ಗುರುವಾರ, ಏಪ್ರಿಲ್ 30, 2015

ದಲಿತ ಯುವಕ ರೇವಣ್ಣನ ಬರ್ಭರ ಹತ್ಯೆ

-ಅರುಣ್ ಜೋಳದಕೂಡ್ಲಿಗಿ

 ಏಪ್ರಿಲ್ ೧೪ ರಂದು ಅಂಬೇಡ್ಕರ್ ಜಯಂತಿ ಆಚರಿಸುತ್ತಾ ದಲಿತ ಲೋಕದ ಶೋಷಣೆ ಮುಕ್ತ ಸಮಾಜದ ಕನಸುಗಳನ್ನು ಹಂಚಿಕೊಂಡಿದ್ದೇವೆ. ಈಗಲೂ ತಿಂಗಳು ಪೂರ್ತಿ ಅಲ್ಲಲ್ಲಿ ಅಂಬೇಡ್ಕರ್ ಜಯಂತಿಯ ಆಚರಣೆ ನಡೆಯುತ್ತಲೇ ಇದೆ. ಇದೇ ಹೊತ್ತಲ್ಲಿ ಕೂಡ್ಲಿಗಿ ತಾಲೂಕಿನ ಹುರುಳಿಹಾಳ್ ಸಮೀಪದ ಓಬಳಾಪುರ ಗ್ರಾಮದ ದಲಿತ ಯುವಕ ರೇವಣ್ಣನು ಮೇಲು ಜಾತಿಯವರಿಂದ ಬರ್ಭರ ಹತ್ಯೆಗೆ ಒಳಗಾಗಿದ್ದಾನೆ. ಆತನ ಶವ ದಾವಣಗೆರೆ ಜಿಲ್ಲೆ ಜಗಲೂರು ತಾಲೂಕಿನ ಹಿರೇಮಲ್ಲೂರು ಗ್ರಾಮದ ಕ್ರಾಸ್ ಬಳಿ ಸಿಕ್ಕಿದೆ. ಜಗಲೂರು ಪೋಲಿಸ್ ಸ್ಟೇಷನ್ನಿನಲ್ಲಿ ಪ್ರಕರಣ ದಾಖಲಾಗಿದೆ. ಪತ್ರಿಕೆಗಳ ಸ್ಥಳೀಯ ಪುಟದ ಮೂಲೆಯೊಂದರಲ್ಲಿ ಒಂದು ಕಾಲಮ್ಮಿನ ಸುದ್ದಿಯಲ್ಲಿ ಶವ ಪತ್ತೆ ಎನ್ನುವಲ್ಲಿಗೆ ಮುಕ್ತಾಯವಾಗಿದೆ. 

  ರೇವಣ್ಣನ ಹತ್ಯೆಯಾದ ಸುದ್ದಿ ತಿಳಿದು ವಿಚಲಿತನಾದ ನಾನು ಗೆಳೆಯ ಸೂರಮ್ಮನಹಳ್ಳಿ ಉಮೇಶ್ ಜತೆಗೂಡಿ (ಏಪ್ರಿಲ್ ೨೭)  ಓಬಳಾಪುರ ತಲುಪಿದಾದ ಸಂಜೆ ೪ ರ ಸಮಯ. ದುಃಖ ಮಡುಗಟ್ಟಿದ ಮನೆಯ ಮುಂದೆ ಹೋದಾಗ ರೇವಣ್ಣನ ಅಣ್ಣ ತಿಪ್ಪೇಸ್ವಾಮಿ ಮತ್ತಿತರರು ಸೇರಿದರು. ನೋಡು ನೋಡುತ್ತಿದ್ದಂತೆಯೇ ಇಡೀ ಕೇರಿಯ ಜನರು ನಮ್ಮನ್ನು ಮುತ್ತಿದರು. ಅವರ ಮುಖದಲ್ಲಿ ದುಃಖವಿತ್ತು ಅದಕ್ಕಿಂತ ಹೆಚ್ಚಾಗಿ ಆತಂಕ ಮನೆ ಮಾಡಿತ್ತು. ರೇವಣ್ಣನ ತಾಯಿ ಭರಮಮ್ಮ ದುಃಖಿಸಿದ್ದು ಕರುಳು ಹಿಂಡುವಂತಿತ್ತು. ಮನೆಯ ಆಧಾರ ಸ್ತಂಭವೇ ಕುಸಿದಂತೆ ಮನೆ ಬಿಕೋ ಎನ್ನುತ್ತುತ್ತು. ಇಡೀ ಕೇರಿಯೇ ರೇವಣ್ಣನ ಬರ್ಭರ ಹತ್ಯೆಗೆ ಕಣ್ಣೀರಾಗಿತ್ತು.


ಹತ್ಯೆಗೆ ಒಳಗಾದ ರೇವಣ್ಣ

 ಓಬಳಾಪುರ ಕೂಡ್ಲಿಗಿ ತಾಲೂಕಿನ ಕೊನೆ ಅಂಚಿನ ಹಳ್ಳಿ. ಚಿಕ್ಕ ಜೋಗಿಹಳ್ಳಿಯಿಂದ ಮುಂದೆ ಸಾಗಿದರೆ ಹುರುಳಿಹಾಳ್ ಸಿಗುತ್ತದೆ. ಹುರುಳಿಹಾಳಿಗೆ ಅಂಟಿಕೊಂಡಂತಿರುವ ಓಬಳಾಪುರದ ೧೧೦ ರಷ್ಟು ಮನೆಗಳಿರುವ ಚಿಕ್ಕ ಗ್ರಾಮ. ದಲಿತರ ೫೨, ಲಿಂಗಾಯತ ಒಕ್ಕಲಿಗ ೪೫, ನಾಯಕ ಸಮುದಾಯದ ೪,  ಮುಸ್ಲೀಮರ ೫ ಮನೆಗಳಿರುವ ಹಳ್ಳಿ. ಈ ಊರಿನ ದಲಿತರಲ್ಲಿ ಶಿಕ್ಷಣ ಪಡೆದವರು ಹೆಚ್ಚಿದ್ದಾರೆ. ಎಂಟರಿಂದ ಹತ್ತರಷ್ಟು ಬೇರೆ ಬೇರೆ ವಲಯಗಳಲ್ಲಿ ಉದ್ಯೋಗಸ್ತರೂ ಇದ್ದಾರೆ. ಹೀಗೆ ಶಿಕ್ಷಣ ಪಡೆದು ಸ್ವಾಭಿಮಾನದಿಂದ ಬದುಕುವ ದಲಿತರ ಬಗ್ಗೆ ಮೇಲುಜಾತಿಯವರ ಅಸಹನೆ ಸಹಜವಾಗಿಯೆ ಇತ್ತು.

 ರೇವಣ್ಣ ಬಿಎ ಬಿಎಡ್ ಮಾಡಿಕೊಂಡು ಜಗಲೂರಿನ ಚೈತನ್ಯ ಫೈನಾನ್ಸ್ ನಲ್ಲಿ ಫೀಲ್ಡ್ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಉತ್ತಮ ಕೆಲಸಗಾರನೆಂಬ ಹೆಗ್ಗಳಿಕೆಯನ್ನೂ ಸಂಸ್ಥೆಯಲ್ಲಿ ಗಳಿಸಿದ್ದ. ಜೀವನ ನಿರ್ವಹಣೆಗೆ ಸಾಕಾಗುವಷ್ಟು ಸಂಬಳವೂ ಇತ್ತು. ತನ್ನ ಜತೆಯೇ ಕೆಲಸ ಮಾಡುತ್ತಿದ್ದ ಮೇಲುಜಾತಿ ಹುಡುಗಿಯೊಂದಿಗೆ ಪ್ರೇಮ ಅಂಕುರಿಸಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವ ಬಗ್ಗೆಯೂ ಇಬ್ಬರೂ ನಿರ್ಧರಿಸಿದ್ದರು. ಮನೆಯಲ್ಲಿಯೂ ರೇವಣ್ಣ ಈ ಹುಡುಗಿಯ ಜತೆಗಿನ ಪ್ರೇಮದ ಬಗ್ಗೆ ಹೇಳಿಕೊಂಡಿದ್ದನು. ಹುಡುಗಿಯ ಫೋಟೋವನ್ನು ತೋರಿಸಿದ್ದನು. ಮನೆಯಲ್ಲಿ ಸಹಜವಾಗಿ ತಾಯಿ ಭರಮಮ್ಮ ‘ದೊಡ್ಡ ಜಾತಿ ಹುಡುಗಿ ಬ್ಯಾಡಪ್ಪ ನಿಮ್ಮ ಅಕ್ಕನ ಮಗಳು ಇದಾಳ ಆಕೀನ ಮದ್ವಿ ಆಗು’ ಎಂದು ಬುದ್ಧಿವಾದ ಹೇಳಿದ್ದಳು. ಈ ಪ್ರೇಮವೇ ರೇವಣ್ಣನ ಜೀವಕ್ಕೆ ಮುಳುವಾಯಿತು ಎನ್ನುವುದು ರೇವಣ್ಣನ ಅಣ್ಣ ತಿಪ್ಪೇಸ್ವಾಮಿಯ ಅಳಲು.

  ಏಪ್ರಿಲ್ ೨೦ ಸೋಮವಾರ ರಾತ್ರಿ ರೇವಣ್ಣ ತನ್ನ ದೊಡ್ಡಪ್ಪನ ಮಗನಾದ ಹಿರಿಯಣ್ಣ ತಿಪ್ಪಣ್ಣನ ಬಳಿ ತಾನು ಒಂದು ಹುಡುಗಿಯನ್ನು ಪ್ರೀತಿಸುವುದಾಗಿಯೂ, ಲಿಂಗಾಯತರ ಹುಡುಗಿಯೆಂತಲೂ, ಆಕೆಯೂ ಮದುವೆಯಾಗಲು ಒತ್ತಾಯಿಸುತ್ತಿದ್ದಾಳೆ, ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾಳೆ ಎಂತಲೂ, ಆಕೆಗೆ ಮದುವೆ ಖಾಯಂ ಆಗಿದೆ ಏನು ಮಾಡುವುದು ಎಂದು ವಿಚಿತ್ರ ಗಲಿಬಿಲಿಯಲ್ಲಿ ಏನೊಂದು ತೋಚದಂತೆ ಹೇಳಿಕೊಂಡಿದ್ದನು. ಇದರ ಆಪಾಯವನ್ನರಿತ ತಿಪ್ಪಣ್ಣ ಆ ಹುಡುಗಿಯನ್ನು ಮದುವೆಯಾಗುವುದು ಬೇಡವೇ ಬೇಡ ಎಂತಲೂ, ಈ ಸಂಬಂಧ ಬೇಕಾದರೆ ಪೋಲಿಸ್ ಕಂಪ್ಲೇಂಟ್ ಬೇಕಾದರೆ ಕೊಡೋಣ ಎಂತಲೂ, ಮುಂದೆ ಕಷ್ಟವೆಂತಲೂ ಬುದ್ದಿವಾದ ಹೇಳಿದ್ದಾರೆ. ತಡ ರಾತ್ರಿಯವರೆಗೂ ಈ ಚರ್ಚೆ ನಡೆದಿದೆ. ಏಪ್ರಿಲ್ ೨೧ ರ ಬೆಳಗ್ಗೆ ತಿಪ್ಪಣ್ಣ ಹೊಲಗೆಲಸಕ್ಕೆ ಹೋಗಿದ್ದಾರೆ, ಇತ್ತ ಕಡೆ ಇದೇ ಗೊಂದಲದಲ್ಲಿ ರೇವಣ್ಣ ಜಗಲೂರಿಗೆ ಡ್ಯೂಟಿಗೆಂದು ಹೋಗಿದ್ದಾನೆ.


ರೇವಣ್ಣನ ಅವ್ವ, ಅಣ್ಣಂದಿರು ಅತ್ತಿಗೆಯರು ಮಕ್ಕಳು-ಓಬಳಾಪುರದ ಮನೆ ಮುಂದಿನ ಚಿತ್ರ

  ಏಪ್ರಿಲ್ ೨೧ ರ ಬೆಳಗ್ಗೆ ೮.೩೦ ಕ್ಕೆ ಓಬಳಾಪುರದ ಮನೆ ಬಿಟ್ಟ ರೇವಣ್ಣ ಮತ್ತೆ ಮನೆಯೊಂದಿಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಏಪ್ರಿಲ್ ೨೫ ರ ಶನಿವಾರ ಬೆಳಗ್ಗೆ ೯.೩೦ ಸುಮಾರಿಗೆ ಜಗಲೂರು ಪೋಲಿಸ್ ಸ್ಟೇಷನ್ನಿನಿಂದ ರೇವಣ್ಣನ ಅಣ್ಣ ತಿಪ್ಪೇಸ್ವಾಮಿಗೆ ಫೋನ್ ಬಂದಿದೆ. ತೀರಿಹೋದ ರೇವಣ್ಣನ ಸುದ್ದಿ ತಿಳಿಯುತ್ತಲೂ ಮನೆಯಲ್ಲಿ ದುಃಖ ಮುಗಿಲು ಮುಟ್ಟಿದೆ. ನಂತರ ತಿಪ್ಪೇಸ್ವಾಮಿ ಮೊದಲಾದವರು ದಿಢೀರನೆ ಜಗಲೂರಿಗೆ ದಾವಿಸಿದ್ದಾರೆ. ಜಗಲೂರು ಸಮೀಪದ ಹಿರೆಮಲ್ಲೂರು ಕ್ರಾಸಿನ ಹೊಲವೊಂದರ ಬದುವಿನಲ್ಲಿ ದೇಹವಿತ್ತು. ರೇವಣ್ಣನ ದೇಹ ಊದಿಕೊಂಡು ನೋಡುವಂತಿರಲಿಲ್ಲವಂತೆ. ಆತ ತೊಟ್ಟ ಷರ್ಟು ಪ್ಯಾಂಟಿನ ಮೇಲೆ ರೇವಣ್ಣ ಎಂದು ಅಣ್ಣ ತಿಪ್ಪೇಸ್ವಾಮಿ ಗುರುತಿಸಿದ್ದಾರೆ. ಕಾಲುಗಳನ್ನು ಕತ್ತರಿಸಿದ್ದರು, ಮುಖವನ್ನು ಖಜಂ ಆಗುವಂತೆ ಹೊಡೆಯಲಾಗಿತ್ತು, ದೇಹದ ಮೇಲೆ ಅಸ್ತ್ರಗಳಿಂದ ಕೊಯ್ದ ಗುರುತುಗಳಿದ್ದವು. ರಕ್ತಮಯವಾದ ದೇಹ ವಾಸನೆ ಬರತೊಡಗಿತ್ತು ಎಂದು ತಿಪ್ಪೇಸ್ವಾಮಿ ಹೇಳುತ್ತಾರೆ. ಅಂತೆಯೇ ಡೆಡ್ ಬಾಡಿಯ ಹತ್ತಿರ ಪೆನ್ನು ಪೇಪರು ಮೊಬೈಲು ವಿಷಯ ಬಾಟಲಿ ಇತ್ತೆಂದು ಪೋಲಿಸರು ತೋರಿಸಿದ್ದಾಗಿ ತಿಪ್ಪೇಸ್ವಾಮಿ ಹೇಳಿದರು. ಜಗಲೂರು ಸರಕಾರಿ ಆಸ್ಪತ್ರೆಯಲ್ಲಿ ಪೋಷ್ಟ್ ಮಾರ್ಟಮ್ ಆಗಿದೆ. ನಂತರ ಅದೇ ದಿನ ಏಪ್ರಿಲ್ ೨೫ ರ ಶನಿವಾರ ರಾತ್ರಿ ೧ ಗಂಟೆಯ ಸುಮಾರಿಗೆ ದೇಹವನ್ನು ಓಬಳಾಪುರದಲ್ಲಿ ಮಣ್ಣು ಮಾಡಿದ್ದಾರೆ. ಪೋಷ್ಟ್ ಮಾರ್ಟಮ್ ರಿಪೋರ್ಟ ಇನ್ನೂ ಬಂದಿಲ್ಲ ಎನ್ನುವುದು ಮನೆಯವರು ನೀಡಿದ ಮಾಹಿತಿ.

 ಈ ಮಧ್ಯೆ ರೇವಣ್ಣನ ಸಂಬಂಧಿ ತಿಪ್ಪಣ್ಣನಿಗೆ (೯೯೬೪೬೦೦೯೨೯ ನಂಬರಿಗೆ) ಪ್ರಿಯತಮೆಯ ಮಾವ ಎಂದು ಹೇಳಿಕೊಂಡವರೊಬ್ಬರು ಏಪ್ರಿಲ್ ೨೧ ರ ಮಂಗಳವಾರ ರಾತ್ರಿ ೮ ಗಂಟೆಯ ಸುಮಾರಿಗೆ ಫೋನ್ ಮಾಡಿ ‘ನಮ್ಮ ಹುಡುಗಿಗೆ ಏಪ್ರಿಲ್ ೨೩ ರಂದು ಮದುವೆ ಇದೆ, ನಿಮ್ಮ ಹುಡುಗನನ್ನು ಒಂದೆರಡು ದಿನಗಳ ಕಾಲ ಈ ಕಡೆ (ಜಗಲೂರು) ಬಿಡಬೇಡಿ, ಹಿಂದೆ ಏನೋ ನಡೆದಿದೆ ಆದದ್ದನ್ನು ಮರೆಯಲು ನಿಮ್ಮ ಹುಡುಗನಿಗೆ ಹೇಳಿ’ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಭಯಗೊಂಡ ತಿಪ್ಪಣ್ಣ ರೇವಣ್ಣನಿಗೆ ಬುದ್ದಿ ಮಾತು ಹೇಳುವುದಾಗಿಯೂ, ಆ ತರಹದ ಯಾವುದೇ ತೊಂದರೆಯಾಗದಂತೆ ನಮ್ಮ ಹುಡುಗನಿಗೆ ತಿಳಿ ಹೇಳುತ್ತೇವೆ,  ನಮ್ಮ ಹುಡುಗನನ್ನು ನಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳುತ್ತೇವೆ ಎಂದು ತಿಪ್ಪಣ್ಣ ಹೇಳಿದ್ದಾರೆ.

 ಇದನ್ನೆಲ್ಲಾ ನೋಡಿದರೆ ಹುಡುಗಿಯ ಕಡೆಯವರೆ ರೇವಣ್ಣನನ್ನು ಕೊಲೆ ಮಾಡಿದ್ದಾರೆ ಅಥವಾ ಮಾಡಿಸಿದ್ದಾರೆ ಎನ್ನುವ ಅನುಮಾನ ಓಬಳಾಪುರ ಕೇರಿಯ ಜನರಲ್ಲಿ ದಟ್ಟವಾಗಿದೆ. ರೇವಣ್ಣನ ಸಾವಿನ ಆಚೀಚಿನ ಘಟನೆಗಳನ್ನು ನೋಡಿದರೂ ಈ ಅನುಮಾನ ಸಹಜವಾಗಿ ಬರುತ್ತದೆ. ಹಾಗಾಗಿ ರೇವಣ್ಣನ ಕೊಲೆಯ ಬಗ್ಗೆ ತನಿಕೆಯಾಗಬೇಕು, ಕೊಲೆಗಾರರು ಯಾರೆಂದು ತಿಳಿಯಬೇಕು, ಅವರಿಗೆ ಶಿಕ್ಷೆಯಾಗಬೇಕು ಎನ್ನುವುದು ರೇವಣ್ಣನ ಮನೆಯವರ ಒಕ್ಕೊರಲ ಧ್ವನಿ. ‘ನನ್ನ ಮಗ ಬಾಳ ನೋವುಂಡು ಸತ್ತಾನ್ರಿ, ಆ ಮಗ ಸಾಯೋ ಮುಂದೆ ಎಷ್ಟು ನೋವುಂಡುತ್ತೋ..’ ಎಂದು ರೇವಣ್ಣನ ತಾಯಿ ನೋಯುತ್ತಾ ಹೇಳುತ್ತಾರೆ.

 ರೇವಣ್ಣ ಬಿಎ ಬಿಎಡ್ ಮಾಡಿದ ಪದವೀದರ. ಆತನ ದಾಖಲಾತಿಗಳನ್ನು ಗಮನಿಸಿದರೆ ಬುದ್ದಿವಂತ ಕೂಡ. ರೇವಣ್ಣನ ಅಣ್ಣ ತಿಪ್ಪೇಸ್ವಾಮಿಯೂ ಬಿ.ಎ ಅರ್ಧಕ್ಕೆ ನಿಲ್ಲಿಸಿದ ಶಿಕ್ಷಿತ. ಇನ್ನೊಬ್ಬ ಅಣ್ಣ ಮಲಿಯಪ್ಪ ಅನಕ್ಷರಸ್ತ. ಇಬ್ಬರು ಅಣ್ಣಂದಿರಿಗೂ ಮದುವೆಯಾಗಿ ಮಕ್ಕಳಿವೆ. ಈ ಕುಟುಂಬಕ್ಕೆ ಆರ್ಥಿಕ ಭದ್ರತೆಯೇ ರೇವಣ್ಣನಾಗಿದ್ದ. ಅಣ್ಣಂದಿರು ತುಂಡು ಭೂಮಿಯನ್ನು ಉಳುಮೆ ಮಾಡಿಕೊಂಡು ಕೃಷಿ ಕೂಲಿ ಮಾಡಿಕೊಂಡಿದ್ದಾರೆ. ರೇವಣ್ಣನು ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಓಬಳಾಪುರಕ್ಕೆ ಬಂದು ಹೋಗುತ್ತಿದ್ದ. ಹೀಗೆ ಮನೆಗೆ ಆಧಾರವಾಗಿದ್ದ ಜೋತಿಯೇ ಆರಿದಂತೆ ಮನೆಯಲ್ಲಿ ಕತ್ತಲು ಆವರಿಸಿದೆ. ಈ ಕೊಲೆಯನ್ನು ನೋಡಿದರೆ ಮೇಲುಜಾತಿಯ ಅಟ್ಟಹಾಸ ಎದ್ದು ಕಾಣುತ್ತದೆ. ಇವರ ಪ್ರಭಾವಕ್ಕೆ ಒಳಗಾಗಿ ರೇವಣ್ಣನ ಕೊಲೆ ಮುಚ್ಚಿ ಹೋಗುವ ಮುಂಚೆ ದಲಿತ ಸಂಘಟನೆಗಳು ಹೋರಾಟಕ್ಕೆ ಇಳಿಯಬೇಕಿದೆ. ಈ ಕೇಸಿನ ತನಿಕೆಯಾಗಬೇಕು. ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು.
-ಅರುಣ್ 

ಭಾನುವಾರ, ಏಪ್ರಿಲ್ 26, 2015

ಓ ಬಾಲ್ಯವೇ ಮತ್ತೆ ಮತ್ತೆ ಕಾಡುತ್ತಿರು…

  -ಗಿರಿ
ಸೌಜನ್ಯ:http://www.suddi9.com
  ಬಾಲ್ಯ ಪ್ರತಿಯೊಬ್ಬರಲ್ಲೂ ಹರ್ಷ ಉಂಟುಮಾಡುವ ಘಟನೆ. ಬಾಲ್ಯದಲ್ಲಿ ಮಾಡಿದ ರಂಪಾಟ, ಗೆಳೆಯರ ಜೊತೆ ಆಡಿಕೊಂಡಿದ್ದು, ಅಜ್ಜಿಯ ಮಡಿಲಲ್ಲಿ ರಂಪಾಟಹೊಡೆದಿದ್ದು, ಶಾಲೆಗ ಹೋಗುವುದಿಲ್ಲ ಎಂದು ಗುಡ್ಡ, ಮರ ಹತ್ತಿ ಕುಳಿತಿದ್ದು ಎಲ್ಲವನ್ನೂ ಹಾಗೆಯೇ ಮನಸ್ಸಿನಲ್ಲಿ ಜ್ಞಾಪಿಸಿಕೊಳ್ಳಿ… ಎಷ್ಟು ಹಿತವಾಗಿರುತ್ತದಲ್ವಾ? ಅದೇ ರೀತಿ ನಿಮ್ಮ ಬಾಲ್ಯದ ಗೆಳೆಯ ನಿಮ್ಮ ಕಣ್ಣೆದುರೇ ದುರ್ಮರಣಕ್ಕೀಡಾಗಿರುವ ಘಟನೆಯೂ ಕೂಡಾ ಕಣ್ಣಂಚಿನಲ್ಲಿ ನೀರು ತರಿಸುತ್ತದೆ.
old is gold (21)
old is gold
old is gold (1)
old is gold (2)
old is gold (3)
old is gold (5)
old is gold (6)
old is gold (7)
old is gold (8)
old is gold (9)
old is gold (11)
old is gold (12)
old is gold (13)
old is gold (14)
old is gold (15)
old is gold (16)
old is gold (17)
old is gold (18)
old is gold (20)
old is gold (22)
old is gold (23)
 
ಪ್ರತಿಯೋರ್ವರಿಗೂ ಬಾಲ್ಯ ಎಂಬುದು ಅವಿಸ್ಮರಣೀಯ ಅನುಭವ. ಯಾವ ಚಿಂತೆಯೂ ಇಲ್ಲದೆ ನಮ್ಮದೇ ವಿಚಿತ್ರಲೋಕದಲ್ಲಿ ವಿಹರಿಸುತ್ತಾ ಕಾಲಕಳೆಯುತ್ತಿದ್ದ ಆ ಬಾಲ್ಯದ ದಿನಗಳು ಮತ್ತೆಂದೂ ಬರದು.
ನಿಮಗೆ ನೆಬನಪಿಗೆ ಬರಬಹುದು. ಹೆಣ್ಣುಗಂಡು ಒಟ್ಟಾಗಿ ಕಬ್ಬಡ್ಡಿ ಆಡಿದ್ದು, ಎರಡು ಕಡೆ ಕಲ್ಲುಗಳನ್ನು ಇಟ್ಟು, ಕೊತ್ತಳಿಗೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿದ್ದಾಗ ಆಗಾಗ ಚಡ್ಡಿ ಜಾರುವುದು ಹು… ಕಿಸಕ್ಕನೆ ನಗು ತರಿಸುತ್ತದಲ್ವಾ? ನಿಮ್ಮ ಬಾಲ್ಯದ ಗೆಳತಿ ಬೆನ್ನು ಹರಿದಿರುವ ಮಿಡಿ ಹಾಕಿಕೊಂಡಿರುತ್ತಾಳೆ, ಆಗ ನಾವು ಆಕೆಯ ಬೆನ್ನಿಗೆ ದಫದಫ ಗುದ್ದಿದ ನೆನಪು ಬರುತ್ತಿಲ್ವಾ? ಆಕೆ ಎಷ್ಟು ಅತ್ತಿದ್ದಳ್ವಾ? ಈಗ ಆಕೆ ತನ್ನ ಗಂಡನೊಂದಿಗೆ ಮಕ್ಕಳನ್ನು ಕಟ್ಟಿಕೊಂಡು ಹೋಗುವಾಗ ಆ ನೆನಪು ಸಣ್ಣಗೆ ಬಂದು ಹೋಗುತ್ತದೆ.
ಬೇರೆಯವರ ಮನೆಯ ಗುಜ್ಜೆ ಕದ್ದದ್ದು, ತಿಂಡಿ ಕದ್ದದ್ದು, ನೆರೆಮನೆಯ ಹುಡುಗಿಯ ಕೂದಲು ಕಟ್ ಮಾಡಿದ್ದು ಎಲ್ಲವೂ ಈಗ ನಗುವ ಸರಕುಗಳು. ಅಷ್ಟೂ ಅಲ್ಲದೆ ಯಾವುದೋ ಒಂದು ಜೋಡಿ ಗುಡ್ಡೆಯಲ್ಲಿ ಸಿಕ್ಕಿಬಿದ್ದು, `ನಾವು ಆಟ ಆಡ್ತಿದ್ದೆವು, ಈ ವಿಷ್ಯ ಯಾರಿಗೂ ಹೇಳ್ಬೇಡಿ’ ಅಂತ ಹೇಳಿ ಚಾಕಲೇಟ್ ಕೊಟ್ಟಿದ್ದು ನೆನಪಿಗೆ ಬಂದಾಗ ನಗುವೋ, ಅಸಹ್ಯವೋ ಏನೋ ಒಂದು ಭಾವ ಮನಸ್ಸಲ್ಲಿ ಬಂದುಹೋಗುತ್ತದೆ.
ಅಷ್ಟಕ್ಕೂ ನಮ್ಮಂತಹಾ ನಾಲ್ಕು ಜನ ಹುಡುಗ ಹುಡುಗಿಯರ ಪಟಲಾಂ ಕಟ್ಟಿಕೊಂಡು ಇಡೀ ಊರಿಗೆ ಸೆಡ್ಡು ಹೊಡೆಯುವಂತೆ ತಿರುಗಾಡುವುದು, ನೆರೆಮನೆಯ ಹೆಂಗಸರೆಲ್ಲಾ ನಮಗೆ ಬಯ್ಯುವುದು ನೆನೆದಾಗ ಈಗಲೂ ಆ ಹೆಂಗಸನ್ನು ನೋಡುವಾಗ ತಿಂದು ಬಿಡುವ ಸಿಟ್ಟು ಬರುತ್ತದಾ? ಖಂಡಿತಾ ಇಲ್ವಲ್ಲಾ?
ನಾವು ಹಿಂದೆ ಸಂಗ್ರಹಿಸಿಡುತ್ತಿದ್ದ ಬಳಪದ ಕಡ್ಡಿಗಳು, ಬಣ್ಣಬಣ್ಣದ ಗೋಲಿಗಳು, ಬಳೆಗಳ ಚೂರುಗಳು, ಗುಗರ್ುಂಜಿಕಾಯಿ ಈಗಲೂ ನಮ್ಮ ನೆನಪಿನ ಬುತ್ತಿಯಲ್ಲಿ ಹಾಗೆ ಬಂದು ಹೀಗೆ ಹೋಗುತ್ತದೆ. ಅಂಗಡಿಯಾಟ, ಮದುವೆಯಾಟ, ಅಪ್ಪಅಮ್ಮ ಆಟ ಆಡಿದ್ದ ನೆನಪು ಈಗ ಕೇವಲ ನೆನಪಷ್ಟೇ.
ನೇಮ, ಕೋಲ, ಬಲಿ ಉತ್ಸವ ನೋಡಿ ಬಂದು ಅದರಂತೆಯೇ ಅನುಕರಣೆ ಮಾಡಿ ಪೆಟ್ಟು ತಿಂದಿದ್ದ ನೆನಪು ಈಗಂತೂ ಅದನ್ನೇ ಹೇಳಿ ಹೇಳಿ ಜೋಕ್ ಮಾಡಬಹುದು. ಗುಡ್ಡದಲ್ಲಿ ಅಲೆದಾಡುತ್ತಾ, ಕಂಡರ್ೆಹುಳಿ, ಬೊಲರಾ ಹಣ್ಣು, ಕುಂಟಾಲ ಹಣ್ಣು ತಿನ್ನುತ್ತಿದ್ದೆವು. ಆದರೆ ಈಗಂತೂ ಅವು ಕಣ್ಣಿಗೇ ಸಿಗುವುದಿಲ್ಲ.
ಲ್ಯಾಂಪ್, ಚಿಮಿಣಿ ದೀಪ ಈಗ ಎಲ್ಲಿ ಮಾಯವಾಗಿದೆಯೋ ಗೊತ್ತಿಲ್ಲ. ಚಿಮಿಣಿ ಬುಡ್ಡಿಯ ಸೀಮೆಎಣ್ಣೆಯ ದಪ್ಪ ಹೊಗೆ, ಅದರಲ್ಲೇ ಓದಿ ಎಸ್ಎಸ್ಎಲ್ಸಿ ಪಾಸ್ ಮಾಡಿದ್ದು, ಕೆಲವೊಂದು ಹಿರಿಯರಿಗೆ ಈಗಲೂ ದೊಡ್ಡ ಸಾಧನೆಯ ವಿಷಯ. ಟ್ಯೂಬ್ಲೈಟ್ನಷ್ಟು ಬೆಳಕು ಕೊಡುವ ಪೆಟ್ರೋಮಾಕ್ಸ್ ದೀಪ ಎಲ್ಲೋಗಿದೆಯೇ? ಅದರ ಬತ್ತಿಗೆ ಕೈ ಹಾಕಿ ಹುಡಿ ಮಾಡಿ ಪೆಂಗಣ್ಣನಂತೆ ಅಟ್ಟದಲ್ಲಿ ಕೂತವರಿಗೆ ಗೊತ್ತು ಪೆಟ್ರೋಮ್ಯಾಕ್ಸ್ ಲೈಟಿನ ಮನ ಏನೆಂದು?
ಕುಟ್ಟಿದೊಣ್ಣೆ ಆಟವಾಡಿ ಗಿಳಿ ಹೊಡೆದಿದ್ದು, ಮರಾಮುರಿ ಆಟದದಲ್ಲಿ ಹುಡುಗಿಯರನ್ನು ಅಟ್ಟಿಸಿ ಹೊಡೆದಿದ್ದು ಎಲ್ಲವೂ ಈಗ ನೆನಷ್ಟೆ. ಈಗಿನ ಹೈಫೈ ಮಕ್ಕಳಿಗೆ ಇದೆಲ್ಲಾ ಗೊತ್ತಿಲ್ಲ, ಕಂಪ್ಯೂಟರ್ ಮೊಬೈಲ್ ಮೂಲಕ ಆಟವಾಡ್ತಾ, ರಿಮೋಟ್ ಕಂಟ್ರೋಲ್ನಿಂದ ಕಾರ್ ವಿಮಾನ ಬಿಡುವ ಮಕ್ಕಳು ನಿಜವಾಗಿಯೂ ನಮ್ಮಂತಹಾ ಬಾಲ್ಯದ ಸುಖ ಜೀವನದಿಂದ ಖಂಡಿತಾ ವಂಚಿತರು.
ಓ ಬಾಲ್ಯವೇ ಮತ್ತೆ ಮತ್ತೆ ಕಾಡುತ್ತಿರು…

ಯುಗಾದಿಗೆ ರಂಗೇರುವ ಆಟಗಳು


-ಅರುಣ್ ಜೋಳದಕೂಡ್ಲಿಗಿ.


 ಗ್ರಾಮೀಣ ಭಾಗದ ಯುಗಾದಿಯನ್ನು ನೆನಪಿಸಿಕೊಂಡಾಗ ಅದರ ಮೈಗೆ ಕೆಲವಾದರೂ ಜನಪದ ಆಟಗಳು ಅಂಟಿಕೊಳ್ಳುತ್ತವೆ. ಹಾಗೆ ಅಂಟಿಕೊಂಡ ಆಟಗಳನ್ನು ಬಿಡಿಸಿ ನೋಡತೊಡಗಿದರೆ ಆ ಆಟಗಳ ಝಲಕ್ಕು ರೋಮಾಂಚನಗೊಳಿಸುತ್ತದೆ. ಈಗಲೂ ಗ್ರಾಮೀಣ ಭಾಗದ ಯುಗಾದಿಗೆ ಅಂತಹ ಆಟಗಳು ರಂಗೇರುತ್ತವೆ. ದಶಕದ ಹಿಂದೆ ಸರಿದರೆ ಈ ಅಬ್ಬರ ಕೆಲ ಪ್ರದೇಶಗಳಲ್ಲಿ ಮಂಕಾದರೂ, ಮತ್ತೆ ಕೆಲವು ಪ್ರದೇಶಗಳಲ್ಲಿ ಹೊಸ ಚಲನೆ ಪಡೆದಿವೆ. ಅಂತಹ ಆಟಗಳ ಮೈದಡವಿ ಮಾತನಾಡಿಸಿದರೆ, ಅವುಗಳು ತಮ್ಮ ಇರುವಿಕೆಯನ್ನು ಪಿಸುಮಾತಲ್ಲಿ ಹೇಳಬಲ್ಲವು. ನಾವು ಕಿವಿತೆರೆದು ಕೇಳಬೇಕಷ್ಟೆ.

 ಪ್ರತಿ ಹಬ್ಬಗಳಲ್ಲಿ ಮೈದಳೆವ ಜನಪದ ಆಟಗಳು ಗ್ರಾಮವೊಂದು ತನ್ನ ಮನರಂಜನೆಯನ್ನು ತಾನೇ ಸೃಷ್ಟಿಸಿಕೊಂಡಿದ್ದರ ಫಲ. ಆಗ ಗ್ರಾಮಗಳು ಸ್ವಾವಲಂಬಿಗಳಾಗಿದ್ದವು. ಹಾಗಾಗಿ ಮನರಂಜನೆ ಕೂಡ ಹಳ್ಳಿಯೊಳಗೇ ರೂಪುಗೊಳ್ಳುತ್ತಿತ್ತು. ಮನರಂಜನೆ ವ್ಯಾಪಾರಿ ಸರಕಾಗಿ ಕೊಳ್ಳಬೇಕಾಗಿರುವ ಈ ಸಂದರ್ಭದಲ್ಲಿ ಗ್ರಾಮಗಳ ಹೊಸ ಚೈತನ್ಯದ ಸೆಲೆಯಾಗಿದ್ದ ಜನಪದ ಆಟಗಳತ್ತ ಕಣ್ತೆರೆದು ನೋಡಬೇಕಾಗಿದೆ. ಪ್ರತೀ ಊರಿನ ಹಬ್ಬಗಳಲ್ಲೂ ಅಲ್ಲಿಯದೇ ಪ್ರಾದೇಶಿಕ ಆಟಗಳು ಜೀವಂತಿಕೆ ಪಡೆಯುತ್ತಿದ್ದವು. ಕೆಲವು ಆಟಗಳು ಆಯಾ ಹಬ್ಬಗಳಿಗೆ ವಿಶೇಷವಾದರೆ ಉಳಿದ ಕೆಲವು ಎಲ್ಲಾ ಹಬ್ಬಗಳಲ್ಲೂ ಹೊಸ ಉತ್ಸಾಹವನ್ನು ತುಂಬಿಕೊಳ್ಳುತ್ತಿದ್ದವು.

 ಉತ್ತರ ಕರ್ನಾಟಕದ ಗದಗ ಜಿಲ್ಲೆ ಕುರ್ತಕೋಟಿ ಮೊದಲಾದ ಪ್ರದೇಶಗಳಲ್ಲಿ ಯುಗಾದಿ ಪಾಡ್ಯಕ್ಕೆ ಸೂರ್ಯೋದಯಕ್ಕೂ ಮುಂಚೆ ರೈತರು ಹೊಲದಲ್ಲಿರುತ್ತಾರೆ. ಸೂರ್ಯ ಕಂಡೊಡನೆ ಏಕಕಾಲಕ್ಕೆ ಗಳೇವು ಹೂಡುತ್ತಾರೆ, ಹೊಲಕ್ಕೆ ಹೋಗುವಾಗ ರತ್ನಪಕ್ಷಿ ಕಂಡರೆ ಒಳ್ಳೆ ಬೆಳೆ ಎಂದು ನಂಬುತ್ತಾರೆ ಎಂದು ಈ ಭಾಗದ ಕರಿಯಪ್ಪ ಕೊರವಳ್ಳಿ ನೆನೆಯುತ್ತಾರೆ. ಈ ದೃಶ್ಯ ಉತ್ತರ ಕರ್ನಾಟಕ ಮತ್ತು ಹೈದರಾಬಾದ ಕರ್ನಾಟಕದ ಬಹುಪಾಲು ಹಳ್ಳಿಗಳಲ್ಲಿ ಯುಗಾದಿಗೆ ಕಾಣುತ್ತದೆ. ರೈತ ಸಮುದಾಯ ಕೃಷಿಯನ್ನು ಆರಂಭಿಸುವ ದಿನವಾಗಿ ಯುಗಾದಿ ಉತ್ಸಾಹ ತುಂಬುವ ಹಬ್ಬವಾಗಿದೆ. ಹೀಗೆ ನೇಗಿಲ ಹೂಡುವ ಖುಷಿಯ ಭಾಗವಾಗಿ ಜನಪದ ಆಟಗಳು ಚಿಗುರೊಡೆಯುತ್ತವೆ.
 ಯುಗಾದಿ ಬೇಸಿಗೆಯಲ್ಲಿ ಬರುವ ಕಾರಣ ಗ್ರಾಮೀಣರಿಗೆ ಕೊಂಚ ಬಿಡುವಿನ ಕಾಲವೂ ಹೌದು. ಈ ಬಿಡುವಿನ ಕಾಲದಲ್ಲಿ ಜನಪದ ಆಟಗಳು ತಮ್ಮ ಪಾದವೂರುತ್ತವೆ. ಹಾಗಾಗಿ ಚಿನ್ನೆಕೋಲು, ಗೋಲಿ, ಕಾಲ್ಚೆಂಡು, ಹುಲಿಮನೆಯಾಟ, ಬುಗುರಿ ಮುಂತಾಟ ಆಟಗಳೆಲ್ಲಾ ಜೀವತಳೆದು ಚಲನೆಗೊಳ್ಳುತ್ತವೆ. ಹೀಗೆ ಚಲನೆಗೊಳ್ಳದ ಎಷ್ಟೋ ಆಟಗಳು ಹೀಗಿದ್ದವು ಎನ್ನುವಲ್ಲಿಗೆ ಮುಟ್ಟಿವೆ. ಈಗಲೂ ಕೆಲವು ಆಟಗಳು ಎಂದಿನ ಆಕರ್ಷಣೆಯನ್ನು ಉಳಿಸಿಕೊಂಡು ಪುಟಿದೇಳುವ ಉತ್ಸಾಹವನ್ನು ತೋರುತ್ತವೆ. ಅಂತಹ ಕೆಲವು ಆಟಗಳ ಜತೆ


ನೀರುಗ್ಗೋ ಆಟ

 ಕೆಲವು ಕಡೆ ಗ್ರಾಮೀಣ ಭಾಗದಲ್ಲಿ ಹೋಳಿ ಹಬ್ಬವನ್ನು ಆಚರಿಸುವುದಿಲ್ಲ. ಈ ಹಬ್ಬದ ಒಂದು ಎಳೆಯನ್ನು ಜನರು ಯುಗಾದಿ ಹಬ್ಬದಲ್ಲಿ ಬೆಸೆದಂತಿದೆ. ಅದೆ ‘ನೀರುಗ್ಗೋ ಆಟ’. ಇದು ಹೋಳಿಯನ್ನು ಹೋಲುತ್ತದೆ. ಯುಗಾದಿಯ ಮೂರನೆ ದಿನ ಚಂದ್ರನನ್ನು ನೋಡಿದ ತಕ್ಷಣ ನೀರುಗ್ಗೋ ಆಟ ಶುರುವಾಗುತ್ತದೆ. ಇದು ವಿಶೇಷವಾಗಿ ಯುವಕ ಯುವತಿಯರಲ್ಲಿ ರಂಗೇರುವ ಆಟ. ಅತ್ತೆ ಅಳಿಯನಿಗೆ, ಮಾವ ಸೊಸೆಗೆ, ಸೊಸೆ ಅತ್ತೆ ಮಾವಂದರಿಗೆ, ಹೀಗೆ ಬೀಗರ ಸಂಬಂಧದಲ್ಲಿ ಈ ನೀರುಗ್ಗೋ ಆಟ ಚಾಲ್ತಿಗೆ ಬರುತ್ತದೆ. ಚಂದ್ರ ಕಂಡೊಡನೆ ಊರೆಂಬ ಊರೇ ನೀರಾಟದಲ್ಲಿ ಮುಳುಗುತ್ತದೆ. ಊರು ಮಳೆ ನಿಂತ ಮೇಲೆ ಒದ್ದೆಯಾದಂತೆ ಕಾಣುತ್ತದೆ. ಈಗೀಗ ನೀರಿನ ಜತೆ ಬಣ್ಣವೂ ಸೇರಿ ಇದು ಹೋಳಿಯನ್ನು ಹೋಲುವಂತಿದೆ.

ಸರಮನಿ ಆಟ

 ಹೈದರಾಬಾದ ಕರ್ನಾಟಕದ ಬಹುಭಾಗಗಳಲ್ಲಿ ಈಗಲೂ ಯುಗಾದಿಯಲ್ಲಿ ರಂಗೇರುವ ಆಟಗಳಲ್ಲಿ ಸರಮನಿ ಆಟವೂ ಒಂದು. ಈ ಆಟಕ್ಕೆ ಉಪ್ಪಿನ ಮನೆ ಆಟ ಎನ್ನುತ್ತಾರೆ. ಇದು ಮಹಿಳೆಯರ ಕುಂಟೋಬಿಲ್ಲೆಯನ್ನು ಹೋಲುತ್ತದೆ. ಚೌಕಾಕಾರದ ಉದ್ದ ಗೆರೆ ಹಾಕಿ ಅದರೊಳಗೆ ೬ ಮನೆಗಳನ್ನು ಮಾಡಿ ಅದರಲ್ಲಿ ಹಿಟ್ಟು ಹಾಕುತ್ತಾರೆ. ಅದರಲ್ಲಿ ಆರು ಜನ ರಕ್ಷಕ ತಂಡವಿರುತ್ತದೆ. ಹೊರಗಡೆ ಆಕ್ರಮಣದ ತಂಡವಾಗಿ ಆರು ಜನರಿರುತ್ತಾರೆ. ಇದರಲ್ಲಿ ಒಬ್ಬ ಉಪ್ಪಿಡಿದವ ೨೦-೨೫ ಅಡಿ ಉದ್ದದ ಚೌಕದ ಮನೆಯಲ್ಲಿ ಒಳಗಿನವರನ್ನು ತಪ್ಪಿಸಿ ದಾಟಬೇಕಾಗುತ್ತದೆ. ಹೀಗೆ ದಾಟಲು ಒಂದು ಗಂಟೆ ಬೇಕಾಗುತ್ತದೆ. ಉಪ್ಪಿಡಿದಾತ ಮೆನೆಯೊಳಗಿನ ಆರು ಜನರ ಕೈಗೆ ಸಿಕ್ಕರೆ ಆತ ಔಟಾದಂತೆ. ನಂತರ ಹೊರಗಿನ ಐದು ಜನರಲ್ಲಿ ಒಬ್ಬರು ಉಪ್ಪಿಡಿದು ಆಟ ಶುರು ಮಾಡುತ್ತಾರೆ. ಹೀಗೆ ಆರು ಜನರು ಔಟಾದರೆ, ಮನೆಯೊಳಗಿನವರು ಗೆದ್ದಂತೆ. ಮನೆಯೊಳಗಿನವರ ಕೈತಪ್ಪಿಸಿ ಆರು ಮನೆಗಳನ್ನು ಆರು ಜನರೂ ದಾಟಿದರೆ ಆಕ್ರಮಣ ತಂಡ ಗೆದ್ದಂತೆ. ಇದೊಂದು ರೀತಿ ಗೆರಿಲ್ಲ ಯುದ್ದ ಮಾದರಿಯ ಅನುಕರಣೆಯಂತೆ ಕಾಣುತ್ತದೆ. ಈ ಆಟ ರೋಮಾಂಚನಕಾರಿಯಾಗಿರುತ್ತದೆ. ನೋಡುಗರು ಕೇಕೆ, ಶಿಳ್ಳೆಯ ಮೂಲಕ ಆಟಗಾರರನ್ನು ಹುರಿದುಂಬಿಸುತ್ತಾರೆ.

ಗುಂಡೆತ್ತೋ ಕಸರತ್ತು

 ಊರ ಮುಂದಣ ಚಾವಡಿಯ ಮುಂದೆಯೋ, ಗ್ರಾಮ ದೇವತೆಯ ಗುಡಿಯ ಮುಂದೆಯೋ ಬೇರೆ ಬೇರೆ ಸೈಜಿನ ಮೂರ‍್ನಾಲ್ಕು ಗುಂಡುಗಳು ಬಿದ್ದಿರುತ್ತವೆ. ಇವು ವರ್ಷವಿಡೀ ಚಳಿ ಮಳೆ ಬಿಸಿಲಿಗೆ ಮೈಯೊಡ್ಡಿ ಸತ್ತಂತಿದ್ದರೂ, ಯುಗಾದಿ ಸಮೀಪಿಸುತ್ತಿದ್ದಂತೆ ಮೈಕೊಡಲಿ ಮೇಲೇಳುತ್ತವೆ. ಆಯಾ ಗುಂಡಿಗೆ ಒಂದೊಂದು ಹೆಸರಿರುತ್ತದೆ. ಆ ಹೆಸರಿನ ಹಿಂದೊಂದು ಕಥೆಯೂ ಇರುತ್ತದೆ. ಬಾರಿಕರ ಮೈಲಪ್ಪ ಒಂದೇ ಒಗೆತಕ್ಕೆ ದೊಡ್ಡ ಗುಂಡನ್ನು ಲೀಲಾಜಾಲವಾಗಿ ಎತ್ತಿದ್ದನಂತೆ. ಹಾಗಾಗಿ ಅದಕ್ಕೆ ಮೈಲಪ್ಪನ ಗುಂಡೆಂದು ಹೆಸರು ನಿಂತಿದೆ. ಈ ಗುಂಡನ್ನು ಮತ್ತೆ ಯಾರೂ ಎತ್ತೆಸೆವ ಸಾಹಸ ಮಾಡಿಲ್ಲ. ಗುಂಡು ಎತ್ತೋ ಸ್ಪರ್ಧೆಯ ಆಟ ಯುಗಾದಿಗೆ ನಡೆಯುತ್ತದೆ. ಹೀಗಾಗಿ ವಯಸ್ಸಿನ ಹುಡುಗರು ಬೆಳಗಿನ ಜಾವ ಕಲ್ಲೆತ್ತುವ ಸಾಹಸ ಶುರು ಮಾಡುತ್ತಾರೆ. ಯುಗಾದಿಗೆ ಬಹಿರಂಗ ಗುಂಡೆತ್ತಾಟ ಇರುತ್ತದೆ. ಗ್ರಾಮೀಣ ಭಾಗದ ಯುವಕರು ಯುವತಿಯರನ್ನು ಸೆಳೆಯಲು ಈ ಕಸರತ್ತು ಮಹತ್ವ ಪಡೆದಿದೆ. ಒಮ್ಮೆಮ್ಮೆ ಮಾವ ಅಳಿಯ ಆಗೋನಿಗೆ ಈ ಗುಂಡೆತ್ತು, ಮಗಳನ್ನ ಕೊಟ್ಟು ಮದ್ವೆ ಮಾಡ್ತೀನಿ ಎನ್ನುವಂತಹ ಸವಾಲು ಪಾಟಿ ಸವಾಲುಗಳೂ ಈ ಸ್ಪರ್ಧೆಯಲ್ಲಿರುತ್ತವೆ.

ಕುಸ್ತಿ

 ಯುಗಾದಿಗೆ ಉತ್ತರ ಕರ್ನಾಟಕದ ಕೆಲವೆಡೆ ಕುಸ್ತಿ ಪಂದ್ಯಗಳು ನಡೆಯುತ್ತವೆ. ಇದು ಕೂಡ ಗುಂಡೆತ್ತುವ ಕಸರತ್ತಿನ ಆಟಗಳಂತೆ ಶಕ್ತಿ ಪ್ರದರ್ಶನದ ಆಟವಾಗಿದೆ. ಕುಸ್ತಿ ನಡೆವ ಕಡೆಯಲ್ಲೆಲ್ಲಾ ಯುಗಾದಿಗೆ ಒಂದು ತಿಂಗಳು ಮೊದಲು ಗರಡಿ ಮನೆಗಳು ರೀಚಾರ್ಜ್ ಆಗುತ್ತವೆ. ಬೆಳಗಿನ ಜಾವ ಗರಡಿ ಮನೆಗಳಲ್ಲಿ ಸಾಮು ತೆಗೆಯುವ ಕಸರತ್ತುಗಳು ಜೀವಂತವಾಗುತ್ತವೆ. ಹಳೆಯ ಪೈಲ್ವಾನರು ಹೊಸ ಹುಡುಗರನ್ನು ಹುರುಪಿನಿಂದ ತಯಾರು ಮಾಡುತ್ತಾರೆ. ಯುಗಾದಿ ಹಬ್ಬದ ದಿನಗಳಲ್ಲಿ ಸಾರ್ವಜನಿಕ ಕುಸ್ತಿಯನ್ನು ಏರ್ಪಡಿಸಲಾಗುತ್ತದೆ. ಗೆದ್ದವರ ಕೈಗೆ ಕಡಗ ತೊಡಿಸಲಾಗುತ್ತದೆ. ಇದು ಕೂಡ ಯುವಕರ ಚಿಮ್ಮುವ ಉತ್ಸಾಹಕ್ಕೆ ನೀರೆರೆವ ಸ್ಪರ್ಧೆಯಾಗಿದೆ. ಈಚಿನ ದಿನಗಳಲ್ಲಿ ಯುಗಾದಿಗೂ ಕುಸ್ತಿ ಚೂರು ಮಂಕಾದಂತೆ ಕಾಣುತ್ತದೆ.

ಕುರಿ ಕೋಳಿ ಕಾದಾಟ

 ಯುಗಾದಿಗೆ ಮನುಷ್ಯರಷ್ಟೇ ಆಟವಾಡುವುದಿಲ್ಲ. ಕುರಿ ಕೋಳಿಗಳೂ ಆಟಕ್ಕೆ ಸಜ್ಜಾಗುತ್ತವೆ. ಹುಂಜಗಳು ಎದುರಾಳಿ ಹುಂಜವನ್ನು ಕುಕ್ಕಿ ಕೊಂದೇನು ಎಂದು ಬೀಗಿದರೆ, ಟಗರು ಕೊಂಬನ್ನು ಮೀಸೆ ತಿರುವಿದಂತೆ ತಿರುವಿಕೊಂಡು ಎದುರಾಳಿಗೆ ಗುಟುರು ಹಾಕಿ ತೊನೆಯುತ್ತದೆ. ಈ ಕೋಳಿ ಕುರಿ ಸಾಕುದಾರರು ಅವುಗಳಷ್ಟೇ ಉತ್ಸಾಹದಲ್ಲಿ ಕಾದಾಟಕ್ಕೆ ಅವುಗಳನ್ನು ಅಣಿಗೊಳಿಸುತ್ತಾರೆ. ಇದರಲ್ಲಿಯೂ ಚಾಂಪಿಯನ್ ಗಳಿರುತ್ತವೆ. ಪ್ರತಿ ವರ್ಷವೂ ಆಖಾಡದಲ್ಲಿ ಹೊಸ ಹೊಸ ಪ್ರತಿಭೆಗಳು ಸಜ್ಜಾಗುತ್ತವೆ. ಹೀಗೆ ಸಜ್ಜುಗೊಳಿಸುವ ಮಾಲಿಕರ ಕಥನಗಳೇ ಕುತೂಹಲಕರ ಸಂಗತಿ. ಕುರಿ ಕೋಳಿ ಕಾದಾಟದ ಆಟಗಳು ಇಡೀ ಊರನ್ನು ರೋಮಾಂಚನಗೊಳಿಸುತ್ತವೆ.

ಬಚ್ಚಿಟ್ಟದ್ದು ಹುಡುಕೊ ಹಲಗೆಯಾಟ

 ನಾನು ಬಾಲ್ಯದಲ್ಲಿ ಹೆಚ್ಚು ಕುತೂಹಲಭರಿತವಾಗಿ ನೋಡುತ್ತಿದ್ದ ಆಟವಿದು. ಒಂದೆಡೆ ಹಣ ಅಥವಾ ಇನ್ನಾವುದೋ ವಸ್ತುವನ್ನು ಬಚ್ಚಿಡಲಾಗುತ್ತದೆ. ಹೀಗೆ ಬಚ್ಚಟ್ಟವರು ಹಲಗೆ ಬಾರಿಸುವವನ ಕಿವಿಯಲ್ಲಿ ಆ ವಸ್ತು ಎಲ್ಲಿದೆ ಎಂದು ಹೇಳುತ್ತಾರೆ. ನಂತರ ಹುಡುಕುವವನ ಕಣ್ಣು ಕಟ್ಟಿ ಗಿಮ್ಮನೆ ತಿರುಗಿಸಿ ಬಿಡುತ್ತಾರೆ. ಆಗ ಹಲಗೆಯವ ತಮಟೆ ನಾದದಲ್ಲಿ ಬಚ್ಚಿಟ್ಟ ವಸ್ತುವಿನ ದಿಕ್ಕು ತೋರಿಸುತ್ತಾನೆ. ಹೀಗೆ ಹಲಗೆ ತೋರುವ ದಿಕ್ಕನ್ನು ಹಿಂಬಾಲಿಸಿ ನಡೆಯುತ್ತಾ ಕೊನೆಗೆ ಬಚ್ಚಿಟ್ಟ ವಸ್ತುವನ್ನು ಹುಡುಕುತ್ತಾರೆ. ಹೀಗೆ ವಸ್ತು ಬಚ್ಚಿಡುವ ಜಾಗಗಳು ನಗೆ ಹುಕ್ಕಿಸುತ್ತವೆ. ಮನೆ ಮೇಲೆಯೋ, ಮರದ ಪೊಟರೆಯಲ್ಲೋ, ಮನೆ ಒಳಗಿನ ಸೋರೆಯಲ್ಲೋ, ಅಜ್ಜಿಯರ ಸೀರೆ ಸೆರಗಿನಲ್ಲಿ ಗಂಟು ಹಾಕುವುದು ಮುಂತಾಗಿ ಮಾಡುತ್ತಾರೆ. ಇಲ್ಲೊಂದು ವಿಶೇಷವಿದೆ. ದಲಿತನೊಬ್ಬ ತೋರುವ ದಾರಿಯಲ್ಲಿ ಮೇಲುಜಾತಿಯ ಆಟಗಾರರು ನಡೆದಾಡುತ್ತಿರುತ್ತಾರೆ. ಇಡೀ ಆಟವನ್ನು ತಮಟೆ ನಿರ್ದೇಶಿಸುತ್ತಿರುತ್ತದೆ. ವರ್ಷವಿಡೀ ಮೇಲುಜಾತಿಗಳ ಹಿಡಿತದಲ್ಲಿದ್ದು ಕೀಳಿರಿಮೆಯಲ್ಲಿರುವ ಜಾತಿಯೊಂದು ತಾತ್ಕಾಲಿಕವಾಗಿ ಈ ಕಟ್ಟನ್ನು ಮೀರುವಿಕೆ ಈ ಆಟದ ವಿಶಿಷ್ಟತೆಯಾಗಿದೆ.

ಹೊನ್ನೆತ್ತು ಹಿಡಿಯುವ ಆಟ

 ಚೆನ್ನಾಗಿ ಮೇಯ್ದು ಮೈತುಂಬಿಕೊಂಡ ಎತ್ತನ್ನು ತೊಳೆದು ಶೃಗರಿಸಿ, ಕತ್ತುರಿ, ಮೂಗುದಾರ ತೆಗೆದು ಊರ ರಂಗದ ಮುಂದೆ ನಿಲ್ಲಿಸುತ್ತಾರೆ. ಅದರ ಕೊಂಬಿಗೆ ಬಿಳಿಯ ಬಟ್ಟೆಯಲ್ಲಿ ಹಣದ ನೋಟನ್ನು ಸುತ್ತಿ ಕಟ್ಟುತ್ತಾರೆ. ಅದು ತೋಚಿದ ಕಡೆ ಓಡುವಂತೆ ಬೆದರಿಸುತ್ತಾರೆ. ಹೀಗೆ ಓಡುವ ಎತ್ತನ್ನು ಹಿಡಿದು ನಿಲ್ಲಿಸುವ ತಾಕತ್ತಿದ್ದವನಿಗೆ ಹಣ ಸೇರುತ್ತದೆ. ವರ್ಷವಿಡೀ ದನಗಳೊಂದಿಗೆ ಹೊಡೆದಾಡುವ ರೈತನಿಗೆ ಹಗ್ಗ ಮೂಗುದಾರಗಳಿಲ್ಲದ ಎತ್ತನ್ನು ಹಿಡಿದು ವಶಕ್ಕೆ ತೆಗೆದುಕೊಳ್ಳುವ ನೈಪುಣ್ಯ ಸಾಧನೆಯ ಸಂಕೇತವಾಗಿ ಈ ಆಟ ಕಾಣಿಸಿಕೊಳ್ಳುತ್ತದೆ. ಇದು ಕೃಷಿ ಆರಂಭಿಸುವಾಗ ಎತ್ತುಗಳ ಜತೆ ಒಂದು ಬಗೆಯ ಸಂಬಂಧವನ್ನು ಬೆಸೆವ ಆಟವಾಗಿಯೂ ಕಾಣುತ್ತದೆ.

ಕೋಲಾಟ
 ಮನೆಯ ಮೂಲೆಯಲ್ಲಿದ್ದ ಕೋಲಾಟದ ಕೋಲುಗಳಿಗೆ ಯುಗಾದಿಗೊಮ್ಮೆ ಜೀವ ಬರುತ್ತದೆ. ಅವು ಒಂದಕ್ಕೊಂದು ಬಡಿದುಕೊಂಡು ಸದ್ದು ಮಾಡುತ್ತವೆ. ಹೊದ್ದು ಮಲಗಿದಂತಿದ್ದ ಕೋಲಾಟದ ಪದಗಳು ಆಟಗಾರರ ಗುನಗಿನಲ್ಲಿ ಎಚ್ಚರಗೊಳ್ಳುತ್ತವೆ. ಹೀಗೆ ಅರೆಬರೆ ಮರೆತ ಹಾಡುಗಳನ್ನೂ, ಹೊಂದಿಕೆ ತಪ್ಪಿದ ಹೆಜ್ಜೆ ಮತ್ತು ಗತ್ತುಗಳನ್ನೂ ಹೊಂದಿಸಿಕೊಳ್ಳುವಲ್ಲಿ ಕೋಲಾಟದ ಹುಡುಗರು ಚುರುಕಾಗುತ್ತಾರೆ. ಯುಗಾದಿ ದಿನದಂದು ಹೊಸ ಉತ್ಸಾಹದಲ್ಲಿ ಕೋಲಾಟ ಆಡಲು ಸಜ್ಜಾಗುತ್ತಾರೆ.

ಕಬ್ಬಡ್ಡಿ
 ಯುಗಾದಿ ಹೊತ್ತಿಗೆ ಎಚ್ಚರಗೊಳ್ಳುವ ಆಟಗಳಲ್ಲಿ ಕಬ್ಬಡ್ಡಿ ಆಟವೂ ಒಂದು. ಈ ಆಟ ಶಾಲಾ ಕ್ರೀಡೆಯೂ ಆಗಿರುವುದರಿಂದ ಇದರಲ್ಲಿ ಗ್ರಾಮೀಣ ಭಾಗದ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಇದರಿಂದಾಗಿಯೂ ಕಬ್ಬಡ್ಡಿ ಆಟಕ್ಕೆ ಹೊಸ ಕಳೆ ಬಂದಿದೆ. ಕ್ರಿಕೆಟ್ ಟೂರ್ನಿಗಳಂತೆ ಕೆಲವೆಡೆ ಕಬ್ಬಡ್ಡಿ ಟೂರ್ನಿಗಳನ್ನೂ ನಡೆಸಲಾಗುತ್ತದೆ. ಇದರಿಂದಾಗಿ ಒಂದು ಊರಿಗೆ ಸುತ್ತಮುತ್ತಣ ಹತ್ತಾರು ಊರುಗಳ ಕಬ್ಬಡ್ಡಿ ತಂಡಗಳು ಬರುತ್ತವೆ. ಪ್ರತಿ ಊರಿನ ತಂಡವೂ ಗೆದ್ದು ತಮ್ಮ ಊರಿನ ಪ್ರತಿಷ್ಠೆಯನ್ನು ಎತ್ತಿ ಹಿಡಿವ ಉತ್ಸಾಹದಲ್ಲಿರುತ್ತಾರೆ. ಈ ಅತಿ ಉತ್ಸಾಹ ಕೆಲವೊಮ್ಮೆ ಗಲಭೆಗಳಿಗೂ ಕಾರಣವಾಗಿ ಟೂರ್ನಿಗಳು ಅರ್ಧಕ್ಕೆ ನಿಂತದ್ದೂ ಇದೆ.

 ಹೀಗೆ ಮೇಲೆ ಹೇಳಿದ್ದಕ್ಕಿಂತಲೂ ಭಿನ್ನವಾದ ಆಟಗಳು ಆಯಾ ಪ್ರಾದೇಶಿಕ ವಿಶಿಷ್ಟತೆಯೊಂದಿಗೆ ಯುಗಾದಿಗೆ ಜೀವತಳೆಯುತ್ತವೆ. ಇಂತಹ ಆಟಗಳು ಯುಗಾದಿಗೆ ಹೊಸ ಲವಲವಿಕೆಯನ್ನು ತುಂಬಿ ಹಬ್ಬದ ಕಳೆಯನ್ನು ಹೆಚ್ಚಿಸುತ್ತವೆ. ಈಗ ಬಹುಪಾಲು ರೈತ ಸಮುದಾಯದ ಯುವಕರು ಕೆಲಸ ಅರಸಿ ನಗರ ಮಹಾನಗರಗಳಿಗೆ ವಲಸೆ ಹೋಗುವುದಿದೆ. ಹೀಗೆ ವಲಸೆಯಿಂದ ಹಳ್ಳಿಗೆ ಮರಳಿದ ಕೆಲವು ಯುವಕರಲ್ಲಿ ಸಹಜವಾದ ಗ್ರಾಮೀಣ ಮುಗ್ಧತೆ ಕಡಿಮೆಯಾಗಿ ಆಟಗಳಲ್ಲಿ ಪಾಲ್ಗೊಳ್ಳದಿರುವುದಿದೆ. ಮತ್ತೆ ಕೆಲ ಯುವಕರು ಉತ್ಸಾಹದಿಂದ ಆಟಗಳಲ್ಲಿ ಪಾಲ್ಗೊಳ್ಳುವುದೂ ಇದೆ. ಇದು ಈ ಯುವಕರು ನಗರಗಳಲ್ಲಿ ಯಾವ ಕೆಲಸವನ್ನು ಮಾಡುತ್ತಾರೆ ಎನ್ನುವುದನ್ನು ಅವಲಂಬಿಸಿ ನಿರ್ಧಾರವಾದಂತೆ ಕಾಣುತ್ತದೆ. ಅಂತೆಯೇ ಆಧುನಿಕತೆಯ ಭಾಗವಾಗಿ ಮುಂದುವರಿದ ಕೆಲವು ಆಟಗಳು ಈಗಲೂ ಉಳಿದಿವೆ. ಕುಸ್ತಿ, ಗುಂಡೆತ್ತುವ ಶಕ್ತಿ ಪ್ರದರ್ಶನದ ಆಟಗಳು ಜಿಮ್ನಾಸ್ಟಿಕ್ ಆಟಗಳಾಗಿ ಮುಂದುವರಿದಿವೆ. ಕಬ್ಬಡ್ಡಿ ಶಾಲಾ ಕ್ರೀಡೆಯಾದ್ದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದೆ. ಹೀಗೆ ಜನಪದ ಆಟಗಳಿಗೆ ಆಧುನಿಕ ದಾರಿಗಳು ತೆರೆದುಕೊಂಡರೆ ಅವುಗಳೂ ಹೊಸ ನೆಲೆಗಟ್ಟನ್ನು ಪಡೆದುಕೊಳ್ಳಬಲ್ಲವು.

 ಚಿತ್ರಗಳು: ನಿರಂಜನ್ \



ಶನಿವಾರ, ಏಪ್ರಿಲ್ 11, 2015

ಮಾನವೀಯತೆಯ ಮಹಾ ನದಿ


ಕಿ.ರಂ.ನಾಗರಾಜ ಅವರೊಂದಿಗೆ ಮೊಗಳ್ಳಿ ಗಣೇಶ್
-ಮೊಗಳ್ಳಿ ಗಣೇಶ್
ಸೌಜನ್ಯ: ಪ್ರಜಾವಾಣಿ
ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ನನ್ನ ಪಾಲಿಗೆ ಒಂದು ನದಿ ಇದ್ದಹಾಗೆ. ಈ ನದಿಯು ಎಲ್ಲೆಲ್ಲಿ ಮಾನವತೆಯ ದಾಹ ಇದೆಯೋ ಅಲ್ಲೆಲ್ಲ ಹರಿದಿದೆ. ಎಲ್ಲರ ದಾಹ, ಬಳಲಿಕೆಗೂ ಈ ನದಿಯ ಆರ್ದ್ರತೆ ತಂಪು ನೀಡಿದೆ. ಎಂತಹುದೇ ಅಮಾನವೀಯ ಅಪಮಾನಗಳನ್ನು, ಗಾಯಗಳನ್ನು, ಸಂಕಟಗಳನ್ನು ಈ ನದಿಯಲ್ಲಿ ಯಾರು ಬೇಕಾದರೂ ತೊಳೆದುಕೊಳ್ಳಬಹುದು. ಜಾತಿಯ ವಿಷ ಸದಾ ಈ ನದಿಯಲ್ಲಿ ಕರಗುತ್ತ ಮಾನವ ಸಂಬಂಧಗಳು ವಾಸಿಯಾಗುತ್ತಲೇ ಇವೆ.
ಹೀಗಾಗಿ ಅಂಬೇಡ್ಕರ್ ಎಂಬ ನದಿಯ ಬಗ್ಗೆ ನನಗೆ ಅಪಾರ ಗೌರವ, ಹಾಗೆಯೇ ಹೆಮ್ಮೆ. ಅಂಬೇಡ್ಕರ್ ಎಂಬ ಮಾನವತೆಯ ನದಿಯಿಂದಾಗಿಯೇ ದಲಿತ ಕೇರಿಗಳು ಜೀವಂತವಾದದ್ದು. ಯಾರು ಎಷ್ಟೇ ಬಹಿಷ್ಕರಿಸಿದರೂ, ಯಾರು ಎಷ್ಟೇ ಕೀಳಾಗಿ ಕಂಡರೂ, ಯಾರು ಎಷ್ಟೇ ಹಿಂಸಿಸಿದರೂ, ಕೊಂದರೂ, ಸದೆಬಡಿಯಲು ಬಂದರೂ ಈ ನದಿ ನಮ್ಮನ್ನು ಕಾಪಾಡಿದೆ. ಎಂತಹ ಕಟುಕರೇ ಆದರೂ ಒಮ್ಮೆ ಈ ನದಿಯ ನೀರನ್ನು ಧ್ಯಾನದಲ್ಲಿ ಕುಡಿದಿದ್ದೇ ಆದರೆ ಅವರು ಯಾವತ್ತಿಗೂ ಈ ನದಿಯ ಸಂಬಂಧವನ್ನು ಕಡಿದುಕೊಳ್ಳಲಾರದು.
ಅಂಬೇಡ್ಕರ್ ಎಂಬ ಈ ಮಹಾನದಿಗೆ ಭಾರತದ ಊರು ಕೇರಿಗಳ ಬೀದಿ ಬೀದಿಗಳಿಗೂ ಮನೆ ಮನೆಗಳಿಗೂ ಸಂಬಂಧವಿದೆ. ಸಂವಿಧಾನ ಎಂಬ ಕಾಲುವೆಯ ಮೂಲಕ ಈ ನದಿಯು ಸದಾ ಹರಿಯುತ್ತಲೇ ಇದೆ. ಯಾವ ನದಿಯೂ ನೀರನ್ನು ನಿರಾಕರಿಸುವುದಿಲ್ಲ, ತಾರತಮ್ಯ ಮಾಡುವುದಿಲ್ಲ. ಹಾಗೆಯೇ ಈ ನದಿಯೂ ಕೂಡ ಯಾರ ಆತ್ಮಗೌರವಕ್ಕೂ ಧಕ್ಕೆಯಾಗದಂತೆ ಕಾಯುತ್ತಲೇ ಇದೆ. ಅಂಬೇಡ್ಕರ್ ಎಂಬ ನದಿಯು ಯಾರ ಜಾತಿಯ ಶ್ರೇಷ್ಟತೆಯನ್ನೂ ಎತ್ತಿ ಹಿಡಿದಿಲ್ಲ ಹಾಗೆಯೇ ಯಾವ ಕೀಳು ಜಾತಿಗಳನ್ನು ಕೀಳೆಂದು ಕಡೆಗಣಿಸಿಲ್ಲ.
ಅಖಂಡ ಮಾನವತೆಯ ಅಲೆಗಳಲ್ಲೇ ಈ ನದಿಯು ಎಲ್ಲ ಜಾತಿಗಳ ಕೇರಿಗಳಲ್ಲೂ ಸಮಾನವಾಗಿ ಹರಿದಿದೆ. ಅಂತೆಯೇ ಅಂಬೇಡ್ಕರ್ ಎಂಬ ಈ ನದಿಯಿಂದಾಗಿಯೇ ಜಾತ್ಯತೀತವಾದ ಮೂಲಭೂತ ಹಕ್ಕುಗಳು ಎಲ್ಲರಿಗೂ ದಕ್ಕಿವೆ. ಒಂದು ವೇಳೆ ಅಂಬೇಡ್ಕರ್ ನದಿ ಹುಟ್ಟಿ ಹರಿಯದಿದ್ದರೆ, ಈ ದೇಶದಲ್ಲಿ ಸನಾತನ ಮತೀಯತೆಯು ಇಷ್ಟರ ಹೊತ್ತಿಗೆ ಧಾರ್ಮಿಕ ಅಸಹಿಷ್ಣುತೆಯಲ್ಲಿ ಬೆಂಕಿ ಹಚ್ಚಿ ಅದೆಷ್ಟು ಊರುಗಳನ್ನು ಸ್ಮಶಾನ ಮಾಡಿಬಿಡುತ್ತಿತ್ತೋ ಏನೋ. ಧಾರ್ಮಿಕ ಸಾಮರಸ್ಯತೆಯು ಈ ನದಿಯ ವಿವೇಕದಿಂದಲೇ ನಮ್ಮಲ್ಲಿ ಸಾಧ್ಯವಾಗಿರುವುದು. ಸನಾತನ ಜಾತಿ ಮಲಿನತೆಯನ್ನು ಸದಾ ಈ ನದಿ ತೊಳೆಯುತ್ತಲೇ ಇದೆ.
ವಿಚಿತ್ರ ಎಂದರೆ ಅತ್ತ ಪವಿತ್ರ ಗಂಗಾನದಿಯು ಪ್ರತಿವರ್ಷ ಕೊಳೆಯುತ್ತಲೇ ಇದೆ. ಪ್ರಧಾನಿಯವರು ಅದನ್ನೀಗ ತೊಳೆಯುವ ಸಾಹಸಕ್ಕೆ ಇಳಿದಿದ್ದಾರೆ. ಸದ್ಯ ಮೋದಿ ಸಾಹೇಬರು ಅಂಬೇಡ್ಕರ್ ಎಂಬ ಮಾನವತಾ ನದಿಯ ಕಾಲುವೆಯಾದ ಸಂವಿಧಾನವನ್ನು ಕೆಡದಂತೆ ಕಾಯ್ದುಕೊಂಡರೆ ಸಾಕು. ಅಂಬೇಡ್ಕರ್ ಎಂಬ ಈ ಮಹಾನದಿ ಸುಮ್ಮನೆ ಹುಟ್ಟಿದ್ದಲ್ಲ. ಇದಕ್ಕೆ ಸಾವಿರಾರು ವರ್ಷಗಳ ಹಿಂದೂ ಸನಾತನತೆಯ ಹಿಂಸೆಯ ಚರಿತ್ರೆಯಿದೆ. ಜಾತಿ ವ್ಯವಸ್ಥೆಯ ಅದೆಷ್ಟೊ ಕಾಲದ ಕಣ್ಣೀರು ಈ ನದಿಯಲ್ಲಿ ಬೆರೆತಿದೆ.
ಜಾತಿಯ ನರಮೇಧದ ಹೆಪ್ಪುಗಟ್ಟಿದ ನೆತ್ತರು ನೀರಾಗಿ ಈ ನದಿಯಲ್ಲಿ ಹರಿದಿದೆ. ಧರ್ಮದ ಹೆಸರಿನ ಅತ್ಯಾಚಾರಗಳು ಈ ನದಿಯ ಮೂಕ ಸಾಕ್ಷಿಯಲ್ಲಿ ಅಲೆಯಾಗಿವೆ. ದಿಕ್ಕೆಟ್ಟು ಮೌನವಾಗಿ ರೋದಿಸುತ್ತ ಕರಗಿ ನೀರಾಗಿ ಹರಿದ ಅದೆಷ್ಟೊ ಮಹಿಳೆಯರ ಜೀವ ಈ ನದಿಯಲ್ಲಿ ತಾಯ್ತನವಾಗಿ ಮಿಡಿದಿದೆ. ಅಂಬೇಡ್ಕರ್ ನದಿಯಲ್ಲಿ ಹಿಂದುತ್ವದ ಅನೇಕ ಪಾಪಗಳು ಕರಗಿ ಅವು ಮಾನವತ್ವದ ನೀತಿ ಸಂಹಿತೆಯಾಗಿ ಮಾರ್ಪಟ್ಟಿವೆ. ಈ ನದಿಯ ಪ್ರಶಾಂತತೆಯನ್ನು ಯಾರು ಬೇಕಾದರೂ ಭಾವಿಸಬಹುದು. ಎಲ್ಲಿಯೂ ಈ ನದಿ ಯಾರನ್ನೂ ದ್ವೇಷಿಸಿಲ್ಲ. ಮೌನವಾಗಿ ಆಳವಾಗಿ ಅನಂತವಾಗಿ ಹರಿವ ರೀತಿಯಲ್ಲಿ ಎಲ್ಲರನ್ನು ದಡ ಸೇರಿಸುವ ಮಾತೃತ್ವ ಇದರದು.
ಅಂಬೇಡ್ಕರ್ ನದಿಯ ಜಲತತ್ವವು ಅಗ್ನಿತತ್ವದ್ದಲ್ಲ. ಈ ನದಿಯು ಹೋಗಿ ತಲುಪಿರುವುದು ಕೂಡ ಒಂದು ಮಹಾಬೌದ್ಧ ಸರೋವರವನ್ನು. ಇದು ಕೂಡ ಮಾರ್ಮಿಕವಾದುದೇ ಆಗಿದೆ. ಈ ಇಂತಹ ಅಂಬೇಡ್ಕರ್ ನದಿಯ ಹೋರಾಟದ ಹಾದಿಯು ಬಹಳ ಕಠಿಣವಾದದ್ದು. ನದಿಯೊಂದು ತನ್ನ ಪಾಡಿಗೆ ತಾನು ಹರಿದು ಹೋಗುವುದು ಕಷ್ಟವಲ್ಲ, ನಿಜ. ಆದರೆ ಅಂಬೇಡ್ಕರ್ ಎಂಬ ನದಿ ಎಲ್ಲೆಲ್ಲಿ ನರಕವಿದೆಯೋ ಆಯಾಯ ಜಾಡನ್ನೇ ಹುಡುಕಿ ಹರಿದಿದೆ. ಕೆಲವೊಮ್ಮೆ ಹರಿಯಬಹುದಾಗಿದ್ದ ದಿಕ್ಕನ್ನೇ ಬದಲಿಸಿ ನುಗ್ಗಿದೆ.
ಬೆಟ್ಟಗುಡ್ಡಗಳ ತಡೆಗಳನ್ನೇ ಕೊರೆದು ಹೆಬ್ಬಂಡೆಗಳನ್ನೇ ಉರುಳಿಸಿ, ಎತ್ತರೆತ್ತರದಿಂದ ಧುಮ್ಮಿಕ್ಕಿ ಕಣಿವೆಗಳನ್ನೆಲ್ಲ ದಾಟಿ ಎಲ್ಲೆಲ್ಲಿ ಅನಾಥರು ನಾಳಿನ ಮುಂದಿನ ದಾರಿಗಾಗಿ ದಾಹದಲ್ಲಿ ಕಾದು ಕೂತಿದ್ದರೋ ಅವರ ಕಾಲ ಬಳಿಯೇ ಹರಿದು ಅವರನ್ನೆಲ್ಲ ತನ್ನ ತೆಕ್ಕೆಗೆ ತೆಗೆದುಕೊಂಡು ಸಾಗಿಬಂದಿದೆ. ಯಾರೂ ಈ ನದಿಯನ್ನು ತಡೆಯಲು ಸಾಧ್ಯವಾಗಲಿಲ್ಲ, ಹಾಗೆಯೇ ನದಿಯ ಮೂಲವಾದ ತಳಜಾತಿಗಳ ಜಲದ ಕಣ್ಣನ್ನು ಕಿತ್ತುಹಾಕಲು ಆಗಲಿಲ್ಲ. ಅಷ್ಟರಮಟ್ಟಿಗೆ ಈ ನದಿಯು ತನ್ನ ಹರಿವನ್ನು ಕಾಯ್ದುಕೊಳ್ಳುತ್ತಲೇ ದೇಶದ ಜಲದ ಕಣ್ಣನ್ನೂ ಕಾಯ್ದುಕೊಂಡು ಬಂದಿದೆ. ಆದ್ದರಿಂದಲೇ ಆಧುನಿಕ ಭಾರತದ ನಾಗರಿಕತೆಯಲ್ಲಿ ಈ ನದಿಯ ಪಾತ್ರ ಬಹಳ ವಿಸ್ತಾರವಾದುದು.
ನದಿಗಳ ಜೊತೆಗಿನ ನಾಗರಿಕತೆಗಳ ಪಾಠವನ್ನು ಓದಿದ್ದೇವೆ. ಆದರೆ ಅಂಬೇಡ್ಕರ್ ನದಿಯ ನಾಗರಿಕತೆಯ ಅರಿವನ್ನು ನಾವು ತಕ್ಕುದಾಗಿ ಅರ್ಥ ಮಾಡಿಕೊಂಡಿಲ್ಲ. ಮೂಲತಃ ನಾಗರಿಕತೆಗಳು ಸಾಮ್ರಾಜ್ಯಗಳನ್ನು ಕಟ್ಟಿಕೊಳ್ಳುತ್ತವೆ. ಸಂಪತ್ತನ್ನು ಲೂಟಿ ಮಾಡುತ್ತವೆ. ಬಲಿಷ್ಟ ವರ್ಗಗಳನ್ನು ರೂಪಿಸಿಕೊಳ್ಳುತ್ತವೆ. ಸೈನ್ಯಗಳನ್ನು ಕಟ್ಟಿ ಯುದ್ಧದಾಹಿಯಾಗಿರುತ್ತವೆ. ಸದಾ ಗುಲಾಮರನ್ನು ದಂಡಿಸುತ್ತಲೇ ಹೆಂಗಸರನ್ನು ಬೇಕಾದಂತೆಲ್ಲ ಬಳಸಿ ಬಿಸಾಡುವ ರೀತಿ ನೀತಿಗಳನ್ನು ಪಾಲಿಸುತ್ತಲೇ ಇರುತ್ತವೆ. ಅಂಬೇಡ್ಕರ್ ನದಿಯ ಜೊತೆಗೆ ಈ ಮೇಲಿನ ಸಂಗತಿಗಳನ್ನು ತುಲನೆ ಮಾಡಿ ವಿವೇಚಿಸಿ. ಎಲ್ಲಿಯೂ ಈ ಅಂಬೇಡ್ಕರ್ ನದಿಯು ಮಹಿಳೆಯರನ್ನು ಅಗೌರವಿಸಿಲ್ಲ.
ಯಾವ ಜೀತಗಾರಿಕೆಯನ್ನು ಒಪ್ಪುವುದಿಲ್ಲ. ಯಾವ ಯುದ್ಧಕ್ಕೂ ಮನ್ನಣೆ ನೀಡುವುದಿಲ್ಲ. ಯಾರು ಯಾರನ್ನೂ ಲೂಟಿ ಮಾಡುವಂತಿಲ್ಲ, ಆಳುವಂತಿಲ್ಲ, ಸಾಮ್ರಾಜ್ಯ ಕಟ್ಟಿಕೊಂಡು ಮೆರೆಯುವಂತಿಲ್ಲ. ಹೀಗಾಗಿ ಅಂಬೇಡ್ಕರ್ ನದಿಯು ನಿರೂಪಿಸುವ ನಾಗರಿಕತೆಯು ಅತ್ಯುನ್ನತ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಿಷ್ಟ ಜಾತಿಗಳ ಕೋಟೆಗಳಿಗೆ ತಕ್ಕಂತೆ ಪ್ರಜಾಪ್ರಭುತ್ವವನ್ನು ಮಣಿಸಿಕೊಳ್ಳುವ ಹುನ್ನಾರಗಳು ನಡೆಯುತ್ತಲೇ ಇದ್ದರೂ ಅಂಬೇಡ್ಕರ್ ಸಂವಿಧಾನವು ಅದನ್ನು ತಡೆಯುತ್ತಲೇ ಇದೆ. ಮಹಿಳೆಯರ ಪರವಾದ ಮೀಸಲಾತಿಯನ್ನು ಈ ನದಿ ಯಾವತ್ತೊ ಪ್ರತಿಪಾದಿಸುತ್ತಲೇ ಬಂದಿದ್ದರೂ ಅದಿನ್ನೂ ಜಾರಿಯಾಗದೇ ಉಳಿದಿದೆ.
ಎಲ್ಲ ನಿಯಂತ್ರಣಗಳ ಆಚೆಗಿನ ಪಯಣದ ಒಂದೊಂದು ದೋಣಿಯನ್ನೋ ತೆಪ್ಪವನ್ನೋ ಈ ನದಿಯು ಎಲ್ಲ ದಮನಿತರಿಗೊ ಕೊಟ್ಟುಬಿಟ್ಟಿದೆ. ಆದ್ದರಿಂದಲೇ ಈ ಮಾಯಾಮಯ ನದಿಯಲ್ಲಿ ಎಲ್ಲರೂ ಅವರವರ ಗುರಿಯತ್ತ ಸಾಗಲು ಸಾಧ್ಯವಾಗಿರುವುದು. ಈ ಅಂಬೇಡ್ಕರ್ ನದಿಯ ರೂಪಕವನ್ನು ಹೆಚ್ಚು ಲಂಬಿಸಿರುವಂತೆ ಕಾಣಬಹುದು. ನದಿಯನ್ನು ತುಂಡು ಮಾಡಲು ಬರುವುದಿಲ್ಲ, ಹಾಗೆಯೇ ಅಂಬೇಡ್ಕರ್ ವಿಚಾರಗಳನ್ನು ಕೂಡ ರಾಜಕಾರಣವು ತನಗೆ ಬೇಕಾದ ಬಗೆಯಲ್ಲಿ ತುಂಡು ಮಾಡಿಕೊಳ್ಳಬಾರದು. ನದಿಗೆ ಅಣೆಕಟ್ಟು ಕಟ್ಟಿಕೊಳ್ಳಬಹುದೇ ವಿನಾ ನದಿಯ ನಡೆಯೇ ಸರಿ ಇಲ್ಲ ಎಂದು ನಡತೆಗೆಡಬಾರದು. ಹಾಗೆಯೇ ಈ ನದಿಯ ಅವಶ್ಯಕತೆಯೇ ಇಲ್ಲ ಎಂದು ಹುಂಬುತನ ತೋರಬಾರದು. ಅಂಬೇಡ್ಕರ್ ಈ ದೇಶದ ನದಿ.
ಈ ನದಿಯ ವಿವೇಕದಿಂದಲೇ ಹೊಸ ತಲೆಮಾರಿನ ಭಾರತವು ತನ್ನ ಮಾತೃಭೂಮಿಯನ್ನು ಕಾಯ್ದುಕೊಳ್ಳಬೇಕಿರುವುದು. ಯುವ ಜನಾಂಗ ಈ ನದಿಯ ನೀರನ್ನು ಮುಟ್ಟಿಸಿಕೊಂಡಾಗಲೇ ಬಹಳ ಕಾಲದಿಂದಲೂ ನೊಂದು ಹರಿದು ಬಂದಿರುವ ಈ ನದಿಗೆ ಒಂದಿಷ್ಟಾದರೂ ಸಾಂತ್ವನ ಕಾಣುವುದು. ಹಾಗೆಯೇ ಆಯಾಯ ಜಾತಿಗಳಿಗೆ ಬದ್ಧವಾದಂತೆಯೋ ಸನಾತನತೆಗೆ ಅಂಟಿಕೊಂಡಂತೆಯೋ ಆಧುನಿಕತೆಯ ಒಳಗೂ ಆಯಾಯ ವರ್ತುಲಗಳಿಗೇ ಸಿಕ್ಕಿ ಹಾಕಿಕೊಂಡಂತಿರುವ ಯುವಜನಾಂಗ ಈ ನದಿಯ ನೀರಿನಿಂದ ಮುಕ್ತಿ ಕಾಣಬೇಕಿರುವುದು.
ಜವಹರಲಾಲ್ ನೆಹರೂ ಅವರು ಬೃಹತ್ ಅಣೆಕಟ್ಟುಗಳನ್ನು ಆಧುನಿಕತೆಯ ದೇವಾಲಯಗಳೆಂದು ಕರೆಯುತ್ತಿದ್ದರು. ಹಾಗೆಯೇ ಈ ಅಂಬೇಡ್ಕರ್ ಎಂಬ ನದಿಯನ್ನು ಯುವಜನಾಂಗ ತನ್ನದಾಗಿಸಿಕೊಳ್ಳಬೇಕಿರುವುದು. ವಿಶ್ವದ ಮುಕ್ತ ಮಾರುಕಟ್ಟೆಯ ಜಾಗತೀಕರಣದಲ್ಲಿ ತೇಲುತ್ತಿರುವ ಯುವ ಜನಾಂಗಕ್ಕೆ ಅಂಬೇಡ್ಕರ್ ನದಿಯ ಸಂಬಂಧ ಬೇಕೇಬೇಕು. ಇಲ್ಲದಿದ್ದರೆ ವಿಶ್ವದ ಬಲಿಷ್ಟ ರಾಷ್ಟ್ರಗಳ ಮುಂದೆ ಮುಂದಿನ ತಲೆಮಾರು ದುರ್ಬಲವಾಗುವ ಅಪಾಯವಿದೆ. ಅಂಬೇಡ್ಕರ್ ಎಂಬ ನದಿ ಸನಾತನವಾದುದಲ್ಲ. ಅದು ಆಧುನಿಕತೆಯ ದರ್ಶನದಲ್ಲಿ ಹರಿದುಬಂದದ್ದು. ಪೂರ್ವ ಪಶ್ಚಿಮದ ಎಲ್ಲ ಜಲಬೇರುಗಳೂ ಈ ನದಿಯನ್ನು ರೂಪಿಸಿವೆ. ಆದ್ದರಿಂದಲೇ ಈ ನದಿಯ ಉದ್ದಕ್ಕೂ ಜಾಗೃತಿಯ ಅಲೆಗಳೇ ತೇಲಿಬಂದಿರುವುದು.
ವಿಪರ್ಯಾಸವೆಂದರೆ ಯಾವತ್ತೂ ಕೂಡ ಈ ನದಿಯನ್ನು ಇದು ‘ಅಸ್ಪೃಶ್ಯರ ನದಿ’ ಎಂದೇ ಬಿಂಬಿಸಲಾಗುತ್ತಿದೆ. ಒಂದಲ್ಲ ಒಂದು ಬಗೆಯಲ್ಲಿ ದಿನನಿತ್ಯವೂ ಸಮಸ್ತ ಭಾರತೀಯರೆಲ್ಲರೂ ಅಂಬೇಡ್ಕರ್ ನದಿಯ ನೀರು ಕುಡಿದೇ ಬದುಕುತ್ತಿರುವುದು. ಅಷ್ಟರಮಟ್ಟಿಗೆ ಭಾರತೀಯ ಸಂವಿಧಾನವು ಎಲ್ಲರ ಜೀವನದ ಭಾಗವಾಗಿದೆ. ಈ ನದಿಯನ್ನು ಅಪವ್ಯಾಖ್ಯಾನಗೊಳಿಸುವವರು ಕೂಡ ನದಿಯ ಜೊತೆಯಲ್ಲೇ ಸಾಗಿ ಬಂದಿದ್ದಾರೆ.
ಭಾರತವು ವಸಾಹತೋತ್ತರ ಕಾಲಮಾನದಲ್ಲಿ ಯಾವ ಬಗೆಯಲ್ಲಿ ರಾಜಕೀಯವಾಗಿ ರೂಪಾಂತರ ಹೊಂದುತ್ತದೆ ಎಂಬ ಅಂದಾಜು ಈ ನದಿಗೆ ಇತ್ತು. ಪ್ರಬಲ ಜಾತಿಗಳು ಪ್ರಜಾಪ್ರಭುತ್ವವನ್ನು ಹೇಗೆ ಹಂಚಿಕೊಂಡು ದುರ್ಬಲ ಜಾತಿಗಳನ್ನು ಆಳಲು ಮುಂದಾಗುತ್ತವೆ ಎಂಬ ಮುಂದಾಲೋಚನೆ ಇತ್ತು. ಆದ್ದರಿಂದಲೇ ಜಾತಿನಿಷ್ಟ ಸಮಾಜಗಳು ದಾರಿ ತಪ್ಪದಂತೆ ಸಮತೋಲನ ಕಾಯ್ದುಕೊಳ್ಳುವಂತಹ ರಾಜಕೀಯ ವ್ಯವಸ್ಥೆ ನೆಲೆಗೊಳ್ಳುವ ರೀತಿಯಲ್ಲಿ ಸಂವಿಧಾನವನ್ನು ರೂಪಿಸಿರುವುದು.
ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಜಾತಿ ಹಾಗೂ ಧರ್ಮ ಎರಡೂ ಸೇರಿ ಜಾತಿನಿಷ್ಟ ಸರ್ವಾಧಿಕಾರಿ ವ್ಯವಸ್ಥೆಯನ್ನು ಜಾರಿಗೊಳಿಸಿಬಿಡುತ್ತಿದ್ದವು. ಜಾತಿಬದ್ಧ ಸರ್ವಾಧಿಕಾರವು ಹಿಟ್ಲರನ ಜನಾಂಗವಾದಕ್ಕಿಂತಲೂ ಭಯಂಕರವಾದುದು. ಆ ಅಪಾಯದಿಂದ ನಮ್ಮನ್ನು ಅಂಬೇಡ್ಕರ್ ನದಿಯು ಪಾರು ಮಾಡಿದೆ. ಜೊತೆಗೆ ಜಾತಿಯ ಸರಪಳಿಯ ಸಂಕೋಲೆಯಿಂದ ಉಳಿದವರನ್ನೂ ಕಾಪಾಡಿದೆ. ಜಾತಿ ವ್ಯವಸ್ಥೆ ಮೇಲೆ ಮೇಲೆ ಏರಿ ಕುತಂತ್ರವರಿಗೆ ಮೇರು ಸ್ಥಾನವನ್ನು ನೀಡಿದೆ ಎಂಬುದು ಕೇವಲ ಭ್ರಮೆ ಮಾತ್ರ. ಜಾತಿಯ ಸರಪಳಿ ತೊಡಿಸುವುದರಲ್ಲೇ ತೊಡಗಿರುವ ಮೇಲುಜಾತಿಗಳು ತಮಗೆ ತಾವೇ ಆ ಸರಪಳಿಯಲ್ಲಿ ಬಂಧಿಯಾಗಿವೆ.
ಜಾತಿಯಿಂದ ಬಂಧಿಸಿದ್ದೇವೆಂದು ಮೇಲುಜಾತಿಗಳು ಭ್ರಮಿಸಿಕೊಂಡಿದ್ದರೆ, ತನಗೆ ಯಾವ ಜಾತಿಯೂ ಇಲ್ಲ ಎಂದು ಭಾವಿಸಿರುವ ಒಬ್ಬ ಅಸ್ಪೃಶ್ಯ ಲೋಕವನ್ನು ಕಾಣುವ ಬಗೆಯೇ ಬೇರೆಯಾಗಿದೆ. ಅವನ ಪ್ರಕಾರ ಅವನಿಗೆ ಯಾವ ಸರಪಳಿಗಳೂ ಇಲ್ಲ. ಆದರೆ ಬಂಧಿಸುವವನ ಮೈತುಂಬ ಬರೀ ಸರಪಳಿಗಳೇ ಬಿಗಿದಿವೆ. ಇಂತಹ ಸರಪಳಿಗಳಿಂದಲೇ ಮೇಲುಜಾತಿಗಳು ಬಿಡಿಸಿಕೊಳ್ಳಬೇಕಾಗಿರುವುದು. ಆದರೆ ಬಿಡಿಸಿಕೊಳ್ಳಲು ಅವು ಸ್ವಲ್ಪ ಯೋಚಿಸಿದರೂ ಸಾಕು, ಈ ಎಲ್ಲ ಸರಪಳಿಗಳೂ ತನ್ನ ಬುದ್ಧಿಯನ್ನೇ ಬಂಧಿಸಿವೆ ಎಂಬುದು ತಿಳಿಯುತ್ತದೆ. ಅಂಬೇಡ್ಕರ್ ನದಿ ಬಯಸುವುದು ಈ ಸರಪಳಿಗಳನ್ನು ನೀವೇ ಬಿಡಿಸಿಕೊಳ್ಳಿ ಎಂದು.
ಜಾತಿ ವ್ಯವಸ್ಥೆಯಿಂದ ನಾವು ಅಸ್ಪೃಶ್ಯರು ನರಳಿರುವುದು ಬೇರೆ. ಅದಕ್ಕಾಗಿ ನಾವೇನು ಈ ದೇಶಕ್ಕೆ ಬೆಂಕಿ ಹಚ್ಚುವುದಿಲ್ಲ. ಯಾರೇ ಬೆಂಕಿ ಹಚ್ಚಿದರೂ ಅದನ್ನು ಆರಿಸಲಿಕ್ಕೆ ಅಂಬೇಡ್ಕರ್ ನದಿ ಇದ್ದೇ ಇದೆ. ಆದರೆ ಜಾತಿಯ ಸಂಕೋಲೆಯಿಂದ ನಾವು ನರಳಿದ್ದಕ್ಕಿಂತಲೂ ಮಿಗಿಲಾಗಿ ಮೇಲುಜಾತಿಗಳು ಮಾನವೀಯತೆಯನ್ನು ಕಳೆದುಕೊಂಡು ಬಡವಾಗಿವೆ. ಅಷ್ಟರಮಟ್ಟಿಗೆ ಅವುಗಳ ಬಿಡುಗಡೆಯೂ ತೊಡಕಾಗಿದೆ. ಆದ್ದರಿಂದಲೇ ಅಂಬೇಡ್ಕರ್ ನದಿಯು ಈ ದೇಶದ ಸರ್ವರ ಜಾತಿಯ ಕೊಳೆಯನ್ನು ತೊಳೆಯಲು ಸದಾ ಭೋರ್ಗರೆಯುತ್ತಲೇ ಇರುತ್ತದೆ.
ಜಾತಿ ವ್ಯವಸ್ಥೆಯನ್ನು ಒಂದು ಬಿಡಿಯಾದ ಸಮಸ್ಯೆ ಎಂದು ಭಾವಿಸಬಾರದು. ಅದು ಭಾರತೀಯರಾದ ಎಲ್ಲರ ಒಟ್ಟು ಸಮಸ್ಯೆ. ಅದನ್ನೊಂದು ರಾಷ್ಟ್ರೀಯ ಸಮಸ್ಯೆಯಾಗಿಯೇ ಭಾವಿಸಿ ಪರಿಹರಿಸಬೇಕು. ಜಾತ್ಯತೀತತೆಗೆ ಹಾಗಾಗಿಯೇ ಅಂಬೇಡ್ಕರ್ ಹೆಚ್ಚಿನ ಒತ್ತನ್ನು ನೀಡಿದ್ದುದು. ನಾಳಿನ ಭಾರತ ಉಳಿಯಲೇಬೇಕೆಂದರೆ ಇಂದಿನ ಜಾತೀಯತೆ ಅಳಿಯಲೇಬೇಕು. ಅಂಬೇಡ್ಕರ್ ಎಂಬ ನದಿಯ ಮೂಲ ಆಶಯವೇ ಅದು. ಜಾತಿಯೇ ನಾಶವಾದ ಮೇಲೆ ಯಾರಾದರೂ ರಾಜ್ಯಾಧಿಕಾರವನ್ನು ಹಿಡಿಯಬಹುದು. ಆಗ ದಲಿತರೇ ಹಿಡಿಯಬೇಕೆಂದೇನೂ ಇಲ್ಲ. ಜಾತ್ಯತೀತವಾಗುವುದೇ ಉನ್ನತ ರಾಷ್ಟ್ರೀಯತೆ.
ಅದೇ ದೇಶಪ್ರೇಮ, ಅದೇ ಸರ್ವೋದಯ, ಅದೇ ಸುಭದ್ರ ರಾಷ್ಟ್ರೀಯತೆ. ಅಂಬೇಡ್ಕರ್ ಎಂಬ ನದಿಯ ಈ ಬಗೆಯ ಭ್ರಾತೃತ್ವವನ್ನು ವರ್ತಮಾನದ ರಾಜಕಾರಣವು ಸರಿಯಾಗಿ ಗ್ರಹಿಸಬೇಕು. ಭಾರತದ ಸಾರ್ವಭೌಮತ್ವವು ಈ ನದಿಯ ವಿವೇಕದಿಂದಲೇ ಇಂದು ಸಮತೋಲನವನ್ನು ಕಾಯ್ದುಕೊಂಡಿರುವುದು. ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವವನ್ನು ಹೇಗೆ ಮುನ್ನಡೆಸಬಹುದು ಎಂಬುದನ್ನು ಸಂವಿಧಾನವು ಜಗತ್ತಿಗೆ ತೋರಿಸಿಕೊಟ್ಟಿದೆ. ಜಾತಿಗಳ ಮರುಭೂಮಿಗಳಲ್ಲಿ ಹುಟ್ಟಿಹರಿಯುತ್ತಿರುವ ಈ ನದಿಯು ಇನ್ನೂ ಬಹುಕಾಲ ಬಹಳ ದೂರಕ್ಕೆ ಗಾಯಗೊಂಡ ಎಲ್ಲ ಸಮಾಜಗಳನ್ನು ಪೊರೆದು ಕರೆದೊಯ್ಯಬೇಕಿದೆ.
ಜಾತ್ಯತೀತವಾಗಿ ಯುವ ಜನಾಂಗವನ್ನು ರೂಪಿಸುವುದೇ ನಿಜವಾದ ಅಭಿವೃದ್ಧಿ. ತಾರತಮ್ಯದ ಪೂರ್ವಗ್ರಹಗಳನ್ನು ನಾಶಪಡಿಸುವುದೇ ಆತ್ಯಂತಿಕ ಪ್ರಗತಿ. ಲಿಂಗಭೇದಗಳ ವಿಕಾರವನ್ನು ಸರಿಪಡಿಸುವುದೇ ನಿಜವಾದ ಬದಲಾವಣೆ. ಈ ನದಿಯ ಗುರಿಯೇ ಈ ಬಗೆಯ ಅಭಿವೃದ್ಧಿಯತ್ತ ದೇಶವನ್ನು ಕಾಯುವುದಾಗಿದೆ. ಅಂಬೇಡ್ಕರ್ ಎಂಬ ನದಿಯು ಬಡವರ ಕಾಲ ಬುಡದಲ್ಲೇ ಹರಿದಿದೆ ಎಂದು ಆರಂಭದಲ್ಲೇ ಹೇಳಿದ್ದೆ. ಗಾಂಧೀಜಿಯೂ ಒಂದು ಮಹಾನದಿಯೇ. ಒಂದು ಉತ್ತರದ ನದಿಯಾದರೆ ಮತ್ತೊಂದು ದಕ್ಷಿಣದ ನದಿ. ಈ ಎರಡೂ ನದಿಗಳೂ ಬೇರೆ ಬೇರೆ ದಿಕ್ಕಿನಿಂದ ಹುಟ್ಟಿ ಹರಿಯುತ್ತಿದ್ದರೂ ಇವೆರಡೂ ಭವಿಷ್ಯದ ಭಾರತದ ನಿರ್ಮಾಣಕ್ಕೆ ಅನಿವಾರ್ಯವಾಗಿ ಜೋಡಣೆಯಾಗಬೇಕು.
ವಿಶ್ವದ ಪ್ರಬಲ ಮಾನವತಾ ರಾಷ್ಟ್ರ ಎಂದು ಕರೆಸಿಕೊಳ್ಳಲು ಇವೆರಡೂ ಒಂದಾಗಬೇಕು. ವಿಶ್ವಸಂಸ್ಥೆಗೂ ಈ ಎರಡು ನದಿಗಳ ಜಲನೀತಿಯೇ ವಿಶ್ವನೀತಿಯೂ ಆಗಬೇಕು. ಅಂಬೇಡ್ಕರ್ ಜಯಂತಿಯಲ್ಲಿ ಗಾಂಧಿಜಯಂತಿಯನ್ನೂ, ಗಾಂಧಿಜಯಂತಿಯಲ್ಲಿ ಅಂಬೇಡ್ಕರ್ ಜಯಂತಿಯನ್ನೂ ಕಾಣಬೇಕು. ಈ ಜಯಂತಿಗಳ ಮಾತುಗಳು, ಆಚರಣೆಗಳು ಸವಕಲಾಗಿವೆ. ಇವನ್ನು ಮತ್ತೂ ಬೇರೆ ಬಗೆಯಲ್ಲಿ ಭಾವಿಸಬಹುದು. ಅಧಿಕೃತವಾಗಿ ಸರ್ಕಾರಗಳು ಯಾವ ನದಿಯ ನೆನಪಿನ ದಿನಗಳನ್ನೂ ಆಚರಿಸುವುದಿಲ್ಲ. ಎಲ್ಲ ದಮನಿತರ ನದಿ ಅಂಬೇಡ್ಕರ್ ನದಿ. ಈ ಮಹಾನ್ ನದಿ ತನ್ನ ಜನಾಂಗದ ದುಃಖದ ಧಾರೆಯನ್ನೇ ಧಾರೆಯೆರೆದುಕೊಟ್ಟಿದೆ.
ದಲಿತರು ಎಲ್ಲ ಜಾತಿಗಳ ಹೊರೆಯನ್ನೂ ತಲೆಮೇಲೆ ಹೊತ್ತುಕೊಂಡು ಯಾರನ್ನೂ ಕೆಳಗೆ ಬೀಳಿಸದಂತೆ, ಈಗಲೂ ಎಲ್ಲರನ್ನೂ ದ್ವೇಷವಿಲ್ಲದೆ ಹೊತ್ತೇ ತಿರುಗುತ್ತಿದ್ದಾರೆ. ಅಸ್ಪೃಶ್ಯರು ಹೊತ್ತಿರುವ ಈ ಹೊರೆ ಅಸಾಮಾನ್ಯವಾದುದು, ಮತ್ತೆ ಬೇರೆ ಯಾರೊಬ್ಬರೂ ಹೊರಲಾಗದ ಹೊರೆ. ಅದಕ್ಕಾಗಿ ಈ ಅಸ್ಪೃಶ್ಯರ ನೋವಿನಿಂದ ಹುಟ್ಟಿದ ನದಿಯಾದ ಅಂಬೇಡ್ಕರ್ ಅವರಿಗಾಗಲೀ, ಅಸ್ಪೃಶ್ಯರಿಗಾಗಲೀ ಈ ದೇಶ ಕೃತಜ್ಞತೆಯನ್ನು ಎಂದಾದರೂ ಸಲ್ಲಿಸಿದೆಯೇ? ದಲಿತರ ಘನತೆಯನ್ನು ಮಾನ್ಯ ಮಾಡಿದೆಯೇ? ಸುಮ್ಮನೆ ಸುಳ್ಳು ಮೀಸಲಾತಿಯನ್ನು ಹೇಳಿದರೆ ಸಾಕೆ? ಜಾತಿ ಹೊರೆಯ ಮೂಲಕ ಇಡೀ ಭಾರತದ ಹೊರೆಯನ್ನೇ ದಲಿತರು ಹೊತ್ತಿಲ್ಲವೇ?
ಅದಕ್ಕಾಗಿ ‘ಅಂಬೇಡ್ಕರ್ ಜಯಂತಿ’ಯ ದಿನವನ್ನು ‘ರಾಷ್ಟ್ರೀಯ ಕೃತಜ್ಞತಾದಿನ’ವೆಂದು ಮೋದಿಯವರು ಘೋಷಿಸಿ, ಅಸ್ಪೃಶ್ಯರ ಸ್ವಾಭಿಮಾನದ ನದಿಯ ದಿನವೆಂದು ಭಾವಿಸಿ, ಅಂಬೇಡ್ಕರ್ ನದಿಯನ್ನು ಗೌರವಿಸಬೇಕು. ಅಂಬೇಡ್ಕರ್ ಜಯಂತಿಯು ಅಸ್ಪೃಶ್ಯರು ಹೊತ್ತ ಹೊರೆಯ ದಿನವೆಂದು ಮಾನ್ಯವಾಗಬೇಕು. ಆ ಮೂಲಕ ಒಂದೊಂದು ಜಾತಿಯ ಹೊರೆಗಳೂ ಕರಗುತ್ತ ಅಂಬೇಡ್ಕರ್ ನದಿಯಲ್ಲಿ ವಿಲೀನವಾಗಬೇಕು. ಆ ದಿಸೆಯಲ್ಲಿ ಸಮಾಜ ಮತ್ತು ಸರ್ಕಾರಗಳು ಹಾಗೂ ಯುವಜನಾಂಗ ಮುಂದಾಗಬೇಕು. 
ಅಂತಃಕರಣದ ಅಭಿವೃದ್ಧಿ
ಮಾನ್ಯ ಮೋದಿ ಸಾಹೇಬರು ಬಹಳ ದೊಡ್ಡ ದೊಡ್ಡ ಆದರ್ಶಗಳನ್ನು ಅಭಿವೃದ್ಧಿಯ ಹೆಸರಲ್ಲಿ ಹೇಳುತ್ತಿದ್ದಾರೆ. ಆದರೆ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಈ ದೇಶದಲ್ಲೇ ಹೇಯ ಅಮಾನವೀಯ ಕೃತ್ಯಗಳು ಘಟಿಸುತ್ತಿವೆ. ಭಾರತವನ್ನು ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿರಿಸಿದ ಮಾತ್ರಕ್ಕೆ ನಮ್ಮ ಸಮಾಜಗಳು ಉದ್ಧಾರವಾಗಿ ಬಿಡುವುದಿಲ್ಲ. ದೇಶದ ಎಲ್ಲ ದಮನಿತರ ದುಃಖವನ್ನು ಅರಿಯದೆ ದೇಶೋದ್ಧಾರದ ಮಾತನಾಡಬಾರದು. ಜಾತಿ ವಿನಾಶವಾಗಿ, ಮಹಿಳಾ ಸಮಾನತೆ ಬಂದ ದಿನವೇ ನಿಜವಾದ ನ್ಯಾಯದ ದಿನ.

ಅಲ್ಲಿಯತನಕ ಭಾರತ ಅಭಿವೃದ್ಧಿಯ ಅಂಕಿಅಂಶಗಳನ್ನು ಅದೆಷ್ಟು ನೀಡಿದರೂ ಅದಕ್ಕೆ ಯಾವ ನೈತಿಕತೆಯೂ ಇಲ್ಲ. ಮಾನವತ್ವದ ಲೆಕ್ಕದಲ್ಲಿ ಜಾತಿನಿಷ್ಟ ಸಮಾಜಗಳು ಅಭಿವೃದ್ಧಿಯನ್ನೇ ಸಾಧಿಸಿಲ್ಲ. ಎಷ್ಟು ಬಗೆಯಲ್ಲಿ ಈ ಸಮಾಜಗಳು ಅಂತಃಕರಣದಿಂದ ಕೂಡಿವೆ ಎಂಬುದು ಅಭಿವೃದ್ಧಿಯ ಮಾನದಂಡವಾಗಬೇಕು. ಎಷ್ಟು ದುಡಿದು ತಲಾ ಆದಾಯ ಹೆಚ್ಚಾಯಿತು ಎಂಬುದಲ್ಲ ಮುಖ್ಯ, ಎಷ್ಟು ನೆಮ್ಮದಿಯಿಂದ, ವಿಶ್ವಾಸದಿಂದ, ಭ್ರಾತೃತ್ವದಿಂದ, ನ್ಯಾಯದಿಂದ ಸಮಾಜಗಳು ಬದುಕಿವೆ ಎಂಬುದು ತುಂಬ ಮುಖ್ಯ.
 ಅಂಬೇಡ್ಕರ್ ಎಂಬ ನದಿಯು ಈ ಬಗೆಯ ಮಾನದಂಡಗಳಿಂದಲೇ ದೇಶದ ಸಾಮಾಜಿಕ ನ್ಯಾಯದ ಅಭಿವೃದ್ಧಿ ಸೂಚ್ಯಾಂಕವನ್ನು ಭಾವಿಸಿ ಒತ್ತಾಯಿಸುತ್ತಿದ್ದುದು. ಜಗತ್ತಿನ ಮಾರುಕಟ್ಟೆ ರಾಜಕಾರಣದಿಂದ ಕರಗಿ ಹೋಗುತ್ತಿರುವ ಹಳ್ಳಿಗಳಿಗೂ ಈಗ ಈ ನದಿಯೇ ಗತಿ. ಅಂಬೇಡ್ಕರ್ ನದಿಯನ್ನು ಕಾಯುವುದರಲ್ಲಿ ಸಮಗ್ರ ಹಳ್ಳಿಗಾಡಿನ ಅಸ್ತಿತ್ವವೂ ಇದೆ. ಅಂಬೇಡ್ಕರ್ ಹಳ್ಳಿಗಳನ್ನು ನರಕ ಎಂದು ಭಾವಿಸಿದ್ದರು ನಿಜ, ಆದರೆ ಹಳ್ಳಿಗಳು ಉಳಿಯಬೇಕಾದರೆ ಈ ನದಿನೀರನ್ನು ಕುಡಿದೇ ಮುಂದೆ ಸಾಗಬೇಕಿದೆ.
ಸಾರಾಸಗಟಾಗಿ ಇಡೀ ಊರಿಗೆ ಊರೇ ಆಯಾಯ ಕೇರಿಗಳ ಲೆಕ್ಕದಲ್ಲಿ ಜಗತ್ತಿನ ಯಾವುದಾವುದೊ ಮಾರುಕಟ್ಟೆಗಳಿಗೆ ಹರಾಜಾಗುತ್ತಿರುವಂತಹ ಸಂದರ್ಭದಲ್ಲಿ ಗಾಂಧೀಜಿಯ ಗ್ರಾಮ ರಾಜ್ಯವನ್ನು ಕಾಯಲು ಸದ್ಯಕ್ಕೆ ನಮ್ಮಲ್ಲಿ ಬೇರೆ ಯಾವ ಉಪಾಯಗಳೂ ಇಲ್ಲ. ರಾಷ್ಟ್ರ – ರಾಜ್ಯಗಳ ಚಹರೆಯೇ ರೂಪಾಂತರವಾಗುತ್ತಿರುವಲ್ಲಿ ಇನ್ನು ಊರು ಕೇರಿಗಳ ವಿಳಾಸಗಳ ಪಾಡೇನು? ಮೋದಿಯವರು ಭೂಸ್ವಾದೀನದ ಹಕ್ಕನ್ನು ಸ್ಥಾಪಿಸುತ್ತಿದ್ದಾರೆ.
ಹಳ್ಳಿಗಳ ಮಾನವಸಂಪತ್ತು ತನ್ನ ಗತ ವೈಭವವನ್ನು ಕಳೆದುಕೊಂಡು ನಗರಗಳ ಜೀತಕ್ಕೆ ಬಲಿಯಾಗುತ್ತಿದೆ. ಅತ್ಯಾಧುನಿಕ ನಗರಗಳ ನಿರ್ಮಾಣಕ್ಕೆ ಪ್ರಧಾನಿಯವರು ಮುಂದಾಗಿದ್ದಾರೆ. ಹಾಗೆ ನೋಡಿದರೆ ಈ ಅಂಬೇಡ್ಕರ್ ನದಿ ಈ ವಿಶಾಲ ಭಾರತದ ಹಳ್ಳಿಗಾಡಿನ ಏಕೈಕ ನದಿ ಮಾತ್ರವಾಗಿದೆ. ಸರ್ಕಾರಗಳೇ ಈ ನದಿಯ ಮಹತ್ವವನ್ನು ಮರೆತಿವೆ. ಭಾಗಶಃ ನಮ್ಮ ಹಳ್ಳಿಗಳೂ ಕೂಡ ಈ ನದಿಯ ಬಗ್ಗೆ ಉಪೇಕ್ಷಿಸಿರಬಹುದು. ನದಿಗೆ ಜನಗಳು ಬೇಕೊ, ಜನಗಳಿಗೆ ನದಿ ಬೇಕೊ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಭಾನುವಾರ, ಏಪ್ರಿಲ್ 5, 2015

ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನುಒತ್ತಾಯಿಸುವ-ಧಾರವಾಡ ಘೋಷಣೆ

ಧಾರವಾಡಘೋಷಣೆ
ಧಾರವಾಡದ ಕನರ್ಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ 2015ನೇ ಇಸವಿಯ ಏಪ್ರಿಲ್ ತಿಂಗಳಿನ 4 ಮತ್ತು 5 ದಿನಗಳಂದು, ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನುಒತ್ತಾಯಿಸುವುದಕ್ಕಾಗಿ ಏರ್ಪಟ್ಟಿರುವ ರಾಷ್ಟ್ರೀಯಚಿಂತನ ಸಮಾವೇಶದಲ್ಲಿ ಕೂಡಿರುವ ಲೇಖಕರು, ಶಿಕ್ಷಣತಜ್ಞರು, ನ್ಯಾಯವಾದಿಗಳು, ನಿವೃತ್ತ ನ್ಯಾಯಾಧೀಶರು, ಶಾಸಕರು, ಶಿಕ್ಷಕರು, ವಿದ್ಯಾಥರ್ಿಗಳು, ಪೋಷಕರು, ಶಿಕ್ಷಕರ ಸಂಘ ಹಾಗೂ ಜನಪರ ಸಂಘಟನೆಗಳಿಗೆ ಸೇರಿದ ನಾವು, ಈ ಮೂಲಕ ಘೋಷಿಸುವುದೇನೆಂದರೆ-
1. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣವನ್ನು ಕೊಡುವ ಹಾಗೂ 1ನೇ ತರಗತಿಯಿಂದ 10ನೇ ತರಗತಿಯವರೆಗೆರಾಜ್ಯಭಾಷೆಯಾದಕನ್ನಡವನ್ನುಕಡ್ಡಾಯವಾಗಿ ಕಲಿಸುವ ಬಗ್ಗೆ ಕನರ್ಾಟಕ ಸಕರ್ಾರವುವಿಧೇಯಕಗಳನ್ನು ಪಾಸುಮಾಡಿದೆ. ಇದನ್ನುಅಭಿನಂದಿಸುತ್ತೇವೆ.
2. ಭಾರತವನ್ನು ವಸಾಹತುಶಾಹಿ ಆಡಳಿತಗಾರರು ಬಿಟ್ಟುಹೋಗಿ ಏಳು ದಶಕಗಳು ತುಂಬುತ್ತ ಬಂದವು.ಆದರೂ ಈ ಹೊತ್ತಿಗೂಭಾರತಕ್ಕೆಸಮಗ್ರವಾದ ಮತ್ತು ವೈಜ್ಞಾನಿಕವಾದ ಭಾಷಾನೀತಿ ಮತ್ತು ಭಾಷಾಯೋಜನೆಯೊಂದುಇಲ್ಲ. ನಮ್ಮರಾಜ್ಯ ಸಕರ್ಾರಕ್ಕೂತನ್ನದೇಆದ ಭಾಷಾನೀತಿ ಮತ್ತು ಶಿಕ್ಷಣನೀತಿ ಇರುವುದಿಲ್ಲ.ಇದು ನ್ಯಾಯಾಲಯಗಳು ಬಲಿಷ್ಠವರ್ಗಗಳ ಪರವಾಗಿ ಭಿನ್ನಭಿನ್ನವಾದ ತೀಪರ್ುಗಳನ್ನು ಕೊಡುವುದಕ್ಕೆಒಂದುಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಕರ್ಾರಗಳು ಈಗಲಾದರೂ-
ಅ. ಜನಭಾಷೆಗಳ ಪರವಾದ ಭಾಷಾನೀತಿ ಮತ್ತು ಶಿಕ್ಷಣನೀತಿಯನ್ನು ರೂಪಿಸಿ ಜಾರಿಗೆತರಬೇಕು.
ಆ. ಪ್ರಾಥಮಿಕ ಶಿಕ್ಷಣವನ್ನು ಸಕರ್ಾರವೇ ವಹಿಸಿಕೊಳ್ಳಬೇಕು.
ಇ. ಸಮಾನ (ಕಾಮನ್) ಮತ್ತು ಸಮೀಪ (ನೈಬರ್ಹುಡ್) ಶಾಲೆಯತತ್ವದಆಧಾರದ ಮೇಲೆ, ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ಕೊಡುವ ವ್ಯವಸ್ಥೆ ಮಾಡಬೇಕು.ಇದಕ್ಕೆ ಪೂರಕವಾಗಿಸಂವಿಧಾನದ 21ನೇ ಅನುಚ್ಛೇದಕ್ಕೆ ಭಾರತದ ಸಂಸತ್ತು ಸೂಕ್ತವಾಗಿ ತಿದ್ದುಪಡಿಯನ್ನುತರಬೇಕು.
ಈ. ಪ್ರತಿಯೊಂದು ಸಕರ್ಾರಿ ಶಾಲೆಯನ್ನುಕೇಂದ್ರೀಯ ವಿದ್ಯಾಲಯಗಳ ದಜರ್ೆಗೆಏರಿಸಬೇಕು.
3. `ಹುಟ್ಟಿನಿಂದ 18 ವರ್ಷದಎಲ್ಲಾ ಮಕ್ಕಳಿಗೆ ಸೂಕ್ತವಾದಆರೈಕೆ, ರಕ್ಷಣೆ, ಮತ್ತು ಶಿಕ್ಷಣವನ್ನು ಒದಗಿಸುವುದು ಸಕರ್ಾರದ ಹೊಣೆಯಾಗಿದೆ' ಎಂಬ ಒಕ್ಕಣಿಕೆಯಿರುವಮಕ್ಕಳ ಹಕ್ಕುಗಳನ್ನು ಕುರಿತ ವಿಶ್ವಸಂಸ್ಥೆಯಒಡಂಬಡಿಕೆಗೆ ಭಾರತವೂ ಸಹಿ ಹಾಕಿದೆ. ಈ ಸಕರ್ಾರವುಹಿನ್ನೆಲೆಯಲ್ಲಿ ಮಾತೃಭಾಷೆಯಲ್ಲಿ ಮಕ್ಕಳಿಗೆ ಅಗತ್ಯವಾದ ಕಾನೂನುಗಳನ್ನು ರೂಪಿಸಬೇಕು.
4. ಸಕರ್ಾರವುಎಲ್ಲಾ ಶಾಲೆಗಳಲ್ಲಿಯೂ ಇಂಗ್ಲೀಷನ್ನು ಪ್ರಾಥಮಿಕ ಹಂತದಿಂದಲೇಒಂದು ಭಾಷೆಯಾಗಿ ಸಮರ್ಥವಾಗಿ ವೈಜ್ಞಾನಿಕವಾಗಿ ಕಲಿಸಲು
ತಕ್ಕವ್ಯವಸ್ಥೆಯನ್ನುರೂಪಿಸಬೇಕು;ಇದಕ್ಕೆ ಪೂರಕವಾಗಿ ಸಮರ್ಥವಾದಇಂಗ್ಲೀಷನ್ನು ಕಲಿಸಲು ಶಿಕ್ಷಕರಿಗೆ ತರಬೇತಿಕೊಡುವ ವ್ಯವಸ್ಥೆಯನ್ನು ಪ್ರತಿಜಿಲ್ಲಾ ಕೇಂದ್ರಗಳಲ್ಲಿರುವ ಶಿಕ್ಷಕರ ತರಬೇತಿ ಸಂಸ್ಥೆಗಳ ಮೂಲಕ ಮಾಡಬೇಕು.
5. ಮಾತೃಭಾಷೆಯನ್ನು ಪ್ರಾಥಮಿಕ ಹಂತದಲ್ಲಿ ಸಮರ್ಥವಾಗಿಕಲಿತ ಮಕ್ಕಳು ಇಂಗ್ಲೀಷನ್ನುಅಥವಾ ಮಾತೃಭಾಷೆಯಲ್ಲದಯಾವುದೇಎರಡನೇ ಭಾಷೆಯನ್ನು ಸಮರ್ಥವಾಗಿಕಲಿಯಬಲ್ಲರು. ಈ ಶೈಕ್ಷಣಿಕ ಸತ್ಯವನ್ನು ವಿಶ್ವಸಂಸ್ಥೆಯ ಅಧ್ಯಯನಗಳು ಹಾಗೂ ಶಿಕ್ಷಣತಜ್ಞರ ಪ್ರಯೋಗಗಳು ದೃಢಪಡಿಸಿವೆ. ಈ ಹಿನ್ನೆಲೆಯಲ್ಲಿಪ್ರಾಥಮಿಕ ಹಂತದಲ್ಲಿ ಮಕ್ಕಳ ಮಾತೃಭಾಷೆಗಳನ್ನು ಈಗಿರುವುದಕ್ಕಿಂತ ಸಮರ್ಥವಾಗಿ ಕಲಿಸುವ ವ್ಯವಸ್ಥೆ ಮಾಡಬೇಕು.
6. ಶಿಕ್ಷಣದ ಉನ್ನತ ಹಂತದಲ್ಲಿ ವಿಜ್ಞಾನ, ಮಾನವಿಕ ಹಾಗೂ ಸಮಾಜ ವಿಜ್ಞಾನಗಳನ್ನು ತಾಯ್ನುಡಿಗಳಲ್ಲಿ ಕಲಿಸುವುದಕ್ಕೆ ಬೇಕಾದ ಪಠ್ಯಪುಸ್ತಕ ಮತ್ತು ಆಕರಗ್ರಂಥಗಳನ್ನು ನಿಮರ್ಿಸುವ ವ್ಯವಸ್ಥೆ ಆಗಬೇಕು.
7. ಸಕರ್ಾರಿ ಶಾಲೆಗಳನ್ನು ಉತ್ತಮಪಡಿಸಲು ಸಮುದಾಯಗಳ ಭಾಗವಹಿಸುವಿಕೆ ಸ್ವಾಗತಾರ್ಹ.ಆದರೆ ಸಕರ್ಾರಿ ಶಾಲೆಗಳನ್ನು ಸಾರ್ವಜನಿಕ ಸಹಭಾಗಿತ್ವದ (ಪಿಪಿಪಿ) ಅಡಿಯಲ್ಲಿಎನ್.ಜಿ.ಓ, ಕಾಪರ್ೋರೇಟ್ ಸಂಸ್ಥೆ ಹಾಗೂ ಧಾಮರ್ಿಕ ಸಂಸ್ಥೆಗಳಿಗೆ ವಹಿಸಿಕೊಡಬಾರದು.ಶಿಕ್ಷಣನೀತಿ ಮತ್ತುಯೋಜನೆಯನ್ನುರೂಪಿಸಲು ಮತ್ತುಜಾರಿಮಾಡಲು ಶಿಕ್ಷಣತಜ್ಞರ ತಜ್ಞತೆಯನ್ನು ಸರಕಾರ ಸೂಕ್ತವಾಗಿ ಬಳಸಿಕೊಳ್ಳಬೇಕು.ಆದರೆ ಈ ಕೆಲಸವನ್ನು ಎನ್.ಜಿ.ಒಗಳಿಗಾಗಲಿ, ಕಾಪರ್ೋರೇಟ್ ಸಂಸ್ಥೆಗಳಿಗಾಗಲಿ ವಹಿಸಕೂಡದು.
8. ಖಾಸಗಿ ಶಿಕ್ಷಣ ಸಂಸ್ಥೆಗಳು ಸಂವಿಧಾನದ 19(ಜಿ) ಕಾಲಮಿನ ದುರುಪಯೋಗ ಮಾಡಿಕೊಂಡು ಶಿಕ್ಷಣವನ್ನು ಒಂದುಉದ್ದಿಮೆಯನ್ನಾಗಿ ಮಾಡಿಕೊಂಡು ಪೋಷಕರನ್ನು ಸುಲಿಗೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ಸಕರ್ಾರವು ಸೂಕ್ತವಾದ ಕಾನೂನುಗಳನ್ನು ರೂಪಿಸಬೇಕು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುತ್ತೇವೆಂದು ಸರಕಾರದಿಂದ ಪರವಾನಗಿ ಪಡೆದುಇಂಗ್ಲೀಷ್ ಶಿಕ್ಷಣ ಕೊಡುವ ಮೂಲಕ ಜನತೆಗೆ ಸುಳ್ಳು ಹೇಳಿ ವಂಚನೆ ಮಾಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕು.
9. ನವ ಉದಾರೀಕರಣದಪ್ರಸ್ತುತ ಸನ್ನಿವೇಶದಲ್ಲಿ,ಶಿಕ್ಷಣವನ್ನು ಸರಕನ್ನಾಗಿಪರಿವತರ್ಿಸಿ ಉಳ್ಳವರಿಗೆ ಮಾರಾಟ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ನ್ಯಾಯಾಲಯಗಳು ತೀಪರ್ುಕೊಡುತ್ತಿವೆ. ನಮ್ಮದೇಶದ ಪ್ರಜಾಪ್ರಭುತ್ವ, ಶಿಕ್ಷಣ ಮತ್ತು ಜನಭಾಷೆಗಳ ಮೇಲೆ ನಡೆಯುತ್ತಿರುವಆಕ್ರಮಣವನ್ನುತಡೆಗಟ್ಟುವ ನಿಟ್ಟಿನಲ್ಲಿ, ಪ್ರಜಾತಂತ್ರ ಮತ್ತು ಸಂವಿಧಾನದ ಆಶಯಗಳನ್ನು ಸೂಕ್ತವಾಗಿ ನಿರ್ವಚಿಸುವಲ್ಲಿ ಅವು ಸಂಪೂರ್ಣವಾಗಿ ವಿಫಲವಾಗಿವೆ. ಇದರ ಬಗ್ಗೆ ಸಮಾವೇಶವುತನ್ನಆತಂಕವನ್ನುದಾಖಲಿಸುತ್ತದೆ.
10. ಮಾತೃಭಾಷಾ ಮಾಧ್ಯಮದ ಪರವಾದ ಈ ಚಳುವಳಿಯು, ಈಗಿರುವ ಸೀಮಿತ ನೆಲೆಯಿಂದ ಹೊರಬಂದು, ನೇಕಾರರ, ರೈತರ,ಮಹಿಳೆಯರ, ದಲಿತರ, ವಿದ್ಯಾಥರ್ಿಗಳ ಹಾಗೂ ಶಿಕ್ಷಕರ ಚಳುವಳಿಗಳನ್ನೂ ಒಳಗೊಂಡು ವಿಶಾಲಗೊಳ್ಳ್ಳಬೇಕು. ಇಂಗ್ಲೀಷ್ ಭಾಷೆ ಮತ್ತು ಮಾಧ್ಯಮಕುರಿತಂತೆ ಪೋಷಕರಲ್ಲಿರುವಆತಂಕ ಮತ್ತುತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲುಅವರಜತೆ ಸಂವಾದ ಮಾಡಬೇಕು.ಇದಕ್ಕಾಗಿಶಿಕ್ಷಣದಲ್ಲಿ ಮಾತೃಭಾಷೆಯನ್ನು ಅಳವಡಿಸುವ ಬಗ್ಗೆ ಒತ್ತಾಯಿಸುವಎಲ್ಲ ಸಂಘಟನೆಗಳು ಮತ್ತು ವ್ಯಕ್ತಿಗಳು ಸೇರಿಒಂದುಒಕ್ಕೂಟವನ್ನು ರಚಿಸಿಕೊಂಡು ಮುಂದಿನ ಹೋರಾಟವನ್ನು ಮಾಡಬೇಕೆಂದು ಸಮಾವೇಶವು ನಿರ್ಧರಿಸಿತು.
ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ: ರಾಷ್ಟ್ರೀಯಚಿಂತನ ಸಮಾವೇಶದ ಸಂಘಟಿಕರ ಹಾಗೂ ಸಮಾವೇಶದಲ್ಲಿ ಭಾಗಿಯಾದ ಸಮಸ್ತ ಚಿಂತಕರ ಪರವಾಗಿ
5ಏಪ್ರಿಲ್2015.

ಶನಿವಾರ, ಏಪ್ರಿಲ್ 4, 2015

ಜೋಗತಿಯ ಜೊತೆಗೊಂದು ಆತ್ಮೀಯ ಸಂವಾದ

-ಬೇಲೂರು ರಘುನಂದನ್
ಕಾಜಾಣ ಕಾವ್ಯ ಕಮ್ಮಟದ ಸಲುವಾಗಿ ನನ್ನನ್ನೂ ಒಳಗೊಂಡಂತೆ ಸುಮಾರು ಐವತ್ತು ಜನ ಯುವಕವಿಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಸತ್ಯಕಾಮ ಪ್ರತಿಷ್ಠಾನದ ಕಲ್ಹಳ್ಳಿಗೆ ಸೇರಿದ್ವಿ. ಈ ಸಂದರ್ಭದಲ್ಲಿ ಟಿ.ಕೆ.ದಯಾನಂದ್ ಅವರಿಗೆ 2015 ರ ಸಾಲಿನ ಕಾಜಾಣ ಯುವ ಪುರಸ್ಕಾರ ಕೊಡುವುದಿತ್ತು. ಯುವ ಪುರಸ್ಕಾರ ಪ್ರದಾನ ಮಾಡುವ ಸಲುವಾಗಿ ಅಮ್ಮನನ್ನು ಕರೆದಿದ್ದೆವು.
ಅಂದು ಅಮ್ಮ, ತನ್ನ ಕ್ಷೇತ್ರದ ರಬಕವಿಯ ಮನೆಯಲ್ಲಿ ಜನರ ಸಮಸ್ಯೆಗಳ ಅಹವಾಲು ಕೇಳುತ್ತಾ ಕುಳಿತಿದ್ದರು. ನಾನು ಕಮ್ಮಟದ ಸಲುವಾಗಿ ಒಂದು ದಿನ ಮುಂಚಿತವಾಗಿ ತೇರದಾಳಕ್ಕೆ ಹೋಗಿದ್ದೆ. ನೇರವಾಗಿ ಒಮ್ಮೆ ಕರೆದು ಬರೋಣ ಅಂತ ವೀಣಾ ಬನ್ನಂಜೆಯವರು ಹೇಳುತ್ತಲೇ ಇದ್ದರು. ಸರಿ ಸಮಯ ಕೂಡಿತೆಂದು ಅಮ್ಮನನ್ನು ಕರೆಯಲು ರಬಕವಿಯ ಮನೆಗೆ ಹೋದೆ. ಅಲ್ಲಿಗೆ ವೀಣಾ ಮೇಡಂ ಕೂಡ ಬರೋದಿತ್ತು.
ನಾ ಹೋಗುವ ವೇಳೆಗೆ ಒಂದೈದಾರು ಮಂದಿ ಜೋಗತಿಯರು ಅಮ್ಮನ್ನನ್ನು ಭೇಟಿ ಮಾಡಲು ಕುಳಿತಿದ್ದರು. ಅಷ್ಟೇ ಅಲ್ಲಾ ತನ್ನ ಕ್ಷೇತ್ರದ ಅನೇಕ ಜನರು ಕೂಡ ಅಲ್ಲಿ ನೆರದಿದ್ದರು. ಸರಿ ಅಮ್ಮ ಬಂದು ಎಲ್ಲರನ್ನು ಮಾತಾಡಿಸಿ ಅಲ್ಲಿದ್ದ ಮಂಗಳಮುಖಿಯರನ್ನು ಕುರಿತು ತನ್ನನ್ನು ಭೇಟಿ ಮಾಡಲು ಬಂದಿದ್ದ ಇತರರಿಗೆ ಅವರ ಬಗ್ಗೆ ಹೇಳೋಕೆ ಶುರು ಮಾಡಿದರು. ‘ನೋಡ್ರಪ್ಪ, ಇವರನ್ನು ಮಂಗಳಮುಖಿ, ಚಕ್ಕ, ನಂ 9, ಜೋಗತೇರು, ತೃತೀಯಲಿಂಗಿಗಳು, ಕೋಜ ಹೀಗೆ ಬೇರೆ ಬೇರೆ ಕಡೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ’ ಅಂತ ಹೇಳೋವಾಗ ಅಲ್ಲಿದ್ದ ಜೋಗತಿಯರಿಗೆ ಅವ್ವಾರು ಎನ್ ಹೇಳುತ್ತಿದ್ದಾರೆ ಇದೆಲ್ಲಾ ಇದೆಯಾ ಅಂತೆಲ್ಲಾ ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿದ್ದರು. ಅಲ್ಲಿ ನರೆದಿದ್ದವರಿಗೆ ನೋಡ್ರೀ ಇವರೆಲ್ಲಾ ನಮ್ಮವರೇ ಶೋಭಾ, ಬಸಮ್ಮ, ಪರಷಮ್ಮ, ಸಂಪತ್ತವ್ವ ಅಂತ’ ಎಲ್ಲರಿಗೂ ಪರಿಚಯಿಸಿದರು. ಅಮ್ಮ ಆ ಮಂಗಳಮುಖಿಯರನ್ನು ಹೆಸರು ಹೇಳಿ ಕೈ ಕುಲುಕಿ ಇತರರಿಗೆ ಕೈ ಕುಲುಕಿ ಪರಿಚಯ ಮಾಡಿಕೊಳ್ಳಿ’ ಅಂದ ಕೂಡಲೇ ಶೋಭಾ ಮತ್ತು ಸಂಪತ್ತವ್ವನ ಕಣ್ಣುಗಳು ತೇವವಾಗಿದ್ದವು. ಅಲ್ಲೇ ಇದ್ದ ನನಗೆ, ಆಸಿಡ್ ದಾಳಿಗೆ ಒಳಗಾದ ಹೆಣ್ಣು ಮಗಳೊಬ್ಬಳಿಗೆ ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಮ್ಮ ಮುತ್ತಿಟ್ಟು ಪ್ರೀತಿ ತೋರಿದ ಘಳಿಗೆ ನೆನಪಾಗಿ ಮನ ತುಂಬಿ ಬಂದಿತು.
ಅಮ್ಮನನ್ನು ಕಾಣಲು ಬಂದಿದ್ದ ಮಂಗಳಮುಖಿಯರನ್ನು ಬಿಟ್ಟು ಉಳಿದವರನ್ನೆಲ್ಲಾ ಬೇಗ ಬೇಗ ಮಾತಾಡಿಸಿ ಕಳಿಸಿ ಶೋಭಾ, ಪರ್ಶವ್ವ ಹಾಗೂ ಇನ್ನಿತತರ ಜೊತೆ ಅಮ್ಮ ಮಾತಿಗಿಳಿದ ಕ್ಷಣಗಳನ್ನು ಇಲ್ಲಿ ನೆನಪಿಸಿಕೊಳ್ಳೋದು ಸೂಕ್ತ. ವರದಿ ತರ ಅನ್ನಿಸಿದರೂ ಸರಿಯೇ ಬರೆದುಬಿಡೋಣ ಅಂತ ಆ ಸಭಾಷಣೆಯನ್ನು ಇಲ್ಲಿ ನಮೂದಿಸುತ್ತಿದ್ದೇನೆ
ಅಮ್ಮ : ‘ ಬರ್ರವ್ವ , ಹೇಳ್ರವ್ವ’ ಅಂತ ಕೇಳಿದ್ರು.
ಶೋಭಾ : ‘ಎನಿಲ್ರೀ ಅವ್ವಾರೇ ನಮ್ಮ ಆಯಿಗೇ ಒಂದೀಟು ಏನಾರು ಮಾಡ್ರಿ’
ಅಮ್ಮ : ‘ಅಲ್ಲೇ ಅವ್ವ ಮೊದ್ಲು ನಿಂಗೇನಾರೂ ಮಾಡೋಣು ಆಮೇಲೆ ನಿನ್ನ ಆಯಿಗೇ, ಗುಡಿಗೆ ನೋಡೋಣು’.
ಶೋಭಾ ಮತ್ತು ಸಂಪತ್ತವ್ವ : ‘ಇಲ್ರಿ ಅವ್ವಾರೇ, ಹಂಗ ಆಗಂಗಿಲ್ಲ ಆಯಿಗೇ ಏನಾರು ಮಾಡಾಕಬೇಕು’
ಅಮ್ಮ : ನಿನ್ನ ಆಯಿಗೇ ಮಾಡಿದ್ರೆ ನೀನು, ನಿನ್ನ ಗುಡಿ, ನಿನಗ ನಿನ್ನ ಆಯಿಗೆ ಮಾತ್ರ ಛಲೋ ಆಗ್ತದ ಉಳಿಕಿ ಮಂದಿ ಎಲ್ ಹೋಗ್ಬೇಕು ಯವ್ವಾ ?
ಪರ್ಶವ್ವ : ಮತ್ತೇನ್ರಿ ಮಾಡೋಣು ಅವ್ವಾರೇ ರಸ್ತೆಯಾಗ ನಿಂತ್ರೆ ಪೋಲಿಸ್ನವರು ಬಡಿತಾರಾ, ದಗದಾ ಯಾರೂ ಕೊಡಂಗಿಲ್ಲ, ಆಯಿನಾ ಬಿಟ್ಟು ಮತ್ತ್ಯಾರ್ರೀ ಅವ್ವಾರೇ ನಮಗಾ ?
ಅಮ್ಮ : ಅದು ಖರೇನಾ, ರಸ್ತೆ ಮ್ಯಾಗ ನಿಂತ್ರ, ವೇಶ್ಯಾವಾಟಿಕೆ ಮಾಡಿದ್ರ ಹೆಂಗವ್ವ ? ನಿಮ್ಮ ಸಮುದಾಯದ ಮಂದಿ ಬೇಕಾದಂಗ ಕೆಲಸ ಮಾಡ್ಲಿಕ್ಕೆ ಹತ್ಯಾರ. ದುಡಿತಾರ ರೊಕ್ಕ ಸಂಪಾದಿಸ್ತಾರ.
ಶೋಭಾ : ಅವ್ವಾರೇ ಇಲ್ರೀ ಇಲ್ಲಿ ಅದೆಲ್ಲಾ ಆಗಂಗಿಲ್ಲ. ಮತ್ತೇನ್ರಿ ಮಾಡೋಣು
ಅಮ್ಮ : ಅದ್ಯಾಕವ್ವ ಎಲ್ಲಾ ಆಗ್ತದ. ಮನಸು ಬೇಕು ಅಷ್ಟೇ. ನೋಡ್ರಿ ಚಿಕ್ಕಬಳ್ಳಾಪುರದ ಡಿ,ಸಿ. ಆಫೀಸಿನಾಗ ನಿಮ್ಮ ಸಮುದಾಯದ ಇಪ್ಪತ್ತೈದು ಮಂದಿ ಇಡೀ ಡಿ.ಸಿ. ಆಫೀಸಿನಲ್ಲಿ ಸ್ವಚ್ಛ ಮಾಡೋ ಕೆಲಸ ಎಲ್ಲಾ ಅವರೇ ಮಾಡ್ತಾ. ಒಂದೇ ತರದ ಸೀರೆ ಕಟಗೊಂಡು ದಗದಾ ಮಾಡ್ತಾರೆ. ಅವರನ್ನ ನೋಡೋಕೆ ಒಂದು ಖುಷಿ ನೋಡ್ರಿ ಮತ್ತಾ.
ಪರ್ಶವ್ವ : ಹೂನ್ರಿ, ನಮಗೂ ಹಂಗಾ ಮಾಡ್ರಿ. ನಾವೂ ಓದಿಲ್ಲಾ ಬರ್ದಿಲ್ಲಾ, ತೊಳಿತೀವಿ ಬಳಿತೀವಿ ಎಲ್ಲಾ ಮಾಡ್ತೀವ್ರಿ ಅವ್ವಾರೇ.
ಅಮ್ಮ : ತಡಿಯವ್ವ ಪರ್ಶವ್ವ. ಅದು ಜಿಲ್ಲಾ ಮಟ್ಟದಾಗ ಆಗ್ಯಾದ. ನಮ್ಮ ಮಂದಿ ಎಷ್ಟಿದಾರ್ರೀ ಒಟ್ಟ ತೇರದಾಳ, ಬನಹಟ್ಟಿ, ರಬಕವಿ ಸುತ್ತಮುತ್ತ. ಅದನ್ನೆಲ್ಲಾ ಲೆಖ್ಖ ತಗೊಂಡು ಬರ್ರೀ ಏನಾರು ಯೋಚ್ನೆ ಮಾಡೋಣು.
ಶೋಭಾ : ಒಟ್ಟು ಎಷ್ಟು ಮಂದಿ ಇದಾರ್ರಿ ಅಂತ ಗೊತ್ತಿಲ್ರಿಯವ್ವಾ. ನಾವು ಇಲ್ಲಿ ಒಟ್ಟು ಒಂದು ಐದಾರು ಮಂದಿ ಇದ್ದೀವಿ ನೋಡ್ರಿ.
ಅಮ್ಮ : ಐದಾರು ಮಂದಿಗೆ ಉಪಯೋಗ ಮಾಡಿದ್ರ ಉಳಿಕಿ ಮಂದಿ ಎನ್ ಮಾಡಬೇಕು. ಅವರೂ ನಿಮ್ಮಂಗೆ ಕಷ್ಟ ಪಡ್ತಿರ್ತಾರೋ ಅಲ್ಲೋ. ಮತ್ತೆ ಐದಾರು ಮಂದಿ ಮಾತ್ರ ಛಲೋ ಹೆಂಗೆ ಮಾಡೋದು ಹೇಳ್ರವ್ವ. ಅದೆಲ್ಲಾ ಅಗಲ್ಲವ್ವ. ನೀವು ಮೊದ್ಲು ಹಿಂಗ್ ಮಾಡ್ರಿ. ಎಷ್ಟು ಮಂದಿ ನಿಮ್ಮ ಸಮುದಾಯದವರು ಇದ್ದಾರೆ ನೋಡ್ರಿ. ನಾವೂ ಎಲ್ ಎಲ್ಲೆಲ್ಲಿ ಇದ್ದಾರೆ ನೋಡ್ತೀವಿ. ಆಮೇಲೆ ಏನಾರು ಯೋಜನೆ ಹಾಕೋಕೆ ಬರತೈತಿ. ಸರ್ಕಾರದಾಗೂ ನಲವತ್ತು ವರ್ಷ ಆದೋರಿಗೆ ಪೆನ್ಶನ್ ಸ್ಕೀಮ್ ಐತಿ. ಅದಕ್ಕೆ ಅರ್ಜಿ ಹಾಕ್ರಿ. ಪ್ರಯೋಜನ ಪಡ್ಕೋರಿ ಮತ್ತ.
ಎಲ್ಲರೂ : ಹೌದೇನ್ರಿ ಅವ್ವಾರೇ. ಹಂಗಾ ಮಾಡ್ತೀವಿ ಬಿಡ್ರಿ ಮತ್ತ.
ಅಮ್ಮ : ನೋಡ್ರಿ ಅಯೀನೂ ಪೂಜಿ ಮಾಡ್ರಿ, ಬೇಕಾದಂಗ ಕೆಲಸ ಐತಿ ಅದನೂ ಮಾಡ್ರೀ. ಒಂದು ಗಾಡಿ ಹಾಕ್ಕೋರಿ ಅದ್ರ ಮ್ಯಾಗಾ ಐರನ್ ಬಾಕ್ಸ್ ಇಟ್ಗೋರಿ. ಬೀದಿ ಬೀದಿಗೆ ಹೋಗ್ರಿ. ಇಸ್ತ್ರಿ ಹಾಕ್ರಿ. ಅಷ್ಟೇ ಅಲ್ಲ ಒಂದು ತಳ್ಳೋ ಗಾಡಿ ಮ್ಯಾಗ ಟೈಲರಿಂಗ್ ಗಾಡಿ ಕೂಡ ಹಾಕ್ಕೊಬೋದು. ಬಾಳೆಹಣ್ಣು, ಪಲ್ಲೆ ಮಾರಬಹುದು. ಏನೆಲ್ಲಾ ಮಾಡಬಹುದು. ರಸ್ತೆ ಮ್ಯಾಗ ನಿಲ್ಲೋ ಬದ್ಲು ಅದೇ ರಸ್ತೆ ಮ್ಯಾಗ ದಗದಾ ಮಾಡ್ರಿ. ಬಂಡವಾಳ ಇನ್ನೊಂದು ವಗೈರೆಗೆ ಅನೇಕೆ ಸ್ಕೀಮ್ಗಳು ಅದಾವ ಅದನ್ನೆಲ್ಲಾ ತಿಳಿಸ್ತೀನಿ ಅಂದ್ರು. ಸದ್ಯದಲ್ಲೇ ಇನ್ನೂ ಒಂದಷ್ಟು ಯೋಜನೆ ನಿಮಗಾಗಿ ತರುತ್ತೇವೆ ಅಂದ್ರು.
ಶೋಭಾ : ಹೌದೇನ್ರಿ ಯವ್ವ.
ಅಮ್ಮ : ಎಲ್ಲಾ ಆಗ್ತದ ಮೊದ್ಲು ಮುಂದ ಬನ್ರೀ. ಈಗ ಒಂದು ಯೋಜನೆ ಮಾಡ್ತಾ ಇದ್ದೀವಿ. ನಿಮಗೆಲ್ಲಾ ದುಡಿಮೆಗೆ ಅನಕೂಲ ಹಾಕ್ಕೆತಿ. ಈಗ ನಡ್ರೀ
ಶೋಭಾ : ಆಯ್ತು ಅಮ್ಮಾರೇ ನಿಮ್ಮಿಂದ ಒಂದೀಟು ಏನಾರ ಆಗಲಿ.
ಅಮ್ಮ : ಅಯ್ತ್ರವ
ಶೋಭಾ : ಬತ್ತೀವ್ರಿ. ಆದ್ರೂ, ಆಯೀಗೆ ಏನಾದ್ರೂ ಒಂದೀಟು ಮಾಡ್ರಿ.
ಅಮ್ಮ : ಆಯೀನೆ ಎಲ್ಲಾ ಮಾಡ್ತಾಳ. ನಾ ಎನ್ ಮಾಡಾಕ ಬರ್ತದ. ನಡ್ರೀ ಒಮ್ಮೆ ನಿಮ್ಮ ಗುಡೀಗೆ ಬರ್ತೀನಿ.
ಎಲ್ಲರೂ : ಹ್ಞೂ ಅಯ್ತವ್ವಾರೆ.
ಹೀಗೆ ಹೇಳಿ ಎಲ್ಲರೂ ಹೊರಟರು. ಅಷ್ಟೊತ್ತಿಗೆ ಕಾಜಾಣದ ಕಾರ್ಯಕ್ರಮಕ್ಕೆ ಅಮ್ಮನನ್ನು ಕರೆಯಲು ವೀಣಾ ಬನ್ನಂಜೆಯವರು ಬಂದರು. ಅವ್ರಿಗೆ ಇವರನ್ನು ನೋಡ್ರವ್ವ ಇವರು ವೀಣಾ ಬನ್ನಂಜೆ ಅಂತ ಲೇಖಕಿ. ಗೊತ್ತೋ ಇಲ್ಲೋ ಆದ್ರೂ ತಲೆ ಹೂ ಅಂತ ಆಡಿಸಿದ್ರು. ವೀಣಾ ಬನ್ನಂಜೆಯವರಿಗೆ “ತಾಯಂದಿರು ಬಂದಿದ್ರು ಮಾತಾಡಿಸುತ್ತಿದ್ದೆ’ ಅಂದ್ರು ಅಮ್ಮ. ಅದಕ್ಕವರು ‘ಅಕ್ಕಾ’ ಎಂದು ನಮಸ್ಕಾರ ಅಂತ ವೀಣಾ ಮೇಡಂ ಹೇಳಿದರು.
ಇಡೀ ಘಟನೆಯಿಂದ ಅಲ್ಲಿ ಅಮ್ಮನ ಅನುಭವ ಮತ್ತು ಕಾಳಜಿಯನ್ನು ವ್ಯಕ್ತ ಪಡಿಸುವಂತೆ ತೋರುತ್ತಿತ್ತು. ಅವರೆಲ್ಲಾ ಹೋದ ಮೇಲೆ ಅವರ ಮನಸು ತೀವ್ರವಾಗಿ ಈ ಸಮುದಾಯದವರ ಬಗೆಗಿನ ಕಾಳಜಿಯನ್ನು ಮತ್ತೆ ಮತ್ತೆ ವ್ಯಕ್ತಪಡಿಸುವಂತೆ ಮನೆಯಲ್ಲಿ ಯಾರು ಯಾರು ಇದ್ದರೋ ಅವರಿಗೆಲ್ಲಾ ಇವರ ಬಗ್ಗೆ ಹೇಳುತ್ತಲೇ ಇದ್ದರು. ಆ ವೇಳೆಗೆ ಅಂಗವಿಕಲರ ಸಂಘಟನೆ ಮಾಡುತ್ತಿದ್ದೇನೆ ಅಂತ ಒಬ್ಬರು ಬಂದರು. ಅವರು, ಅದು ಮಾಡಿದ್ದೀನಿ ಇದು ಮಾಡಿದ್ದೀನಿ ಅವ್ವಾರೇ ಅಂತ ಹೇಳೋಕೆ ಶುರು ಮಾಡಿ ಇನ್ನೇನೇನೋ ಮಾಡಿಕೊಡಬೇಕು ಅಂತ ಬೇಡಿಕೆ ಇಟ್ಟರು. ಅವರ ಮಾತನ್ನು ಕೇಳಿಸಿಕೊಳ್ಳದೇ ಅವರಿಗೂ ಅಷ್ಟು ಹೊತ್ತಿಗೆ ಬಂದು ಹೋಗಿದ್ದ ತೃತೀಯಲಿಂಗಿಗಳ ಬಗ್ಗೆ ಮತ್ತೆ ಮತ್ತೆ ಹೇಳೋಕೆ ಶುರು ಮಾಡಿದ್ರು. ಹೇಳ್ತಾ ಹೇಳ್ತಾ ನೋಡ್ರಿ ನಿಮಗೆ ರೇವತಿ ಗೊತ್ತೇನ್ರಿ ? ಇಲ್ಲ ಅಂದ್ರು. ಹೋಗ್ಲಿ ‘ನಿಮಗ ನಮ್ಮ ಕ್ಷೇತ್ರದಾಗ ಒಟ್ಟು ಎಸ್ ಮಂದಿ ಜೋಗ್ತೆರು ಅದಾರೆ ಅಂತ ಗೊತ್ತೇನ್ರಿ’ ? ಅಂತ ಕೇಳಿದ್ದಕ್ಕೆ ‘ಇಲ್ರಿ ಅಮ್ಮಾರೇ’ ಅಂತ ತಲೆಯಾಡಿಸಿದ. ‘ಅಯ್ಯೋ ದೈವ’ ಅಂದು, ರೇವತಿ ಅಂದ್ರೆ ಒಬ್ಬ ಮಂಗಳಮುಖಿ ಹೆಣಮಗಳು. ಆಕೆ ಒಂದು ನಾಟಕದಾಗ ಪಾರ್ಟ್ ಮಾಡ್ಯಾಳ. ಪುಸ್ತಕ ಬರದಾಳ. ಅಷ್ಟೇ ಅಲ್ಲ ಅವರ ಸಮುದಾಯವನ್ನು ಸಂಘಟನೆ ಕೂಡ ಮಾಡ್ತಾಳ. ಅಷ್ಟೇ ಅಲ್ಲಪ್ಪ ಈ ತರದ ತೃತೀಯ ಲಿಂಗಿಗಳ ಬಹುದೊಡ್ಡ ಸಂಘಟನೆ ಇದೆ. ದೇಶ, ವಿದೇಶ ಎಲ್ಲಾ ಕಡೆ ಅಂದ್ರು. ಇವರೆಲ್ಲಾ ಒಬ್ಬ ಗುರು ಇರುತ್ತಾರೆ. ಆಪರೇಶನ್ ಕೂಡಾ ಮಾಡಿಸಿಕೊಳ್ಳುತ್ತಾರೆ ಅಂತ ಅವರ ಬಗ್ಗೆ ತಮಗೆ ತಿಳಿದಿರುವ ಎಲ್ಲಾ ಮಾಹಿತಿಗಳನ್ನು ಹೇಳುತ್ತಿದ್ದರು. ಇವರು ಮಾತನಾಡುತ್ತಿರುವಾಗ ಇನ್ನಷ್ಟು ಜನ ಅಲ್ಲಿ ಸೇರಿಕೊಂಡರು. ಅವರ ಮಾತುಗಳನ್ನು ಪ್ರೀತಿಯಿಂದ, ಕಾಳಜಿಯಿಂದ ಮತ್ತು ಕುತೂಹಲದಿಂದ ಎಲ್ಲರೂ ಕೇಳುತ್ತಿದ್ದರು. ಒಬ್ಬರೂ ತುಟುಕ್ ಪಿಟಕ್ ಅನ್ನಲಿಲ್ಲ. ಅಮ್ಮ ಹೇಳುವ ಮತ್ತು ಅಲ್ಲಿದ್ದವರೆಲ್ಲಾ ಕೇಳುವ ಮನಸುಗಳು ಆರ್ದಗೊಂಡಿದ್ದು ಇಡೀ ತೃತೀಯ ಲಿಂಗಿಗಳ ಬಗೆಗೆ ಅದಮ್ಯ ಪ್ರೀತಿಯನ್ನು ತೋರುವಂತಿತ್ತು. ನಿರ್ಲಕ್ಷ್ಯಕ್ಕೆ ನವಿರು ಪ್ರೇಮವನ್ನು ತೋರುವಂತಿತ್ತು. ಕೊನೆಯದ್ದಾಗಿ ನನ್ನ ಭೂಮಿ ನಾಟಕದ ಬಗೆಗೂ ಹೇಳಿ, ನಾನೂ ಅವಕಾಶ ಬಂದರೆ ಒಮ್ಮೆ ತೃತೀಯಲಿಂಗಿ ಪಾತ್ರವನ್ನು ನಾಟಕದಲ್ಲಿ ಮಾಡಬೇಕು ಅಂದ್ರು. ಅಲ್ಲಿದ್ದವರೆಲ್ಲಾ ಒಕ್ಕೊರಲಿನಿಂದ ‘ಮಾಡ್ರಿ ಅವ್ವಾರೇ’ ಅಂದ್ರು.
ಇದೆಲ್ಲಾ ಆದ ಮೇಲೆ ಅಂಗವಿಕಲರ ಸಂಘಟನೆ ಅಂತ ಬಂದಿದ್ದವರು ಮೇಡಮ್ಮೊರೆ ಬುದ್ಧಿ ಮಾಂದ್ಯರಿಗಾಗಿ ಒಂದು ಕಾರ್ಯಕ್ರಮ ಮಾಡಬೇಕು ಅಂದ್ರು. ಎನ್ ಕಾರ್ಯಕ್ರಮ ? ಎನಿಲ್ರಿ ‘ಬುದ್ಧಿಮಾಂದ್ಯರನ್ನೆಲ್ಲಾ ಸೇರಿಸಿ ಒಂದು ಕಾರ್ಯಕ್ರಮ ಮಾಡೋಣು ಅಂತ’ . ಸರಿ ಎಲ್ಲಿ ಸಿಗ್ತಾರ ಅವರು. ‘ಮೇಡಂಮ್ಮೊರೆ ಬುದ್ಧಿ ಮಾಂದ್ಯರ ಶಾಲೀಲಿ ಇರತಾರ್ರೀ ಅವರನ್ನ ಕರ್ಕೊಂಡು ಬರ್ತೀವಿ ಇಲ್ಲ ಅವರಿಗೆಲ್ಲಾ ಬರೋಕೆ ಹೇಳ್ತೇವೆ’ ಅಂದ್ರು ಸಂಘಟಕರು. ಅದಕ್ಕೆ ಅಮ್ಮ ಸಿಟ್ಟು ಮಾಡಿಕೊಂಡು ‘ಅಲ್ರೀ ಶಾಲಿಯಾಗಿ ಇರೋರನ್ನೋ ಕರ್ಕೊಂಡು ಬಂದು ಕಾರ್ಯಕ್ರಮ ಮಾಡಾಕ ನೀವೇ ಆಗಬೇಕೆನ್ರಿ. ಅವರಿಗೆ ಬರಾಕ ಹೇಳ್ತೀನಿ ಅಂದ್ರ ಅವರಿಗೆ ಒಟ್ಟುಗೂಡೋ, ಸಂಘಟನೆ ಆಗೋ ಶಕ್ತಿ ಐತೆನ್ರಿ. ಮೊದ್ಲು ಎಲ್ಲೆಲ್ಲಿ ಇದಾರೋ ಅವರನ್ನ ಮೊದಲು ನೀವು ಸಂಘಟನೆ ಮಾಡ್ರಿ. ಮನ್ಯಾಗ ಹುಚ್ಚ ಅಂತ ಕೂಡಿ ಹಾಕಿರೋ ಮಂದೀನ ಹುಡುಕಿ ಅವರಿಗೆ ಔಷದ ಕೊಡಿಸ್ರಿ. ಡಾಕ್ಟ್ರು ಭೇಟಿ ಮಾಡಿಸಿ. ಅವರ ತಂದೆ ತಾಯಿಗೆ ತಿಳಿಹೇಳಿ. ಎಲ್ಲೆಲ್ಲಿ ಆ ತರ ಜಗತ್ತೇ ಗೊತ್ತಿಲ್ಲದ ಮಂದಿ ಅವರನ್ನೆಲ್ಲಾ ಸೇರಿಸಿ. ಅವರಿಗೆ ಬೇಕಾಗೋ ಮೂಲಭೂತ ವ್ಯವಸ್ಥೆಗೆ ಏನಾದ್ರೂ ಒಂದೀಟು ಸಹಕಾರ ಕೊಡ್ರಿ. ಕಾರ್ಯಕ್ರಮಗಳನ್ನು ಮಾಡಿ ಏನೇನು ಹೆಚ್ಚ್ಹು ಉಪಯೋಗ ಇಲ್ಲ. ಸರ್ಕಾರದಿಂದ ಏನೇನೂ ಅಂಗವಿಕಲರಿಗಾಗಿ ಅನುಕೂಲ ಐತೋ ಅವನ್ನೆಲ್ಲಾ ಮುಂದೆ ನಿಂತು ಬ್ರಷ್ಟರಾಗದೇ ಕೊಡಿಸ್ರಿ ’ ಅಂದು ಅವರನ್ನೆಲ್ಲಾ ಕಳಿಸಿದರು. ಬಂದವರು ಕಾರ್ಯಕ್ರಮದ ಸುದ್ಧಿ ಬಿಟ್ಟು ಬರ್ತೀವಿರ್ರೀ ಅವ್ವಾರೇ ಅಂತ ಹೊರಟರು. ಹೊರಗಡೆ ಬಂದಿದ್ದ ಇಬ್ಬರಲ್ಲಿ ಒಬ್ಬ ನಮ್ಮೂರಿನಾಗ ಹುಚ್ಚ ಅಂತ ಕೂಡಿ ಹಾಕಿರೋ ಬಸಣ್ಣನಿಗೆ ಆಸ್ಪತ್ರೆಗೆ ಸೇರಿಸಬೇಕು. ಈ ವಿಷಯವಾಗಿ ಅವರ ಮನೆಯವರ ಜತೆ ಮಾತಾಡಬೇಕು ಅಂತ ಮಾಡಿಕೊಂಡು ಹೊರಟರು.