ಗುರುವಾರ, ಜೂನ್ 16, 2016

ತಿಥಿ: ಹಳ್ಳಿಗೆ ಹೋಗಿ ಬಂದ ಅನುಭವ


-ರಾಜಶೇಖರ ಬಂಡೆ


``ಹಳ್ಳಿಗನಾಗಿದ್ದ ನನಗೆ ಚಿತ್ರದುದ್ದಕ್ಕೂ ನಮ್ಮೂರು, ನಮ್ಮೂರ ಸುತ್ತ ಮುತ್ತಲ ಹಳ್ಳಿಗಳಲ್ಲಿ ನಾನು ಕಣ್ಣಾರೆ ಕಂಡ ಜೊತೆಗೆ ಒಡನಾಡಿದ ಅದೆಷ್ಟೋ ಪಾತ್ರಗಳು ಕಣ್ಮುಂದೆ ಬಂದು ಹೋದದ್ದು ಸುಳ್ಳಲ್ಲ.''

ನೀವು ತಿಥಿ ಸಿನಿಮಾದ ಬಗ್ಗೆ ಏನೇ ಹೇಳಿ, ಮೊದಲ ಬಾರಿಗೆ ಮೆಜೆಸ್ಟಿಕ್ ಹತ್ತಿರದ ಸ್ವಪ್ನ ಥಿಯೇಟರ್‌ನಲ್ಲಿ ಆ ಸಿನಿಮಾ ನೋಡಲು ಹೋದಾಗ ಆ ಮೊದಲೇ ಆ ಚಿತ್ರದ ಬಗ್ಗೆ ಒಂದಷ್ಟು ಕೇಳಿ ತಿಳಿದುಕೊಂಡಿದ್ದ ಮಾಹಿತಿ ನನ್ನೊಳಗೆ ಹುಟ್ಟುಹಾಕಿದ್ದ ನಿರೀಕ್ಷೆಯನ್ನಂತೂ ಹುಸಿ ಮಾಡಿರಲಿಲ್ಲ. ಬದಲಿಗೆ ದುಪ್ಪಟ್ಟು ಮನರಂಜನೆಯನ್ನು ಕೊಟ್ಟಿತ್ತು.ಮಾನವೀಯ ನೆಲೆಯಿಂದ ನಿಂತು ನೋಡಿದರೆ ಅಯ್ಯೋ ಎನಿಸುವ ಆ ನಟರ ಅಮಾಯಕ ನಟನೆ ನನ್ನನ್ನು ಖುಷಿಗೊಳಿಸಿತ್ತು. 

ಆ ಥಿಯೇಟರ್‌ನ ಅಸ್ತವ್ಯಸ್ಥತೆ ಮತ್ತು ಗದ್ದಲ ಮತ್ತು ಆಗಾಗ ಕತ್ತಲೊಳಗಿಣುಕುತ್ತಿದ್ದ ಬೆಳಕಿನಿಂದಾಗಿ ಕಿರಿಕಿರಿಯೆನಿಸಿದ್ದರಿಂದ ಸಂಪೂರ್ಣ ತೃಪ್ತಿ ಇಲ್ಲವಾಗಿ ಮತ್ತೊಮ್ಮೆ ಮಾಲಿನಲ್ಲಿ ಕೂತು ನೋಡಿಬಂದೆ. ಎರಡನೇ ಸಲ ಆ ಚಿತ್ರವನ್ನ ನೋಡುತ್ತಿದ್ದೆನಾದರೂ ಮತ್ತದೇ ತಾಜಾತನವಿತ್ತು. ಮುಕ್ತಾಯ ಹಂತದಲ್ಲಿ ಬರೋ ತುಣ್ಣೆ ತುಣ್ಣೆ ಅಂತಾನೆ ಅನ್ನೋ ಡೈಲಾಗ್ ಬಹುಶಃ ಮಾಲಲ್ಲಿ ಕೂತ ಯಾರಿಗೂ ಸರಿಯಾಗಿ ಕೇಳಿಸಲಿಲ್ವೋ ಏನೋ ನಾನಂತೂ ಜೋರಾಗಿ ನಕ್ಕುಬಿಟ್ಟೆ. 

ಹಳ್ಳಿಯ ಪರಿಸರ, ಭಾಷೆ, ಅವರ ನಡವಳಿಕೆ, ಅಲ್ಲಿನ ಸ್ಥಳೀಯ ಕಥೆಯೊಂದರ ಪ್ರಬುದ್ಧ ನಿರೂಪಣೆ, ನೇಟಿವಿಟಿಯನ್ನ ಕಟ್ಟಿಕೊಟ್ಟ ನಿರ್ದೇಶಕರ ಚಾತುರ್ಯತೆ ನಿಜಕ್ಕೂ ಶ್ಲಾಘನೀಯ. ನಗರದ ಗ್ಲಾಮರ್ ನಾಯಕಿಯರನ್ನಿಟ್ಟುಕೊಂಡು ತಯಾರಿಸಿದ್ದ ಕಿರಗೂರಿನ ಗಯ್ಯಾಳಿಗಳು ಚಿತ್ರದಲ್ಲಿ ನನಗನಿಸಿದಂತೆ ಎಲ್ಲೋ ಸ್ವಲ್ಪ ಅತಿರೇಕದ ನಟನೆ, ನೇಟಿವಿಟಿ ಕಳೆದುಕೊಂಡ ಭಾಷೆ ಮತ್ತು ಅಲ್ಲಿನ ವಾಸ್ತವವನ್ನು ಯಥಾವತ್ ತೋರಿಸುವುದರಲ್ಲಿ ಸ್ವಲ್ಪ ಎಡವಿದಂತನಿಸಿತ್ತು. ಅದೇ ತಿಥಿ ಚಿತ್ರದಲ್ಲಿ ಅಲ್ಲಲ್ಲಿ ತೊದಲುವ ಸಂಭಾಷಣೆಗಳಿದ್ದರೂ, ನಟನೆಯಲ್ಲಿ ಲೋಪಗಳಿದ್ದರೂ ಇಡೀ ಚಿತ್ರ ಒಂದು ಹಳ್ಳಿಗೆ ಹೋಗಿ ಬಂದಷ್ಟೇ ಅನುಭವವನ್ನ ಕಟ್ಟಿಕೊಟ್ಟಿತ್ತು. ಚಿತ್ರದ ಕಥೆ ಅಷ್ಟೇನೂ ಕಾಡುವ ಕಥೆಯಲ್ಲದಿದ್ದರೂ ಗ್ರಾಮೀಣ ಬದುಕಿನ ಚಿತ್ರಣವನ್ನ ಅಲ್ಲಿಯ ಜನರ ಮಿಡಿತಗಳನ್ನ, ಅವರ ಹಾವಭಾವಗಳನ್ನ ಶಸಕ್ತವಾಗಿ ಕಟ್ಟಿಕೊಡುವುದರಲ್ಲಿ ಗೆದ್ದಿತ್ತು. ಮುಖ್ಯವಾಗಿ ತಿಥಿ ಚಿತ್ರದಲ್ಲಿ ನನಗೆ ಕಾಡಿದ್ದು ಪಾತ್ರಗಳು. ಅಂತಹ ಅದೆಷ್ಟೋ ಪಾತ್ರಗಳನ್ನು ಹಳ್ಳಿಬಿಟ್ಟುಬಂದವನಾಗಿ ನಾನೂ ನೋಡಿದ್ದೇನೆ. 

ಇಲ್ಲಿ ನಿರ್ದೇಶಕ ತನ್ನ ಚಾತುರ್ಯತೆ ತೋರಿಸಿರೋದು ಆ ಪಾತ್ರಗಳು ನೈಜ ಜೀವನದಲ್ಲಿ ಹೇಗಿದ್ದಾವೆಯೋ ಹಾಗೇ ನಟಿಸುವಂತೆ ಮಾಡಿ ಗೆದ್ದಿರುವಲ್ಲಿ. ಹಳ್ಳಿಗನಾಗಿದ್ದ ನನಗೆ ಚಿತ್ರದುದ್ದಕ್ಕೂ ಆ ಪಾತ್ರಗಳ ವೈಶಿಷ್ಟ್ಯತೆ ಒಂದೆಡೆ ಆಕರ್ಷಿಸುತ್ತಿದ್ದರೆ ನಮ್ಮೂರು, ನಮ್ಮೂರ ಸುತ್ತ ಮುತ್ತಲ ಹಳ್ಳಿಗಳಲ್ಲಿ ನಾನು ಕಣ್ಣಾರೆ ಕಂಡ ಜೊತೆಗೆ ಒಡನಾಡಿದ ಅದೆಷ್ಟೋ ಪಾತ್ರಗಳು ಕಣ್ಮುಂದೆ ಬಂದು ಹೋದದ್ದು ಸುಳ್ಳಲ್ಲ. ಹಳ್ಳಿಯ ಜನ ಅದೆಷ್ಟೇ ಮುಗ್ಧರಾಗಿದ್ದರೂ ಅದೆಷ್ಟೇ ಅಮಾಯಕರೆನಿಸಿದರೂ ಕೆಲವೊಮ್ಮೆ ತೀರಾ ತಾಳ್ಮೆಗೆಡಿಸಿಬಿಡುತ್ತಾರೆ. 

ತಮ್ಮ ಮೊಂಡಾಟಗಳನ್ನ ಪ್ರದರ್ಶನಕ್ಕಿಡುವ ಈ ಅಮಾಯಕ ಹಳ್ಳಿ ಜನಗಳಿಂದ ನಟನೆಯನ್ನ ಹೊರಗೆಳೆಯುವುದೇ ಕಷ್ಟದ ಕೆಲಸ, ಅಂಥದ್ದರಲ್ಲಿ ಅವರನ್ನೆಲ್ಲ ಸಂಭಾಳಿಸಿ ದುಡಿಸಿ ಕಮರ್ಷಿಯಲ್ ಸಿನಿಮಾಗಳ ನಡುವೆ ಸೂಪರ್ ಎನಿಸಿಕೊಂಡ ಈ ತಿಥಿ ಸಿನಿಮಾ ನಿಜಕ್ಕೂ ಒಳ್ಳೆಯ ಸಿನಿಮಾ ಇದರಿಂದಾಚೆಗೆ ಆಸ್ಕರ್ ಕನಸು ಕಾಣುವಷ್ಟೇನೂ ಸಿನಿಮಾ ಗ್ರೇಟ್ ಅಲ್ಲ ಅನ್ನೋದನ್ನೂ ಒಪ್ಕೊಳ್ಳಲೇಬೇಕು

ಕಾಮೆಂಟ್‌ಗಳಿಲ್ಲ: