ಭಾನುವಾರ, ಜುಲೈ 10, 2016

ಬೆಂಕಿಯಲ್ಲಿ ಅರಳಿದ `ಹೂ’ ಗೋದಾವರಿ ಗಂಟಿಚೋರ

-ಅರುಣ್ ಜೋಳದಕೂಡ್ಲಿಗಿ.
godavari gantichor (2)

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಬೆಂಡವಾಡ ಎಂಬ ಪುಟ್ಟಹಳ್ಳಿಯ ಗೋದಾವರಿ ಗಂಟಿಚೋರ ದೊಡ್ಡ ಹೆಸರೇನಲ್ಲ. ಯಾವ ಹೋರಾಟಗಾರರ ಪಟ್ಟಿಯಲ್ಲಿಯೂ ಅವರ ಹೆಸರು ಸಿಗುವುದಿಲ್ಲ, ಬದಲಾಗಿ ತೀರಾ ಸಾಮಾನ್ಯ ಸಾದಾ ಸೀದಾ ಮಹಿಳೆ. ವಯಸ್ಸು ಮಾಗಿದರೂ, ಗಂಟಿಚೋರ ಸಮುದಾಯವನ್ನು ಅಪರಾಧಿಗಳಂತೆ ಕಾಣುವ ಸಮಾಜದ ಬಗೆಗಿನ ಸಿಟ್ಟು ಅವರನ್ನು ಹೆಚ್ಚು ಕ್ರಿಯಾಶೀಲವಾಗಿಟ್ಟಿದೆ. 65 ವರ್ಷದ ಆಸುಪಾಸಿನ ಗೋದಾವರಿ ಅವರು ನಾಲ್ಕೈದು ವರ್ಷಗಳಿಂದ ತಮ್ಮ ಊರಾದ ಬೆಂಡವಾಡದಲ್ಲಿ ನೆಲೆಸಿ ತನ್ನ ಗಂಟಿಚೋರ ಸಮುದಾಯದಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಬದುಕು ಕಲಿಸಿದ ಪಾಠವೇ ಅವರಲ್ಲಿ ಹೋರಾಟದ ಪ್ರಜ್ಞೆಯನ್ನು ರೂಪಿಸಿದೆ. ನಮ್ಮ ಹಕ್ಕುಗಳನ್ನು ಹೋರಾಟ ಮಾಡಿಯೇ ಪಡೆಯಬೇಕಿದೆ ಎನ್ನುವ ಸತ್ಯವನ್ನು ಅವರು ಅರಿತಿದ್ದಾರೆ. ಈ ಅರಿವನ್ನು ಸಮುದಾಯದ ಮಹಿಳೆಯರಲ್ಲಿ ಯುವ ಜನತೆಯಲ್ಲಿ ಬಿತ್ತಲು ಶ್ರಮಿಸುತ್ತಿದ್ದಾರೆ.

ಗದಗಿನ ಬೆಟಗೇರಿ ಸೆಟ್ಲಮೆಂಟಿನ ಗಂಟಿಚೋರ ಸಮುದಾಯವನ್ನು ಸಂಘಟಿಸುತ್ತಿರುವ ಬಾಲೇ ಹೊಸೂರು ಸುರೇಶ ಮತ್ತು ರಾಮಚಂದ್ರಪ್ಪ ಹಂಸನೂರು ಅವರ ಜತೆ ಮಾತನಾಡುವಾಗ ಆಕಸ್ಮಿಕವಾಗಿ ಗೋದಾವರಿ ಅವರ ಬಗ್ಗೆ ಮಾಹಿತಿ ಸಿಕ್ಕಿತ್ತು. ಅವರ ಮಾತಿನಲ್ಲಿಯೇ ಗೋದಾವರಿ ಅವರ ಸಮುದಾಯದ ಬಗೆಗಿನ ಕಾಳಜಿಯ ಬಗ್ಗೆ ಹೇಳಿದ್ದರು. ಆಗಲೇ ಗೋದಾವರಿ ಅವರನ್ನು ಸಂಪರ್ಕಿಸಿ ಮಾತನಾಡಿಸಬೇಕೆಂಬ ಆಸೆ ಹುಟ್ಟಿಕೊಂಡಿತ್ತು.

ಗೋದಾವರಿ ಹೆಸರ ಜತೆ ಸೇರಿದ `ಗಂಟಿಚೋರ’ ಪದವನ್ನು ಅಂಟಿಸಿಕೊಂಡ ಸಮುದಾಯದ ಬಗ್ಗೆ ಮೊದಲೆ ಸಂಕ್ಷಿಪ್ತವಾಗಿ ಹೇಳಿಬಿಡುತ್ತೇನೆ.

ಮುಂಬೈ ಕರ್ನಾಟಕದ ಗದಗ, ಹುಬ್ಬಳ್ಳಿ, ಬಾಗಲಕೋಟೆ, ಬಿಜಾಪುರ ಭಾಗದಲ್ಲಿ ನೆಲೆಸಿದ ಅಂದಾಜು ಇಪ್ಪತ್ತು ಸಾವಿರದಷ್ಟು ಜನಸಂಖ್ಯೆ ಇರಬಹುದಾದ ಒಂದು ಪುಟ್ಟ ಸಮುದಾಯವೆ `ಗಂಟಿಚೋರ’. ಈ ಸಮುದಾಯದ ಹಿರಿಯರು ಹೇಳಿದಂತೆ, ಬ್ರಿಟೀಶರು ದೇಶದ ಸಂಪತ್ತನ್ನು ಲೂಟಿ ಮಾಡಿ ಸಂಗ್ರಹಿಸಿಟ್ಟ ಸ್ಥಳಗಳಿಂದ ದೇಶೀಯ ಸಂಪತ್ತನ್ನು ಮರು ಲೂಟಿ ಮಾಡಿ ದೇಶಿಯ ಸಂಸ್ಥಾನಿಕರಿಗೆ ಹಂಚಿ ಒಂದಷ್ಟನ್ನು ಪಡೆದು ಜೀವನ ನಿರ್ವಹಣೆ ಮಾಡುವ ಮೂಲಕ ರೂಪಗೊಂಡ ಸಮುದಾಯವಿದು.
ಅಂದು ದೇಶಭಕ್ತಿಯ ಭಾಗವಾಗಿ ಹುಟ್ಟಿಕೊಂಡ ಲೂಟಿಕೋರತನ, ಕ್ರಮೇಣ ಸಮುದಾಯದ ವೃತ್ತಿಯಾಯಿತು. ಹಾಗಾಗಿ ಗಂಟಿಚೋರ್ ಎನ್ನುವ ಹೆಸರೇ ಈ ಸಮುದಾಯಕ್ಕೆ ನಿಂತಿತು. ಈ ಸಮುದಾಯದ ಬಗ್ಗೆ ಶಿಶುನಾಳ ಶರೀಫರು ತಮ್ಮ ತತ್ವಪದಗಳಲ್ಲಿ ಉಲ್ಲೇಖಿಸುತ್ತಾರೆ. `ಬಿದ್ದೀಯಬೇ ಮುದುಕಿ ಬಿದ್ದೀಯಬೇ’ ಎಂಬ ಪದದಲ್ಲಿ `ಬುಟ್ಟಿಯಲಿ ಪತ್ತಲಿಟ್ಟಿ/ಅದನು ಉಟ್ಟ ಹೊತ್ತೊಳು ಜೋಕಿ;/ಕೆಟ್ಟಗಂಟಿ ಚೌಡೇರು ಬಂದು/ಉಟ್ಟುದ್ದನ್ನೆ ಕದ್ದಾರ ಜೋಕಿ/ಬುದ್ದಿಗೇಡಿ ಮುದುಕಿ ನೀ ಬಿದ್ದೀಯಬೆ’ ಎಂದಿದ್ದಾರೆ. `ಕೆಟ್ಟಗಂಟಿ ಚೌಡೇರು’ ಬಗ್ಗೆ ಶರೀಫರು ಮುದುಕಿಗೆ ಎಚ್ಚರಿಸುವ ದಾಟಿಯಲ್ಲಿದೆ. ಇದೀಗ ಶಿಗ್ಗಾಂವ ಸಮೀಪದ ಶಿಶುವಿನಾಳ ಭಾಗದ ಬಾಲೆಹೊಸೂರು ಗ್ರಾಮದಲ್ಲಿ ಗಂಟಿಚೋರ ಸಮುದಾಯದ ನೂರರಷ್ಟು ಮನೆಗಳಿವೆ. ಶರೀಫರು ಉಲ್ಲೇಖಿಸುವ ಹುಲುಗೂರು (ಹುಲುಗುರ ಸಂತಿ) ಕೂಡ ಈ ಊರಿನ ಸಮೀಪವಿದೆ. ಹಾಗಾಗಿ ಶರೀಫರು ಉಲ್ಲೇಖಿಸುವ `ಗಂಟಿ ಚೌಡೇರು’ ಬಾಲೆಹೊಸೂರಿನ ಗಂಟಿಚೋರ ಸಮುದಾಯ.

ಹೀಗಿರುವ ಗಂಟಿಚೋರ ಸಮುದಾಯವನ್ನು ಬ್ರಿಟೀಶ್ ಆಡಳಿತದಲ್ಲಿ ಕ್ರಿಮಿನಲ್ ಟ್ರೈಬ್ಸ್ ಪಟ್ಟಿಗೆ ಸೇರಿಸಿ ಇವರನ್ನು ನಿಯಂತ್ರಿಸಲು `ಸೆಟ್ಲಮೆಂಟ್’ ಎಂಬ ದೊಡ್ಡ ಜೈಲಲ್ಲಿ ಬಂಧಿಸಿದ್ದರು. ಇವರನ್ನು ಹದ್ದಿನ ಕಣ್ಣಿನಲ್ಲಿ ಕಾವಲು ಕಾಯುತ್ತಾ ಚಿತ್ರ ಹಿಂಸೆಗೆ ಒಳಗುಮಾಡಿದ್ದರು. ಪೌಜುದಾರ, ಪೋಲಿಸರಿಂದ ನಿರಂತರ ಹಿಂಸೆಗೆ ಒಳಗಾದ ಈ ಪುಟ್ಟ ಗಂಟಿಚೋರ ಸಮುದಾಯ ಕಾಲಾನಂತರದಲ್ಲಿ ಯಾರೇ ಕಳ್ಳತನ ಮಾಡಿದರೂ ಇವರನ್ನೇ ಹಿಂಸಿಸುತ್ತಿದ್ದ ಪೋಲಿಸರ ದಬ್ಬಾಳಿಕೆಗೆ ನಲುಗಿತು. ದಿನವೂ ಭಯದ ನೆರಳಲ್ಲಿ ಬದುಕು ನೂಕಬೇಕಾಯಿತು. ಇದರಿಂದ ಹೊರಬರಲು ಈ ಸಮುದಾಯ ತನ್ನ ಜಾತಿಯ ಹೆಸರನ್ನೆ ಬದಲಿಸಿಕೊಂಡು ಬೇರೆ ಬೇರೆ ಹೆಸರುಗಳಲ್ಲಿ ಹರಿದು ಹಂಚಿಹೋಗಿದ್ದಾರೆ.
samudaya sangataneya sabhe

ಮರಾಠಿಯ ದಲಿತ ಲೇಖಕ ಲಕ್ಷ್ಮಣ ಗಾಯಕವಾಡರ ಆತ್ಮಕತೆ `ಉಚಲ್ಯಾ’ದಲ್ಲಿ ಈ ಸಮುದಾಯವನ್ನು ಕಣ್ಣಿಗೆ ಕಟ್ಟುವಂತೆ ಉಸಿರು ಬಿಗಿ ಹಿಡಿದು ಓದುವಂತೆ ಚಿತ್ರಿಸಿದ್ದಾರೆ. ಮಹರಾಷ್ಟ್ರದಲ್ಲಿ ಭಾಮ್ಟೆ, ಉಚಲ್ಯಾ ಎಂದು ಕರೆಯುವ ಈ ಸಮುದಾಯವೇ ಕರ್ನಾಟಕದಲ್ಲಿ ಗಂಟಿಚೋರ ಎಂದು ಕರೆಯಲ್ಪಡುತ್ತದೆ. ಮೂಲತಃ ಆಂದ್ರದಿಂದ ವಲಸೆ ಬಂದ ಈ ಸಮುದಾಯ ಸ್ವತಂತ್ರಾ ನಂತರ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿದೆ. ಇಂತಹ ಸಮುದಾಯದಲ್ಲಿ ಶಿಕ್ಷಣ ಪಡೆದು, ಡಿ ದರ್ಜೆಯ ನೌಕರಿ ಗಿಟ್ಟಿಸಿಕೊಂಡ ಮೊದಲ ತಲೆಮಾರಿನ ಮಹಿಳೆ ಗೋದಾವರಿ. ಇದೀಗ ನಿವೃತ್ತಿ ನಂತರ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಜೀವನ ಮುಡಿಪಿಟ್ಟ ಅವರ ಬದುಕೇ ಒಂದು ಹೋರಾಟ.

ಗೋದಾವರಿ ಪುಟ್ಟ ಹುಡುಗಿಯಾಗಿದ್ದಾಗ ಗಂಟಿಚೋರ ಸಮುದಾಯ ದಟ್ಟ ದಾರಿದ್ರ್ಯ ಸ್ಥಿತಿಯಲ್ಲಿತ್ತು. ಈ ದಾರಿದ್ರ್ಯವೇ ಕುಲಕಸಬಾಗಿದ್ದ `ತುಡುಗು’(ಕಳ್ಳತನ) ಮಾಡಲು ಹಚ್ಚುತ್ತಿತ್ತು. ತುಡುಗು ಮಾಡುವ ಇವರ ಚಾಕಚಕ್ಯತೆ ಬೆರಗು ಹುಟ್ಟಿಸುವಂತಿತ್ತು. ತುಡುಗುತನದ ಗೌಪ್ಯತೆ ಕಾಪಾಡಲು ತಮ್ಮದೇ `ತುಡುಗು ಭಾಷೆ’ಯನ್ನೂ ರೂಪಿಸಿಕೊಂಡಿದ್ದರು. ಇದಕ್ಕೆ `ಹನುಮಂತನ’ ದೈವ ಬೆಂಬಲವೂ ಇತ್ತು. ತುಡುಗಿಗೆ ಮುನ್ನ ಹನುಮಂತನ ಅಭಯದ `ಹೂ’ ಬೀಳದೆ ಅವರು ಹೆಜ್ಜೆ ಇಡುತ್ತಿರಲಿಲ್ಲ. ತುಡುಗು ಮಾಡಿ ಸಿಕ್ಕಾಗ ಪೋಲೀಸರ ಹೊಡೆತ ಹಿಂಸೆ ಅವರ ಕುಟುಂಬವನ್ನು ದುಃಖದ ಕಡಲಲ್ಲಿ ತೇಲಿಸುತ್ತಿತ್ತು. ಇಂತಹ ಎಲ್ಲಾ ಸಂಗತಿಗಳನ್ನು ಕಣ್ತುಂಬಿಕೊಳ್ಳುತ್ತಲೇ ಗೋದಾವರಿ ಅವರು ಬೆಂಡವಾದಲ್ಲಿ ತನ್ನ ಬಾಲ್ಯ ಕಳೆದರು. ಮನೆ ಪರಿಸ್ಥಿತಿ ಸಹಕರಿಸದಿದ್ದರೂ 2 ನೇ ತರಗತಿಯವರೆಗೆ ಶಾಲೆಗೆ ಹೋಗುತ್ತಿದ್ದ ಹುಡುಗಿಯನ್ನು ಶಾಲೆ ಬಿಡಿಸಿ ಆಡು ಕುರಿ ಕಾಯಲು ಹಚ್ಚಿದರು. ಆಗ ಗೋದಾವರಿ ಬಿಸಿಲು ಮಳೆ ಚಳಿಯೆನ್ನದೆ ಆಡುಕಾಯುವ ಹುಡುಗಿಯಾಗಿ ಹೊಲ, ಕಾಡುಮೇಡುಗಳನ್ನು ಅಲೆದಳು. ಆದಾಗ್ಯೂ ಓದಬೇಕೆನ್ನುವ ಒಡಲೊಳಗಣ ಕಿಚ್ಚು ನಿಧಾನಕ್ಕೆ ಜಾಗೃತವಾಗತೊಡಗಿತು.

samudaya sangataneya sabheಇಂತಹ ಸಂದರ್ಭದಲ್ಲಿ ಹತ್ತು ವರ್ಷ ತುಂಬುವ ಹೊತ್ತಿಗಾಗಲೆ ಮನೆಯವರು ಮದುವೆಗೆ ತಯಾರಿ ನಡೆಸಿದರು. ಮದುವೆಯಾಗಿ ಮಕ್ಕಳಿದ್ದ ಮಹರಾಷ್ಟ್ರದ ಗಂಡಿನೊಂದಿದೆ ಬಾಲ್ಯ ವಿವಾಹ ನಡೆಯಿತು. ಕಿತ್ತು ತಿನ್ನುವ ಬಡತನದ ನೆರಳಲ್ಲಿ ಈ ಮದುವೆಯನ್ನು ತಿರಸ್ಕರಿಸುವ ಶಕ್ತಿಯಾಗಲಿ ತಿಳುವಳಿಕೆಯಾಗಲಿ ಗೋದಾವರಿಗಿನ್ನೂ ಬಂದಿರಲಿಲ್ಲ. ಅದೇಕೋ ಹೊಂದಾಣಿಕೆಯಾಗದೆ ಗೋದಾವರಿ ಮದುವೆಯಾದವನ ಜತೆ ಬಾಳಲಿಕ್ಕಾಗದೆ ತನ್ನೂರಲ್ಲೇ ಉಳಿದರು. ಈ ಹೊತ್ತಿನಲ್ಲಿ ಕಲಿಯಬೇಕೆನ್ನುವ ತನ್ನೊಳಗಿನ ಹಂಬಲ ಮತ್ತೆ ಚಿಗುರೊಡೆಯಿತು. ಇಂತಹ ಸಂದರ್ಭದಲ್ಲಿ ಗೋದಾವರಿಯ ತಾಯಿಯೆ ಬೆಳಗಾವಿಯ ಅನಾಥ ಹೆಣ್ಣುಮಕ್ಕಳ ರಕ್ಷಣೆಯ ತಾಣವಾಗಿದ್ದ ಸ್ತ್ರೀಸೇವಾ ನಿಕೇತನಕ್ಕೆ ಸೇರಿದರು.

ಹೀಗಿರುವಾಗ ಇಲ್ಲಿ ಆಶ್ರಯ ಪಡೆದ ಹುಡುಗಿಯರನ್ನು ಅವರ ಆಸಕ್ತಿಗನುಸಾರವಾಗಿ ಬೇರೆ ಬೇರೆ ಜಿಲ್ಲಾ ಸ್ತ್ರೀಸೇವಾನಿಕೇತನ ಕೇಂದ್ರಗಳಿಗೆ ವರ್ಗ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬಳ್ಳಾರಿಯ ಹಾಸ್ಟೆಲ್ ಚೆನ್ನಾಗಿದೆ, ಓದಿಸುತ್ತಾರೆ, ಕಸೂತಿ ಟೈಲರಿಂಗ್ ಕಲಿಸುತ್ತಾರೆ, ವಾರ್ಡನ್ ಒಳ್ಳೆಯವರು ಇತ್ಯಾದಿ ಸಂಗತಿಗಳ ಕೇಳಿ ತಿಳಿದಿದ್ದ ಗೋದಾವರಿ ಬಳ್ಳಾರಿಯನ್ನು ಆಯ್ಕೆ ಮಾಡಿಕೊಂಡು ವರ್ಗವಾದರು. ಬಳ್ಳಾರಿಗೆ ಬಂದಂದ್ದು ಕೂಡ ಗೋದಾವರಿ ಅವರ ಜೀವನದಲ್ಲಿ ಮತ್ತೊಂದು ತಿರುವು. ಕಾರಣ ಬಳ್ಳಾರಿಯ ಸ್ತ್ರೀಸೇವಾ ನಿಕೇತನದಲ್ಲಿಯೇ ಅರ್ಧಕ್ಕೆ ನಿಂತ ಶಿಕ್ಷಣವನ್ನು ಮುಂದುವರೆಸಿದರು. ಇನ್ನು ಏಳನೆ ತರಗತಿ ಮುಗಿಸುವ ಹೊತ್ತಿಗೆ ಡಿ ದರ್ಜೆ ನೌಕರರೊಬ್ಬರ ಅಕಾಲಿಕ ಮರಣದಿಂದ ತೆರವಾದ ಪಿ.ಸಿ.ಡಬ್ಲು ಎನ್ನುವ (ಪ್ಯಾಕಿಂಗ್ ಕ್ಲೀನಿಂಗ್ ವಾಚಿಂಗ್) ಎಂಬ ನೌಕರಿಯೂ ಸಿಕ್ಕಿತು.
lkmana

ಗೋದಾವರಿ ಅವರು ಕೆಲಸ ಮಾಡುತ್ತಿದ್ದ ಸ್ತ್ರೀ ಸೇವಾನಿಕೇತನ ಬುದ್ಧಿಹೀನ ಹುಡುಗಿಯರು, ಗಂಡ ಸತ್ತವರು, ಜೈಲುಗಳಿಂದ ಬಿಡುಗಡೆಗೊಂಡ ತನ್ನವರಿಂದ ತಿರಸ್ಕøತರಾದ ಮಹಿಳೆಯರು, ಮನೆಬಿಟ್ಟು ಪ್ರೀತಿಸಿ ಮದುವೆಯಾಗಿ ಹುಡುಗರಿಂದ ವಂಚಿತರಾದವರು ಹೀಗೆ ಅನಾಥ ಮಹಿಳೆಯರಿಗೆ ಆಶ್ರಯ ತಾಣವಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಸ್ತ್ರೀ ಸೇವಾನಿಕೇತನದಲ್ಲಿ ಇಂತಹ ನೊಂದ ಮಹಿಳೆಯರ ಸಂಗಾತಿಯಾಗಿ ಗೋದಾವರಿ ಅವರು ಕೆಲಸ ಮಾಡಿದರು. ಒಂದು ರೀತಿಯಲ್ಲಿ ಪರಿತ್ಯಕ್ತ ಅನಾಥ ಮಹಿಳೆಯರಿಗೆ ತಾಯಿಯ ಹಾಗೆ ಅವರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತರು. ಯಾವ ಬಗೆಯ ನಿರ್ಗತಿಕ ಸ್ಥಿತಿಯ ಕಾರಣಕ್ಕೆ ಗೋದಾವರಿ ಬೆಳಗಾವಿಯ ಸ್ತ್ರೀ ಸೇವಾನಿಕೇತನದಲ್ಲಿ ಸೇರಿದ್ದರೋ ಅಂಥಹದ್ದೇ ಅನಾಥ ಮಹಿಳೆಯರ ಪೋಷಣೆಯ ಕೆಲಸಕ್ಕಾಗಿಯೇ ಅವರು ತನ್ನ ಜೀವನವನ್ನು ಮುಡಿಪಾಗಿಟ್ಟರು.

ಗೋದಾವರಿ ಅವರಿಗೆ ಕೆಲಸ ಕೊಟ್ಟು ಆಶ್ರಯ ನೀಡಿದವರು ಆಗಿನ ಸ್ತ್ರೀ ಸೇವಾನಿಕೇತನದ ವಾರ್ಡನ್ ಆಗಿದ್ದ ಕಾವೇರಿ. ಇವರು ಕೊಡಗಿನ ಜನರಲ್ ಕಾರಿಯಪ್ಪ ಅವರ ಸೊಸೆ. ಇವರು ಮಹಿಳೆಯರಲ್ಲಿ ಸದಾ ದೈರ್ಯ ತುಂಬುವ, ಉತ್ಸಾಹ ಹೆಚ್ಚಿಸುವ ಮಾತುಗಳನ್ನು ಆಡುತ್ತಿದ್ದರು. ಅವರು ಮಹಿಳೆಯರ ಒಳಗೆ ಒಂದು ಬಗೆಯ ದೈರ್ಯವನ್ನು ತುಂಬುವ ಮಾತುಗಳನ್ನು ಆಡುತ್ತಿದ್ದರು. ಜಗತ್ತಿನ ಮಹಿಳಾ ಸಾಧಕಿಯರ ಬಗ್ಗೆ ಪರಿಚಯಿಸುತ್ತಿದ್ದರು. ಮಹಿಳೆಯರಿಗಿರುವ ಸಂವಿಧಾನಿಕ ಹಕ್ಕುಗಳ ಬಗ್ಗೆ ಪರಿಚಯಿಸುತ್ತಿದ್ದರು. ಈ ಮಾತುಗಳನ್ನು ಕೇಳುತ್ತಾ ಗೋದಾವರಿ ಒಳಗೊಂದು ಜಾಗೃತ ಮನಸ್ಸು ರೂಪುಗೊಳ್ಳತೊಡಗಿತು. ಈ ಮೂಲಕ ಅಂಬೇಡ್ಕರ್ ಮೊದಲಾದವರ ವಿಚಾರಗಳು ಓದದೆಯೂ ಗೋದಾವರಿ ಅವರ ಒಳಗೆ ವೈಚಾರಿಕತೆಯನ್ನು ರೂಪಿಸತೊಡಗಿತು.
ಕೆಟ್ಟ ಕನಸಿನಂತಿರುವ ಬಾಲ್ಯವಿವಾಹದ ಬಗ್ಗೆ ಗೋದಾವರಿ ಹೆಚ್ಚು ಮಾತನಾಡುವುದಿಲ್ಲ. ಆ ನೆನಪನ್ನು ಅಳಿಸಿಕೊಂಡಂತೆ ಕಾಣುತ್ತದೆ. ಈ ದುಸ್ವಪ್ನದ ಪರಿಣಾಮ ಗೋದಾವರಿ ಬದುಕಿನುದ್ದಕ್ಕೂ ಒಂಟಿಯಾಗಿಯೇ ಉಳಿದರು. ಚಿಕ್ಕಂದಿನಲ್ಲೆ ತಂದೆ ತೀರಿದ್ದರಿಂದ ಮನೆಯ ಜವಾಬ್ದಾರಿ ಗೋದಾವರಿ ಮೇಲೆ ಬಿತ್ತು. ಹಾಗಾಗಿ ತನ್ನ ತಮ್ಮ ತಂಗಿಯರ ಬದುಕು ರೂಪಿಸುವುದರಲ್ಲಿ ತನ್ನ ಆಯಸ್ಸು ಕಳೆದ ಇವರು ಸ್ತ್ರೀಸೇವಾನಿಕೇತನವನ್ನೆ ತನ್ನ ಮನೆಯೆಂದೂ, ಇಲ್ಲಿಗೆ ಬರುವ ಅನಾಥ ಹೆಣ್ಣುಮಕ್ಕಳನ್ನೆ ಮಕ್ಕಳಂತೆಯೇ ಭಾವಿಸಿ ಬದುಕು ಸವೆಸಿದ್ದಾರೆ. ಇಲ್ಲಿ ಬೆಳೆದ ಹೆಣ್ಣುಮಕ್ಕಳು ಓದಿ ಕೆಲಸಕ್ಕೆ ಸೇರಿದಾಗಲೂ, ಅವರು ಮೆಚ್ಚಿದ ಹುಡುಗರನ್ನು ಮದುವೆಯಾದಾಗಲೂ ಗೋದಾವರಿ ತುಂಬಾ ಖುಷಿ ಪಡುತ್ತಿದ್ದರಂತೆ. ಅಂತೆಯೇ ಹುಡುಗರ ಆಯ್ಕೆಯಲ್ಲಿ ಎಚ್ಚರದಿಂದಿರಿ ಎಂಬ ಕಿವಿಮಾತನ್ನೂ ಹೇಳುತ್ತಿದ್ದರಂತೆ. ಒಂದು ರೀತಿಯಲ್ಲಿ ಬದುಕೇ ಇಲ್ಲ ಎನ್ನುವ ಸ್ಥಿತಿಯಲ್ಲಿ ಇಲ್ಲಿಗೆ ಬಂದು ಸೇರುತ್ತಿದ್ದ ಮಹಿಳೆಯರು ರೆಕ್ಕೆ ಬಲಿತ ಹಕ್ಕಿಗಳಂತೆ ಗೂಡಿನಿಂದ ಹೊರ ಹೋಗಿ ಸ್ವಂತ ಜೀವನ ಮಾಡುತ್ತಿದ್ದರು. ಇಂತವರನ್ನು ನೋಡಿದಾಗಲೆಲ್ಲಾ ಗೋದಾವರಿ ಸಂತಸದ ಬುಗ್ಗೆಯಾಗುತ್ತಿದ್ದರಂತೆ.

ಗೋದಾವರಿ ನಿವೃತ್ತಿ ಹೊಂದಿದಾಗ ಬಂದ ಹಣದಲ್ಲಿ ಬೆಂಡವಾಡದಲ್ಲಿ ಹೊಸ ಮನೆಯೊಂದನ್ನು ಕಟ್ಟಿಸುತ್ತಿದ್ದಾರೆ. ಹಣ ಸಾಲದೆ ಮನೆಯ ಕೆಲಸವು ಇನ್ನೂ ಬಾಕಿ ಉಳಿದಿರುವುದರಿಂದ ಮನೆಯ ಕಾಂಪೊಂಡಿನೊಳಗಿನ ಟೆಂಟಿನಲ್ಲಿ ಸದ್ಯಕ್ಕೆ ವಾಸ ಮಾಡುತ್ತಿದ್ದಾರೆ. ಗೋದಾವರಿ ಅವರು ಜೀವನ ಪೂರ್ತಿ ಬಳ್ಳಾರಿಯಲ್ಲಿ ಸೇವೆ ಸಲ್ಲಿಸಿದರು. ಹೌಸಿಂಗ್ ಬೋರ್ಡಿನಲ್ಲಿ ಕಂತುಕಟ್ಟಿ ಸ್ವಂತಕ್ಕೆ ಮಾಡಿಕೊಂಡ ಪುಟ್ಟ ಮನೆಯೂ ಇಲ್ಲಿದೆ. ಹೀಗಿರುವಾಗ ಅವರು ತಾನು ಬೆಳೆದ ತನ್ನ ಹುಟ್ಟೂರಾದ ಬೆಂಡವಾಡಕ್ಕೆ ಮರಳಿ ಬಂದು ನೆಲೆಸಿದ್ದೂ ಕೂಡ ಪ್ರತಿಭಟನೆಯ ಸಂಕೇತವೆ ಎನ್ನುತ್ತಾರೆ.

ನೀವು ಬಳ್ಳಾರಿಯಿಂದ ಹಳ್ಳಿಗೆ ಮರಳಿದ್ಯಾಕೆ ಎಂದರೆ, `ನನ್ನ ತಂದೆಯ ಊರಿನಲ್ಲಿಯೇ ನೆಲೆಯೂರಬೇಕೆಂಬ ಆಸೆ ಒಂದಾದರೆ ನಮ್ಮ ಗಂಟಿಚೋರ ಸಮುದಾಯವನ್ನು ಜಾಗೃತಗೊಳಿಸಬೇಕು. ನಿರಂತರ ಅನ್ಯಾಯಕ್ಕೆ ಒಳಗಾಗುವ ಈ ಸಮುದಾಯದಲ್ಲಿ ಹೋರಾಟದ ಮನೋಭಾವವನ್ನು ಮೂಡಿಸಬೇಕು ಎನ್ನುತ್ತಾರೆ. ಗಂಟಿಚೋರ ಸಮುದಾಯದಲ್ಲೂ ಕೂಡ ಸ್ಥಿತಿವಂತರಿದ್ದಾರೆ ಎನ್ನುವುದು ಬೇರೆ ಮೇಲಿನ ಜಾತಿಗಳವರಿಗೆ ತಿಳಿಯಲಿ ಎಂದೇ ನನ್ನ ನನ್ನ ಹೊಸ ಮನೆಯನ್ನು ಇಲ್ಲಿ ಕಟ್ಟಿಸಿದ್ದು. ಈಗ ನನ್ನ ಮನೆಯೇ ಇಲ್ಲಿನ ಗಂಟಿಚೋರ ಸಮುದಾಯದ ಹೋರಾಟಕ್ಕೆ ಒಂದು ಕೇಂದ್ರವಾಗಿದೆ. ನಮ್ಮ `ಗಂಟಿಚೋರ ಸಮಾಜ ಕ್ಷೇಮಾಭಿವೃದ್ಧಿ ಸೇವಾ ಸಂಘ’ ರೂಪುಗೊಂಡದ್ದು ಈ ಮನೆಯಲ್ಲಿಯೇ ಎನ್ನುತ್ತಾರೆ.

ಹಿಂದೆ ಗಂಟಿಚೋರ ಸಮುದಾಯದವರು ಪಟ್ಟ ಪಡಿಪಾಟಲನ್ನು ಹೇಳುವಾಗ ಗೋದಾವರಿ ಅವರ ಕಣ್ಣು ನೀರಾಗುತ್ತವೆ. ತನ್ನ ಸಮುದಾಯ ಪಟ್ಟಿರಬಹುದಾದ ಪಾಡನ್ನು ಹೇಳುವಾದ ದುಃಖದ ಕಡಲೊಡೆದಂತೆ ಬಿಕ್ಕಳಿಸುತ್ತಾರೆ. ಈಚೆಗೆ ಬಾಲೆಹೊಸೂರಲ್ಲಿ ಸವರ್ಣೀಯರ ಗಲಬೆಯಲ್ಲಿ ಗಂಟಿಚೋರ ಸಮುದಾಯದ ವ್ಯಕ್ತಿಯ ಕೊಲೆಯಾಗಿ ಸಮುದಾಯವನ್ನು ಹಿಂಸೆಗೆ ಒಳಗುಮಾಡಿದ್ದನ್ನು ವಿರೋಧಿಸಿ ಈ ಸಮುದಾಯ ಒಗ್ಗಟ್ಟಾಗಿ ಪ್ರತಿಭಟಿಸಿತು. ಬೆಳಗಾವಿಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಈ ಸಮುದಾಯ ಒಟ್ಟಾಗಿ ತನ್ನ ಪ್ರತಿರೋಧವನ್ನು ದಾಖಲಿಸಿತು. ಈ ಸಂದರ್ಭದಲ್ಲಿ ಗೋದಾವರಿ ಅವರು ಸಮುದಾಯದ ಪ್ರತಿನಿಧಿಯಾಗಿ ಗಟ್ಟಿಧ್ವನಿಯಲ್ಲಿ ಪ್ರಭುತ್ವವನ್ನು ಪ್ರಶ್ನಿಸಿದ್ದರು.

`ಗಂಟಿ ಚೌಡೇರ ಜಾತಿ ಒಂದು ಮೂಲೇಲಿ ಸೇರಿಕಂಡಿದೆ, ಯಾರೋ ಒಬ್ರು ಕಳ್ಳತನ ಮಾಡಿದ್ದು ಎಲ್ಲರಿಗೂ ಅಪರಾದ ಅತ್ತೇತಿ. ನಾವು ಸಣ್ಣ ಮಕ್ಕಳಿದ್ದಾಗ ಪೋಲಿಸರು ಬರ್ತಿದ್ದರು, ಅವರ ಟೋಪಿ ನೋಡಿ ಪೋಲಿಸರು ಬಂದ್ರು ಬಂದ್ರು ಅಂತಾ ಮೂಲ್ಯಾಗ ಹೋಗಿ ಹೊಕ್ಕಳ್ತಿದ್ವಿ. ದೊಡ್ಡ ಜಾತ್ಯಾರು ಬೇರೆ ಜಾತ್ಯಾರು ಕಳ್ಳತನ ಮಾಡಿದ್ರೂ ಗಂಟಿ ಚೋಳ್ರೆ ಕಳ್ಳತನ ಮಾಡ್ಯಾರ ಅಂತ ಹಿಡಕಂಡು ಹೋಗ್ತಿದ್ರು. ಹೆಂಗಸರನ್ನು ಸ್ಟೇಷನ್ನಕ್ಕ ತಗಂಡೋಗಿ ಮನಸಾಇಚ್ಚೆ ಹೊಡಿತಿದ್ರು. ಗಂಡಸರನ್ನ ಸ್ಟೇಷನ್ನಕ ಹಾಕಿ ಬಟ್ಟಿಬಿಚ್ಚಿ ಮನಗಂಡ ಹೊಡದು ಹೈರಾಣ ಮಾಡ್ತಿದ್ರು, ಅವರು ಹೊಡ್ತಕ್ಕ ಹೆದರಿ ಕಳ್ಳತನ ಮಾಡದಿದ್ರು ನಾವಾ ಮಾಡೀವಿ ಅಂತ ಒಪ್ಪಿಕೊಂಡು ಬಿಡ್ತಿದ್ರು. ಹಂಗ ಸ್ಟೇಷನ್ನಕ್ಕ ಹೋಗಿ ಬಂದವರು ತಿಂಗಳಗಟ್ಟಲೆ ನೋವು ತಿಂತಿದ್ರು, ಚರ್ಮ ಕೀಳಾಂಗ ಹೊಡೆದಿರ್ತಿದ್ರು’ ಎಂದು ತನ್ನ ಸಮುದಾಯದ ನೋವನ್ನೊಮ್ಮೆ ನೆನಪಿಸಿಕೊಂಡು ಬಿಕ್ಕಳಿಸುತ್ತಾರೆ.
ಮಾತು ಮುಂದುವರೆಸುತ್ತಾ `ಇದನ್ನ ನೋಡಿ ನಮ್ಮ ಸಮುದಾಯದವರು ಹೆದರಿ ಎಲ್ಲೆಲ್ಲೋ ಊರು ಬಿಟ್ಟು ಹೋಗಿ ಜಾತಿನೆ ಬೇರೆ ಬೇರೆ ಹೆಸರಿಟ್ಟುಕೊಳ್ಳುತ್ತಿದ್ರು. ಒಬ್ರು ಕಳ್ಳತನ ಮಾಡಿದ್ರೆ ಇಪ್ಪತ್ತು ಮಂದಿಗ್ಯಾರ ಶಿಕ್ಷೆ ಆಗ್ತಿತ್ತು. ಹಿಂಗಾಗಿ ನಮ್ಮ ಸಮುದಾಯ ಬಾಳ ಹಿಂಸೆಗೆ ಒಳಗಾಗೇತಿ. ಕಳ್ಳತನ ಮಾಡಾ ಜಾತಿ ಆಗಿದ್ರಿಂತ ನಮ್ಮ ಜನರು ಬೇರೆ ಬೇರೆ ಜಾತಿಗಳ ಹೆಸರು ಹೇಳಿಕಂಡು ತಮ್ಮ ಜಾತಿನ ಮರಸುತ್ತಿದ್ರು. ಕುರುಬರ, ವಡ್ಡರ, ನಾಯ್ಕರಾ ಹೀಂಗ ಬೇರೆ ಬೇರೆ ಜಾತಿ ಹೆಸರು ಹೇಳಿಕಂಡು ಬದುಕ್ತಿದ್ರು. ನಮ್ಮ ಜನ ಎಸ್ಸಿ ಲಿಸ್ಟಿಗೆ ಸೇರಿದ್ರೂ ಗೋರಮೆಂಟಿನ ಅನ್ನ ನಮ್ಮವರಿಗೆ ಸಿಗಲಿಲ್ಲ. ಎಸ್ಸಿಗಳಿಗೆ ಸಿಗೋ ಸೌಲಭ್ಯ ಬೇರೆ ಜಾತಿಗಳಿಗೆ ಸಿಗ್ತಾ ಇದೆ. ನಮ್ಮ ಜಾತಿನ ಎಸ್ಸಿಗಳೆ ಅಲ್ಲ ಅಂತಾರ. ಹಂಗಾಗಿ ತಿಳಿದಂತ ನಮ್ಮಂತವರು ಈ ಸಮುದಾಯದ ನ್ಯಾಯಕ್ಕಾಗಿ ಹೋರಾಟ ಮಾಡಬೇಕ್ರಿ. ನಮ್ಮ ಹಕ್ಕುಗಳನ್ನು ಕೇಳದಿದ್ರ ಯಾರೂ ನಮ್ಮನಿಗೆ ಬಂದು ಕೊಡಲ್ಲ ಅಂತ ಗೊತ್ತಾಗೇತಿ. ನಾನು ಜೀವ ಇರೋ ತನಕ ನಮ್ಮ ಸಮುದಾಯಕ್ಕಾಗಿ ಕೆಲಸ ಮಾಡತೀನಿ ಸಾರ್’ ಎಂದು ಸಿಟ್ಟು ಮತ್ತು ಆಕ್ರೋಶದಿಂದ ಮಾತನಾಡುತ್ತಾರೆ.

lkmanaಗೋದಾವರಿ ಅವರೊಳಗೆ ವೈಚಾರಿಕ ಮನೋಭಾವ ಬೆಳೆದಂತೆ ಬಳ್ಳಾರಿಯ ಸೇವಾನಿಕೇತನದ ಹುಡುಗಿಯರಿಗೆ ದೈರ್ಯ ತುಂಬುವ ಭಾಷಣ ಮಾಡುತ್ತಿದ್ದರಂತೆ. ಇದು ಮುಂದುವರಿದು ಬಳ್ಳಾರಿಯ ಕೆಲವು ದಲಿತ ಸಂಘಟನೆಗಳ ಕಾರ್ಯಕ್ರಮಗಳಿಗೂ ಹೋಗುತ್ತಿದ್ದರಂತೆ. ಇವರ ಸೇವೆಯನ್ನು ಗುರುತಿಸಿ 2008 ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ಜಿಲ್ಲಾ ಪಂಚಾಯಿತಿಯು ಕಿತ್ತೂರುರಾಣಿ ಚೆನ್ನಮ್ಮನ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಸ್ವಂತಕ್ಕೆ ಮಕ್ಕಳಿಲ್ಲದ ಬೇಸರ ಎಂದೂ ಕಾಡಲಿಲ್ಲ. ಬಳ್ಳಾರಿಲ್ಲಿರುವಷ್ಟು ದಿನ ಸೇವಾನಿಕೇತನದ ಹುಡುಗಿಯರೇ ನನಗೂ ಮಕ್ಕಳಾಗಿದ್ದರು. ಇದೀಗ ಬೆಂಡವಾಡದ ಗಂಟಿಚೋರ ಸಮುದಾಯವೇ ನನ್ನ ಕುಟುಂಬ ಇದ್ದಹಾಗೆ ಎಂದು ಭಾವಿಸುತ್ತಾರೆ.

ಉತ್ತರ ಭಾರತದ ಗೋದಾವರಿ ನದಿಗೂ ಇವರ ಹೆಸರಿಗೂ ಏನು ನಂಟು ಎಂದು ಕೇಳಿದರೆ `ಅಜ್ಜನ ಹೆಸರು ಗೋದ್ಯಾ ಅಂತಿದ್ದ ನೆನಪಿಗಾಗಿ ಈ ಹೆಸರು ಇಟ್ಟರು ಸಾರ್ ನನ್ನ ಹೆಸರು ಗೋದಾವರಿ ನದಿ ಹೆಸರಿಂದ ಇಟ್ಟದ್ದಲ್ಲ ಎನ್ನುತ್ತಾರೆ. ಅಂತೆಯೇ ಆದಿವಾಸಿಗಳ ಹೋರಾಟವನ್ನು ರೂಪಿಸಿದ ಕಾಮ್ರೇಡ್ ಗೋದಾವರಿ ಪರುಳೇಕರ್ ಅವರು ನೆನಪಾದರು. ಇದೀಗ ಹೂವಿನ ಹಡಗಲಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಗೋದಾವರಿ ಅವರ ಸಹೋದರ ಕಲ್ಲಪ್ಪ ಅವರು `ನಮ್ಮಕ್ಕ ನಮ್ಮ ಜೀವನ ರೂಪಿಸೋದಕ್ಕೆ ತನ್ನನ್ನೇ ಸವೆಸಿದಳು, ಒಂಟಿಯಾಗಿಯೇ ಬದುಕಿದಳು, ನನಗೆ ಗೌರ್ನಮೆಂಟ್ ಕೆಲಸದ ಆರ್ಡರ್ ಬಂದಾಗ ಅಕ್ಕ ಇನ್ನಿಲ್ಲದ ಖುಷಿ ಪಟ್ಟಿದ್ದಳು ಅಂತಹ ಖುಷಿಯನ್ನು ಎಂದೂ ನಾನು ನೋಡಿರಲಿಲ್ಲ’ ಎಂದು ಹೇಳುತ್ತಾ ಬಾಹುಕರಾಗುತ್ತಾರೆ.

ಗಂಟಿಚೋರರಂತಹ ಗುರುತುಗಳೆ ಇಲ್ಲದ ಪುಟ್ಟ ಪುಟ್ಟ ಸಮುದಾಯಗಳು ಇನ್ನೂ ಅಧ್ಯಯನಕ್ಕೂ ಒಳಗಾಗದೆ ಕರ್ನಾಟಕದಲ್ಲಿ ್ಲ ಹರಿದು ಹಂಚಿ ಹೋಗಿವೆ. ಸಿ.ಎಸ್.ದ್ವಾರಕನಾಥ ಅವರು ಹಿಂದುಳಿದ ವರ್ಗಗಳ ಆಯೋಗದ ವರದಿಗಳನ್ನು ಒಟ್ಟಾಗಿಸಿ `ಸಂಕುಲ’ ಎಂಬ ಕೃತಿ ರೂಪದಲ್ಲಿ ಪ್ರಕಟಿಸಿದ್ದಾರೆ. ಈ ವರದಿಗಳನ್ನು ನೋಡಿದರೆ ಇಂತಹ ಗುರುತಿಲ್ಲದ ಸಮುದಾಯಗಳ ಸಂಕಷ್ಟಗಳು ಅರಿವಾಗುತ್ತದೆ. ಇಂತಹ ಸಮುದಾಯಗಳ ಸಮಗ್ರ ಅಧ್ಯಯನಗಳ ಅಗತ್ಯ ಇಂದು ಹೆಚ್ಚಿದೆ. ಇಂತಹ ಗುರುತಿಲ್ಲದ ಸಮುದಾಯ ಗಂಟಿಚೋರ ಸಮುದಾಯವನ್ನು ಜಾಗೃತಗೊಳಿಸುವ ಪಣತೊಟ್ಟ ಗೋದಾವರಿ ಅವರಂತಹವರು ಇಡುವ ಪುಟ್ಟ ಹೆಜ್ಜೆಗಳಿಗೂ ಸಾಂಸ್ಕøತಿಕ ಮಹತ್ವವಿದೆ. ನಾನು ನಿಮ್ಮ ಬಗ್ಗೆ ಬರೆಯುತ್ತೇನೆಂದಾಗ `ರೀ ನನ್ನ ಬಗ್ಗೆನಾ? ಬರಿಬ್ಯಾಡ್ರಿ ನಾ ಏನು ದೊಡ್ಡ ಸಾಧನಿ ಮಾಡೀನಿ’ ಎಂದು ಮುಜುಗರದಿಂದ ಮೌನವಾದರು. ಗೋದಾವರಿ ಅವರ ಹೋರಾಟದ ಹೆಜ್ಜೆಗಳು ಇನ್ನಷ್ಟು ಧೃಢಗೊಳ್ಳುತ್ತಿವೆ. ಗಂಟಿಚೋರ ಸಮುದಾಯ ಹೋರಾಟದ ಹಾದಿಯಲ್ಲಿ ಶೋಷಣೆ ಮುಕ್ತತೆಯೆಡೆ ಸಾಗುತ್ತಾ ತನ್ನ ಹಕ್ಕುಗಳನ್ನು ಗಟ್ಟಿಯಾಗಿ ಕೇಳುವಂತಹ ದಿನಗಳ ಕಡೆ ಸಾಗುತ್ತಿದೆ.

ಕಾಮೆಂಟ್‌ಗಳಿಲ್ಲ: