈಲಿಗೆಯ ಭಾವನೆಗಳು– ಇವೆಲ್ಲಾ ಶತಮಾನಗಳಿಂದ ಟೀಕೆಗೆ ಒಳಗಾಗಿವೆ. ಚರಿತ್ರೆಯುದ್ದಕ್ಕೂ ಬ್ರಾಹ್ಮಣ ವಿರೋಧಿ ನೆಲೆ­ಯಲ್ಲಿ ಹೋರಾಟಗಳು, ಚಳವಳಿಗಳು ನಡೆದೇ ಇವೆ. ಈ ಎಲ್ಲಾ ಟೀಕೆಗಳ ನಂತರವೂ  ದೇಶದ ಸಂಪತ್ತು ಮತ್ತು ಅಧಿಕಾರದ ಮೇಲಿನ ಬ್ರಾಹ್ಮಣರ ಹಿಡಿತ ಸಡಿಲಗೊಂಡಿಲ್ಲ. ಅದರ ಜೊತೆಗೆ ಆತ್ಮ ವಿಮರ್ಶೆಯಲ್ಲಿ ತೊಡಗಿದ ಬೌದ್ಧಿಕ ವರ್ಗ ತನ್ನ ಸಮುದಾಯದ ಒಳಗಿನ ಹುಳುಕುಗಳನ್ನು ಎತ್ತಿ ಹಿಡಿದು ಅದರ ಸುಧಾರಣಾ ಪ್ರಯತ್ನಗಳನ್ನು ನಡೆಸಿದೆ. ಉದಾ­ಹರಣೆಯಾಗಿ ಸುಮಾರು ಎರಡು ಶತಮಾನಗಳ ಹಿಂದೆ ಸತಿ ಪದ್ಧತಿ, ಮೂರ್ತಿ ಪೂಜೆಗಳ ಬಗ್ಗೆ ಬ್ರಹ್ಮ ಸಮಾಜದ ಖಂಡನೆ ಆತ್ಮಾವ­ಲೋಕನದಲ್ಲಿ ಹುಟ್ಟಿದ ಹೋರಾಟಗಳೇ ಆಗಿವೆ.
ಆತ್ಮ ವಿಮರ್ಶೆ ಮಾಡಿಕೊಳ್ಳಲಾರದ ಸಮುದಾಯ­ಗಳಿಗೆ ಅವು ಎಸಗಿರಬಹುದಾದ ಅಪರಾಧದ ಎಚ್ಚರವೂ ಇರುವುದಿಲ್ಲ. ದಲಿತ ಚಳವಳಿ ಜಾತಿ ವ್ಯವಸ್ಥೆಯನ್ನು ಜಾಡಿಸಿದಾಗ ಅದರ ಹಿಂದೆ ತೂಗಾಡುವ ಪ್ರೇತರೂಪಗಳಲ್ಲಿ ಭೂ ಜಮೀನುದಾರರೂ ಕಾಣಿಸಿಕೊಳ್ಳುತ್ತಾರೆ. ಇಡೀ ಭಾರತವನ್ನು ಕುರಿತು ಹೇಳುವಾಗ ಭೂ ಜಮೀನುದಾರ ವರ್ಗವೆಂಬ ಸಾರ್ವತ್ರಿಕವಾದ ಪದವೊಂದನ್ನು ಬಳಸಿದರೂ ಇಲ್ಲಿ ಇದು ಕರ್ನಾಟಕದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಅನ್ವಯಿಸುತ್ತದೆ. ಗೌಡ, ಹೆಗ್ಗಡೆ, ಭಂಟ, ಪಟೇಲ, ರೆಡ್ಡಿ ಇತ್ಯಾದಿ ಜಾತಿಸೂಚಕ ನಾಮಧೇಯಗಳಿಂದ ಕರೆಸಿ ಕೊಳ್ಳುವವರು ಭೂ ಒಡೆತನ ಹೊಂದಿರುವ ಜಾತಿ­ಗಳು. ಲಿಂಗಾಯತರಲ್ಲಿ ಬಹು ಸಂಖ್ಯಾತರು ರೈತರೇ . ಆದರೂ ಉಳಿದ ಹಲವು ಕಸುಬಿನ ಮೂಲದಿಂದ ಬಂದವರೂ ಇದ್ದಾರೆ. ಆದರೂ ಅದು ಒಂದು ಜಾತಿಯಾಗಿ ಕಾಣಿಸಿಕೊಳ್ಳುವುದ­ರಿಂದಲೇ ರಾಜಕೀಯ ಶಕ್ತಿಯಾಗಿ ಅಧಿಕಾರಕ್ಕೆ ಬರಲು ಕಾರಣವಾಗಿದೆ ಎನ್ನುವುದರಲ್ಲಿ ಅನು­ಮಾನವಿಲ್ಲ.
ಹಾಗಾಗಿಯೇ ಕರ್ನಾಟಕದಲ್ಲಿ ಇಪ್ಪತ್ತ ಮೂರು  ಜನ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳಲ್ಲಿ ಹೆಚ್ಚು ಮಂದಿ ಲಿಂಗಾಯತರು ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಹನ್ನೆರಡನೆ ಶತಮಾನದ ವಚನ ಚಳವಳಿ ಸಮಾಜದ ಅಂಕು ಡೊಂಕುಗಳನ್ನು ವಿಮರ್ಶೆಗೆ ಒಳಪಡಿಸಿತು. ಆದರೆ ಜಾತಿಯ ಕಡೆಗೆ ದಾಪುಗಾಲು ಹಾಕಿದಾಗ ವೈಚಾರಿಕ ಪ್ರಶ್ನೆಗಳು ಗಾಳಿಕೋಲುಗಳಾದವು. ಉಳಿದ ಸಮುದಾಯಗಳನ್ನು ಮೀರಿ ಏರು­ನಡೆದಂತೆ ಜಾತಿ ವ್ಯವಸ್ಥೆಯ ವಕ್ರತೆಗಳನ್ನು ತನ್ನದಾಗಿಸಿಕೊಂಡಿತು. ತಲೆಯೆತ್ತಿದ ಮಠಗಳು ಜಾತಿ ರಾಜಕಾರಣಕ್ಕೆ ಹಿಡಿದ ಕೊಡೆಗಳಾದವು.
ಒಕ್ಕಲುತನವೇ ಜಾತಿ ಸೂಚಕವಾಗಿ ಕರೆಸಿ­ಕೊಳ್ಳುವ ಒಕ್ಕಲಿಗರು ಹಳ್ಳಿಯ ಮಟ್ಟದ ಜಾತಿ ವ್ಯವಸ್ಥೆಯ ಸ್ಥಿರೀಕರಣಕ್ಕೆ ಪಾಲುದಾರ­ರಾದ­ದ್ದನ್ನು ತನ್ನ ಚರಿತ್ರೆಯ ಆತ್ಮಸಾಕ್ಷಿಯಲ್ಲಿ ಕಂಡು­ಕೊಳ್ಳಬೇಕಾಗಿದೆ. ಭೂಮಿ ಮೇಲಿನ ಒಡೆತನ­ವನ್ನು ಸಾಧಿಸಿದ ಕಾರಣಕ್ಕೆ ಒಕ್ಕಲಿಗರು ಉಳಿದ ಸಮುದಾಯಗಳನ್ನು ತನ್ನ ಅಡಿಯಲ್ಲಿರಿಸಿ­ಕೊಂಡು ಅವರೆಲ್ಲರ ದುಡಿಮೆಯ ಲಾಭವನ್ನು ಪಡೆದುಕೊಳ್ಳುತ್ತಾ ಬಂದಿದೆ. ಅದರ ಭಾಗವಾಗಿ ಅಸ್ಪೃಶ್ಯತೆಯನ್ನು ಗೊಬ್ಬರನೀರು ಹಾಕಿ ಕಾಪಾಡಿಕೊಂಡು ಬಂದಿದೆ. ತಮ್ಮ ಜಾತಿಯ ಸಂಖ್ಯಾ ಬಾಹುಳ್ಯದ ಲಾಭ ಪಡೆದು  ಉಳಿದ  ಸಮುದಾಯಗಳ ಭೂಮಿಯನ್ನು ಕಬಳಿಸುವ ಕೆಲಸ ಶತಮಾನಗಳಿಂದ ನಡೆದಿದೆ.
ಆ ಊರಿನ ಮಟ್ಟಕ್ಕೆ ಯಾರು ಸಣ್ಣ ಪುಟ್ಟ ಜಾತಿಗಳಾಗು­ತ್ತಾರೊ ಅವರ ಭೂಮಿಗಳು ಸಾಲಕ್ಕೆ ಅಡ­ವಿಟ್ಟೋ, ಬಡತನಕ್ಕೆ ಮಾರಬೇಕಾದ ಅನಿವಾರ್ಯ­ತೆ­­ಯನ್ನು ಬಳಸಿಕೊಂಡೋ; ಹತ್ತು ಹಲವು ನೆಪಗಳನ್ನು ಹೇಳುತ್ತಾ ಸುತ್ತಮುತ್ತಲ ಭೂಮಿಯನ್ನು ವಶಪಡಿಸಿಕೊಳ್ಳುತ್ತಾ ಬಂದಿವೆ. ಅದರ ವಿರುದ್ಧ ದನಿ ಎತ್ತುವ ಸ್ಥಿತಿ ಹಿಂದುಳಿದ ಜಾತಿಗಳಿಗಿರದೇ ಹೋದದ್ದು ಕಟುಸತ್ಯ. ಹಾಗೆ ದನಿ ಎತ್ತಿದವರ ಮೇಲೆ ತೋರಿದ ದರ್ಪವನ್ನು ಊಳಿಗಮಾನ್ಯ ವ್ಯವಸ್ಥೆಯ ವಿಕಾರ ರೂಪ­ವೆಂದು ಅರ್ಥವಾಗಲು ಮಾರ್ಕ್ಸ್‌ವಾದ, ಸಮಾಜ­ವಾದದಂತಹ ಚಿಂತನೆಗಳು ನೆರ­ವಾದವು. ಭೂ ಒಡೆತನದ ಕಾರಣದಿಂದಾಗಿ ರೂಪುಗೊಂಡ ಮೇಲು ಕೀಳಿನ ಭಾವನೆ ಇದು ಎಂದು ತೋರಿಸಿಕೊಡಲು ಆಧುನಿಕವಾದ ಚಿಂತನೆಗಳಿಗೆ ಸಾಧ್ಯವಾಗಿದೆ. ಆದರೆ ಆ ದಿಕ್ಕಿನಲ್ಲಿ ಬದಲಾವಣೆ ಸಾಧ್ಯವಾಗಲಿಲ್ಲ.
ಇಪ್ಪತ್ತನೆ ಶತಮಾನದಲ್ಲಿ ಊಳಿಗಮಾನ್ಯ ವ್ಯವಸ್ಥೆಯನ್ನು ವಿರೋಧಿಸಿ ಮಾತನಾಡ ತೊಡಗಿ­ದಾಗ ಜಾತಿನೆಲೆಯ ಭಾರತ ಸಮಾಜಕ್ಕೆ ಅದು ಸರಿಯಾಗಿ ಅರ್ಥವಾಗಲು ಸಾಧ್ಯವಿರಲಿಲ್ಲ. ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ರಾಷ್ಟ್ರ ನಾಯಕರಿಗೆ ಅರ್ಥವಾದರೂ ಭೂಮಿ ಇಲ್ಲದ­ವರ ಪರವಾಗಿ ಮಾತನಾಡಲು ಅವರಿಗಿನ್ನೂ ಬೇಕಾಗಿರಲಿಲ್ಲ. ಬ್ರಿಟಿಷ್ ವಿರೋಧವನ್ನು ಮುಖ್ಯ ಗುರಿಯಾಗಿಸಿಕೊಂಡ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಅಸಮತೋಲನಗಳ ಕಡೆ ಗಮನ ಹರಿಸಲಿಲ್ಲ. ಗಾಂಧೀಜಿ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಕಟ್ಟಿಕೊಂಡರು. ಜಾತಿ ವ್ಯವಸ್ಥೆ­ಯಲ್ಲಿ ಶ್ರಮ ವಿಭಜನೆಯ ತತ್ವ ಅಡಗಿದೆ­ಯೆಂದು ಪುರಾತನ ವಾದವನ್ನೇ ನಂಬಿದರು. ಜಾತಿ ಎನ್ನುವುದು ಶೋಷಣೆಯ ನೆಲೆಯಲ್ಲಿ ಗಟ್ಟಿಗೊಂಡ ಸಾಮಾಜಿಕ ರಚನೆ ಎಂದು ಮನಗಾಣಲಿಲ್ಲ.
ಶೋಷಿತ ಸಮುದಾಯದ ಪರವಾಗಿ ದನಿ ಎತ್ತಿದ ಬಾಬಾ ಸಾಹೇಬರಿಗೆ ಹಳ್ಳಿಗಳು ಜಾತಿ ಸಂಪ್ರದಾಯಗಳಿಂದ ಕೊಳೆತು ನಾರುವ ಕೂಪಗಳಾಗಿ ಕಂಡವು. ಸ್ವಾತಂತ್ರ್ಯಾನಂತರದ ಭಾರತ  ಪ್ರಜಾಪ್ರಭುತ್ವ­ವನ್ನು ಒಪ್ಪಿಕೊಳ್ಳಲಾಗಿ ಬಹುಸಂಖ್ಯಾತರ ದನಿಗೆ ಶಕ್ತಿನೀಡಿತು. ಸಹಜವಾಗಿ ಮೊದಲ ಹಂತದಲ್ಲಿ ಪ್ರಬಲ ಹಾಗೂ ಬಹು ಸಂಖ್ಯಾತ ಕೋಮಿನವರು ರಾಜಕೀಯ ಚುಕ್ಕಾಣಿ ಹಿಡಿದರು. ಸಂವಿಧಾನ ಬಯಸಿದ ಸಮಾಜವಾದಿ ನೆಲೆಯ ಚಿಂತನೆಯ ಒತ್ತಾಸೆಗಳು ಆಗಾಗ ಪುಟಿದೆದ್ದು ಜೀತ ಪದ್ಧತಿ ನಿಷೇಧ ಕಾಯಿದೆ, ಭೂ ಒಡೆತನದ ಮೇಲಿನ ನಿರ್ಬಂಧ, ಉಳುವವನೆ ಭೂ ಒಡೆಯ ಈ ಕಾಯಿದೆಗಳು ಬಂದಾಗ ಭೂ ಮಾಲೀಕ ಜಾತಿಗಳಿಗೆ ಇರುಸು ಮುರುಸೇ ಆಯಿತು.
ಭೂ ಹಂಚಿಕೆಯ ಮೂಲಕ ಸಮ ಸಮಾಜದ ಆದರ್ಶ ಮಾತ್ರ ಹಳೆಯ ಕನಸಾಗಿ ಹಾಗೆ ಮರೆತು ಹೋಯಿತು. ಈ ನಿಟ್ಟಿನಲ್ಲಿ ಕಾಗೋಡಿನಲ್ಲಿ ನಡೆದ ಭೂ ಹೋರಾಟ ಸಮಾಜವಾದಿ ಹೋರಾಟದ ಒಂದು  ಪ್ರಯೋಗ­ವಾಯಿತು. ವಿನೋಬಾ ಭಾವೆಯವರ ಭೂದಾನ ಚಳವಳಿ ದೊಡ್ಡ ಜಮೀನ್ದಾರರಿಗೆ ವರದಾನವೇ ಆಯಿತು. ಇಂತಹ ಹಲವು ಪ್ರಯತ್ನ­ಗಳ ಫಲವಾಗಿ ಆದಿವಾಸಿಗಳು, ದಲಿತರು, ಅಲೆಮಾರಿಗಳಿಗೆ ಸರ್ಕಾರ ಭೂ ಹಂಚುವ ಯೋಜನೆಗಳನ್ನು ರೂಪಿಸಿದೆ. ಇವೆಲ್ಲಾ ಸಣ್ಣ ಪ್ರಮಾಣದಲ್ಲಾದರೂ ಅಭಿ­ನಂದನೀಯವಾದ ಪ್ರಯತ್ನವೆಂದೇ ಹೇಳಬೇಕು.
ಕರ್ನಾಟಕದಲ್ಲಿ ಆರಂಭವಾದ ರೈತ ಸಂಘ ತನ್ನ ಹೋರಾಟದಲ್ಲಿ  ಭೂ ಹಂಚಿಕೆಯನ್ನು ಮಖ್ಯ ಪ್ರಶ್ನೆಯಾಗಿ ಇರಿಸಿಕೊಳ್ಳಲೇ ಇಲ್ಲ. ರೈತರ ಹಿತ ಕಾಪಾಡುವುದು ಅದರ ಉದ್ದೇಶ­ವಾಯಿತು. ಅಲ್ಲಿ ಜಾತಿ ತಾರತಮ್ಯದ ಪ್ರಶ್ನೆ ಮುಂದಾಗಲಿಲ್ಲ. ಗಾಂಧೀ ಮಾದರಿ ಆದರ್ಶ ಹಳ್ಳಿಗಳನ್ನು ಬಯಸಿತು. ಅಂದರೆ ಭೂಮಿಯುಳ್ಳ ರೈತರ ಸಮಸ್ಯೆ ಮುಖ್ಯವಾಯಿತೇ ಹೊರತು ಭೂ ಹೀನರ ಸಮಸ್ಯೆಗೆ ಪರಿಹಾರ ಕಾಣಲಿಲ್ಲ. ಪ್ರಾಂತ್ಯ ರೈತ ಸಂಘ ಕೃಷಿ ಕೂಲಿ ಕಾರ್ಮಿಕರ ಪರವಾಗಿ ನಿಲ್ಲುತ್ತದೆ. ಅಲ್ಲೂ ಜಾತಿ ಹಿನ್ನೆಲೆಯ ತಾರ­ತಮ್ಯದ ಪ್ರಶ್ನೆ ಹಾಗೆ ಉಳಿಯುತ್ತದೆ. ಕೂಲಿ- ದುಡಿಮೆ ಈ ಸಂಬಂಧವಾದ ವಿಚಾರಗಳು ಚರ್ಚಿತವಾಗುತ್ತವೆ, ಪರಿಹಾರಗಳನ್ನೂ ಕೆಲ­ಹಂತಕ್ಕೆ ಪಡೆಯಲು ಸಾಧ್ಯವಾಗಿದೆ. ಈ ಎಲ್ಲಾ ಹೋರಾಟಗಳು, ಚಿಂತನೆಗಳು, ಸುಧಾರಣೆಗಳು ಜಾತಿ ಹಿನ್ನೆಲೆಯ ಶೋಷಣೆಯನ್ನು  ಸಣ್ಣ ಪ್ರಮಾಣದಲ್ಲಾದರೂ ಕಡಿಮೆಯಾಗಿಸಿದೆ ನಿಜ. ಆದರೆ ಶತಮಾನಗಳಿಂದ ಮಾಡಿದ ಗಾಯಗಳನ್ನು ಸುಲಭವಾಗಿ ಅಳಿಸಿಹಾಕಲು ಸಾಧ್ಯವಾಗಿಲ್ಲ.
ದುರಂತವೆಂದರೆ ಹಳ್ಳಿಯಿಂದ ಹೊರ ಬಂದೂ ತಮ್ಮ ಜಾತಿಯ ಮೂಲ ಗುಣವನ್ನು ಬಿಟ್ಟು ಕೊಡಲಾಗದೆ ಅದನ್ನು ರಾಜಕೀಯ ಗುರುತಾಗಿಸಿಕೊಳ್ಳಲಾಗುತ್ತದೆ. ಇದು ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಪ್ರಸಕ್ತ­ದಲ್ಲಿ ನಮ್ಮ ಮುಂದಿರುವ ಸವಾಲು ಇದೇ ಆಗಿದೆ.
ಕರ್ನಾಟಕದ ರಾಜಕೀಯದಲ್ಲಿ ಒಕ್ಕಲಿಗ ಜಾತಿ ಐಡೆಂಟಿಟಿಯನ್ನು ಲಾಭಮಾಡಿಕೊಳ್ಳಲು ಜೆಡಿಎಸ್‌ಗೆ ಸಾಧ್ಯವಾಯಿತು. ಹಾಗೆಯೇ ದೇವೇಗೌಡರು ಅಥವಾ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಸಮಯದಲ್ಲಿ ಅವರ ನಾಮಾಂಕಿತದ ಬಲವನ್ನು ಜಾತಿಯ ಜನ ತಮ್ಮ ಮಟ್ಟದ ರಾಜಕೀಯಕ್ಕೆ ಬಳಸಿಕೊಳ್ಳಲು ಹಿಂದೆ­ಬೀಳಲಿಲ್ಲ. ಉಳಿದವರು ಒಕ್ಕಲಿಗರ ಈ ನಡೆಗೆ ರೋಸಿಹೋಗಿ ಮೊದಲೇ ಒಕ್ಕಲಿಗರು ಅದರ ಜೊತೆಗೆ ಅಧಕಾರವೂ ಸೇರಿದರೆ...ಹೀಗೆ ಮಾತ­ನಾಡಿಕೊಳ್ಳುವುದು ಸಾಮಾನ್ಯವಾದ ವಿಷಯ­ವಾಗಿದೆ. ಇದು ಜಾತಿ ಹಿನ್ನೆಲೆಯ ಸ್ವಭಾವಕ್ಕೆ ಹಿಡಿದ ಕನ್ನಡಿಯಾಗದಂತೆ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ.
ಮೊನ್ನೆಯಷ್ಟೆ ಡಿಕೆ ಶಿವಕುಮಾರ್ ಒಕ್ಕಲಿಗರ ಸಂಘವನ್ನು ಉದ್ದೇಶಿಸಿ ಮಾತನಾಡುತ್ತಾ ಜಾತಿ ಪ್ರತಿನಿಧಿಯಾಗಿ ತನ್ನಲ್ಲಿ ನಾಯಕತ್ವವನ್ನು ಕಾಣಲು ಬಯಸುವುದು; ಇಂತಹ ಚರ್ಚೆಗಳನ್ನು ಕೈಗೆತ್ತಿಕೊಳ್ಳುವಂತೆ ಮಾಡುತ್ತದೆ. ಒಕ್ಕಲಿಗರ ಸಂಘದ ಹುಟ್ಟಿನ ಉದ್ದೇಶಗಳೇ ಮರೆತು ಹೋಗಿವೆ. ೧೯೦೬ರ ಹೊತ್ತಿಗೆ  ಹಿಂದುಳಿದ ಕೃಷಿಕ ಸಮುದಾಯದ ಶೈಕ್ಷಣಿಕ ಬೆಳವಣಿಗೆಗಾಗಿ ಹುಟ್ಟಿದ ಸಂಸ್ಥೆ. ಇದು ಮೈಸೂರು ಪ್ರಾಂತ್ಯದಲ್ಲಿ ನಡೆದ ಹಿಂದುಳಿದ ಚಳವಳಿಯಲ್ಲಿ ಅದರ ಪಾತ್ರ ಬಹು ಮುಖ್ಯವಾಗಿತ್ತು. ಅದು ಇತ್ತೀಚಿನ ದಿನಗಳಲ್ಲಿ ಪಡೆಯುತ್ತಿರುವ ರಾಜಕೀಯ ಸ್ವರೂಪ ಯಾವುದೇ ಜಾತಿ ಸಂಘಟನೆಗಳ ಸಾಲಿಗೆ ಬಂದು ನಿಲ್ಲುತ್ತದೆ, ಮತ್ತು ಚುನಾವಣಾ ರಾಜಕೀಯ­ದಲ್ಲಿ ಜಾತಿ ಧ್ರುವೀಕರಣಕ್ಕೆ ಬಳಕೆ­ಯಾಗುವ ಎಲ್ಲಾ ಲಕ್ಷಣಗಳೂ ಕಾಣತೊಡಗಿವೆ.
ಭೂ ಒಡೆತನ ಅದು ಎರಡು ಎಕರೆಯಾಗಲೀ ಎರಡು ಸಾವಿರವಾಗಲೀ ಆತ್ಮವಿಶ್ವಾಸ ಆತ್ಮಾಭಿಮಾನವನ್ನು ಮೀರಿ ಅಹಮಿಕೆಯನ್ನು ಹುಟ್ಟುಹಾಕುತ್ತದೆ. ಅದರಲ್ಲೂ ಭೂಮಿ ಇಲ್ಲದ ಜಾತಿಯ ಜನರೆದುರು ಬುಸುಗುಡುತ್ತದೆ. ಭೂಮಿ ಬಂಡವಾಳವಾಗಿ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಗಳನ್ನು ಪಡೆದಾಗಲು ಆಡು ಭಾಷೆ ಮತ್ತು ಆಂಗಿಕ ಅಭಿವ್ಯಕ್ತಿಗಳಲ್ಲಿ ಜಾತಿಯ ಮೂಲ ನಡೆಗಳೇನೋ ಎನ್ನುವಂತೆ ಪ್ರಕಟ­ಗೊಳ್ಳುತ್ತವೆ. ಇಂತಹ ನಡೆಯನ್ನು ಸೆರೆ ಹಿಡಿಯುವಲ್ಲಿ ತೆಲುಗು ಸಿನಿಮಾಗಳು ಹೆಚ್ಚು ಯಶಸ್ವಿಯಾಗಿವೆ.
ಹಳೆಪಾಳೆಗಾರಿ ಮೌಲ್ಯ­ಗಳನ್ನೇ ಆದರ್ಶವೆಂದು ಭಾವಿಸುತ್ತಾ ಹುಸಿ ಪ್ರತಿಷ್ಠೆಗಾಗಿ ಸಮುದಾಯ ನರಳುತ್ತದೆ. ಆದರೆ ಆ ನಡೆಗಳು ಪ್ರಜಾಪ್ರಭುತ್ವಕ್ಕೆ ವಿರೋಧಿಯಾದ ನಡೆಗಳೆಂಬುದೂ ಅದರ ಅರಿವಿಗೆ ಬರದೆ ಹೋಗುತ್ತದೆ. ಈಗಾಗಲೇ ಶಿಕ್ಷಣವನ್ನು ಪಡೆದು, ನಗರಗಳಲ್ಲಿ ನೆಲೆನಿಂತು ಎರಡು ಮೂರನೆ ಪೀಳಿಗೆಯಾದರೂ ಇನ್ನೂ ಅಸಹಾಯಕ ಸಮುದಾಯ­ಗಳ ಮೇಲೆ ದೌರ್ಜನ್ಯ ಎಸಗುವ ಹಂತದಲ್ಲಿ ಉಳಿಯುವುದು ಸಾಂಸ್ಕೃತಿಕ ದಾರಿದ್ರ್ಯವೇ ಆಗುತ್ತದೆ.
ಧಾರ್ಮಿಕ ಸಂಸ್ಥೆಗಳು ಸಾಂಸ್ಕೃತಿಕ ಮೌಲ್ಯ­ಗಳನ್ನು ರೂಪಿಸಬೇಕಾದ ಸಾಂಪ್ರದಾಯಿಕ ಜವಾಬ್ದಾರಿಯನ್ನು ಹೊರುತ್ತವೆ. ಆದರೆ ಶೂದ್ರ ಸಮುದಾಯಗಳು ಕಟ್ಟಿಕೊಳ್ಳುವ ಮಠಗಳು ಬಾಹ್ಮಣ ಇಲ್ಲವೆ ವೀರಶೈವ ಮಠಗಳನ್ನು ಅನುಸರಿಸುತ್ತಾ ಅವರ ಸಮಾನವಾಗಿ ನಿಲ್ಲುವ ಪೈಪೋಟಿಗೆ ಬೀಳುತ್ತವೆ. ಆದಿ ಚುಂಚನಗಿರಿ ಮಠ ಆರಂಭದಲ್ಲಿ ಜಾತಿಯ ಬಲಾಬಲವನ್ನು ಗಟ್ಟಿ­ಗೊಳಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಬಾಲಗಂಗಾಧರ ನಾಥ ಸ್ವಾಮೀಜಿಯವರು ಅದನ್ನು ಆರ್ಥಿಕವಾಗಿ ಬಲಪಡಿಸಿದ್ದು ಜಾತಿಯ ಪ್ರಾತಿನಿಧಿಕ ಸ್ಥಾನಕ್ಕೆ ಕೊಂಡೊಯ್ಯಲು ಹಿಂದೆ ಬೀಳಲಿಲ್ಲ. ಯಾವಜಾತಿಗೂ ಸೇರದ ಮೂಲ­ದಲ್ಲಿ  ನಾಥಪಂಥಕ್ಕೆ ಸೇರಿದ ಆದಿಚುಂಚನಗಿರಿ ಮಠ ಒಕ್ಕಲಿಗರ ಮಠವಾಗಿ ಉಳಿದ ಸಮುದಾಯ­ಗಳ ಅಸ್ತಿತ್ವವನ್ನು ಕಿತ್ತು ಕೊಂಡುದು-  ಚರಿತ್ರೆ ಮೌನವಾದರೂ ಆತ್ಮಸಾಕ್ಷಿ ಮೌನವಾಗಬಲ್ಲದೆ?
ಹಿಂದುಳಿದ ಸಮುದಾಯಗಳು ತಮ್ಮ ಜಾತಿಯ ಐಡೆಂಟಿಟಿಯನ್ನು ಹುಡುಕುತ್ತಾ  ಪುರಾಣ, ಚರಿತ್ರೆ ಸಾಹಿತ್ಯದಲ್ಲೆಲ್ಲಾ ಐಕಾನ್‌­ಗಳನ್ನು ಹುಡುಕಿಕೊಳ್ಳುತ್ತವೆ. ಆ ಪೈಪೋಟಿ­ಯಲ್ಲಿ ಒಕ್ಕಲಿಗರು ಹಿಂದೆ ಬೀಳಲಿಲ್ಲ. ಬೆಂಗಳೂರು ಕೆಂಪೇಗೌಡರನ್ನು ಸಾಂಸ್ಕೃತಿಕ ನಾಯಕನೆಂದು ಕರೆಯಲಾಗಿ  ಹೆಸರು ಎಲ್ಲೆಲ್ಲೂ ರಾರಾಜಿಸತೊಡಗಿತು. ನಗರ ಬಡಾವಣೆ, ರಸ್ತೆ, ಬಸ್ ನಿಲ್ದಾಣ ಕಡೆಗೆ ವಿಮಾನ ನಿಲ್ದಾಣಕ್ಕೂ ಕೆಂಪೇಗೌಡರ ಹೆಸರನ್ನು ಹಚ್ಚುವಾಗ ಜಾತಿ ಬಲದ ರಾಜಕಾರಣ ಕೆಲಸಮಾಡುತ್ತದೆ. ಜಾತಿಯ ಜನರ ‘ಈಗೊ’ ತೃಪ್ತಿಪಡಿಸಲು ಸರ್ಕಾರ ಕಂಡುಕೊಳ್ಳುವ ಸುಲಭದ ತಂತ್ರವೂ ಆಗುತ್ತದೆ.
ದೊಡ್ಡ ವಿಪರ್ಯಾಸ ವೆಂದರೆ ಕುವೆಂಪು ಹೆಸರು ಜಾತಿ ಸೂಚಕವಾಗಿ ಬಳಕೆಯಾಗುತ್ತಿದ್ದು, ಜಾತಿ ಸಂಘಟನೆಗೆ ಅನಿಕೇತನ, ವಿಶ್ವಮಾನವ ಎಂಬ ಹೆಸರುಗಳನ್ನು ಇರಿಸುವ ವಿರೋದಾಭಾಸಗಳು ನಡೆದಿವೆ. ತಮ್ಮ ಜಾತಿಯ ನಾಯಕ ಗೆದ್ದಾಗ ಅಬ್ಬರಿ­ಸುವ, ತಮ್ಮ ಜಾತಿಯ ಅಹಮಿಕೆಯಿಂದಾಗಿ ಅಸಹಾಯಕ ಸಮುದಾಯಗಳ ಮೇಲೆ ಎಸಗಿರುವ ದೌರ್ಜನ್ಯ, ಮರ್ಯಾದಾ ಹತ್ಯೆ, ದಲಿತರ ಮೇಲಿನ ಕ್ರೌರ್ಯಗಳಂತಹ ಲಜ್ಜೆಗೇಡಿ­ತನದ ನಡೆಯನ್ನು ಆತ್ಮ ವಿಮರ್ಶೆ­ಗೊಳಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಮತದಾನದ ಹಿಂದೊಂದು ಕರಿನೆರಳು

Tue, 15th Apr, 2014
‘ಸ್ವಾಮಿಯೋರು ಒಂದು ಮಾತು ಹೇಳಿ­ದರೆ ಸಾಕು, ಯಾರೂ ನಿಮ್ಮನ್ನ ಅಲ್ಲಾಡಿಸೋಕೆ ಆಗಲ್ಲ ಬಿಡಿ. ಏನಿಲ್ಲಾ ಅಂದ್ರೂ ಈ ಮಠಕ್ಕೆ ಹತ್ತು ಸಾವಿರ ವೋಟು ಇದೆ’.  ಏನಿದರ ಅರ್ಥ? ಈ ಭಾಷೆ ಚುನಾವಣಾ ಸಮಯ­ದಲ್ಲಿ ಯಾರಿಗೆ ಅರ್ಥ ಆಗಲ್ಲ. ‘ಈ ಸಾರಿ ಇಂತಹವರಿಗೆ ಮಾಡೋಣ ಬಿಡಿ’ ಅಂತ ಅವರೇನಾದ್ರೂ ಅಂದ್ರೆ ಮುಗಿಯಿತು, ಚುನಾ­ವಣಾ ಅಭ್ಯರ್ಥಿ ಗೆದ್ದಂತೇ ಸರಿ. ಹಾಗಂತ ಭಾವಿ­ಸು­ತ್ತಾರೆ.
ಸ್ವಾಮಿಯೋರನ್ನ ‘ಹ್ಞೂಂ’ ಅನ್ನಿ­ಸೋದು ಪಕ್ಷದ ಟಿಕೆಟ್‌ ಪಡೆದಷ್ಟೇ ಕಷ್ಟವಾ­ಗಿ­ರು­ತ್ತದೆ. ಎಷ್ಟೋ ಬಾರಿ ಬುದ್ಧಿಯೋರು ‘ಆಗಲಿ’ ಅಂದಮೇಲೆ ನಾಮಪತ್ರ ಸಲ್ಲಿಸೋದು ಇರುತ್ತೆ. ಭಾರತದ ಚುನಾವಣಾ ರಾಜಕೀಯದಲ್ಲಿ ಮಠ­ಗಳು ನಿರ್ಣಾಯಕವಾಗುವುದು ಹೊಸ­ದೇನೂ ಅಲ್ಲ. ದಶಕಗಳಿಂದಲೂ ಕರ್ನಾಟಕದ ಪ್ರಮುಖ ಮಠಗಳೆಲ್ಲಾ ತಮ್ಮ ರಾಜಕೀಯ ಬೆಂಬಲವನ್ನು ಬಹಿರಂಗವಾಗಿಯೇ ಸೂಚಿಸುತ್ತಾ ಬಂದಿವೆ. ಸಾಯಿ­ಬಾಬಾರಿಂದ ಪೇಜಾವರರವರೆಗೆ, ಸಿದ್ಧ­ಗಂಗಾ ಮಠ, ಆದಿಚುಂಚನಗಿರಿ ಮಠ, ಸುತ್ತೂರು ಮಠ ಇವುಗಳ  ಆಶೀರ್ವಾದ ರಾಜ­ಕಾರಣಿ­ಗಳಿಗೆ ಅನಿವಾರ್ಯವಾಗುತ್ತದೆ.
ಗಾಂಧೀಜಿ ರಾಜಕೀಯವನ್ನು ಅಧ್ಯಾತ್ಮ­ದೆತ್ತ­ರಕ್ಕೆ ತೆಗೆದುಕೊಂಡು ಹೋಗಲು ಬಯಸಿದ್ದರು. ‘ಅಧ್ಯಾತ್ಮ’ವನ್ನು ಕುರಿತು ಚಿಂತಿಸಬೇಕಾದವರು ರಾಜಕೀಯ ಮಾಡುವುದನ್ನು ಅವರು ಬಯಸಿ­ರ­ಲಿಲ್ಲ.  ಭಾರತ ಧಾರ್ಮಿಕ ದೇಶ. ಆದ್ದರಿಂದ ರಾಜ­ಕೀಯ ಅಭಿಪ್ರಾಯವನ್ನು ರೂಪಿಸುವಲ್ಲಿ ಧಾರ್ಮಿಕ ಸಂಸ್ಥೆಗಳು ಹಿಂದೆ ಬೀಳಲಾರವು. ಚುನಾ­ವಣಾ ಸಂದರ್ಭದಲ್ಲಿ ಯಾವುದೇ ಧಾರ್ಮಿಕ ಸಂಸ್ಥೆಯ ಪಾತ್ರವನ್ನು ಚುನಾವಣಾ ಕಾನೂನು ನಿರಾಕರಿಸುತ್ತದೆ!
ಇಲ್ಲಿ ನಮ್ಮ ಚರ್ಚೆ ಇರುವುದು ಜನರು ಹಾಕುವ ಮತ ಯಾರದು? ಇಲ್ಲಿ ಮತ ಎಂದರೆ  ‘ಅಭಿಪ್ರಾಯ’, ‘ನಿಲುವು’, ‘ಆಯ್ಕೆ’, ‘ಒಲವು’ ಎಂಬ ಅರ್ಥಗಳು ಬರುತ್ತವೆ. ಅಂತಹ ಮತ ಸ್ವತಃ ಮತದಾರನದ್ದೆ ಎನ್ನುವುದೇ ನಮ್ಮ ಇಲ್ಲಿನ ದೊಡ್ಡ ಪ್ರಶ್ನೆಯಾಗಿದೆ. ಮಠಗಳೆಲ್ಲಾ ಜಾತಿ ಆಧಾರಿತವಾದವು. ಅದರಲ್ಲೂ ಉಪಜಾತಿ, ಒಳಜಾತಿಗಳ ಬೆನ್ನಲ್ಲಿ ಹುಟ್ಟಿರುತ್ತವೆ. ಜಾತಿ ಹೆಸರಿನ ಗುಣಾಕಾರ, ಭಾಗಾಕಾರದಲ್ಲಿ ಮಠ­ಗಳು ಘಟಕಗಳಾಗುತ್ತವೆ.
ಮಠಗಳಿಗೆ ನಡೆದು­ಕೊಳ್ಳುವ ಜನರಲ್ಲಿ ಕೆಲವರಾದರೂ ತಮ್ಮ ರಾಜ­ಕೀಯ ನಿಲುವುಗಳನ್ನೂ ತಮ್ಮ ಜಾತಿ ಗುರುವಿನ ಪಾದಕ್ಕೆ ಒತ್ತೆ ಇಟ್ಟಿರುತ್ತಾರೆ. ಅಂದರೆ ಮಠಗಳು ಕೇವಲ ಜಾತಿ ‘ಸಂಸ್ಕೃತಿ’ಯ ರಕ್ಷಕವಾಗಿರದೆ ಅದನ್ನು ರಾಜಕೀಯ ಮತವಾಗಿಸುವ ‘ಏಜೆಂಟ್’ ಪಾತ್ರವನ್ನೂ ವಹಿಸುತ್ತವೆ.  ಅದು ಮಠದ ಭಕ್ತರ ಅರಿವಿಗೆ ಬರುವುದಿಲ್ಲ. ಆ ಲೆಕ್ಕಕ್ಕೆ ಮಠ­ಗಳಿಗೆ ಆದಾಯ ದಾನರೂಪದಲ್ಲಿ ಮಾತ್ರ­ವಲ್ಲ, ವೋಟಿನ ರೂಪದಲ್ಲೂ ಬರುತ್ತದೆ. ಆ ಮಠಕ್ಕಿರುವ ವೋಟಿನ ಶಕ್ತಿಯ ಮೇಲೆ ರಾಜಕೀಯ ಪಕ್ಷಗಳು ಸ್ವಾಮಿಗಳ  ಕಾಲಿಗೆರಗು­ತ್ತವೆ. ಮುಂದೆ ಗೆದ್ದ ರಾಜಕೀಯ ನಾಯಕರು ಮಠಕ್ಕೆ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜು ಕೊಡಿಸಲು ಸಿದ್ಧರಾಗುತ್ತಾರೆ. ಮಠ­ಗಳಿಗೆ, ದೇವಾಲಯಗಳಿಗೆ ಹಿಂದಿದ್ದ ಸರ್ಕಾರ ಉದಾರವಾಗಿ ಅನುದಾನ ಕೊಟ್ಟಿದ್ದನ್ನು ಇಲ್ಲಿ ನೆನೆಯಬಹುದು.
ಪ್ರಜಾಪ್ರಭುತ್ವದ ಅಂಗವಾಗಿ ಚುನಾವಣೆ­ಯನ್ನು ಒಪ್ಪಿದಾಗ ಸಾಮುದಾಯಿಕ ಮತದಾನ­ವನ್ನು ಎಲ್ಲೂ ಸೂಚಿಸಿಲ್ಲ. ಸಂವಿಧಾನ ರಚನಾ­ಕಾ­ರರು ವ್ಯಕ್ತಿಯನ್ನು ಘಟಕವಾಗಿ ಕಲ್ಪಿಸಿದ್ದರೇ ಹೊರತು ಜಾತಿ, ಧರ್ಮ ಮತ್ತಾವುದೇ ರೀತಿಯ ಸಮೂ­­ಹದ ನೆಲೆಯ ಮತಗಳನ್ನಲ್ಲ. ಆದ್ದರಿಂ­ದಲೇ ಅಂಬೇಡ್ಕರ್ ಅವರು ಪ್ರತ್ಯೇಕ ಮತ­ದಾನದ ಬದಲು ಪ್ರತ್ಯೇಕ ಮತ ಕ್ಷೇತ್ರವನ್ನು ಸೂಚಿಸಿದರು.
ಇನ್ನು ಮುಸಲ್ಮಾನರನ್ನೋ ಕ್ರಿಶ್ಚಿಯನ್ನರನ್ನೋ ಉಲ್ಲೇಖಿಸಿದಾಗ ವ್ಯಕ್ತಿ ನೆಲೆಯಲ್ಲಿ  ಗುರುತಿಸು­ವುದು ಬಹಳ ಕಡಿಮೆ. ಅಲ್ಲಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಾಗುತ್ತದೆ. ಚರ್ಚ್‌ನ ಹುಲ್ಲು ಕಡ್ಡಿಯನ್ನು ಅಲ್ಲಾಡಿಸಬೇಕಾದರೂ ಬಿಷಪ್‌ರ ಅನುಮತಿಯನ್ನು ನಿರೀಕ್ಷಿಸುವ ಅಲ್ಲಿಯ ಜನ, ಮತ ಚಲಾಯಿಸುವಂತಹ ಗುರು­ತರ­ವಾದ ಜವಾಬ್ದಾರಿಯ ಸಂದರ್ಭದಲ್ಲಿ ತಾವೇ ನಿರ್ಣಯವನ್ನು ತೆಗೆದುಕೊಳ್ಳಬಲ್ಲರೆ? ಅದೇ ರೀತಿ ಮುಸಲ್ಮಾನರ ವೋಟು, ವ್ಯಕ್ತಿ ನೆಲೆಯಲ್ಲಿ ಕೈಗೊಂಡ ತೀರ್ಮಾನವಾಗಲು ಸಾಧ್ಯವೇ? ಅಂದರೆ ತಮ್ಮ ಧರ್ಮದ ಜನರ  ರಾಜಕೀಯ ಅಭಿಪ್ರಾಯವನ್ನು ರೂಪಿಸುವಾಗ ಧಾರ್ಮಿಕ ಸಂಸ್ಥೆಗಳು ಹಿಂದೆ ಬೀಳಲಾರವು.
ಮಠಗಳಿಲ್ಲದ ಸಮುದಾಯಗಳ ವೋಟಿನ ಒಡೆತನ ಆಯಾ ಜಾತಿಯ ನಾಯಕರ ಕೈಯಲ್ಲಿ­ರುತ್ತದೆ. ಹಾಗಾಗಿ ಆ ಜಾತಿಯ ನಾಯಕರನ್ನು ಆಮಿಷಕ್ಕೆ ಒಳಪಡಿಸಲಾಗುತ್ತದೆ. ಸಣ್ಣ ಪುಟ್ಟ ಸಮುದಾಯಗಳ ಮೇಲೆ ಬಲಿಷ್ಠ ಕೋಮಿನವರ ಹಿಡಿತ ಹಳ್ಳಿಯ ಮಟ್ಟದಲ್ಲಿ ಇದ್ದೇ ಇರುತ್ತದೆ. ಇಲ್ಲಿ ಮತಗಳ ಹಿಂದಿನ ಮೆದುಳು ಊರ ಮುಖಂಡರು ಇಲ್ಲವೆ ಜಾತಿ ಮುಖಂಡರ ಕೈಯಲ್ಲಿರುತ್ತದೆ.  ‘ಸುತ್ತಲಿನ ಏಳು ಹಳ್ಳಿಗಳಲ್ಲಿ ಗೌಡರ ಮಾತೇ ನಡೆಯುವುದು’ ಎಂದೇ ಜನ ವ್ಯಕ್ತಿಯ ಶಕ್ತಿಯನ್ನು ಗುರುತಿಸಿ ಹೇಳುತ್ತಾರೆ. ಅವರ ಮಾತಿನಂತೆ ವೋಟು ಹಾಕುವುದು ನಿಜವೇ ಆಗಿರುತ್ತದೆ.
ಬೇರೆಯವರ ಅಭಿ­ಪ್ರಾಯದ ಮೇಲೆ ತನ್ನ ಹಕ್ಕನ್ನು ಸಾಧಿಸುವುದು ಈ ನಾಯಕರ  ಪ್ರತಿಷ್ಠೆಯ ಸಂಕೇತವಾ­ಗಿ­ರುವುದನ್ನು ನಾವು ಇಂದು ಗಮನಿಸಬೇಕಾಗಿದೆ.
ಹಳ್ಳಿಗಳಲ್ಲಿ ರಾಜಕೀಯ ಜ್ಞಾನದ ಕೊರತೆ ಇರುವವರೆಲ್ಲರೂ ಮತ ಚಲಾವಣೆಯ ಹೊತ್ತಿಗೆ  ರಾಜಕೀಯವಾಗಿ ಪ್ರಾಜ್ಞರೆನಿಸಿಕೊಂಡವರ ಸೂಚನೆಗಾಗಿ ನೋಡುತ್ತಿರುತ್ತಾರೆ. ಅಂತಹ ಕಡೆ ಸ್ಥಳೀಯ ಏಜೆಂಟರ ಮಾತು, ಪ್ರಚಾರ ಕೆಲಸ ಮಾಡುತ್ತದೆ. ರಾಜಕೀಯ ಭಾಷಣಗಳು, ಮಾಧ್ಯಮಗಳ ಪ್ರಚಾರ ಯುವಕರನ್ನು ತಲುಪುತ್ತದೆ. ಬಡತನದಲ್ಲಿ ಬಳಲುವವರನ್ನೂ ವಯೋವೃದ್ಧರನ್ನು ಕರೆತಂದು ಮತ ಚಲಾಯಿಸುವಂತೆ ಮಾಡಿದಾಗ ಸಾಂಪ್ರ­ದಾಯಿಕ­ವಾದ ಗ್ರಹಿಕೆಯ ಮೇಲೆ ಇಲ್ಲವೆ ತಮಗೆ  ‘ಅನ್ನ’ವನ್ನು ಕೊಟ್ಟವರಿಗೆ ವೋಟು ಹಾಕುವ ಸಾಧ್ಯತೆಗಳು ಹೆಚ್ಚು.
ವಯೋವೃದ್ಧರು ತಮ್ಮ ಕುಟುಂಬದಲ್ಲೇ ಅಭಿ­ಪ್ರಾಯ ವ್ಯಕ್ತಪಡಿಸುವ ಹಕ್ಕು ಕಳೆದು­ಕೊಂಡು ಮೂಲೆ­ಗುಂಪಾಗಿರುತ್ತಾರೆ. ಅಂತಹ­ವರು ರಾಜ­ಕೀಯ ಆಸಕ್ತಿಯನ್ನು ಉಳಿಸಿಕೊಳ್ಳ­ಬೇಕು ಎಂದು  ನಿರೀಕ್ಷಿಸುವುದೇ ತಪ್ಪಾಗುತ್ತದೆ.  ಯಾರೋ ಬಂದು ಕೈಮುಗಿದು ಮತ ಯಾಚಿಸಿ­ದಾಗ ಒಂದು ಗಳಿಗೆ ತನಗೂ ಮಹತ್ವ ಸಿಕ್ಕಂತೆ ಭಾವಿಸಿ ಮತ ಚಲಾಯಿಸುತ್ತಾರೆ.
ಆದರೆ ಯಾರ ಆಸರೆ­ಯ­ಲ್ಲಿ­ರುತ್ತಾರೊ ಅವರ ಅಭಿ­ಪ್ರಾಯಕ್ಕೆ ಬದ್ಧ­ರಾಗು­ತ್ತಾರೆ. ಸಂಪೂರ್ಣವಾಗಿ ಹಣದ ಶಕ್ತಿ­ಯನ್ನು ಕಳೆದುಕೊಂಡವರಿಗೆ ಚುನಾ­ವಣೆಯ ಹಿನ್ನೆಲೆ­ಯಲ್ಲಿ ಕೊಟ್ಟ ಸಣ್ಣ ಮೊತ್ತವೂ ದೊಡ್ಡ­ದಾಗಿ ಕಾಣುತ್ತದೆ. ಆ ರೊಕ್ಕ ಮತವಾಗಿ ಪರಿ­ವರ್ತನೆ­ಯಾದರೆ ಆಶ್ಚರ್ಯವೇನೂ ಇಲ್ಲ.  ಒಂದು ದಿನದ ಬೀಡಿಗೆ ಸಿಕ್ಕ ಕಾಸು ಅವರು ಹಾಕುವ ವೋಟಿಗೆ ಒತ್ತಾಸೆಯಾಗುವುದಾದರೆ ಪ್ರಜಾ­­ಪ್ರಭುತ್ವ ಬೀಡಿಯಿಂದ ಉಗುಳಿದ ಹೊಗೆಗೆ ಸಮನಾಗುತ್ತದೆ.
ಭಾರತದಲ್ಲಿ  ಹೆಣ್ಣು ಮಕ್ಕಳ ವಿಚಾರಕ್ಕೆ ಬಂದರೆ ಆಕೆಯ ಮತ ಚಲಾವಣೆಯ ಹಕ್ಕಿನ ಚರ್ಚೆ ಆರಂಭವಾಗಿ ಸುಮಾರು ಒಂದು ಶತಮಾನವೇ ಕಳೆಯುತ್ತಾ ಬಂದಿದೆ. ಈಗಲೂ ತಮ್ಮ ಮತವನ್ನು ತಮ್ಮ ಹಕ್ಕು, ತಮ್ಮ ಆಯ್ಕೆ ಅಂತ ಭಾವಿಸಿರಬಹುದೇ ಎಂದು ಕೇಳಿಕೊಳ್ಳ­ಬೇಕಾ­ಗಿದೆ.
ಹೋಂ ರೂಲ್ ಚಳವಳಿಯ ನಾಯಕಿ ಆ್ಯನಿ ಬೆಸೆಂಟ್, ೧೯೧೭ರ ಹೊತ್ತಿಗೆ ದೇಶ­ದಾದ್ಯಂತ ಮಹಿಳಾ ಸಂಘಟನೆಗಳ ಮೂಲಕ ಸಹಿಯನ್ನು ಸಂಗ್ರಹಿಸಿ ಮಹಿಳೆಗೆ ಮತ ಚಲಾಯಿಸುವ ಹಕ್ಕನ್ನು ದೊರಕಿಸಿಕೊಡಲು ಶ್ರಮಿಸಿದರು. ಭಾರತದಲ್ಲಿ  ದೊಡ್ಡ ಹೋರಾಟ­ವಿಲ್ಲದೆ ಮತ ಚಲಾವಣೆಯ ಹಕ್ಕು ಮಹಿಳೆಗೆ ದೊರೆತದ್ದು ಮಾತ್ರ ದೊಡ್ಡ ಅದೃಷ್ಟವೆಂದೇ ತಿಳಿಯ­ಬೇಕಾಗುತ್ತದೆ. ಸ್ವಾತಂ­ತ್ರ್ಯಾ­ನಂತರ ಹೆಣ್ಣನ್ನು ಈ ದೇಶದ ನಾಗರಿಕಳೆಂದು ಗುರು­ತಿಸಿ ಮತ ಚಲಾವಣೆಯ ಹಕ್ಕನ್ನು ಸಂವಿ­ಧಾನ ಬದ್ಧ­ವಾಗಿ ನೀಡಿದ ಭಾರತದ ಸಂವಿಧಾ­ನದ ರೂವಾರಿ ಬಾಬಾ ಸಾಹೇಬರನ್ನು ನೆನೆಯಬೇಕಾಗಿದೆ.
ತನಗೆ ಸಿಕ್ಕ ಮತ ಚಲಾವಣೆಯ ಅವ­ಕಾಶ­ವನ್ನು ಅವಳು ತನ್ನ  ಮೂಲಭೂತ  ಹಕ್ಕು ಎಂದು ನಿಜಾರ್ಥದಲ್ಲಿ ಅರಿಯಬೇಕಾದರೆ ಇನ್ನೂ ದಶಕಗಳೇ ಬೇಕಾಗುತ್ತದೆ. ಮತ ಚಲಾ­ವಣೆ­ಯನ್ನು ತಮ್ಮ ಸ್ವಂತ ಅಭಿಪ್ರಾಯವಾಗಿ ರೂಪಿಸಿಕೊಳ್ಳಲು ಈವರೆಗೆ ಸಾಧ್ಯವಾಗಿಲ್ಲ. ಸಣ್ಣ ಪುಟ್ಟ ವಿಷಯಗಳಲ್ಲೂ ಅವಳಿಗೂ ಒಂದು  ಆಯ್ಕೆ ಇದೆ ಎನ್ನುವುದನ್ನೇ ಅರಿಯದ ಸಮಾಜ­ದಲ್ಲಿ ರಾಜಕೀಯವಾಗಿ ಪ್ರಾಜ್ಞರಾಗಲು ಇನ್ನೆಷ್ಟು ಕಾಲ ಬೇಕಾಗಬಹುದು?
ವಿವಾಹದಲ್ಲಿ ಅವಳ ಆಯ್ಕೆ ಇರಬೇಕೆಂದು ಇಂದಿಗೂ ಒಪ್ಪದ ಸಮಾಜ, ಅವಳ ಚುನಾವಣಾ ಅಭಿಪ್ರಾಯ­ವನ್ನು ರೂಪಿಸಬಲ್ಲುದೆ? ವಿವಾಹವೇ ಹತ್ತು ಹನ್ನೆರಡು ವರ್ಷಕ್ಕೆ ಆದಾಗ, ಆಯ್ಕೆ ಪ್ರಶ್ನೆಯಾಗಿ ಮಾತ್ರ ಉಳಿಯುತ್ತದೆ. ತಾನು ಉಡುವ ಬಟ್ಟೆ, ಅದರ ಬಣ್ಣದ ಆಯ್ಕೆಯೂ ಇಲ್ಲದ ಹೆಣ್ಣು,  ಮರೆಯಲ್ಲಿ ನಿಂತು ತನ್ನದೇ ಆದ ಮತವನ್ನು ತನ್ನ ಅಭಿಪ್ರಾಯದಂತೆ  ಚಲಾಯಿಸಬಲ್ಲಳೇ? ಮನು­ವಿನ ಮಾತು ಇಲ್ಲಿ ನೆನಪಾಗುತ್ತದೆ, ವಿವಾಹ ಪೂರ್ವದಲ್ಲಿ ತಂದೆ, ನಂತರ ಕೈ ಹಿಡಿದ ಗಂಡ, ಆನಂ­ತರ ಹೆತ್ತ ಮಗನ ನೆರಳಲ್ಲಿ ತನ್ನ  ಬುದ್ಧಿ ಭಾವಗಳನ್ನು  ನೆರಳಾಗಿಸುತ್ತಾಳೆ.
ಮಧ್ಯಮವರ್ಗದ ಹೆಣ್ಣು ಮಕ್ಕಳು ಬಿಸಿಲು ಮಳೆ ಸೋಕದಂತೆ ನಾಲ್ಕು ಗೋಡೆಯ ಒಳಗೆ ಬಂದಿಯಾಗಿ ಬದುಕುತ್ತಿರುವಾಗ ರಾಜಕೀಯ ಅವರ ಆಸಕ್ತಿಯ ವಿಚಾರವಾಗಲಾರದು. ಪಂಚಾ­ಯಿತಿ ಮಟ್ಟದ ರಾಜಕೀಯದಲ್ಲಿ ಕೊಟ್ಟ ಮೀಸಲಾತಿ ಅವರು ಸಣ್ಣ ಪ್ರಮಾಣ­ದಲ್ಲಾ­ದರೂ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಲು ಸಾಧ್ಯವಾಗಿದೆ.
ಮಹಿಳಾ ಮೀಸಲಾತಿ ಮಸೂದೆ, ಹಿಮದ ಗಡ್ಡೆಯ ಒಳಗೆ ಹೂತು ಹೋಗಿದೆ. ಮನು ಕುಲ ಇನ್ನೂ ಜೀವಂತವಾಗಿದೆ. ಎಂದಾದರೊಮ್ಮೆ ಹೆಣ್ಣಿನ ಮೀಸಲಾತಿ ಬಿಲ್ ಹೊರಬರಬಹುದು, ಕಾಯೋಣ.  ‘ಹೆಣ್ಣಿಗೆ  ಆಲೋಚಿಸುವ ಶಕ್ತಿ ಇಲ್ಲದಿದ್ದರೂ’ (?) ಮತ ಚಲಾಯಿಸಲು ಅವಕಾಶ ಸಿಕ್ಕಿರುವುದೇ ಅವಳ ಅದೃಷ್ಟ. ರಾಜಕೀಯ ಚರಿತ್ರೆಯನ್ನೇ ಕಾಣದ ಹೆಣ್ಣು ಜಾತಿ, ರಾಜಕೀಯದ ಭಾಗವಾಗ ಬೇಕೆಂಬುದು ಸಮಾನತೆಯ ಅತ್ಯುನ್ನತ ಆದರ್ಶ.
ರಾಜಕೀಯ ಅಭಿಪ್ರಾಯ ರೂಪಿಸುವ ಮಾಧ್ಯಮ­ಗಳ ಕುರಿತು ವಿಸ್ತಾರವಾಗಿ ಬರೆಯುವ ನಾಮ್‌ ಚೋಮ್ ಸ್ಕಿ ಅವುಗಳನ್ನು ಅಭಿಪ್ರಾಯಗಳ ಉತ್ಪಾದಕರು ಎಂದು ಕರೆದದ್ದು ಸೂಕ್ತವಾಗಿಯೇ ಇದೆ. ಅದರ ಬಹು ದೊಡ್ಡ ದಲ್ಲಾಳಿಗಳು ಮಾಧ್ಯಮಗಳು. ಸರ್ವಾಧಿಕಾರಿ­ಯೊಬ್ಬ ಹಿಂಸೆಯ ಮೂಲಕ ಸಾಧಿಸಬಹುದಾದ­ದ್ದನ್ನು ಡೆಮಾಕ್ರಸಿಯಲ್ಲಿ ಪ್ರಚಾರದ ಮೂಲಕ ಸಾಧಿಸಲಾಗುತ್ತದೆ. ಭ್ರಮೆಯನ್ನು ಕಟ್ಟುವುದೇ ಆದ್ಯತೆಯಾಗುತ್ತದೆ.
ವ್ಯಕ್ತಿಯ ವಿಚಾರದ ಅಭಿಪ್ರಾಯ ರೂಪುಗೊಳಿಸುವಾಗ ಅದನ್ನು ಮತ್ತೇರುವ ತೀವ್ರತೆಗೆ ಒಯ್ಯಲಾಗುತ್ತದೆ. ಕೆಟ್ಟದು ಒಳ್ಳೆಯದರ ಜಡ್ಜ್‌ಮೆಂಟ್ ಕಳೆದು­ಹೋಗಿರುತ್ತದೆ. ಪ್ರಚಾರದಲ್ಲಿರುವ ವಸ್ತುವಿಗೆ ಜನ ಮುಗಿಬೀಳುವಂತೆ ಪ್ರಚಾರ­ದಲ್ಲಿರುವ ನಾಯಕನಿಗೆ ಮರುಳಾಗು­ತ್ತಾರೆ. ಅವರೇ ಕಟ್ಟಿಕೊಟ್ಟ ಪರಿಭಾಷೆಯಲ್ಲಿ ಅವರನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಉಳಿದ ವಿಚಾರಗಳು ಮತದಾರನ ಮನಸ್ಸಿನಲ್ಲಿ ಇಲ್ಲವಾಗಿಸಲಾಗುತ್ತದೆ.
ಜನಸಾಮಾನ್ಯ­ನೊಬ್ಬನಿಗೆ ಅವನದೇ  ಆದ ಅಭಿಪ್ರಾಯ ರೂಪುಗೊಳ್ಳಲು ಸಾಧ್ಯವಾಗದಂತೆ ಆಕ್ರಮಣ­ಶೀಲ­ವಾಗಿ ವಿಚಾರವನ್ನು ಬಿತ್ತಲಾಗುತ್ತದೆ. ಜನರ ದುರ್ಬಲ, ಅಸಹಾಯಕ ಮಾನಸಿಕ ಸ್ಥಿತಿಯ ಮೇಲೆ ಹಲ್ಲೆ ಮಾಡಲಾಗಿ­ರುತ್ತದೆ. ಹಾಗೇ ಕರೆದು ತಂದು ಮತಗಟ್ಟೆಯಲ್ಲಿ ನಿಲ್ಲಿಸಿದಾಗ ತನ್ನದೇ ಮತವೆಂದು ಭ್ರಮಿಸಿ ವೋಟ್ ಹಾಕುತ್ತಾನೆ. ಹಿಂದೆ ಹಾದು ಹೋಗುವ ಜಾಹೀರಾತಿನ ಭೂತದ ನೆರಳು ಅವನ ಅರಿವಿಗೆ ಬಂದಿರುವುದಿಲ್ಲ. ಆ ಕ್ಷಣಕ್ಕೆ ಅವನ ಜವಾಬ್ದಾರಿ ಮುಗಿಯುತ್ತದೆ.
ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ರೂಪಿಸು­ವುದೇ ಮುಖ್ಯವಾಗಿ­ರುತ್ತದೆ. ಕಲ್ಪನೆ, ಭ್ರಮೆ, ನಶೆ, ಸುಳ್ಳು, ಮೋಸ ಎಲ್ಲವೂ ಅದರ ಭಾಗವಾಗಿರುತ್ತದೆ. ಆ ಯಾವುದಕ್ಕೂ ವ್ಯತ್ಯಾಸವೇ ಉಳಿದಿರುವುದಿಲ್ಲ, ಆ ಎಲ್ಲದಕ್ಕೂ ಮಾಧ್ಯಮ ದಲ್ಲಾಳಿಯಾಗಬೇಕೆ?

ಹಾಲು ಕರೆವ ಪಕ್ಷಕ್ಕೆ ಬಂಡವಾಳಗಾರನ ಹಿಂಡಿ

Tue, 18th Mar, 2014
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮೊನ್ನೆ (ಮಾ.೧೬) ಐದು ಅಡಿ, ಐದು ಅಂಗುಲ ಎತ್ತರವಿದ್ದ  ವ್ಯಕ್ತಿ ದಣಿವರಿಯದೆ ಹೇಳಿದ ಮಾತು ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು ನಿಜ.
‘ನೀವು ಬಿಜೆಪಿಗೆ ವೋಟು ಹಾಕಿ ಕಾಂಗ್ರೆಸ್‌ಗೆ ವೋಟು ಹಾಕಿ ಕಡೆಗೆ ಆಳುವ ವ್ಯಕ್ತಿ ಮಾತ್ರ ಅಂಬಾನಿ...’ ಹೀಗೆ ಹೇಳುತ್ತಾ ನರೇಂದ್ರ  ಮೋದಿ ಬಗೆಗಿನ ಭ್ರಮೆಯನ್ನು ಕಳಚುತ್ತಾ ಹೋದ ಅರವಿಂದ ಕೇಜ್ರಿವಾಲ್ ಮಾತು ನನಗೆ ಮಹತ್ವದ್ದಾಗಿ ಕಂಡಿತು.  ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಪಕ್ಷಗಳ ಬಣ್ಣಗಳೂ ಬಯಲಾಗುತ್ತಿವೆ.
ಹಳೆಯದಾಗಲಿ ಹೊಸದಾಗಲಿ ಪಕ್ಷಗಳಿಗೆ ಹಣ ಎಲ್ಲಿಂದ ಬರುತ್ತದೆಂದು ತಿಳಿಯುವುದು ಅನಿವಾರ್ಯವಾಗಿದೆ. ಭಾರತದ ಬೃಹತ್ ಆಲದ ಮರದಂತೆ ಬೆಳೆದು ನಿಂತ ಎರಡು ಪಕ್ಷಗಳಿಗೆ ಅಂಬಾನಿ ಹೀಗೆ ನೇರವಾಗಿ ನೀರೆರೆ­ಯುತ್ತಾರೆಂದು ಹೇಳುವಾಗ, ಮತ್ತು ಯಾರೇ ಅಧಿಕಾರಕ್ಕೆ ಬಂದರೂ ನಿಜವಾಗಿ ನಮ್ಮನ್ನು ಆಳುವವರು ಬೃಹತ್ ಬಂಡವಾಳಶಾಹಿಗಳು ಎಂದಾಗ ರಾಜಕೀಯ ಪಕ್ಷಗಳ ಬಗೆಗಿದ್ದ ಅಲ್ಪಸ್ವಲ್ಪ ನಂಬಿಕೆಯೂ ಗಾಳಿಗೆ ತೂರಿಹೋಗು­ತ್ತದೆ. ಆದ್ದರಿಂದಲೇ ಈ ದೇಶದ ಕೈಗಾರಿಕಾ ನೀತಿಯಾಗಲಿ ಕೃಷಿ ನೀತಿಯಾಗಲಿ ನಮ್ಮ ಹಿಡಿತವನ್ನು ಕಳೆದುಕೊಂಡಿದೆ ಎನಿಸುತ್ತದೆ.
ನಾವು ಇಂದು ರಾಜಕೀಯ ಪಕ್ಷಗಳನ್ನು ಕೇಳುವುದಕ್ಕಿಂತ, ಬಂಡವಾಳಶಾಹಿಗಳನ್ನೇ ನಿಮ್ಮ ಜೇಬಿನಲ್ಲಿ ಇರುವ ರಾಜಕಾರಣಿಗಳು ಯಾರು ಎಂದು ಬಹಿರಂಗವಾಗಿ ಕೇಳಬೇಕಾಗಿದೆ. ಈ ದೇಶದಲ್ಲಿ ವಿದೇಶದ ಬಂಡವಾಳವೂ ಹರಿಯ ತೊಡಗಿರುವುದರಿಂದ, ಕಡೆಯ ಪಕ್ಷ ನಮ್ಮ ದೇಶದಲ್ಲೇ ಇರುವ ದುಡ್ಡಿನ ಒಡೆಯರಾದರೂ ಜನರಿಗೆ ಉತ್ತರ ನೀಡಬೇಕಾಗಿದೆ.
ಒಂದು ಕಾಲಕ್ಕೆ ಟಾಟಾ, ಬಿರ್ಲಾ ಅಂತಹ ಬಂಡವಾಳಶಾಹಿ ಕುಟುಂಬಗಳು ರಾಷ್ಟ್ರೀಯ ಹೋರಾಟಕ್ಕೆ ಬೆಂಬಲ ನೀಡಿದ್ದವು. ಕಂಪೆನಿಗಳ ಸ್ಥಾಪನೆಗೆ ಭಾರತದಲ್ಲಿ ನಡೆದ ಸ್ವದೇಶಿ ಹೋರಾಟವೂ ಕಾರಣವಾಗಿತ್ತು. ಹೀಗೆ ನಮ್ಮ­ದೆಂಬ ಆದರ್ಶದಲ್ಲಿ ಕಾಪಿಟ್ಟುಕೊಂಡು-­ಬಂದ ಕೈಗಳೇ ಇಂದು ನಮ್ಮನ್ನು ಆಡಿಸುತ್ತವೆ. ಅವರ ಮುಂದೆ ಮಂಡಿಯೂರಿ ಸಾಮಾಜಿಕ ನ್ಯಾಯ­ವನ್ನು ಬೇಡುವುದೂ ಕೋಡುಗಲ್ಲ ಬಸವ­ನಿಗೆ ಅಡ್ಡಬೀಳುವುದೂ ಒಂದೇ ಆಗಿರುತ್ತದೆ.
ನಮ್ಮ­ದೆಂದು ತಿಳಿದಿದ್ದ ಕಂಪೆನಿಗಳು ಈಗ ನಮ್ಮ­ವಾಗಿ ಉಳಿದಿಲ್ಲ, ವಿದೇಶಿ ಬಂಡವಾಳಕ್ಕೆ ಬೆಸೆದ ಬಂದ­ಳಿಕೆಗಳು. ತಮಗೆ ಲಾಭ ತರುವ ವ್ಯವ­ಹಾರಕ್ಕೆ ರಾಜಕೀಯ ಪಕ್ಷಗಳನ್ನು ಬಳಸಿಕೊಳ್ಳು­ತ್ತಿವೆ. ಈ ಹೊತ್ತಿನಲ್ಲಿ ನಾವು ರಾಜಕಾರಣಿಗಳ ವ್ಯಕ್ತಿತ್ವ­ವನ್ನು ವಿಚಾರಿಸುವ ಜೊತೆಗೆ ಪ್ರತಿ ದೈತ್ಯ ಉದ್ದಿಮೆದಾರನನ್ನೂ ನೀವು ಬೆಂಬಲಿಸುವ ಪಕ್ಷ ಯಾವುದು ಎಂದು ಬಹಿರಂಗವಾಗಿ ಕೇಳಬೇಕಾಗಿದೆ. 
ಭಾರತ ಬಹು ಪಕ್ಷಗಳನ್ನು ಹೊಂದಿದ ದೇಶ ಎಂದು ಮಾತ್ರ ಅರ್ಥವಾಗುತ್ತಿತ್ತು. ಅದರೆ ಪ್ರತಿ ಪಕ್ಷವೂ ತನ್ನೊಳಗೆ ಹಲವು ಪಕ್ಷಗಳನ್ನು ಒಳಗೊಂಡಿದೆ. ಕಾಂಗ್ರೆಸ್ ಆಗಲಿ ಬಿಜೆಪಿ ಆಗಲಿ ಹೊರನೋಟಕ್ಕೆ ಒಂದು ಪಕ್ಷವಾಗಿ ಕಂಡರೂ ಅವು ಒಂದು ಪಕ್ಷವಾಗಿ ಉಳಿದಿಲ್ಲ. ಇಲ್ಲಿ ಪಕ್ಷ ಎಂದಾಗ ನಿಲುವು ಎಂಬ ಅರ್ಥವೂ ಬರುತ್ತದೆ.
ನರೇಂದ್ರ ಮೋದಿ ಎಲ್ಲಾ ವೇದಿಕೆಗಳಲ್ಲೂ ಒಂಟಿಯಾಗಿ ನಿಲ್ಲುವುದನ್ನು ನೋಡಿದರೆ, ಬಿಜೆಪಿ ಎಂದರೆ ಕಾಣಲೇಬೇಕಾದ ಹಳೆಯ ಮುಖಗಳು ಒಂದೂ ಕಾಣದೆ ಪಕ್ಷವೇನಾದರೂ ಬದಲಾಗಿ­ದೆಯೇ ಎನಿಸುತ್ತದೆ. ಹಾಗಾದರೆ ಪಕ್ಷದ ಮುಂದಿನ ಆಗುಹೋಗುಗಳಿಗೆಲ್ಲಾ ಮೋದಿ ಅವ­ರನ್ನು ಮಾತ್ರವೇ ಜವಾಬ್ದಾರನನ್ನಾಗಿ ಮಾಡಲಾ­ಗಿದೆಯೆ? ಬಿಜೆಪಿ ಎಂದರೆ ಕಾಣಲೇಬೇಕಾಗಿದ್ದ ಎಲ್‌.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್‌  ಮುಂತಾದ ಹಿರಿಯ ನಾಯಕರು ಮೋದಿ ನಾಯಕತ್ವದ ಬಿಜೆಪಿಯಲ್ಲಿ ಇಲ್ಲವೆಂದು ತಿಳಿಯ­ಬೇಕೆ? ಕರ್ನಾಟಕದಲ್ಲಿ ಬಿ.ಎಸ್‌. ಯಡಿಯೂರಪ್ಪ ಆಳ್ವಿಕೆಯ ಕಡೆಯ ಹೊತ್ತಿಗೆ ಅದು ಬಿಜೆಪಿ ಎಂಬುದನ್ನೇ ಅದರ ಮಾತೃ­ಸಂಸ್ಥೆಗಳು ನಿರಾಕರಿಸಿದ್ದವು.
ಯಡಿಯೂರಪ್ಪ ವ್ಯಕ್ತಿ ಕೇಂದ್ರಿತವಾಗಿ ನಡೆದುಕೊಳ್ಳ ತೊಡಗಿದಂತೆ ಪಕ್ಷ ಕುಸಿಯಿತು. ವ್ಯಕ್ತಿ ಕೇಂದ್ರಿತವಾದಂತೆ ಪಕ್ಷಗಳು ಒಡೆದು ಹೋಗುತ್ತವೆ ಎನ್ನುವುದಕ್ಕೆ ಇದೂ ಒಂದು ಉದಾಹರಣೆ.
ಇನ್ನು ಕಾಂಗ್ರೆಸ್ ವಿಷಯಕ್ಕೆ ಬಂದರಂತೂ ಅದರ ಸುದೀರ್ಘ ಚರಿತ್ರೆಯೇ ಅದನ್ನು ಕಗ್ಗಂಟಾ­ಗಿಸಿದೆ. ಜಾತ್ಯತೀತ ಪಕ್ಷವಾಗಿ ನೆಹರೂ ಕಾಲಕ್ಕೆ ಹೆಸರು ಮಾಡಿದ್ದು, ಅಯೋಧ್ಯಾ ಘಟನೆ ಹೊತ್ತಿಗೆ ಹಿಂದೂವಾದದ ಮೈಲಿಗೆಗೆ ತುತ್ತಾ­ಯಿತು. ಅದರಿಂದ ಹೊರಬಂದು ಜಾತ್ಯತೀತ ಆಗುವ ನಿರಂತರ ಪ್ರಯತ್ನ ನಡೆದೇ ಇದೆ. ಹಾಗಾದಲ್ಲಿ ಮಾತ್ರವೇ ಅದರ ಸಾಂಪ್ರದಾಯಿಕ ಮತಗಳನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಸಾಧ್ಯ.
ರಾಜೀವ್ ಗಾಂಧಿ ಕಾಲಕ್ಕೆ ಹಳೆ ಬೇರು ಹೊಸ ಚಿಗುರು ಎನ್ನುವಂತೆ ಪಕ್ಷದ ಹಿರಿಯ ನಾಯಕರು ಯುವ ನಾಯಕನನ್ನು ಮೆರೆಸಿದರು. ಸೋನಿಯಾ ಗಾಂಧಿ ನಾಯಕತ್ವದಲ್ಲಿ, ಮನ­ಮೋಹನ್ ಸಿಂಗ್ ಪ್ರಧಾನಿಯಾಗಿ ಪಕ್ಷ­ದೊಳ­ಗಿನ ರಾಜಕೀಯವಾಗಲಿ, ಸೈದ್ಧಾಂತಿಕ ಘರ್ಷಣೆ­ಗಳಾಗಲಿ ಕಾಣದೆ ಪಕ್ಷವನ್ನು ಕಾರ್ಪೊರೇಟ್ ಆಫೀಸ್‌ನಂತೆ ನಡೆಸಲಾಗುತ್ತಿದೆ. ಪ್ರತಿ ರಾಜ್ಯ-­ದಲ್ಲೂ ಕಾಂಗ್ರೆಸ್‌ನ ಶೈಲಿ ಬೇರೆಯೇ ಆಗಿದೆ. ಪಕ್ಷದೊಳಗಿನ ಅಭಿಪ್ರಾಯಗಳಲ್ಲಿ ಸೌಹಾರ್ದ ಏರ್ಪಡುವುದಕ್ಕಿಂತ ಪಕ್ಷಗಳ ಸಹಯೋಗದಲ್ಲಿ ಕಾರ್ಯನಡೆಸುತ್ತಾ ಬಂದಿದೆ.
ಇಂದಿನ ಚುನಾ­ವಣೆ­ಯಲ್ಲಿ ಬಿಜೆಪಿಯ ಪೈಪೋಟಿಗೆ ತಾವು ಒಬ್ಬ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ತೋರಿಸಿಕೊಳ್ಳ­ಬೇಕಾದ ಅನಿವಾ­ರ್ಯಕ್ಕೆ ಬಿದ್ದು ರಾಹುಲ್ ಗಾಂಧಿ ಅವರನ್ನು ಪ್ರಚಾರಕ್ಕಿಳಿಸಿದೆ. ಆದರೆ ರಾಹುಲ್ ಗಾಂಧಿ ಕಾಂಗ್ರೆಸ್ ನೇತಾರನೆಂದು ಜನರ ಮನಸ್ಸಿಗೆ ಇಳಿದಂತಿಲ್ಲ. ಪಕ್ಷವೆಂದಾಗ ಹತ್ತಾರು ಜನ ನಾಯಕರು ಅದರ ಜವಾಬ್ದಾರಿ­ಯನ್ನು ಹೊರು­ತ್ತಾರೆ ಎಂಬುದರಲ್ಲಿ ಹೆಚ್ಚಿನ ನಂಬಿಕೆ ಮೂಡು­ತ್ತದೆ. ಮನಮೋಹನ್ ಸಿಂಗ್, ಪಿ.ಚಿದಂಬರಂ, ಎ.ಕೆ ಆಂಟನಿ ಇವರೆಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲವೇ? ಕಡೆಗೆ ಸೋನಿಯಾ ಗಾಂಧಿಯೂ ಕಾಣಬಾರದೇ? ಕರ್ನಾಟಕ­ದಲ್ಲಿ ಕಾಂಗ್ರೆಸ್ ಆಡಳಿತಾರೂಢ ಪಕ್ಷವಾಗಿದ್ದು ಜನತೆಗೆ ಕೊಡುವ ಭರವಸೆ ಏನು? ಹೇಳಲು ಹೊರಟರೆ ಅನುಭವಿ ರಾಜಕಾರಣಿಗಳ ಸಾಲು ಸಾಲೇ ಅಲ್ಲಿದೆ.
ತಮ್ಮ ತಪ್ಪು ನೆಪ್ಪುಗಳನ್ನು ಜನತೆ ಮುಂದೆ ನಿಂತು ಹೇಳಿಕೊಳ್ಳುತ್ತಿಲ್ಲವೇಕೆ? ‘ನರೇಗಾ’ ದಂತಹ ಯೋಜನೆ ಬಡ ಜನತೆ ಪರ­ವಾದ ಯೋಜನೆ. ಅದರ ಬೆನ್ನ ಹಿಂದೆ ಕಮ್ಯು­ನಿಸ್ಟರಿ­ದ್ದದ್ದು ನಿಜವೇ ಆದರೂ ಅದನ್ನೆಲ್ಲೂ ತನ್ನ ಸಾಧನೆ ಎಂದು ಹೇಳಿಕೊಂಡಂತೆ ಕಾಣುವುದಿಲ್ಲ. ಜನತೆಯನ್ನು ಎದುರಿಸಲಾಗದ ದೌರ್ಬಲ್ಯವೇನು ಎಂದು ಪಕ್ಷಗಳೇ ಆತ್ಮಾವಲೋಕನ ಮಾಡಿಕೊಳ್ಳ­ಬೇಕಾಗಿದೆ. ದೀರ್ಘಾವಧಿಯ ಅಸ್ತಿತ್ವ ಕಾಂಗ್ರೆ­ಸ್‌ನ ಶಕ್ತಿಯೂ ಹೌದು ದೌರ್ಬಲ್ಯವೂ ಹೌದು.
ಸಾಮಾನ್ಯವಾಗಿ ಮೂರನೇ ಶಕ್ತಿಯಾಗಿ ಒಗ್ಗೂಡುತ್ತಿದ್ದ ಸಮಾಜವಾದಿ ಪಕ್ಷಗಳು ಈ ಬಾರಿ ಮುಂಚೂಣಿಗೆ ಬಂದಂತೆ ಕಾಣುತ್ತಿಲ್ಲ. ಸಾಧ್ಯವಾದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯ ಜೊತೆ ಸೇರುವ ಆಲೋಚನೆಯಲ್ಲಿ ವ್ಯವಹರಿಸು­ತ್ತಿವೆ. ಬಹುತೇಕ ಪ್ರಾದೇಶಿಕ ಪಕ್ಷಗಳಂತೆ ಕಾಣ­ತೊ­ಡಗಿವೆ. ಅಷ್ಟೇ ಅಲ್ಲ, ವ್ಯಕ್ತಿ ಕೇಂದ್ರಿತ ಪಕ್ಷಗ­ಳಾಗಿವೆ. ಜೆಡಿಎಸ್ ಕರ್ನಾಟಕದಲ್ಲೂ, ಬಿಎಸ್‌ಪಿ  ಉತ್ತರ ಪ್ರದೇಶದಲ್ಲೂ, ಕಮ್ಯುನಿಸ್ಟ್‌ ಪಕ್ಷಗಳು  ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲೂ  ರಾಷ್ಟ್ರ ರಾಜಕೀಯಕ್ಕೆ ಹೊರಟು ಸ್ಥಳೀಯವಾಗಿ ಉಳಿದು­ಕೊಂಡಿವೆ. ಕಮ್ಯುನಿಸ್ಟರಿಗೆ ವಿರುದ್ಧವಾಗಿ ಬಂಗಾ­ಳ­ದಲ್ಲಿ ಹುಟ್ಟಿದ್ದು ತೃಣಮೂಲ ಕಾಂಗ್ರೆಸ್.
ಅಸ್ಸಾಂನಲ್ಲಿ ಎಜೆಪಿ, ಪಂಜಾಬಿನ ಅಕಾಲಿದಳ, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಇತ್ಯಾದಿ ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕೀ­ಯ­ದಲ್ಲಿ ಪಾಲ್ಗೊಳ್ಳುತ್ತಿವೆ. ಇಲ್ಲವೇ ಪಕ್ಷದೊಳ­ಗೊಂದು ಪಕ್ಷವಾಗಿ ಒಂದು ಹೊಸ ರಾಜಕೀಯ ವ್ಯವಸ್ಥೆಯನ್ನೇ ಹುಟ್ಟುಹಾಕಿವೆ. ನಮಗಿಲ್ಲಿ ಕಾಣ­ಬರುತ್ತಿರುವುದು ಮುಂದುವರಿದ ವ್ಯಕ್ತಿಕೇಂದ್ರಿತ ರಾಜಕೀಯ ಗುಣ ಈ ಪಕ್ಷಗಳ ಶಕ್ತಿಯನ್ನು ಕ್ಷೀಣಗೊಳಿಸಿದೆ. ರಾಜಕೀಯದಲ್ಲಿ ವ್ಯಕ್ತಿಯ ವರ್ಚಸ್ಸು ಹಿರಿದೇ ಆದರೂ ಪಕ್ಷಕ್ಕೊಂದು ಸಾಮುದಾಯಿಕ ಪ್ರಜ್ಞೆ ಬೇಕೇ ಆಗಿರುತ್ತದೆ.
ಮೊನ್ನೆ ಆಮ್ ಆದ್ಮಿ ಪಕ್ಷದ ಬೆಂಬಲಕ್ಕೆ ಮುಂದಾಗಿರುವ ಜನರನ್ನು ನೋಡಿದರೆ ಮೂರು ತಿಂಗಳ ಕೆಳಗೆ  ಈ ಪಕ್ಷದ ಬಗೆಗೆ ಇದ್ದ ಅನು­ಮಾನಗಳನ್ನು ಜನ ಸಾಕಷ್ಟು ದೂರ ಮಾಡಿ­ಕೊಂಡಂತಿತ್ತು. ಕರ್ನಾಟಕ ಹಾಗೂ ಮತ್ತಿತರ ಕಡೆ ಚುನಾವಣಾ ಕಣಕ್ಕಿಳಿಯುತ್ತಿರುವ ಸ್ಪರ್ಧಾ­ಳುಗಳನ್ನು ನೋಡಿದರೆ ದುಡ್ಡಿನ ಬೆಂಬಲವಿಲ್ಲದ, ಆದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ನಾಯಕ­ರಾ­ಗಿ­ದ್ದ­ವರು ಇಲ್ಲಿ ಸೀಟು ಪಡೆಯುವ ಮೂಲಕ ಪ್ರಜಾಪ್ರಭುತ್ವದ ಸಾಧ್ಯತೆಯನ್ನು ಬೇರೆ ನೆಲೆಗಳಲ್ಲೂ ಹುಡುಕಾಡುತ್ತಿರುವಂತೆ ಕಾಣ­ಬರುತ್ತಿದ್ದಾರೆ. 
ಆಮ್ ಆದ್ಮಿಗೆ ಬೆಂಬಲಕ್ಕಿರುವ ಜನ ಯುವಕರು. ಅದರಲ್ಲೂ ಐ.ಟಿ. ಹಿನ್ನೆಲೆಯ ಜನ ಅದರ ವಿಶೇಷ ಆಕರ್ಷಣೆಗೆ ಒಳಗಾಗಿದ್ದಾರೆ. ಈವರೆಗೆ ಮತಗಟ್ಟೆಗೆ ಬರದೇ ಇದ್ದ ಹೊಸ­ದೊಂದು ವರ್ಗವನ್ನು ಎಎಪಿ ಆಕರ್ಷಿಸಿದೆ. ಸಾಮಾನ್ಯವಾಗಿ ನಗರದ ಮೇಲು ವರ್ಗದ ಮತಗಳು ಬಿಜೆಪಿಯ ಬಗಲಿಗೆ ಬೀಳುವ ನಿರೀಕ್ಷೆಯಲ್ಲಿ ರಾಜಕೀಯ ದಾಳಗಳನ್ನು ಹಾಕ­ಲಾ­ಗುತ್ತದೆ. ಅಂತಹ ಮತಗಳಿಗೆ ಆಮ್‌ ಆದ್ಮಿ ಸ್ಪರ್ಧೆಗಿಳಿದಂತಿದೆ. ಭ್ರಷ್ಟಾಚಾರ ವಿರೋಧಿ ಘೋಷಣೆಯೇ ಈ ಪಕ್ಷದ ಅಯಸ್ಕಾಂತವಾಗಿದೆ.
ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಬೇಸತ್ತು ತಮ್ಮ ಬದುಕಿನ ಇಳಿಗಾಲದಲ್ಲಿ ದೇಶವನ್ನು ಭ್ರಷ್ಟತೆ­ಯಿಂದ ವಿಮೋಚನೆಗೊಳಿಸಬೇಕೆಂದು ಬಯಸು­ವವರು ಆಮ್‌ ಆದ್ಮಿ ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ. ಅಂತಹ ಕಡೆ ಕಾಂಗ್ರೆಸ್‌ಗೆ ಬೀಳುವ ವೋಟು ಆದ್ಮಿ ಕಡೆ ಹೊರಳುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಪಕ್ಷಕ್ಕೆ ದೇಣಿಗೆಯನ್ನು  ಬಹಿರಂಗವಾಗಿ ಜನರಿಂದ ಸಂಗ್ರಹಿಸುತ್ತಿರುವುದು ಹೆಚ್ಚಿನ ನೈತಿಕ ಸ್ಥೈರ್ಯವನ್ನು ತಂದುಕೊಟ್ಟಂತಿದೆ. ಜನರಿಂದ ದೇಣಿಗೆ ಸಂಗ್ರಹಿಸುವ ರಾಜಕಾರಣ ಹಿಂದೆಯೂ ನಡೆದಿದೆ.
ಅದನ್ನೊಂದು ಸಿದ್ಧಾಂತ­ವಾಗಿ ಕರ್ನಾಟಕದಲ್ಲಿ ಶಾಂತವೇರಿ ಗೋಪಾಲ­ಗೌಡರು ರೂಪಿಸಿದ್ದು ಇಂದಿಗೂ ದಂತಕಥೆ­ಯಾಗಿದೆ. ಕಾನ್ಶಿರಾಮರ ನೇತೃತ್ವದಲ್ಲಿ ಹಣವೇ ಇಲ್ಲದ ಜನರು ಪಕ್ಷ ಕಟ್ಟಲು ಸಾಧ್ಯವಾಗಿದ್ದನ್ನು ಜನ ಇಂದೂ ನೆನೆಯುತ್ತಾರೆ. ಇವೆಲ್ಲಾ ಕೇವಲ ಹಳಹಳಿಕೆಯಾಗದೆ ಮತ್ತೆ ಚಲಾವಣೆಗೆ ಬರುವು­ದಾದರೆ ಅದನ್ನು ಮತ್ತೆ ಸ್ವಾಗತಿಸಲೇ­ಬೇಕಾಗುತ್ತದೆ.
ಅಂಬಾನಿ ಅವರನ್ನು ಪ್ರಶ್ನಿಸಿದ ಹಾಗೆ ನಾವು ಪ್ರಶ್ನೆ ಮಾಡಲೇಬೇಕಾದ ಜನ ಬಹಳ ಮಂದಿ ಇದ್ದಾರೆ. ಅವರ ಬೆಂಬಲ ಯಾರಿಗಿರುತ್ತದೆ ಎಂದು ತಿಳಿಯಬೇಕಿದೆ. ರಾಷ್ಟ್ರೀ­ಕೃತ ಬ್ಯಾಂಕು­ಗಳಿಂದ ಪಡೆದ ಹಣವನ್ನೇ ಹಿಂದಿರುಗಿಸದ ಉದ್ಯಮಿಗಳು, ಕಂಪ್ಯೂಟರ್ ಲೋಕದ ದೊರೆಗಳು ಇವರ ಆಶೀರ್ವಾದ ಯಾರಿಗೆ? ಈ ಸಂಗತಿ ಬಹಿರಂಗ­ವಾಗಬೇಕಿದೆ. ಬಂಡವಾಳ ಶಾಹಿಗಳು, ರಾಜ­ಕಾರಣಿ­ಗಳು ಒಂದಾದ ರಾಜಕೀಯ ಜನ­ಸಾಮಾನ್ಯರು ಅಹೋರಾತ್ರಿ ನೋಡುವ ನಾಟಕವಾಗಿರುತ್ತದೆ. ಆ ಹೊತ್ತಿನಲ್ಲಿ ಆ ವೇಷ ಭೂಷಣದಲ್ಲಿ ಏನೂ ತಿಳಿಯುವುದಿಲ್ಲ.
ರಾಜಕಾರಣಿಗಳು ಕೆಲವೇ ವರ್ಷದ ರಾಜಕೀಯ ಅವಕಾಶವನ್ನು ಬಳಸಿಕೊಂಡು ಬಂಡವಾಳಗಾರರಾಗುತ್ತಾರೆ. ಉದ್ಯಮಪತಿಗಳು ಕೊಟ್ಟ ಹಣ ಅದು ದೇಣಿಗೆಯಾಗಿರುವುದಿಲ್ಲ, ರಾಜಕೀಯದ ಹೆಸರಿನಲ್ಲಿ ಹೂಡಿದ ಬಂಡವಾಳ­ವಾಗಿರುತ್ತದೆ. ರಾಜಕೀಯಕ್ಕೆ ಹೂಡುವ ಹಣ ಐದು ವರ್ಷ ನಿರಂತರವಾಗಿ ಕರೆಯುವ ಹಸು­ವಿಗೆ ಹಿಂಡಿ ಹಾಕಿದಂತೆ. ಜನಸಾಮಾನ್ಯನಿಗೆ ಇರುವ ಬಂಡವಾಳ ಒಂದು ವೋಟು. ಆದರೂ ಆ ಒಂದು ವೋಟಿಗಾಗಿ ಇಷ್ಟೆಲ್ಲಾ ಹೈರಾ­ಣಾ­ಗು­ವುದೇ ಪ್ರಜಾಪ್ರಭುತ್ವದಲ್ಲಿರುವ ಶಕ್ತಿ. ವೋಟನ್ನೇ ಖಡ್ಗವಾಗಿಸಿಕೊಂಡು ಜನ­ಸಾಮಾ­ನ್ಯರು ಪ್ರಜಾಪ್ರಭುತ್ವಕ್ಕಾಗಿ ಹೋರಾಡಬೇಕಾಗಿದೆ. 



ಡಾ.ವಸು ಮಳಲಿ ಅವರ`ಕಳ್ಳು-ಬಳ್ಳಿ' ಪ್ರಜಾವಾಣಿ ಅಂಕಣ ಬರಹಗಳು-2

ಸೌಜನ್ಯ: ಪ್ರಜಾವಾಣಿ
ಮಹಾಕಾವ್ಯಗಳ ಬಹುಮುಖಿ ಜಗತ್ತು
Tue, 08/05/2014

‘ಮಾಣ್ ನಿಷಾದ ಮಾಣ್’. ಹುತ್ತ­ದಿಂದ ಹೊರಬಂದ ವಾಲ್ಮೀಕಿ, ಹಾರುತ್ತಿದ್ದ ಕ್ರೌಂಚ ಪಕ್ಷಿಗಳಿಗೆ ಬೇಡನೊಬ್ಬ ತೊಟ್ಟ ಬಾಣವನ್ನು  ಕಂಡು ಉಚ್ಚರಿಸಿದ ಮೊದಲ ಸಾಲು ಇದೆಂಬ ಪ್ರತೀತಿ.
ಮಹಾಕಾವ್ಯಗಳನ್ನು ವಿವಾದಕ್ಕೆ ಹಚ್ಚುವುದು ಭಾರತದಲ್ಲಿ ಹೊಸ ವಿಚಾರವೇನೂ ಅಲ್ಲ. ‘ಮಹಾ­ಭಾರತ’, ‘ರಾಮಾಯಣ’ಗಳ ಪಾತ್ರಗಳ ಬಗೆಗಾಗಲಿ, ಅದನ್ನು ರಚಿಸಿದ ಕವಿಗಳ ವಿಚಾರ­ವಾಗಿ ಆಗಲಿ ಅಥವಾ ಅದನ್ನು ಕುರಿತು ಬರುವ ಮತ್ತಾವುದೇ ವಿಮರ್ಶೆಗಳನ್ನಾಗಲಿ ತೆರೆದ ಮನಸ್ಸಿ­ನಿಂದ ಸ್ವೀಕರಿಸುವುದು ಸುಲಭದ ವಿಚಾರ­ವಲ್ಲ. ಸಂಸ್ಕೃತಿಯ ಭಾಗವಾದ ಕಾವ್ಯವೊಂದು  ಎಲ್ಲರಿಗೂ ಸೇರಿರುತ್ತದೆ ಎಂದು ಭಾವಿಸಿದರೆ ವಿಮರ್ಶೆಯಾಗಲಿ, ತಪ್ಪು–ಸರಿ ಎಂಬ ಪ್ರಶ್ನೆಯಾ­ಗಲಿ ಏಳುವುದಿಲ್ಲ.
ಈ ಕಾವ್ಯಗಳು ಕೇವಲ ಕಾವ್ಯಗ­ಳಾಗಿ ಉಳಿದಿಲ್ಲ, ಈ ನಾಡಿನ ಬದುಕಿನ ಹಾದಿಗೆ ಹೆಣೆದುಕೊಂಡಿವೆ. ಹಾಗಾಗಿ ಎಲ್ಲರೂ ಅದರ ಮೇಲೆ ತಮ್ಮ ಹಕ್ಕನ್ನು ಚಲಾಯಿಸುತ್ತಾ ಬಂದಿ­ದ್ದಾರೆ. ಕೆಲವರಿಗೆ ಕಾವ್ಯವಾದರೆ, ಮತ್ತೆ ಕೆಲವ­ರಿಗೆ ಅದು ಧರ್ಮ,  ಕಲೆ, ಆದರ್ಶ, ಪುರಾಣ ಎಲ್ಲವೂ ಆಗಿವೆ. ಅಯೋಧ್ಯೆ ವಿವಾದದ ಸಂದ­ರ್ಭದ ಹೊತ್ತಿಗೆ ಕಾವ್ಯವನ್ನು ಚರಿತ್ರೆಯಾಗಿ ನೋಡ­ಲಾ­ಯಿತು. ನಂಬಿಕೆ, ಕಾವ್ಯ, ಧರ್ಮ, ದೇವರು ಎಲ್ಲಾ ಬೆರೆತು ರಾಜಕೀಯಗೊಂಡಿತು. ರಾಜಕೀಯಗೊಂಡ ಧರ್ಮ, ವೈಚಾರಿಕತೆ­ಯನ್ನು ಕಳೆದುಕೊಳ್ಳುತ್ತದೆ. ಮೂಕ ಸಾಕ್ಷಿ­ಯಾದ ದೇವರುಗಳೂ ಅಂದು ಬೆರಗುಗೊಂಡಿರ­ಬೇಕು. ಅದರ ಮೂಲದ ರಚನೆಯನ್ನು ಬಿಟ್ಟು ಮತ್ತೇನೋ ಆಗಿ ನೋಡುವುದೇ ಈ ಕಾವ್ಯಗಳ ಬಗೆಗಿನ ಸಮಸ್ಯೆಯಾಗಿದೆ. ಎ.ಕೆ. ರಾಮಾನು­ಜನ್‌ ಬರೆದ ಮುನ್ನೂರು ರಾಮಾಯಣಗಳನ್ನು ಕುರಿತ ಪ್ರಬಂಧವನ್ನು ಎರಡು ವರ್ಷಗಳ ಹಿಂದೆ ದೆಹಲಿ ವಿಶ್ವವಿದ್ಯಾಲಯ ಪಠ್ಯವಾಗಿಸಿತು. ಅದರ ವಿರುದ್ಧ ಪ್ರತಿಭಟನೆ ತಲೆದೋರಿದಾಗಲೂ ರಾಮಾ­ಯಣ ಕಾವ್ಯ ಹೀಗೇ ಇರಬೇಕೆಂದು ಹೇಳುವ ಮೂಲಭೂತವಾದ ಅಲ್ಲಿ ಮನೆ ಮಾಡಿತ್ತು.
ರಾಮಾಯಣ, ಮಹಾಭಾರತಗಳ ವಿಭಿನ್ನ ನೋಟಗಳನ್ನೇ ಅಲ್ಲಿ ಪ್ರಶ್ನೆ ಮಾಡಲಾ­ಯಿತು. ಕರ್ನಾಟಕದಲ್ಲಿ ಪೋಲಂಕಿ ರಾಮ­ಮೂರ್ತಿ ಅವರು ‘ಸೀತಾಯಣ’ವನ್ನು ಬರೆದಾಗ ಬಂದ ವಿರೋಧ ಇದಕ್ಕೆ ಮತ್ತೊಂದು ಉದಾಹ­ರಣೆ. ಕಾವ್ಯದ ವೈವಿಧ್ಯಮಯ ವ್ಯಾಖ್ಯಾನವನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿಯೇ ಸಮಸ್ಯೆಗೆ ಕಾರಣವಾಗಿದೆ. ಮಹಾಕಾವ್ಯದ ಹುಟ್ಟನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಮಸ್ಯೆಯಿದೆ ಎನ್ನು­ವುದು ಸ್ಪಷ್ಟವಾಗುತ್ತದೆ.
ಪ್ರಾಚೀನ ಮಹಾಕಾವ್ಯಕ್ಕೆ ಮೂಲಗಳು ಹಲ­ವಾರು. ಅದು ಅದರ ಸೊಬಗೂ ಹೌದು. ಜೀವ­ನಾ­ನುಭ­ವಗಳನ್ನು ಜನರು ಕಥೆ ಕಟ್ಟಿ ಹೇಳ­ತೊಡ­ಗು­ತ್ತಾರೆ. ಅದರಲ್ಲೂ ಸಾಹಸದ ಗಳಿಗೆಗಳು ರೋಚ­­ಕತೆ­ಯನ್ನು ಪಡೆದುಕೊಳ್ಳುತ್ತವೆ. ಕಟ್ಟಿ­ಕೊಂಡ ಆಶಯಗಳು, ಕಂಡ ಕನಸುಗಳು, ಕಂಡುಂಡ ನೋವುಗಳು ಈ ಕಥೆಗಳ ತಿರುಳಾಗಿ­ರು­ತ್ತವೆ. ಹೀಗೆ ಸಮಾಜದಲ್ಲಿ ಜನಜನಿತವಾದ ನೂರಾರು ಕಥೆಗಳು ಜನಪದರ ಬಾಯಲ್ಲಿ ಹರಿ­ದಾ­ಡುತ್ತಿರುತ್ತವೆ. ಅವು ಗಾದೆಗಳಾಗಿ, ಒಗಟುಗ­ಳಾಗಿ ಜನಪದ ಗೀತೆಗಳಾಗಿ ರೂಪು ಪಡೆಯು­ತ್ತವೆ. ‘ಕವಿರಾಜಮಾರ್ಗ’ಕಾರ ‘ಕುರಿತೋದ­ದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್‌’ ಎಂದು ಹೇಳುತ್ತಾ ಜನಪದರ ಈ ಕಾವ್ಯಕಟ್ಟುವ ಗುಣವನ್ನು ಮೆಚ್ಚಿ ನುಡಿಯುತ್ತಾನೆ. ಇಂತಹ ಕಾವ್ಯಕಟ್ಟುವ ಗುಣ ಜಗತ್ತಿನಾದ್ಯಂತ ಜನಪದರಿ­ಗಿತ್ತೆಂಬುದು ಸೋಜಿಗ ವೆನಿಸುತ್ತದೆ. ಅವರು ಹಳ್ಳಿ­ಗ­ರಾಗಿರಲಿ, ಗಿರಿಜನರಾಗಿರಲಿ, ಪಶುಪಾಲಕ­ರಾ­ಗಿರಲಿ ಅವರವರ ಹಿನ್ನೆಲೆಯ ಬದುಕು ಹಾಡಾಗಿ ಹೊರಹೊಮ್ಮಿದೆ.
ಇಂತಹ ಕಥೆಗಳು ಮುಂದೆ ಲಾವಣಿಗಳಾಗಿ ಕಥನ ಕವನಗಳಾಗಿ ಬೆಳೆ­­ಯು­ತ್ತವೆ. ಅದರಲ್ಲೂ ಕಾದಾಟಗಳನ್ನು ಕಂಡ­­ವರು, ತಮ್ಮ ಒಡೆಯನ ರಥಕ್ಕೆ ಸಾರಥಿ­ಗ­ಳಾ­­­ದವರು ಊರಿಗೆ  ಮರಳಿ ಬಂದಾಗ ಕದನ­ವನ್ನು ಸ್ವಾರಸ್ಯಕರವಾಗಿ ವಿವರಿಸು­ತ್ತಿದ್ದರು. ಇಂತಹ ವೀರರ ಕಥೆಗಳು ಬೆಳೆದು ಅದರ ಹುಟ್ಟನ್ನು ಮರೆತು ಸರ್ವವ್ಯಾಪಿಯಾಗ­ತೊಡ­­ಗು­ತ್ತವೆ. ಊರಿಂದ ಊರಿಗೆ ಅಲೆಯುವ ಮಂದಿ ತಮ್ಮ ಜೊತೆ ಕಥೆಗಳನ್ನೂ ತೆಗೆದು­ಕೊಂಡು ಹೋಗು­ತ್ತಾರೆ.   ಪರ ಊರಿನ ಕಥೆ­ಗಳನ್ನು ತಮ್ಮ ಊರಿಗೆ ತಂದು ಅಲ್ಲಿನ ಅನು­ಕೂಲಕ್ಕೆ ತಕ್ಕಂತೆ ನಿರೂ­­ಪಿ­ಸುತ್ತಾರೆ. ಕಾಲಾಂತರ­ದಲ್ಲಿ ಯಾರದೋ ಕಥೆ ಯಾರದೋ ಹೆಸರಿನಲ್ಲಿ ಕೇಳ­ತೊಡಗುತ್ತದೆ. ಅಷ್ಟೇ ಅಲ್ಲದೆ, ತಾವು ಮೆಚ್ಚುವ ನಾಯಕನನ್ನು  ತಮಗೆ ಬೇಕಾದಂತೆ ಚಿತ್ತಾರಗೊಳಿಸುತ್ತಾ ಹೋಗು­ತ್ತಾರೆ.
ಹೀಗೆ ಯಾವುದೋ ಕಾಲದಿಂದ ಹರಿದು ಬಂದ ಕಥೆಗಳು ಮಹಾ ನದಿಯನ್ನು ಸೇರುವ ಉಪನದಿಗಳಂತೆ ಕೂಡಿಕೊಳ್ಳುತ್ತವೆ. ಎಲ್ಲವನ್ನೂ ತಮ್ಮದಾಗಿಸಿಕೊಂಡು  ಕಥೆ ಹೇಳುವ ಕಲೆಗಾರರ ಬಾಯಲ್ಲಿ ಎಲ್ಲವೂ ಆತ್ಮೀಯವಾಗ­ತೊಡ­ಗುತ್ತವೆ. ಆದ್ದರಿಂದಲೇ ಭರತ ಖಂಡದಲ್ಲಿ ಹುಟ್ಟಿದ ಕಥೆಗಳು ಮ್ಯಾನ್ಮಾರ್‌ನಲ್ಲೂ, ಮಲೇ­ಷ್ಯಾ­­ದಲ್ಲೂ ಅವರದೇ ಕಥೆಗಳೆನ್ನುವಂತೆ ಜನಜ­ನಿ­ತ­ವಾಗಿವೆ. ಇಷ್ಟೇ ಅಲ್ಲದೆ, ಅವು ಯಾವುದೋ ಒಂದು ಕಾಲಕ್ಕೆ ಸೇರಿದ ಕಥೆಗಳೂ ಅಲ್ಲ. ನಿರಂತರ­ವಾಗಿ ಬೆಳೆಯುವ ಕಥೆಗಳು. ಇವು ಒಂದು ಹಂತಕ್ಕೆ ನಾವು ಕೇಳುವ ಜನಪದ ಮಹಾಕಾವ್ಯದ ಸ್ವರೂಪ­ವನ್ನು ಪಡೆದುಕೊಳ್ಳುತ್ತವೆ. ಇದರ ಬೆಳ­ವ­ಣಿಗೆ ಅಲ್ಲಿಗೇ ನಿಲ್ಲುವುದಿಲ್ಲ.  ಪ್ರತಿಭಾವಂತ ಕವಿ ಅದನ್ನೊಂದು ಬಿಗಿಯಾದ ಛಂದಸ್ಸಿಗೆ ಒಗ್ಗಿಸಿ ತನ್ನ ನಿಲುವುಗಳ ಜೊತೆಗೆ ಅದಕ್ಕೊಂದು ಚೌಕ­ಟ್ಟನ್ನು ನೀಡುತ್ತಾನೆ.
ಹಾಗಾಗಿ ಮಹಾಕಾವ್ಯದ ಸ್ವರೂಪ ಸಿಕ್ಕಿದಂತಾಗುತ್ತದೆ. ಜನಪದೀಯವಾದ ಹಲವು ಅಂಶಗಳನ್ನು ಉಳಿಸಿಕೊಳ್ಳುತ್ತಾ ಮಹಾ­ಕವಿ­­ಯಿಂದ ಕೆಲವನ್ನು ಪಡೆದುಕೊಳ್ಳುತ್ತಾ ಮಹಾ­ಕಾವ್ಯ ಅರಳುತ್ತದೆ. ಮಹಾಕವಿ ತನ್ನ ಶಿಷ್ಟತೆ­ಯನ್ನು  ತನಗರಿವಿಲ್ಲದಂತೆ ಅಲ್ಲಿಯ ಪಾತ್ರಗಳಿಗೆ ಬರಿಸುತ್ತಾನೆ. ಹೀಗೆ ರೂಪಿತವಾದ ಎರಡು ಸಂಸ್ಕೃತ ಮಹಾಕಾವ್ಯಗಳೆಂದರೆ ‘ಮಹಾಭಾರತ’ ಮತ್ತು ‘ರಾಮಾಯಣ’. ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಕಥೆಗಳು. ಮಹಾ­ಭಾರತ ಉತ್ತರ ಭಾರತದ ಹಲವು ಬುಡಕ­ಟ್ಟು­ಗಳು ನಡೆಸಿದ ಕದನದ ಹಿನ್ನೆಲೆಯಲ್ಲಿ ಬೆಳೆದು ಬಂದ ಕಥೆ. ಆ ಕಥೆಗೆ ಹಿಡಿಂಬೆಯ ಹೆಸರಿನಲ್ಲಿ ಸೇರಿ­ರುವ ಕಥಾ ಭಾಗ ಕನ್ನಡನಾಡಿನ ಚಿತ್ರ­ದುರ್ಗ ಇರಬಹುದಾದರೆ, ವಾಲಿ–ಸುಗ್ರೀವರ ಭಾಗ ಕಿಷ್ಕಿಂದಾ ನಾಡೆನಿಸಿಕೊಂಡ ಇಂದಿನ ಹಂಪಿ ಪ್ರದೇಶದ ಕಥೆ. ಒಟ್ಟು ಮಹಾಕಾವ್ಯದಲ್ಲಿ ಬರುವ ಕಥೆಗಳು ಬೇರೆಬೇರೆ ಕಾಲಘಟ್ಟದಲ್ಲಿ ನಡೆದಿರಬಹುದಾದ ಘಟನೆಗಳು, ಅನುಭವಗಳು ಅವಾಗಿರಬಲ್ಲವು. ಅಷ್ಟೇ ಅಲ್ಲದೆ, ಜನಪದರ ಹಾಗೂ ಮಹಾಕವಿಯ ಕಲ್ಪನೆಗಳು, ಆಶಯ­ಗಳು ಅದರಲ್ಲಿ ಸೇರಿಹೋಗಿರುತ್ತವೆ.
ಮಹಾಕಾವ್ಯದ ಕಥೆಗಳು ಒಂದು ಕಾಲ ಘಟ್ಟ­ದವೂ ಆಗಿರಲಾರವು ಎನ್ನುವುದಕ್ಕೂ ನಮಗೆ ಪ್ರಾಕ್ತನ ಆಧಾರಗಳೇ ದೊರಕುತ್ತವೆ. ಪ್ರಾಕ್ತನ ಶಾಸ್ತ್ರಜ್ಞ­ರಾದ ಎಸ್.ಡಿ. ಸಂಕಾಲಿಯ ಈ ನಿಟ್ಟಿ­ನಲ್ಲಿ ನಡೆಸಿದ ಸಂಶೋಧನೆ ಬಹು ಅಪರೂಪ­ದ್ದೆಂದೇ ಹೇಳಬೇಕಾಗುತ್ತದೆ. ಇವತ್ತು ನಾವು ಕೇಳುತ್ತಿರುವ ರಾಮಾಯಣ, ಮಹಾಭಾರತದ ನಗರಗಳ ವೈಭವ ಸುಮಾರು ಸಾವಿರದ ಐನೂರ­ರಿಂದ ಏಳುನೂರು ವರ್ಷಗಳಷ್ಟು ಹಿಂದಕ್ಕೆ ಹೋಗು­ತ್ತದೆ. ಎಂದರೆ ಬಹುತೇಕ ಗುಪ್ತರ ಕಾಲದ ಆಸ್ಥಾನಗಳನ್ನು ಇಲ್ಲಿ ವರ್ಣಿಸಲಾಗಿದೆ. ಆದ್ದ­ರಿಂದ ರಾಮಾಯಣ, ಮಹಾಭಾರತದ ಕಥೆ­ಗಳಲ್ಲಿ ಕಾಣುವ ವೈದಿಕ ಕಾಲದ ಬೆಳವಣಿಗೆಯ ಹಂತ ಇದಾಗಿಲ್ಲ. ರಾಮಾಯಣ  ಕಾಲದ್ದೆಂದು ನಂಬಿರುವ ಅಯೋಧ್ಯ ಆ ಕಾಲದಲ್ಲಿ ಇರಲಿಲ್ಲ­ವೆಂದು ಈಗಾಗಲೇ ಚರಿತ್ರೆಕಾರರು ಕಂಡುಕೊಂಡಿ­ದ್ದಾರೆ. ಆದ್ದರಿಂದ ಗುಪ್ತರ ಕಾಲದ ಪ್ರಸಿದ್ಧ ನಗರವೊಂದು ಕಾವ್ಯದ ಕೇಂದ್ರಬಿಂದುವಾ­ಯಿತು. ಕಾವ್ಯಗಳು ನಿರಂತರವಾಗಿ ಬೆಳೆಯುತ್ತಿ­ರು­ತ್ತವೆ ಎನ್ನುವುದಕ್ಕೆ ಇದು ಒಂದು ಒಳ್ಳೆಯ ಉದಾಹರಣೆಯಾಗಿದೆ.
ಆಯಾ ಕಾಲಘಟ್ಟದಲ್ಲಿ ಬಳಸುತ್ತಿದ್ದ ವಸ್ತುಗ­ಳನ್ನು ಆಧರಿಸಿ ಸಂಕಾಲಿಯ ಅವರು ರಾಮಾ­ಯಣ ಹಾಗೂ ಮಾಹಾಭಾರತದಲ್ಲಿ ಬಂದು ಹೋಗುವ ವಿದ್ಯಮಾನಗಳು ಯಾವ ಕಾಲ­ಘಟ್ಟ­ದವು  ಎನ್ನುವುದರ ಬಗೆಗೆ ಬೆಳಕು ಚೆಲ್ಲುತ್ತಾರೆ. ಮುದ್ರೆಯುಂಗುರ  ದುಷ್ಯಂತ ಹಾಗೂ ಶಕುಂತ­ಲೆ­ಯರ ಕಥೆಗೆ ತಿರುವು ನೀಡುವ ಪ್ರಸಂಗ. ಭಾರತದ ಚರಿತ್ರೆಯಲ್ಲಿ ಮುದ್ರೆಯುಂಗುರ­ವೊಂದು ಕಾಣಿಸಿಕೊಳ್ಳುವುದು ಒಂದನೇ ಶತ­ಮಾನ­ದಲ್ಲಿ. ಅದರ ಅರ್ಥ ಮುದ್ರೆಯುಂಗುರದ ಪ್ರಸಂಗ ಆನಂತರದಲ್ಲಿ ಮಹಾಕಾವ್ಯಕ್ಕೆ ಬಂದು ಸೇರಿದೆ. ರಾಮಾಯಣದಲ್ಲಿ ಹನುಮಂತ, ರಾಮನ ಮುದ್ರೆಯುಂಗುರವನ್ನು ಸೀತೆಗೆ ತೋರಿ­ಸಿ­ದಾಗ ಒಂದನೇ ಶತಮಾನ ಕಳೆದುಹೋಗಿ­ರ­ಬೇಕು. ಇಂತಹ ನೂರಾರು ವಿಚಾರಗಳು ಚರಿ­ತ್ರೆಯ ಸಂಶೋಧನೆಗೆ ಸಿಗುತ್ತವೆ. ಅದೇ ಸಾಮಾ­ಜಿಕ ಹಿನ್ನೆಲೆಯನ್ನು ನೋಡಿದರೆ ಈ ಕಾವ್ಯಗಳಲ್ಲಿ ಬರುವ ರಾಕ್ಷಸರು ಯಾರು? ಕಾವ್ಯಗಳಲ್ಲಿ ವರ್ಣಿ­ಸಿ­ರುವಂತೆ ವಿಕಾರವಾಗಿದ್ದರೇ? ಇಂತಹ ಪ್ರಶ್ನೆಗಳು ಬಹುಶಃ ಕಾವ್ಯದ ಗುಣವನ್ನು ಕಳೆಯುತ್ತವೆ.

ಆದರೂ ಮಹಾಕಾವ್ಯಗಳನ್ನು ರಚಿಸಿದ ಹೆಗ್ಗ­ಳಿಕೆ ವಾಲ್ಮೀಕಿ ಹಾಗೂ ವ್ಯಾಸರಿಗೆ ಸಲ್ಲು­ತ್ತದೆ. ಹಾಗೆಂದು ಆ ಕಾವ್ಯಗಳು ಅಲ್ಲಿಗೇ ನಿಲ್ಲುವುದೂ ಇಲ್ಲ. ಮಹತ್ವದ ಬದಲಾವಣೆಗಳನ್ನು ಮುಂದೆ ಬಂದ ಕವಿಗಳು ಅದಕ್ಕೆ ನೀಡಿದ್ದಾರೆ. ಆ ಕಥೆಗಳ ವಿಸ್ತರಣೆಯಲ್ಲಿ ಎಷ್ಟರಮಟ್ಟಿಗೆ ಒಬ್ಬೊಬ್ಬ ಕವಿಯೂ ಕಾರಣನಾಗಿದ್ದಾನೆಂದು ನೋಡು­ವುದು ಕವಿಚರಿತ್ರೆಕಾರರ ಕುತೂಹಲಕ್ಕೆ ಬಿಟ್ಟ ವಿಚಾರವಾಗುತ್ತದೆ. ಅವರಾಡುವ ಭಾಷೆಗೆ ಆ ಕಥೆ­ಗಳನ್ನು ಒಳಗುಮಾಡಿಕೊಳ್ಳುವ ಮೂಲಕ ಹೊಸವಿಸ್ತಾರವನ್ನು ನೀಡುತ್ತಾ ಹೋಗುತ್ತಾರೆ. ಇಲ್ಲಿ ಕಾವ್ಯ ಮೂಲದ ಪ್ರಶ್ನೆ, ಕಾವ್ಯವನ್ನು ಆಸ್ವಾ­ದಿ­ಸುವ ಓದುಗನಿಗೆ ಮುಖ್ಯವಾಗುವುದಿಲ್ಲ. ಅಕಾಡೆ­ಮಿಕ್ ಪ್ರಶ್ನೆಯಾಗಿ ಮಾತ್ರ ಉಳಿಯು­ತ್ತದೆ. ಕಾವ್ಯದ ಜೀವಂತಿಕೆ ಇರುವುದೇ ಅದರ ವಿಕಾಸ ಗುಣದಲ್ಲಿ. ಮೂಲಕಾವ್ಯದಲ್ಲಿ ಕಾಣದ ಹೊಸ­ದಾದ ಸರ್ವೋದಯವೆಂಬ ಆದರ್ಶ ಕಂಡರೆ ಅದು ಕುವೆಂಪು ಅವರ ಕೊಡುಗೆ­ಯಾ­ಗು­ತ್ತದೆ. ಹೀಗೊಂದು ವಿದ್ವತ್ ಮಟ್ಟದ ಸಂವಾ­ದವೂ ಸದಾಕಾಲಕ್ಕೂ  ಸಾಗಿಬರುತ್ತದೆ. ಅದ­ರಲ್ಲಿ ವಿದ್ವತ್ ಪ್ರಪಂಚ ಬೌದ್ಧಿಕ ನೆಲೆಯಲ್ಲಿ ಕಾವ್ಯ­ವ­ನ್ನು ಆಸ್ವಾದಿಸಬಲ್ಲದು.  
ಕಾವ್ಯದ ಮೂಲ ನೆಲೆಯನ್ನು  ಜನಪದರಲ್ಲಿ ಕಂಡುಕೊಂಡಂತೆ ಅವು ಮರಳಿ ಜನಪದರಿಗೆ ಹೋದಾ­ಗಲೂ ಬೇರೊಂದು ಸೊಬಗನ್ನು ಅಲ್ಲಿ ಕಾಣ­ಬಹುದು. ಅದಾವುದೂ ಇಲ್ಲದೆ ತಮ್ಮದೇ ಶೈಲಿ­ಯಲ್ಲಿ ಹಗಲು ವೇಷದವರು ಮುಖಕ್ಕೆ ಬಣ್ಣ ಬಳಿದು ರಾಮ, ಸೀತೆ, ಹನುಮಂತನಾಗಿ ಕುಣಿ­ದರೆ, ಜಗಜಗಿಸುವ ಆಭರಣಗಳನ್ನು ತೊಟ್ಟು, ಬಣ್ಣಬಣ್ಣದ ಸೀರೆಯುಟ್ಟು ಪೌರಾಣಿಕ ನಾಟಕ­ಗಳನ್ನು ಆಡುವ ಕಲಾವಿದರು ಅವರವರ ಕಲ್ಪನೆಗೆ ತಕ್ಕಂತೆ ಸಂಭ್ರಮಿಸುತ್ತಾರೆ. ಅದರ ಹಿಂದಿನ ಕಥೆಯ ಮೂಲ ಆಶಯವನ್ನು ಉಳಿಸಿ­ಕೊಂಡು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮೆರೆಸು­ತ್ತಾರೆ. ಹಾಗೆಂದರೆ ಇವರು ಮೂಲಮಾತೃಕೆಗೆ ಸದಾ ನಿಷ್ಠರಾಗಿರಬೇಕೆಂದೇನೂ ಅಲ್ಲ. ದೂರ ಸರಿಯುವ ಎಲ್ಲಾ ಹಕ್ಕನ್ನೂ ಪಡೆದೇ ಇರುತ್ತಾರೆ.
ಕಾವ್ಯದ ಮೇಲಿನ ಒಡೆತನ ಇಡೀ ಸಮಾಜಕ್ಕೇ ಸೇರಿರುತ್ತದೆ. ಇಂತಹ ಮಾರ್ಪಾಡುಗಳು ಯಕ್ಷ­ಗಾನ­ದಲ್ಲಿ ಹೇರಳವಾಗಿ ಕಾಣುತ್ತವೆ. ಕೃಷ್ಣಸಂ­ಧಾ­ನದ ಸಮಯದಲ್ಲಿ ಬಹುಸಹಜವಾಗಿ ಸಮ­ಕಾಲೀನ ರಾಜಕೀಯ ವಿಡಂಬನೆಗಳು ಸೇರಿರು­ತ್ತವೆ. ಮಹಾಕಾವ್ಯವನ್ನು ತಮ್ಮ ನೆಲೆಗೆ ದಕ್ಕಿಸಿ­ಕೊಳ್ಳುವಲ್ಲಿ ಜನಪದರು ನಿಸ್ಸೀಮರು.
ಉತ್ತರ ಕನ್ನಡ ಜಿಲ್ಲೆಯ ‘ಗಾಮೊಕ್ಕಲ ಭಾರತ’ ಕೃತಿಯಲ್ಲಿ ದ್ರೌಪದಿಯನ್ನು ಈ ಒಕ್ಕಲು ಸಮುದಾ­ಯದ ಹೆಣ್ಣು ಮಗಳಂತೆ ಚಿತ್ರಿಸಿಕೊಳ್ಳು­ತ್ತಾರೆ. ಗುಡಿಸಲಿಗೆ ಸೆಗಣಿ ಹಾಕಿ ಸಾರಿಸುತ್ತಾರೆ. ದ್ರೌಪದಿ­ಯನ್ನು ಪಣಕ್ಕೊಡ್ಡಿ ಪಗಡೆಯಾಟದಲ್ಲಿ ಪಾಂಡ­ವರು ಸೋತಾಗ ಮೈದುನ ದುಶ್ಯಾಸನ ಅವಳನ್ನು  ಸಭೆಗೆ ಕರೆತರುವ ಪ್ರಸಂಗದಲ್ಲಿ, ಅವಳು ಮುಟ್ಟಾಗಿ ಗುಡಿಸಲಿನಲ್ಲಿರುತ್ತಾಳೆ. ಸಭೆಗೆ ಬಂದ ದ್ರೌಪದಿ ತನ್ನ ಗಂಡಂದಿರಿಗೆ ಛೀಮಾರಿ ಹಾಕಿ ಆ ದೊಡ್ಡ ಗುಡಿಸಲಿನಿಂದ ಹೊರ­­ಹೋಗುತ್ತಾಳೆ. ಅಲ್ಲಿ ಅವಳೊಬ್ಬ ಅಸಹಾ­ಯಕ ಮಹಿಳೆಯಲ್ಲ. ಆದರೆ, ಭಾಗವತದ ಪ್ರಭಾವಕ್ಕೆ ಒಳಗಾದ ಕವಿಗಳು ಅವಳ ಸೀರೆ ಅಪ­ರಿ­ಮಿತವಾಗಿ ಹೆಚ್ಚಿ ಅವಳ ಮಾನವನ್ನು ಕೃಷ್ಣ ಕಾಪಾಡುವಂತೆ ಕಲ್ಪಿಸಿ­ದ್ದಾರೆ. ಬಹುಶಃ ಬುಡ­ಕಟ್ಟು ಮಹಿಳೆಗೆ ಆ ಅಸ­ಹಾ­ಯಕತೆಯನ್ನು ತೋರು­ವುದು ವಿಚಿತ್ರವೆನಿಸಿ­ರ­ಬೇಕು. ಅದೇ ರೀತಿ ರಾಮಾಯಣದ ಸೀತೆ ಅಗ್ನಿ­ಪ್ರವೇಶ ಮಾಡು­ವುದು ಯಾರ ಆಶಯ­ವಾಗಿರ­ಬಹುದು ಎಂಬು­ದನ್ನು ನಾವು ಇಂದು ಯೋಚಿಸ­ಬೇಕಾಗುತ್ತದೆ.
ಈ ಕಾವ್ಯದ ಹರವು ಭಾರತಕ್ಕೆ ಮೀಸಲಾಗಿ­ರದೆ ಏಷ್ಯಾದಾದ್ಯಂತ ಪಸರಿಸಿದೆ. ಆ ವೈಶಾಲ್ಯ ಅದನ್ನು ಓದುವವರೂ ಆಚರಿಸುವವರೂ ರೂಢಿ­ಸಿ­ಕೊಳ್ಳಬೇಕಾಗಿದೆ. ಕವಿ, ಆಶಯ, ಅದರ ಹಿಂದಿನ ಚಾರಿತ್ರಿಕ ಸತ್ಯ ಎಲ್ಲವನ್ನೂ ಸಮಕಾಲೀನ­ಗೊಳಿಸಿ ರಾಜಕೀಯ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಕಾವ್ಯವನ್ನು ನಂಬುವಂತೆ ಕವಿಯ ಮೂಲಕ್ಕೂ ಸೊಗಸಾದ ಕಥೆಗಳಿವೆ. ಕಾವ್ಯದ ಒಳಹೊಕ್ಕ ಆ ಕಥೆಗಳೇ ಅದರ ಆಕರ­ಗಳೂ ಆಗಿರುತ್ತವೆ. ಭಾರತದ ಇಂದಿನ ಜಾತಿ ರಾಜ­­ಕಾರಣ ಈ ಎಲ್ಲದರಲ್ಲೂ ತನ್ನ ಹಸ್ತಕ್ಷೇಪ­ವನ್ನು ಮಾಡುತ್ತಿರುತ್ತದೆ. ವೈಚಾರಿಕ ಪ್ರಶ್ನೆ­ಯೊಂದಿಗೆ ಹೊರಟರೆ ಸಿಕ್ಕುವ ಉತ್ತರ ವೈಚಾರಿಕವಾಗಿರುತ್ತದೆ...

ಬ್ರಾಹ್ಮಣೀಕರಣದ ಭ್ರಮೆಯೊಡೆಯುವ ‘ಹಳಗನ್ನಡ’
Tue, 07/22/2014

‘ಚಪಡೇನ ಲಿಖಿತೇ-–ಲಿಪಿಕರೇಣ’. 2,300 ವರ್ಷಗಳ ಹಿಂದೆ ರಾಜಾ­ಶೋಕನ ಆದೇಶದ ಮೇರೆಗೆ ಕನ್ನಡ ನಾಡಿನಲ್ಲಿ ಬಂಡೆಗಲ್ಲಿನ ಮೇಲೆ ಶಾಸನವನ್ನು ಬರೆದ ಲಿಪಿ­ಕಾರ ಚಪಡ. ಗಾಂಧಾರ ನಾಡಿನಿಂದ ಬಂದ ಈತ­ನಿಗೆ ಈ ನಾಡಿನಲ್ಲಿ ಲಿಪಿ ಮೂಡಿಸಿದ ಮೊದಲ ಲಿಪಿಕಾರನೆಂಬ ಹೆಗ್ಗಳಿಕೆ  ಸಲ್ಲುತ್ತದೆ. ಹಾಗೆಂದು ತಿಳಿಸಿಕೊಟ್ಟವರು ಷ.ಶೆಟ್ಟರ್. 
ಇವರು ಕನ್ನಡ­ನಾಡಿನ ಮೊದಲ ಸಹಸ್ರಮಾನದ ಎರಡೂವರೆ ಸಾವಿರ ಶಾಸನಗಳನ್ನು ಜಾಲಾಡಿ ತೆಗೆದು ಕಟ್ಟಿದ ಚರಿತ್ರೆಯ ಬೃಹತ್ ಗ್ರಂಥ: ‘ಹಳಗನ್ನಡ-– ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’ ಇಂದು ನಮ್ಮ ಮುಂದಿದೆ. ಮತ್ತೆ ಮತ್ತೆ ಚರಿತ್ರೆಯ ಸಂಶೋಧನೆ ನಡೆಯಬೇಕೆಂಬ ಮಾತನ್ನು ಈ ಕೃತಿ ಅನು­ಮೋದಿಸಿ­ದಂತಿದೆ. ಈವರೆಗೆ ನಂಬಿದ್ದ ಹಲವು ‘ಮಿಥ್‌’ಗಳನ್ನು ಇದು ಒಡೆದುಹಾಕುತ್ತದೆ. ಅದ­ರಲ್ಲೂ ಸಂಸ್ಕೃತೀಕರಣ ಮತ್ತು ಬ್ರಾಹ್ಮಣೀಕರಣ­ವೆಂಬ ಭ್ರಮೆಗಳು ಇಲ್ಲಿ ಕುಸಿದು ಬೀಳುತ್ತವೆ.
ಲಿಪಿಯ ವಿಕಾಸದಲ್ಲೂ ಎಷ್ಟೊಂದು ಕಥೆ­ಗಳು: ಯಾರು ಬರೆದರು? ಯಾಕೆ ಬರೆದರು? ಯಾರು ಬರೆಸಿದರು? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. ಮೌರ್ಯ ದೊರೆ ಅಶೋಕನ ಶಾಸನ ಬರೆಸುವ ವಿಶೇಷವಾದ ಆಸ್ಥೆ ದೇಶದಾ­ದ್ಯಂತ ಬರವಣಿಗೆಯ ಸಂಸ್ಕೃತಿಯನ್ನು ಹರಡಿತು. ‘ಬರೆದರೆ ಅನರ್ಹರೊಡನೆ ಅರಿವನ್ನು ಹಂಚಿ­ಕೊಳ್ಳ­ಬೇಕಾಗುವುದೆಂಬ ಆತಂಕದಲ್ಲಿ ಅಂದಿನ ಒಂದು ವರ್ಗವು ಅರಿವಿನ ಕೀಲಿಯನ್ನು ಕಂಠ­ಸರಳು­ಗಳ ಹಿಂದೆ ಅಡಗಿಸಿಟ್ಟಿತ್ತು.
ಇದನ್ನು ಬಿಡು­ಗಡೆ ಮಾಡಿ ಬರೆಯುತ್ತಾ ಬೆಳೆಯುವ ಮಾರ್ಗ­ವನ್ನು ತಿಳಿಸಿಕೊಟ್ಟವರಲ್ಲಿ ಬೌದ್ಧರು ಮೊದಲಿ­ಗರು’. ಈ ವಾದವನ್ನು ಕನ್ನಡದ ನೆಲಕ್ಕೂ ಅನ್ವ­ಯಿಸಿ ವಿಚಾರವನ್ನು ಮಂಡಿಸಿದ್ದಾರೆ. ಇಂತಹ ಹಲವು ಬೆಚ್ಚಿಬೀಳಿಸುವ ಸಂಗತಿಗಳು ಇಲ್ಲಿ ಕಂಡು­ಬರುತ್ತವೆ. ಲಿಪಿಬರವಣಿಗೆ ಬ್ರಾಹ್ಮಣರ ಆಸಕ್ತಿಯಾಗಿರ­ಲಿಲ್ಲ. ವೈದಿಕ ವ್ಯವಹಾರದ ಬಗೆಗೆ ಹೆಚ್ಚು ತೊಡಗಿಕೊಂಡಿದ್ದರಿಂದ ಮೊದಲ ಸಹಸ್ರಮಾನ­ದಲ್ಲಿ ಈ ನಾಡಿನಲ್ಲಿ  ‘ಕವಿಗಳಾಗಿ, ಸಾಹಿತಿ­ಗ­ಳಾಗಿ, ವೈಚಾರಿಕರಾಗಿ ವೈದಿಕರಾರೂ ಹೆಸರು ಮಾಡ­ಲಿಲ್ಲ.’
ಸಂಸ್ಕೃತ ಭಾಷೆಯಲ್ಲಿ  ಲಿಪಿ ಮೂಡಿಸಿ­ದವರು ವೈದಿಕೇತರರಾದ ವಿಶ್ವ­ಕರ್ಮರು. ಎಂಟನೇ ಶತಮಾನದಲ್ಲಿ ವೈದಿಕ­ವ್ಯವಸ್ಥೆ ಬಹು­ತೇಕ ಕುಸಿದು ಬಿದ್ದಾಗ ಆ ಸ್ಥಾನ­ವನ್ನು ತುಂಬಲು ಮುಂದೆ ಬಂದವರು ಪೌರಾಣಿ­ಕರು ಮತ್ತು ಶೂದ್ರರು. ಹಾಗಾಗಿ ಎಂಟನೇ ಶತಮಾನದ ನಂತರ ಬ್ರಾಹ್ಮಣೇತರರು ಹೆಚ್ಚಾಗಿ  ದಾನದತ್ತಿ­ಗಳನ್ನು ಪಡೆದರು. ಸಂಸ್ಕೃತ ಭಾಷೆಯ ವ್ಯವಹಾರ ಬಹುತೇಕ ಬ್ರಾಹ್ಮಣ ಸಮುದಾಯ­ದಲ್ಲಿ ನಡೆದು­ದ­ರಿಂದ ಉಳಿದ ಸಮುದಾಯ­ಗಳು ಅದರ ಲಾಭ ಪಡೆಯುವುದಕ್ಕಿಂತ, ಶೂದ್ರ ಸಮುದಾಯಗಳ ಭಾಷೆ ಮತ್ತು ಸಂಸ್ಕೃತಿಯಲ್ಲಿ ಕೊಡುಕೊಳೆ ಹೆಚ್ಚಾಗಿ ನಡೆದಿದೆ ಎಂಬುದನ್ನು ಸಾಬೀತು ಮಾಡಲು ಈ ಶಾಸನಗಳ ನೆರವು ಪಡೆದಿದ್ದಾರೆ.
ಪ್ರಾಚೀನ ಲಿಪಿ ಅಧ್ಯಯನ ಈ ನಾಡಿನಲ್ಲಿ ನಡೆದೇ ಇದೆ. ಆದರೆ ಷ.ಶೆಟ್ಟರ್‌ ಆಸಕ್ತಿ ಭಿನ್ನ­ವಾದುದು. ಲಿಪಿಯ ತಜ್ಞರು ಮಾತ್ರವಾಗದೆ ಚರಿತ್ರೆಕಾರರು, ಭಾಷಾತಜ್ಞರು, ಕವಿಚರಿತ್ರೆ­ಕಾರರು, ವೈಯ್ಯಾಕರಣಿಗಳು ಎಲ್ಲವೂ ಆಗಿ ಈ ಕೃತಿಯಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಈ ಕೃತಿಯ  ಮೂಲ ಪ್ರಶ್ನೆ ಏಳುವುದು ಲಿಪಿಕಾರರ ಹಿನ್ನೆಲೆಯಲ್ಲಿ. ಕಲ್ಲಿನ ಮೇಲೆ ತಾಮ್ರಪಟಗಳ ಮೇಲೆ ಲಿಪಿಯನ್ನು ಕೊರೆದವನ ಬದುಕು ಏನು? ಎಂಬುದು ತಿಳಿಯುತ್ತದೆ. ಮೂಲಕರ್ತೃವನ್ನೇ ಬಿಟ್ಟು ಶಾಸನ ಅಧ್ಯಯನದ ಫಲವನ್ನು ಮಾತ್ರ ಮೆಲ್ಲುತ್ತಿದ್ದ ನಮಗೆ ಹೊಸ ಕಣ್ನೋಟವನ್ನು ಇದು ಕೊಡುತ್ತದೆ.
ಶೆಟ್ಟರ್‌ ಅವರು ಈ ಹಿಂದೆಯೂ ಶಿಲ್ಪವನ್ನು ಬಿಟ್ಟು ಶಿಲ್ಪಿಗಳ ಬಗೆಗೆ ಒಲವು ತೋರಿದ್ದರು.  ಶಿಲ್ಪಿಗಳ ಹೆಜ್ಜೆಗುರುತಿನ ಅವರ ಶೋಧನೆ ವಿದ್ವತ್‌­ಲೋಕದ ಗಮನವನ್ನು ಸೆಳೆದಿತ್ತು. ಮೂಲತಃ ಕಲೆಯ ಇತಿಹಾಸದಲ್ಲಿ ಅವರಿಗೆ ಆಸಕ್ತಿ. ಹೀಗಾಗಿ ಅವರ ಹೊಯ್ಸಳ ವಾಸ್ತು­ಶಿಲ್ಪದ ಅಧ್ಯಯನವು ಎರಡು ಸಂಪುಟಗಳಲ್ಲಿ   ಪ್ರಕಟಗೊಂಡಿವೆ. ಜಾಗತಿಕ ಮಟ್ಟದಲ್ಲಿ ಅವರಿಗೆ ಹೆಸರು ತಂದುಕೊಟ್ಟ ಸಂಶೋಧನೆಗಳೆಂದರೆ ‘ಸಾವನ್ನು ಅರಸಿ’ ಮತ್ತು ‘ಸಾವಿಗೆ ಆಹ್ವಾನ’.
ಕನ್ನಡ–ಇಂಗ್ಲಿಷ್ ಭಾಷೆಗಳೆರಡರಲ್ಲೂ ಇರುವ ಈ ಕೃತಿಗಳು ಜೈನರ ಸಲ್ಲೇಖನದ ಆಚರಣೆಯ ಕುತೂಹಲದಿಂದ ರೂಪು ಪಡೆದವು. ಈ ಕೃತಿ­ಗಳು ಮೊದಲು ಇಂಗ್ಲಿಷ್‌ನಲ್ಲಿ ಬಂದ ಕಾರಣ­ದಿಂದ ಅಷ್ಟಾಗಿ  ಕನ್ನಡ ಓದುಗರ ಗಮನ ಸೆಳೆಯ­ಲಿಲ್ಲ. ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದ ಈ ಚರಿತ್ರೆಕಾರರು ಕನ್ನಡಿಗರ ಕೈಗೆಟಕುವಂತಾ­ದುದು ಅವರ ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು–ನುಡಿ’ ಕೃತಿಯಿಂದ. ಈ ಕೃತಿಯು ನೆಲದ ಜನ ಹೊತ್ತು ಮೆರೆದು ಒಬ್ಬ ವಿದ್ವಾಂಸನಿಗೆ ಸಿಗಬೇಕಾದ ಓದುಗರ ಪ್ರೀತಿ­ಯನ್ನು ತಂದುಕೊಟ್ಟಿತು.
ಸಂಶೋಧನೆಗಳು ತಾಯಿನುಡಿಯಲ್ಲಿ ನಡೆಯಬೇಕು, ಅದರ ಸಹಜತೆಯೇ ಅದರ ಸಾಮರ್ಥ್ಯವಾಗಿರುತ್ತ­ದೆಂಬುದಕ್ಕೆ ಹಿಡಿದ ಸೊಡರು ‘ಶಂಗಂ ತಮಿಳಗಂ’. ಈ ಎರಡೂ ಸಂಶೋಧನೆಗಳು ಕನ್ನಡ ನಾಡಿನ ಪ್ರಾಚೀನರ ಬದುಕಿನ ಮೇಲೆ ಬೆಳಕು ಚೆಲ್ಲುತ್ತವೆ. ಕನ್ನಡ ಭಾಷೆ–-ಸಾಹಿತ್ಯವನ್ನು ಸಂಸ್ಕೃತದ ಹಿನ್ನೆಲೆಯಲ್ಲಿ ನೋಡುವುದು ಬೆಳೆದು ಬಂದಿದೆ. ಆದರೆ ‘ಕವಿರಾಜಮಾರ್ಗ’ ಕೃತಿಯನ್ನು ನೆಪವಾಗಿರಿಸಿಕೊಂಡು ದ್ರಾವಿಡ ಮೂಲದ ಅಧ್ಯಯನವನ್ನು  ತೋರಿಸಿಕೊಟ್ಟ ಕೃತಿ ‘ಶಂಗಂ ತಮಿಳಗಂ’.
ಹಾಗೆಯೇ ಕನ್ನಡ ಭಾಷೆ ಹಾಗೂ ಲಿಪಿಯ ಬೆಳವಣಿಗೆಯಲ್ಲಿ  ಪ್ರಾಕೃತದ ಪ್ರಭಾವ­ವನ್ನು  ಗಮನಿಸಬೇಕಾದ ಅಗತ್ಯವನ್ನು ಬೆರಳು ಮಾಡಿ ತೋರುತ್ತಿರುವ ಪುಸ್ತಕ ‘ಹಳಗನ್ನಡ’. ಈ ಎಲ್ಲದರ ಹಿಂದಿರುವ ಬೌದ್ಧಧರ್ಮದ ಮಹತ್ವ ಕರ್ನಾಟಕ ಚರಿತ್ರೆಯನ್ನು ಹೊಸ ಕ್ರಮದಲ್ಲಿ ನೋಡುವಂತೆ ಮಾಡುತ್ತದೆ. ಈ ಎರಡೂ ಸಂಶೋಧನೆಗಳಿಂದ ಕನ್ನಡ ನಾಡಿನಲ್ಲಿ ಆರಂಭ­ವಾದ ರಾಜತ್ವದ ನೆಲೆಗಳನ್ನು ಅರ್ಥಮಾಡಿ­ಕೊಳ್ಳಲು ನೆರವಾಗುತ್ತದೆ. ರಾಜತ್ವ ಬೆಳೆದು­ಬರುವಾಗ ಹಲವು ಅಂಶಗಳು ಅದಕ್ಕೆ ಪೂರಕ­ವಾಗಿ ಕೆಲಸ ಮಾಡಿರುತ್ತವೆ.
ಕರ್ನಾಟಕದ ಕದಂಬರ ಕುಲದ ಹುಟ್ಟಿನ ಬಗ್ಗೆ ಇದ್ದ ಈವರೆಗಿನ ಕಥೆಗಳು ಬ್ರಾಹ್ಮಣ ಮೂಲವನ್ನು ಹೇಳುತ್ತಿದ್ದು ಅದನ್ನು ನಿರಾಕರಿಸುವ ಹಲವು ಪುರಾವೆಗಳನ್ನು ಶೆಟ್ಟರ್ ನಮಗೆ ತೋರಿಸುತ್ತಾರೆ. ಕದಂಬರೂ ಆರಂಭದಲ್ಲಿ ಬೌದ್ಧಧರ್ಮದ ಏಳಿಗೆಯನ್ನು ಬಯಸಿದವರು. ಆನಂತರ ವೈದಿಕರ ನೆರಳಿಗೆ ಹೋಗು­ತ್ತಾರೆ. ಅಲ್ಲಿಯವರೆಗೆ ಅಂದರೆ ಸುಮಾರು 600 ವರ್ಷಗಳ ಕಾಲ ಪ್ರಾಕೃತ ಭಾಷೆ ಈ ನಾಡಿನ ವ್ಯವಹಾರ ಭಾಷೆಯಾಗಿತ್ತು. ಮುಂದೆ ಪ್ರಾಕೃತದೊಂದಿಗೆ ಬೆರೆತ ಕನ್ನಡ–ಪ್ರಾಕೃತ ಮಿಶ್ರಿತ ಸಂಸ್ಕೃತ, ಸಂಸ್ಕೃತಭೂಯಿಷ್ಠ ಕನ್ನಡ  ಹೀಗೆ ಮಾರ್ಪಾಡಾಗುತ್ತಾ ಬಂದಿದೆ.
ದೊಡ್ಡ ಸಂಖ್ಯೆಯಲ್ಲಿ ಸಂಸ್ಕೃತ ಶಾಸನಗಳು ಕದಂಬರ ಕಾಲದಲ್ಲಿ ತಾಮ್ರಪಟದ ಮೇಲೆ ರಚಿತವಾಗಿದ್ದು ಅವು ಧರ್ಮದತ್ತಿಯ ಹೊಸ ವ್ಯಾಖ್ಯಾನ ಮತ್ತು ಹೊಸ ಆರ್ಥಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡಿದವೆನ್ನಬಹುದು. ಗಂಗರ ಕಾಲದ ವಿಶೇಷವೆಂದರೆ ಅವರು ಬ್ರಾಹ್ಮಣೇತರರ ಸೇವೆಯನ್ನು ಗುರುತಿಸಿ ಗೌರವಿಸಿದರು. ಹೋರಾ­ಡಿದ ವೀರರಿಗೆ ಅವರು ಪಟ್ಟ ಕಟ್ಟುತ್ತಿದ್ದರು.
‘ಹಳಗನ್ನಡ’ ಕೃತಿಯ ಸೆಳೆತ ಲಿಪಿಕಾರನ ಕಡೆಗೆ. ಅದರಲ್ಲೂ ವಿಶ್ವಕರ್ಮ, ತ್ವಷ್ಟಾರ– -ತಟಾರ-– ತಟ್ಟಕ, ಕಂಚುಗಾರ, ಬಡಗಿ ಇವರು ನಡೆಸಿದ ಲಿಪಿ ವ್ಯವಸಾಯದ ಬಗೆಗೆ ಕೇಂದ್ರೀಕೃತ­ವಾಗಿದೆ.
ಲಿಪಿಕಾರರಾಗಿದ್ದ ವಿಶ್ವಕರ್ಮರು ವೈದಿಕರಿಗಿಂತ ಹೆಚ್ಚಿನ ದತ್ತಿಗಳನ್ನು ಬ್ರಹ್ಮದೇಯ­ಗಳನ್ನು  ಪಡೆದುಕೊಂಡ ನಿದರ್ಶನಗಳೂ ಇವೆ (ಬ್ರಾಹ್ಮಣರಿಗೆ ನೀಡುತ್ತಿದ್ದ ಭೂಮಿಯನ್ನು ಬ್ರಹ್ಮ ದೇಯಗಳೆನ್ನುತ್ತಿದ್ದರು). ಲಿಪಿಕಾರನೇ ಶಾಸನ ಸಾಹಿತ್ಯವನ್ನು ಬರೆಯುತ್ತಿದ್ದ ರೂಢಿಯೂ ಇತ್ತೆಂಬುದಕ್ಕೂ ಸಾಕಷ್ಟು ಪುರಾವೆಗಳನ್ನು ನೀಡಿದ್ದಾರೆ. ಲಿಪಿ ಜನಸಾಮಾನ್ಯರದಾಗಿರಲಿಲ್ಲವೆಂಬ ಭಾವನೆಯೇ ನಮ್ಮನ್ನು ಶಾಸನಗಳ ಬಗೆಗೆ ಮುಜು­ಗರವನ್ನು  ಮೂಡಿಸಿತ್ತು. ಹಾಗೆ ಭಾವಿ­ಸಲೂ ಕಾರಣಗಳಿವೆ.
ಆಧುನಿಕ ಕಾಲದಲ್ಲಿ ಚರಿತ್ರೆ ಬರೆಯತೊಡಗಿದ ಆರಂಭದ ವಿದ್ವಾಂ­ಸರು ತಪ್ಪಾಗಿ ಗ್ರಹಿಸಿ ಬ್ರಾಹ್ಮಣರು ಮಾತ್ರವೇ ಜ್ಞಾನವನ್ನು, ಧರ್ಮವನ್ನೂ, ವಿಶೇಷ ಚಿಂತನೆ­ಗಳೆಲ್ಲವನ್ನೂ ನೀಡಿದವರೆಂಬಂತೆ ಹೇಳುತ್ತಾ ಬಂದುದರಿಂದ, ಉಳಿದ ಸಮುದಾಯಗಳು ತಮ್ಮ ಮೂಲಗಳನ್ನು ಹುಡುಕಿಕೊಳ್ಳುವಂತೆ ಮಾಡಿವೆ. ಎಂ.ಎನ್. ಶ್ರೀನಿವಾಸ್‌ ಅವರು ಹೇಳುವ ‘ಸಂಸ್ಕೃತೀಕರಣ’ ಅಂದರೆ ಅದರ ಅರ್ಥ ‘ಬ್ರಾಹ್ಮಣೀಕರಣ’ವೇ ಆಗಿದೆ. ಬುಡಕಟ್ಟು ಹಾಗೂ ತಳ ಸಮುದಾಯಗಳು ತಮ್ಮ ಉನ್ನತಿ­ಯನ್ನು ಸಂಸ್ಕೃತಾನುಕರಣೆಯಲ್ಲಿ ಕಾಣುತ್ತ ವೆಂದು ಶ್ರೀನಿವಾಸ್‌ ಹೇಳುತ್ತಾರೆ.
ಅಂದರೆ ಸರಳ ಮಾತಿನಲ್ಲಿ ಬ್ರಾಹ್ಮಣರ ಬದುಕಿನ ಅನುಕರಣೆ ಎಂದಂತಾಗುತ್ತದೆ. ಹೀಗೆ ವಿವರಿಸತೊಡಗಿ ಆ ಜಾಡಿನಲ್ಲೇ ನಂತರದ ಚರಿತ್ರೆ ಕುರಿತ ಸಂಶೋ­ಧನೆ­ಗಳು ನಡೆದಿವೆ. ರಾಜಮನೆತನಗಳು, ಕವಿ­ಗಳು ಮತ್ತಾವುದೇ ಮಹತ್ವದ ವಿಚಾರವನ್ನು ಹೇಳುವಾಗ ಅದರಲ್ಲಿ ಬ್ರಾಹ್ಮಣ್ಯವನ್ನು ಹುಡು­ಕು­ವುದು ಸಹಜವಾಗಿ ನಡೆದುಬಂದಿತ್ತು. ದೇವರು, ಧರ್ಮ ಎಲ್ಲವೂ ಬಾಹ್ಮಣರಿಗೆ ಸೇರಿದ್ದೆಂಬಂತೆ ಭಾವಿಸಲಾಗುತ್ತಿತ್ತು. 
ಭಾರತದಲ್ಲಿ ತಲೆ ಎತ್ತಿದ ದ್ರಾವಿಡ ಐಡೆಂಟಿ­ಟಿಯ ಹೋರಾಟಗಳು, ತಳಸ್ತರದ ಹೋರಾಟ­ಗಳು, ಕಡೆಗೆ ದಲಿತ ಚಳವಳಿ– ಇವು ತಮ್ಮತನದ ಹುಡುಕಾಟದಲ್ಲಿ ಸ್ಥಾಪಿತ ವಿಚಾರಗಳನ್ನು ಮುರಿದು ಕಟ್ಟುವ ಯತ್ನದಲ್ಲಿ ತೊಡಗಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಲಿಪಿಕಾರನೊಬ್ಬ ಬಡಗಿ, ಅಕ್ಕಸಾಲಿ ಅಥವಾ ಕಂಚುಗಾರನಾಗಿದ್ದ ಎನ್ನು­ವುದ­ರಲ್ಲಿ ಹೊಸ ಸಂಭ್ರಮ ಕಾಣುತ್ತದೆ.  ತಳ­ಸ್ತರದ ಚರಿತ್ರೆ ಕಟ್ಟಿಕೊಳ್ಳಲು ಶಾಸನಸಾಹಿತ್ಯದ ಮೊರೆ ಹೋಗಬೇಕೆನಿಸಿತ್ತು.
ಬ್ರಾಹ್ಮಣೀಕರಣದ ಭ್ರಮೆಗಳನ್ನು ಕಳಚುವುದು ಪ್ರಜ್ಞಾಪೂರ್ವಕ­ವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಬ್ರಾಹ್ಮಣೇ­ತರ ಸಮುದಾಯಗಳಲ್ಲಿ ನಡೆದೇ ಇರುತ್ತದೆ. ಸೌಜನ್ಯದಿಂದ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ಬರವಣಿಗೆಗಳು ಹಾಗೂ ಆಕ್ರೋಶ­ದಿಂದ ಹೇಳಿದ ಬರವಣಿಗೆಗಳು ಎರಡೂ ನಮ್ಮ ನಡುವೆ ನಡೆದೇ ಇವೆ. ಇಂತಹ ಸಾಹಿತ್ಯ ರಚಿಸಿದ ಕುವೆಂಪು ನಿಂದನೆಗೆ ಗುರಿ­ಯಾಗಿದ್ದನ್ನೂ ಇಲ್ಲಿ ನೆನೆಯ ಬಹುದು.  ‘ಶೂದ್ರ ತಪಸ್ವಿ’, ‘ಜಲಗಾರ’ ಇವೆಲ್ಲಾ ಶೂದ್ರ ವಿಮೋಚ­ನೆಯ ನೆಲೆಯಲ್ಲಿ ಹುಟ್ಟಿದ ಸಾಹಿತ್ಯವೇ ಆಗಿದೆ. ಲೋಹಿಯಾರ ರಾಮ ಕೃಷ್ಣ ಶಿವನ ಕುರಿತ ವಿಚಾರ, ಡಿ.ಆರ್ ನಾಗರಾಜರ ‘ಅಲ್ಲಮ ಮತ್ತು ಶೈವ ಪ್ರತಿಭೆ’ ಈ ಹುಡುಕಾಟದಲ್ಲಿ ಕಟ್ಟಿಕೊಟ್ಟ ವಿಚಾರಗಳೇ ಆಗಿವೆ.
‘ಹಳಗನ್ನಡ’ ಕೃತಿಯಲ್ಲಿ ‘ವೈದಿಕರಿಂದ ದೂರ ನಿಂತ ರಾಜಮನೆತನಗಳು’ ಎಂದು ಒಂದು ಅಧ್ಯಾಯವನ್ನೇ ಕಾಣಬಹುದು. ಗಂಗರು, ನೊಳಂಬರು, ಅಳುಪರು, ಬಾಣರು, ಚೋಳರು ಮುಂತಾದವರ ಆಳ್ವಿಕೆಯಲ್ಲಿ ಹೇಗೆ ಉಳಿದ ಸಮುದಾಯಗಳು ಮನ್ನಣೆಗೆ ಒಳ­ಗಾಗಿವೆ ಎಂಬುದನ್ನು ವಿವರಿಸುತ್ತಾ ಹೋಗಿ­ದ್ದಾರೆ. ಕಡೆಗೆ ರಾಜಮನೆತನವೊಂದು ತೆರಿಗೆ ಕೊಡದ ವೈದಿಕರ ಕೊಲೆ ಮಾಡಿದ ಶಾಸನದ ಉಲ್ಲೇಖವೂ ಬರುತ್ತದೆ. ಬಹುಶಃ ಆ ಕಾಲ­ದಲ್ಲೂ ಬ್ರಾಹ್ಮಣ ವಿರೋಧದ ನಡೆಯನ್ನು ಪ್ರಕಟಪಡಿಸಿಕೊಳ್ಳಲು ಬಯಸಿದ್ದರೇ ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳಬೇಕಾಗುತ್ತದೆ. ಅಧಿ­ಕಾ­ರದ ಸವಲತ್ತುಗಳನ್ನು ಬ್ರಾಹ್ಮಣರು ಪಡೆದಿರು­ತ್ತಾರೆಂಬ ಗುಮಾನಿಯೇ ಇದಕ್ಕೆ ಕಾರಣ­ವಾಗಿರಲೂಬಹುದು. 
ಈ ಎಲ್ಲಾ ರಾಜಕೀಯದೊಳಗೆ ರೂಪಿತ­ವಾದ ಭಾಷೆ, ಸಾಹಿತ್ಯವನ್ನೂ ಹೊಸ ದೃಷ್ಟಿ­ಕೋನದಲ್ಲಿ ಮರುಓದಿಗೆ ಒಳಪಡಿಸಿಕೊಳ್ಳ­ಬೇಕಾಗಿದೆ. ಚರಿತ್ರೆ ಪ್ರಸಕ್ತ ರಾಜಕೀಯದಲ್ಲೇ ರೂಪುಗೊಳ್ಳುತ್ತದೆ. ಮತ್ತೆ ಮತ್ತೆ ಜಾತಿ ಚರ್ಚೆ ನಡೆಯುವ ಕಾರಣವೂ ಇದೇ ಆಗಿದೆ. ಸಂಸ್ಕೃತಕ್ಕೆ ಸಿಕ್ಕ ಗೌರವ ಪ್ರಾಕೃತ ಭಾಷೆಗೆ ಸಿಗದಿರಲೂ ಇದೇ ಕಾರಣವಾಗಿದೆ. ಪ್ರಾಕೃತವನ್ನು ಹೊತ್ತ ಲಿಪಿ­ಯನ್ನು ಬ್ರಾಹ್ಮಿ ಎಂದು ಮುಂದೊಮ್ಮೆ ಕರೆಯ­ಲಾಗಿದೆ, ಅಶೋಕನ ಕಾಲಕ್ಕೆ ಹಾಗೆ ಕರೆದಿರ­ಲಿಲ್ಲ– ಇಂತಹ ಹಲವು ಪ್ರಶ್ನೆಗಳನ್ನೂ ಈ ಕೃತಿ ಹುಟ್ಟುಹಾಕಿದೆ.
ಎಂಬತ್ತರ ಹರಯದಲ್ಲೂ, ಮೂಗಿನ ತುದಿಯಲ್ಲಿ ಕನ್ನಡಕವನ್ನಿರಿಸಿಕೊಂಡು ಪುಸ್ತಕಗಳ ರಾಶಿಯಲ್ಲಿ ಮುಗುಳ್ನಗುವ ಶೆಟ್ಟರರ ಜೊತೆ ಮಾತಿಗೆ ಕೂತರೆ ತಾಸುಗಳು ಕಳೆದು ಹೋಗು­ವುದು ಅರಿವಿಗೆ ಬಾರದು. ಹೆಚ್ಚಾಗಿ ಜನರ ಜೊತೆ ಬೆರೆಯದೆ ಚಿಂತನೆಗೇ ಹೆಚ್ಚು ಸಮಯವನ್ನು ಕೊಟ್ಟುಕೊಂಡವರು  ಅವರು. ಸಣ್ಣ ಪುಟ್ಟ ಆಮಿಷಗಳನ್ನು ಬದಿಗೊತ್ತಿ ಬೃಹತ್ ಯೋಜನೆ­ಗಳಲ್ಲಿ ತೃಪ್ತಿ ಪಡೆದವರು. ಶುಷ್ಕ ವಿಚಾರವಂತ­ರಲ್ಲ. ಕಲೆ, ಸಾಹಿತ್ಯ, ಸಂಗೀತ ಎಲ್ಲವೂ ಆಸಕ್ತಿಯ ಕ್ಷೇತ್ರಗಳು.
ಅಷ್ಟೇ ಅಲ್ಲ, ಅವುಗಳ ಮೇಲೆ ಪ್ರಭುತ್ವ­ವನ್ನು ಸಾಧಿಸಿದವರು. ಇಲ್ಲಿಗೆ ಅವರ ಸಂಶೋಧನೆ ಕೊನೆಗೊಳ್ಳುವುದಿಲ್ಲ. ದಶಕಗಳಿಂದ ಕಲೆಹಾಕಿ ಬರೆದ ‘ಕವಿರಾಜಮಾರ್ಗ’ದ ಪದ­ಪದಕ್ಕೂ ಬರೆದ ವಿವರಣೆಯನ್ನು ನಾವು ಓದ­ಬೇಕಾಗಿದೆ. ಒಂದು ದಿನ ‘ಆದಿಪುರಾಣ’, ‘ಚಾವುಂಡ­ರಾಯ ಪುರಾಣ’ ಈ ಎಲ್ಲಾ ಕೃತಿಗಳಿಗೆ ಅವರು ಅಚ್ಚುಕಟ್ಟಾಗಿ ಕೈಯಲ್ಲಿ ಬರೆದಿಟ್ಟ ಅರ್ಥವಿವರಣೆಯ ಬೃಹತ್ ಗ್ರಂಥ­ಗಳನ್ನು  ನೋಡಿ ಅವಾಕ್ಕಾದೆ. ‘ಶಂಗಂ ತಮಿ­ಳಗಂ’ ಪುಸ್ತಕ ಕೇವಲ ‘ಕವಿರಾಜಮಾರ್ಗ’ ಕೃತಿಗೆ ಬರೆದ ಪ್ರಸ್ತಾವನೆಯಾಗಿತ್ತು. ಕನ್ನಡದ ಹೆಮ್ಮೆಯ ‘ಗುರುಗಳಿಗೆ’ ವಂದಿಸುತ್ತಾ...


ತೃತೀಯ ಲಿಂಗಿಗಳನ್ನು ಗೌರವಿಸೋಣ
Tue, 07/08/2014

ವಿಚಾರ ಕಮ್ಮಟವೊಂದರಿಂದ ಹೊರ­ಬರು­ತ್ತಿದ್ದ ಗುಂಪು ತನ್ನದೇ ಲೋಕದಲ್ಲಿ ಮುಳುಗಿ ಹೋಗಿತ್ತು. ಪರಸ್ಪರ ‘ಏನೇ ಹುಡುಗ, ಏನೋ ಹುಡುಗಿ’ ಎಂದು ಗೇಲಿ ಮಾಡಿ­ಕೊಳ್ಳುತ್ತಾ ಬರುತ್ತಿರುವುದನ್ನು ನೋಡಿದರೆ  ಮತ್ತೊಮ್ಮೆ ಅವರ ಕಡೆ ಕಣ್ಣು ಹಾಯದೇ ಇರಲು ಸಾಧ್ಯವಿರಲಿಲ್ಲ. ಸ್ವಲ್ಪ ಹೆಚ್ಚೇ ಎನಿಸುವ ಲಾಸ್ಯ, ಬಾಗು–ಬಳುಕು ಅಲ್ಲಿ ತುಳುಕುತ್ತಿತ್ತು. ನೋಡಲು ಗಂಡಾದರೂ ಹೆಣ್ಣಿನ ಹಾವ–ಭಾವ, ಹೆಣ್ಣಾಗಿ ಕಂಡರೂ ಅಸಹಜವೆನಿಸುವ ಪುರುಷ ಧ್ವನಿ-. ಕ್ಷಮಿಸಿ, ಹೆಣ್ಣು ಹಾಗೂ ಗಂಡು ಎಂದರೆ ಹೀಗೇ ಇರುತ್ತಾರೆ ಎಂಬ ಸಾಮಾಜಿಕ ಮಾದರಿ­ಗಳು ನನಗೂ ಅಸಹಜವೆನ್ನುವಂತೆ ಮಾಡಿವೆ. ನಮ್ಮ ಸಮಸ್ಯೆಗಳ ಮೂಲವಿರುವುದೇ ಇಲ್ಲಿ.
ಅದು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರ. ಬೆಂಗಳೂರಿನಲ್ಲಿ ಮುಖ್ಯವಾಗಿ ‘ಸಂಗಮ’ ಮತ್ತು ‘ಅನೇಕ’ ಸ್ವಯಂ ಸೇವಾ ಸಂಸ್ಥೆಗಳು  ಲೈಂಗಿಕ ಅಲ್ಪಸಂಖ್ಯಾತರಿಗಾಗಿ ದುಡಿಯುತ್ತಿವೆ. ನಾನು ಕೆಲವು ವೈಚಾರಿಕ ವಿಷಯಗಳನ್ನು ‘ಅನೇಕ’ದಲ್ಲಿ ಅವರೊಡನೆ ಹಂಚಿಕೊಳ್ಳಬೇಕಾಗಿತ್ತು. ಕಮ್ಮಟದಿಂದ ಹೊರ­ನಡೆದಾಗ ನನಗೆ ಅರ್ಥವಾಗಿದ್ದು ನಾನು ಅವ­ರಿಂದ ಕಲಿಯಬೇಕಾದದ್ದು ಬಹಳವೇ ಇತ್ತು, ಬಹುಶಃ ನಾನು ಅವರಿಗೆ ಕಲಿಸಬೇಕಾದದ್ದು ಏನೂ ಇರಲಿಲ್ಲ. ಅವರದ್ದು ಅತ್ಯಂತ ಮಾನ­ವೀಯವಾದ ನಡವಳಿಕೆ.
ಗಂಡೆಂಬ ಅಹಂಕಾರವಿರಲಿ, ಹೆಣ್ಣಾದ ಕಾರಣಕ್ಕೂ ಬೀಗುವ ದರ್ಪ ಅರೆ ಗಳಿಗೆ ಹೆಣ್ತನ­ವನ್ನು ಕಳೆದುಕೊಳ್ಳುವ ಭಾವದಲ್ಲಿ ಅಡಗಿತ್ತು. ನಾನು ಹೆಣ್ಣಾದ ಕಾರಣಕ್ಕೂ ನನ್ನೊಳಗೊಂದು  ಅಹಂ ಇದೆಯೆಂದು ಮೊದಲ ಬಾರಿಗೆ ಅರಿವಾಗಿತ್ತು.
ಹತ್ತಾರು ಪ್ರಶ್ನೆಗಳು ಮನಸ್ಸಿಗೆ ಬಂದು ಹೋಗಿದ್ದು ಬಹಳ ಸಹಜವಾಗಿತ್ತು. ಹೆಣ್ಣಾಗಿ ಹುಟ್ಟಿ ಆನಂತರದಲ್ಲಿ ಗಂಡಾದವರು, ಗಂಡಾಗಿ ಹುಟ್ಟಿ ಆ ನಂತರದಲ್ಲಿ ಹೆಣ್ಣಾದವರು ಅಲ್ಲಿ­ದ್ದರು. ಹೀಗೆ ರೂಪಾಂತರಗೊಳ್ಳುವ ಒತ್ತಡವೂ ಪ್ರಕೃತಿ­ದತ್ತವಾಗಿರುತ್ತದೆ. ಸ್ವೀಕರಿಸಿದ ಹೊಸ ಭಾವಕ್ಕೆ ತಕ್ಕಂತೆ ದೇಹವೂ ಪೂರ್ಣವಾಗಿ ಮಾರ್ಪಾಡಾಗುವುದಿಲ್ಲ. ಆದ್ದರಿಂದ ಅದಕ್ಕೆ ತಕ್ಕಂತೆ ಅಂಗ ಪರಿವರ್ತನೆಯನ್ನು ಮಾಡಿಕೊಳ್ಳು­ವುದು ಅನಿವಾರ್ಯವಾಗುತ್ತದೆ.
ಆದರಿದು ದೈಹಿಕ ವಿಚಾರ ಮಾತ್ರವಲ್ಲ. ಹುಡುಗನೊಬ್ಬ ಹರೆ­ಯಕ್ಕೆ ಬಂದಾಗ ಹೆಣ್ಣಿನಂತೆ ಕಾಣ­ತೊಡ­ಗಿದರೆ ಅವನು ಮಾನಸಿಕವಾಗಿ ಜರ್ಜರಿತ­ನಾಗುತ್ತಾನೆ. ಈವರೆಗೆ ಹೀಗಾಗುವ ಪ್ರಕ್ರಿಯೆ ಅವರು  ಸಮಾಜದಿಂದ ದೂರ ಉಳಿಯುವಂತೆ  ಮಾಡಿತ್ತು. ಆದರೆ ಅದಕ್ಕಾಗಿ ಬರುವ  ಒಂದು ಕಾನೂನು, ಸಮಾಜದಲ್ಲಿ ಕೆಲವು ಹಂತ­ಕ್ಕಾ­ದರೂ ಅವರ ರಕ್ಷಣೆ ಮಾಡಬಲ್ಲದು. ಭಾರತ, ಮೂರನೆ ಲಿಂಗ (ಥರ್ಡ ಜಂಡರ್) ಎಂದು ಕಾನೂನು ರೀತ್ಯ ಪರಿಗಣಿಸಿದ ರಾಷ್ಟ್ರ­ವೆಂಬ ಹೆಗ್ಗಳಿಕೆಯನ್ನು ಪಡೆಯುತ್ತದೆ. ಈ ವರ್ಷದ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪಿ­­ನಲ್ಲಿ ಈ ಅಂಶವನ್ನು ಎತ್ತಿಹಿಡಿದಿದೆ. ಚುನಾ­ವಣೆಯ ಅಬ್ಬರದಲ್ಲಿ ತೀರ್ಪನ್ನು ಬೆಂಬ­ಲಿಸುವ ಸೌಜನ್ಯವನ್ನು ಮರೆತಿದ್ದೇವೆ. ಈವರೆಗೆ ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅವರ ಪರವಾದ ಮಾನವ ಹಕ್ಕು ಹೋರಾಟಗರರು, ಆಮ್‌ನೆಸ್ಟಿ ಇಂಟರ್‌ನ್ಯಾಷನಲ್ ನಡೆಸಿದ ನಿರಂತರ­ವಾದ ಮತ್ತು ದೀರ್ಘವಾದ ಹೋರಾ­ಟದ ಫಲವಾಗಿ ಈ ತೀರ್ಪು ಹೊರಬಂದಿದೆ.
ಕಳೆದ ಎರಡು ವರ್ಷಗಳಲ್ಲಿ  ಜಗತ್ತಿನ ಹಲವು ರಾಷ್ಟ್ರಗಳು ಲೈಂಗಿಕ ಅಲ್ಪಸಂಖ್ಯಾತರಿಗೆ ಪೂರಕ­ವಾದ ಕಾನೂನು, ಕಾಯಿದೆಗಳನ್ನು ತಂದಿವೆ. ಜಗತ್ತು ಭಿನ್ನತೆಯನ್ನು ಒಪ್ಪಿಕೊಳ್ಳಲು,  ಹೊಸ ಚಹರೆಗಳನ್ನು ಗೌರವಿಸಲು ಇಷ್ಟು ದೀರ್ಘಕಾಲ ನರಳಬೇಕಾಯಿತು. ಅದನ್ನು ಜಾರಿಗೊಳಿಸಲು ಪೂರಕವಾಗಿ ಸಾಕಷ್ಟು ಸಿದ್ಧತೆಯನ್ನು ಮಾಡಿ­ಕೊಳ್ಳ­ಬೇಕಾಗುತ್ತದೆ. ಮೂಲಭೂತವಾಗಿ ಅವರಿಗೆ ದೊರೆಯಬೇಕಾದ ವೈದ್ಯಕೀಯ ನೆರವು, ಗುಪ್ತವಾಗಿ ನಡೆಯುತ್ತಿದ್ದ ಶಸ್ತ್ರಚಿಕಿತ್ಸೆಯನ್ನು ಪರಿಣತ ವೈದ್ಯರು ಅಧಿಕೃತವಾಗಿ ಮಾಡ­ಬಹು­ದಾಗಿದೆ. ಅವರ ಬದಲಾದ ಲಿಂಗಕ್ಕೆ ಅನುಗುಣವಾಗಿ ಸಾರ್ವಜನಿಕ ಶೌಚಾಲಯ­ವನ್ನು ಅವರು ಬಳಸಬಹುದು.
ಕಳೆದ ಎರಡು ವರ್ಷಗಳಿಂದ ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಕೊಟ್ಟು ಅವರ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟುದು ಅಭಿ­ನಂದ­ನೀಯವಾದುದು. ಹಾಗೆ ಬಂದ ವಿದ್ಯಾರ್ಥಿ­ಗಳ ಮುಖದಲ್ಲಿ ಖಿನ್ನತೆ, ಹಿಂಜರಿಕೆ ಮನೆ­ಮಾಡಿ­ರುತ್ತದೆ. ಮುಕ್ತವಾಗಿ ಬೆರೆಯಲು, ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಪ್ರತಿಭೆಯನ್ನು ಮೆರೆಯಲು ಸಮಾಜ ಮತ್ತಷ್ಟು ಪೂರಕವಾದ ವಾತಾವರಣ­ವನ್ನು ಒದಗಿಸಬೇಕಾಗುತ್ತದೆ.
ಓದು ಮುಗಿಸಿದ ವಿದ್ಯಾರ್ಥಿಗಳು  ಸಂಶೋ­ಧನೆ, ಉದ್ಯೋಗ, ಮದುವೆ, ಸ್ಪರ್ಧಾ­ತ್ಮಕ ಪರೀಕ್ಷೆ, ಹೀಗೆ ಯಾವುದೋ ಸಮಸ್ಯೆಗಾಗಿ ನನ್ನನ್ನು ಮತ್ತೆ ಮತ್ತೆ ಹುಡುಕಿಕೊಂಡು ಬರು­ತ್ತಿರು­ತ್ತಾರೆ. ಆದರೆ ಅಂದು ಮನೆಗೆ ಹುಡುಕಿ­ಕೊಂಡು ಬಂದ ‘ಸುಮತಿ’ಗೆ ಅದಾವ ಕಾರಣವೂ ಇರಲಿಲ್ಲ. ಏನೋ ವಿಚಾರವನ್ನು ಹೇಳಿಕೊಳ್ಳ­ಲಾಗದೆ ಪರದಾಡುತ್ತಿದ್ದಳು. ಒಂದೇ ಸಮನೆ ಕಣ್ಣೀರಿಡು­ತ್ತಿದ್ದಳು. ಮೈಕೈ ತುಂಬಿಕೊಂಡು ಬೆಳೆದ ಸುಂದರ ಹುಡುಗಿ, ಅತಿ ವಿನಯವಂತೆ, ನನ್ನ ಮೆಚ್ಚಿನ ಶಿಷ್ಯರಲ್ಲಿ ಆಕೆಯೂ ಒಬ್ಬಳು. ಸಣ್ಣ ಸರ್ಕಾರಿ ನೌಕರಿಯಲ್ಲಿರುವ ತಂದೆ ಜೊತೆಗೆ ತಮ್ಮ, ತಂಗಿ. ಅವಳ ಮೆಡಿಕಲ್ ಫೈಲನ್ನು ನನಗಿಟ್ಟಾಗ ನನಗೆ ಗಾಬರಿಯೇ ಆಗಿತ್ತು. ವೈದ್ಯಕೀಯ ವರದಿಯ ಕಡೆಯಲ್ಲಿ ಇಂಗ್ಲಿಷ್‌ನಲ್ಲಿ ‘ಥರ್ಡ್‌ ಜೆಂಡರ್’ ಎಂದು ನಮೂದಿಸಿತ್ತು. ಈಗ ಅವಳು ಅವನಾಗಿದ್ದಾಳೆ. ಅದನ್ನು ನಿಭಾಯಿಸು­ವು­ದಾದರೂ ಹೇಗೆ? ಇದು  ಅವಳ ತಂದೆ ತಾಯಿಗೆ ಹೊರತುಪಡಿಸಿ ಬೇರೆ ಯಾರಿಗೂ ಗೊತ್ತಾಗದಂತೆ ಕಾಲ ತಳ್ಳಿದ್ದಾಳೆ. ಹೆಣ್ಣು ಮಕ್ಕಳ ಹಾಸ್ಟೆಲ್‌ನಲ್ಲಿ ಒಂಟಿಯಾಗಿ ಉಳಿಯುತ್ತಾ ಬಂದಿ­ದ್ದಾಳೆ. ಯಾವ ದಾಖಲೆಗಳಲ್ಲೂ ಅವಳ ಬದಲಾದ ಲಿಂಗದ ಮಾಹಿತಿ ಇಲ್ಲದೆ ಇರು­ವುದರಿಂದ ಮತ್ತು ಮುಖಲಕ್ಷಣ ಹೆಚ್ಚು ಬದ­ಲಾವಣೆಯನ್ನು ಹೊಂದದೆ ಇದ್ದುದರಿಂದ ಅಷ್ಟು ಸುಲಭ­ವಾಗಿ ಯಾರೂ ಅವಳನ್ನು ಪತ್ತೆ ಹಚ್ಚಿರ­ಲಿಲ್ಲ. ಅವಳ ಅಂತರಂಗದ ಭಾವನೆಗಳು ಬೇರೆ­ಯಾಗಿವೆ. ಹೆಣ್ಣಿನಂತೆ ಬಟ್ಟೆ ಹಾಕುವುದು ಅವಳಿಗೆ ಬೇಡವಾಗಿದೆ. ಮನೆ ವಾತಾವರಣ ಕದಡಿಹೋಗಿದೆ. ಇಂತಹ ಸಂದರ್ಭಗಳಲ್ಲಿ  ಮನೆಯವರ ಕಾಟದಿಂದ ರೋಸಿ ಬೀದಿಗೆ ಬೀಳು­ವುದು ಸಾಮಾನ್ಯವಾಗಿರುತ್ತದೆ. ಮನೆಯವರು ಉಳಿದ ಮಕ್ಕಳ ಭವಿಷ್ಯ ಮುಂದಿಟ್ಟು  ಕೊಂಡು ಇವರಿಂದ ಜಾರಿಕೊಳ್ಳಲು ಬಯಸುತ್ತಾರೆ.
ಸಮಾಜದಲ್ಲಿ ಅವರನ್ನು ಅರಸಿ ಬರುವ ಕಾಯಕವೆಂದರೆ ಲೈಂಗಿಕ ಸೇವೆ. ಆ ವೃತ್ತಿ ಅವಳ ಆಯ್ಕೆಯಲ್ಲ. ಆದರೆ ತನ್ನನ್ನು ಟ್ರಾನ್ಸ್‌ ಜೆಂಡರ್ ಎಂದರೆ ಕೆಲಸ ನೀಡುವವರು ಯಾರು? ಶಿಕ್ಷಕನಾಗಿ ನಿಲ್ಲಬೇಕೆಂಬ ಬಯಕೆ ಸುಮತಿಗೆ. ಆ ಅರ್ಹತೆ ಆಕೆಗೆ ಇದೆ, ಆದರೆ ಸಮಾಜ ಇದನ್ನು ಮನ್ನಿಸಬಲ್ಲದೆ? ಇಲ್ಲವೆ ಎಲ್ಲರಂತೆ ತಮ್ಮ ಸಮುದಾಯವನ್ನು ಸೇರಬೇಕೆ? ಸದ್ಯಕ್ಕೆ ಸುಮತಿ  ತನ್ನಲ್ಲಿ ಮೂಡಿಬರುತ್ತಿರುವ ಪುರುಷ ಲಕ್ಷಣಗಳನ್ನು ಮುಚ್ಚಿಟ್ಟು ಹೆಣ್ಣಾಗಿ ಉದ್ಯೋಗ ಪಡೆದುಕೊಳ್ಳುವುದು ಉತ್ತಮವೆನಿಸಿತ್ತು. ಆದರೆ ಹೆಣ್ಣು ಮಕ್ಕಳಂತೆ ಬಟ್ಟೆ ತೊಡುವುದು ಅವಳಿಗೆ ಇರಿಸು ಮುರಿಸಾಗುತ್ತದೆ. ಈ ಎಲ್ಲಾ ಗೊಂದಲ­ದಲ್ಲಿ ಭವಿಷ್ಯಕ್ಕೆ ಸೊಡರು ಹಿಡಿವಂತೆ ನ್ಯಾಯಾಂಗದ ತೀರ್ಪು ಹೊರಬಂದಿದೆ. ಸುಮತಿ­ಗೊಂದು ದಾರಿ ಕಾಣಬಹುದೆ? ಸುಮತಿ ಒಬ್ಬ­ಳಲ್ಲ, ಒಂದು ಹೆಸರಲ್ಲ...ಅದು ಹೊಸ ಚಹರೆ. ಹೆಣ್ಣು ಗಂಡು ಸಮಾನವಾದ ಮತ್ತೊಂದು ಲಿಂಗ. ಅವರು ಹೆಣ್ಣೆಂದು ಗುರುತಿಸಿಕೊಂಡರೆ ಹೆಣ್ಣಾಗಿ,  ಗಂಡೆಂದು ಗುರುತಿಸಿಕೊಂಡರೆ ಗಂಡಾಗಿ ಗೌರವಿಸುವ ನಡೆಯನ್ನು ನಾವು ಕಲಿಯಬೇಕಾಗಿದೆ
ಉತ್ತರ ಭಾರತದಲ್ಲಿ  ಲೈಂಗಿಕವಾಗಿ ರೂಪಾಂ­ತರ ಹೊಂದಿದವರು ತಮ್ಮದೇ ಆದ ಹಿಜ್ಡಾ­­ಸಮುದಾಯವನ್ನು ಕಟ್ಟಿಕೊಂಡು ಬದು­ಕುತ್ತಿ­­ದ್ದಾರೆ. ಇಸ್ಲಾಂ ಧರ್ಮವನ್ನು ಒಪ್ಪಿ­ಕೊಳ್ಳುತ್ತಾರೆ. ಚಾರಿತ್ರಿಕ ಕಾಲದಿಂದಲೂ ಇಸ್ಲಾಂ ಸಮಾಜ ಹಿಜ್ಡಾ ಸಮುದಾಯವನ್ನು  ಬೇರೆ ಬೇರೆ ರೀತಿಯಲ್ಲಿ ಮನ್ನಿಸುತ್ತಾ ಬಂದಿದೆ. ಅವರು ಅಂತಃಪುರದ ಸೇವಕರಾಗಿ ಕಾವಲು­ಗಾರ­ರಾಗಿ ಹೆಚ್ಚು ನಂಬಿಕೆಯನ್ನು ಗಳಿಸಿದ್ದರು. ಆದರೆ ಮೂಢನಂಬಿಕೆಯ ಆಚರಣೆ­ಗಳೂ ಅವರಲ್ಲಿ ಸೇರಿಹೋಗಿವೆ. ದಕ್ಷಿಣ ಭಾರತದಲ್ಲಿ ಹಿಜ್ಡಾ ಆಚರಣೆ ಚಾಲ್ತಿಯಲ್ಲಿಲ್ಲ. ಆದರೂ ಮುಂಬೈ ಪ್ರಭಾವದಿಂದ ರೈಲುಗಳಲ್ಲಿ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಾರೆ.
ಲೈಂಗಿಕ ಸೇವೆಯ ಜೊತೆಗೆ ಭಿಕ್ಷಾಟನೆಯು ಬದುಕಿನ ಪ್ರಮುಖ ದಾರಿಯಾಗಿದೆ. ಅವರನ್ನು ಮಂಗಳಮುಖಿಯರೆಂದು ಕರೆಯುತ್ತಾ ಅವರಿಗೆ ಭಿಕ್ಷೆ ನೀಡುವ ವ್ಯಾಪಾರಿ ಸಮುದಾಯ ಕೆಲವು ಶಕುನದ ನಂಬಿಕೆಗಳನ್ನು ಉಳಿಸಿಕೊಂಡಿದೆ. ಪ್ರತಿದಿನ ಅವರ ಕೈಯಲ್ಲಿ ಅಂಗಡಿಯ ಮುಂದೆ ಕಾಯಿ ಒಡೆಸಿ, ದೃಷ್ಟಿತೆಗೆಸುವ ಆಚರಣೆಗಳನ್ನು     ಮುಂದುವರಿಸಿ ಕೊಂಡು ಬಂದಿದೆ. ತಮ್ಮನ್ನು ಮಂಗಳ ಮುಖಿಯರೆಂದು ಕರೆಯುವುದಕ್ಕೆ ಅವರಲ್ಲಿ ಕೆಲವರ ಸಮ್ಮತಿಯೂ ಇದೆ. ಒಟ್ಟಿನಲ್ಲಿ ಅವರು ಸಮಾಜದಲ್ಲಿ ಎಲ್ಲರಂತೆ ಬದುಕದೆ ಅಡ್ಡದಾರಿಗಳಲ್ಲೇ ಉಳಿಯುತ್ತಾರೆ. ಆದರೆ ಅಡ್ಡ ದಾರಿಯಲ್ಲಿ ಉಳಿಸುವುದು ಮುಖ್ಯವಾಹಿನಿಯ ಹುನ್ನಾರವೆಂದು ಅವರು ತಿಳಿಯಬೇಕಾಗಿದೆ. ತನ್ನ ಸುಖಕ್ಕಾಗಿ ಅಸಹಾಯಕರನ್ನು ಬಳಸಿಕೊಳ್ಳಲು ಯಾವ ಗಳಿಗೆಯಲ್ಲೂ ಪ್ರಬಲರು ಹಿಂದೆ ಬೀಳು­ವುದಿಲ್ಲ.
ಲಿಂಗಾಂತರ ಗೊಂಡವರ ಅಸ­ಹಾಯ ಕತೆಯನ್ನು ಪುರುಷಪ್ರಧಾನ ಸಮಾಜ ಬಹು ಸೊಗಸಾಗಿ ಬಳಸಿಕೊಂಡಿದೆ. ಮುಂದೆಯೂ ಅದರ ಲಾಭವನ್ನು ಪಡೆಯಲು ಕಾದು ಕುಳಿತಿರುತ್ತದೆ. ಇವರಲ್ಲಿ ಇವತ್ತು ನೂರಕ್ಕೆ ತೊಂಬತ್ತು ಮಂದಿ ಲೈಂಗಿಕ ಸೇವೆಯಲ್ಲಿ ತೊಡಗಿ­ದ್ದಾರೆ. ಅದನ್ನು ಬೆಂಬಲಿಸುವ ಮತ್ತು ಸಮರ್ಥಿ­ಸುವ ಸಂಸ್ಥೆಗಳು ಅವರ ನಡುವೆ ಕೆಲಸ ಮಾಡು­ತ್ತಿವೆ. ಲಿಂಗಾಂತರಗೊಂಡ ಹಿಂಸೆಯ ಜೊತೆಗೆ ಲೈಂಗಿಕ ಕಾರ್ಯಕರ್ತರಾಗುವ ಮೂಲಕ ಸಮಾಜದಲ್ಲಿ ಮತ್ತಷ್ಟು ನಿಂದನೆಗೆ ಗುರಿ­ಯಾಗುತ್ತಾರೆ. ಈ ಎಲ್ಲದರ ಹಿಂದೆ ಅವರನ್ನು ಬಿಡದೆ ಬೆನ್ನು ಹತ್ತುವ ಎಚ್‌ಐವಿ ಸೋಂಕು. ಭಾರತದಂತಹ ದೇಶ ಇನ್ನೂ ಎಚ್‌ಐವಿ ಸೋಂಕಿತರನ್ನು ಹೇಗೆ ನಡೆಸಿಕೊಳ್ಳಬೇಕೆಂದು ತರಬೇತಿಯನ್ನೇ ಪಡೆದಿಲ್ಲ. ಅಸ್ಪೃಶ್ಯತೆ ಹೇಗೆಲ್ಲಾ ಆವರಿಸುತ್ತದೆ-. ಅದರ ಕರಾಳತೆ ಕೈಗಳು ಎಲ್ಲಿಗೆ ಬೇಕಾದರೂ ಚಾಚುತ್ತವೆ.  ಕಡೆಗೆ ಆಸ್ಪತ್ರೆಯನ್ನೂ ಬಿಡುವುದಿಲ್ಲ.
ಕಮ್ಮಟದಲ್ಲಿ ಗಟ್ಟಿಯಾಗಿ ದಿಟ್ಟವಾಗಿ ತಮ್ಮ ಪರಿಚಯವನ್ನು ಹೇಳಿಕೊಂಡ ಸೋದರ ಸೋದರಿ­ಯರು ಬಹಳ ಮುಕ್ತವಾಗಿ ತಮ್ಮ ಲೈಂಗಿಕ, ಸಾಮಾಜಿಕ ಚಹರೆಗಳನ್ನು ತಿಳಿಸಿದರು. ತಾನೊಬ್ಬಳು ಟ್ರಾನ್ಸ್‌ ಜೆಂಡರ್ ಹಾಗೂ ಲೈಂಗಿಕ ಕಾರ್ಯಕರ್ತೆ ಮತ್ತು ಎಚ್‌ಐವಿ ಪಾಸಿಟಿವ್ ಇರುವ ಎಲ್ಲರಿಗಾಗಿ ದುಡಿಯುವ ಮಾನವ ಹಕ್ಕು ಹೋರಾಟಗಾರ\ಹೋರಾಟಗಾರ್ತಿ ಎಂದು ಹೇಳಿಕೊಂಡರು. ನನ್ನ ಮನಸ್ಸು ತುಂಬಿಬಂದಿತ್ತು. ಇವರಲ್ಲಿ ಮಾನವೀಯ ಮೌಲ್ಯಗಳು ಮನೆಮಾಡಿವೆ.  ನಿಶಾ, ಗೀತಾ, ಕಿರಣ, ಆಶಾ ಮತ್ತ್ಯಾರೆ ಆಗಿರಲಿ ಅವರಿಗೆ ಹೊಸದೊಂದು ಬದುಕು ಸಿಗಲಿ.
ಇಸ್ಲಾಂನಂತೆ ಕ್ರೈಸ್ತ ಸಮಾಜ ಲೈಂಗಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಉದಾರವಾಗಿ ನಡೆದುಕೊಂಡಿಲ್ಲ. ಹಾಗಾಗಿ ಯೂರೋಪ್ ದೇಶಗಳು ಅವರ ಪರವಾಗಿ ಕಾಯ್ದೆಯನ್ನು ರೂಪಿಸಲು ತೊಡಕಾಗಿತ್ತು.
ಆದರಿಂದು ಹಲವು ರಾಷ್ಟ್ರಗಳು  ಲೈಂಗಿಕ ಸ್ವಾತಂತ್ರ್ಯವನ್ನು ವಿಸ್ತರಿಸಲು ಮುಂದಾಗಿವೆ. ಗಂಡಸರಿಬ್ಬರು ದಂಪತಿ­ಯಾಗು­ವುದನ್ನು, ಹೆಂಗಸರಿಬ್ಬರು ದಂಪತಿಯಾಗು­ವುದನ್ನು ಮನ್ನಿಸಿವೆ. ನೇಪಾಳ ತನ್ನ ಹೊಸ ಸಂವಿಧಾನದಲ್ಲಿ ಮೂರು ಲಿಂಗಗಳನ್ನು ಸೇರಿಸಿದೆ. ಆದರೆ ಭಾರತದ ಸುಪ್ರೀಂಕೋರ್ಟ್ ಗೇ ಮತ್ತು ಲೆಸ್ಬಿಯನ್ ಸಂಬಂಧವನ್ನು ಲೈಂಗಿಕ ಅಲ್ಪಸಂಖ್ಯಾತರೆಂದು ಪರಿಗಣಿಸಲು ನಿರಾ­ಕರಿಸಿದೆ. ಇತರ ಹಿಂದುಳಿದವರ (ಒಬಿಸಿ) ಮೀಸಲಾತಿಯಡಿ ಅವಕಾಶಗಳನ್ನು ಲೈಂಗಿಕ ಅಲ್ಪಸಂಖ್ಯಾತರಿಗೆ ನೀಡಲು ಆದೇಶಿಸಿದೆ. ಅವರ ಸಂಗಾತಿಗಳ ಜೊತೆ ಬದುಕುವ ಅವಕಾಶವೂ ಅವರಿಗಿದೆ. ಮಗುವಿನ ಜನನ ಪ್ರಮಾಣ ಪತ್ರ­ದಲ್ಲಿಯೇ ಮೂರನೆ ಲಿಂಗವನ್ನು ಗುರುತಿಸಲು ಅವಕಾಶವನ್ನು ಜರ್ಮನಿ ಕಲ್ಪಿಸಿದೆ. ಅಲ್ಲಿ ‘ಎಕ್ಸ್‌’ ಸಂಕೇತವನ್ನು ಬಳಸಬಹುದು.
ಈವರೆಗೆ ಸಂಬೋಧಿಸಿದ ಶಿಖಂಡಿ, ಖೋಜಾ, ಹಿಜ್ಡಾ, ನಪುಂಸಕ ಈ ಯಾವುದೇ ಸಂಬೋಧನೆಗಳು ಅವಮಾನಕರವಾದಲ್ಲಿ ಅವರು ಬಯಸುವ  ಅವರ ವಿಶೇಷ ಲಿಂಗವನ್ನು ಒಪ್ಪಿಕೊಳ್ಳಲು ಮತ್ತು ಗೌರವಿಸಲು
ನಾವು ಸಿದ್ಧ.


ಮಲ ಹೊರುವವರ ದೇಶದಲ್ಲಿ ನಿಷೇಧದ ಕತೆ
Tue, 06/24/2014

ಇದು ನಮ್ ಕಥೆ. ಬಾಳ ಹಳೇದು. ನಮಗೂ ಒಂದು ಕಥೆಯಿದೆ, ಬದುಕಿದೆ ಅಂತ ಯಾರಿಗೂ ಅನ್ಸೋದಿಲ್ಲ. ಏನೋ ಗೋಳು ಅಂತ ತಿಳಿಬೇಡಿ. ನಮ್ಮ ಕಾಯಕದಿಂದ ನಮ್ಮನ್ನು ಬಿಡು­ಗಡೆಗೊಳಿಸ್ಬೇಕು ಅಂತ ಸುಪ್ರೀಂ ಕೋರ್ಟ್‌ ಇದೇ ವರ್ಷ ಮಾರ್ಚ್‌ ೨೭ರಂದು  ಆದೇಶ ಹೊರ­­­ಡಿಸಿದೆ. ನಮಗೆ ಮನೆಗಳನ್ನು ಕಟ್ಟಿ­ಕೊಡ­ಬೇಕು ಅಂತ ಸರ್ಕಾರಕ್ಕೆ ಸೂಚನೆ ನೀಡಿದೆ. ನಮಗೆ ಅಂಥದ್ದೊಂದು ಕನಸು ಸಹ  ಎಂದೂ ಬಿದ್ದಿ­­ರ­ಲಿಲ್ಲ. ಯಾಕೆಂದರೆ ನಮಗೆ ಮನೆಗಳಲ್ಲಿ ಬದುಕೇ ಗೊತ್ತಿರಲಿಲ್ಲ. ಊರ ಹೊರಗಲ ಕೇರಿಯ ಕೊಂಪೆಗಳಲ್ಲಿ ನಮ್ದೂ ಒಂದು ಜೋಪಡಿ. ನಗರಕ್ ಬಂದ್ರೆ ಅಲ್ಲೂ ನಮಗೇ ಅಂತ ಜಾಗ ಇರೋದೇ ಬಿಡಿ, ಕಾಲೋನಿ ಇಲ್ಲವೇ ಸ್ಲಮ್ಮು ಅಂತೀರ.
ಹಳ್ಳಿಯಾಗಲಿ ಪಟ್ಟಣವಾಗಲಿ, ಬಾಂಬೆ, ಕಲ್ಕತ್ತ ಡೆಲ್ಲಿಯಂತಹ ನಗರಗಳಾಗಲಿ ನಾವೇ  ಅಲ್ವಾ ಕಸ ಬಳ್ದು ಬಾಚೋರು? ಅದರಲ್ಲೂ ನಗರ­­­ಗಳೂ ಹೆಚ್ಚಾದಂಗೆ ನಮಗೆ ಬೇಕಾದಷ್ಟು ಕೆಲಸ. ನಗರದಲ್ಲಿ ಪಕ್ಕ-ಪಕ್ಕ ಮನೆ ಕಟ್ಕೊಂಡು ಊರ ಹೊರಕ್ಕೆ ಪಾಯಿಖಾನೆಗಂತ ಹೋಗೋದು ತಪ್ಪಿ, ಪಾಯಿಖಾನೆ ಅಂದ್ರೆ ಅದೇ ಕಕ್ಕಸು ಮನೆ ಕಟ್ಕೊಳ್ಳೋಕೆ ಶುರು ಮಾಡಿದ್ರಲ್ಲ, ಆಗ ದಿನಾ ಗೋರಿ ಅದನ್ನ ಹಾಕೋಕೆ ನಮ್ಮನ್ನ ಕರ­­ಕೊಂಡ್ರು. ಎಲ್ಲಾ ನಗರದಲ್ಲೂ ಹೀಗೆ ಮನೆ ಕಟ್ಟೋದು ಶುರು ಆಯ್ತು. ಮನೆ ಹಿಂದಿನ ಗಲ್ಲಿಲಿ ಅವರು ಮೈ ತೊಳೆದ ನೀರು ಚರಂಡಿ­ಯಲ್ಲಿ ಹರಿಯೋದು. ಇನ್ನು ಗಟ್ಟಿ ಕಸಕ್ಕೆ ಗುಂಡಿ ಮಾಡೋರು. ಇಲ್ಲಾಂದ್ರೆ ಹಾಗೇ ಒಂದು ಮಡಕೆ ಇಡೋರು. ಕೆಲವು ಕಡೆ ಏನೂ ಇಲ್ಲ. ಚಪ್ಪಡಿ ಕಲ್ಲ ಮೇಲೆ ಎಲ್ಲಾ ಬಂದು ಬೀಳೋದು. ಅದ­ನ್ನೆಲ್ಲ ಒಂದು ತಗಡು ತಗೊಂಡು ಬಾಚಿ ಮಡ­ಕೆಲೋ ಬಕೇಟಿನಲ್ಲೋ ಹಾಕ್ಕೊಂಡು, ತಲೆ ಮೇಲೆ ಹೊತ್ಕೊಂಡು ಹೋಗಿ ಊರ ಹೊರಗೆ ಹಾಕ್ತಿದ್ವಿ. ನಮ್ಮವ್ವ ಅವರವ್ವ ಹೀಗೆ ಎಷ್ಟೋ ತಲೆ­ಮಾರು ತಲೆ ಮೇಲೇ ಮಲ ಹೊತ್ತಿದ್ದೀವಿ. ಹಂಗೆ ಹೊತ್ಕೊಂಡು ಹೋಗುವಾಗ ಅದೆಲ್ಲ ತುಳುಕಿ ಮೈ ಮೇಲೆ ಬೀಳೋದು. ದನದ ಕೊಟ್ಟಿಗೆಯಲ್ಲಿ ಸಗಣಿ ಬಾಚಿ ಹಾಕ್ತಾರಲ್ಲ ಹಾಗೆ. ಅದಕ್ಕೇ ನಾವು ಹಾಗೆ ಹೊತ್ಕೊಂಡು ಹೋಗ್ತಿದ್ರೆ ಜನ ಮೂಗು ಮುಚ್ಕೊಂಡು ದೂರ ಹೋಗೋರು. ಇಲ್ದೇ ಇದ್ರೂ ಅವರೇನು ನಮ್ಮನ್ನ ಮುಟ್ಟಿಸ್ಕೊಳ್ತಿರಲಿಲ್ಲ. ಹಂಗೇನೇ ನಮ್ಮೇಲೆ ಯ್ಯಾರ್‌ ಯ್ಯಾರ್‍ದೋ ನೆರಳು ಬಿದ್ರೆ ನಮಗೆ ಒಳ್ಳೇದಲ್ಲ ಅಂತ ನಮ್ಮಜ್ಜಿ ಹೇಳ್ತಿದ್ರು. ಇಂಥದ್ದೆಲ್ಲ ಹೋಗ್ಬೇಕು ಅಂತ ಬಾಬಾ ಸಾಹೇಬ್ರು ಎಷ್ಟೊ ಹೋರಾಟ ಮಾಡಿದ್ರು. ನಮ್ಮ ದೇಶ ನಮ್ದೇ ಆಯ್ತಂತಲ್ಲ ಆಗ್ಲೇ ಇದ್ನೆಲ್ಲಾ  ಬರದಿಟ್ಟಿದ್ದಾರೆ. ನಮ್ಮನ್ನ ಮುಟ್ಟಿ­ಸ್ಕೊಬಾರ್‌ದವ್ರು ಅಂತ ಏನಾದರೂ ದೂರ ಮಾಡಿದ್ರೆ ಅವರಿಗೆ ಶಿಕ್ಷೆ ಆಗತ್ತಂತೆ. ಅವರು ಬರದಿಟ್ಟು ಹೋದ್ರು, ಆದ್ರೆ ಜನ ಮಾಡೋ­ದನ್ನ ಬಿಡ್ತಾರ? ಗಾಂಧೀ ಅಂತ ಒಬ್ಬ ಮಹಾತ್ಮ ಎಲ್ಲರೂ ಕಕ್ಕಸ್ ಗುಡಿಸಬೇಕು ಅಂತ ಹೇಳಿ ತಾನೂ ಗುಡಿಸಿ ತೋರಿಸಿದ್ರಂತೆ. ಅದಕ್ಕೇ ಏನೋ ಮಹಾತ್ಮ ಅಂತ ಕರೆಯೋರು.
ನಮ್ಮಪ್ಪ ಯಾವತ್ತೂ ಲೋಟದಾಗೆ ಕಾಫಿ ಕುಡಿ­ದಿರಲಿಲ್ವಂತೆ. ಕಕ್ಕಸ್ ಗುಂಡಿ ಗುಡ್ಸಿ ಬಂದ್ರೆ, ಅವ್ರು ಕುಡಿಯೋ ಲೋಟದಲ್ಲಿ ಕಾಫಿ ಇರ್‍ಲಿ ನೀರಾದ್ರೂ ಕೊಡ್ತಾರಾ ನಮಗೆ? ಅದೇ ತೆಂಗಿನ ಚಿಪ್ಪು, ಇಲ್ಲಾಂದ್ರೆ ಮಣ್ಣಿನ ಬಟ್ಲು. ಅಲ್ಲೆ­ಲ್ಲಾದ್ರೂ ಅವರ ಮನೆ ಸೂರಲ್ಲಿಡೋರು. ಮೊದ್ಲೆಲ್ಲ ರಾತ್ರಿ ಉಳಿದಿರೋ ಅನ್ನಾನೋ ತಂಗಳು ಮುದ್ದೆನೋ ನಮಗೆ ಸಿಗೋದು. ಹಾಗೆ ನಮ್ಮ ಅಂಗಿಗೆ ಹಾಕಿಸ್ಕೊಳ್ತಿದ್ವಿ. ನಮ್ಮವ್ವ ಅದನ್ನ ತಂದು ನಮಗೆ ಉಣಿಸೋಳು. ಈಗ ಪ್ಲಾಸ್ಟಿಕ್ ಚೀಲ ಬಂದ್ಮೇಲೆ ಅದರಲ್ಲಿ ಎಲ್ಲಾನೂ ಹಾಕಿ ಮೇಲಿಂದ ನಮ್‌ ಮಡಿಲಿಗೆ ಹಾಕ್ತಾರೆ.
ಕೆಲವರು ಕಕ್ಕಸು ಗುಂಡಿ ತೆಗಸ್ತಾರೆ. ವರ್ಷಕ್ಕೆ ಆ ಗುಂಡಿ ತುಂಬಿದ ಮೇಲೆ ಇನ್ನೊಂದು ಗುಂಡಿ ತೆಗಿ­­ತಾರೆ. ಆದರೆ, ಇದಕ್ಕೆಲ್ಲ ಜಾಗ ಇರಬೇಕಲ್ಲ, ಗುಂಡಿ ತುಂಬಿಹೋದ್ರೆ ಅದನ್ನು ಮುಚ್ಚೋರೂ ನಾವೇ. ನಮ್ಮ ಕಾಯಕ ಅಂತ ಎಲ್ಲನೂ ಮನ­ಸ್ಸಿಟ್ಟೆ ಮಾಡಿದ್ದೀವಿ. ನಮಗೆ ಇದು ಕೆಟ್ಟದು, ಇದು ಒಳ್ಳೇದು ಅಂತ ಗೊತ್ತಿಲ್ಲ. ಯಾವುದನ್ನೂ ಅಸ­ಹ್ಯ­­ಪಟ್ಟುಕೊಂಡು ನೋಡಿಲ್ಲ. ಮೂಗು ಹಿಡ­ಕೊಂಡು ಕೆಲಸ ಮಾಡಿಲ್ಲ.  ನಿಮ್ಮ ಮಕ್ಕಳು ಗಲೀಜು ಮಾಡಿದಾಗ ನೀವು ವರೆಸಿ ಹಾಕ್ತೀರಲ್ಲ ಹಾಗೆ. ಹೊಟ್ಟೆ ಒಳಗೆ ಗಲೀಜು ಇಟ್ಕೊಳೋಕೆ ಆಗುತ್ತಾ? ಪಾಪ ಮನುಷ್ಯರೆಲ್ಲ ನಮ್ಮಕ್ಳು ಇದ್ದಂಗೆ ಅಲ್ವ. 
ನಮ್ಮ ಕೈ,ಮೈ ಹೊಲಸಾದರೂನು ಬೇರೆಯ­ವರಿಗೆ ಕೆಟ್ಟದ್ದು ಬಯಸಬಾರದು ಅಂತ ನಮ್ಮಜ್ಜ ಹೇಳ್ತಿದ್ದ. ಚರಂಡಿ ಕಟ್ಕೊಂಡ್ರೆ ಅವನು ಉದ್ದು­ದ್ದನೇ ಗಳ ಹೊತ್ಕೊಂಡು ಅದನ್ನ ಸರಿಮಾಡಕೆ ಹೋಗ್ತಿದ್ದ. ಒಂದ್ಸಾರಿ ಹಂಗೆ ಮ್ಯಾನ್ಹೋಲ್ ಒಳಗೆ ಇಳಿದು ಕಡ್ಡಿ ಹಾಕೋ ಹೊತ್ತಿಗೆ ಒಳಗೆ ಶಾನೆ ವಿಷದ ಗಾಳಿ ತುಂಬ್ಕೊಂಡು ಸತ್ತೇ ಹೋದ. ನಮ್ ಜನ ಸತ್ರೆ ನಾವೇ ಮಣ್ ಮಾಡ್ತೀವಿ. ಪೇಪರ್‌ನವ್ರು, ಟಿ.ವಿಯವರು ಅಂತ ಒಂದಷ್ಟು ಜನ ನಮ್ ಮನೆ ಹತ್ರ ಬಂದ್ರು. ಅವನ ಹೆಣದ ಮೇಲೆ ಬಟ್ಟೆ ಮುಚ್ಚೋಕೂ  ಕಾಸು ಇರಲಿಲ್ಲ. ಸರ್ಕಾರ ಸತ್ತವರ ಮನೆಗೆ ದುಡ್ಡು ಕೊಡತ್ತೆ ಅಂದ್ರು. ಸಾವೇನ್ರಿ ಎಲ್ರೂ ಮರೆತೇ ಹೋಗ್ತಾರೆ. ಇರಲಿ ಬಿಡಿ, ಅವನು ಬದು­ಕಿದ್ದ ಅಂತ ಗೊತ್ತಾಗಿದ್ರಲ್ವ ಸತ್ತಾಗ ಯಾರಾದ್ರೂ ದುಃಖ ಮಾಡದು? ಏಳೋ ಹೊತ್ತಿಗೆ ಎದೆ ಮಟ್ಟ ಕುಡೀ­ತಿದ್ದ. ಇನ್ನು ಮಲಗುವಾಗ್ಲೂ ಕುಡಿದೇ ಇರ­ತಿದ್ದ. ಹಂಗೆ ಒಂದೊಂದ್ಸಾರಿ ದುಡ್ಡು ಇಲ್ದೇ ಇದ್ದಾಗ ನಮ್ಮವ್ವನಿಗೆ ಬಂದು ಹೊಡೆಯೋನು. ಅವನು ಎಲ್ಲೋ ಕುಡಿದು ಬಿದ್ದಿರೋನು. ನಮ್ಮ­ವ್ವನೆ ಹಿಡ್ಕೊಂಡ್  ಎಳ್ಕೊಂಡು ಬರೋಳು. ಇದು ನಮ್ಮ ಒಬ್ಬರ ಕತೆ ಅಲ್ಲ, ನಮ್ಮಂಗೆ ಜೀವನ ಹೊರೆಯೋ ಹನ್ನೆರಡು ಲಕ್ಷ ಜನರದ್ದು. ಸರ್ಕಾರದ  ಲೆಕ್ಕ ಆರು ಲಕ್ಷ.
ಬೆಳಿಗ್ಬೆಳಿಗ್ಗೆನೆ ಕುಡಿದು ಬರತಿಯಾ ಅಂತ ಎಲ್ರೂ ಅವನ್ಗೆ  ಬಯ್ಯೋರು. ಗುಂಡಿ ಗುಡಿಸಕೆ ಅಂತ ದುಡ್ಡು ಇಸ್ಕೊತೀರ. ಎಲ್ಲ ಕುಡ್ದು ಹಾಳ್ ಮಾಡ್ತಿರ ಅಂತ ಬೋದ್ನೆನೆ ಮಾಡೋರು. ಕಕ್ಕಸ್ ಗುಂಡಿನ ಕಿಲೀನ್ ಮಾಡಿದ್ದಿದ್ರೆ ಗೊತ್ತಾಗುತ್ತೆ, ಕುಡೀದೆ ಇದ್ರೆ ಆ ಕೆಲಸ ಮಾಡಕಾಗತ್ತ ಅಂತ. ನಮ್ಮಪ್ಪ ಮ್ಯಾನ್ಹೋಲ್‌ಗೆ ಇಳಿವಾಗ ಎರಡು ಬಾಟ್ಲಿ­ನಾದ್ರೂ ಕುಡ್ದಿರ್‌ತಿದ್ದ. ಅದ್ರ ವಾಸ್ನೆ ಅವನ್ನ ಆವರ­ಸ್ಕೊಂಡಿರೋದು. ನೊಣ ಹಾರಾಡೊ ಸತ್ತು - ಕೊಳ್ತ ದನ ಎತ್ತಾಕ್ವಾಗ ಅದಕ್ಕೆ ದೂಪದ ಹೊಗೆ ಹಾಕಕ್ಕಾಗತ್ತ? ಸಾರಾಯಿ -ಕುಡಿಬೇಕು, ಮೂಗಿನ ಹೊಳ್ಳೆಗೆ ದನದ ವಾಸನೆ ಬಡೀದಂಗೆ. ಅವ್ನು ಗುಂಡಿಗಿಳಿದು ಸಾಯ್ದೆ ಹೋಗಿದ್ರೆ ಇನ್ನೊಂದೆ­ರಡು ವರ್ಷದಲ್ಲಿ ಸಾರಾಯಿ ಕುಡಿದಿ­ದ್ದ­­ಕ್ಕಾದ್ರೂ ಸಾಯ್ತಿದ್ದ.
ಈ ಊರು ಆ ಊರು ಅಂತ ಇಲ್ಲ.  ಗಲೀಜು ಇಲ್ಲ­ದಲೆ ಠಾಕು ಠೀಕಾಗಿ ಈ ದೇಶದ ಎಲ್ಲಾ ಊರಲ್ಲೂ ಜನ  ಇವತ್ತು  ಬದುಕ್ಬೇಕಾದ್ರೆ ನಾವು ಅವರ ಸೇವೆ ಮಾಡಿದ್ದೀವಿ. ಆದ್ರೆ ಹಾಗಂತ ಯಾರಿಗೂ ಅನ್ನಿಸೋದಿಲ್ಲ. ಈ ಹೊಟ್ಟೆ ಕೇಳಲ್ಲ. ನಾಯಿ ಹಂದಿಗಳ ಜೊತೆ ಹೊಡದಾಡಬೇಕು. ನಾಯಿ­ಗಳೂ ಒಳ್ಳೆ ಬಟ್ಟೆ ನೋಡ್ತಾವೆ. ಹಿಟ್ಟು ಹಾಕಿ­ದ­ವರ ಋಣಕ್ಕೆ ನಮ್ಮನ್ನ ಕಚ್ಚಿಬಿಡ್ತಾವೆ.  
ಇದು ನೆನ್ನೆ, ಇವತ್ತಿಂದೇನಲ್ಲ. ಈ ದೇಶದ್ ಚರಿತ್ರೆ ನಾಲಕ್ ಸಾವ್ರ ವರ್ಷ ಹಳೇದು ಅಂತಾರೆ. ಆ ಕಾಲ್ದಲ್ಲೇ ಒಳಚರಂಡಿ ಇತ್ತಂತೆ. ನಮ್ಮ ಜನ ವಿಮಾನ ಹಾರಿಸ್ತಾರೆ. ಆಗ್ಲೂ ಮನೆ­ಯಿಂದ ಚರಂಡಿಗೆ, ಚರಂಡಿಯಿಂದ ಊರ ಹೊರಕ್ಕೆ ಗಲೀಜು ನೀರು ಹರಕೊಂಡು ಹೋಗ್ಬೇ­ಕಿತ್ತು. ಆಗ್ಲೂ ನಮ್ ಜನಾನೆ ಶುದ್ಧಿ ಮಾಡ್ತಿದ್ರೊ ಏನೋ. ಆದ್ರೆ, ಆಗಿನವರು ಗುಂಡಿ ತೆಗ್ದು ಬಿಟ್ಕೊಂಡಿರಲಿಲ್ಲ.
ಇವತ್ತು ನಮ್ಮ ಪ್ರಧಾನಿಗಳಾಗವ್ರಲ್ಲ ಅವ­ರೂರ್ ಪಕ್ಕದಲ್ಲೂ ನಾವು ಗಲೀಜ್ ಹೊತ್ಕೊಂಡು ಊರ್ ಹೊರಗಡೆ ಹಾಕ್ತೀವಿ. ಅಲ್ಲಿ ಭಂಗಿ, ಸಫಾಯಿ ಅಂತ ಏನೇನೋ ಜಾತಿ ಹೆಸ­ರಿ­ಡಿದು ಕರೀತಾರೆ. ಈ ಕಸಾನ ಕೆಲವ್ರು ತಮ್ ಹೊಲಕ್ಕಾಕುಸ್ಕೊಂಡು ಗೊಬ್ರ ಮಾಡ್ಕೊಂಡು ನಾಲಕ್ಕು ಕಾಸು ಕೊಡೋರು. ಹಂಗೆ ಕಾಸು ಸಿಗುತ್ತೆ ಅಂತ ಗೊತ್ತಾಗಿ ಆ ಊರಿನ ದೊಡ್ಡ ಮನುಸ್ರು ಅವ್ರ್ ಮನೆ ಕಸ ಬಾಚೋದ್ ಮಾತ್ರ ನಮ್ ಕೆಲ್ಸ, ಅದನ್ನೆಲ್ಲ ಅವ್ರ ತಿಪ್ಪೆಗೆ ಹಾಕ್ಬೇಕು ಅಂತ ಹೇಳಿ ಅದ್ರ ಮಾರಾಟಕ್ಕೆ ಅವ್ರೆ ನಿಂತವ್ರೆ. ಸಂತೋಸ.
ಹಿಂಗೆ, ಗುಂಡಿಯಿಲ್ಲದ ಪಾಯಖಾನೇನ ಕಟ್ಟ­ಬಾರದು ಅಂತ ಇಪ್ಪತ್ತು ವರ್ಷದ ಹಿಂದೇನೆ (೧೯೯೩) ಸರ್ಕಾರ ನಿಷೇಧ ತಂದಿತ್ತು. ಅದ್ರು ಪ್ರಕಾರ ಈ ದೇಶ್ದಲ್ಲಿ ಮಲಹೊರೊ ಪದ್ಧತಿ ನಿರ್ಮೂ­ಲನ ಆಗಿದೆ. ಎಲ್ಲ ಕಾಗದ್ದಾಗೆ. ನಾವಂತೂ ಎರಡ್‌ ಅಕ್ಷರ ಕಲ್ತವ್ರಲ್ಲ. ಯಾವತ್ತಾ­ದರೂ ನಮ್ಮ ಮಕ್ಕಳೂ... ಅದನ್ನೆಲ್ಲಾ ತಿಳಿ ಬಯ್ದು. ಇರ್‍ಲಿ. ನಮ್ ಪರವಾಗಿ ಹೋರಾಟ ಮಾಡೋ ನಾಯಕರುಗಳು ಬಂದೇಳ್ತಿದ್ದರು: ಇನ್ಮೇಲೆ ಮಲ –ಮೂತ್ರ ಎಲ್ಲಾ ಚರಂಡೀಲಿ ಹರದು ಹೋಗೋ ಹಾಗೆ ಕಕ್ಕಸ್ ಮನೆ ಕಟ್ಬೇಕು ಅಂತ ಕಾನೂನು ಮಾಡಿದ್ದಾರೆ. ಅಂತವು ಎಪ್ಪತ್ತೆ­ರಡು ಲಕ್ಷ ಮನೆಗಳಿವೆಯಂತೆ. ಅವ್ರು ಹೇಳಿದ್ ನೋಡಿದ್ರೆ ಇನ್ಮೇಲೆ ನಮಗೆ ಆ ಕೆಲಸಾನೂ ಸಿಕ್ಕ­ಲ್ವೇನೊ ಅಂತ ಹೆದರಿದವರೂ ಇದ್ರು, ಯಾಕಂ­ದರೆ ನಾವು ಬೇರೆ ಕೆಲಸ ಕಲ್ತಿಲ್ಲ. ಮಾಡಕ್ಕೂ ನಮ್ಮನ್ನ ಸೇರಿಸ್‌ಕೊಳ್ಳಲ್ಲ. ಈ ಕೆಲಸಕ್ಕಾದರೆ ಯಾರೂ ಬರಲ್ಲ ನೋಡಿ.
ನಮ್ಮ ಹುಟ್ಟಿಗೆ ಅಂಟಿಸಿ ಬಿಟ್ಟವರೆ. ಆದರೆ, ಈ ದೇಶ್ದಾಗೆ ಅಷ್ಟು ಸುಲಭವಾಗಿ ನಮ್ಮನ್ನ ಮನುಸ್ರು ಮಾಡ್ತಾರಾ. ಆ ಕಾಯ್ದೆ ಜಾರಿಗೆ ತರಕ್ಕೆ ೬೦೦ ಕೋಟಿ ರೂಪಾಯಿ ಖರ್ಚು ಮಾಡಬೌದಂತೆ. ಹಂಗಂದ್ರೆ ಎಷ್ಟು ಅಂತ ನಮಗೆ ತಿಳಿಯಲ್ಲ ಬಿಡಿ. ನಮ್ಮ ಮೇಲೆ ಒಂಚೂರಾದರೂ ಅಯ್ಯೋ ಅನ್ನಿಸಿದ್ದರೆ ನಮ್ಮ ಜೋಪಡಿಗೆ ಹೊದಿಸೋಕೆ ಗೋಣಿತಾಟಾ­ದರೂ ಕೊಡಬೌದಾಗಿತ್ತು. ಯಂತ್ರ ತರುಸ್ತಾ­ರೇನೊ- ಆ ದುಡ್ಡಿನಾಗೆ?
ಈಗ ಕಟ್ಟೋ ದೊಡ್ಡ ದೊಡ್ಡ ನಗರಗಳಲ್ಲಿ ಒಳ­ಚರಂಡಿ ಮಾಡ್ತಾರೆ. ಎಲ್ಲಾ ಊರಲ್ಲೂ ಚರಂಡಿ ಕೊಳವೆ ಇದ್ದರೂ ಅದನ್ನ ಶುದ್ಧ ಮಾಡ­ಲಾರ­ದ್ದಕ್ಕೆ ಕುಡಿಯೋ ನೀರಿನ ಹೊಳೆಗೇ ಚರಂಡಿ ನೀರ್ ಸೇರಿಸಿ ಬಿಟ್ತಾರೆ. ಒಳಚರಂಡಿ- ಅದು ಕೆಟ್ಟರೂ ಸರಿ ಮಾಡಕ್ಕೆ ನಾವೇ ಇಳೀಬೇಕಲ್ಲಾ. ಹಾಗೆ ಮ್ಯಾನ್ಹೋಲಿಗೆ ಇಳಿದು ಸತ್ತ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಕೊಡಬೇಕು ಅಂತ ಆಗಿದೆಯಂತೆ. 
ನಾವು ಕೈಯಲ್ಲಿ ಗಲೀಜು ಮುಟ್ಟ ಬಾರದೂ ಅಂತ ಮರುಗೋ ಜೀವಗಳು ಇದ್ದಾವೆ. ಅವರು ನಮಗೆ ಬಿಡುಗಡೆ ಕೊಡಿಸಬೇಕು ಅಂತ ಅಷ್ಟು ವರ್ಷದಿಂದ ಕೋರ್ಟು ಕಚೇರಿ ಅಂತ ತಿರುಗು­ತ್ತಲೇ ಇದ್ದಾರೆ. ಹಾಗೆ ತಿರುಗಿ ತಿರುಗಿ ನಾವು ಅವ­­ರಿಗೆ ಹೊಲೆದುಕೊಟ್ಟ ಮೆಟ್ಟುಗಳು ಹರಿದು ಹೊದೋ. ಮಲ ಮೈ ಮೇಲೆ ಸುರುಕೊಂಡ್ವಿ, ಅದನ್ನು ನೋಡಿ ಯಾರಿಗೂ ಏನೂ ಆಗ್ಲಿಲ್ಲ.
ಇವರ ದನಿ ಕೇಳಿ ಈಗೇನೋ ಕಾನೂನು ಕಣ್ಣು ಬಿಟ್ಟಿದೆಯಂತೆ. ನಮ್ಮ ಸರ್ಕಾರಗಳೂ ಆ ಕೋರ್ಟಿ­­­ನಲ್ಲಿ ಇಲ್ಲದ್ದೆಲ್ಲ ಹೇಳ್ತಾವಂತೆ. ಕೈ ಹಾಕಿ ಗಲೀಜು ತೆಗೆಯೋ ಕೆಲಸ ಮಾಡೋ ಪೌರ­ಕಾರ್ಮಿ­ಕರೇ ಇಲ್ಲಾ ಅಂತಾರಂತೆ. ಆ ಮಟ್ಟಕ್ಕೆ ಯಂತ್ರಗಳನ್ನು ಬಳಸಿ ಚರಂಡಿಯಿಂದ, ಮ್ಯಾನ್ಹೋ­­ಲಿನಿಂದ ಕಟ್ಟಿಕೊಂಡ ಕಸ ತೆಗೆದಿದ್ದರೆ ಇಷ್ಟೊಂದು ಸಮಸ್ಯೆ  ಯಾಕಾಗುತ್ತಿತ್ತು? ಇಷ್ಟು ವರ್ಷ ಪೌರ ಕಾರ್ಮಿಕರಾಗಿ ನಾವು  ಎಂದಾ­ದರೂ ಕಾಯಂ ಆಗಬಹುದು ಅನ್ನೋ ಆಸೇಲಿ ದುಡಿದು ಜೀವನ ಕಳಿತಿದೀವಿ. ರಸ್ತೆಗಳಲ್ಲಿ ಬಗ್ಗಿ ಕಸ ಗುಡಿಸಿ ನಮ್ಮ ಬೆನ್ನುಗಳು ಗೂನಾದರೂ ಪುಡಿ­ಗಾಸಿಗೆ ಕೆಲಸ ಮಾಡ್ತೀವಿ.
ನೀವು ಮೂಗು ಮುಚ್ಚಿಕೊಂಡು ಹೋಗೋ ಜಾಗಗಳಾದ ಆಸ್ಪತ್ರೆ, ಬಸ್‌ ಸ್ಟ್ಯಾಂಡ್‌ ಪಕ್ಕದಲ್ಲಿ, ರಸ್ತೆ ಬದೀಲಿ ಇರೊ ಶೌಚಾಲಯ, ಎಲ್ಲಾ ಕಡೆ ನಾವೇ ಉಜ್ಜಿ ತೊಳಿಬೇಕು. ರೈಲ ಹಳಿ ಮೇಲೆ ಬಿದ್ದ ಗಲೀಜು ತೆಗೆಯೋಕೆ ನಮ್ಮನ್ನ ಕರೆಯ್ತಾರೆ. ಕೈಯಲ್ಲಿ ಗಲೀಜು ಮುಟ್ಟೋ ಕೆಲಸ ತಡೆಯೋಕೆ ಕಾಯ್ದೆ ತಂದಿದೆಯಂತಲ್ಲ. ಯಾವ ಕಾಲಕ್ಕೆ ಜಾರಿ ಮಾಡ್ತಾರೋ? ದಿಟವಾಗಿಯೂ ಅಂತಹ­ದೊಂದು ದಿನ ಬರತ್ತಾ? ಮಾನವಹಕ್ಕು, ಮೂಲ­­ಭೂತ ಹಕ್ಕು ಅಂತ ಏನೇನೋ ಹೇಳ್ತಾ ಇದ್ದರು.  ಆದರೆ ನಾವು ಎಲ್ಲರಂಗೆ ಊಟ ಮಾಡ್ತೀವ? ನಮ್ಮ ಮಕ್ಕಳು ಶಾಲೆ ಮೆಟ್ಟಿಲು ಹತ್ತುತಾವ?
ಎಷ್ಟು ಲಾಯಕ್ಕಾದ ಹೆಸರು ಕೊಟ್ಟಿದ್ದೀರಾ ನಮಗೆ : ಪೌರಕಾರ್ಮಿಕರು, ಸಫಾಯಿ ಕರ್ಮ­ಚಾರಿ­ಗಳು. ಆದರೆ ಜನ ಕರೆಯೋದು ಮಾತ್ರ ನಮ್ಮ ಜಾತಿ ಹೆಸರಿನಿಂದಲೇ: ತೋಟಿ, ಜಾಡ­ಮಾಲಿ, ಜಲಗಾರ, ಮೋಚಿ. ಏನು ಕರೆದರೆ ತಾನೆ ಏನಂತೆ? ಜಾತಿಗೆ ಅಂಟಿದ ಜಾಡ್ಯ, ನಾವು ಮುಟ್ಟಿಸಿಕೊಳ್ಳದ ಜಾತಿಗೆ ಸೇರಿದವರು. ಬಾಬಾ ಸಾಹೇಬರೆ ಮತ್ತೆ ಹುಟ್ಟಿ ಬರಬೇಕಾ ನಿಮ್ಮ ಮನದ ಮೈಲಿಗೆ ತೊಳೆಯೋಕೆ? 




ತಿರುಳ ಬಿಟ್ಟು ಸಿಪ್ಪೆ ಮೆಲ್ಲುವ ಸಿರಿ
Tue, 06/10/2014 
‘ತಗ್ಗಿದವರ ಎಚ್ಚುಸಬೇಕು ಎಚ್ಚಿದವರ ತಗ್ಗುಸಬೇಕು’ ಇದು ಜನಪದರ ಸಾಲು. ಮುಂದುವರಿದು ಕೊಳ್ಳೇಗಾಲ, ಚಾಮರಾಜನಗರ, ಮೈಸೂರು ಸೀಮೆಯ ಜನಮಾನಸದಲ್ಲಿ ಮನೆಮಾಡಿರುವ ಆರಾಧ್ಯ ದೈವ ಮಂಟೇಸ್ವಾಮಿಯ ಕಾವ್ಯದ ಸಾಲು. ಪದ, ಸಾಲು ಎಂದು ಕರೆಯುವ ಈ ಹಾಡುಗಳು ಯಾವ ಕಾವ್ಯಕ್ಕೂ ಕಡಿಮೆಯಿಲ್ಲ. ಕಾವ್ಯ ಎಂದರೆ ಶಿಷ್ಟರಿಗೆ ಪ್ರಿಯವಾಗದಿರ­ಬಹುದು, ಆದರೆ ಹಾಗೆ ಅರ್ಥವಾದರೆ ಸಾಕು.
‘ಜನಪದ ಸಾಹಿತ್ಯ’. ಇದನ್ನು ಯಾರಾದರೂ ಚರಿತ್ರೆ ಅಂತ ನಂಬುತ್ತಾರ? ಓದು ಬರಹ ಗೊತ್ತಿ­ಲ್ಲದ ಜನ ಕಾಗಕ್ಕ ಗೂಬಕ್ಕನ ಕಥೆ ಹೇಳುತ್ತಾರೆ. ಅದೆಲ್ಲಾ ಜನರ ಬಾಯಿಂದ ಬಾಯಿಗೆ ಹರಡಿದ ಕಥೆಗಳು. ಹೀಗೆ ಮೂಗು ಮುರಿಯುವ ವಿದ್ವಾಂ­ಸರ ಮಾತುಗಳು ಹೊಸದೇನೂ ಅಲ್ಲ.
ಆದರೆ ಅಚ್ಚರಿ ಎನಿಸಿದ್ದು ಕರ್ನಾಟಕದಲ್ಲಿ ಜನಪದ ಸಾಹಿತ್ಯ ಕುರಿತು ಸಂಶೋಧನೆ ಆರಂಭವಾಗಿ ಅರ್ಧ ಶತಮಾನವೇ ಕಳೆದರೂ ನಮ್ಮ ಜನರ ಜೀವದನಿಗೆ ಕಿವಿಮುಚ್ಚಿದ ಶಿಷ್ಟಲೋಕ; ತನ್ನ ಭ್ರಮಾಲೋಕವನ್ನೇ ಶ್ರೇಷ್ಠವೆಂದು ಬೀಗುತ್ತದೆ. ಬರಹ ಬಾರದ ಸಮಾಜ ಕಂಡುಂಡ ಬದುಕಿನ ತುಣುಕುಗಳು ಮಾತ್ರವೇ ಓದು ಸಮಾಜದ ಆಸ್ತಿ ಎಂದು ಅವರಿಗಿನ್ನೂ ಅರಿವಾಗಿಲ್ಲ.
ಸಮುದಾಯಗಳ ಬದುಕು ಜನರ ನೆನಪು­ಗಳಲ್ಲಿ ಅಡಗಿದೆಯೇ ಹೊರತು ಬರಹದ ದಾಖಲೆಗಳಲ್ಲಿ ಅಲ್ಲ. ಅವರಾಡುವ ಭಾಷೆ, ಕಲೆ, ಕಸುಬು, ಆಚರಣೆಗಳು ಎಲ್ಲವೂ ಬದುಕಿನ ಭಾಗವಾಗಿರುತ್ತವೆ. ಅವರು ತೇಯ್ದ ಬದುಕು, ಮಾಡಿದ ಸಾಹಸ, ಅರಿತ ಅರಿವು ಕಥೆಯಾಗಿ, ಹಾಡಾಗಿ, ಲಾವಣಿಯಾಗಿ, ಪದವಾಗಿ ಹೇಳುತ್ತಾ ಸಾಗುತ್ತಾರೆ.
ಹೀಗೆ ಉಳಿದುಬಂದ ನೆನಪುಗಳು ಬರಹ ರೂಪಕ್ಕೆ ಇಳಿಯದಿದ್ದರೂ ಪೀಳಿಗೆಯಿಂದ ಪೀಳಿಗೆಗೆ ಉಳಿದು ಬಂದಿರುತ್ತವೆ. ಮೌಖಿಕವಾಗಿ ಉಳಿದ ಸಾಹಿತ್ಯವನ್ನು ವಿದ್ವತ್ ವರ್ಗ ಕಡೆಗಣಿಸುತ್ತದೆ. ಅದೇ ಬರಹ ರೂಪ­ದಲ್ಲಿ­ದ್ದರೆ ಅಪಾರ ಮನ್ನಣೆಗೆ ಒಳಗಾಗುತ್ತದೆ. ಜನಪದ ಸಾಹಿತ್ಯ ಆಧುನಿಕ ಅರ್ಥದ ಚರಿ­ತ್ರೆಯ ಪಠ್ಯಗಳಲ್ಲ, ಹಾಗಂದ ಮಾತ್ರಕ್ಕೆ ಅವು ಕಟ್ಟು ಕಥೆಗಳಲ್ಲ.
ನಮಗೆ ಅರ್ಥವಾಗದ ಭಾಷೆ­ಯನ್ನು ನಾವು ಕಟ್ಟುಕಥೆಗಳೆಂದು ಕರೆದು  ಜ್ಞಾನ ಸಂಪತ್ತನ್ನೇ ತುಚ್ಛವಾಗಿ ಕಂಡಿದ್ದೇವೆ. ಅವು ನಮ­ಗಾಗಿ ಬರೆದಿಟ್ಟ ಚರಿತ್ರೆ ಪಾಠಗಳಲ್ಲ, ಆದರೆ ಯಾವುದನ್ನು ನಾವು ಜ್ಞಾನ ಶಿಸ್ತು ಎಂದು ಭಾವಿಸಿದ್ದೇವೆಯೋ ಅದಕ್ಕೆ ತಕ್ಕಂತೆ ಅಳವಡಿಸಿ­ಕೊಳ್ಳ­ಬೇಕಾಗಿದೆ.
ಜನಪದರು  ತಾವು ಹಾಡುವ ಹಾಡುಗಳು ಓದುಗರ ಮನ್ನಣೆಗೆ ಒಳಗಾಗ­ಬೇಕೆಂದು ಬಯಸಿದವರಲ್ಲ. ಹಾಗೆ ಸಂಗ್ರಹಿಸ­ಬೇಕೆಂದು ಹೋದಾಗಲೂ ಅತಿ ಸಂಕೋಚದಿಂದ ಮುದುಡಿ ಹೋಗುತ್ತಾರೆ. ಕಾಡಿನಲ್ಲಿ ಸ್ವಚ್ಛಂದ­ವಾಗಿ ಹರಿದುಹೋಗುವ ನದಿಗೆ ಅಣೆಕಟ್ಟೆ ಹಾಕಿದಂತೆ, ಹರಿದು ಸಾಗುವ ಜನಪದರ ಬದುಕನ್ನು ಆಧುನಿಕತೆಯ ಅಣೆಕಟ್ಟೆಗಳಿಂದ ಬಂಧಿಸಿ ಆ ನೀರನ್ನು ನಮಗೆ ಬೇಕಾದ ದಿಕ್ಕಿಗೆ ತಿರುಗಿಸಿಕೊಳ್ಳುತ್ತಿದ್ದೇವೆ ಅಷ್ಟೆ.
ಕಾಲ ಒಂದಿತ್ತು. ರಾಜ ಮಹಾರಾಜರ ಬದುಕು­ಗಳೇ ಚರಿತ್ರೆ ಎನಿಸಿತ್ತು. ವಿಜಯನಗರ ಸಾಮ್ರಾಜ್ಯ ಮೆರೆದು ಬೀಗಿದ ಕಾಲ. ಆದರೆ ಹಂಪಿಯ ಜನಸಾಮಾನ್ಯರು ಆ ವೈಭವದ ಸಾಮ್ರಾಜ್ಯವನ್ನಾಗಲೀ, ಅವರು ಹೋರಾಡಿದ ಯುದ್ಧಗಳನ್ನಾಗಲೀ  ಹಾಡಿಹೊಗಳುವುದಿಲ್ಲ (ಹಂಪಿ ಜಾನಪದ; ಪುರುಷೋತ್ತಮ ಬಿಳಿ­ಮಲೆ). ಅವರ ನೆನಪುಗಳಲ್ಲಿ ರಾಯರ ನೆನಪು­ಗಳು ಉಳಿದು ಬಂದಿಲ್ಲ.
ಆ ಕಾಲಕ್ಕೂ ಹಿಂದಿನ ಕುಮಾರರಾಮ ಗಾಢವಾಗಿ ಅವರ ನಂಬಿಕೆ­ಗಳಲ್ಲಿ ಉಳಿದಿದ್ದಾನೆ. ಬೆಂಗಳೂರು ಕೆಂಪೇ­ಗೌಡ, ಮದಕರಿ ನಾಯಕ, ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ ಇವರನ್ನು ಕುರಿತು ಲಾವಣಿಗಳನ್ನು ಕಟ್ಟಿ ಹಾಡುತ್ತಾ ಬಂದಿದ್ದಾರೆ. ಆಳುವ ವರ್ಗವೇ ಆದರೂ ಜನರಿಗೆ ಹತ್ತಿರವಾಗಿ ಬದುಕಿದವರನ್ನು  ತಮ್ಮವರಾಗಿಸಿಕೊಳ್ಳುತ್ತಾರೆ.
ಆಳುವ ವರ್ಗದ ಅಹಂಗೆ ಅವರು ಮಣೆ ಹಾಕುವುದಿಲ್ಲ. ಅದೇ ಅಧಿಕಾರದ ಮಾತುಗಳು ಕಲ್ಲಿನ ಮೇಲೆ ಶಾಸನ­ಗಳಾಗಿ ವಿರಾಜಿಸುತ್ತವೆ. ಆ ಶಾಸನಗಳನ್ನು ಜೋಡಿಸಿ­ಕೊಂಡು ನಮ್ಮ ನಾಡಿನ ಚರಿತ್ರೆ ಎಂದು ನಾವು ಬರೆದುಕೊಳ್ಳುತ್ತೇವೆ. ಆಫ್ರಿಕಾ ದೇಶಗಳಲ್ಲೂ ಜನರು ಇಂದು ತಮ್ಮ ನಾಡಿನ ಚರಿತ್ರೆಯನ್ನು ಕಟ್ಟಿಕೊಳ್ಳಲು ಹೊರಟಿ­ದ್ದಾರೆ. ಅವರಾದರೂ ಮೌಖಿಕ ಪರಂಪರೆ­ಗಳನ್ನು ಆಧರಿಸಿಯೇ ಚರಿತ್ರೆ ಸಾಹಿತ್ಯ ಇತ್ಯಾದಿ­ಯನ್ನು ಕಟ್ಟಿಕೊಳ್ಳಬೇಕಾಗುತ್ತದೆ.
ಅವರದೇ ಆದ ಸಂಶೋಧನಾ ವಿಧಾನವನ್ನು ಕಂಡುಕೊಂಡಿ­ದ್ದಾರೆ. ಪರಂಪರೆಯಲ್ಲಿ ಬಂದ ಕಥೆಗಳ ಒಳಾರ್ಥ­­ವನ್ನು ಗ್ರಹಿಸಬಲ್ಲರು. ಅವರ ಹಲವು ಭಾಷೆಗಳಿಗೆ ಲಿಪಿಯಿಲ್ಲದ ಕಾರಣಕ್ಕೆ ಅವು ಮೌಖಿಕ­ವಾಗಿಯೇ ಉಳಿದಿವೆ ಮತ್ತು ಆ ಭಾಷೆಗಳಾಗಲೀ ಅವರ ನಂಬಿಕೆಗಳಾಗಲೀ ಇನ್ನೂ ಅಷ್ಟಾಗಿ ಕಲುಷಿತಗೊಂಡಿಲ್ಲ.
ಆದ್ದರಿಂದ ಆಫ್ರಿಕಾದ ಜನಪದವನ್ನು ಕುರಿತು ಬರೆಯುವ ಜೇನ್ ವಾನ್‌ಸೀನ್‌  ಯಾರಾದರೂ ಮೌಖಿಕ ಪರಂಪರೆಯ ಸತ್ಯಾಸತ್ಯೆಯನ್ನು ಅನುಮಾನಿಸಿ­ದರೆ ಖಾರವಾಗಿಯೇ ಉತ್ತರಿಸುತ್ತಾರೆ. ‘ನಂಬಿಕೆ ಬೇಕಾಗಿರುವುದು ವ್ಯಕ್ತಿಯ ಬಗೆಗೆ ಹೊರತು ಆಕರದ ಬಗೆಗಲ್ಲ’. ಜನಪದರು ಕಥೆಯನ್ನೋ ಹಾಡನ್ನೋ ಕಟ್ಟಿ ಹಾಡುವಾಗ ಅವರು ಯಾರನ್ನೂ ನಂಬಿಸಬೇಕಾಗಿರುವುದಿಲ್ಲ. ಅವು ಅವರ ನಂಬಿಕೆಗಳು ಮಾತ್ರವಾಗಿರುತ್ತವೆ. ಯಾರೂ ಮೆಚ್ಚಿ ಅವರಿಗೆ ಪ್ರಶಸ್ತಿಯನ್ನು ಕೊಡ­ಬೇಕಾಗಿರುವುದಿಲ್ಲ.
ಅದಕ್ಕಿಂತ ಹೆಚ್ಚಾಗಿ ತಾವು ರಚಿಸಿದ ಕಾವ್ಯವೆಂದು ಎಲ್ಲೂ ಬೀಗುವುದಿಲ್ಲ. ಅದರ ಹೆಗ್ಗಳಿಕೆಯನ್ನು ಅವರ ಸಮುದಾಯಕ್ಕೆ ನಾವಿಂದು ಸಲ್ಲಿಸಬೇಕಾಗಿದೆ. ಜನಪದ ಸಾಹಿತ್ಯವನ್ನು ಅನುಮಾನಿಸುವುದು ಆ ಸಮುದಾಯದ ಅಸ್ತಿತ್ವವನ್ನೇ ಅನುಮಾನಿಸಿ­ದಂತಾಗುತ್ತದೆ. ಕರ್ನಾಟಕದ ಮಂಟೇಸ್ವಾಮಿ ಪರಂಪರೆ ವಿದ್ವತ್ ವಲಯದ ಗಮನ ಸೆಳೆದು ಸಾಕಷ್ಟು ಚರ್ಚೆಗೆ ಒಳಗಾಗಿದೆ.
ಮಂಟೇದ, ಅಲ್ಲಮ, ಸಿದ್ಧಯ್ಯ, ಖಂಡಾಯದ ಒಡೆಯ, ಪರಂಜ್ಯೋತಿ ಎಂದಿತ್ಯಾದಿಯಾಗಿ ಕರೆಸಿಕೊಳ್ಳುವ ಮಂಟೇಸ್ವಾಮಿ ತಮ್ಮ ಆಧ್ಯಾತ್ಮಿಕ ನಾಯಕನನ್ನು ದೈವೀಕರಿಸಿಕೊಂಡಿದ್ದಾರೆ. ಇಂದು ಅದೊಂದು ಪರಂಪರೆ, ಕಾವ್ಯ ಮಾತ್ರವಲ್ಲ ಆಚರಣೆ. ಈ ಕಾವ್ಯದಲ್ಲಿ ‘ನೀಲಿ’ ಪದವನ್ನು ಅಧ್ಯಾತ್ಮದ ಸೂಚಕವಾಗಿ ಬಳಸಿ ಏನನ್ನು ಹೇಳಲು ಹೊರಟಿ­ದ್ದಾರೆ?
ಎಲ್ಲೂ ಕೇಳರಿಯದ ಕಬ್ಬಿಣದ ಭಿಕ್ಷ, ಮಲೆ ಮಾದೇಶ್ವರನಿಗೆ ನೀಡುವ ಕೋರಣ್ಯ ಭಿಕ್ಷ, ಸೋಲಿಗರ ಹಾಡಿಗೆ ಸೀಗೆಕಾಯಿ ಕೇಳಲು ಹೋಗುವ ರಂಗನಾಥ ಸ್ವಾಮಿ ಇವೆಲ್ಲಾ ಹದಿನೇಳನೇ ಶತಮಾನದ ಆರ್ಥಿಕ ಸಾಮಾಜಿಕ ಚರಿತ್ರೆಯನ್ನು ಹೇಳುತ್ತವೆ. ಎಳ್ಳಿನ ಭಿಕ್ಷ, ಹಾಗೆಂದರೇನೆಂದು ತಿಳಿಯಲು ಮಹದೇಶ್ವರ ಕಾವ್ಯದ ಮೊರೆಹೋಗಬೇಕಾಗುತ್ತದೆ.
ಸಮುದಾಯಗಳು ತಮ್ಮ  ಪ್ರತಿಭಟನೆಯನ್ನು ಹಾಡಿನ ರೂಪದಲ್ಲಿ, ಕಥೆಯ ರೂಪದಲ್ಲಿ  ಹೊರ­ಹಾಕಿರುತ್ತವೆ. ವೀರಶೈವ ಚಳವಳಿಯ ನಂತರ ಲಿಂಗಧಾರಣೆ ಅರ್ಥವನ್ನು ಕಳೆದು­ಕೊಂಡಿತ್ತು ಎನ್ನುವುದನ್ನು ಸಾಹಿತ್ಯಾತ್ಮಕವಾಗಿ ಬಹು ಸೊಗಸಾಗಿ  ಮಂಟೇಸ್ವಾಮಿ ಕಾವ್ಯದಲ್ಲಿ ಕಾಣಬಹುದು.
ಕೊತ್ತಿಗಾದರು ಲಿಂಗವಂತೆ
ಕೋಳಿಗಾದರು ಲಿಂಗವಂತೆ
ಎತ್ತಿಗಾದರೂ ಲಿಂಗವಂತೆ
ಎಮ್ಮೆಗಾದರೂ ಲಿಂಗವಂತೆ
ಜಲಬಾವಿಗೆ ಲಿಂಗವಂತೆ
ಸೇದುವ ಹಗ್ಗಕ್ಕೆ ಲಿಂಗವಂತೆ
ಸೇದುವಾತನಿಗೆ ಲಿಂಗವಂತೆ
ಇಂತಹ ದಿಟ್ಟ ವಿಮರ್ಶೆ ಮಾಡುವಾಗ ಆ ಜನಪದ ಕವಿಗಳ ವೈಚಾರಿಕತೆಯನ್ನು ಗಮನಿ­ಸಲೇ ಬೇಕಾಗುತ್ತದೆ. ಕಳೆದು ಹೋದ ವಚನ­ಕಾರರ ವೈಚಾರಿಕತೆಯನ್ನು ಪ್ರಶ್ನೆ ಮಾಡುವ ಈ ಸಾಲುಗಳು ಮಹತ್ವದ್ದಾಗುತ್ತವೆ. ಹೌದು ನಮಗಿಂದು ಬೇಕಾಗಿರುವುದು ಸಮು­ದಾ­ಯದ ಚರಿತ್ರೆ. ಅದು ಆಯಾ ಸಮುದಾ­ಯದ ನೆನಪಿನಲ್ಲಿ ಉಳಿದಿವೆ.
ಆದ್ದರಿಂದ  ಶಾಸನಗಳ ಸಾಲನ್ನು ಸೇರದ ಸಮುದಾಯಗಳು ತಮ್ಮ ಚರಿತ್ರೆಯನ್ನು ತಮ್ಮ ಬಳಿಯೇ ಉಳಿಸಿ­ಕೊಂಡಿವೆ. ಉದಾಹರಣೆಗೆ ಸೋಲಿಗರ ಬದುಕಿನ ವಿಚಾರಗಳು ಅವರು ಹಾಡುವ ಗೋರುಖಾನ, ಬಿಳಿಗಿರಿ ರಂಗನ ಪದ ಇಲ್ಲವೇ ಮಲೆಮಾದಪ್ಪನ ಸಾಲುಗಳಲ್ಲಿ ಸೇರಿವೆ. ಇದೇ ಪ್ರದೇಶದಲ್ಲಿ ವಾಸಿಸಿದ ಸೋಲಿಗರು, ಇರುಳಿಗರು, ಎರವರು ರಾಜ್ಯಗಳ ಮೇರೆಯನ್ನು ಮೀರಿದವರು. ಇವರೆಲ್ಲ­ರಿಗೂ ಅವರದೇ ಆದ ಚರಿತ್ರೆಗಳಿವೆ ಎಂಬುದನ್ನು ಮರೆತೇ ಬಿಟ್ಟಿದ್ದೇವೆ.
ಒಂದು ಕಡೆ ಜನಪದ ಸಾಹಿತ್ಯವನ್ನು ಆರಾಧಿ­ಸುವ ಜನಪದ ವಿದ್ವಾಂಸರು ಕಾಣಬಂದರೆ, ಅದೊಂದು ಬಡವರ, ಹಳ್ಳಿಗರ ಕ್ಷುಲ್ಲಕ ವಿಚಾರ­ವೆಂಬಂತೆ ಅಸಡ್ಡೆ ಮಾಡುವವರ ಸಂಖ್ಯೆಯೂ ಕಡಿಮೆ ಇಲ್ಲ. ಜನಪದ ಸಾಹಿತ್ಯದಲ್ಲಿ ಮೂಲ­ಭೂತ­ವಾಗಿ ಅರಿಯ ಬೇಕಾಗಿರುವುದು ಅವರ ಆಶಯಗಳನ್ನು. ಅದಲ್ಲದೆ ಪದದ ಅರ್ಥವನ್ನು ಮಾತ್ರ ಬಗೆದು ತಪ್ಪಾಗಿ ಗ್ರಹಿಸುವುದರಿಂದ ಅದು ನೀರಸವಾಗಿ ಕಾಣುತ್ತದೆ.
ಜಗತ್ತಿನಾದ್ಯಂತ ಜನಪದ ಸಾಹಿತ್ಯದಲ್ಲಿ ಹುಟ್ಟಿನ ಸುತ್ತಲ ಕಥೆಗಳು ಕೇಳಿಬರುತ್ತವೆ. ಹಾವು, ಗೂಳಿ, ಆನೆ, ಹೋರಿ, ಕುದುರೆ, ಕೋಣ ಇಂತಹ ಯಾವುದಾದರೊಂದು ಪ್ರಾಣಿಯ ಆಶೀರ್ವಾದದಿಂದ ಮಹಾ ವ್ಯಕ್ತಿಗಳು ಹುಟ್ಟು­ತ್ತಾರೆ. ಇವನ್ನು ಕಥೆಗಳಾಗಿ ಮಾತ್ರ ಕೈ ಬಿಡ­ಲಾಗು­ತ್ತದೆ. ಸಾಮಾನ್ಯವಾಗಿ ಇವೆಲ್ಲಾ ಫಲ­ವತ್ತತೆಯ ಸಂಕೇತಗಳೆಂದು ಸಾರ್ವತ್ರಿಕವಾದ ಅರ್ಥವನ್ನು ಕೊಟ್ಟುಕೊಳ್ಳಲಾಗುತ್ತದೆ.
ಇನ್ನೂ ಒಂದು ಹೆಜ್ಜೆ ಮುಂದುವರೆದು ಜನಪದ ಆಶಯವನ್ನು ಅರಿತುಕೊಳ್ಳಬೇಕಾಗುತ್ತದೆ. ಹುಟ್ಟಿಗೆ ಕಾರಣವಾದ ವ್ಯಕ್ತಿಯ ಹೆಸರನ್ನು ಮುಚ್ಚಿಟ್ಟು ಅದನ್ನು ಸಾಂಕೇತಿಕ ಭಾಷೆಯಲ್ಲಿ ಹೇಳಲು ಕಾರಣವೇನು? ಭಾರತದ ಜಾತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ, ಸಂಬಂಧಗಳ ಸುತ್ತಾ ಹೆಣೆದುಕೊಳ್ಳುವ ಮೌಲ್ಯಗಳ ಪ್ರಶ್ನೆಯಿಂದಾಗಿ  ಹುಟ್ಟನ್ನು ಬಯಲು ಮಾಡಲು ಸಾಧ್ಯವಾಗಿರು­ವು­ದಿಲ್ಲ.
ಹುಟ್ಟಿನ ಕಾರಣ ಅಸಹಜವಾಗಿದ್ದರೆ ಅಲ್ಲಿ ಸಂಕೇತಗಳನ್ನು ಬಳಸಿ ತಮ್ಮ ನೋವು ನಲಿವನ್ನು ಹೇಳಿಕೊಳ್ಳುತ್ತಾರೆ. ಸಾಮಾನ್ಯವಾಗಿ ತಳಸಮುದಾಯದ ಹೆಣ್ಣು ಮಕ್ಕಳು ಭೂ­ಮಾಲೀ­ಕರ ಹೊಲಗಳಲ್ಲಿ ದುಡಿಯುವ ಹೆಣ್ಣು­ಗಳಾಗಿರುತ್ತಾರೆ. ನಿರಂತರ ಶೋಷಣೆಗೆ ತೆರೆದು­ಕೊಂಡ ವರ್ಗವಾಗಿರುತ್ತದೆ. 
ಉಳ್ಳವರು ತಮ್ಮ ಸಾಮಾಜಿಕ ಹಕ್ಕೇನೋ ಎನ್ನುವಂತೆ ನಡೆದು­ಕೊಂಡರೆ ಅದಕ್ಕೆ ಪ್ರತಿರೋಧವನ್ನು ಒಡ್ಡಲೂ ಸಾಧ್ಯವಾಗುವುದಿಲ್ಲ. ಮೇಲ್ವರ್ಗದ ಸಮಾಜದ ಹೆಣ್ಣು ಮಕ್ಕಳು ಹಲವು ಕಾರಣಗಳಿಗೆ ತಳಸಮು­ದಾಯದ ಪುರುಷರಿಗೆ ಆಕರ್ಷಿತರಾಗುತ್ತಾರೆ. ಜಾತಿ ಸಮಾಜದ ನಿರ್ಬಂಧಗಳು ನಿರಂತರವಾಗಿ ಅದನ್ನು ಮೀರುತ್ತಲೂ, ಮುರಿಯುತ್ತಲೂ ಇರು­ತ್ತವೆ.
ಸಮಾಜ ವರ್ಣಸಂಕರವನ್ನು ತಹಬಂದಿ­ಯಲ್ಲಿರಿಸಿಕೊಳ್ಳಲು ಗುರುತರವಾದ ಶಿಕ್ಷೆಗೊಳ­ಪಡಿಸುವ ಯತ್ನಗಳು ಅಲ್ಲಲ್ಲಿ ನಡೆದೇ ಇರುತ್ತವೆ. ಅದೇ ಸಂದರ್ಭದಲ್ಲಿ ಕಟ್ಟುಕಟ್ಟಲೆಗಳನ್ನು ಮೀರಿದ ಹುಟ್ಟಿಗೊಂದು ದೈವಿಕತೆಯನ್ನು ಆರೋಪಿಸಿ ತಮ್ಮ ಹೆಣ್ಣುಮಕ್ಕಳನ್ನು ಕಾಪಾಡಿ­ಕೊಳ್ಳುವ ಪ್ರಯತ್ನವೂ ನಡೆದೇ ಇರುತ್ತದೆ. ಅಂತಹ ಎಡೆಗಳಲ್ಲಿ ಫಲವತ್ತತೆಯ ಸಂಕೇತಗಳ ಪರಿಭಾಷೆ ಅವರ ನೆರವಿಗೆ ಬರುತ್ತದೆ.
ಆ ಸಂಕೇತಗಳಲ್ಲಿ ಪ್ರಾಣಿಯನ್ನು ಸೂಚಿಸುವಾಗ ಅವು ಶಕ್ತಿಯ, ಇಲ್ಲವೆ ಆಳುವ ವರ್ಗದ ಸಂಕೇತಗಳನ್ನು ಸೂಚಿಸುವುದಿದೆ. ಉದಾಹರ­ಣೆಗೆ ಬಿಳಿಯ ಕುದುರೆ, ಆನೆ ಇತ್ಯಾದಿ. ಬಹುಶಃ ಹೇಳಿಕೊಳ್ಳಲಾಗದ, ಹುಟ್ಟಿಗೆ ಕಾರಣವಾದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿಡುತ್ತಲೇ ಸೂಚ್ಯವಾಗಿ ಬಹಿರಂಗಪಡಿಸುವ ಪ್ರಯತ್ನವೂ ನಡೆದಿರುತ್ತದೆ.
ಇಂತಹ ಕಥೆಗಳು ಪ್ರಮುಖ ವ್ಯಕ್ತಿಗಳ ಹುಟ್ಟಿ­ನಲ್ಲೂ ಕಾಣಬರುತ್ತವೆ. ಗೌತಮ ಬುದ್ಧ ತಾಯಿ ಮಾಯಾದೇವಿಯ ಸೊಂಟದಿಂದ ಹುಟ್ಟಿ­ಬಂದರೆ, ಕಾಡುಗೊಲ್ಲರ ಜುಂಜಪ್ಪನ ಕಾವ್ಯದಲ್ಲಿ ಜುಂಜಪ್ಪ ತಾಯಿಯ ಬೆನ್ನನ್ನು ಸೀಳಿಕೊಂಡು ಹುಟ್ಟಿಬರುತ್ತಾನೆ. ತಾವು ಆರಾಧಿಸುವ ನಾಯ­ಕರು ಸಾಮಾನ್ಯರಂತೆ ಹುಟ್ಟಲಿಲ್ಲ ಎಂದು ಹೇಳು­ವುದು ಅವರ ಆಶಯವಾಗಿರುತ್ತದೆ.
ಮಲೆ­ಮಾದ­ಪ್ಪನ ಕಾವ್ಯದಲ್ಲಿ ಸಂಕವ್ವೆ ಮಾದಪ್ಪನ ಆಶೀರ್ವಾದದಿಂದ ಮಕ್ಕಳನ್ನು ಹೆರುತ್ತಾಳೆ. ಆ ಪವಾಡವನ್ನು ಜನ ಬಯಸುತ್ತಾರೆ. ಅಲ್ಲಿ ತಾರ್ಕಿಕವಾದ ಅರ್ಥವನ್ನು ಹುಡುಕಿ ಜನಪದರ ಭಾವನೆಗಳಿಗೆ ಬರೆಹಾಕಲಾಗದು. ಹುಟ್ಟು ಮತ್ತು ವರ್ಣಸಂಕರದ ಸುತ್ತ ಹೆಣೆದು­ಕೊಂಡ ಆಚರಣೆ ಮಾರಿ ಮತ್ತು ಕೋಣನ ಬಲಿದಾನ.
ನಾಡಿನಾದ್ಯಂತ ಆಚರಣೆ­ಯಲ್ಲಿರುವ ಈ ಕಥೆ ವಿಸ್ತಾರವಾದ ಜನಸ್ತೋ­ಮದ ರೂಢಿ ಪರಂಪರೆಯಲ್ಲಿ ಸೇರಿಹೋಗಿದೆ. ಭಾರತದ ಸಾಂಸ್ಕೃತಿಕ ರಾಜಕಾರಣದ ಒಳಹರಿವು ಸುಲಭವಾಗಿ ಅಳಿಸಲಾಗದು ಎನ್ನುವುದಕ್ಕೆ ಇದು ಉತ್ತಮ ನಿದರ್ಶನವಾಗಿದೆ. ಈ ಯಾವುದನ್ನೂ ಗಮನಿಸದ ಭಾರತದ ಸಾಂಸ್ಕೃತಿಕ ಚರಿತ್ರೆ ತಿರುಳನ್ನು ಬಿಟ್ಟು ಸಿಪ್ಪೆಯನ್ನು ಉಣಬಡಿಸಿ­ದಂತಾಗುತ್ತದೆ.