ಬುಧವಾರ, ಜೂನ್ 15, 2016

ನನ್ನ ಮೇಷ್ಟ್ರು ಪ್ರೊ.ಸುಧಾಕರ


-ರಹಮತ್ ತರೀಕೆರೆ


ಶಿವಮೊಗ್ಗೆಯಿಂದ ಎಂ.ಎ. ಓದಲು ಮೈಸೂರಿಗೆ ಹೋದ ನನ್ನಂತಹ ಅನೇಕರಿಗ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪಂಡಿತಗುರುಗಳ ಬಗ್ಗೆ ಭಯಂಕರ ಕುತೂಹಲವಿತ್ತು. ಆಗ ನಮ್ಮ ವಿಭಾಗದ ಮುಖ್ಯಸ್ಥರಾಗಿದ್ದವರು ಹಾ.ಮಾ.ನಾಯಕರು. ಮೊದಲ ತಿಂಗಳು ಪ್ರೊಫೆಸರುಗಳಾದ ಪ್ರಭುಶಂಕರ, ವೆಂಕಟಾಚಲಶಾಸ್ತ್ರಿ ಶಂಕರ ಮೊಕಾಶಿ ಪುಣೇಕರ್, ಸಿಪಿಕೆ, ಜಿ.ಎಚ್.ನಾಯಕ, ದೇವಯ್ಯ ಹರವೆ, ವಿಜಯಾ ದಬ್ಬೆ, ರಾಗೌ, ತಾರಾನಾಥ, ಎಡ್ವರ್ಡ್ ನೊರೊನ್ಹಾ-ಹೀಗೆ ಒಬ್ಬೊಬ್ಬರಾಗಿ ಬಂದು ತಮ್ಮ ತರಗತಿಗಳ ಮೊದಲ ಗಂಟೆಯನ್ನು ತೆಗೆದುಕೊಂಡು, ತಮ್ಮ ಪಾಂಡಿತ್ಯ ಮತ್ತು ಜೀವನದೃಷ್ಟಿಯ ಝಲಕನ್ನು ತೋರಿಸಿಹೋದರು. ಒಬ್ಬೊರದೂ ಒಂದೊಂದು ಬಗೆಯ ವಿದ್ವತ್ತು. ಒಂದು ದಿನ ಪ್ರೊ. ಸುಧಾಕರ ಅವರ ಪಾಳಿಯೂ ಬಂದಿತು. ಅಲ್ಲಿಯವರೆಗೆ ಶಿವಮೊಗ್ಗೆಯ ಸಮೀಪದಲ್ಲಿದ್ದ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಿಂದ (ಇದುವೇ ಮುಂದೆ ಸ್ವತಂತ್ರಗೊಂಡು ಈಗಿನ ಕುವೆಂಪು ವಿಶ್ವವಿದ್ಯಾಲಯವಾಯಿತು.) ಅವರು ವರ್ಗಾವಣೆಯಾಗಿ ಬಂದಿದ್ದರು. ಅವರ ಜಾಗಕ್ಕೆ ಹಾ.ಮಾ.ನಾಯಕ ಅವರ ಜತೆಗೆ ಅಷ್ಟೇನೂ ಸಂಬಂಧ ಚೆನ್ನಾಗಿರದಿದ್ದ ಪ್ರೊ. ತಿಪ್ಪೇರುದ್ರಸ್ವಾಮಿಯವರು ವರ್ಗಾವಣೆಗೊಂಡು ಹೋಗಿದ್ದರು. 
 ಸುಧಾಕರ ಅವರು ನಮ್ಮ ಮೊದಲ ತರಗತಿಯನ್ನು ತೆಗೆದುಕೊಂಡಿದ್ದು ಚೆನ್ನಾಗಿ ನೆನಪಿದೆ. ಕಪ್ಪುಬಣ್ಣದ ತೆಳ್ಳಗಿನ ಮೈಕಟ್ಟಿನ ಕೀಚಲು ದನಿಯ ಅವರು ಬಿಳಿ ಅಂಗಿ ಮತ್ತು  ಬಿಳಿಯ ಪ್ಯಾಂಟನ್ನು ಹಾಕಿಕೊಂಡಿದ್ದರು. ಪ್ಯಾಂಟು ಶರ್ಟು ಕೊಂಚ ಕೊಳೆಯಾಗಿದ್ದವು. ಅದರ ವರ್ಣಪರಿವರ್ತನೆಗೆ ಅವರ ನಸ್ಯ ಸೇದುವ ಹವ್ಯಾಸವೂ ಕಾರಣವಿರಬೇಕು. ತರಗತಿಗೆ ಬರುವ ಮುಂಚೆ ನಸ್ಯ ಏರಿಸಿದ್ದರಿಂದ ಅವರ ಮೂಗು ಅಗಷ್ಟೆ ಗುಂಡುಹಾರಿಸಿದ ಜೋಡಿನಳಿಗೆಯ ಕೇಪಿನ ಕೋವಿಯಂತಿದ್ದವು. ನಡುನಡುವೆ ನಸ್ಯ ಸೇದಿದ ಮೂಗನ್ನು ಕರವಸ್ತ್ರದಿಂದ ಕವರ್ ಮಾಡಿ, ಜೋರಾದ ಶಬ್ದದೊಂದಿಗೆ ಸೀಟಿ, ಬಳಿಕ ಅದನ್ನು ಜೋಪಾನವಾಗಿ ಮಡಚಿ ಪ್ಯಾಂಟಿನ ಕಿಸೆಯಲ್ಲಿ ಇರಿಸಿಕೊಳ್ಳುವುದನ್ನು ಮುಜುಗರವಿಲ್ಲದೆ ಮಾಡುತ್ತಿದ್ದರು. ಹೊಳೆಯುವ ಕಿರುಕಣ್ಣುಗಳಿಂದ ಒಮ್ಮೆ ಅವರು ತರಗತಿಯ ಮೇಲೆ ಹೊಸಮತ ಸ್ವೀಕಾರಕ್ಕೆ ಬಂದಿರುವ ಮತಾರ್ಥಿಗಳನ್ನು ಕರುಣೆಯಿಂದ ನೋಡುವ ಪಾದ್ರಿಯಂತೆ ಕಣ್ಣುಹಾಯಿಸಿ, ಬಳಿಕ ತರಗತಿ ಶುರುಮಾಡಿದರು.

 ಅವರ ಪ್ರಥಮ ಗಂಟೆಯ ವಿಷಯ ಸಾಹಿತ್ಯವನ್ನು ಹೇಗೆ ಎಚ್ಚರ ಮತ್ತು ಸೂಕ್ಷ್ಮತೆಯೊಂದಿಗೆ ಓದಬೇಕು ಎಂಬುದಾಗಿತ್ತು. ಇದಕ್ಕಾಗಿ ಅವರು ಕುಮಾರವ್ಯಾಸ ಭಾರತದಲ್ಲಿ ಜನನವೇ ಪಾಂಚಾಲರಾಯನ ಮನೆ ಎಂದು ಆರಂಭವಾಗುವ ಷಟ್ಪದಿಯನ್ನು ಆರಿಸಿಕೊಂಡು, ಅದರಲ್ಲಿ ವ್ಯಕ್ತವಾಗಿರುವ ದ್ರೌಪದಿಯ ಅಳಲನ್ನು ವಿವರಿಸಿದರು. ಅವಳ ಅಪ್ಪನೊ ಶತ್ರುವಾದ ದ್ರೋಣದ ಸಂಹಾರಕ್ಕಾಗಿಯೇ ಯಜ್ಞಮಾಡಿ ಮಕ್ಕಳನ್ನು ಪಡೆದ ಛಲವಂತ. ಸೋದರನೊ ಬೆನ್ನಹಿಂದೆ ಬೆಂಕಿಕುಂಡದಲ್ಲಿ ಹುಟ್ಟಿದ ವೀರ. ಸಖನಾಗಿರುವ ಕೃಷ್ಣನೊ ಮೂಲೋಕ ಆರಾಧಿಸುವ ವ್ಯಕ್ತಿ. ಇನ್ನು ಗಂಡರೆನಿಸಿಕೊಂಡವರು ದೇವತೆಗಳನ್ನೇ ಸೋಲಿಸಿದವರು. ಆದರೆ ಇಷ್ಟೆಲ್ಲ ವಿರಾಟ್ ಹಿನ್ನೆಲೆಯುಳ್ಳ ದ್ರೌಪದಿಗೆ ವಿರಾಟನ ಅಂತಃಪುರದ ರಾಣಿಯರ ಕಾಲೊತ್ತುವ ಎಣ್ಣೆಪೂಸುವ ಕೆಲಸ. ಭವ್ಯವಾದ ಚರಿತ್ರೆ ಹಾಗೂ ದಾರುಣವಾದ ವರ್ತಮಾನ ಮುಖಾಮುಖಿ ಮಾಡಿ, ವೈರುಧ್ಯವನ್ನು ಬಿಂಬಿಸುವುದು ದ್ರೌಪದಿಯ ಉದ್ದೇಶ. ಇದನ್ನು ಅಡುಗೆಯ ಮನೆಯಲ್ಲಿ ಭಟ್ಟನಾಗಿರುವ ಭೀಮನ ಮುಂದೆ ಹೇಳಿ ಅವನನ್ನು ಕದನಕ್ಕೆ ಪ್ರಚೋದಿಸುವುದು ಅವಳ ಇರಾದೆ. 

 ಈ ಪದ್ಯವನ್ನು ಸುಧಾಕರ ಅವರು ಚೆನ್ನಾಗಿ ವಿವರಿಸಿದರು. ಇದಾದ ಬಳಿಕ `ಹಾಕ್ಮಣೆ ನೂಕ್ಮಣೆ ಯಾಕ್ಮಣೆ' ಎಂಬ ಗಾದೆಯನ್ನು ವಿಶ್ಲೇಷಿಸಿದರು. ಮದುವೆಯಾದ ಹೊಸತರಲ್ಲಿ ಅತಿಗೌರವವನ್ನು ಪಡೆದುಕೊಳ್ಳುವ ಅಳಿಯನು ಮತ್ತೆಮತ್ತೆ ಈ ಗೌರವ ಸಿಗುತ್ತದೆಯೆಂದು ಹೋಗಲು ಆರಂಭಿಸಿದರೆ, ಅವನಿಗೆ ಮಾವನ ಮನೆಯಲ್ಲಿ ಸಿಗುವ ಉಪಚಾರದಲ್ಲಿ ಉಂಟಾಗುವ ಇಳಿಕೆಯನ್ನು ನಾಟಕೀಯವಾಗಿ ವಿವರಿಸುವ ಗಾದೆಯದು. ಕೊನೆಯದಾಗಿ ಸಾಹಿತ್ಯದಲ್ಲಿ ಸಂಕೇತಗಳನ್ನು ಹೇಗೆ ಅರಿಯಬೇಕು ಎಂಬುದಕ್ಕೆ ಆಧುನಿಕ ಸಾಹಿತ್ಯದಿಂದ `ಕಣ್ಣಿಕಿತ್ತ ಹಸು' ಮತ್ತು ಹೊರಲಾರದೆ ಹೊರೆ' ಎಂಬ ಎರಡು ಸಣ್ಣಕತೆಗಳನ್ನು ವಿಶ್ಲೇಷಿಸಿದರು. ಈ ಕತೆಗಳ ಕರ್ತೃ ಅವರೇ ಆಗಿದ್ದರು. ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಅನೇಕ ನವ್ಯದ ಪ್ರಸಿದ್ಧ ಕತೆಗಾರರನ್ನು ಹಿಂದಿಕ್ಕಿ ಇವು ಪ್ರಥಮ ಬಹುಮಾನ ಪಡೆದಿದ್ದವು. ಬಹುಶಃ ಮುಂದಿನ ಗಂಟೆಗಳಲ್ಲಿ ಅವರು ಕುವೆಂಪು ಅವರ ಕಾದಂಬರಿಯ ಕೆಲವು ಭಾಗಗಳನ್ನು ವಚನಕಾರರ ವಚನಗಳನ್ನು ವಿವರಿಸಿದ ನೆನಪು. 

ನಮ್ಮಲ್ಲಿ ಕೆಲವರಿಗೆ ಜಾನಪದವನ್ನು ಐಚ್ಛಿಕವಾಗಿ ತೆಗೆದುಕೊಳ್ಳುವುದು ಅಷ್ಟೇನೂ ಇಷ್ಟವಿರಲಿಲ್ಲ. ಅದು ದಡ್ಡರ ವಿಷಯವೆಂದೂ ಪಾಸಾಗಲು ಸುಲಭದ ದಾರಿಯೆಂದೂ ನಮ್ಮನ್ನು ವೈಚಾರಿಕವಾಗಿ ಅದು ಸಾಂಪ್ರದಾಯಿಕರಾಗಿ ಉಳಿಸಿಬಿಡಬಹುದೆಂದೂ  ಪೂರ್ವಗ್ರಹ ನಮಗಿತ್ತು. ನಾವೆಲ್ಲ ಆಗ ತಮ್ಮ ಪ್ರತಿರೋಧ ಪ್ರಜ್ಞೆಯಿಂದ ಕುವೆಂಪು ಅವರಂತಹ ದೊಡ್ಡ ಲೇಖಕರನ್ನು ವಿಮಶರ್ೆ ಮಾಡಿ ತಮಗೆ ನ್ಯಾಯವಾಗಿ ಬರಬೇಕಾದ ಮುಂಬಡ್ತಿಯನ್ನು ಕಳೆದುಕೊಂಡವರು ಎಂದು ಖ್ಯಾತರಾಗಿದ್ದ ಜಿ.ಎಚ್.ನಾಯಕರ ಹಾಗೂ ಪಾಶ್ಚಾತ್ಯ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದ ಎಚ್.ಎಂ. ಚನ್ನಯ್ಯನವರ ಶಿಷ್ಯರಾಗಿ ವಿಮರ್ಶೆಯನ್ನು ಕಲಿಯಬೇಕೆಂದು ಬಂದವರು. ಹೀಗಾಗಿ ನಾವು ಜಾನಪದವನ್ನು ವಿಶೇಷ ವಿಷಯವಾಗಿ ತೆಗೆದುಕೊಳ್ಳಲಿಲ್ಲ. ಸುಧಾಕರ ಅವರು ನಮಗೆ ಗುರುಗಳಾಗಿ ಬರಲಿಲ್ಲ. 


ಆದರೆ ಗ್ರಾಮೀಣ ಪ್ರದೇಶದಿಂದ ಹಿಂದುಳಿದ ಜಾತಿಗಳಿಂದ ಬಡತನದಿಂದ ಬಂದ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸುವ ಕಾರಣದಿಂದ ಅವರು ನಮಗೆಲ್ಲ ಪ್ರಿಯರಾದರು. ಅದರಲ್ಲೂ ಮನೆಯಲ್ಲಿ ಹೆಚ್ಚುಗಟ್ಲೆಯಾದ ದಿನ ನಮ್ಮನ್ನು ಕರೆದು `ಹಾಸ್ಟೆಲ್ ಊಟ ಉಂಡು ಬಾಯಿ ಕೆಟ್ಟಿರಬೇಕು, ಬರ್ರಿ ಮನೆಗೆ' ಎಂದು ಕರೆಯುತ್ತಿದ್ದರು. (ಹಾಗೆ ಕಂಡರೆ ನಾವು ಹಾಸ್ಟೆಲುಗಳಲ್ಲಿ ಉಂಡು ಊರಹೊಲಗಳ ಮೇಲಾಡಿ ಮೇದ ದೇವರ ಗೂಳಿಗಳಂತಿದ್ದೆವು.) ಸುಧಾಕರ ಅವರ ಮನೆಗೆ ಹೋದಾಗ ನಮಗೆ ಶ್ರೀಮತಿ ರಾಜಮ್ಮನವರ ಪರಿಯಚಯವಾಯಿತು. ಮೇಷ್ಟರ ನೆಪದಿಂದ ಪರಿಚಯವಾದ ಅವರು ನಮಗೆ ಮೇಷ್ಟರಿಗಿಂತ ಪ್ರಿಯವಾದರು. ಅವರನ್ನು ಅಕ್ಕ ಎಂದು ನಾವೆಲ್ಲ ಕರೆಯುತ್ತಿದ್ದೆವು. ಮುಂದೆ ನಾವು ಎಂ.ಎ.ಮುಗಿಸಿ ಮೇಷ್ಟರ ಕೆಲಸಕ್ಕೆ ಸೇರಿದ ಮೇಲೂ ಸುಧಾಕರ ಅವರ ಜತೆ ನನ್ನಂತಹ ಅನೇಕ ವಿದ್ಯಾರ್ಥಿಗಳ ಸಂಬಂಧ ಮುಂದುವರೆದಿದ್ದರೆ, ಅದಕ್ಕೆ ರಾಜಮ್ಮನ ತಾಯಪ್ರೀತಿಯೇ ಕಾರಣ. ಗ್ರಾಮೀಣ ಮುಗ್ಧತೆ ಸಹಜವಾದ ಸರಳತೆ ಮೈವೆತ್ತಂತಿದ್ದ ಅವರು, ತಮಗೆ ಮೂರು ಮಕ್ಕಳಿದ್ದರೂ, ನಮ್ಮನ್ನೆಲ್ಲ ಬಹಳ ಹಚ್ಚಿಕೊಂಡಿದ್ದರು. ಅವರ ದುಂಡುದುಂಡಾಗಿದ್ದ ಗಂಡುಮಕ್ಕಳನ್ನು ನೋಡಿದಾಗಲೆಲ್ಲ ನಾನು, ಏನ್ರಪ್ಪಾ ಜಯಚಾಮರಾಜೇಂದ್ರ ಒಡೆಯರುಗಳಿರಾ' ಎಂದು ಕೀಟಲೆ ಮಾಡುತ್ತಿದ್ದೆ. ನಮಗೆ ನೇರ ಗುರುಗಳಲ್ಲದಿದ್ದರೂ ತಮ್ಮ ಬರೆಹ ಉಪನ್ಯಾಸಗಳಿಂದ ಪ್ರಭಾವ ಬೀರಿದ್ದ ಲೇಖಕರಾದ ಕಾಳೇಗೌಡ ನಾಗವಾರಅವರೂ ಶಿವಮೊಗ್ಗದಲ್ಲಿ ನನ್ನ ಗುರುಗಳಾದ ಹಾಲೇಶಪ್ಪನವರೂ ರಾಜಮ್ಮನವರ ವಾತ್ಸಲ್ಯಪೂರಿತ ಉಪಚಾರದ ಬಗ್ಗೆ ನಮಗೆಲ್ಲ ಮುಂಗಡವಾಗಿಯೇ ಹೇಳಿದ್ದರು. 

ರಾಜಮ್ಮನವರ ಕಾರಣದಿಂದ ಪ್ರೊ. ಸುಧಾಕರ ಅವರ ಮನೆ ಗ್ರಾಮೀಣ ಕಡೆಯಿಂದ ಬಂದ ಹುಡುಗರ ಪಾಲಿಗೆ ನಮ್ಮದಲ್ಲದ ಊರಲ್ಲಿ ಅನ್ನಛತ್ರದಂತೆಯಿತ್ತು. ಕೆಲವು ಕೆಲವು ಮನೆಗೆ ಹೋಗದಿದ್ದರೆ `ರೀ, ರಾಜೀ ನಿಮ್ಮನ್ನು ನೋಡದೆ ಬಹಳ ದಿನ ಆತು ಅಂದಳು. ಮನೆ ಕಡೆ ಬರ್ರಿ' ಎಂದು ಮೇಷ್ಟು ಸಂದೇಶ ಮುಟ್ಟಿಸುತ್ತಿದ್ದರು. ಅವರೊಬ್ಬ ಪ್ರಾಧ್ಯಾಪಕನೆಂಬ ಬಿಗುಮಾನವಿಲ್ಲದ ಸರಳ ಗ್ರಾಮೀಣ ವ್ಯಕ್ತಿಯಾಗಿದ್ದರು. ರಾಜಮ್ಮನವರು ಅಡುಗೆ ಮನೆತುಂಬ ಓಡಾಡುತ್ತ ಕೋಳಿಸಾರು ಮಾಡುತ್ತಿದ್ದರೆ, ಪಂಚೆಸುತ್ತಿಕೊಂಡು ಅಂಗಿಯಿಲ್ಲದ ಬರಿಮೈಯಲ್ಲಿ ಇರುತ್ತಿದ್ದ ಸುಧಾಕರರು ನೆಲದ ಮೇಲೆ ಕೂತುಕೊಂಡು, ತಮ್ಮೆರಡೂ ಕಾಲುಗಳ ನಡುವೆ ಮುದ್ದೆಪಾತ್ರೆಯನ್ನು ಇರುಕಿಸಿಕೊಂಡು, ಮುದ್ದೆ ಕೂಡಿಸಿಕೊಡುತ್ತಿದ್ದರು.

(ಫೋಟೊ ರಹಮತ್ ತರೀಕೆರೆಯವರ ಎಂ.ಎ ವ್ಯಾಸಂಗದ ದಿನಗಳದ್ದು. ಕೂತವರಲ್ಲಿ ಬಲದಿಂದ ಐದನೆಯವರು ಪ್ರೊ. ಸುಧಾಕರ)
ಪ್ರೊ. ಸುಧಾಕರ ಅವರು ಜಾನಪದವನ್ನು ವಿಶ್ವವಿದ್ಯಾಲಯಗಳಲ್ಲಿ ಶಿಷ್ಟಸಾಹಿತ್ಯಕ್ಕೆ ಸಮನಾದುದು ಮಿಗಿಲಾದುದು ಎಂಬ ಪ್ರತಿಪಾದಕ ಮನೋಭಾವ ದಟ್ಟವಾಗಿದ್ದ ಕಾಲದಲ್ಲಿ ಜಾನಪದದಲ್ಲಿ ಕೆಲಸ ಮಾಡಿದವರು. ಇದಕ್ಕೆ ಮೈಸೂರು ವಿಶ್ವವಿದ್ಯಾಲಯದ ಜಾನಪದ ಅಧ್ಯಯನಗಳು ಒಂದು ಸಾಂಸ್ಥಿಕ ರೂಪವನ್ನು ನೀಡಿದವು. ದೇಜಗೌ ಕಾಲದಲ್ಲಿ ಆರಂಭವಾದ ಈ ನಿಲುವು ಜೀಶಂಪ ಅವರ ಮೂಲಕ ಒಂದು ಘಟ್ಟವನ್ನು ತಲುಪಿತ್ತು. ಈ ಜಾನಪದ ಮನೋಭಾವವು ಶಿಷ್ಟಸಾಹಿತ್ಯ ಅಕ್ಷರ ಪಂರಪರೆ ನಾಗರಿಕ ಲೋಕಗಳನ್ನು ಎದುರಾಳಿಯಾಗಿಟ್ಟುಕೊಂಡು ತನ್ನ ಪ್ರತಿಪಾದನೆ ಮಾಡುತ್ತಿತ್ತು. ಚಾರಿತ್ರಿಕವಾಗಿ ಈ ಮನೋಭಾವವು ಜಾನಪದವನ್ನು ಒಂದು ಅಧ್ಯಯನ ವಿಷಯವನ್ನಾಗಿ ಮಾಡುವಲ್ಲಿ ಬಹುಶಃ ಅಗತ್ಯವಾಗಿತ್ತು. ಇದು ಗ್ರಾಮೀಣ ನೆಲೆಯಿಂದ ಮಾನವಿಕ ಅಧ್ಯಯನಗಳಿಗೆ ಬರುತ್ತಿದ್ದ ಸಮುದಾಯಕ್ಕೆ ಕೂಡ ಆಪ್ತವಾದ ನುಡಿಗಟ್ಟಾಗಿತ್ತು. ಈ ಧೋರಣೆಯಿಂದ ಅನೇಕ ಮಹತ್ವದ ಕೆಲಸಗಳು ಈ ಕ್ಷೇತ್ರದಲ್ಲಿ ಆದವು. ಸುಧಾಕರ ಅವರು ಈ ಧೋರಣೆಯಲ್ಲಿ ತುಂಬ ಕೆಲಸ ಮಾಡಿದರು. ಜನಪದ ಗಾದೆ, ಕತೆ, ನುಡಿಗಟ್ಟು, ಒಡಪುಗಳ ಮೇಲೆ ಅವರು ಮಾಡಿರುವ ಕೆಲಸ ಅಪೂರ್ವವಾಗಿದೆ. 

ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನ ಮಿತಿಗಳು ಹೊಳೆಯುವುದು ಸುಧಾಕರ ಅಥವಾ ಮುದೇನೂರ ಸಂಗಣ್ಣ  ಮುಂತಾದವರು ತಮ್ಮ ಪ್ರದೇಶದ ಶಬ್ದ, ನುಡಿಗಟ್ಟುಗಳನ್ನು ಸಂಗ್ರಹಿಸಿ ಪ್ರಕಟಿಸಿದ ಕೋಶಗಳಿಂದ. ಅಕ್ಷರಸ್ಥ ಆಕರಗಳನ್ನು ನೆಮ್ಮಿದ ಪಾಂಡಿತ್ಯವು ಮೌಖಿಕ ಆಕರಗಳಿಂದ ಭಾಷಿಕ ಪರಿಕರಗಳನ್ನು ಪಡೆದುಕೊಳ್ಳದೆ ಹೋದರೆ ಹೇಗೆ ಅರೆಬರೆಯಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ನಮ್ಮ ಅಧಿಕೃತ ನಿಘಂಟುಗಳ ಬಗ್ಗೆ ತಮ್ಮ ಅಸಮಾಧಾನವನ್ನು ಸುಧಾಕರ ಅವರು ಪರೋಕ್ಷವಾಗಿ ವ್ಯಕ್ತಮಾಡಿದರು ಕೂಡ. ನಿಘಂಟುಗಳು ಕೋಶಗಳು ನಿರಂತರ ಪರಿಷ್ಕರಣೆಯ ಪ್ರಕ್ರಿಯೆಯ ಮೂಲಕ ರೂಪುಗೊಳ್ಳಬೇಕಾದವು ನಿಜ. ಆದರೆ ಅವು ಮೊದಲು ರೂಪುಗೊಳ್ಳುವಾಗ ಹಲವು ನೆಲೆಯ ಕನ್ನಡವನ್ನು ಪ್ರತಿನಿಧಿಸುವ ವಿದ್ವಾಂಸರನ್ನು ಹೊರಗಿಟ್ಟ ಕಾರಣ, ಕನ್ನಡದ ಪ್ರಾದೇಶಿಕ ಮತ್ತು  ಬಹುರೂಪಿ ಪ್ರಾತಿನಿಧಿತ್ವದಿಂದ ವಂಚಿತಗೊಂಡವು. 

ಧಾಕರ ಅವರ ಜಾನಪದ ಚಿಂತನೆಯಲ್ಲಿದ್ದ ಶಕ್ತಿಯೆಂದರೆ, ಹೀಗೆ ಪ್ರಧಾನಧಾರೆಗೆ ಬಾರದ ಅನೇಕ ತಿಳುವಳಿಕೆಯ ಕೋಶಗಳನ್ನು ಹೊಂದಿದ್ದುದು. ಅವರ ವಿದ್ವತ್ತಿನ ಸಮಸ್ಯೆಯೆಂದರೆ, ಜಾನಪದವನ್ನು ಅವಿಮರ್ಶಾತ್ಮಕವಾಗಿ ಪ್ರೀತಿಸುವುದು ಹಾಗೂ ನಾಗರಿಕ-ಗ್ರಾಮೀಣ ಸುಶಿಕ್ಷಿತ-ಅಶಿಕ್ಷಿತ ಎಂಬ ಎರಡು ಲೋಕಗಳನ್ನು ಎದುರಾಳಿ ಕಲ್ಪನೆಗಳಾಗಿ ಗ್ರಹಿಸುತ್ತಿದ್ದುದು. ಅವರಲ್ಲಿ ಈ ಆಲೋಚನಕ್ರಮ ಕೊನೆಯ ತನಕವೂ ಇತ್ತು. ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಅವರು ರಚಿಸಿದ `ಜನಪದ ನುಡಿಗಟ್ಟುಗಳ ಕೋಶ'ದ ಪ್ರಸ್ತಾವನೆ ಇದಕ್ಕೆ ಸಾಕ್ಷಿಯಾಗಿದೆ. ಅಲ್ಲಿ ಅವರು ಹೀಗೆ ಹೇಳುತ್ತಾರೆ: 
``ಹೊಸಹೊಸ ನಮೂನೆಯ ಅಭಿವ್ಯಕ್ತಿ ವೈವಿಧ್ಯದ ಸೃಜನಶೀಲತೆಯ ಕೆಚ್ಚಲು ಬತ್ತಿ ಗೊಡ್ಡುಗಳಂತೆ ನಾಗರಿಕ ಸುಶಿಕ್ಷಿತರು ಕಂಡುಬಂದರೆ, ಹೊಸಹೊಸ ನಮೂನೆಯ ಅಭಿವ್ಯಕ್ತಿ ವೈವಿಧ್ಯದ ಸೃಜನಶೀಲತೆಯ ಕೆಚ್ಚಲುದುಂಬಿದ ಕರಾವಿನ ಹಸುಗಳಂತೆ ಗ್ರಾಮೀಣ ಅಶಿಕ್ಷಿತರು ಕಂಡುಬರುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಉದಾಹರಣೆಗೆ ನಾಗರಿಕ ಸುಶಿಕ್ಷಿತರು ಹಾಡಿದ್ದೇಹಾಡುವ ಕಿಸುಬಾಯಿ ದಾಸರಂತೆ ಸವಕಲು ಸವಕಲಾದ ``ನಾನು ರಾತ್ರಿಯೆಲ್ಲ ನಿದ್ದೆ ಮಾಡಲಿಲ್ಲ' ಎಂಬ ಮಾತನ್ನು ಹೇಳಿದರೆ, ಗ್ರಾಮೀಣ ಅಶಿಕ್ಷಿತರು ``ನಾನು ಇಳ್ಳೆಲ್ಲ ಎರಡು ರೆಪ್ಪೆ ಒಂದು ಮಾಡಲಿಲ್ಲ' ಎಂದು ಸುಂಕುಮುರಿಯದ ಗರಿಗರಿಯ ಮಾತನ್ನುಹೇಳುತ್ತಾರೆ. ಸುಶಿಕ್ಷಿತರು ``ನಾನು ಮಾತನಾಡಲಿಲ್ಲ' ಎಂಬ ಮೊಂಡಾದ ಮಾತನ್ನು ಬಳಸಿದರೆ ಅಶಿಕ್ಷಿತರು ``ನಾನು ತುಟಿ ಎರಡು ಮಾಡಲಿಲ್ಲ' ಎಂಬ ಹರಿತವಾದ ಮಾತನ್ನು ಬಳಸುತ್ತಾರೆ. ಅವರು `ಬೆಳಿಗ್ಗೆಯಿಂದ ನಾನು ಒಂದ್ಕಡೆ ಕುಂತಿಲ್ಲ' ಎಂದರೆ ಇವರು ``ಹೊತ್ತಾರೆಯಿಂದ ಎರಡು ಕಾಲು ಒಂದ್ಕಡೆ ಇಕ್ಕಿಲ್ಲ' ಎನ್ನುತ್ತಾರೆ. ಅವರು ಸಿಟ್ಟಿನಿಂದ ``ನಿನ್ನನ್ನು ಕೊಂದು ಬಿಡ್ತೇನೆ' ಎಂದರೆ ಇವರು ``ನಿನ್ನನ್ನು ಹುಟ್ಟಲಿಲ್ಲ ಅನ್ನಿಸಿ ಬಿಡ್ತೀನಿ' ಎನ್ನುತ್ತಾರೆ. ಅವರು ``ಬೇಗ ಬಾ' ಎಂದು ಹೇಳಿದರೆ, ಇವರು ``ಇಲ್ಲಿ ಇದ್ದೋನಂಗೆ ಬಾ' ಎನ್ನುತ್ತಾರೆ. ಆದ್ದರಿಂದ ಅಶಿಕ್ಷಿತರ ಸ್ವೋಪಜ್ಞ ತಾಜಾತನದ ಅಭಿವ್ಯಕ್ತಿ ಆಕರ್ಷಣೀಯ.'

ಈ ಚಿಂತನೆಯಲ್ಲಿರುವ ತಾತ್ವಿಕ ಕಷ್ಟವೆಂದರೆ, ಲಿಖಿತ-ಮೌಖಿಕ, ನಾಗರಿಕ-ಗ್ರಾಮೀಣ ಎನ್ನಲಾಗುವ ಲೋಕಗಳು ಪರಸ್ಪರ ಬೆರೆಯುತ್ತ ಹೋಗುವ ಚಲನಶೀಲತೆಯನ್ನು ಗಮನಿಸದೇ ಹೋಗಿದ್ದು. 
ಸುಧಾಕರ ಅವರು ಮಾಡಿದ ಮುಖ್ಯ ಸಂಶೋಧನೆ ಕನಕದಾಸರ ಸಾಹಿತ್ಯಕ್ಕೆ  ಸಂಬಂಧಿಸಿದ್ದು. ಕನಕನ ಸಾಹಿತ್ಯವನ್ನು ಅದು ಹುಟ್ಟಿದ ಸಾಂಸ್ಕೃತಿಕ ಹಿನ್ನೆಲೆಯ ಸಮೇತ ಅದ್ಭುತವಾಗಿ ವಿಶ್ಲೇಷಿಸಬಲ್ಲ ಸುಧಾಕರ ಅವರು ಒಳ್ಳೆಯ ಕೆಲಸ ಮಾಡಿದರು. ಅವರ ಕನಕ ಪಾಂಡಿತ್ಯವು ಓಬಿಸಿ ಸಮುದಾಯಗಳ ಸಾಂಸ್ಕೃತಿಕ ಗುರುತಿನ ಹುಡುಕಾಟದ ಭಾಗವೂ ಆಗಿತ್ತು. ಕನಕದಾಸನ ಕೀರ್ತನೆಗಳನ್ನು ಅಂಕಿತ ಬದಲಿಸಿ ಪುರಂದರದಾಸರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂಬುದನ್ನು ಅವರು ಯುದ್ಧೋಪಾದಿಯಲ್ಲಿ ಸಂಶೋಧನೆ ಕೈಗೊಂಡರು.  ಉಚ್ಚಜಾತಿಗಳಿಂದ ಶೂದ್ರರಿಗೆ ಅನ್ಯಾಯವು ಕನಕನ ಕಾಲದಿಂದಲೂ ಮುಂದುವರೆದಿದೆ ಎಂಬ ವೇದನೆ ಮತ್ತು ಆಕ್ರೋಶದ ಪ್ರಜ್ಞೆಯಿಂದಲೇ ಮಾಡಿದರು. ಸುಧಾಕರ ಅವರಿಗೆ ಕನಕನಂತೆ ತಾನೂ ಅನ್ಯಾಯಕ್ಕೆ ಒಳಗಾದನೆಂಬ ಭಾವನೆ ಕೊನೆಯ ತನಕವೂ ಬಾಧಿಸುತ್ತಿತ್ತು. ಅವರು ತಾವು ಸಂಗ್ರಹಿಸಿದ ಗಾದೆಗಳನ್ನು ಬೇರೆಬೇರೆ ವಿದ್ವಾಂಸರು ಎತ್ತಿಕೊಂಡು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ ಎಂಬ ಗುರುಗುಟ್ಟುತ್ತಿದ್ದರು. ಅವರು ನವ್ಯವಿಮರ್ಶೆಯ ವಿರುದ್ಧ ಟೀಕಿಸುವಾಗಲೂ ಅದು ಕುವೆಂಪು ಅವರ ದೈತ್ಯಪ್ರತಿಭೆಯನ್ನು ಅರಿಯದೆ ಹೋಗಿದೆ ಎಂಬ ಕೋಪವೇ ಇತ್ತು. ಕತೆಗಾರರಾದ ತಮ್ಮ ಕಥನ ಪ್ರತಿಭೆಯನ್ನು ನವ್ಯವಿಮರ್ಶೆ ಗುರುತಿಸದೆ ಹೋಯಿತು ಎಂಬ ಬೇಸರವೂ ಅದರೊಟ್ಟಿಗೆ ಸೇರಿಕೊಂಡಿತ್ತು. ಇದರಲ್ಲಿ ಕೊಂಚ ಸತ್ಯವೂ ಇತ್ತು.

ಆದರೆ ಜಾನಪದವನ್ನು ಶಿಷ್ಟದ ವಿರುದ್ಧ, ಕುವೆಂಪು ಅವರನ್ನು ನವ್ಯವಿಮರ್ಶೆಯ ವಿರುದ್ಧ ಹಾಗೂ ಕನಕದಾಸರನ್ನು ಬ್ರಾಹ್ಮಣವಾದಿಗಳ ವಿರುದ್ಧ ಸದಾ ಸಮರ್ಥಿಸಿಕೊಳ್ಳುವ ಕಷ್ಟಕ್ಕೆ ಸುಧಾಕರ ವಿದ್ವತ್ತು ಸಿಲುಕಿಕೊಂಡಿತು. ಈ ಸಮರ್ಥನಾ ಧಾಟಿಯಿಂದ ಕುವೆಂಪು, ಕನಕದಾಸರ ಅಥವಾ ಜಾನಪದದಲ್ಲಿರುವ ಮಿತಿಗಳನ್ನು ಕಾಣಲು ಮತ್ತು ವಿಮರ್ಶಿಸಲು ಅವರಿಗೆ ಸಾಧ್ಯವಾಗದೆ ಹೋಯಿತು ಕೂಡ. ಕುಮಾರವ್ಯಾಸ, ಕುವೆಂಪು, ಪಂಪ ಬಸವಣ್ಣ ಇವರು ಅವರ ಪ್ರಿಯ ಲೇಖಕರು. ಒಮ್ಮೊಮ್ಮೆ ಅವರ ವಿದ್ವತ್ತು ಕೆಲವೇ ಲೇಖಕರ ಸಾಹಿತ್ಯಕ್ಕೆ ಸೀಮಿತಗೊಂಡಿತೇನೊ ಅನಿಸುತ್ತದೆ. ಇದು ಎಲ್ಲ ಸ್ವಸಮರ್ಥಕ  ಮತ್ತು ಎದುರಾಳಿಗಳನ್ನು ಸೋಲಿಸುವ ಜಾಡಿಗೆ ಬೀಳುವ ಚಿಂತನೆಯ ಕಷ್ಟ. ಆದರೆ ಸುಧಾಕರ ಅವರ ವಿದ್ವತ್ತಿನಲ್ಲಿರುವ ಅನ್ಯಾಯಪ್ರಜ್ಞೆಯು ದ್ರೌಪದಿಯ ಅಳಲಿನಂತೆಯೇ ಕಾಣುತ್ತದೆ. 

ಕನ್ನಡದಲ್ಲಿ ಹಲವಾರು ಒಳ್ಳೆಯ ಕತೆಗಳನ್ನು ಬರೆದ ಸುಧಾಕರ ಅವರು ಕಥೆಯ ಪ್ರಕಾರವನ್ನು ಗಂಭೀರವಾಗಿ ಮುಂದುವರೆಸಲಿಲ್ಲ. ಅವರ ಕತೆಗಳಲ್ಲಿ ಬೌದ್ಧಿಕತೆಯ ನವ್ಯದ ಕತೆಗಳಲ್ಲಿ ಕಾಣುವ ಬೌದ್ಧಿಕತೆಯ ಕೊರತೆಯಿತ್ತೆಂದು ಈಗ ಅನಿಸುತ್ತದೆ. ಅವರ ಅನುಭವಲೋಕ ಸಮೃದ್ಧವಾಗಿತ್ತು ಮತ್ತು  ಒರಿಜಿನಲ್ಲಾಗಿತ್ತು. ಅದನ್ನು ಕಥನವಾಗಿಸುವ ಕಸುಬುದಾರಿಕೆಯನ್ನು ಅವರು ನಿರಂತರ ಶೋಧ ಮಾಡಿಕೊಳ್ಳದೆ ಹೋದ ಕಾರಣದಿಂದ ಅದು ಒಂದು ಹಂತಕ್ಕೆ ಸ್ಥಗಿತಗೊಂಡಿತು. ತಮ್ಮಂತಹ ಕತೆಗಾರರನ್ನು ನವ್ಯವಿಮರ್ಶೆ ಸರಿಯಾಗಿ ಗುರುತಿಸಲಿಲ್ಲ ಎಂಬ ನೋವೇ ಅವರನ್ನು ಸ್ವವಿವರಣೆಯ ಇಕ್ಕಟ್ಟಿಗೆ ದೂಡಿತ್ತು ಎಂದು ಈಗ ಅನಿಸುತ್ತಿದೆ. ಅದರಲ್ಲೂ ಅವರ ಸಹೋದ್ಯೋಗಿಯೂ ಆದ ಜಿ.ಎಚ್.ನಾಯಕ ಅವರು ನ್ಯಾಶನಲ್ ಬುಕ್ ಟ್ರಸ್ಟಿಗೆ ಸಂಪಾದಿಸಿಕೊಟ್ಟ ಆಧುನಿಕ ಕನ್ನಡದ ಅತ್ಯುತ್ತಮ ಸಣ್ಣಕತೆಗಳ ಸಂಕಲನದಲ್ಲಿ ಸುಧಾಕರ ಅವರ ಕತೆಗಳನ್ನು ಕೈಬಿಟ್ಟಿದ್ದರು. ಮಾತ್ರವಲ್ಲದೆ ಅವರಗಿಂತ ಕಿರಿಯರಾದ ಅವರ ವಿದ್ಯಾರ್ಥಿಗಳೂ ಆಗಿದ್ದ ಶ್ರೀಕೃಷ್ಣ ಆಲನಹಳ್ಳಿ ಹಾಗೂ ದೇವನೂರ ಮಹಾದೇವ ಅವರ ಕತೆಗಳನ್ನು ಸೇರಿಸಿದ್ದರು. ಇದು ತಾವೊಬ್ಬ ಬಹುಮಾನ ವಿಜೇತ ಕತೆಗಾರ ಎಂಬ ಅಭಿಮಾನದಲ್ಲಿದ್ದ ಸುಧಾಕರ ಅವರಿಗೆ ಆಘಾತಕರ ಅನಿಸಿರಬೇಕು. ಇದು ಅವರು ನವ್ಯವಿಮರ್ಶೆಯನ್ನು ತಮ್ಮ ಖಾಯಂ ಹಗೆಯನ್ನಾಗಿ ಮಾಡಿಕೊಳ್ಳಲು ಕಾರಣವಾಯಿತು. ಇದಕ್ಕೆ ಪೂರಕವಾಗಿ ಆ ದಿನಗಳಲ್ಲಿ  ಮೈಸೂರು ವಿಶ್ವವಿದ್ಯಾಲಯದಲ್ಲಿ ಕುವೆಂಪು ಅವರನ್ನು ದೊಡ್ಡ ಲೇಖಕರೇ ಅಲ್ಲವೆಂದು ವಿಮರ್ಶಿಸುವ ಗೋಪಾಲಕೃಷ್ಣ ಅಡಿಗರ ಚಿಂತನೆಗಳಿಂದ ತಮ್ಮ ವಿಮರ್ಶನ ಮಾನದಂಡಗಳನ್ನು ರೂಪಿಸಿಕೊಂಡಿದ್ದ ನವ್ಯವಿಮರ್ಶಕರ ಪ್ರಹಾರಗಳಿಂದ ಕುವೆಂಪು ಅವರನ್ನು ರಕ್ಷಿಸುವ ದೊಡ್ಡದೊಂದು ಬಣವಿತ್ತು.  ಇದರ ನಾಯಕರಾಗಿ ದೇಜಗೌ ನಂತರ ಹಾ.ಮಾ.ನಾಯಕ ಅವರಾಗಿದ್ದು ಅದರಲ್ಲಿ ಶಂಕರಮೊಕಾಶಿ ಪುಣೇಕರ, ಪ್ರಭುಶಂಕರ, ತಿಪ್ಪೇರುದ್ರಸ್ವಾಮಿ ಸಿಪಿಕೆ ರಾಗೌ ಮುಂತಾದವರಿದ್ದು, ಅದರಲ್ಲಿ ಸುಧಾಕರ ಅವರೂ ಸೇರಿಕೊಂಡರು.  ಈ ಬಣಸಂಘರ್ಷವು ಮೇಲುನೋಟಕ್ಕೆ ನವೋದಯ-ನವ್ಯದ ಸಾಹಿತ್ಯಕ ದೃಷ್ಟಿಕೋನಗಳ ನಡುವೆ ನಡೆಯುತ್ತಿದೆ ಅನಿಸಿದರೂ, ಆಳದಲ್ಲಿ ಗ್ರಾಮೀಣ ನೆಲೆಯಿಂದ ಬಂದ ಶೂದ್ರ ಮತ್ತು ನಗರ ನೆಲೆಯಿಂದ ಬಂದ ಬ್ರಾಹ್ಮಣರ ಸಂಘರ್ಷದ ಆಯಾಮವನ್ನೂ ಪಡೆದಿತ್ತು. ಆದರೆ ಅವರು ತಮ್ಮ ಜೀವಿತದ ಕೊನೆಗಾಲದಲ್ಲಿ ಕನಕದಾಸನನ್ನು ಆಯುಧವಾಗಿಟ್ಟುಕೊಂಡು ಝಳಪಿಸುತ್ತಿದ್ದ ವೀರರನ್ನೆಲ್ಲ ಉಪಾಯವಾಗಿ ಕರೆಸಿಕೊಂಡು ಉಡುಪಿಯ ಮಠದಲ್ಲಿ ಸನ್ಮಾನಿಸುವ ಕಾರ್ಯಕ್ರಮಕ್ಕೆ ಹೋಗಿದ್ದು, ಮಾತ್ರ ಅವರ ಸಂಘರ್ಷಗಳಿಗೆ ಅವರೇ ಉಪಸಂಹಾರ ಕೊಟ್ಟಂತೆ ಇತ್ತು. 

ನನ್ನ ಇನ್ನೊಬ್ಬ ಗುರುಗಳಾದ ಪ್ರೊ. ವೆಂಕಟಾಚಲಶಾಸ್ತ್ರಿಯವರು ಪ್ರಾಚೀನ ಸಾಹಿತ್ಯದಲ್ಲಿ ಯಾವುದಾದರೂ ಒಂದು ಶಬ್ದ ಬಂದರೆ, ಅದನ್ನು ಹಿಡಿದು ಪಾಂಡಿತ್ಯದ ಅರಣ್ಯದೊಳಗೆ ಹೊಕ್ಕು, ಅದರ ಮೂಲಚೂಲವನ್ನು ಹಿಡಿದುಕೊಂಡು ಹೊರಬಂದು ತೋರಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಸುಧಾಕರ ಅವರು ಯಾವುದಾದರೂ ಜನಪದ ಬದುಕಿಗೆ ಸಂಬಂಧಪಟ್ಟ ವಿಚಾರ ಬಂದರೆ, ಗ್ರಾಮೀಣ ಬದುಕಿನ ಸಾಗರದೊಳಗೆ ಮುಳುಗಿ ಅದರ ಬೇರುಬುಡವನ್ನು ಹಿಡಿದುಕೊಂಡು ಬರುತ್ತಿದ್ದರು. ಈ ಎರಡೂ ಪಾಂಡಿತಗಳು ಕನ್ನಡ ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದವು. ಆದರೂ ನವ್ಯ ವಿಮರ್ಶೆಯ ಭರಾಟೆಯಲ್ಲಿ ಸುಧಾಕರ ಅವರ ಪಾಂಡಿತ್ಯವನ್ನು ಗಮನಿಸುವ ಮನೋಭಾವ ಕನ್ನಡ ವಿದ್ವತ್ಲೋಕದಲ್ಲಿ ಅಷ್ಟಾಗಿ ಇರಲಿಲ್ಲ ಎಂದು ಈಗ ಅನಿಸುತ್ತಿದೆ. ಇದಕ್ಕೆ ತಕ್ಕನಾಗಿ ಅವರಾದರೂ ತಮ್ಮ ವಿದ್ವತ್ತನ್ನು ಸ್ವವಿಮರ್ಶೆಗೆ ಒಡ್ಡಿಕೊಂಡು ಹೊಸ ಆಯಾಮ ಪಡೆದುಕೊಳ್ಳಲು ಯತ್ನಿಸಲಿಲ್ಲ.. ವಿದ್ವತ್ತು ನಿರಂತರವಾಗಿ ಚಲನಶೀಲವಾದ ಬದುಕಿಗೆ ಮಿಡಿಯುತ್ತ, ಸಮಕಾಲೀನವಾದ ಸನ್ನಿವೇಶಕ್ಕೆ ತನ್ನನ್ನು ಲಗತ್ತಿಸಿಕೊಳ್ಳುತ್ತ ಸದಾ ಮರುಹುಟ್ಟು ಪಡೆಯುತ್ತ ಹೋಗಬೇಕು. ಇಲ್ಲದೆ ಸನ್ನಿವೇಶ ಬದಲಾದರೂ ಅದಕ್ಕೆ ಹೊಂದಾಣಿಕೆಯಾದ ಹಳೆಯ ನುಡಿಗಟ್ಟುಗಳಲ್ಲೇ ಮಾತಾಡಲು ತೊಡಗಿದಾಗ. ಅದಕ್ಕೆ ಒಂದು ಬಗೆಯ ಹಿಂಬೀಳುವಿಕೆ ಜಡತೆ ಬರುತ್ತದೆ.

ಪ್ರೊ. ಸುಧಾಕರ ಅವರು ಕಳೆದವರ್ಷ ತೀರಿಕೊಂಡರು. ಅವರಿಗೆ ಎಂಬತ್ತರ ಮೇಲಾಗಿತ್ತು. ಅವರು ಅರ್ಧಶತಮಾನ ಕಾಲ ಮಾಡಿದ ಹಳೆಯ ಹೊನ್ನಿನಂತಹ ಕೆಲಸವೆಲ್ಲ ಮರುಮುದ್ರಣಗೊಂಡು ಹೊಸತಲೆಮಾರಿನ ಕೈಗೆ ಸಿಕ್ಕರೆ, ಕಾಸಿ ಕಾಳಿಕೆ ತೆಗೆದು, ತಮಗೆ ಬೇಕಾದ ಒಡವೆಯನ್ನು ಮಾಡಿಕೊಂಡು ಅದಕ್ಕೆ ಮರುಹುಟ್ಟು ಮತ್ತು ವಿಸ್ತರಣೆ ಕೊಡಲು ಸಾಧ್ಯವಾಗಬಹುದೊ ಏನೊ. ವರ್ತಮಾನದ ಬೆಂಕಿಯಲ್ಲಿ ಬೆಂದೇ ಬದುಕುವುದು ಗತಕಾಲದ ಪಾಂಡಿತ್ಯದ ವಿಧಿಯಾಗಿದೆ. 

ಕಾಮೆಂಟ್‌ಗಳಿಲ್ಲ: