ಗುರುವಾರ, ಜೂನ್ 16, 2016

ತುಳುನಾಡಿನ ದೈವಾರಾಧನೆಯಲ್ಲಿ ಗೌಡ ಜನಾಂಗದ ಪಾತ್ರ

-ಡಾ.ಪೂವಪ್ಪ ಕಣಿಯೂರು


ಸಂಸ್ಕೃತಿ ಎಂಬುದು ಸಮೂಹ ಸಮ್ಮತ ಜೀವನ ಪದ್ಧತಿ. ಈ ಜೀವನ ಕ್ರಮದೊಳಗೆ ಸಮಾಜದ ಎಲ್ಲ ವರ್ಗಗಳೂ ನಿರ್ದಿಷ್ಟ ಪಾಲನ್ನು ಪಡೆದುಕೊಂಡಿರುತ್ತವೆ. ಹಾಗಾಗಿ ಪ್ರತಿವರ್ಗವೂ ಆ ಸಂಸ್ಕ್ರತಿಯ ಅವಿಭಾಜ್ಯ ಅಂಗಗಳು. ಅವುಗಳ ಸಂಪೂರ್ಣ ಪಾಲುದಾರಿಕೆ ಸಂಸ್ಕೃತಿಯೊಂದನ್ನು ಬಹುಮುಖಿಯಾಗಿ ರೂಪಿಸುತ್ತದೆ. ತುಳುವರ ದೈವಾರಾಧನೆಯೂ ತುಳುವ ಸಮಾಜದ ವಿವಿಧ ಜಾತಿಗಳ, ಸಮುದಾಯಗಳ ಭಾಗವಹಿಸುವಿಕೆಯಿಂದ ರೂಪುಗೊಂಡು ಬೆಳೆದು ಬಂದಿದೆ.
image

               ಧನಿಕ ವರ್ಗಗಳು ರಾಜಕೀಯ ಅಧಿಕಾರದಿಂದ ಸಮಾಜದ ವ್ಯವಸ್ಥೆಗಳ ಮೇಲೆ ಹಿಡಿತ ಸಾಧಿಸಿಕೊಂಡರೆ ಪುರೋಹಿತ ವರ್ಗ ಧಾರ್ಮಿಕ ಅಧಿಕಾರಗಳನ್ನು ಹೊಂದಿ ತುಳುವ ಸಮಾಜದ ಮೇಲ್ತುದಿಯಲ್ಲಿರುತ್ತಾರೆ. ತುಳುನಾಡಿನ ಸೀಮೆ, ಮಾಗಣೆ, ಗ್ರಾಮ, ಗುತ್ತು, ಬಾವ ಇವೆಲ್ಲವೂ ಜಾತಿ ಆಧಾರಿತ ಆಡಳಿತ ಘಟಕಗಳು. ಸೀಮೆ,ಮಾಗಣೆಗಳು ಜೈನರ ಕೈಯಲ್ಲಿದ್ದರೆ, ಗ್ರಾಮ-ಗುತ್ತುಗಳಲ್ಲಿ ಬಂಟರು ಕೆಲವೆಡೆ ಬಿಲ್ಲವರು ಮುಖ್ಯಸ್ಥರಾಗಿರುತ್ತಾರೆ. ಇವರಿಗೆ ಸಮಾನಾಂತರವಾಗಿ ಸುಳ್ಯ,ಪುತ್ತೂರು,ಬೆಳ್ತಂಗಡಿ ಭಾಗಗಳಲ್ಲಿ ಗೌಡ ಜನಾಂಗ ಬೆಳೆದು ಬಂದಿದೆ. ಆಶ್ಚರ್ಯವೆಂದರೆ ಯಜಮಾನ್ಯ ನೆಲೆಯಲ್ಲಿರುವ ಯಾವುದೇ ವರ್ಗಗಳೂ ತುಳುನಾಡಿನ ಮೂಲನಿವಾಸಿಗಳಲ್ಲ ಎಂಬುದು! ಈ ಎಲ್ಲಾ ಪ್ರಬಲ ವರ್ಗಗಳು ವಲಸೆ ಬಂದ ಸಮುದಾಯಗಳು. ಆದರೆ ಇವು ತಮ್ಮ ಮೂಲ ಸಂಸ್ಕೃತಿಯೊಂದಿಗೆ ತುಳುನಾಡಿನ ಆದಿಮೂಲ ಆರಾಧನಾ ಪದ್ಧತಿಯನ್ನು ಒಪ್ಪಿಕೊಂಡು ಬೆಳೆದು ಬಂದಿವೆ.

          ತುಳುನಾಡಿನ ಪ್ರಕೃತಿ ಹಾಗೂ ಭೌಗೋಳಿಕ ಸನ್ನಿವೇಶಗಳು ಇಲ್ಲಿನ ಆಚರಣೆಗಳಿಗೆ ಪ್ರೇರಣದಾಯಿ ಶಕ್ತಿಗಳಾಗಿವೆ.ಪಡುವಣ ಕಡಲಿನಿಂದ ಹಾಗೆ ಮೂಡಣ ಪಶ್ಚಿಮ ಘಟ್ಟಗಳಿಂದ ಆವೃತವಾದ ತಂಪು ತಂಪಾದ ದಟ್ಟ ಕಾಡುಗಳಿಂದ ಕೂಡಿದ ಭೂಮಿ ತುಳುನಾಡು. ಇಲ್ಲಿನ ಕ್ರೂರ ಮೃಗಗಳು,ಹುಲಿ,ಹಂದಿ,ವಿಷ ಸರ್ಪಗಳು ಇಲ್ಲಿನ ಮೂಲ ನಿವಾಸಿಗಳಿಗೆ ಅಲೌಕಿಕ ಶಕ್ತಿಗಳಾಗಿ ಕಂಡವು. ಇವುಗಳೆಲ್ಲದರಿ೦ದ ತಮ್ಮ ಬದುಕಿಗೆ ಬಂದೊದಗಬಹುದಾದ ಕೇಡುಗಳನ್ನು ತಡೆಯಲು ಇವುಗಳನ್ನು ಆರಾಧಿಸಲಾರಂಭಿಸಿದರು. ಇದರ ಕುರುಹುಗಳನ್ನು ಪಂಜುರ್ಲಿ, ಮೈಸಂದಾಯ, ಪಿಲ್ಚಂಡಿಗಳಂತಹ ಪ್ರಾಣಿ ಮೂಲದ ದೈವಗಳಲ್ಲಿ ಕಾಣಬಹುದು. ಹಾಗಾಗಿ ಇಲ್ಲಿನ ಮೂಲನಿವಾಸಿಗಳೆನಿಸಿಕೊಂಡ ಮಲೆಕುಡಿಯ, ಮುಗೇರ,ಬಾಕುಡ,ಕೊರಗ,ಮನ್ಸ ಮುಂತಾದ ಜನಾಂಗಗಳು ದೈವಾರಾಧನೆಯ ವಾರಸುದಾರರು.ಪರವ, ಪಂಬದ,ನಲಿಕೆ ಜನಾಂಗದವರು ಈ ದೈವಗಳನ್ನು ಆವಾಹಿಸಿಕೊಂಡು ಕುಣಿಯುತ್ತಾ ಸ್ತುತಿ ಗೀತೆಗಳಾದ ಪಾಡ್ದನಗಳನ್ನು ಹಾಡುತ್ತಾರೆ.ಇವರಿಂದಾಗಿಯೇ ದೈವಾರಾಧನೆಗೆ ಭದ್ರವಾದ ಬುನಾದಿ ಇದೆ.ಒಂದು ಪ್ರಬಲ ವರ್ಗಗಳ ಅಡಿಗೆ ಸಣ್ಣ ಸಮುದಾಯಗಳು ಬಂದಾಗ ಇವೆರಡರ ನಡುವೆ ಸಾಮಾಜಿಕ, ಸಾಂಸ್ಕೃತಿಕ , ಧಾರ್ಮಿಕ ಕೊಡು ಕೊಳ್ಳುವಿಕೆ ನಡೆಯುತ್ತದೆ,ನಡೆಯಲೇ ಬೇಕು. ಹಾಗಾಗಿ ವಲಸೆ ಬಂದ ವರ್ಗಗಳು ಇಲ್ಲಿನವರನ್ನು, ಅವರ ಸಂಸ್ಕೃತಿಯನ್ನು ಒಪ್ಪಿಕೊಳ್ಳಬೇಕಾಯ್ತು. ಈ ಜನಾಂಗಗಳ ಮೇಲೆ ಅಧಿಪತ್ಯವನ್ನು ಸ್ಥಾಪಿಸಲು ಆಚರಣೆಗಳನ್ನು ಒಪ್ಪಿಕೊಂಡು ಅದರಲ್ಲಿ ಪರಿಣಿತರಾದವರನ್ನು ಒಳಗೊಂಡು ನಡೆಯಬೇಕಾದದು ಅಗತ್ಯವಾಗಿ ಕಂಡಿತು.ಕೊನೆಗೆ ದೈವಾರಾಧನೆಯನ್ನು ತಮ್ಮದೇ ಎಂಬಂತೆ ಸ್ವೀಕರಿಸಿ ಎಲ್ಲಾ ವರ್ಗಗಳ ಸಮ್ಮಿಲನದಿಂದ ಆ ಸಂಸ್ಕೃತಿ ಸಂಮೃದ್ಧವಾಯ್ತು.
image

           ಪ್ರಭುತ್ವದ ನೆಲೆಯಲ್ಲಿ ಬೆಳೆಯಲು ಬಂದ ಪಂಗಡಗಳಲ್ಲಿ ಅರ್ವಾಚೀನವಾಗಿ ವಲಸೆ ಬಂದದ್ದು ‘ಗೌಡ ಸಮುದಾಯ’. ತಾವು ವಲಸೆ ಬಂದು ನೆಲೆಯೂರಿದ ಭಾಗಗಳಲ್ಲಿ ಹಿಡಿತವನ್ನು ಹೊಂದಿ ಕ್ರಮೇಣ ತುಳುನಾಡಿನ ಇತರೆಡೆಗೆ ಪ್ರಸರಣ ಹೊಂದಿತು. ಹಾಗಾಗಿ ಪುತ್ತೂರು,ಸುಳ್ಯ ಭಾಗಗಳಲ್ಲಿ ಗೌಡರು ಪ್ರಬಲರಾಗಿ ಇತರೆಡೆ ಸಾಮಾನ್ಯ ವರ್ಗಗಳೊಂದಿಗೆ ಗುರುತಿಸಿಕೊಂಡಿವೆ. ತುಳುವ ಗೌಡರ ಮೂಲದ ಬಗ್ಗೆ ವಿದ್ವನ್ಮಂಡಳಿ ಹಲವು ಚರ್ಚೆಗಳನ್ನು ಮಾಡಿದ್ದು ಇವರು ಮೂಲತಃ ‘ಗಂಗಟಿಕಾರ ಒಕ್ಕಲಿಗರು’ ಎಂದಿದ್ದಾರೆ. ಗಂಗಡಿಕಾರರ ಮೂಲವನ್ನು ಗಂಗರ ಪರಿವಾರದಲ್ಲಿ ಗುರುತಿಸಲಾಗುತ್ತದೆ.

       ಗೌಡ ಎಂಬ ಪದವು ಗ್ರಾಮವೃದ್ಧ-ಗಾವವಡ್ಡ-ಗಾವುಂಡ-ಗೌಡ ಎಂದು ವ್ಯುತ್ಪತ್ತಿಯಾಗಿದೆ.ಇಲ್ಲಿ ವೃದ್ದ (ವಡ್ಡ ಪ್ರಾಕೃತ) ಗ್ರಾಮದ ಮುಖಂಡ.ಹಾಗಾಗಿ ಗೌಡ ಜಾತಿ ಸೂಚಕವಲ್ಲ. ತಮಿಳಿನ ಗೌಂಡರ್,ಕರ್ನಾಟಕದ ಮಲೆನಾಡನ ನಾಯಕರು, ಉತ್ತರ ಕನ್ನಡದ ಹೆಗ್ಗಡೆ,ಆಂದ್ರದ ಒಕ್ಕಲಿಗ ರೆಡ್ಡಿಗಳು ಗೌಡರಿಗೆ ಸಂವಾದಿಗಳು. ಒಕ್ಕಲಿಗ ಎಂಬ ಪೂರ್ವನಾಮ ವೃತ್ತಿಯನ್ನು ಸೂಚಿಸುತ್ತದೆ. ಬಂಟ ಜನಾಂಗದವರನ್ನು ನಾಡವ-ನಾಡಗೌಡರೆಂದೂ, ಬಾರಗರೆಂದು (ಬಂಟನ ಮಗ ಬಾರಗ)ಕರೆಯುತ್ತಾರೆ. ಇಲ್ಲಿ ಬಾರಗ ಎಂಬುದು ಅವರ ಕೃಷಿ ಮೂಲವನ್ನ ಸೂಚಿಸುತ್ತದೆ. ಅಂತೆ ಒಕ್ಕಲಿಗ ಎಂಬುದೂ ಕೃಷಿ ಮೂಲದ್ದು.


                 ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಗ್ರಾಮ ಪ್ರಮುಖನನ್ನು ಗೌಡ ಎನ್ನುತ್ತಾರೆ. ಗ್ರಾಮಕೂಟವೇ ಪ್ರಾಕೃತದಲ್ಲಿ ಗಾವ ಉಡವೆಂದಾಗಿ ಗಾಮುಂಡ-ಗೌಡವಾಗಿದೆ.(ಚಿ.ಮೂ;2008,41)ಪ್ರಾಚೀನದಲ್ಲಿ ಬಂಗಾಳವನ್ನು ಗೌಡದೇಶವೆಂದು ಕರೆಯಲಾಗುತ್ತಿತ್ತು. ಗೌಡದೇಶವನ್ನು ಹರ್ಷವರ್ಧನನ ಅಣ್ಣ ರಾಜವರ್ಧನ ಆಳುತ್ತಿದ್ದು ಅವನನ್ನು ಕೊಂದ ಶಶಾ೦ಕನ ಕಡೆಯವರು ಗೌಡರೆಂಬ ಕಾರಣಕ್ಕೆ ಹರ್ಷನ ಕೋಪಕ್ಕೆ ಗುರಿಯಾಗಿ ದಕ್ಷಿಣಕ್ಕೆ ಬಂದರೆಂಬ ಐತಿಹ್ಯವಿದೆ ‘ಕರ್ನಾಟಕದ ದಕ್ಷಿಣ ಭಾಗವನ್ನು ಶತಮಾನಗಳಲ್ಲಿ ಆಳಿದ ಗಂಗರ ವಂಶ ಸ್ಥಾಪಕರ ಕುರಿತಾದ ಶಾಸನೋಕ್ತ ಐತಿಹ್ಯ ಭಾರತೀಯ ಪುರಾಣ ಮೂಲದ ಹಿನ್ನಲೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಹಾಗೆಯೇ ಪ್ರತಿಯೊಂದು ರಾಜವಂಶದ ಸ್ಥಾಪನೆಯಲ್ಲೂ ‘ಪುರೋಹಿತ’ ಮೂಲಗುರು ಶಕ್ತಿಯೊಂದು ಸಾಮಾನ್ಯವಾಗಿರುವಂತೆ,ಈ ಐತಿಹ್ಯದಲ್ಲೂ ‘ಸಿಂಹನಂದಿ’ ಎಂಬ ಜೈನ ಸನ್ಯಾಸಿಯನ್ನು ಹೊಂದಿಸಲಾಗಿದೆ. ಈ ಐತಿಹ್ಯ ಗಂಗರ ಮೂಲದ ವಾಸ್ತವತೆಗೆ ಪೂರಕವಾಗಿರುವುದಿಲ್ಲವೆಂದು ವಾಸ್ತವವಾದಿ ಚರಿತ್ರೆಯ ಪ್ರಜ್ಞೆಯುಳ್ಳ  ಚರಿತ್ರೆಕಾರರು ಚರ್ಚಿಸಿದ್ದಾರೆ.ಗಂಗರ ಮೂಲ ಪುರಾಣಾಂತರ್ಗತವಾಗಿ ಜಾಹ್ನವೇಯ/ಪದ್ಮನಾಭ ಸುತ ಎಂದು ಶಾಸನಗಳಲ್ಲಿ ದಾಖಲಾಗಿದೆ. ಗಂಗವಂಶದ ಸ್ಥಾಪಕನೆಂದು ಗುರುತಿಸಲಾದ ‘ದಡಿಯ’ನಿಗೆ ಕೊಂಕುಣಿವರ್ಮ ಎಂಬ ಪರ್ಯಾಯ ಹೆಸರಿದ್ದು , ಇವನ ಕ್ರಿ.ಶ.1049 ರ ಶಾಸನದಲ್ಲಿ ‘ಕೊಂಕುಣಿ ಗಾವುಂಡ’ ಎಂದು ದಾಖಲಾಗಿದ್ದಾನೆ. ‘(ಡಾ.ಕಣಿಯೂರು;2009,18)
image

       ಕಣಿಯೂರರು ಇತಿಹಾಸ ತಜ್ಞ ಶೇಖ್ ಆಲಿಯವರ ಅಭಿಪ್ರಾಯವನ್ನು ದಾಖಲಿಸಿ ಗಂಗರ ಮೂಲದವರು ಕನ್ನಡಿಗರೇ, ಗೌಡರೂ ಗಂಗರ ಪರಿವಾರದವರೆಂದು ದಾಖಲಿಸುತ್ತಾರೆ. ಇದು ಅತ್ಯಂತ ಮಹತ್ವದ ಚರ್ಚೆ. ಗಂಗಡಿಕಾರ ಒಕ್ಕಲಿಗರು ಮೂಲದಲ್ಲಿ ತಲಕಾಡಿನವರಾಗಿದ್ದು ಇವರು ಆನೆಗಳನ್ನು ಪಳಗಿಸುವುದರಲ್ಲಿ ನಿಸ್ಸೀಮರು. ಇವರ ಸಮುದಾಯದವರೇ ರಾಜ್ಯವೊಂದನ್ನು ಕಟ್ಟಿದರೆನಿಸುತ್ತದೆ. (ನಲ್ಲೂರು ಪ್ರಸಾದ್;ಸಂ.ಚಿನ್ನಪ್ಪ ಗೌಡ2003,172) ಗಂಗಟಿಕಾರ ಒಕ್ಕಲಿಗರನ್ನು ಮುಳ್ಳು ಜನರೆಂದು ಕರೆಯುತ್ತಾರೆ. ಈ ಮುಳ್ಳು ಶಿವನ ತ್ರಿಶೂಲಕ್ಕೆ ಸಂವಾದಿಯಾಗಿರುವುದರಿಂದ ಗೌಡರು ಶೈವಾರಾಧಕರು.ಐತಿಹಾಸಿಕ ವಿವರಗಳಿಂದ ಮುಳ್ಳು ಅಂಕುಶವನ್ನು ಹೋಲುತ್ತದೆ.ಗಂಗಡಿಕಾರ ಶಬ್ದವು ಭಾಷಾಶಾಸ್ತ್ರೀಯ ಹಿನ್ನಲೆಯಲ್ಲಿ ಕಂಟಕ ಎಂದರೆ ಅಂಕುಶ ಎಂದಾಗುತ್ತದೆ. ಇವರಿಗೆ ಆನೆಯವರು ಎಂಬ ವಾಡಿಕೆಯ ಹೆಸರಿದ್ದು ಈ ಗಂಗಡಿಕಾರ-ಆನೆ-ಗಂಗರಿಗೆ ಪರಸ್ಪರ ಸಂಬಂಧವಿದೆ. ಗಂಗರಿಗೂ ಗೌಡರಿಗೂ ಇರುವ ಸಂಬಂಧ ಅಧ್ಯಯನ ಯೋಗ್ಯ ವಿಚಾರ.

  ‘ಗಾವುಂಡ’ಪದ ವಿಜಯನಗರದ ಶಾಸನಗಳಲ್ಲೂ ಬಳಕೆಯಲ್ಲಿದ್ದು ಇದೊಂದು ಸ್ಥಾನ ಸೂಚಕ ಪದ. ಗೌಡ ಪದೋತ್ಪತ್ತಿ ಕುರಿತು ಕಡವ ಶಂಭು ಶರ್ಮರ ಚರ್ಚೆ ದಾಖಲಾರ್ಹ. ಗೌಡರು ಎಂಬ ಜಾತಿ ವಾಚಕ ಶಬ್ದ (ಗೋ+ಅಡ) ಗೋದೇಶದವರೆಂಬ ಅರ್ಥವನ್ನು ಹೇಳುವುದು. ಈ ಪದಕ್ಕೆ ಅಧಿಪತಿ ಅಧಿಕಾರಿ ಎಂಬ ಅರ್ಥ ಲಾಕ್ಷಣಿಕವಾಗಿ ಬಂದಿದೆ. ಗವುಡದಲ್ಲಿ ಗೋ+ಅಡ ಎಂಬ ಸಂಧಿಕಾರ್ಯವಾಗಿ ಅವ್ ಆದೇಶವಾಗಿದೆ. ಗೋದೇಶದ ರಾಜರ ಅಧಿಕಾರಿ ಜನರು-ಪ್ರಧಾನರಾಗಿ ಕಳುಹಿಸಲ್ಪಟ್ಟವರು ಅಲ್ಲಲ್ಲಿ ಗೋ ರಾಷ್ಟ್ರದಲ್ಲಿ ನೆಲೆಸಿ ಕಾಲಕ್ರಮದಲ್ಲಿ ಅವರು ಅಧಿಕಾರವಿಲ್ಲದ ಗೌಡ ಶಬ್ದ ವಾಚ್ಯರಾಗಿರಲೂಬಹುದು. ಗೌಡರೆಲ್ಲಾ ತುಳುನಾಡಿನವರು(ತುಳುನಾಡು ಗೋರಾಷ್ಟ್ರ ಎಂಬ ಅವರ ವಾದ ಗಮನಿಸಿ) ಎಂದರೆ ಗೋದೇಶಿಗರು. ಗೋರಕ್ಷಪೀಠವಾದ ಕದ್ರಿಮಠದ ಶಿಷ್ಯರು. (ಕಡವ;42)

    ಗೌಡರು ನಾಥ ಪಂಥೀಯರು,ಬಂಗಾಳ ನಾಥರ ಕೇಂದ್ರಗಳಲ್ಲೊಂದು. ಗುರು ಗೋರಖ ಇಲ್ಲಿಯವನೇ. ಗೌಡರ ಕುಣಿತ ಸಿದ್ಧವೇಷದ ಸಾಲುಗಳು ನಾಥರ ಮಠಗಳಿಗೆ ಅವರ ಸೇವೆಯನ್ನು ಸಾರುತ್ತವೆ. “ಕದಿರೆಯ ಮಠದಿಂದ ಸುದ್ದ ಬೇಸೋ…..ದಕ್ಷಿಣಕನ್ನಡದ ಸುಬ್ರಹ್ಮಣ್ಯ,ಸುಳ್ಯ,ವಿಟ್ಲ,ಪುತ್ತೂರು,ಬೆಳ್ತಂಗಡಿ,ಕಾಸರಗೋಡಿನ ಗಡಿಭಾಗಗಳಲ್ಲಿ ಗೌಡರು ಬಹುಸಂಖ್ಯಾತರು.ತುಳು ಭಾಷಿಕ, ಅರೆ ಭಾಷಿಕರ ಗೌಡರು ಹಾಸನದ ಐಗೂರಿನಿಂದ ಬಂದವರು. ಇದಕ್ಕೆ ನಿಖರವಾದ ಸಾಕ್ಷ್ಯಗಳು ಅಲಭ್ಯವಾದರೂ ಮೌಖಿಕ ಸಾಹಿತ್ಯಗಳು ಆಧಾರಗಳಾಗಿವೆ.ಈ ವಲಸೆ ಪ್ರಕ್ರಿಯೆ 15-16 ನೇ ಶತಮಾನದಲ್ಲಿ ನಡೆದಿರಬೇಕು.ಡಾ.ಬಿಳಿಮಲೆಯವರು ‘ಬಂಟರ ಸಂಧಿ-ಬೈದ್ಯರ ಸಂಧಿಯಲ್ಲಿ’ ಗೌಡರ ಉಲ್ಲೇಖ ಇಲ್ಲದ್ದರಿಂದ ಇವರು ತುಳುನಾಡಿಗೆ ಆಮೇಲೆ ಬಂದವರೆಂದೂ ಇಲ್ಲವೇ ಆ ಕಾಲದಲ್ಲಿ ಪ್ರಬಲರಾಗಿರಲಿಲ್ಲ ಎನ್ನುತ್ತಾರೆ.ವಿವೇಕ ರೈಗಳ ಪ್ರಕಾರ ಬಂಟ ಸಂಧಿ 16ನೇ ಶತಮಾನದ ನಂತರದ ರಚನೆಯಾದ್ದರಿಂದ ಪಂಜ ಎಣ್ಮೂರನ್ನು ಕೇಂದ್ರೀಕರಿಸಿಕೊಂಡು ಮೆರೆದ ಕೋಟಿ-ಚೆನ್ನಯರ ನಂತರ ಗೌಡರ ಆಗಮನವಾಯ್ತು ಎಂಬುದು ಅವರ ವಾದ. ಆದರೆ ಈ ವೀರರು ತಮ್ಮ ಜೀವಿತಾವಧಿಯಲ್ಲಿ ದರ್ಶಿಸಿದ ‘ನಿಂತಿಕಲ್ಲು’ ಇದಕ್ಕೆ ವ್ಯತಿರಿಕ್ತವಾಗಿದೆ. ‘ಕಿನ್ನಿಮಾನಿ-ಪೂಮಾಣಿ’ಗಳು ನೆಟ್ಟ ಈ ಕಲ್ಲು ಅವರ ನಿರ್ದೇಶನದಂತೆ ಅವರಿಗೆ ಆಶ್ರಯ ನೀಡಿದ ‘ಅರೆಂಬಿ ಗೌಡ’ರಿಂದ ಅರ್ಚಿಸಲ್ಪಡುತ್ತದೆ. ಉಳ್ಳಾಕುಲುಗಳ ಪ್ರಸರಣ ಬೈದ್ಯವೀರರಿಗಿಂತ ಹಿಂದೆಯೇ ಆಗಿತ್ತು. ಇದೇ ಕಲ್ಲನ್ನು ವೀರರು ಕಿತ್ತು ಸರಿಯಾಗಿ ನೆಟ್ಟರು. ಆ ಕಾಲದಲ್ಲೇ ಗೌಡರು ಪ್ರಬಲರಾಗಿದ್ದರು.

              ಗೌಡರ ವಲಸೆಯ ಕುರಿತು ಡಾ.ಬಿಳಿಮಲೆಯವರ ಚರ್ಚೆ ಇಲ್ಲಿ ಪ್ರಸ್ತುತ.15-16ನೇ ಶತಮಾನದಲ್ಲಿ ಐಗೂರಿನಿಂದ ಗೌಡರು ತುಳುನಾಡಿಗೆ ಬರಲು ಕಾರಣವನ್ನು ಮೌಖಿಕ ಆಧಾರಗಳ ಮೂಲಕ ನೀಡುತ್ತಾರೆ.ಸುಳ್ಯದ ಗೌಡರು ನಿರೂಪಿಸುವ ‘ಕೆಂಡದ ಮಳೆ’ ಐಗೂರಿನಲ್ಲಿ ಸಂಭವಿಸಿರಬಹುದಾದ ಭೀಕರ ಬರಗಾಲವನ್ನು ಸೂಚಿಸುತ್ತದೆ.ಹೇಮಾವತಿ ನದಿ ಬತ್ತಿ ಹೋದುದನ್ನು ಸಂಕೇತಿಸುತ್ತದೆ.ಕೂಡುರಸ್ತೆಯಲ್ಲಿ ಪ್ರಚಲಿತದಲ್ಲಿರುವ ‘ಐಗೂರಪ್ಪನ ಲಾವಣಿ ‘ ಕ್ರೂರಿಯಾದ ರಂಗಪ್ಪ ನಾಯಕ ಉಂಟುಮಾಡಿದ ಅನಾಹುತಗಳನ್ನು ಚಿತ್ರಿಸುತ್ತದೆ. ಅವನ ಕ್ರೌರ್ಯದಿಂದ ಪಾರಾಗಲು ಗೌಡರು ಆ ಆಕಡೆಯಿಂದ ಘಟ್ಟದ ಕೆಳಗೆ ಇಳಿದು ಬಂದಿರಬೇಕು.(ಡಾ.ಬಿಳಿಮಲೆ;ಸಂ.ಚಿನ್ನಪ್ಪ ಗೌಡ;2003,84)
image
        ಗೌಡರ ಆಗಮನ ಕುರಿತಾದ ಇತಿಹಾಸವನ್ನು ತುಳುನಾಡಿನ ದೈವಗಳ ಪಾಡ್ದನಗಳು ಸಾರುತ್ತವೆ. ಐಗೂರಿನಿಂದ ಬಿಸಿಲೆ ಘಾಟಿಯ ಮೂಲಕ ಸುಬ್ರಹ್ಮಣ್ಯದ ಕುಮಾರಧಾರೆಯ ಇಕ್ಕೆಲಗಳಲ್ಲಿ ಗೌಡರು ಹರಡಿದರೆ,ಸಕಲೇಶಪುರ,ಮೂಡಿಗೆರೆಯಾಗಿ ಚಾರ್ಮಾಡಿ ಘಾಟಿಯ ಮೂಲಕ ಬೆಳ್ತಂಗಡಿಗೆ ಬಂದು ನೇತ್ರಾವತಿಯ ಇಕ್ಕೆಲಗಳಲ್ಲಿ ಮುಂದುವರಿದ ಗೌಡರು ಎರಡು ಹಾದಿಗಳಲ್ಲಿ ತುಳುನಾಡಿಗೆ ಇಳಿಯುತ್ತಾರೆ.ಈ ಪ್ರಸರಣವು ‘ಏನೇಕಲ್ಲಿನ ಬಚ್ಚನಾಯಕನ ‘ ಪಾಡ್ದನದಲ್ಲಿ ಕಾಣುತ್ತೇವೆ. ಬಚ್ಚನಾಯ್ಕ ಬಿಸಿಲೆಯ ಮೂಲಕ ಬಂದರೆ, ‘ಶಿರಾಡಿ ಭೂತ’ ಚಾರ್ಮಾಡಿಯ ಮೂಲಕ ಇಳಿಯುತ್ತವೆ.ಇವರ ಹೆಜ್ಜೆಗಳೇ ಗೌಡರು ನಡೆದುಬಂದ ದಾರಿ.ಇವರ ಆಗಮನಕ್ಕೂ ಹಿಂದೆ ಬಂಟ-ಜೈನರು ಬಂದು ತಮ್ಮ ಯಜಮಾನಿಕೆಯನ್ನು ಗಟ್ಟಿಗೊಳಿಸಿದ್ದರೂ ಸುಳ್ಯದಲ್ಲಿ ಗೌಡರ ಪ್ರಾಬಲ್ಯ ಹೆಚ್ಚಿತ್ತು ಎನಿಸುತ್ತದೆ. ಗೌಡರ ವಲಸೆಗೆ ಮೂಲ ಸಮುದಾಯಗಳು ಪ್ರತಿರೋಧ ಒಡ್ಡಲಿಲ್ಲ. ಬಹುತೇಕ ಜೈನ ಬಲ್ಲಾಳರು ಆದರಣೀಯವಾಗಿ ನೋಡಿದರೆನಿಸುತ್ತದೆ.

             ಹಿರಿಯರಾದ ಜಾನಪದ ತಜ್ಞ ಡಿ.ಜಿ.ನಡ್ಕರೊಂದಿಗಿನ ವೈಯಕ್ತಿಕ ಮಾತುಕತೆಯಲ್ಲಿ ‘ಗೌಡರು ತುಳುನಾಡಿಗೆ ಬರಲು ಕೆಳದಿ ಅರಸರ ಜಾತಿಮೂಲವೇ ಕಾರಣ ‘ ಎಂದಿದ್ದರು. ಕೆಳದಿ ನಾಯಕರು, ಯಲಹಂಕ ನಾಡಪ್ರಭುಗಳು,ಹೊಯ್ಸಳರು ಇವರೆಲ್ಲ ಒಕ್ಕಲಿಗ  ಮೂಲದವರೆಂಬುದು ಗಮನಿಸತಕ್ಕ ವಿಚಾರ.

          ಸುಳ್ಯದಲ್ಲಿ ಗೌಡರಿಂದ ಆರಾಧನೆಗೊಳ್ಳುವ ಹಿಂದೆ ಸುಳ್ಯವನ್ನಾಳಿದ ಕೇರಳಿಗ ‘ಚಾತುನಾಯರ್’ ಶೃಂಗೇರಿಯ ಶ್ರೀಗಳ ಅನುಮತಿ ಪಡೆದು ಗೌಡರನ್ನು ತಂಡ ತಂಡವಾಗಿ ಕರೆತಂದು ಅರ್ವತ್ತೊಕ್ಕಲು,ಮುನ್ನೂರೊಕ್ಕಲು ಎಂದು ವಿಂಗಡಿಸಿ ನೆಲೆಗೊಳಿಸಿದ.ಹಾಗಾಗಿ ನಾಯರ್ ನೇಮದಲ್ಲಿ ನಾಯರ್ ತಾನು ಕರೆತಂದ ಗೌಡರನ್ನು ಇಣುಕಿನೋಡುವ,ಎಣಿಸುವ ಕ್ರಮವಿದೆ.ಇವನ ಆಳ್ವಿಕೆಯ ಕಾಲದಲ್ಲೂ ಕೆಲ ಗೌಡ ಕುಟುಂಬಗಳು ತಂಡವಾಗಿ ಬಂದಿರಬೇಕು.
\
     ಸುಳ್ಯ ಪರಿಸರದ ಬೆಳ್ಳಾರೆ , ಕಾಂತಮಂಗಲ,ಮೂಡುಕೊಡೆಯಾಲ ಮುಂತಾದೆಡೆ ಕೆಳದಿಯ ಅರಸರು ಕಟ್ಟಿದ ಕೋಟೆಗಳಿವೆ.ಸುಬ್ರಹ್ಮಣ್ಯದ ರಥ ಇವರ ಕೊಡುಗೆಯಾಗಿದ್ದು ಅನೇಕ ದೇವಾಲಯಗಳಿಗೆ ದತ್ತಿಗಳನ್ನು ನೀಡಿದ ಶಾಸನೋಕ್ತ ಉಲ್ಲೇಖಗಳಿವೆ.ಸುಳ್ಯದ ಅವರ ಶಾಸನಗಳಲ್ಲಿ ತಮ್ಮ ಹೆಸರಿನೊಂದಿಗೆ ಗವುಡ ಉಪನಾಮವನ್ನೂ ಸೇರಿಸಿದ್ದಾರೆ.ಇವರು ಲಿಂಗಾಯಿತರಾದರೂ ಒಕ್ಕಲಿಗ ಮೂಲದವರು.ವಿಜಯನಗರದ ಕಾಲದಲ್ಲಿ ತುಳುನಾಡಿನ ಚುಕ್ಕಾಣಿ ಹಿಡಿದರು.ವಿಜಯನಗರದ ಪತನದ ನಂತರ ಇವರ ಮೇಲಿನ ಅಂಕುಶ ಹೋಗಿ ತಮ್ಮ ಸ್ಥಾನವನ್ನು ಗಟ್ಟಿ ಗೊಳಿಸಿಕೊಂಡರು.ಜಾತಿಮೂಲದ ಕಾರಣದಿಂದ ಕೆಲ ಗೌಡರು ತುಳುನಾಡಿಗೆ ಅಧಿಕಾರಿಗಳಾಗಿ ಬಂದಿದ್ದಾರೆ.
          ತುಳುನಾಡಿಗೆ ಬಂದರೂ  ಯಜಮಾನೀಯ ಸ್ಥಾನವನ್ನು ಗಳಿಸಿದ್ದು ಪುತ್ತೂರು,ಸುಳ್ಯ ಪರಿಸರಗಳಲ್ಲಿ ಮಾತ್ರ.ಇವರು ಚಾರ್ಮಾಡಿಯ ಮೂಲಕ ಬಂದವರು. ಆದರೆ ಬಂಗಾಡಿಯ ಮೂಲಕ ಬಂದವರು ಇತರ ಸಮುದಾಯಗಳಲ್ಲಿಒಂದಾದರು. ಸುಳ್ಯ ಪರಿಸರದಲ್ಲಿ ಬೈರ, ಮಾಯಿಲ,ಕೊರಗರಂತಹ ಅನೇಕ ನಿವಾಸಿಗಳಿದ್ದರು.ಮಾಯಿಲರು ಇವರಲ್ಲಿ ಸ್ಥಿತಿವಂತರಾಗಿದ್ದರು.ಇದಕ್ಕೆ ಮಾಯಿಲರ ಕೋಟೆ ಮುಂತಾದ ಪ್ರಾಗೈತಿಹಾಸಿಕ ಕುರುಹುಗಳು ಸಾಕ್ಷಿ. ಗೌಡರು ದೈವಾರಾಧನೆಯನ್ನು ಒಪ್ಪಿಕೊಂಡರೂ ತಮ್ಮ ಮೂಲದೈವಗಳನ್ನು ಬಿಡಲಿಲ್ಲ.ಕೆಲವೆಡೆ ತಮ್ಮ ಮತಮೂಲದ ದೈವಗಳ ಆರಾಧನೆಯನ್ನು ವಿಸರ್ಜಿಸಿದ್ದಾರೆ. ಗೌಡರಲ್ಲಿ ಪ್ರಾಚೀನರೆನಿಸಿಕೊಂಡ ದೇರಾಜೆ,ಯೇನಡ್ಕ,ಕುಂಚಡ್ಕ ಹಾಗೂ ಅನೇಕ ಕುಟುಂಬಗಳಲ್ಲಿ ಹೊಸಕೋಟೆ ಸುಬ್ಬಮ್ಮ, ಬಣಗೂರು ಕೆಂಚಮ್ಮ ಎಂಬ ಸ್ತ್ರೀದೇವತೆಗಳನ್ನೂ,ಬೈರವ,ಕೆಂಚಿರಾಯನನ್ನು ಆರಾಧಿಸುತ್ತಾರೆ.

     ಗೌಡರ ಇತಿಹಾಸಕ್ಕೂ ಉಲ್ಲಾಕುಳುಗಳಿಗೂ ಅವಿನಾಭಾವ ಸಂಬಂಧವಿದೆ.ಕೆಳದಿಯರಸರ ಕಾಲದಲ್ಲಿ ಅರಸು ದೈವಗಳ ಆರಾಧನೆ ಆರಂಭವಾಯ್ತೆನಿಸುತ್ತದೆ.ಗೌಡರ ಮೇಲುಸ್ತುವಾರಿಯಲ್ಲಿ ಆರಾಧನೆಗೊಳ್ಳು ಉಲ್ಲಾಕುಳುಗಳ ಮೂಲವನ್ನು ಗಂಗರಲ್ಲಿ ಚರ್ಚಿಸಲಾಗುವುದು. ಡಾ.ಕಣಿಯೂರರ ಚರ್ಚೆ ಇಲ್ಲಿ ದಾಖಲಿಸಬೇಕು. ಗಂಗರ ದಡಿಗ-ಮಾದವ-ಆಲಬ್ಬೆಯರ ಕುರಿತಾದ ಐತಿಹ್ಯಕ್ಕೂ ಉಲ್ಲಾಕುಳುಕೂ ಇರು ಸಾಮ್ಯತೆಯ ಎತ್ತಿ ಹಿಡಿಯುತ್ತಾರೆ.ದಡಿಗನಿಗೆ ಸಿಂಹನಂದಿ ಎಂಬ ಜೈನ ಮುನಿ ಕರ್ಣಿಕಾರ ಪುಷ್ಪದ ಕಿರೀಟ ತೊಡಿಸಿದ್ದು ಉಲ್ಲಾಕುಳಲ್ಲಿ ಹಿರಿಯಣ್ಣನಿಗೆ ‘ಪೂಮಾಣಿ’ ಎಂಬ ಹೆಸರಿರುವುದು ಸಾಧ್ಯತೆಗಳನ್ನು ತೋರಿಸುತ್ತದೆ. ಐತಿಹ್ಯದಂತೆ ಬಂಗಾಳದಿಂದ ದಡಿಗ-ಮಾದವ-ಆಲಬ್ಬೆಯರು ದಕ್ಷಿಣಕ್ಕೆ ಬರುವಾಗ ಅವರಿಗೆ ರಾಮ-ಲಕ್ಷ್ಮಣ-ಸೀತೆ ಯೆಂಬ ಹೆಸರಿತ್ತು. ತುಳುನಾಡಿನಲ್ಲಿಉಲ್ಲಾಕುಳುಗಳಿಗೆ ರಾಮ-ಲಕ್ಷ್ಮಣರೆಂಬ ಜನಜನಿತ ಹೆಸರಿದೆ.ಇವರಿಗೆ ಸಾತ್ವಿಕ ರೂಪದ ‘ಆವಾರೊ’ (ಬಾರಣೆ ಇಲ್ಲ.ಬರಿಯ ಹಾಲು ಮಾತ್ರ)ನೀಡುವುದರಿಂದ ಇದು ಜೈನ ಪ್ರಭಾವ ಇರಬಹುದು ಎನಿಸುತ್ತದೆ.ಪೂವಪ್ಪ ಕಣಿಯೂರರ ‘ ಮೌಖಿಕ ಸಂಕಥನ’ದ ಈ ಚರ್ಚೆ ನಮ್ಮನ್ನು ಆಕರ್ಷಿಸುತ್ತದೆ.

                  ಪಾದೂರು ಗುರುರಾಜ ಭಟ್ಟರ ಅಭಿಪ್ರಾಯದಂತೆ 14 ಶತಮಾನದಲ್ಲಿ ದೈವಾರಾಧನೆ ಇಂದಿನ ಸ್ವರೂಪ ಪಡೆಯಿತು.ಆ ಹೊತ್ತಿಗಾಗಲೇ ವಿಜಯನಗರ-ಕೆಳದಿಯರಸರ ಆಡಳಿತ ತುಳುನಾಡಿನಲ್ಲಿ ಇದ್ದರಿಂದಾಗಿ ಅರಸು ದೈವಗಳ ಆರಾಧನೆ ಆರಂಭವಾಯ್ತು. ಇತರೆಡೆ ಇರುವ ಉಲ್ಲಾಯ-ಉಲ್ಲಾಳ್ತಿರನ್ನು ಬಂಗರ ಮೂಲದ ದೈವಗಳೆನ್ನುತ್ತಾರೆ.ಈ ಅರಸು ದೈವಗಳನ್ನು ಆರಾಧಿಸುವ ಮೂಲಕ ತಮ್ಮ ಅಧಿಕಾರವನ್ನು ಗಟ್ಟಿಗೊಳಿಸುವ ಯತ್ನ ನಡೆದಿದೆ.ಹಾಗಾಗಿ ಬಂಗರ ಸೀಮೆಯ ವ್ಯಾಪ್ತಿಯೊಳಗೆ ಬಹುತೇಕ ಅರಸು ದೈವಗಳ ಆರಾಧನೆಯಾಗುತ್ತದೆ. ಉಲ್ಲಾಯನಿಗಿಂತ ಭಿನ್ನವಾದ ‘ಇರ್ವೆರ್ ಉಲ್ಲಾಕುಳು’ ಗೌಡರ ಮೂಲಕ ಕೆಳದಿಯವರ ಪ್ರಾಬಲ್ಯವನ್ನು ಸ್ಥಿರಗೊಳಿಸುವ ಯತ್ನ.

                 ಉಲ್ಲಾಕುಳು ಘಟ್ಟವಿಳಿದು ಬರುವಾಗ ಸುಬ್ರಹ್ಮಣ್ಯನದ ಸುಬ್ರಾಯನ(ಹಿಂದೆ ಇಂಜಾಡಿ ) ಕೊಡಿಮರ ಏರುವುದನ್ನು ಕಂಡು ಅದನ್ನು ತಮ್ಮ ಬಾಣ ಬಿಟ್ಟು ತುಂಡರಿಸುತ್ತಾರೆ.ಇವರಿಗೂ ಸುಬ್ರಾಯನಿಗೂ ನಡೆದ ಕದನ ಒಂದು ಐತಿಹಾಸಿಕ ಧಾಳಿ ಎನಿಸುತ್ತದೆ. ಹಾಗಾಗಿ ಇಂದಿಗೂ ಕುಕ್ಕೆಸುಬ್ರಹ್ಮಣ್ಯದಲ್ಲಿ ಕೊಡಿಮರ (ದ್ವಜಾರೋಹಣ) ಇಲ್ಲ.ಬದಲಾಗಿ ಉಲ್ಲಾಕುಳು ನೀಡಿದ ಕೊಪ್ಪರಿಗೆಯ ಮೂಲಕ ಜಾತ್ರೆ ಆರಂಭವಾಗುವುದು. ಹೀಗಾಗಿ ಶಾಪವೆಂಬಂತೆ ಇವರಿಗೆ ಹಾಲು ಮಾತ್ರ ಆವಾರೊ ಆಗಿ ನೀಡುತ್ತಾರೆ.ಡಾ.ಬಿಳಿಮಲೆಯವರು ಗೌಡೇತರ ದೇವರುಗಳ ಕೊಡಿಮರ ಕಡಿದರೆನ್ನುತ್ತಾರೆ.  ಇದು ಗೌಡರು ವಲಸೆ ಪ್ರಕ್ರಿಯೆಯಲ್ಲಿ ಎದುರಿಸಿದ ಸಂಘರ್ಷ. ಇವರ ಆರಾಧನೆ ಗೌಡರ ಮೇಲುಸ್ತುವಾರಿಕೆಯಲ್ಲಿ ನಡೆಯುತ್ತದೆ. ಗೌಡರ ಪುರುಷಭೂತ,ಬಚ್ಚನಾಯ್ಕ,ಶಿರಾಡಿ, ರುದ್ರಾಂಡಿ,ಕುಕ್ಕೆತ್ತಿ-ಬಳ್ಳು ಇತ್ಯಾದಿಗಳು ತುಳುವರ ದೈವಗಳೊಂದಿಗೆ ತಮ್ಮ ಮತ ಮೂಲದ ದೈವಗಳನ್ನು ದೈವಾರಾಧನೆಯ ಸ್ವರೂಪದಲ್ಲಿ ಆರಾಧಿಸಿಕೊಂಡು ಬಂದುದಕ್ಕೆ ನಿದರ್ಶನಗಳು.

          ಬಚ್ಚನಾಯ್ಕನನ್ನು ಪಂಜದ ಬಲ್ಲಾಳ ಕಂದಾಯ ನೀಡದ ಯೇನೆಕಲ್ಲು ಮಾಗಣೆಯ ನಾಲ್ಕೂರುಗುತ್ತು ಮನೆಯ ಸುಬ್ಬಣ್ಣಗೌಡನನ್ನು ಶಿಕ್ಷಿಸಲು ಕಳುಹಿಸುತ್ತಾನೆ. ಇವನು ಗೌಡನ ಕೈಯಿಂದ ಹತನಾಗಿ ದೈವವಾಗಿ ಆರಾಧಿಸಲ್ಪಡುತ್ತಾನೆ. ಮತಮೂಲದ ಸಾಮ್ಯತೆಯಿಂದಾಗಿ ಇವನು ಗೌಡರಿಂದ ಆರಾಧಿಸಲ್ಪಡುತ್ತಾನೆ. ಇಂತಹ ಅನೇಕ ನಾಯಕ ಪರಂಪರೆಯ ದೈವಗಳು ಸುಳ್ಯಭಾಗದಲ್ಲಿ ಆರಾಧಿಸಲ್ಪಡುತ್ತಿವೆ. ಬೈಸು ನಾಯಕ, ಮಡಪ್ಪಾಡಿ,ಮೊಗ್ರಾಲ್ ನ ಕರಿಯಣ್ಣ ನಾಯಕ ಇವರೆಲ್ಲರನ್ನು ಸಬ್ಬಣ್ಣ ಗೌಡನಿಂದಲೇ ಹತರಾಗುತ್ತಾರೆ. (ಡಾ.ಲಕ್ಷ್ಮಿ ಪ್ರಸಾದ್;2011,21) ಇವರೆಲ್ಲ ಕೆಳದಿಯರಸರ ಕಾಲದಲ್ಲಿ ತುಳುನಾಡಿಗೆ ಕಪ್ಪ ಸ್ವೀಕಾರಕ್ಕೆ ಬಂದ ಅರಸು ಪ್ರತಿನಿಧಿಗಳು.

        ಗೌಡರು ಮೂಲತಃ ನಾಥಪಂಥೀಯರು. ಇವರು ಆರಾಧಿಸುವ ಪುರುಷರಾಯ ಓರ್ವ ನಾಥ ಸನ್ಯಾಸಿ. ಇದೊಂದು ದೀರ್ಘ ಇತಿಹಾಸ. ತುಳುನಾಡಿನಲ್ಲಿಕದ್ರಿ, ವಿಟ್ಲ, ಗುರುಪುರ,ಕಾಣಿಯೂರು,ಮಂಜೇಶ್ವರಾದಿ ಹಲವು ಕಡೆ ತಾಂತ್ರಿಕ ಪಂಥಗಳ ಕುರುಹುಗಳು,ಜೋಗಿ ಮಠಗಳಿವೆ. ಶೈವ ಮೂಲೀಯ ಪಾಶುಪತ,ಶಾಕ್ತ,ಕಾಳಮುಖ,ಲಕುಲೀಶ,ಕಾಪಾಲಿಕ,ಕಾಳಾದಿ ನಾಥ ತಾಂತ್ರಿಕ ಪಂಥಗಳ ಕುರುಹುಗಳು ಸುಳ್ಯದಲ್ಲಿ ಕಂಡುಬರುತ್ತವೆ.ಪುರುಷರಾಯ ಓರ್ವ ಮಠದಿಂದ ಮಠಕ್ಕೆ ಸುತ್ತುವ ಜೋಗಿ.ಗೌಡರ ಸಿದ್ಧವೇಷ ಹಾಗೂ ಜೋಗಿ ಕುಣಿತ ಶೈವಮೂಲದೊಂದಿಗಿನ ಅವರ ಸಂಬಂಧವನ್ನು ತೋರಿಸುತ್ತವೆ.  ಗೌಡರು ಕುಟುಂಬಗಳಲ್ಲಿ ಧರ್ಮದೈವವಾಗಿ ಮಾತೃಮೂಲೀಯ ‘ರುದ್ರಾಂಡಿ’ಯನ್ನು ಆರಾಧಿಸುತ್ತಾರೆ.ಕೆಲವೆಡೆ ಅಡ್ಯಂತಾಯನನ್ನು ಉಲ್ಲಾಕುಳು ಸಂಕೀರ್ಣದಲ್ಲಿಆರಾಧಿಸುತ್ತಾರೆ. ಮನೆಗಳಲ್ಲಿ ಕಲ್ಲುರ್ಟಿಯನ್ನು ಪ್ರಧಾನವಾಗಿ ಆರಾಧಿಸುತ್ತಾರೆ.

          ಜೈನ – ಬಂಟ-ಬಿಲ್ಲವರಿಗೆ ಸುತ್ತು ಪಡ್ಪಿರೆ ಮನೆ ಇರುವಂತೆ ಇವರಿಗೂ ‘ಐನ್ ಮನೆ’ ಇದೆ. ಇದೊಂದು ರಾಚನಿಕ ಹಾಗೂ ಸಾಂಸ್ಕೃತಿಕವಾಗಿ ಸಂಕೀರ್ಣವಾದದ್ದು.ಐನ್ ಮನೆಯಲ್ಲಿ ಕುಲದೈವ,ಮನೆದೈವ,ಗುರು ಕಾರಣವರ್,ಧರ್ಮದೈವಗಳೊಂದಿಗೆ ಕರ್ತನ ನಿರ್ದೇಶನದಲ್ಲಿ ನಡೆಯುವ ಮನೆ.ಈ ಐದು ವ್ಯವಸ್ಥೆಗಳ ಮನೆಯಲ್ಲಿ ಕುಲದೈವಗಳ ಕೋಣೆ ಇದ್ದು ಮುಡಿಪು,ಹರಿಸೇವೆ ಇತ್ಯಾದಿಗಳು ಇಲ್ಲಿ ನಡೆಯುತ್ತವೆ. ಇದೇ ಮನೆಯಲ್ಲಿ ಉದ್ರಾಂಡಿ,ಉಲ್ಲಾಕುಳು, ವಿಷ್ಣುಮೂರ್ತಿಯ ಭಂಡಾರವಿರುತ್ತದೆ.ಸಾಮಾನ್ಯವಾಗಿ ಅಡುಗೆ ಕೋಣೆಯ ಪಕ್ಕ ಕತ್ತಲಲ್ಲಿ ಕಲ್ಲುರ್ಟಿಯ ಬೆತ್ತ ಪರಿಕರಗಳು ಇರುತ್ತವೆ.ಹೊರಗಡೆ ಅಗೆಲು ಹಾಕಲಾಗುತ್ತದೆ. ಗೌಡರ ಎಲ್ಲಾ ಆರಾಧನೆಗಳೂ ‘ಕನ್ನಿಕಂಬ’ವನ್ನು ಕೇಂದ್ರೀಕರಿಸಿಕೊಂಡಿರುವುದು ವಿಶೇಷ.

       ಸುಳ್ಯವನ್ನಾಳಿದ ಅಷ್ಟ ಬಲ್ಲಾಳ್ತಿಯರೂ ತಮ್ಮ ವಂಶ ನಾಶವಾಗುತ್ತಲೇ ಆಸ್ತಿಯೊಂದಿಗೆ ಆರಾಧನ ವ್ಯವಸ್ಥೆಯನ್ನ ಗೌಡರಿಗೆ ಕೊಡುವುದು ಗಮನಾರ್ಹ.ದೈವಗಳು ” ಬಲ್ಲಾಳನ ಕಾಲದ ಪೂರ್ವಕಟ್ಟಳೆ,ಅನ್ಯಾಯ ಮಾಡಿದ ಬಲ್ಲಾಳನ ಸಂತತಿಯನ್ನು ನಾಶಮಾಡಿ ನಿಮ್ಮ ಬೆನ್ನುಹಿಡಿದೆವು”ಎಂಬ  ಮಹಾಸ್ಥಿತ್ಯಂತರದ ಮಾತನ್ನು ಗೌಡರೊಂದಿಗೆ ಆಡುತ್ತವೆ.ಸುಳ್ಯದ ಮರ್ಕಂಜ,ಕಂದ್ರಪ್ಪಾಡಿ,ಪಂಜ,ನಡುಗಲ್ಲು ಹಲವೆಡೆಗಳಲ್ಲಿ ಬಸ್ತಿಯ ಅವಶೇಷಗಳಿವೆ.ಇವರ ನಾಶದ ಬಳಿಕ ಗೌಡರು ಸಾಮಾಜಿಕ,ರಾಜಕೀಯ ಹಾಗೂ ಆರಾಧನಾ ಘಟಕಗಳಲ್ಲಿ ತಮ್ಮ ಸ್ಥಾನವನ್ನು ಬಿಗುಗೊಳಿಸಿದರು.ಇಂದು ಸುಳ್ಯ ಪುತ್ತೂರಿನ ಹಲವು ದೇವಾಲಯ ದೈವಸ್ಥಾನಗಳ ಆಡಳಿತಗಾರರಾಗಿ, ಪೂಜರ್ಮೆಯವರಾಗಿ ಗುರುತಿಸಿಕೊಂಡಿದ್ದಾರೆ.

             ಗೌಡರು ದೈವಾರಾಧನೆಯನ್ನು ಒಪ್ಪಿಕೊಳ್ಳುವಲ್ಲಿ ಅನೇಕ ಸ್ಥಿತ್ಯಂತರಗಳು ಘಟಿಸಿವೆ.’ಕೊಡು ಕೊಳ್ಳುವಿಕೆ’ ನಡೆದಿದೆ.ತಮ್ಮ ಮತ ಮೂಲದ ದೈವಗಳ ಮೂಲಕ ದೇವ ಪ್ರಪಂಚವನ್ನು ಸಂಮೃದ್ಧಗೊಳಿಸಿದ್ದಾರೆ.ತುಳುವರೊಂದಿಗೆ ಒಂದಾಗಿ ಸಂಸ್ಕೃತಿಯನ್ನು ಉನ್ನತಿಕರಿಸಿಕೊಂಡು ಸಂಸ್ಕೃತಿಯಲ್ಲಿ ಒಂದಾಗಿದ್ದಾರೆ.

ಕಾಮೆಂಟ್‌ಗಳಿಲ್ಲ: