ಶುಕ್ರವಾರ, ಜೂನ್ 3, 2016

ಬುಡಕಟ್ಟು ವೀರ ಜಗಳೂರು ಪಾಪನಾಯಕ

-ಡಾ.ವಿರೂಪಾಕ್ಷಿ ಪೂಜಾರಹಳ್ಳಿ

ಸೌಜನ್ಯ: ಕಣಜ

 ಜಗಳೂರಜ್ಜರಿಗೆ ಜಗಳೂರು ಪಾಪಜ್ಜ, ಪಾಪೇದೇವರು, ಪರದೇಶಿಪಾಪಯ್ಯ, ಪಾಪಿನಾಯಕ, ಸೂರ್ಯದೇವ ಪಾಪನಾಯಕ, ಕೊರೇಲುಪಾಪಯ್ಯ, ಜೋಗಯ್ಯ ಮುಂತಾದ ಹೆಸರುಗಳಿಂದ ಕರೆಯುವ ವ್ಯಕ್ತಿ ಮ್ಯಾಸಬೇಡರ ಒಬ್ಬ ಬುಡಕಟ್ಟು ವೀರ. ಇಂದು ಈತನೊಬ್ಬ ಆರಾಧ್ಯ ದೇವತೆಯಾಗಿರುವುದು ಗಮನಾರ್ಹ. ಪಾಪನಾಯಕ ಒಬ್ಬ ಪಶುಪಾಲಕನಾಗಿ ತನ್ನ ಸಾಂಸ್ಕೃತಿಕ ಬದುಕಿನೊಂದಿಗೆ ಆಧ್ಯಾತ್ಮಿಕ ರಂಗವನ್ನು ಪ್ರವೇಶಿಸಿದ ಮಹಾವೀರ. ಇಲ್ಲಿ ಜಗಳೂರು ಪಾಪನಾಯಕನ ಜೀವನದ ಕೆಲವು ಮಹತ್ವದ ಘಟನೆಗಳಲ್ಲಿ ಜನನ, ವಿದ್ಯಾಭ್ಯಾಸ, ವೃತ್ತಿ, ಸಾಧನೆ, ಅವಸಾನ ಇತರ ಸಂಗತಿಗಳನ್ನು ವಿಶ್ಲೇಷಿಸಲಾಗುತ್ತದೆ.
ಈವರೆಗೆ ಜಗಳೂರು ಪಾಪಜ್ಜನನ್ನು ಮ್ಯಾಸಬೇಡರು ಪವಾಡ ಪುರುಷನೆಂದು ಹೆಚ್ಚಾಗಿ ನಂಬಿದ್ದರು. ಆದರೆ ಅವನ ಬದುಕಿನ ಪಲ್ಲಟಗಳನ್ನು ಅವಲೋಕಿಸಿದರೆ ಆ ಮಟ್ಟಕ್ಕಿಂತ ಭಿನ್ನವಾದ ನೆಲೆಗಳು ಕಂಡುಬರುತ್ತವೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ; ದಾವಣಗೆರೆ ಜಿಲ್ಲೆಯ ದಾವಣಗೆರೆ, ಜಗಳೂರು ತಾಲೂಕುಗಳಲ್ಲದೆ, ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ದಶಮಾಪುರ, ಸಂಡೂರು ತಾಲೂಕುಗಳಲ್ಲಿ ಈತನ ಅನುಯಾಯಿಗಳಿದ್ದಾರೆ. ಹೊಸಪೇಟೆ ತಾಲೂಕಿನಲ್ಲಿ ಪಾಪಿನಾಯಕನಹಳ್ಳಿ ಎಂಬ ಗ್ರಾಮವಿದ್ದು ವೀರಗಲ್ಲು, ಕೋಟೆ, ದೇವಾಲಯಗಳಿರುವುದನ್ನು ಗಮನಿಸಿದರೆ ಈತನಿಗೆ ಈ ಗ್ರಾಮಕ್ಕೆ ಸಂಬಂಧವಿದ್ದಂತಿದೆ. 

ಜಗಳೂರು ಪಾಪನಾಯಕನ (ಸಮಾಧಿ) ದೇವಾಲಯ, ಜಗಳೂರು

 ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಜಗಳೂರು ಮತ್ತು ಕೂಡ್ಲಿಗಿ ತಾಲೂಕುಗಳ ನಡುವಿನ ಪ್ರದೇಶವನ್ನು ‘ನಡುಗಡ್ಡೆ’ ಎನ್ನುತ್ತಾರೆ. ಇದಕ್ಕೆ ರಾಯದುರ್ಗ ತಾಲೂಕಿನ ಅಲ್ಪಭಾಗ, ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆಯ ಕೆಲವು ಭಾಗಗಳು ಸೇರಿವೆ. ವೇದಾವತಿ ನದಿಯು ಹರಿಯುವ ಭಾಗವಾದ ರಾಯದುರ್ಗದಿಂದ ಜನಿಗೆಹಳ್ಳದ ಆಗ್ನೇಯ ದಿಕ್ಕಿಗಿರುವ ‘ಗರಣಿ’ ಕಾಲುವೆಯ ದಂಡೆಯ ಮೇಲಿರುವುದೇ ‘ನಡುಗಡ್ಡೆ’ ಅಥವಾ ‘ಜಂಬೂದ್ವೀಪಲುಗುಡ್ಡೆ’ ಎಂದು ಕರೆಯುತ್ತಾರೆ. ಇಲ್ಲಿ ವಾಸಿಸುವವರಿಗೆ ನಡುಗಡ್ಡೆ ನಾಯಕರೆಂದು, ದೊರೆಗಳೆಂದು ಕರೆಯುವರು. ಇವರಲ್ಲಿ ಯರಮಂಚಿನಾಯಕನೂ ಪವಾಡ ಪುರುಷ. ಮದುವೆ, ಹಬ್ಬ, ಹರಿದಿನಗಳಲ್ಲಿ ಮೊದಲ ವೀಳ್ಯವನ್ನು ಇವರಿಗೆ ಕೊಡುತ್ತಾರೆ. ಈ ನಡುಗಡ್ಡೆ ನಾಯಕರು ಜಗಳೂರು ಪಾಪನಾಯಕನನ್ನು ಆರಾಧಿಸುವುದುಂಟು. ಇವರಲ್ಲಿ ಎರಡು ಪಂಗಡಗಳಿವೆ. ೧. ಮಂದಲಗೋತ್ರ – ಮಂದಭೂಪಾಲ (ಮಂದವಾಡು), ೨. ಮಲ್ಲಿನಾಯಕ ಗೋತ್ರ – ಶುಕ್ಲಮಲ್ಲಿನಾಯಕ (ಮಲ್ಲಿನಾಯಕವಾಡು).

ಜನಪದ ವೃತ್ತಾಂತ: ಪಾಪಿನಾಯಕನ ಮತ್ತು ಪುರ್ವಿಕರ ಪರಿಸರ

ಮಂದಲಗೋತ್ರದ ಮೂಲ ಪುರುಷ ಮಂದಭೂಪಾಲ. ವಿಂಧ್ಯಾಪರ್ವತ, ನರ್ಮದಾನದಿ ಮತ್ತು ತಪತೀ ನದಿಗಳ ತೀರ ಮತ್ತು ಗಿರಿತಪ್ಪಲಿನ ದನಗಳ ಮಂದೆಯಲ್ಲಿ ಇವನು ಜನಿಸಿದ. ಬುಟ್ಟುಗಲ ವಂಶದವರು ತಮ್ಮ ದನಗಳ ಮಂದೆಯಲ್ಲಿ ಚೀರುತ್ತಾ ಆಕ್ರಂದನ ಮಾಡುತ್ತಿದ್ದ ಮಗುವನ್ನು ಸಾಕಿಸಲಹಿದರು. ಇವನು ‘ಪ್ರಮೀಳಾ’ನನ್ನು ಮದುವೆಯಾಗಿ ನಾಲ್ಕು ಜನ ಮಕ್ಕಳನ್ನು ಪಡೆಯುತ್ತಾನೆ. ಮಂದಭೂಪಾಲನ ಸಂತತಿಗೆ ‘ಮಂದಲಗೋತ್ರ’ವೆಂದು ಹೆಸರಾಯಿತು. ಇವನ ಹಿರಿಯಮಗ ಅಂಭೋಜರಾಜನು. ಶ್ರೀಕೃಷ್ಣನಿಂದ ಶಾಪಗ್ರಸ್ತನಾಗಿ ಸತಿ – ಸುತರೊಂದಿಗೆ ಬೆಟ್ಟ – ಗುಡ್ಡ. ಕಾಡಲ್ಲಿ ಅಲೆದಾಡಿದರು. ತಾರಕರಾಮನಾಮ ಜಪಿಸಿ ಕೊನೆಗೆ ವಾಲ್ಮೀಕಿಯಾದ ಎಂಬ ಜನಪದ ಕಥೆ ಪ್ರಚಲಿತದಲ್ಲಿದೆ.

ಎರಡನೇ ಗೋತ್ರವು ಮಲ್ಲಿನಾಯಕ ಎಂಬುದು. ಇದನ್ನು ಶುಕ್ಲಮಲ್ಲಿನಾಯಕ ಸ್ಥಾಪಿಸಿದ. ಪಂಪಾದ್ರಿ ಬಸವನ ಚಿಟ್ಟೆ ಗೊರಸಿನಲ್ಲಿ ಹುಟ್ಟಿದವನು ಶುಕ್ಲಮಲ್ಲಿನಾಯಕ ಎಂಬ ಪ್ರತೀತಿಯಿದೆ. ಇವನನ್ನು ಅಂಭೋಜರಾಜನ ತಮ್ಮನ ಹೆಣ್ಣುಮಕ್ಕಳು ಸಾಕಿ – ಸಲುಹಿ – ದೊಡ್ಡವನನ್ನಾಗಿ ಮಾಡಿದವರು. ಅಂಭೋಜರಾಜನ ಮಗಳು ‘ದಾನಸಾಲಮ್ಮ ದೇವಿ’ಯನ್ನು ಶುಕ್ಲಮಲ್ಲಿನಾಯಕ ವಿವಾಹವಾಗಿದ್ದ. ಕಲಿಯುಗದ ಶುಕ್ಲಮಲ್ಲಿನಾಯಕನ ಗೋತ್ರದಲ್ಲಿ ಯರಮಂಚಿನಾಯಕ ಜನಿಸಿದ. ಮೂರು ನೂರು ಸಾವಿರ ಬೇಡರನ್ನು ಒಂದುಗೂಡಿಸಿ ಬೇಡರ ದೊರೆಯನ್ನಾಗಿ ಮಾಡಿದರು. ಈ ಯರಮಂಚಿನಾಯಕನ ಚಿಕ್ಕಪ್ಪನ ಮಗನೇ ಕೋರಮಲ್ಲಿನಾಯಕ.

ಕೋರ‍್ಲಮಲ್ಲಿನಾಯಕ ನಡುಗಡ್ಡೆ ಪ್ರದೇಶದ ಕಕ್ಕಲಬೆಂಚ, ಕಾರಚೆರವು ಕಾವಲುಗಳ (ಹುಲ್ಲುಗಾವಲು) ರೊಪ್ಪಗಳನ್ನು ಕಟ್ಟಿಕೊಂಡು ಮುತ್ತಿಗಾರರ (ದೇವರ) ಎತ್ತುಗಳನ್ನು ಸಲುಹುತ್ತ ಜೀವನ ಮಾಡುತ್ತಿದ್ದರು. ಇವನಿಗೆ ‘ಬಾಳೆಪಟ್ಟಮ್ಮ’ ಎಂಬ ಹೆಂಡತಿಯೂ ಮತ್ತು ಪಚ್ಚಿಪದಿಪಾಲಮ್ಮ ಎಂಬ ತಂಗಿಯೂ ಇದ್ದರು. ಪಚ್ಚಪದಿ ಪಾಲಮ್ಮ ಬೇಡರಲ್ಲಿ ಅಪೂರ್ವ ಸುಂದರಿಯಾಗಿದ್ದಳು. ಇವಳ ಕಮಲದಂಥ ಮುಖ, ಅರಳಿದ ಕಣ್ಣುಗಳು ಉಬ್ಬಿದ ಎದೆ ಹೀಗೆ ಆಕರ್ಷಕವಾದ ಸೌಂದರ್ಯ ಇವಳಲ್ಲಿತ್ತು. ಅಣ್ಣ ಕೋರ‍್ಲಮಲ್ಲಿನಾಯಕ ಹಗಲಿರುಳು ಇವಳ ವಿವಾಹದ ಬಗ್ಗೆ ಚಿಂತಿಸುತ್ತಿದ್ದ. ಒಮ್ಮೆ ಇವಳು ನಾರು ಸೀರೆ ಮರದನಾರಿನ ಪಟ್ಟೆಗಳನ್ನು ಎದೆಗಳಿಗೆ ಕಟ್ಟಿಕೊಂಡಿದ್ದಳು. ಕಾಡಿನಲ್ಲಿ ದೊರೆತ ಮಣಿಗಳ ಸರಗಳನ್ನು ಹಾಕಿಕೊಂಡು ಹಣೆಗೆ ಪಟ್ಟಿಕಟ್ಟಿಕೊಂಡು ರಂಗುರಂಗಿನ ಗರಿಗಳನ್ನು ಮುಡಿದು ಕೊಂಡು ಮಣ್ಣಿನ ಕೊಡಹೊತ್ತು, ಯೌವ್ವನದ ಮೈಯಾರದ ನಡಿಗೆಯಲ್ಲಿ ‘ಕಾರಚೆರುವು’ ಹಳ್ಳಕ್ಕೆ ನೀರು ತರಲು ಹೋದಳು. ಆ ನೀರಿನಲ್ಲಿ ಕಾಲುಗಳನ್ನು ಚಾಚಿಕೊಂಡು ಆಟವಾಡುತ್ತಾ ಕೊಡಕ್ಕೆ ನೀರು ತುಂಬುತ್ತಿದ್ದಳು. ದಂಡುದಳದೊಂದಿಗೆ ಬೇಟೆಯಾಡುತ್ತಾ ಬಾಯಾರಿಕೆಯಿಂದ ಅಲ್ಲಿಗೆ ಬಂದಿದ್ದ ಕ್ಯಾಸಾಪುರದ ಕ್ಯಾಸನೇನು ಎಂಬ ಬೇಡರ ದೊರೆ ಇವಳನ್ನು ನೋಡಿದ. ಬಿಸಿಲಲ್ಲಿ ಬೇಟೆಗಾಗಿ ಕಾಡೆಲ್ಲ ಅಲೆದು ಬೇಸತ್ತು ದಣಿದಿದ್ದವನು ಪಾಲಮ್ಮನ ವಿನೋದದಿಂದ ಅದೆಲ್ಲವನ್ನು ಅವನು ಮೈಮರೆತ. ಈ ಕಾಡ ಬೆಡಗಿಯನ್ನು ಒಲಿಸಿಕೊಳ್ಳಲು ಏನೆಲ್ಲಾ ತಂತ್ರವನ್ನು ಮಾಡಿದ. ಕೊನೆಗೆ ತನ್ನ ದಂಡು – ದಳಕ್ಕೆ ಅವಳನ್ನು ಅಪಹರಿಸುವಂತೆ ಆದೇಶಿಸಿದ. ಅದರಂತೆ ಅವಳ ಕಿರುಚಾಟ, ರಂಪವನ್ನು ಲೆಕ್ಕಿಸದೆ ಬಾಚಿ ತಬ್ಬಿಕೊಂಡು ಪಲಾಯನ ಮಾಡಿದರು. ತನ್ನೂರಾದ ಕ್ಯಾಸಾಪುರದಲ್ಲಿ ತುರ್ತಾಗಿ ಪಾಲಮ್ಮನನ್ನು ಮದುವೆ ಮಾಡಿಕೊಂಡ. ಆ ಗ್ರಾಮದ ಜನರಿಗೆ ಎಲ್ಲಿಲ್ಲದ ಆನಂದ ಮತ್ತು ಆತಂಕಗಳೆರಡು ಕಾದಿದ್ದವು.

ಕೋರ‍್ಲಮಲ್ಲಿನಾಯಕ, ಬಾಳೆಪಟ್ಟಮ್ಮ ಸೇರಿ ಪಾಲಮ್ಮನು ಮನೆಗೆ ಬಾರದೆ ಇರುವುದನ್ನು ಕಂಡು ನದಿಯ ಕಡೆ ಹುಡುಕಲು ಹೋದರು. ಎಲ್ಲಿಯೂ ಕಾಣಲಿಲ್ಲ ಎಂದಾಗ ಇನ್ನೇನು ಹಿಂತಿರುಗಬೇಕು ಆಗ ದಡದಲ್ಲಿ ಒಡೆದು ಬಿದ್ದಿದ್ದ ಕೊಡದ ಚೂರುಗಳು ಕಂಡವು. ದಂಪತಿಗಳಿಬ್ಬರೂ ಪರಿಪರಿಯಾಗಿ ಚಿಂತಿಸುತ್ತಾ ಮುನ್ನಡೆದರು. ಯಾರಾದರೂ ಅಪಹರಿಸಿದರೋ ಅಥವಾ ದುಷ್ಟಪ್ರಾಣಿಯಿಂದ ಹತವಾದಳೋ ಎಂದು ಹುಡುಕಲು ಮುಂದಾದರು. ಪಾಲಮ್ಮನ ಬಗ್ಗೆ ಯಾರನ್ನು ವಿಚಾರಿಸಿದಾಗಲೂ ಆ ಹುಡುಗಿಯನ್ನು ಅಪಹರಿಸಿ ಮದುವೆಯಾದುದನ್ನು ತಿಳಿಸಿದರು. ಕೂಡಲೇ ದಂಪತಿಗಳಿಬ್ಬರು ಕ್ಯಾಸಾಪುರದ ಕ್ಯಾಸನೋನನ್ನು ಭೇಟಿಮಾಡಿ ನಡೆದ ಘಟನೆ ಬಗ್ಗೆ ಸಮಾಲೋಚಿಸಿ ತನ್ನ ತಂಗಿ ಯೋಗಕ್ಷೇಮ ಮೊದಲಿಗಿಂತಲೂ ಉತ್ತಮವಾಗಿರಬೇಕೆಂದು ತಿಳಿಸಿ, ಅವಳಿಗೆ ಆಶೀರ್ವಾದ ಹೇಳಿಬಂದರು.

ಕೋರ‍್ಲಮಲ್ಲಿನಾಯಕ ತನ್ನ ತಂಗಿಯ ಮದುವೆಯನ್ನು ಸಂಪ್ರದಾಯದಂತೆ ಮಾಡಲಾಗಲಿಲ್ಲ ಎಂದು ಜಿಗುಪ್ಸೆಪಟ್ಟುಕೊಂಡ. ಅದು ಯಾರಿಗೂ ತಿಳಿಯದಂತೆ ರಾತ್ರೋರಾತ್ರಿ ವಿವಾಹವಾದ ಸಂಗತಿ ಎಲ್ಲರನ್ನು ದೀಗ್ಭ್ರಮೆಗೊಳಿಸಿತ್ತು. ಹೀಗೆ ಇರುವಾಗ ಬಾಳೆದಪಟ್ಟಮ್ಮ ಗರ್ಭವತಿಯಾಗಿದ್ದು, ಗಂಡನಿಗೆ ಚೇತನವನ್ನು ತುಂಬುತ್ತಿದ್ದಳು. ಅವನು ಸಹಾ ಹೆಂಡತಿ ಹೆರಿಗೆಯ ನೆರವಿಗಾಗಿ ತಂಗಿ ಪಾಲಮ್ಮನನ್ನು ಕರೆತರಲು ಕೋರ‍್ಲಮಲ್ಲಿನಾಯಕ ಕ್ಯಾಸಾಪುರಕ್ಕೆ ಹೋದನು.

ಪಾಲಮ್ಮನನ್ನು ಕರೆತರಲು ಕ್ಯಾಸನೋನು ಜಾಗರೂಕತೆಯಿಂದ ಸಾಕತೊಡಗಿದ್ದನು. ಇವಳಿಗೆ ಯಾವುದರಲ್ಲಿಯೂ ಕೊರತೆ ಮಾಡಿರಲಿಲ್ಲ. ಇವಳಿಗಿದ್ದ ಏಕೈಕ ಕೊರತೆಯೆಂದರೆ ತನ್ನ ಪ್ರೀತಿಯ ಅಣ್ಣ – ಅತ್ತಿಗೆಯಿಂದ ಅಕ್ಕಿಕಾಳು ಹಾಕಿಸಿಕೊಳ್ಳದೇ ಇರುವುದು. ಇದನ್ನು ಬಿಟ್ಟರೆ ಮತ್ತೇನು ಕಾಡಿಲ್ಲ. ಒಮ್ಮೆ ಕೋರ‍್ಲಮಲ್ಲಿನಾಯಕ ತಂಗಿಯನ್ನು ಕರೆಯಲಿಕ್ಕೆ ಬಂದಾಗ, ಅತ್ತಿಗೆ ಗರ್ಭಿಣಿಯಾದ ಸಂಗತಿ ತಿಳಿದು ಸಂತೋಷಗೊಂಡಳು. ಅತ್ತಿಗೆಯ ಹೊಟ್ಟೆಯಲ್ಲಿ ಹುಟ್ಟುವ ಮಗುವಿನ ಬಗ್ಗೆ ನಾನಾ ರೀತಿಯ ಕನಸು ಕಂಡಳು. ಕೋರ‍್ಲಮಲ್ಲಿನಾಯಕನು ಕ್ಯಾಸನೋನನ್ನು ಕಂಡು ತನ್ನ ತಂಗಿಯನ್ನು ಹೆಂಡತಿಯ ಹೆರಿಗೆಗೆ ನೆರವಾಗಲು ಕಳುಹಿಸುವಂತೆ ಕೇಳಿಕೊಂಡನು. ನಾಯಕನಿಗೆ ಕ್ಯಾಸನೋನು ಮಾವಯ್ಯ ಇಲ್ಲಿಯವರೆಗೆ ನಿನ್ನ ತಂಗಿ ಅಂದರೆ ಈಗ ನನ್ನ ಹೆಂಡತಿ ಈ ಕಾಡುಮೇಡಿನಲ್ಲಿ ಕಷ್ಟಪ್ಟು ಗಡ್ಡೆಗೆಣಸು, ಹಣ್ಣು – ಹಂಪಲುಗಳನ್ನು ತಿಂದುನಾರು ಸೀರೆಯನ್ನುಟ್ಟು ಬಾಳಿದ್ದಾಳೆ. ಪುನಃ ಅದೇ ಕಾಡಿನ ಅದೇ ಬದುಕು ಅವಳಿಗೆ ಬೇಡ ಎಂದನು. ಅವಳು ಈಗ ಸುಖ, ನೆಮ್ಮದಿಯಿಂದ ಇದ್ದಾಳೆ. ನಿಮ್ಮಲ್ಲಿಗೆ ಬಂದರೆ ಏನಾದರೂ ತೊಂದರೆ ಆಗಬಹುದು ಎಂದು ತಿರಸ್ಕರಿಸಿದ. ಬಹುಶಃ ಕ್ಯಾಸನೋನು ನಾಗರೀಕತೆಯ ಪ್ರಭಾವಕ್ಕೆ ಒಳಪಟ್ಟಂತೆ ಕಂಡುಬರುತ್ತದೆ. ಇವರಿಬ್ಬರಾಡುವ ಮಾತುಗಳನ್ನು ಬಾಗಿಲಲ್ಲಿ ನಿಂತ ಪಾಲಮ್ಮನು ಸಹಾ ಆಲಿಸುತ್ತಿದ್ದಳು. ಅಣ್ಣ ತವರಿಗೆ ಕರೆಯಲು ಬಂದಿದ್ದಾನೆಂದು ಪೂರ್ವವೃತ್ತಾಂತವನ್ನು ಸ್ಮರಿಸಿಕೊಂಡಳು. ಕಾಡಿನ ಜೀವನಕ್ಕೂ ಈಗಿನ ಜೀವನಕ್ಕೂ ತುಲನೆ ಮಾಡಿದ್ದಳು. ದಟ್ಟವಾದ ಅರಣ್ಯ, ಸರೋವರ, ಮರ, ಗಿಡ, ಹಕ್ಕಿಗಳು, ನೀರಲ್ಲಿನ ನೀರುಕೋಳಿ, ಬಾತುಕೋಳಿ, ಮೀನುಗಳು, ಬಯಲಿನಲ್ಲಿನ ಮೊಗಳು, ಚಿಗರೆಗಳು ಇತರ ಎಲ್ಲಾ ಪ್ರಾಣಿಗಳು ನೆನಪಿನಲ್ಲಿ ಸುಳಿದವು. ತನ್ನ ಗಂಡ ತವರಿನ ಬಗ್ಗೆ ಹೀಯ್ಯಾಳಿಸಿದ್ದುದನ್ನು ಕೇಳಿ ದುಃಖಪಟ್ಟಳು.

ಕ್ಯಾಸನೋನನ್ನು ನಾನಾ ವಿಧವಾಗಿ ಬೇಡಿಕೊಂಡರೂ ಕೋರ‍್ಲಮಲ್ಲಿನಾಯಕನಿಗೆ ಫಲ ಸಿಗಲಿಲ್ಲ. ಅವನು ಒಪ್ಪಲೇ ಇಲ್ಲ. ಅತೀ ದುಃಖಿತನಾಗಿ ಹಿಂತುರುಗಿದ ನಾಯಕ ಕಾಡಿನಲ್ಲಿ ಅಳುತ್ತಾ ಹೋಗುತ್ತಿದ್ದನು. ದಾರಿಯ ಮಧ್ಯದಲ್ಲಿ ಕ್ಯಸಾಪುರದ ಗಳಗಂಟಗಾದ ಶೆಟ್ಟಿ ಎಂಬುವರು ಮಲ್ಲಿನಾಯಕನ ಗೋಳನ್ನು ತಾಳಲಾರದೆ ವಿಚಾರಿಸದನು. ಇದ್ದ ವಿಷಯ, ನಡೆದ ಪ್ರಸಂಗವನ್ನು ನಾಯಕ ತಿಳಿಸಿದನು. ಹೆರಿಗೆ ಮಾಡಲು ಹೆಣ್ಣೇ ನೆರವಿಗೆಬೇಕು. ಹೆಂಡತಿ ಒಬ್ಬಳೇ ಕಾಡಲ್ಲಿರುವುದರಿಂದ ತನಗೆ ಯಾರ ನೆರವೂ ಇಲ್ಲ. ಎಂದೆಲ್ಲಾ ಚಿಂತಿಸಿ ವಿವರಿಸಿದ. ಈ ವಿಷಯ ಕೇಳಿದ ಗಂಟಾ ಗಾದಶೆಟ್ಟಿಗೆ ದುಃಖ ಉಕ್ಕಿಬಂತು. ಕ್ಯಾಸನೋನನ್ನು ನಿಂದಿಸಿದನಲ್ಲದೆ, ಒಬ್ಬನ ಕಷ್ಟವನ್ನು ಅರಿಯದ ವ್ಯಕ್ತಿ, ಸುಖ – ಸಂಪತ್ತಿನಿಂದ ಧೀಮಾಕು ವರ್ತನೆಯನ್ನು ಖಂಡಿಸಿದ. ನಾಯಕನನ್ನು ಹಿಂದಕ್ಕೆ ಕರೆದುಕೊಂಡುಬಂದನು. ಕಾಡಿನಲ್ಲಿದ್ದ ಹುಡುಗಿಯನ್ನು ಅಪಹರಿಸಿ ತಂದು ಮದುವೆ ಮಾಡಿಕೊಂಡನಲ್ಲದೆ, ಇಂಥಾ ಹೀನ ಮನಸ್ಸಿನ ಲಕ್ಷಣಗಳನ್ನು ಪ್ರದರ್ಶಿಸುವುದು ಸರಿಯಲ್ಲ ಎಂದನು.

ಕ್ಯಾಸನೋನು ತನ್ನ ಹೆಂಡತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಅವಳನ್ನು ಕಳುಹಿಸಿಕೊಡದೆ ಇರಲಿಕ್ಕೆ ಕಾರಣಗಳೆಂದರೆ: ಮುಳ್ಳುಮೊನೆಯಷ್ಟು ಕೊರತೆ ಮಾಡಬಾರದು. ಕಾಡಿನ ಗೆಡ್ಡೆಗೆಣಸು ತಿಂದು ಅವಳ ಸೌಂದರ್ಯ ವಿಕಾರವಾಗಬಹುದು. ಅತ್ತಿಗೆಗೆ ಹೆರಿಗೆಯಾದ ಮನೆಯ ಕೆಲಸವನ್ನು ಇವಳೇ ನಿರ್ವಹಿಸಬೇಕಾಗುತ್ತದೆ. ನೀರು ತರಬೇಕು, ಮರಗಿಡಗಳಲ್ಲಿ ಕಟ್ಟಿಗೆ ಆರಿಸಿಕೊಂಡು ಬರಬೇಕು. ಕಟ್ಟಿಗೆ ಆರಿಸುವಾಗ ತನ್ನ ಮಡದಿಗೆ ಮುಳ್ಳು ಚುಚ್ಚಬಹುದು. ನೀರು ತರುವಾಗ ಎಲ್ಲಾದರೂ ಎಡವಿಬಿದ್ದು ಏನಾದರೂ ತೊಂದರೆಯಾದರೆ, ನನ್ನ ಹೆಂಡತಿಯ ರೂಪ ಹಾಳಾಗುತ್ತದೆ ಎಂದು ಕಳುಹಿಸಲು ಹಿಂದೆಮುಂದೆ ನೋಡಿದ.

ಕೋರ‍್ಲಮಲ್ಲಿನಾಯಕ ಮತ್ತು ಗಳಗಂಟಗಾದ್ದ ಶೆಟ್ಟಿ ಸೇರಿ ಬಂದಾಗ ಕ್ಯಾಸನೋನನಿಗೆ ಆತಂಕವಾಯಿತು. ಶೆಟ್ಟಿಯು ಈ ಗ್ರಾಮದ ಒಬ್ಬ ಧನಿಕ ಶ್ರೇಷ್ಠನೂ, ನ್ಯಾಯತೀರ್ಮಾನಗಳಲ್ಲಿ ನಿಷ್ಪಕ್ಷಪಾತವಾಗಿ ವರ್ತಿಸುತ್ತಿದ್ದನು. ಶೆಟ್ಟಿಯನ್ನು ಕ್ಯಾಸೋನೋನು ಸ್ವಾಗತಿಸಿದನು. ಶೆಟ್ಟಿ ನಾಯಕರಿಬ್ಬರು ಮನೆಯನ್ನು ಪ್ರವೇಶಿಸಿದಂತೆಯೇ ಕ್ಯಾಸನೋನು ವಿಷಯಕ್ಕೆ ಬಂದನು. ಗಾದಶೆಟ್ಟಿಯವರೇ ನನ್ನ ಹೆಂಡತಿಯನ್ನು ಕರೆಯಲು ಬಂದಿದ್ದ ಮಾವನಿಗೆ ಕಳುಹಿಸಲು ಆಗುವುದಿಲ್ಲವೆಂದು ಹಿಂದಿರುಗುವಂತೆ ಕಳುಹಿಸಿದ್ದೆ. ನನ್ನ ಹೆಂಡತಿಯನ್ನು ಬಿಟ್ಟು ಇರಲಾರೆ, ಕಾಡಿನಲ್ಲಿ ಬೆಳೆದ ಅವಳು ಇಲ್ಲಿ ಸುಖವಾಗಿದ್ದಾಳೆ. ಅವಳಿಗೆ ಯಾವ ತೊಂದರೆ ಆಗಿಲ್ಲ. ಹೀಗಾಗಿ ಮುಂದೆಯು ಕಾಡಿನಿಂದ ಇತರ ದುಷ್ಟಪ್ರಾಣಿಗಳಿಂದ ಯಾವ ತೊಂದರೆಯು ಸಂಭವಿಸದಂತೆ ಇರಲಿ ಎಂದು ಕಳುಹಿಸಿಲ್ಲ ಎಂದನು.

ವಿಷಯ ತಿಳಿದ ಶೆಟ್ಟಿಗೆ ಹೆಂಡತಿಯ ಮೇಲಿನ ಪ್ರೀತ ಬಗ್ಗೆ ಆನಂದವಾಯಿತು. ಕೋರ‍್ಲಮಲ್ಲಿನಾಯಕನೂ ಸಹ ತಂಗಿಯ ಸ್ಥಿತಿ – ಗತಿ ಅರಿತು ಸಂತೋಷಪಟ್ಟನು. ಕ್ಯಾಸನೋನೆ ಹೆಣ್ಣಿನ ಜೀವನದಲ್ಲಿ ಹೆರಿಗೆ ಬರುವುದು ಕಂಕಟದ ರೀತಿಯಲ್ಲಿ ಇಂಥಾ ಸಂಕಷ್ಟದಲ್ಲಿ ಸಹಾಯ ಮಾಡಲಿಲ್ಲ ಎಂದಾಗ ಯಾವಾಗ ಮಾಡುವುದು ಎಂದು ಕೇಳಿದನು. ನವಮಾಸಗಳು ಹೊತ್ತ ಮಗು ಜನಿಸುವುದನ್ನು ನಾವು ಉಪಚರಿಸದೇ ಹೋದರೆ ಹೇಗೆ? ಕಾಡಿನಲ್ಲಿ ಬೇರ‍್ಯಾರು ಸಿಗುವುದಿಲ್ಲ. ನಿನ್ನ ಹೆಂಡತಿಯೂ ಮೂಲತಃ ಕಾಡಿನವಳು, ಕಾಡಿನಲ್ಲಿ ಆಗುವ ತೊಂದರೆಗಳನ್ನು ಅರಿತು ತವರುಮನೆಯೆಂದರೆ ಅವಳಿಗೂ ಆಸೆಯಿರುತ್ತೆ, ಮದುವೆಯಾದಾಗಿನಿಂದ ತವರುಮನೆಗೆ ಹೆಂಡತಿಯನ್ನು ಕಳುಹಿಸಿಲ್ಲ. ಅವಳ ಅತ್ತಿಗೆಯ ಹೆರಿಗೆಗಾದರೂ ಕಳುಹಿಸು ಎಂದನು.
ಶೆಟ್ಟಿಯವರು ಕೇಳಿದ್ದಕ್ಕೆ ಕ್ಯಾಸನೋನು ಇಷ್ಟವಿಲ್ಲದಿದ್ದರೂ ಗ್ರಾಮದ ಹಿರಿಯರು ಎನ್ನುವುದಕ್ಕೆ ಬೆಲೆಕೊಟ್ಟು ಕೆಲವು ಷರತ್ತುಗಳೊಂದಿಗೆ ಕಳುಹಿಸಲು ಒಪ್ಪಿದನು. ಈ ಜೀವನ ಬೇರೆ, ಕಾಡಿನ ಜೀವನ ಬೇರೆ ಏನಾದರೂ ತೊಂದರೆ ಸಂಭವಿಸಿದರೆ ಅದಕ್ಕೆ ಹೊಣೆಗಾರರು ಯಾರು? ಎಂದು ನಿಷ್ಠುರವಾಗಿ ನುಡಿದನು. ಆಗಲಿ ನಿನ್ನ ಹೆಂಡತಿಗೆ ತೊಂದರೆ ಸಂಭವಿಸಿದರೆ ಅದಕ್ಕೆ ಗಳಗಂಟಗಾದ ಶೆಟ್ಟಿಯು ನಾನೇ ಹೊಣೆಗಾರನೆಂದು ಒಪ್ಪಿಕೊಂಡನು. ಕ್ಯಾಸನೋನು ಶೆಟ್ಟಿಯವರೇ ನನ್ನ ಹೆಂಡತಿಗೆ ಆಕಸ್ಮಿಕವಾಗಿ ತೊಂದರೆಯಾದರೆ, ನೀವು ನನ್ನ ಮನೆಯಲ್ಲಿ ನಿಮ್ಮ ಜೀವ ಇರುವತನಕ ಜೀತದಾಳಾಗಿ ದುಡಿಯಬೇಕು. ಈ ನಿಬಂಧನೆಗೆ ನೀವು ಒಪ್ಪಿದರೆ ಆಯ್ತು ಮತ್ತೆ, ಹೆರಿಗೆ ಆದ ಕೂಡಲೆ ಮರಳಿ ಕರೆದುಕೊಂಡು ಬರಬೇಕೆಂದು ತಿಳಿಸಿದನು.

ಹೀಗೆ ಕಡ್ಡಾಯವಾಗಿ ನಿರ್ಬಂದ ವಿಧಿಸಿದರೆ ಶೆಟ್ಟಿಯು ಒಪ್ಪುವುದಿಲ್ಲವೆಂದು ಅರಿತು ಹೆಂಡತಿಯು ಹೋಗುವುದಿಲ್ಲವೆಂಬ ಚಾಣಾಕ್ಷತನವನ್ನು ತೋರಿಸಿದನು. ಗಳಗಂಟಗಾದ ಶೆಟ್ಟಿಗೆ ಇವನೆಂಥ ಮೂರ್ಖ, ಅವಿವೇಕಿ, ತನ್ನ ಹೆಂಡತಿಯನ್ನು ತವರಿಗೆ ಕಳುಹಿಸಲು ನೀತಿ, ನಿರ್ಬಂಧ, ಷರತ್ತುಗಳೊಡನೆ ಪಂಥವಾಡುತ್ತಾನಲ್ಲವೆಂದು, ಹೆಂಡತಿಯನ್ನು ಬಿಟ್ಟಿರಲಾರದೆ ಈ ರೀತಿಯ ನಿಯಮವನ್ನು ಪಾಲಿಸುವುದು ಕಂಡು ಆಶ್ಚರ್ಯಪಟ್ಟ. ಇವನು ಹೇಳಿದ ಎಲ್ಲಾ ನಿಬಂಧನೆಗೆ ಒಪ್ಪಿಕೊಂಡು, ಕಾಡು ಮನುಷ್ಯನ ಕಷ್ಟವನ್ನು ಪರಿಹರಿಸೋಣ ಎಂದು ಮನದಲ್ಲಿ ತೀರ್ಮಾನಿಸಿಕೊಂಡು ಅಯ್ಯ, ಕ್ಯಾಸನೋನೇ ನಿನ್ನ ನಿರ್ಬಂಧನೆಗೆ ತಾನು ಒಪ್ಪಿರುತ್ತೇನೆ. ತವರು ಮನೆಗೋಗಿ ಮರಳಿ ಬರುವುದರೊಳಗೆ ನಿನ್ನ ಹೆಂಡತಿಯ ಸೌಂದರ್ಯದ ತೊಂದರೆಗೆ ನಾನು ನಿನ್ನ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತೇನೆ. ಆ ಸೂರ್ಯ – ಚಂದ್ರಾದಿಗಳಾಣೆ ಸತ್ಯ ಎನ್ನುತ್ತಾನೆ. ನಿನ್ನ ಹೆಂಡತಿಯನ್ನು ಕಳುಹಿಸಿಕೊಡು ಎಂದು ಹೇಳಿದನು.

ಮೇಲಿನ ಸರ್ವನಿಬಂಧನೆಗಳನ್ನು ಕೇಳಿ ಮಲ್ಲಿನಾಯಕನಿಗೆ ಅಲ್ಲೋಲ, ಕಲ್ಲೋಲವಾಗಿ ಭಯಂಕರವಾದ ಪಶ್ಚಾತ್ತಾಪಕ್ಕೀಡಾದನು. ಶೆಟ್ಟಿಯು ಸೂರ್ಯ ಚಂದ್ರರ ಮೇಲೆ ಆಣೆ ಇಟ್ಟು ಮಾತನಾಡಿದಿರಲ್ಲ. ನಮ್ಮ ಕಷ್ಟಕ್ಕೆ ನೀವು ಹೊಣೆಗಾರರಾಗುವುದು ಬೇಡಸ್ವಾಮಿ ಎಂದನು. ನಮ್ಮ ನಮ್ಮ ಕಷ್ಟವನ್ನು ಪರಿಹರಿಸಿಕೊಳ್ಳುತ್ತೇವೆ. ನಮ್ಮಿಂದ ನಿಮಗೆ ತೊಂದರೆ ಬೇಡ. ನೀವು ಜಿತದಾಳು ಆಗುವುದು ಬೇಡ ಎಂದನು. ಕೋರ‍್ಲಮಲ್ಲಿನಾಯಕನನ್ನು ಹೆರಿಗೆ ಆದನಂತರ ಕರೆದುಕೊಂಡು ಬನ್ನಿ ಎಂದು ಪಾಲಮ್ಮನನ್ನು ಹೊರಡಿಸಿ ಮಲ್ಲಿನಾಯಕನ ಜೊತೆಯಲ್ಲಿ ಕಳುಹಿಸಿದನು.

ಪಾಪನಾಯಕನ ಜನನ
ತಂಗಿಯನ್ನು ಕರೆದುಕೊಂಡು ತನ್ನ ಕುಟೀರಕ್ಕೆ ನಾಯಕ ಬಂದನು. ಅವರು ಬಂದ ಎರಡು ಮೂರು ದಿನಗಳಲ್ಲಿ ಬಾಳೆಪಟ್ಟಮ್ಮನಿಗೆ ಹೆರಿಗೆನೋವು ಕಾಣಿಸಿಕೊಂಡಿತು. ಪಾಲಮ್ಮ ಬಾಳೆಪಟ್ಟಮ್ಮನ ಮುಂದೆ ಕುಳಿತು, ಹೆರಿಗೆ ಮಾಡಿಸುವ ಜವಾಬ್ದಾರಿ ಹೊತ್ತಳು. ಹೆರಿಗೆಗೆ ಎಲ್ಲಾ ಸಿದ್ಧತೆಗಳು ನಡೆದವು. ಹೆರಿಗೆಯ ಸಂದರ್ಭದಲ್ಲಿ ವಿಚಿತ್ರಕಾರಿ ಘಟನೆ ಸಂಭವಿಸಿತು. ಪಾಲಮ್ಮನು ಅತ್ತಿಗೆಯ ಹೆರಿಗೆಗೆ ನೆರವಾಗಲು ಮುಂದೆ ಕುಳಿತಿದ್ದಾಗ, ತಾಯಿಯ ಗರ್ಭದಿಂದ ಹೊರಬರುತ್ತಿರುವಾಗಲೇ ಪುಟ್ಟ ಮಗು ಕಾಲಿನಿಂದ ಜಾಡಿಸಿ ಪಾಲಮ್ಮನನ್ನು (ಅತ್ತೆ) ಹೊದೆಯಲು ಅವಳ ಮುಂದಿನ ಒಂದು ಹಲ್ಲು ಮುರಿದು ನೆಲಕ್ಕೆ ಬಿತ್ತು. ಹುಟ್ಟಿದ್ದು ಗಂಡುಮಗುವೇ ಆದರೂ ನಡೆದ ಘಟನೆ ಸಂಕಷ್ಟಕ್ಕೀಡು ಮಾಡಿತು.[1]

ಈ ಘಟನೆಯಿಂದ ಬಾಳೆಪಟ್ಟಮ್ಮ ಗಾಬರಿಗೊಂಡಳು. ಹುಟ್ಟಿದ ಮಗು ಹಲ್ಲುಮುರಿದಂತೆ ಒಡೆ (ಹೊದೆ) ಯುವುದು ಸಾಧ್ಯವೇ? ಎಂದು ಚಿಂತಾಕ್ರಾಂತಳಾದಳು. ಅವನ ಶಕ್ತಿ, ಧೈರ್ಯ, ಪರಾಕ್ರಮವನ್ನು ಆಗಲೇ ನಿರ್ಧರಿಸಿಕೊಂಡಳು. ಆದರೂ ಮೂಢನಂಬಿಕೆಯಿಂದ ಅವಳು ಹುಟ್ಟಿದ ಮಗು ಕಾಲಿನಿಂದ ಒಡೆಯುವುದು ಎಂದರೇನು? ಹಲ್ಲು ಮುರಿದು ಬೀಳುವುದು ಎಂದರೇನು? ಮಾನವ ರೂಪಿಯ ಮಗುವಿಗೆ ಆಶಕ್ತಿ ಬರಲು ಹೇಗೆ ಸಾಧ್ಯ. ಮಾನವ ಮಗುವಲ್ಲ. ಯಾವುದೋ ಪಿಶಾಚಿಯೊ ಇರುವ ನಾನಾ ರೂಪವಾಗಿ ಗರ್ಭದಲ್ಲಿ ಜನಿಸಿದೆ. ದೊಡ್ಡದಾದ ಮೇಲೆ ಈ ಮಗು ಏನು ಮಾಡುತ್ತದೆಯೊ ತಿಳಿದವರಾರು. ಇದು ಭೂತವೋ ಇರಬೇಕು. ನಮಗೆ ಬೇಡ ಎಂದು ನಡೆದ ಪ್ರಸಮಗವನ್ನು ಮಲ್ಲಿನಾಯಕನಿಗೆ ತಿಳಿಸಿದಳು. ಅಲ್ಲದೆ ಆಕೆ ಗೋಳಾಡುತ್ತಾ ಯಾವುದೇ ತೊಂದರೆಯನ್ನು ಮಾಡುವುದಿಲ್ಲ ಎಂದು ಕರೆತಂದಿರಿ, ಈಗ ನೋಡಿದರೆ ಹೀಗೆ ಆಯಿತು. ಕ್ಯಾಸನೋನು ಸುಮ್ಮನೆ ಬಿಡುತ್ತಾನೆಯೇ? ಸೆಟ್ಟಿಯ ಗತಿಯೇನು? ನಮ್ಮ ಗತಿ ಏನು? ಪಾಲಮ್ಮನ ಗತಿಯೇನು? ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ತೊಂದರೆಯಾಗಿದೆ ಎಂದಳು.

ಕೋರ‍್ಲಮಲ್ಲಿನಾಯಕನಿಗೆ ಬಾಳೆಪಟ್ಟಮ್ಮ ಹೇಳಿದ್ದು ನಿಜ ಅನ್ನಿಸಿತು. ತನ್ನ ಮಗಮನೆಗೆ ಪಾಲಮ್ಮನಿಗೆ ನಿರಪರಾದಿ ಶೆಟ್ಟಿಗೆ ತೊಂದರೆ ಕೊಟ್ಟಿದ್ದಾನೆ. ಆದ್ದರಿಂದ ಹೇಗಾದರೂ ಮಾಡಿ ಈ ಮಗುವನ್ನು ಕಾಡುಜನರಾಗಿದ್ದರಿಂದ ತೊಲಗಿಸಬೇಕೆಂದು ಯೋಚಿಸಿದ. ಈ ಮಗುವನ್ನು ಭೂತವೆಂದು ನಂಬುವುದು ಸಹಜವಾದದು. ಏಕೆಂದರೆ ಅಸಾಧಾರಣ ಶಕ್ತಿಹೊಂದಿದ ಮಗುವಿನ ಸಾಮರ್ಥ್ಯವನ್ನು ಏನೆಂದು ಬಣ್ಣಿಸಲು ಆಗಲಿಲ್ಲ.

ಹುಟ್ಟಿದ ಮಗು ಯಾವುದೇ ಆಗಿರಲಿ. ನಾವು ಭೂತ, ಪಿಶಾಚಿ ಎನ್ನುವುದು ಬೇಡ. ಶಿಶುಹತ್ಯೆ ಮಾಡಿ ಪಾಪ ಕಟ್ಟಿಕೊಳ್ಳುವುದು ಯೋಗ್ಯವಲ್ಲ. ಎಲ್ಲಾದರೂ ಒಂದು ಗಿಡದ ಕೆಳಗೆ ಮಲಗಿಸಿ, ನಾವು ಬೇರೆಡೆಗೆ ಪಲಾಯನ ಮಾಡೋಣ ಎಂದು ಯೋಚಿಸಿದರು. ಬಾಳೆದಪಟ್ಟಮ್ಮ, ಪಾಲಮ್ಮ ಮತ್ತು ಕೋರ‍್ಲಮಲ್ಲಿನಾಯಕ ಸೇರಿ, ಮಗುವನ್ನು ಎತ್ತಿಕೊಂಡು ನದಿದಂಡೆ ಬಳಿ ಹೋಗಿ, ಗಿಡ ಪೊದೆಗಳ ನೆರಳಲ್ಲಿ ಇಟ್ಟು ಕಂಬಳಿಕೋರೆಯನ್ನು ಸುತ್ತಿ ಮಲಗಿಸಿದರು.

ಅನಾಥ ಮಗುವಿನ ನಾಮಕರಣ : ಶಿವಪಾರ್ವತಿಯರಿಂದ ಆಶೀರ್ವಾದ
ಕೋರ‍್ಲಮಲ್ಲಿನಾಯಕ ತಾನು ಹೊದ್ದುಕೊಂಡಿದ್ದ ಕಂಬಳಿ ಕೋರಿಯಲ್ಲಿ ಮಗುವನ್ನು ಸುತ್ತಿ ಒಂದು ಗಿಡದ ನೆರಳಲ್ಲಿ ಎಲೆಯ ಮೇಲೆ ಮಲಗಿಸಿ ಹೊರಟು ಹೋದನಂತರ ನಿಸರ್ಗದ ಮಡಿಲಲ್ಲಿ ಮಗುವಿನ ಆಕ್ರಂದನವನ್ನು ಪ್ರಕೃತಿ ಅನುಭವಿಸಿತು.

ಇದೇ ಸಮಯಕ್ಕೆ ಸರಿಯಾಗಿ ಜಗತ್ತಿನ ರಕ್ಷಕರೂ, ಕೈಲಾಸವಾಣಿಗಳೂ ಆದ ಪಾರ್ವತಿಪರಮೇಶ್ವರರು ಸೃಷ್ಟಿಯ ಸ್ಥಿತಿ – ಗತಿಗಳನ್ನು ಸಮೀಕ್ಷಿಸಲು ನಂದಿವಾಹನರಾಗಿ ಆಕಾಶದಲ್ಲಿ ಬರುತ್ತಿದ್ದರು. ಬರುವ ದಾರಿಯಲ್ಲಿ ಮಗುವಿನ ಅಳಲಿನ ಆಕ್ರಂದನವು ಪಾರ್ವತಿಯ ಕಿವಿಗೆ ಬಿತ್ತು. ಕರುಣಾಮಯಿಯಾದ ಪಾರ್ವತಿಯು ಮಗುವಿನ ಅಳಲನ್ನು ಕೇಳಿ ಶಿವದೇವನಿಗೆ, ಈ ದಟ್ಟವಾದ ಕಾಡಿನಲ್ಲಿ ಮಗುವಿನ ರೋದನ ಕೇಳಿಬರುತ್ತಿದೆ. ಇಲ್ಲಿ ಮಾನವನ ಸಂಚಾರವೇ ಇಲ್ಲದೆ, ಪ್ರಕೃತಿ ಬಿಕೋ ಎನ್ನುತ್ತಿತ್ತು. ಆದರೂ ಹೋದರು.

ಪಾರ್ವತಿಯ ಬೇಡಿಕೆಗೆ ಮನ್ನಿಸಿದ ಶಿವನು ಇಲ್ಲಿ ಕಾಡಿನ ವಾಸಿಗಳು ಜೀವನ ನಡೆಸುತ್ತಿದ್ದರು. ಅಲ್ಲಿ ಅವರ ಮಗು ಅಳುತ್ತಿರಬೇಕು. ಅವರ ತಂದೆತಾಯಿಗಳು ನೋಡಿಕೊಳ್ಳುತ್ತಾರೆ. ನಮಗೆ ಏತಕ್ಕೆ ಆ ಚಿಂತೆ ಎಂದರು. ದೇವಾ, ಆ ಮಗುವಿನ ಅಳಲು ಕೇಳಿದಾಗ ಕರಳು ಹಿಂಡಿದಂತೆ ಭಾಸವಾಗುತ್ತದೆ ಎಂದಳು. ಇಬ್ಬರು ಕೂಡಿ ಮಗುವನ್ನು ನೋಡಲು ಇಳಿದರು.
ದಟ್ಟವಾದ ಕಾಡಿನಲ್ಲಿ ಮಾನವರ ಸುಳಿವೇ ಇಲ್ಲ. ಎಂದಾಗ ಮನೆಮಠಗಳೆಲ್ಲಿ? ಪಶು – ಪ್ರಾಣಿಗಳೂ ಕಾಣುತ್ತಿರಲಿಲ್ಲ. ನಿರ್ಜನ ಪ್ರದೇಶದ ಗಿಡದ ನೆರಳಲ್ಲಿ ಎಲೆಯ ಮೇಲೆ ಇಟ್ಟಿರುವ ಮಗುವನ್ನು ಇಟ್ಟ ಹೆತ್ತವರೆಂಥ ಕಿರಾತಕರು. ದೇವ ಇಂಥಾ ಮಗುವನ್ನು ಬಿಟ್ಟು ಹೋದ ತಂದೆತಾಯಿಗಳೆಂಥ ಕರುಣಾಹೀನರು. ನಿರ್ದಯಿಗಳು. ಮಳೆ, ಬಿಸಿಲು, ಚಳಿಗೆ ಮಗುವಿನ ಸ್ಥಿತಿ ಏನಾಗಬೇಕೆಂದು ಪಾರ್ವತಿ ಚಿಂತಿಸಿದಳು. ಪರಮಾತ್ಮ ಚಳಿ – ಮಳೆ – ಬಿಸಿಲು, ಕಾಡು ಪ್ರಾಣಿಗಳಿಂದ ತೊಂದರೆ ಆಗದ ರೀತಿಯಲ್ಲಿ ರಕ್ಷಿಸಿ ಕಾಪಾಡು ದೇವ ಎಂದು ಸೆರಗೊಡ್ಡಿ ಬೇಡಿದಳು.

ಪಾರ್ವತಿಯ ಬೇಡಿಕೆಗೆ ಹುಸಿನಕ್ಕ ಶಿವನು ದೇವಿ ಎಲ್ಲವು ವಿಧಿಮಯ. ಪರದೇಶಿಯಾಗಿ ಪಾಪಿಯಾಗಿದ್ದರೂ ಸಹಾ ಆ ಮಗು ಪರಮಾತ್ಮನ ಸತ್ಯವನ್ನು ಪಡೆದು, ಸಚ್ಚರಿತ್ರನಾಗಿ, ಸಕಲರಿಂದ ಆರಾಧಿಸುವ ಪೂಜಾರ್ಹ ವ್ಯಕ್ತಿಯಾಗುತ್ತಾನೆ. ಇದು ಸಾಮಾನ್ಯ ಮಗುವಲ್ಲ. ಲೋಕಕಲ್ಯಾಣವಾಗಿ, ಭಕ್ತಿಬಾಂದವನೆಂಬ ಬಿರುದಿನಿಂದ ಪ್ರಸಿದ್ಧ ಪವಾಡ ಪುರುಷನಾಗುತ್ತಾನೆಂದು ಹೇಳಿದನು. ಅವನು ನೆಲಸಿದ ತಾವೂ ಮುಂದೆ ಪ್ರಸಿದ್ಧ ಪುಣ್ಯಕ್ಷೇತ್ರವಾಗುತ್ತದೆ. ಅವನ ತಂದೆತಾಯಿಗಳು ಬೇರೆ ಯಾರೂ ಅಲ್ಲ. ಕಾಡಿನ ನಿವಾಸಿಗಳಾದ ‘ಬೇಡ’ ದಂಪತಿಗಳೇ ಆಗಿರುತ್ತಾರೆ ಎಂದು ವಿವರಿಸಿದ. ಹುಟ್ಟಿದ ಮಗುವನ್ನು ದೈವಲೀಲೆ ಎನ್ನದೆ ಭೂತ – ಪ್ರೇತವೆಂದು ತಿಳಿದು ಕಾಡಿಗೆ ಬಿಟ್ಟುಹೋಗಿದ್ದಾರೆ. ಶಿವ – ಪಾರ್ವತಿಯರ ದರ್ಶನವಾಗಿರುವುದರಿಂದ ಮಗು ಸ್ವತಂತ್ರ‍್ಯವಾಗಿ ಜೀವನ ನಡೆಸುವ ತನಕ ಅಡೆ – ತಡೆ, ಹಸಿವು – ಬಾಯಾರಿಕೆ, ಕ್ರಿಮಿ – ಕೀಟ, ಪಶುಪಕ್ಷಿ, ಮೃಗಗಳಾದಿಯಾಗಿ ಯಾರಿಂದಲೂ ಯಾವ ರೀತಿಯ ಅಪಾಯ ಬಾರದ ರೀತಿಯಲ್ಲಿ ಆಶೀರ್ವದಿಸೋಣ ಎಂದು ಪಾರ್ವತಿ ಪರಮೇಶ್ವರರು ಮಗುವಿನ ಮೈದಡವಿದರು. ಶಿವನು ಮಗುವಿನ ಬಾಯಲ್ಲಿ ತನ್ನ ತಲೆಯ ಮೇಲಿನ ಗಂಗಾಮಾತೆಯ ತೀರ್ಥವನ್ನು ಹಾಕಿದ. ಮಗು ಬೆಳೆದು ತನ್ನ ಕೈಯಿಂದ ತಾನು ಆಹಾರವನ್ನು ತಿನ್ನುವ ತನಕ ಹಸಿವು ಬಾಯಾರಿಕೆಗಳಾಗದಿರಲೆಂದು ಅವರು ಆಶೀರ್ವದಿಸಿದರು.

ಪಾರ್ವತಿಯು ಆನಂದಭಾಷ್ಪಿತಳಾಗಿ, ಈಗ ಮಗುವಿಗೆ ತಂದೆತಾಯಿಗಳಾದರೂ ಇಲ್ಲದೆ, ಪರದೇಶಿಯಾಗಿ, ಈ ಕಾಡಿನಲ್ಲಿ ಸೂರ್ಯಕಿರಣಗಳಡಿಯಲ್ಲಿ ಪಾಪಿಯಂತೆ ಬೆಳೆಯುವವನಿಗೆ ನಾಮಕರಣ ಮಾಡುವುದಿಲ್ಲವೆಂದು, ನಾವಾದರೂ ಮಾಡಿದರೆ ಆಗುತ್ತದೆಂದು ಶಿವನಲ್ಲಿ ವಿನಂತಿಸಿಕೊಂಡಳು. ಪಾರ್ವತಿಯ ಬಯಕೆಯಂತೆ ಲೋಕನಾಯಕನಾದ ಶಿವನು ಅವಳು ಸೂಚಿದ ಹೆಸರನ್ನಿಡಲು ಒಪ್ಪಿದನು.

ದೇವಿ ಈ ಮಗು ಪರದೇಶಿಯಂತೆ, ಪಾಪದ ಮಗುವಿನಂತೆ, ಸೂರ್ಯನ ಕಿರಣಗಳಡಿಯಲ್ಲಿ ಬೆಳೆಯುತ್ತಿರುವುದರಿಂದ, ಇವನಿಗೆ ‘ಸೂರ್ಯಪಾಪನಾಯಕ’ ಎಂದು ಕರೆಯೋಣ ಎಂದನು. ಶಿವನ ಈ ಮಾತಿಗೆ ಪಾರ್ವತಿ ಒಪ್ಪಿದಳು. ಸ್ವಾಮಿ ನಿನ್ನ ಇಚ್ಛೆಯ ನನ್ನ ಇಚ್ಛೆ. ಶಿವ – ಪಾರ್ವತಿಯರು ಮಗುವನ್ನು ಸ್ಪರ್ಶಿಸಿ, ಶರೀರವನ್ನು ತೀಡಿ, ಆಶೀರ್ವದಿಸುತ್ತಾ ಮಗು ಸುರಕ್ಷಿತವಾಗಿ ಬೆಳೆದು ಪ್ರಬುದ್ಧನಾದಾಗ ನಾವು ಇಟ್ಟಿರುವ ನಾಮವು ಸ್ಮರಣೆಗೆ ಬಂದು ‘ಸೂರ್ಯಪಾಪನಾಯಕ’ ಎಂಬ ಹೆಸರಿನಿಂದ ಜಗಜನಿತನಾಗಿ ಲೋಕಪೂಜಿತನಾಗಿ ಅವತರಿಸುವನು ಎಂದು ಶುಭಕೋರಿ ಮರೆಯಾದರು.

ಪವಾಡಗಳೊಂದಿಗೆ ಸೂರ್ಯಪಾಪನಾಯಕನ ಬೆಳವಣಿಗೆ

ಕಾಡಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಮಗು ದಿನಕಳೆದಂತೆ ಸುರಕ್ಷಿತವಾಗಿ ಬೆಳೆಯುತ್ತಿದ್ದನು. ದೊಡ್ಡವನಾದ ಪಾಪನಾಯಕ ಕಾಡಿನಲ್ಲಿ ಸಂಚರಿಸುತ್ತಾ ಹುಲಿ ಚಿರತೆಯಂಥ ಕಾಡುಪ್ರಾಣಿಗಳೊಂದಿಗೆ ಆಟವಾಡುತ್ತಾ, ವಿಷಸರ್ಪಗಳನ್ನು ಹಿಡಿದು ಅವುಗಳೊಂದಿಗೆ ಚಲ್ಲಾಟವಾಡುತ್ತಾ ನದಿ, ಸರೋವರಗಳಲ್ಲಿ ಮುಳುಗಿ ಈಜಾಡುತ್ತಾ ಮರಗಿಡಗಳನ್ನು ಹತ್ತಿ ಇಳಿದು ಕುಣಿದು ಕುಪ್ಪಳಿಸಿ ಹಣ್ಣು ಕೊಯ್ದಿಡುತ್ತಾನೆ. ಆಟಪಾಠಗಳನ್ನು ಮೈಗೂಡಿಸಿಕೊಂಡ. ಪಾಪನಾಯಕನ ಉಡುಪು ಹೇಗಿತ್ತೆಂದರೆ: ಬೆತ್ತಲೆ ಶರೀರ, ತಂದೆತಾಯಿಗಳು ಮಗುವನ್ನು ತೊರೆಯುವಾಗ ಕೆಳಗೆ ಹಾಸಿದ್ದ ಕಂಬಳಿ ಕೋರೆಯನ್ನು ಎರಡು ತುಂಡುಗಳಾಗಿ ಮಾಡಿ ಒಂದನ್ನು ಲಂಗೋಟಿಯಾಗಿ, ಮತ್ತೊಂದನ್ನು ಹೆಗಲಿನ ಮೇಲೆ ಹಾಕಿಕೊಳ್ಳುತ್ತಿದ್ದನು. ಹೀಗೆ ಬೆಳೆದು ೬ – ೭ ವರ್ಷದ ಬಾಲಕನಾದ. ಇವನು ಕಾಡಿನಲ್ಲಿ ಸಂಚರಿಸುತ್ತಿರುವಾಗ ದನ ಮೇಯಿಸಲು ಬರುತ್ತಿದ್ದವರೊಂದಿಗೆ ಬೆರೆಯುತ್ತಾ ಆಟವಾಡುತ್ತಾ, ಹಣ್ಣು ಹಂಪಲುಗಳೇ ಅಲ್ಲದೆ ದನಕಾಯುವ ಹುಡುಗರು ಕೇಳಿದುದನ್ನು ಪವಾಡಮಾಡಿ ತರಿಸಿ ಕೊಡುತ್ತಿದ್ದ. ಇಷ್ಟು ಚಿಕ್ಕ ಹುಡುಗ ಪವಾಡ ಮಾಡುತ್ತಾನೆಂಬ ಸುದ್ದಿ ಅಲ್ಲಿನ ಜನರಲ್ಲಿ ಹಬ್ಬಿತು.

ಮೇಲಿನ ಸಂಗತಿ ಪ್ರಸಾರವಾದಂತೆ, ತಾನಿಲ್ಲಿ ವಾಸಿಸುವುದು ಸರಿಯಲ್ಲವೆಂದು ಅರಿತು ಕಾಡಿನ ಹುಡುಗರಿಂದ ದೂರ ಹೋಗಿ ಗೊಂಡಾರಣ್ಯವನ್ನು ಸೇರಿದ. ಬರೆ ಕಾಡಿನಲ್ಲಿಯೇ ಜೀವನ ಸವೆಸಿದ ಪಾಪನಾಯಕನಿಗೆ ಸ್ವಲ್ಪ ದಿನಗಳ ನಂತರ ನಾಡಿನ ಜನರೊಂದಿಗೆ ಬೆಳೆಯುವ ಹಂಬಲ ಉಂಟಾಯಿತು ಅದರಂತೆ ಚಿತ್ರದುರ್ಗ ಪ್ರದೇಶದಿಂದ ಚಳ್ಳಕೆರೆ ಪ್ರದೇಶಕ್ಕೆ ಹೊರಟು ಮಧ್ಯೆ ಅಲ್ಲಲ್ಲಿ ಸಂಚರಿಸುತ್ತಾ ‘ಗೋರ‍್ಲಹಟ್ಟಿ’ ಗ್ರಾಮದ ಬಳಿ ಬಂದಿಳಿದ. ಈ ಗೋರ‍್ಲಕಟ್ಟೆ ಚಳ್ಳಕೆರೆಯಿಂದ ಪಶ್ಚಿಮಕ್ಕೆ ಸು.೫ ಕಿ.ಮೀ. ಇದೆ. ಪಾಪನಾಯಕ ಬಂದಾಗಿನಿಂದಲೂ ಆ ಊರಿಗೆ ಮಹತ್ವ ಬಂದಿತು. ಅಂದು ಚಳ್ಳಕೆರೆ ಸ್ಥಳದ ಹೆಸರು ಇದ್ದಂತಿರಲಿಲ್ಲ. ಆದರೂ ಪಾಪನಾಯಕ ಚಳ್ಳಕೆರೆಯ ಜನರೊಂದಿಗೆ ಬೆರೆಯತೊಡಗಿದರೆಂಬ ಸಂಗತಿ ತಿಳಿದುಬರುತ್ತದೆ.

ಚಿಕ್ಕವನಾದರೂ ಋಣವಾಗಿ ಜೀವಿಸಲು ಒಪ್ಪದೆ, ಗ್ರಾಮದವರ ಸಹಕಾರದಿಂದ ದನಗಳನ್ನು ಕಾಯಲು ಸಿದ್ಧನಾದ. ಒಂದು ಕರುವಿಗೆ ಒಂದು ದುಗ್ಗಾಣಿಯಂತೆ ಕೂಲಿ ಇತ್ತು. ದಿನನಿತ್ಯ ಕರುಗಳನ್ನು ಹೊಡೆದುಕೊಂಡು ‘ಗೊರ‍್ಲಕಟ್ಟೆ’ ಅಕ್ಕಪಕ್ಕ ಮೇಯಿಸಿಕೊಂಡು ಅಲ್ಲಿ ಹರಿಯುತ್ತಿದ್ದ ಹಳ್ಳದ ದಂಡೆಯಲ್ಲಿ ಮಟ್ಟಿಯ ಮೇಲೆ ರೊಪ್ಪವನ್ನು ಹಾಕಿಕೊಂಡು ಕರುಗಳನ್ನು ಬಿಟ್ಟು, ಕಲ್ಲುಗುಂಡುಗಳ ಮೇಲೆ ಕುಳಿತು, ಆಟವಾಡುತ್ತಾ ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳದಲ್ಲಿ ಈಜಾಡುತ್ತಾ ಕಾಲ ಕಳೆಯುತ್ತಿದ್ದ. ಪಾಪನಾಯಕನು ಹಳ್ಳದ ಪಕ್ಕ ಕಟ್ಟಿದ ರೊಪ್ಪ ಮಧ್ಯದಲ್ಲಿ ದೊಡ್ಡದಾದ ಹುತ್ತವೊಂದು ಬೆಳೆದಿತ್ತು. ಆ ಹುತ್ತದ ಮೇಲೆ ಒಂದು ಮಂಗಾರೆ ಗಿಡ ಬೆಳೆದಿತ್ತು. ಕರುಗಳೊಡನೆ ಪಾಪನಾಯಕ ಮುಂಗಾರು ಗಿಡದ ನೆರಳಲ್ಲಿ ಹುತ್ತದ ಸುತ್ತ ಆಟವಾಡುತ್ತಿದ್ದನು.

ಕರುಗಳ ರೊಪ್ಪದಲ್ಲಿ ಉದ್ಭವಿಸಿದ ಹುತ್ತದೊಳಗೆ ಏಳೆಡೆ ಸರ್ಪವೊಂದು ವಾಸವಾಗಿತ್ತು. ಹುತ್ತದ ಮೇಲಿದ್ದ ಮಂಗಾರೆ ಗಿಡದ ಬೇರುಗಳು ಹುತ್ತದಲ್ಲಿಳಿದು ಹುತ್ತದೊಳಗೆ ವಾಸವಾಗಿದ್ದ ಆ ಸರ್ಪದ ಕಿವಿಯಲ್ಲಿ ಹಾದು ಭೂಮಿಯ ಒಳಗೆ ಇಳಿದಿದ್ದವು. ಬೇರುಗಳ ಬಲಿತಂತೆಲ್ಲ ಸರ್ಪಕ್ಕೆ ಬಾಧೆಯುಂಟಾಗುತ್ತಿತ್ತು. ದಿನಕಳೆದಂತೆ ಸರ್ಪಕ್ಕೆ ಬಾಧೆ ಉಲ್ಭಣಗೊಂಡಿತು. ಆದ ನೋವನ್ನು ತಾಳಿಕೊಂಡು ಕಾಲ ಕಳೆಯುತ್ತಿತ್ತು. ಬೇರಿನ ಬಾಧೆಯಿಂದ ಸರ್ಪ ಹೊರಗೆ ಬರಲಾಗಲಿಲ್ಲ. ಒಳಗೆ ಇರುವಂತಿಲ್ಲ. ಹೀಗೆ ಉಭಯ ಸಂಕಟಕ್ಕೀಡಾಗಿತ್ತು.

ಸರ್ಪರಾಜನನ್ನು ಬಂಧನದಿಂದ ಬಿಡುಗಡೆಗೊಳಿಸಿದ ಪಾಪನಾಯಕ

ಪಾಪನಾಯಕ ತನ್ನ ಕರುಗಳನ್ನು ಒಡೆದುಕೊಂಡು ಬರುವಾಗ, ಕರುಗಳು ಅತ್ತ ಇತ್ತ ಓಡಲಾರಂಭಿಸಿದವು. ಅವುಗಳನ್ನು ಒಂದೆಡೆ ಕೂಡಲು ಕೋಲಿನ ಅಗತ್ಯವಿತ್ತು. ಹೀಗಾಗಿ ದನಗಳನ್ನು ಒಡೆದುಕೊಂಡು ಬರುವಾಗ ಕೋಲಿಗಾಗಿ ಎಲ್ಲಾ ಗಿಡ – ಮರಗಳ ಬಳಿ ಪರದಾಡಿದರೂ ನೀಳವಾದುದು ಸಿಗಲಿಲ್ಲ. ಹುಡುಕುತ್ತಾ ರೊಪ್ಪಕ್ಕೆ ಬಂದನು. ಯಾವ ಗಿಡದಲ್ಲಿಯೂ ಕೋಲು ಸಿಗಲಿಲ್ಲದ ಕಾರಣ ರೊಪ್ಪದಲ್ಲಿದ್ದ ಹುತ್ತದ ಮೇಲಿನ ಮಂಗಾರೆಗಿಡ ಎಷ್ಟೇ ಸುಂದರವಾಗಿದ್ದರೂ ಕೋಲಿಗೆ ಸರಿಯಾಗಿದೆ ಎಂದು ಬುಡ ಸಮೇತ ಕಿತ್ತು ಹಾಕಿದ. ಹೀಗೆ ಕೀಳುವಾಗ ಹುತ್ತದ ಮೇಲೆ ಎರಡು ಕಾಲುಗಳನ್ನಿಟ್ಟುಕೊಂಡು, ಗಿಡದ ಮಧ್ಯದ ಭಾಗಕ್ಕೆ ಕೈಹಾಕಿ, ಕೀಳುವಾಗ ಗಿಡವು ಬೇರುಗಳ ಸಹಿತ ಬಂದಿತು. ಕಿತ್ತ ಗಿಡವನ್ನು ಬಡ್ಡೆಗೆ ಕಲ್ಲಿಂದ ಕಡಿದು, ನೀಳವಾದ ಕೋಲನ್ನು ಮಾಡಿಕೊಂಡನು.

ಕಿತ್ತಗಿಡದ ಬುಡದಲ್ಲಿ ಹುತ್ತ ಬೆಳೆದಿದ್ದು, ಗಿಡ – ಬೇರುಗಳು ಹಾವಿನ ಕಿವಿಯ ಮೂಲಕ ಭೂಮಿಗೆ ಹೋಗಿದ್ದವು. ಗಿಡ ಬೇರು ಸಹಿತ ಹೊರಬಂದಿದ್ದರಿಂದ ಹಾವಿನ ಸಂಕಟ ನಿವಾರಣೆಯಾಯಿತು. ಬಂಧನದಿಂದ ಮುಕ್ತಿಗೊಂಡು, ಪುನರ್ಜನ್ಮ ಪಡೆದಂತಾಯಿತು. ಸಂತೋಷಗೊಂಡ ಹಾವು ಏಳೆಡೆ ಬಿಚ್ಚಿ ಹಾರಾಡುತ್ತಿತ್ತು. ಆಗ ಕೋರಿ ಲಂಗೋಟಿ ಧರಿಸಿ, ಹೆಗಲಮೇಲೆ ಕೋರಿ ತುಂಡನ್ನು ಹಾಕಿಕೊಂಡು ಕೈಯಲ್ಲಿ ಕೋಲು ಹಿಡಿದು ಬರುತ್ತಿದ್ದ ಪಾಪನಾಯಕನನ್ನು ಕಂಡು ನನಗೆ ಬಂಧನದಿಂದ ಮುಕ್ತಗೊಳಿಸಿ ಮತ್ತೊಮ್ಮೆ ಜೀವಕೊಟ್ಟೆ ಎಂದು ಸರ್ಪ ಮಾತನಾಡಿತು.

ಏಳು ಹೆಡೆ ಬಿಚ್ಚಿ ಆಡುತ್ತಿದ್ದ ಸರ್ಪವನ್ನು ಕಂಡ ಪಾಪನಾಯಕ ಆಶ್ಚರ್ಯಚಕಿತನಾದನು. ಸರ್ಪವೇನಾದರೂ ಕಡಿಯಲು ಬಂದರೆ ಇದೇ ದೊಣ್ಣೆಯಿಂದ ಹೊಡೆದು ಸಾಯಿಸುತ್ತೇನೆಂದು ಯೋಚಿಸಿದ್ದನು. ಸರ್ಪರಾಜ ಮನುಷ್ಯನಂತೆ ಮಾತನಾಡುತ್ತಾ ಬಾ ಮಗು ನಾನು ನಿನ್ನನ್ನು ಏನು ಮಾಡುವುದಿಲ್ಲ, ಬಹು ದಿನಗಳಿಂದ ಬಂಧನದಲ್ಲಿದ್ದು ಹುತ್ತದಿಂದ ಹೊರಬರಲಾರದೇ ಇರುವ ಸ್ಥಿತಿಯಲ್ಲಿ ನೀನು ನನ್ನ ಪ್ರಾಣವನ್ನು ಉಳಿಸಿದ್ದೀಯ. ನೀನು ಈ ಗಿಡವನ್ನು ಕೀಳದೇ ಇದ್ದಲ್ಲಿ ನನ್ನ ಕಿವಿಯಿಂದ ಹಾದುಹೋಗಿದ್ದ ಬೇರುಗಲು ದಿನದಿನಕ್ಕೆ ಬಲಿತು ಬಂಧನದಿಂದ ಹೊರಬರಲು ಆಗದೇ ನರಳುತ್ತಿದ್ದೆ. ಇಂಥಾ ಸಂಕಷ್ಟದಿಂದ ನನ್ನನ್ನು ಪಾರುಮಾಡಿ ಪ್ರಾಣದಾನ ಮಾಡಿದ್ದೀಯ. ನಿನ್ನ ಉಪಕಾರವನ್ನು ಎಂದಿಗೂ ಮರೆಯಲಾರೆ. ನೀನು ಯಾರು? ಜನ್ಮ ವೃತ್ತಾಂತವೇನು? ನಿನ್ನ ಚರಿತ್ರೆ ಏನು? ತಿಳಿಸುತ್ತೇನೆ ಕೇಳು ಎಂದು ನಡೆದ ವೃತ್ತಾಂತವನ್ನು ವಿವರವಾಗಿ ತಿಳಿತು (ಜಗಳೂರು ಪಾಪನಾಯಕನ ಆರಂಭಿಕ ಜೀವನವನ್ನು).

ಅಲ್ಲದೆ, ನೀನೊಬ್ಬ ಮಹಾಪುರುಷನಾಗುತ್ತೀಯಾ. ತಿರುಪತಿ ಕ್ಷೇತ್ರಕ್ಕೆ ಹೋದಲ್ಲಿ ನೀನು ನಾರಾಯಣನ ದರ್ಶನ ಪಡೆಯುವಂತೆ, ಕ್ರಮೇಣ ದೇವಮಾನವನಾಗಿ, ಸರ್ವರಿಂದಲೂ ಆರಾಧನೆಗೊಳಪಡುತ್ತಿಯೆಂದಿತು. ನಾನು ನೆಲಸಿರುವ ಹುತ್ತದಲ್ಲಿರುವ ಮಾಣಿಕ್ಯದ ಹರಳನ್ನು ನಿನಗೆ ಧಾರೆಯೆರೆಯುತ್ತೇನೆ ತೆಗೆದುಕೋ ಎಂದು ತನ್ನಲ್ಲಿದ್ದ ಮಾಣಿಕ್ಯದ ಹರಳನ್ನು ನೀಡಿತು. ಮಗನೇ ಯುಗ – ಯುಗಾಂತರಗಳವರೆಗೆ ಇದು ಪುಣ್ಯಕ್ಷೇತ್ರವಾಗಿ, ನಿನ್ನ ಪೂಜೆ ಸಾಂಗೋಪಾಂಗವಾಗಿ ನಡೆದು ಪಾಪಜ್ಜನ ಪುಣ್ಯಕ್ಷೇತ್ರ ಎಂದೇ ಖ್ಯಾತವಾಗುತ್ತದೆ. ನಿನ್ನಿಂದ ಈ ಲೋಕಕ್ಕೆ ಕಲ್ಯಾಣವಾಗಲೆಂದು ಹೇಳಿ ಮರೆಯಲಾಯಿತು. ಮುಗ್ಧ ಬಾಲಕ ಪಾಪಯ್ಯನು ಕೈಮುಗಿದು ಮಾಣಿಕ್ಯವನ್ನು ಪುಡಗೋಸಿಯಲ್ಲಿಟ್ಟುಕೊಂಡು ಊರಿನ ಕಡೆ ಧಾವಿಸಿದ. ಪಾಪಯ್ಯ ಪ್ರತಿನಿತ್ಯ ಈ ಹುತ್ತಕ್ಕೆ ಪ್ರದಕ್ಷಿಣೆ ಮಾಡಿ ಬರುತ್ತಿದ್ದ.

ತಿರುಪತಿಯಾತ್ರೆಗೆ ಪಾಪಯ್ಯನ ಸಿದ್ಧತೆ

ಕರುಗಳನ್ನು ರೊಪ್ಪದಲ್ಲಿ ಕೂಡಿಹಾಕಿ ಪಕ್ಕದ (ಹಳ್ಳ) ಹೊಳೆ ದಂಡೆಯಲ್ಲಿ ಆಟವಾಡುತ್ತಿದ್ದ ಪಾಪಯ್ಯನ್ನು ಪಡುವಲದೇಶದಿಂದ ‘ಗೊಂದಲಪಲ್ಲಿಗೊಲ್ಲರು’ ತಿರುಪತಿಗೆ ಹೋಗಲು ಹಸುಗಳ ಹಾಲಿನ ಮೀಸಲು ಕೊಡಗಳನ್ನು ಹೊತ್ತು ಈ ಹಳ್ಳದ ಬಳಿಗೆ ಬಂದರು. ಅವರಿಗೆ ಬಾಯಾರಿಕೆಯಾಗಿದ್ದರಿಂದ ನೀರು ಕುಡಿಯಲು ಬಂದರು. ಹಳ್ಳದ ದಂಡೆಯ ಮೇಲೆ ಕೊಡಗಳನ್ನಿಟ್ಟು ನೀರು ಕುಡಿಯಲು ಹಳ್ಳಕ್ಕೆ ಇಳಿಯುವ ಮೊದಲು ಕಾಗೆಗಳ ಕಾಟದಿಂದ ಕೊಡಗಳನ್ನು ಯಾರಾದರೂ ನೋಡಿಕೊಳ್ಳಬೇಕಾಗಿತ್ತು. ಅಲ್ಲೇ ಕೋಲು ಹಿಡಿದು ಸುತ್ತಾಡುತ್ತಿದ್ದ ಪಾಪನಾಯಕನನ್ನು ಕರೆದು: ಬಾಲಕನೇ ನಮಗೆ ಬಾಯಾರಿಕೆಯಾಗಿದೆ. ಹಳ್ಳದಲ್ಲಿಳಿದು ನೀರು ಕುಡಿಯುವವರೆಗೆ ತಿರುಪತಿ ತಿಮ್ಮಪ್ಪನಿಗೆ ಸಲ್ಲಿಸುವ ಮೀಸಲು ಹಾಲಿನ ಕೊಡಗಳನ್ನು ನೋಡಿಕೋ ಎಂದು ತಿಳಿಸಿದರು. ಹುಡುಗ ಕಾರ್ಯನಿರತನಾದ. ಗೊಲ್ಲರು ಬಹು ಆಯಾಸಪಟ್ಟಿದ್ದರಿಂದ ಈ ಜಾಟ, ವಿನೋದದಲ್ಲಿ ತಲ್ಲೀನರಾಗಿ ಬಹುಸಮಯವನ್ನು ವ್ಯರ್ಥಮಾಡಿದರು. ಕಾಯುತ್ತಾ ಕುಳಿತ ಪಾಪಯ್ಯ ಮೀಸಲು ಕೊಡಗಳ ಬಾಯಿಗಳಿಗೆ ಸುತ್ತಿದ್ದ ಬಟ್ಟೆಗಳನ್ನು ಬಿಚ್ಚಿ ಒಂದೊಂದು ಕೊಡದ ಹಾಲನ್ನು ಕುಡಿದು ಖಾಲಿ ಮಡಿದನು. ಈಜುತ್ತಿದ್ದ ಗೊಲ್ಲರು ದಡಕ್ಕೆ ಹತ್ತಿ ಬಂದರು. ಪಾಪಯ್ಯ ಪ್ರಾಣಿ, ಪಕ್ಷಿಗಳನ್ನು ಕೂಗುತ್ತಾ ತಿರುಗಾಡುತ್ತಿದ್ದ. ಗೊಲ್ಲರು ತಮ್ಮ ತಮ್ಮ ಕೊಡಗಳನ್ನು ಹೊತ್ತುಕೊಂಡು ತಿರುಪತಿಗೆ ಪ್ರಯಾಣಿಸಿದರು.

ಇವರು ತಿರುಪತಿಗೆ ಹೋದಾಗ ವಿಚಾರ ತಿಳಿದ ಪಾಪಯ್ಯನಿಗೆ, ಹಿಂದೆ ಸರ್ಪರಾಜ ಹೇಳಿದ ಮಾತು ಜ್ಞಾಪಕಕ್ಕೆ ಬಂದಿತಲ್ಲದೆ, ಊರಿಗೆ ಮರಳಿ ಕರುಗಳ ಒಡೆಯರಿಂದ ಕರುವಿಗೊಂದು ದುಗ್ಗಾಣಿಯಂತೆ ಕೂಲಿ ಹಣ ಸಂಗ್ರಹಿಸಿದನು. ತಂದ ದುಗ್ಗಾಣಿ (ಸು. ೫೦ ಪೈಸೆಗೆ ಸಮ) ಗಳೆಲ್ಲವನ್ನು ತೂರಿದನು. ಅವುಗಳೆಲ್ಲ ಬಂಡೆಯಿಂದ ಸಿಡಿದು ಮೂರುಮಾತ್ರ ಬಂಡೆ ಮೇಲೆ ಬಿದ್ದವು. ಮೂರು ದುಗ್ಗಾಣಿಗಳನ್ನು ಲಂಗೋಟಿಯಲ್ಲಿ ಕಟ್ಟಿಕೊಂಡು ಒಂದು ಮಂಗಾರೆ ಕಾಯನ್ನು ಕಿತ್ತು, ಅದರ ಒಳಗಿನ ತಿರುಳನ್ನು ತೆಗೆದು ಒಂದು ಬುಡ್ಡಿಯಂತೆ (ದೀಪ) ಮಾಡಿ ಸೊಂಟಕ್ಕೆ ಕಟ್ಟಿಕೊಂಡ. ಊರಿನೊಳಕ್ಕೆ ಹೋಗಿ ಒಂದು ದುಗ್ಗಾಣಿ ಕೊಟ್ಟು ಮಂಗಾರಕಾಯಿ ಬುಡ್ಡಿಯಲ್ಲಿ ಎಣ್ಣೆ ತುಂಬಿಸಿಕೊಂಡನು. ಇನ್ನೊಂದು ದುಗ್ಗಾಣಿಗೆ ಅಕ್ಕಿಯನ್ನು ಕೊಂಡು ಅವೆಲ್ಲವನ್ನು ಸೊಂಟಕ್ಕೆ ಬಟ್ಟೆಯಲ್ಲಿ ಕಟ್ಟಿಕೊಂಡ. ಉಳಿದೊಂದು ದುಗ್ಗಾಣಿ ಹಿಡಿದು ತಿರುಪತಿಗೆ ನಡೆದನು.

ಕೇವಲ ಕೆಲವೇ ದಿನಗಳಲ್ಲಿ ಪಾಪಯ್ಯ ತಿರುಪತಿ ತಲುಪಿದ. ಸಹಸ್ರಾರು ಭಕ್ತರು ತಿಮ್ಮಪ್ಪನಿಗೆ ಪೂಜೆ, ಕಪ್ಪ – ಕಾಣಿಕೆಗಳನ್ನು ಸಲ್ಲಿಸುತ್ತಾ ನಮನ ಮಾಡುತ್ತಿದ್ದರು. ಕೆಲವರು ಮಂಡೆಬೋಳಿಸಿಕೊಂಡು (ಕೂದಲು ತೆಗೆಸುವುದು) ಹೊಂಡದ ನೀರಿನಲ್ಲಿ ಮುಳುಗುತ್ತಿದ್ದರು. ಕೆಲವರು ದೇವರ ದರ್ಶನಕ್ಕೆ ಸರಣಿ – ಸರಣಿಯಾಗಿ ನಿಂತಿದ್ದರು. ಪಾಪಯ್ಯ ಕ್ಷೌರಿಕನ ಬಳಿ ಹೋಗಿ ಮಂಡೆಯನ್ನು ಬೋಳಿಸಿಕೊಳ್ಳಲು ಬಂಡೆಯ ಮೇಲೆ ಕುಳಿತ. ಪವಾಡದಂತೆ ಕುಳಿತ ಬಂಡೆ ಮೇಲಕ್ಕೆ ಬೆಳೆಯುತ್ತಾ ಹೋಯಿತು. ಬೆಳೆಯುವ ಬಂಡೆ ಕ್ಷೌರಿಕನಿಗೆ ಕಾಣಲಿಲ್ಲ. ಅವನು ತಲೆ ಬೋಳಿಸುವುದರಲ್ಲೇ ಮಗ್ನನಾಗಿದ್ದನು. ಇನ್ನೇನು ಕೂದಲು ತೆಗೆಯುವ ಹೊತ್ತಿಗೆ ತೆಂಗಿನ ಮರದ ಎತ್ತರದ ಬಂಡೆಯ ಮೇಲೆ ಕುಳಿತ್ತಿದ್ದನ್ನು ಕಂಡು ಆಶ್ಚರ್ಯಚಕಿತನಾದ. ಈವರೆಗೆ ಸಹಸ್ರಾರು ಭಕ್ತರ ಮಂಡೆಗಳನ್ನು ಬೋಳಿಸಿರುವಂತೆ ಈ ರೀತಿಯಾಗಿರಲಿಲ್ಲ. ನಾನು ಕೆಳಗಿಳಿಯುವುದು ಹೇಗೆ ಎಂದು ಆತಂಕಗೊಂಡು, ಈ ವ್ಯಕ್ತಿ ಬೇರೆಯಾರು ಆಗಿರದ ಶ್ರೀಮಾನ್ ನಾರಾಯಣನೇ ಆಗಿರಬೇಕೆಂದು ಮಗುವಿನ ರೂಪದಲ್ಲಿ ಬಂದವನಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ ವೈಕುಂಠಪತಿ ನಾರಾಯಣನೇ, ಬಾಲಕ ರೂಪನೇ, ಮಾನವರಲ್ಲಿ ಸಾಮಾನ್ಯನಲ್ಲದ ನಿನ್ನ ದರ್ಶನದಿಂದ ನಾನು ಧನ್ಯನಾಗಿದ್ದೇನೆ. ನನಗೆ ನಿನ್ನಿಂದ ಇನ್ನೇನೂ ಆಗಬೇಕಾಗಿಲ್ಲ. ಇಲ್ಲಿಂದ ಕೆಳಗೆ ಮಾತ್ರ ಇಳಿಸು ಎಂದು ಪ್ರಾರ್ಥಿಸಿಕೊಂಡನು.

ಪಾಪಯ್ಯ ನಸುನಗುತ್ತಾ ದುಗ್ಗಾಣಿ ಉಳಿಯಿತೆಂದು, ಬಲಗಾಲ ಹೆಬ್ಬೆಟ್ಟಿನಿಂದ ಬಂಡೆಯನ್ನು ಒತ್ತಿ ತುಳಿಯಲು ಪರ್ವತ ಗಾತ್ರದ ಬಂಡೆ ಮೊದಲ ಸ್ಥಿತಿಗೆ ಬಂತು. ಮತ್ತೆ ಎಲ್ಲರಂತೆ ಪಾಪಯ್ಯ ನೀರಿನ ಹೊಂಡಕ್ಕೆ ಹೋದ. ಅಲ್ಲಿ ಬಂದೊಬಸ್ತಿನ ಕಾವಲಿತ್ತು. ಇವನನ್ನು ಹುಚ್ಚನೆಂದು ಬಗೆದು ಜನರು ಹೊಂಡಕ್ಕೆ ಬಿಡಲಿಲ್ಲ. ಪಾಪಯ್ಯ ಸೊಂಟಕ್ಕೆ ಕಟ್ಟಿಕೊಂಡಿದ್ದ ಎಣ್ಣೆದೀಪ ಮತ್ತು ಅಕ್ಕಿಯನ್ನು ಬಿಚ್ಚಿಟ್ಟುಹಾಕಿ, ಹೊಂಡಕ್ಕೆ ಹಾರಿದ. ನೆರೆದ ಭಕ್ತಾಧಿಗಳು ಇವನನ್ನು ಹುಚ್ಚನೆಂದು ‘ಸಾಯುತ್ತಿದ್ದಾನೆ ಕಾಪಾಡಿರಿ’ ಎಂದು ಕೂಗಿಕೊಂಡರು. ಹೊಂಡಕ್ಕೆ ಬಿದ್ದವನನ್ನು ಯಾರೋ ಎಳೆದು ದಡಕ್ಕೆ ತಂದುಬಿಟ್ಟರು. ಸ್ನಾನವಾಯಿತು. ದರ್ಶನ ಉಳಿದಿದೆ ಎಂದು ಪಾಪಯ್ಯ ಮುಂದಕ್ಕೆ ನಡೆದ.

ತಂದ ಅಕ್ಕಿಯನ್ನು ಡಬ್ಬಿಗೆ ಹಾಕಿ ಎಣ್ಣೆಯನ್ನು ದೇವಸ್ಥಾನದ ದೀಪಕ್ಕೆ ಹಾಕಿ ಸಾವಿರಾರು ಭಕ್ತರ ಮಧ್ಯೆ ದೇವರ ದರ್ಶನ ಆಗುವುದು ಕಷ್ಟವೆಂದು ಕಾಯುತ್ತಾ ಕುಳಿತನು. ಜನರ ಸಾಲಿಗೆ ಸೇರಲು ಹೋದಾಗ ಇವನನ್ನು ಹುಚ್ಚನೆಂದು ಹಿಂದೆ ತಳ್ಳಿದರು. ಚಿಂತೆಗೀಡಾದ ಪಾಪಯ್ಯ ಅವರಿಂದ ದೂರ ಸರಿದು ವಿಶ್ರಾಂತಿ ಪಡೆದ. ಹಿಂದೆ ಸರ್ಪರಾಜ ತಿರುಪತಿಯಲ್ಲಿ ನಾರಾಯಣನ ದರ್ಶನ ಆಗುತ್ತದೆಂದು ಹೇಳಿದ್ದು ನೆನಪಿಗೆ ಬಂದು ಕೊನೆಗೆ ಕೋಪೋದ್ರಿಕ್ತನಾಗಿ ಪಕ್ಕದಲ್ಲಿದ್ದ ಗುಂಡನ್ನು ಎತ್ತಿ ತಲೆಯ ಮೇಲೆ ಹಾಕಿಕೊಳ್ಳಲು ಸಿದ್ಧನಾಗುತ್ತಾ, ಹೆಗಲಲ್ಲಿದ್ದ ಕೋರೆಯನ್ನು ಬಿಸಾಡಿ, ಎಲ್ಲೋ ನಾರಾಯಣನೇ ಸರ್ಪರಾಜನು ಸೂಚಿಸಿದಂತೆ ನಿನ್ನಲ್ಲಿಗೆ ಬಂದಿರುವೆ, ನಿನ್ನ ದರ್ಶನ ಭಾಗ್ಯ ದೊರೆಯಲಿಲ್ಲ ಎಂದರೆ ನಿನ್ನ ಎದುರಿನಲ್ಲಿಯೇ ನನ್ನ ತಲೆಯ ಮೇಲೆ ಈ ಗುಂಡನ್ನು ಹಾಕಿಕೊಂಡು ಪ್ರಾಣ ಬಿಡುತ್ತೇನೆಂದು ಸಿಂಹ ಗರ್ಜನೆ ಮಾಡಿದನು.

ನೆರೆದ ಭಕ್ತರೆಲ್ಲ ಇವನ ಚಟುವಟಿಕೆ ನೋಡಿದರು. ಕೆಲವರು ಹುಚ್ಚ, ದಡ್ಡ ಎಂದುಕೊಂಡರು. ಮತ್ತೆ ಕೆಲವರು ದೇವಮಾನವನು ಇರಬೇಕೆಂದು ನಂಬಿದರು. ಒಬ್ಬ ಸಾಮಾನ್ಯ ಬಾಲಕ ದೊಡ್ಡ ಕಲ್ಲನ್ನು ಎತ್ತಲು ಸಾಧ್ಯವೇ? ಎಂದು ಕೆಲವರು ಆಶ್ಚರ್ಯ ಪಡುತ್ತಿದ್ದರು. ಅಷ್ಟರಲ್ಲಿ ದೇವಾಲಯದ ಗಂಟೆಗಳು ಢಣಢಣ ಎಂದು ಸ್ವಯಂಕೃತ ಮೊಳಗಿದವು. ಭಕ್ತಸ್ತೋಮಕ್ಕೆ ಕಾಣದ ದೇವರು, ಶಬ್ದಹುಚ್ಚು ಬಾಲಕನಿಗೆ ಕಾಣಿಸಿದನೆಂದು ಕೆಲವರು ವ್ಯಥೆ, ಮರುಕ ಪಡತೊಡಗಿದರು. ಶ್ರೀಮನ್ನಾರಾಯಣನು ಗರ್ಭಗುಡಿಯಿಂದ ಹೊರಟು ಶಂಖ ಚಕ್ರಧಾರಿಯಾಗಿ ಬಂದು ಪಾಪಿನಾಯಕನ ಎದುರಿನಲ್ಲಿ ನಿಂತನು. ದೈವದರ್ಶನದಿಂದ ಪುಳಕಿತಗೊಂಡ ಪಾಪಯ್ಯ ಕಲ್ಲನ್ನು ದೂರ ಎಸೆದು, ಶ್ರೀಮನ್ನಾರಾಯಣನ ಪಾದಗಳನ್ನು ಬಿಗಿದಪ್ಪಿ, ಪರಮಾತ್ಮ ನೀನು ಸರ್ವವ್ಯಾಪಿ ಎಂದ. ಹಿಂದೆ ಸರ್ಪರಾಜನು, ತಿರುಪತಿಯಲ್ಲಿ ನಿನಗೆ ನಾರಾಯಣದ ದರ್ಶನವಾಗುತ್ತದೆಂದು ತಿಳಿಸಿದ್ದ. ಅದರಂತೆ ನಿನ್ನಲ್ಲಿಗೆ ಬಂದೆ. ಇವರು ನನ್ನನ್ನು ಹುಚ್ಚನೆಂದು, ನಿನ್ನ ದರ್ಶನಕ್ಕೆ ಬಿಡದೆ ಅಡ್ಡಿಪಡಿಸಿದ್ದರಿಂದ ಕೋಪ ತಾಳಲಾರದೆ ಕಲ್ಲುಗುಂಡನ್ನು ಹೊರಬೇಕಾಯಿತೆಂದು ಹೇಳಿದ. ತನ್ನನ್ನು ಕ್ಷಮಿಸಿ, ಕಾಪಾಡುವಂತೆ ಬೇಡಿಕೊಂಡ.

ಪಾಪನಾಯಕನೇ ನಿನ್ನ ಭಕ್ತಿಗೆ ಮೆಚ್ಚಿಬಂದಿರುವೆ. ನೀನು ಪಾರ್ವತಿ ಪರಮೇಶ್ವರರ ಅನುಗ್ರಹದಿಂದ ಬೆಳೆದು, ಆದಿಶೇಷನ ಆಶೀರ್ವಾದ ಪಡೆದು ಬಂದಿರುತ್ತೀಯೇ, ನಿನ್ನ ಬೇಡಿಕೆ ಏನೆಂಬುದು ತಿಳಿಸು, ನೆರವೇರಿಸುತ್ತೇನೆಂದು ನಾರಾಯಣನು ಪಾಪನಾಯಕನನ್ನು ಕೇಳಲು ದೇವರೇ ನನಗೇನು ಬೇಡ. ನಿಮ್ಮ ದರ್ಶನದಿಂದ ಧನ್ಯನಾದೆ. ಸಾಯುವವರೆಗೂ ತಪಸ್ಸು ಮಾಡಿದರೂ ದರ್ಶನ ಸಿಗುವುದು ಕಷ್ಟ. ಈ ಬಾಲಕನಿಗೆ ದರ್ಶನ ತೋರಿದ್ದೀರಿ. ನಾನು ಏನನ್ನು ಬಯಸುವುದಿಲ್ಲ. ಆದರೂ ಒಂದು ಕೇಳುವೆ: ನಿನ್ನ ಬರಗಾಲಿನಲ್ಲಿ ಘಲ್‌ಘಲ್ ಎನ್ನುವ ಮುತ್ತಿನ ಕಾಲುಪೆಂಡೆ ಕೊಡು. ನಾನು ಕಾಡಿನ ವಾಣಿಯಾಗಿ ಒಂಟಿಗನಾಗಿ ಒಡಾಡುವುದರಿಂದ ಆತ್ಮರಕ್ಷಣೆಗಾಗಿ, ಒಂದು ಕತ್ತಿಯನ್ನು ಕೊಡು. ಇವಿಷ್ಠೆ ನನ್ನ ಕೋರಿಕೆ ಎಂದನು. ಪಾಪನಾಯಕನ ಕೋರಿಕೆಯಂತೆ ನಾರಾಯಣನು ತೃಪ್ತನಾಗಿ ತನ್ನ ಬಲಗಾಲಲ್ಲಿದ್ದ ಮುತ್ತಿನ ಕಾಲುಪೆಂಡೆ, ಒಂದು ಕತ್ತಿ (ಮುಕ್ಕಡ ಅಲಗು) ಕೊಟ್ಟ. ನಂತರ ಏ ಮಗುವೇ ದೊಡ್ಡವನಾದ ಮೇಲೆ ನೀನು ಬಹುದೊಡ್ಡ ಪವಾಡ ಪುರುಷನಾಗುವೆ, ವಾರ್ಧಕ್ಯದ ಅವಧಿಯಲ್ಲಿ ತೊಂದರೆಗಳಾಗಿ ಐಕ್ಯನಾಗುವೆ. ಆ ಸ್ಥಳವು ಪೂಜಾಕ್ಷೇತ್ರವಾಗಿ, ಸರ್ವರಿಂದ ಪೂಜನೀಯ ವ್ಯಕ್ತಿಯಾಗುವೆಂದು ಹಾರೈಸಿದನು.

ತಿರುಪತಿಯಿಂದ ಮರಳಿ ಸ್ವಗ್ರಾಮಕ್ಕೆ ಪಾಪನಾಯಕ ಬರುವ ದಾರಿಯಲ್ಲಿ ಚಳ್ಳಕೆರೆ ಸಮೀಪದ ಪುನಃ ದನಕರುಗಳನ್ನು ಕಾಯುವ ಕೆಲಸಕ್ಕೆ ಹೋಗಲಿಲ್ಲ. ತನ್ನ ಶರೀರ ಬೆಳೆದು ಅಗತ್ಯವಾದ ಆಕರ್ಷಣೆಗಳಿಗೆ ಮಾರು ಹೋಗಿ, ತಂದೆತಾಯಿಗಳನ್ನು ನೋಡಲು ಕಾತರಿಸಿದ.

ತಂದೆ – ತಾಯಿಯರ ದರ್ಶನ
ತಂದೆ – ತಾಯಿಗಳನ್ನು ಕೂಡಲು ಅರಣ್ಯ, ಬೆಟ್ಟ – ಗುಡ್ಡವನ್ನು ಸುತ್ತುವಾಗ ಕಾಡಿನ ಬೇಡರನು ಭೇಟಿಮಾಡುತ್ತಾ ಮುಂದುವರೆದ. ಕೊನೆಗೆ ಕ್ಯಾಸಪುರ ಸುತ್ತ – ಮುತ್ತ ಬಂದು ವಿಚಾರಿಸಿದಾಗ ಸುಳಿವು ಸಿಕ್ಕಿತು. ತಂದೆ – ತಾಯಿಗಳಿಗೆ (ಕೋರ‍್ಲಮಲ್ಲಿನಾಯಕ – ಬಾಣದ ಪಟ್ಟಮ್ಮ) ಮಗು ಜೀವಂತವಾಗಿಲ್ಲವೆಂಬ ನಂಬಿಕೆಯಿತ್ತು. ಹುಟ್ಟಿದ ಮಗುವನ್ನು ಕಾಡಿನಲ್ಲಿ ಬಿಟ್ಟು ಬಂದಿದ್ದರಿಂದ ಸತ್ತು ಹೋಗಿರಬಹುದೆಂದು ತಿಳಿದಿದ್ದರು. ಅಂಥ ಮಗುವನ್ನು ಕೊಟ್ಟನಲ್ಲ ಎಂದು ದೇವರನ್ನೇ ನಿಂದಿಸಿದರು. ಆಗಿನಿಂದ ಅವರಿಗೆ ಮಕ್ಕಳ ಭಾಗ್ಯವೇ ನಿಂತು ಹೋಗಿತ್ತು. ಜನಿಸಿದಾಗಿನಿಂದಲೂ ತಂದೆತಾಯಿಗಳ ಮುಖ ಕಾಣದ ನಾಯಕನಿಗೆ ಮುಜುಗರವಾಯಿತು. ಕೊನೆಗೆ ತನ್ನ ಇಚ್ಛಾಶಕ್ತಿಯಿಂದ ತನ್ನ ಸಂಬಂಧಿಕರನ್ನು ಗುರುತು ಹಿಡಿದ.

ಆ ಪರಿಸರ ಹೇಗಿತ್ತೆಂದರೆ: ಸಣ್ಣ ಹುಲ್ಲಿನ ಗುಡಿಸಲು, ದನಗಳ ರೊಪ್ಪ, ಇಕ್ಕೆಲಗಳಲ್ಲಿ ಮರಗಳ ಅಡಿಯಲ್ಲಿ ಸಣ್ಣಗೂಟಗಳ ಸಾಲುಗಳು. ಚಿಕ್ಕಕರುಗಳನ್ನು ಆ ಗೂಟಗಳಿಗೆ ಕಟ್ಟಲಾಗಿತ್ತು. ನಾಯಿಗಳ ಗುಂಪು, ಹಗ್ಗಗಳ ಗೊಂಚಲು, ಮೊಣಕಾಲುತನಕ ನಾರುಮಡಿಗಳನ್ನಿಟ್ಟು ಬರೀ ಮೈಯಿಂದ ಇಬ್ಬರು ಮಹಿಳೆಯರಿದ್ದರು. ಪಾಪನಾಯಕನಂತೆ ಚಲ್ಯಾಣ ಉಟ್ಟ ಕರಿ ಕಂಬಳಿಕೋರಿ ಧರಿಸಿದ ವೃದ್ಧ ಪುರುಷನನ್ನು ಕಂಡು ಈತನೇ ಎಂದುಕೊಂಡ.

ಪಚ್ಚಪದಿಪಾಲಮ್ಮ ಲಂಗೋಟಿ ಧರಿಸಿದ ಪಾಪನಾಯಕನನ್ನು ಕಂಡು, ತದೇಕ ದೃಷ್ಟಿಯಿಂದ ನೋಡುತ್ತಿದ್ದಳು. ಈ ಬಾಲಕ ತನ್ನ ಅಣ್ಣ ಕೋರ‍್ಲಮಲ್ಲಿನಾಯಕನ ಹೋಲಿಕೆಯಂತೆ ಕಾಣುತ್ತಿದ್ದ. ಅಣ್ಣನ ಮಗ ಅಡವಿಯಲ್ಲಿ ಬಿಟ್ಟು ಬಂದಾಗ ಸತ್ತಿರಬಹುದು. ಆದರೆ ಈ ಮಗು ಅಣ್ಣನಂತಿದೆ ಎಂದು ಪರಿಒರಿಯಾಗಿ ಯೋಚಿಸಿ ಹತ್ತಿರಕ್ಕೆ ಕರೆದಳು. ಆಗ ಪಾಪನಾಯಕ ಇವಳೇ ನನ್ನ ಅತ್ತೆಯೆಂದು ತಿಳಿದ. ಆದರೆ ಪಾಲಮ್ಮ ಅನುಮಾನಿಸಿದಾಗ ಇವನು ‘ನಿನ್ನ ಸೋದರಳಿಯನಾದ ಸೂರ್ಯಪಾಪ ನಾಯಕ’ ನೆಂದನು. ಅಣ್ಣನ ಮಗನೆಂದು ತಿಳಿದು ಅವಳು ಸಂತೋಷಪಟ್ಟಳು. ಪೂರ್ವದ ಕಥೆಯನ್ನು ಪಾಪನಾಯಕ ಅತ್ತೆಗೆ ತಿಳಿಸಿದ. ಆಗ ಅವಳು ಅಣ್ಣ – ಅತ್ತಿಗೆಯನ್ನು ಕರೆತಂದಳು. ತಂದೆ – ತಾಯಿಗಳಿಗೆ ಆಶ್ಚರ್ಯವಾಯಿತು. ಅವರಿಗೆ ಪಾಪನಾಯಕ ನಮಸ್ಕರಿಸಿದ. ಮಗುವನ್ನು ಭೂತವೆಂದು ತಿಳಿದು ಅಡವಿಯಲ್ಲಿ ಬಿಟ್ಟು ಬಂದೆವು. ನಾವು ತಪ್ಪು ಮಾಡಿದವು, ಕ್ಷಮಿಸು ಎಂದರು.

ನೀನು ದೇವಮಾನವನೆಂಬುದು ತಿಳಿಯಲಿಲ್ಲ. ಆದಿಶೇಷ, ನಾರಾಯಣನ ದರ್ಶನ ಮಾಡಿ ಬಂದ ಕೀರ್ತಿಶಾಲಿ ನೀನು. ನಮ್ಮೆಲ್ಲರನ್ನು ಕ್ಷಮಿಸು ಎಂದನು. ತಂದೆತಾಯಿಗಳನ್ನು ಸಂತೈಸುತ್ತಾ, ಮುಂದೆ ಚಿಂತಿಸುವ ಅಗತ್ಯವಿಲ್ಲ ಎಂದನು. ನಿಮ್ಮಿಂದ ನನಗೆ ಶಿವಪಾರ್ವತಿಯರ, ಆದಿಶೇಷನ ದರ್ಶನ ದೊರೆಯಿತು. ಮಾಣಿಕ್ಯ ದೊರೆಯಿತು ಎಂದು ನಡೆದ ಪೂರ್ವಕಥೆಯನ್ನೆಲ್ಲ ವಿವರಿಸಿದನು. ಅತ್ತೆಯನ್ನು ತನ್ನ ಗಂಡನ ಮನೆಗೆ ಬಿಟ್ಟುಬರಲು ಸಿದ್ಧತೆ ನಡೆಸಿದರು. ಪಾಪನಾಯಕನು ಮಾತನಾಡುತ್ತಿದ್ದಂತೆ ಅವಳು ಕಾಡಿಗೆ ಹೋಗಿ – ಹಣ್ಣು – ಹಂಪಲುಗಳನ್ನು ತಂದುಕೊಟ್ಟಳು.

ಕಾಮೆಂಟ್‌ಗಳಿಲ್ಲ: