ಗುರುವಾರ, ಜೂನ್ 16, 2016

ಜನಪದದ ಅ.ಆ.ಇ.ಈ ಕಲಿಸಿದ ಡಾ. ಕಲ್ಬುರ್ಗಿಯವರು


-ಆರ್. ಜ್ಯೋತಿಗುರುಪ್ರಸಾದ್ಅದು 1998ರ ಇಸವಿ ಭುವನೇಂದ್ರ ಕಾಲೇಜು, ಕಾರ್ಕಳದಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದೆ. ಸಾಹಿತ್ಯ ಸಂಘದ ಒಬ್ಬ ಮುಖ್ಯ ಅತಿಥಿಯಾಗಿ ಉಪನ್ಯಾಸ ಕೊಡಲು ಹಂಪಿ ವಿಶ್ವವಿದ್ಯಾನಿಲಯದ ಕುಲಪತಿಗಳು ಬಂದಿದ್ದರು. ಕರಿಯ ಕೋಟ್ ತೊಡುವ ಯಾವ  ಬಿಗುಮಾನದ ಭಾರವೂ ಇಲ್ಲದೇ ಜನ ಸಾಮಾನ್ಯರ ಸರಳ ಶಿಸ್ತಿನಲ್ಲಿ ನಗುಮುಖದಲ್ಲಿ ಮಾತಾಡಲು ವೇದಿಕೆಯಲ್ಲಿ ನಿಂತರು. ಅವರು ಆರಿಸಿಕೊಂಡ ವಿಷಯ - 'ಜನಪದ'. ಆ ಮೊದಲು ಈ ಬಗ್ಗೆ ಏನು ತಿಳಿದಿದ್ದೆನೋ - ಇಲ್ಲವೋ ಎಂಬುದು ನನಗೆ ಮರೆತು ಹೋಗುವಂತೆ ಕಲ್ಬುರ್ಗಿಯವರು ಅಂದು ನುಡಿದ ಜನಪದದ ತಳಹದಿಯ ಮಾತುಗಳೇ ನನಗೆ ಬಹಳ ಹಿಡಿಸಿ ಮಾರ್ಗದರ್ಶನದಂತೆ ಮನನವಾದವು. ಜನಪದ ಗೀತೆಗಳ ಹುಟ್ಟಿನ ಬಗ್ಗೆ ಅವರು ನುಡಿದ ಮಾತುಗಳು ನನ್ನ ಚಿತ್ತಭಿತ್ತಿಯಲ್ಲಿ ನೆಲೆಗೊಂಡಿರುವಂತೆ ಈ ರೀತಿ ಇದೆ - ಜನಪದರು ಅನಾಮಿಕ ಕವಿಗಳು. ಅವರ ಶ್ರಮದ ಲಯವೇ ಅವರ ಹೃದಯ ಲಯವಾಗಿ ಅವರ ಶ್ರಮದ ಕೆಲಸಕ್ಕೆ ಜೊತೆ ಕೊಟ್ಟು ಅವರ ಸಹಜ ನುಡಿಗಳು ಅವರ ಬಾಯಿಂದ ಹೊರಟು ಕ್ರಮಬದ್ಧ ಜನಪದ ಗೀತೆಗಳಾಗಿ ಚಾಲ್ತಿಯಲ್ಲಿವೆ.

ನನ್ನ ಮನಸ್ಸಿನಲ್ಲಿ 'ಜನಪದ', 'ಶ್ರಮದ ಕೆಲಸ', 'ಹೃದಯದ ಲಯ' ಅಚ್ಚಳಿಯದಂತೆ ನೆಲೆಗೊಂಡು ನನಗೆ ಅವರ ಈ ಉಪನ್ಯಾಸದಿಂದ ಬಹಳ ಉಪಯುಕ್ತವಾಗಿ ಈ ಉಪಯುಕ್ತತೆಯನ್ನು ಕುರಿತು ಧನ್ಯವಾದ ತಿಳಿಸಿ ಕಾಗದ ಬರೆದಿದ್ದೆ. ಉತ್ತರ ನಿರೀಕ್ಷಿಸಿರಲಿಲ್ಲ. ಆದರೆ ಉಪಕುಲಪತಿ ಡಾ. ಕಲ್ಬುರ್ಗಿಯವರಿಂದ ನನಗೆ ಅಭಿನಂದನಾ ಪತ್ರ ಬಂದಿತ್ತು. ಅವರ ಮಾತುಗಳನ್ನು ಶ್ರದ್ಧೆಯಿಂದ ಆಲಿಸಿ ತಿಳುವಳಿಕೆಗೆ ಅಳವಡಿಸಿಕೊಂಡಿದ್ದಕ್ಕೆ ಕೃತಜ್ಞತೆ ಹೇಳಿದ್ದರು. ಇಂಥವರು ಕಲ್ಬುರ್ಗಿ ತಾನು ತಿಳಿದುಕೊಂಡ ಸಂಗತಿಯನ್ನು ಅದರ ಸಹಜಗತಿಗೆ ಅನುಗುಣವಾಗಿ ತಮ್ಮ ನುಡಿಗಳಲ್ಲಿ ಪ್ರಾಮಾಣಿಕವಾಗಿ ಸಂವಹನಗೊಳಿಸುವ ಛಾತಿಯುಳ್ಳವರು.
 
ಅಂದಿನಿಂದ ಈ ವರ್ಷದ 'ಧಾರವಾಡ ಸಾಹಿತ್ಯ ಸಂಭ್ರಮ'ದವರೆಗೆ ಎಲ್ಲಿ ಭೇಟಿಯಾದರೂ ಅವರದು ನನ್ನನ್ನು ನೋಡಿದ ಕೂಡಲೇ ನೆನಪು ಹೋಗದ ಮುಖ ಮುದ್ರೆ. ಕುಶಲೋಪರಿ ವಿಚಾರಿಸುವುದು ಹಿತ ಚಿಂತಕರಾಗಿ ಪ್ರತಿಕ್ರಿಯಿಸುವುದು, ತಮಾಷೆಯಲ್ಲಿ ನಗೆ ಚಟಾಕಿ ಹಾರಿಸುವುದು ಇಂಥ ಸರಳ ದೊಡ್ಡ ವ್ಯಕ್ತಿ ಕಲ್ಬುರ್ಗಿ. ಅವರ ಸಂಶೋಧನೆಗಳು, ಡಾಕ್ಟರೇಟ್ ಪದವಿ, ಪುರಸ್ಕಾರಗಳು, ಪದವಿಗಳು ಯಾವುವೂ ಅವರನ್ನು ಒಬ್ಬ ನಿರ್ಜೀವ ಮನುಷ್ಯನ 'ಸ್ಟೇಟ್ಮೆಂಟ್' ಕೊಡಲು ಬಿಡುತ್ತಿರಲಿಲ್ಲ. 'ಪಂಪ ಭಾರತ'ದ ಬಗ್ಗೆ ಇರುವಷ್ಟು ಆಸ್ಥೆ ಅವರಿಗೆ ಮೌಢ್ಯದ ವಿರುದ್ಧ ಇರಬೇಕಾದ ನಿಜವಾದ ಧಾರ್ಮಿಕ ಚಿಂತನೆಯ ಬಗೆಗೂ ಇತ್ತು.

ಇಂಥ ಚಿಂತನಾ ಮಾರ್ಗದಲ್ಲೇ ಅವರು ಸಿಂಧೂ ಬಯಲಿನ ನಾಗರಿಕತೆಯ ಜೀವನ ಶೈಲಿಯಾಗಿ 'ಹಿಂದೂ' ಧರ್ಮವನ್ನು ಕರೆದಿದ್ದಾರೆ. ಮೌಢ್ಯಗಳಿಗೆ ಒಳಗಾಗದಂತೆ ಜನತೆಯನ್ನು ಎಚ್ಚರಿಸುವ ಸುದುದ್ದೇಶದಲ್ಲಿ ಮಾತ್ರ ತಮ್ಮ ಸತ್ಯಶೋಧನೆಯ ಮಾತಾಡಿದ್ದಾರೆ. ಆದರೆ ಅವರ ಈ 'ಅಭಿವ್ಯಕ್ತಿ ಸ್ವಾತಂತ್ರ್ಯ'ವನ್ನು ಗುಂಡಿಕ್ಕಿ ಕೊಲ್ಲುವ ಹೇಯ ಕೃತ್ಯ ಕರ್ನಾಟಕಕ್ಕೆ ಮಾತ್ರವಲ್ಲ. ಇಂಥ ಕ್ರೌರ್ಯವನ್ನು ನಾವು ಒಕ್ಕೊರಲಿನಿಂದ ಧಿಕ್ಕರಿಸಿ ಕಲ್ಬುರ್ಗಿಯವರ ಸತ್ಯಸಂಧತೆಯ ಮಾರ್ಗದಲ್ಲಿ ಸಾಗಬೇಕಿದೆ.

ಕಾಮೆಂಟ್‌ಗಳಿಲ್ಲ: