ಗುರುವಾರ, ಜೂನ್ 9, 2016

ಅಪರೂಪದ ಡಾ ದಡ್ಡಿ ಜಮಖಂಡಿ

-ಕುಂ.ವೀರಭದ್ರಪ್ಪ.



ಇಂಥವರೂ ಇರುವರು ಎಂದು ತಿಳಿದದ್ದು ಕೆಲವು ತಿಂಗಳ ಹಿಂದೆ. ಇಂಥಲ್ಲಿಗೆ ಬರಬೇಕೆಂದು ಯಾರೊ ಕರೆದರು. ಅಥಣಿಯ ಪ್ರಿಯಮಿತ್ರ ಪ್ರೊ ಸಿದ್ದಣ್ಣ ಉತ್ನಾಳ ಫೋನಿನಲ್ಲಿ ಒತ್ತಡ ಹೇರಿದರು. ಹೋಗುವುದು ಅನಿವಾರ್ಯವಾಯಿತು. ಅಲ್ಲದೆ ಸುರುಪುರದಂಥ ಇತಿಹಾಸ ಪ್ರಸಿದ್ದ ಸ್ಥಳಗಳೆಂದರೆ ನನಗೆ ಪಂಚಪ್ರಾಣ. ಸೃಜನಶೀಲ ಲೇಖಕನಾಗಿದ್ದರೂ ನಾನು ಇತಿಹಾಸದ ನಮ್ರ ವಿದ್ಯಾರ್ಥಿ. ಅರಮನೆ ಕಾದಂಬರಿ ಬರೆಯುವ ಪೂರ್ವದಲ್ಲಿ ಸುರಪುರದಲ್ಲಿ ಮೂರು ನಾಲ್ಕು ದಿವಸಗಳ ಕಾಲ ವಾಸ್ತವ್ಯ ಹೂಡಿ ಕ್ಷೇತ್ರಕಾರ್ಯ ನಡೆಸಿದ್ದೆ. ಅರಮನೆ ಹಾಗೂ ಕೋಟೆಕೊತ್ತಳ ಗುಡ್ಡಗಾಡು ಅಲೆದಾಡಿದ್ದೆ. ಹತ್ತೊಂಭತ್ತನೆ ಶತಮಾನದ ಆರಂಭದಲ್ಲಿ ಮೆಡೊಸ್ ಟೇಲರ್ ಸುರಪುರ ಸಂಸ್ಥಾನದ ಆಡಳಿತಾಧಿಕಾರಿಯಾಗಿದ್ದ. ಜನಪರ ಕೆಲಸ ಕಾರ್ಯಗಳಿಂದ ಅಲ್ಲೆಲ್ಲ ಅಪಾರ ಜನಪ್ರಿಯತೆ ಗಳಿಸಿದ್ದ. ಚಿತ್ರಕಲಾವಿದ, ಇತಿಹಾಸಕಾರ, ಸೃಜನಶೀಲ ಲೇಖಕ, ಸಮರ್ಥ ಆಡಳಿತಗಾರ, ಕಷ್ಟಸಹಿಷ್ಣು! ಈ ಎಲ್ಲ ಗುಣಗಳು ತನ್ನಲ್ಲಿ ಮೇಳ್ಯೆಸಿದ್ದವು. ಆತ ಸ್ಥಳೀಯರಿಂದ ಮಹಾದೇವಸ್ವಾಮಿ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ, ಆತನ ಕಾದಂಬರಿ ಕನ್ ಫೆಷನ್ ಆಫ್ ಎ ಥಗ್ ಪಿಂಡಾರಿಗಳ ರೌದ್ರಕಥಾನಕ. ಸುರಪುರದ ಎತ್ತರದ ಸ್ಥಳದ ಮೇಲೆ ಆತ ಕಟ್ಟಿಸಿದ ಬಂಗಲೆ ಇದೆ, ಒಂದು ಬಾಗಿಲು ತೆರೆದರೆ ಉಳಿದೆಲ್ಲ ಬಾಗಿಲುಗಳು ಏಕಕಾಲಕ್ಕೆ ತೆರೆದುಕೊಳ್ಳುತ್ತವೆ. ಈ ಕಾರಣದಿಂದ ಅದು ವಾಸ್ತು ಹಾಗು ತಂತ್ರಜ್ನಾನದ ಕಾರಣದಿಂದ ವಿಸ್ಮಯ. ಅದು ಟೇಲರ್ ಮಂಜಿಲ್ ಎಂದು ಪ್ರಸಿದ್ದವಾಗಿದೆ. ಕೇಳಿದ ಪ್ರವಾಸಿಗರಿಗೆಲ್ಲ ತೆರೆದೂ ತೆರೆದು ಅದರ ಕಾರ್ಯಕ್ಷಮತೆ ಕ್ಷೀಣಿಸಿದೆ. ಏನೆ ಆಗಲಿ ಆ ಟೇಲರ್ ಮಂಜಿಲ್ ನಲ್ಲಿ ವಾಸ್ತವ್ಯ ರೋಮಾಂಚಕಾರಿ ಅನುಭವ. ಸುರಪುರ ಸಗರ ನಾಡಿನ ಮಣಿಮಕುಟ. ಅಲ್ಲಿನ ಗುಡ್ಡಗಾಡು ಪ್ರದೇಶ ಪ್ರೇಕ್ಷಣೀಯ. ಕೀಳರಿಮೆಯ ನಿರುಪದ್ರವಿ ಪ್ರಜಾನಿಕವಿರುವ ಕಲ್ಯಾಣ ಕರ್ನಾಟಕ. ನನ್ನನ್ನು ಆಮಂತ್ರಿಸಿದ್ದ ಯುವಕ ಆ ಪ್ರದೇಶದ ಟಿಪ್ಪಣಿಯಂತಿದ್ದ. ಕಾರ್ಯಕ್ರಮವಿದ್ದದ್ದು ಕೆಂಭಾವಿ ಸಮೀಪದ ಕುಗ್ರಾಮದಲ್ಲಿ. ಆ ಹಳ್ಳಿ ಸಹ ದಾರಿದ್ರ್ಯದ ಪ್ರಸಾಧನ ಲೇಪಿಸಿಕೊಂಡಿತ್ತು. ವಿದ್ಯುತ್ ಅನಿಯಂತ್ರಿತ ತಾಪತ್ರಯದಿಂದ ಕಾರ್ಯಕ್ರಮ ಒಂದೆರಡು ತಾಸು ಲೇಟಾಗಿ ಆರಂಭವಾಯಿತು. ಸ್ಥಿರಚಿತ್ರ ಪ್ರದರ್ಶನ ಉದ್ಘಾಟಿಸುವ ಸರದಿ ನನ್ನದಿತ್ತು. ಅರೆಬರೆ ಬೆಳಕಲ್ಲಿ ಛಾಯಾಚಿತ್ರಗಳನ್ನು ನಿಖರವಾಗಿಯು, ಛಾಯಾಗ್ರಾಹಕರನ್ನು ಸ್ಪಷ್ಟವಾಗಿಯು ನೋಡುವುದು ಆಗಲಿಲ್ಲ, ಆದರು..


ಅಲ್ಲಿದ್ದ ಸ್ಥಿರಚಿತ್ರಗಳು ಹಾಗು ಅವುಗಳ ರೂವಾರಿಗಳನ್ನು ನೋಡಿದ ಬಳಿಕ ನಾನು ಅಚ್ಚರಿಗೊಂಡೆ. ಅಮೇರಿಕಾದ ನಯಾಗಾರದಿಂದ ಹಿಡಿದು ಕರ್ನಾಟಕದ ಗೋಕಾಕ್ ಜಲಪಾತದವರೆಗೆ, ವಾಷಿಂಗ್ ಟನ್ ನ ಶ್ವೇತಭವನದಿಂದ ಹಿಡಿದು ಬಾಗಲಕೋಟೆಯ ಚಿಕ್ಕ ವಾಡೆವರೆಗೆ ಸುಮಾರು ನೂರಾರು ವ್ಯೆವಿದ್ಯಮಯ ಹಾಗು ಅರ್ಥಪೂರ್ಣ ಛಾಯಾಚಿತ್ರಗಳು ಅಲ್ಲಿ ಅನಾವರಣಗೊಂಡಿದ್ದವು, ಅವುಗಳನ್ನು ಕ್ಲಿಕ್ಕಿಸಿದ ವ್ಯಕ್ತಿ ಡಾ ದಡ್ಡಿ, ತಾವು ತಜ್ಞವ್ಯೆದ್ಯರಾಗಿದ್ದರು, ದೇಶ ವಿದೇಶಗಳನ್ನು ಸುತ್ತಿದ್ದರು ಸಾಮಾನ್ಯ ವ್ಯಕ್ತಿಯಂತಿದ್ದರು. ಅವರು ಕಣ್ಣಿಗೆ ಗೋಚರಿಸಿದವರನ್ನು ಹತ್ತಿರ ಕರೆದು ಚಿತ್ರಗಳನ್ನು ಸೂಕ್ತ ವಿವರಣೆ ಸಹಿತ ತೋರಿಸುತ್ತಿದ್ದರು. ಅವರ ಗ್ರಾಮೀಣ ಕಳಕಳಿ ನನಗೆ ಹಿಡಿಸಿತು.ನಮ್ಮ ಹಳ್ಳಿ ಜನರ ಅನುಭವ ಜಗದಗಲ ವಿಸ್ತಾರಗೊಳ್ಳಬೇಕೆಂಬ ಆಸೆಯಿಂದ ಇಂಥ ಪ್ರದರ್ಶನಗಳನ್ನು ಅವಕಾಶವಿದ್ದೆಡೆ ಏರ್ಪಡಿಸುವುದಾಗಿ ಹೇಳಿದರು.

ಇಂಥವರು ಇರುತ್ತಾರೆಯೆ ಎಂಬ ಪ್ರಶ್ನೆಗೆ "ಡಾ ಹನುಮಂತಪ್ಪ ಗೋವಿಂದಪ್ಪ ದಡ್ಡಿ ಎಂಡಿ' ಅತ್ಯುತ್ತಮ ನಿದರ್ಶನ. ಕೆಲವು ಮಾತುಗಳ ಬಳಿಕ ಹೆಚ್ಚು ಆತ್ಮೀಯರೆನಿಸಿದರು. ಕೆಲವು ದಿವಸಗಳ ಬಳಿಕ ತಮ್ಮೆರಡು ಕೃತಿಗಳನ್ನು ಉಳಿದ ಪರಿಕರಗಳನ್ನು ಕಳಿಸಿದರು. ಅವೆರಡು ಶ್ರೀಯುತರ ಸೃಜನಶೀಲ ಸಾಹಸದ ಕುರುಹುಗಳು ಎಂದು ಭಾವಿಸಿದೆ. Glimpses of Adil Shahi and other Monuments of Bijapur Distirict ಎಂಬ ಕೃತಿ. ಇದರಲ್ಲಿ ಐತಿಹಾಸಿಕ ನಗರ ವಿಜಯಪುರದ ಸಂಪೂರ್ಣ ಮಾಹಿತಿ ಕಿಕ್ಕಿರಿದಿದೆ. ಅಲ್ಲದೆ ಆದಿಲ್ ಶಾಹಿ ಆಡಳಿತಾವಧಿಯ ಸಹಸ್ರಾರು ಭಗ್ನಾವಶೇಷಗಳ. ವಿಶ್ವಭಾಷೆಯ ಹೃದಯವಿದ್ರಾವಕ ಕಥೆಯ ಕುರುಹುಗಳಂತಿರುವ ಸ್ಮಾರಕಗಳ ಅಪರೂಪದ ಕಲ್ಲರ್ ಕಲ್ಲರ್ ಸ್ಥಿರಚಿತ್ರಗಳಿವೆ. ಪ್ರತಿ ಚಿತ್ರದ ಜೊತೆ ಸಾಂದರ್ಭಿಕ ಮಾಹಿತಿ ಸಹ ಇದೆ.

ಡಾ ದಡ್ಡಿ ಈ ಕೃತಿ ರಚನೆಗೆ ಪೂರ್ವದಲ್ಲಿ ಹಲವು ತಿಂಗಳು ಕಾಲ ಜಿಲ್ಲೆಯಾದ್ಯಂತ ಅಲೆದಿದ್ದಾರೆ, ಸ್ಠಳೀಯ ಇತಿಹಾಸಕ್ಕೆ ಸಂಬಂಧಿಸಿದ ನೂರಾರು ಗ್ರಂಥಗಳನ್ನು ಪರಾಮರ್ಶಿಸಿದ್ದಾರೆ. ಕಿಮ್ಮತ್ತಿನ ಕೆಮೆರಾ ಲೆನ್ಸುಗಳನ್ನು ಉಪಯೋಗಿಸಿದ್ದಾರೆ. ಪ್ರತಿ ಸ್ಮಾರಕಕ್ಕೆ ಕಾವ್ಯಾತ್ಮಕ ಪ್ರಭಾವಳಿ ತೊಡಿಸಿದ್ದಾರೆ. ಈ ಸತ್ಕಾರ್ಯಕ್ಕೆ ಕೈಯಿಂದ ಅಪಾರ ಹಣ ಖರ್ಚು ಮಾಡಿದ್ದಾರೆ. ಹೀಗಾಗಿ ಈ ಕೃತಿಗಳು ಪ್ರವಾಸಿಗರಿಗೆ ಅಭಿಮಾನಿಗಳಿಗೆ ಅತ್ಯಮೂಲ್ಯ ಮಾಹಿತಿ ಕಣಜ. ಇದರ ಹಾಗೆ ಡಾಕ್ಟರರ ಇನ್ನೊಂದು ಅತ್ಯುಪಯುಕ್ತ ಕೃತಿ ಇದೆ, ಅದೆಂದರೆ Glimpses of Heritage Monuments of Bagalakota Distirict! ಇದರಲ್ಲಿ ಸಿಮೆಂಟ್ ಜಿಲ್ಲೆ ಬಾಗಲಕೋಟೆಯ ಸಚಿತ್ರ ಸಮಗ್ರ ಮಾಹಿತಿ ಇದೆ. ಇವುಗಳನ್ನು ಹೊರತುಪಡಿಸಿ ಅರವತ್ತೈದರ ಹರೆಯದ ಡಾ ದಡ್ಡಿ ಹಲವು ಮೌಲಿಕ ಕೃತಿಗಳನ್ನು ರಚಿಸಿ ಸ್ವಂತ ಖರ್ಚಿನಲ್ಲಿ ಪ್ರಕಟಿಸಿದ್ದಾರೆ. ಆದಿಲ್ ಶಾಹಿ ಸ್ಮಾರಕಗಳು ಒಂದು ಇಣುಕು ನೋಟ, ವಿಜಾಪುರ ಪರಂಪರೆ ಮುಖ್ಯವಾದವುಗಳು.

ಡಾ ದಡ್ಡಿಯವರ ಈ ಕೃತಿಗಳು ಸಂಗ್ರಹ ಹಾಗು ಅಧ್ಯಯನ ಯೋಗ್ಯ, ಅದರಲ್ಲು ವಿಜಯಪುರ ಹಾಗು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸ ಮಾಡುವವರ ಕೈಯಲ್ಲಿ ಇರಲೇಬೇಕಾದ ಅತ್ಯಮೂಲ್ಯ ಕೃತಿಗಳು. ದುರಾದೃಷ್ಟವಶಾತ್ ನಮ್ಮ ಗ್ರಂಥಾಲಯ ಇಲಾಖೆಯಾಗಲಿ, ಪ್ರವಾಸೋಧ್ಯಮ ಇಲಾಖೆಯಾಗಲಿ ಇವುಗಳ ಕಡೆ ಕಣ್ಣೆತ್ತಿ ಸಹ ನೋಡಿಲ್ಲ, ಹೀಗಾಗಿ ಇವುಗಳ ಸಹಸ್ರಾರು ಪ್ರತಿಗಳು ಜಮಖಂಡಿಯ ದಡ್ಡಿ ದವಾಖಾನೆಯಲ್ಲಿ ಅನಾಥ ಸ್ಥಿತಿಯಲ್ಲಿವೆ. ಕೆಳಗೆ ಲೇಖಕರ ವಿಳಾಸ ಹಾಗು ದೂರವಾಣಿ ವಿವರವಿದೆ, ದಯವಿಟ್ಟು ಅವರನ್ನು ಸಂಪರ್ಕಿಸಿ. ಅವರಲ್ಲಿ ಆತ್ಮವಿಶ್ವಾಸ ತುಂಬುವ ಬೆಂಬಲಿಸುವ ಹೊಣೆ ನಮ್ಮೆಲ್ಲರದ್ದು.

ಡಾ ಹನುಮಂತಪ್ಪ ಗೋವಿಂದಪ್ಪ ದಡ್ಡಿ ಅವಿಶ್ರಾಂತ ಕ್ರಿಯಾಶೀಲ ವ್ಯಕ್ತಿ. ಮುಖ್ಯವಾಗಿ ಹೆಚ್ ಐ ವಿ ಸೋಂಕಿತರ ಆಪದ್ಬಾಂಧವ. ದಿನ ಬೆಳಗಾದರೆ ಹತ್ತಾರು ಏಡ್ಸ್ ವ್ಯಾಧಿಪೀಡಿತರು ಜಮಖಂಡಿಯ ದಡ್ಡಿ ಆಸ್ಪತ್ರೆಯಲ್ಲಿ ಆಶ್ರಯ ಪಡೆಯುತ್ತಾರೆ. ನಮ್ಮ ಡಾಕ್ಟರ್ ಅಶಕ್ತ ಹೆಚ್ ಐ ವಿ ಸೋಂಕಿತರಿರುವಲ್ಲಿಗೆ ತಾವೆ ಧಾವಿಸಿ ಸೂಕ್ತ ಚಿಕಿತ್ಸೆ ನೀಡುವರು, ಅದು ಉಚಿತವಾಗಿ. ಆದ್ದರಿಂದ ಜಮಖಂಡಿಯ ದಡ್ಡಿ ದವಾಖಾನೆ ವ್ಯಾಧಿಗ್ರಸ್ತರ ಸಾಂತ್ವನ ಕೇಂದ್ರ. ನಮ್ಮ ದಡ್ಡಿ ಇದುವರೆಗೆ ನಾಲ್ಕು ನೂರಕ್ಕು ಹೆಚ್ಚು ಯುವವೈದ್ಯರಿಗೆ ಏಡ್ಸ್ ಚಿಕಿತ್ಸೆ ಕುರಿತು ಸೂಕ್ತ ತಿಳವಳಿಕೆ ಹಾಗು ತರಭೇತಿ ನೀಡಿದ್ದಾರೆ. ಇ಼ವಿಷ್ಟೆ ಅಲ್ಲದೆ ಡಾ ದಡ್ಡಿ ವಿವಿಧ ಸಮಾಜಮುಖಿ ಸಂಘಸಂಸ್ಥೆಗಳ ಸಂಗಡ ನಿಕಟ ಬಾಂಧವ್ಯವಿರಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ ಸಾಲಿಯಾನ ನೀಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ, ಇತಿಹಾಸ ಕುರಿತು ವಿದ್ವತ್ ಮಹಾಪ್ರಬಂಧ ಮಂಡಿಸಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಪಡೆದಿದ್ದಾರೆ. ಇವೊಂದೆ ಅಲ್ಲದೆ ಸಂಘ ಸಂಸ್ಥೆಗಳಿಂದ ಹಲವಾರು ಗೌರವ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಜಮಖಂಡಿಯ ಯುತ್ ಸ್ಪೋರ್ಟ್ ಕ್ಲಬ್ಬಿನ ಅಧ್ಯಕ್ಷರಾಗಿ ಉದಯೋನ್ಮುಖ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇಂಥ ಅಪರೂಪದ ವೈದ್ಯರಾದ ಡಾ ಹನುಮಂತಪ್ಪ ಗೋವಿಂದಪ್ಪ ದಡ್ಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿದ್ದಿದ್ದರೆ!

(ಡಾ ದಡ್ಡಿ, ದಡ್ಡಿ ಆಸ್ಪತ್ರೆ ಜಮಖಂಡಿ ಜಿಲ್ಲೆ ಬಾಗಲಕೋಟೆ, ಮೊಬೈಲ್ 9448118335)

ಕಾಮೆಂಟ್‌ಗಳಿಲ್ಲ: