ಸೋಮವಾರ, ಜೂನ್ 20, 2016

ದಲಿತ ಅಭಿವೃದ್ಧಿ ‘ಕಳಪೆ’ ಮಟ್ಟದಲ್ಲಿದೆ : ಚಂದ್ರ ಪೂಜಾರಿ


-ಚಂದ್ರ ಪೂಜಾರಿ

ಸೌಜನ್ಯ:http://janashakthi.co.in2014 ರಲ್ಲಿ ಕರ್ನಾಟಕದ 30 ಜಿಲ್ಲೆಗಳಿಗೂ ತಯಾರಿಸಲಾದ ಜಿಲ್ಲಾ ಮಟ್ಟದ ಮಾನವ ಅಭಿವೃದ್ಧಿ ವರದಿಯಲ್ಲಿ, ದೇಶದಲ್ಲೇ ಮೊದಲ ಬಾರಿಗೆ ದಲಿತ ಅಭಿವೃದ್ಧಿ ಸೂಚ್ಯಂಕವನ್ನು ರೂಪಿಸಿ ಅಳೆಯಲಾಗಿದೆ. ರಾಜ್ಯದ ಸರಾಸರಿ ದಲಿತ ಅಭಿವೃದ್ಧಿ ಸೂಚ್ಯಂಕ 0.3 ಆಗಿದೆ. ಈ ಸೂಚ್ಯಂಕದ ಗರಿಷ್ಟ ಮಟ್ಟ 1 ಆಗಿದ್ದು, 0.3 ‘ಕಳಪೆ’ ಮಟ್ಟ ಎಂದು ಪರಿಗಣಿಸಲಾಗುತ್ತದೆ. ಇದು ರಾಜ್ಯದಲ್ಲಿ ದಲಿತರ ಅಭಿವೃದ್ಧಿಯ ಮಟ್ಟವನ್ನು ಬಿಚ್ಚಿಟ್ಟಿದೆ. ಆದ್ದರಿಂದಲೇ ಏನೋ, ಎಲ್ಲಾ ಜಿಲ್ಲಾ ಮಟ್ಟದ ಮಾನವ ಅಭಿವೃದ್ಧಿ ವರದಿಗಳ ಸಾರಾಂಶ ಕೊಡುವ ರಾಜ್ಯ ಮಟ್ಟದ ವರದಿಯಲ್ಲಿ ಅದನ್ನು ಮರೆಮಾಚಲಾಗಿದೆ ಎಂದು ಹಂಪಿ ವಿ.ವಿ.ದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರೊ. ಚಂದ್ರ ಪೂಜಾರಿ ಹೇಳಿದರು. ಅವರು ಕರ್ನಾಟಕ ದಲಿತ ಹಕ್ಕುಗಳ ಸಮಿತಿ ಬೆಂಗಳೂರಿನ ಸೆನೆಟ್ ಹಾಲ್ ನಲ್ಲಿ ಸಂಘಟಿಸಿದ್ದ “ದಲಿತ ಮಾನವ ಅಭಿವೃದ್ಧಿ : ಸಮಸ್ಯೆ, ಸವಾಲುಗಳು ಮತ್ತು ಪರಿಹಾರಗಳು” ಎಂಬ ವಿಚಾರ ಸಂಕಿರಣದಲ್ಲಿ ‘ದಲಿತ ಮಾನವ ಅಭಿವೃದ್ಧಿ’ ಬಗ್ಗೆ ಮಾತನಾಡುತ್ತಿದ್ದರು.

ಈಗ ಬಳಸಲಾಗುತ್ತಿರುವ ಅಭಿವೃದ್ಧಿ ಸೂಚ್ಯಂಕ ಜಾತಿ-ಲಿಂಗ ತಾರತಮ್ಯಗಳು, ಅಸ್ಪøಶ್ಯತೆ, ಹಾಗೂ ಇವುಗಳಿಂದ ಜಾತಿ ಏಣಿಯಲ್ಲಿ ಕೆಳಗಿರುವವರ ಅಭಿವೃದ್ಧಿಯ ಮೇಲೆ ಆಗುವ ಪರಿಣಾಮಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಇದಕ್ಕಾಗಿ ದಲಿತ ಅಭಿವೃದ್ಧಿಯ ಮಟ್ಟ ಅಳೆಯುವ ಸೂಚ್ಯಂಕವನ್ನು ಅಭಿವೃಧ್ಧಿ ಪಡೆಸಲಾಗಿದೆ ಆದರೆ ಈ ಬಗ್ಗೆ ಜನಗಣತಿಯಲ್ಲಾಗಲಿ ಇತರ ಸಮೀಕ್ಷೆಗಳಲ್ಲಾಗಲಿ ಅಂಕೆ ಸಂಖ್ಯೆ ದೊರೆಯುವುದಿಲ್ಲ. ಇದಕ್ಕಾಗಿ ಪ್ರತಿ ಜಿಲ್ಲೆಯ ಒಂದು ಗ್ರಾಮ ಪಂಚಾಯತ್ ಪ್ರದೇಶದಲ್ಲಿ 50 ದಲಿತ ಕುಟುಂಬಗಳಲ್ಲಿ ಈ ಬಗ್ಗೆ ಕ್ಷೇತ್ರ ಸಮೀಕ್ಷೆ ನಡೆಸಲಾಯಿತು. ಈ ಮಾಹಿತಿಯನ್ನು ದಲಿತ ಅಭಿವೃದ್ಧಿಯ ಸೂಚ್ಯಂಕ ಅಳೆಯಲು ಬಳಸಲಾಗಿದೆ ಎಂದು ಪ್ರೊ.  ಪೂಜಾರಿ ಅವರು ಹೇಳಿದರು. (ಈ ಸೂಚ್ಯಂಕವನ್ನು ಪ್ರೊ. ಪೂಜಾರಿ ಅವರೇ ಅಭಿವೃಧ್ಧಿ ಪಡೆಸಿದ್ದಾರೆ.) ಈ ಸೂಚ್ಯಂಕಗಳನ್ನು ಮಾಡಿದರೆ ಸಾಲದು. ಈ ಸೂಚ್ಯಂಕಗಳನ್ನು ಬಳಸಿ ಅಭಿವೃದ್ಧಿ ನೀತಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು. ಇದಕ್ಕೆ ದಲಿತರಿಗೆ ಶಿಕ್ಷಣ, ಉದ್ಯೋಗ, ಭೂಮಿ, ಸಾಲಗಳು ಆದ್ಯತೆಯಲ್ಲಿ ದೊರಕಬೇಕು. ಆದರೆ ಯಾವ ಪಕ್ಷದ ಸರಕಾರ ಬಂದರೂ ಜಾಗತೀಕರಣದ ನೀತಿಗಳನ್ನು ಅನುಸರಿಸುತ್ತಿರುವಾಗ, ಈ ನಿಟ್ಟಿನಲ್ಲಿ ಪ್ರಗತಿ ಆಗುವ ಬದಲು ಹಿನ್ನಡೆ ಆಗುತ್ತಿದೆ ಎಂದು ಪ್ರೊ. ಪೂಜಾರಿ ಅವರು ಅಂಕೆಸಂಖ್ಯೆಗಳ ಸಮೇತ ವಿವರಿಸಿದರು. ಇದು ಬದಲಾಗಬೇಕಾದರೆ ದಲಿತರು ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಬದಲಿ ನೀತಿಗೆ ಹೋರಾಡಬೇಕು. ಅವನ್ನು ಜಾರಿ ಮಾಡಬಲ್ಲ ರಾಜಕೀಯ ಶಕ್ತಿಗಳಿಗೆ ಬೆಂಬಲ ಕೊಡಬೇಕು ಎಂದು ಕರೆ ಕೊಟ್ಟರು.

‘ಗೋಳೀಕರಣದ ದಲಿತ ವಿಮರ್ಶೆ ಬೇಕು’: ಚೆನ್ನಿ

ಜಾಗತೀಕರಣವನ್ನು ಲೇಖಕ ಚಿಂತಕ ಎಚ್.ಎಸ್.ಶಿವಪ್ರಕಾಶ್ ‘ಗೋಳೀಕರಣ’ (‘ಗೋಳ’ಎಂದರೆ ಜಗತ್ತು, ಎಲ್ಲರ ಗೋಳಿಗೆ ಕಾರಣವಾಗುತ್ತದೆ ಎಂಬ ಎರಡೂ ಅರ್ಥದಲ್ಲಿ) ಎಂದು ಕರೆದಿದ್ದರು. ಜಾಗತೀಕರಣ ‘ಸರ್ವರಿಗೂ ಸಮಗೋಳು’ ಹಂಚುತ್ತಿದೆ ಎಂಬುದರ ಬಗ್ಗೆ ಈಗ ಯಾರಿಗೂ ಸಂಶಯ ಉಳಿದಿಲ್ಲ. ಜಾಗತೀಕರಣವನ್ನು ಕಾರ್ಮಿಕರ, ಪರಿಸರದ, ಮಹಿಳೆಯರ ದೃಷ್ಟಿಕೋಣದಿಂದ ಗಂಭೀರವಾಗಿ ವಿಮರ್ಶೆ ಮಾಡಲಾಗುತ್ತಿದೆ. ಅದೇ ರೀತಿ ದಲಿತರ  ದೃಷ್ಟಿಕೋಣದಿಂದ ಗಂಭೀರವಾಗಿ ವಿಮರ್ಶೆ ಮಡುವ ತುರ್ತು ಇದೆ ಎಂದು ಶಿವಮೊಗ್ಗದ ಕುವೆಂಪು ವಿ.ವಿ.ದ ಇಂಗ್ಲಿóಷ್ ವಿಭಾಗದ ಮುಖ್ಯಸ್ಥ ಪ್ರೊ. ರಾಜೇಂದ್ರ ಚೆನ್ನಿ ಅವರು ಹೇಳಿದರು. ಅವರು  ಇದೇ ವಿಚಾರ ಸಂಕಿರಣದಲ್ಲಿ ‘ಜಾತಿಪದ್ಧತಿ-ಅಸ್ಪøಶ್ಯತೆಯ ಬೆಳವಣಿಗೆ : ಜಾಗತೀಕರಣದ ಪರಿಣಾಮಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಬಹುರಾಷ್ಟ್ರೀಯ ವಿದೇಶಿ ಕಂಪನಿಗಳು ದಲಿತರ ವಿರುದ್ಧ ತಾರತಮ್ಯ ತೋರಲಿಕ್ಕಿಲ್ಲ. ಆದ್ದರಿಂದ ಜಾಗತೀಕರಣ ದಲಿತರಿಗೆ ಸಮಾನ ಅವಕಾಶಗಳನ್ನು ಒದಗಿಸಬಹುದು ಎಂಬ ನಿರೀಕ್ಷೆ ಕೆಲವರಲ್ಲಿ ಇತ್ತು. ಆದರೆ ಜಾಗತೀಕರಣ ಎಲ್ಲ ರೀತಿಯ ಅಸಮಾನತೆಗಳನ್ನು ಇನ್ನಷ್ಟು ತೀವ್ರಗೊಳಿಸುವ ಮತ್ತು ಹೊಸ ಅಸಮಾನತೆಗಳನ್ನು ಸೃಷ್ಟಿಸುವಂತಹುದು ಎಂಬುದು ಅನುಭವದಿಂದ ಸಿದ್ಧವಾಗಿದೆ. ಪ್ರೊ. ಥೋರಟ್ ಅವರು ನಡೆಸಿದ ಒಂದು ಪ್ರಯೋಗದಿಂದ ಇದು ಪ್ರಾಯೋಗಿಕವಾಗಿಯೂ ಸಿದ್ಧವಾಯಿತು. ಜಾಗತೀಕರಣ ನಾಲ್ಕು ರೀತಿಯಲ್ಲಿ ಜಾತಿಪದ್ಧತಿ-ಅಸ್ಪøಶ್ಯತೆ ಮತ್ತು ದಲಿತರ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ ಎಂದು ಪ್ರೊ. ಚೆನ್ನಿ ಅವರು ವಾದಿಸಿದರು.

ಅವುಗಳಲ್ಲಿ ಮೊದಲನೆಯದು ಜಾಗತೀಕರಣ ನೀತಿಗಳ ಪರಿಣಾಮವಾಗಿ ಅಭಿವೃದ್ಧಿಯಲ್ಲಿ ಪ್ರಭುತ್ವಕ್ಕೆ ಯಾವುದೇ ಪಾತ್ರ ಇರಬಾರದು. ಅದನ್ನು ಪೂರ್ಣವಾಗಿ ಮಾರುಕಟ್ಟೆಗೆ ಬಿಟ್ಟುಕೊಡಬೇಕು ಎಂಬ ನೀತಿಯನ್ನು ಸರಕಾರಗಳು ಅನುಸರಸಬೇಕಾಗಿರುವುದು. ಸಣ್ಣ ರೈತರು, ಕೃಷಿಕೂಲಿಕಾರರರು, ದಲಿತರು, ಆದಿವಾಸಿಗಳಂತಹ ದುರ್ಬಲ ಜನವಿಭಾಗಗಳ ಅಭಿವೃದ್ಧಿಗೆ ವಿಶೇಷ ಗಮನ ಕೊಡುವ ಸರಕಾರಗಳಿಗಿರುವ ಅವಕಾಶಗಳಿಗೆ ಜಾಗತೀಕರಣ ಕಡಿವಾಣ ಹಾಕಿದೆ. ಇದು ಅಂತರ್ರಾಷ್ಟ್ರೀಯ ಸಾಲ, ವಾಣಿಜ್ಯ ಒಪ್ಪಂದಗಳ ಭಾಗವಾಗಿದ್ದು ಯಾವುದೇ ಸರಕಾರ ಇದಕ್ಕೆ ಬದ್ಧವಾಗಿರಬೇಕಾದ ಅನಿವಾರ್ಯತೆ ಇರುತ್ತದೆ. ಎರಡನೇಯದಾಗಿ ಜಾಗತೀಕರಣ ನೀತಿಗಳ ಪರಿಣಾಮವಾಗಿ ಬಂದಿರುವ ಶಿಕ್ಷಣ, ಉದ್ಯಮಗಳ ವ್ಯಾಪಕ ಖಾಸಗೀಕರಣ ಮೀಸಲಾತಿಯನ್ನು ಅಪ್ರಸ್ತುತ ಮತ್ತು ಅರ್ಥಹೀನವಾಗಿಸಿದೆ. ಮೂರನೇಯದಾಗಿ ಶಿಕ್ಷಣದಲ್ಲಿ (ಅದರಲ್ಲೂ ಉನ್ನತ ಶಿಕ್ಷಣದಲ್ಲಿ) ಮೀಸಲಾತಿಯ ಅಭಾವ ಮತ್ತು ವಿಪರೀತ ವ್ಯಾಪಾರೀಕರಣ, ಜಾಗತೀಕರಣ ಸೃಷ್ಟಿಸುತ್ತಿರುವ ಐಟಿ-ಬಿಟಿ ಮುಂತಾದ ಹೊಸ ಉದ್ಯೋಗಗಳು ಬೇಡುವ ಶಿಕ್ಷಣ ಕೌಶಲ್ಯ ದಲಿತರಿಗೆ ದಕ್ಕದಂತೆ ಮಾಡಿದೆ. ನಾಲ್ಕನೇಯದಾಗಿ ಜಾಗತೀಕರಣದಿಂದಾಗಿ ದಲಿತರ ಒಂದು ವಿಭಾಗ ಹೊಂದಿರುವ ಸಣ್ಣ ಹಿಡುವಳಿಗಳಲ್ಲಿ ಕೃಷಿ ಜೀವನೋಪಾಯವಾಗಿ ಅಸಾಧ್ಯ ಎಂಬ ಸ್ಥಿತಿ ಉಂಟಾಗಿರುವುದು. ಆದ್ದರಿಂದ ದಲಿತರು ಇದ್ದ ಬದ್ದ ಕೃಷಿ ಭೂಮಿಯನ್ನು ಮಾರಿ ನಗರಗಳಿಗೆ ಗುಳೆ ಹೋಗುವ ಪರಿಸ್ಥಿತಿ ಬಂದಿರುವುದು. ನಗರಗಳಲ್ಲೂ ಯಾವುದೇ ಹಕ್ಕು ಸವಲತ್ತುಗಳಿರದ ಅಸಂಘಟಿತ ಕಾರ್ಮಿಕರ ಕೊನೆಯ ಶ್ರೇಣಿಯಲ್ಲಿ ದಯನೀಯ ಪರಿಸ್ಥಿತಿಯಲ್ಲಿ ಬದುಕುವಂತಾಗಿರುವುದು. ಇಂತಹ ಪರಿಸ್ಥಿತಿಯಲ್ಲಿ ದಲಿತರ ಬದುಕಿನ ಮೇಲೆ ಜಾಗತೀಕರಣದ ದುಷ್ಪರಿಣಾಮಗಳ ಅಧ್ಯಯನ, ವಿಮರ್ಶೆಗಳನ್ನು ದಲಿತ ದೃಷ್ಟಿಕೊಣದಿಂದ ಮಾಡುವುದು ಸಾವು-ಬದುಕಿನ ಪ್ರಶ್ನೆ ಎಂದು ಪ್ರೊ. ಚೆನ್ನಿ ಹೇಳಿದರು.

ದಲಿತ ಉಪಯೋಜನೆಯ ದೌರ್ಬಲ್ಯಗಳು : ಟಿ.ಆರ್.ಸಿ.

‘ದಲಿತ ಉಪಯೋಜನೆ ಬಗ್ಗೆ ಸರಕಾರದ ಧೋರಣೆ ಮತ್ತು ಜಾರಿ’ ಬಗ್ಗೆ ಮಾತನಾಡುತ್ತಾ ಹಂಪಿ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಟಿ.ಆರ್. ಚಂದ್ರಶೇಖರ್ ದಲಿತ ಉಪಯೋಜನೆಗಳ ಜಾರಿಯ ಪ್ರಮುಖ ದೌರ್ಬಲ್ಯಗಳ ಬಗ್ಗೆ ಮಾತನಾಡಿದರು. ಮೊದಲನೇಯದಾಗಿ ದಲಿತ ಉಪಯೋಜನೆಗೆ ಕೊಟ್ಟ ಹಣ ಹತ್ತಾರು ಇಲಾಖೆಗಳ ನೂರಾರು ಕಾರ್ಯಕ್ರಮಗಳಿಗೆ 30 ಜಿಲ್ಲೆಗಳಿಗೆ ಹರಿಹಂಚಿ ಹೋಗುತ್ತದೆ. ಈ ರೀತಿ ಹರಿಹಂಚಿ ಹೋದಾಗ ವಿನಿಯೋಗವಾಗುವ ಹಣ ತೀರಾ ಕಡಿಮೆಯಾಗಿದ್ದು ಪರಿಣಾಮಕಾರಿ ಆಗಿರುವುದಿಲ್ಲ. ಇದರ ಬದಲಾಗಿ ನಿರ್ದಿಷ್ಟ ಗುರಿ ಇರುವ ದಲಿತರನ್ನು ಮುಟ್ಟುವ ವ್ಯಾಪಕ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಎರಡನೇಯದಾಗಿ ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಉಪಯೋಜನೆಯ ಶೇ. 82 ಹಣ ಹೋದರೆ, ಶೇ. 18 ಮಾತ್ರ ಜಿಲ್ಲಾ ಮಟ್ಟದ ಕಾರ್ಯಕ್ರಮಗಳಿಗೆ ಹೋಗುತ್ತದೆ. ಪ್ರಾದೇಶಿಕ ಅಗತ್ಯಗಳೂ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಯಾಂತ್ರಿಕವಾಗಿ ಜಿಲ್ಲೆಗಳಿಗೆ ಹಣ ಹಂಚಿಕೆಯಿಂದಲೂ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಉದಾಹರಣೆಗೆ ಕಲಬುರ್ಗಿ ವಿಭಾಗದಲ್ಲಿ ದಲಿತರ ಪ್ರಮಾಣ ಶೇ. 26 (ರಾಜ್ಯ ಸರಾಸರಿ ಶೇ. 18) ಇದ್ದರೂ ಉಳಿದ ಜಿಲ್ಲೆಗಳಷ್ಟೇ ಹಣ ಪಡೆಯುತ್ತದೆ.  ಕಲಬುರ್ಗಿ ವಿಭಾಗದ ಜಿಲ್ಲೆಗಳಿಗೆ ಅತ್ಯಂತ ಹಿಂದುಳಿದುರುವಿಕೆ ಹಾಗೂ ದಲಿತರ ಪ್ರಮಾಣ ಹೆಚ್ಚಿರುವುದು - ಈ ಎರಡೂ  ಕಾರಣಗಳಿಗೆ ಹೆಚ್ಚು ಹಣ ಕೊಡಬೇಕಾಗುತ್ತದೆ. ಮೂರನೇಯದಾಗಿ ಈಗ ಕಾರ್ಯಕ್ರಮಗಳಿಗೆ ಹಣಕಾಸಿನ (ಕೊಟ್ಟ ಹಣ ಖರ್ಚಾಗಬೇಕು ಎಂಬ) ಮತ್ತು ಭೌತಿಕ (ಇಷ್ಟು ರಸ್ತೆ ಅಥವಾ ಹಾಸ್ಟೆಲ್ ಕಟ್ಟಿರಬೇಕು, ಇಷ್ಟು ಜನಕ್ಕೆ ಸ್ಕಾಲರ್ ಶಿಪ್ ಹಂಚಿರಬೇಕು) ಗುರಿಗಳು ಮಾತ್ರ ಇವೆ. ಇವನ್ನು ಮುಟ್ಟಿದರೆ ಸಾಕು. ಆದರೆ ಕಾರ್ಯಕ್ರಮಗಳ ಮೂಲ ಉದ್ದೇಶದ ಫಲಶ್ರ್ರುತಿ ಎಷ್ಟರ ಮಟ್ಟಿಗೆ ಆಗಿದೆ? ಇದನ್ನು ಅಳೆಯುವ ಒರೆಗಲ್ಲು ಏನು? ಎಂಬುದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಹಾಸ್ಟೆಲ್ ಕಟ್ಟಿಸಿ ಸ್ಕಾಲರ್ ಶಿಪ್ ಕೊಟ್ಟು ದಲಿತ ವಿದ್ಯಾರ್ಥಿಗಳ ಶಾಲಾ ಹಾಜರಾತಿ, ಶಿಕ್ಷಣದ ಗುಣಮಟ್ಟ ಮೇಲೆ ಎಷ್ಟು ಪರಿಣಾಮ ಬೀರಿದೆ? ಆರೋಗ್ಯ ಸಂಬಂಧಿ ಕಾರ್ಯಕ್ರಮವಾದರೆ ಶಿಶು ಪ್ರಮಾಣ, ಗರ್ಭಿಣಿ ಮಹಿಳೆಯರ ರಕ್ತಹೀನತೆ ಎಷ್ಟರ ಮಟ್ಟಿಗೆ ಇಳಿದಿದೆ? - ಇಂತಹ ಒರೆಗಲ್ಲುಗಳು ಬೇಕಾಗುತ್ತವೆ.

ಈ ಪ್ರಮುಖ ದೌರ್ಬಲ್ಯಗಳನ್ನು ಸರಿಪಡಿಸಿದರೆ ಉಪಯೋಜನೆಗಳು ಪರಿಣಾಮಕಾರಿಯಾಗಬಲ್ಲವು ಎಂದು ಪ್ರೊ. ಟಿ.ಆರ್.ಚಂದ್ರಶೇಖರ್ ವಾದಿಸಿದರು. ಅವರು ದಲಿತ ಅಭಿವೃಧ್ಧಿ ಯೋಜನೆಯನ್ನು ‘ಉಪಯೋಜನೆ’ ಎಂದು ಕರೆಯುವ ಧೋರಣೆಯನ್ನು ಶಿಷ್ಟರ ಮತ್ತು ಪರಿಶಿಷ್ಟರ ನಡುವೆ ತಾರತಮ್ಯ ತೋರುವ ಮನೋಧರ್ಮದ ಬಗ್ಗೆ ಆಕ್ಷೇಪವೆತ್ತಿದರು.

‘ಇನ್ನೆಂದು ಬೆಳಗು ನಿಮಗೆ’

ಕೃಷಿ ಕೂಲಿಕಾರರ ಸಂಘಟನೆಯ ಅಧ್ಯಕ್ಷ ಕಾ. ನಿತ್ಯಾನಂದಸ್ವಾಮಿ ಅವರು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಮಾಜ ಕಲ್ಯಾಣ ಇಲಾಖೆಯ ಮುಖ್ಯಸ್ಥ ಹಾಗೂ ದಲಿತ ಯೋಜನೆ ಜಾರಿಗೆ ವಿಶೇಷ ಸಲಹೆಗಾರರಾದ ಇ. ವೆಂಕಟಯ್ಯ ಅವರು ಮಾತನಾಡುತ್ತಾ ದಲಿತ ಸಂಘಟನೆಗಳು ಯೋಜನೆಯನ್ನು ರೂಪಿಸುವಲ್ಲಿ ಮತ್ತು ಜಾರಿ ಮಾಡುವಲ್ಲಿ ಭಾಗವಹಿಸಬೇಕು ಎಂದು ಕರೆಯಿತ್ತರು. ಸಭಿಕರಾಗಿ ಭಾಗವಹಿಸಿದ್ದ ಖ್ಯಾತ ಹಾಡುಗಾರ ಅಪ್ಪಗೆರೆ ತಿಮ್ಮರಾಜು ‘ನಾನು ಕಳೆದ 40 ವರ್ಷಗಳಲ್ಲಿ ಕಂಡ ದಲಿತ ಸಂಘಟನೆಗಳು ಆಯೋಜಿಸಿದ ವಿಚಾರ ಸಂಕಿರಣಗಳಲ್ಲಿ ಇದೊಂದು ಅತ್ಯುತ್ತಮ ಅರ್ಥಪೂರ್ಣ ಕಾರ್ಯಕ್ರಮ’ ಎಂದು ಹೊಗಳಿ ಸಂಘಟಕರನ್ನು ಅಭಿನಂದಿಸಿದರು, ‘ಇದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ, ಇದನ್ನು ಪುಸ್ತಕವಾಗಿ ತನ್ನಿ’ ಎಂದು ಒತ್ತಿ ಒತ್ತಿ ಹೇಳಿದರು. ಅವರು ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ‘ಇನ್ನೆಂದು ಬೆಳಗು ನಿಮಗೆ’ ಹಾಡನ್ನು ಅತ್ಯಂತ ಭಾವಪೂರ್ಣವಾಗಿ ಹಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆಯವರು ಮಾತನಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ್ ಉಪಸ್ಥಿತರಿದ್ದರು. ಬಿ. ರಾಜಶೇಖರ ಮೂರ್ತಿ ಅವರು ನಿರೂಪಣೆ ಮಾಡಿದರು. ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಅವರು ವಂದನಾರ್ಪಣೆ ಮಾಡಿದರು.

ಕಾರ್ಯಾಗಾರದ ನಿರ್ಣಯಗಳು

ವಿಚಾರ ಸಂಕಿರಣದ ನಂತರ ನಡೆದ ಕಾರ್ಯಾಗಾರದಲ್ಲಿ ದಲಿತ ಉಪಯೋಜನೆಯ ಅನುಷ್ಠಾನ ಕುರಿತು ಒಂದು ದಸ್ತಾವೇಜನ್ನು ಮಂಡಿಸಲಾಯಿತು. ಅದರಲ್ಲಿ ಪ್ರಸ್ತುತ ದಲಿತ ಉಪಯೋಜನೆ ಮತ್ತು ಅದರ ಅನುಷ್ಟಾನದ ಕುರಿತು ಒಟ್ಟಾರೆ ಮತ್ತು ಇಲಾಖಾವಾರು ಕಾರ್ಯಕ್ರಮಗಳ ವಿಮರ್ಶೆ ಮಾಡಲಾಗಿದೆ. ಈ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು. ಈ ಚರ್ಚೆಯ ಫಲವಾಗಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು:

ಎಸ್.ಸಿ/ಎಸ್.ಟಿ. ಉಪಯೋಜನೆ ಕಾಯಿದೆಯಲ್ಲಿ ಉಪಯೋಜನೆಯ ಹಣವನ್ನು ಬೇರೆ ಕೆಲಸಗಳಿಗೆ ವರ್ಗಾಯಿಸಲು ಅವಕಾಶ ಮಾಡುವ ಕಲಮನ್ನು ತೆಗೆದುಹಾಕಬೇಕು ಎಂದು ಸರಕಾರವನ್ನು ಒತ್ತಾಯಿಸಬೇಕು.

ಎಸ್.ಸಿ/ಎಸ್.ಟಿ. ಉಪಯೋಜನೆ ಕಾಯಿದೆಯ ಜಾರಿಗೆ ಅನುವಾಗುವಂತೆ ಕೂಡಲೇ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಸರಕಾರವನ್ನು ಒತ್ತಾಯಿಸಬೇಕು.

ದಲಿತ ಉಪಯೋಜನೆಯಲ್ಲಿ - ದಲಿತ ಕಾಲೋನಿಗಳಿಗೆ ಮೂಲ ಸೌಕರ್ಯ ಒದಗಿಸುವ ಮತ್ತು ಮನುಷ್ಯ ಕೇಂದ್ರಿತ ಎಂಬ - ಎರಡು ರೀತಿಯ ಕಾರ್ಯಕ್ರಮಗಳಿವೆ. ಮನುಷ್ಯ ಕೇಂದ್ರಿತ ಕಾರ್ಯಕ್ರಮಗಳಿಗೆ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ, ಸಾವಿರಾರು ಅರ್ಜಿಗಳನ್ನು ಹಾಕಿಸಿ ‘ಏಕಗವಾಕ್ಷಿ’ ಮೂಲಕ ಅರ್ಜಿಗಳನ್ನು ಇತ್ಯಾರ್ಥ ಪಡಿಸುವಂತೆ ಒತ್ತಾಯಿಸಬೇಕು. ಜೂನ್-ಜುಲೈ ತಿಂಗಳಲ್ಲಿ ಅರ್ಜಿ ಹಾಕುವ ಆಂದೋಲನ ನಡೆಸಬೇಕು.

ವರದಿ: ವಸಂತರಾಜ ಎನ್. ಕೆ.

ಕಾಮೆಂಟ್‌ಗಳಿಲ್ಲ: