ಶನಿವಾರ, ಏಪ್ರಿಲ್ 11, 2015

ಮಾನವೀಯತೆಯ ಮಹಾ ನದಿ


ಕಿ.ರಂ.ನಾಗರಾಜ ಅವರೊಂದಿಗೆ ಮೊಗಳ್ಳಿ ಗಣೇಶ್
-ಮೊಗಳ್ಳಿ ಗಣೇಶ್
ಸೌಜನ್ಯ: ಪ್ರಜಾವಾಣಿ
ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ನನ್ನ ಪಾಲಿಗೆ ಒಂದು ನದಿ ಇದ್ದಹಾಗೆ. ಈ ನದಿಯು ಎಲ್ಲೆಲ್ಲಿ ಮಾನವತೆಯ ದಾಹ ಇದೆಯೋ ಅಲ್ಲೆಲ್ಲ ಹರಿದಿದೆ. ಎಲ್ಲರ ದಾಹ, ಬಳಲಿಕೆಗೂ ಈ ನದಿಯ ಆರ್ದ್ರತೆ ತಂಪು ನೀಡಿದೆ. ಎಂತಹುದೇ ಅಮಾನವೀಯ ಅಪಮಾನಗಳನ್ನು, ಗಾಯಗಳನ್ನು, ಸಂಕಟಗಳನ್ನು ಈ ನದಿಯಲ್ಲಿ ಯಾರು ಬೇಕಾದರೂ ತೊಳೆದುಕೊಳ್ಳಬಹುದು. ಜಾತಿಯ ವಿಷ ಸದಾ ಈ ನದಿಯಲ್ಲಿ ಕರಗುತ್ತ ಮಾನವ ಸಂಬಂಧಗಳು ವಾಸಿಯಾಗುತ್ತಲೇ ಇವೆ.
ಹೀಗಾಗಿ ಅಂಬೇಡ್ಕರ್ ಎಂಬ ನದಿಯ ಬಗ್ಗೆ ನನಗೆ ಅಪಾರ ಗೌರವ, ಹಾಗೆಯೇ ಹೆಮ್ಮೆ. ಅಂಬೇಡ್ಕರ್ ಎಂಬ ಮಾನವತೆಯ ನದಿಯಿಂದಾಗಿಯೇ ದಲಿತ ಕೇರಿಗಳು ಜೀವಂತವಾದದ್ದು. ಯಾರು ಎಷ್ಟೇ ಬಹಿಷ್ಕರಿಸಿದರೂ, ಯಾರು ಎಷ್ಟೇ ಕೀಳಾಗಿ ಕಂಡರೂ, ಯಾರು ಎಷ್ಟೇ ಹಿಂಸಿಸಿದರೂ, ಕೊಂದರೂ, ಸದೆಬಡಿಯಲು ಬಂದರೂ ಈ ನದಿ ನಮ್ಮನ್ನು ಕಾಪಾಡಿದೆ. ಎಂತಹ ಕಟುಕರೇ ಆದರೂ ಒಮ್ಮೆ ಈ ನದಿಯ ನೀರನ್ನು ಧ್ಯಾನದಲ್ಲಿ ಕುಡಿದಿದ್ದೇ ಆದರೆ ಅವರು ಯಾವತ್ತಿಗೂ ಈ ನದಿಯ ಸಂಬಂಧವನ್ನು ಕಡಿದುಕೊಳ್ಳಲಾರದು.
ಅಂಬೇಡ್ಕರ್ ಎಂಬ ಈ ಮಹಾನದಿಗೆ ಭಾರತದ ಊರು ಕೇರಿಗಳ ಬೀದಿ ಬೀದಿಗಳಿಗೂ ಮನೆ ಮನೆಗಳಿಗೂ ಸಂಬಂಧವಿದೆ. ಸಂವಿಧಾನ ಎಂಬ ಕಾಲುವೆಯ ಮೂಲಕ ಈ ನದಿಯು ಸದಾ ಹರಿಯುತ್ತಲೇ ಇದೆ. ಯಾವ ನದಿಯೂ ನೀರನ್ನು ನಿರಾಕರಿಸುವುದಿಲ್ಲ, ತಾರತಮ್ಯ ಮಾಡುವುದಿಲ್ಲ. ಹಾಗೆಯೇ ಈ ನದಿಯೂ ಕೂಡ ಯಾರ ಆತ್ಮಗೌರವಕ್ಕೂ ಧಕ್ಕೆಯಾಗದಂತೆ ಕಾಯುತ್ತಲೇ ಇದೆ. ಅಂಬೇಡ್ಕರ್ ಎಂಬ ನದಿಯು ಯಾರ ಜಾತಿಯ ಶ್ರೇಷ್ಟತೆಯನ್ನೂ ಎತ್ತಿ ಹಿಡಿದಿಲ್ಲ ಹಾಗೆಯೇ ಯಾವ ಕೀಳು ಜಾತಿಗಳನ್ನು ಕೀಳೆಂದು ಕಡೆಗಣಿಸಿಲ್ಲ.
ಅಖಂಡ ಮಾನವತೆಯ ಅಲೆಗಳಲ್ಲೇ ಈ ನದಿಯು ಎಲ್ಲ ಜಾತಿಗಳ ಕೇರಿಗಳಲ್ಲೂ ಸಮಾನವಾಗಿ ಹರಿದಿದೆ. ಅಂತೆಯೇ ಅಂಬೇಡ್ಕರ್ ಎಂಬ ಈ ನದಿಯಿಂದಾಗಿಯೇ ಜಾತ್ಯತೀತವಾದ ಮೂಲಭೂತ ಹಕ್ಕುಗಳು ಎಲ್ಲರಿಗೂ ದಕ್ಕಿವೆ. ಒಂದು ವೇಳೆ ಅಂಬೇಡ್ಕರ್ ನದಿ ಹುಟ್ಟಿ ಹರಿಯದಿದ್ದರೆ, ಈ ದೇಶದಲ್ಲಿ ಸನಾತನ ಮತೀಯತೆಯು ಇಷ್ಟರ ಹೊತ್ತಿಗೆ ಧಾರ್ಮಿಕ ಅಸಹಿಷ್ಣುತೆಯಲ್ಲಿ ಬೆಂಕಿ ಹಚ್ಚಿ ಅದೆಷ್ಟು ಊರುಗಳನ್ನು ಸ್ಮಶಾನ ಮಾಡಿಬಿಡುತ್ತಿತ್ತೋ ಏನೋ. ಧಾರ್ಮಿಕ ಸಾಮರಸ್ಯತೆಯು ಈ ನದಿಯ ವಿವೇಕದಿಂದಲೇ ನಮ್ಮಲ್ಲಿ ಸಾಧ್ಯವಾಗಿರುವುದು. ಸನಾತನ ಜಾತಿ ಮಲಿನತೆಯನ್ನು ಸದಾ ಈ ನದಿ ತೊಳೆಯುತ್ತಲೇ ಇದೆ.
ವಿಚಿತ್ರ ಎಂದರೆ ಅತ್ತ ಪವಿತ್ರ ಗಂಗಾನದಿಯು ಪ್ರತಿವರ್ಷ ಕೊಳೆಯುತ್ತಲೇ ಇದೆ. ಪ್ರಧಾನಿಯವರು ಅದನ್ನೀಗ ತೊಳೆಯುವ ಸಾಹಸಕ್ಕೆ ಇಳಿದಿದ್ದಾರೆ. ಸದ್ಯ ಮೋದಿ ಸಾಹೇಬರು ಅಂಬೇಡ್ಕರ್ ಎಂಬ ಮಾನವತಾ ನದಿಯ ಕಾಲುವೆಯಾದ ಸಂವಿಧಾನವನ್ನು ಕೆಡದಂತೆ ಕಾಯ್ದುಕೊಂಡರೆ ಸಾಕು. ಅಂಬೇಡ್ಕರ್ ಎಂಬ ಈ ಮಹಾನದಿ ಸುಮ್ಮನೆ ಹುಟ್ಟಿದ್ದಲ್ಲ. ಇದಕ್ಕೆ ಸಾವಿರಾರು ವರ್ಷಗಳ ಹಿಂದೂ ಸನಾತನತೆಯ ಹಿಂಸೆಯ ಚರಿತ್ರೆಯಿದೆ. ಜಾತಿ ವ್ಯವಸ್ಥೆಯ ಅದೆಷ್ಟೊ ಕಾಲದ ಕಣ್ಣೀರು ಈ ನದಿಯಲ್ಲಿ ಬೆರೆತಿದೆ.
ಜಾತಿಯ ನರಮೇಧದ ಹೆಪ್ಪುಗಟ್ಟಿದ ನೆತ್ತರು ನೀರಾಗಿ ಈ ನದಿಯಲ್ಲಿ ಹರಿದಿದೆ. ಧರ್ಮದ ಹೆಸರಿನ ಅತ್ಯಾಚಾರಗಳು ಈ ನದಿಯ ಮೂಕ ಸಾಕ್ಷಿಯಲ್ಲಿ ಅಲೆಯಾಗಿವೆ. ದಿಕ್ಕೆಟ್ಟು ಮೌನವಾಗಿ ರೋದಿಸುತ್ತ ಕರಗಿ ನೀರಾಗಿ ಹರಿದ ಅದೆಷ್ಟೊ ಮಹಿಳೆಯರ ಜೀವ ಈ ನದಿಯಲ್ಲಿ ತಾಯ್ತನವಾಗಿ ಮಿಡಿದಿದೆ. ಅಂಬೇಡ್ಕರ್ ನದಿಯಲ್ಲಿ ಹಿಂದುತ್ವದ ಅನೇಕ ಪಾಪಗಳು ಕರಗಿ ಅವು ಮಾನವತ್ವದ ನೀತಿ ಸಂಹಿತೆಯಾಗಿ ಮಾರ್ಪಟ್ಟಿವೆ. ಈ ನದಿಯ ಪ್ರಶಾಂತತೆಯನ್ನು ಯಾರು ಬೇಕಾದರೂ ಭಾವಿಸಬಹುದು. ಎಲ್ಲಿಯೂ ಈ ನದಿ ಯಾರನ್ನೂ ದ್ವೇಷಿಸಿಲ್ಲ. ಮೌನವಾಗಿ ಆಳವಾಗಿ ಅನಂತವಾಗಿ ಹರಿವ ರೀತಿಯಲ್ಲಿ ಎಲ್ಲರನ್ನು ದಡ ಸೇರಿಸುವ ಮಾತೃತ್ವ ಇದರದು.
ಅಂಬೇಡ್ಕರ್ ನದಿಯ ಜಲತತ್ವವು ಅಗ್ನಿತತ್ವದ್ದಲ್ಲ. ಈ ನದಿಯು ಹೋಗಿ ತಲುಪಿರುವುದು ಕೂಡ ಒಂದು ಮಹಾಬೌದ್ಧ ಸರೋವರವನ್ನು. ಇದು ಕೂಡ ಮಾರ್ಮಿಕವಾದುದೇ ಆಗಿದೆ. ಈ ಇಂತಹ ಅಂಬೇಡ್ಕರ್ ನದಿಯ ಹೋರಾಟದ ಹಾದಿಯು ಬಹಳ ಕಠಿಣವಾದದ್ದು. ನದಿಯೊಂದು ತನ್ನ ಪಾಡಿಗೆ ತಾನು ಹರಿದು ಹೋಗುವುದು ಕಷ್ಟವಲ್ಲ, ನಿಜ. ಆದರೆ ಅಂಬೇಡ್ಕರ್ ಎಂಬ ನದಿ ಎಲ್ಲೆಲ್ಲಿ ನರಕವಿದೆಯೋ ಆಯಾಯ ಜಾಡನ್ನೇ ಹುಡುಕಿ ಹರಿದಿದೆ. ಕೆಲವೊಮ್ಮೆ ಹರಿಯಬಹುದಾಗಿದ್ದ ದಿಕ್ಕನ್ನೇ ಬದಲಿಸಿ ನುಗ್ಗಿದೆ.
ಬೆಟ್ಟಗುಡ್ಡಗಳ ತಡೆಗಳನ್ನೇ ಕೊರೆದು ಹೆಬ್ಬಂಡೆಗಳನ್ನೇ ಉರುಳಿಸಿ, ಎತ್ತರೆತ್ತರದಿಂದ ಧುಮ್ಮಿಕ್ಕಿ ಕಣಿವೆಗಳನ್ನೆಲ್ಲ ದಾಟಿ ಎಲ್ಲೆಲ್ಲಿ ಅನಾಥರು ನಾಳಿನ ಮುಂದಿನ ದಾರಿಗಾಗಿ ದಾಹದಲ್ಲಿ ಕಾದು ಕೂತಿದ್ದರೋ ಅವರ ಕಾಲ ಬಳಿಯೇ ಹರಿದು ಅವರನ್ನೆಲ್ಲ ತನ್ನ ತೆಕ್ಕೆಗೆ ತೆಗೆದುಕೊಂಡು ಸಾಗಿಬಂದಿದೆ. ಯಾರೂ ಈ ನದಿಯನ್ನು ತಡೆಯಲು ಸಾಧ್ಯವಾಗಲಿಲ್ಲ, ಹಾಗೆಯೇ ನದಿಯ ಮೂಲವಾದ ತಳಜಾತಿಗಳ ಜಲದ ಕಣ್ಣನ್ನು ಕಿತ್ತುಹಾಕಲು ಆಗಲಿಲ್ಲ. ಅಷ್ಟರಮಟ್ಟಿಗೆ ಈ ನದಿಯು ತನ್ನ ಹರಿವನ್ನು ಕಾಯ್ದುಕೊಳ್ಳುತ್ತಲೇ ದೇಶದ ಜಲದ ಕಣ್ಣನ್ನೂ ಕಾಯ್ದುಕೊಂಡು ಬಂದಿದೆ. ಆದ್ದರಿಂದಲೇ ಆಧುನಿಕ ಭಾರತದ ನಾಗರಿಕತೆಯಲ್ಲಿ ಈ ನದಿಯ ಪಾತ್ರ ಬಹಳ ವಿಸ್ತಾರವಾದುದು.
ನದಿಗಳ ಜೊತೆಗಿನ ನಾಗರಿಕತೆಗಳ ಪಾಠವನ್ನು ಓದಿದ್ದೇವೆ. ಆದರೆ ಅಂಬೇಡ್ಕರ್ ನದಿಯ ನಾಗರಿಕತೆಯ ಅರಿವನ್ನು ನಾವು ತಕ್ಕುದಾಗಿ ಅರ್ಥ ಮಾಡಿಕೊಂಡಿಲ್ಲ. ಮೂಲತಃ ನಾಗರಿಕತೆಗಳು ಸಾಮ್ರಾಜ್ಯಗಳನ್ನು ಕಟ್ಟಿಕೊಳ್ಳುತ್ತವೆ. ಸಂಪತ್ತನ್ನು ಲೂಟಿ ಮಾಡುತ್ತವೆ. ಬಲಿಷ್ಟ ವರ್ಗಗಳನ್ನು ರೂಪಿಸಿಕೊಳ್ಳುತ್ತವೆ. ಸೈನ್ಯಗಳನ್ನು ಕಟ್ಟಿ ಯುದ್ಧದಾಹಿಯಾಗಿರುತ್ತವೆ. ಸದಾ ಗುಲಾಮರನ್ನು ದಂಡಿಸುತ್ತಲೇ ಹೆಂಗಸರನ್ನು ಬೇಕಾದಂತೆಲ್ಲ ಬಳಸಿ ಬಿಸಾಡುವ ರೀತಿ ನೀತಿಗಳನ್ನು ಪಾಲಿಸುತ್ತಲೇ ಇರುತ್ತವೆ. ಅಂಬೇಡ್ಕರ್ ನದಿಯ ಜೊತೆಗೆ ಈ ಮೇಲಿನ ಸಂಗತಿಗಳನ್ನು ತುಲನೆ ಮಾಡಿ ವಿವೇಚಿಸಿ. ಎಲ್ಲಿಯೂ ಈ ಅಂಬೇಡ್ಕರ್ ನದಿಯು ಮಹಿಳೆಯರನ್ನು ಅಗೌರವಿಸಿಲ್ಲ.
ಯಾವ ಜೀತಗಾರಿಕೆಯನ್ನು ಒಪ್ಪುವುದಿಲ್ಲ. ಯಾವ ಯುದ್ಧಕ್ಕೂ ಮನ್ನಣೆ ನೀಡುವುದಿಲ್ಲ. ಯಾರು ಯಾರನ್ನೂ ಲೂಟಿ ಮಾಡುವಂತಿಲ್ಲ, ಆಳುವಂತಿಲ್ಲ, ಸಾಮ್ರಾಜ್ಯ ಕಟ್ಟಿಕೊಂಡು ಮೆರೆಯುವಂತಿಲ್ಲ. ಹೀಗಾಗಿ ಅಂಬೇಡ್ಕರ್ ನದಿಯು ನಿರೂಪಿಸುವ ನಾಗರಿಕತೆಯು ಅತ್ಯುನ್ನತ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಿಷ್ಟ ಜಾತಿಗಳ ಕೋಟೆಗಳಿಗೆ ತಕ್ಕಂತೆ ಪ್ರಜಾಪ್ರಭುತ್ವವನ್ನು ಮಣಿಸಿಕೊಳ್ಳುವ ಹುನ್ನಾರಗಳು ನಡೆಯುತ್ತಲೇ ಇದ್ದರೂ ಅಂಬೇಡ್ಕರ್ ಸಂವಿಧಾನವು ಅದನ್ನು ತಡೆಯುತ್ತಲೇ ಇದೆ. ಮಹಿಳೆಯರ ಪರವಾದ ಮೀಸಲಾತಿಯನ್ನು ಈ ನದಿ ಯಾವತ್ತೊ ಪ್ರತಿಪಾದಿಸುತ್ತಲೇ ಬಂದಿದ್ದರೂ ಅದಿನ್ನೂ ಜಾರಿಯಾಗದೇ ಉಳಿದಿದೆ.
ಎಲ್ಲ ನಿಯಂತ್ರಣಗಳ ಆಚೆಗಿನ ಪಯಣದ ಒಂದೊಂದು ದೋಣಿಯನ್ನೋ ತೆಪ್ಪವನ್ನೋ ಈ ನದಿಯು ಎಲ್ಲ ದಮನಿತರಿಗೊ ಕೊಟ್ಟುಬಿಟ್ಟಿದೆ. ಆದ್ದರಿಂದಲೇ ಈ ಮಾಯಾಮಯ ನದಿಯಲ್ಲಿ ಎಲ್ಲರೂ ಅವರವರ ಗುರಿಯತ್ತ ಸಾಗಲು ಸಾಧ್ಯವಾಗಿರುವುದು. ಈ ಅಂಬೇಡ್ಕರ್ ನದಿಯ ರೂಪಕವನ್ನು ಹೆಚ್ಚು ಲಂಬಿಸಿರುವಂತೆ ಕಾಣಬಹುದು. ನದಿಯನ್ನು ತುಂಡು ಮಾಡಲು ಬರುವುದಿಲ್ಲ, ಹಾಗೆಯೇ ಅಂಬೇಡ್ಕರ್ ವಿಚಾರಗಳನ್ನು ಕೂಡ ರಾಜಕಾರಣವು ತನಗೆ ಬೇಕಾದ ಬಗೆಯಲ್ಲಿ ತುಂಡು ಮಾಡಿಕೊಳ್ಳಬಾರದು. ನದಿಗೆ ಅಣೆಕಟ್ಟು ಕಟ್ಟಿಕೊಳ್ಳಬಹುದೇ ವಿನಾ ನದಿಯ ನಡೆಯೇ ಸರಿ ಇಲ್ಲ ಎಂದು ನಡತೆಗೆಡಬಾರದು. ಹಾಗೆಯೇ ಈ ನದಿಯ ಅವಶ್ಯಕತೆಯೇ ಇಲ್ಲ ಎಂದು ಹುಂಬುತನ ತೋರಬಾರದು. ಅಂಬೇಡ್ಕರ್ ಈ ದೇಶದ ನದಿ.
ಈ ನದಿಯ ವಿವೇಕದಿಂದಲೇ ಹೊಸ ತಲೆಮಾರಿನ ಭಾರತವು ತನ್ನ ಮಾತೃಭೂಮಿಯನ್ನು ಕಾಯ್ದುಕೊಳ್ಳಬೇಕಿರುವುದು. ಯುವ ಜನಾಂಗ ಈ ನದಿಯ ನೀರನ್ನು ಮುಟ್ಟಿಸಿಕೊಂಡಾಗಲೇ ಬಹಳ ಕಾಲದಿಂದಲೂ ನೊಂದು ಹರಿದು ಬಂದಿರುವ ಈ ನದಿಗೆ ಒಂದಿಷ್ಟಾದರೂ ಸಾಂತ್ವನ ಕಾಣುವುದು. ಹಾಗೆಯೇ ಆಯಾಯ ಜಾತಿಗಳಿಗೆ ಬದ್ಧವಾದಂತೆಯೋ ಸನಾತನತೆಗೆ ಅಂಟಿಕೊಂಡಂತೆಯೋ ಆಧುನಿಕತೆಯ ಒಳಗೂ ಆಯಾಯ ವರ್ತುಲಗಳಿಗೇ ಸಿಕ್ಕಿ ಹಾಕಿಕೊಂಡಂತಿರುವ ಯುವಜನಾಂಗ ಈ ನದಿಯ ನೀರಿನಿಂದ ಮುಕ್ತಿ ಕಾಣಬೇಕಿರುವುದು.
ಜವಹರಲಾಲ್ ನೆಹರೂ ಅವರು ಬೃಹತ್ ಅಣೆಕಟ್ಟುಗಳನ್ನು ಆಧುನಿಕತೆಯ ದೇವಾಲಯಗಳೆಂದು ಕರೆಯುತ್ತಿದ್ದರು. ಹಾಗೆಯೇ ಈ ಅಂಬೇಡ್ಕರ್ ಎಂಬ ನದಿಯನ್ನು ಯುವಜನಾಂಗ ತನ್ನದಾಗಿಸಿಕೊಳ್ಳಬೇಕಿರುವುದು. ವಿಶ್ವದ ಮುಕ್ತ ಮಾರುಕಟ್ಟೆಯ ಜಾಗತೀಕರಣದಲ್ಲಿ ತೇಲುತ್ತಿರುವ ಯುವ ಜನಾಂಗಕ್ಕೆ ಅಂಬೇಡ್ಕರ್ ನದಿಯ ಸಂಬಂಧ ಬೇಕೇಬೇಕು. ಇಲ್ಲದಿದ್ದರೆ ವಿಶ್ವದ ಬಲಿಷ್ಟ ರಾಷ್ಟ್ರಗಳ ಮುಂದೆ ಮುಂದಿನ ತಲೆಮಾರು ದುರ್ಬಲವಾಗುವ ಅಪಾಯವಿದೆ. ಅಂಬೇಡ್ಕರ್ ಎಂಬ ನದಿ ಸನಾತನವಾದುದಲ್ಲ. ಅದು ಆಧುನಿಕತೆಯ ದರ್ಶನದಲ್ಲಿ ಹರಿದುಬಂದದ್ದು. ಪೂರ್ವ ಪಶ್ಚಿಮದ ಎಲ್ಲ ಜಲಬೇರುಗಳೂ ಈ ನದಿಯನ್ನು ರೂಪಿಸಿವೆ. ಆದ್ದರಿಂದಲೇ ಈ ನದಿಯ ಉದ್ದಕ್ಕೂ ಜಾಗೃತಿಯ ಅಲೆಗಳೇ ತೇಲಿಬಂದಿರುವುದು.
ವಿಪರ್ಯಾಸವೆಂದರೆ ಯಾವತ್ತೂ ಕೂಡ ಈ ನದಿಯನ್ನು ಇದು ‘ಅಸ್ಪೃಶ್ಯರ ನದಿ’ ಎಂದೇ ಬಿಂಬಿಸಲಾಗುತ್ತಿದೆ. ಒಂದಲ್ಲ ಒಂದು ಬಗೆಯಲ್ಲಿ ದಿನನಿತ್ಯವೂ ಸಮಸ್ತ ಭಾರತೀಯರೆಲ್ಲರೂ ಅಂಬೇಡ್ಕರ್ ನದಿಯ ನೀರು ಕುಡಿದೇ ಬದುಕುತ್ತಿರುವುದು. ಅಷ್ಟರಮಟ್ಟಿಗೆ ಭಾರತೀಯ ಸಂವಿಧಾನವು ಎಲ್ಲರ ಜೀವನದ ಭಾಗವಾಗಿದೆ. ಈ ನದಿಯನ್ನು ಅಪವ್ಯಾಖ್ಯಾನಗೊಳಿಸುವವರು ಕೂಡ ನದಿಯ ಜೊತೆಯಲ್ಲೇ ಸಾಗಿ ಬಂದಿದ್ದಾರೆ.
ಭಾರತವು ವಸಾಹತೋತ್ತರ ಕಾಲಮಾನದಲ್ಲಿ ಯಾವ ಬಗೆಯಲ್ಲಿ ರಾಜಕೀಯವಾಗಿ ರೂಪಾಂತರ ಹೊಂದುತ್ತದೆ ಎಂಬ ಅಂದಾಜು ಈ ನದಿಗೆ ಇತ್ತು. ಪ್ರಬಲ ಜಾತಿಗಳು ಪ್ರಜಾಪ್ರಭುತ್ವವನ್ನು ಹೇಗೆ ಹಂಚಿಕೊಂಡು ದುರ್ಬಲ ಜಾತಿಗಳನ್ನು ಆಳಲು ಮುಂದಾಗುತ್ತವೆ ಎಂಬ ಮುಂದಾಲೋಚನೆ ಇತ್ತು. ಆದ್ದರಿಂದಲೇ ಜಾತಿನಿಷ್ಟ ಸಮಾಜಗಳು ದಾರಿ ತಪ್ಪದಂತೆ ಸಮತೋಲನ ಕಾಯ್ದುಕೊಳ್ಳುವಂತಹ ರಾಜಕೀಯ ವ್ಯವಸ್ಥೆ ನೆಲೆಗೊಳ್ಳುವ ರೀತಿಯಲ್ಲಿ ಸಂವಿಧಾನವನ್ನು ರೂಪಿಸಿರುವುದು.
ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಜಾತಿ ಹಾಗೂ ಧರ್ಮ ಎರಡೂ ಸೇರಿ ಜಾತಿನಿಷ್ಟ ಸರ್ವಾಧಿಕಾರಿ ವ್ಯವಸ್ಥೆಯನ್ನು ಜಾರಿಗೊಳಿಸಿಬಿಡುತ್ತಿದ್ದವು. ಜಾತಿಬದ್ಧ ಸರ್ವಾಧಿಕಾರವು ಹಿಟ್ಲರನ ಜನಾಂಗವಾದಕ್ಕಿಂತಲೂ ಭಯಂಕರವಾದುದು. ಆ ಅಪಾಯದಿಂದ ನಮ್ಮನ್ನು ಅಂಬೇಡ್ಕರ್ ನದಿಯು ಪಾರು ಮಾಡಿದೆ. ಜೊತೆಗೆ ಜಾತಿಯ ಸರಪಳಿಯ ಸಂಕೋಲೆಯಿಂದ ಉಳಿದವರನ್ನೂ ಕಾಪಾಡಿದೆ. ಜಾತಿ ವ್ಯವಸ್ಥೆ ಮೇಲೆ ಮೇಲೆ ಏರಿ ಕುತಂತ್ರವರಿಗೆ ಮೇರು ಸ್ಥಾನವನ್ನು ನೀಡಿದೆ ಎಂಬುದು ಕೇವಲ ಭ್ರಮೆ ಮಾತ್ರ. ಜಾತಿಯ ಸರಪಳಿ ತೊಡಿಸುವುದರಲ್ಲೇ ತೊಡಗಿರುವ ಮೇಲುಜಾತಿಗಳು ತಮಗೆ ತಾವೇ ಆ ಸರಪಳಿಯಲ್ಲಿ ಬಂಧಿಯಾಗಿವೆ.
ಜಾತಿಯಿಂದ ಬಂಧಿಸಿದ್ದೇವೆಂದು ಮೇಲುಜಾತಿಗಳು ಭ್ರಮಿಸಿಕೊಂಡಿದ್ದರೆ, ತನಗೆ ಯಾವ ಜಾತಿಯೂ ಇಲ್ಲ ಎಂದು ಭಾವಿಸಿರುವ ಒಬ್ಬ ಅಸ್ಪೃಶ್ಯ ಲೋಕವನ್ನು ಕಾಣುವ ಬಗೆಯೇ ಬೇರೆಯಾಗಿದೆ. ಅವನ ಪ್ರಕಾರ ಅವನಿಗೆ ಯಾವ ಸರಪಳಿಗಳೂ ಇಲ್ಲ. ಆದರೆ ಬಂಧಿಸುವವನ ಮೈತುಂಬ ಬರೀ ಸರಪಳಿಗಳೇ ಬಿಗಿದಿವೆ. ಇಂತಹ ಸರಪಳಿಗಳಿಂದಲೇ ಮೇಲುಜಾತಿಗಳು ಬಿಡಿಸಿಕೊಳ್ಳಬೇಕಾಗಿರುವುದು. ಆದರೆ ಬಿಡಿಸಿಕೊಳ್ಳಲು ಅವು ಸ್ವಲ್ಪ ಯೋಚಿಸಿದರೂ ಸಾಕು, ಈ ಎಲ್ಲ ಸರಪಳಿಗಳೂ ತನ್ನ ಬುದ್ಧಿಯನ್ನೇ ಬಂಧಿಸಿವೆ ಎಂಬುದು ತಿಳಿಯುತ್ತದೆ. ಅಂಬೇಡ್ಕರ್ ನದಿ ಬಯಸುವುದು ಈ ಸರಪಳಿಗಳನ್ನು ನೀವೇ ಬಿಡಿಸಿಕೊಳ್ಳಿ ಎಂದು.
ಜಾತಿ ವ್ಯವಸ್ಥೆಯಿಂದ ನಾವು ಅಸ್ಪೃಶ್ಯರು ನರಳಿರುವುದು ಬೇರೆ. ಅದಕ್ಕಾಗಿ ನಾವೇನು ಈ ದೇಶಕ್ಕೆ ಬೆಂಕಿ ಹಚ್ಚುವುದಿಲ್ಲ. ಯಾರೇ ಬೆಂಕಿ ಹಚ್ಚಿದರೂ ಅದನ್ನು ಆರಿಸಲಿಕ್ಕೆ ಅಂಬೇಡ್ಕರ್ ನದಿ ಇದ್ದೇ ಇದೆ. ಆದರೆ ಜಾತಿಯ ಸಂಕೋಲೆಯಿಂದ ನಾವು ನರಳಿದ್ದಕ್ಕಿಂತಲೂ ಮಿಗಿಲಾಗಿ ಮೇಲುಜಾತಿಗಳು ಮಾನವೀಯತೆಯನ್ನು ಕಳೆದುಕೊಂಡು ಬಡವಾಗಿವೆ. ಅಷ್ಟರಮಟ್ಟಿಗೆ ಅವುಗಳ ಬಿಡುಗಡೆಯೂ ತೊಡಕಾಗಿದೆ. ಆದ್ದರಿಂದಲೇ ಅಂಬೇಡ್ಕರ್ ನದಿಯು ಈ ದೇಶದ ಸರ್ವರ ಜಾತಿಯ ಕೊಳೆಯನ್ನು ತೊಳೆಯಲು ಸದಾ ಭೋರ್ಗರೆಯುತ್ತಲೇ ಇರುತ್ತದೆ.
ಜಾತಿ ವ್ಯವಸ್ಥೆಯನ್ನು ಒಂದು ಬಿಡಿಯಾದ ಸಮಸ್ಯೆ ಎಂದು ಭಾವಿಸಬಾರದು. ಅದು ಭಾರತೀಯರಾದ ಎಲ್ಲರ ಒಟ್ಟು ಸಮಸ್ಯೆ. ಅದನ್ನೊಂದು ರಾಷ್ಟ್ರೀಯ ಸಮಸ್ಯೆಯಾಗಿಯೇ ಭಾವಿಸಿ ಪರಿಹರಿಸಬೇಕು. ಜಾತ್ಯತೀತತೆಗೆ ಹಾಗಾಗಿಯೇ ಅಂಬೇಡ್ಕರ್ ಹೆಚ್ಚಿನ ಒತ್ತನ್ನು ನೀಡಿದ್ದುದು. ನಾಳಿನ ಭಾರತ ಉಳಿಯಲೇಬೇಕೆಂದರೆ ಇಂದಿನ ಜಾತೀಯತೆ ಅಳಿಯಲೇಬೇಕು. ಅಂಬೇಡ್ಕರ್ ಎಂಬ ನದಿಯ ಮೂಲ ಆಶಯವೇ ಅದು. ಜಾತಿಯೇ ನಾಶವಾದ ಮೇಲೆ ಯಾರಾದರೂ ರಾಜ್ಯಾಧಿಕಾರವನ್ನು ಹಿಡಿಯಬಹುದು. ಆಗ ದಲಿತರೇ ಹಿಡಿಯಬೇಕೆಂದೇನೂ ಇಲ್ಲ. ಜಾತ್ಯತೀತವಾಗುವುದೇ ಉನ್ನತ ರಾಷ್ಟ್ರೀಯತೆ.
ಅದೇ ದೇಶಪ್ರೇಮ, ಅದೇ ಸರ್ವೋದಯ, ಅದೇ ಸುಭದ್ರ ರಾಷ್ಟ್ರೀಯತೆ. ಅಂಬೇಡ್ಕರ್ ಎಂಬ ನದಿಯ ಈ ಬಗೆಯ ಭ್ರಾತೃತ್ವವನ್ನು ವರ್ತಮಾನದ ರಾಜಕಾರಣವು ಸರಿಯಾಗಿ ಗ್ರಹಿಸಬೇಕು. ಭಾರತದ ಸಾರ್ವಭೌಮತ್ವವು ಈ ನದಿಯ ವಿವೇಕದಿಂದಲೇ ಇಂದು ಸಮತೋಲನವನ್ನು ಕಾಯ್ದುಕೊಂಡಿರುವುದು. ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವವನ್ನು ಹೇಗೆ ಮುನ್ನಡೆಸಬಹುದು ಎಂಬುದನ್ನು ಸಂವಿಧಾನವು ಜಗತ್ತಿಗೆ ತೋರಿಸಿಕೊಟ್ಟಿದೆ. ಜಾತಿಗಳ ಮರುಭೂಮಿಗಳಲ್ಲಿ ಹುಟ್ಟಿಹರಿಯುತ್ತಿರುವ ಈ ನದಿಯು ಇನ್ನೂ ಬಹುಕಾಲ ಬಹಳ ದೂರಕ್ಕೆ ಗಾಯಗೊಂಡ ಎಲ್ಲ ಸಮಾಜಗಳನ್ನು ಪೊರೆದು ಕರೆದೊಯ್ಯಬೇಕಿದೆ.
ಜಾತ್ಯತೀತವಾಗಿ ಯುವ ಜನಾಂಗವನ್ನು ರೂಪಿಸುವುದೇ ನಿಜವಾದ ಅಭಿವೃದ್ಧಿ. ತಾರತಮ್ಯದ ಪೂರ್ವಗ್ರಹಗಳನ್ನು ನಾಶಪಡಿಸುವುದೇ ಆತ್ಯಂತಿಕ ಪ್ರಗತಿ. ಲಿಂಗಭೇದಗಳ ವಿಕಾರವನ್ನು ಸರಿಪಡಿಸುವುದೇ ನಿಜವಾದ ಬದಲಾವಣೆ. ಈ ನದಿಯ ಗುರಿಯೇ ಈ ಬಗೆಯ ಅಭಿವೃದ್ಧಿಯತ್ತ ದೇಶವನ್ನು ಕಾಯುವುದಾಗಿದೆ. ಅಂಬೇಡ್ಕರ್ ಎಂಬ ನದಿಯು ಬಡವರ ಕಾಲ ಬುಡದಲ್ಲೇ ಹರಿದಿದೆ ಎಂದು ಆರಂಭದಲ್ಲೇ ಹೇಳಿದ್ದೆ. ಗಾಂಧೀಜಿಯೂ ಒಂದು ಮಹಾನದಿಯೇ. ಒಂದು ಉತ್ತರದ ನದಿಯಾದರೆ ಮತ್ತೊಂದು ದಕ್ಷಿಣದ ನದಿ. ಈ ಎರಡೂ ನದಿಗಳೂ ಬೇರೆ ಬೇರೆ ದಿಕ್ಕಿನಿಂದ ಹುಟ್ಟಿ ಹರಿಯುತ್ತಿದ್ದರೂ ಇವೆರಡೂ ಭವಿಷ್ಯದ ಭಾರತದ ನಿರ್ಮಾಣಕ್ಕೆ ಅನಿವಾರ್ಯವಾಗಿ ಜೋಡಣೆಯಾಗಬೇಕು.
ವಿಶ್ವದ ಪ್ರಬಲ ಮಾನವತಾ ರಾಷ್ಟ್ರ ಎಂದು ಕರೆಸಿಕೊಳ್ಳಲು ಇವೆರಡೂ ಒಂದಾಗಬೇಕು. ವಿಶ್ವಸಂಸ್ಥೆಗೂ ಈ ಎರಡು ನದಿಗಳ ಜಲನೀತಿಯೇ ವಿಶ್ವನೀತಿಯೂ ಆಗಬೇಕು. ಅಂಬೇಡ್ಕರ್ ಜಯಂತಿಯಲ್ಲಿ ಗಾಂಧಿಜಯಂತಿಯನ್ನೂ, ಗಾಂಧಿಜಯಂತಿಯಲ್ಲಿ ಅಂಬೇಡ್ಕರ್ ಜಯಂತಿಯನ್ನೂ ಕಾಣಬೇಕು. ಈ ಜಯಂತಿಗಳ ಮಾತುಗಳು, ಆಚರಣೆಗಳು ಸವಕಲಾಗಿವೆ. ಇವನ್ನು ಮತ್ತೂ ಬೇರೆ ಬಗೆಯಲ್ಲಿ ಭಾವಿಸಬಹುದು. ಅಧಿಕೃತವಾಗಿ ಸರ್ಕಾರಗಳು ಯಾವ ನದಿಯ ನೆನಪಿನ ದಿನಗಳನ್ನೂ ಆಚರಿಸುವುದಿಲ್ಲ. ಎಲ್ಲ ದಮನಿತರ ನದಿ ಅಂಬೇಡ್ಕರ್ ನದಿ. ಈ ಮಹಾನ್ ನದಿ ತನ್ನ ಜನಾಂಗದ ದುಃಖದ ಧಾರೆಯನ್ನೇ ಧಾರೆಯೆರೆದುಕೊಟ್ಟಿದೆ.
ದಲಿತರು ಎಲ್ಲ ಜಾತಿಗಳ ಹೊರೆಯನ್ನೂ ತಲೆಮೇಲೆ ಹೊತ್ತುಕೊಂಡು ಯಾರನ್ನೂ ಕೆಳಗೆ ಬೀಳಿಸದಂತೆ, ಈಗಲೂ ಎಲ್ಲರನ್ನೂ ದ್ವೇಷವಿಲ್ಲದೆ ಹೊತ್ತೇ ತಿರುಗುತ್ತಿದ್ದಾರೆ. ಅಸ್ಪೃಶ್ಯರು ಹೊತ್ತಿರುವ ಈ ಹೊರೆ ಅಸಾಮಾನ್ಯವಾದುದು, ಮತ್ತೆ ಬೇರೆ ಯಾರೊಬ್ಬರೂ ಹೊರಲಾಗದ ಹೊರೆ. ಅದಕ್ಕಾಗಿ ಈ ಅಸ್ಪೃಶ್ಯರ ನೋವಿನಿಂದ ಹುಟ್ಟಿದ ನದಿಯಾದ ಅಂಬೇಡ್ಕರ್ ಅವರಿಗಾಗಲೀ, ಅಸ್ಪೃಶ್ಯರಿಗಾಗಲೀ ಈ ದೇಶ ಕೃತಜ್ಞತೆಯನ್ನು ಎಂದಾದರೂ ಸಲ್ಲಿಸಿದೆಯೇ? ದಲಿತರ ಘನತೆಯನ್ನು ಮಾನ್ಯ ಮಾಡಿದೆಯೇ? ಸುಮ್ಮನೆ ಸುಳ್ಳು ಮೀಸಲಾತಿಯನ್ನು ಹೇಳಿದರೆ ಸಾಕೆ? ಜಾತಿ ಹೊರೆಯ ಮೂಲಕ ಇಡೀ ಭಾರತದ ಹೊರೆಯನ್ನೇ ದಲಿತರು ಹೊತ್ತಿಲ್ಲವೇ?
ಅದಕ್ಕಾಗಿ ‘ಅಂಬೇಡ್ಕರ್ ಜಯಂತಿ’ಯ ದಿನವನ್ನು ‘ರಾಷ್ಟ್ರೀಯ ಕೃತಜ್ಞತಾದಿನ’ವೆಂದು ಮೋದಿಯವರು ಘೋಷಿಸಿ, ಅಸ್ಪೃಶ್ಯರ ಸ್ವಾಭಿಮಾನದ ನದಿಯ ದಿನವೆಂದು ಭಾವಿಸಿ, ಅಂಬೇಡ್ಕರ್ ನದಿಯನ್ನು ಗೌರವಿಸಬೇಕು. ಅಂಬೇಡ್ಕರ್ ಜಯಂತಿಯು ಅಸ್ಪೃಶ್ಯರು ಹೊತ್ತ ಹೊರೆಯ ದಿನವೆಂದು ಮಾನ್ಯವಾಗಬೇಕು. ಆ ಮೂಲಕ ಒಂದೊಂದು ಜಾತಿಯ ಹೊರೆಗಳೂ ಕರಗುತ್ತ ಅಂಬೇಡ್ಕರ್ ನದಿಯಲ್ಲಿ ವಿಲೀನವಾಗಬೇಕು. ಆ ದಿಸೆಯಲ್ಲಿ ಸಮಾಜ ಮತ್ತು ಸರ್ಕಾರಗಳು ಹಾಗೂ ಯುವಜನಾಂಗ ಮುಂದಾಗಬೇಕು. 
ಅಂತಃಕರಣದ ಅಭಿವೃದ್ಧಿ
ಮಾನ್ಯ ಮೋದಿ ಸಾಹೇಬರು ಬಹಳ ದೊಡ್ಡ ದೊಡ್ಡ ಆದರ್ಶಗಳನ್ನು ಅಭಿವೃದ್ಧಿಯ ಹೆಸರಲ್ಲಿ ಹೇಳುತ್ತಿದ್ದಾರೆ. ಆದರೆ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಈ ದೇಶದಲ್ಲೇ ಹೇಯ ಅಮಾನವೀಯ ಕೃತ್ಯಗಳು ಘಟಿಸುತ್ತಿವೆ. ಭಾರತವನ್ನು ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿರಿಸಿದ ಮಾತ್ರಕ್ಕೆ ನಮ್ಮ ಸಮಾಜಗಳು ಉದ್ಧಾರವಾಗಿ ಬಿಡುವುದಿಲ್ಲ. ದೇಶದ ಎಲ್ಲ ದಮನಿತರ ದುಃಖವನ್ನು ಅರಿಯದೆ ದೇಶೋದ್ಧಾರದ ಮಾತನಾಡಬಾರದು. ಜಾತಿ ವಿನಾಶವಾಗಿ, ಮಹಿಳಾ ಸಮಾನತೆ ಬಂದ ದಿನವೇ ನಿಜವಾದ ನ್ಯಾಯದ ದಿನ.

ಅಲ್ಲಿಯತನಕ ಭಾರತ ಅಭಿವೃದ್ಧಿಯ ಅಂಕಿಅಂಶಗಳನ್ನು ಅದೆಷ್ಟು ನೀಡಿದರೂ ಅದಕ್ಕೆ ಯಾವ ನೈತಿಕತೆಯೂ ಇಲ್ಲ. ಮಾನವತ್ವದ ಲೆಕ್ಕದಲ್ಲಿ ಜಾತಿನಿಷ್ಟ ಸಮಾಜಗಳು ಅಭಿವೃದ್ಧಿಯನ್ನೇ ಸಾಧಿಸಿಲ್ಲ. ಎಷ್ಟು ಬಗೆಯಲ್ಲಿ ಈ ಸಮಾಜಗಳು ಅಂತಃಕರಣದಿಂದ ಕೂಡಿವೆ ಎಂಬುದು ಅಭಿವೃದ್ಧಿಯ ಮಾನದಂಡವಾಗಬೇಕು. ಎಷ್ಟು ದುಡಿದು ತಲಾ ಆದಾಯ ಹೆಚ್ಚಾಯಿತು ಎಂಬುದಲ್ಲ ಮುಖ್ಯ, ಎಷ್ಟು ನೆಮ್ಮದಿಯಿಂದ, ವಿಶ್ವಾಸದಿಂದ, ಭ್ರಾತೃತ್ವದಿಂದ, ನ್ಯಾಯದಿಂದ ಸಮಾಜಗಳು ಬದುಕಿವೆ ಎಂಬುದು ತುಂಬ ಮುಖ್ಯ.
 ಅಂಬೇಡ್ಕರ್ ಎಂಬ ನದಿಯು ಈ ಬಗೆಯ ಮಾನದಂಡಗಳಿಂದಲೇ ದೇಶದ ಸಾಮಾಜಿಕ ನ್ಯಾಯದ ಅಭಿವೃದ್ಧಿ ಸೂಚ್ಯಾಂಕವನ್ನು ಭಾವಿಸಿ ಒತ್ತಾಯಿಸುತ್ತಿದ್ದುದು. ಜಗತ್ತಿನ ಮಾರುಕಟ್ಟೆ ರಾಜಕಾರಣದಿಂದ ಕರಗಿ ಹೋಗುತ್ತಿರುವ ಹಳ್ಳಿಗಳಿಗೂ ಈಗ ಈ ನದಿಯೇ ಗತಿ. ಅಂಬೇಡ್ಕರ್ ನದಿಯನ್ನು ಕಾಯುವುದರಲ್ಲಿ ಸಮಗ್ರ ಹಳ್ಳಿಗಾಡಿನ ಅಸ್ತಿತ್ವವೂ ಇದೆ. ಅಂಬೇಡ್ಕರ್ ಹಳ್ಳಿಗಳನ್ನು ನರಕ ಎಂದು ಭಾವಿಸಿದ್ದರು ನಿಜ, ಆದರೆ ಹಳ್ಳಿಗಳು ಉಳಿಯಬೇಕಾದರೆ ಈ ನದಿನೀರನ್ನು ಕುಡಿದೇ ಮುಂದೆ ಸಾಗಬೇಕಿದೆ.
ಸಾರಾಸಗಟಾಗಿ ಇಡೀ ಊರಿಗೆ ಊರೇ ಆಯಾಯ ಕೇರಿಗಳ ಲೆಕ್ಕದಲ್ಲಿ ಜಗತ್ತಿನ ಯಾವುದಾವುದೊ ಮಾರುಕಟ್ಟೆಗಳಿಗೆ ಹರಾಜಾಗುತ್ತಿರುವಂತಹ ಸಂದರ್ಭದಲ್ಲಿ ಗಾಂಧೀಜಿಯ ಗ್ರಾಮ ರಾಜ್ಯವನ್ನು ಕಾಯಲು ಸದ್ಯಕ್ಕೆ ನಮ್ಮಲ್ಲಿ ಬೇರೆ ಯಾವ ಉಪಾಯಗಳೂ ಇಲ್ಲ. ರಾಷ್ಟ್ರ – ರಾಜ್ಯಗಳ ಚಹರೆಯೇ ರೂಪಾಂತರವಾಗುತ್ತಿರುವಲ್ಲಿ ಇನ್ನು ಊರು ಕೇರಿಗಳ ವಿಳಾಸಗಳ ಪಾಡೇನು? ಮೋದಿಯವರು ಭೂಸ್ವಾದೀನದ ಹಕ್ಕನ್ನು ಸ್ಥಾಪಿಸುತ್ತಿದ್ದಾರೆ.
ಹಳ್ಳಿಗಳ ಮಾನವಸಂಪತ್ತು ತನ್ನ ಗತ ವೈಭವವನ್ನು ಕಳೆದುಕೊಂಡು ನಗರಗಳ ಜೀತಕ್ಕೆ ಬಲಿಯಾಗುತ್ತಿದೆ. ಅತ್ಯಾಧುನಿಕ ನಗರಗಳ ನಿರ್ಮಾಣಕ್ಕೆ ಪ್ರಧಾನಿಯವರು ಮುಂದಾಗಿದ್ದಾರೆ. ಹಾಗೆ ನೋಡಿದರೆ ಈ ಅಂಬೇಡ್ಕರ್ ನದಿ ಈ ವಿಶಾಲ ಭಾರತದ ಹಳ್ಳಿಗಾಡಿನ ಏಕೈಕ ನದಿ ಮಾತ್ರವಾಗಿದೆ. ಸರ್ಕಾರಗಳೇ ಈ ನದಿಯ ಮಹತ್ವವನ್ನು ಮರೆತಿವೆ. ಭಾಗಶಃ ನಮ್ಮ ಹಳ್ಳಿಗಳೂ ಕೂಡ ಈ ನದಿಯ ಬಗ್ಗೆ ಉಪೇಕ್ಷಿಸಿರಬಹುದು. ನದಿಗೆ ಜನಗಳು ಬೇಕೊ, ಜನಗಳಿಗೆ ನದಿ ಬೇಕೊ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಕಾಮೆಂಟ್‌ಗಳಿಲ್ಲ: