- ಕೇಶವ ಕುಡ್ಲ
ಸೌಜನ್ಯ: ಕಣಜ
ಮಾನವನ ‘ಪ್ರಾಣಿ ಪ್ರೀತಿ’ ಲಾಗಾಯ್ತಿನಿಂದಲೂ ಬೆಳೆದು ಬಂದಿರುವಂತಹುದೆ.
ಪ್ರೀತಿಗಾಗಿ ಸಾಕುವ ಬೆಕ್ಕು ನಾಯಿ ಮೊಲ ಇಲಿಗಳ ವಿಷಯ ಬಿಡಿ ತಮ್ಮ ವ್ಯಾವಹಾರಿಕ
ಬದುಕಿಗೆ ಆಧಾರವಾದ ಅದರಲ್ಲೂ ಆಹಾರ ಬೆಳೆಯಲು ಕೃಷಿಯಲ್ಲಿನೆರವಾಗುವ ದನ ಮತ್ತು ಕೋಣ,
ಹಾಲು ನೀಡುವ ಹಸು ಮತ್ತು ಎಮ್ಮೆ ಮೊದಲಾದ ಪ್ರಾಣಿಗಳನ್ನು ಕಂಡರೆ ಜನರಿಗೆ
ಪ್ರೀತಿಯೊಟ್ಟಿಗೆ ಗೌರವ ಸಹಾ. ಅವರಿಗೆ ಅವೆಲ್ಲ ದೈವಿಕವೂ ಹೌದು. ಪ್ರಾಣಿಗಳನ್ನು ಕೃಷಿ
ಸಂಬಂಧೀ ಚಟುವಟಿಕೆಗಳಿಗೆ ಉಪಯೋಗಿಸುವುದಲ್ಲದೆ ಕೆಲವು ಜಾನಪದ ಆಚರಣೆಗಳಲ್ಲೂ
ಉಪಯೋಗಿಸುತ್ತಾರೆ. ಕೃಷಿಯ ಕಾಲ ಮುಗಿದ ಮೇಲೆ ಅವುಗಳನ್ನು ಕ್ರೀಡೆಗಾಗಿಯೂ
ಉಪಯೋಗಿಸುತ್ತಾರೆ. ಈ ರೀತಿ ಪ್ರಾಣಿಗಳ ಕ್ರೀಡೆಯ ಬಗ್ಗೆ ಮಾತನಾಡುವಾಗ ಮೊದಲಿಗೆ
ನೆನಪಾಗುವುದು ಕೋಣಗಳ ಓಟದ ಸ್ಪರ್ಧೆಯಾದ “ಕಂಬಳ”. ಅದು ಪ್ರಸಿದ್ಧವಾಗಿರುವುದು ಕರ್ನಾಟಕದ
ಬಾರ್ಕೂರಿನಿಂದ ಕೇರಳದ ಕಾಸರಗೋಡುವರೆಗೆ ಹರಡಿರುವ ತುಳುನಾಡೆಂಬ ಸಿರಿನಾಡಿನಲ್ಲಿ.
ಕರಾವಳಿ ತಡಿಯ ತುಳುನಾಡಿನಲ್ಲಿ ಕೋಣಗಳ ಓಟದ ಜಾನಪದ ಕ್ರೀಡೆಯಾದ ಕಂಬಳದ ಸಂಭ್ರಮದ
ಬಗ್ಗೆ ಹೇಳಿ ಮುಗಿಸುವುದಂತೂ ಸಾಧ್ಯವಿಲ್ಲ. ಭಾರತವೂ ಸೇರಿ ವಿಶ್ವಾದ್ಯಂತ ಹಲವಾರು
ದೇಶಗಳಲ್ಲಿ ಹಲವಾರು ರೀತಿಯ ಪ್ರಾಣಿಗಳ ಓಟ ನಡೆಯುತ್ತದಾದರೂ ಕಂಬಳದಷ್ಟು ವ್ಯವಸ್ಥಿತವಾದ
ಮತ್ತು ಮಹೋನ್ನತವಾದ ಪ್ರಾಣಿಗಳ ಓಟದ ಸ್ಪರ್ಧೆ ಮತ್ತೊಂದಿಲ್ಲವೆನ್ನಿಸುತ್ತದೆ. ಕಂಬಳದ
ಕಾಲದಲ್ಲಿ ತುಳುವರಿಗೆ ಕೋಣಗಳನ್ನು ಬಿಟ್ಟು ಬೇರೇನೂ ಕಾಣಿಸದು. ಇದಕ್ಕೆ ಕಾರಣ ಅವರಲ್ಲಿ
ಕೋಣಗಳ ಬಗೆಗಿರುವ ಪ್ರೀತಿ, ಆಸಕ್ತಿ, ಶ್ರದ್ಧೆಗಳನ್ನೊಳಗೊಂಡ ಅವಿನಾಭಾವ ಸಂಬಂಧ. ತಮ್ಮ
ಮೂಲವೃತ್ತಿಯಾದ ಕೃಷಿಗೆ ಆಧಾರವಾಗಿರುವ ಕೋಣಗಳ ಬಗೆಗಿರುವ ಗೌರವ.
ನವೆಂಬರ್‌ನಿಂದ ಮಾರ್ಚ್‌ವರೆಗಿನ ಕಾಲವೆಂದರೆ ಅದು ಕಂಬಳಗಳ ಕಾಲ.
ಈ ಕಾಲದಲ್ಲಿ ತುಳುನಾಡಿನ ತುಂಬಾ ಕಂಬಳಗಳದ್ದೇ ಸಂಭ್ರಮ-ಸಡಗರ. ಸೂರ್ಯಚಂದ್ರ ಕಂಬಳ,
ಲವಕುಶ ಕಂಬಳ, ಕೋಟಿ ಚೆನ್ನಯ ಕಂಬಳ, ಜಯವಿಜಯ ಕಂಬಳ, ಕಾಂತಾಬಾರೆ ಬೂದಾಬಾರೆ ಕಂಬಳ,
ಮೂಲ್ಕಿ ಅರಸು ಕಂಬಳ, ಕದ್ರಿ ದೇವರ ಕಂಬಳ, ಪಿಲಿಕುಳ ಕಂಬಳ ಇತ್ಯಾದಿ ಮೊದಲ್ಗೊಂಡು
ಸುಮಾರು ೮೫ಕ್ಕೂ ಹೆಚ್ಚು ಕಂಬಳಗಳು ಇಲ್ಲಿ ಜರುಗುತ್ತವೆ. ಜನಪ್ರಿಯ ಮತ್ತು
ಸ್ಪರ್ಧಾತ್ಮಕವಾದ ಈ ಕಂಬಳಗಳಲ್ಲದೆ ಊರ ದೇವರ ಹೆಸರಲ್ಲಿ ಅಲ್ಲಲ್ಲಿ ನಡೆಯುವ ಕಂಬಳಗಳು,
ಮನೆಯಷ್ಟಕ್ಕೆ ನಡೆಯುವ ಕಂಬಳಗಳು ಮತ್ತೂ ಕೆಲವಿವೆ. ನವೆಂಬರ್-ಮಾರ್ಚ್‌ನಲ್ಲಿ ಕಂಬಳಗಳು
ನಡೆಯುತ್ತವಾದರೂ ಕಂಬಳದಲ್ಲಿ ಓಡುವ ಕೋಣಗಳ ತಯಾರಿ ಮಾತ್ರಾ ವರ್ಷದುದ್ದಕ್ಕೂ
ನಡೆಯುತ್ತಲೇ ಇರುತ್ತದೆ.
ಸುಮಾರು ೮೦೦ ವರ್ಷಗಳ ಇತಿಹಾಸವಿರುವ ಕಂಬಳ ಆರಂಭದ ಕಾಲದಲ್ಲಿ ಕೃಷಿ ಸಂಬಂಧೀ
ಧಾರ್ಮಿಕ ಆಚರಣೆಯಾಗಿ ನಡೆಯುತ್ತಿತ್ತಾದರೂ ಇತ್ತೀಚೆಗೆ ಧಾರ್ಮಿಕ ಆಚರಣೆ ಪಕ್ಕಕ್ಕೆ
ಸರಿದು ಅದೊಂದು ಸ್ಪರ್ಧಾತ್ಮಕ ಆಟವಾಗಿದೆ. ಹಿಂದೆಲ್ಲಾ ಕೃಷಿಗೆ ಉಪಯೋಗವಾಗುತ್ತಿದ್ದ
ಕೋಣಗಳೇ ಕಂಬಳದಲ್ಲಿ ಓಡಿ ಶಾಸ್ತ್ರ ಪೂರೈಸುತ್ತಿದ್ದವಾದರೂ ಕಂಬಳವು ಆಟದ ಹದಕ್ಕೆ
ಹೊಂದಿಕೊಂಡ ನಂತರ ವಿಶೇಷ ಅಕ್ಕರೆಯಿಂದ ಕಂಬಳಕ್ಕೆಂದೇ ಕೋಣಗಳನ್ನು ಸಾಕುವ ಹವ್ಯಾಸವು –
ರೇಸ್ ಕುದುರೆ ಸಾಕುವಂತೆ – ಬೆಳೆದು ಬಿಟ್ಟಿದೆ.
ಅದಿರಲಿ, ತುಳುನಾಡಿನಲ್ಲಿ ಕೋಣಗಳಿಗಳಿಗೇಕೆ ಇಷ್ಟು ಪ್ರಾಶಸ್ತ್ಯ? ಇಲ್ಲಿನ ಜನರ ಮೂಲ ವೃತ್ತಿ ಕೃಷಿ. ಈಗೇನೋ ಬದಲಾದ ಕಾಲಮಾನದಲ್ಲಿ ದುಡಿಮೆಗೆ ನೂರಾರು
ಮಾರ್ಗಗಳು ಗೋಚರಿಸುತ್ತಾ ಕೃಷಿಯ ಪ್ರಾಮುಖ್ಯ ಕಡಿಮೆಯಾಗಿದ್ದರೂ ಈ ಜನ ಅನಾದಿ ಕಾಲದಿಂದಲೂ
ಕೃಷಿಯನ್ನೇ ನಂಬಿ ಬದುಕಿದವರು. ಕೃಷಿಗೆ ಶಕ್ತಿ ಮೂಲವಾಗಿ ಉಪಯೋಗಿಸುವ ಪ್ರಾಣಿ ಕೋಣ!
ಅಂದರೆ ಕೋಣಗಳು ಕೃಷಿಕರ ಜೀವನಾಧಾರ. ಹಾಗಾಗಿ ಇಲ್ಲಿನ ಜನರು ಕೋಣಗಳನ್ನು ಅಪಾರವಾಗಿ
ಪ್ರೀತಿಸುತ್ತಾರೆ, ಪೂಜಿಸುತ್ತಾರೆ. ಇವರ ಕೋಣಗಳ ಮಲಿನ ಪ್ರೀತಿಯನ್ನು ನೋಡಿದರೆ
ಕೋಣವನ್ನೇ ಪ್ರಧಾನ ದೇವರಾಗಿ (ಬಫ಼ೆಲೋ ಗಾಡ್) ಪೂಜಿಸುವ ನೀಲಗಿರಿಯ ತೋಡರು ನೆನಪಿಗೆ
ಬರುತ್ತಾರೆ.
ಕಂಬಳ ಒಂದು ಸ್ಪರ್ಧೆಯಾಗಿ ಮಹತ್ವ ಪಡೆದಿರುವ ಈ ಕಾಲಘಟ್ಟದಲ್ಲಿ ‘ಕಂಬಳದ ಕೋಣಗಳ
ಮಾಲಕತ್ವ’ ಎಂಬುದೇ ಒಂದು ಪ್ರತಿಷ್ಠೆಯ ವಿಷಯವಾಗಿದೆ. ಸ್ಪರ್ಧೆ ಗೆಲ್ಲಬಲ್ಲಂತಹ
ಶಕ್ತಿಶಾಲೀ ಕೋಣಗಳು ಕೆಲ ಮನೆತನಗಳ ಪ್ರತಿಷ್ಠೆಯನ್ನೇ ಹೆಚ್ಚಿಸುವುದರಿಂದಇಲ್ಲಿನ
ಹಣವಂತರು ಕೋಣಗಳ ಮೇಲೆ ಲಕ್ಷಾಂತರ ರೂಪಾಯಿಗಳನ್ನು ಹೂಡುತ್ತಾರೆ. ಅದು ಸರಿ, ಆದರೆ
ಕೋಣದಂತಹ ಜೀವಿಯನ್ನು ಸಾಕಲು ಲಕ್ಷಾಂತರ ರೂಪಾಯಿ ಏಕೆ ಖರ್ಚಾಗುತ್ತದೆ?
ಏಕೆ ಖರ್ಚಾಗುತ್ತದೆಂದು ತಿಳಿಯಬೇಕಾದರೆ ಕೋಣ ಸಾಕಣೆಯ ಕ್ರಮವನ್ನು ನೋಡಬೇಕು.
ಮೊದಲೆಲ್ಲಾ ಕೃಷಿಕಾರ್ಯದಲ್ಲಿ ಉಪಯೋಗವಾಗುತ್ತಿದ್ದ ಮಾಮೂಲಿ ಕೋಣಗಳೇ ಕಂಬಳದಲ್ಲಿ
ಓಡುತ್ತಿದ್ದವು. ಆದರೆ ಈಗ ಕಂಬಳಕ್ಕೆಂದೇ ಬೇರೆ ಕೋಣಗಳನ್ನು ಜತನದಿಂದ, ಶ್ರದ್ಧೆಯಿಂದ
ಸಾಕುತ್ತಾರೆ ಅವುಗಳಿಗೆ ಓಡುವುದನ್ನು ಬಿಟ್ಟು ಬೇರೇನೂ ಕೆಲಸವಿಲ್ಲ.
ಕಂಬಳಕ್ಕೆಂದು ಒಳ್ಳೆಯ ಗುಣಲಕ್ಷಣಗಳಿರುವ ಕೋಣದ ಮರಿಯನ್ನು ಶಾಸ್ತ್ರ ರೀತ್ಯಾ
ಆರಿಸಿಕೊಳ್ಳುತ್ತಾರೆ. ಹಾಗೆ ಆರಿಸಿಕೊಳ್ಳುವಾಗಲೂ ಅನುಸರಿಸಬೇಕಾದ ನಿರ್ದಿಷ್ಟ
ನಿಯಮಗಳಿವೆ. ಕಂಬಳದ ದೃಷ್ಟಿಯಿಂದ ಮರಿಗಳನ್ನು ಆರಿಸುವಾಗ ಅವುಗಳ ಕಾಲಿನ ದಪ್ಪ, ತಲೆಯ
ದಪ್ಪ, ಬಾಲದ ಕೂದಲಿನ ಉದ್ದ ಇವೆಲ್ಲವನ್ನೂ ಗಮನಿಸಲಾಗುತ್ತದೆ. ಓಡುವಾಗ ಎಡಭಾಗಕ್ಕೆ
ಯಾವುದು ಬರಬೇಕು, ಬಲಭಾಗಕ್ಕೆ ಯಾವುದು ಬರಬೇಕು ಎಂಬುದನ್ನೂ ಗಮನಿಸಿಯೇ ಜೋಡಿಯನ್ನು
ನಿರ್ಧರಿಸಲಾಗುತ್ತದೆ.
ಅವು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಓಟಕ್ಕೆ ತಯಾರಿ ಆರಂಭವಾಗುತ್ತದೆ. ಅವು
ದಷ್ಟಪುಷ್ಟವಾಗಿ ಬೆಳೆದು ಅವುಗಳ ದೇಹದಲ್ಲಿ ಹೆಚ್ಚಿನ ಶಕ್ತಿ ಸಂಚಯವಾಗಬೇಕಾಗಿರುವುದರಿಂದ
ಅವುಗಳ ಆಹಾರದ ವ್ಯವಸ್ಥೆಯೂ ಬೇರೆಯೇ ಆಗಿರುತ್ತದೆ. ಕೋಣಗಳ ಊಟದ ‘ಮೆನು’ ನೋಡಿದರೆ
ನಾವೆಲ್ಲಾ ಬೆರಗಾಗಬೇಕಾಗುತ್ತದೆ. ಮಾಮೂಲಿನಂತೆ ಒಣ ಹುಲ್ಲು ಹೇಗೂ ಇರುತ್ತದೆ. (ಹಸಿರು
ಹುಲ್ಲನ್ನು ಹೆಚ್ಚಾಗಿ ಹಾಕುವುದಿಲ್ಲ) ಅದರ ಜೊತೆಗೆ ಬೆಳೆದ ಕೋಣಗಳಿಗೆ ಪ್ರತಿದಿನ
ನಾಲ್ಕು ಅಥವಾ ಐದು ಕೆ.ಜಿ. ಹುರುಳಿಕಾಳನ್ನು ನೆನೆಸಿ ತಿನ್ನಿಸುತ್ತಾರೆ. ಹಸೀ ಹುಲ್ಲಿನ
ಬದಲಾಗಿ ತೆಂಗಿನ ಕಾಯಿ, ತೆಂಗಿನ ಹಿಂಡಿ, ಹಸೀ ತರಕಾರಿಗಳು ಮತ್ತು ಹಣ್ಣುಗಳನ್ನು
ತಿನ್ನಿಸಲಾಗುತ್ತದೆ. ಅದರ ಜೊತೆಗೆ ಎರಡು ಕುಡ್ತೆ ತೆಂಗಿನ ಎಣ್ಣೆಯನ್ನೂ
ಕುಡಿಸಲಾಗುತ್ತದೆ. ದೇಹದ ಉಷ್ಣತೆ ಏರಿದರೆ ಅದನ್ನು ಶಮನಗೊಳಿಸಲು ಉದ್ದನ್ನು ನೆನೆಸಿ
ರುಬ್ಬಿ ರಸ ತೆಗೆದು ಕುಡಿಸಲಾಗುತ್ತದೆ. ಕೆಲವರಂತೂ ಕೋಣಗಳ ದೇಹದ ಉಷ್ಣತೆ ನಿವಾರಿಸಲು
ಎಳನೀರು ಕುಡಿಸುತ್ತಾರೆ. ಅದರ ಜೊತೆಗೆ ಬಕೆಟ್‌ಗಟ್ಟಲೆ ಹಣ್ಣಿನ ರಸವೂ ಇರುತ್ತದೆ!.
ಬೇಸಿಗೆ ಬಿಸಿಯಿಂದ ರಕ್ಷಣೆ ನೀಡಲು ಕೊಟ್ಟಿಗೆಯಲ್ಲಿ ಫ಼್ಯಾನ್ ಇರುವುದೂ ಉಂಟು!. ಹಾಗೇ
ಛಳಿಗಾಲದಲ್ಲಿ ಶೀತಗಾಳಿಯಿಂದ ಕೋಣಗಳನ್ನು ರಕ್ಷಿಸಲು ಕೊಟ್ಟಿಗೆಯ ಒಳಾವರಣವನ್ನು
ಕೃತಕವಾಗಿ ಬಿಸಿಮಾಡಿಡುವುದೂ ಉಂಟು!! ಪ್ರತಿ ದಿನ ಅವುಗಳ ಮೈಗೆ ಎಣ್ಣೆ ಹಚ್ಚಿ ಮಾಲೀಶ್
ಮಾಡಲಾಗುತ್ತದೆ. ನಂತರ ಬಿಸಿನೀರಿನಲ್ಲಿ ಸ್ನಾನ. ದೇಹದ ಮಾಂಸಖಂಡಗಳು ದೃಢವಾಗಿರಲು ಆಗಾಗ
ಕೆರೆಗಳಲ್ಲಿ ಈಜಾಟದ ಮೋಜೂ ಇರುತ್ತದೆ. ಇದನ್ನೆಲ್ಲಾ ನೋಡಿಕೊಳ್ಳಲು ನಾಲ್ಕಾರು ಜನರಾದರೂ
ಬೇಕು!
ಅಬ್ಬಬ್ಬಬ್ಬಾ. . . . ಇಷ್ಟೆಲ್ಲಾ ಮಾಡಿ ಕೋಣವನ್ನು ಕಂಬಳಕ್ಕೆ ತಯಾರು ಮಾಡುವಾಗ ಹಣ
ಲಕ್ಷಗಳಲ್ಲಿ ಖರ್ಚಾಗುವುದೇನೂ ವಿಶೇಷವಲ್ಲ. ಇಷ್ಟೆಲ್ಲಾ ಹಣ ಖರ್ಚುಮಾಡಲು ಕೋಣಗಳ
ಮಾಲೀಕರೇನೂ ಬೇಸರಿಸುವುದಿಲ್ಲ. ಯಾಕೆಂದರೆ ತುಳುನಾಡಿನಲ್ಲಿ ಗೆಲ್ಲುವ ಕೋಣಗಳೆಂದರೆ
ಕುಟುಂಬದ ಪ್ರತಿಷ್ಠೆ ಮತ್ತು ಘನತೆಯ ದ್ಯೋತಕವೆಂದೇ ಪರಿಗಣಿಸಲಾಗುತ್ತದೆ.
ಇಷ್ಟೆಲ್ಲಾ ಖರ್ಚುಮಾಡಿ, ಶ್ರಮವಹಿಸಿ ಸಾಕಿ ಬೆಳೆಸಿಬಿಟ್ಟರೆ ಮುಗಿಯಲಿಲ್ಲ.
ಅವುಗಳಿಗೆ ಓಡುವ ಅಭ್ಯಾಸ ಸಹಾ ಆಗಬೇಕು. ರೇಸ್ ಕುದುರೆಗೆ ಟ್ರೈನರ್‌ಗಳಿರುವಂತೆ ಕಂಬಳದ
ಕೋಣಗಳಿಗೂ ತರಬೇತುದಾರರಿರುತ್ತಾರೆ. ಓಟದ ಸ್ಪರ್ಧೆಯಲ್ಲಿ ಕೋಣಗಳ ಸಾಧನೆ ತರಬೇತುದಾರನ
ಮೇಲೆ ಮತ್ತು ಓಡಿಸುವವನ ಮೇಲೆ ನಿರ್ಧಾರವಾಗುತ್ತದೆ. ಕಂಬಳದಲ್ಲಿ ಕೋಣಗಳನ್ನು ಓಡಿಸುವ
ಜಾಕಿಗೆ “ಗಿಡುಪುನಾಯೆ” ಎಂದು ಹೆಸರು. (ಗಿಡುಪುನಾಯೆ ಎಂದರೆ ‘ಓಡಿಸುವವನು’ ಎಂದರ್ಥ.)
ಕಂಬಳದ ಕೋಣದಂತಹ ಬಲಿಷ್ಠ ಮೃಗವನ್ನು ಸಂಭಾಳಿಸುವುದು ಮತ್ತು ಪಳಗಿಸಿ ಶಿಕ್ಷಣ
ನೀಡುವುದು ಎರಡೂ ಅಪಾಯದ ಕೆಲಸ. ಆದ್ದರಿಂದ ಗಿಡುಪುನಾಯೆಗೆ ಹೆಚ್ಚಿನ ಶಕ್ತಿ, ಅನುಭವ
ಮತ್ತು ಪರಿಣತಿ ಮುಖ್ಯ. ಕೋಣಗಳ ಓಟದ ಫಲಿತಾಂಶ ಗಿಡುಪುನಾಯೆಯ ಪರಿಶ್ರಮದ ಮೇಲೆ ಹೆಚ್ಚಾಗಿ
ಅವಲಂಬಿತವಾಗಿರುವುದರಿಂದ ಅವರಿಗೆ ಸದಾ ಎಲ್ಲಿಲ್ಲದ ಬೇಡಿಕೆ. ಈ ರೀತಿ ಹೆಚ್ಚುವ
ಬೇಡಿಕೆಯಿಂದಾಗಿ ಒಬ್ಬ ಜನಪ್ರಿಯ ಗಿಡುಪುನಾಯೆ ಕಂಬಳದ ಒಂದು ಸೀಸನ್‌ನಲ್ಲಿ ಲಕ್ಷದವರೆಗೂ
ದುಡಿಯಬಲ್ಲ.
ಕಂಬಳದ ಸಮಯದಲ್ಲಿ ಕಂಬಳ ನಡೆಯುವ ‘ಕಳ’ಕ್ಕೆ ಕೋಣಗಳು ಸೀದಾ ಸಾದಾ ಬರುವಂತಿಲ್ಲ.
ಅದಕ್ಕೂ ಒಂದು ನಿರ್ದಿಷ್ಟ ಕ್ರಮವಿದೆ. ಯಜಮಾನನ ಮನೆಯಿಂದ ಕೋಣಗಳು ಅದ್ಭುತವಾದ ಮದುವೆ
ದಿಬ್ಬಣದಂತಹ ಮೆರವಣಿಗೆಯಲ್ಲೇ ಬರಬೇಕು.
ಕಂಬಳದ ದಿನ ಹೊರಡುವ ಕೋಣಗಳ ಮೆರವಣಿಗೆಯೆಂಬುದು ಅದ್ಭುತವಾದ ಅನುಭವ ನೀಡುವ, ಉತ್ಸಾಹ
ಚಿಮ್ಮಿಸುವ ಒಂದು ಚಟುವಟಿಕೆ. ಇದು ದಸರಾ ಆನೆಗಳ ದಿಬ್ಬಣದ ವೈಭವಕ್ಕೇನೂ ಕಡಿಮೆ
ಇರುವುದಿಲ್ಲ!! ಈ ಹಿಂದೆ ವಿವರಿಸಿದಂತೆ ಬೆಳೆಸಿದ ಕೋಣಗಳ ಮೈನಲ್ಲಿ ಅಸಾಧ್ಯ ಬಲ
ಸಂಚಯವಾಗಿರುತ್ತದೆ. ಅವುಗಳನ್ನು ಹಿಡಿಯಲು ನಿಯಂತ್ರಿಸಲು ಒಬ್ಬಿಬ್ಬರಿಂದ ಸಾಧ್ಯವಿಲ್ಲ!.
ಮುಖ್ಯ ಶಿಕ್ಷಕ ಅಥವಾ ಗಿಡುಪುನಾಯೆಯ ಕೈನಲ್ಲಿ ಕೋಣಗಳ ಮೂಗುದಾರವಿದ್ದರೆ ಅವನ್ನು
ನಿಯಂತ್ರಿಸಲು ಕಟ್ಟಿರುವ ಹಗ್ಗಗಳನ್ನೂ, ನೊಗವನ್ನೂ ಹಿಡಿಯಲು ಹದಿನೈದಿಪ್ಪತ್ತು ಜನ
ಬಲಿಷ್ಟ ಯುವಕರಿರುತ್ತಾರೆ. ಅಷ್ಟು ಜನರ ನಿಯಂತ್ರಣದಲ್ಲಿದ್ದರೂ ಆಗಾಗ ಕೆರಳುವ,
ಕೋಪಗೊಳ್ಳುವ ಅವುಗಳನ್ನು ನಿಯಂತ್ರಿಸುವುದು ಅದ್ಭುತವಾದ ಸಾಹಸವೇ ಸರಿ!
ಯಜಮಾನರ ಬೀಡಿನಿಂದ ಕಂಬಳದ ‘ಕಳ’ಕ್ಕೆ ಹೊರಡುವ ಕೋಣಗಳ ಗತ್ತು ಗೈರತ್ತುಗಳನ್ನು ನೋಡಿಯೇ ಅನುಭವಿಸಬೇಕು.
ಕಲಾತ್ಮಕವಾಗಿ ಹೆಣೆದ ನೈಲಾನ್ ಮೂಗುದಾರ , ಅವುಗಳ ನಿಯಂತ್ರಣಕ್ಕೆ ಕಟ್ಟಿದ
ಬಣ್ಣಬಣ್ಣದ ಹಗ್ಗಗಳು, ಹಣೆಗೆ ಬಾಸಿಂಗ, ಮಾಲಿಶ್‌ನಿಂದಾಗಿ ಫಳಫಳನೆ ಹೊಳೆಯುವ ಕೊಬ್ಬಿದ
ಮೈ, ಅದರ ಮೇಲೆ ಹಲವಾರು ರೀತಿಯ ಒಡವೆಗಳು, ಕಾಲಿಗೆ ಗೆಜ್ಜೆ, ಬೆನ್ನಮೇಲೆ ರೇಷ್ಮೆ
ಬಟ್ಟೆಯ ಹೊದಿಕೆ, ಹೊಳೆಯುವ ಕನ್ನಡಿಗಳು, ಹೂವಿನ ಹಾರಗಳು, . . . ಈ ರೀತಿ ಮದುಮಗನಂತೆ
ಸಿಂಗರಿಸಿಕೊಂಡ ಕೋಣಗಳಿಗೆ ಕೆಟ್ಟ ಕಣ್ಣುಗಳು ತಾಗಿ ದೃಷ್ಟಿಯಾಗಬಾರದೆಂದು ಚಪ್ಪಲಿ
ತುಂಡು, ಮುಳ್ಳಿನ ಸರ, ತಾಯಿತ ಇತ್ಯಾದಿ ಅನಿಷ್ಟ ನಿವಾರಕಗಳನ್ನು ಕಟ್ಟಲಾಗುತ್ತದೆ. ಹೀಗೆ
ಸಿಂಗಾರಗೊಂಡ ಕೋಣಗಳ ಜೊತೆಗೆ ಜನಗಳ ಒಂದು ದೊಡ್ಡ ಗುಂಪೇ ಹೊರಡುತ್ತದೆ. ಆಗ ಆರಂಭವಾಗುವ
ಪಟಾಕಿಯ ಶಬ್ದ, ಕೊಂಬು ಕಹಳೆಗಳ ಮತ್ತು ನಗಾರಿಯ ವಾದನ ಕಂಬಳದ ಕಳ ಮುಟ್ಟುವವರೆಗೂ
ನಡೆಯುತ್ತಲೇ ಇರುತ್ತದೆ.
ತಮ್ಮ ಅಸಾಧ್ಯ ಶಕ್ತಿಯ ಹುಮ್ಮಸ್ಸಿನಲ್ಲಿ ಪದೇಪದೇ ಕೆರಳುವ ಕೆಂಗಣ್ಣು ಬಿಡುತ್ತಾ
ಭುಸುಭುಸನೆ ಉಸಿರುಬಿಡುತ್ತಾ ಹೆದರಿಸುವ ಕೋಣಗಳನ್ನು ಕಂಬಳದ ಜಾಗಕ್ಕೆ ತಂದು ಸ್ಪರ್ಧೆ
ಆರಂಭವಾಗುವ ಸ್ಥಳವಾದ “ಗಂತ್”ನಲ್ಲಿ ನಿಲ್ಲಿಸುವುದು ಮಹಾ ಪ್ರಯಾಸದ ಕೆಲಸ. ಕೋಣಗಳ ಆ
ಕ್ಷಣದ ಮನೋಸ್ಥಿತಿ ಮತ್ತು ಅವುಗಳ ಮರ್ಜಿಯನ್ನು ಗಮನಿಸಿಯೇ ನಿಧಾನಕ್ಕೆ ಈ ಕೆಲಸ
ಸಾಧಿಸಬೇಕಾಗುತ್ತದೆ. ಆದರೆ ಎಲ್ಲಾ ಸರಿಯಾಗಿ ನಡೆದು ಒಮ್ಮೆ ಸಿದ್ಧವಾದ ಕೋಣಗಳು
ಗಂತ್‌ನಿಂದ ಬಿಲ್ಲಿನಿಂದ ಬಿಟ್ಟ ಬಾಣದಂತೆ ಓಡತೊಡಗಿದರೆ ಅವುಗಳನ್ನು ನಿಯಂತ್ರಿಸುವ
ಸಾಮರ್ಥ್ಯ ಗಿಡುಪುನಾಯೆಗೂ ಇರುವುದಿಲ್ಲ. ಅವುಗಳನ್ನು ಓಡಿಸಿಕೊಂಡು ಹೋಗುವುದಷ್ಟೇ ಆತನ
ಕೆಲಸ. ಓಟ ಮುಗಿದ ಮೇಲೂ, ಓಟದ ಕೊನೆಯ ಬಿಂದುವಾದ ‘ಮಂಜೊಟ್ಟಿ’ಯಲ್ಲಿ ಓಟ ಮುಗಿಸಿದ
ಕೋಣಗಳನ್ನು ಹಿಡಿದು ನಿಲ್ಲಿಸಲೆಂದೇ ಹದಿನೈದಿಪ್ಪತ್ತು ಜನರ ಗುಂಪು ಸಿದ್ಧವಾಗಿ
ನಿಂತಿರುತ್ತದೆ. ಅಷ್ಟೂ ಜನ ಸೇರಿದರೂ ಕೋಣಗಳನ್ನು ಹಿಡಿದು ನಿಲ್ಲಿಸುವಾಗ ಎಲ್ಲರ ಜೀವ
ಬಾಯಿಗೆ ಬಂದಿರುತ್ತದೆ!!
ಕಂಬಳದಲ್ಲಿ ಹಲವಾರು ರೀತಿಯ ಓಟಗಳಿದ್ದು ನಿಯಮಾನುಸಾರ ಗೆದ್ದ ಕೋಣಗಳಿಗೆ ನಿಯಮಾನುಸಾರ
ಚಿನ್ನದ ಪದಕ, ಪಾರಿತೋಷಕ, ಪ್ರಶಸ್ತಿ ಪತ್ರಗಳನ್ನು ನೀಡಿ ಸಮ್ಮಾನಿಸಲಾಗುತ್ತದೆ.
ಗೆದ್ದ ಕೋಣಗಳಿಗೆ ಸಿಕ್ಕುವ ಪದಕ ಅವುಗಳ ಮೇಲಿನ ಹೂಡಿಕೆಗೆ ಹೋಲಿಸಿದರೆ ತೀರಾ
ಕನಿಷ್ಠವೇ. ಆದರೂ ಇಂದಿನ ಸಾಮಾಜಿಕ ಸ್ಥಿತ್ಯಂತರದಲ್ಲಿ ಗೆಲ್ಲುವ ಕೋಣಗಳ
ಮಾಲೀಕರಾಗಿರುವುದು ಗೌರವದ ಪ್ರಶ್ನೆಯಾಗಿರುವುದರಿಂದ ಕೋಣಗಳ ಮಾಲೀಕರು ಖರ್ಚು ಮಾಡಲು
ಹಿಂಜರಿಯುವುದೇ ಇಲ್ಲ.
ಕೋಣದ ಸಾಕಣೆಯ ಹಿಂದಿನ ಸಾಂಸ್ಕೃತಿಕ ಮಹತ್ವ
ನಿಜ ಇಂದು ಕಂಬಳದ ಹಿಂದಿನ ಧಾರ್ಮಿಕ ಆಚರಣೆ ಹಿಂದೆ ಸರಿದು ಮಸುಕಾಗುತ್ತಾ ಅಬ್ಬರದ
ವೈಭವ ಹಾಗೂ ಸ್ಪರ್ಧೆಯೇ ಮುಖ್ಯವಾಗಿದೆ. ಆದರೂ ಕಂಬಳ ಆಚರಣೆಯ ಒಳಸೆಲೆಗಳನ್ನು ನೋಡಿದಾಗ
ಇದು ಕೃಷಿ ಕಾರ್ಯದ ಆರಂಭ ಕಾಲದಲ್ಲಿ ಸೃಷ್ಟಿ ಕ್ರಿಯೆಯನ್ನು ಸಾಂಕೇತಿಸುವ ಒಂದು ಧಾರ್ಮಿಕ
ಆಚರಣೆ ಎಂಬುದು ಅರಿವಾಗುತ್ತದೆ.
ಉಡುಪಿ, ದಕ್ಷಿಣಕನ್ನಡ ಮತ್ತು ಕಾಸರಗೋಡು ಸೇರಿದ ತುಳುನಾಡಿನಲ್ಲಿ ಪ್ರತೀವರ್ಷ
ನವೆಂಬರ್‌ನಲ್ಲಿ ಮೊದಲ ಹಂಗಾಮಿನ ಗದ್ದೆ ಕೊಯ್ಲು ಮುಗಿದನಂತರ ಎರಡನೆ ಭತ್ತದ ಬೆಳೆಗೆ
ಗದ್ದೆಗಳನ್ನು ತಯಾರಿಸುವಾಗ ಕೆಲವು ಆಯ್ದ ಗದ್ದೆಗಳಲ್ಲಿ ಕಸಕಡ್ದಿಗಳನ್ನೆಲ್ಲಾ ಹೆಕ್ಕಿ
ಸ್ವಚ್ಛಗೊಳಿಸಿ ನೀರುಬಿಟ್ಟು ಕೆಸರುಗದ್ದೆಗಳನ್ನಾಗಿ ಪರಿವರ್ತಿಸುತ್ತಾರೆ. ಆದರದು ಭತ್ತದ
ನಾಟಿ ಮಾಡುವುದಕ್ಕಲ್ಲ. ಕಂಬಳದ ಸ್ಪರ್ಧೆಯ ಕೋಣಗಳನ್ನು ಓಡಿಸುವುದಕ್ಕೆ.
ಪರಶುರಾಮ ಸೃಷ್ಟಿಯೆಂದು ಕರೆಸಿಕೊಳ್ಳುವ ತುಳುನಾಡಿನಲ್ಲಿರುವ ವೈವಿಧ್ಯಮಯ
ಆಚರಣೆಗಳಲ್ಲಿ ಜನಪ್ರಿಯತೆಯ ಮಜಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದೇ ಕಂಬಳ
ಸ್ಪರ್ಧೆಗಳು.
ಎಲ್ಲ ಕಡೆಗಳಂತೆ ಇಲ್ಲಿ ಸಹಾ ಇಲ್ಲಿನ ಪ್ರಾದೇಶಿಕ ಆಚರಣೆಗಳು ನಾಗರೀಕತೆಯ ಮಾಯಾ
ಪರದೆಯ ಅಡಿಯಲ್ಲಿ ಮರೆಯಾಗುತ್ತಿದ್ದರೂ ಕೆಲವಾದರೂ ಜಾನಪದ ಆಚರಣೆಗಳು ತಮ್ಮ ಮಣ್ಣಿನ
ಸೊಗಡನ್ನು ಉಳಿಸಿಕೊಂಡಿವೆ. ಅಂತಹ ಜಾನಪದ ಅಚರಣೆಗಳಲ್ಲಿ ಕಂಬಳ ಪ್ರಮುಖವಾದುದು. ಮೊದಲ
ಭತ್ತದ ಬೆಳೆಯ ಕೊಯ್ಲು ಮುಗಿದು ಎರಡನೆಯ ಸುಗ್ಗಿ ಬೆಳೆಗೆ ಭೂಮಿ ಹದಮಾಡುವ ಸಮಯದಲ್ಲಿ
ದೊರೆಯುವ ಬಿಡುವಿನ ವೇಳೆಯಲ್ಲಿ ನಡೆಯುವ ಆಚರಣೆಯೇ ಕಂಬಳ. ಎಂಟು ಶತಮಾನಗಳಷ್ಟು ಸುದೀರ್ಘ
ಇತಿಹಾಸವಿರುವ ಕಂಬಳ ಆರಂಭಗೊಂಡದ್ದು ಧಾರ್ಮಿಕ ಆಚರಣೆಯ ಹಿನ್ನೆಲೆಯಲ್ಲಿ. ಆದರೆ
ಕಾಲಕ್ರಮೇಣ ಅದರಲ್ಲಿದ್ದ ಕ್ರೀಡೆಯ ಅಂಶಗಳು ಹಾಗೂ ಮನರಂಜನೆಗೆ ಒತ್ತು ಸಿಕ್ಕ ಕಾರಣ ಇಂದು
ಅದೊಂದು ಶುದ್ಧ ಮನೋರಂಜನಾತ್ಮಕ ಆಟವಾಗಿಯೇ ಪ್ರಸಿದ್ಧವಾಗಿದೆ.
ಕಂಬಳದ ಬಗ್ಗೆ ಸಂಶೋಧನೆ ನಡೆಸಿರುವ ಇಲ್ಲಿನ ಹಲವಾರು ಗೌರವಾನ್ವಿತ ಸಂಶೋಧಕರು
“ಕಂಬಳದ ಪ್ರಾಮುಖ್ಯ ಕೇವಲ ಮನರಂಜನೆಯ ನೆಲೆಗಟ್ಟಿನದಲ್ಲ” ಎಂದು ಅಭಿಪ್ರಾಯ ಪಡುತ್ತಾರೆ.
‘ಕಂಬುಲ’ ಅಥವಾ ‘ಕಂಬಳ’ ಎಂಬ ಪದದ ಅರ್ಥವೇ ಬಿತ್ತನೆಗೆ ಸಿದ್ಧಪಡಿಸಿದ ಗದ್ದೆ
ಎಂದಾಗಿರುವುದರಿಂದ ನಿಜಕ್ಕೂ ಇದೊಂದು ಕೃಷಿ ಸಂಬಂಧೀ ಧಾರ್ಮಿಕ ಆಚರಣೆ. ಏನಿದ್ದರೂ ಕೋಣಗಳ
ಓಟ ಅದರ ಒಂದು ಭಾಗವಾಗಿತ್ತಷ್ಟೆ. ಆದರೆ ಇಂದು ಕಂಬಳದಲ್ಲಿ ವೈಭವಕ್ಕೆ ಮತ್ತು
ಪ್ರತಿಷ್ಠೆಗೆ ಮಹತ್ವವಿದೆ. ಧಾರ್ಮಿಕ ಆಚರಣೆಯನ್ನು ಬಿಟ್ಟು ಹೊರಗೆ ಬಂದಿದೆ ಎಂಬ
ಅಂಶವನ್ನು ಪಕ್ಕಕ್ಕಿರಿಸಿ ನೋಡಿದರೆ ಶುದ್ಧ ಜಾನಪದ ಕ್ರೀಡೆಯಾಗಿ ಅದೊಂದು ಅತ್ಯುತ್ತಮ
ಮನೋರಂಜಕ ಚಟುವಟಿಕೆ ಎಂಬುದರಲ್ಲಿ ಸಂಶಯವಿಲ್ಲ.
ಕಂಬಳದ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಜಾನಪದ ತಜ್ಞ ಡಾ.ಗಣನಾಥ ಎಕ್ಕಾರು “ಕಂಬಳ
ಎಂದರೆ ಅದು ಫಲವಂತಿಕೆಯ ಹಾಗೂ ಸೃಷ್ಟಿಕ್ರಿಯೆಯ ಸಂಕೇತ. ಮನುಷ್ಯ ತನ್ನ ಜೀವನಾವರ್ತದಲ್ಲಿ
ಕಾಣುವ ಸೃಷ್ಟಿ ಕ್ರಿಯೆಯನ್ನು ಭೂಮಿಯಲ್ಲೂ ಕಂಡು ಅದನ್ನು
ಸಾಂಸ್ಕೃತೀಕರಣಗೊಳಿಸಿದ್ದಾನೆ” ಎಂದು ಅಭಿಪ್ರಾಯ ಪಡುತ್ತಾರೆ.
ಕಂಬಳದ ಗದ್ದೆಯನ್ನು ಹದಮಾಡಿ, ಕೆಸರು ಮಾಡಿ ಸಿದ್ಧಗೊಳಿಸುವುದೇ ಸುಗ್ಗಿ ಬೆಳೆಗೆ ಬೀಜ
ಬಿತ್ತುವ ಉದ್ದೇಶದಿಂದ. ಅದಕ್ಕಾಗೇ ಬೀಜ ಬಿತ್ತಲು ಗದ್ದೆ ಸಿದ್ಧವಾದಾಗ “ಕಂಡ
ಮದ್ಮಲಾಂಡ್” ಎನ್ನುತ್ತಾರೆ. ಗದ್ದೆ ಮದುಮಗಳಾದಳು ಎಂದು ಅದರ ಅರ್ಥ. ಗದ್ದೆ
ಮದುಮಗಳಾಗುವುದೆಂದರೆ ಸೃಷ್ಟಿಕ್ರಿಯೆಗೆ ಭೂಮಿಕೆ ಸಿದ್ಧವಾಯಿತು ಎಂದು ಭಾವನೆ. ಹಾಗೇ
ಉಳುಮೆಗೆ ಉಪಯೋಗಿಸುವ (ಅಥವಾ ಕಂಬಳಕ್ಕೆ ಉಪಯೋಗಿಸುವ) ಕೋಣ ಗಂಡಿನ ಪ್ರತಿನಿಧಿ.
ಮೆರವಣಿಗೆಯಲ್ಲಿ ಬರುವ ಕೋಣಗಳಿಗೆ ಬಾಸಿಂಗ ಕಟ್ಟಿ ಮದುಮಗನಂತೆ ಸಿಂಗಾರಗೊಳಿಸುವ
ಪ್ರಕ್ರಿಯೆಯ ಅರ್ಥ ಅದೇ ಆಗಿದೆ. ಕಂಬಳ ಸೃಷ್ಟಿಕ್ರಿಯೆಯ ಪ್ರತೀಕ ಎಂಬ ನಂಬಿಕೆಯ
ಹಿನ್ನೆಲೆಯಲ್ಲಿ ಹಿಂದಿನ ಕಾಲದಲ್ಲಿ ಕಂಬಳದ ಹಿಂದಿನ ದಿನ ರಾತ್ರೆ ಗದ್ದೆಗಳಲ್ಲಿ “ಪನಿ
ಕುಲ್ಲುನು” ಎಂಬ ಹೆಸರಿನಲ್ಲಿ ಅಣಕು ಲೈಂಗಿಕ ಕ್ರಿಯೆಯ ಅಭಿನಯ ನಡೆಯುತ್ತಿತ್ತು. ಈಗ ಆ
ಆಚರಣೆ ಕಡಿಮೆಯಾಗುತ್ತಾ ಬರುತ್ತಿದೆ.
ಕಂಬಳಗಳಲ್ಲಿ ಹಲವು ರೀತಿಯ ಆಚರಣೆಗಳಿದ್ದು‘ಬಾರೆ ಕಂಬಳ’ ಮತ್ತು ‘ಪೂಕರೆ
ಕಂಬಳ’ಗಳಲ್ಲಿ ಕಂಬಳದ ಆಚರಣೆಗಳನ್ನು ಸಾಂಕೇತಿಕವಾಗಿ ಪೂರೈಸಲಾಗುತ್ತದೆ. ‘ದೇವರ ಕಂಬಳ’
ಮತ್ತು ‘ಅರಸು ಕಂಬಳ’ ಸ್ಪರ್ಧಾತ್ಮಕವಾದುವು. ಅವೇ ಇಂದು ಆಧುನಿಕ ಕಂಬಳದ ಹೆಸರಿನಲ್ಲಿ
ಜನಪ್ರಿಯವಾಗಿವೆ. ನವೆಂಬರ್‌ನಿಂದ ಮಾರ್ಚ್‌ವರೆಗಿನ ಐದು ತಿಂಗಳ ಕಾಲವೆಂದರೆ ಅದು ಕಂಬಳದ
ಕಾಲ. ಆ ಸಮಯದಲ್ಲಿ ಉಡುಪಿ, ಕಾರ್ಕಳ, ಹಳೆಯಂಗಡಿ, ಮುಲ್ಕಿ, ಮಂಗಳೂರು, ಕಾಂತಾವರ,
ಪುತ್ತೂರು, ಬಂಟ್ವಾಳ, ಮಂಜೇಶ್ವರ ಮೊದಲಾದೆಡೆ ಕಂಬಳ ಓಟಗಳು ವಿಜೃಂಭಣೆಯಿಂದ
ಜರುಗುತ್ತವೆ.
ಶತಮಾನಗಳಷ್ಟು ಹಳೆಯದಾದ ಕಂಬಳ ಹಲವಾರು ಕಾರಣಗಳಿಂದ ಇತ್ತೀಚೆಗೆ ಜನರನ್ನು
ಆಕರ್ಷಿಸುವಲ್ಲಿ ವಿಫ಼ಲವಾಗುತ್ತಿತ್ತು. ಕಂಬಳಗಳಲ್ಲಿನ ವಿಳಂಬ ಮತ್ತು ಅಶಿಸ್ತು ಇದಕ್ಕೆ
ಕಾರಣವಾಗಿತ್ತು. ಜೊತೆಗೆ ಕಂಬಳ ಗದ್ದೆಯ ಪಕ್ಕದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಕೆಲ
ಕುಡುಕರ ಮತ್ತು ಜೂಜುಕೋರರ ಹಾವಳಿ, ಗದ್ದಲ ಮತ್ತು ಹೊಡೆದಾಟ. ಇದೆಲ್ಲದರಿಂದ
ಇಳಿಮುಖವಾಗುತ್ತಿದ್ದ ಕಂಬಳದ ಜನಪ್ರಿಯತೆಯನ್ನು ಮೇಲೆತ್ತುವ ಸದುದ್ದೇಶದಿಂದ ಕಂಬಳ
ಸಮಿತಿಗಳು ಹಲವಾರು ಮಾರ್ಗೋಪಾಯಗಳನ್ನು ಜಾರಿಗೆ ತಂದು ಕಂಬಳವನ್ನು ಮತ್ತೆ
ಜನಪ್ರಿಯಗೊಳಿಸಿದ್ದಾರೆ. ಕಂಬಳವು ಇತ್ತೀಚೆಗೆ ಹೆಚ್ಚೆಚ್ಚು
ಜನಪ್ರಿಯವಾಗುತ್ತಿರುವುದರಿಂದ ನಿಂತು ಹೋಗಿದ್ದ ಮಂಜೇಶ್ವರದ ಜಯ-ವಿಜಯ ದಂತಹ ಕಂಬಳಗಳು
ಮತ್ತೆ ಆರಂಭಗೊಂಡಿವೆ. ಅಲ್ಲದೆ ಪಿಲಿಕುಳದಲ್ಲಿ ಆಧುನಿಕವಾದ ಕಂಬಳ ಹೊಸದಾಗಿ
ಆರಂಭಗೊಂಡಿದೆ.
“ಕೆಸರಾಗಿ ಫಲವಂತಿಕೆಗೆ ಸಿದ್ಧವಾದ ಗದ್ದೆ”ಯನ್ನು “ಕೋಣ ಉಳುವುದು” ಸೃಷ್ಟಿಕಾರ್ಯದ
ಆರಂಭಿಕ ಕ್ರಿಯೆಯ ಸಂಕೇತ. ಅದರಲ್ಲಿ ಭಾಗವಹಿಸುವ ಕೋಣಗಳು ಕೃಷಿಕರ ಜೀವನದಲ್ಲಿ ಪ್ರಮುಖ
ಸ್ಥಾನ ಪಡೆದಿವೆ. ಅಂತಹ ಪ್ರೀತಿಯ ಜೀವಿಗೆ ಮಹತ್ವ ಕಲ್ಪಿಸುವ ಸಲುವಾಗಿ ಆರಂಭವಾದ
ಧಾರ್ಮಿಕ ಆಚರಣೆ ಇಂದು “ಆಧುನಿಕ ಕಂಬಳ”ವೆಂಬ ಹೆಸರಿನಲ್ಲಿ ಸ್ಪರ್ಧೆಯಾಗಿಬಿಟ್ಟಿದೆ.
ಆದರೂ ಅದು ತುಳುನಾಡಿನ ಜಾನಪದ ಆಚರಣೆಗಳ ಮಹತ್ವವನ್ನು ಎತ್ತಿ ಹಿಡಿಯುವಲ್ಲಿ
ಯಶಸ್ವಿಯಾಗಿದೆ ಎಂಬುದರಲ್ಲಿ ಸಂಶಯವೇನೂ ಇಲ್ಲ.
ಹೇಗೂ ಇರಲಿ ತುಳುನಾಡಿನಲ್ಲಿ ಕಂಬಳದ ಕೋಣಗಳಿಗೆ ರಾಜ ವೈಭವ!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ