ಬುಧವಾರ, ಮೇ 8, 2013

ಹೊಸ ಸರ್ಕಾರ, ಹೊಸ ಕನಸು


ಕಾಂಗ್ರೆಸ್‌ಗೆ ಮುನ್ನಡೆ ದೊರೆತ ತಕ್ಷಣ ಕೊಟ್ಟ ಸಂದರ್ಶನದಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ಧರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಇಬ್ಬರೂ  `ಸ್ಥಿರ ಸರ್ಕಾರ' ಹಾಗೂ `ಶುದ್ಧ ಸರ್ಕಾರ' ದ ಅಗತ್ಯ ಕುರಿತು ಮಾತಾಡಿದರು. ಇದು ಅವರ ಆ ಕ್ಷಣದ ಪ್ರತಿಕ್ರಿಯೆಯಾಗಿರಬಹುದು. ಆದರೆ ಈ ಸಲದ ಜನಾದೇಶ ಮಾತ್ರ ಇವೆರಡರ ಅಗತ್ಯವನ್ನು ಸ್ಪಷ್ಟವಾಗಿ ಸೂಚಿಸುವಂತಿದೆ.

ನಾಡಿನ ರಾಜಕಾರಣ ಪ್ರತಿ ಸಲ ಕೆಟ್ಟರೂ ಐದು ವರ್ಷಕ್ಕೊಮ್ಮೆ ಅದನ್ನು ಸರಿ ಮಾಡುವ ಬದ್ಧತೆ ಮತ್ತು ಉತ್ಸಾಹ ಜನರಲ್ಲಿ ಉಳಿದೇ ಇರುತ್ತದೆ ಎನ್ನುವುದಕ್ಕೆ ಈ ಚುನಾವಣೆಯ ಫಲಿತಾಂಶವೇ ಸಾಕ್ಷಿ. ಜನರ ಆಳದ ಕನಸುಗಳು ಹಾಗೂ ಹೊಸ ವ್ಯವಸ್ಥೆಯನ್ನು ರೂಪಿಸುವ ಕಾತರ ಯಾವ ಕಾಲದಲ್ಲೂ ಸುಲಭವಾಗಿ ಇಂಗಿ ಹೋಗುವುದಿಲ್ಲ. ಒಂದು ಸರ್ಕಾರದ ವಿರುದ್ಧ ಜನರ ಒಳಗೊಳಗೇ ಗರಿಗೆದರುವ ಸಿಟ್ಟು ಸುಮ್ಮನೆ ಕರಗುವುದಿಲ್ಲ. 

  ಬಿಜೆಪಿ ಸರ್ಕಾರ ಮೊದಲ ವರ್ಷದಲ್ಲಿ ಮಾಡಿಸಿದ ಪಕ್ಷಾಂತರಗಳ ಬಗ್ಗೆ ರಾಜ್ಯದ ಜನರಲ್ಲಿ ನೈತಿಕ ಸಿಟ್ಟಿತ್ತು. ಬಳ್ಳಾರಿ ರೆಡ್ಡಿಗಳ ಲೂಟಿಕೋರ ಸಾಮ್ರೋಜ್ಯದ ಬಗ್ಗೆ ಎಲ್ಲೆಡೆ ಕೋಪವಿತ್ತು. ಅದು ಹಲವು ರೂಪಗಳಲ್ಲಿ ವ್ಯಕ್ತವಾಗಿತ್ತು. ನಿರಂತರ ಭ್ರಷ್ಟಾಚಾರ, ಕೆಲವೇ ಜಾತಿಗಳ ದರ್ಬಾರು, ಕರಾವಳಿ ಜಿಲ್ಲೆಗಳಲ್ಲಿ ಸರ್ಕಾರದ ಮೌನಸಮ್ಮತಿಯಿಂದ ತಮ್ಮದೇ ಗೂಂಡಾ ಕಾನೂನನ್ನು ಚಲಾಯಿಸಹೊರಟವರ ದುಷ್ಟತನ, ಭಯೋತ್ಪಾದನೆಯ ಹೆಸರಿನಲ್ಲಿ ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸುವುದು, ಜಾತಿ, ಧರ್ಮಗಳ ಅಸಹ್ಯಕರ ಪ್ರದರ್ಶನ, ಸಡಿಲ ನಾಲಿಗೆ, ದುರಹಂಕಾರದ ಉತ್ತರ - ಇವೆಲ್ಲವನ್ನೂ ಜನ ದೃಶ್ಯಮಾಧ್ಯಮಗಳಲ್ಲಿ ದಿನನಿತ್ಯ ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದರು.

ದಿನನಿತ್ಯ ತೀರ್ಥ, ಲಾಡು ಹಂಚಿಸಿದ ಮಂತ್ರಿಯೂ ಸೇರಿದಂತೆ ಕಳೆದ ಸರ್ಕಾರದ ಅನೇಕ ಶಾಸಕರು, ಮಂತ್ರಿಗಳನ್ನು ತಿರಸ್ಕರಿಸಿದರು. ಆದ್ದರಿಂದ ಇದು ಆ ಸರ್ಕಾರದ ವಿರುದ್ಧದ ನೈತಿಕ ವೋಟು ಎಂಬುದನ್ನು ಮೊದಲು ಗಮನಿಸಬೇಕು. ಜನತಾದಳದ ವಿರುದ್ಧವೂ ಈ ನೈತಿಕ ವೋಟು ಕೆಲಸ ಮಾಡಿದೆ: ಜನತಾದಳ ತನ್ನ ಹಳೆಯ ನೆಲೆಯನ್ನು ಮತ್ತೆ ಕಂಡುಕೊಂಡರೂ ಬಿಜೆಪಿಯ ಜೊತೆ ಆಡಿದ ಸರಸದ ದೈತ್ಯನೆರಳು ಅದನ್ನು ಇನ್ನೂ ಕಾಡುತ್ತಿರುವುದೇ ಅದು ಇನ್ನಷ್ಟು ಮುಂದೆ ಹೋಗಲು ತಡೆಯಾದಂತಿದೆ.

ಈ ಹಿನ್ನೆಲೆಯಲ್ಲಿ, ಏಳು ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಿಂದ ದೂರವಿದ್ದ ಕಾಂಗ್ರೆಸ್‌ನ ಹಳೆಯ ಆಟಗಳು ಕೊಂಚ ಹಿನ್ನೆಲೆಗೆ ಸರಿದು, ಅದು ಮುಂದೆ ಸರಿಯಾಗಿ ಕೆಲಸ ಮಾಡಬಹುದೆಂಬ ಆಶಾವಾದವೂ ಈ ಆಯ್ಕೆಯ ಹಿಂದಿದೆ. ಆದ್ದರಿಂದಲೇ ಹೊಸ ಸರ್ಕಾರ ಸೈದ್ಧಾಂತಿಕವಾಗಿ ಹಾಗೂ ಕಾರ‌್ಯಕ್ರಮಗಳಲ್ಲಿ ತಾನು ಹಿಂದಿನ ಸರ್ಕಾರಕ್ಕಿಂತ ಭಿನ್ನ ಎಂದು ತೋರಿಸುವ ಸವಾಲನ್ನು ಕೈಗೆತ್ತಿಕೊಳ್ಳಬೇಕಾಗಿದೆ.

ಮುಂದೆ ಬರಲಿರುವ ಲೋಕಸಭಾ ಚುನಾವಣೆಯ ಆತಂಕದಲ್ಲೇ ರಚನೆಯಾಗಲಿರುವ ಈ ಸರ್ಕಾರದಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಮೊದಲು ಎದುರಿಸಬೇಕಾದ ಸಮಸ್ಯೆ - ಭ್ರಷ್ಟತೆಯ ಕಳಂಕ ಹೊತ್ತವರನ್ನು ಮಂತ್ರಿಮಂಡಲದಿಂದ ದೂರವಿಡುವುದು. ಬಿಜೆಪಿ ಸರ್ಕಾರದ ವಕ್ತಾರರು ತಮ್ಮ ಪಕ್ಷದಿಂದ ಭ್ರಷ್ಟರೆಲ್ಲ ಹೊರಹೋಗಿ ತಮ್ಮ ಪಕ್ಷ ಈಗ ಶುದ್ಧವಾಗಿದೆ ಎಂದು ಚುನಾವಣೆಯಲ್ಲಿ ಶಂಖ ಬಾರಿಸಿದರೂ ಜನ ಯಾಕೆ ಒಪ್ಪಲಿಲ್ಲ ಎಂಬುದನ್ನು ಹೊಸ ಸರ್ಕಾರದ ನಾಯಕರು ಸರಿಯಾಗಿ ಗ್ರಹಿಸಬೇಕು. ಜೊತೆಗೆ, ಯುಪಿಎ ಸರ್ಕಾರದ ಭ್ರಷ್ಟ ಮಂತ್ರಿಗಳು ಒಬ್ಬೊಬ್ಬರೇ ಉರುಳುತ್ತಿರುವ ಈ ಗಳಿಗೆಯಲ್ಲಿ ಕಳಂಕಿತರನ್ನು ಮಂತ್ರಿಮಂಡಲದೊಳಕ್ಕೆ ಸೇರಿಸಿಕೊಳ್ಳುವ ದುಸ್ಸಾಹಸವನ್ನು ಯಾವ ಮುಖ್ಯಮಂತ್ರಿಯೂ ಮಾಡಬಾರದು.

  ಈ ಸಲ ಕರಾವಳಿಯ ಹೊಸ ತಲೆಮಾರಿನ ಮತದಾರರೂ ಸೇರಿದಂತೆ ಅಲ್ಲಿನ ಎಲ್ಲ ಜಾತಿ, ಧರ್ಮ, ವರ್ಗಗಳ ಮತದಾರರು ಒಟ್ಟಾಗಿ ಬಿಜೆಪಿ ಬೆಂಬಲಿತ ಮತೀಯ ಗುಂಪುಗಳ ಹಾವಳಿಯ ವಿರುದ್ಧ ನೇರ ತೀರ್ಪು ಕೊಟ್ಟಿದ್ದಾರೆ; ಅಲ್ಲದೆ  ಹೆಚ್ಚಿನ ಸಂಖ್ಯೆಯ ಅಲ್ಪಸಂಖ್ಯಾತ ವರ್ಗಗಳ ಶಾಸಕರನ್ನು ಕೂಡ ಗೆಲ್ಲಿಸಿದ್ದಾರೆ. ಅಂದರೆ ಸಂದೇಶ ಸ್ಪಷ್ಟವಾಗಿದೆ: ಅಲ್ಪಸಂಖ್ಯಾತವಿರೋಧಿ ರಾಜಕಾರಣದ ಮೂಲಕ ಮೂಲಭೂತವಾದಿಗಳು ಆರಂಭಿಸಿದ ಅಪಾಯಕಾರಿ  ಧ್ರುವೀಕರಣವನ್ನು ಕರಾವಳಿಯೂ ಸೇರಿದಂತೆ ಕರ್ನಾಟಕದ ಅನೇಕ ಭಾಗಗಳು ತಿರಸ್ಕರಿಸಿವೆ. ಅಲ್ಪಸಂಖ್ಯಾತರ ಹಿತ ಕಾಯಬಲ್ಲ ಪಕ್ಷವೆಂದರೆ ಕಾಂಗ್ರೆಸ್ ಎಂಬ ಹೊಸ ನಂಬಿಕೆಯೂ ಇದರ ಹಿನ್ನೆಲೆಯಲ್ಲಿದೆ.

ಕಳೆದ ಐದು ವರ್ಷಗಳಲ್ಲಿ ಕೆಲ ವರ್ಷ ನೆಪ ಮಾತ್ರಕ್ಕೆ ಮಾತ್ರ ಒಬ್ಬ ಅಲ್ಪಸಂಖ್ಯಾತ ಮಂತ್ರಿಯಿದ್ದರು. ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಶಾಸಕರನ್ನು ಆರಿಸಿ ಕಳಿಸಿರುವ ರಾಜ್ಯದ ಜನತೆಯ ಸಂದೇಶವನ್ನು ಕಾಂಗ್ರೆಸ್ ಸರ್ಕಾರ ಅರಿತು ಸಾಮಾಜಿಕ ಸಮತೋಲನವುಳ್ಳ ಮಂತ್ರಿಮಂಡಲವನ್ನು ರಚಿಸಬೇಕಾಗುತ್ತದೆ. ತನ್ನ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿರುವಂತೆ ಸಾಚಾರ್ ವರದಿ ಹಾಗೂ ರಂಗನಾಥ್ ಮಿಶ್ರಾ ವರದಿಗಳ ಶಿಫಾರಸುಗಳನ್ನು ಜಾರಿಗೊಳಿಸಿ ಸಾಮಾಜಿಕ ನ್ಯಾಯಕ್ಕೆ ಮೂರ್ತ ರೂಪ ಕೊಡಬೇಕಾಗುತ್ತದೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಒಬ್ಬ ಮಹಿಳೆ ಮಾತ್ರ ಕೆಲವು ವರ್ಷ ಮಂತ್ರಿಮಂಡಲದಲ್ಲಿದ್ದರು ಎಂಬುದು ಕೂಡ ಒಂದು ಪೂರ್ಣಾವಧಿ ಸರ್ಕಾರ ಲಜ್ಜೆಯಿಲ್ಲದೆ ಪುರುಷ ಪ್ರಾಧಾನ್ಯತೆಯನ್ನು ಮೆರೆದದ್ದಕ್ಕೆ ಸಾಕ್ಷಿ. ಈ ತಾರತಮ್ಯವನ್ನು ಸರಿಪಡಿಸಲು ಹೊಸಮಂತ್ರಿಮಂಡಲದಲ್ಲಿ ಹೆಚ್ಚಿನ ಮಹಿಳಾ ಪ್ರಾತಿನಿಧ್ಯ ನೀಡಿ, ಮಹಿಳಾಕೇಂದ್ರಿತ ಕಾರ‌್ಯಕ್ರಮಗಳಿಗೆ ಒತ್ತು ಕೊಡಬೇಕಾಗುತ್ತದೆ. ಜೊತೆಗೆ, ಕಳೆದ ಸರ್ಕಾರದಲ್ಲಿ ಪ್ರಾತಿನಿಧ್ಯವಿರದ ದಲಿತ ಜಾತಿಗಳ ಕೆಲವು ಪಂಗಡಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕಾದುದು ಕೂಡ ಅಷ್ಟೇ ಮುಖ್ಯ. ಹಾಗೆಯೇ ಹೊಸ ಮತದಾರರ ದೃಷ್ಟಿಯಿಂದ, ಹಳೆಯ ಮುಖಗಳಿಗಿಂತ ಹೊಸ ಮುಖಗಳಿಗೆ ಸಂಪುಟದಲ್ಲಿ ಹೆಚ್ಚು ಸ್ಥಾನ ಕೊಟ್ಟರೆ ಕೆಲಕಾಲವಾದರೂ ಆಡಳಿತ ಯಂತ್ರದಲ್ಲಿ ಹೊಸ ಉತ್ಸಾಹ ಹುಟ್ಟಬಹುದು. ಕೇಂದ್ರ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲವೆಂದು ಹಿಂದಿನ ಸರ್ಕಾರವನ್ನು ದೂಷಿಸುತ್ತಿದ್ದ ಕಾಂಗ್ರೆಸ್ ಪಕ್ಷ ಅವನ್ನು ಹೇಗೆ ಬಳಸಿಕೊಳ್ಳಬೇಕೆಂದು ತೋರಿಸಿಕೊಡಲು ಇದು ಸರಿಯಾದ ಕಾಲ.
ಕಳೆದ ಸರ್ಕಾರವನ್ನು ಕಾಡಿದ ಹಾಗೂ ತಾನು ಆ ಸರ್ಕಾರದ  ವಿರುದ್ಧ ಹೋರಾಡಲು ಬಳಸಿದ ಡಿನೋಟಿಫಿಕೇಶನ್ ಮತ್ತು ಗಣಿ ಲೂಟಿ ಎಂಬ ಎರಡು ಭೂತಗಳನ್ನು ಕಾಂಗ್ರೆಸ್ ಸರ್ಕಾರ ದೃಢವಾಗಿ ಎದುರಿಸದಿದ್ದರೆ, ತನ್ನ ಮಾತುಗಳನ್ನು ತಾನೇ ನುಂಗಬೇಕಾದ  ಮುಜುಗರ ಎದುರಾಗಬಹುದು. ಎಂಥ ಒತ್ತಡವಿದ್ದರೂ, ಹೊಸ ಸರ್ಕಾರ ಈ ಎರಡು ಅನಿಷ್ಟಗಳನ್ನು ದೂರವಿಟ್ಟಷ್ಟೂ ಅದರ ಆರೋಗ್ಯಕ್ಕೆ ಒಳ್ಳೆಯದು.

  ಶುರುವಿನಲ್ಲೇ ಸರ್ಕಾರಕ್ಕೆ ಎದುರಾಗಲಿರುವ ಮುಖ್ಯ ಸವಾಲು ಈ ವರ್ಷದ ಬಜೆಟ್: ಕಳೆದ ಎರಡು,ಮೂರು ವರ್ಷ ಭಿನ್ನಮತ, ಕಾಲೆಳೆತ, ಮಂತ್ರಿ, ಮುಖ್ಯಮಂತ್ರಿಗಳ ರಾಜಿನಾಮೆ, ಜೈಲು ಇತ್ಯಾದಿಗಳನ್ನು ದೈನಿಕ ಧಾರಾವಾಹಿಗಳಂತೆ ನೋಡಿ ಮನರಂಜನೆ ಪಡೆದ ನಾಡಿನ ಜನ ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ಗಮನಿಸಿದಂತಿಲ್ಲ. ಆರ್ಥಿಕ ತಜ್ಞ ಡಾ.ಕೇಶವ್ ಗಮನಿಸಿದಂತೆ,  `ಎರಡು ವರ್ಷಗಳ ಕೆಳಗೆ ಅತಿಯಾಗಿ ವೈಭವೀಕರಿಸಿ ಮಂಡಿಸಿದ ಕೃಷಿ ಬಜೆಟ್ ಕೂಡ ಇಲ್ಲಿ ಹೊಸ ಪ್ರಗತಿ ತಂದಿಲ್ಲ; ಕರ್ನಾಟಕದ ಒಟ್ಟು  `ರಾಜ್ಯ ಸ್ಥಳೀಯ ಉತ್ಪನ್ನ'  ರಾಷ್ಟ್ರೀಯ ಉತ್ಪನ್ನಕ್ಕಿಂತ ಕೆಳಗಿದೆ; ಸಾಲ ನಿರ್ವಹಣೆ, ಕೈಗಾರಿಕಾ ನಿರ್ವಹಣೆಗಳು ಕೂಡ ಬಿಕ್ಕಟ್ಟಿನಲ್ಲಿವೆ.' ಕಾಂಟ್ರಾಕ್ಟರುಗಳ ಕಾಮಗಾರಿ ಬಿಲ್ಲುಗಳು ಪಾಸಾಗದೆ ಕೊಳೆಯುತ್ತಿವೆ. ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಹೊಸ ಸರ್ಕಾರ ಶ್ವೇತಪತ್ರ ಹೊರಡಿಸುವುದು ಅನಿವಾರ್ಯ.

  ಜೊತೆಗೆ, ಬಜೆಟ್ಟಿನಲ್ಲಿ ಜಾತಿಮಠಗಳಿಗೆ ಬೇಕಾಬಿಟ್ಟಿ ಅನುದಾನ ಕೊಡುವ ಸಂಪ್ರದಾಯಕ್ಕೆ ಈ ಸರ್ಕಾರ ಕೊನೆ ಹೇಳಬೇಕು. ನಮ್ಮ ಜಾತಿಯ ಮಠಗಳಿಗೆ ಹಣ ಕೊಟ್ಟ ಮಾತ್ರಕ್ಕೆ ನಾವು ರಾಜಕಾರಣಿಗಳ ಕೈ ಹಿಡಿಯುವುದಿಲ್ಲ ಎಂದು ಈ ಸಲ ಸಾಮಾನ್ಯ ಜನ ಸ್ಪಷ್ಟವಾಗಿ ಹೇಳಿದಂತಿದೆ. ಆದ್ದರಿಂದ ಮಠಗಳಿಗೆ ಕೊಡುವ ಹಣವನ್ನು ಆಯಾ ಪ್ರದೇಶಗಳ ಅಭಿವೃದ್ಧಿಯ ಚಟುವಟಿಕೆಗಳಿಗೆ ಮೀಸಲಿಟ್ಟು ನಿರ್ದಿಷ್ಟ ಹಾಗೂ ಕಾಲಬದ್ಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ಒಳಿತು. ಕೊನೆಯ ಪಕ್ಷ ಅಬ್ದುಲ್ ನಜೀರ್‌ಸಾಬರು ಮಾಡಿದಂತೆ ಎಲ್ಲ ಊರುಗಳಿಗೆ ಕುಡಿಯುವ ನೀರು ಒದಗಿಸುವಂಥ ಒಂದೇ ಬೃಹತ್ ಯೋಜನೆಯನ್ನು ದೊಡ್ಡ ಮಟ್ಟದಲ್ಲಿ ಕೈಗೊಂಡರೂ ಸಾಕು, ಜನ ಈ ಸರ್ಕಾರಕ್ಕೆ ಕೃತಜ್ಞರಾಗಿರಬಲ್ಲರು. ಕಾವೇರಿ ಬತ್ತುತ್ತಿರುವ ಘಟ್ಟದಲ್ಲಿ ಬೆಂಗಳೂರು ನಗರದಲ್ಲಿ ಹಾಗೂ ಇಡೀ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಜೊತೆಗೇ ಕಾವೇರಿ ಕಣಿವೆಯ ರೈತರ ಸಮಸ್ಯೆಯೂ ಸೇರಲಿದೆ. ಪ್ರಕೃತಿಯ ಕರುಣೆಯಿಲ್ಲದೆ ನೀರಿನ ಸಮಸ್ಯೆಯನ್ನು ಬಗೆಹರಿಸಬಲ್ಲ ಯೋಜನೆಗಳು ಈ ಸರ್ಕಾರದ ಬಳಿ ಇವೆಯೇ?
  ಕರ್ನಾಟಕದ ಅನೇಕ ಚಿಂತಕ, ಚಿಂತಕಿಯರು ಬಿಜೆಪಿಯ ಸಿದ್ಧಾಂತಗಳನ್ನು ವಿರೋಧಿಸಿ, ಈ ಚುನಾವಣೆಯಲ್ಲಿ ನೇರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಕ್ಕೆ ಕರ್ನಾಟಕದ ಸಾಂಸ್ಕೃತಿಕ ಬದುಕಿನಲ್ಲಿ ಮತೀಯ ಶಕ್ತಿಗಳು ಮಾಡತೊಡಗಿದ ಹಾವಳಿ ಕೂಡ ಒಂದು ಕಾರಣ. ರಂಗಾಯಣದಂಥ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಅನಗತ್ಯ ಹಸ್ತಕ್ಷೇಪ, ಶೈಕ್ಷಣಿಕ ಸಂಸ್ಥೆಗಳಲ್ಲಿ ಭ್ರಷ್ಟಾಚಾರ, ಉದ್ಯೋಗ ನೀಡಿಕೆಯಲ್ಲಿ ಭ್ರಷ್ಟಾಚಾರ, ಕೇಸರೀಕರಣ ಇವೆಲ್ಲವೂ ಹೊಸ ತಲೆಮಾರನ್ನು ಕಾಡುತ್ತಿವೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಆಜ್ಞೆಯಿಂದ, ಗ್ರಾಮೀಣ ಮಕ್ಕಳ ಭವಿಷ್ಯದ ಜೊತೆಗೇ ಗ್ರಾಮೀಣ ತರುಣ ತರುಣಿಯರ ಉದ್ಯೋಗಾವಕಾಶಗಳಿಗೆ ಕೂಡ ಕಲ್ಲು ಬಿದ್ದಿದೆ. ತನ್ನ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಹೊಸ ಸರ್ಕಾರ ತಕ್ಷಣ ಹೊಸ ಶಾಲೆಗಳನ್ನು ತೆರೆದು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು; ದಲಿತ ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬುವ ಪ್ರಯತ್ನ ಮಾಡಬೇಕು. ಪಿಯುಸಿ ಉಪನ್ಯಾಸಕರ ಹುದ್ದೆಗಳನ್ನು ಸಿ.ಇ.ಟಿ. ಪರೀಕ್ಷೆಯ ಮೂಲಕ ತುಂಬುವ ಹಾಗೆ ಪದವಿ ಉಪನ್ಯಾಸಕರ ಹುದ್ದೆಗಳನ್ನೂ ಕೆ.ಪಿ.ಎಸ್.ಸಿ.ಯ ಇನ್ನಿತರ ಹುದ್ದೆಗಳನ್ನೂ ಸಿ.ಇ.ಟಿ ನೇರ ಪರೀಕ್ಷೆಯ ಮೂಲಕ ತುಂಬಬೇಕು.

ಕಳೆದ ಸರ್ಕಾರ ಜವಾವ್ದಾರಿಯುತ ಆಡಳಿತಕ್ಕಾಗಿ ರೂಪಿಸಿದ `ಸಕಾಲ'ದಂಥ ಉತ್ತಮ ಯೋಜನೆಗಳನ್ನು ರಾಜ್ಯದಾದ್ಯಂತ ಎಲ್ಲ ಇಲಾಖೆಗಳಿಗೂ ವಿಸ್ತರಿಸಿ ಆಡಳಿತ ಯಂತ್ರವನ್ನು ಚುರುಕಾಗಿಸಬೇಕು. ಅದರ ಜೊತೆಗೇ ತಂತಮ್ಮ ಜಾತಿಗಳ ಅಧಿಕಾರಶಾಹಿಯನ್ನು ಪ್ರಬಲವಾಗಿಸಿ ಉಳಿದ ಜಾತಿಗಳ ಅಧಿಕಾರಿಗಳಲ್ಲಿ ಅಭದ್ರತೆಯುಂಟು ಮಾಡುವ ಅನಿಷ್ಟ ಸಂಪ್ರದಾಯಕ್ಕೆ  ಕೊನೆ ಹಾಡಬೇಕು; ಎಲ್ಲ ಜಾತಿ, ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಆಡಳಿತದಲ್ಲಿ ಹೊಸ ಸ್ಫೂರ್ತಿ ತುಂಬಬೇಕು. ತಮ್ಮ ಪಕ್ಷ ಗೆದ್ದ ಕ್ಷೇತ್ರಗಳು ಹಾಗೂ ಸೋತ ಕ್ಷೇತ್ರಗಳು ಎಂದು ಭೇದಭಾವ ಮಾಡದೆ ಎಲ್ಲ ಕ್ಷೇತ್ರಗಳಿಗೂ ಸಮಾನ ಬಜೆಟ್ ನಿಗದಿ ಮಾಡಬೇಕು.

ಒಬ್ಬ ಸಾಮಾನ್ಯ ಪ್ರಜೆಯಾಗಿ, ಕೆಲವು ನಿರೀಕ್ಷೆಗಳನ್ನು ಮಂಡಿಸುತ್ತಾ, ಮುಗಿಲಿನಿಂದ ಚಂದ್ರನನ್ನೇ ತಂದುಕೊಡಿ ಎಂದೇನೂ ನಾನು ಹೊಸ ಸರ್ಕಾರವನ್ನು ಕೇಳುತ್ತಿಲ್ಲ. ಯಾವುದೇ ಕನಿಷ್ಠ ದಕ್ಷತೆಯುಳ್ಳ ಆರೋಗ್ಯವಂತ ಸರ್ಕಾರ ಮಾಡಬಹುದಾದ ಕೆಲವು ಪ್ರಾತಿನಿಧಿಕ ಕೆಲಸಗಳನ್ನು ಮಾತ್ರ ಇಲ್ಲಿ ಚರ್ಚಿಸಿರುವೆ. ಇನ್ನೂ ಭ್ರಷ್ಟಗೊಳ್ಳದ ಪ್ರತಿ ತಲೆಮಾರು ಹಾಗೂ ಭ್ರಷ್ಟತೆಯ ಲಾಭ ಪಡೆಯದ ಸಾಮಾನ್ಯ ವರ್ಗಗಳು ಪ್ರತಿ ಚುನಾವಣೆಯ ಸಂದರ್ಭದಲ್ಲೂ ಒಂದು ಮಟ್ಟದ ಶುದ್ಧ ಹಾಗೂ ಸಭ್ಯ ಸರ್ಕಾರವನ್ನು ಎದುರು ನೋಡುತ್ತಿರುತ್ತವೆ ಎಂಬುದನ್ನು ನಮ್ಮ ನಾಯಕರು ಮರೆಯಬಾರದು.

ಇದೆಲ್ಲದರ ಜೊತೆಗೆ, ಈ ಸರ್ಕಾರದ ಎದುರಿಗೆ ನುರಿತ ಹಾಗೂ ಪ್ರಬಲವಾದ ವಿರೋಧ ಪಕ್ಷಗಳು ಹಾಗೂ ನಿರಂತರ ಎಚ್ಚರದ ಮಾಧ್ಯಮಗಳಿವೆ ಎಂಬುದನ್ನು ಮರೆಯಬಾರದು. ಬಿಜೆಪಿ ಸರ್ಕಾರದ ಪತನಕ್ಕೆ ಮತದಾರರ ಸಿಟ್ಟಿನ ಜೊತೆಗೆ, ಸ್ವತಃ ಬಿಜೆಪಿ, ವಿರೋಧ ಪಕ್ಷಗಳು, ಯಡಿಯೂರಪ್ಪ ಹಾಗೂ ಮಾಧ್ಯಮಗಳು ಎಡೆಬಿಡದೆ ಮಾಡಿದ ವಿಮರ್ಶೆ ಕೂಡ ಕಾರಣ ಎಂಬುದನ್ನು ಅರಿತು ಹೊಸ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತದೆಂದು  ಜನತೆಯ ಪರವಾಗಿ ಆಶಿಸೋಣ.

ಕಾಮೆಂಟ್‌ಗಳಿಲ್ಲ: