ಭಾನುವಾರ, ಜುಲೈ 10, 2016

ಆಧುನಿಕ ಜೀವನದಲ್ಲಿ ಜಾನಪದ


ಡಾ. ರಾಜೇಗೌಡ ಹೊಸಹಳ್ಳಿ gidda


ಗೆಡ್ಡೆಗೆಣಸು ತಿನ್ನುವಾಗ ಮನುಷ್ಯ ಸುಖವಾಗಿದ್ದ. ಚಿನ್ನ ಬಗೆಯಲು ಪ್ರಾರಂಭಿಸಿದಾಗ ಬಡವನಾಗುತ್ತಾ ಹೋದ ಎಂಬುದು ಪ್ರಕೃತಿಯೊಳಗಿನ ಬದುಕು ಹಾಗೂ ಆಧುನಿಕ ಬದುಕುಗಳ ಅಂತರ. ಆಧುನಿಕತೆ ಕೇಳುತ್ತಾ ಬರುವುದಿಲ್ಲ. ಪ್ರವಾಹದಂತೆ ಹರಿದು ಬರುತ್ತದೆ. ಅಂದು ರಾಗಿಕಲ್ಲು ಒಂದು ಆಧುನಿಕ ಮಾದರಿ ಯಂತ್ರ. ಇಂದು ಫ್ಲೋರ್‍ಮಿಲ್ ಕೂಡ ನಿಂತು ಹೋಗುತ್ತಿವೆ. ಕಂಪನಿ ಹಿಟ್ಟು ರಾಜ್ಯವಾಳುತ್ತಿದೆ. ಹಲ್ಲಿಗೆ ಚುಚ್ಚುವ ಕಡ್ಡಿ ಕೂಡ ಒಂದು ಯಂತ್ರ; ಹಾಗಾಗಿ ನಾನು ಆಧುನಿಕತೆಯ ವಿರೋಧಿಯಲ್ಲ ಎಂದು ಗಾಂಧೀಜಿ ಹೇಳುತ್ತಾರೆ. ಹಾಗೆ ಹೇಳುವಾಗಲೇ ಆ ಮಾತಿನ ಹಿಂದೆ ನಾಗರೀಕತೆ ಹಾಗೂ ಆಧುನಿಕತೆಯ ಸವಾರಿ ಮೊಸಳೆ ಮೇಲಿನ ಸವಾರಿ ಎಂಬ ಅರಿವು ನಮಗಿರಬೇಕಾಗುತ್ತದೆ. ಸ್ವರಾಜ್ಯ ಬಂತು. ಪರಂಪರೆಯ ಜ್ಞಾನ ಹೋಯಿತು. ನೆಹರು ರಾಜಸಿಂಹಾಸನ ಗಾಂಧಿಯ ಕುಂಡರಿಕೆಯ ಚಾಪೆಯನ್ನು ಸುತ್ತಿ ಆಚೆಗೆ ಬಿಸಾಕಿತು ಎಂಬುದು ಈ ದೇಶಕ್ಕೊದಗಿದ ಆಧುನಿಕತೆ.
nagegowdru

ಬ್ರಿಟಿಷರು ಭಾರತಕ್ಕೆ ಬಂದಾಗ ಶೇ.40 ರಷ್ಟು ಕೈಮಗ್ಗ ರಫ್ತಾಗುತ್ತಿತ್ತು. ಅವರ ವ್ಯಾಪಾರಿ ಬಲ ಹೆಚ್ಚಿದಂತೆಲ್ಲಾ ಸ್ವತಂತ್ರ ನೀಡಿ ಹೊರಟಾಗ ಕೇವಲ ಶೇ.4ಕ್ಕೆ ನಿಂತಿತ್ತು. ಅನಂತರವಂತೂ ತೆಕ್ಕೆ ಹಾಕಿದ್ದ ಗೃಹ ಕೈಗಾರಿಕೆ, ಕೃಷಿಗಾರಿಕೆ ಅಕ್ಷರವೆಂಬ ಆಧುನಿಕ ಹುಸಿ ಮಾಂತ್ರಿಕನೊಡನೆ ಸೇರಿಇಂದು ಗ್ರಾಮಗಳು ಹಾಳುಗೋಡೆಗಳಾಗಿವೆ. ಅಂದು ಸಮುದ್ರದವರೆಗೆ ರೈಲು ಹಳಿಗಳು ಅಡವಿ ಗುಡ್ಡಗೋರಾಂದಗಳನ್ನೆಲ್ಲಾ ಬಾಚಿ ಲಂಡನಿಗೆ ಧಾಟಿಸುವಾಗ ಅತ್ತಲಿಂದ ಇತ್ತ ಬರುತ್ತಿದ್ದ ಗರಿಗರಿ ನುಣುಪು ಬಟ್ಟೆಗಳು ಆಧುನಿಕ ಸಾಮಾನುಗಳು ಏಳು ಲಕ್ಷ ಹಳ್ಳಿಗಳ ಕೋಣೆವರೆಗೂ ಸಾಗಿದವು. ಅದರೊಡನೆ ಪರಂಪರೆಯ ಜ್ಞಾನ ಹೊಗೆ ಹಾಕಿದ ಘಾಟಿಗೆ ಬೆದರಿದಂತೆ ಸ್ಥಗಿತವಾಯಿತು. ಇಂದು ದೇಶವು ಗ್ರಾಮಜ್ಞಾನವನ್ನು ಅಕ್ಷರಕ್ಕೆ ಮಾರಿಕೊಂಡ ಬಗೆಯಾಗಿ ನಿಂತುಬಿಟ್ಟಿತು. ಅಕ್ಷರ ಅದರಲ್ಲೂ ಇಂಗ್ಲೀಷು ಅಕ್ಷರ ನಮ್ಮ ದೇಶದ ಅಭಿವೃದ್ಧಿ ಪಥದಲ್ಲಿ ಪಾತ್ರ ವಹಿಸುವಾಗ ಮಾತೃ ಭಾಷೆಯನ್ನು ದೂರ ಆಚೆಗೆ ಸರಿಸಿತು. ಅದರಿಂದ ಹಳ್ಳಿಮಕ್ಕಳಿಗೂ ಪಶ್ಚಿಮ ಜಗತ್ತು ತೆರೆದುಕೊಂಡದ್ದು ಹೌದು ಅದರೊಡನೆಯೇ ಬಲೆಹಾಕಿದ ಆ ಜಗತ್ತು ಎಲ್ಲರನ್ನು ಎತ್ತಿಹಾಕಿಕೊಂಡಿತು. ಗಾಂಧಿ ನಂಬಿದ ಪರಂಪರೆಯ ಜ್ಞಾನ ಈ ದೇಶಕ್ಕೆ ಬೇಕಾದ ನೆಲಮೂಲ ತಿಳಿವಳಿಕೆಗಳೆಲ್ಲವನ್ನು ಇಂಗ್ಲೀಷಿಗೆ ಮಾರಿಕೊಂಡಿತು.

ಹಸಿರು ಕ್ರಾಂತಿಯಿಂದ ಹಸಿದ ಹೊಟ್ಟೆಗಳಿಗೆ ಅನ್ನ ಹಾಕುವ ವಿಜ್ಞಾನವು ದೇಶಕ್ಕೆ ಕಾಲಿಟ್ಟಾಕ್ಷಣ ಶತಶತಮಾನಗಳ ಹಸಿವು ಇಲ್ಲವಾಯ್ತೆಂದು ದೇಶ ನಂಬಿತು. ಗುಣಾಕಾರದ ಚಲನೆಯ ಜನಸಂಖ್ಯೆಗೆ ಮೂರು ಹೊತ್ತಿನ ಊಟವೇ ಮುಖ್ಯವೆಂಬ ಅಭಿಪ್ರಾಯ ಪ್ರಾರಂಭವಾಯ್ತು. ಬಹು ದೊಡ್ಡ ಕೈಗಾರಿಕೆಗಳು, ದೊಡ್ಡ ನೀರಾವರಿಗಳು ಆಧುನಿಕ ದೇವಾಲಯಗಳಾಗಿ ನೆಹರು ಭಾರತದಲ್ಲಿ ಚಲನೆಗೊಂಡವು. ಜಗದ ಕೈಗಾರಿಕಾ ಕ್ರಾಂತಿಗೆ ದೇಶ ಕೈ ಜೋಡಿಸಿತು. ಕೇವಲ ಐದಾರು ದಶಕಗಳಲ್ಲಿ ಎಲ್ಲವೂ ಎಡವಿ ಬಿದ್ದಿತು. ಅಷ್ಟರಲ್ಲಿ ಪೇಟೆ ನಗರಗಳು ತುಂಬಿ ಹೋದವು. ಹಳ್ಳಿಗಳು ಅಂದಿನ ಹಸಿದ ಹೊಟ್ಟೆಗಳಿಗಿಂತ ಅನಾಥ ಸ್ಥಿತಿ ಮುಟ್ಟಿ ಕೈಗೆ ಕೆಲಸವಿಲ್ಲದೆ ಮೈಗೆ ಕಸುವಿಲ್ಲದೆ ಕೈಗಾರಿಕೆಗಳೋಪಾದಿಯ ದೊಡ್ಡದೊಡ್ಡ ಆಸ್ಪತ್ರೆಗಳಲ್ಲಿ ತಾವು ಹುಡುಕಿದವು. ಪರಂಪರೆಯ ವೈದ್ಯ ಕೈ ಚೆಲ್ಲಿತು. ಹಸಿರು ಕ್ರಾಂತಿಯ ಪೈರು ಪಚ್ಚೆಯ ಹಣ್ಣು ಹಂಪಲಿನೊಳಗಿನಿಂದ ರಸಾಯನಿಕ ರಾಜ್ಯಭಾರ ಪ್ರಾರಂಭವಾಯಿತು. ವಿದೇಶಿ ಔಷಧಿ ಕಂಪೆನಿಗಳು ರೈತನಿಗೂ ರೈತ ಬೆಳೆದ ಬೆಳೆಗಳಿಗೂ ಅಮರಿಕೊಂಡು ಹಳ್ಳಿ ನಗರಗಳನ್ನೆಲ್ಲಾ ಟೊಳ್ಳುಮಾಡಿದವು. ಈಗ ಏನಾಗಬೇಕು, ಹೇಗೆ ಪರಂಪರೆಯ ಜ್ಞಾನಕ್ಕೆ ಹಿಂಚಲಿಸಬೇಕೆಂಬ ಆಲೋಚನೆ ಪ್ರಾರಂಭವಾಗಿದೆ. ಇದೇ ಆಲೋಚನೆ ಆಧುನಿಕ ಜೀವನಕ್ಕೆ ಬೇಕಾಗಿರುವ ಜಾನಪದ ಜ್ಞಾನ.
nrdy
  
 ಜಾನಪದವು ಪುಸ್ತಕಕ್ಕೆ ಇಳಿದಾಗಲೇ ಅಕ್ಷರದೊಳಗೆ ಸ್ಥಗಿತಗೊಂಡಿತು. ಅದರೊಳಗಿನ ದನಿಬನಿ ಹಾಗೂ ಬದುಕಿನ ಅವಿಭಾಜ್ಯ ವಿಧಾನಗಳು ಬದಲಾದ ಸ್ಥಿತಿಗಳಾದವು. 3ನೇ ಶತಮಾನದವರೆಗೆ ಸಂಸ್ಕøತಕ್ಕೆ ಲಿಪಿಯಿರಲಿಲ್ಲ. ಪ್ರಾಕೃತವು ಬರವಣಿಗೆಯಲ್ಲಿತ್ತು. ಅದರೊಳಗೆ ದ್ರಾವಿಡ ಭಾಷೆ ಸಾಂಗತ್ಯದಲ್ಲಿತ್ತು. ಅದಕ್ಕೆ ‘ವಡ್ಡಾರಾಧನೆ’ ಒಂದು ಉದಾಹರಣೆ. ಹಲ್ಮಿಡಿ ಶಾಸನ ಕನ್ನಡಾಕ್ಷರದ ಆದಿ ಎಂದು ಹಿಡಿದರೆ ಅಲ್ಲಿಂದೀಚೆಯ ಚಲನೆ ಪಂಪ-ರನ್ನ-ವಚನಕಾರರ ಕುಮಾರವ್ಯಾಸ ಇಂತಾ ಕಾಲದೊಳಗೆ ಜಾನಪದವು ದೇಶಿ ಮೂಲದಲ್ಲಿ ಮಾರ್ಗವೆಂಬುದನ್ನು ಸೃಷ್ಟಿ ಮಾಡಿಕೊಡುತ್ತಿತ್ತು. ಕಾಲ ಸಾಗಿದೆ. ಕನ್ನಡದಂತಾ ದೇಶೀ ಭಾಷೆಗಳು ಬ್ರಿಟಿಷರನ್ನು ಅರಗಿಸಿಕೊಳ್ಳಲಾಗಲಿಲ್ಲ. ಇದು ಭಾರತದ ಎಲ್ಲಾ ಸ್ಥಳೀಯ ಭಾಷೆಗಳ ಚರಿತ್ರೆ. ಮುಂದೆ ಕನ್ನಡವೂ ಸೇರಿದಂತೆ ಹಲವು ಮಾತೃ ಭಾಷೆಗಳು ಲಿಪಿಯನ್ನು ಕಳೆದುಕೊಳ್ಳುವ ಕಾಲ ಬರಬಹುದೇನೋ ಎಂಬ ಅಂಶ ಈ ಜಗದೀಕರಣದ ಭಯ ಮೂಲದಲ್ಲಿದೆ. ಕುವೆಂಪು ಕಾದಂಬರಿಗಳು ಜನಪದೀಯ ಆಕರಗಳವು. ನಾಗೇಗೌಡರ ಸೃಜನಶೀಲ ಸಾಹಿತ್ಯ ಅಂದಿನ ಸಮಾಜ ಪಲ್ಲಟದ ತಲ್ಲಣಗಳವು.

ಅವರ ‘ಪ್ರವಾಸಿ ಕಂಡ ಇಂಡಿಯಾ’ ಮಾಲೆ ಭಾರತ ಜಾನಪದವನ್ನು ವಿದೇಶೀ ಕಣ್ಣುಗಳ ಮೂಲಕ ನೋಡಿದ ರೀತಿಗಳು. ಅವರ ‘ಭೂಮಿಗೆ ಬಂದ ಗಂಧರ್ವ’ ಕಾದಂಬರಿ ಜನಪದೀಯನೊಬ್ಬ ಶಿಷ್ಟ ಮಾದರಿಯಲ್ಲಿ ಸಾಧನೆಗೈಯಬಹುದೆಂಬ ವಸ್ತುರೂಪಕ. ಅವರ ಕಾಫಿಕತೆ ವಿದೇಶವು ಸ್ವದೇಶವಾದ ಕಥನ. ಒಟ್ಟಿನಲ್ಲಿ ಗೌಡರ ಸೂಟು ಬೂಟು ಟೈ ಹಾಗೂ ಮಿದುಳೊಳಗಿನ ಐ.ಎ.ಎಸ್. ಎಂಬಿವು ಪರಂಪರೆಯ ಗ್ರಾಮವು ಆಧುನಿಕತೆ ಕಡೆ ದಾಟಿ ಪರಂಪರೆಯ ಜ್ಞಾನವನ್ನು ಹೇಗೆ ಕಡೆದು ನಿಲ್ಲಿಸಿ ಮುಂದಿನವರಿಗೆ ಹೇಳಬೇಕೆಂಬುದರ ಪಾಠ. ಇದು ಅಕ್ಷರ ಲೋಕದ ಜನಪದೀಯರು ತಮ್ಮ ಲೋಕಕ್ಕೆ ಮಾಡಬೇಕಾಗಿರುವ ಕಾಯಕದ ಪಾಠ ಕೂಡ ಹೌದು. ಕನ್ನಡವು ಶಾಸ್ತ್ರೀಯ ಭಾಷಾ ಸ್ಥಾನ ಪಡೆವಾಗ ಪಂಪ ಹೇಳಿದ ದೇಶೀ ಅದರೊಳಗೆ ಬೇರು ಸ್ವರೂಪದಲ್ಲಿದೆ ಎಂಬ ಅರಿವು ಇದನ್ನು ಚಿಂತಿಸುವವರಿಗಿರಬೇಕು. ಕನ್ನಡ ಭಾಷೆಯೆಂದರೆ ಅಂದಿನ ಶೇಕಡಾ 10ರಷ್ಟು ಇಲ್ಲದ ಜನರ ಸ್ವತ್ತಲ್ಲ. ಅದು ಅಂದು ಇಂದು ಶೇಕಡಾ 90ರಷ್ಟು ಜನ ಬಾಹುಳ್ಯದ ಜನಪದರ ಸ್ವತ್ತು. ಹಾಗಾಗಿ ಶಾಸ್ತ್ರೀಯ ಭಾಷೆಯ ಆಗು ಹೋಗುಗಳಲ್ಲಿ ಪರಂಪರೆಯ ಜನಪದ ಭಾಷೆ ಜ್ಞಾನಕ್ಕೆ ಪ್ರಥಮ ಸ್ಥಾನ ಬೇಕು.

ಇಂದು ಪರಿಸರದ ಅವನತಿಯು ಮನುಷ್ಯನೇ ಮರದ ಮೇಲೆ ಕುಳಿತು ಬುಡಕಡಿದ ವಿಧಾನ. ಪಶ್ಚಿಮ ಘಟ್ಟದ ಮೇಲಿನ ಅಣೆಗಳ ಭಾರ. ಹಿಮಾಲಯದೊಳಗಿನ ಜನಭಾರ, ಈ ದೇಶದೊಳಗಿನ ಗಿರಿಜನರ ಹಾಗೂ ಅಡವಿ ಕುಲದ ಕೆಣಕುವಿಕೆಗಳೆಲ್ಲವೂ ಇಂದು ಮಳೆ ಮುಗಿಲುಗಳನ್ನೆ ತಲೆಕೆಳಕು ಮಾಡಿವೆ. ಉಗಾಂಡ ಕೀನ್ಯಾ ಭೂಮಧ್ಯ ರೇಖೆ ಅಡಿಯಲ್ಲಿ ಮರಮುಟ್ಟುಗಳನ್ನು ಮುಗಿಲೆತ್ತರಕ್ಕೆ ಬೆಳಸುವ ಮಣ್ಣುಗುಣದ್ದು. ಅಲ್ಲಿ ಬಡತನವಿದೆ ನಿಜ ಆದರೆ ಒಂದೊಂದು ಮರದ ಮೇಲಿನ ಪ್ರಾಣಿ ಮೇಲಿನ ಪ್ರೀತಿ ಇನ್ನೂ ಆ ದೇಶಗಳನ್ನು ಉಳಿಸಿದೆ. ಅಲ್ಲಿನ ರಾಜಕೀಯ ಅಧೋಗತಿಯಲ್ಲೂ ಪರಿಸರ ಪ್ರೀತಿ ಅವರನ್ನು ರಕ್ಷಿಸಿದೆ. ಈ ದೇಶಕ್ಕೆ ಅಲ್ಲಿನ ಮಣ್ಣಿನ ಗುಣಮಟ್ಟ ಮೌಲ್ಯವಿಲ್ಲ ನಿಜ. ಒಮ್ಮೆ ಅಡವಿ ಕಡಿದರೆ ಪುನಃ ಚಿಮ್ಮುವ ನೆಲಮೂಲ ಮುಗಿಲ ಮೂಲವೂ ಇಲ್ಲ. ಹಾಗಾಗಿ ಭಾರತ ಬಹು ಎಚ್ಚರಿಕೆಯಿಂದ ಪರಿಸರ ಸಂಪತ್ತನ್ನುರಕ್ಷಿಸಬೇಕಾಗಿತ್ತು. ಆದರೆ ಅದಾಗಲಿಲ್ಲ. ಇದರ ಪರಿಣಾಮ ಬರವು ಸಾಮ್ರಾಜ್ಯ ಸ್ಥಾಪಿಸುತ್ತಿದೆ.
Dr.Verghese-Kurien

  ಮಳೆಯು ಮುಗಿಲು ಸೇರಿದೆ.ಇದರೊಂದಿಗೆ ಪರಂಪರೆಯ ಜ್ಞಾನ ಪರದೇಶೀ ಮಾಲುಗಳಿಗೆ ಅಡವಾಗಿದೆ. ಅಂಟುವಾಳ ಸೀಗೆ ಹುಚ್ಚೆಳ್ಳು ಇಂತವು ಇಲ್ಲವಾಗುತ್ತಿವೆ. ಹೊಲಗದ್ದೆಗಳಲ್ಲಿ ಕ್ರಿಮಿಕೀಟಗಳೇ ಪೈರುಗಳ ಮೇಲೆ ಇಲ್ಲದಂತೆ ಮಾಡುವ ಮಾನವನು ಹೊಟ್ಟೆ ಒಳಗೆ ವಿದೇಶಿ ರಸಾಯನಗಳನ್ನು ಅಡಗಿಸಿ ಅದನ್ನಿಳಿಸಲು ವಿದೇಶಿ ಕಂಪೆನಿ ವೈದ್ಯಗಳನ್ನು ತನಗೆ ತಾನೇ ಛೂ ಬಿಟ್ಟಿರುವುದು ದುರಂತ. ಇದು ದುರಂತಗಳ ಕಾಲ. ದೇಶ ಒಓಅ ಗಳ ದಾಸ್ಯತೆಗೊಳಗಾಗಿದೆ. ಒಂದು ಕೆ.ಜಿ. ಮರದ ತರಗು 35 ಕೆ.ಜಿ. ನೀರು ಹಿಡಿದಿಡುವುದೆಂಬ ಜ್ಞಾನ ಬರಿದಾಗಿದೆ. ಶೇ.3 ರಷ್ಟಿದ್ದ ಇಂಗಾಲ ಕೇವಲ 0.3 ರಷ್ಟಕ್ಕಿಳಿದಿದೆ. ಉಪ್ಪು ತಾಗಿದರೇ ಜೀವ ಬಿಡುವ ಎರೆಹುಳು; ರಸಾಯನಿಕ ವಸ್ತು ತಾಗಿದರೆ ಜೀವವೈವಿಧ್ಯ ಉಳಿದೀತೆ! ಒಂದು ಹಿಡಿ ಮಣ್ಣಿನೊಳು ಕೋಟಿ ಜೀವಾಣುಗಳಿರುವುದಿಲ್ಲವೆ ಹೀಗೆ ಕೃಷಿ ತಜ್ಞ ನಾರಾಯಣರೆಡ್ಡಿಯವರು ಪಾಠ ಹೇಳುವುದು ರೈತನ ಕಿವಿಗೆ ಮುಟ್ಟಬೇಕು.

ಸಹಜ ಕೃಷಿ ಕೈಬಿಟ್ಟ ರೈತ ನವಣೆ, ಕೊರ್ಲೆ, ಇಂತವು ಮೂಲಕ ಪುನಃ ಪರಂಪರೆಯ ಸಿಂಹಾವಲೋಕನ ಮಾಡಬೇಕು ಎಂದು ಅವರು ಪಾಠ ಹೇಳುತ್ತಾರೆ. ಹೌದು ನಗರದವರು ಭಯ ಬಿದ್ದಿದ್ದಾರೆ. ಸಹಜ ಕೃಷಿ ಅಂಗಡಿಗಳಿಗೆ ಮುತ್ತಿಗೆ ಹಾಕುತ್ತಿದ್ದಾರೆ. ಇದು ಜಾನಪದವು ಹೇಗೆ ಆಧುನಿಕ ಬದುಕಿಗೆ ಅವಶ್ಯಕ ಎಂಬುದನ್ನು ತೋರಿಸುತ್ತದೆ. ಒಂದು ಬಿದಿರು ಹಿಂಡ್ಲಲಿಗೆ ಬೆಂಕಿ ಬಿದ್ದರೆ ಅದು ಸಾಯುವಾಗ ತಕ್ಷಣ ಗರ್ಭತಾಳಿ ನಾಲ್ಕು ಬಿದರಕ್ಕಿ ಉದುರಿಸುವುದು ತಾಯ್ತನದ ನೈಸರ್ಗಿಕ ವಿಧಾನ. ಅದು ಮನುಷ್ಯನಲ್ಲೂ ಇರುತ್ತದೆ. ನಿಜ ಇದನ್ನು ಆಧುನಿಕ ಪ್ರಪಂಚಕ್ಕೆ ಪರಂಪರೆಯ ಜ್ಞಾನವನ್ನು ಧಾಟಿಸುವ ತಾಯ್ತನವಾಗಿ ಕಾಣಬೇಕೆಂಬುದುಒಂದು ವಿಧಾನ. ಮಲೆನಾಡ ಗಿಡ್ಡದನದ ಹಾಲು ತುಪ್ಪದ ಬನಿ, ಹೆಂಟೆಗದ್ದೆಯ ಅಡಿಯಲ್ಲಿ ಮಣ್ಣಿನತೇವ ಗುಣವು ಅಡಗಿಸಿಕೊಳ್ಳುವ ಮಣ್ಣೆಂಬ ತಂತ್ರ ವಿಧಾನ, ಅಡವಿಗುಡ್ಡವು ಮಳೆನೀರು ಬಸಿದು ಹಳ್ಳಕೊಳ್ಳಗಳಿಗೆ ಇಳಿಸುವ ವಿಧಾನ ಈ ಎಲ್ಲವೂ ರೈತ ಪರಿಸರದೊಳಗೆ ಹೊಂದಿ ಬಾಳುವ ರೀತಿ. ಅದನ್ನು ಕಾಪಾಡಿಕೊಳ್ಳುವುದು ಮನುಷ್ಯನಕರ್ತವ್ಯ. ಇದನ್ನು ಪ್ರಾಣಿಪಕ್ಷಿ ಅಡವಿ ಮನುಷ್ಯರೆಲ್ಲ ಒಟ್ಟಿಗೆ ವಾಸ ಮಾಡುವ ‘ಸೋದರ ಸ್ನೇಹ‘ ಸಂಬಂಧವೆಂದು ಕಾಳಿದಾಸ ಹೇಳುತ್ತಾನೆ. ದಿನಾ ಒಂದು ಕೋಟಿ ಮರಣ ಈ ದೇಶದಲ್ಲಿ ಆಗುತ್ತದೆಂದು ಇಟ್ಟುಕೊಂಡರೆ ಪ್ರತಿ ಮರಣಕ್ಕೆ 3 ಕ್ವಿಂಟಾಲ್ ಸೌದೆಯಾದರೂ ಬೇಕಲ್ಲವೆ!

ಈ ಹರಣದ ತಿಳಿವು ಮನುಷ್ಯನಿಗಿರಬೇಕು. ಭೂಮಿಯೊಳಗೆ ಹೂಳುವ ಶವಸಂಸ್ಕಾರ ರೀತಿ ಭೂಮಿ ನೀರು ಹಾಗೂ ಮನುಷ್ಯನನನ್ನು ಬೆಸೆಯುವ ವಿಧಾನವೆಂದು ತಿಳಿಯಬೇಕು. ಈ ಅಪತಿಳಿವಳಿಕೆಯ ವೈದಿಕ ವಿಧಾನವೇ ನೆಲನೀರನ್ನು ಬರಿದು ಮಾಡಿದೆ. ನಮ್ಮ ಜನಪದ ಪರಂಪರೆ ಇದೇ ಬದುಕಿನದು. ಗೇದುಣ್ಣುವವನು ಬದುಕುತ್ತಾನಲ್ಲವೆ!. ಗಾಂಧಿ ಇದನ್ನೆ ಹೇಳುತ್ತಾರೆ. ಮನುಷ್ಯನ ಕೈಕಾಲುಗಳಿಗೆ ಕೆಲಸ ಕೊಡಿ. ಅವನ ಜೀವನ ಅವನು ಸಾಗಿಸುತ್ತಾನೆ. ಹಳ್ಳಿಯಲ್ಲಿನ ಸೋಮವಾರ ಕೆಲಸ ವಾರ ಕೆಲಸ ಮುಯ್ಯಿ ಆಳು ಕೆಲಸ ಇವೆಲ್ಲ ದೇವರ ಕೆಲಸ. ಆಧುನಿಕ ಬದುಕಿಗೆ ಇಂತವು ಮಾದರಿಗಳು. ಈಗಿನ ಸರ್ಕಾರಿ ಮಾದರಿಗಳು ಸೋಮಾರಿತನದ ಹಾಸಿಗೆಗಳು.

ದೇವರು ಎಲ್ಲೂ ಇಲ್ಲ. ಕಾಯಕದಲ್ಲಿದ್ದಾನೆ. ಅವನು ‘ಹೂವಿನಾಗ ಹುದುಗ್ಯಾನ ಮಾಲೆಯಾಗ ಮಲಗ್ಯಾನ ಮೊಗ್ಗಾಗ ಕಣ್ಣತೆರೆದಾನ’ ಎಂಬುದು ಪರಂಪರೆಯ ತಿಳಿವು. ಹೀಗೆ ಪರಂಪರೆ ಜ್ಞಾನ ಎಂಬುದು ತಿಳಿವಿನ ಜ್ಞಾನ. ಅರಿವಿಲ್ಲದ ಆಧುನಿಕತೆ ಎಂಬುದು ಮರೆವಿನ ಧ್ಯಾನ. ಅದು ಅರಿವಿನ ಕಡೆ ಚಲಿಸಬೇಕು. ಇದೇ ರೀತಿ ಅಂದು ನಮ್ಮ ಹಿರಿಯರು ಮದುವೆ ಇಟ್ಟು ವಿಳ್ಳೇಶಾಸ್ತ್ರ ಮಾಡಿ ಮುಗಿಸಿ ಲಗ್ನಪತ್ರಿಕೆ ಬರೆಸಲು ಹೋಗುತ್ತಿದ್ದರು. ಇಂದು ಹೆಸರು ಬಲ ಕೂಡಿದರೆ ಜಾತಕ ಬಂದರೆ ಮಾತ್ರ ಮದುವೆ ಎಂಬ ಅಪ ತಿಳಿವಳಿಕೆ ಆವರಿಸಿಬಿಟ್ಟಿದೆ. ಇದು ಪರಂಪರೆಯ ಜ್ಞಾನವನ್ನು ಹತ್ತಿಕ್ಕುವ ರೀತಿ. ಕುವೆಂಪು ಪ್ರಾರಂಭಿಸಿದ ಮಂತ್ರ ಮಾಂಗಲ್ಯ; ಆಗಿನ ಹಳ್ಳಿಗಳಲ್ಲಿನ ಮನೆಮುಂದಿನ ಸರಳ ಮದುವೆಗಳು ಇವೆಲ್ಲ ಆಡಂಬರಕ್ಕೆ ಧಾಟಿವೆ. ಕಲ್ಯಾಣ ಮಂದಿರಗಳು ಬೆಳೆದಂತೆಲ್ಲಾ ರೈತರ ನೇಣುಹಗ್ಗಗಳು ಉದ್ದವಾಗಿವೆ. ಕುವೆಂಪು ಉದಯವಾಣಿ ಪತ್ರಿಕಾ ಸಂದರ್ಶನವೊಂದರಲ್ಲಿ ಹೇಳಿದ್ದರು ನೀವು ಜನಪದ ಸಾಹಿತ್ಯವನ್ನು ಸಂಗ್ರಹಿಸಿ ಆದರೆ ಅದರಲ್ಲಿರುವ ಮೌಢ್ಯ ಅನಾಚಾರಗಳನ್ನು ಹೇಳದೆ ಇರಬೇಡಿ ಎಂದು. ಇದರರ್ಥ ಜನಪದ ಪರಂಪರೆಯೊಳಗಿನದೆಲ್ಲ ಅದರೊಳಗಿನ ಸಾಹಿತ್ಯ ವಿಸ್ತಾರಗಳೆಲ್ಲ ಜ್ಞಾನಗಳಲ್ಲ. ಅದರಲ್ಲಿ ಈ ದೇಶದ ವರ್ಣಚರಿತ್ರೆ, ವರ್ಗಚರಿತ್ರೆ ಅವಮಾನ ಚರಿತ್ರೆಗಳೆಲ್ಲವೂ ಇವೆ. ಸಮಾನತೆಯ ಕಡೆಯ ನಡಿಗೆಯೇ ಆಧುನಿಕ ಜೀವನದಧ್ಯೇಯ ಆದಾಗಬೇಕು. ಇಂತವು ಅವಶ್ಯಕತೆಗಳಾಗಿ ನಿಲ್ಲಬೇಕು.

Dr.Verghese-Kurienಇಂದು ಹಳ್ಳಿಗಳು ನಗರದ ಬಾಲಗಳಾಗಿವೆ ಎಂಬ ಗಾಂಧಿ ನುಡಿ ಈಗಲೂ ಪ್ರಸ್ತುತ. ಅನಕ್ಷರಸ್ಥರು ಅಂದು ಪರಂಪರೆಯ ಜ್ಞಾನ ಹೊಂದಿದ್ದರು. ಅದರೊಳಗೆ ಮೌಲ್ಯ ಗಳಿಸಿದ್ದರು. ಅಕ್ಷರ ಬಂತು. ಜ್ಞಾನ ಬಂತು. ಅದು ಮನುಷ್ಯ, ಮನುಷ್ಯರನ್ನು ದೂರ ಸರಿಸುವ ಜ್ಞಾನವಾಯಿತು. ನಗರ ಹಳ್ಳಿಗಳನ್ನು ವಿಭಜಿಸಿತು. ದೇಶವನ್ನು ವಿಭಜಿಸಿತು. ಮತಗಳನ್ನು ವಿಭಜಿಸಿತು. ಮನಸ್ಸುಗಳನ್ನು ವಿಭಜಿಸಿತು. ಅಂದು ರೈತ ಹಾಲನ್ನು ಅಮೃತವೆಂದು ಭಾವಿಸಿದ್ದ. ಮಾರುವುದು ಅವಮಾನವೆಂದೇ ತಿಳಿದಿದ್ದ. ಇಂದು ರೈತನೇ ಯೂರಿಯಾ ಬೆರೆಸಿ ಹಾಲು ಮಾರುತ್ತಾನೆ. ಮಾರಿ ಆಲ್ಕೋಹಾಲ್ ಕುಡಿಯುತ್ತಾನೆ. ಗಾಂಧಿ ಹೇಳುವ ಅಂದಿನ ರೈತನಿಗೆ ಮೋಸ ಮಾಡಲೂ ಬರುತ್ತಿರಲಿಲ್ಲ. ಸುಳ್ಳು ಹೇಳಲು ಬರುತ್ತಿರಲಿಲ್ಲ. ಈಗ ಪರಿಸ್ಥಿತಿ ಹಾಗಿಲ್ಲ. ಅದು ಅಕ್ಷರಬಲ್ಲ ಮನಸ್ಸುಗಳು ಈತನಿಗೆ ಕಲಿಸಿದ ವಿದ್ಯೆಯಾಗಿ ಪರಿಣಮಿಸಿದೆ. ಈ ದೇಶದಲ್ಲಿ ಇಂದು ಅನ್ಯಾಯ, ಅಪರಾಧ ಹಾಗೂ ಅವಂತರಗಳಾಗುತ್ತಿದ್ದರೆ ಅವೆಲ್ಲವೂ ಅಕ್ಷರಸ್ಥರು ಕಲಿಸಿರುವ ಪಾಠಗಳು.ಅವು ಈಗ ಶಾಲೆ ಕಾಲೇಜುಗಳಲ್ಲಿ ಮಾತ್ರ ಉಳಿದಿಲ್ಲ. ಹಳ್ಳಿಗಳ ಮನಸ್ಸುಗಳ ಶಾಲೆಗಳಿಗೆ ದಾಟಿವೆ. ಪರಂಪರೆಯಜ್ಞಾನ ಇಂದು ನಗರದ ಜ್ಞಾನಗಳೊಡನೆ ಸ್ಪಂದಿಸಲಾಗದೆ ಸೋಲು ಒಪ್ಪಿಕೊಂಡಿದೆ. ಪುನಃ ನವಣೆ ಆರ್ಕ ವಾಪಸ್ಸು ಅಂಗಡಿಗಳಿಗೆ ಬಂದಂತೆ ಮಣ್ಣು ಸಹಜ ಕೃಷಿಗೆ ಧಾಟುವ ಕ್ರಿಯಾ ವಿಧಾನವಾಗುತ್ತಿರುವಂತೆ ಪುನಃ ಕಣ್ಣುಬಿಟ್ಟು ಪರಂಪರೆಯನ್ನು ಬಲಪಡಿಸುತ್ತಿರುವಂತೆ ಮನುಷ್ಯನ ಆಹಾರ, ಹಣ್ಣು, ಪಾನೀಯ, ಹಾಲು, ಮಜ್ಜಿಗೆಗಳೆಲ್ಲವನ್ನು ಪುನಃ ಶುದ್ಧೀಕರಿಸಿಕೊಳ್ಳಬೇಕಿದೆ. ಈ ಶುದ್ಧೀಕರಣವೇ ಗೋಳೀಕರಣದೊಳಗಿನ ಗೋಳನ್ನು ಬಿಡಿಸಿಕೊಳ್ಳುವ ವಿಧಾನ. ಇಂದು ಕುರಿಯನ್, ಎಂ.ಎಸ್. ಸ್ವಾಮಿನಾಥನ್. ನಜೀರ ಸಾಬರು ಎಲ್ಲರೂ ಸೋತುಹೋಗಿದ್ದಾರೆ. ನಮ್ಮ ಪರಂಪರೆಯ ಜ್ಞಾನ ನಂಬಿದ ರೈತರು ಮಾತ್ರ ಗೆಲುವಿನತ್ತ ಸಾಗುತ್ತಿದ್ದಾರೆ. ಇದೇ ಆಧುನಿಕ ಜೀವನದಲ್ಲಿ ಜಾನಪದದ ಅವಶ್ಯಕತೆ. ಸ್ವತಂತ್ರ ಬಂದು ಸುಮಾರು ಮುಕ್ಕಾಲು ಶತಮಾನ ಧಾಟುವಾಗ ನೆಲಜಲಕ್ಕೆ ಅದನ್ನು ನಂಬಿದ ಬದುಕಿಗೆ ಬಲವಾದ ಪೆಟ್ಟು ಬಿದ್ದಿದೆ. ಈ ಪೆಟ್ಟುಜಗವು ನಾಗರಿಕತೆಯೆಂಬ ಅಮಲಿನಲ್ಲಿ ಬಿದ್ದು ಹೊರಳಾಡಿದ ಪೆಟ್ಟು. ಅದರಿಂದ ಹೇಗೆ ಬಿಡಿಸಿಕೊಳ್ಳುತ್ತಾ ಪರಂಪರೆಯ ಜ್ಞಾನಕ್ಕೆ ಹೊಂದಿಕೊಳ್ಳಬೇಕೆಂಬುದೇ ಈಗಿನ ಸವಾಲು.

ಕಾಮೆಂಟ್‌ಗಳಿಲ್ಲ: