ಶಿಕ್ಷಣ! ಸಂಘಟನೆ!! ಹೋರಾಟ!!! ಎಂದು ಡಾ.ಅಂಬೇಡ್ಕರರು ಹೇಳಿದ್ದಾರೆಯೇ ???
-ಡಾ.ಶಿವಕುಮಾರ್
ಇಂದು ಬಹುತೇಕ ದಲಿತರು ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶಿಕ್ಷಣ! ಸಂಘಟನೆ!! ಹೋರಾಟ!!! ಎಂಬ ಮೂರು ಸೂತ್ರಗಳನ್ನು ಬಳಸುತ್ತಾರೆ. ಅವರ ಬ್ಯಾನರ್‍ಗಳ ಮೇಲೆ ಆಶ್ಚರ್ಯಕರ ಚಿಹ್ನೆಗಳ ಸಹಿತವಾಗಿ (ಶಿಕ್ಷಣಕ್ಕೆ ಒಂದು, ಸಂಘಟನೆಗೆ ಎರಡು ಹಾಗು ಹೋರಾಟಕ್ಕೆ ಮೂರು ಆಶ್ಚರ್ಯಕರ ಚಿಹ್ನೆಗಳನ್ನು) ಮುದ್ರಿಸಿರುತ್ತಾರೆ. ಇದನ್ನೇ ಹಿಡಿದು ಎಷ್ಟೋ ಭಾಷಣಕಾರರು “ದಲಿತರು ಮೊದಲು ಶಿಕ್ಷಣ ಪಡೆದುಕೊಳ್ಳಿ, ಆನಂತರ ಸಂಘಟನೆ ಕಟ್ಟಿರಿ... ಆಮೇಲೆ ಹೋರಾಟಕ್ಕಿಳಿಯಿರಿ” ಎಂದು ಭಾಷಣವನ್ನು ಮಾಡುತ್ತಾರೆ. ಇದು ಎಷ್ಟು ಜನಜನಿತವಾಗಿದೆ ಎಂದರೆ ಇದು ಗೊತ್ತಿಲ್ಲದ ದಲಿತರೇ ಇಲ್ಲವೆನ್ನುವಷ್ಟು!
ಅಷ್ಟೇ ಅಲ್ಲದೆ ಇದರ ಮೇಲೆ ಹಾಡುಗಳೂ ಕೂಡ ರಚಿತವಾಗಿವೆ. “ಶಿಕ್ಷಣ-ಸಂಘಟನೆ-ಹೋರಾಟ ...ಮುತ್ತಿನಂತ ಮೂರೇ ಸೂತ್ರ...” ಎಂಬ ಹಾಡಂತೂ ಬಹುತೇಕರಿಗೆ ಗೊತ್ತು. ಈ ಮೂರು ಸೂತ್ರಗಳನ್ನೇ ಹಿಡಿದು ವಿದ್ಯಾರ್ಥಿ ಜೀವನದಲ್ಲೇ ಹೋರಾಟಕ್ಕೆ ಧುಮುಕುವ ಯುವಕ-ಯುವತಿಯರಿಗೆ ಬುದ್ದಿ ಹೇಳುವ ಕೆಲಸವನ್ನೂ ಸಹ ಕೆಲವರು ಅಲ್ಲಲ್ಲಿ ಮಾಡುತ್ತಾರೆ. “ಮೊದಲು ಚೆನ್ನಾಗಿ ಓದಿರಿ... ಆಮೇಲೆ ಹೋರಾಟ ಮಾಡುವುದು ಇದ್ದೇ ಇದೆ” ಎಂದು ಕೆಲವು ಹಿರಿಯರು ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಬುದ್ದಿವಾದ ಹೇಳುತ್ತಾರೆ.
ಇಲ್ಲಿ ಮೊದಲಿಗೆ ಮೂಡುವ ಮೂಲಭೂತ ಪ್ರಶ್ನೆಯೆಂದರೆ ಕನ್ನಡದಲ್ಲಿ ಬಾಬಾಸಾಹೇಬರು ಹೀಗೆ ಹೇಳಿದ್ದಾರೆಯೇ...? ಎಂಬುದು. ಖಂಡಿತವಾಗಿ ಬಾಬಾಸಾಹೇಬರು ಕನ್ನಡದಲ್ಲಿ ಹೀಗೆ ಹೇಳಿಲ್ಲ. ಅವರು ಇಂಗ್ಲೀಷಿನಲ್ಲಿ ಹೀಗೆ ಹೇಳಿದ್ದಾರೆ:Educate,Agitate, Organise. 1942 ರ ಜುಲೈ ತಿಂಗಳಲ್ಲಿ 18 ರಿಂದ 20 ನೇ ತಾರಿಖಿನಲ್ಲಿ ನಾಗಪುರದಲ್ಲಿ ನಡೆದ All India Depressed Class Conference ನಲ್ಲಿ ಮಾತನಾಡುತ್ತಾ ಬಾಬಾಸಾಹೇಬರು My final words of advise to you is educate,agitate, organise,have faith in yourselves and never loose hope.I shall always be with you as I know you will be with me” (Volume-17,part-3,page-276)ಎಂಬ ಬಹಳ ಗಂಭೀರವಾದ, ಆಳವಾದ ಒಳನೋಟಗಳನ್ನು ಉಳ್ಳ ಸಂದೇಶವನ್ನು ನಮಗೆ ನೀಡಿದ್ದಾರೆ.
ಬಾಬಾಸಾಹೇಬರು ಹೇಳಿರುವುದು Educate, Agitate, Organise ಎಂದು. ಆದರೆ ನಾವೆಲ್ಲ ಬಳಸುತ್ತಿರುವುದು ಶಿಕ್ಷಣ (Education ), ಸಂಘಟನೆ (Organization ) ಹೋರಾಟ (Agitation ) ಎಂದು. ಯಾಕೆ ಹೀಗಾಗಿದೆ...? ಇದಕ್ಕೆ ಯಾರು ಹೊಣೆ...? ಈ ಗಂಭೀರ ಪ್ರಶ್ನೆಗಳ ಚರ್ಚೆಗೆ ಹೋಗುವ ಮುನ್ನ ಈ ಪದಗಳ ಅರ್ಥವನ್ನು, ಅವುಗಳ ನಡುವೆ ಇರುವ ಸಂಬಂಧವನ್ನು ಮೊದಲು ವಿಶ್ಲೇಷಿಸೋಣ.
Educate, Agitate, Organise ಎಂಬ ಪದಗಳು ಕ್ರಿಯಾಪದ (verb) ವಾಗಿವೆ. ಆದರೆ ಶಿಕ್ಷಣ (Education ), ಸಂಘಟನೆ (Organization) , ಹೋರಾಟ (Agitation ) ಇವುಗಳು ನಾಮಪದವಾಗಿವೆ (noun). ಸಾಮಾನ್ಯವಾಗಿ ಕ್ರಿಯಾಪದಗಳು ಕ್ರಿಯೆಯನ್ನು, ಚಲನಶೀಲತೆಯನ್ನು ಹೇಳುತ್ತವೆ. ಆದರೆ ನಾಮಪದಗಳು ಸಾಮಾನ್ಯವಾಗಿ ನಿಷ್ಕ್ರಿಯವಾಗಿರುತ್ತವೆ.ಸ್ಥಾವರವಾಗಿರುತ್ತವೆ.
ಅಂದರೆ ಇಲ್ಲಿ ಮೊದಲಿಗೆ ಕಾಣುವ ದೊಡ್ಡ ವ್ಯತ್ಯಾಸವೆಂದರೆ ಬಾಬಾಸಾಹೇಬರು ಮೂಲತಃ ಕ್ರಿಯಾಪದದಲ್ಲಿ ಹೇಳಿದ್ದಾರೆ. ನಾವು ಸದಾ ಕಾರ್ಯೋನ್ಮುಖರಾಗಿರಬೇಕಾದ ಬಗ್ಗೆ ಸೂಚಿಸಿದ್ದಾರೆ. ಆದರೆ ನಾವು ನಿಷ್ಕ್ರಿಯವಾದ ನಾಮಪದಗಳನ್ನು ಬಳಸುತ್ತಿದ್ದೇವೆ. ಅಲ್ಲದೆ, Educate ಬದಲಿಗೆ ಶಿಕ್ಷಣ ಎಂದು ಬಳಸುತ್ತಿರುವ ನಾವು,Agitate ಎಂಬ ಜಾಗದಲ್ಲಿ ಸಂಘಟನೆಯನ್ನು, Organise ಎಂಬ ಜಾಗದಲ್ಲಿ ಹೋರಾಟವನ್ನು ಬಳಸುತ್ತಿದ್ದೇವೆ. ಅಂದರೆ ಕ್ರಿಯಾಪದಗಳನ್ನು ನಾಮಪದಗಳನ್ನಾಗಿ ಮಾಡಿದ್ದಲ್ಲದೆ, Agitate,Organise ಎಂಬ ಪದಗಳನ್ನು ಅದಲು ಬದಲು ಮಾಡಿಕೊಂಡು ಬಳಸುತ್ತಿದ್ದೇವೆ. ಇದೆಲ್ಲ ಯಾರ ಕೃತ್ಯ...? ಏಕೆ ಹೀಗಾಗಿದೆ...? ಈ ಪ್ರಶ್ನೆಗಳನ್ನು ಕೊನೆಯಲ್ಲಿ ಚರ್ಚಿಸೋಣ. ಈಗ ಈ ಪದಗಳ ಅರ್ಥವನ್ನು ನೋಡೋಣ.
Educate ಎಂಬ ಪದಕ್ಕೆ ಆಕ್ಸ್ ಫರ್ಡ್ ನಿಘಂಟಿನಲ್ಲಿ ಈ ಅರ್ಥಗಳಿವೆ: give intellectual or moral instruction to someone, give someone information about a particular subject . ಮೈಸೂರು ವಿಶ್ವವಿದ್ಯಾನಿಲಯದ ನಿಘಂಟಿನಲ್ಲಿ (ಎಳೆಯರನ್ನು) ಬೆಳೆಸು, ಪಾಲಿಸು, ಸಾಕಿ ಸಲಹು (ಮಾನಸಿಕ, ನೈತಿಕ) ಶಿಕ್ಷಣ ನೀಡು, ತರಬೇತಿಕೊಡು, ತಯಾರಿ ಮಾಡು, (ವ್ಯಕ್ತಿಯ ಶಕ್ತಿ ಸಾಮಥ್ರ್ಯವನ್ನು) ಬೆಳೆಸು, ಅಭಿವೃದ್ಧಿಗೊಳಿಸು, ವ್ಯಕ್ತಿಯನ್ನು ಹದಗೊಳಿಸು, ಸಂಸ್ಕಾರಗೊಳಿಸು ಮುಂತಾದ ಅರ್ಥಗಳಿವೆ.
ಅಂದರೆ ನಾವಿಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಜನರನ್ನು ತಿದ್ದುವ, ಜಾಗೃತಗೊಳಿಸುವ, ತರಬೇತಿ ನೀಡುವ, ಸಂಸ್ಕಾರಗೊಳಿಸುವ, ವಿಶಾಲವೂ, ನಿರಂತರವೂ ಆದ ಕ್ರಿಯಾತ್ಮಕ ಅರ್ಥವನ್ನು Educate ಎಂಬ ಪದ ಹೊಂದಿದೆ. ಆದರೆ Education (ಶಿಕ್ಷಣ) ಎಂಬುದು ಸಾಮಾನ್ಯವಾಗಿ ಕ್ರಮಬದ್ಧ ಶಿಕ್ಷಣ, ಕಲಿಕೆ, ವಿದ್ಯಾಭ್ಯಾಸ, ಓದು-ಬರಹ, ಶಿಕ್ಷಣಕ್ರಮ ಎಂಬ ಅರ್ಥಗಳನ್ನು ಹೊಂದಿದೆ. ಅಂದರೆ ನಾವು ಶಾಲಾ ಕಾಲೇಜುಗಳಲ್ಲಿ ಕಲಿಯುವ formal education ಅನ್ನು ಇದು ಸೂಚಿಸುತ್ತದೆ.
ಆಶ್ಚರ್ಯ! ಬಾಬಾಸಾಹೇಬರು ನಾವು ಹಾಗು ನಮ್ಮ ಸಮಾಜವನ್ನು ಕುರಿತಂತೆ, ನಾವು ಯಾರು? ನಮ್ಮ ಸಮಸ್ಯೆಗಳೇನು? ಅದಕ್ಕೆ ಪರಿಹಾರ ಮಾರ್ಗಗಳೇನು...? ಇತ್ಯಾದಿ ಎಲ್ಲ ವಿಷಯಗಳ ಬಗ್ಗೆ ತಿಳವಳಿಕೆ ಹೊಂದಬೇಕಾದ, ಸದಾ ಜಾಗೃತಿಯಿಂದ ಇರಬೇಕಾದ ಬಗ್ಗೆ Educate ಎಂಬ ಪದದಲ್ಲಿ ಧ್ವನಿಸಿದ್ದಾರೆ! ಆದರೆ ನಾವು ಇದನ್ನು ಎಷ್ಟು ಸರಳವಾಗಿ ‘ಶಿಕ್ಷಣ’ ಎಂದು ಅರ್ಥ ಮಾಡಿಕೊಂಡಿದ್ದೇವೆ!! ಅಂದರೆ ನಾವು-ನಮ್ಮ ಸಮಾಜ, ನಮ್ಮ ಇತಿಹಾಸದ ಬಗ್ಗೆ ಸ್ಥಿತಿ-ಗತಿಗಳ ಬಗ್ಗೆ, ನಮ್ಮ ಹಕ್ಕು-ಅಧಿಕಾರಗಳ ಬಗ್ಗೆ ಸದಾ ತಿಳಿದುಕೊಳ್ಳುತ್ತಲೇ ಇರಬೇಕಾದ, ಸದಾ ಜಗೃತಿಯಿಂದರಬೇಕಾದ ಅರ್ಥವನ್ನು ಬಿಟ್ಟು ನಾವು ಕೇವಲ ಶಾಲೆ-ಕಾಲೇಜುಗಳು ನೀಡುವ ಶಿಕ್ಷಣ ಎಂದು ಅರ್ಥಮಾಡಿಕೊಂಡಿದ್ದೇವೆ!
ಇನ್ನು Agitate ಎಂಬ ಪದದ ವಿಚಾರಕ್ಕೆ ಬರೋಣ: ಆಕ್ಸ್ ಫರ್ಡ್ ನಿಂಘಂಟಿನಲ್ಲಿ ಇದಕ್ಕೆ make someone troubled or nervous,campaign to arouse public concern about something,stir or shake a liquid briskly ಎಂಬ ಅರ್ಥಗಳಿವೆ. ಮೈಸೂರು ವಿಶ್ವವಿದ್ಯಾನಿಲಯದ ನಿಂಘಂಟಿನಲ್ಲಿ (ಯಾವುದನ್ನೇ ಜೋರಾಗಿ) ಅಲ್ಲಾಡಿಸು, (ವ್ಯಕ್ತಿಯನ್ನು, ಮನಸ್ಸನ್ನು, ಭಾವಗಳನ್ನು) ಕಲಕು. ಕದಡು, ಕ್ಷೋಭೆಗೊಳಿಸು, ಅಲ್ಲೋಲ-ಕಲ್ಲೋಲ ಮಾಡು, (ವ್ಯಕ್ತಿ, ಮನಸ್ಸು ಮೊದಲಾದವನ್ನು) ಕಳವಳಗೊಳಿಸು, ಚಿಂತೆಗೀಡುಮಾಡು, ಯೋಚನೆ ಹಿಡಿಸು, (ಉತ್ಸಾಹದಿಂದ, ಉದ್ರೇಕದಿಂದ) ಚರ್ಚಿಸು, ವಾದಿಸು, (ಯಾವುದೇ ಪರವಾಗಿ ಅಥವ ವಿರುದ್ಧವಾಗಿ) ಚಳವಳಿ ನಡೆಸು. ಮುಂತಾದ ಅರ್ಥಗಳಿವೆ.
ಸಾಮಾನ್ಯವಾಗಿ Educate ಆದ ಅಂದರೆ ಜಾಗೃತಗೊಂಡ ವ್ಯಕ್ತಿಯ ಮನಸ್ಸು ತೀವ್ರವಾಗಿ, ಆಳವಾಗಿ ಚಿಂತಿಸತೊಡಗುತ್ತದೆ. ಪೂರ್ವಾಪರ ಆಲೋಚನೆಗಳಲ್ಲಿ ತೊಡಗಿಸಿಕೊಳ್ಳುತ್ತದೆ. ತೀವ್ರವಾಗಿ ಕಲಕಲ್ಪಟ್ಟು ವಿಚಾರಮಾಡುತ್ತದೆ. ಹಾಗು ಈ ಕಾರಣಕ್ಕಾಗಿ ಚಳವಳಿ ಹೂಡಲು ತವಕಿಸುತ್ತದೆ. ಇಷ್ಟೆಲ್ಲ ವಿಶಾಲ ಅರ್ಥಗಳನ್ನು Agitate ಎಂಬ ಕ್ರಿಯಾಪದ ಹೊಂದಿದೆ.
ನಮ್ಮ ಇತಿಹಾಸ, ನಮ್ಮ ಸಮಾಜ, ನಮ್ಮ ಪೂರ್ವಿಕರ ಹೋರಾಟ ಮೊದಲಾದ ಎಲ್ಲ ವಿಚಾರಗಳಿಂದ ಜಾಗೃತಗೊಂಡ, ಸಂಸ್ಕಾರಗೊಂಡ ಮನಸ್ಸಿನ ಸಂಘರ್ಷವನ್ನೇ Agitate ಸೂಚಿಸುತ್ತದೆ. ಇಂತಹ ಮಾನಸಿಕ ಸಂಘರ್ಷಕ್ಕೆ ತುತ್ತಾದ ವ್ಯಕ್ತಿ ತಾನಾಗಿಯೇ ತನ್ನ ಹಾಗು ತನ್ನ ಸಮಾಜದ ಬಿಡುಗಡೆಗೆ ಕೆಲಸ ಮಾಡಲು ಸಿದ್ಧನಾಗುತ್ತಾನೆ. ಇಂತಹ ಸ್ಥಿತಿಗೆ ಒಂದು ಸಮಾಜ ತಲುಪಿತೆಂದರೆ ಅದು ಸಹಜವಾಗಿ ‘ಸಂಘಟಿತ’ವಾಗ ತೊಡಗುತ್ತದೆ. ತಿಳುವಳಿಕೆ ಪಡೆದು, ಜಾಗೃತಗೊಂಡ, ತೀವ್ರ ಮಾನಸಿಕ ಸಂಘರ್ಷಕ್ಕೆ ತುತ್ತಾದ ಸಮಾಜ ಸಂಘಟಿತವಾಗುತ್ತದೆ. ಅದು ಮತ್ತೆ ಒಡೆದುಹೋಗಲು, ಛಿದ್ರವಾಗಲು ಇಚ್ಛಿಸುವುದಿಲ್ಲ. ಎಚ್ಚೆತ್ತ ಸಮಾಜ ಸಾಮಾನ್ಯವಾಗಿ ಸಂಘಟಿತವಾಗುತ್ತದೆ. ಒಂದು ಸಮಾಜ ಸಂಘಟಿತವಾಯಿತೆಂದರೆ ಅದು ವಿಮೋಚನೆ ಪಡೆಯಿತೆಂದೇ ಅರ್ಥ. ಏಕೆಂದರೆ ಸಂಘಟಿತ ಸಮಾಜ ತನ್ನೆಲ್ಲ ಹಕ್ಕು-ಅಧಿಕಾರಗಳನ್ನು ಪಡೆದುಕೊಳ್ಳುತ್ತದೆ. ಸಾಮಾನ್ಯವಾಗಿ ಸಂಘಟಿತ ಸಮಾಜ ಆಳುವ ವರ್ಗವಾಗಿರುತ್ತದೆ. ಇಂತಹ ಸಂಘಟಿತ ಸಮಾಜದ ಮೇಲೆ ದೌರ್ಜನ್ಯ ದಬ್ಬಾಳಿಕೆಗಳು ನಡೆಯುವುದಿಲ್ಲ. ಈ ಎಲ್ಲ ಅರ್ಥವನ್ನು ಬಾಬಾಸಾಹೇಬರ Organise ಎಂಬ ಪದ ಬೋಧಿಸುತ್ತದೆ. ಈ ಎಲ್ಲ ಅರ್ಥ ಪರಂಪರೆಯನ್ನು ಬಾಬಾಸಾಹೇಬರ Educate....Agitate... Organise.. ಎಂಬ ಸೂತ್ರಗಳು ನೀಡುತ್ತವೆ. ಇವು ಕ್ರಿಯಾಪದಗಳಾಗಿದ್ದು ನಾವು (ಅಂದರೆ ವಿದ್ಯಾರ್ಥಿಗಳಿರಲಿ,ನೌಕರರಿರಲಿ,ವಯಸ್ಸಾದ ಹಿರಿಯರಿರಲಿ,ಮಕ್ಕಳಿರಲಿ-ಒಟ್ಟು ಸಮೂದಾಯವೇ)ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಬೋಧಿಸುತ್ತವೆ. ಬಹುಶಃ ಬಾಬಾಸಾಹೇಬರು ಇವುಗಳನ್ನು ಬುದ್ಧಂ-ಧಮ್ಮಂ-ಸಂಘಂ ಎಂಬ ತ್ರಿಸರಣಗಳಿಂದ ತೆಗೆದುಕೊಂಡಿರಬಹುದು. ಈ ಹಿನ್ನಲೆಯಲ್ಲಿ ನಾವು Educate.... Agitate... Organise... ಎಂಬ ಪದಗಳಿಗೆ ಕನ್ನಡದಲ್ಲಿ ಜಾಗೃತರಾಗಿ... ಚಿಂತನೆಮಾಡಿ... ಸಂಘಟಿತರಾಗಿ... ಎಂದು ಕರೆಯಬಹುದು. ಅಥವ ಜಾಗೃತರಾಗಿ... ಹೋರಾಡಿ... ಸಂಘಟಿತರಾಗಿ ಎಂದೂ ಸಹ ಕರೆಯಬಹುದು.
ಇಲ್ಲಿ ಹೋರಾಡಿ ಎಂದರೆ ಮಾನಸಿಕವಾದ ಹೋರಾಟ, ಸಂಘರ್ಷ ಅಥವ ನಮ್ಮ ವಿಮೋಚನೆಗಾಗಿ ನಾವು ನಡೆಸುವ ರಚಾನಾತ್ಮಕ ಚಳವಳಿ (pro-active) ಎಂದು ಅರ್ಥ ಮಾಡಿಕೊಳ್ಳಬಹುದು. ಫುಲೆ ದಂಪತಿಗಳು ನಡೆಸಿದಂತಹ, ಬಾಬಾಸಾಹೇಬರು ನಡೆಸಿದಂತಹ, ಕಾನ್ಷಿರಾಮರು ಮಾಡಿದಂತಹ ರಚಾನಾತ್ಮಕ ಚಳವಳಿಗಳು ಎಂದು ಅರ್ಥ ಮಾಡಿಕೊಳ್ಳಬಹುದು.
ಒಟ್ಟಾರೆ ಬಾಬಾಸಾಹೇಬರ ಆಶಯದಂತೆ Educate....Agitate ... Organise... ಎಂಬ ಪದಗಳು ನಮ್ಮ ಸಮಾಜ ನಿರಂತರವಾಗಿ ಜಾಗೃತರಾಗಬೇಕಾದ, ಚಿಂತನೆಮಾಡಬೇಕಾದ ಅಥವ ಚಳವಳಿ ನಡೆಸಬೇಕಾದ, ಸಂಘಟಿತರಾಗಬೇಕಾದ ಜವಾಬ್ದಾರಿಗಳನ್ನು ನಮಗೆ ಹೊರಿಸುತ್ತವೆ. ನಮ್ಮ ಸಮಾಜದ ವಿಮೋಚನೆಯೇ ಈ ಮೂರು ಪದಗಳಲ್ಲಿ ಅಡಕವಾಗಿರುವಂತೆ ತೋರುತ್ತದೆ.
ಆದರೆ ದುರಂತ! ಡಾ. ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳನ್ನು ಅನುವಾದಿಸುವವರು ಇವುಗಳನ್ನು ಶಿಕ್ಷಣ, ಸಂಘಟನೆ, ಹೋರಾಟ ಎಂದು ತಿರುಚಿದ್ದಾರೆ! ಕ್ರಿಯಾಪದಗಳನ್ನು ನಾಮಪದಗಳನ್ನಾಗಿ ಬದಲಿಸಿದ್ದಲ್ಲದೆ, Agitate, Organise ಗಳನ್ನೂ ಅದಲು-ಬದಲು ಮಾಡಿದ್ದಾರೆ.ಬಾಬಾ ಸಾಹೇಬರ ಮೊದಲನೇ ಸಂಪುಟ ದಲ್ಲೇ ಹೀಗೆ ತಿರುಚಲಾಗಿದೆ. ಆಶ್ಚರ್ಯವೆಂದರೆ ಬಾಬಾಸಾಹೇಬರ ಕೃತಿಗಳ ಅನುವಾದ ಮಾಡಿದವರ, ಪರಿಷ್ಕರಿಸಿದವರ ಸಮಿತಿಗಳಲ್ಲಿ ಖ್ಯಾತನಾಮರಾದ ಕೆಲವು ದಲಿತ ಸಾಹಿತಿಗಳೂ ಇದ್ದಾರೆ! ಈ ಸೂಕ್ಷ್ಮಗಳನ್ನೆಲ್ಲ ಅವರು ಗಮನಿಸಲಿಲ್ಲವೇ?
ಈ ಕೆಲಸವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೋ ಗೊತ್ತಿಲ್ಲದೆ ಮಾಡಲಾಗಿದೆಯೋ...? ಹೇಳುವುದು ಕಷ್ಟ. ಆದರೆ ಶೋಷಿತರ ಪ್ರವಾದಿಯ ಸೂತ್ರಗಳನ್ನಂತೂ ತಿರುಚಲಾಗಿದೆ. ಇದರಿಂದ ಕರ್ನಾಟಕದಲ್ಲಿ ಆದ ಅನಾಹುತಗಳು ಅಷ್ಟಿಷ್ಟಲ್ಲ. ಕರ್ನಾಟಕದ ದಲಿತ ಚಳವಳಿಯ ಅಸ್ತವ್ಯಸ್ತತೆಗೂ, ಈ ಶಿಕ್ಷಣ-ಸಂಘಟನೆ-ಹೋರಾಟ ಎಂಬ ತಪ್ಪು ಮಂತ್ರಗಳಿಗೂ ನೇರ ಸಂಬಂಧವಿರುವಂತಿದೆ.
ಶಿಕ್ಷಣ-ಸಂಘಟನೆ-ಹೋರಾಟ ಈ ಮಾತುಗಳು ಏನು ಸಂದೇಶಕೊಟ್ಟಿವೆ...? ಮೊದಲು ಶಿಕ್ಷಣ ಪಡೆಯಬೇಕು, ಅಂದರೆ ಶಾಲಾ-ಕಾಲೇಜುಗಳಲ್ಲಿ ಓದಿ ಪದವಿ ಪಡೆದುಕೊಳ್ಳಬೇಕು, ಆನಂತರ ಸಂಘ ಕಟ್ಟಬೇಕು, ಕೊನೆಗೆ ಹೋರಾಟ ನಡೆಸಬೇಕು. ಸಾಮಾನ್ಯವಾಗಿ ಇದೇ ಎಲ್ಲ ಕಡೆ ಜನಿಜನಿತವಾಗಿದೆ. ದಲಿತ ಚಳವಳಿ ನಡೆದು ಬಂದಿರುವುದು ಹೀಗೆಯೇ ಅಲ್ಲವೇ...? ಶಿಕ್ಷಣ ಪಡೆದವರೆಲ್ಲರೂ ತಮಗಿಷ್ಟ ಬಂದ ಸಂಘಗಳನ್ನು ಕಟ್ಟುವುದು! ತಮಗೆ ತೋಚಿದಂತೆ ಹೋರಾಡುವುದು! ಕೆಲವರು ಧಿಕ್ಕಾರ ಕೂಗುವುದು, ಕೆಲವರು ಅರೆಬೆತ್ತಲೆ ಮೆರವಣಿಗೆ ಮಾಡುವುದು,ತಮಟೆ ಬಾರಿಸುವುದು, ಕೆಲವರು ಉರುಳು ಸೇವೆ ಮಾಡುವುದು, ಕೆಲವರಂತೂ ಮಲ ಸುರಿದುಕೊಂಡೇ ಹೋರಾಡುವುದು, ಬಾಯಿ ಬಡಿದುಕೊಂಡು ಪ್ರತಿಭಟಿಸುವುದು ಒಂದೇ...ಎರಡೇ... ಅಂತೂ ತಪ್ಪು ಅನುವಾದವೊಂದು ದಲಿತರನ್ನು ನಲವತ್ತು ವರ್ಷಗಳ ಕಾಲ ಬೀದಿಯಲ್ಲಿ ನಿಲ್ಲಿಸಿತು! ದೇಶ ಆಳುವ ಅಂಬೇಡ್ಕರರ ಕನಸನ್ನು ದೂರ ಮಾಡಿತು.
ಈ ಹೋರಾಟವನ್ನು ದಲಿತರನ್ನು ತಮಗೆ ತೋಚಿದಂತೆಲ್ಲಾ ಅರ್ಥಮಾಡಿಕೊಂಡಿದ್ದಾರೆ. ಈ ಪದಕ್ಕೆ ನಿಘಂಟುಗಳಲ್ಲಿ ಹಲವಾರು ಅರ್ಥಗಳಿವೆಯಾದರೂ, ನಾವು ಫುಲೆ ದಂಪತಿಗಳು, ಬಾಬಾಸಾಹೇಬರು-ಕಾನ್ಷಿರಾಮರು ನಡೆಸಿದ ಹೋರಾಟಗಳ ಹಿನ್ನಲೆಯಲ್ಲಿ ಅರ್ಥ ಮಾಡಿಕೊಳ್ಳುವುದು ಅತ್ಯಂತ ಸೂಕ್ತವೆನಿಸುತ್ತದೆ. ಈ ನಮ್ಮ ಪೂರ್ವಿಕರು ಮನುವಾದಿ ಪಕ್ಷಗಳಿಗೆ, ಸಂಘಟನೆಗಳಿಗೆ ಸೇರಿಕೊಳ್ಳದೆ ಅಥವ ಅವರ ಪಕ್ಷ-ಸಂಘಟನೆಗಳ ಸದಸ್ಯರಾಗದೆ ದೂರನಿಂತು ಅವರ ವಿರುದ್ಧ ಹೋರಾಡಿದರು. ಅವರು ನೀಡಿದ ಯಾವ ಆಮಿಷಗಳಿಗೂ ಒಳಗಾಗದೆ ಸ್ವಾಭಿಮಾನಗಳಾಗಿ ಉಳಿದು ಸಮಾಜವನ್ನು ಕಟ್ಟಿದರು. “ಹಿಂದೂಗಳು ನಡೆಸುವ ಯಾವ ಚಳವಳಿಯಲ್ಲೂ ಭಾಗವಹಿಸದಿರುವುದು ನನ್ನ ಪಾಲಿನ ಕಾನೂನಾಗಿದೆ” ಎಂಬ ಬಾಬಾಸಾಹೇಬರ ಸುಪ್ರಸಿದ್ಧ ವಾಣಿಯನ್ನು ಈ ಹಿನ್ನಲೆಯಲ್ಲಿ ಗಮನಿಸಬಹುದು. ಆದ್ದರಿಂದಲೇ ನಮ್ಮ ಪೂರ್ವಿಕರ ಹೋರಾಟಗಳು ಫಲಪ್ರದವಾಗಿದ್ದವು.ನಮ್ಮನ್ನು ವಿಮೋಚನೆಯತ್ತ ಮುನ್ನಡೆಸಿದವು.ಆದರೆ ದಲಿತರು ಇಂದು ಏನು ಮಾಡುತ್ತಿದ್ದಾರೆ...?
ಮನುವಾದಿಗಳು ತಮ್ಮ ಹಿತಾಸಕ್ತಿಯನ್ನು ಉಳಿಸಿಕೊಳ್ಳಲಿಕ್ಕಾಗಿ ಕಟ್ಟಿಕೊಂಡಿರುವ ಪಕ್ಷಗಳಲ್ಲಿ, ಸಂಘಟನೆಗಳಲ್ಲಿ ದಲಿತರು ಸೇರಿಕೊಂಡಿದ್ದಾರೆ. ಸದಸ್ಯರಾಗಿಯೋ, ಪದಾಧಿಕಾರಿಗಳಾಗಿಯೋ ಇಲ್ಲವೇ ಅವರು ನೀಡುವ ಸಣ್ಣಪುಟ್ಟ ಆಮಿಷಕ್ಕೆ ಒಳಗಾಗಿಯೋ ಅಂತೂ ಅಲ್ಲಿಯೋ ದುಡಿಯುತ್ತಿದ್ದಾರೆ! ದಯಮಾಡಿ ಯಾರಾದರೂ ಹೇಳಿ... ಮನುವಾದಿಗಳ ಅಡಿಯಲ್ಲೇ ಕೆಲಸ ಮಾಡಿಕೊಂಡು ಅವರ ವಿರುದ್ಧ ಯಾವ ರೀತಿ ಹೋರಾಡಬಹುದು...? ಮನುವಾದಿ ಪಕ್ಷಗಳಲ್ಲಿ, ಸಂಘಟನೆಗಳಲ್ಲಿ ನಿಷ್ಠರಾಗಿದ್ದುಕೊಂಡು ಅವರ ವಿರುದ್ಧವೇ ಹೇಗೆ ತಾನೆ ಹೋರಾಡಬಹುದು? ನಮ್ಮ ಜನರನ್ನು ಹೇಗೆ ತಾನೆ ವಿಮೋಚನೆಗೊಳಿಸಬಹುದು? ಅವರನ್ನು ಬೇಡಬಹುದಷ್ಟೇ! ಗೋಗರೆಯಬಹುದಷ್ಟೇ!
ಆದ್ದರಿಂದಲೇ ದಲಿತರು ಈವರೆಗೆ ನಡೆಸಿದ ಅಥವ ಈಗಲೂ ನಡೆಸುತ್ತಿರುವ ಬಹುತೇಕ ಹೋರಾಟಗಳೆಲ್ಲವೂ ಕೇವಲ “ಬೇಡುವ” ಅಥವ “ಗೋಗರೆಯುವ” ಸ್ವರೂಪದವುಗಳಾಗಿವೆ. ವಿಚಿತ್ರ! ಇಂತಹದನ್ನೂ ಕೂಡ ಇಂದು “ಹೋರಾಟ”ವೆಂದು ಬಹುತೇಕರು ಭಾವಿಸಿದ್ದಾರೆ. ನಿಜವಾಗಿ ಇದನ್ನೆಲ್ಲ “ಹೋರಾಟ” ಎಂದು ಕರೆಯಲಾಗುವುದಿಲ್ಲ. ಅದನ್ನು ಕೇವಲ “ಚೀರಾಟ” ಎನ್ನಬಹುದೇನೊ.
ಅಂತೂ, ಈ ಶಿಕ್ಷಣ! ಸಂಘಟನೆ!! ಹೋರಾಟ!!! ಎಂಬ ತಪ್ಪು ಸೂತ್ರಗಳು ದಲಿತರನ್ನು ಹೇಗೆ ದಾರಿ ತಪ್ಪಿಸಿದವು ನೋಡಿ! ಇಲ್ಲಿ ಆಶ್ಚರ್ಯಕರ ಚಿಹ್ನೆಯನ್ನು ಏಕೆ ಬಳಸುತ್ತಾರೋ ಗೊತ್ತಿಲ್ಲ. ಆಶ್ಚರ್ಯಕರ ಚಿಹ್ನೆಗಳು ಎಷ್ಟೋ ಸಂದರ್ಭಗಳಲ್ಲಿ ವಿರಳವಾದುದಕ್ಕೂ, ಅಸಾಧ್ಯವಾದುದಕ್ಕೂ, ನಂಬಲಸಾಧ್ಯವಾದುದಕ್ಕೂ ಬಳಸಲ್ಪಡುತ್ತವೆ!
ದಯಮಾಡಿ ಇಂತಹ ಅಸಂಬದ್ಧಗಳನ್ನು ಇನ್ನಾದರೂ ನಿಲ್ಲಿಸೋಣ. ಬಾಬಾಸಾಹೇಬರ Educate(ಜಾಗೃತರಾಗಿ)...Agitate (ಚಿಂತನೆಮಾಡಿ)...Organise(ಸಂಘಟಿತರಾಗಿ) .. ಎಂಬ ದಿವ್ಯ ಸೂತ್ರಗಳನ್ನು ಸರಿಯಾಗಿ ಗ್ರಹಿಸೋಣ. ನಮ್ಮ ಸಮಾಜವನ್ನು ಜಾಗೃತಗೊಳಿಸಿ ಆಳುವ ಸಮಾಜವನ್ನಾಗಿ ಪರಿವರ್ತಿಸೋಣ...
ಜೈಭೀಮ್ ಜೈಭಾರತ್....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ